ಅಲ್ಲೇ ನಿಂತು ಇವರ ಗೋಳಾಟಗಳನ್ನು ನೋಡುತ್ತ ಲೊಚಗುಟ್ಟುತ್ತಿದ್ದ ಮಾಸಲು ಬಣ್ಣದ ಖಾಕಿ ನಿಕ್ಕರಿನ ವ್ಯಕ್ತಿಯು ‘ಗೌಡರು ಸೇಟ್‌ಕೇಕ್ ಆಟ ಆಡಕ್ಕೆ ಮೈದಾನುಕ್ಕೆ ಹೋಗೌರೆ’ ಎಂದ. ಇಷ್ಟೊತ್ತೂ ಮನೆಯ ಒಳಗಿದ್ದು, ಕನ್ನಡಕದ ಮೂಲಕ ಜಗವ ನೋಡುತ್ತಿದ್ದ ಪದವಿಧರ ವ್ಯಕ್ತಿಯು, ಅವನ ಇಂಗ್ಲಿಷಿಗೆ ಜೋರಾಗಿ ನಗುತ್ತಾ ಹೊರಬಂದು, ‘ಸೇಟ್‌ಕೇಕ್ ಆಟ ಅಲ್ಲವೋ, ಅದು ಶೆಟಲ್‌ಕಾಕ್’ ಎನ್ನಲು ಖಾರದಪುಡಿ ಮೆತ್ತಿಸಿಕೊಂಡಿದ್ದ ಸಣ್‌ರಾಮ ‘ಕುಯ್, ಕುಯ್’ ಎನ್ನುವುದಕ್ಕೂ ಬಿಸಿಲ ಝಳ ಏರುವುದಕ್ಕೂ ಸಮನಾಗಿ, ಹುಚ್ಚನುಮಿ ಸಣ್‌ರಾಮನ ಹಿಡಿದಿದ್ದ ತನ್ನ ಕೈ ಪಟ್ಟನ್ನು ಇನ್ನೂ ಬಿಗಿಗೊಳಿಸಿದಳು.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ವಿ.ಆರ್.ಕಾರ್ಪೆಂಟರ್‌ ಬರೆದ ಕತೆ ‘ಅಟ್ರಾಸಿಟಿ’

 

‘ಮುಂಚೇನೇ ಕಣ್ ಕಾಣುದ್ ನನ್ ಮಗ್ಳು ಸಾಮಂತಿಗೆ ಆಳಾದ್ ಸಕ್ಕರೆ ಖಾಯಿಲೆ ದೆಸಿಂದ ಡಾಕ್ಟ್ರು ಕಾಲ್ ತಗೀಲೇ ಬೇಕಂದೌರೆ’ ಎನ್ನುತ್ತಾ ಸಾಮಂತಿಯ ತಾಯಿ ಹುಚ್ಚನುಮಿಯು ಊರೂರಿಗೆ ಜಾತ್ರೆಗೆ ಸಾರುವ ಢಂಗೂರದಂತೆ ಸಾರುತ್ತಿದ್ದರೆ, ಸಾಮಂತಿಗೆ ಅಣ್ಣನಾಗಿದ್ದ ಸಣ್‌ರಾಮ ಮಾತ್ರ ತನ್ನ ಊರಿಗೆ ನೀರು ಬಿಡುವ ಕಾಯಕ ಮಾಡುವಾಗ ಯಾರದೋ ಉಸಾಬರಿಗೆ ತಗುಲಿಕೊಂಡು, ಕಣ್ಣಿಗೆ ಖಾರದಪುಡಿ ಎರೆಚಿಸಿಕೊಂಡು, ಥೇಟ್ ದಪ್ಪ ಕೆಂಪುಮೆಣಸಿನ ಕಾಯಿಯಂಥಾ ಕಣ್ಣುಗಳೊಂದಿಗೆ ತನ್ನ ತಾಯಿ ಹುಚ್ಚನುಮಿಯ ಮುಂದೆ ನಿಂತ. ಮಗನ ಅವತಾರ ಕಂಡ ಹುಚ್ಚನುಮಿಗೆ ಇಡೀ ಜಗತ್ತೇ ತನ್ನನ್ನು ತನ್ನ ಮಕ್ಕಳು-ಮರಿಗಳನ್ನು ಮುಗಿಸಲು ಹೊಂಚು ಹಾಕಿದೆಯೇನೋ ಎಂಬ ಸಂಶಯ ಮೂಡಿದ್ದೇ, ನ್ಯಾಯ ಕೇಳಲು ಊರಿನಲ್ಲಿ ಗೌಡನಾಗಿದ್ದ ಕೃಷ್ಣೇಗೌಡನ ಮನೆಯ ಕಡೆಗೆ ಹೊರಟು ನಿಂತಳು.

ಅಷ್ಟರಲ್ಲಿ ಅಲ್ಲೇ ನಿಂತು ಇವರ ಗೋಳಾಟಗಳನ್ನು ನೋಡುತ್ತ ಲೊಚಗುಟ್ಟುತ್ತಿದ್ದ ಮಾಸಲು ಬಣ್ಣದ ಖಾಕಿ ನಿಕ್ಕರಿನ ವ್ಯಕ್ತಿಯು ‘ಗೌಡರು ಸೇಟ್‌ಕೇಕ್ ಆಟ ಆಡಕ್ಕೆ ಮೈದಾನುಕ್ಕೆ ಹೋಗೌರೆ’ ಎಂದ. ಇಷ್ಟೊತ್ತೂ ಮನೆಯ ಒಳಗಿದ್ದು, ಕನ್ನಡಕದ ಮೂಲಕ ಜಗವ ನೋಡುತ್ತಿದ್ದ ಪದವಿಧರ ವ್ಯಕ್ತಿಯು, ಅವನ ಇಂಗ್ಲಿಷಿಗೆ ಜೋರಾಗಿ ನಗುತ್ತಾ ಹೊರಬಂದು, ‘ಸೇಟ್‌ಕೇಕ್ ಆಟ ಅಲ್ಲವೋ, ಅದು ಶೆಟಲ್‌ಕಾಕ್’ ಎನ್ನಲು ಖಾರದಪುಡಿ ಮೆತ್ತಿಸಿಕೊಂಡಿದ್ದ ಸಣ್‌ರಾಮ ‘ಕುಯ್, ಕುಯ್’ ಎನ್ನುವುದಕ್ಕೂ ಬಿಸಿಲ ಝಳ ಏರುವುದಕ್ಕೂ ಸಮನಾಗಿ, ಹುಚ್ಚನುಮಿ ಸಣ್‌ರಾಮನ ಹಿಡಿದಿದ್ದ ತನ್ನ ಕೈ ಪಟ್ಟನ್ನು ಇನ್ನೂ ಬಿಗಿಗೊಳಿಸಿದಳು. ಮಗ ಕಣ್ಣು ಬಿಡಲಾರ ಎನ್ನುವುದನ್ನೂ ಲೆಕ್ಕಿಸದೇ ಮೈದಾನ ಇರುವ ಉತ್ತರ ದಿಕ್ಕಿಗೆ ಬಿರಬಿರನೆ ಅವನನ್ನು ಎಳೆದುಕೊಂಡು ಹೊರಟಳು. ‘ಏನಾಯ್ತೋ ಸಣ್ಣ, ಏನದು ಕಣ್ಣು?….’ ಎನ್ನುತ್ತಿದ್ದ ಪದವೀಧರ ವ್ಯಕ್ತಿಯ ಕೂಗು ಕ್ರಮೇಣ ಸಣ್‌ರಾಮನಿಗೆ ಕ್ಷೀಣವಾಗಿ ಕೇಳಿಸುತ್ತಾಹೋಗಿ ಕೊನೆಗೆ ಇಲ್ಲವಾಯ್ತು.

ಕಣ್ಣು ಮುಚ್ಚಿಕೊಂಡೇ ಇದ್ದರೂ ಜಲಪಾತದಂತೆ ತೊಟ್ಟಿಕ್ಕುತ್ತಿದ್ದ ನೀರು ಅವನ ಬಾಯಿಗೂ ಇಳಿದಾಗ, ಆ ಖಾರದ ಘಾಟು ಬಾಯಿಗೂ ತಾಗಿ, ಹೊರಗಿನ ಗಾಳಿಯನ್ನು ಒಳಗೆಳೆದುಕೊಳ್ಳಲು ‘ಹಾ, ಹ್ಹಾ’ಎಂದುಕೊಂಡೇ, ಗೌಡ ಮತ್ತು ಅವನ ಸುತ್ತಲೂ ಜೇನುನೊಣದಂತೆ ಇರುತ್ತಿದ್ದ ಪರಿವಾರ ಆಡುತ್ತಿದ್ದ ಮೈದಾನದ ಹಾದಿ ಸವೆಸುತ್ತಿದ್ದ ಸಣ್‌ರಾಮನ ಕಣ್ಣಿನ ಉರಿ ಬೆಳಗಿನ ತೀಕ್ಷ್ಣ ಬಿಸಿಲಿಗೆ ಕಣ್ಣಿಗೆ ಕಾದ ಸೀಸ ಹೊಯ್ದಂತೆ ಅನ್ನಿಸುತ್ತಿತ್ತು. ಅದಕ್ಕೆ ಅದನ್ನು ಜಗತ್ತಿಗೆ ಪ್ರಸ್ತುತಪಡಿಸುವ ದಾಟಿಯಲ್ಲಿ ‘ಕುಯ್’ ಗುಟ್ಟುವುದು ಮಾತ್ರ ಮುಂದುವರೆಸಿದ್ದ ಮಗನ ಅವಸ್ಥೆ ಕಂಡ ತಾಯಿ ಹುಚ್ಚನುಮಿಯ ಹೊಟ್ಟೆಗೂ ಆ ಖಾರ ಇಳಿದಂತಾಗಿ, ತನ್ನ ಸೀರೆ ಸೆರಗನ್ನು ಹಿಡಿಯಾಗಿ ಹಿಡಿದು, ತನ್ನ ಬಾಯಿಯಿಂದ ಗಾಳಿ ಊದಿ, ಅವನ ಕಣ್ಣಿಗೆ ಒತ್ತಿ ಕಾವು ಕೊಟ್ಟಳು. ಘಾಟು ತಕ್ಕಮಟ್ಟಿಗೆ ಕಡಿಮೆಯಾಗಿ ಕಣ್ಣನ್ನು ಬಿಟ್ಟೂಬಿಡದವನಂತೆ ಬಿಟ್ಟು, ಮತ್ತೆ ಮುಚ್ಚಿಕೊಳ್ಳುತ್ತಿದ್ದ. ‘ಕುಯ್’ಗುಟ್ಟುವುದು ಸಾಲದೆಂಬಂತೆ ‘ದೋ, ಯಮ್ಮಾ, ಯಮ್ಮಾ ದೋ’ ಎಂದು ದಾರಿಯುದ್ದಕ್ಕೂ ಅಳುತ್ತಲೇ ಇದ್ದ.

ಅವನ ಅಳುವಿನಲ್ಲೂ ಹುಚ್ಚನುಮಿಗೆ ಗಂಡ ಬಂದೂಕ್‌ಮುನಿಯ ರಾತ್ರಿಯೆಲ್ಲ ತೋಟದ ಕಾವಲು ಕಾಯ್ದು, ಬೆಳಿಗ್ಗೆ ಮೊಲ, ಕಾಡುಬೆಕ್ಕು, ಗೊರವಾಂಕ -ಇವೇ ಮೊದಲಾದ ಯಾವುದಾದರೊಂದು ಬೇಟೆಯನ್ನು ದಿನವೂ ತರುತ್ತಿದ್ದುದು, ಹಾಗೇ ತಂದವನು ಆಗತಾನೇ ಹುಟ್ಟಿದ್ದ ಸಾಮಂತಿಯ ಕಣ್ಣಿಗೆ ದಿನವೂ ಟಾರ್ಚ್ ಬಿಟ್ಟು ‘ನೋಡ್ ಮಗ್ಳೆ ಎಂಗದೆ ನನ್ ಬ್ಯಾಟೆ’ ಎಂದು ಮಗಳ ಕಣ್ಣು ಕಳೆದದ್ದು, ಆ ನಂತರದ ಕೆಲವರ್ಷಗಳಲ್ಲೇ ಅವನೂ ಯಾವುದೋ ದೆವ್ವವೂ ಪಿಶಾಚಿಯೋ ಬಡಿದು ತಿಂಗಳು ಗಟ್ಟಲೇ ‘ದೇವರು-ದಿಂಡಿರು’ ಎಂದು ಅಲೆದು, ಅಲೆದು ಸಾಕಾಗಿ, ಕೊನೆಗೆ ಕೈಬಿಟ್ಟ ಕೆಲವೇ ದಿನಕ್ಕೆ ತೀರಿಕೊಂಡಿದ್ದ. ಅದರ ಹಿಂದೆಯೇ ಮಗಳು ಸಾಮಂತಿ ಋತುಮತಿಯಾದಳು. ಆದರೆ, ಅವಳ ದೃಷ್ಟಿಹೀನತೆಗೆ ಹೆದರಿ ಯಾರೊಬ್ಬ ಗಂಡೂ ಒಪ್ಪದೇ ಮುಟ್ಟುನಿಂತ ವರ್ಷಕ್ಕೇ, ಸಕ್ಕರೆ ಖಾಯಿಲೆ ಹತ್ತಿ ಹೆಣಗುತ್ತಿದ್ದಳು. ಈಗ್ಗೆ ಒಂದು ತಿಂಗಳ ಹಿಂದೆ ದಾರಿಯಲ್ಲಿ ಬಿದ್ದಿದ್ದ ಮೂಳೆ ತುಳಿದು ಕೀವು ತುಂಬಿದ್ದೇ ನೆಪ; ಡಾಕ್ಟರ್ ‘ಹೀಗೆ ಬಿಟ್ರೆ ಈ ಇನ್‌ಫೆಕ್ಷನ್ ಇಡೀ ದೇಹಕ್ಕೇ ಹಬ್ಬಿ ಪ್ರಾಣಾನೇ ತೆಗೆದುಬಿಡುತ್ತೇ! ಆದ್ರಿಂದ ಆದಷ್ಟು ಬೇಗ ಆಪರೇಷನ್ ಮಾಡಿ ಪಾದ ತೆಗೆದರೆ ಬಹಳ ಒಳ್ಳೇದು’ ಎಂದಿದ್ದು, ಆಪರೇಷನ್‌ಗೆ ಹಣ ಹೊಂದಿಸಲೆಂದು ದಿಣ್ಣೆಯ ಜಮೀನು ಕೊಂಡುಕೊಳ್ಳುವ ತವಕದಲ್ಲಿದ್ದ ದಲಿತ ಸಂಸದನ ಮನೆಯ ಹತ್ತಿರ ಹೋದದ್ದು, ‘ಸಾಯೇಬ್ರು ಎಲೆಕ್ಷೆನ್ ಬಿಸೀಲಿ ಇದ್ದಾರೆ. ಇನ್ನೆರಡು ತಿಂಗಳು ಅವರನ್ನು ನೋಡೋಕೆ ಸಾಧ್ಯವೇ ಇಲ್ಲ’ ಎಂದು ಸೆಕ್ಯುರಿಟಿ ಗಾರ್ಡ್ ಗದರಿಸಿ ಕಳುಹಿದ್ದು, ಹೀಗೆ ಒಂದೊಂದೂ ತನ್ನ ನಾಶಕ್ಕೆ ಹೊಂಚುಹಾಕಿದ್ದಂಥ ಬಿಡಿಬಿಡಿ ಚಿತ್ರಗಳು ಅವಳ ಕಣ್ಣೀರಿನೊಂದಿಗೆ ಉದುರುತ್ತಿದ್ದರೂ, ಅವೇ ಚಿತ್ರಗಳು ಹೊಸ ಬಣ್ಣ ಲೇಪಿಸಿಕೊಂಡು ಹೊಸದಾಗಿ ಹುಟ್ಟಿದಂತೆ, ಒರೆಸಿಕೊಂಡರೆ ಮತ್ತೆ ಮತ್ತೆ ಕಣ್ಣೀರಿನ ರೂಪದಲ್ಲೇ ಮೂಡಿ ಬರುತ್ತಿದ್ದವು.

ಊರಿನ ಕೆರೆಯ ಪಕ್ಕದಲ್ಲಿದ್ದ ಆ ಮೈದಾನ ಕೇವಲ ಐದಾರು ವರ್ಷಗಳಿಂದ ಅಭಿವೃದ್ಧಿ ಕಂಡು ಬಡಾವಣೆಯಾಗಿ ರೂಪುಗೊಂಡಿತ್ತು. ಇನ್ನೂರು ಮುನ್ನೂರು ನಿವೇಶನಗಳಿದ್ದರೂ, ಅಲ್ಲಲ್ಲಿ ವಿರಳವಾಗಿದ್ದ ಮನೆಗಳಿಂದಾಗಿ ಡುಬ್ಬುಹೊಟ್ಟೆಯ, ರೋಗಗಳ ಅಂಟಿಸಿಕೊಂಡಿದ್ದ ಮತ್ತು ಶೋಕಿ ಜೀವಗಳ ಮುಂಜಾನೆ ಮತ್ತು ಸಂಜೆಯ ಜಾಗಿಂಗ್‌ಗಾಗಿ ರೂಪುಗೊಂಡ ಜಾಗಿಂಗ್ ಟ್ರ್ಯಾಕ್‌ನಂತೆ ಬದಲಾಗಿತ್ತು. ಎಲ್ಲೋ ಕೆಲವರು ಮಾತ್ರವೇ ಜಾಗಿಂಗ್ ಮತ್ತು ವಾಕಿಂಗ್‌ಗಳಿಗೆ ಬಳಸಿದರೆ, ಊರಿನ ಕೆಲ ಪುಢಾರಿಗಳು ಮಾತ್ರ ಸಂಜೆಯಾಗುತ್ತಿದ್ದಂತೆ ಪುಂಡರ ಜೊತೆಗೆ ಸೇರಿಕೊಂಡು ಕುಡಿತ, ಹಾದರಕ್ಕೆ ಬಳಸಿಕೊಳ್ಳುತ್ತಿದ್ದುದು ಗೌಡನ ಕಿವಿಗೆ ಬಿಳುತ್ತಿದ್ದುದು ಸಾಮಾನ್ಯವಾಗಿದ್ದರೂ ನೆಪಕ್ಕೆ ಮಾತ್ರ ಆ ಪುಂಢರನ್ನು ಕರೆಸಿ, ‘ನನ್ ಕಿವೀಗ್ ಬೀಳ್‌ದಂಗೆ ಮಾಡ್ಕೊಳ್ರೋ ಅಂತ ಎಷ್ಟು ಹೇಳಿದ್ರೂ ಕೇಳಲ್ವಲ್ರೋ ನೀವು’ ಎಂದು ನೋವಿನಾಕ್ರೋಶದ ನುಡಿಗಳನ್ನಾಡಿ ಕಳುಹಿಸುತ್ತಿದ್ದ.

ತನ್ನ ಹತ್ತು-ಹದಿನೈದು ಜನರ ಪರಿವಾರದೊಂದಿಗೆ ಆಟವನ್ನು ಬಹಳ ಶ್ರದ್ಧೆಯಿಂದ ಮುಂದುವರೆಸಿದ್ದ ಗೌಡ, ಅಷ್ಟೂ ಬೆವರನ್ನೂ ಭೂಮಿಗೆ ತಪ್ಪದೇ ಬಸಿಯುತ್ತಿದ್ದ. ರೂಢಿಗತದಂತೆ ಆಗಾಗ ಟರ್ಕಿ ಟವೆಲ್‌ನಿಂದ ಮುಖವನ್ನು, ಕುತ್ತಿಗೆಯನ್ನು, ಕಂಕುಳಸಂಧಿಯನ್ನು ಒರೆಸಿಕೊಂಡು ಅಲ್ಲೇ ನಿಂತಿದ್ದ ಯಾವೊಬ್ಬ ಪರಿವಾರದವನ ಹೆಗಲಿಗೆ ಎಸೆಯುತ್ತಿದ್ದ. ಅದರ ಮರುಗಳಿಗೆಗೆ ಮತ್ತೆ ಪಡೆದು ಒರೆಸಿಕೊಳ್ಳಲು ತೊಡಗುತ್ತಿದ್ದುದನ್ನು ದೂರದಿಂದಲೇ ನೋಡುತ್ತ ಅವರು ಆಡುತ್ತಿದ್ದ ಮೈದಾನದ ಬಳಿ ಬಂದು, ಅಲ್ಲೇ ಸೀಗೆಮರದ ಬುಡದಲ್ಲಿ ಕುಳಿತ ಹುಚ್ಚನುಮಿಯ ಕರುಳು ಚುರುಕ್ ಎನಿಸಿ, ‘ಪಾಪ ಗೌಡ್‌ರಿಗೆ ಜಾಸ್ತಿ ವಯಸ್ಸಾಯ್ತು ಅಲ್ವೇನ್ಲ ಸಣ್ಣ’ ಎಂದು ಕೇಳಿದಾಗ, ಸಣ್‌ರಾಮ ‘ಇಲ್ಲ ದೋ, ಗೌಡ್ರು ನಂ ಊರ್ ಏಳ್ಗೆ ಮಾಡಕ್ಕೆ ಬಾದಿಬಿದ್ದು ಸುಸ್ತಾಗೌರೆ ಅಷ್ಟೇ’ ಎಂದಾಗ ಹುಚ್ಚನುಮಿಗೂ ಆ ಮಾತು ಸರಿ ಎನಿಸಿತು.

ಆದರೂ ಅದೇ ಲಹರಿಯಲ್ಲಿ ‘ಅದೇನ್ಲ ಅದು ಕೋಳಿ ಪುಕ್ಕನ ಅತ್ಲಿಂದ್ ಇತ್ತ, ಇತ್ಲಿಂದ್ ಇತ್ತ ಸುಮ್ನೆ ವಡೀತಾವ್‌ರಲ್ಲಲ ಇದೆಂಥ ಆಟನೋ’ ಎಂದು ಹುಚ್ಚನುಮಿ ನಗುವುದಕ್ಕೂ, ಆ ನಗುವಿಗೆ ಇವನೂ ಮುಸಿನಕ್ಕರೂ ಗೌಡ ಆ ಕಡೆಯಿಂದ ಇವರ ನಗುವ ನೋಡುವುದನ್ನು ತನ್ನ ಖಾರದಪುಡಿಯ ಕಣ್ಣಿನಿಂದಲೇ ಕಂಡ ಸಣ್‌ರಾಮ ‘ಸುಮ್ಕಿರ್ ದೋ ಗೌಡ್ರು ನೋಡ್ತಾವ್ರೆ’ ಎಂದು ತಾನೂ ಸುಮ್ಮನಾಗಿ, ತನ್ನ ತಾಯಿಯನ್ನೂ ಸುಮ್ಮನಾಗಿಸಿದ.

ಅದನ್ನು ಜಗತ್ತಿಗೆ ಪ್ರಸ್ತುತಪಡಿಸುವ ದಾಟಿಯಲ್ಲಿ ‘ಕುಯ್’ ಗುಟ್ಟುವುದು ಮಾತ್ರ ಮುಂದುವರೆಸಿದ್ದ ಮಗನ ಅವಸ್ಥೆ ಕಂಡ ತಾಯಿ ಹುಚ್ಚನುಮಿಯ ಹೊಟ್ಟೆಗೂ ಆ ಖಾರ ಇಳಿದಂತಾಗಿ, ತನ್ನ ಸೀರೆ ಸೆರಗನ್ನು ಹಿಡಿಯಾಗಿ ಹಿಡಿದು, ತನ್ನ ಬಾಯಿಯಿಂದ ಗಾಳಿ ಊದಿ, ಅವನ ಕಣ್ಣಿಗೆ ಒತ್ತಿ ಕಾವು ಕೊಟ್ಟಳು. ‌

ಇದೇನೂ ತಿಳಿಯದೆ ಆಟವಾಡಿ ದಣಿದಿದ್ದ ಗೌಡ ತನ್ನ ಟವೆಲ್‌ಗೆ ಹೆಗಲು ಕೊಡುತ್ತಿದ್ದ ಮುನಿಆಂಜಿನಿಯ ಕೈಗೆ ರಾಕೆಟ್ ನೀಡಿ, ಅಲ್ಲಿಂದ ಹತ್ತು ಹೆಜ್ಜೆ ದೂರದಲ್ಲಿದ್ದ ಮಾವಿನ ಮರದ ಕೆಳಕ್ಕೆ ಕುರ್ಚಿ ಹಾಕಲು ಹೇಳಿ, ಆ ಕಡೆ ಹೊರಟು ನಿಂತ. ಗೌಡ ಹೊರಟಿದ್ದ ಕಂಡ ಪರಿವಾರ ಛಳಿ ಬಿಟ್ಟವರಂತೆ ಆಟ ಮುಂದುವರೆದಂತೆ ಅವರ ಗದ್ದಲದ ಜೊತೆಗೆ ಬೆರೆಯಲು ಯತ್ನಿಸುತ್ತಿದ್ದ ತಾಯಿ-ಮಗನ ಪಿಸುಮಾತುಗಳು ನಿಧಾನಕ್ಕೆ ಆ ಗದ್ದಲದೊಂದಿಗೆ ಲೀನವಾಗಿ ಕೇಳಿಸದಾದವು. ಮರದ ಕೆಳಗೆ ಕುಳಿತ ಗೌಡ ಕೈಸನ್ನೆಯಲ್ಲಿಯೇ ತಾಯಿ-ಮಗನನ್ನು ಹತ್ತಿರಕ್ಕೆ ಕರೆದು ‘ಏನಮ್ಮೋ ಅನುಮಕ್ಕ ಏನ್ ಸಮಾಚಾರ’ ಎಂದ. ‘ಅದೇ ಕಣ್ ಗೌಡೋ ನಮ್ ಸಾಮಂತೀನ ಆಸ್ಪೆಟ್ಳುಗೆ ಆಕಿದ್ದು ನಿಮ್ಗೆ ಗೊತ್ತೇ ಅದೆ. ಅಂತದ್ರಲ್ಲಿ ನಾವು ದೇವ್ರೇ, ಸಿವ್‌ನೇ ಅಂತಾ ಗೋಳಾಡ್ತಿದ್ರೆ, ನಂ ಸಣ್ಣುನ್ ಕಣ್‌ಗೆ ಯಾವಳೋ ನಿನ್ನೆಂಡ್ರು ಸವ್‌ತಿ ಏನೂ ತಿಳಿದ್ ನನ್ ಮಗುನ್ ಕಣ್ಗೆ ಖಾರುದ್ ಪುಡಿ ಎರ್ಚಿ, ಚಚ್ಚಿ ಕಳ್ಸವ್ಳೆ… ನಾವೇನ್ ಈ ಊರಾಗ್ ಬಾಳಂಗೇ ಇಲ್ವ? ಇಲ್ಲ ಅಂಥ ತಪ್ಪೇನ್ ಮಾಡಿರದು ನಾನು ನನ್ ನನ್ ಮಕ್ಳು? ನೀನೇ ಕಂಡಂಗ್ ಈ ಮಕ್ಳು ಸಾಕಕ್ಕೆ ಎಷ್ಟ್‌ ಬಾದಿ ಬಿದ್ದಿದ್ದೀನಿ’ ಎಂದು ಕಣ್ಣಿನ ತುಂಬಾ ನೀರು ತುಂಬಿಕೊಂಡು, ಆ ನೀರನ್ನು ಸೆರಗಿನಿಂದ ಒರೆಸಿಕೊಂಡು, ಗೌಡನ ಬಾಯನ್ನೂ, ಅವನು ಗಳಿಗೆಗೊಮ್ಮೆ ತನ್ನ ಚೂಪು ನಾಲಿಗೆಯ ಹೊರಚಾಚಿ ತುಟಿಸವರಿಕೊಳ್ಳುತ್ತಿದ್ದುದನ್ನು ನೋಡುತ್ತ ಅಲ್ಲೇ ಕುಕ್ಕರಗಾಲಲ್ಲಿ ಕುಳಿತು, ಸರಿಯಾಗಿ ಕೂರಲಾಗದೆ ಚಕ್ಕಳಮಕ್ಕಳ ಹಾಕಿ ಕೂತುಬಿಟ್ಟಳು.

ಬಿಸ್ಲೆರಿ ನೀರನ್ನು ಮುಖಕ್ಕೆ ಹಾಕಿಕೊಂಡ ಗೌಡ, ಎರಡು ಗುಟುಕು ಕುಡಿದು ಸಣ್‌ರಾಮನ ಕಡೆ ನೋಡಿದ್ದೇ ರೇಗುವವನ ದನಿಯಲ್ಲಿ ‘ಯಾರೋ ಅದು’ ಎಂದ. ಸಣ್‌ರಾಮನೂ ಮೈಮೇಲೆ ದೇವರು ಬಂದತೆ ಒಂದೇ ಉಸಿರಿಗೆ ‘ಬಸ್ಟಾಂಡ್ ಅತ್ರ ಇರೋ ವಾಲ್ ಪೈಪು ವಡದೋಗಿತ್ತು. ಅದ್ರು ರಿಪೇರಿ ಮಾಡ್ತಿದ್ದೆ. ಅಲ್ಲೇ ಮಂಜಣ್ಣನ ಅಂಗ್ಡಿ ಅತ್ರ ಯಾರೋ ಕೂಗಾಡಾಂಗೆ ಕೇಳುಸ್ತು. ಯಾರಪ್ಪ ಅದು ಅಂತ ವೋಗಿ ನೋಡುದ್ರೆ, ಅದೇ ಆ ಬಡ್ಡಿ ವೆಂಕುಟ್‌ಲಷ್ಮಿ ಇಲ್ವ ಅವ್ಳು ಮಂಜಣ್ಣುನ್ ಕೊಳ್‌ಪಟ್ಟಿ ಇಡ್‌ದು ಉಗೀತಿದ್ಲು, ಬಿಡ್ಸನಾ ಅಂತ ನಾನೋದ್ರೆ ನಂಕೂ ‘ನಿನ್ ಮಕ್ ನನ್ ಆಟು’ ಅಂತ ಉಗ್ಯದಾ. ರೇಗ್‌ತು ನೋಡು, ನಾನೂ ಮುಂದಲೆ ಇಡ್ಕಂಡ್ ಎಲ್ಡ್ ಇಕ್ಕಿ, ‘ಶ್ಯಾಟ-ಸಿಂಗ್ರಿ’ ಅಂತ ಸರ್‍ಯಾಗ್ ಉಗ್ದೆ. ಅಸ್ಟೊತ್ಗೆ ಜನಾ ಸೇರಿ ಬಿಡ್ಸುದ್ರು. ಅದ್ಯಾವ್ ಮಾಯ್‌ದಲ್ಲಿ ಮನೆಗೋದ್ಲೋ ಕಳ್‌ಮುಂಡೆ ಖಾರುದ್‌ಪುಡಿ ತಂದು ನನ್ ಮಕ್ ಹಾಕ್‌ಬಿಟ್ಳು. ಮಂಜಣ್ಣ ತಪ್ಪುಸ್ಗಂಡ ನಾನೇ ಸಿಕ್ಕಾಕಂಡಿತ್ತು. ಖಾರುದ್‌ಪುಡಿ ಬಿದ್ ತಷ್ಣ ತಲೆ ಗಿರ್ ಅಂದೋಯ್ತು. ಆಮೇಲ್ ಏನಾಯ್ತೋ ಗೊತ್ತಾಗ್ಲಿಲ್ಲ’ ಎಂದು ಸಣ್‌ರಾಮ ದುಃಖ ತಾಳಲಾರದೆ ಗೊಳೋ ಎಂದು ಅತ್ತದ್ದು ಕಣ್ಣಿಗೆ ತಂಪೆನಿಸಿ ಈಗ ಕಣ್ಣನ್ನು ಚೆನ್ನಾಗಿ ಬಿಟ್ಟ. ಅದಕ್ಕೆ ಪೂರಕವಾಗಿ ಮಾವಿನ ನೆರಳ ಗಾಳಿಯೂ ಕೂಡ ಅವನ ಕಣ್ಣಗುಡ್ಡೆಗೆ ಬಿದ್ದು ತಣ್ಣಗಾಗಿಸಿತು.

‘ಅವ್ರು ಗಲಾಟೆ ಯಾಕಾಡ್ತಿದ್ರು?’ ಎಂದು ಗೌಡ ಅಂದದ್ದಕ್ಕೆ, ‘ಗೊತ್ತಿಲ್ಲ ಗೌಡೋ, ಕಿತ್ತಾಡ್‌ತಿದ್ರಲ್ಲ ಅಂತ ಬಿಡ್ಸಕ್ಕೊಗಿತ್ತೇ ತಪ್ಪ?’ ಎಂದು ಗೌಡನಿಗೇ ಮರುಪ್ರಶ್ನೆ ಎಸೆದ. ಇದಕ್ಕೆ ಗೌಡ ಸ್ವಲ್ಪ ಗಲಿಬಿಲಿಗೊಂಡು ಅಂಗಡಿ ಮಂಜುನಾಥನಿಗೆ ಫೋನ್ ಕರೆ ಮಾಡಲೆಂದು ತನ್ನ ಮೊಬೈಲನ್ನು ತೆಗೆದು ನೋಡಿದರೆ ಆ ಮಂಜುನಾಥನದೇ ಎಂಟತ್ತು ಮಿಸಡ್‌ಕಾಲ್‌ಗಳಿದ್ದವು. ರೀಕಾಲ್ ಮಾಡಿದ ಗೌಡ ಮೊಬೈಲನ್ನು ಕಿವಿಗಿಟ್ಟುಕೊಂಡ. ಕೆಲ ಸೆಕೆಂಡ್‌ಗಳ ನಂತರ ‘ಏ! ಏನೋ ಅದು!’ ಎಂದಾಗ ಕಿವಿ ನಿಮಿರಿಸಿಕೊಂಡ ಸಣ್‌ರಾಮ ಗೌಡನ ಪಕ್ಕಕ್ಕೆ ಬಂದು ಕಿವಿಯ ಹತ್ತಿರಕ್ಕೆ ಕಿವಿ ಇಡಲು ಹೋದಾಗ ಗೌಡ ‘…’ ಮೌನದಲ್ಲೆ ಉರಿದಂತೆ ಹುಚ್ಚನುಮಿಯ ಕಣ್ಣಿಗೆ ಕಾಣಿಸತೊಡಗಿದ. ತಕ್ಷಣವೇ ಸಣ್‌ರಾಮನನ್ನು ಗದರಿ ಪಕ್ಕಕ್ಕೆ ಸರಿಯಲು ಹೇಳಿದಳು. ‘ಹೌದಾ! ಲಾಸ್ಟ್ ಎಲೆಕ್ಷೆನ್ ಟೈಮಲ್ಲಿ ಆಗಿದ್ದು ಸಾಕಾಗಿಲ್ವಂತ’ ಎಂದು ಮತ್ತೆ ಅದೇ ಉರಿಯಲ್ಲೇ ಉಸಿರಾಡುತ್ತಾ ಕೆಲ ಕ್ಷಣ ಮೌನದಲ್ಲಿದ್ದು ‘ಇವಗಾ ಸಣ್ರಾಮುನ್ನೂ, ಅವರಮ್ಮುನ್ನು ಕಳುಸ್ತೀನಿ. ಆಮೇಲ್ ನಾನೇ ಸ್ಟೇಷನ್ ಎಸ್‌ಐಗೆ ಕಾಲ್ ಮಾಡ್‍ತೀನಿ. ನೀನು ನಮ್‌ಕಡೆ ಹುಡುಗ್ರುನ್ ಒಂದಷ್ಟು, ಅಟ್ಟಿಯೌರ್ನ ಒಂದಷ್ಟು ಜೊತೆ ಹಾಕ್ಕಂಡ್ ಹೋಗು.
ನೀನ್ ಸುಮ್‍ನೆ ಕಾರ್ಣ ಅಷ್ಟೇ. ಸಣ್‌ರಾಮುನ್ನ ತೋರ್ಸಿ ‘ಜಾತಿ ನಿಂದನೆ ಆಗಿದೆ’ ಅಂತ ‘ಅಟ್ರಾಸಿಟಿ’ ಕೇಸ್ ಬುಕ್ ಮಾಡು, ಆ ಎಸ್‌ಐ ಹೆಂಗ್ಸು, ನಂ ಪಕ್ಷಾನೇ ಅಂತೆ… ಸರಿ ನೀನಿಗ ಎಲ್ರನ್ನೂ ಜೊತೆ ಮಾಡ್‍ಕೊ’ ಎಂದದ್ದೇ ಫೋನ್ ಕಾಲ್ ಕಟ್ ಮಾಡಿದ.

ಸ್ಟೇಷನ್ ಅಂದದ್ದೇ ಹುಚ್ಚನುಮಿಗೆ ಕೈಕಾಲೆಲ್ಲಾ ನಡುಕ ಹೆಚ್ಚಿ, ಮೈ ರೋಮಗಳೂ ನಿಂತು ಚಳಿಯಾದ ಹಾಗೆ ಅನುಭವವಾಯ್ತು.
ಅಷ್ಟರಲ್ಲಿ ‘ಹಲೋ ನಾನು ಕೃಷ್ಣೇಗೌಡ ಮಾತಾಡ್‌ತಿರೋದು. ಮೇಡಂ ಇಲ್ವ…. ಹ್ಞಾಂ. ಕೊಡಿ. ಕೊಡಿ… ಹಲೋ ಮೇಡಂ ಅವ್ರೆ ಚೆನ್ನಾಗಿದ್ದೀರ?’… ‘ಏನಿಲ್ಲ ನಿಮ್ಮಿಂದ ಒಂದ್ ಸಹಾಯ ಆಗ್‌ಬೇಕಿತ್ತು. ನಮ್ ಕಡೆಯವರು ಬರ್ತವ್ರೆ, ಅವರದೊಂದು ಕೇಸಿದೆ. ಯಾವಳೋ ಒಬ್ಳು ತರ್ಲೆ ಮುಂಡೆ ನಮ್ ಕಡೆಯವನ ಕಣ್ಣಿಗೆ ಖಾರದ ಪುಡಿ ಎರಚಿ ಕಳಿಸವ್ಳೆ. ಅದಕ್ಕೇ ಅಟ್ರಾಸಿಟಿ ಕೇಸ್ ಅಂತ ಬುಕ್ ಮಾಡಿ ನಮ್ ಕಡೆಗೇ ಬರಂಗೆ ಎಫ್‍ಐಆರ್ ರೆಡಿಮಾಡಿ ಸಹಾಯ ಮಾಡಿ ಪ್ಲೀಸ್. ಸಂಜೆ ಚೇಂಬರ್‍ಗೆ ಬರ್ತೀನಿ’ …. ‘ಆಯ್ತು ಮೇಡಂ ಹಾಗೇ ಮಾಡಿ, ಹಾಗೇ ಒಂದಿನಾ ನಮ್ ಮನೇ ಕಡೆ ಬಂದಿದ್ರೆ ಚೆನ್ನಾಗಿತ್ತು’ ಎಂದು ಮೊಬೈಲ್‌ಅನ್ನು ಜೇಬಿಗಿಳಿಸಿಕೊಂಡ ಗೌಡ ‘ನೀವಿಬ್ರು ಈಗ್ಲೆ ಸ್ಟೇಷನ್‌ಗೋಗಿ ಜಾತಿ ಬಗ್ಗೆ ಅವ್ಮಾನಮಾಡಿದಳು ಅಂತ ಕೇಸ್ ಹಾಕ್ರಿ, ಮಿಕ್ಕಿದ್ ನಾನ್ ನೋಡ್ಕಂತೀನಿ, ಮುಖ ತೊಳೀಬೇಡ ಹಂಗೇ ಇರ್ಲಿ’ ಎಂದು ನಿಟ್ಟುಸಿರು ಬಿಟ್ಟಿದ್ದೇ ತಡ, ಸಣ್‌ರಾಮ ‘ಇನ್ನಾ ವುರಿ ಕಮ್ಮಿ ಆಗಿಲ್ಲ ಗೌಡೋ’ ಎಂದು ಅಳಲು ತೋಡಿಕೊಂಡ. ‘ಮುಚ್ಕಂಡ್ ನಾನೇಳ್ದಂಗೆ ಕೇಳಿದ್ರೆ ಬದ್ಕಂತಿಯ, ಇಲ್ಲಾಂದ್ರೆ ನಾಳೆ ಇನ್ನೊಬ್ಳೋ, ಇನ್ನೊಬ್ನೋ ಇನ್ನೊಂದು ಮಾಡ್ತನೆ. ಮಾಡಿಸ್ಕೊ’ ಎಂದು ಬೆದರಿಸಿದ.

‘ಮಾತಾಡ್ಬೇಡ ಅಂತ ಅವಾಗ್ಲೇ ಹೇಳಿಲ್ವೇನ್ಲ?’ ಎಂದು ಹುಚ್ಚನುಮಿ ರೇಗಿದಳು. `ಕುಯ್‌ಕುಯ್’ ಎಂದು ತನ್ನಷ್ಟಕ್ಕೆ ಗೊಣಗಿಕೊಂಡು ಸುಮ್ಮನಾದ ಸಣ್‌ರಾಮ.

ಆ ನಿಟ್ಟುಸಿರು ಆರುವ ಮೊದಲೇ ಹುಚ್ಚನುಮಿ ‘ಯಾಕ್ ಗೌಡೋ ನೀನಿರ್ವಾಗ ಟೇಸನ್ ಗೀಸನ್?’ ಎಂದು ಗುಟ್ಟು ಹೇಳುವಳಂತೆ ಆಶ್ಚರ್ಯ ಸೂಚಕ ಕಣ್ಣುಗಳನ್ನು ಬಿಡುತ್ತಾ ಹೇಳಿದಳು. ಆ ಗೌಡನೂ ಅದೇ ಗುಟ್ಟಿನ ದನಿಯಲ್ಲಿ ಆದರೆ ನಿರ್ಭಾವುಕನಾಗಿ ‘ನಿಂಗೇನ್ ಗೊತ್ತು? ಈ ಊರಲ್ಲಿ ಇವಾಗ ಎರ್ಡ್ ಪಾರ್ಟಿ ಆಗಿದೆ ಅನ್ಮಕ್ಕಾ. ಇಂಥ ಕೇಸ್‌ನೆಲ್ಲಾ ಪೋಲೀಸ್ನೋರ್ ಕೈಗೊದ್ರೇನೆ ಸರಿ. ಇಲ್ದಿದ್ರೆ ಈ ಕಳ್‌ಜಾತಿ ನನ್‍ಮಕ್ಳು ಮಾತ್ ಕೇಳಲ್ಲ. ಎಲ್ ಗೂಟ ಜಡೀಬೇಕೋ ಅಲ್ ಜಡುದ್ರೆ ಸರಿ’ ಎಂದು ಎದ್ದು ತನ್ನ ಕಾರ್ ಏರಿದ್ದೇ ಕಾರಿನ ಹೊಗೆ ಆರುವ ಮೊದಲೇ ಅಲ್ಲಿಂದ ಮಾಯವಾಗುವವನ ದಾಟಿಯ ವೇಗದಲ್ಲಿ ಚಲಿಸಿಬಿಟ್ಟ ಗೌಡ. ಆ ವೇಳೆಗೆ ಸರಿಯಾಗಿ ಅವನ ಪರಿವಾರವೂ ನೆಟ್ ಬಿಚ್ಚುತ್ತಿತ್ತು.

ತಾಯಿ-ಮಗ ಆಟೋರಿಕ್ಷಾದಲ್ಲಿ ಸ್ಟೇಷನ್ ಹತ್ತಿರ ಇಳಿದಾಗ ಯಾವುದೋ ಸಂಘಟನೆ ಎಸ್‌ಐ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿತ್ತು. ಇತ್ತ ಹುಚ್ಚನುಮಿಗೆ ಎಲ್ಲಿಲ್ಲದ ನಡುಕ ಶುರುವಾಯಿತು. ‘ಪೋಲಿಸ್‌ನೋರ್‍ಗೇ ಧಿಕ್ಕಾರ ಅಂದ್ರೆ ಸುಮ್‌ನೇನಾ! ಇದಕ್ ವರ್ಸುದ್ ಕೆಳ್ಗೆ ಗೌಡ್ರು ತಮ್ಮುನ್ನೇ ಎತ್ತಾಕ್‍ಂಡ್ ವೋಗಿ ಚಚ್ಚಿರ್ಲಿಲ್ವ? ಬಾರ್ಲಾ ಸಣ್ಣ ವೋಗನಾ’ ಎಂದರೆ, ‘ಇರ್‍ದೋ ಏನೂ ಆಗಲ್ಲ ನಮ್ ಗೌಡ್ರೇನ್ ತಮಾಸೆನಾ, ಅವ್ರ್ ಮಾತ್ ಅಂದ್ರೆ ಮಾತ್’ ಎಂದು ಖಾರದ ತೀಕ್ಷ್ಣತೆಯನ್ನು ಸಂಪೂರ್ಣವಾಗಿ ಇಳಿಸಿಕೊಂಡಿದ್ದ ಸಣ್‌ರಾಮ ಉತ್ಸಾಹ ಮತ್ತು ಖಚಿತತೆಯ ದನಿಯಲ್ಲಿ ಹೇಳಿದಾಗ, ಅವನ ತಾಯಿಗೂ ಅದು ಸರಿ ಎನಿಸಿದರೂ ಯಾವಾಗ ಏನೂ ಬೇಕಾದರೂ ಆಗಬಹುದು ಎಂಬ ಭಯದಲ್ಲೇ ಹಿಂದೆ ಉಳಿಯಲು ಪ್ರಯತ್ನಿಸುತ್ತಿದ್ದಳು. ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಯಾರೋ ಅದೇ ಸ್ಟೇಷನ್‌ನ ಒಳಗೆ ಹೋಗಿ ನೀರು ಕುಡಿದು ಹೊರಬಂದದ್ದನ್ನು ಕಂಡ ಸಣ್‌ರಾಮ ‘ಏನಣ್ಣ ಅದು’ ಕೇಳಿಯೇ ಬಿಟ್ಟಾಗ ಅವನ ಹುಚ್ಚನುಮಿಯು ಕೈ ಜಿಗುಟಿ ‘ಅಂಗೆಲ್ಲಾ ಕೇಳ್‌ಬಾರ್ದು’ ಎಂದಳು.

ಇವಳ ಮಾತು ಕೇಳಿ ದೊಡ್ಡದಾಗಿ ಆಕಳಿಸುವ ರೀತಿಯಲ್ಲಿ ನಕ್ಕ ಆ ವ್ಯಕ್ತಿಯು ಟಿವಿ ಚಾನೆಲ್ ಬಂದು ಕೇಳುತ್ತಿದೆಯೇನೊ ಎಂಬ ಆತುರದಲ್ಲಿ ಮೈಕ್ ಇಲ್ಲದಿದ್ದರೂ ಕೈಯ್ಯನ್ನು ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ ಆಡಿಸುತ್ತಲೇ ‘ನಮ್ಮೂರ್ ದೇವಸ್ಥಾನುಕ್ಕೆ, ಬಸ್‍ಸ್ಟಾಂಡ್ ಜಗ್ಲಿಕಟ್ಟೆಗೆ ನಮ್ ಜನಾ ಹತ್ತಂಗಿಲ್ಲ; ಅಂಗಂತಾ ನಾವೇನ್ ವೋಗ್‍ತಿರ್ಲಿಲ್ಲ ಅನ್ಕಳ್ರಿ, ಅಂತದರಲ್ಲಿ ನಮ್ ಅಟ್ಟಿ ನಾಯಿ ಹೋಗಿ ಕಟ್ಟೆ ಮೇಲೆ ಮಲಗಿದ್ದೇ ನೆಪ, ಮೇಲ್ಜಾತಿ ಜನಾ ನಮ್ ಅಟ್ಟಿಗ್ ನುಗ್ಗಿ ಸಿಕ್‌ದೋರ್‍ಗೆಲ್ಲ ಹಿಗ್ಗಾ-ಮುಗ್ಗ ಬಾರ್ಸವ್ರೆ, ಇಬ್ರು ಮೂವರಿಗೆ ಜಾಸ್ತಿ ಏಟ್ ಬಿದ್ದು ಆಸ್ಪೆಟ್ಳಲ್ಲಿ ಅವ್ರೆ, ಕಂಪ್ಲೆಂಟ್ ಕೊಡೋಣ ಅಂತ ಬಂದ್ರೆ ಇವ್‌ಳ್ಯಾಕೋ ಕಂಪ್ಲೆಂಟೇ ತಗಂತಿಲ್ಲ!’ ಎಂದು ತಾನೂ ಗೇಟಿನ ಹೊರಗೆ ಧಿಕ್ಕಾರ ಕೂಗುತ್ತಿದ್ದವರ ದನಿಗೆ ‘ಧಿಕ್ಕಾರ! ಧಿಕ್ಕಾರ’ ಎನ್ನುತ್ತಾ ಆ ದನಿಗಳ ಕಡೆ ಹೆಜ್ಜೆಯಿಟ್ಟ.

ಹೊರಗಿನ ಬಿಸಿಲು ಒಳಗೂ ಸೇರಿ ಆ ಬಿಸಿಲನ್ನೇ ಎಸ್‌ಐ ಉಸಿರಾಡುತ್ತಿದ್ದಾಳೇನೋ ಅನಿಸಿ, ಒಳಗೆ ಹೋಗದೆ, ಅಲ್ಲೇ ನಿಂತಿದ್ದ ಆಟೋವನ್ನೂ ಹತ್ತಲಾಗದೇ ತಾಯಿ-ಮಗ ಅಲ್ಲೇ ನಿಂತರು.

*****

ಅಟ್ರಾಸಿಟಿ ಕಾಯ್ದೆಯ ಬಗ್ಗೆ ಇತ್ತೀಚೆಗೆ ಬಹಳಷ್ಟು ವಿರೋಧಾಭಾಸಗಳು ಎದ್ದಿವೆ. ಅಸಲಿಗೆ ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುವಷ್ಟು ಬುದ್ಧಿವಂತಿಕೆ ಬಹಳಷ್ಟು ದಲಿತರಲ್ಲಿ ಇಲ್ಲವೇ ಇಲ್ಲ; ಅವರ ಮೂಲಕ ಒಂದಷ್ಟು ಮೇಲ್ಜಾತಿಗಳು ತಮ್ಮ ರಾಜಕೀಯ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯದ ವೈರಿಗಳನ್ನು ಮಟ್ಟಹಾಕಲು ಉಪಯೋಗವಾದದ್ದೇ ಹೆಚ್ಚು. ಇಂತಹ ಒಂದು ಕಾರಣವನ್ನು ಇಲ್ಲಿ ಹೇಳಲು ಯತ್ನಿಸಿದ್ದೇನಷ್ಟೇ. ಇಲ್ಲಿನ ಹಲವಾರು ಪಾತ್ರಗಳು ನನ್ನ ನೆರೆಹೊರೆಯುವುಗಳು; ಕೆಲವು ಜೀವಂತ, ಮತ್ತೆ ಕೆಲವು ಇಲ್ಲವಾಗಿವೆ. ಇಂದಿಗೂ ಈ ಪಾತ್ರಗಳು ನನ್ನನ್ನು ಹಲವು ಬಗೆಗಳಲ್ಲಿ ಕಾಡುತ್ತಲೇ, ಮತ್ತಷ್ಟು ಬರವಣಿಗೆ ಸಂಪತ್ತನ್ನು ಬಗೆಬಗೆದು ಕೊಡುತ್ತಲೇ ಇರುತ್ತವೆ. ಇಂತಹ ಅನೇಕ ಕಾರಣಗಳಿಂದ ಈ ಕತೆ ನನ್ನ ನೆಚ್ಚಿನ ಕತೆಗಳಲ್ಲಿ ಒಂದು.