ಟುಲಿಪ್ ಹೂವು ಒಂದು ಪದರದ ಹೂವು. ಮೊಗ್ಗಾಗಿದ್ದಾಗ ಅಷ್ಟು ವಿಶೇಷವಾಗಿ ಕಾಣುವುದಿಲ್ಲ. ಪೂರ್ಣ ಅರಳಿ, ದಳಗಳು ತೆರೆದರೂ ಅಷ್ಟು ವಿಶೇಷ ಅನ್ನಿಸುವುದಿಲ್ಲ. ಅರಳುವ ಹಂತಗಳಲ್ಲಿ ಬಹಳ ಸುಂದರವಾಗಿ ಕಾಣುವುದು ಇವೆರಡರ ಮಧ್ಯದ “ಬಲ್ಬ್” ಹಂತ. ಟುಲಿಪ್ ಬಲ್ಬ್ ಗಳ ಅವಧಿ ಎರಡರಿಂದ ಮೂರೂ ವಾರಗಳು ಅಷ್ಟೇ. ಸಂಪೂರ್ಣ ಅರಳುವ ಪ್ರಕ್ರಿಯೆ ಆಯಾ ವರ್ಷದ ಚೈತ್ರ ಕಾಲದ ಹವಾಮಾನಕ್ಕೆ ತಕ್ಕಂತೆ ಒಂದೆರೆಡು ವಾರ ಅತ್ತಿಂದಿತ್ತ ಬದಲಾಗುತ್ತಿರುತ್ತದೆ.
“ದೂರದ ಹಸಿರು” ಸರಣಿಯಲ್ಲಿ ನೆದರ್ಲ್ಯಾಂಡ್ಸ್‌ನಲ್ಲಿ ಕಂಡ ಟುಲಿಪ್‌ ಹೂವಿನ ಲೋಕದ ಕುರಿತು ಬರೆದಿದ್ದಾರೆ ಗುರುದತ್ ಅಮೃತಾಪುರ

ಹಿಂದಿನ ಕಾಲದಲ್ಲಿ ರಾಜರುಗಳ ನಡುವೆ ಯುದ್ಧವು ನಡೆಯುತ್ತಿತ್ತು, ಒಡಂಬಡಿಕೆಗಳು ಸಹ ನಡೆಯುತ್ತಿದ್ದವು. ಹೊಂದಾಣಿಕೆಯ ಒಡಂಬಡಿಕೆಯ ಸಂದರ್ಭಗಳಲ್ಲಿ ಅಮೂಲ್ಯವಾದ ವಸ್ತುಗಳನ್ನು ಉಡುಗೊರೆಯಾಗಿ ಇನ್ನೊಬ್ಬ ರಾಜನಿಗೆ ಕೊಡಲಾಗುತ್ತಿತ್ತು. ಈ ರೀತಿ ಕೊಡಲಾದ ಕೆಲ ಹೂವಿನ ಸಸಿಗಳು ಇಂದು ಒಂದು ದೇಶಕ್ಕೆ ಸಾವಿರಾರು ಕೋಟಿಯ ವ್ಯಾಪಾರ ತರುತ್ತಿದೆ, ಉದ್ಯೋಗ ನೀಡುತ್ತಿದೆ, ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದರೆ ನಂಬುತ್ತೀರಾ? ಈ ಹೂವುಗಳು ನೈಸರ್ಗಿಕವಾಗಿ ಎತ್ತರದ ಪರ್ವತ ಪ್ರದೇಶಗಳಲ್ಲಿ, ಅದರಲ್ಲಿಯೂ ಚೈತ್ರ ಮಾಸದಲ್ಲಿ ಮಾತ್ರ ಅರಳುವ ಅಪರೂಪದ, ಸುಂದರವಾದ ಹೂವುಗಳಾಗಿದ್ದವು.

ಹತ್ತನೇ ಶತಮಾನದಲ್ಲಿ ಪರ್ಷಿಯಾ (ಈಗಿನ ಇರಾನ್) ಭಾಗದಲ್ಲಿ ಅಲಂಕಾರಿಕ ವಸ್ತುವಾಗಿ ಟುಲಿಪ್ ಹೂವುಗಳನ್ನು ಹೇರಳವಾಗಿ ಬಳಸಲಾಗುತ್ತಿತ್ತು. ಈ ಹೂವುಗಳ ಸೌಂದರ್ಯಕ್ಕೆ ಮನಸೋಲದವರಿರಲಿಲ್ಲ. ಇದನ್ನು “ಲಾಲೆ” ಎಂದು ಕರೆಯುತ್ತಿದ್ದರು. ಲಾಲೆ ಎಂಬ ಪದ ಅವರ ದೇವರ ನಾಮದಿಂದ ಬಂದದ್ದು. ಹದಿನಾರನೇ ಶತಮಾನದಲ್ಲಿ ಒಟ್ಟೆಮಾನ್ ತುರ್ಕರು ಈ ಭಾಗಗಳನ್ನೆಲ್ಲಾ ವಶಪಡಿಸಿಕೊಂಡ ಮೇಲೆ ಟುಲಿಪ್ ಹೂವುಗಳು ಇನ್ನೂ ಹೆಚ್ಚು ಪ್ರಚಲಿತಗೊಂಡವು. ಉಡುಗೊರೆಯಾಗಿ ಯೂರೋಪಿನ ಹಲವಾರು ವಸಾಹತು ರಾಷ್ಟ್ರಗಳನ್ನು ತಲುಪಿದವು. ಇದರಲ್ಲಿ ಡಚ್ ಸಂಸ್ಥಾನ ಕೂಡ ಸೇರಿಕೊಂಡಿತ್ತು. ಒಟ್ಟೆಮಾನ್ ತುರ್ಕರು ಟುಲಿಪ್ ಹೂವುಗಳು ಅರಳುವ ಕಾಲವನ್ನು ಹಬ್ಬವನ್ನಾಗಿ ಆಚರಿಸುತ್ತಿದ್ದರಂತೆ.

ಇನ್ನೊಂದು ವಾದದ ಪ್ರಕಾರ ಟುಲಿಪ್ ಹೂವುಗಳ ನೈಸರ್ಗಿಕ ಮೂಲ ನಮ್ಮ “ಕಾಶ್ಮೀರ”. ಕ್ರಿ. ಪೂ. ಎರಡನೇ ಶತಮಾನದ (ಸುಮಾರು ಎರಡುವರೆ ಸಾವಿರ ವರ್ಷಗಳ ಹಿಂದೆ) ಹೊತ್ತಿಗಾಗಲೇ ಇದ್ದ ವ್ಯಾಪಾರದ ಮಾರ್ಗ “ಸಿಲ್ಕ್ ರೂಟ್”. ಈ ಮಾರ್ಗದ ಮುಖೇನ ಟುಲಿಪ್ ಹೂವುಗಳು ಕಾಶ್ಮೀರದಿಂದ ಪರ್ಷಿಯಾ ಭಾಗವನ್ನು ತಲುಪಿತು. ಅಲ್ಲಿಂದ ಒಟ್ಟೆಮಾನ್ ತುರ್ಕರ ಆಡಳಿತದಲ್ಲಿ ವಸಾಹತು ರಾಷ್ಟ್ರಗಳನ್ನು ತಲುಪಿತು. ಇದಕ್ಕೆ ಇಂಬು ಕೊಡುವ ಇನ್ನೊಂದು ಆಶ್ಚರ್ಯಕರ ಸಂಗತಿಯನ್ನು ತಿಳಿದುಕೊಂಡೆ. ನಾವು ದೇವಲೋಕ ಎಂದೇ ಪರಿಗಣಿಸುವ ಜಂಬೂ ದ್ವೀಪದ ಶಿಖರ ಭಾಗಗಳಲ್ಲಿ ಸಹ ಈ ಹೂವುಗಳು ಕಾಣಸಿಗುತ್ತಿದ್ದವಂತೆ. ಪುರಾಣ ಕಥೆಗಳಲ್ಲಿ ಇವನ್ನು “ಕಂದಪುಷ್ಪ” ಎಂದು ಸಂಸ್ಕೃತದಲ್ಲಿ ಹೆಸರಿಸಲಾಗಿತ್ತು. ಇಂದು ಇದೇ ಹೂವನ್ನು “ಟುಲಿಪ್” ಎಂದು ಕರೆಯುತ್ತಾರೆ.

ಹೀಗೆ ಒಂದಾನೊಂದು ಕಾಲದಲ್ಲಿ ಬಂದು ಯೂರೋಪ್ ತಲುಪಿದ ಟುಲಿಪ್ ಹೂವುಗಳು, ಪ್ರತ್ಯೇಕ ಹೂತೋಟದ ಸ್ಥಾನವನ್ನು ಅಲಂಕರಿಸಿದವು. ಏಪ್ರಿಲ್-ಮೇ ತಿಂಗಳ ಚೈತ್ರ ಮಾಸದಲ್ಲಿ ಎಲ್ಲರ ಕಣ್ಮನ ಸೆಳೆಯಲಾರಂಭಿಸಿದ ಟುಲಿಪ್ ಹೂವಿನ ಸೌಂದರ್ಯ ಯುರೋಪಿನಾದ್ಯಂತ ಹೆಸರುವಾಸಿಯಾಯಿತು. “ಟುಲಿಪಾ” ಎಂದರೆ ಪರ್ಷಿಯನ್ ಭಾಷೆಯಲ್ಲಿ ತಲೆಗೆ ಕಟ್ಟುವ ಪೇಟ ಎಂಬ ಅರ್ಥ ಬರುತ್ತದೆಯಂತೆ. ಅವರ ಪೇಟದಲ್ಲಿ ಈ ಹೂವುಗಳ ಅಲಂಕಾರಿಕ ಚಿತ್ರಗಳು ಸಾಮಾನ್ಯವಾಗಿ ಕಾಣುತ್ತಿದ್ದರಿಂದ, ಯೂರೋಪಿನಲ್ಲಿ ಈ ಹೂವಿಗೆ “ಟುಲಿಪ್” ಎಂಬ ಹೆಸರು ಬಂದಿತು ಎನ್ನುವ ಉಲ್ಲೇಖಗಳಿವೆ.

ಹದಿನೇಳನೇ ಶತಮಾನದಲ್ಲಿ ಯೂರೋಪಿನ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಿದ ಡಚ್ (ನೆದರ್ಲ್ಯಾಂಡ್) ಹೊಸ ಉದ್ಯಮಗಳನ್ನು ಆರಂಭಿಸಿತು. ಅದರಲ್ಲಿ ಪ್ರಮುಖವಾದವು ವಜ್ರದ ಉದ್ಯಮ, ಡಚ್ ಈಸ್ಟ್ ಇಂಡಿಯಾ ಕಂಪನಿಯ ಷೇರು ಮಾರುಕಟ್ಟೆ. ಈಗಲೂ “ಆಂಟ್ವೆ‌ರ್ಪ್” (ಪ್ರಸ್ತುತ ಬೆಲ್ಜಿಯಂ ದೇಶದ ನಗರ) ಪ್ರಪಂಚದ ವಜ್ರ ಆಭರಣದ ರಾಜಧಾನಿ! ನಮ್ಮಲ್ಲಿಂದ ಎಷ್ಟು ದೋಚಿದ್ದಾರೆ ಎನ್ನುವ ಕಲ್ಪನೆ ಸಹ ನಮಗೆ ಇಂದು ಬರಲು ಸಾಧ್ಯವಿಲ್ಲ. ಈ ಎಲ್ಲ ಬೆಳವಣಿಗೆಗಳ ಕಾರಣದಿಂದ ಶ್ರೀಮಂತರ ಸಂಖ್ಯೆ ಹೆಚ್ಚಾಯಿತು. ಈ ಕಾಲಮಾನವನ್ನು “ಡಚ್ಚರ ಸುವರ್ಣ ಯುಗ” ಎಂದು ಕರೆಯಲಾಗಿದೆ.

ಡಚ್ಚರ ಸುವರ್ಣ ಯುಗದಲ್ಲಿ ಶ್ರೀಮಂತರ ಗುರುತಾಗಿದ್ದುದು ಟುಲಿಪ್ ಹೂವಿನ ಅಲಂಕಾರ ಮತ್ತು ಹೊಸ ತಳಿಗಳ ಆವಿಷ್ಕಾರ. ಅವರ ವಜ್ರ ವ್ಯಾಪಾರ, ಷೇರು ಮಾರುಕಟ್ಟೆ ಪಟ್ಟಿಗೆ ಹೊಸದಾಗಿ ಸೇರಿದ್ದು “ಟುಲಿಪ್ ವ್ಯಾಪಾರ”. ಟುಲಿಪ್ ಹುಚ್ಚು ಡಚ್ ಜನರಲ್ಲಿ ಶ್ರೀಮಂತಿಕೆಯ ಕನಸಿನ ಅರಮನೆಯನ್ನು ಕಟ್ಟಿತು. ಅದರಲ್ಲಿಯ ವಿಶೇಷ ತಳಿಗಳ ಬೆಲೆ ಗಗನಕ್ಕೇರಿತು. ಎಷ್ಟರ ಮಟ್ಟಿಗೆ ಎಂದರೆ: ಮದುವೆಯ ಸಂದರ್ಭದಲ್ಲಿ ವರದಕ್ಷಿಣೆಯಾಗಿ, ಹಲವು ಬಣ್ಣಗಳ ಮಿಶ್ರಿತ ವಿಶೇಷ ತಳಿಯ “ಒಂದು ಟುಲಿಪ್ ಬಲ್ಬ್”ನ ಬೇಡಿಕೆ ಇಡುವಷ್ಟು! ಫ್ರಾನ್ಸಿನ ಒಂದು ಬೀರ್ ತಯಾರಿಸುವ ಕಂಪನಿ ತನ್ನ ಬ್ರೂವರಿಯನ್ನು, ಹಲವು ಬಣ್ಣಗಳ ಮಿಶ್ರಿತ ವಿಶೇಷ ತಳಿಯ “ಒಂದು ಟುಲಿಪ್ ಬಲ್ಬ್”ಗಾಗಿ ವಿನಿಮಯ ಮಾಡಿಕೊಂಡ ಉದಾಹರಣೆ ಇತಿಹಾಸದಲ್ಲಿ ದಾಖಲಾಗಿದೆ! ಈ ಬೆಳವಣಿಗೆಯನ್ನು ಇತಿಹಾಸದಲ್ಲಿ “ಟುಲಿಪ್ ಮ್ಯಾನಿಯಾ” ಎಂದು ಉಲ್ಲೇಖಿಸಲಾಗಿದೆ.

ಪ್ರಸ್ತುತ ನೆದರ್ಲ್ಯಾಂಡ್ ಸರ್ಕಾರದ ಸಹ ಒಟ್ಟು ಜಿಡಿಪಿ ಲೆಕ್ಕಾಚಾರದ ಶೇಕಡಾ ಹತ್ತರಷ್ಟು “ಟುಲಿಪ್ ವ್ಯವಸಾಯ”ದಿಂದ ಬರುತ್ತಿದೆ. ಎರಡು ಬಿಲಿಯನ್ ಡಾಲರ್ ದುಡ್ಡು ಸಂಪಾದಿಸುತ್ತಿದೆ. ಆರು ಸಾವಿರ ವಿವಿಧ ಟುಲಿಪ್ ಹೂವುಗಳ ತಳಿಗಳಿವೆ ಅವರಲ್ಲಿ. ಆಮ್ಸ್ಟರ್ಡ್ಯಾಮ್ ಹತ್ತಿರವಿರುವ “ಕುಕನ್ ಹಾಫ್” ಎಂಬ ಸ್ಥಳದಲ್ಲಿ ಇರುವ ಟುಲಿಪ್ ಗಾರ್ಡನ್ ವೀಕ್ಷಿಸಲು ಲಕ್ಷಾಂತರ ಮಂದಿ ಪ್ರಪಂಚದ ಎಲ್ಲ ಭಾಗಗಳಿಂದಲೂ ಭೇಟಿ ನೀಡುತ್ತಾರೆ. “ಟುಲಿಪ್ ಫೀಲ್ಡ್ಸ್” ಎಂದು ಕರೆಯಲ್ಪಡುವ ಟುಲಿಪ್ ತೋಟಗಳಿಗೂ ಸಹ ಭೇಟಿ ನೀಡಬಹುದು. ಹಾಲೆಂಡಿನ ಹೆಗ್ಗುರುತು ಟುಲಿಪ್ ಆಗಿ ಮಾರ್ಪಟ್ಟಿದೆ. ಬಹುಪಾಲು ಜನರಿಗೆ “ಟುಲಿಪ್ ಹೂವಿನ ಮೂಲ ನೆದರ್ಲ್ಯಾಂಡ್ ಅಲ್ಲ” ಎಂದರೆ ನಂಬಲು ಸಾಧ್ಯವಾಗದಷ್ಟು ಛಾಪನ್ನು ಮೂಡಿಸಿಬಿಟ್ಟಿದೆ.

ನಾವು ದೇವಲೋಕ ಎಂದೇ ಪರಿಗಣಿಸುವ ಜಂಬೂ ದ್ವೀಪದ ಶಿಖರ ಭಾಗಗಳಲ್ಲಿ ಸಹ ಈ ಹೂವುಗಳು ಕಾಣಸಿಗುತ್ತಿದ್ದವಂತೆ. ಪುರಾಣ ಕಥೆಗಳಲ್ಲಿ ಇವನ್ನು “ಕಂದಪುಷ್ಪ” ಎಂದು ಸಂಸ್ಕೃತದಲ್ಲಿ ಹೆಸರಿಸಲಾಗಿತ್ತು. ಇಂದು ಇದೇ ಹೂವನ್ನು “ಟುಲಿಪ್” ಎಂದು ಕರೆಯುತ್ತಾರೆ.

ಕುಕನ್ ಹಾಫ್ (keukenhof) ಟುಲಿಪ್ ಗಾರ್ಡನ್

ಬಾಲ್ಯದಲ್ಲಿ ಮನೆಯಲ್ಲಿದ್ದ ಹೊಟ್ಟೆ ಡುಮ್ಮ ಟಿವಿಯಲ್ಲಿ ಬರುತ್ತಿದುದು ಒಂದೇ ಚಾನಲ್ – ದೂರದರ್ಶನ. ದೂರದರ್ಶನದಲ್ಲಿ ಬರುವ ಅನೇಕ ಕಾರ್ಯಕ್ರಮಗಳು ಅತ್ಯಂತ ಜನಪ್ರಿಯವಾಗಿದ್ದವು. ಅದರಲ್ಲಿ ಪ್ರತಿ ಭಾನುವಾರ ಬೆಳಗ್ಗೆ ಬರುತ್ತಿದ್ದ “ರಂಗೋಲಿ” ಸಹ ಒಂದು. ನಾನು ಮೊದಲು ಟುಲಿಪ್ ಹೂವು ನೋಡಿದ ನೆನಪಿರುವುದು ದೂರದರ್ಶನದ ಇದೇ ರಂಗೋಲಿ ಕಾರ್ಯಕ್ರಮದಲ್ಲಿ. ಅಮಿತಾಬ್ ಬಚ್ಚನ್, ರೇಖಾ ಅಭಿನಯದ ಸೂಪರ್ ಹಿಟ್ ಸಿಲ್ಸಿಲಾ ಚಲನಚಿತ್ರದ “ದೇಖಾ ಏಕ್ ಖ್ವಾಬ್ ತೋ ಎ ಸಿಲ್ಸಿಲೇ ಹುವೇ….” ಹಾಡಿನಲ್ಲಿ. ಕಿಶೋರ್ ಕುಮಾರ್, ಲತಾ ಮಂಗೇಶ್ಕರ್ ಅವರುಗಳ ಸುಮಧುರ ಗಾಯನದ ನಡುವೆ ಎದ್ದು ಕಾಣಿಸಿದ್ದು ಬಣ್ಣ ಬಣ್ಣದ ಹೂವಿನ ತೋಟ. ನಮ್ಮ ಸುತ್ತಲೂ ಎಂದೂ ನೋಡಿರದ ಆಕರ್ಷಕ ಹೂವುಗಳ ಬಗ್ಗೆ ಒಂದು ರೀತಿಯ ಕುತೂಹಲ ಹುಟ್ಟಿತ್ತು. ಮುಂದೆ ಎಂದಾದರೂ ಒಂದು ದಿನ ನೋಡಬೇಕೆನ್ನುವ ಬಯಕೆ ಇತ್ತು.

ಕೆಲಸದ ನಿಮಿತ್ತ ಜೆರ್ಮನಿಗೆ ಬಂದ ಮೇಲೆ ತಿಳಿದದ್ದು ಪ್ರಪಂಚದ ಅತೀ ದೊಡ್ಡ ಟುಲಿಪ್ ಗಾರ್ಡನ್ ನೆದರ್ಲ್ಯಾಂಡ್ಸ್ ದೇಶದ ಆಮ್ಸ್ಟರ್ಡಾಮ್ ನಗರದ ಬಳಿ ಇದೆ ಎಂದು. ಆಮೇಲೆ ಅಲ್ಲಿಗೆ ಯಾವಾಗ ಹೋದರೆ ಒಳ್ಳೆಯದು ಎಂದೆಲ್ಲ ಲೆಕ್ಕ ಹಾಕಿ, ಮೇ ಮೊದಲ ವಾರ ಸೂಕ್ತ ಎಂದು ಪ್ರವಾಸದ ಸಿದ್ಧತೆ ಪ್ರಾರಂಭಿಸಿದೆ. ನನ್ನ ಗೆಳೆಯ ಗೋಪಿ(ಗೋಪಾಲಕೃಷ್ಣ ನನ್ನ ಎಂಜಿನನೀರಿಂಗ್ ಸಹಪಾಠಿ) ಆಗ ನೆದರ್ಲ್ಯಾಂಡ್ಸ್ ದೇಶದಲ್ಲಿ ವಾಸವಿದ್ದ. ಅವನ ಆಹ್ವಾನದ ಮೇರೆಗೆ 4 ದಿನಗಳ ಪ್ರವಾಸ ತಯಾರಾಯಿತು. ಬಾಡಿಗೆ ಕಾರು ಪಡೆದು ಹೊರಟದ್ದು ಗೋಪಿಯ ಮನೆಗೆ.

ಫೋಟೋಗ್ರಾಫಿ ಹುಚ್ಚು ಇರುವವರಿಗೆ ಹಲವಾರು ಇತಿ ಮಿತಿಗಳು ಎಲ್ಲೆಡೆಯಿಂದಲೂ ಹುಡುಕಿಕೊಂಡು ಬಂದುಬಿಡುತ್ತವೆ. ಅದರಲ್ಲಿ ಬಹು ಮುಖ್ಯವಾದುದು ಜನ ಜಂಗುಳಿ ಇಲ್ಲದಿರುವಾಗ ಅಥವಾ ಆದಷ್ಟು ಕಮ್ಮಿ ಜನ ಇರುವಾಗ ಫೋಟೋ ತೆಗೆಯಬೇಕು ಎನ್ನುವ ಆಸೆ. ಇದರಿಂದ ಬೆಳ್ ಬೆಳಗ್ಗೆ ಎದ್ದು, ತಯಾರಾಗಿ ಒಂಬತ್ತಕ್ಕೆ ಗೇಟು ತೆಗೆಯುವ ಸಮಯಕ್ಕೆ ಸರಿಯಾಗಿ ಅಲ್ಲಿರಬೇಕು ಎನ್ನುವ ತುಡಿತ. ಅದರಂತೆಯೇ ಸರಿಯಾದ ಸಮಯಕ್ಕೆ ಅಲ್ಲಿ ತಲುಪಿದೆವು. ಆದರೂ ಹೆಚ್ಚುವರಿ ವಾರಾಂತ್ಯದ ರಜೆಗಳ ಸಂದರ್ಭದಿಂದ ಅದಾಗಲೇ ಜನರ ಜಮಾವಣೆ ಆರಂಭವಾಗಿತ್ತು. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಒಳಗೆ ಹೋದರೆ ಕಂಡಷ್ಟು ದೂರಕ್ಕೂ ಬಗೆ ಬಗೆಯ ಟುಲಿಪ್ ಹೂವುಗಳು.

ಅದೊಂದು ದೊಡ್ಡ ಉದ್ಯಾನವನ. ದಿನವಿಡೀ ನಡೆದರೂ ಮುಗಿಯದಷ್ಟು! ಅದರ ನಕ್ಷೆ ಹಿಡಿದು ಒಂದು ಕಡೆಯಿಂದ ನಡೆಯಲು ಆರಂಭಿಸಿದೆವು. ಟುಲಿಪ್ ಗಿಡದ ಎತ್ತರ ಸುಮಾರು ಎರಡರಿಂದ ಮೂರೂ ಅಡಿಗಳಷ್ಟು. ಪ್ರತಿಯೊಂದು ಫೋಟೋ ತೆಗೆಯಬೇಕಾದರೂ, ಮಂಡಿಯೂರಿ ಅದರ ಎತ್ತರದ ಸಮಕ್ಕೆ ತೆಗೆಯಬೇಕು. ಹೀಗೆ ಫೋಟೋ ತೆಗೆಯುತ್ತಾ ಸಾಗುವಾಗ ಕಂಡಿದ್ದು ಬಣ್ಣ ಬಣ್ಣದ ಟುಲಿಪ್ ತಳಿಗಳು. ಹಳದಿ, ಗುಲಾಬಿ, ನಸುಗೆಂಪು, ಕಡುಗೆಂಪು, ನೇರಳೆ, ಬಿಳಿ, ಬಣ್ಣ ಮಿಶ್ರಿತ ದಳಗಳುಳ್ಳ ಟುಲಿಪ್ ಹೂವುಗಳು. ಇತ್ತೀಚಿನ ಸಂಶೋಧನೆಯಾದ ಕಪ್ಪು ಟುಲಿಪ್‌ಗಳು ಸಹ ಕಣ್ಣಿಗೆ ಬಿದ್ದವು. ಮುಂಜಾನೆಯ ಇಬ್ಬನಿಯ ಹನಿಗಳು ಟುಲಿಪ್ ಹೂವುಗಳ ಮೇಲೆ ಸೂರ್ಯನ ಬಿಸಿಲಿಗೆ ಮುತ್ತಿನಂತೆ ಹೊಳೆಯುತ್ತಿದ್ದವು. ಒಂದಕ್ಕಿಂತ ಒಂದು ವಿಭಿನ್ನ ಎನ್ನಿಸುತ್ತಿತ್ತು. ವಿಜ್ಞಾನದಲ್ಲಿ ಕಲಿತ “ಒಂದೇ ತರನಾದ ಎರಡು ಪರಮಾಣುಗಳೂ ಸಹ ಇರುವುದಿಲ್ಲ” ಎನ್ನುವ ತತ್ವ ಇಲ್ಲಿ ಸಾರಿ ಹೇಳುವಂತಿತ್ತು.

ಮಧ್ಯಾಹ್ನದ ಹೊತ್ತಿಗೆ ಅರ್ಧ ಉದ್ಯಾನವನ ಮುಗಿಸಿ ಮಧ್ಯದಲ್ಲಿದ್ದ ಪುರಾತನ ವಿಂಡ್ ಮಿಲ್ (ಗಾಳಿಯಿಂದ ಚಲಿಸುವ ಗಿರಣಿ) ಹತ್ತಿರ ಬಂದೆವು. ಅದರ ಒಳಗೆ ಹೋಗಲು ನೂಕು ನುಗ್ಗಲು. ಹೇಗಿದ್ದರೂ ಮಾರನೆಯ ದಿನ ಹಲವಾರು ವಿಂಡ್ ಮಿಲ್ ಇರುವ ಹಳ್ಳಿಗೆ ಭೇಟಿ ನೀಡುವ ಯೋಜನೆ ಇದ್ದುದರಿಂದ, ಇದರ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳಲಿಲ್ಲ. ಮುಂದಿನ ಭಾಗದಲ್ಲಿ ಡಚ್ ಕಾಲದ ವಿಂಡ್ ಮಿಲ್ ಬಗ್ಗೆ ಬರೆಯುತ್ತೇನೆ. ಇಲ್ಲಿದ್ದ ವಿಂಡ್ ಮಿಲ್ ಹಿಂದೆ ಒಂದು ಕಾಲುವೆ ಹರಿಯುತ್ತಿತ್ತು. ಆ ಕಾಲುವೆಯಲ್ಲಿ ದೋಣಿ ವಿಹಾರದ ವ್ಯವಸ್ಥೆ ಇತ್ತು. ದೋಣಿ ಹತ್ತು ಹೊರಟರೆ ಉದ್ಯಾನವನ ದಾಟಿ ಟುಲಿಪ್ ಗದ್ದೆಗಳ ಸುತ್ತಲಿನ ಒಂದು ಪಯಣ. ಈ ಗದ್ದೆಗಳನ್ನು ನೋಡುವುದೇ ಒಂದು ಚಂದ. ಬಣ್ಣದ ಟುಲಿಪ್ ಹೂವುಗಳ ಉದ್ದುದ್ದ ಸಾಲುಗಳು. ಕಾಮನಬಿಲ್ಲಿನಲ್ಲಿ ಬಣ್ಣಗಳು ಹೇಗೆ ಕಾಣುತ್ತವೆಯೋ ಹಾಗೆ. ಸುಮಾರು ಅರ್ಧ ತಾಸಿನ ದೋಣಿಯಲ್ಲಿ ಅತ್ತಿಂದಿತ್ತ ಕಣ್ಣು ಹಾಯಿಸಿ ಸಮಯ ಕಳೆದದ್ದು ಗೊತ್ತೇ ಆಗಲಿಲ್ಲ. ನಂತರ ಮತ್ತೆ ನಮ್ಮ ಉದ್ಯಾನವನಕ್ಕೆ ಹಿಂದಿರುಗಿ ಊಟ ಮುಗಿಸಿ ನಕ್ಷೆಯ ಮುಂದಿನ ಭಾಗದ ಕಡೆಗೆ ನಡೆದೆವು.

ಟುಲಿಪ್ ಹೂವು ಒಂದು ಪದರದ ಹೂವು. ಮೊಗ್ಗಾಗಿದ್ದಾಗ ಅಷ್ಟು ವಿಶೇಷವಾಗಿ ಕಾಣುವುದಿಲ್ಲ. ಪೂರ್ಣ ಅರಳಿ, ದಳಗಳು ತೆರೆದರೂ ಅಷ್ಟು ವಿಶೇಷ ಅನ್ನಿಸುವುದಿಲ್ಲ. ಅರಳುವ ಹಂತಗಳಲ್ಲಿ ಬಹಳ ಸುಂದರವಾಗಿ ಕಾಣುವುದು ಇವೆರಡರ ಮಧ್ಯದ “ಬಲ್ಬ್” ಹಂತ. ಟುಲಿಪ್ ಬಲ್ಬ್ ಗಳ ಅವಧಿ ಎರಡರಿಂದ ಮೂರೂ ವಾರಗಳು ಅಷ್ಟೇ. ಸಂಪೂರ್ಣ ಅರಳುವ ಪ್ರಕ್ರಿಯೆ ಆಯಾ ವರ್ಷದ ಚೈತ್ರ ಕಾಲದ ಹವಾಮಾನಕ್ಕೆ ತಕ್ಕಂತೆ ಒಂದೆರೆಡು ವಾರ ಅತ್ತಿಂದಿತ್ತ ಬದಲಾಗುತ್ತಿರುತ್ತದೆ. ಅಂದಾಜಿನ ಪ್ರಕಾರ ಏಪ್ರಿಲ್ ಕೊನೆಯ ವಾರದಿಂದ ಮೇ ಮಧ್ಯದವರೆಗೂ ಸಾಮಾನ್ಯವಾಗಿ ಟುಲಿಪ್ ಹೂವುಗಳನ್ನು ಬಲ್ಬ್ ಹಂತದಲ್ಲಿ ಕಾಣಬಹುದು. ಆ ಸಮಯಕ್ಕೆ ಕಾದು, ಯೋಜಿಸಿ ಪ್ರಯಾಣಿಸಿದರೆ ಟುಲಿಪ್ ವೀಕ್ಷಣೆಯ ಅನುಭವ ಅನನ್ಯ.

ಆಗಲೇ ಹೇಳಿದಂತೆ ಟುಲಿಪ್ ಹೂವುಗಳ ಎತ್ತರಕ್ಕೆ ಅನುಸಾರವಾಗಿ ಫೋಟೋ ತೆಗೆಯಬೇಕೆಂದರೆ, ಪ್ರತಿ ಬಾರಿ ಮಂಡಿಯೂರಿ ಕೂರಬೇಕು. ಮತ್ತೆ ಏಳಬೇಕು. ಸಮಯ ಕಳೆದಂತೆ ಮಂಡಿ, ಕಾಲು, ಸೊಂಟ ಎಲ್ಲ ಪದ ಹಾಡಲು ಶುರುಮಾಡಿದ್ದವು. ಮಧ್ಯಾಹ್ನ ಕಳೆಯುವ ಒಳಗೆ ವಯಸ್ಸಾಗಿ ಹೋಯಿತೇನೋ ಎನ್ನುವ ಅನುಭವ. ಆದರೂ ಮನಸ್ಸು ಹುಚ್ಚು ಕುದುರೆ. ಸಂಜೆ ಬಾಗಿಲು ಹಾಕುವ ಸಮಯದವರೆಗೂ ಅಲ್ಲಿಯೇ ಕಳೆದದ್ದು ಮರೆಯಲಾಗದ ಅನುಭವ. ಅದೊಂದು ದೃಶ್ಯ ವೈಭವ. “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ?” ಎನ್ನುವ ಪ್ರಶ್ನೆಗೆ ಸಾರ್ಥಕ ಉತ್ತರ ಈ ಭೇಟಿ ನೀಡಿತು.

(ಫೋಟೋಗಳು: ಲೇಖಕರವು)

ಒಂದು ದೇಶಕ್ಕೆ ಉಡುಗೊರೆಯಾಗಿ ಬಂದಿದ್ದ ಕೆಲ ಸಸಿಗಳನ್ನು ಬೆಳೆಸಿಕೊಂಡು, ತಮ್ಮದಾಗಿಸಿಕೊಂಡು, ಈಗ ಈ ಹೂವುಗಳ ಮೂಲವೇ ಮಂಕಾಗುವಂತೆ ಬದಲಾಯಿಸಿದ ಪರಿ ಆಶ್ಚರ್ಯಕರ ಸಂಗತಿ. ಕೇಳಿದ್ದನ್ನು ಕೊಡುವ ಅಲ್ಲಾದೀನ್ ದೀಪಕ್ಕೆ ಒಂದು ಉದಾಹರಣೆಯಂತೆ ಟುಲಿಪ್ ಹೂವುಗಳನ್ನು ನೆದರ್ಲ್ಯಾಂಡ್ಸ್ ಉಪಯೋಗಿಸಿಕೊಂಡಿದೆ. ಈಗ ಟುಲಿಪ್ ಹೂವು ಈ ದೇಶದ ಸಂಕೇತ, ಆಸ್ಮಿತೆ ಮತ್ತು ಅವಿನಾಭಾವ ಒಡೆತನವಾಗಿದೆ. ನೆದರ್ಲ್ಯಾಂಡ್ಸ್ ನ 10% ಜಿಡಿಪಿ ಟುಲಿಪ್ ಹೂವುಗಳ ಉದ್ಯಮದಿಂದ ಬರುತ್ತಿದೆ ಎಂದರೆ ನಂಬಲು ಅಸಾಧ್ಯವಾದರೂ ಸತ್ಯ!

ನಮ್ಮ ಭಾರತದ ಕಾಶ್ಮೀರ ಪ್ರಾಂತ್ಯದ ಶ್ರೀನಗರದಲ್ಲಿರುವ ಟುಲಿಪ್ ಉದ್ಯಾನವನ ಏಷಿಯಾದ ಅತೀ ದೊಡ್ಡ ಟುಲಿಪ್ ಉದ್ಯಾನವನವಾಗಿದೆ. ಆಮ್ಸ್ಟರ್ಡಾಮ್ ಬಳಿ ಇರುವ ನಾನು ಭೇಟಿ ಕೊಟ್ಟ ಕೂಕೆನ್ ಹಾಫ್ ಉದ್ಯಾನವನ ಪ್ರಪಂಚದಲ್ಲಿಯೇ ಅತೀ ದೊಡ್ಡ ಟುಲಿಪ್ ಉದ್ಯಾನವನ. ಇದನ್ನು ಬಿಟ್ಟರೆ ಯೂರೋಪಿನಲ್ಲಿ ಹೆಸರಿಸಬಹುದಾದಂತಹ ಇನ್ನೆರಡು ಟುಲಿಪ್ ಉದ್ಯಾನವನಗಳೆಂದರೆ: ಜೆರ್ಮನಿಯ ಕಾನ್ಸ್ಟೇನ್ಸ್ ನಗರದ ಬಳಿ ಇರುವ “ಇನ್ಸೆಲ್ ಮೈನೌ” ಮತ್ತು ಸ್ಲೊವೇನಿಯಾದ ಕಾಮ್ನಿಕ್ ನಗರದ ಬಳಿ ಇರುವ “ಆರ್ಬೋರೇಟಮ್”. ಎಲ್ಲಾದರೂ ಸರಿ, ಅವಕಾಶ ಸಿಕ್ಕಾಗ ಏಪ್ರಿಲ್ ಕೊನೆಯ ವಾರದಿಂದ ಮೇ ಮಧ್ಯ ಭಾಗದವರೆಗೆ ಅವಶ್ಯವಾಗಿ ಒಂದು ಟುಲಿಪ್ ಉದ್ಯಾನವನಕ್ಕೆ ಭೇಟಿ ಕೊಡಿ. ಅದೊಂದು “ದೃಶ್ಯ ವೈಭವ”.

(ಮುಂದಿನ ಸಂಚಿಕೆಯಲ್ಲಿ ಭಾರತದೊಂದಿಗೆ ಬೆಸೆಯಲ್ಪಟ್ಟ ಡಚ್ ವಿಷಯವೊಂದನ್ನು ಬರೆಯುತ್ತೇನೆ. ಅದರ ಜೊತೆಗೆ “ಗೀತೂರ್ನ್” ಎನ್ನುವ ದೋಣಿಗಳ ಒಂದು ಹಳ್ಳಿಯ ಬಗ್ಗೆಯೂ ಬರೆಯುತ್ತೇನೆ. ನಿರೀಕ್ಷಿಸಿ…)