ಕೆಲವು  ವರ್ಷಗಳ ಹಿಂದೆ. ನಾನೊಂದು ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸುತ್ತಿದ್ದೆ. ಜಾಗತಿಕ ಪರಿಸರ ಸಮಸ್ಯೆ, ಜನಸಂಖ್ಯಾ ನಿಯಂತ್ರಣ, ಆಹಾರದ ವಿತರಣೆ, ವಿಜ್ಞಾನ ಮತ್ತು ತಂತ್ರಜ್ಞಾನ ದ ಪರಿಣಾಮ… ಹೀಗೆ ಬಗೆ ಬಗೆಯ ಸಮಸ್ಯೆಗಳ ಕುರಿತಾಗಿ ವಿಚಾರ ಮಂಡನೆ ಮತ್ತು ಬಿರುಸಿನ ಚರ್ಚೆ ನಡೆಯುತ್ತಿತ್ತು. ನಾನಾದರೋ ಬೌದ್ಧಿಕ ಭೂರಿ ಭೋಜನದಲ್ಲಿ ಮುಖ್ಯ ಘಟಕವಾದ ಉಪ್ಪಿನ ಕರಂಡಕಕ್ಕೆ ತಡಕಾಡುತ್ತಿದ್ದೆ. ಆ ಚಿಟಿಕೆ ಉಪ್ಪು ಯಾವುದು ಗೊತ್ತೇ? ಅದುವೇ ವೈಜ್ಞಾನಿಕ ಮನೋಧರ್ಮ (Scientific Temper). ವರ್ತಮಾನದ ಸಮಸ್ಯೆ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಘಟಕವಿದು.

ವೈಜ್ಞಾನಿಕ ಮನೋಧರ್ಮದ ಕುರಿತಾಗಿ ದಿವಂಗತ ಪಂಡಿತ್ ಜವಹರಲಾಲ ನೆಹರೂ ಹೇಳಿದ್ದರು;

‘‘…..ಸಂಪ್ರದಾಯ ಎನ್ನುವ ಕಾರಣಕ್ಕೆ ಒಪ್ಪಿಕೊಳ್ಳುವ ಬದಲಿಗೆ ತಾರ್ಕಿಕವಾಗಿ ಪ್ರಶ್ನಿಸುವ, ಸತ್ಯವನ್ನು ಅಳೆಯುವ, ಮನೋಸ್ಥಿತಿ ಬರುವುದಾದರೆ ಅದು ವೈಜ್ಞಾನಿಕ ಮನೋಧರ್ಮದಿಂದ. ಹಾಗಿದ್ದರೂ ಸಂಪ್ರದಾಯವು ಮೇಧಾವಿಯನ್ನೂ ಗಾಢವಾಗಿ ಪ್ರಭಾವಿಸುವ ಬಗೆಯನ್ನು ಕಂಡಾಗ ಅಚ್ಚರಿಯಾಗುತ್ತದೆ. ಪ್ರಾಯಶ: ರಾಜಕೀಯವಾಗಿ, ಆರ್ಥಿಕವಾಗಿ ಸ್ವತಂತ್ರರಾದಾಗಲಷ್ಟೇ  ನಮ್ಮ ಮನಸ್ಸು ತಾರ್ಕಿಕವಾಗಿ ಆಲೋಚಿಸಲು ತೊಡಗುತ್ತದೇನೋ. (Discovery of India)”

ಪಂಡಿತ್ ನೆಹರೂ ಹೀಗೆ ಬರೆದದ್ದು ಬ್ರಿಟಿಷ್ ಪ್ರಭುತ್ವದ ದಿನಗಳಲ್ಲಿ. ಆದರೆ ನಾವಿಂದು ಸ್ವತಂತ್ರ ಭಾರತದಲ್ಲಿದ್ದೇವೆ ಮತ್ತು ಆರ್ಥಿಕ ಸಮೃದ್ಧಿಯ ಕಡೆಗೆ ಮುನ್ನುಗ್ಗುತ್ತಿದ್ದೇವೆ. ಆದರೂ ನಾವು ನೆಹರೂ ಸೂಚಿಸಿದಂಥ ವೈಜ್ಞಾನಿಕ ದೃಷ್ಟಿಯನ್ನು ಹೊಂದಲು ಇನ್ನಷ್ಟು ದೂರ ಸಾಗಬೇಕಾಗಿದೆ.

ವೈಜ್ಞಾನಿಕ ಪದ್ಧತಿ

ವಿಜ್ಞಾನದ ಮುನ್ನಡೆಯಲ್ಲಿ ನಾವು ಮುಖ್ಯವಾಗಿ ಮೂರು ಹಂತಗಳನ್ನು ಗಮನಿಸಬಹುದು-ವೀಕ್ಷಣೆ, ಸೈದ್ಧಾಂತಿಕ ವ್ಯಾಖ್ಯಾನ ಮತ್ತು ಪ್ರಯೋಗ. ಒಬ್ಬಾತ ನೈಸರ್ಗಿಕ ವಿದ್ಯಮಾನವನ್ನು ವೀಕ್ಷಿಸಿ ಪಡೆದ ಫಲಿತಾಂಶವನ್ನು ಒಂದು ಸೈದ್ಧಾಂತಿಕ ಚೌಕಟ್ಟಿನಲ್ಲಿ ವಿವರಿಸಲು ಪ್ರಯತ್ನಿಸುತ್ತಾನೆ. ಈ ಪ್ರಯತ್ನ ಸಫಲವಾದರೆ ಬೇರೆ ಹೊಸದೇನನ್ನೋ ಊಹಿಸುತ್ತಾನೆ. ಆ ಊಹೆಯನ್ನು ವರ್ತಮಾನದಲ್ಲಿ ಅಥವಾ ಭವಿಷ್ಯದಲ್ಲಿ ಇನ್ನಾರೋ ಪ್ರಾಯೋಗಿಕವಾಗಿ ಪರೀಕ್ಷಿಸುತ್ತಾರೆ. ಪ್ರಯೋಗದ ಫಲಿತಾಂಶಗಳು ಸಿದ್ಧಾಂತದ ನಿರೀಕ್ಷೆಗಳನ್ನು ಸ್ಥಿರೀಕರಿಸಿದಾಗ ಆ ಸಿದ್ಧಾಂತಕ್ಕೆ ಮನ್ನಣೆ ಸಿಗುತ್ತದೆ. ಇದೊಂದು ಸಾಂಘಿಕ ಪ್ರಯತ್ನ.

ಹಾಗಿದ್ದರೂ ಸಿದ್ಧಾಂತ ಸರಿಯಾಗಲೇಬೇಕು ಎಂದಿಲ್ಲ. ಅದರ ಮೇಲೆ ತೂಗುತ್ತಿರುತ್ತದೆ ಕತ್ತಿ. ಇನ್ನಷ್ಟು ಸೂಕ್ಷ್ಮ ಪ್ರಯೋಗಗಳು ನಡೆದು ಫಲಿತಾಂಶಗಳು ಸಿದ್ಧಾಂತದ ನಿರೀಕ್ಷೆಯೊಂದಿಗೆ ತಾಳೆಯಾಗದಿದ್ದರೆ, ಪುನ: ಸಿದ್ಧಾಂತವನ್ನು ಪರಿಷ್ಕರಿಸಬೇಕಾಗುತ್ತದೆ. ಅಥವಾ ಹೊಸದೊಂದು ಸಿದ್ಧಾಂತವನ್ನು ನಿರ್ಮಿಸಬೇಕಾಗುತ್ತದೆ. ಅದು ಪರಿಪೂರ್ಣತೆಗೆ ಮತ್ತಷ್ಟು ಸನಿಹದ ಸಿದ್ಧಾಂತವಿರಬಹುದು. ನ್ಯೂಟನ್ನನ ಗುರುತ್ವ ಸಿದ್ಧಾಂತವು ಸೌರವ್ಯೂಹದ ಕೆಲವು ಸಂಕೀರ್ಣ ವಿದ್ಯಮಾನವನ್ನು ವಿವರಿಸಲು ವಿಫಲವಾಗಿ ಅದರ ಮಿತಿ ಸ್ಪಷ್ಟವಾದಾಗ, ಐನ್‌ಸ್ಟೈನರ ಸಾಪೇಕ್ಷತಾ ಸಿದ್ಧಾಂತ ಬಂತು ಮತ್ತು ಅದನ್ನು ಪರಿಷ್ಕರಿಸಿತು. ಇದು ವಿಜ್ಞಾನದ ಹಾದಿ. ಹೊಸ ಸತ್ಯದ ಕಡೆಗೆ ನಡೆ.

ವಿಜ್ಞಾನದ ಕುರಿತಾಗಿ ಖಗೋಳ ವಿಜ್ಞಾನಿ ಹರ್ಮನ್ ಬಾಂಡಿ ಹೇಳುತ್ತಾರೆ:

“…..ವಿಜ್ಞಾನಿಯೊಬ್ಬ ಸಿದ್ಧಾಂತದ ಬಗ್ಗೆ ಚಿಂತನೆಗೆ ತೊಡಗುತ್ತಾನೆ. ಈ ಕ್ರಿಯೆಯನ್ನು ಎಂದೂ ಯಾಂತ್ರೀಕರಿಸಲು ಸಾಧ್ಯವಾಗದು. ಇಂಥ ಕ್ರಿಯೆಯನ್ನು ಬೇರೆ ಬೇರೆ ಘಟಕಗಳಾಗಿ ಒಡೆದು ವಿಜ್ಞಾನದ ತಯಾರಿ ಎಂಬ ಒಂದು ಕಾರ್ಖಾನೆಯನ್ನು ನಿರ್ಮಿಸಲು ಸಾಧ್ಯವಾಗದು. ವಿಜ್ಞಾನದಲ್ಲಿ ಸೃಜನಶೀಲತೆ ಮತ್ತು ಸ್ವೋಪಜ್ಞತೆ ಅತ್ಯಂತ ಮುಖ್ಯ. ಇವುಗಳಿಗಿದೆ ಬೆಲೆ ಮತ್ತು ಗೌರವ. ನಿಜ, ಪ್ರತಿಯೊಂದು ಸಿದ್ಧಾಂತವೂ ಅತ್ಯಂತ ಅನಿಶ್ಚಿತತೆಯಲ್ಲಿರುತ್ತದೆ. ಈ ಕಾರಣದಿಂದಲೇ ಪ್ರತಿಯೊಂದು ಸಿದ್ಧಾಂತ ನೇಪಥ್ಯಕ್ಕೆ ಸರಿಯುವ ಅಪಾಯ ಕೂಡ ಸದಾ ಇರುತ್ತದೆ. ನಾವು ಗಮನಿಸಬೇಕು, ವಿಜ್ಞಾನಿಗಳು ಹೇಳಿದ್ದು ಸರಿ ಎನ್ನುವ ಕಾರಣಕ್ಕೆ ನಾವು ಮನ್ನಣೆ ನೀಡುವುದಲ್ಲ. ಬದಲಾಗಿ ಅವರೆಷ್ಟು ಸೃಜನಶೀಲರು ಮತ್ತು ಉತ್ಸಾಹ ಸೃಜಿಸಿ ಹೊಸ ಮಾರ್ಗ ನಿರ್ಮಿಸಿದರು ಎನ್ನುವುದಕ್ಕಾಗಿ ಮನ್ನಿಸುತ್ತೇವೆ. ವಿಜ್ಞಾನ ಅನ್ನುವುದು ಪರಸ್ಪರ ಹೊಂದಾಣಿಕೆಯ ಮಾನವೀಯ ಕ್ರಿಯೆ. ಯಾರೋ ಒಬ್ಬರ ಸಿದ್ಧಾಂತವನ್ನು ಇನ್ನೊಬ್ಬರು ಪರೀಕ್ಷೆಗೆ ಒಡ್ಡುತ್ತಾರೆ. ಮತ್ತು ಈ ನಿಕಷದಲ್ಲಿ ಅದು ತೇರ್ಗಡೆಯಾದರೆ ಮನ್ನಣೆ ಸಿಗುತ್ತದೆ.”

ನಾರ್ಳೀಕರರ ಪುಸ್ತಕಬಾಂಡಿಯ ಹೇಳಿಕೆಗೆ ಒಂದಿಷ್ಟು ವಿವರಣೆ ಅಗತ್ಯ, ಹೊಸದೊಂದು ಕಲ್ಪನೆ ಎಂದಾಗ ಈ ಕಲ್ಪನೆಯನ್ನು ಯಾವುದೇ ಟಾಮ್, ಡಿಕ್ ಅಥವಾ ಹ್ಯಾರಿ ನೀಡುವುದು ಎಂದರ್ಥವಲ್ಲ. ಇದು ಸಾಧ್ಯವಾಗದು. ನ್ಯೂಟನ್ ಮತ್ತು ಐನ್‌ಸ್ಟೈನ್ ಹೇಳಿದ್ದು ಅಸಂಬದ್ಧ ಮತ್ತು ಅದಕ್ಕಾಗಿ ತಾನು ಹೊಸ ವಿವರಣೆ ನೀಡುತ್ತಿದ್ದೇನೆ ಅನ್ನುವುದಲ್ಲ. ಸತ್ಯ ಹೇಳಬೇಕೆಂದರೆ ನನಗೆ ಈ ಬಗೆಯ ಹಲವು ಪತ್ರಗಳು ಆಗಾಗ ಬರುತ್ತಿರುತ್ತವೆ. ಆದರೆ ಹೇಳಿಕೆಗಳನ್ನು ಸಮರ್ಥಿಸುವ ದತ್ತಾಂಶಗಳೇ ಅಲ್ಲಿರುವುದಿಲ್ಲ. ವಾಸ್ತವವಾಗಿ ಸತ್ಯಕ್ಕೆ ಸರಳ ಹಾದಿಗಳಿಲ್ಲ. ನೈಸರ್ಗಿಕ ವಿದ್ಯಮಾನದ ತಳದ ಸತ್ಯವನ್ನು ಹೇಳಲು ಮತ್ತು ಅರ್ಥೈಸಿಕೊಳ್ಳಲು ಅತ್ಯಂತ ಹೆಚ್ಚಿನ ಸಂಯಮ ಮತ್ತು ಧೈರ್ಯ ಅಗತ್ಯ.

ಈ ಬಗೆಯಲ್ಲಿ ಚಿಂತನೆ ಮಾಡಿದಾಗ ವೈಜ್ಞಾನಿಕ ದೃಷ್ಟಿಕೋನ ನಮ್ಮದ್ದಾಗುತ್ತದೆ. ರೂಡಿಯಲ್ಲಿರುವ ಸತ್ಯವನ್ನು ಈ ದೃಷ್ಟಿಕೋನದಿಂದ ಪರೀಕ್ಷೆ ಮಾಡಬಹುದು. ಇದೊಂದು ಧನಾತ್ಮಕ ಚಿಂತನೆ. ಯಾವುದೋ ರೂಢಮೂಲ ನಂಬಿಕೆಯನ್ನು ಹಂದಾಡಿಸಿ ನೂತನ ಸತ್ಯವನ್ನು ಸ್ಥಾಪಿಸುತ್ತದೆ ಉತ್ತಮವಾದದ್ದರ ಆಯ್ಕೆಗೆ ಆಸ್ಪದ ಕೊಡುತ್ತದೆ. ಹಾಗಿದ್ದರೂ ವೈಜ್ಞಾನಿಕ ಮನೋಧರ್ಮ ವಿಜ್ಞಾನಿಗಳದ್ದಾದ ಸೊತ್ತಲ್ಲ. ಇದು ಎಲ್ಲರದ್ದು. ನಿಸರ್ಗದ ಬಗ್ಗೆ ಕುತೂಹಲವಿರುವ ಎಲ್ಲರದು. ಇದರ ಮೂಲ ಅನನ್ಯ ಕುತೂಹಲದಲ್ಲಿದೆ. ಮತ್ತು ಅಂಥ ಕುತೂಹಲ ನಮ್ಮ ನಿಮ್ಮೆಲ್ಲರದು. ವಿಜ್ಞಾನದಲ್ಲಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಲ್ಲಿ ವೈಜ್ಞಾನಿಕ ಮನೋಧರ್ಮ ಅನಿವಾರ್ಯ. ಎಲ್ಲ ಬಗೆಯ ಪೂರ್ವಗ್ರಹ ಅಭಿಪ್ರಾಯ ಮತ್ತು ಅಂಧ ಆಚರಣೆಗಳಿಗೆ ವೈಜ್ಞಾನಿಕ ಮನೋಧರ್ಮದಲ್ಲಿದೆ ದಿವ್ಯ ಔಷಧ.

ವಿಜ್ಞಾನ ಮತ್ತು ಜ್ಯೋತಿಷ್ಯ 

ನಿಸರ್ಗ ಹೇಗೆ ವರ್ತಿಸುತ್ತದೆಂಬ ಅರಿವಿಲ್ಲದಿದ್ದಾಗ ಅಲ್ಲಿ ಉದಿಸುತ್ತದೆ ಮೂಢನಂಬಿಕೆ. ನೈಸರ್ಗಿಕ ವಿಸ್ಮಯವನ್ನು ವಿಜ್ಞಾನ ಅನಾವರಣ ಮಾಡುತ್ತದೆ. ಒಂದು ವಿಸ್ಮಯದ ಗುಟ್ಟು ಬಯಲಾದಾಗ, ಅದಕ್ಕೆ ತಳಕು ಹಾಕಿಕೊಂಡ ಮೂಡನಂಬಿಕೆಗಳು ನೇಪಥ್ಯಕ್ಕೆ ಸರಿಯುತ್ತವೆಂದು ನಮ್ಮ ನಿರೀಕ್ಷೆ. ಆದರೆ ಹೀಗೆಯೇ ಆಗಬೇಕೆಂದೇನೂ ಇಲ್ಲ. ವೈಜ್ಞಾನಿಕ ಮನೋಧರ್ಮ ಕುಂಠಿತವಾದಾಗ ಮೂಢನಂಬುಗೆ ಹಾಗೆಯೇ ಮುಂದುವರಿಯುವುದುಂಟು. ಇದಕ್ಕೊಂದು ದಿವ್ಯ ಉದಾಹರಣೆ ಫಲ ಜ್ಯೋತಿಷ್ಯ (Astrology).

ನಾಗರೀಕತೆಯ ಆರಂಭದ ದಿನಗಳಲ್ಲಿ ಪ್ರತಿ ಗ್ರಹಕ್ಕೆ ದೈವಿಕ ಶಕ್ತಿಯನ್ನು ಆರೋಪಿಸಲಾಗಿತ್ತು. ಗ್ರಹಗಳ ಬಗ್ಗೆ ಮತ್ತು ಅವುಗಳ ಚಲನೆಯ ಬಗ್ಗೆ ಮುಗ್ದತೆ ಇದ್ದ ಆ ದಿನಗಳಲ್ಲಿ ಇದು ಸಹಜ. ಆದರೆ ಇಂದಲ್ಲ. ಆದಿ ಮಾನವನ ಸಂಶಯಗಳಿಗೆ ಸುಸ್ಪಷ್ಟ ಉತ್ತರವನ್ನು ಖಗೋಳ ವಿಜ್ಞಾನ ನೀಡುತ್ತಿರುವ ಇಂದಿನ ದಿನಗಳಲ್ಲಿ “ಗ್ರಹಗಳಿಗೆ ದೈವೀಕ ಗುಣ ಇದೆ” ಎಂಬ ಅಭೀಗೃಹೀತಕ್ಕೆ (assumption) ಯಾವುದೇ ನೆಲೆ ಇಲ್ಲವೆಂದು ತಿರಸ್ಕರಿಸಬೇಕಾಗಿತ್ತು. ಆದರೆ ದುರದೃಷ್ಟದಿಂದ ಹಾಗೆ ಆಗಿಲ್ಲ. ತಾಂತ್ರಿಕವಾಗಿ ಮುಂದುವರಿದ ದೇಶಗಳಲ್ಲಿ ಅಕ್ಷರಸ್ಥರೆಂದು ಅನಿಸಿಕೊಂಡವರು ಕೂಡ ಆ ಪುರಾತನ ನಂಬುಗೆಯನ್ನು ಅತ್ಯಂತ ಜತನದಿಂದ ಉಳಿಸಿಕೊಂಡು ಬರುತ್ತಿದ್ದಾರೆ.

೧೯೭೦ ರಷ್ಟು ಹಿಂದೆಯೇ ನೊಬೆಲ್ ಪುರಸ್ಕೃತ ಮತ್ತು ಮುಂಚೂಣೀ ವಿಜ್ಞಾನಿಗಳು ಈ ನಂಬುಗೆಯ ಬುಡವನ್ನೇ ಪ್ರಶ್ನಿಸಿ ಕಿತ್ತೊಗೆದರು. ಅವರ ಹೇಳಿಕೆಯ ಒಂದು ಭಾಗ ಹೀಗಿದೆ:

“ಜನನ ಸಂದರ್ಭದಲ್ಲಿ ಗ್ರಹ ನಕ್ಷತ್ರಗಳು ನಮ್ಮ ಭವಿಷ್ಯದ ನಿರ್ಣಾಯಕರೆನ್ನುವುದು ತೀರ ಬಾಲಿಷ. ದೂರದಲ್ಲಿರುವ ಗ್ರಹ ನಕ್ಷತ್ರಗಳು ಒಬ್ಬನ ಭವಿಷ್ಯವನ್ನು ನಿರ್ಧರಿಸುತ್ತವೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ. ತಳವಿರದ ಇಂಥ ಊಹೆಯನ್ನು ನಂಬಲು ಸಾಧ್ಯವಾಗದು. ಅತಂತ್ರ ಮತ್ತು ಅಭಧ್ರತೆಯ ಮನೋಭಾವ ಇರುವ ಜನರಷ್ಟೇ ನಿರ್ಧಾರ ತೆಗೆದುಕೊಳ್ಳಲು ಇಂಥವುಗಳ ಮೊರೆ ಹೋಗುತ್ತಾರೆ; ಅನೂಹ್ಯ ಶಕ್ತಿ ಭವಿಷ್ಯತ್ತಿನ ಅದೃಷ್ಟವನ್ನು ನಿರ್ಧರಿಸುತ್ತವೆಂದು ನಿರ್ಧರಿಸುತ್ತಾರೆ. ಆದರೆ ನಾವು ಪ್ರಪಂಚವನ್ನು ಎದುರಿಸಬೇಕು. ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆಯೇ ಹೊರತು ನಕ್ಷತ್ರಗಳಲ್ಲಿಲ್ಲ ಎನ್ನುವುದನ್ನು ಮನಗಾಣಬೇಕು” (The Humanist, Sept/Oct 1975)

ಗ್ರಹಗಳು ಮನುಷ್ಯರ ಅದೃಷ್ಟವನ್ನು ನಿರ್ಧರಿಸುತ್ತವೆಯೇ? ಫಲಜ್ಯೋತಿಷ್ಯ ಹೌದು ಎನ್ನುತ್ತದೆ. ಆದರೆ ವಿಜ್ಞಾನಿಯಾದವನು ಈ ಹೌದು ಎನ್ನುವ ಉತ್ತರವನ್ನು ಹೇಗೆ ಪರೀಕ್ಷಿಸುತ್ತಾನೆ? ಜಾತಕದ ಆಧಾರದಲ್ಲಿ ಒಬ್ಬನ ಭವಿಷ್ಯ ಹೀಗಾಗುತ್ತದೆಂದು ಹೇಳುವ ತೀರ್ಮಾನವನ್ನು ಒಪ್ಪಿಕೊಳ್ಳುವುದು ಅವನಿಗೆ ಸಾಧ್ಯವಾಗದು.

ಮೊದಲಿಗೆ ನಾವು ಗಮನಿಸಬೇಕು – ಭವಿಷ್ಯ ವಾಚನಕ್ಕೆ ಬಳಸುವ ನಿಯಮಗಳು ಸುಸ್ಪಷ್ಟವಾಗಿದ್ದು ಅಲ್ಲಿ ಗೊಂದಲಕ್ಕೆ ಯಾವುದೇ ಅವಕಾಶ ಇರಬಾರದು. ಒಂದು ಜಾತಕಕ್ಕೆ ಸಂಬಂಧಿಸಿದಂತೆ ಯಾರೇ ಆದರೂ ಹೇಳುವ ಭವಿಷ್ಯ ಒಂದೇ ಆಗಿರಬೇಕು. ಹೀಗೆ ಹೇಳುವ ಭವಿಷ್ಯ ಸಂಭಾವ್ಯತಾ ನಿಯಮಕ್ಕೆ (Theory of Probability) ಅನುಗುಣವಾಗಿರಬೇಕು. ಹೆಚ್ಚಲ್ಲದೇ ಹೋದರೂ “ಸರಿಯಾಗಿದೆ” ಎಂದು ಒಪ್ಪುವಷ್ಟಾದರೂ ಸರಿಯಾಗಬೇಕು. ಆಗ ಇಂಥ ವಾಚನ ಅದೃಷ್ಟದ ಆಟದ ಮೇಲೆ ಅವಲಂಬನೆಯಾಗಿದೆ ಎಂಬ ಹೇಳಿಕೆಯನ್ನು ಧಿಕ್ಕರಿಸಬಹುದು. ಇದಕ್ಕಾಗಿ ಬೇರೆ ಬೇರೆ ಸನ್ನಿವೇಶಗಳಲ್ಲಿ ಭವಿಷ್ಯ ವಾಚನದ ಹೇಳಿಕೆಗಳ ಕ್ರಮಬದ್ಧ ಅದ್ಯಯುನ ನಡೆಯಬೇಕಾಗುತ್ತದೆ. ಇಂಥದೊಂದು ಅಧ್ಯಯನದ ಒಂದಿಷ್ಟು ವಿವರ ನೀಡುತ್ತೇನೆ.

ನನ್ನನ್ನೂ ಒಳಗೊಂಡಂತೆ ಡಾ.ನರೇಂದ್ರ ದೇಬೋಲ್ಡ್ಕರ್, ಪ್ರಕಾಶ್ ಘಟ್‌ಪಾಂಡೆ (ಇವರು ಮೊದಲು ಜ್ಯೋತಿಷಿಯಾಗಿದ್ದವರು) ಮತ್ತು ಪೂನಾ ವಿಶ್ವವಿದ್ಯಾಲಯದ ಸಂಖ್ಯಾ ಶಾಸ್ತ್ರ ವಿಭಾಗ ಪ್ರಾಧ್ಯಾಪಕ ಸುಧಾಕರ ಕುಂಟೆ ಸದಸ್ಯರಾಗಿರುವ ಅಂಧಶೃದ್ಧಾ ನಿರ್ಮೂಲನಾ ಸಮಿತಿಯು ಕೆಲವು ಅಧ್ಯಯನಗಳನ್ನು ಕೈಗೊಂಡಿತು.

ನಾವೊಂದು ತೀರ ಸರಳ ಪರೀಕ್ಷೆ ಒಡ್ಡಿದೆವು. ಜನ್ಮದಿನಾಂಕ, ಸಮಯ ಮತ್ತು ಜಾಗದ ಬಗ್ಗೆ ಮಾಹಿತಿಯುಳ್ಳ ಇನ್ನೂರು ಮಕ್ಕಳ ಜಾತಕವನ್ನು ಆಯ್ದುಕೊಂಡೆವು. ಈ ಇನ್ನೂರರಲ್ಲಿ ಅರ್ಧದಷ್ಟು -ಅಂದರೆ ನೂರು ಮಕ್ಕಳು – ಪ್ರತಿಭಾನ್ವಿತರಾಗಿದ್ದರೆ, ಉಳಿದವರು ಬುದ್ಧಿ ಮಾಂದ್ಯರಾಗಿದ್ದರು. ಅಧ್ಯಯನಕ್ಕಾಗಿ ನಲವತ್ತು ಮಕ್ಕಳ ಜಾತಕವಿರುವ ಐದು ಕಟ್ಟುಗಳನ್ನು ಮಾಡಿದೆವು. ಪ್ರತಿಯೊಂದರಲ್ಲಿ N ಸಂಖ್ಯೆಯಲ್ಲಿ ಪ್ರತಿಭಾನ್ವಿತ ಮಕ್ಕಳ ಜಾತಕವಿದ್ದರೆ, ಉಳಿದ 40-N ಜಾತಕಗಳು ಸಹಜವಾಗಿಯೇ ಬುದ್ಧಿ ಮಾಂದ್ಯ ಮಕ್ಕಳದ್ದಾಗಿತ್ತು.

ಇದೀಗ ಜ್ಯೋತಿಷಿಗಳಿಗೆ ನಮ್ಮ ಪ್ರಯೋಗದಲ್ಲಿ ಭಾಗಿಯಾಗಲು ಆಹ್ವಾನಿಸಿದೆವು. ಅವರು ಒಂದು ಮಾದರಿ ಕಟ್ಟಿನಿಂದ ಪ್ರತಿಭಾನ್ವಿತರ ಮತ್ತು ಬುದ್ಧಿಮಾಂದ್ಯ ಮಕ್ಕಳ ಜಾತಕಗಳನ್ನು ವಿಂಗಡಿಸಿ ಕೊಟ್ಟರೆ ಸಾಕಾಗಿತ್ತು. ನಲುವತ್ತರಲ್ಲಿ ಇಪ್ಪತ್ತೆಂಟಕ್ಕಿಂತ ಹೆಚ್ಚು ಸರಿಯಾದರೆ, ನಮ್ಮ ಪರೀಕ್ಷೆಯಲ್ಲಿ ತೇರ್ಗಡೆಯಾದಂತೆ.

ನಾರ್ಳೀಕರರ ವೈಚಾರಿಕ ಪುಸ್ತಕಆರಂಭದಲ್ಲಿ ಭಾಗಿಯಾಗಲು ಮುಂದೆ ಬಂದ ಐವತ್ತೊಂದು ಜ್ಯೋತಿಷಿಗಳಲ್ಲಿ ಹಲವರು ಹಿಂದೆ ಸರಿದರು. ಪ್ರತಿಷ್ಠಿತ ಫಲಜ್ಯೋತಿಷ ಸಂಸ್ಥೆಗಳು ನಮ್ಮ ಕರೆಯನ್ನು ತಿರಸ್ಕರಿಸಿದುವು.  ಪ್ರಯೋಗದಲ್ಲಿ ಯಾವುದೋ ಹಿಕ್ಮತ್ತು ಇರಬಹುದೆನ್ನುವ ಗುಮಾನಿ ಅವರಿಗೆ. ಇದೀಗ ಕಣದಲ್ಲಿ ಉಳಿದವರು ೨೭ ಮಂದಿ ಮಾತ್ರ. ಇವರಲ್ಲಿ ಬಹುತೇಕರು ನಲುವತ್ತರಲ್ಲಿ ಹದಿನೇಳು ಜಾತಕವನ್ನಷ್ಟೇ ಸರಿಯಾಗಿ ವಿಂಗಡಣೆ ಮಾಡುವಲ್ಲಿ ಯಶಸ್ವಿಯಾದರು. ವಾಸ್ತವವಾಗಿ ನಾಣ್ಯ ಚಿಮ್ಮಿಸಿ ವಿಂಗಡಣೆ ಮಾಡಿದ್ದರೂ ಇದಕ್ಕಿಂತ ಉತ್ತಮ ಫಲಿತಾಂಶ ಲಭ್ಯವಾಗುತ್ತಿತ್ತು.

ಸುಪ್ರಸಿದ್ಧ ಫಲಜ್ಯೋತಿಷ ಸಂಸ್ಥೆಯೊಂದು ಪರೀಕ್ಷೆಯಲ್ಲಿ ಭಾಗವಹಿಸಿತು. ಆ ಸಂಸ್ಥೆಗೆ ಇನ್ನೂರು ಜಾತಕವನ್ನ ನೀಡಿದೆವು. ಅವರು ೧೦೨ ಜಾತಕಗಳನ್ನು ಸರಿಯಾಗಿಯೇ ವಿಂಗಡಿಸಿದರು. ಇದೇನೂ ಮಹಾ ವಿಶೇಷವಲ್ಲ – ಶೇಕಡಾ ಐವತ್ತರ ಸಂಭವನೀಯತೆಗಿಂತ ಹೆಚ್ಚೇನೂ ಅಲ್ಲ! ಸಹಜವಾಗಿಯೆ ಫಲಜ್ಯೋತಿಷ್ಯಕ್ಕೆ ಭವಿಷ್ಯ ವಾಚನದ ಸಾಮರ್ಥ್ಯವಿಲ್ಲ ಎನ್ನುವುದನ್ನು ಈ ಪರೀಕ್ಷೆಗಳು ಸೂಚಿಸಿದುವು.

ಅಮೆರಿಕಾ ಮತ್ತು ಯುರೋಪಿನಲ್ಲಿಯೂ ಫಲಜ್ಯೋತಿಷ್ಯದ ವೈಜ್ಞಾನಿಕ ನೆಲೆಗಳನ್ನು, ಹಲವು ಮಂದಿ ಹಲವು ಬಗೆಗಳಲ್ಲಿ ಎಳೆ ಎಳೆಯಾಗಿ ಪರೀಕ್ಷಿಸಿದ್ದಾರೆ. ಆದರೆ ಈ ಎಲ್ಲ ಪರೀಕ್ಷೆಗಳಲ್ಲಿ   ಫಲಜ್ಯೋತಿಷ್ಯ ದಯನೀಯವಾಗಿ ವಿಫಲಗೊಂಡಿದೆ ಎನ್ನುವುದನ್ನು ನೀವು ಗಮನಿಸಬೇಕು.

ಸಂಪ್ರದಾಯ – ವ್ಯಾಘಾತ

ವೈಯುಕ್ತಿಕ ಅಥವಾ ಸಾಂಘಿಕ ನೆಲೆಯಲ್ಲಿ ಸಾಂಪ್ರದಾಯಿಕ ನಂಬಿಕೆಗಳನ್ನು ಒಪ್ಪಿ ಮಾನವ ನಡೆಯುತ್ತಾನೆ. ಈ ನಂಬಿಕೆಗಳು ಸಾಮಾನ್ಯವಾಗಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯೊಂದಿಗೆ ತಳಕು ಹಾಕಿಕೊಂಡಿರುತ್ತವೆ. ಇಂಥ ನಂಬಿಕೆಗಳ ಕುರಿತಾಗಿ ವೈಚಾರಿಕ ಪ್ರಶ್ನೆಗಳನ್ನು ಎತ್ತಿದೊಡನೆ ಸಂಘರ್ಷ ಉದ್ಭವಿಸುತ್ತದೆ. ಹಿಂದೆ ವೈಚಾರಿಕವೆಂದು ಅನಿಸಿದ ಹಲವು ನಂಬಿಕೆಗಳು ಇಂದು ಅಸಂಗತವಾದರೂ, ಅವುಗಳನ್ನು ಅನುಸರಿಸುತ್ತಿರುವ ಕಾರಣದಿಂದ ಅವು ಒಂದು ಬಗೆಯ ರೂಪಕಗಳಾಗಿ ಉಳಿಯುತ್ತವೆ. ಎಂದೇ ಅವುಗಳ ಬಗ್ಗೆ ಎತ್ತುವ ಪ್ರಶ್ನೆಗಳು ಸಂಘರ್ಷದ ಕಿಡಿ ಹೊತ್ತಿಸುತ್ತವೆ.

ಸಾಂಪ್ರಾದಾಯಿಕವಾಗಿ ಬಂದ ಹಲವು ನಂಬಿಕೆಗಳಿಗೆ ಸಾಮಾಜಿಕ ಮೌಲ್ಯ ಮತ್ತು ಆಯಾಮಗಳಿವೆ. ಇವುಗಳನ್ನು ಸಾರಾಸಗಟಾಗಿ ತಳ್ಳಿ ಹಾಕುವ ಬದಲು, ಸುತ್ತಲಿನ ಪರಿಸರದ ಒಳಿತಿಗೆ ಮತ್ತು ಸಾಮಾಜದ ಉನ್ನತಿಗೆ ಅವು ಯಾವ ಬಗೆಯಲ್ಲಿ ಅಗತ್ಯವೆಂಬ ಚಿಂತನೆ ಮಾಡಬೇಕು. ಇಂಥ ವಿವೇಚನೆಯ ಸಂದರ್ಭದಲ್ಲಿ ವೈಜ್ಞಾನಿಕ ಮನೋಧರ್ಮ ನಮ್ಮ ನೆರವಿಗೆ ಬರುತ್ತದೆ.

ವಿಜ್ಞಾನ ಮತ್ತು ತಂತ್ರಜ್ಞಾನಗಳ ಅನಿಯಂತ್ರಿತ ಬೆಳವಣಿಗೆಗಳ ದುಷ್ಪರಿಣಾಮವನ್ನು ಪಾಶ್ಚಿಮಾತ್ಯ ಸಮಾಜ ಅನುಭವಿಸುತ್ತಿದೆ. ವಿನಾಶಕಾರೀ ಅಣ್ವಸ್ತ್ರಗಳು, ಕೈಗಾರಿಕಾ ಮಾಲಿನ್ಯ, ತಾಂತ್ರೀಕರಣದಿಂದ ಹೆಚ್ಚುತ್ತಿರುವ ಸೋಮಾರಿತನ ಮತ್ತು ಮಾನಸಿಕ ಏರುಪೇರುಗಳು.. ಹೀಗೆ ಸಮಸ್ಯೆಗಳು ಹಲವು. ಅಂದರೆ ವೈಜ್ಞಾನಿಕ ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ನಿಲ್ಲಿಸಬೇಕೇ? ಹೌದು ಎಂಬ ವಾದ ಮಾಡುತ್ತಿದ್ದಾರೆ ಹಲವರು.

ನನಗನ್ನಿಸುವಂತೆ ಇವೆಲ್ಲ ಬರಿದೇ ಭೀತಿಯ ಪ್ರತಿಕ್ರಿಯೆ. ಸಾಂಪ್ರದಾಯಿಕ ಮೌಲ್ಯಗಳು ಇಲ್ಲಿ ನಮ್ಮ ನೆರವಿಗೆ ಬರುತ್ತವೆ. ಅವುಗಳನ್ನು ಉಳಿಸಿಕೊಂಡು, ವೈಚಾರಿಕ ಹಾದಿಯನ್ನು ಅನುಸರಿಸುತ್ತ ವಿಜ್ಞಾನ ತಂತ್ರಜ್ಞಾನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.

ಹಲವು ಸರಕಾರೇತರ ಸಂಸ್ಥೆಗಳು ವೈಚಾರಿಕ ಪ್ರಜ್ಞೆಯನ್ನು ಪಸರಿಸುತ್ತ ಅಂಧ ಆಚರಣೆಯ ನಿರ್ಮೂಲನಕ್ಕೆ ಪ್ರಯತ್ನಿಸುತ್ತಿವೆ. ಉಪನ್ಯಾಸ, ಪ್ರಾತ್ಯಕ್ಷಿಕೆ, ಬೀದಿ ನಾಟಕ, ಪ್ರಯೋಗಗಳ ಮೂಲಕ ಪವಾಡ ಎನ್ನುವ ಘಟನೆಯ ಸತ್ಯವನ್ನು ಬಯಲು ಮಾಡುವಲ್ಲಿ ನಿರತವಾಗಿವೆ; ಲೇಖನ ಮತ್ತು ಪುಸ್ತಕ ಪ್ರಕಟಣೆಯ ಮೂಲಕ ವೈಜ್ಞಾನಿಕ ಮನೋಧರ್ಮದ ಪ್ರಸಾರಕ್ಕೆ ಯತ್ನಿಸುತ್ತಿವೆ. ಆದರೆ ಜನಸಾಮಾನ್ಯರ ಮನೋಧರ್ಮ ಬದಲಾಗಿದೆಯೇ? ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳು ಉರುಳಿವೆ. ಶತ ಶತಮಾನಗಳಿಂದ ಹೆಪ್ಪು ಗಟ್ಟಿದ ಮೂಢ ನಂಬಿಕೆಯ ಗೋಡೆ ಶಿಥಿಲಗೊಂಡಿದೆ ಎನ್ನುವ ಧೈರ್ಯ ನಮಗಿದೆಯೇ? ಬಲು ದೊಡ್ಡ ಸಮಾಜ ಸುಧಾರಕ ಶ್ರೀ.ರಾಜಾರಾಮ ಮೋಹನರಾಯರು ಸತೀ ಸಹಗಮನ ಪದ್ಧತಿಯ ವಿರುದ್ಧ ಹೋರಾಟ ನಡೆಸಿದ್ದು ನಮಗೆ ತಿಳಿದಿದೆ. ಆದರೆ ಈ ಹೇಯ ಪದ್ಧತಿ ಕೆಲವು ಕಡೆ ಇತ್ತೀಚೆಗೆ ನಡೆದದ್ದು ಮತ್ತು ಅದನ್ನು ನಂಬಿದವರ ದೊಡ್ಡ ಗುಂಪು ಅಲ್ಲಿ ಭಾಗಿಯಾದದ್ದು ಪರಿಸ್ಥಿತಿಯ ಗಂಭೀರತೆಯ ಒಂದು ತುಣುಕು ಮಾತ್ರ.

ಅಂಧಾಚರಣೆ ಹಳ್ಳಿಗಳಿಗಷ್ಟೇ ಸೀಮಿತವಾಗಿಲ್ಲ. ಗಣೇಶನ ವಿಗ್ರಹ ಹಾಲು ಕುಡಿಯುವ ಘಟನೆ ದೆಹಲಿ, ಮುಂಬಯಿ ಮತ್ತು ಇತರ ನಗರಗಳಲ್ಲಿ ಬಹು ಜನರನ್ನು ಆಕರ್ಷಿಸಿದ್ದು ನಿಮಗೆ  ನೆನಪಿರಬಹುದು. ಕೆಲವು ಮಂತ್ರಿಗಳು ಈ ಘಟನೆ ಬಗ್ಗೆ ಆಶ್ಚರ್ಯವನ್ನಷ್ಟೇ ಅಲ್ಲ, ತಮ್ಮ ಸಂತಸವನ್ನು ಕೂಡ ವ್ಯಕ್ತಪಡಿಸಿದರು! ತಿಳಿದಿರುವ ವಿಜ್ಞಾನದ ಮೂಲಕ ಇಡೀ ಘಟನೆಯ ಗುಟ್ಟನ್ನು ಬಯಲು ಮಾಡಿದರೂ ಜನ ಇನ್ನೂ ಇಂಥ ಪವಾಡಗಳನ್ನು ಮುಗ್ದವಾಗಿ ನಂಬುತ್ತಿದ್ದಾರೆ. ಅನೈಚ್ಛಿಕವಾಗಿ ನಂಬುವ ಇಂಥ ಪ್ರಕ್ರಿಯೆಯನ್ನು ಕಂಡಾಗ ವಿಜ್ಞಾನ ಮತ್ತು  ತಂತ್ರಜ್ಞಾನ ನಮ್ಮ ಸಮಾಜದ ಮೇಲೆ ಅಂಥ ಗಾಡ ಪರಿಣಾಮ ಬೀರಿಲ್ಲವೇನೋ ಎಂಬ ಸಂಶಯ ಬರುತ್ತದೆ. ಇದಕ್ಕೆ ಪೂರಕವಾಗಿ ಇನ್ನೂ ಕೆಲವನ್ನು ಉದಾಹರಿಸಬಹುದು.

* ದಶಕಗಳ ಹಿಂದಿಗಿಂತ ಇಂದು ಜಾತಕ ಮೇಳಾಮೇಳದಿಂದ ನಡೆಯುವ ಮದುವೆಗಳ ಸಂಖ್ಯೆ ಹೆಚ್ಚುತ್ತಿದೆ. ಜಾತಕವಿಲ್ಲದೇ ಮದುವೆಯಾದ ತಂದೆ ತಾಯಿಯರ ಮಕ್ಕಳು ತಮ್ಮ ಮದುವೆಗೆ ಜಾತಕ ಅಗತ್ಯವೆಂದು ಒತ್ತಾಯಿಸಿದ ಹಲವು ಕುಟುಂಬಗಳು ನನಗೆ ತಿಳಿದಿವೆ.

* ಇತ್ತೀಚೆಗಿನ ವಾಸ್ತುಶಾಸ್ತ್ರ ಹಾಗೂ ಅದರದ್ದೇ ಇನ್ನೊಂದು ಅವತಾರವಾದ ಚೀನೀಯರಿಂದ ಬಂದದ್ದು ಎಂದು ಹೇಳಲಾಗುವ ಫೆಂಗ್ ಶುಯಿ ಕೂಡ ಅಂಧ ನಂಬುಗೆಗೆ ಉದಾಹರಣೆ. ರಾಜಕಾರಣಿಗಳು ಮತ್ತು ಸಮಾಜದ ಗಣ್ಯರು ಕೂಡ ಈ ಹೊಸ ನಂಬಿಕೆಗೆ ಶರಣಾಗಿರುವುದು ಕಂಡಾಗ ಆಶ್ಚರ್ಯವಾಗುತ್ತದೆ. ಇವ್ಯಾವುವೂ ವೈಜ್ಞಾನಿಕ ನಿಕಷದಲ್ಲಿ ತೇರ್ಗಡೆ ಹೊಂದಿಲ್ಲ.

* ದೇವರ ಸೇವಕರೆಂದು ಕರೆದುಕೊಳ್ಳುವ ಬಾಬಾಗಳ ಪವಾಡವನ್ನು ವಿಜ್ಞಾನದ ಪರಿಕಲ್ಪನೆಗಳ ಮೂಲಕ ಬುರುಡೆ ಎಂದು ಸಾಬೀತು ಮಾಡಿದರೂ, ಜನರು ಮಾತ್ರ – ಅದರಲ್ಲೂ ಪೇಟೆಯ ಮಂದಿ – ಇನ್ನೂ ನಂಬಿಕೆ ಇರಿಸಿ ಹೋಗುವುದು ಅಚ್ಚರಿ ತರುತ್ತದೆ. ಬಾಬಾಗಳಿಗೆ ಅಮಾನುಷ ಶಕ್ತಿ ಇದೆ ಎನ್ನುವುದು ನಿರಾಧಾರ ನಂಬಿಕೆ. ನೆಮ್ಮದಿಗಾಗಿ ಇಂಥ ನಂಬಿಕೆಗೆ ಜೋತು ಬೀಳುವುದು ತರವಲ್ಲ. ಇಂಥ ನಂಬಿಕೆಯ ಮೂಲೋತ್ಪಾಟನೆಯಲ್ಲಿ ವಿಜ್ಞಾನ ಪತ್ರಿಕೋದ್ಯಮ ಮಹತ್ತರ ಪಾತ್ರ ವಹಿಸಬಹುದು. ಬಾಬಾಗಳ ದೈವೀಕ ಶಕ್ತಿಯನ್ನು ವೈಜ್ಞಾನಿಕ ತಪಾಸಣೆಗೊಡ್ಡಿದ ವರದಿಗೆ ಪ್ರಚಾರ ನೀಡಬೇಕು. ಇಂಥ ಪ್ರಯತ್ನಗಳು ಅಲ್ಲಲ್ಲಿ ನಡೆದಿವೆಯಾದರೂ ಅವುಗಳಿಗೆ ಸೀಮಿತ ಯಶಸ್ಸಷ್ಟೇ ಸಿಕ್ಕಿದೆ.

* ವಿಶ್ವವಿದ್ಯಾಲಯ ಅನುದಾನ ಆಯೋಗ ಅಂದರೆ ಯುಜಿಸಿ, ಫಲಜ್ಯೋತಿಷ್ಯವನ್ನು ಆಧುನಿಕ ಶಿಕ್ಷಣ ವ್ಯವಸ್ಥೆಯೊಳಗೆ ತಂದು ಅದಕ್ಕೆ ವಿಜ್ಞಾನವೆಂಬ ಮಾನ್ಯತೆ ನೀಡಲು ನಿರ್ಧರಿಸಿದ್ದು ಅತ್ಯಂತ ದುರದೃಷ್ಟ ಬೆಳವಣಿಗೆ. ಯುಜಿಸಿ ಈ ಪ್ರಕಾರಕ್ಕೆ ವೇದೀಯ ಫಲಜ್ಯೋತಿಷ್ಯ ಎನ್ನುವ ಹಣೆ ಪಟ್ಟಿ ಕೊಟ್ಟಿರುವುದು ಫಲಜ್ಯೋತಿಷ್ಯ ವೇದದಲ್ಲಿಯೇ ಉಕ್ತವಾಗಿದೆ ಎಂಬ ತಪ್ಪು ಕಲ್ಪನೆಗೆ ಕಾರಣವಾಗಿದೆ. ಆದರೆ ವಾಸ್ತವ ಬೇರೆ ಎನ್ನುವುದನ್ನು ಎಲ್ಲ ಇತಿಹಾಸ ಸಂಶೋಧನೆಗಳು ಸೂಚಿಸುತ್ತವೆ. ಜಾತಕದ ಮೂಲಕ ಗ್ರಹಚಾರವನ್ನು ನಿರ್ಧರಿಸುವ ಫಲಜ್ಯೋತಿಷ್ಯ ಬಂದದ್ದು ಪಶ್ಚಿಮದ ಗ್ರೀಸರಿಂದ ಹಾಗೂ ಬ್ಯಾಬಿಲೋನಿಯರಿಂದ.

ವಿಜ್ಞಾನದ ಪವಾಡ 

ಪ್ರೊ.ಜಯಂತ್ ನಾರ್ಳೀಕರ್ಯಾಂತ್ರೀಕರಣ, ಪರಿಸರ ಮಾಲಿನ್ಯ, ತಂತ್ರಜ್ಞಾನದ ಲಂಗುಲಗಾಮಿಲ್ಲದ ಬಳಕೆಯಿಂದಾಗುತ್ತಿರುವ ಸಾಮಾಜಿಕ ದುಷ್ಪರಿಣಾಮಗಳು… ಹೀಗೆ ಬೆಟ್ಟದಷ್ಟು ಸಮಸ್ಯೆಗಳು ಇವೆ. ಆದರೆ ಇವೆಲ್ಲವೂ ವಿಜ್ಞಾನದಿಂದ ದೂರ ಸರಿದು ವೈಜ್ಞಾನಿಕ ನೆಲೆ ಇರದ ನಂಬಿಕೆಗಳಿಗೆ ಮತ್ತೆ ಜೋತು ಬೀಳಬೇಕೆನ್ನುವುದಕ್ಕೆ ಸಮರ್ಥನೆ ಆಗಲಾರದು. ಅಥವಾ ನಮ್ಮ ಅತಾರ್ಕಿಕ ವರ್ತನೆಗೆ ಸಮಜಾಯಿಷಿಯೂ ಆಗಲಾರವು.

ಈ ಎಲ್ಲ ಸಮಸ್ಯೆಗಳು ಗುರುತರವಾದದ್ದೇ. ಆದರೆ ಇವ್ಯಾವುವೂ ಅಪರಿಹಾರ್ಯವಲ್ಲ. ಇತ್ತೀಚೆಗಿನ ದಶಕಗಳಲ್ಲಿ ವಿಜ್ಞಾನ ಪ್ರವರ್ಧಿಸಿದ ಬಗೆಯನ್ನು ಗಮನಿದರೆ ವೈಜ್ಞಾನಿಕ ವಿಧಾನಗಳ ಸಮರ್ಪಕ ಬಳಕೆಯೊಂದೇ ನಮ್ಮ ಭವಿಷ್ಯಕ್ಕೊಂದು ಆಶಾಕಿರಣವೆನ್ನುವ ಅಂಶ ಮನದಟ್ಟಾದೀತು. ಚಂದಿರನ ಮೇಲೆ ಮಾನವನ ಪಾದಾರ್ಪಣೆ, ಮಂಗಳನ ಅಂಗಳದಲ್ಲಿ ಆಕಾಶ ನೌಕೆಗಳ ಅವತರಣ, ಸಂಪರ್ಕ ತಂತ್ರಜ್ಞಾನದಿಂದ ದೂರದ ಜಗತ್ತು ನಿಕಟವಾಗಿರುವುದು, ವೈದ್ಯಕೀಯ, ಜೀವ ಶಾಸ್ತ್ರ, ಕೃಷಿ ಮೊದಲಾದ ಕ್ಷೇತ್ರಗಳಲ್ಲಿ ಆಗಿರುವ ಅಭೂತಪೂರ್ವ ಬೆಳವಣಿಗೆಗಳೆಲ್ಲವೂ ನಮ್ಮ ಕಣ್ಣೆದುರಿಗೇ ಒಂದು ತಲೆಮಾರಿನಲ್ಲಿ ಆಗಿರುವ ವಿಜ್ಞಾನ ತಂತ್ರಜ್ಞಾನದ ಅದ್ಭುತ ಪವಾಡಗಳು. ಇದು ದೇವ ಮಾನವರ ಜಾದೂವಿನಂತಲ್ಲ. ಈ ಜಾದೂ ಒಬ್ಬ ವ್ಯಕ್ತಿಯ ಸುಖ ಸೌಲಭ್ಯಕ್ಕೆ ಸೀಮಿತವಾಗಿಲ್ಲ. ಅಂದರೆ ಇದು ವ್ಯಕ್ತಿ ನಿಷ್ಠವಲ್ಲ ಸಮಾಜ ನಿಷ್ಠ ಇಡೀ ಜನಾಂಗದ ಹಿತವನ್ನು ಕಾಯುವುದಕ್ಕಾಗಿ. ಈ ಪವಾಡಗಳು ಬಡವ ಶ್ರೀಮಂತನಿಗೆ ಸಮಾನ ಅನುಕೂಲವನ್ನು ಕಲ್ಪಿಸುತ್ತವೆ.

ಅಭಿವೃದ್ಧಿ ರಾಷ್ಟ್ರಗಳು ಈ ಅಂಶಗಳನ್ನು ಗುರುತಿಸಿವೆ. ಹಾಗಾಗಿಯೇ ಅವು ವಿಜ್ಞಾನಕ್ಕೆ ಪ್ರೋತ್ಸಾಹ ನೀಡುವುದಷ್ಟೇ ಅಲ್ಲ, ಮೂಲಭೂತ ಸಂಶೋಧನೆಗೆ ಒತ್ತು ನೀಡಿವೆ. ನಾವು ಮೂಲಭೂತ ಸಂಶೋಧನೆಗೆ ಪ್ರಾಮುಖ್ಯತೆ ಕೊಡದೇ ಹೋದರೆ, ಹೊಸ ವಿಚಾರವನ್ನು ಹೊರಗಿನಿಂದ ತರಬೇಕಾಗುತ್ತದೆ. ನಮ್ಮ ಸ್ವಾಯತ್ತೆಗೆ ಇದು ಪ್ರತಿಕೂಲವಾಗುತ್ತದೆ. ನಮ್ಮ ದೇಶದಲ್ಲಿ ಮೂಲಭೂತ ಸಂಶೋಧನೆ ಮಾಡಬಲ್ಲ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಇಂಥ ಪ್ರತಿಭೆಗಳು ಅಡಗಿವೆ ಮರೆಯಲ್ಲೇ. ಅವುಗಳನ್ನು ಮುನ್ನೆಲೆಗೆ ತರುವ ಪ್ರಯತ್ನಗಳು ಆಗಬೇಕಾಗಿದೆ.

ದೇವ ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡುತ್ತ ಕೊನೆಯಲ್ಲಿ ಹೇಳುತ್ತಾನೆ “ನಾನು ಹೇಳಿದ್ದನ್ನು ಪೂರ್ಣ ಅಥವಾ ಅಂಶಿಕವಾಗಿ ಮನನ ಮಾಡಿ ಯಾವುದು ಸರಿಯೋ ಅದನ್ನು ನೀನು ಆರಿಸು.” ವೈಜ್ಞಾನಿಕ ಮನೋಧರ್ಮ ಹೇಳುವುದು ಇದನ್ನೇ. ಕಾರ್ಯ ಕಾರಣ ಸಂಬಂಧಗಳನ್ನು ತಾರ್ಕಿಕ ಪರೀಕ್ಷೆಗೆ ಒಡ್ಡಿ ಯಾವುದು ಉತ್ತಮವೋ ಅದನ್ನು ಆರಿಸಿಕೊಳ್ಳಬೇಕು. ಸಂಪ್ರದಾಯಗಳಿಂದ ಕುರುಡಾಗದೇ, ವಿಜ್ಞಾನಕ್ಕೆ ಬೆರಗಾಗದೇ ನಮ್ಮ ಪ್ರಜ್ಞೆಯನ್ನು ಜಾಗೃತ ಸ್ಥಿತಿಯಲ್ಲಿಟ್ಟುಕೊಳ್ಳುವ ಮುಕ್ತ ಚಿಂತಕರು ನಾವಾದಾಗ ನಮ್ಮ ದೇಶ ಪ್ರಗತಿ ಪಥದಲ್ಲಿ ಮುನ್ನಡೆಯುವ ಬಗ್ಗೆ ಯಾವ ಸಂದೇಹವೂ ನನಗಿಲ್ಲ.

ಆಂಗ್ಲ ಮೂಲ: ಪ್ರೊ.ಜಯಂತ್ ನಾರ್ಳೀಕರ್   
ಅನುವಾದ : ಡಾ.ಎ.ಪಿ.ರಾಧಾಕೃಷ್ಣ