ಬೈಲುಗದ್ದೆಗಳೆಲ್ಲ ಭೂಮಸೂದೆಯಲ್ಲಿ ಹೋಗಿದ್ದರೂ ಮನೆಯೆದುರಿನ ಬಾಕಿಮಾರು ಗದ್ದೆಯೊಂದು ಉಳಿದಿದೆ. ಮಕ್ಕಳೆಲ್ಲ ಬಾಕಿಮಾರು ಗದ್ದೆಯತ್ತ ನಡೆದುಕೊಂಡು ಹೋದಾಗ ಅವಿನಾಶನಿಗೆ ಅಯ್ಯಪ್ಪ ಎನಿಸಿತು. ಮಕ್ಕಳು ಅಂಗಳದಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದರೆ ತಾನು ಅಲ್ಲಿಂದ ಏಳಬೇಕಾಗುತ್ತದೆಂಬ ಆತಂಕದಲ್ಲಿ ಅದುವರೆಗೂ ಅವನಿದ್ದ. ಮಕ್ಕಳು ಆಡಿದರೆ ಆಡಬಾರದೆಂದು ಹೇಳಲು ಚಂದ್ರಕ್ಕನಿಗೂ ಧೈರ್ಯವಿಲ್ಲ. ಅಂಗಳದಲ್ಲಿ ಕ್ರಿಕೆಟ್ ಆಡಿದರೆ ಹಟ್ಟಿ ಕೊಟ್ಟಿಗೆಯ ಹಂಚುಗಳು, ದಂಡೆಯಲ್ಲಿಟ್ಟ ಚೊಂಬು, ಕೊಡಪಾನಗಳು, ಪ್ಲಾಸ್ಟಿಕ್ ಬಾಲ್ದಿಗಳು ಚೆಂಡಿನ ಪೆಟ್ಟು ತಿಂದು ಅಲ್ಲೋಲಕಲ್ಲೋಲ ಆಗುತ್ತದೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಿ. ಜನಾರ್ದನ ಭಟ್ ಬರೆದ ಕಥೆ “ಪಂಜಣ್ಣ ಕುಕ್ಕಿನ ಚರಿತ್ರೆ” ನಿಮ್ಮ ಈ ಭಾನುವಾರದ ಓದಿಗೆ

“ನಮ್ಮ ಮನೆಯಿಂದ ಆ ಶಾಂಭವಿ ನದಿಯವರೆಗೂ ಇರುವ ಈ ವಿಸ್ತಾರವಾದ ಭೂಮಿಯೆಲ್ಲವೂ ನಮ್ಮದೇ ಆಗಿತ್ತು. ಇಲ್ಲಿಗೆ ನದಿಯ ದಂಡೆ ಕಾಣುತ್ತಿತ್ತು” ಎಂದು ಅಜ್ಜಿ ಚಂದ್ರಕ್ಕ ಹೇಳಿದಾಗ ಎಲ್ಲಾ ಮಕ್ಕಳಿಗೂ ಅಚ್ಚರಿ. ಅಜ್ಜಿ ಹಳೆಯ ಭವ್ಯವಾದ ಹಂಚಿನಮನೆಯ ಜಗಲಿಯಲ್ಲಿ ಕುಳಿತುಕೊಂಡು ಈ ಮಾತನ್ನು ಹೇಳಿದ್ದು. ರಜೆಯಲ್ಲಿ ಊರಿಗೆ ಬಂದಿದ್ದ ನಾಲ್ವರು ಮೊಮ್ಮಕ್ಕಳು ಆಡಲು ಜಾಗವಿಲ್ಲವೆಂಬಂತೆ ಮನೆಯಂಗಳವನ್ನು ಕಣ್ಣಿನಲ್ಲೇ ಅಳೆಯುತ್ತಾ, ಅಲ್ಲಿ ಏನು ಆಟವಾಡುವುದೆಂದು ಯೋಚಿಸುತ್ತಾ ಅತ್ತಿತ್ತ ಅಲೆದಾಡುತ್ತಿದ್ದಾಗ ಅಜ್ಜಿಗೆ ಹಿಂದೆ ನಿಜಾರ್ಥದ ಬಯಲೇ ಆಗಿದ್ದ ಬೈಲಿನ ವೈಭವ ನೆನಪಾಗಿ ಹೀಗೆಂದದ್ದು.

ಅಂಗಳದ ಮೂಲೆಯಲ್ಲಿ ಹಳೆಯ ಈಸಿಚೇರಿನ ಮೇಲೆ ಕುಳಿತಿದ್ದ ಅವರ ಮಗ ಅವಿನಾಶ ಆ ಸಂಜೆಯ ಹೊತ್ತಿಗೆ ತನ್ನ ಕೈಸೇರಿದ್ದ ಅಂದಿನ ಹಿಂದೂ ಪತ್ರಿಕೆಯನ್ನು ಬಿಡಿಸಿ ಓದಲಾರಂಭಿಸಿದ್ದವ ಅಮ್ಮ ಹೇಳಿದ ಮಾತಿಗೆ ಕಿವಿಗೊಟ್ಟ. ಅವನ ಮಕ್ಕಳು ಶರತ್ ಮತ್ತು ಭರತ್ ಕೂಡ ಆಟವಾಡಲು ಸಿದ್ಧತೆ ಮಾಡುತ್ತಿದ್ದ ಮಕ್ಕಳ ಗುಂಪಿನಲ್ಲಿದ್ದರು. ಮಕ್ಕಳು ಕ್ರಿಕೆಟ್ ಆಡಲು ನಿಶ್ಚಯಿಸಿದರೆ ತಾನು ಅಂಗಳದಿಂದ ಏಳಬೇಕಾಗುತ್ತದೆ ಎನ್ನುವ ಚಿಂತೆಯಲ್ಲಿ ಅವನಿದ್ದ.

ಬಹುಶಃ ಅಮ್ಮ ಹೇಳಿದ ಮಾತಿನ ಅರ್ಥ ಹೀಗಿರಬೇಕು: ‘ಮಕ್ಕಳಿಗೆ ಆಡಲು ಬೈಲುಗದ್ದೆ ಸಿಕ್ಕಿದ್ದರೆ ಅವರು ಅಲ್ಲಿಯೇ ಆಟವಾಡಬಹುದಿತ್ತು; ಅಮ್ಮನೂ ತಾನೂ ಕುಳಿತಲ್ಲಿಂದ ಎದ್ದು ಬೇರೆಡೆ ಹೋಗಬೇಕಾದ ಪ್ರಮೇಯ ಬರುತ್ತಿರಲಿಲ್ಲ’ ಎಂದು ಊಹಿಸಿ ಅವಿನಾಶ ಅಮ್ಮನ ಇಂಗಿತಜ್ಞತೆಗೆ ಮನದಲ್ಲೇ ತಲೆದೂಗಿದ. ಅವಳ ಮಕ್ಕಳಾದ ನಾವು – ಅಂದರೆ ತಾನು (ಅವಿನಾಶ), ಹೈದರಾಬಾದಿನ ಅಕ್ಕ ಶ್ವೇತಾ, ಮುಂಬಯಿಯಲ್ಲಿದ್ದ ತಂಗಿ ಉಷಾ, ಮತ್ತು ಊರಲ್ಲಿಯೇ ಮನೆ ಹಾಗೂ ಅಳಿದುಳಿದಿರುವ ತೋಟ ನೋಡಿಕೊಳ್ಳುತ್ತಿರುವ ರಮೇಶ – ಮಕ್ಕಳಾಗಿದ್ದಾಗ ಬೈಲು ಗದ್ದೆಗಳಲ್ಲಿ ಆಡಿದ ಆಟಗಳ ನೆನಪು ಮಧುರ. ಬೇಸಗೆ ತಿಂಗಳುಗಳಲ್ಲಿ ಎಲ್ಲೆಲ್ಲಿಂದಲೋ ಹತ್ತಿಪ್ಪತ್ತು ಮಕ್ಕಳು ಕೊಯ್ಲು ಮುಗಿದ ಗದ್ದೆಗಳಲ್ಲಿ ಜಮೆಯಾಗಿ ಆಡುತ್ತಾ ಇರುತ್ತಿದ್ದುದು ಬಹುದೂರದವರೆಗೆ ಕಾಣಿಸುತ್ತಿತ್ತು. ಈಗ ಬೈಲು ಎನ್ನುವುದೇ ಇಲ್ಲವಾಗಿ ಅದೊಂದು ಕಾಲನಿಯಾಗಿತ್ತು.

ಈಗ ಈ ತರವಾಡು ಮನೆಯಲ್ಲಿ ಮುಂದಿನ ತಲೆಮಾರಿನ ಮಕ್ಕಳು ಅಪರೂಪಕ್ಕೆ ಸೇರಿದ್ದಾರೆ, ರಮೇಶನ ಮಗ ಶ್ರೀನಿಧಿಯ ಉಪನಯನಕ್ಕಾಗಿ. ಈ ಕ್ಷಣ ಅಂಗಳದಲ್ಲಿ ಮಕ್ಕಳ ಜತೆಗೆ ಶ್ರೀನಿಧಿ ಇರಲಿಲ್ಲ. ಅವನು ಅಪ್ಪ ರಮೇಶ ಮತ್ತು ಅಮ್ಮ ಸರಿತಳೊಂದಿಗೆ ಉಪನಯನದ ಹೇಳಿಕೆಗೆ ಎಲ್ಲೋ ಹೋಗಿದ್ದಾನೆ. ಉಷಾಳ ಹೆಣ್ಣುಮಕ್ಕಳು ಶಾನ್ವಿ ಮತ್ತು ಧನ್ವಿ ಗಂಡುಮಕ್ಕಳ ಜತೆ ಕ್ರಿಕೆಟಿಗಾದರೂ ಸೈ, ಫುಟ್‍ಬಾಲಿಗಾದರೂ ಸೈ ಎನ್ನುವಂತೆ ಉತ್ಸಾಹದಿಂದ ಚಿಮ್ಮುತ್ತಿವೆ. ಹೈದರಾಬಾದಿನಲ್ಲಿರುವ ಅಕ್ಕ ಶ್ವೇತಾಳ ಮಕ್ಕಳು ಈಗ ಅಮೇರಿಕದಲ್ಲಿದ್ದಾರೆ. ಈ ಮನೆಯನ್ನು ಅವರು ನೋಡಿದ್ದಾರೋ ಇಲ್ಲವೋ!

ನಾವೆಲ್ಲ ಉದ್ಯೋಗವನ್ನರಸುತ್ತ ವಲಸೆ ಹೋಗಿ, ನಮ್ಮ ನಮ್ಮ ಸಂಸಾರಗಳನ್ನು ಬೇರೆ ಬೇರೆ ಬೃಹತ್ ನಗರಗಳಲ್ಲಿ ನೆಲೆಗೊಳಿಸಿದೆವು. ಮೊದ ಮೊದಲು ಪ್ರತಿ ರಜೆಯಲ್ಲಿ ಹುಟ್ಟಿದ ಊರಿಗೆ, ಹುಟ್ಟಿದ ಮನೆಗೆ ಬರಬೇಕೆಂಬ ಹುಮ್ಮಸ್ಸು ಇತ್ತು. ನಮ್ಮ ಬಾಲ್ಯದ ಸಂತೋಷಗಳನ್ನು ಮಕ್ಕಳು ಕೂಡಾ ಅನುಭವಿಸಲಿ ಎಂಬ ಉದ್ದೇಶವೂ ಇತ್ತು. ಆದರೆ ಮಕ್ಕಳು ಬೆಳೆದಂತೆ ಅವರು ಯಾವ ಭಾವಸಂಬಂಧಗಳಿಗೂ ಸ್ಪಂದಿಸದೆ ಕ್ಯೂಟ್ ಗೊಂಬೆಗಳಾಗಿಬಿಟ್ಟರು. ಊರಿಗೆ ಮಕ್ಕಳನ್ನು ಕರೆತರುವುದು ರಗಳೆಯೆನಿಸಿತು. ಮುಖ್ಯವಾಗಿ ಮಕ್ಕಳು ಹಳ್ಳಿಯಲ್ಲಿ ಸಂಭ್ರಮಪಡುತ್ತಾರೆಂದು ತಾವು ಲೆಕ್ಕ ಹಾಕಿದರೆ ಅವರು, ‘ಬೋರು! ಬೋರು!’ ಎಂದು ರಗಳೆ ಮಾಡತೊಡಗಿದರು. ಅವರ ಬೋರು ಕಳೆಯುವ ಜವಾಬ್ದಾರಿ ಅವರನ್ನು ಕರೆತಂದ ಹೆತ್ತವರದು, ಅಥವಾ ಆತಿಥೇಯರದು ಎನ್ನುವ ಹಾಗೆ. ಮನೆಯಲ್ಲಿ ಕಂಪ್ಯೂಟರ್ ಇಲ್ಲದಿದ್ದರೆ, ಮೊಬೈಲ್ ನೆಟ್‍ವರ್ಕ್ ಇಲ್ಲದಿದ್ದರೆ ಅವರ ಜೀವನ ರಥ ಮುಂದೆ ಹೋಗುವುದಿಲ್ಲ. ಊರಿನಲ್ಲಿ ಕರೆಂಟ್ ಹೋಗುವುದು ಸಾಮಾನ್ಯ. ಒಂದು ಗಂಟೆ ಕರೆಂಟ್ ಕೊಟ್ಟರೆ ಇನ್ನೊಂದು ಗಂಟೆ ಪವರ್‍ಕಟ್. ಕರೆಂಟ್ ಅಥವಾ ನೆಟ್‍ವರ್ಕ್ ಇಲ್ಲದೆಹೋದರೆ ಪ್ರಳಯವೇ ಆದಂತೆ ಅಲ್ಲಿಂದ ಪಾರಾಗಿ ಹೋಗಬೇಕೆಂದು ಒತ್ತಾಯಿಸಲಾರಂಭಿಸುತ್ತಾರೆ. ಈ ವರ್ಷ ನಾವೆಲ್ಲ ಸೇರಿ ಮನೆಗೆ ಇನ್ವರ್ಟರ್ ಹಾಕಿಸಿರುವುದರಿಂದ ಮಕ್ಕಳು ಸ್ವಲ್ಪ ಸಹಿಸಿಕೊಂಡಿದ್ದಾರೆ.

ಈ ಕಾಲದ ಹುಡುಗರ ಭಾವಲೋಕವನ್ನು ನಾವು ನಿರ್ದೇಶಿಸಲಾಗದು ಎನ್ನುವ ಸತ್ಯ ಅವಿನಾಶನಿಗೆ ಹೊಳೆದ ಮೇಲೆ ಅವನು ತಾನೊಬ್ಬನೇ ಊರಿಗೆ ಬರುವುದನ್ನು ರೂಢಿಮಾಡಿಕೊಂಡಿದ್ದ. ಈ ಸಲ ಮಾತ್ರ ಶ್ರೀನಿಧಿಯ ಉಪನಯನಕ್ಕಾಗಿ ಕುಟುಂಬ ಸಮೇತ ಬರಲೇಬೇಕಾಯಿತು. ತನ್ನ ಮಕ್ಕಳು ಶ್ರೀನಿಧಿಯನ್ನು ಸ್ವಲ್ಪ ದೂರವೇ ಇಡುವುದನ್ನು, ಸ್ವಲ್ಪ ತಿರಸ್ಕಾರದಿಂದ ನೋಡುವುದನ್ನು ಅವಿನಾಶ ಗಮನಿಸಿದ್ದಾನೆ. ಕನ್ನಡ ಮಾಧ್ಯಮದ ಹಳ್ಳಿಯ ವಿದ್ಯಾರ್ಥಿ ಶ್ರೀನಿಧಿ ಈ ಪೇಟೆಯ ಆಂಗ್ಲಮಾಧ್ಯಮದ ಮಕ್ಕಳಿಗೆ ಯಾವುದಕ್ಕೂ ಸರಿಸಾಟಿಯಾಗಲಾರ ಅಂತ ಅನಿಸುತ್ತಿತ್ತು. ತಮ್ಮ ಮಕ್ಕಳು ಹೆಚ್ಚಾಗಿ ಇಂಗ್ಲಿಷಿನಲ್ಲಿ ಮಾತಾಡಿಕೊಳ್ಳುತ್ತಿರುವಾಗ ಶ್ರೀನಿಧಿ ಪೆಚ್ಚಾಗಿ ಅವರ ಮುಖ ನೋಡುತ್ತಾ ಪೆದ್ದುಪೆದ್ದಾಗಿ ನಗುತ್ತಿರುತ್ತಾನೆ. ನಿಜವಾಗಿ ಬುದ್ಧಿವಂತ ಹುಡುಗ ಶ್ರೀನಿಧಿ. ತರಗತಿಯಲ್ಲಿ ತೊಂಬತ್ತೈದಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಾನಂತೆ. ಪೇಟೆ ಮಕ್ಕಳೆದುರು ಹೆಡ್ಡನಂತೆ ಕಾಣುತ್ತಾನೆ.

“ಶಾಂಭವಿ ಹೊಳೆ ಇಲ್ಲಿಗೆ ಕಾಣಿಸುವುದೇ ಇಲ್ಲ?” ಎಂದು ಅವಿನಾಶನ ದೊಡ್ಡ ಮಗ ಶರತ್ ಅಜ್ಜಿಯನ್ನು ಕೇಳಿದಾಗ ಅವಿನಾಶನ ನೆನಪುಗಳಿಗೆ ಕಡಿವಾಣ ಬಿತ್ತು. ಮಕ್ಕಳು ಏನು ಮಾತಾಡುತ್ತಿದ್ದಾರೆ ಅದರ ಮೇಲಿನಿಂದ ಅವರ ಬುದ್ಧಿಮತ್ತೆ, ಸಾಂಸ್ಕೃತಿಕ ಮಟ್ಟ ಇವುಗಳನ್ನು ಅಳೆಯಬಹುದೆಂದು ಕಿವಿಗೊಟ್ಟ.

“ಇಲ್ಲ ಮಗಾ, ಆಗ ಇಲ್ಲಿಂದ ಶಾಂಭವಿ ನದಿ ಕಾಣಿಸುತ್ತಿತ್ತು, ನಡುವೆ ಈಗ ಇರುವ ಮನೆಗಳು ಯಾವುವೂ ಆಗ ಇರಲಿಲ್ಲ” ಎಂದು ಚಂದ್ರಕ್ಕ ಹೇಳಿದರೂ ಮಕ್ಕಳು ನಂಬಿದಂತೆ ಕಾಣಲಿಲ್ಲ.

ಭರತ್: ಅದು ನಮ್ಮದೇ ಜಾಗ ಆಗಿದ್ದರೆ ಈಗ ಅಲ್ಲಿ ಬೇರೆಯವರು ಮನೆಕಟ್ಟಿ ಕುಳಿತುಕೊಂಡದ್ದು ಹೇಗೆ?

ಚಂದ್ರಕ್ಕ: ಅದು ಭೂಮಸೂದೆಯಿಂದ ಮಕ್ಕಳೇ. ಒಮ್ಮೆ ಸರಕಾರ ಭೂಮಿಯ ಒಡೆಯರಿಂದ ಜಾಗವನ್ನೆಲ್ಲಾ ಕಿತ್ತುಕೊಂಡು ಒಕ್ಕಲಿನವರಿಗೆ ಕೊಟ್ಟಿತಲ್ಲ, ಆಗ ಜಾಗವೆಲ್ಲಾ ನಮ್ಮ ಒಕ್ಕಲಿನವನಾಗಿದ್ದ ಕಾಡ್ಯನಿಗೆ ಹೋಯಿತು. ಈಗ ಅವನ ಮೊಮ್ಮಕ್ಕಳು ಆ ಗದ್ದೆ ಜಾಗವನ್ನೆಲ್ಲಾ ಸೈಟುಗಳನ್ನಾಗಿ ಮಾಡಿ ಮಾರಿ ಕೋಟ್ಯಾಧಿಪತಿಗಳಾಗಿದ್ದಾರೆ. ಹಾಗೆ ಮನೆಗಳನ್ನು ಕಟ್ಟಿದ ಮೇಲೆ ಅಲ್ಲಲ್ಲಿ ಉಳಿದ ಗದ್ದೆಗಳಲ್ಲೆಲ್ಲಾ ಕಮ್ಯೂನಿಸ್ಟ್ ಗಿಡ ಬೆಳೆದಿದೆ.

ಅವಿನಾಶ ಸ್ವಲ್ಪ ಗಟ್ಟಿಯಾಗಿಯೇ ತನ್ನದೊಂದು ವ್ಯಂಗ್ಯದ ಮಾತು ಸೇರಿಸಿದ, “ಇಲ್ಲಿ ಕಟ್ಟಿಕೊಂಡಿರುವ ಮನೆಗಳೂ ಕಮ್ಯೂನಿಸ್ಟ್ ಕಳೆಗಳೇ!”
ಮಕ್ಕಳಿಗಾಗಲಿ, ಚಂದ್ರಕ್ಕನಿಗಾಗಲಿ ವ್ಯಂಗ್ಯ ಅರ್ಥವಾಗಲಿಲ್ಲ. ಪೇಟೆಯ ಮಕ್ಕಳಿಗೆ ಭೂಮಸೂದೆ ಎಂದರೆ ಏನು ಅಂತ ಗೊತ್ತಾಗಿರಲಾರದು. ಶ್ರೀನಿಧಿಗೆ ಗೊತ್ತಿದ್ದೀತೋ ಎನ್ನುವ ಕುತೂಹಲ ಅವಿನಾಶನಲ್ಲಿ ಮೂಡಿತು. ಈ ಭೂಮಿ ಹಕ್ಕುಗಳು ಬದಲಾಗುವುದು, ಸುತ್ತ ಆಗುವ ಪರಿವರ್ತನೆಗಳು ಅವನ ಜ್ಞಾನಕೋಶದೊಳಗೆ ಪ್ರವೇಶಿಸಿರಬಹುದೇ ಎಂದು ಒಮ್ಮೆ ಪರೀಕ್ಷಿಸಬೇಕೆಂದು ಅವಿನಾಶ ಯೋಚಿಸಿದ.

ಅಷ್ಟರಲ್ಲಿ ಮನೆಯೆದುರಿನ ಬಾಕಿಮಾರು ಗದ್ದೆಯ ಅಂಚಿನಲ್ಲಿದ್ದ ಹಳೆಯ ಮಾವಿನಮರದಿಂದ ಮಾಗಿ ತೊಟ್ಟು ಕಳಚಿದ ಮಾವಿನ ಹಣ್ಣೊಂದು ಧೊಪ್ಪನೆ ಗದ್ದೆಗೆ ಬಿತ್ತು. ಆಧುನಿಕ ಜೀವನಕ್ಕೊಗ್ಗಿದ ಮಕ್ಕಳಿಗೆ ಅದು ಕೇಳಿಸಲಿಲ್ಲ, ಕಾಣಲೂ ಇಲ್ಲ. ಆದರೆ ಚಂದ್ರಕ್ಕನ ಜೀವ ಅದಕ್ಕೆ ಸ್ಪಂದಿಸಿತು. ಮಾವಿನಹಣ್ಣು ಬಿದ್ದ ಶಬ್ದದಿಂದಲೇ, ‘ಅದಕ್ಕೆ ಗಾಯವಾಗಿಲ್ಲ, ಧಾನ್ಯ ಬಿತ್ತಿದ ಗದ್ದೆಯ ಹುಡಿಮಣ್ಣಿಗೆ ಅದು ಬಿದ್ದಿದೆ; ಧೂಳು ಒರಸಿ ತಿನ್ನಬಹುದು’ ಎಂದು ಅವರು ಲೆಕ್ಕ ಹಾಕಿದರು. ಒಮ್ಮೊಮ್ಮೆ ಅಳಿಲು ಅರ್ಧ ತಿಂದ ಮಾವಿನ ಹಣ್ಣುಗಳೂ ಬೀಳುವುದಿದೆ. ಆಗ ಮಾವಿನ ಹಣ್ಣು ಹೆಕ್ಕಲು ಅವರು ಮಾಡಿದ ಆಮೆಯೋಟ ವ್ಯರ್ಥವಾಗುತ್ತದೆ. ಈ ಮಾವಿನಹಣ್ಣು ತೊಟ್ಟು ಕಳಚಿ ಬಿದ್ದ ಮಾಗಿದ ಹಣ್ಣೇ ಎಂದು ಅವರ ಅನುಭವ ಹೇಳಿತು.

ಚಂದ್ರಕ್ಕ ಮನೆಯ ಜಗಲಿಯಲ್ಲಿ ಕುಳಿತಿದ್ದವರು ನಿಧಾನವಾಗಿ ಜಗಲಿಯಿಂದ ಇಳಿದು, ದಂಟೆಯನ್ನು ಊರುತ್ತಾ ನಡೆದು, ನೂರು ನೂರೈವತ್ತು ಅಡಿ ದೂರದಲ್ಲಿದ್ದ ಮಾವಿನಮರದ ಅಡಿಯಲ್ಲಿ ಹಣ್ಣು ಎಲ್ಲಿ ಬಿದ್ದಿರುತ್ತದೆಂದು ಮೊದಲೇ ಗೊತ್ತಿರುವ ಹಾಗೆ ಗದ್ದೆಯಲ್ಲಿ ಬೆಳೆದಿದ್ದ ತುಂಬೆಗಿಡಗಳ ನಡುವೆ ಬಿದ್ದಿದ್ದ ಮಾವಿನ ಹಣ್ಣನ್ನು ಹೆಕ್ಕಿ ಸೀರೆಯೆತ್ತಿ ಕಟ್ಟಿ ಮಾಡಿಕೊಂಡಿದ್ದ ಮಡಿಲಜೋಳಿಗೆಗೆ ಇಳಿಬಿಟ್ಟು ನಿಧಾನವಾಗಿ ಹಿಂದಕ್ಕೆ ನಡೆದುಕೊಂಡು ಬಂದು ಜಗಲಿಯಲ್ಲಿ ಕುಳಿತರು.
ಈಗ ಮಾವಿನಹಣ್ಣು ಹೆಕ್ಕಲು ಯಾರೂ ಸ್ಪರ್ಧಿಗಳಿಲ್ಲ, ಹಿಂದಿನಕಾಲದಲ್ಲಿ ಒಂದು ಮಾವಿನಹಣ್ಣು ಬಿದ್ದ ಶಬ್ದ ಮನೆಯೊಳಗಿದ್ದವರಿಗೂ ಕೇಳಿಸಿ ಮೂರುನಾಲ್ಕು ಮಂದಿ ಅದನ್ನು ಹೆಕ್ಕಲು ಓಡುತ್ತಿದ್ದರು. ಈಗ ಅವರ ಕೈಯಲ್ಲಿದ್ದ ಹಣ್ಣಿನ ಬಗ್ಗೆ ಅಲ್ಲಿದ್ದ ಯಾರಿಗೂ ಆಸಕ್ತಿಯೇ ಇರಲಿಲ್ಲ. ಮುಂಬಯಿಯ ಮಗಳ ಮಕ್ಕಳು ಹತ್ತು ವರ್ಷದ ಶಾನ್ವಿ ಮತ್ತು ಎಂಟು ವರ್ಷದ ಧನ್ವಿ ಅಜ್ಜಿಯನ್ನು ಸ್ವಲ್ಪ ತಿರಸ್ಕಾರದಿಂದಲೇ ನೋಡಿದರು. ಧೂಳಿನಲ್ಲಿ ಬಿದ್ದ ಹಣ್ಣುಗಳನ್ನು ತಿನ್ನಬಾರದೆಂದು ಅವರ ಮಮ್ಮಿ ಹೇಳಿದ್ದಾರಲ್ಲ? ಮತ್ತೆ ಮಮ್ಮಿಯ ಮಮ್ಮಿ ಮಣ್ಣಿನಲ್ಲಿ ಬಿದ್ದ ಹಣ್ಣನ್ನು ತಿನ್ನಲಿಕ್ಕೆಂದು ಹೆಕ್ಕಿಕೊಂಡು ಬಂದಿದ್ದಾರಲ್ಲ? ಥೂ!

ಅವಿನಾಶನ ಮಕ್ಕಳು ಶರತ್ ಮತ್ತು ಭರತ್ ಬೆಂಗಳೂರಿನಲ್ಲಿ ಪಿಯುಸಿ ಮತ್ತು ಹೈಸ್ಕೂಲಿನಲ್ಲಿ ಓದುತ್ತಿದ್ದವರು. ಅವರಿಗೆ ಸ್ವಂತ ಬುದ್ಧಿ ಉಂಟು, ತುಂಬಾ ಇಂಟೆಲಿಜೆಂಟ್ ಹುಡುಗರು. ಕ್ವಿಜ್ ಸ್ಪರ್ಧೆಗಳಲ್ಲಿ ಅವರನ್ನು ಮೀರಿಸುವವರಿಲ್ಲ. ಅವರಿಗೆ ಗೊತ್ತೇ ಇರುತ್ತದೆ, ಇಂತಹದನ್ನು ತಿನ್ನಬಾರದು. ಆದರೆ ಮಾವಿನಹಣ್ಣು ಹೀಗೆ ಇಷ್ಟು ದೊಡ್ಡ ಮರದಲ್ಲಿ ಬೆಳೆಯುತ್ತದೆ, ಇಂತಹ ಮರದಿಂದ ಹಣ್ಣಾಗಿ ಬೀಳುವುದನ್ನು ಕಾದುಕುಳಿತು ಅದನ್ನು ಹೆಕ್ಕಿ ತಿನ್ನುತ್ತಾರೆ ಎನ್ನುವುದನ್ನು ಅವರು ಕಲ್ಪಿಸಿಯೂ ಇರಲಿಲ್ಲ. ಅವರು ಕೂಡಾ ಅಜ್ಜಿ ಏನು ಮಾಡುತ್ತಾರೆಂದು ಕುತೂಹಲದಿಂದ ನೋಡುತ್ತಿದ್ದರು.

ಚಂದ್ರಕ್ಕನಿಗೆ ಮಕ್ಕಳ ತಿರಸ್ಕಾರ ಅರ್ಥವಾಗಲಿಲ್ಲ. “ಬನ್ನಿ ಮಕ್ಕಳೇ, ಮಾವಿನಹಣ್ಣು ತಿನ್ನೋಣ” ಎಂದು ಸಂಭ್ರಮದಿಂದ ಕರೆದರು.

ಮಕ್ಕಳು ಒಕ್ಕೊರಲಿನಿಂದ “ಬೇಡ, ಬೇಡ” ಎಂದರಚಿದರು. ಚಂದ್ರಕ್ಕನಿಗೆ ಆಶ್ಚರ್ಯವಾಯಿತು, ಎಲಾ ಮಾವಿನಹಣ್ಣು ಬೇಡವೆನ್ನುವ ಮಕ್ಕಳೂ ಇದ್ದಾರಲ್ಲ! ನಮ್ಮ ಕಾಲದಲ್ಲಿ ನಾವು ಹೇಗೆ ಮಾವಿನಹಣ್ಣು ಬಿದ್ದಲ್ಲಿಗೆ ಓಡುತ್ತಿದ್ದೆವು! ತಾನು ಹುಡುಗಿಯಾಗಿದ್ದಾಗ ತವರು ಮನೆಯಲ್ಲೂ ಮಾವಿನಹಣ್ಣು ಹೆಕ್ಕಲು ಓಡುತ್ತಿದ್ದೆ, ಮದುವೆಯಾದ ಮೇಲೂ ಈ ಅಪೂರ್ವ ರುಚಿಯ ಪಂಜಣ್ಣ ಕುಕ್ಕಿಗಾಗಿ (ತುಳು ಭಾಷೆಯಲ್ಲಿ ಕುಕ್ಕು ಅಂದರೆ ಮಾವಿನಹಣ್ಣು) ನಾಚಿಕೆಯಿಲ್ಲದೆ ಓಡುತ್ತಿದ್ದೆ! ಮದುವೆಯಾದಾಗ ತನಗೆ ಹದಿನಾಲ್ಕು ವರ್ಷ. ಭಾವನ ಹೆಂಡತಿ ಸರಸ್ವತಿಗೆ ಆಗ ಇಪ್ಪತ್ತು ಇರಬಹುದೇನೋ! ಅವಳೂ ಮಾವಿನ ಹಣ್ಣು ಹೆಕ್ಕಲು ಓಡುತ್ತಿದ್ದಳು.

ಮುಖ್ಯವಾಗಿ ಮಕ್ಕಳು ಹಳ್ಳಿಯಲ್ಲಿ ಸಂಭ್ರಮಪಡುತ್ತಾರೆಂದು ತಾವು ಲೆಕ್ಕ ಹಾಕಿದರೆ ಅವರು, ‘ಬೋರು! ಬೋರು!’ ಎಂದು ರಗಳೆ ಮಾಡತೊಡಗಿದರು. ಅವರ ಬೋರು ಕಳೆಯುವ ಜವಾಬ್ದಾರಿ ಅವರನ್ನು ಕರೆತಂದ ಹೆತ್ತವರದು, ಅಥವಾ ಆತಿಥೇಯರದು ಎನ್ನುವ ಹಾಗೆ. ಮನೆಯಲ್ಲಿ ಕಂಪ್ಯೂಟರ್ ಇಲ್ಲದಿದ್ದರೆ, ಮೊಬೈಲ್ ನೆಟ್‍ವರ್ಕ್ ಇಲ್ಲದಿದ್ದರೆ ಅವರ ಜೀವನ ರಥ ಮುಂದೆ ಹೋಗುವುದಿಲ್ಲ.

ಮಕ್ಕಳಿಗೆ ಪಂಜಣ್ಣ ಕುಕ್ಕಿನ ಕಥೆಯನ್ನು ಹೇಳಬೇಕೆಂದು ಮೊನ್ನೆಯಿಂದ ಯೋಚಿಸುತ್ತಿದ್ದ ಚಂದ್ರಕ್ಕ ಈಗ ತಕ್ಕ ಸಮಯವೆಂದು ಹೇಳಲು ಸಿದ್ಧರಾದರು. “ಮಕ್ಕಳೇ ಈ ಪಂಜಣ್ಣ ಕುಕ್ಕಿನ ಕಥೆಯನ್ನು ಹೇಳುತ್ತೇನೆ ಕೇಳಿ” ಎಂದು ಚಂದ್ರಕ್ಕ ಪ್ರಾರಂಭಿಸಿದಾಗ ಮಕ್ಕಳಿಗೆ ಅದನ್ನು ವ್ಯಂಗ್ಯದಿಂದ ಸ್ವೀಕರಿಸಬೇಕೋ, ಗಂಭೀರವಾಗಿ ಆಸ್ವಾದಿಸತಕ್ಕದ್ದೋ ಎಂದು ತಿಳಿಯಲಾರದೆ ಹೋಯಿತು. ಅಹ್, ಹು ಎಂದು ಕಕ್ಕಾಬಿಕ್ಕಿಯಾಗಿ ಒಬ್ಬರು ಇನ್ನೊಬ್ಬರ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ಮುಖ ಮುಖ ನೋಡಿಕೊಳ್ಳುತ್ತಿದ್ದಾಗ ಅವರ ಸಮಸ್ಯೆಯನ್ನು ಪರಿಹರಿಸಲೆಂಬಂತೆ ದೂರದಿಂದ ಮಂಜಣ್ಣನ ಸವಾರಿ ಮನೆಯತ್ತ ಬರುತ್ತಿರುವುದು ಕಂಡಿತು.

ಮಂಜಣ್ಣನನ್ನು ನೋಡಿ ಚಂದ್ರಕ್ಕ, “ಈಗ ಕಥೆ ಬೇಡ, ಮಂಜಣ್ಣ ಬರುತ್ತಿದ್ದಾನೆ” ಎಂದರು.

ಮಕ್ಕಳು ಮಂಜಣ್ಣನತ್ತ ನೋಡಿದವು. ಅರುವತ್ತು ಎಪ್ಪತ್ತು ವರ್ಷಗಳಾಗಿರಬಹುದಾದ ನೀಳಕಾಯದ, ಭುಜದಿಂದ ನೆಲದತ್ತ ಬಾಗಿ ಎರಡೂ ಕೈಗಳನ್ನು ಸಮತೋಲನಕ್ಕೆ ಎಂಬಂತೆ ಹಿಂದಕ್ಕೆ ಚಾಚಿದ್ದ, ವೃದ್ಧ ಮಂಜಣ್ಣ ಬೇಸಿಗೆ ಕಾಲದಲ್ಲಿ ನದಿಯ ಪಾತ್ರದಲ್ಲಿ ನೀರಿಲ್ಲದೆ ಹೋದಾಗ ಒಂದು ಸಣ್ಣ ಧಾರೆ ನೀರು ಬಳುಕುತ್ತಾ ಏರು ತಗ್ಗುಗಳ ನಡುವೆ ಗುಪ್ತ ಸಂಕಟಗಳ ದಾರಿಯೊಂದನ್ನು ಮಾಡಿಕೊಂಡು ಗುರಿಯಿಲ್ಲದೆ ನಡೆದ ಹಾಗೆ ಬೈಲು ಗದ್ದೆ ತುಂಬ ಎದ್ದಿದ್ದ ಮನೆ ಕಂಪೌಂಡುಗಳ ನಡುವಿನ ಕಾಲುದಾರಿಯಲ್ಲಿ ನಡೆಯುತ್ತಾ ಬರುತ್ತಿದ್ದ.

*****

ಭೂಮಸೂದೆಯಲ್ಲಿ ತಮ್ಮ ಜಾಗವನ್ನೆಲ್ಲ ನುಂಗಿಹಾಕಿದ್ದ ಕಾಡ್ಯನ ಮಗ ಮಂಜಣ್ಣ. ಮಂಜಣ್ಣ ಮಾತ್ರ ಕಾಡ್ಯನಂತೆ ಚಾಣಾಕ್ಷನಾಗದೆ ಬೆಪ್ಪನಂತಾಗಿಬಿಟ್ಟ. ಆದರೆ ಅವನ ಮಕ್ಕಳು ಅಂದರೆ ಕಾಡ್ಯನ ಮೊಮ್ಮಕ್ಕಳು ಮಾತ್ರ ಬಹಳ ವ್ಯವಹಾರ ಜ್ಞಾನ ಬೆಳೆಸಿಕೊಂಡು ಜಮೀನನ್ನೆಲ್ಲಾ ಸೈಟುಗಳನ್ನಾಗಿ ವಿಂಗಡಿಸಿ ಮಾರಿ, ಈಗ ಕೋಟ್ಯಾಧಿಪತಿಗಳಾಗಿ ಮಂಗಳೂರು ಉಡುಪಿ ಸೇರಿದ್ದಾರೆ. ತಮ್ಮ ಮೂಲ ಮನೆಯನ್ನು ಬಂಗಲೆಯನ್ನಾಗಿ ಮರುನಿರ್ಮಿಸಿ ಅದರಲ್ಲಿ ಮನೆಯ ಭೂತವನ್ನೂ ಭೂತಕ್ಕೆ ನಿತ್ಯ ಹೂನೀರು ಇಡಲು ಮಂಜಣ್ಣನನ್ನೂ ಬಿಟ್ಟುಹೋಗಿದ್ದಾರೆ.

ಹಿಂದೆ ಮಂಜಣ್ಣನ ಮನೆ ಇಲ್ಲಿಗೆ ಕಾಣಿಸುತ್ತಿತ್ತು. ಈಗ ಅವನು ತಾರಸಿ ಮನೆಗಳ ಕಾಡಿನ ನಡುವೆ ಕಾಲುದಾರಿ ಮಾಡಿಕೊಂಡು ತಮ್ಮ ಮನೆಗೆ ಬಂದು ಹೋಗುತ್ತಿರುತ್ತಾನೆ. ಮಂಜಣ್ಣ ಮಹಾ ಮೌನಿ. ಬಂದು ಸುಮ್ಮನೆ ಜಗಲಿಯಲ್ಲಿ ಕುಳಿತಿರುತ್ತಾನೆ, ಏನಾದರೂ ಕೆಲಸ ಹೇಳಿದರೆ ಅವನಿಗೆ ಖುಷಿಯಾಗುತ್ತದೆ. ಆದುದರಿಂದ ಚಂದ್ರಕ್ಕ ಅವನಿಗೆ ಏನಾದರೂ ಕೆಲಸ ಹೇಳುವರು.

“ಮಂಜಣ್ಣ, ಕೊತ್ತಳಿಗೆ ಕಡಿದು ಬಚ್ಚಲು ಮನೆಗೆ ಹಾಕು.”

“ಮಂಜಣ್ಣ, ಎರಡು ಬಟ್ಟಿ ತರಗೆಲೆ ತಂದು ಹಟ್ಟಿಗೆ ಹಾಕು.”

“ಮಂಜಣ್ಣ, ಆ ಕಾವೇರಿ ದನವನ್ನು ಗದ್ದೆಯಿಂದ ಬಿಚ್ಚಿಕೊಂಡು ಬಂದು ಹಟ್ಟಿಯಲ್ಲಿ ಕಟ್ಟಿ ಹಾಕು.”

ಹೀಗೆ ಹೇಳಿದರೆ ಮಂಜಣ್ಣನ ಮುಖದಲ್ಲಿ ಮಂದಹಾಸ ಮಿನುಗುವುದು. ಅವನು ಮೌನವಾಗಿ ಹೇಳಿದ ಕೆಲಸ ಮಾಡಿಬಂದು ಜಗಲಿಯಲ್ಲಿ ಕುಳಿತರೆ ಚಂದ್ರಕ್ಕ ಒಂದು ಲೋಟ ಚಾ ಮಾಡಿ ಕೊಡುತ್ತಾರೆ. ಬೆಳಗ್ಗೆ ದೋಸೆ ಅಥವಾ ಕಡುಬು ಮಾಡಿದ್ದಿದ್ದರೆ ಅದನ್ನೂ ಒಂದು ಪ್ಲೇಟಿನಲ್ಲಿ ಕೊಡುತ್ತಾರೆ. ಮಂಜಣ್ಣ ಚಾ ಕುಡಿದು ಲೋಟ ಪ್ಲೇಟು ತೊಳೆದಿಟ್ಟು ತುಂಬಾ ಹೊತ್ತು ಕುಳಿತಿದ್ದು ನಿಧಾನವಾಗಿ ನದಿಯಂತೆ ನಡೆಯುತ್ತಾ ತನ್ನ ಮನೆಗೆ ಹೋಗುತ್ತಾನೆ.

ಅವನಿಗೆ ಮಾತೇ ಬಾರದು ಎಂದಲ್ಲ. ಚಂದ್ರಕ್ಕ, “ಮಂಜಣ್ಣ, ಶಿವ ಇತ್ತೀಚೆಗೆ ಬಂದಿದ್ದಾನಾ?” ಎಂದು ಕೇಳಿದರೆ, “ಹೌದು, ಮೊನ್ನೆ ಬಂದಿದ್ದ. ಭೂತಕ್ಕೆ ಮಾಡಲಿಕ್ಕಿತ್ತು” ಎಂದೋ; “ಇಲ್ಲ” ಎಂದೋ ಉತ್ತರಿಸುತ್ತಿದ್ದ. ಶಿವ ಮಂಜಣ್ಣನ ಎರಡನೆಯ ಮಗ, ವ್ಯವಹಾರ ಕುಶಲಿ. ಈಗ ಉಡುಪಿಯಲ್ಲಿ ಒಂದು ಅಂಗಡಿ ಹಾಕಿದ್ದಾನೆ ಎಂದು ಬೇರೆಯವರು ಹೇಳುವುದನ್ನು ಚಂದ್ರಕ್ಕ ಕೇಳಿದ್ದಾರೆ. ಮಂಜಣ್ಣನನ್ನು ಕೇಳಿದರೆ, “ಉಮ್ಮ! ನನಗ್ಗೊತ್ತಿಲ್ಲ” ಎಂದಿದ್ದ.

“ನಿನ್ನ ಹಿರಿಯ ಮಗ ಮಂಗಳೂರಿನಲ್ಲಿರುವವ, ಸುಧಾಕರ, ಅವನಿಗೆ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿದೆಯಂತಲ್ಲವಾ?” ಎಂದು ಕೇಳಿದಾಗ “ಹೌದಾ?” ಎಂದು ಚಂದ್ರಕ್ಕನನ್ನೇ ಕೇಳಿದ್ದ.

ತನಗೆ ಬ್ಯಾಂಕಿನಲ್ಲಿ ಅಟೆಂಡರ್ ಕೆಲಸ ಸಿಕ್ಕಿದೆ, ಸ್ವಲ್ಪ ಇನ್‍ಫ್ಲೂಯೆನ್ಸ್ ಮಾಡಿಸಿದ್ದೆ, ಎಷ್ಟು ಸಮಯ ಅಂತ ಕುಳಿತು ತಿನ್ನುವುದು? – ಎಂದು ಸುಧಾಕರನೇ ಚಂದ್ರಕ್ಕನಲ್ಲಿ ಹೇಳಿದ್ದ. ಅವನು ಬಂದದ್ದು, ‘ತನ್ನ ತಂದೆ ಮಂಜಣ್ಣ ಬಂದರೆ ಅವನ ಕೈಯಲ್ಲಿ ಬಿಟ್ಟಿ ಚಾಕರಿ ಮಾಡಿಸಬಾರದು, ತಂದೆಗೆ ಹೇಗೂ ಬುದ್ಧಿಯಿಲ್ಲ’ ಎಂದು ಸೂಚ್ಯವಾಗಿ ಚಂದ್ರಕ್ಕನಿಗೆ ಹೇಳಿಹೋಗಲು. ‘ತಾನು ಬ್ಯಾಂಕಿನಲ್ಲಿರುವುದು, ತನ್ನ ಅಪ್ಪನನ್ನು ಅಷ್ಟು ಕೀಳಾಗಿ ನಡೆಸಿಕೊಳ್ಳಬೇಡಿ, ತಾವು ಬೇಕಾದರೆ ಕುಳಿತು ತಿನ್ನಬಹುದಾದಷ್ಟು ಶ್ರೀಮಂತರು’ ಎನ್ನುವುದು ಅವನ ಮಾತಿನ ಇಂಗಿತಾರ್ಥವಾಗಿತ್ತು.

ಅದನ್ನೆಲ್ಲ ಚಂದ್ರಕ್ಕ ಕ್ಯಾರ್ ಮಾಡಲಿಲ್ಲ. ಈ ಸುಧಾಕರ ಚಡ್ಡಿ ಹಾಕದೆ ಮಂಜಣ್ಣನ ಹಿಂದೆಯೇ ಅಂಟಿಕೊಂಡು ಬಂದು, ತಾನು ಕೊಡುತ್ತಿದ್ದ ತಿಂಡಿಗೆ ಆಸೆಯಿಂದ ಕಾಯುತ್ತಿದ್ದ ದಿನಗಳಿಂದಲೂ ಅವರು ಅವನನ್ನು ಕಂಡಿಲ್ಲವೆ?

“ಮಂಜಣ್ಣ ಇಲ್ಲಿಗೆ ಬರದ ಹಾಗೆ ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕು ಸುಧಾಕರ! ನನಗೇನು ಅವನಿಂದ ಬಿಟ್ಟಿ ಚಾಕರಿ ಮಾಡಿಸಿ ಮೆರೆಯುವ ಆಸೆಯೇ? ನನಗೆ ಕೆಲಸಕ್ಕೆ ದುಗ್ಗು ಬರುತ್ತಾಳೆ, ಗೊತ್ತುಂಟಲ್ಲ ನಿನಗೆ? ನಮ್ಮ ಜಾಗ ಭೂಮಸೂದೆಯಲ್ಲಿ ಹೋಗಿರಬಹುದು, ಆದರೆ ಮಕ್ಕಳು ಕೆಲಸಕ್ಕೆ ಜನ ಇಟ್ಟಿದ್ದಾರೆ, ನೀವು ಏನೂ ಮಾಡಬಾರದು ಅಮ್ಮ ಎಂದು ಹೇಳಿದ್ದಾರೆ. ಅಲ್ಲದೆ ನಾನು ಮಂಜಣ್ಣನನ್ನು ಕೆಲಸಕ್ಕೆ ಬರಲಿಕ್ಕೆ ಹೇಳಿದ್ದೇನೆಯೇ?” ಎಂದು ರೇಗಿದಾಗ ಸುಧಾಕರ ಸಪ್ಪಗಾಗಿಬಿಟ್ಟ.

ನೀವು ಮೆರೆಯುತ್ತಿರುವುದು ಭೂಮಸೂದೆಯಲ್ಲಿ ನಮ್ಮಿಂದ ಪಡೆದ ಜಾಗವನ್ನು ಮಾರಿಯೇ ತಾನೆ? ಎಂದು ಚಂದ್ರಕ್ಕ ಸೂಚ್ಯವಾಗಿ ಚುಚ್ಚಿದ್ದರು ಬೇರೆ.

“ಹಾಗಲ್ಲ, ಚಂದ್ರಮ್ಮನವರೇ, ಅಪ್ಪ ಎಷ್ಟು ಹೇಳಿದರೂ ಕೇಳುವುದಿಲ್ಲ ನೋಡಿ, ದಿನಕ್ಕೊಮ್ಮೆ ಇಲ್ಲಿಗೆ ಬರದಿದ್ದರೆ ಅವರಿಗೆ ಸಾಧ್ಯವೇ ಇಲ್ಲ” ಎಂದು ಹೇಳಿದ್ದ.

“ಹಾಗೆ ಹೇಳು, ಇಲ್ಲಿಗೆ ಬಂದು ಸ್ವಲ್ಪ ಹೊತ್ತು ಕುಳಿತಿದ್ದರೆ ಅವನಿಗೆ ಸಮಾಧಾನ ಆಗುತ್ತದೆ. ಅದೊಂದು ವಿಶ್ವಾಸ. ನಾವೆಲ್ಲ ಹಿಂದಿನ ಕಾಲದವರು ಮಾರಾಯ. ನಮಗೆ ನಿಮ್ಮ ಈ ಕಾಲದವರ ಅಮ್ಸಣಿ, ದೊಡ್ಡಸ್ಥಿಕೆಯೆಲ್ಲ ಆಗುವುದಿಲ್ಲ. ನೋಡು, ಮಂಜಣ್ಣ ಇಲ್ಲಿಗೆ ಬಂದಾಗ ನಾವೇನು ಅವನಿಗೆ ಮನಸ್ಸಿಗೆ ಬೇಸರ ಬರುವಂತೆ ನಡೆದುಕೊಳ್ಳುತ್ತೇವಾ? ಅವನಿಗೆ ಏನೋ ಒಂದು ಸಮಾಧಾನ ಅಷ್ಟೆ.”

ಅಲ್ಲಿಗೆ ಮಂಜಣ್ಣನ ಮಕ್ಕಳು ಆ ವಿಷಯವನ್ನು ಬಿಟ್ಟಿದ್ದರು. ಅಪ್ಪ ಏನಾದರೂ ಮಾಡಿಕೊಳ್ಳಲಿ. ಅಲ್ಲದೆ ಅವನು ಇಲ್ಲಿ ಸಣ್ಣಪುಟ್ಟ ಬಿಟ್ಟಿ ಚಾಕರಿ ಮಾಡಿದರೂ ತಮ್ಮ ಮನೆಗದು ಕಾಣಿಸುವುದಿಲ್ಲ. ತಮ್ಮ ನೆಂಟರಿಷ್ಟರಿಗೆ, ಹೆಂಡತಿ ಮಕ್ಕಳಿಗೆ ಅದು ಕಾಣಿಸುವುದಿಲ್ಲವಲ್ಲ ಎಂದು ಸಮಾಧಾನ ತಂದುಕೊಂಡರು.

ಚಂದ್ರಕ್ಕ ಮಂಜಣ್ಣನಿಗೆ ಯಾಕೆ ಹೀಗಾಯಿತು ಎಂದು ಆಗಾಗ ಯೋಚಿಸುವರು. ಅತ್ತೆ ಹೇಳುತ್ತಿದ್ದಂತೆ ಪೂರ್ವಜನ್ಮದ ಕರ್ಮವನ್ನು ಸವೆಸಲು ಹುಟ್ಟಿದವನಿರಬಹುದೆ? ನಾಲ್ಕು ತಲೆಮಾರಿನ ಹಿಂದೆ ಮಂಜಣ್ಣನ ಮನೆಯವರಿಗೆ ತಮ್ಮ ಮನೆಯವರ ಮೇಲೆ ಭಯಂಕರ ದ್ವೇಷ ಇತ್ತಂತೆ. ಅದರ ಹುಟ್ಟಿನ ಕಾರಣ ತಿಳಿಯದು. ಒಂದು ಕ್ಷುಲ್ಲಕ ಕಾರಣವನ್ನು ಅತ್ತೆ ಹೇಳುತ್ತಿದ್ದರು.

ತಮ್ಮದು ಶಾನುಭೋಗರ ಕುಟುಂಬ. ಸುತ್ತ ಮುತ್ತ ಎರಡು ಮೂರು ಊರುಗಳ ತುಂಬಾ ಹರಡಿದ್ದುದಂತೆ ತಮ್ಮ ಆಸ್ತಿಪಾಸ್ತಿ. ಕಣ್ಣಿಗೆ ಕಾಣುವಷ್ಟು ಜಾಗವೂ ಶಾನುಭೋಗರ ಆಸ್ತಿ. ಅವುಗಳನ್ನು ಕೃಷಿ ಮಾಡಲು ಹತ್ತೈವತ್ತು ಚಾಲಗೇಣಿ ಒಕ್ಕಲುಗಳು. ಮೂರು ಊರುಗಳ ರಾಜರೇ ಅನ್ನುವಂತಿದ್ದ ತಮ್ಮ ಕುಟುಂಬದವರಿಗೆ ಅದಕ್ಕೆ ತಕ್ಕ ಹಾಗೆ ಅಹಂಕಾರ, ಹಮ್ಮು, ಬಿಮ್ಮು ಇದ್ದಿರಲೇ ಬೇಕಲ್ಲ.

ಮಂಜಣ್ಣನ ವಂಶದ ಹಿರಿಯನೊಬ್ಬ ತಮ್ಮ ವಂಶದ ರಾಜದರ್ಪದ ಒಬ್ಬರು ಶಾನುಭೋಗರ ಜತೆಗೆ ಯಾವುದೋ ಕಾರಣಕ್ಕೆ ಮನಸ್ತಾಪ ಮಾಡಿಕೊಂಡಿದ್ದ. ಆ ಶಾನುಭೋಗರಿಗೆ ಸಂಕಪ್ಪಣ್ಣ ಎಂಬ ಮನುಷ್ಯ ಆಪ್ತನಾಗಿದ್ದ. ಈಗ ಪೊಸ ಗುತ್ತು … ಪೊಸ ಗುತ್ತು ಎಂದು ಪ್ರಸಿದ್ಧವಾಗಿರುವ ಮನೆತನದ ಮೂಲಪುರುಷನೇ ಆ ಸಂಕಪ್ಪಣ್ಣ. ಅವನು ಒಮ್ಮೆ, ಒರಟನಾಗಿದ್ದ ಮಂಜಣ್ಣನ ಮುತ್ತಜ್ಜನ ಬಳಿ, “ಶಾನುಭೋಗರು ಹೀಗೆ ಹೇಳಿದರು” ಎಂದೇನೋ ಹೇಳಲು ಹೋಗಿದ್ದನಂತೆ.

ಆಗ ಮಂಜಣ್ಣನ ಮುತ್ತಜ್ಜ, “ಹೀಗೆ ಹೇಳಲು ನೀನು ಯಾವ ಗುತ್ತಿನ ಗುತ್ತಿನಾರೋ?” (ಗುತ್ತಿನಾರ್ ಅಂದರೆ ಗುತ್ತಿನ ಯಜಮಾನ) ಎಂದು ಸಂಕಪ್ಪಣ್ಣನನ್ನು ದಬಾಯಿಸಿದನಂತೆ.

ಸಂಕಪ್ಪಣ್ಣ ಆ ಮಾತನ್ನು ಹಾಗೆಯೇ ಬಂದು ಶಾನುಭೋಗರಿಗೆ ಒಪ್ಪಿಸಿದ. ಶಾನುಭೋಗರು ಆಗಿಂದಾಗಲೇ ಫರ್ಮಾನು ಹೊರಡಿಸಿದರಂತೆ, “ಸಂಕಪ್ಪಣ್ಣ ಇನ್ನು ಮುಂದೆ ಪೊಸ ಗುತ್ತಿನ ಗುತ್ತಿನಾರ್” ಎಂದು. ಊರವರನ್ನೆಲ್ಲ ಕರೆದು ಮಂಜಣ್ಣನ ಮುತ್ತಜ್ಜನ ಮನೆಯ ಸಮೀಪದವರೆಗೂ ಸುಮಾರು ಐವತ್ತು ಎಕರೆ ಜಮೀನನ್ನು ಸಂಕಪ್ಪಣ್ಣನಿಗೆ ಬರೆದುಕೊಟ್ಟು, “ಸಂಕಪ್ಪಣ್ಣ ಇನ್ನು ಮುಂದೆ ಗುತ್ತಿನಾರ್” ಎಂದು ಘೋಷಿಸಿದರಂತೆ.

ಹಿಂದಿನವರ ಸಿಟ್ಟು ಅಂದರೆ ಅಂತಹ ರಾಜಾರೋಷದ ಸಿಟ್ಟು. ಮಂಜಣ್ಣನ ಮನೆಯವರಿಗೂ ಶಾನುಭೋಗರ ಮನೆಯವರಿಗೂ ಹಾಗೆಯೇ ದ್ವೇಷ ಬೆಳೆದುಕೊಂಡು ಬಂದು ಒಂದು ದುರಂತದಲ್ಲಿ ಮುಕ್ತಾಯವಾಯಿತು. ಅದೇ ಕಥೆಯನ್ನು ಮಕ್ಕಳಿಗೆ ಹೇಳಲು ಚಂದ್ರಕ್ಕ ಹೊರಟದ್ದು. ಅವಿನಾಶನಿಗೆ ಕೂಡಾ ಈ ಕಥೆ ಗೊತ್ತುಂಟೋ ಇಲ್ಲವೋ! ಮಕ್ಕಳಿಗೆ ಅಂತಹ ಕಥೆಯೆಲ್ಲ ಯಾಕೆ ಎಂದು ತಾನು ಹಿಂದೆ ಆ ಕಥೆಯನ್ನು ತನ್ನ ಮಕ್ಕಳಿಗೆ ಹೇಳದೆಯೂ ಬಿಟ್ಟಿರಬಹುದು.

ಆದರೆ ಈಗಿನ ಮಕ್ಕಳಿಗೆ ಯಾವ ಭಾವನೆಗಳೂ ಇಲ್ಲ! ಸದಾ ಕಾಲ ಕಂಪ್ಯೂಟರಿನಲ್ಲಿ ಭ್ರೂಂ ಭ್ರೂಂ ಅಂತ ಶಬ್ದ ಮಾಡಿಕೊಂಡು ಏನೋ ಆಟವಾಡುತ್ತಿರುವುದು, ಮೊಬೈಲುಗಳನ್ನು ಒತ್ತಿಕೊಂಡು ತಮ್ಮಷ್ಟಕ್ಕೆ ನಗುತ್ತಾ ಇರುವುದು! ಇವುಗಳಿಗೆ ಜೀವನ ಅಂದರೆ ಏನು ಅಂತ ತಿಳಿಯಬೇಕಾದರೆ ಪಂಜಣ್ಣ ಕುಕ್ಕಿನ ಚರಿತ್ರೆಯನ್ನು ಹೇಳಲೇಬೇಕು ಎಂಬ ಹಠ ಚಂದ್ರಕ್ಕನಿಗೆ ಉಂಟಾಯಿತು.

*****

ಮಂಜಣ್ಣ ನಿಧಾನವಾಗಿ ನಡೆದುಕೊಂಡು ಬಂದವನು ಮನೆಯ ಜಗಲಿಯಲ್ಲಿ ಕುಳಿತ. ಬಾಗಿಲಿನ ಆಚೆಗಿನ ಜಗಲಿಯಲ್ಲಿ ಚಂದ್ರಕ್ಕ, ಈಚೆಗಿನ ಜಗಲಿಯಲ್ಲಿ ಮಂಜಣ್ಣ. ಅಂಗಳದಲ್ಲಿ ಏನು ಮಾಡುವುದೆಂದು ತಿಳಿಯದ ಮಕ್ಕಳು ಮತ್ತು ಈಸೀಚೆಯರಿನಲ್ಲಿ ಚಡಪಡಿಸುತ್ತ ಕುಳಿತಿದ್ದ ಅವಿನಾಶ.

ದಿನಕ್ಕೊಮ್ಮೆ ಬಂದುಹೋಗುವ, ಏನೂ ಮಾತಾಡದ ಮಂಜಣ್ಣನನ್ನು ಈಗ ನಾಲ್ಕು ದಿನಗಳಿಂದ ಕಾಣುತ್ತಿದ್ದ ಮಕ್ಕಳು ಅವನಿಗೆ ಹುಚ್ಚು ಎಂದು ತೀರ್ಮಾನಿಸಿಬಿಟ್ಟಿದ್ದರು. ಹಾಗಾಗಿ ಅವನ ಬಗ್ಗೆ ಭಯ ಮಿಶ್ರಿತ ಗೌರವ ಹೊಂದಿ ಇನ್ನೇನು ಮಾಡುವುದು ಎಂದು ಯೋಚಿಸುತ್ತಾ ನಿಂತರು. ಸ್ವಲ್ಪ ಹೊತ್ತು ಮೌನವಾಗಿ ಕಳೆದ ನಂತರ ಶರತ್ ಹೇಳಿದ, “ಕಮಾನ್, ಲೆಟ್ಸ್ ಗೋ ಅಂಡ್ ಪ್ಲೇ ಇನ್ ದ ಫೀಲ್ಡ್”.

ನಾಲ್ಕೂ ಜನ ಮಕ್ಕಳು ಬಾಕಿಮಾರು ಗದ್ದೆಯ ಕಡೆಗೆ ನಡೆದವು. ಬೈಲುಗದ್ದೆಗಳೆಲ್ಲ ಭೂಮಸೂದೆಯಲ್ಲಿ ಹೋಗಿದ್ದರೂ ಮನೆಯೆದುರಿನ ಬಾಕಿಮಾರು ಗದ್ದೆಯೊಂದು ಉಳಿದಿದೆ. ಮಕ್ಕಳೆಲ್ಲ ಬಾಕಿಮಾರು ಗದ್ದೆಯತ್ತ ನಡೆದುಕೊಂಡು ಹೋದಾಗ ಅವಿನಾಶನಿಗೆ ಅಯ್ಯಪ್ಪ ಎನಿಸಿತು. ಮಕ್ಕಳು ಅಂಗಳದಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದರೆ ತಾನು ಅಲ್ಲಿಂದ ಏಳಬೇಕಾಗುತ್ತದೆಂಬ ಆತಂಕದಲ್ಲಿ ಅದುವರೆಗೂ ಅವನಿದ್ದ. ಮಕ್ಕಳು ಆಡಿದರೆ ಆಡಬಾರದೆಂದು ಹೇಳಲು ಚಂದ್ರಕ್ಕನಿಗೂ ಧೈರ್ಯವಿಲ್ಲ. ಅಂಗಳದಲ್ಲಿ ಕ್ರಿಕೆಟ್ ಆಡಿದರೆ ಹಟ್ಟಿ ಕೊಟ್ಟಿಗೆಯ ಹಂಚುಗಳು, ದಂಡೆಯಲ್ಲಿಟ್ಟ ಚೊಂಬು, ಕೊಡಪಾನಗಳು, ಪ್ಲಾಸ್ಟಿಕ್ ಬಾಲ್ದಿಗಳು ಚೆಂಡಿನ ಪೆಟ್ಟು ತಿಂದು ಅಲ್ಲೋಲಕಲ್ಲೋಲ ಆಗುತ್ತದೆ. ಚಂದ್ರಕ್ಕ ಜಗಲಿಯಿಂದ ಎದ್ದು ಒಳಗೆ ಹೋಗಬೇಕಾಗುತ್ತದೆ.

ಈಗ ದೊಡ್ಡವರ ಸಮಸ್ಯೆ ಪರಿಹಾರ ಆಯಿತು, ಮಕ್ಕಳಿಗೆ ಸಮಸ್ಯೆ ಶುರುವಾಯಿತು. ಅಂಗಳದಲ್ಲಿ ಆಡಿದಾಗ ಸುತ್ತ ಮುತ್ತ ಮನೆ ಹಟ್ಟಿ ಅಂತ ಬಾಲ್ ತಡೆದು ನಿಲ್ಲಿಸಲು ವ್ಯವಸ್ಥೆಗಳಿವೆ. ಗದ್ದೆಯಲ್ಲಿ ಆಡುವಾಗ ಈ ಶರತ್ ಭರತ್ ಹೊಡೆದ ಚೆಂಡುಗಳನ್ನು ತರಲು ತಾವು ಓಡಬೇಕಾದೀತು ಎನ್ನುವ ವಿಚಾರ ಶಾನ್ವಿಗೆ ಫಕ್ಕನೆ ಹೊಳೆದುಬಿಟ್ಟಿತು. ಅವಳು ಮುನ್ನೆಚ್ಚರಿಕೆಯಿಂದ ಹೇಳಿದಳು, “ನಾನು ಬಾಲ್ ಹಿಡಿದುಕೊಂಡು ಬರಲು ಓಡುವುದಿಲ್ಲ.”

ಧನ್ವಿಯೂ ಅದನ್ನು ಅರಿತುಕೊಂಡು, “ನಾನೂ ಬಾಲ್ ತರುವುದಿಲ್ಲ” ಎಂದು ರಾಗವೆಳೆದಳು.

ಶರತ್, “ಥತ್! ಈ ಶ್ರೀನಿಧಿಯೂ ಇಲ್ಲ! ಏನು ಮಾಡುವುದು?” ಎಂದು ಗೊಣಗಿಕೊಂಡು, “ಸಾಯಲಿ ಬಿಡಿ, ಒಂದು ರೌಂಡ್ ಅಡ್ಡಾಡಿಕೊಂಡು ಬರೋಣ” ಎಂದು ತೀರ್ಮಾನ ಹೇಳಿದ. ಮಕ್ಕಳೆಲ್ಲ ಪಂಜಣ್ಣ ಕುಕ್ಕಿನ ಮರದ ಅಡಿಯವರೆಗೆ ಹೋಗಿ, ಆ ಮರವನ್ನು ಯಾವ ಭಾವನೆಯೂ ಇಲ್ಲದೆ ವಿಜ್ಞಾನಿಗಳಂತೆ ಪರೀಕ್ಷಿಸಿ ನೋಡುತ್ತಾ ನಿಂತರು. ಅಲ್ಲಿ ಕೆಳಗೆ ಬಿದ್ದು ಕೊಳೆತುಹೋಗಿದ್ದ, ಅಳಿಲುಗಳು ಅರ್ಧ ತಿಂದು ಬೀಳಿಸಿದ ಹಣ್ಣುಗಳ ಮೇಲೆ ಸಣ್ಣ ಗಾತ್ರದ ಸೊಳ್ಳೆಗಳು ಮತ್ತು ನೊಣಗಳು ಹಾರಾಡುತ್ತಿದ್ದುದನ್ನು ನೋಡಿ ಅಸಹ್ಯಪಟ್ಟುಕೊಂಡು ಆಚೆ ಹೋದರು.

ಇತ್ತ ಮಂಜಣ್ಣ ಒಂದರ್ಧ ಗಂಟೆ ಜಗಲಿಯಲ್ಲಿ ಕುಳಿತಿದ್ದ. ಅವನಿಗೆ ಏನು ಕೆಲಸ ಹೇಳುವುದು ಎಂದು ಗೊತ್ತಾಗದೆ ಚಂದ್ರಕ್ಕ ಯೋಚಿಸುತ್ತಿದ್ದಾಗ ಮಗಳು ಉಷಾ ಒಳಗಿನಿಂದ ಬಂದು ಮಂಜಣ್ಣನನ್ನು ನೋಡಿ, “ಏನು ಮಂಜಣ್ಣ?” ಎಂದು ಕೇಳಿದಳು. ಮಂಜಣ್ಣ ಸುಮ್ಮನೆ ಅವಳನ್ನು ಕೃತಜ್ಞತಾಪೂರ್ವಕವಾಗಿ ನೋಡಿದ.

“ಉಷಾ, ಮಂಜಣ್ಣನಿಗೆ ಒಂದು ಚಾ ಮಾಡು, ನನಗೂ ಅರ್ಧ ಲೋಟ ಇರಲಿ. ಅವಿನಾಶನಿಗೆ ಬೇಕೇನೋ?” ಚಂದ್ರಕ್ಕ ಹೇಳಿದರು.

ಚಾ ಮಾಡುವ ಪ್ರಸ್ತಾಪ ಕೇಳಿದ ಕೂಡಲೆ ಮಂಜಣ್ಣ ಎದ್ದು ಹಟ್ಟಿಯತ್ತ ನಡೆದು ಹಟ್ಟಿಯ ಮೂಲೆಯಲ್ಲಿ ರಾಶಿ ಹಾಕಿದ್ದ ತರಗೆಲೆ ರಾಶಿಯಿಂದ ಹಿಡಿ ಹಿಡಿಯಾಗಿ ತರಗೆಲೆಗಳನ್ನು ಎತ್ತಿ ಹಟ್ಟಿ ತುಂಬ ಹರಡಿದ. ಅದನ್ನು ನೋಡುತ್ತಿದ್ದ ಅವಿನಾಶ, “ಈ ಹಟ್ಟಿ ದಂಡೆಯೆಲ್ಲ ಹಾಳಾಗಿದೆಯಲ್ಲಮ್ಮ, ಉಪನಯನಕ್ಕಿಂತ ಮುಂಚೆ ಸ್ವಲ್ಪ ರಿಪೇರಿ ಮಾಡಿಸಿ” ಎಂದು ಹೇಳಿದ.

ಚಂದ್ರಕ್ಕ, “ಸರಿ ಮಾರಾಯ, ಮಂಜಣ್ಣ, ನಿನ್ನ ಮನೆಯ ಪಕ್ಕದಲ್ಲಿ ಚಂದು ಮೇಸ್ತ್ರಿ ಇದ್ದಾನಲ್ಲ, ಅವನನ್ನು ನಾಳೆ ಬರಲು ಹೇಳು ಆಯ್ತಾ?” ಎಂದು ಹೇಳಿದರು. ಚಂದ್ರಕ್ಕನಿಗೆ ಮಂಜಣ್ಣ ಮಂತ್ರಿ ಇದ್ದ ಹಾಗೆ. ಮಂಜಣ್ಣ ತಲೆಯಾಡಿಸಿದ. ಕೆಲಸ ಮುಗಿಸಿ ಕೈಕಾಲು ತೊಳೆದುಕೊಂಡು ಬಂದು ತೃಪ್ತಿಯಿಂದ ಚಾ ಕುಡಿದು ನಿಧಾನವಾಗಿ ನಡೆದುಕೊಂಡು ತನ್ನ ಮನೆಗೆ ಹೋದ.

ಮಂಜಣ್ಣ ಹೋದುದನ್ನು ಕಂಡ ಮಕ್ಕಳು ಅಂಗಳಕ್ಕೆ ಬಂದರು. ಇನ್ನು ಆಟವಾಡುವಷ್ಟು ಸಮಯ ಉಳಿದಿರಲಿಲ್ಲ. ಚಂದ್ರಕ್ಕ ಇದೇ ಸುಸಂಧಿ ಎಂದು ಭಾವಿಸಿ, “ನೋಡಿ ಮಕ್ಕಳೇ, ನಿಮಗೆ ಈ ಪಂಜಣ್ಣ ಕುಕ್ಕಿನ ಚರಿತ್ರೆಯನ್ನು ಹೇಳಬೇಕೆಂದು ಮಾಡಿದ್ದೆನಲ್ಲ, ಈಗ ಹೇಳುತ್ತೇನೆ ಕೇಳಿ” ಎಂದು ಪ್ರಾರಂಭಿಸಿದರು. ಮಕ್ಕಳು ಸ್ವಲ್ಪ ವ್ಯಂಗ್ಯವಾಗಿಯೇ ಅವರ ಆಹ್ವಾನವನ್ನು ಸ್ವೀಕರಿಸಿ ಜಗಲಿಯಲ್ಲಿ ಕುಳಿತರು. ಭರತ್ ಒಳಗೆ ಹೋಗಿ ಒಂದು ಪ್ಲಾಸ್ಟಿಕ್ ಚೆಯರನ್ನು ಹೊತ್ತುಕೊಂಡು ಬಂದು ನಾಟಕೀಯವಾಗಿ ಚಂದ್ರಕ್ಕನೆದುರಿಗೆ ಪ್ರೇಕ್ಷಕನಂತೆ ಕುಳಿತುಕೊಂಡ.

*****

ಮಂಜಣ್ಣನ ಮುತ್ತಜ್ಜನ ಸಿಟ್ಟು ಶಾನುಭೋಗರ ಅಂದರೆ ನಮ್ಮ ಮನೆಯವರ ಮೇಲೆ ಏರುತ್ತಲೇ ಹೋಯಿತು. ಅವನಿಗೆ ಜಗಳಕ್ಕೆ ಏನಾದರೂ ಒಂದು ಸಣ್ಣ ನೆವನ ಸಿಕ್ಕಿದರೂ ಸಾಕಾಗುತ್ತಿತ್ತು. ದೊಡ್ಡದಾಗಿ ಆರ್ಭಟ ಕೊಡುತ್ತಾ ಮನೆಯೆದುರಿಗೆ ಬಂದು ಶಾನುಭೋಗರನ್ನು ವಾಚಾಮಗೋಚರವಾಗಿ ಬೈಯತೊಡಗಿದ. ಶಾನುಭೋಗರು ಒಮ್ಮೆ ಪೋಲೀಸರನ್ನು ಕರೆಸಿ ಅವನನ್ನು ಎರಡು ದಿನ ಲಾಕಪ್ಪಿನಲ್ಲಿ ಹಾಕಿಸಿ ಹೊಡೆಸಿದರು. ಅಲ್ಲಿಂದ ಹಿಂದಿರುಗಿ ಬಂದ ಆ ದುಷ್ಟ ಮತ್ತಷ್ಟು ವ್ಯಗ್ರನಾದ.

ನಮ್ಮ ಬೈಲಿನ ಕೆರೆಯ ದಡದಲ್ಲಿ ಒಂದು ಪಾಂಡಿ ಮಾವಿನಹಣ್ಣಿನ ಮರವಿತ್ತು. ಆ ಕೆರೆ ಮತ್ತು ಆ ಮರ ತನ್ನದೆಂದು ಅವನು ಸುಮ್ಮಸುಮ್ಮನೆ ಕಾಲುಕೆರೆದು ಜಗಳಕ್ಕೆ ಬರತೊಡಗಿದ. ಮಾವಿನ ಹಣ್ಣು ಬೀಳುವಾಗ ಅದನ್ನು ಹೆಕ್ಕಲು ನನ್ನದು ತನ್ನದು ಎಂದು ಎರಡೂ ಕಡೆಯವರು ಓಡಿಬರತೊಡಗಿದರು. ಆ ದುಷ್ಟ – ಅವನ ಹೆಸರು ನನಗೆ ಗೊತ್ತಿಲ್ಲ, ನಮ್ಮ ಮನೆಯಲ್ಲಿ ಯಾರೂ ಅದನ್ನು ನೆನಪಿಟ್ಟುಕೊಂಡಿರಲಿಲ್ಲ – ಒಂದು ಹೆಜ್ಜೆ ಮುಂದೆ ಹೋಗಿ ಒಂದು ದಿನ ಮರ ಹತ್ತಿ ಒಂದು ಚೀಲ ತುಂಬಾ ಮಾವಿನಹಣ್ಣು ಕೊಯಿದುಕೊಂಡು ಹೋದ. ಶಾನುಭೋಗರು ಅದರ ಮರುದಿನ ಒಬ್ಬ ಕೆಲಸದಾಳನ್ನು ಕರೆಯಿಸಿ, ಮರ ಹತ್ತಿಸಿ ಎಲ್ಲಾ ಮಾವಿನಹಣ್ಣು ಕೊಯಿದು ತರಲು ಕಳುಹಿಸಿದರು. ಆಳಿನ ಜತೆಗೆ ಶಾನುಭೋಗರ ಸಣ್ಣ ಮಗನೊಬ್ಬ ಹೋಗಿದ್ದ. ಇಂತಹ ಕ್ಷುಲ್ಲಕ ಜಗಳ ಶಾನುಭೋಗರಾದ ತನಗೆ ತಕ್ಕದಲ್ಲ ಎಂಬ ಕಾರಣಕ್ಕೆ ಶಾನುಭೋಗರು ಅಂತಹ ಜಗಳಗಳಲ್ಲೆಲ್ಲ ನೇರವಾಗಿ ಭಾಗಿಯಾಗುತ್ತಿರಲಿಲ್ಲ.

ಆ ಕೆಲಸದಾಳು ಮಾವಿನಹಣ್ಣು ಕೊಯ್ಯುತ್ತಿರುವಾಗ ಅಲ್ಲಿಗೆ ಕತ್ತಿ (ಕುಡುಗೋಲು) ಹಿಡಿದುಕೊಂಡು ಬಂದ ಆ ದುಷ್ಟ ಕೆಳಗೆ ನಿಂತಿದ್ದ ಮಾಣಿಯನ್ನು ಬೆದರಿಸಿ ಓಡಿಸಿದ. “ನಿನ್ನ ಅಪ್ಪನಿಗೆ ಹೇಳು, ಇದು ನಿಮ್ಮ ಮಾವಿನಮರವಲ್ಲ. ಇದರಿಂದ ಹಣ್ಣು ಕೊಯ್ದರೆ ಜಾಗ್ರತೆ” ಎಂದು ಹೇಳಿದ್ದ. ಹುಡುಗ ಓಡಿಹೋದ ಮೇಲೆ ಕೆಲಸದಾಳನ್ನು ಮರದಿಂದ ಇಳಿಸಿದ. ಅವರ ನಡುವೆ ಏನು ಮಾತುಕತೆ ಆಯ್ತು ಗೊತ್ತಿಲ್ಲ, ಈ ದುಷ್ಟ ಅವನನ್ನು ಕತ್ತಿಯಿಂದ ಕಡಿದು ಕೊಂದುಹಾಕಿ ಹೋಗಿಬಿಟ್ಟ. ಮಾಣಿ ಮನೆಗೆ ಬಂದು ಹೇಳಿದುದನ್ನು ಕೇಳಿ ಶಾನುಭೋಗರು ಕೆರೆಯ ಬಳಿಗೆ ಹೋಗಿ ನೋಡಿದರೆ ಕೆಲಸದಾಳಿನ ಹೆಣ ಮರದಬುಡದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದೆ.

ಆಮೇಲೆ ಕೇಸು ಆಯಿತು. ಆ ದುಷ್ಟ ಕೆಲವು ದಿನ ಜೈಲಿನಲ್ಲಿದ್ದು ಕೊಲೆ ಆಪಾದನೆ ಸಾಬೀತಾಗದ ಕಾರಣ ಬಿಡುಗಡೆಯಾಗಿ ಬಂದುಬಿಟ್ಟ. ಅವನು ಕೊಂದದ್ದನ್ನು ನೋಡಿದವರು ಯಾರೂ ಇರಲಿಲ್ಲ. ಶಾನುಭೋಗರ ಮಾಣಿ ಅಲ್ಲಿಂದ ಓಡಿಹೋಗಿದ್ದನಷ್ಟೆ! ಹಾಗಾಗಿ ಸಾಕ್ಷ್ಯಾಧಾರ ಇಲ್ಲದೆ ದುಷ್ಟನಿಗೆ ಶಿಕ್ಷೆಯಾಗಲಿಲ್ಲ.

ಅವನು ಹಿಂದಿರುಗಿ ಬಂದಮೇಲೆ ಶಾನುಭೋಗರು ಇದ್ದಕ್ಕಿದ್ದಂತೆ ತಣ್ಣಗಾಗಿಬಿಟ್ಟರು. ಎರಡು ವರ್ಷಗಳಲ್ಲಿ ಅವರ ನಡುವಿನ ದ್ವೇಷ ಅಳಿದು ಎದುರು ಸಿಕ್ಕಿದರೆ ಮಾತಾಡುವ ಮಟ್ಟಿಗೆ ಆದರು. ಶಾನುಭೋಗರು ನನ್ನ ಪರಾಕ್ರಮ ಕಂಡು ಬೆದರಿ ಸಪ್ಪಗಾಗಿದ್ದಾರೆ ಎಂದು ಆ ದುಷ್ಟ ಅಂದುಕೊಂಡ. ತನ್ನ ಬಳಗದವರ ಬಳಿ ಹಾಗೆ ಹೇಳುತ್ತಲೂ ಇದ್ದನಂತೆ.

ಆಮೇಲೆ ಇದ್ದಕ್ಕಿದ್ದಂತೆ ಒಂದು ದಿನ ಶಾನುಭೋಗರು ಪಾಂಡಿ ಮಾವಿನ ಮರದ ಅಡಿಯಲ್ಲಿ ನಿಂತುಕೊಂಡು ಆ ದುಷ್ಟನನ್ನು ಅಲ್ಲಿಗೆ ಬರಹೇಳಿದರು. “ಪಾಂಡಿ ಮರದ ಹತ್ತಿರ ಬಾಂದುಕಲ್ಲು ಹಾಕಿ ಮರವನ್ನು ನಿಮ್ಮ ವಶಕ್ಕೆ ಬಿಟ್ಟುಕೊಡುತ್ತಾರಂತೆ, ಬರಬೇಕಂತೆ” ಎಂದು ಅವನನ್ನು ಕರೆಯಲು ಹೋದ ಶಾನುಭೋಗರ ದೂತ ಹೇಳಿದ.

ದುಷ್ಟನಿಗೆ ಒಮ್ಮೆ ಸಂಶಯವಾದರೂ ಶಾನುಭೋಗರ ವರ್ತನೆಯಲ್ಲಿ ಈಗ ಸಂಶಯಾಸ್ಪದವಾಗಿದ್ದುದು ಏನೂ ಇರಲಿಲ್ಲ. ಆದರೂ ಧೈರ್ಯಕ್ಕೆ ಇರಲಿ ಎಂದು ಮನೆಯಲ್ಲಿದ್ದ ತನ್ನ ಭಾವನೆಂಟನನ್ನು ಕರೆದುಕೊಂಡು ಪಾಂಡಿಮಾವಿನ ಮರವಿದ್ದ ಕೆರೆಯ ಬಳಿಗೆ ಬಂದ. ಆ ಮರದಡಿಯಲ್ಲಿ ನಿಂತಿದ್ದ ಶಾನುಭೋಗರಿಗೆ ವಂದಿಸಿ ಕುಶಲೋಪರಿ ಮಾತಾಡುತ್ತಿದ್ದಂತೆ ಅವರು, “ಸ್ವಲ್ಪ ನಿಲ್ಲಿ, ಕಾಗದ ಪತ್ರ ತರುತ್ತೇನೆ” ಎಂದು ಹೇಳಿ ಮನೆಯತ್ತ ಹೋದರು. ಅವರು ಮರೆಯಾಗುತ್ತಿದ್ದಂತೆ ಆರು ಮಂದಿ ಧಾಂಡಿಗರು ಓಡಿಬಂದು ಅದೇ ಮಾವಿನ ಮರದಡಿ ಇಬ್ಬರನ್ನೂ ಕಡಿದು ಕೊಂದುಬಿಟ್ಟರು. ಹಿಂದೆ ಕೆಲಸದಾಳಿನ ಹೆಣ ಎಲ್ಲಿ ಬಿದ್ದಿತ್ತೋ ಅದೇ ಸ್ಥಳದಲ್ಲಿ ಅದೇ ಭಂಗಿಯಲ್ಲಿ ದುಷ್ಟನ ಹೆಣವೂ ಬಿದ್ದಿದ್ದುದನ್ನು ನೋಡಿದ ಎಂಥ ಧೈರ್ಯಶಾಲಿಯೂ ಒಮ್ಮೆ ನಡುಗಿಹೋಗಬೇಕು, ಹಾಗಿತ್ತು ಆ ದೃಶ್ಯ!

ದುಷ್ಟನ ಮನೆಯಲ್ಲಿ ಹಾಹಾಕಾರ ಎದ್ದಿತು. ಹೆಂಗಸರು ಎದೆಬಡಿದು ಗೋಳಾಡಿದರು. ಗಂಡಸರು ರೋಷತಪ್ತರಾದರು, ಪಶ್ಚಾತ್ತಾಪದಲ್ಲಿ ಬೆಂದರು. ಊರಿನಲ್ಲಿ ಸ್ಮಶಾನ ಮೌನ ಹಬ್ಬಿತು. ಎಲ್ಲರಿಗೂ ಇದು ಯಾರ ಕೈವಾಡ ಎಂದು ಗೊತ್ತಿದ್ದರೂ ಬಹಿರಂಗವಾಗಿ ಮಾತನಾಡಲು ಹಿಂಜರಿದರು. ಶಾನುಭೋಗರೇ ಪೋಲೀಸರನ್ನು ಕರೆಯಿಸಿ ಹೆಣಗಳನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಲು ಕಳುಹಿಸಿಕೊಟ್ಟರು. ಆ ಮೇಲೆ ದುಷ್ಟನ ಸಂಬಂಧಿಕರು ಶಾನುಭೋಗರ ಮೇಲೆ ಕೇಸು ಹಾಕಿದರು. ಮಂಗಳೂರಿನಲ್ಲಿ ಕೇಸು ಬಿದ್ದುಹೋಯಿತು. ಸಂಬಂಧಿಕರು ಹಠದಲ್ಲಿ ಮದ್ರಾಸಿನ ಉಚ್ಛ ನ್ಯಾಯಾಲಯಕ್ಕೂ ಹೋದರು. ಅಲ್ಲಿ ಎರಡು ವರ್ಷಗಳ ಕಾಲ ನಡೆದ ಕೇಸು ಶಾನುಭೋಗರ ಪರವೇ ಆಯಿತು. ದುಷ್ಟನ ಸಂಬಂಧಿಕರು ಶಾನುಭೋಗರ ಖರ್ಚಿನ ಬಗ್ಗೆ ದಂಡವನ್ನೂ ಕಟ್ಟಬೇಕಾಯಿತು. ಅವನ ಆಸ್ತಿ ಎಲ್ಲವನ್ನೂ ಮೂಲ್ಕಿಯ ಒಬ್ಬರು ಲೇವಾದೇವಿಗಾರರು ಕೊಂಡುಕೊಂಡರು.

ಶಾನುಭೋಗರ ಪರವಾಗಿ ವಾದ ಮಾಡಿದ ವಕೀಲ ಮದ್ರಾಸಿನಲ್ಲಿಯೇ ಪ್ರಸಿದ್ಧನಾಗಿದ್ದ ಕ್ರಿಮಿನಲ್ ಲಾಯರ್ ದಂಡಾಯುಧಪಾಣಿ ಎಂಬವರು. ಕೇಸೆಲ್ಲ ಮುಗಿದು, ಶಾನುಭೋಗರು ಅವನ ಫೀಸನ್ನು ಸಲ್ಲಿಸಿ ಕೃತಜ್ಞತೆ ಹೇಳಿ ಹೊರಡಲು ಎದ್ದು ನಿಂತಾಗ ದಂಡಾಯುಧಪಾಣಿಯವರು ಶಾನುಭೋಗರನ್ನು ಒಂದು ನಿಮಿಷ ನಿಲ್ಲಲು ಹೇಳಿ, ಜವಾನನನ್ನು ಕರೆದು ಏನೋ ಹೇಳಿದರು. ಜವಾನ ಅತ್ತ ಹೋಗಿ ಒಂದು ಚೀಲದಲ್ಲಿ ಎರಡು ಮಾವಿನ ಸಸಿಗಳನ್ನು ತಂದು ಎದುರಿಗಿಟ್ಟ.

“ಇದು ನಮ್ಮ ನಾಡಿನ ರುಚಿಕರವಾದ ಮಾವಿನಹಣ್ಣಿನ ಸಸಿ, ಪಂಜಣ್ಣ ಮಾವು ಎಂದು ಇದರ ಹೆಸರು. ಇದನ್ನು ನಿಮ್ಮ ಜಾಗದಲ್ಲಿ ನೆಟ್ಟು ಬೆಳೆಸಿ. ಇದರಲ್ಲಿ ಮಾವಿನಹಣ್ಣ್ಣು ಆದರೆ ಎಲ್ಲರಿಗೂ ಹಂಚಿರಿ. ಅದರ ಗೊರಟುಗಳಿಂದ ಆ ಪ್ರದೇಶದಲ್ಲೆಲ್ಲ ಪಂಜಣ್ಣ ಮಾವಿನ ಗಿಡಗಳಾಗಲಿ” ಎಂದು ದಂಡಾಯುಧಪಾಣಿಯವರು ಭಾವುಕರಂತೆ ಮಾತನಾಡಿದರು. ನಂತರ, “ಮಾವಿನಹಣ್ಣಿನಂತಹ ಸಣ್ಣ ವಿಷಯಕ್ಕೆ ಮೂರು ಕೊಲೆಯಾಯಿತೆಂದರೆ!” ಎಂದು ತಮ್ಮಷ್ಟಕ್ಕೆ ಹೇಳಿಕೊಂಡು, ಶಾನುಭೋಗರಿಗೆ ಶೇಕ್ ಹ್ಯಾಂಡ್ ನೀಡಿ ಮಾವಿನ ಸಸಿಗಳೊಡನೆ ಕಳುಹಿಸಿಕೊಟ್ಟರು.

ಕೊಲೆ ನಡೆದುದು ಬರೀ ಮಾವಿನಹಣ್ಣಿಗಾಗಿ ಅಲ್ಲ, ಮಾವಿನ ಹಣ್ಣು ಒಂದು ನೆವನ ಮಾತ್ರ ಎಂದು ಅವರಿಗೆ ವಿವರಿಸಬೇಕೆಂದು ಶಾನುಭೋಗರಿಗೂ ಅನಿಸಲಿಲ್ಲ. ವಕೀಲರು ಕೊಟ್ಟ ಮಾವಿನ ಸಸಿಗಳನ್ನು ತಂದು ತಮ್ಮ ಬಾಕಿಮಾರು ಗದ್ದೆಯ ಅಂಚಿನಲ್ಲಿ ನೆಟ್ಟರು. ಅವುಗಳಲ್ಲಿ ಒಂದು ಸತ್ತುಹೋಗಿ ಒಂದು ಉಳಿಯಿತು. ಅದೇ ಈಗ ನಮ್ಮ ಬಾಕಿಮಾರಿನಲ್ಲಿರುವ ಪಂಜಣ್ಣ ಕುಕ್ಕಿನ (ಮಾವಿನ) ಮರ.

ಇದರ ಹಣ್ಣುಗಳನ್ನು ನಮ್ಮ ನೆಂಟರಿಷ್ಟರೆಲ್ಲ ಕೇಳಿ ಕೇಳಿ ತೆಗೆದುಕೊಂಡುಹೋಗುತ್ತಿದ್ದರು. ಮದ್ರಾಸಿನ ಲಾಯರ್ ಹೇಳಿದಂತೆ ಎಷ್ಟೋ ಮನೆಗಳಲ್ಲಿ ಇದರ ಸಂತಾನ ಬೆಳೆದಿರಬಹುದು.

*****

ಮಕ್ಕಳು ಈ ಕಥೆಯನ್ನು ಕೇಳಿ ನಿಜಕ್ಕೂ ಆಘಾತವನ್ನು ಅನುಭವಿಸಿದರು. ಯಾಕೆಂದರೆ ಅವರ ಮುಖದಲ್ಲಿ ಚಂದ್ರಕ್ಕನ ಬಗ್ಗೆ ಯಾವಾಗಲೂ ಮೂಡುತ್ತಿದ್ದ ವ್ಯಂಗ್ಯ, ಚಂದ್ರಕ್ಕ ಏನೂ ಜ್ಞಾನ ಇಲ್ಲದ ಹೆಡ್ಡಿ ಎಂಬ ಪೂರ್ವಾಗ್ರಹ ಇವುಗಳು ಯಾವುದೂ ಕಾಣದೆ ಪಂಜಣ್ಣ ಕುಕ್ಕಿನ ಮರದತ್ತ ಭಯ ಮಿಶ್ರಿತ ಗೌರವದ ನೋಟ ಹರಿಸಿದರು.

ಅವಿನಾಶ ಗಂಭೀರವಾಗಿ ಹೇಳಿದ, “ಈ ಮಾವಿನ ತಳಿಯ ಹೆಸರು ಪಂಜಣ್ಣ ಅಲ್ಲ, ಪಂಜವರ್ಣ ಎಂದು ತಮಿಳರು ಹೇಳುತ್ತಾರೆ, ಪಂಚವರ್ಣ ಎಂದಿದರ ಹೆಸರು.”
ಶರತ್ ಕೇಳಿದ, “ಅಪ್ಪ ನಿಮಗೆ ಹೇಗೆ ಗೊತ್ತಾಯಿತು ಇದರ ನಿಜ ಹೆಸರು?”

“ಮೊನ್ನೆ ಹಿಂದೂ ಪೇಪರಿನಲ್ಲಿ ಒಂದು ವರದಿ ಬಂದಿತ್ತು, ಅಲ್ಲಿನ ರೈತನೊಬ್ಬ ಕಣ್ಮರೆಯಾಗುತ್ತಿರುವ ಕೆಲವು ಅಪೂರ್ವ ಮಾವಿನ ತಳಿಗಳನ್ನು ರಕ್ಷಿಸಿ ಬೆಳೆಸುತ್ತಿದ್ದಾನಂತೆ. ಅವುಗಳಲ್ಲಿ ಪಂಜವರ್ಣ ತಳಿಯೂ ಒಂದು” ಎಂದು ಅವಿನಾಶ ಹೇಳಿದಾಗ ಶರತ್ ಸ್ಮಾರ್ಟ್ ಫೋನಿನಲ್ಲಿಯೇ ಸರ್ಚ್ ಮಾಡಿ ಆ ಪತ್ರಿಕಾವರದಿಯನ್ನು ಹುಡುಕಿ ಗಟ್ಟಿಯಾಗಿ ಓದಿ ಹೇಳಿದ: “A Rajapalayam farmer discovers some varieties of mangoes thought to have been lost: While most farmers grow and sell crops, only a few, out of interest, take the less travelled road to find and conserve something for the benefit of society. K.S. Jegannatha Raja, a small farmer from Rajapalayam, Tamil Nadu, has discovered some rare varieties of mangoes specific to the region, and taken upon himself the task of conserving them. A variety called Panjavarnam is famous in Virudhu Nagar and Madurai districts….”

ಆ ಪಂಜವರ್ಣ ಮಾವೇ ತಮ್ಮ ಮನೆಯ ವರ್ಣರಂಜಿತ ಚರಿತ್ರೆಯೊಂದರಲ್ಲಿ ಬರುವ ಪಂಜಣ್ಣ ಕುಕ್ಕು ಎಂದು ಮಕ್ಕಳಿಗೆ ಅರ್ಥವಾಯಿತಲ್ಲ ಎಂದು ಅವಿನಾಶನ ಮುಖದಲ್ಲಿ ಮಂದಹಾಸವೊಂದು ಮೂಡಿತು! ಮಕ್ಕಳಲ್ಲಿ ಯಾವುದೋ ಒಂದು ಭಾವಸಂಚಾರ ಆದ ಹಾಗಿತ್ತು. ಶರತ್, ಭರತ್ ಬಿಡಿ, ಸಣ್ಣವರಾದ ಶಾನ್ವಿ ಮತ್ತು ಧನ್ವಿಯರೂ ಏನೋ ಒಂದು ಭಯಂಕರವಾದುದು ಹಿಂದೆ ಇಲ್ಲಿ ನಡೆದಿತ್ತು ಎಂದು ಅರ್ಥವಾದವರಂತೆ ಗಂಭೀರರಾಗಿಬಿಟ್ಟರು.

ಅವಿನಾಶ ಈ ಸನ್ನಿವೇಶಕ್ಕೆ ತಕ್ಕ ಒಂದು ಮುಕ್ತಾಯವನ್ನು ಕೊಡಬೇಕೆಂದು, “ಅಮ್ಮಾ ನಾಳೆ ಪಂಜಣ್ಣ ಕುಕ್ಕನ್ನು ಕೊಯಿಸಿ ಹಣ್ಣುಮಾಡಲು ಇಡಿ. ಮಕ್ಕಳು ಅದರ ರುಚಿಯನ್ನು ಸವಿಯಲಿ. ಈಗ ಅವರಿಗೆ ಅದರ ಮಹತ್ವ ಅರ್ಥವಾಗಿದೆ. ಆದರೆ ಅವರಿಗೆ ಮರವೇ ಹಣ್ಣು ಮಾಡಿಕೊಟ್ಟ ಹಣ್ಣುಗಳನ್ನು ತಿಂದು ಅಭ್ಯಾಸ ಇಲ್ಲ, ಬಲವಂತವಾಗಿ ಹಣ್ಣಾಗಿದ್ದನ್ನೇ ತಿಂದು ಅಭ್ಯಾಸ. ಆದರೆ ಚೆನ್ನಾಗಿ ಪ್ಯಾಕ್ ಆಗಿರಬೇಕಷ್ಟೆ. ಹಾಗೆಯೇ ಹಣ್ಣುಮಾಡಿ ಮಕ್ಕಳಿಗೆ ಕೊಡೋಣ. ಮತ್ತೆ ಹಿಂದೆ ಹೋಗುವಾಗ ಎಲ್ಲ ಫ್ಯಾಮಿಲಿಯವರಿಗೂ ಕೊಂಡುಹೋಗಲೂ ಪ್ಯಾಕ್ ಮಾಡಿ ಕೊಡಬೇಕು!” ಎಂದು ಹೇಳಿದ.

ಚಂದ್ರಕ್ಕ ತಲೆಯಾಡಿಸಿದರು. “ಮಂಜಣ್ಣನೇ ಕೊಯ್ದು ಕೊಡುತ್ತಾನೆ ಬಿಡು. ನಮ್ಮ ಅತ್ತೆ ಹೇಳುತ್ತಿದ್ದರು, ಆ ದುಷ್ಟನೇ ಈ ಮಂಜಣ್ಣನಾಗಿ ಹುಟ್ಟಿದ್ದಾನೆ, ಪೂರ್ವಜನ್ಮದ ಋಣಗಳಿಂದೆಲ್ಲ ಮುಕ್ತನಾಗಲು ಹೀಗೆ ನಮ್ಮ ಮನೆಗೆ ಬಂದು ಏನಾದರೂ ಮಾಡುತ್ತಿರುತ್ತಾನೆ ಎಂದು”, ಚಂದ್ರಕ್ಕ ಕಥೆಗೆ ಮತ್ತೊಂದು ಆಯಾಮ ಕೊಟ್ಟರು.

“ಅದೆಲ್ಲ ಹಿಂದಿನವರ ಕಲ್ಪನೆಗಳು, ಬಿಡಿ. ಅದಿರಲಿ… ಮುದುಕ ಮಂಜಣ್ಣನನ್ನು ಮರ ಹತ್ತಿಸುವುದು ಬೇಡ, ಅವನಿಗೆ ಹೇಳಿ ಯಾರನ್ನಾದರೂ ಯುವಕರನ್ನು ಕರೆಸಿ ಕೊಯ್ಯಿಸಿ. ಅಲ್ಲ, ಅಷ್ಟು ಹಗೆತನ ಇದ್ದ ಮೇಲೆ ಮಂಜಣ್ಣನ ಮನೆಯವರು ನಮ್ಮ ಒಕ್ಕಲಿನವರಾದುದು ಹೇಗೆ?” ಅವಿನಾಶ ಅಮ್ಮನನ್ನು ಕೇಳಿದ. ಅವನಿಗೂ ಈ ಚರಿತ್ರೆಯ ಪೂರ್ವಾಪರ ಪೂರ್ತಿ ತಿಳಿದಿರಲಿಲ್ಲ.

“ಅಷ್ಟೆಲ್ಲ ಆದಮೇಲೆ ಅವನ ಕುಟುಂಬಕ್ಕೆ ಬಂದ ಕಷ್ಟ ಅಷ್ಟಿಷ್ಟಲ್ಲ. ಸಾಲದಲ್ಲಿ ಮುಳುಗಿದಾಗ ಕೇಸ್ ಮಾಡಿದ ಸಂಬಂಧಿಕರೆಲ್ಲ ಕೈಬಿಟ್ಟರು. ಆಸ್ತಿಪಾಸ್ತಿಯೆಲ್ಲ ಹೋದವಲ್ಲ. ಆ ಕುಟುಂಬ ದಾರಿಯಲ್ಲಿ ಬಿದ್ದಾಗ ಶಾನುಭೋಗರೇ ಪಶ್ಚಾತ್ತಾಪದಿಂದ ಅವನ ಆಸ್ತಿಯನ್ನೆಲ್ಲ ಮುಲ್ಕಿಯ ಸಾವುಕಾರರಿಂದ ಪುನಃ ಕ್ರಯಕ್ಕೆ ತೆಗೆದುಕೊಂಡು, ಆ ದುಷ್ಟನ ಮಗ, ಹದಿನಾಲ್ಕು ವರ್ಷದ ಹುಡುಗನಿಗೆ ಅದೇ ಆಸ್ತಿಯನ್ನು ಚಾಲಗೇಣಿಗೆ ವಹಿಸಿಕೊಟ್ಟರು. ಆಮೇಲೆ ಆ ಮನೆಯವರು ನಮ್ಮ ಮನೆಯವರ ಜತೆಯಲ್ಲಿ ವಿಶ್ವಾಸದಿಂದಲೇ ಇದ್ದರು,” ಎಂದರು ಚಂದ್ರಮ್ಮ.

*****

ಡಾ. ಬಿ. ಜನಾರ್ದನ ಭಟ್‌:  ‘ಪಂಜಣ್ಣ ಕುಕ್ಕಿನ ಚರಿತ್ರೆ’ ನನ್ನ ಮೆಚ್ಚಿನ ನನ್ನ ಕತೆ. ಇದು ಮುಂಬೈಯ ಗೋಕುಲವಾಣಿ ಪತ್ರಿಕೆ ನಡೆಸಿದ್ದ ಕಥಾಸ್ಪರ್ಧೆಯಲ್ಲಿ (2014) ಬಹುಮಾನ ಪಡೆದ ಕತೆ. ನನ್ನ ಕತೆಗಳಲ್ಲಿ ಇನ್ನು ಕೆಲವು ಈ ಕತೆಗಿಂತ ಚೆನ್ನಾಗಿವೆ ಎಂದು ವಿಮರ್ಶಕರು, ಮಿತ್ರರು ಅಭಿಪ್ರಾಯಪಟ್ಟಿದ್ದರೂ ನಾನು ಈ ಕತೆಯನ್ನು ನನ್ನ ಮೆಚ್ಚಿನ ನನ್ನ ಕತೆ ಎಂದು ಆರಿಸಲು ಕಾರಣ ಇದರಲ್ಲಿ ನನ್ನ ಬರಹಗಳ ಒಂದು ಮುಖ್ಯ ಕಾಳಜಿ ಕಲಾರೂಪ ಪಡೆದಿದೆ ಎಂದು ನಾನು ನಂಬಿರುವುದು. ನಮ್ಮ ತುಳುನಾಡಿನ ಬದುಕಿನ ಪಲ್ಲಟಗಳನ್ನು ಅರಿತುಕೊಂಡು ಕತೆ, ಕಾದಂಬರಿಗಳಲ್ಲಿ ದಾಖಲಿಸಲು ನಾನು ಪ್ರಯತ್ನಿಸಿದ್ದೇನೆ. ‘ಪಂಜಣ್ಣ ಕುಕ್ಕಿನ ಚರಿತ್ರೆ’ ಅಂತಹ ಒಂದು ಕತೆ. ಒಂದು ಶತಮಾನದ ಹಿಂದೆ ಇಲ್ಲಿನ ಜನಗಳು ಕೆಲವು ಪ್ರತಿಷ್ಠೆಗಳಿಗೋಸ್ಕರ ಜೀವ ಕೊಡಲೂ, ತೆಗೆಯಲೂ ಹಿಂದೆಮುಂದೆ ನೋಡುತ್ತಿರಲಿಲ್ಲ. ಹಾಗೂ ಆಸ್ತಿಪಾಸ್ತಿ – ಪ್ರತಿಷ್ಠೆಗಳಿಗಾಗಿ ಕೋರ್ಟು ಕಚೇರಿಗಳಿಗೆ ಅಲೆದಾಡುತ್ತಾ ತಮ್ಮದೆಲ್ಲವನ್ನೂ ಕಳೆದುಕೊಳ್ಳಲು ಸಿದ್ಧರಾಗಿದ್ದವರೂ ಇದ್ದರು. ಈಗ ಆ ಭಾವತೀವ್ರತೆ, ಪ್ರತಿಷ್ಠೆಗಳು ಸಾಂದ್ರ್ರತೆ ಕಳೆದುಕೊಂಡು ಸಮಾನ ನಾಗರಿಕ ಭಾವಗಳಿಗೆ ದಾರಿಮಾಡಿಕೊಟ್ಟಿವೆ. ಇನ್ನೊಂದು ಬದಲಾವಣೆಯೆಂದರೆ, ಆಗ ಕೆಲವರಲ್ಲಿ ಕ್ರೋಢೀಕೃತವಾಗಿದ್ದ ಭೂಮಿ ಸಂಪತ್ತು ಭೂಮಸೂದೆಯಂತಹ ಹೊಸಯುಗದ ಕಾನೂನುಗಳಿಂದ ವಿಕೇಂದ್ರೀಕರಣಗೊಂಡು ಹೊಸ ಆರ್ಥಿಕ ಸಂಬಂಧಗಳು ಹುಟ್ಟಿಕೊಂಡದ್ದು. ಆಗ ಸಹಜವಾಗಿ ನವಶ್ರೀಮಂತರು ಕಾಣಿಸಿಕೊಂಡರು. ಸಂಪತ್ತಿನ ಗಳಿಕೆಗಾಗಿ ಹಲವು ವಿಧದ ವಲಸೆಗಳು ನಡೆದವು. ಸಂಪತ್ತಿನ ಸೃಷ್ಟಿ ಬೇರೆ ವಿಧಾನಗಳಿಂದ, ಅನ್ಯಕ್ಷೇತ್ರಗಳಲ್ಲಿ ನಡೆದುದರಿಂದ ಕೃಷಿ ಕ್ಷೇತ್ರ (ಚಟುವಟಿಕೆ ಮತ್ತು ನೆಲೆ ಎಂಬ ಎರಡೂ ಅರ್ಥಗಳಲ್ಲಿ) ಛಿದ್ರವಾಯಿತು. ಈ ಕತೆಯಲ್ಲಿ ಈ ಸಂಗತಿಗಳನ್ನು ಗ್ರಹಿಸಲು ಪ್ರಯತ್ನಿಸಿದ್ದೇನೆ. ‘ಪಂಚವರ್ಣದ ಮಾವಿನಹಣ್ಣು’ (ಪಂಜಣ್ಣ ಕುಕ್ಕು) ಈ ಪಲ್ಲಟಕ್ಕೆ ಒಂದು ಪ್ರತಿಮೆಯಾಗಬೇಕೆನ್ನುವ ನನ್ನ ಆಶಯ ಎಷ್ಟರಮಟ್ಟಿಗೆ ಸಫಲವಾಗಿದೆ ಎನ್ನುವುದು ನನಗೆ ಗೊತ್ತಿಲ್ಲ.