ರಸ್ತೆಯುದ್ದಕ್ಕೂ ಮೊದಲು ಸಿಗುವ ಸುಧಾಳನ್ನು ಮನೆಗೆ ಸೇರಿಸಿ, ನಂತರ ಚಿತ್ರ, ಎಲ್ಲರನ್ನೂ ಬಿಟ್ಟು ನಾನು ಮತ್ತು ರೇವಿ ಕಾಲೆಳೆದುಕೊಂಡು ಇ. ಎಸ್. ಐ ಹತ್ತಿರವಿದ್ದ ಮನೆ ಸೇರುವುದರಲ್ಲಿ 6 ಕಳೆದಿರುತ್ತಿತ್ತು. ಅಷ್ಟು ಹೊತ್ತಿಗೆ ಅಮ್ಮನನ್ನೇ ತಿನ್ನುವ ಘರ್ಜಿಸುವ ಹೆಣ್ಣು ಹುಲಿಯಾಗಿರುತ್ತಿದ್ದೆ! ನಾನು ರಸ್ತೆಯ ಮೂಲೆಯಲ್ಲಿ ತಿರುಗಿದೊಡನೆ ಎಲ್ಲರೂ ಸಿನೆಮಾದಲ್ಲಿ ರೌಡಿ ಬಂದಾಗ ಗುಸುಗುಸು ಮಾತನಾಡುತ್ತ ಮೌನವಾಗುತ್ತಾರಲ್ಲ… ಹಾಗೆ ಸೈಲೆಂಟು! ಮತ್ತೆ ಜಗತ್ತಿನ ಮಕ್ಕಳೆಲ್ಲ ಶಾಲೆ ಮುಗಿಸಿದ ಎರಡು ಗಂಟೆಗಳ ನಂತರ ಮನೆ ಸೇರುತ್ತಿದ್ದ ಘೋರ ಅನ್ಯಾಯ ಅನುಭವಿಸುತ್ತಿರುವಾಗ ಅವರೆಲ್ಲ ಖುಷಿಯಾಗಿ ನಗುತ್ತ ಇರುವುದು ಏನು ಕಡಿಮೆ ಅಪರಾಧವಾ?!
ಭಾರತಿ ಬಿ.ವಿ.ಯವರ “ಈ ಪ್ರೀತಿ ಒಂಥರಾ” ಕೃತಿಯ ಒಂದು ಬರಹ ನಿಮ್ಮ ಓದಿಗೆ

ನನ್ನ ಶಾಲೆ ಇದ್ದಿದ್ದು ರಾಜಾಜಿನಗರ ಮೊದಲ ಬ್ಲಾಕ್‌ನಲ್ಲಿ. ಅದು ಶುರುವಾಗುತ್ತಿದ್ದುದು ನಡು ಮಧ್ಯಾಹ್ನ 12ಕ್ಕೆ ಮತ್ತು ಮುಗಿಯುತ್ತಿದ್ದುದು ಸಂಜೆ 5.30 ಕ್ಕೆ. ಬೆಳಿಗ್ಗೆ 10 ಗಂಟೆಗೆ ಊಟ ಮಾಡಿ ಶಾಲೆಗೆ ನಡೆದರೆ ಮತ್ತೆ ಸಂಜೆಯವರೆಗೆ ಖಾಲಿ ಹೊಟ್ಟೆ. ದಿನವೂ ವಾಪಸ್ ಬರುವಷ್ಟರಲ್ಲಿ ಹಸಿವಿನಿಂದ ಸುಸ್ತಾಗಿ ಜೋಲು ಮೋರೆ ಹೊತ್ತು ವಾಪಸ್ ಬರುತ್ತಿದ್ದೆ. ‘ಹಾಳು ಹೊಟ್ಟೆಯಲ್ಲಿ ಯಾಕಿರಬೇಕು, ಸ್ಕೂಲಿಗೆ ಡಬ್ಬಿ ಕಟ್ಟಿಕೊಂಡು ಹೋಗಲೇನು ಧಾಡಿ’ ಎಂದು ಅಮ್ಮ ದಿನವೂ ಹೇಳುತ್ತಲೇ ಇದ್ದರೂ ಕೇಳುವವಳಾ ನಾನು? ಚಂಡಿಯ ವಂಶಜಳು! ಶಾಲೆಯ ಬಳಿಯೂ ತಿನ್ನಲು ಏನೂ ಸಿಗುತ್ತಿರಲೂ ಇಲ್ಲ… ಶಾಲೆಯ ಎದುರಿಗೆ ಇದ್ದ ಒಂದೇ ಬೇಕರಿಯಲ್ಲಿ ವೆಜ್ ಪಫ್ ಬಿಟ್ಟು. ಈಗ ಅಲ್ಲಿನ ಅಂಗಡಿಗಳ ಸಾಲು ನೋಡಿದರೆ ಹೊಟ್ಟೆ ಉರಿಯುತ್ತದೆ ‘ಆಗ ಎಲ್ಲಿ ಹಾಳಾಗಿಹೋಗಿದ್ರು ಇವರೆಲ್ಲ’ ಎಂದು! ಒಮ್ಮೊಮ್ಮೆ ಪಫ್ ತಿನ್ನುತ್ತಿದ್ದೆವಾದರೂ ದಿನವೂ ತಿನ್ನಲು ಹಾಗೆಲ್ಲ ಹಣವಿರುತ್ತಿರಲಿಲ್ಲ. ಅವೆಲ್ಲ ಎಂದೋ ಒಮ್ಮೆ ಸ್ಪೆಷಲ್ ಸಂದರ್ಭಗಳಿಗೆ ಮಾತ್ರ ಮೀಸಲು. ಉಳಿದಂತೆ ಮನೆಯದ್ದು ತಿನ್ನಬೇಕು, ಇಲ್ಲವಾದರೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ… ಎರಡೇ ಆಯ್ಕೆ… ನನಗೆ ಮಾತ್ರವಲ್ಲ, ಮಧ್ಯಮ ವರ್ಗದ ಎಲ್ಲ ಮಕ್ಕಳಿಗೂ.

(ಭಾರತಿ ಬಿ.ವಿ.)

ಇದು ಸಾಲದು ಎಂದು ಮತ್ತೊಂದು ತಲೆಹರಟೆ ಎಂದರೆ ಬಸ್ ಪಾಸ್ ಬೇಡವೆಂದು ನಿರಾಕರಿಸಿ ಶಾಲೆಗೆ ನಡೆದು ಹೋಗಿ ಬರುವುದು. ಬೆಳಿಗ್ಗೆ ನಡೆಯಲು ಹೊಟ್ಟೆ ಭಾರ ಮತ್ತು ಹಿಂದಿರುಗುವಾಗ ಖಾಲಿ ಹೊಟ್ಟೆಯ ಸಂಕಟ. ಹೀಗಿದ್ದೂ ರಸ್ತೆಯುದ್ದಕ್ಕೂ ಮೊದಲು ಸಿಗುವ ಸುಧಾಳನ್ನು ಮನೆಗೆ ಸೇರಿಸಿ, ನಂತರ ಚಿತ್ರ, ನಂತರ ರೂಪ, ನಂತರ ಶೈಲಾ ಎಲ್ಲರನ್ನೂ ಬಿಟ್ಟು ನಾನು ಮತ್ತು ರೇವಿ ಕಾಲೆಳೆದುಕೊಂಡು ಇ. ಎಸ್. ಐ ಹತ್ತಿರವಿದ್ದ ಮನೆ ಸೇರುವುದರಲ್ಲಿ 6 ಕಳೆದಿರುತ್ತಿತ್ತು. ಅಷ್ಟು ಹೊತ್ತಿಗೆ ಅಮ್ಮನನ್ನೇ ತಿನ್ನುವ ಘರ್ಜಿಸುವ ಹೆಣ್ಣು ಹುಲಿಯಾಗಿರುತ್ತಿದ್ದೆ! ನಾನು ರಸ್ತೆಯ ಮೂಲೆಯಲ್ಲಿ ತಿರುಗಿದೊಡನೆ ಎಲ್ಲರೂ ಸಿನೆಮಾದಲ್ಲಿ ರೌಡಿ ಬಂದಾಗ ಗುಸುಗುಸು ಮಾತನಾಡುತ್ತ ಮೌನವಾಗುತ್ತಾರಲ್ಲ… ಹಾಗೆ ಸೈಲೆಂಟು! ನಾನು ಅವರ ಕಡೆಗೆಲ್ಲ ಒಂದು ಕೆಂಗಣ್ಣಿನ ನೋಟ ಬೀರುತ್ತಾ ಸಾಗುವುದು! ಮತ್ತೆ ಜಗತ್ತಿನ ಮಕ್ಕಳೆಲ್ಲ ಶಾಲೆ ಮುಗಿಸಿದ ಎರಡು ಗಂಟೆಗಳ ನಂತರ ಮನೆ ಸೇರುತ್ತಿದ್ದ ಘೋರ ಅನ್ಯಾಯ ಅನುಭವಿಸುತ್ತಿರುವಾಗ ಅವರೆಲ್ಲ ಖುಷಿಯಾಗಿ ನಗುತ್ತ ಇರುವುದು ಏನು ಕಡಿಮೆ ಅಪರಾಧವಾ?! ಇದ್ದಿದ್ದರಲ್ಲಿ ನನ್ನ ಗೆಳತಿ ಗೀತಾ ಮಾತ್ರ ಧೈರ್ಯ ತಾಳಿ ಮೆಲ್ಲನೆ ದನಿಯಲ್ಲಿ ‘ಹೋಗಪ್ಪ ತಿಂದ್ಕೊಂಡು ಬಾ’ ಎನ್ನುತ್ತಿದ್ದಳು. ನಾನು ಕೆಕ್ಕರಿಸಿ ಅವಳನ್ನು ನೋಡುತ್ತಾ ನಡೆಯುತ್ತಿದ್ದೆ ‘ತಿಂದ್ಕೊಂಡು ಬರುವುದರಲ್ಲಿ ಕತ್ತಲಾಯಿತು ಎಂದು ಏನೋ ಓದಿ ಕಡೆದು ಕಟ್ಟೆ ಹಾಕುವವರಂತೆ ಮನೆ ಸೇರುತ್ತಾಳೆ… ತಿಂದ್ಕೊಂಡು ಬರಬೇಕಂತೆ… ಗರ್ರ್ ರ್ರ್ ರ್ರ್ ರ್ರ್ ರ್ರ್… ಒಟ್ಟಿನಲ್ಲಿ ಆಂಗ್ರಿ ಯಂಗ್ ಗರ್ಲ್. ಯಾತಕ್ಕೋ ಯಾರ ಮೇಲೋ ಸಿಟ್ಟು ಮಾಡಿಕೊಳ್ಳುವುದು ನನ್ನ ಹಕ್ಕು!

ಆಯ್ತು ಇಷ್ಟೆಲ್ಲ ಸುಸ್ತಿರುವಾಗ ತೆಪ್ಪಗೆ ಮನೆಯೊಳಗೆ ಹೋಗಿ ತಿನ್ನಬೇಕು ತಾನೇ? ಆದರೆ ಅದು ಹೇಗಾಗುತ್ತದೆ ನಾನಿಲ್ಲದೇ ಸಂಸಾರ ನಡೆದುಬಿಡುತ್ತದಾ ನೀವೇ ಹೇಳಿ! ಊರ ಉಸಾಬರಿಯೆಲ್ಲ ಬೇಕು ನನಗೆ. ನಾನು ಗಮನಿಸದಿದ್ದರೆ ಮನೆ ಹಾಳಾಗಿ ಹೋಗುತ್ತದೆ ಎನ್ನುವ ಭ್ರಮೆ. ಮನೆಗೆ ಬಂದ ಕೂಡಲೆ ಬದಿಯ ಬಾಗಿಲು ಹಾಕಿದೆಯಾ. ರಾತ್ರಿ ಮಲಗುವಾಗ ಮನೆಯ ಮುಂಬಾಗಿಲು ಹಾಕಿದೆಯಾ, ದೀಪಗಳು ಆರಿಸಿದೆಯಾ, ನಲ್ಲಿಗಳು ಬಂದ್ ಆಗಿದೆಯಾ (ಏನೋ ನೀರು ಸುರಿದು ಹೋಗುವಂತೆ!) ಎಂದು ಖುದ್ದು ನೋಡುವವರೆಗೆ ನೆಮ್ಮದಿ ಇರುತ್ತಿರಲಿಲ್ಲ.

ಅವತ್ತೂ ಹಾಗೆಯೇ… ಸುಸ್ತಾಗಿ ಮನೆಯೊಳಗೆ ಇನ್ನೇನು ಕಾಲಿಡಬೇಕು ಅನ್ನುವಷ್ಟರಲ್ಲಿ, ಸೈಡಿನ ಬಾಗಿಲು ಹಾಕಿದೆಯಾ ಎಂದು ಬಗ್ಗಿ ನೋಡಿದರೆ ಅಷ್ಟಗಲಕ್ಕೂ ಹಾರು ಹೊಡೆದಿದೆ! ನೋಡಿದ್ದೇ ನಖಶಿಖಾಂತ ಉರಿದು ಹೋಯಿತು. ‘ಹಾಳು ಶನಿಗಳು ಹೋಗುವಾಗ ಹೇಳಿ ಬಾಗಿಲು ಹಾಕಿಸಿ ಹೋಗಿ ಎಂದು ಬಾಯಿ ಬಡಿದುಕೊಂಡರೂ ತಮ್ಮ ಕೆಲಸವಾದ ಕೂಡಲೇ ಹೇಳದೇ ತೊಲಗುವುದು ನೋಡು’ ಎಂದು ಬಯ್ದುಕೊಂಡೆ. ನಾನು ಹಸಿದಿರುವಾಗ ಒಂದು ರೀತಿಯಲ್ಲಿ ಶ್! ಸಿನೆಮಾದ ಬ್ಯಾಂಕ್ ಜನಾರ್ಧನ್ ಥರ ಆರಿಸಿ ಆರಿಸಿದ ಪದಗಳಲ್ಲಿ ಒಂದೇ ಸಮನೆ ಬಯ್ಯುವುದು! ಆ ಶನಿಗಳು ಯಾರೆಂದರೆ ನಮ್ಮ ಮನೆಯ ಬಾವಿಯಲ್ಲಿ ನೀರು ಸೇದಲು ಬರುತ್ತಿದ್ದ ಅಕ್ಕಪಕ್ಕದ ಮನೆಯವರು. ಅದೇನಾಗಿತ್ತೆಂದರೆ ಆಗ ಬೆಂಗಳೂರಿನಲ್ಲಿ ನೀರಿಗೆ ಅಸಾಧ್ಯ ಬರ. ದಿನಕ್ಕೆ ಅರ್ಧ ಘಂಟೆ ಸಹಾ ನೀರು ಬರುತ್ತಿರಲಿಲ್ಲ. ಆ ನೀರು ಬರುತ್ತಿದ್ದುದೂ ನಡುರಾತ್ರಿಯಲ್ಲಿ. ಕುಡಿಯಲು ನಾಲ್ಕು ಕೊಡ ನೀರು ತುಂಬಿಟ್ಟುಕೊಳ್ಳುವುದರಲ್ಲಿ ನಲ್ಲಿ ಆಸ್ತಮಾ ಬಂದಂತೆ ಗೊರಗೊರ ಎನ್ನುತ್ತ ನಿಂತು ಹೋಗುತ್ತಿತ್ತು. ಹಾಗಾಗಿ ಉಳಿದ ಕೆಲಸಕ್ಕೆಲ್ಲ ಬಾವಿಯ ನೀರೇ ಗತಿ.

ನಾವಿದ್ದ ಬಡಾವಣೆ ಶಿವನ ಹಳ್ಳಿ ಹೆಸರಿಗೆ ತಕ್ಕಂತೆ ಹಳ್ಳಿಯೇ. ನಯನಾಜೂಕಿಲ್ಲದ ಜನರು ನಾವೆಲ್ಲ. ಒಬ್ಬರ ಮನೆಯಲ್ಲಿ ನೀರಿದ್ದರೆ ಮುಗಿಯಿತು. ಇಡೀ ರಸ್ತೆಯ ಜನರೆಲ್ಲ ಹಕ್ಕಿನಿಂದೆಂಬಂತೆ ಒಬ್ಬರಾದ ನಂತರ ಒಬ್ಬರು ಬಂದು ನೀರು ಸೇದಿಕೊಳ್ಳುವುದೇ ಕೆಲಸ. ಬಾವಿಯ ಪಕ್ಕ ಒಂದು ಬಾಗಿಲು ಇತ್ತು. ಆಗೆಲ್ಲ ಮನೆಯ ಹಿಂಬಾಗಿಲು ಹಾಕುವ ಅಭ್ಯಾಸವೇ ಇಲ್ಲ ನಮಗೆ. ಎತ್ತರದ ಗೋಡೆ ಇದ್ದುದರಿಂದ ಕಳ್ಳ ಬರುವುದಿಲ್ಲ ಎಂದು ನಾವು ತೀರ್ಮಾನಿಸಿ ಆಗಿತ್ತು! ಆದರೆ ಈ ಸೈಡಿನ ಬಾಗಿಲಿನಿಂದ ಯಾರಾದರೂ ಬಂದರೆ, ತೆಗೆದು ಬಿದ್ದಿರುವ ಹಿಂದಿನ ಬಾಗಿಲಿನ ಮೂಲಕ ಆರಾಮವಾಗಿ ಮನೆಯೊಳಕ್ಕೇ ಬಂದುಬಿಡಬಹುದು. ಹಾಗಾಗಿ ನಾವು ಬಾಗಿಲು ತೆರೆದು ‘ವಾಪಸ್ ಹೋಗುವಾಗ ಹೇಳಿ ಹೋಗಿ, ಬಾಗಿಲು ಹಾಕಿಕೊಳ್ಳುತ್ತೇನೆ’ ಎಂದು ಬೇಜಾರಿಲ್ಲದೆ ಹೇಳುತ್ತಿದ್ದೆವು ಮತ್ತು ಅವರೂ ಶಿಸ್ತಾಗಿ ತಲೆ ಆಡಿಸುತ್ತಿದ್ದರು. ಆದರೆ ನೀರು ಸೇದಿದ ನಂತರ ಯಾರೂ ಹೇಳಿ ಹೋಗುತ್ತಿರಲಿಲ್ಲ. ಹಾಗಾಗಿ ಆ ಬಾಗಿಲು ಹಾರು ಹೊಡೆದೇ ಬಿದ್ದಿರುತ್ತದೆ ಮತ್ತು ಇಡೀ ಬೀದಿಯ ಜನ ಒಬ್ಬರಾದ ಮೇಲೆ ಒಬ್ಬರಂತೆ ಬಂದು ಹೋಗುತ್ತಲೇ ಇರುತ್ತಿದ್ದರು. ಬಹುಶಃ ಅವರು ಹೇಳಿದ್ದರೂ ಅಮ್ಮ ಹಾಕುವುದು ಕಷ್ಟವೇ ಇತ್ತು. ಏಕೆಂದರೆ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಹಿಂದಿನ ಬಾಗಿಲು ತೆಗೆಯುವ ತಾಳ್ಮೆ ಯಾರಿಗಿತ್ತು! ಆದರೂ ನನಗೆ ಆ ತೆರೆದಿಟ್ಟ ಬಾಗಿಲು ಕಂಡರೆ ಪಿತ್ತ ನೆತ್ತಿಗೇರುತ್ತಿತ್ತು.

ಹೋಗುವಾಗ ಹೇಳಿ ಹೋಗದ ದರಿದ್ರದವರಿಗೆ ನೀರು ಯಾಕೆ ಕೊಡುತ್ತಿ ಎಂದು ದಿನವೂ ಜಗಳವಾಡಿದರೂ ಅಮ್ಮ ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ. ನೀರು ಇಲ್ಲ ಅಂದರೆ ಮುಂದಿನ ಜನ್ಮದಲ್ಲಿ ಹಲ್ಲಿಯಾಗೋ, ಕೋತಿಯಾಗೋ ಹುಟ್ಟುತ್ತೇವೆ ಎನ್ನುವ ಭಯ ಅವಳಿಗೆ. ನನಗೆ ಇದೊಂದೇ ಜನ್ಮವಾಗಿರುವುದರಿಂದ ಹೆಚ್ಚಿನ ಸಮಸ್ಯೆಯೇನೂ ಇಲ್ಲ. ಆದರೆ ಅಮ್ಮನಿಗೆ ಈ ಜನ್ಮಕ್ಕಿಂತ ಮುಂದಿನ ಜನ್ಮದ ಮೇಲೆ ಗಮನ ಹೆಚ್ಚು. ಈ ಮನುಷ್ಯ ಜನ್ಮ ಹೇಗೂ ಅನುಭವಿಸಿ ಆಗಿರುತ್ತದಲ್ಲ, ಮುಂದಿನ ಜನ್ಮದಲ್ಲಿ vertical ಆಗಿ ಗೋಡೆ ಏರುವ, ಕಟ್ ಆದ ಬಾಲ ಬೆಳೆಸಿಕೊಳ್ಳುವ, ಕೊಂಬೆಯಿಂದ ಕೊಂಬೆಗೆ ಆರಾಮವಾಗಿ ಹಾರುವ, ಬೀದಿ ಬೀದಿಯಲ್ಲಿ ಹೇನು ತೆಗೆದುಕೊಳ್ಳುವ ಸುಖವನ್ನೂ ಅನುಭವಿಸಬೇಕೆನ್ನುವ ಸುಖದ ಪರಿಕಲ್ಪನೆಯಿಲ್ಲದ ಅಮ್ಮನಿಗೆ ಮುಂದಿನ ಜನ್ಮದಲ್ಲೂ ಇದೇ ಮನುಷ್ಯ ಜನ್ಮವೇ ಆಗಬೇಕು! ಹಾಗಾಗಿ ಅದು ದಿನನಿತ್ಯದ ಮುಗಿಯದ ಗೋಳು. ‘ಇವತ್ತೂ ನೀರು ಕೊಟ್ಟಿರಬೇಕು ಅಮ್ಮ, ಹೋಗುವಾಗ ಆ ಕೃತಘ್ನರು ಹೇಳದೇ ಹಾಗೆಯೇ ಹೋಗಿದ್ದಾರೆ’ ಎಂದು ಹಲ್ಲು ಮಸೆಯುತ್ತಾ, ಸೈಡ್ ಬಾಗಿಲಿನತ್ತ ಉರಿಮಾರಿಯ ಮುಖದಲ್ಲಿ ನಡೆದೆ.

ಬಯ್ದುಕೊಳ್ಳುತ್ತಲೇ ಒಳಗೆ ಹೋಗಿ ಚಿಲಕ ಹಾಕಿ, ಮನೆಯ ಒಳ ಹೋಗಲು ತಿರುಗಿದವಳು ಅವಮಾನದಿಂದ ನಿಂತುಬಿಟ್ಟೆ… ಎದುರಲ್ಲಿ ಅಪರಿಚಿತನೊಬ್ಬ ನೀರು ಸೇದಿ ಕೊಡದ ಕುಣಿಕೆ ಬಿಚ್ಚುತ್ತಾ ನಿಂತಿದ್ದ, ಅವಳನ್ನೇ ನೋಡುತ್ತಾ… ನಗುತ್ತಾ!

ಇಡೀ ಹಿತ್ತಲಿನಲ್ಲಿ ನಾವಿಬ್ಬರೇ…

ನನಗೆ ಹಾಳಾದ್ದು ‘ಹಂ ತುಂ ಏಕ್ ಕಮರೇ ಮೆ ಬಂದ್ ಹೋ’ ಹಾಡು ಆ ಘಳಿಗೆಯಲ್ಲಿ ಅದ್ಯಾಕೆ ನೆನಪಾಯ್ತೋ!

ಅವಮಾನದಿಂದ ಕೆಂಪಗಾಗಿ ಅವನತ್ತ ನೋಡಿದರೆ, ಅವನು ಮೀಸೆಯಡಿಯಲ್ಲಿ ನಗುತ್ತಾ ನನ್ನತ್ತಲೇ ನೋಡುತ್ತಿದ್ದ.

‘ಸಾರಿ, ನಂಗೆ ನೀವಿರೋದು ಗೊತ್ತಿರಲಿಲ್ಲ’ ಎಂದು ತೊದಲಿದವಳೇ ಮನೆಯೊಳಕ್ಕೆ ಓಡಿದ್ದೆ.

ರೂಮಿನೊಳಗೆ ನುಗ್ಗಿ ಬ್ಯಾಗ್ ಎಸೆದವಳೇ ಸೋಫಾದ ಮೇಲೆ ಆರಾಮವಾಗಿ ಕುಳಿತಿದ್ದ ಅಮ್ಮನ ಪಕ್ಕ ಕುಳಿತು ಶೂ ಬಿಚ್ಚುತ್ತಾ ‘ಅದ್ಯಾರೇ ಅಮ್ಮ ಆ ಹೊಸಬ’ ಎಂದು ಕೇಳಿದ್ದೆ. ಅಮ್ಮ ಆರಾಮವಾಗಿ ‘ಅವರಾ! ಎದುರು ಮನೆಗೆ ಹೊಸದಾಗಿ ಬಂದಿದ್ದಾರಂತೆ ಕಣೇ ಪಾಪ. ನೆನ್ನೆ ಶಿಫ್ಟ್ ಮಾಡಿದ್ದಾರೆ… ಇವತ್ತು ಒಂದೇ ಒಂದು ಹನಿ ನೀರು ಬಂದಿಲ್ಲ’ ಅಮ್ಮ ರಾಗವಾಗಿ ವರದಿ ಒಪ್ಪಿಸಿದಳು. ಉಳಿದೆಲ್ಲ ಮಾತೂ ಗಾಳಿಯಲ್ಲಿ ಲೀನವಾಗಿ ‘ಎದುರು ಮನೆಗೆ ಬಂದಿದ್ದಾನೆ… ಎದುರು ಮನೆಗೆ ಬಂದಿದ್ದಾನೆ… ಎದುರು ಮನೆಗೆ ಬಂದಿದ್ದಾನೆ!’ ಎನ್ನುವ ಮಾತಷ್ಟೇ ಗೋಳ ಗುಮ್ಮಟದ ಒಳಗಿನಂತೆ ಏಳೇಳು ಸಲ ಎದೆಯೊಳಗೆಲ್ಲ ಪ್ರತಿಧ್ವನಿಸಿತು!

‘ಯಾವ ಮನೆ?’

‘ಎದುರು ಮೇಷ್ಟರ ಮನೆ ಇದೆಯಲ್ಲ… ಅವರ ಚಿಕ್ಕ ಔಟ್‌ಹೌಸ್ ಮನೆಗೆ’

ಓಹ್! ಎದುರು ಮನೆಯಲ್ಲಿದ್ದಾನೆ… ಅಂದರೆ ದಿನವೂ ಎದುರಾಗುತ್ತಾನೆ… ಚಂದಕ್ಕಿದ್ದಾನೆ ಡುಮ್ಮ ಮೀಸೆಯ ಹುಡುಗ…

ಮತ್ತೆ ಏನಾದರೂ ನೆಪ ಹೂಡಿ ಮನೆಯ ಹಿಂಭಾಗಕ್ಕೆ ಹೋಗಿ ಅವನನ್ನು ನೋಡಬೇಕು ಎನ್ನಿಸಿ ಸರಸರನೆ ಯೂನಿಫಾರ್ಮ್ ಬದಲಿಸಿ ಒಗೆಯಲು ಹಾಕಲು ಹೋದರೆ ಖಾಲಿ ಜಾಗ ನನ್ನನ್ನು ಸ್ವಾಗತಿಸಿ ನಿರಾಶೆಯೆನಿಸಿತ್ತು… ಛೇ ನಿನ್ನೆ ಬಂದಿದ್ದಾರೆ. ಮತ್ತಿಷ್ಟು ನೀರು ಬೇಡವಾ? ಸ್ನಾನಕ್ಕೆ ನೀರು? ಕುಡಿಯೋದಿಕ್ಕೆ? ಬಟ್ಟೆ ಒಗೆಯೋದಿಲ್ವಾ? ಪಾತ್ರೆ ತೊಳೆಯೋದಿಕ್ಕೆ? ‘ಸೋಮಾರಿ ನನ್ಮಗ’ ಎಂದು ಬಯ್ದುಕೊಂಡೆ! ಆವರೆಗೆ ‘ಗಂಡು ಹುಡುಗಿಯಂತಿದ್ದ’ ನನಗೆ ಮೊದಲ ಸಲ ನಾನು ‘ಹೆಣ್ಣು ಹುಡುಗಿ’ ಅನ್ನಿಸಿತ್ತು!!

(ಕೃತಿ: ಈ ಪ್ರೀತಿ ಒಂಥರಾ, ಲೇಖಕರು: ಭಾರತಿ ಬಿ.ವಿ., ಪ್ರಕಾಶಕರು: ಸಾವಣ್ಣ ಪ್ರಕಾಶನ , ಬೆಲೆ: 200/-)