ಒಳ ಬಾಗಿಲಿಂದ ಇಣುಕಿದ ಪದ್ದಜ್ಜಿ ಈಗ ಹೊರಬಂದಳು. ಬೆನ್ನು ಬಾಗಿದ್ದರೂ, ಕೂದಲೆಲ್ಲಾ ಮುಪ್ಪಾಗಿದ್ದರೂ, ಮೈಯೆಲ್ಲಾ ಸುಕ್ಕುಗಟ್ಟಿದ್ದರೂ ಅವಳ ಕಣ್ಣುಗಳು ಫಳ್ಳನೇ ಹೊಳೆಯುತ್ತಿದ್ದವು. ಆ ಕಣ್ಣ ಬೆಳಕಿನಲ್ಲಿ ತಾನು ಕಂಡ ನೂರಾರು ಮಳೆಗಾಲ, ಹೊಳೆಯುವ ಬಿಸಿಲು, ಧಾರೆಯಾಗುವ ಮಂಜು, ಗುಡುಗು-ಸಿಡಿಲಿನ ಮೊರೆದಾಟಗಳು ಕಾಣಿಸುತ್ತಿತ್ತು. ಅವಳ ಸುಕ್ಕುಗಟ್ಟಿ ಭೂಮಿಗೂರಿದ ಪಾದಕ್ಕೆ ನಡೆದ ದಾರಿಯ ಮಣ್ಣಿನ, ಹುಲ್ಲಿನ, ಜಲಪಾತದ, ಉಂಬಳ ರಕ್ತ ಹೀರಿದ ನೆನಪುಗಳಿದ್ದವು, ಅವಳ ಕಿವಿಯಲ್ಲಿ ಹಕ್ಕಿ ಹಾಡಿದ, ಚಿರತೆ ಕಿರುಚಿದ, ಕಾಡುಕೋಣ ತೋಟ ದಾಟಿದ ಸದ್ದುಗಳು ನೆನಪಾದಾಗೆಲ್ಲಾ ಮತ್ತೆ ಮತ್ತೆ ಸದ್ದು ಮಾಡುತ್ತ ಕೂತಿದ್ದಂತೆ ಕಂಡಿತು.
ಪ್ರಸಾದ್ ಶೆಣೈ ಬರೆಯುವ ಮಾಳಕಾಡಿನ ಕಥಾನಕ

 

“ನನಗೀಗ 80 ವರ್ಷ ಆಯ್ತು. ಇಷ್ಟು ವರ್ಷದಲ್ಲಿ ನಾನು ಇಂತಹ ಭೀಕರ ಮಳೆ ನೋಡೇ ಇಲ್ಲ. ಮೊನ್ನೆಯ ಮಳೆಗೆ ನಮಗೇನು ಹಾನಿಯಾಗದೇ ಇದ್ರೂ, ಪಕ್ಕದೂರಿನಲ್ಲಿರುವ ನಮ್ಮ ಸಂಬಂಧಿಕರ ಮನೆ, ಗದ್ದೆ, ತೋಟ ನೋಡಿದರೆ ಅಯ್ಯಬ್ಬಾ ಎಂದು ಹೆದರಿಕೆಯಾಗ್ತದೆ, ಅಬ್ಬಾ ಮಳೆಯೇ, ಮಳೆಯ ಸದ್ದು ಕೇಳಿದಾಗೆಲ್ಲಾ ಜೀವ ಕೈಯಲ್ಲಿ ಬರ್ತಿತ್ತು. ದೇವರ ದಯೆ ನಮ್ಗೆ ಏನೂ ತೊಂದ್ರೆಯಾಗ್ಲಿಲ್ಲ. ಗಾಳಿಗೆ ತೋಟದ ಅಡಕೆ ಮರ ಬಿದ್ದು ಸಣ್ಣ ಹಾನಿಯಾಗಿದೆ ಅಷ್ಟೆ. ಆದರೆ ನಮ್ಮ ಸಂಬಂಧಿಕರನ್ನು ನೆನೆದರೆ ಕರುಳು ಕಿತ್ತು ಬರುತ್ತದೆ” ಎಂದಳು ಪದ್ದಜ್ಜಿ.

ಆ ಬೆಳಗು ಪದ್ದಜ್ಜಿಯ ಮನೆ ಮೇಲೆ ರೊಯ್ಯನೇ ಬೀಳುತ್ತಲೇ ಇದ್ದ ಮಂಜು, ಸಣ್ಣಗಿನ ಮಳೆ, ಬೀಸುಗಾಳಿ, ದೂರದಲ್ಲಿ ಭಯಾನಕವಾಗಿ ಬಿಳಿಬಿಳಿ ನೊರೆಯಂತೆ ಮಳೆಗೆ ಚಂಡಿಯಾಗಿದ್ದ ಬೆಟ್ಟದ ತಪ್ಪಲು ಇವನ್ನೆಲ್ಲಾ ನಾವೂ ಪದ್ದಜ್ಜಿಯ ಬೇಸರದಲ್ಲಿ, ಅವಳ ಮೌನದಲ್ಲಿ, ಮುಪ್ಪಾಗಿದ್ದರೂ ಮಳೆಯಂತೆ ಹೊಳೆಯುತ್ತಿದ್ದ ಅವಳ ಕಣ್ಣಿನ ಭಯ, ದುಗುಡ, ಅಚ್ಚರಿಯ ಹೊಳಪಲ್ಲಿ ನಾವು ಒಂದಾದೆವು.

ನಮ್ಮೂರ ಕತ್ತಲೆನಾಡಿನ ಆಸು ಪಾಸೂ ಭೀಕರ ಮಳೆಯಾದುದರಿಂದ ಕತ್ತಲೆಕಾಡಿನಲ್ಲಿರುವ ಮನೆಗಳ ಪರಿಸ್ಥಿತಿಯನ್ನೊಮ್ಮೆ ನೋಡಿ ಬರಬೇಕು, ಅಲ್ಲಿ ಭೀಕರ ಪ್ರವಾಹವೇನೂ ಬಂದಿರದಿದ್ದರೂ ಆಗರ್ಭ ಕಾಡಿನಿಂದಲೇ ತುಂಬಿಹೋಗಿದ್ದ, ಬಗಲಲ್ಲಿ ಬೆಟ್ಟಗಳಿಂದಲೇ ರೌದ್ರವಾಗಿ ಕಾಣಿಸುತ್ತಿದ್ದ ಅಲ್ಲಿ ಯಾವ ಕ್ಷಣಕ್ಕೂ ಏನೂ ಆಗಬಹುದು ಎನ್ನುವ ಭಯ ನಮ್ಮಲ್ಲಿತ್ತು. ಪರಿಸರವನ್ನು ಇದ್ದದ್ದಕ್ಕೆಲ್ಲಾ ಹೋಲಿಸಿ, ವರ್ಣಿಸಿ, ಮೊದಲೇ ಸುಂದರವಾಗಿದ್ದ ಆ ಅನೂಹ್ಯತೆಗೆ ಇನ್ನಷ್ಟು ರೌದ್ರತೆ, ಸುಂದರತೆ, ಭೀಷಣತೆ ಎಲ್ಲವನ್ನೂ ಸೇರಿಸಿ ಬರೆದು ನಿರಾಳವಾಗಿಬಿಡೋದು ಭಾರೀ ಸುಲಭದ ಕೆಲಸ. ಆದರೆ ಆ ಭೀಷಣತೆ, ಒಮ್ಮೆಮ್ಮೆ ಕ್ರೌರ್ಯವನ್ನೇ ತೋರಿಸುತ್ತ ಬದಕನ್ನೇ ಕಂಗಾಲಾಗಿಸಿಬಿಡುವ ಪ್ರಕೃತಿಯ ಮಡಿಲಲ್ಲಿ ಧೀರವಾಗಿ ಬದುಕೋದು ಅದೆಷ್ಟು ಕಷ್ಟ ಎನ್ನುವ ಜ್ಞಾನೋದಯ ನನಗೆ ಆಗಾಗ ಆಗುತ್ತಿತ್ತಾದರೂ, ಮೊನ್ನೆ ನೆರೆ ಬಂದು ಕಾಡಿನಂಚಿನ ಊರುಗಳು ತತ್ತರಿಸುವ ಹೊತ್ತಿಗೆ ತುಂಬಾ ಗಾಢವಾಗಿ ಆಯ್ತು.

ಈ ಕಾಡಿನಲ್ಲಿ ನಮಗೆ ಬದುಕಲಿಕ್ಕಾಗುವುದೋ? ಇಲ್ಲವೋ? ಆದರೆ ಕಾಡಂಚಿನ ಜನರ ಕಷ್ಟಗಳ ಜೊತೆ ಬೆರೆತು, ಸಾಧ್ಯವಾದಷ್ಟು ನಮ್ಮಿಂದಾಗುವ ಖುಷಿಯನ್ನು ಅವರಿಗೆ ಹಂಚಿ, ಒಂದಷ್ಟು ಹೊತ್ತಾದರೂ ಅವರೊಡನೆ ಕಳೆಯುವ, ನೆರವಾಗುವ, ಅಂತಲೇ ಈಗ ಈ ಕತ್ತಲೆ ಕಾಡಿನ ದಾರಿ ಹಿಡಿದು ಬಂದರೆ ಏನು ಹೇಳೋದು? ಕಾಡ ದಾರಿಯಲ್ಲೆಲ್ಲಾ ಸ್ವರ್ಣೆ ಹೋ ಹೋ ಎಂದು ಬೊಬ್ಬಿರಿದು ಧುಮ್ಮಿಕ್ಕುತ್ತಿದ್ದಾಳೆ, “ಸ್ವರ್ಣೆ, ನೀನು ಮಾತ್ರ ಬೊಬ್ಬೆ ಹೊಡೆದರೆ ಹೇಗೆ? ಇಬ್ಬರೂ ಒಟ್ಟಿಗೆ ಬೊಬ್ಬೆಹಾಕುವ” ಅಂತ ಸ್ವರ್ಣ ಮತ್ತು ಮಳೆ ಮೊದಲೇ ಒಪ್ಪಂದ ಮಾಡಿಕೊಂಡವರಂತೆ ಕಂಡವು.

ಎಷ್ಟೋ ಮೈಲು ದೂರದಿಂದ ಸಣ್ಣ ಸಣ್ಣದಾಗಿ ಬೊಬ್ಬೆ ಹಾಕಿ ಕೊನೆಗೆ ದಪ್ಪ ದಪ್ಪವಾಗಿ ಇಡೀ ಕಾಡಿಯಲ್ಲಿ ಕಿರುಚೇ ಬಿಟ್ಟಿತು ಮಳೆ. ಸ್ವರ್ಣೆ ಮತ್ತು ಮಳೆಯ ಕಿರುಚಾಟ ಎಷ್ಟಿತ್ತೆಂದರೆ ಮಳೆಗಾಲದ ಹಕ್ಕಿಗಳ ಧ್ವನಿಗಳನ್ನು ಕೇಳಬೇಕು, ಹೊಸ ಹೊಸ ಹಕ್ಕಿಗಳ ಗುರ್ತು ಮಾಡಿಕೊಳ್ಳಬೇಕು ಎನ್ನುವ ನನ್ನ ನಿರೀಕ್ಷೆ ಠುಸ್ಸಾಗೇ ಹೋಯ್ತು.

ಹಾಗೇ ಎಷ್ಟೋ ಮೈಲು ಕಾಡ ದಾರಿಯಲ್ಲಿ ಬೈಕೇರಿಸುತ್ತ ಕೊನೆಗೆ ಮುಗಿದೇ ಹೋದ ದಾರಿಯ ತುತ್ತ ತುದಿಗೆ ಬಂದಾಗಲೇ ಸಿಕ್ಕಿದ್ದು ಈ ಪದ್ದಜ್ಜಿಯ ಮನೆ. ದೂರದಿಂದ ನೋಡಿದರೆ ಮಂಜೇ ಹಂಚಿನ ಮನೆಯಾಗಿ, ಹಂಚಿನ ಮನೆಯೇ ಮಂಜಾಗಿ ನಿಂತಿದ್ದ ಆ ಪ್ರದೇಶ ನೋಡಿ ಕನಸಿನಲ್ಲಿ ಕಂಡ ಸ್ವರ್ಗದ ಊರಿನ ಚಿತ್ರವೊಂದು ಕಣ್ಣೆದುರೇ ಬಂದು ನನಸಾದಂತೆನ್ನಿಸಿತು. ಸಾಧಾರಣ ಶೈಲಿಯ ಹಳೆಯ ಹಂಚಿನ ಮನೆ, ಆಚೀಚೆ ಹುಲ್ಲುಗಾವಲು ತುಂಬಿದ ಕೊಂಚ ಎತ್ತರದ ಏರು, ಅದರಾಚೆಗೆ ತೀಕ್ಷ್ಣವಾಗಿ ಕಾಣುವ ವಾಲಿಕುಂಜ, ಕುದುರೆಮುಖ ಪರ್ತತಗಳ ಸಾಲು, ಇವೆಲ್ಲ ನೋಡಿ ಒಂದು ಕ್ಷಣ ಮೈಮರೆತರೂ, “ಇಲ್ಲಿ ಯಾವುದೇ ಮಳೆ ಹಾನಿ ಆದಂತಿಲ್ಲ, ಮನೆ ಕೂಡ ಗಟ್ಟಿಯಾಗಿದೆ” ಎಂದು ಒಂದಷ್ಟು ಸಮಾಧಾನವಾಯ್ತು. ಮನೆ ಅಂಗಳದ ದಾರಿ ಹಿಡಿದರೆ ಅಂಗಳದಲ್ಲೆಲ್ಲಾ ಸಹಜವಾಗಿ ಹಸಿರ ಬಣ್ಣ ಬಳೆದ ಪ್ರಕೃತಿ ಅಲ್ಲೆಲ್ಲಾ ಹಿತವಾದ ಹುಲ್ಲು ಹಾಸು ಹಾಸಿತ್ತು. ಮನೆಗೆ ಯಾರೋ ಬಂದದ್ದು ಗೊತ್ತಾಗಿದ್ದೇ, ಮನೆಯ ಪುಟ್ಟ ಪುಟ್ಟ ಮಕ್ಕಳು ಬಾಗಿಲ ಸಂದಿನಿಂದ, ಕಿಟಕಿ ಬಾಗಿಲ ತೂತಿನಿಂದ ಬೆರಗಾಗಿ ನೋಡತೊಡಗಿದರು. ಹಿರಿಯರು ಹೊರಗೆ ಬಂದು ನಮ್ಮನ್ನು ಸ್ವಾಗತಿಸಿದ ಬಳಿಕವೇ ನಾವು ಬರುತ್ತೇವೆ ಎನ್ನುವಂತಿತ್ತು ಆ ಮಕ್ಕಳ ಬೆರಗಿನ ನೋಟಗಳು.

ಅಷ್ಟೊತ್ತಿಗೆ ಅಜ್ಜಿಯೊಬ್ಬಳು ಹೊರ ಇಣುಕಿದಳು. ಮನೆಯೊಳಗಿದ್ದ ನಗುಮೊಗದ ಗಡ್ಡದಾರಿ ಗಂಡಸೊಬ್ಬ ಹೊರಬಂದು ನಮ್ಮ ಪರಿಚಯ ಮಾಡಿಕೊಂಡು ಕೆಲವೇ ಕ್ಷಣದಲ್ಲಿ ನಮ್ಮ ಮಾತಿನೊಳಗೊಂದಾದ. ಇಂತಹ ಸಣ್ಣ ಪುಟ್ಟ ಊರುಗಳಲ್ಲಿ ಮಾತಾಡಲು ಪರಿಚಯವೇ ಬೇಕಿಲ್ಲ. ನಮ್ಮಲ್ಲಿ ಸಹಜತೆ, ಸ್ವಚ್ಚಂದ, ಸರಳತೆ, ಜೀವನಪ್ರೀತಿ, ಕೌತುಕ ಇದ್ದರೆ ಸಾಕು ಅಷ್ಟೊತ್ತು ಪರಿಚಯವೇ ಇರದವರು ಕೂಡ ಹತ್ತಿರಾಗಿಬಿಡುತ್ತಾರೆ. ಮನುಷ್ಯ ಸಹಜ ಸ್ನೇಹದ ದಾರ ತಂತಾನೇ ಬೆಸೆದುಕೊಳ್ಳುವ ಈ ಕ್ಷಣ ಬದುಕಿಗೆ ತುಂಬಾ ಮುಖ್ಯ ಅನ್ನಿಸುತ್ತದೆ ನಂಗೆ. ಇಂತಹ ಸಹಜ ಮಾತುಕತೆ, ಬೇರ್ಯಾವ ಔಪಚಾರಿಕ ಪರಿಚಯದ ಹಂಗೇ ಇರದೇ ಸೀದಾ ತಮ್ಮ ಕತೆಯನ್ನೇ ಹೇಳಿಬಿಡುವ ಗ್ರಾಮೀಣ ಪರಿಸರದ ನೇರ, ಸ್ವಚ್ಛಂದ ಮಾತುಗಾರಿಕೆ, ಬಣ್ಣ ಬಣ್ಣದ ನಗರಗಳಲ್ಲಿ ಸಿಗಲಾರದು ಅನ್ನಿಸುತ್ತದೆ.

ಒಳ ಬಾಗಿಲಿಂದ ಇಣುಕಿದ ಪದ್ದಜ್ಜಿ ಈಗ ಹೊರಬಂದಳು. ಬೆನ್ನು ಬಾಗಿದ್ದರೂ, ಕೂದಲೆಲ್ಲಾ ಮುಪ್ಪಾಗಿದ್ದರೂ, ಮೈಯೆಲ್ಲಾ ಸುಕ್ಕುಗಟ್ಟಿದ್ದರೂ ಅವಳ ಕಣ್ಣುಗಳು ಫಳ್ಳನೇ ಹೊಳೆಯುತ್ತಿದ್ದವು. ಆ ಕಣ್ಣ ಬೆಳಕಿನಲ್ಲಿ ತಾನು ಕಂಡ ನೂರಾರು ಮಳೆಗಾಲ, ಹೊಳೆಯುವ ಬಿಸಿಲು, ಧಾರೆಯಾಗುವ ಮಂಜು, ಗುಡುಗು-ಸಿಡಿಲಿನ ಮೊರೆದಾಟಗಳು ಕಾಣಿಸುತ್ತಿತ್ತು. ಅವಳ ಸುಕ್ಕುಗಟ್ಟಿ ಭೂಮಿಗೂರಿದ ಪಾದಕ್ಕೆ ನಡೆದ ದಾರಿಯ ಮಣ್ಣಿನ, ಹುಲ್ಲಿನ, ಜಲಪಾತದ, ಉಂಬಳ ರಕ್ತ ಹೀರಿದ ನೆನಪುಗಳಿದ್ದವು, ಅವಳ ಕಿವಿಯಲ್ಲಿ ಹಕ್ಕಿ ಹಾಡಿದ, ಚಿರತೆ ಕಿರುಚಿದ, ಕಾಡುಕೋಣ ತೋಟ ದಾಟಿದ ಸದ್ದುಗಳು ನೆನಪಾದಾಗೆಲ್ಲಾ ಮತ್ತೆ ಮತ್ತೆ ಸದ್ದು ಮಾಡುತ್ತ ಕೂತಿದ್ದಂತೆ ಕಂಡಿತು.

ನಮ್ಮೂರ ಕತ್ತಲೆನಾಡಿನ ಆಸು ಪಾಸೂ ಭೀಕರ ಮಳೆಯಾದುದರಿಂದ ಕತ್ತಲೆಕಾಡಿನಲ್ಲಿರುವ ಮನೆಗಳ ಪರಿಸ್ಥಿತಿಯನ್ನೊಮ್ಮೆ ನೋಡಿ ಬರಬೇಕು, ಅಲ್ಲಿ ಭೀಕರ ಪ್ರವಾಹವೇನೂ ಬಂದಿರದಿದ್ದರೂ ಆಗರ್ಭ ಕಾಡಿನಿಂದಲೇ ತುಂಬಿಹೋಗಿದ್ದ, ಬಗಲಲ್ಲಿ ಬೆಟ್ಟಗಳಿಂದಲೇ ರೌದ್ರವಾಗಿ ಕಾಣಿಸುತ್ತಿದ್ದ ಅಲ್ಲಿ ಯಾವ ಕ್ಷಣಕ್ಕೂ ಏನೂ ಆಗಬಹುದು ಎನ್ನುವ ಭಯ ನಮ್ಮಲ್ಲಿತ್ತು.

“ಇಲ್ಲಿಂದ ನೂರು ಹೆಜ್ಜೆ ಕಾಡ ದಾರಿಯಲ್ಲಿ ಸಾಗಿದ್ರೆ ಸೀತಾ ನದಿ ಧಾರೆಯಾಗಿ ಬೀಳುವುದು ಕಾಣ್ತದೆ. ಹಿಂದೆ ನಾನೂ ಅಲ್ಲಿಗೆ ಹೋಗಿದ್ದಿದೆ. ರಟ್ಟೆ ಮುರಿಯುವಷ್ಟು ಕೆಲಸ ಮಾಡುತ್ತಿದ್ದೆವು ಆಗೆಲ್ಲಾ. ಈಗ ಹೌದಾ ನಾನು ಅಷ್ಟೊಂದು ಕೆಲಸ ಮಾಡ್ತಿದ್ದೆನಾ ಅಂತ ನೆನೆದರೆ ಆಶ್ಚರ್ಯವಾಗ್ತದೆ. ಮೊನ್ನೆ ಅಂತಹ ಕುಂಬದ್ರೋಣ ಮಳೆ ಬಂದಾಗ ನಾವು ಮನೆಯೊಳಗೆ ನಡುಗುತ್ತಾ ಕೂತಿದ್ದೆವು. ಸೀತೆ ಹರಿದು ಈ ಕಡೆ ಬಂದ್ರೆ ನಾವೆಲ್ಲಾ ಕೊಚ್ಚೇ ಹೋಗ್ತಿದ್ವಿ. ಹೊರಗೆ ಹೋಗಲು ಭಯ ಅಂತಹ ಗಾಳಿ ಮಳೆ, ರಾತ್ರಿಯೆಲ್ಲಾ ಬಿಡದೇ ಸುರಿತಾನೇ ಇತ್ತು. ಕಿಟಕಿಯಿಂದ ನೋಡಿದ್ರೆ ನಮ್ಗೆ ಈ ಕಾಡು ನೋಡಿ ಭಯವಾಗ್ತಿತ್ತು. ಇದು ನನ್ನ ಬದುಕಿನ ಕೊನೆಯ ದಿನವೇನೋ ಅಂದುಕೊಂಡು, ಸತ್ತರೆ ಸಾಯೋದು ಅಂತ ಧೈರ್ಯ ಮಾಡಿಕೊಂಡು ಗರಬಡಿದವಳಂತೆ ಕೂತೆ. ರಾತ್ರಿಯೆಲ್ಲಾ ನಾವು ಯಾವುದೋ ಲೋಕದಲ್ಲಿ ತೇಲಿ ಕೊಚ್ಚಿ ಹೋಗೇಬಿಡ್ತೇವೆ ಅನ್ನಿಸ್ತಿತ್ತು. ನಿದ್ದೆ ಬರದೇ ಆಗಾಗ ಎದ್ದು ಕಿಟಕಿಯಿಂದ ನೋಡಿದರೆ ಮತ್ತೆ ಅಬ್ಬಾ ಹೆದ್ರಿಕೆ. ಆ ಹೆದರಿಕೆಯಲ್ಲೇ ರಾತ್ರಿ ಕಳೆದು ಹಗಲಾದಾಗ ಮಳೆ ಸ್ವಲ್ಪ ಕಡಿಮೆ ಆಯ್ತು. ನಮಗೆ ಹೋದ ಜೀವ ಮತ್ತೆ ಬಂತು” ಎಂದು ತಾನು ಅನುಭವಿಸಿದ್ದನ್ನು ಹೇಳುತ್ತಿದ್ದ ಪದ್ದಜ್ಜಿಯ ಕಣ್ಣುಗಳು ಮತ್ತೆ ಆ ಮಳೆ ಕಂಡಂತೆ ನಡುತ್ತಿದ್ದವು. ಅಲ್ಲೇ ಇದ್ದ ಅವಳ ಪುಟ್ಟ ಪುಟ್ಟ ಮೊಮ್ಮಕ್ಕಳು ಅಜ್ಜಿ ಹೇಳಿದ್ದನ್ನು ಕೇಳುತ್ತ ಕಂಗಳಲ್ಲಿ ಭಯ ತುಂಬಿಕೊಂಡವು.

“ನಮಗಿಲ್ಲಿ ಅಡಿಕೆ ತೋಟ, ಸ್ವಲ್ಪ ಗದ್ದೆ ಇದೆ ಅಷ್ಟೆ. ಅದರಲ್ಲೇ ಜೀವನ ಸಾಗ್ತಾ ಉಂಟು. ಈ ವರ್ಷ ಮಳೆ ಗಾಳಿ ಜಾಸ್ತಿಯೇ ಬಿದ್ದದ್ದರಿಂದ ಅಡಿಕೆ ತೋಟಕ್ಕೆ ಸ್ವಲ್ಪ ಹಾನಿಯಾಗಿದೆ. ಇಷ್ಟು ವರ್ಷ ಕಾಡಲ್ಲಿ ಬದುಕೋದು, ಬೆಟ್ಟದ ತಪ್ಪಲಿಗೆ ಹೋಗೋದು ಏನೂ ಭಯ ಹುಟ್ಟಿಸ್ತಿರ್ಲಿಲ್ಲ. ಆದರೆ ಸಂಬಂಧಿಕರ ಮೇಲೆ ಅದೇ ಪ್ರಕೃತಿ ಮುನಿದದ್ದು ನೋಡಿದರೆ ನಮಗೂ ಸ್ವಲ್ಪ ಹೆದ್ರಿಕೆಯಾಗಿದೆ” ಎಂದಳು ಪದ್ದಜ್ಜಿ, ಹೊರಗೆ ಮಂಜು ಅತಿಯಾದ್ದರಿಂದ ಪದ್ದಜ್ಜಿಯ ಬೆಳ್ಳಗಾದ ಕೂದಲ ಮೇಲೆ ಮಂಜಿನ ಹನಿಗಳು ಉದುರುತ್ತಿದ್ದವು.

ಕೊನೆಗೆ ಅದೂ ಇದೂ ಮಾತಾಗುತ್ತ, ಅವಳ ಮಗ ಸದಾಶಿವ “ನಿಮಗೊಂದು ಜಲಪಾತ ತೋರಿಸ್ತೇನೆ. ಈಗ ಮಳೆ ಬೇರೆ ಕಡಿಮೆಯಾಗಿದೆ. ಬೇಗ ಹೋಗಿ ಬರಬಹುದು” ಎಂದು ಆಸೆ ಹುಟ್ಟಿಸಿದರು. ಕಣ್ಣಲ್ಲೇ ತುಂಬಿದ್ದ ಪ್ರಕೃತಿಯ ರೌದ್ರತೆಯ ಕತೆಗಳನ್ನು ಪಕ್ಕಕ್ಕೆ ಸರಿಸುತ್ತ ಅವರ ಜೊತೆ ಜಲಪಾತದ ಸೌಂದರ್ಯವನ್ನು ಕಾಣುವ ಆತುರದಿಂದ ದಟ್ಟ ಕಾಡಿನ ದಾರಿ ಸಾಗಿದೆವು. ಅಷ್ಟೊಷ್ಟಿಗೆ ಮಳೆ ನೆತ್ತಿಗೆ ಹೊಡೆದುಕೊಳ್ಳತೊಡಗಿತು. ಸಾಗುತ್ತಿದ್ದ ದಾರಿಯಲ್ಲೆಲ್ಲಾ ನೀರು ತುಂಬಿ ಸಣ್ಣ ಪುಟ್ಟ ಕಿರು ಜಲಪಾತದಂತೆಯೇ ಕಾಣಿಸುತ್ತಿತ್ತು. ಮಳೆ ಸದ್ದು ಬಿಟ್ಟರೆ ಬೇರೆ ಯಾವ ಸದ್ದುಗಳೂ ಕೇಳಿಸದೇ ಇಡೀ ಕಾಡೆಲ್ಲಾ ಮಳೆಗೆ ಮಿಂದು ಸುಖಿಸತೊಡಗಿತ್ತು.

“ನೋಡಿ ಈ ಗಿಡ. ಇದರ ಎಲೆ ನಿಮ್ಮ ಕೈಗೆ ಅಥವಾ ಕಾಲಿಗೆ ತಾಗಿ ಅಲ್ಲಿ ನೀರು ಬಿದ್ದರೆ ಬಾತಿ, ಕೊನೆಗೆ ನಿಮಗೆ ಹುಚ್ಚುಹಿಡಿದಂತಾಗುತ್ತದೆ. ಕೊನೆಗೆ ಜೀವವೇ ಹೋಗುತ್ತದೆ” ಎಂದ ಸದಾಶಿವರು ಆ ಗಿಡ ಎಲ್ಲೆಲ್ಲಿ ಇದೆ ಅಂತ ತೋರಿಸಿ ಅತ್ತ ನಡೆಯಬೇಡಿ ಎಂದು ನಮಗೆ ಬೇರೆ ದಾರಿ ಮಾಡಿಕೊಟ್ಟರು.

‘ಇಂಥದ್ದೂ ಒಂದು ಗಿಡವಿದೆಯಾ?’ ಎಂದು ಅಚ್ಚರಿಯಾಗಿ ನಾವೀಗ ಇನ್ನೂ ಎಚ್ಚರಿಕೆಯಿಂದ ಹೆಜ್ಜೆ ಇಡಲು ತೊಡಗಿದೆವು. ಆ ಗಿಡ ದಟ್ಟ ಕಾಡಲ್ಲಿ ಮಾತ್ರ ಬೆಳೆಯುತ್ತದಂತೆ, ಮಳೆಗಾಲದಲ್ಲಿ ಅದರ ಬೆಳವಣಿಗೆ ಜಾಸ್ತಿಯಂತೆ ಎಂದು ಗೊತ್ತಾದ ಕೂಡಲೇ ಕಾಡಿನ ಸಸ್ಯ ವೈವಿದ್ಯದ ಕುರಿತು, ಅದರ ಪರಿಣಾಮದ ಕುರಿತು ಅಚ್ಚರಿಯಾಯ್ತು.

ಹಾಗೇ ಆ ದಟ್ಟ ಕಾಡಲ್ಲಿ ಕೊಂಚ ದೂರ ಸಾಗುವಾಗಲೇ ಕೇಳಿಸಿದ ದೊಡ್ಡ ಜಲಪಾತದ ಮೊರೆತ ಎಷ್ಟು ತೀಕ್ಣವಾಗಿತ್ತೆಂದರೆ, ಅದರ ಸದ್ದಿಗೆ ಇಡೀ ಕಾಡೇ ಕಂಪಿಸುತ್ತಿತ್ತು. ಇನ್ನು ನಾವು ಕಂಪಿಸದೇ ಇರುತ್ತೇವೆಯೇ? ಕೊಂಚ ದೂರದಲ್ಲಿದ್ದಾಗಲೇ ಬೆನ್ನಟ್ಟಿಕೊಂಡು ಬಂದ ಜಲಪಾತದ ಥಂಡಿ ಥಂಡಿ ನೀರಿನ ಕಣಗಳು ಮಳೆ ಹನಿಗಿಂತಲೂ ಬೇರೆಯದ್ದೇ ಆಗಿ ಕಂಡಿತು. ದಟ್ಟ ಕಾಡಿನ ನಡುವೆ ದಿಟ್ಟವಾಗಿ ಧುಮ್ಮಿಕ್ಕಿ ಸೀತಾ ನದಿಯಲ್ಲಿ ಲೀನವಾಗುವ ಈ ಹಾಲಿನಂತಹ ನೊರೆಯ ರಾಶಿ ಒಂದೇ ಸಮನೆ ಚಿಮ್ಮುವುದನ್ನು, ಕರಿಬಂಡೆಗಳಿಗಪ್ಪಳಿಸಿ ಬಿದ್ದು ಮತ್ತೆ ರೊಯ್ಯನೇ ಆಳಕ್ಕಿಳಿದು ದೂರ ಓಡುವುದನ್ನೇ ನಿಂತು ನೋಡುತ್ತಿದ್ದೆವು.

ಸುಮಾರು 160-180 ಅಡಿ ಎತ್ತರದಿಂದ ಧುಮುಕುವ ಜಲಪಾತವನ್ನೇ ಒಮ್ಮೆ ಧ್ಯಾನಸ್ಥನಾಗಿ ನಿಂತು ನೋಡಬೇಕು, ನೋಡುತ್ತ ನೋಡುತ್ತ ಅದು ಜಲಪಾತ ಎನ್ನುವುದೂ ಮರೆತು ಹೋಗುತ್ತದೆ. ನಮ್ಮ ಮನಸ್ಸೇ ಅದು ಅನ್ನಿಸಲು ಶುರುವಾಗುತ್ತದೆ. ರೌದ್ರವಾಗುವ, ಬೀಭತ್ಸ್ಯವಾಗುವ, ಮಳೆಗಾಲ ಕಳೆದದ್ದೇ ಶಾಂತವಾಗುವ, ಎಲ್ಲಾ ಕಾಲದಲ್ಲೂ ತನ್ನ ಚೆಲುವನ್ನು ಕಳೆದುಕೊಳ್ಳದ ಜಲಪಾತಕ್ಕೆ ಎಷ್ಟೊಂದು ಗುಣಗಳಿವೆ. ಅದರ ಜೊತೆ ನಾವು ಎಚ್ಚರವಾಗಿದ್ದರೆ ಅದರ ಚೆಲುವನ್ನೂ, ತಂಪನ್ನೂ ಆಸ್ವಾದಿಸಬಹುದು, ಎಚ್ಚರ ಮರೆತರೆ ಅದರ ಧಾರೆಯ ಜೊತೆಗೇ ನಾವು ಕೊಚ್ಚಿ ಹೋಗಲೂಬಹುದು. ನಾವು ಕಂಡ ಕನಸು, ಬಾಳಿನ ಮೂಲೋದ್ದೇಶ, ಸಂಸಾರ, ಯೌವ್ವನದ ಕನಸು, ಗುರಿ, ಇವನ್ನೆಲ್ಲಾ ಒಂದೇ ಒಂದು ಕ್ಷಣದಲ್ಲಿ ಶೂನ್ಯವಾಗಿಸಿಬಿಡಲು ಪ್ರಕೃತಿಗೆ ಎಷ್ಟು ಹೊತ್ತು ಬೇಕು?
ನಾನು ಬಾಳಿನ ಧಾರೆಯಂತೆ ಜಲಪಾತವನ್ನೂ ನೋಡುತ್ತಿದ್ದೆ. ಮಳೆಯ ಬೀಸು ಇನ್ನಷ್ಟು ಜೋರಾಯ್ತು. ಪ್ರಕೃತಿಯ ಹರಿವಿನ ಮುಂದೆ ನಾವು ಶೂನ್ಯರೇ, ತಂತ್ರಜ್ಞಾನದಲ್ಲಿ ನಾವೆಲ್ಲೋ ದೂರ ತಲುಪಿಬಿಡಬಹುದು. ಆದರೆ ಪ್ರಕೃತಿಯ ಚೆಲುವನ್ನು ಮೀರಿಸೋ, ಅದರ ಶಕ್ತಿಯನ್ನು ಮೀರಿಸೋ ತಂತ್ರಜ್ಞಾನ ಮಾತ್ರ ಯಾವತ್ತೂ ಬರಲು ಸಾಧ್ಯವಿಲ್ಲ ಅಂತ ಮತ್ತೆ ಮತ್ತೆ ಅನ್ನಿಸುತ್ತಲೇ ಇತ್ತು.

ಈ ಕಾಡಿನಲ್ಲಿರುವ ಪದ್ದಜ್ಜಿಯ ಮನೆಗೆ ಯಾವ ಮಳೆಗಾಲದಲ್ಲಿಯೂ ಏನೂ ಆಗದಿರಲಿ, ಇಲ್ಲಿರುವ ಜನರೆಲ್ಲಾ ಸುಭೀಕ್ಷರಾಗಿರಲಿ ಎಂದು ಕಣ್ಣೆದುರೇ ಕಾನನದ ದೇವರಲ್ಲಿ ಬೇಡಿಕೊಂಡೆ. ಆದರೆ ಪ್ರಕೃತಿಯ ಗುರಿ ಯಾರಿಗೆ ಗೊತ್ತು? ಅದರ ಉದ್ದೇಶವನ್ನು ನಾವು ತಡೆದಿಡಲು ಹೇಗೆ ಸಾಧ್ಯ, ಅದು ಈಜಿಸಿದರೆ ಈಜೋದು, ಮುಳಗಿಸಿದರೆ ಮುಳುಗೋದು ಅಲ್ಲವಾ!

ಮಳೆ ಈಗ ರೌದ್ರವಾಗಿ ಸುರಿಯತೊಡಗಿತು. ಸದಾಶಿವರಿಗೆ ಜಲಪಾತ ತೋರಿಸಿದ್ದಕ್ಕೆ ಕೃತಜ್ಞತೆ ಹೇಳುತ್ತ ಅಲ್ಲಿಂದ ಬೈಕೇರಿ ಹೊರಟಾಗ ಮಳೆ ಮತ್ತೂ ಜಾಸ್ತಿಯಾಯ್ತು, ಕಾಡಲ್ಲಿ ಇನ್ನಷ್ಟು ಕತ್ತಲಾಯ್ತು. ಎದುರಿಗಿರುವ ಏರು ದಾರಿಯಿಂದ ಮಳೆ ನೀರು ನಮ್ಮ ಮೈ ಮೇಲೆ ಬರುವಂತೆ ಧುಮ್ಮಿಕ್ಕುತ್ತಲೇ ಇತ್ತು. ಮತ್ತೊಂದೆಡೆ ಆಳವಾದ ಪ್ರಪಾತದಲ್ಲಿ ಹೊಳೆಯು ಬೋರ್ಗರೆಯುತ್ತಿತ್ತು. ನಾವು ಮೈಮರೆತರೂ ಜೀವ ಪ್ರಕೃತಿಯಲ್ಲಿ ಲೀನವಾಗಿ ಬಿಡಬಹುದಿತ್ತು. ಮತ್ತೆ ಆಗ ಬಂದ ಯೋಚನೆಯ ನೆನಪು ಬಂತು “ಪ್ರಕೃತಿ ಈಜಿಸಿದರೆ ಈಜೋದು, ಮುಳಗಿಸಿದರೆ ಮುಳುಗೋದು”. ಏನೇ ಆಗಲಿ ನಾವೀಗ ದಾರಿ ಸಾಗೋದು, ದಾರಿಯಲ್ಲಿ ಏನಾದರೂ ಅದನ್ನು ಅನುಭವಿಸೋದು ಎಂದುಕೊಂಡು ದುರ್ಗಮ ಹಾದಿ ದಾಟಿ ಇನ್ನೊಂದು ಮಣ್ಣ ಹಾದಿ ಹಿಡಿದರೂ ಕಾಡಿನಲ್ಲಿ ಮಳೆ ನಿಲ್ಲಲೇ ಇಲ್ಲ. ದೂರದಲ್ಲಿ ನಿಂತಿದ್ದ ವಾಲಿಕುಂಜ ಬೆಟ್ಟದ ಮೂತಿ ಆ ಮಳೆಯಲ್ಲಿ ಭಯಾನಕವಗಿ ಕಂಡಿತು.