ರಾತ್ರಿಯೆಲ್ಲ ನಿದ್ರೆಯಿಲ್ಲದೇ ಹೊರಳಾಡಿದೆ. ಬಳಸಲು ಬಂದ ನಿನ್ನನ್ನು ದೂರ ತಳ್ಳಿದ್ದು ನನ್ನೆದೆಯಲ್ಲಿನ ಜ್ವಾಲಾಮುಖಿಯಲ್ಲಿ ನೀನು ಅಪ್ಪಚ್ಚಿಯಾಗಬಾರದೆಂದು. ಮಿಹಿಕಾ ನಿದ್ರಿಸುವಾಗಲೆಲ್ಲ ನಮ್ಮಿಬರ ಕೈಗಳನ್ನು ತನ್ನ ಮುಖದಮೇಲೆ ಇರಿಸಿ ನಿದ್ರಿಸುತ್ತಿದ್ದಳು. ಅವಳನ್ನು ಆ ಸ್ಥಿತಿಯಲ್ಲಿ ದಿಟ್ಟಿಸಿ ನೋಡಿದಾಗ ಅಳುವೇ ಬಂತು. ಅಂಶುವಿನ ಮಾತು ನೆನಪಿಗೆ ಬಂದು ದುಃಖವೇ ಉಮ್ಮಳಿಸಿತು. ಅವನ ಚರ್ಯೆಗಳೆಲ್ಲದರ ಹಿಂದೆ ಏನೋ ಇರುವ ಸಂಚು ಕಂಡಿತು. ನಿನ್ನ ಮೇಲಿನ ನನ್ನ possessiveness ಅನ್ನು ಅವ ಚನ್ನಾಗಿಯೇ ಉಪಯೋಗಿಸಿಕೊಂಡಿದ್ದ, ನಿನ್ನ ಮೋಸಕ್ಕೆ ನನ್ನದೂ ಮೋಸವೇ ಉತ್ತರವಾಗಬೇಕೆ. ನನ್ನ ಅರಿಯದ ಕಂದಮ್ಮ ನಾಳೆ ತಾನೂ ಹೀಗೆ ಮೋಸದ ಹಾದಿಯಲ್ಲಿ ಹೆಜ್ಜೆಯಿಟ್ಟರೆ ಅನಿಸಿತು.
ನಾರಾಯಣ ಯಾಜಿಯವರ ಹೊಸ ಕಥಾಸಂಕಲನ “ನೈದಿಲೆಯ ಒಡಲು” ಪುಸ್ತಕದಿಂದ ಶೀರ್ಷಿಕೆ ಕತೆ ನಿಮ್ಮ ಓದಿಗೆ

 

ಪತ್ರ ಒಂದು:-

ಹನೀ,
ಈ ಪತ್ರ ನನ್ನ confession ಎಂದು ತಿಳಿಯಬೇಡ. ಆತ್ಮ ವಂಚನೆ ಮಾಡಿಕೊಳ್ಳಲಾರೆದೇ ನಡೆದದ್ದನ್ನು ನಡೆದ ಹಾಗೇ ವಿವರಿಸುತ್ತಿರುವೆ. ನಿನ್ನನ್ನು ಎದುರಿಗೇ ಕುಳಿಸಿಕೊಂಡು ಹೇಳಬೇಕೆಂದುಕೊಂಡೆ. ಆದರೆ ಭಾವದ ತೀವ್ರತೆಯಲ್ಲಿ ನಾನು ಹದ ತಪ್ಪುವೆನೆಂಬ ಅನುಮಾನದಿಂದ ಪತ್ರದ ಮಾಧ್ಯಮವನ್ನು ಆರಿಸಿಕೊಂಡಿರುವೆ.

ಹನೀ,
ನಿನ್ನ ಕಳ್ಳಾಟ ಎಷ್ಟು ದಿನದಿಂದ ನಡೆಯುತ್ತಿತ್ತೋ ಏನೋ. ಆ ದಿನ ನನ್ನ ಕಣ್ಣಿಗೆ ಬಿತ್ತು. ಬಹುಶ ಅಂಶು ನನ್ನೊಟ್ಟಿಗೆ ಇಲ್ಲದೇ ಇದ್ದಿದ್ದರೆ ನಿಮ್ಮಿಬ್ಬರ ಮಾನವನ್ನು ಅದೇ ಹೊತ್ತಿಗೆ ಅದೇ ರಸ್ತೆಯಲ್ಲಿ ನಿಲ್ಲಿಸಿ ನಿವಾಳಿಸಿಬಿಡುತ್ತಿದ್ದನೋ ಏನೋ! ಕಂಪನಿಯ ನಮ್ಮ ಪ್ರಾಜೆಕ್ಟಿನ ಚರ್ಚೆಮಾಡಲೆಂದು ಅಂಶು ಮತ್ತು ನಾನು ನಗರದ ಹೊರವಲಯದ ಕೆಫೆಗೆ ಬಂದು ಮಾತನಾಡುತ್ತಿದ್ದೆವು. ಯಾಕೋ ಇಷ್ಟು ದೂರ ಎಂದಿದ್ದಕ್ಕೆ ತಣ್ಣಗೆ ಕೂತು ಇಲ್ಲಿ ಎಲ್ಲ ಚರ್ಚಿಸಬಹುದು ಎಂದು ಅವ ಎಂದಿದ್ದ.

ಬಾಲ್ಕನಿಯಲ್ಲಿ ಕುಳಿತು ಚರ್ಚಿಸುತ್ತಾ ಕಾಫಿ ಹೀರುತ್ತಿರುವಾಗ ಅಂಶುವಿನ ದೃಷ್ಟಿ ಪದೇ ಪದೇ ಆ ಮನೆಯತ್ತ ಇರುತ್ತಿತ್ತು. ಕುತೂಹಲದಿಂದ ತಿರುಗಿ ನೋಡುವಷ್ಟರೊತ್ತಿನಲ್ಲೇ ಯಾವದನ್ನು ನೋಡಬಾರದಾಗಿತ್ತೋ ಅದನ್ನೇ ನೋಡಿಬಿಟ್ಟೆ. ಅದೇನು ನೀನು ಆಕೆಯ ಕೈ ಹಿಡಿದು ತಲೆ ನೇವರಿಸುವದು, ಮನೆಯ ಒಳಗಿನ ನಾಟಕ ಸಾಕಾಗಲಿಲ್ಲವೆಂದು ಹೊರಗೆ ಬಂದು… ಛೇ ಊಹಿಸಲೂ ಆಗದಾಗಿತ್ತು ಅದು. ಕೆಳಗೆ ಬಂದು ನಿಮ್ಮಿಬ್ಬರಿಗೂ ಮಂಗಳಾರತಿ ಮಾಡಬೇಕೆನ್ನುವಷ್ಟರಲ್ಲಿ ನೀನು ಕಾರಿನಲ್ಲಿ ಭರ್ರನೇ ಹೋಗಿಬಿಟ್ಟೆ. ಆಕೆಯೂ ಅಟೋಹಿಡಿದು ನಿನ್ನ ವಿರುದ್ಧದಿಕ್ಕಿಗೆ ತಿರುಗಿಬಿಟ್ಟಳು. ನಿನ್ನನ್ನು ಎಷ್ಟೊಂದು ಆಳವಾಗಿ ಪ್ರೀತಿಸುತ್ತಿದ್ದೇನೆ ಎನ್ನುವದು ನಿನಗೇ ಗೊತ್ತಿದೆ. ನಿನ್ನದೊಂದು ನೋಬಲ್ ವ್ಯಕ್ತಿತ್ವ ಎಂದು ತಿಳಿದವಳಿಗೆ ನೀನೂ ಓರ್ವ ವಂಚಕ ಎನ್ನುವದು ಆಗ ತಿಳಿಯಿತು. ಬಿಲ್ ಕೊಡಲು ಬಂದ ವ್ಹೇಟರನ ಹತ್ತಿರ ಆ ಮನೆಯವರು ನಿನಗೆ ಗೊತ್ತಾ ಎಂದು ಅಂಶು ಕೇಳಿದರೆ “ಅಯ್ಯೋ, ನಮಗ್ಯಾಕೇ ಸಾರ್” ಎಂದು ಮುಸಿಮುಸಿ ನಗುತ್ತಿರುವನನ್ನು ನೋಡಿ ನಾನು ಕಂಪಿಸುತ್ತಿದ್ದೆ. ಆಗಲೇ ನಿನಗೆ ಫೋನ್ ಮಾಡಬೇಕು ಎನ್ನುವಷ್ಟರಲ್ಲಿ ಅಂಶು ನನ್ನ ಫೋನ್ ನನ್ನು ಕಸಿದು ಎಲ್ಲ ಅರ್ಥವಾದವನಂತೆ ‘ಕೂಲ್ ಬೇಬಿ ಕೂಲ್’ ಎಂದು ಸಮಾಧಾನಿಸುತ್ತಿದ್ದ. ಮನೆಗೆ ಬಂದು ನಿನ್ನನ್ನು ವಿಚಾರಿಸಿಕೊಳ್ಳಬೇಕೆನ್ನುವಳಿಗೆ ಅವ ಈಗ ಹೋಗುವದು ಬೇಡ ಎಂದ. ಯಾಕೆ ಎಂದು ಕೇಳಿದಾಗ ಸುಮ್ಮನಿರು ಎಂದು ತನ್ನ ಕಾರಿನಲ್ಲಿ ಅವನ ಮನೆಗೇ ನನ್ನನ್ನು ಕರೆದುಕೊಂಡು ಬಂದ. “ಆಕೆಯಿಲ್ಲ ನಿಮಗೆ ಸ್ವಲ್ಪ ರಿಲಾಕ್ಸ್ ಆಗಲಿ ಎಂದು ಇಲ್ಲಿಗೆ ಕರೆದುತಂದೆ” ಎಂದವನಿಗೆ ನಾನು ಈಗಲೇ ಮನೆಗೆ ಹೋಗಬೇಕು ಎಂದೆ. ಕೇಳಲಿಲ್ಲ, “ಈಗ ಹೋಗಿ ನೀವು ಜಗಳ ಕಾಯುತ್ತೀರಿ, ನಿಮ್ಮ ಮಾತಿಗೆ ಅವ ಏನೇನೋ ಉತ್ತರಿಸುತ್ತಾನೆ, ಸಿಟ್ಟು ಸೆಡವು ಮುಂದುವರಿದು ಡೈವೋರ್ಸ್ …” ಎಂದವ ಮಾತನ್ನು ಸ್ವಲ್ಪ ನಿಲ್ಲಿಸಿ ನನ್ನ ಮುಖ ನೋಡಿದ.

‘ಇಂತವನೊಟ್ಟಿಗೆ ಇನ್ನೆಂತ ಬದುಕು ಮುಗಿದೇ ಹೋಯಿತು’ ಎಂದವಳಿಗೆ “ಮದುವೆಯಾಗಿ ಇಷ್ಟುದಿನವಾದ ಮೇಲೆ ಬದುಕು ನಮಗಲ್ಲ. ಮಕ್ಕಳಿಗಾಗಿ, ಮಿಹಿಕಾಳ ಕುರಿತು ಆಲೋಚನೆ ಮಾಡಿ, ಆಕೆಯ ಬದುಕು ಬೆಳಗಲು ನೀವೊಂದಿಷ್ಟು ಸಹನೆ ತಂದುಕೊಳ್ಳಬೇಕು. ಅಷ್ಟಕ್ಕೂ ಇದೇನು ದೊಡ್ಡ ವಿಷಯ ಅಂತ, ಈಗೆಲ್ಲಾ ಇದು ಕಾಮನ್” ಎಂದವನ ಮಾತು ಆಲೋಚಿಸುವಂತೆ ಮಾಡಿತು. ಹಾಗೇ ಕಣ್ಣುಕತ್ತಲೆ ಬಂದಂತಾಯಿತು. ಎಚ್ಚರಾದಾಗ ತಲೆ ನೇವರಿಸುತ್ತಿದ್ದ. ತಡೆಯಲಾರದೇ ಭೋರೆಂದು ಅತ್ತುಬಿಟ್ಟೆ. ಮನೆಗೆ ಹೋಗುತ್ತೇನೆಂದು ಹಠಹಿಡಿದವಳಿಗೆ “ಸರಿ, ಹೋಗಬಹುದು ಈ ವಿಷಯ ಅವರಲ್ಲಿ ಎತ್ತುವದಿಲ್ಲ ಎಂದು ಭಾಷೆ ಕೊಡಿ, ನಿಮ್ಮ ಮಗಳ ಸಲುವಾಗಿಯಾದರೂ” ಎಂದವನಿಗೆ “ನಾನೂ ಮನುಷ್ಯಳು ಕಣ್ರೀ, ಮರೆಯಲೆಂದರೆ ಹ್ಯಾಗ್ರೀ” ಎಂದು ಕೂಗಿದ್ದೆ. “ನನಗೆ ಗೊತ್ತು, ನಿಮ್ಮ ಈ ಆವೇಶ ಕಡಿಮೆಯಾಗ ಬೇಕಾದರೆ ಒಂದು ಮಾರ್ಗವಿದೆ” ಎಂದವ ನನ್ನ ಮುಖನೋಡಿ ಮೌನವಾಗಿದ್ದವನಿಗೆ ಏನು ಎಂತ ಕೇಳಿದರೆ “ಆ ತಪ್ಪನ್ನು ನೀವೂ ಮಾಡಿದರೆ….” ಎಂದು ನಿಲ್ಲಿಸಿದ. ಹೌದು ಅನಿಸಿತು. ಹೀಗೆ ಹೋದರೆ ನಿನ್ನೊಟ್ಟಿಗೆ ಜಗಳ ಖಾತ್ರಿ ಎಂದುಕೊಂಡವಳನ್ನು ಅರ್ಥಮಾಡಿಕೊಂಡವನಂತೆ ಸಂಪೂರ್ಣವಾಗಿ ಆವರಿಸಿಕೊಂಡ.

ಹನೀ,
ನಿನ್ನ ಮೇಲಿನ ಸೇಡು ಮತ್ತು ಸಿಟ್ಟು ಎಷ್ಟಿತ್ತೆಂದರೆ ಅವನನ್ನು ನಾನೇ ಮತ್ತೆ ಮತ್ತೆ ಎಳೆದುಕೊಂಡೆ. ಸುಖ ಸಿಕ್ಕಿತಾ ಎಂದು ಕೇಳಬೇಡ, ಆ ಕ್ಷಣದಲ್ಲಿ ನನ್ನ ತಲೆಯಲ್ಲಿದ್ದಿದ್ದು ನೀನೇ ಆಗಿದ್ದೆ, ನಾನು ಕೂಗಿಕೊಂಡದ್ದು ನಿನ್ನ ಮೇಲಿನ ಸಿಟ್ಟಿನಲ್ಲಿಯೇ ಹೊರತು ಮತ್ತೇನು ಅನುಭವಿಸಲಿಲ್ಲ. ಎಲ್ಲ ಮುಗಿದ ಮೇಲೆ ಅಂಶು ಮನೆಯಲ್ಲಿ ವಿಷಯ ತಗೆಯದೇ ಮಾಮೂಲಿನಂತಿರಬೇಕು ಎಂದು ಭಾಷೆ ತೆಗೆದುಕೊಂಡ. ಮನೆಯೊಳಗೆ ನೀನು ನನಗೋಸ್ಕರ ಅಡಿಗೆಯನ್ನು ಮಾಡಿ ಕಾಯುತ್ತಿದ್ದೆ. “ಲೇಟಾಯಿತಲ್ಲ ಹೇಗೆ ಬಂದೆ” ಎಂದು ಕೇಳಿದ್ದಕ್ಕೆ ಯಾಕೋ ಅಂಶುವಿನ ಹೆಸರು ಹೇಳಲು ಸಾಧ್ಯವಾಗಿರಲಿಲ್ಲ. ಕಂಪನಿಯ ಕ್ಯಾಬ್ ನಲ್ಲಿ ಎಂದೆ. ಸುಮ್ಮನಿರುವ ನಿನ್ನನ್ನು ನೋಡಿ ಎಷ್ಟು ಚನ್ನಾಗಿ ನಾಟಕವಾಡುತ್ತಿರುವೆ ಎನಿಸಿತು. ನಾನೂ ನಿನ್ನೊಟ್ಟಿಗೆ ನಾಟಕವಾಡಬೇಕು ಎಂದುಕೊಂಡೆ. ರಾತ್ರಿಯಿಡೀ ನಿದ್ರೆ ಬರದೇ ಅಂಶು ಮತ್ತು ನಿನ್ನ ಕುರಿತು ಹೊರಳಾಡುತ್ತಿರುವಳಿಗೆ ನಿದ್ದೆ ಬರುತ್ತಿಲ್ಲವಾ ಏನಾಯಿತು ರಮೀ ಎಂದು ನಿನ್ನ ತೆಕ್ಕೆಗೆ ತೆಗೆದುಕೊಂಡರೆ ನಾನು ಕೊರಡಿನಂತೆ ಬಿದ್ದುಕೊಂಡಿದ್ದೆ. ನಿನ್ನ ಅಭಿನಯ ಸಾಮರ್ಥ್ಯಕ್ಕೆ ಮನಸ್ಸಿನಲ್ಲಿಯೇ ಭೇಷ್ ಎಂದೆ.

ಹನೀ,
ನನ್ನ ನಿನ್ನ ನಾಟಕ ಜಾಸ್ತಿಯಾದಷ್ಟು ನೀನು ನನ್ನೆದೆಯೊಳಗಿಂದ ಮರೆಯಾಗುತ್ತಿಲ್ಲ. ಇಷ್ಟು ಗಾಢವಾಗಿ ನನ್ನೆದೆಯೊಳಗೆ ನೀನು ಮಿಳಿತವಾಗಿದ್ದಿಯಾ ಎಂದು ನಾನು ಅಂದುಕೊಂಡಿರಲಿಲ್ಲ. ಈ ಕೆಲ ದಿನಗಳಿಂದ ನಿನ್ನ ಕುರಿತಾಗಿ ವಿಲೋಮ ಭಾವಗಳೇ ನನ್ನ ಮನಸ್ಸಿನಲ್ಲಿ ತುಂಬಿಕೊಂಡಿವೆ. ಇಂತಹ ಹೊತ್ತಿನಲ್ಲೆಲ್ಲಾ ನಿನ್ನನ್ನು ಬಿಟ್ಟೇ ಬದುಕಬೇಕೆಂದು ಆಲೋಚಿಸಿದ್ದೆ. ಹೊಟ್ಟೆ ಪಾಡಿಗಾಗಿ ನಿನ್ನೊಟ್ಟಿಗೆ ಬದುಕಬೇಕಾದ ಅನಿವಾರ್ಯತೆ ನನಗೇನೂ ಇಲ್ಲ. ನಾನು ನಮ್ಮ ಮಿಹಿಕಾಳನ್ನು ನೀನಲ್ಲದೆಯೂ ಸಾಕಬಲ್ಲೆ. ಆದರೆ ಮಿಹಿಕಾ ನಿನ್ನನ್ನು ಎಷ್ಟು ಹಚ್ಚಿಕೊಂಡಿದ್ದಾಳೆ ಎನ್ನುವದನ್ನು ಕಂಡಾಗ ಈ ಆಲೋಚನೆಯನ್ನು ದೂರ ಮಾಡಿದೆ. ಅದೂ ಅಲ್ಲದೇ ನಿನ್ನ ಮತ್ತು ಆಕೆಯ ಪ್ರೀತಿಯಲ್ಲಿ ನಾನು ವಂಚನೆಯನ್ನು ಕಂಡವಳಲ್ಲ. ಈ ಹಂತದಲ್ಲಿ ನಿನ್ನನ್ನು ಏಕೆ ಬಿಟ್ಟೆ ಎಂದು ಆಕೆ ಕೇಳಿದರೆ ಏನೆಂದು ಹೇಳಲಿ ಹೇಳು. ನಿನ್ನ ಈ ಘನಂದಾರೀ ಕೆಲಸವನ್ನು ಆಕೆಗೆ ತಿಳಿಸಿ ಹೇಳಬೇಕೆ, ಹಾಗೊಂದುವೇಳೆ ಹೇಳಿದೆ ಎಂತಲೇ ಇಟ್ಟುಕೊಳ್ಳೋಣ, ಆಕೆಯ ಮೃದು ಮನಸ್ಸಿಗೆ ಎಷ್ಟೊಂದು ಆಘಾತವಾಗಬಹುದೆಂದು ಆಲೋಚಿಸಬಲ್ಲೆಯಾ. ನಿನ್ನೊಡನೆ ಆಕೆಯನ್ನು ಮಾತಾಡಲು ಬಿಡಬಾರದು ಎಂದು ಎಷ್ಟೋ ಸಲ ಅಂದುಕೊಂಡಿದ್ದೆ. ನೀನು ಆಫೀಸಿನಿಂದ ಬರುವಾಗಲೆಲ್ಲಾ ಇತ್ತೀಚೆಗೆ ಉದ್ದೇಶಪೂರ್ವಕವಾಗಿಯೇ ಅವಳನ್ನು ನಾನು ಆಡಲು ಕಳುಹಿಸುತ್ತಿದ್ದುದ್ದು. ಬೆಳಿಗ್ಗೆಯೂ ಅಷ್ಟೇ, ಕೆಲಸಕ್ಕೆ ಹೋಗುವಾಗ ನಿನಗೆ ಆಕೆಯಹತ್ತಿರ ಬಾಯ್, ಟಾಟಾ ಎನ್ನದೇ ಹೋಗಲು ಸಾಧ್ಯವಾಗುವದಿಲ್ಲ ಎನ್ನುವದು ಗೊತ್ತಿದ್ದೂ ನಾನು ಆಕೆ ಏಳದಂತೆ ತಡೆದಿದ್ದೆ. ಆದರೆ ಏನು ಮಾಡಲಿ ಹೇಳು, ಮಿಹಿಕಾ ಸಹ ನಿನ್ನನ್ನು ನೋಡದೇ ಸ್ಕೂಲಿಗೆ ಹೋಗಲಾರಳು.

ಅದೊಂದು ದಿವಸ ನಿನ್ನನ್ನು ನೋಡದೇ ಅವಳು ಸ್ಕೂಲಿಗೆ ಹೋದವಳು ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ಗಾಯ ಮಾಡಿಕೊಂಡಾಗ ನೀನು ಗಾಬರಿಯಾಗಿ ಓಡಿಬಂದದ್ದು ರಾತ್ರಿಯಿಡೀ ಆಕೆಯನ್ನು ತಬ್ಬಿ ಹಿಡಿದುಕೊಂಡು ಕಣ್ಣೀರು ಸುರಿಸಿದ್ದು ವಂಚನೆಯಿಂದಲ್ಲ, ಹೃದಯಾಂತರಾಳದ ಪ್ರೀತಿಯಿಂದ ಎನ್ನುವದನ್ನು ಬಲ್ಲೆ. ಆಕೆಯೂ ‘ಪಪ್ಪಾ ನೀನ್ಯಾಕೆ ಇಂದು ನನಗೆ ಟಾಟಾ ಮಾಡದೇ ಹೋದೆ? ಅದಕ್ಕೆ ಹೀಗಾಯಿತು’ ಎಂದು ನಿನ್ನನ್ನು ತಬ್ಬಿಕೊಂಡಾಗ ನನ್ನ ಕಣ್ಣಿನಲ್ಲೂ ನೀರು ಜಿನುಗಿದ್ದು ಸತ್ಯ. ಎಷ್ಟೆಂದರೂ ಹೆಣ್ಣಿಗೇ ರಾಜಿಯಾಗಿ ಜೀವಿಸಬೇಕಾದ ಅನಿವಾರ್ಯತೆ ಇದೆಯಲ್ಲ. ಅಂದೇ ನಿನಗೆ ಡೈವೋರ್ಸ್ ಕೊಡುವ ಆಲೋಚನೆಯನ್ನು ಕೈಬಿಟ್ಟೆ.

ಹನೀ,
ಒಮ್ಮೆ ನಮ್ಮ ಬದುಕು ಪ್ರಾರಂಭವಾದ ಘಳಿಗೆಯನ್ನು ತೆರೆದು ನೋಡು. ಆಕಸ್ಮಿಕವಾಗಿ ಏನೂ ನಾನು ನಿನಗೆ ಸಿಕ್ಕವಳಲ್ಲ. ಹಾಗೆಂತ ನನ್ನನ್ನು ಒಲಿಸಿಕೊಳ್ಳಲು ನೀನು ನನ್ನ ಹಿಂದೆ ಸುತ್ತುತ್ತಾ ರಾಶೀ ರಾಶೀ ಪತ್ರಗಳನ್ನು ಬರೆದದ್ದಂತೂ ಅಲ್ಲವೇ ಅಲ್ಲ. ಈ ಮಹಾನಗರದ ಯಾವುದೋ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಉದ್ಯೋಗದ ನಿಮಿತ್ತ ತಿರುಗಾಡಬೇಕಾದ ನಾನು ವೀಕೆಂಡ್ ನಲ್ಲಿ ಕೆಲಸದ ಒತ್ತಡವನ್ನು ಕಳೆಯಲು ಬಯಸುತ್ತಿದ್ದ ತಾಣ ಎಂದೋ ಒಂದು ಕಾಲದಲ್ಲಿ ನಗರದ ಅಂಚಿನಲ್ಲಿದ್ದು ಇದೀಗ ನಗರೀಕರಣದ ಹೊಡೆತಕ್ಕೆ ಮುಖ್ಯಭಾಗದಲ್ಲಿ ಹರಡಿಕೊಂಡಿರುವ ಸ್ಲಂ ಗಳಲ್ಲಿ. ಕೊಳಚೆನೀರಿನಲ್ಲಿಯೇ ಆಟವಾಡುತ್ತಾ ಅದೇ ನೀರನ್ನು ಬಟ್ಟೆಯಿಂದ ಸೋಸಿ ಕುಡಿಯುತ್ತಿರುವ ಪುಟ್ಟ ಪುಟ್ಟ ಮಕ್ಕಳನ್ನು ನೋಡಿದ ನನಗೆ ಅವರ ಕುರಿತು ಏನಾದರೂ ಮಾಡಬೇಕೆನ್ನುವ ಬಯಕೆ ಹುಟ್ಟಿತ್ತು. ನಾನೇನು ಸಿರಿವಂತರ ಮನೆಯಲ್ಲಿ ಹುಟ್ಟಿದವಳಲ್ಲ. ಬಯಲು ಸೀಮೆಯ ನನ್ನೂರಿನಲ್ಲಿ ಇವತ್ತಿಗೂ ಹೆಣ್ಣುಮಕ್ಕಳು ದೇಹಬಾಧೆಗೆ ಬಯಲನ್ನೇ ಆಶ್ರಯಿಸಿರುವದನ್ನು ನೋಡಿದವಳು. ನನ್ನದೂ ಅದೇ ಸ್ಥಿತಿಯಾಗಿತ್ತೆನ್ನು. ಮನೆಯೊಳಗೆ ಹೇಲುವ ಕೋಣೆ ಎನ್ನುವದೇ ಅಸಹ್ಯವೆನ್ನುವ ಹಿರಿಯರ ನಡುವೆ ನಮ್ಮದೆನ್ನುವ ಧ್ವನಿಯೇ ಅಡಗಿಹೋಗಿತ್ತು.

ಸರಕಾರದ ಸಬ್ಸಿಡಿಯ ಆಸೆಗಾಗಿ ಅಪ್ಪ ಮತ್ತು ನನ್ನ ನೆರೆಯವರೆಲ್ಲ ಅಂತಹ ಒಂದು ಶೌಚಾಲಯವನ್ನು ಕಟ್ಟಿಕೊಳ್ಳಲು ಮನಸ್ಸು ಮಾಡಿದಾಗ ಅಮ್ಮನ ಮಡಿಲಲ್ಲಿ ನಾನು ನೆಮ್ಮದಿಯಲ್ಲಿ ಮುಖವನ್ನು ಹುದುಗಿಸಿದ್ದೆ. ಮುಂದೆ ಮಂತ್ರಿಗಳೋ ಎಮ್ಮೆಲ್ಲೆಗಳೋ ಬಂದು ಎಲ್ಲರ ಮನೆಗಳಲ್ಲಿ ಇಂತಹ ಸಾಲು ಸಾಲು ಶೌಚಾಲಯಗಳನ್ನ ಉದ್ಘಾಟಿಸಿ ನಮ್ಮಂತಹ ಪುಟ್ಟ ಹುಡುಗಿಯರ ಕಡೆ ದಿಟ್ಟಿಸಿ ತಮ್ಮ ಸರಕಾರದ ಸಾಧನೆ ಇವು ಎಂದು ಭಾಷಣವನ್ನು ಬಿಗಿದದ್ದನ್ನು ಬೆರಗಿನಿಂದ ನೋಡಿದ್ದೆವು. ನಮ್ಮೂರ ಪಡ್ಡೆ ಹೈಕಳು ಇನ್ನು ನಮಗೆ ಚಾನ್ಸ್ ಇಲ್ಲವಲ್ಲೋ ಎಂಬ ಸಂಭಾಷಣೆಯ ಅರ್ಥಗೊತ್ತಾಗದೇ ಇದ್ದರೂ ಯಾಕೋ ‘ಥೂ ಇವರಾ’ ಎಂದು ಮನಸ್ಸಿನಲ್ಲಿಯೇ ಉಗಿದಿದ್ದೆವು. ಮಾರನೆಯ ದಿನ ನಾವೆಲ್ಲಾ ಮುಂಜಾನೆ ಎದ್ದು ಇನ್ನೇನೂ ಮನೆಯಂಚಿನ ಆ ಕೋಣೆಗೇ (!!!!) ಹೋಗಬೇಕೆಂದರೆ ಅಲ್ಲಿ ಒಂದು ದೊಡ್ಡ ಬೀಗ ಹಾಕಿತ್ತು. ನೋಡಿದರೆ ನನ್ನೂರಿನ ಎಲ್ಲರ ಮನೆಯಲ್ಲಿಯೂ ಅದೇ ಅವಸ್ಥೆ. ಅಮ್ಮನಲ್ಲಿ ಕೇಳಿದರೆ ನನ್ನನ್ನು ತಬ್ಬಿಕೊಂಡು ಆಕೆ ಒಂದು ನಿಟ್ಟುಸಿರು ಬಿಟ್ಟಿದ್ದಳು. ಅಜ್ಜಿಯರಂತೂ ‘ನಾವೆಲ್ಲಾ ಇಷ್ಟು ದಿನ ಹೀಗೇ ಬದುಕಿಲ್ಲವಾ, ಮನೆ ಪಾಯಖಾನೆ ಆದರೆ ಶಿವ ಹ್ಯಾಗೆ ಮೆಚ್ಯಾನು, ನಮ್ಮ ಕಾಲಕ್ಕೆ ಕಾಲ ಕೆಡುವದು ಬ್ಯಾಡ’ ಎಂದು ಬಿಡುವದೇ.

ಆ ಕೋಣೆಗಳೆಲ್ಲ ಮನೆಗೊಂದು ಉಗ್ರಾಣವಾಗಿ ಪರಿವರ್ತಿತವಾಗಿಬಿಟ್ಟಿತ್ತು. ಅಮ್ಮನ ಮೂಕ ಪ್ರೋತ್ಸಾಹದಲ್ಲಿ ಎಂಜಿನಿಯರ್ ಕಲಿಯಲು ಈ ಊರಿಗೆ ಬಂದು ಓದಿನಲ್ಲಿ ಒಳ್ಳೆಯ ಮಾರ್ಕ್ಸ್ ತೆಗೆಯುತ್ತಿರುವಾಗಲೇ ಅಮ್ಮ ಭೇದಿಯಿಂದ ನನ್ನನ್ನು ಬಿಟ್ಟು ಹೋಗಿ ಬಿಟ್ಟಿದ್ದಳು. ಮನೆಯವರೆಲ್ಲರ ಪಾಲಿಗೆ ಶಿವನ ಪಾದ ಸೇರಿದ ಅಮ್ಮ ನನ್ನ ಪಾಲಿಗೆ ಇಲ್ಲವಾಗಿಬಿಟ್ಟಳು. ಮತ್ತೆ ಊರಿಗೆ ಹೋಗಬೇಕೆನ್ನುವ ಮನಸ್ಸೇ ಆಗಿರಲಿಲ್ಲ. ಹಾಗಂತ ಅಪ್ಪನನ್ನು ನಾನು ತಿರಸ್ಕರಿಸಲೂ ಇಲ್ಲ. ಇವತ್ತಿಗೂ ಆ ಮುಗ್ಧ ಜೀವ ನನ್ನನ್ನು ನೋಡಲು ‘ಮಗಾ’ ಎಂದು ಬಂದಾಗ ನಾನು ಸಹಾ ಮಿಹಿಕಾಳೇ ಆಗಿಬಿಡುತ್ತೇನೆ. ಊರ ಸುದ್ದಿಯನ್ನೆಲ್ಲಾ ಕೇಳಿ ನನ್ನೊಟ್ಟಿಗೇ ಇರು ಎಂದರೆ ತನ್ನ ಬೇಸಾಯದ ಬದುಕಿನ ವರಾತ ತೆಗೆದು ಹಿಂತಿರುಗುವ ಅವನನ್ನು ನೋಡಿ ಸಂಕಟವಾಗಿ ಅತ್ತುಬಿಡುತ್ತೇನೆ. ಹಾಗಾಗಿಯೇ ಈ ಸ್ಲಂಗಳಲ್ಲಿ ನನ್ನ ಬಾಲ್ಯವನ್ನು ಹುಡುಕಲು ಪ್ರಯತ್ನಿಸುತ್ತಿದ್ದೆ ಅನಿಸುತ್ತಿದೆ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಬಾಲ್ಕನಿಯಲ್ಲಿ ಕುಳಿತು ಚರ್ಚಿಸುತ್ತಾ ಕಾಫಿ ಹೀರುತ್ತಿರುವಾಗ ಅಂಶುವಿನ ದೃಷ್ಟಿ ಪದೇ ಪದೇ ಆ ಮನೆಯತ್ತ ಇರುತ್ತಿತ್ತು. ಕುತೂಹಲದಿಂದ ತಿರುಗಿ ನೋಡುವಷ್ಟರೊತ್ತಿನಲ್ಲೇ ಯಾವದನ್ನು ನೋಡಬಾರದಾಗಿತ್ತೋ ಅದನ್ನೇ ನೋಡಿಬಿಟ್ಟೆ. ಅದೇನು ನೀನು ಆಕೆಯ ಕೈ ಹಿಡಿದು ತಲೆ ನೇವರಿಸುವದು, ಮನೆಯ ಒಳಗಿನ ನಾಟಕ ಸಾಕಾಗಲಿಲ್ಲವೆಂದು ಹೊರಗೆ ಬಂದು… ಛೇ ಊಹಿಸಲೂ ಆಗದಾಗಿತ್ತು ಅದು.

ನನ್ನ ಅನೇಕ ಸಹೋದ್ಯೋಗಿಗಳಲ್ಲಿ ಇವರಿಗೆಲ್ಲಾ ಏನಾದರೂ ಮಾಡೋಣ ಎಂದು ಕೇಳಿದರೆ ಅವರೆಲ್ಲಾ ವೀಕೆಂಡು ಇರುವದು ಮೋಜು ಮಸ್ತಿಗೆ ಎಂದು ತಿಳಿದವರು. ನಾರ್ತಿಗಳದ್ದಂತೂ ಬೇರೆಯೇ ಲೋಕ. ಇಂತಹ ಹೊತ್ತಿನಲ್ಲಿಯೇ ನನಗೆ ಸಹಕಾರಿಯಾಗಿ ಬಂದವ ಅಂಶು. ಕಂಪನಿಯಲ್ಲಿ ನಾವಿಬ್ಬರೂ ಒಂದು ಪ್ರಾಜೆಕ್ಟನ್ನು ಒಟ್ಟಿಗೇ ಮಾಡುತ್ತಿದ್ದೆವು. ಏನೇ ಇರಲಿ ನಾವಾದರೂ ಏನನ್ನಾದರೂ ಮಾಡೋಣ ಎಂದು ಅಲ್ಲೆಲ್ಲಾ ಬಂದರೆ ಅಲ್ಲಿನವರಿಗೂ ಬದಲಾವಣೆಯ ಅವಶ್ಯವಿಲ್ಲವಾಗಿತ್ತು. ಆದರೂ ನಮ್ಮ ಪ್ರಾಜೆಕ್ಟ್ ಒಂದು ಯಶಸ್ಸಾಗಿ ಕಂಪನಿಯಿಂದ ಒಂದಿಷ್ಟು ಹಣ ಬಂದಾಗ ಅದೇ ರೇಲ್ವೆ ಹಳಿಯಿಂದ ಅನತಿ ದೂರದಲ್ಲಿ ಶೌಚಾಲಯ ಕಟ್ಟಿಸಲು ಬಯಸಿದಾಗ ಸಿಂಬಳತುಂಬಿದ ಇದೇ ಹೈಕಳು, ಅವರ ಅಮ್ಮಂದಿರು ಸಂತೋಷ ಪಟ್ಟಿದ್ದಂತೂ ಸತ್ಯ. ನಗರ ಸಭೆಯವರೋ ರೇಲ್ವೆ ಇಲಾಖೆಯವರೋ ಇದು ಅತಿಕ್ರಮಣವೆಂದು ಅದನ್ನು ಕೆಡವಲು ಬಂದಾಗ ಇದೇ ಹೆಣ್ಣುಮಕ್ಕಳೆಲ್ಲಾ ಸೇರಿ ಸ್ಟ್ರೈಕ್ ಮಾಡಿ ಅದನ್ನು ಉಳಿಸಿಕೊಂಡ ದಿನ ನನಗೆ ಮತ್ತು ಅಂಶುಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ.

ಆ ಶೌಚಾಲಯವನ್ನು ಶುಚಿಯಾಗಿಡಬೇಕೆಂದು ಅವರಲ್ಲಿ ಕರಾರು ಹಾಕಿದಾಗ ಅವರೆಲ್ಲಾ ಒಪ್ಪಿಕೊಂಡರೂ ವಾರಕಳೆಯುವಷ್ಟರಲ್ಲಿ ಬಂದು ನೋಡಿದರೆ ಗಬ್ಬೆದ್ದು ಹೋಗಿತ್ತು. ಅಂಶು ಮುಖ ಸಿಂಡರಿಸಿ ಇಂಗ್ಲೀಷಿನಲ್ಲಿ ಏನೋ ಗೊಣಗುತ್ತಿದ್ದ. ನನಗಂತೂ ಎಲ್ಲಿಂದ ರೋಷ ಬಂತೋ ತಪ್ಪು ಮಾಡಿದವರಂತೆ ತಲೆ ತಗ್ಗಿಸಿ ನಿಂತ ಆ ಹೆಣ್ಣುಮಕ್ಕಳ ಮನೆಯಿಂದ ಬಕೆಟನ್ನು ಇಸಿದುಕೊಂಡವಳೇ ಒಂದು ಕಸಬರಿಗೆಯನ್ನು ಸೆಳೆದು ಆ ಸಂಡಾಸನ್ನು ತೊಳೆಯಲು ಪ್ರಾರಂಭಿಸಿದೆ. ಮುಖಕ್ಕೆ ಕರ್ಚೀಪನ್ನು ಕಟ್ಟಿಕೊಂಡಿರಲಿಲ್ಲ. ಅಂಶುವೂ ಓಡೋಡಿ ನನ್ನ ಜೊತೆ ಬಂದಿದ್ದ. ನನ್ನ ಆವೇಶವನ್ನು ನೋಡಿದವರೇ, ಒಂದು ಕ್ಷಣ ಅಲ್ಲಿನ ನಿವಾಸಿಗಳೆಲ್ಲಾ ದಂಗಾಗಿ ಹೋಗಿದ್ದರು. ಎಲ್ಲ ಮುಗಿಸಿ ಮೌನವಾಗಿ ನಾವಿಬ್ಬರೂ ಅಲ್ಲಿಂದ ಹೊರಟರೆ ಇಡೀ ಸ್ಲಮ್ಮೇ ದಂಗು ಬಡಿದಂತೆ ನಿಂತಿತ್ತು. ನಿನಗೆ ಗೊತ್ತಾ ಹನೀ, ಸ್ಲಂ ಎಂದರೆ ಎಂತೆಂತಹ ರೌಡಿಗಳನ್ನು, ಸಮಾಜಘಾತುಕರನ್ನು ಹುದುಗಿಸಿಕೊಟ್ಟಂತಹ ಲೋಕವೆನ್ನುವದು. ಅವರೆಲ್ಲ ನನ್ನ ಈ ಕೆಲಸಕ್ಕೆ ದಂಗಾಗಿ ಹೋಗಿದ್ದರು. ತಲೆ ತಗ್ಗಿಸಿ ಕೈಮುಗಿದಿದ್ದರು. ಅದೇ ಹೊತ್ತಿನಲ್ಲಿ ಅಲ್ಲೇ ರಸ್ತೆಯ ಪಕ್ಕದ ಸ್ಲಮ್ಮೊಂದರಲ್ಲಿ ನೀನು ಕ್ಯಾಮರಾವೊಂದನ್ನು ಹಿಡಿದು ಆಲ್ಲಿನ ಮಕ್ಕಳ ಫೋಟೋ ವನ್ನು ತೆಗೆಯುತ್ತಿದ್ದೆ. ಗೂಢ ಲೋಕದ ಪರಮ ಸತ್ಯವನ್ನು ಅನಾವರಣಗೊಳಿಸುವ ನಿನ್ನನ್ನು ಕಂಡಾಗ ಸಿರಿಯಾದ ನಿರಾಶ್ರಿತ ಮಗುವಿನ ಫೋಟೋ, ಇಥಿಯೋಪಿಯಾದ ಬರಗಾಲದ ಬವಣೆಯನ್ನು ಫೋಟೋಕರಿಸಿ ಪ್ರಸಿದ್ಧಿಗೆ ಬಂದ ಸ್ಯುಡೋ ಚಳುವಳಿಗಾರರ ನೆನಪು ಬಂತು.

ನಾನೇ ನಿನ್ನನ್ನು ಮಾತಾಡಿಸಿದೆ “ಇದೇನು ನಿಮ್ಮ ಕೆಲಸ” ನೀನು ಸುಮ್ಮನೆ ಕಿರುನಗೆಯಿಂದ ಮುಗುಳ್ನಕ್ಕು ನಿನ್ನ ಕೆಲಸ ಮುಂದುವರಿಸಿದೆ. ಆ ಮೇಲೆ ಆ ಮಕ್ಕಳಿಗೆಲ್ಲಾ ಐಸ್ಕ್ರೀಂ ಕೊಡಿಸಿದೆ. ಮುದುಕರನ್ನೆಲ್ಲ ಮಾತಾಡಿಸುತ್ತಾ ಅವರಿಗೆಲ್ಲಾ ಏನೋ ಔಷಧವನ್ನು ಕೊಟ್ಟೆ. ನೀನೂ ಸಹ ಅದೇ ರೀತಿ ಯಾವುದೋ ಪತ್ರಿಕೆಯವನೋ ಫ್ರೀ ಲಾನ್ಸರ್ ಫೋಟೋಗ್ರಾಫರನೋ ಎಂದು ತಿಳಿದು “ಇವರ ಬಡತನವೇ ನಿಮ್ಮಂತವರ ಬಂಡವಾಳ” ಎಂದು ನಿನ್ನನ್ನು ಹಂಗಿಸಿದೆ. ಉತ್ತರಿಸಲಿಲ್ಲ ನೀನು. ಅದೇ ಹೊತ್ತಿನಲ್ಲಿ ಬಂದ ಆ್ಯಂಬ್ಯೂಲೆನ್ಸ್ ನಲ್ಲಿಂದ ಇಳಿದ ಒಂದು ಮುದುಕನನ್ನು ನೀನೇ ಅನಾಮತ್ತಾಗಿ ಎತ್ತಿಕೊಂಡು ಅದೇ ಕೊಳಚೆಯಲ್ಲಿ ನಡೆದು ಗೂಡೊಂದರಲ್ಲಿ ಮಲಗಿಸಿ ಮತ್ತೆ ಕಾರಿಗೆ ಹೋಗಿ ಒಂದು ರಗ್ಗೊಂದನ್ನು ತಂದು ಹೊದೆಸಿ ಮಲಗಿಸಿದೆ. ಅಲ್ಲಿದ್ದವರ ಹತ್ತಿರ ಹಣಕೊಟ್ಟು ಆ ಮುದುಕನ ಆರೋಗ್ಯದ ಕುರಿತು ತಗೆದುಕೊಳ್ಳಬೇಕಾದ ವಿವರವನ್ನು ಹೇಳುತ್ತಿದ್ದೆ. “ಈವಯ್ಯಾ ಹಾಗೇ, ವಾರಕ್ಕೊಮ್ಮೆ ಬರುತ್ತಾರೆ. ಗತಿಯಿಲ್ಲದೇ ಸೀಕು ಗೀಕು ಆದವರನ್ನು ಆಸ್ಪತ್ರೆಗೆ ಸೇರಿಸಿ ಮತ್ತೆ ಮನೆಗೆ ತಂದು ಹಣ ನೀಡಿ ಹೋಗುತ್ತಾರೆ. ತಣ್ಣಗಿರಲಿ ತಾಯೀ ಈವಯ್ಯನ ಹೊಟ್ಟೆ” ಎಂದು ಅವರೆಲ್ಲ ಹರಸುತ್ತಿದ್ದರೆ ನಾನು ಮೌನವಾಗಿದ್ದೆ. ಕೊನೆಗೆ ಹೋಗುವಾಗ “ನಿಮ್ಮ ಕೆಲಸ ನಿಜಕ್ಕೂ Great, I admire you” ಎಂದು ಎಂದು ಹೊರಟಿದ್ದೆ.

ಹನೀ,
ರಜಾ ಅವಧಿಯಲ್ಲಿ ನಮ್ಮನಮ್ಮ ಕೆಲಸದಲ್ಲಿ ಬಿಜಿಯಾಗುತ್ತಿರುವ ಕಾಲದಲ್ಲೊಮ್ಮೆ ನಮ್ಮ ನಡುವೆ ಅನೇಕ ಮಾತುಕತೆಗಳಾಗುತ್ತಿತ್ತು. ಅಂಶು ಅದೂ ಇದು ಕೆಲಸ ಎಂದು ಬ್ಯುಸಿಯಾಗಿರುತ್ತಿದ್ದ. ನನ್ನೊಟ್ಟಿಗೆ ಬರುವದನ್ನು ಕಡಿಮೆ ಮಾಡುತ್ತಿದ್ದ. ಯಾಕೋ ಬೇರೆ ರೀತಿ ಸೇವೆ ಯಾಕೆ ಮಾಡಬಾರದು ಎನ್ನುತ್ತಿದ್ದ. ನಾನು ಮೊದಲಿನಿಂದಲೂ ನನ್ನ ಅಭಿಪ್ರಾಯಗಳನ್ನು ಯಾರ ಮೇಲೂ ಹೇರುತ್ತಿರಲಿಲ್ಲವಾದದ್ದರಿಂದ ಅವನಿಗೆ ಒತ್ತಾಯಿಸುತ್ತಿರಲಿಲ್ಲ. ನಿನ್ನದು ಇಂತಹದೇ ಒಂದು ಸ್ಲಮ್ಮು ಎಂದೇನೂ ಇರುತ್ತಿರಲಿಲ್ಲ. ಒಮ್ಮೊಮ್ಮೆ ಸ್ಮಶಾನ, ಇನ್ನೊಮ್ಮೆ ಇಸ್ಕಾನಿನ ಎದುರಿನ ಬಿಕ್ಷುಕರು, ಮಗದೊಮ್ಮೆ ಸರಕಾರೀ ಆಸ್ಪತ್ರೆ ಎಂದೆಲ್ಲ ಹುಡುಕುತ್ತಾ ಹೋಗುತ್ತಿದ್ದೆ. “ಏನೇ ಇದ್ದರೂ ಸಾಯಂಕಾಲದೊಳಗಾಗಿ ಸ್ಲಮ್ಮಿನಿಂದ ಹೊರಡಿ ಕುಡುಕರ ಕಾಟವಿರುತ್ತದೆ ಸುಮ್ಮನೆ ಯಾಕೆ ರಿಸ್ಕ್” ಎಂದಿದ್ದೆ. ಒಮ್ಮೆ ಸ್ಲಮ್ಮಿನ ಅಣ್ಣಮ್ಮ ನೀನು ಪ್ರತೀ ರಜೆಯಲ್ಲೂ ಸಾಯಂಕಾಲದ ಹೊತ್ತಿಗೆ ಇಲ್ಲಿಗೆ ಬಂದು ‘ನಾನು ಬಂದಿದ್ದೆನಾ, ಎಷ್ಟು ಹೊತ್ತಿಗೆ ಹೊರಟಳು ಎಂದು ವಿಚಾರಿಸುತ್ತಿದ್ದೆ’ ಎಂದಿದ್ದಳು. ಒಮ್ಮೆ ಅವರಲ್ಲಿ ಮಾತನಾಡುತ್ತಾ ಇರುವಾಗ ಹೊತ್ತಾಗಿ ಹೋಗಿತ್ತು. ನಿನ್ನ ಮಾತು ಜ್ಞಾಪಕಕ್ಕೆ ಬಂದು ಹೊರಡಬೇಕೆನ್ನುವದರಲ್ಲಿ ನಿನ್ನ ಕಾರು ಎದುರಾಗಿತ್ತು. ‘ಬನ್ನಿ ನಿಮ್ಮನ್ನು ನಿಮ್ಮ ಪೀಜಿ ಗೆ ಬಿಡುತ್ತೇನೆ’ ಎಂದಿದ್ದೆ. ಕಾರಿನಲ್ಲಿ ಕುಳಿತು ಬರುವಾಗ ಸಹಜವಾಗಿ ಎನ್ನುವಂತೆ ನನ್ನ ನಿನ್ನ ಪೂರ್ವಾಪರಗಳೆಲ್ಲದರ ವಿನಿಮಯವಾಯಿತು. ‘ಪ್ರತೀ ಆಸಕ್ತಿಯ ಹಿಂದೆಯೂ ಅನುಭವದ ಭೂತವಿರುತ್ತದೆ’ ಎಂದಿದ್ದೆ. ಸಿಲ್ಕ್ ಬೋರ್ಡಿನ ತಿರುವಿನಲ್ಲಿ ಸಾಗುತ್ತಿರುವಾಗ ಒಮ್ಮೆಲೇ “ಸ್ವಲ್ಪ ಮಾತಾಡೋಣ ಅನಿಸುತ್ತಾ ಇದೆ, ನಿಮ್ಮ ಅಭ್ಯಂತರವಿಲ್ಲದಿದ್ದರೆ…” ಎಂದ ನಿನ್ನ ಮಾತಿಗೆ ಒಪ್ಪಿಗೆ ಸೂಚಿಸಿದ್ದೆ. ಕತ್ತಲು ನಿಧಾನವಾಗಿ ಹೊದೆದುಕೊಳ್ಳುತ್ತಿತು. ದೂರದ ನಗರದ ಬೆಳಕಿನ ಪ್ರಭೆಯಲ್ಲಿ ಆಕಾಶದ ನಕ್ಷತ್ರಗಳೇ ಕಾಣಿಸುತ್ತಿರಲಿಲ್ಲ. ಕಾರನ್ನು ನಿಲ್ಲಿಸಿ ಮಾರ್ಗದ ಬದಿಯಲ್ಲಿರುವ ಸಾರದ ಮೇಲೆ ಕುಳಿತಾಗ ಮೌನವೇ ನಿನ್ನ ಧ್ವನಿಯಾಗಿತ್ತು. ನಾನು ಏನೂ ಎಂದು ನಿನ್ನ ಮುಖ ನೋಡಿದರೂ ತಲೆ ತಗ್ಗಿಸಿ ಕುಳಿತಿದ್ದೆ. ನಿನ್ನ ಬಳಿ ಸಾರಿ ಭುಜ ಹಿಡಿದು ಅಲುಗಾಡಿಸಿದರೆ ಒಮ್ಮೆಲೇ ಎಚ್ಚರಾದವನಂತೆ Will you please marry me ಎಂದಿದ್ದೆ. ಶಾಕ್ ಹೊಡೆದಂತಾಗಿ ನಾನು ಹಿಂದೆ ಸರಿದೆ. “ಯಾರೂ ಇಲ್ಲದ ನನ್ನ ಬದುಕಿಗೆ ನೀನು ಸಂಗಾತಿಯಾಗಬಹುದು” ಎಂದು ಕೇಳಿದೆ, “ಒಪ್ಪಿಗೆಯಿಲ್ಲದಿದ್ದರೆ no regret, ನಾವು ಸ್ನೇಹಿತರಾಗೇ ಇರೋಣ” ಎಂದವ ನನ್ನನ್ನು ಕಾರಿನಲ್ಲಿ ಕುಳಿಸಿಕೊಂಡು ಪೀಜಿಗೆ ಬಿಟ್ಟಿದ್ದೆ.

ಇಳಿಯುವಾಗ ನಾಳೆ ಫೋನ್ ಮಾಡಲೇ ಎಂದಿದ್ದೆ. ಮಾತಾಡದೇ ನನ್ನ ಫೋನ್ ನಂಬರನ್ನು ನಿನಗೆ ಕೊಟ್ಟು ಬಂದವಳಿಗೆ ರಾತ್ರಿಯೆಲ್ಲಾ ನಿದ್ರೆ ಇಲ್ಲ. ಮದುವೆಯ ಬಗೆಗೆ ವಿಚಾರವನ್ನೇ ಮಾಡದಿದ್ದ ತಾನು ಈಗ ಹೀಗೆ ಧುತ್ತೆಂದು ಎದುರಾದ ವಿಷಯದ ಕುರಿತು ಆಲೋಚಿಸಲಾಗದಾಗಿದ್ದೆ. ಆದರೆ ನಿನ್ನ ಫೋನ್ ಆದಿನ ಸಂಜೆಯಾದರೂ ಬರದೇ ಇದ್ದಾಗ ಯಾಕೋ ತಡಬಡಾಯಿಸಿದ್ದೆ. ವಾರವಿಡೀ ಬರದೇ ಇದ್ದಾಗ ಶನಿವಾರ ಯಾವಾಗ ಬಂತು ಎಂದು ಕಾಯುತ್ತಾ ಸ್ಲಮ್ಮಿಗೆ ಓಡಿಹೋಗಿ ನಿನಗಾಗಿಯೇ ಕಾಯುತ್ತಿದ್ದೆ. ಎಂದಿನಂತೆ ಯಾವುದೋ ಆಂಬ್ಯುಲೆನ್ಸಿನ ಹಿಂದೆ ನೀನು ಬಂದಾಗ ಹಾಯ್ ಎಂದು ನಾನೇ ವಿಶ್ ಮಾಡಿದ್ದೆ. ನೀನು ಮಾತನಾಡದೇ ಇದ್ದರೂ ನಿನ್ನ ಕಣ್ಣು ನನ್ನಲ್ಲಿ ಉತ್ತರವನ್ನು ಹುಡುಕುತ್ತಿತ್ತು. ಯಾವ ಭಾವವೂ ಇಲ್ಲವೆಂದು ಭಾವಿಸಿದ ನಾನು ನಿನ್ನೊಟ್ಟಿಗೆ ಕಾರಿನಲ್ಲಿ ಕುಳಿತಾಗ ನಿನ್ನ ಕೈಹಿಡಿದು ಅದುಮಿದ್ದೆ. ನಮ್ಮ ನಿಶ್ಚಿತಾರ್ಥ ಅಲ್ಲೇ ಸ್ಲಮ್ಮಿನ ಘ್ಹಂ ಎನ್ನುವ ನೊಣಗಳ ಮಧ್ಯೆ ಆಗಿಹೋಗಿತ್ತು. ಹೆಸರಿಗಾಗಿ ನಾವು ಈ ಸ್ಲಮ್ಮಿನಲ್ಲಿ ಕೆಲಸ ಮಾಡುತ್ತಿಲ್ಲ. ಹಾಗಾಗೀ ನಮ್ಮಿಬ್ಬರ ಮಧ್ಯೆ ಕರೆಯಲು ಹೆಸರಿನ ಹಂಗೇಕೆ ಎಂದಿದ್ದೆ. ಹನೀ ಎಂದು ನಿನ್ನ ಕಿವಿಯಲ್ಲಿ ಪಿಸುಗುಟ್ಟಿದಾಗ ಇದೇ ನಿನಗೆ ನನ್ನ ಗುರುತಾಗಲಿ, ನೀನು ನನ್ನ ರಮಣೀ ಆದರೆ ಅಷ್ಟು ಉದ್ದಬೇಡ ‘ರಮೀ’ ಎನ್ನುತ್ತೇನೆ ಎಂದಿದ್ದೆ.

ಹನೀ,
ಅಂಶು ಏಕೋ ಸಪ್ಪಗಿದ್ದವ ಕೆಲದಿನಗಳಲ್ಲೇ ಅವನ ಮದುವೆಗೆ ನಗುನಗುತ್ತಲೇ ನಮ್ಮನ್ನು ದೂರದ ಕೋಲ್ಕೊತ್ತಾಕ್ಕೆ ಕರೆದಿದ್ದ. ನನ್ನನ್ನು ಎಷ್ಟೊಂದು ಪ್ರೀತಿಯಿಂದ ನೋಡಿಕೊಂಡಿದ್ದೆ ನೀನು. ನಮ್ಮಿಬ್ಬರ ಫಲವನ್ನು ಹೊತ್ತಾಗ ನೀನು ನನ್ನನ್ನು ತಬ್ಬಿಕೊಂಡ ರೀತಿ ನನ್ನ ಅಮ್ಮನನ್ನು ನೆನಪಿಸಿತ್ತು. ನಿನ್ನ ಎದೆಯಲ್ಲಿ ಅಪ್ಪ, ಊರು, ಅಜ್ಜಿ ಎಲ್ಲರನ್ನೂ ಮರೆತಿದ್ದೆ. ಆಸ್ಪತ್ರೆಯಲ್ಲಿ ಮುದ್ದಾದ ಮಗುವನ್ನು ನೋಡಿದಾಗ ಇದಕ್ಕೂ ಹೆಸರು ಬೇಡವಾ ಎಂದು ತಮಾಷೆ ಮಾಡಿದ್ದೆ. ನಿನ್ನಂತೆ ಕೂಲಾಗಿರುವ ಹೆಸರು ಬೇಕು ಎಂದರೆ, ನಿನ್ನ ಬಿಸಿಯುಸಿರಿನ ನೆನಪೂ ಅದಕ್ಕಿರಲೀ ಎಂದಿದ್ದೆ ನೀನು. ನೀನೇ ಆಯ್ಕೆ ಮಾಡಿದ ಹೆಸರು ‘ಮಿಹಿಕಾ’ ಎಂದು. ಮಂಜುಗಡ್ಡೆಯಂತೆ ಮೇಲೆ ತಂಪು ಒಳಗಡೆ ಬಿಸಿ ಎಂದ ನಿನ್ನ ಆಯ್ಕೆಗೆ ನಾನು ತಲೆಬಾಗಿದ್ದೆ. ನಿನ್ನ ಪ್ರೀತಿಯೆಲ್ಲ ಈಗ ನಾಟಕವಾಗಿಯೇ ಕಾಣುತ್ತಿದೆ. ನೀನು ಅವಳ ಹತ್ತಿರ ಆಗಾಗ ಭೇಟಿಯಾಗುವ ವಿಷಯವನ್ನು ಅಂಶು ನನ್ನಲ್ಲಿ ಪಿಸುಗುಡುತ್ತಿದ್ದ. ನನ್ನ ಸಂಸಾರ ಒಡೆಯಬಾರದಂತೆ ಅವನೇ ಬುದ್ಧಿವಾದ ಹೇಳುತ್ತಿದ್ದ. ನನ್ನ ಆವೇಶವನ್ನು ಕಡಿಮೆಮಾಡಿ ಮನೆಗೆ ಬಾರದಿದ್ದರೆ ನಾನು ಸ್ಪೋಟವಾಗಿಬಿಡುವ ಆ ಕಾರಣಕ್ಕೆ ಮಿಹಿಕಾಳ ಭವಿಷ್ಯದ ಕುರಿತು ಚಿಂತಿಸುತ್ತಿದ್ದೆ. ಇಂತಹ ಹೊತ್ತಿನಲ್ಲಿ ಒಮ್ಮೆ ಆತ ಕಾರಿನಲ್ಲಿ ಮನೆಯ ತಿರುವಿನಲ್ಲಿ ನಿಲ್ಲಿಸಿ ಇಳಿದು ಹೊರಟವಳನ್ನು ಕೈ ಹಿಡಿದು “ಏನೇ ಆದ್ರೂ ಕದ್ದು ತಿಂದದಕ್ಕೆ ರುಚಿ ಜಾಸ್ತಿ ಅಲ್ಲವಾ” ಎಂದು ಕೆನ್ನೆಯನ್ನು ತಟ್ಟಿದ. ಯಾಕೋ ಪಿಚ್ಚೆನಿಸಿತು. ನಿನ್ನ ಹೆಂಡತಿ ಹೀಗೆ ಕದ್ದು ತಿಂದರೆ ಏನೆನಿಸುತ್ತದೆ ಎಂದಿದ್ದಕ್ಕೆ “ಕಳ್ಳ ಪೋಲಿಸನಿಗೆ ಸಿಕ್ಕಿದರೆ ಜೈಲೇ ಗತಿ” ಎಂದು ಕಾರನ್ನು ಓಡಿಸಿದ್ದ. ಅದರ ಧೂಳು ನನ್ನ ಮುಖಕ್ಕೆ ರಾಚಿತ್ತು.

ಹನೀ,
ರಾತ್ರಿಯೆಲ್ಲ ನಿದ್ರೆಯಿಲ್ಲದೇ ಹೊರಳಾಡಿದೆ. ಬಳಸಲು ಬಂದ ನಿನ್ನನ್ನು ದೂರ ತಳ್ಳಿದ್ದು ನನ್ನೆದೆಯಲ್ಲಿನ ಜ್ವಾಲಾಮುಖಿಯಲ್ಲಿ ನೀನು ಅಪ್ಪಚ್ಚಿಯಾಗಬಾರದೆಂದು. ಮಿಹಿಕಾ ನಿದ್ರಿಸುವಾಗಲೆಲ್ಲ ನಮ್ಮಿಬರ ಕೈಗಳನ್ನು ತನ್ನ ಮುಖದಮೇಲೆ ಇರಿಸಿ ನಿದ್ರಿಸುತ್ತಿದ್ದಳು. ಅವಳನ್ನು ಆ ಸ್ಥಿತಿಯಲ್ಲಿ ದಿಟ್ಟಿಸಿ ನೋಡಿದಾಗ ಅಳುವೇ ಬಂತು. ಅಂಶುವಿನ ಮಾತು ನೆನಪಿಗೆ ಬಂದು ದುಃಖವೇ ಉಮ್ಮಳಿಸಿತು. ಅವನ ಚರ್ಯೆಗಳೆಲ್ಲದರ ಹಿಂದೆ ಏನೋ ಇರುವ ಸಂಚು ಕಂಡಿತು. ನಿನ್ನ ಮೇಲಿನ ನನ್ನ possessiveness ಅನ್ನು ಅವ ಚನ್ನಾಗಿಯೇ ಉಪಯೋಗಿಸಿಕೊಂಡಿದ್ದ, ನಿನ್ನ ಮೋಸಕ್ಕೆ ನನ್ನದೂ ಮೋಸವೇ ಉತ್ತರವಾಗಬೇಕೆ. ನನ್ನ ಅರಿಯದ ಕಂದಮ್ಮ ನಾಳೆ ತಾನೂ ಹೀಗೆ ಮೋಸದ ಹಾದಿಯಲ್ಲಿ ಹೆಜ್ಜೆಯಿಟ್ಟರೆ ಅನಿಸಿತು. ನಿಧಾನಕ್ಕೆ ಎದ್ದು ನನ್ನ ಹತ್ತಿರಕ್ಕೆ ಬಂದು ತಬ್ಬಿಕೊಂಡು ತಲೆನೇವರಿಸುತ್ತ “ರಮೀ ಏನಾಗಿದೆ, ಯಾಕೆ ಗುಟ್ಟು ನಮಗೆ ನಮ್ಮಿಬ್ಬರನ್ನು ಬಿಟ್ಟು ಯಾರಿದ್ದಾರೆ” ಎಂದ ನಿನಗೆ you cheater ಎಂದು ಕೆನ್ನೆಗೆ ಥಟಾರ್ ಅಂತ ಬಾರಿಸಿಬಿಟ್ಟೆ. ಜೋರಾಗಿಯೇ ಬಿದ್ದಿರಬೇಕು. ನೀನು ಒಮ್ಮೆ ಮಂಚದ ಮೂಲೆಯಲ್ಲಿ ಮುಖ ತಿರುಗಿಸಿ ಬೆಡ್ ಶೀಟಿನ ತುದಿಯಿಂದ ಕಣ್ಣುಜ್ಜಿಕೊಳ್ಳುವದು ಕೆಂಪನೆಯು ತಣ್ಣಗಿನ ಬೆಳಕಿನಲ್ಲಿ ಕಾಣಿಸಿತು. ಯಾಕೋ ಮನಸ್ಸು ತಡೆಯದಾಯಿತು ನಾನೇ ನಿನ್ನನ್ನು ಅಪ್ಪಿಕೊಂಡು “ನನ್ನನ್ನು ಕ್ಷಮಿಸೋ” ಎಂದದ್ದಕ್ಕೆ ನೀನು ಮಿಹಿಕಾಳ ಮತ್ತು ನನ್ನ ತಲೆ ಹಿಡಿದು ನೀನು ಒಮ್ಮೆಲೇ ಭೋರೆಂದು ಅತ್ತು ಬಿಟ್ಟೆ. ನಿನ್ನ ಎದೆಯ ಬಡಿತ ಇವತ್ತು ಆಪ್ಯಾಯವೆನಿಸಿದಂತಾಗಿ ಒಮ್ಮೆಲೆ ನನ್ನನ್ನು ನಾನೇ ಅವನತಗೊಳಿಸಿಕೊಂಡೆ.

ಹನೀ,
ವಿಚಾರಿಸು, ನಮ್ಮ ಬದುಕಿನಲ್ಲಿ ಈ ರೀತಿ ಆಗಬೇಕಿತ್ತಾ, ನೀನು ಈಗಲಾದರೂ ನನ್ನ ಹನಿಯಾಗು. ಪೆಟ್ಟಿಗೆಯಲ್ಲಿನ ಜೇನು ಹನಿಯನ್ನು ಸಂಗ್ರಹಿಸಿದ್ದು ಪರರ ಪಾಲಾದರೂ ಮತ್ತೆ ಮತ್ತೆ ಹನಿಯನ್ನು ಸಂಗ್ರಹಿಸುವಂತೆ ನಾವ್ಯೇಕೆ ಹೊಸ ಬಾಳನ್ನು ಕಟ್ಟಬಾರದು ಹೇಳು. ನನ್ನ ಮನಸ್ಸಿನಲ್ಲಿರುವದನ್ನು ನಿನ್ನಲ್ಲಿ ತೋಡಿಕೊಂಡಿದ್ದೇನೆ. ಮುಂದಿನ ನಿರ್ಧಾರ ನಿನ್ನದು.

ನಿನ್ನ
ರಮೀ

********
ಪತ್ರ ಎರಡು:-

ಪ್ರೀತಿಯ …….

ಏನಂತ ಕರೆಯಲೀ ನಿನ್ನನ್ನ ಅರ್ಥವೇ ಆಗುತ್ತಿಲ್ಲ. ನನ್ನ ಬದುಕಿನಲ್ಲಿ ನನ್ನದಲ್ಲದ ತಪ್ಪಿಗೆ ಈ ಶಿಕ್ಷೆಯನ್ನು ಕೊಟ್ಟ ದೇವರನ್ನ ನಾನು ಅವನಿಲ್ಲವೆಂದು ಒಪ್ಪಲಾರೆ, ಅವನಿದ್ದೇ ನಾನು ಅವನನ್ನು ದ್ವೇಷಿಸುತ್ತಿರಬೇಕು. ಅವನ ವಿಷಯವೇಕೆ ಈಗ ಹೇಳು.

ಹೌದು, ನನ್ನ ಗಂಡ ನನಗೆ ಮೊದಲು ಮೈತ್ರಿಯನ್ನ ಕೊಟ್ಟ. ಆಮೇಲೆ ಈ ರೋಗವನ್ನೂ ಕೊಟ್ಟು ಹೋದ. ನೀನು ಆ ದಿನ ಸಿಗದೇ ಇದ್ದಿದ್ದರೆ ನಾನು ಮೈತ್ರಿಯೊಟ್ಟಿಗೇ ಆ ಹೊಳೆಯ ಪಾಲಾಗುತ್ತಿದ್ದೆ. ನನ್ನ ಅಪ್ಪ ಕಲಿಯುವಾಗ ನಿನಗೆ ಮಾಡಿದ ಯಾವುದೋ ಸಣ್ಣ ಸಹಾಯವನ್ನು ನೆನಪಿಸಿಕೊಂಡು ನೆರವಿನ ಹಸ್ತ ಚಾಚಿದೆ. ಮೈತ್ರಿಯ ಮುಖ ನೋಡಿದಾಗ ಆಕೆಗೊಂದು ಆಸರೆಯನ್ನು ನಿನ್ನಲ್ಲಿ ಕಂಡೆ. ಅವಳ ಬದುಕು ಭದ್ರವಾಗಿರಲೀ ಎನ್ನುವದೇ ನನ್ನ ಆಸೆ. ಒಳೊಗೊಳಗೇ ಲಡ್ಡಾಗಿರುವ ಗಿಡ ನಾನು, ಯಾವಾಗ ಬೀಳುತ್ತೇನೆಂದು ಗೊತ್ತಿಲ್ಲ.

ಮೊನ್ನೆ ಲ್ಯಾಬಿನಿಂದ ಅಂತಿಮ ರಿಪೋರ್ಟ್ ಬಂತು. ಮೈತ್ರಿಯ ಕುರಿತು ಏನೂ ತೊಂದರೆ ಇಲ್ಲವಂತೆ. ಈ ಮೂರುವರ್ಷದಲ್ಲಿ ಮೊದಲ ಬಾರಿ ನಾನು ಹರ್ಷದಿಂದ ಕುಣಿದಾಡಿದೆ ಗೊತ್ತಾ. ಹೆದರಿಕೆ ಮಾರಾಯಾ, ಎಲ್ಲಿಯಾದರೂ ನನ್ನಿಂದ ಅವಳಿಗೆ ಮತ್ತೆ ತಾಗಿದರೆ! ಎರಡುದಿನ ಪೂರ್ತಿ ವಿಚಾರ ಮಾಡಿ ಈ ತೀರ್ಮಾನ ಕೈಗೊಂಡೆ. ದಯವಿಟ್ಟು ಈ ಪತ್ರವನ್ನು ನಿನ್ನ ರಮೀಯೊಬ್ಬಳನ್ನು ಬಿಟ್ಟು ಯಾರಿಗೂ ತೋರಿಸಬೇಡ. ನನ್ನೊಳಗಿನ ಈ ದರಿದ್ರ ರೋಗ ನನ್ನೊಡನೇ ಮುಚ್ಚಿಹೋಗುವ ಉಪಾಯವೆಂದರೆ ಅದು ಈ ನಗರದಲ್ಲಿ ವೇಗವಾಗಿ ಚಲಿಸುವ ಯಾವುದೋ ಬಸ್ಸಿಗೆ ನನ್ನ ಸ್ಕೂಟಿಯನ್ನು ಅಪ್ಪಳಿಸುವದು. ನನ್ನ ಪಾಲಿಗೆ ಸಾವು ಎನ್ನುವದು ಈಗ ಕರ್ತೃ, ಕರ್ಮಗಳಿಲ್ಲದ ಕ್ರಿಯೆ ಮಾತ್ರ.

ಮೈತ್ರಿಯ ಬದುಕಿಗಾಗುವಷ್ಟು ಹಣಕಾಸಿಗೆ ಅವಳನ್ನು ಹುಟ್ಟಿಸಿದವನ ಆಸ್ತಿ ಇದೆ. ದಯವಿಟ್ಟು ನೀನೆ ಕೋರ್ಟಿನಲ್ಲಿ ಬೇಕಾದ ಕಾಗದ ಪತ್ರ ತಯಾರಿಸಿ ಅವಳ ಬದುಕಿಗೆ ಒಂದು ನೆಲೆ ಕಲ್ಪಿಸು. ಅವಳಿಗೆ ಅವಳಮ್ಮನಲ್ಲಿ ಇರುವ ಪ್ರೀತಿ ಮಸುಕಾಗದಂತೆ ನೋಡಿಕೋ.

ನಿನ್ನನ್ನೇ ನಂಬಿದ
ಮೈತ್ರಿಯ ಅಮ್ಮ