ಅಂಥ ಮಾತುಗಾರನಲ್ಲದೆ ಹೋದರು ವಸೀಬ ಶುದ್ಧ ವ್ಯವಹಾರಸ್ಥನಾಗಿದ್ದ. ಅವನ ಬಳಿ ಬರುವ ಗಿರಾಕಿಗಳೊಂದಿಗೆ ಹೇಗೆ ವರ್ತಿಸಿ ವಿಶ್ವಾಸಗಳಿಸಿಕೊಳ್ಳಬೇಕೆಂಬುದ ಸಾಕಷ್ಟು ಪ್ರಯತ್ನ ಪೂರ್ವಕವಾಗಿ ರೂಢಿಸಿಕೊಂಡಿದ್ದ. ಬೆಳಿಗ್ಗೆ 5ರ ಜಾವಕ್ಕೆ ಇವನ ಪೆಟ್ಟಿ ಅಂಗಡಿ ತನ್ನ ಜೋಡಿರೆಕ್ಕೆಯಂತ ಬಾಗಿಲುಗಳ ಬಿಡಿಸಿಕೊಳ್ಳುತ್ತಿತ್ತು. ಅಲ್ಲಿಗೆ ಅಂದಿನ ದಿನಪತ್ರಿಕೆಗಳೆಲ್ಲ ಬಂಡಲ್‌ನಲ್ಲಿ ಬಂದು ಬೀಳುತ್ತಿದ್ದವು. ಮುಂದೆ ಇಲ್ಲಿಂದ ತಲುಪಬೇಕಾದ ಊರು, ಮನೆ, ಅಂಗಡಿ, ಹೋಟಲ್‌ಗಳ ನಿರ್ಧರಿಸಿಕೊಂಡು ಇತರರ ಕೈಸೇರಲು ಸಿದ್ಧವಾಗುತ್ತಿತ್ತು.
ಆರ್. ಪವನ್ ಕುಮಾರ್ ಬರೆದ ಈ ಭಾನುವಾರ್ದ ಕತೆ “ವಸೀಬ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಇನ್ನೆಷ್ಟು ಹೊತ್ತು ಇಲ್ಲಿ ಹೀಗೆ ಕುಳಿತಿರುವುದು ಎಂದುಕೊಂಡ ವಸೀಬ. ಅವನಿಗೆ ತಾನು ಕುಳಿತಲ್ಲೆ ಮರಗಟ್ಟಿ ಹೋಗುವೆನೆಂಬ ಭಾವ. ತನ್ನ ಪೆಟ್ಟಿ ಅಂಗಡಿಯ ಬೆಂಕಿ ಪ್ರಕರಣದಿಂದ ತನಗೆಂದು ಮುಕ್ತಿಯಿಲ್ಲವೇನೋ ಅನಿಸಿತ್ತು. ಅದು ದಹನಕ್ಕೆ ಸಿಕ್ಕ ವಸ್ತುವಿನೊಂದಿಗೆ ಒಂದೇ ಸಮ ಉರಿಯುತ್ತ ಮುಗಿಲ ಕಡೆ ದಟ್ಟಹೊಗೆ ಹೊರಡಲು ಅದರ ಮುಂದೆ ನಿರ್ಲಿಪ್ತನಂತೆ ನಿಂತಿದ್ದ. ಹಳದಿ, ಕೆಂಪು ಮಿಶ್ರಿತ ಜ್ವಾಲೆ ವಸೀಬನ ಪುಟ್ಟ ಪೆಟ್ಟಿ ಅಂಗಡಿಯನ್ನು ತನ್ನಿಂದ ಆದಷ್ಟು ಉರಿದು ಬೂದಿ ಮಾಡುತ್ತಿತ್ತು. ಅದರೊಳಗಿದ್ದ ದಿನ, ವಾರ, ಮಾಸಪತ್ರಿಕೆಗಳೆಲ್ಲ ಬೆಂಕಿಯನ್ನು ಬೆಂಬಲಿಸಿದಂತೆ ಕ್ಷಣದೊಳಗೆ ಉರಿದು ಭಸ್ಮವಾದವು. ವಸೀಬನ ಬಂಡವಾಳ ಪೂರ್ತಿ ಬೆಂಕಿಗೆ ಅರ್ಪಿಸಿದ ಮೇಲೆ ಅವನ ಬದುಕು ಬೀದಿಗೆ ಬಂದಿತ್ತು. ಇವನು ಎಷ್ಟೋ ವರ್ಷದಿಂದ ಪತ್ರಿಕೆಗಳ ಮಾರಾಟವನ್ನೆ ವೃತ್ತಿ ಮಾಡಿಕೊಂಡಿದ್ದ. ಹೊಟ್ಟೆಬಟ್ಟೆಯ ಜತೆ ಸಂಸಾರದ ನಿರ್ವಹಣೆಗೂ ಇದೇ ಆಧಾರವಾಗಿತ್ತು. ರೈಲು ನಿಲ್ದಾಣದ ಸಮೀಪದಲ್ಲೆ ಪೆಟ್ಟಿ ಅಂಗಡಿಗೆ ಸ್ಥಳವಕಾಶ ಪಡೆದುಕೊಂಡಿದ್ದನಾದರು ಅದಕ್ಕೆ ಅಂಥ ಸುರಕ್ಷತೆ ಇರಲಿಲ್ಲ. ದಪ್ಪ ಬೀಗ ಒಂದನ್ನೂ ಸಣ್ಣ ಬಾಗಿಲಿಗೆ ಸೇರಿಸಿ ಹಾಕುವ ಹೊರತು ಬೇರೆ ಭದ್ರತೆ ಇರಲಿಲ್ಲ. ಅವನಿಗೆ ಓದುವ ಪತ್ರಿಕೆಯನ್ನು ಯಾರು ಕದ್ದಾರು ಎಂಬ ಉಡಾಫೆ. ಬೆಳಗಿನಿಂದ ಮಾಡಿದ ವ್ಯಾಪಾರವೆಲ್ಲ ಅವನ ಕಿಸೆ ಸೇರಿದ ಮೇಲೆ ಗಲ್ಲಾ ಖಾಲಿ ಉಳಿಸ ಬಾರದೆಂಬ ಶಾಸ್ತ್ರಕ್ಕೆ ಅಲ್ಲೊಂದಷ್ಟು ಹಳೇ ಹರಿದ ನೋಟುಗಳ ಇರಿಸಿದ್ದ. ಅವು ಯಾವ ಕಾಲಕ್ಕೂ ಅಲ್ಲಿಂದ ಸ್ಥಳ ಬದಲಾವಣೆ ಕಂಡಿರಲಿಲ್ಲ. ಉಳಿದಂತೆ ಅಂಗಡಿಯೊಳಗೆ ಚೂರು ಜಾಗ ಉಳಿಸದೆ ಪತ್ರಿಕೆಗಳು ತುಂಬಿಕೊಂಡಿದ್ದವು. ವಸೀಬನ ಬಳಿ ಸರಿ ಸುಮಾರು 5, 6 ಭಾಷೆಯ ಬೇರೆ ಬೇರೆ ನಿಯತಕಾಲಿಕೆಗಳು, ದಿನಪತ್ರಿಕೆಗಳೆಲ್ಲವು ಲಭ್ಯವಿದ್ದರಿಂದ ಗ್ರಾಹಕರು ಹುಡುಕಿ ಬರುತ್ತಿದ್ದರು. ಕನ್ನಡಕ್ಕೆ ಸಂಬಂಧಿಸಿದ ಯಾವೊಂದು ಪತ್ರಿಕೆಯು ಇಲ್ಲವೆನ್ನುವಂತಿರಲಿಲ್ಲ. ಮಾರಾಟಕ್ಕಲ್ಲದೆ ಹೋದರು ಒಂದು ಕಾಫಿ ಸಂಗ್ರಹ ಯೋಗ್ಯವಾಗುವಂತೆ ಅವನ ಬಳಿ ಇರುತ್ತಿತ್ತು. ವಸೀಬನ ಪೆಟ್ಟಿ ಅಂಗಡಿಯನ್ನ ಕಾಲದಿಂದ ಕಂಡವರು `ಪೇಪರ್ ವಸೀಬ’ನೆಂದು ಕರೆಯುತ್ತಿದ್ದರು. ಇವನಿಗೆ ಪ್ರಾಯ 50ರ ಮೇಲಾಗಿತ್ತು. ಮೊದಲಿಗೆ ಪತ್ರಿಕೆಗಳ ನೆಲದ ಮೇಲೆ ಹಾಸಿದಂತೆ ಹರಡಿ ಮಾರಾಟ ಮಾಡಲು ಆರಂಭಿಸಿದವನು ಇದೇ ಕಾಯಕದಲ್ಲಿ ನಿಧಾನವಾಗಿ ಚೇತರಿಸಿಕೊಂಡಂತೆ ಮುಂದೆ ಅದು ಪೆಟ್ಟಿ ಅಂಗಡಿಯಾಗಿ ಬದಲಾಗಿತ್ತು.
ಅಂಥ ಮಾತುಗಾರನಲ್ಲದೆ ಹೋದರು ವಸೀಬ ಶುದ್ಧ ವ್ಯವಹಾರಸ್ಥನಾಗಿದ್ದ. ಅವನ ಬಳಿ ಬರುವ ಗಿರಾಕಿಗಳೊಂದಿಗೆ ಹೇಗೆ ವರ್ತಿಸಿ ವಿಶ್ವಾಸಗಳಿಸಿಕೊಳ್ಳಬೇಕೆಂಬುದ ಸಾಕಷ್ಟು ಪ್ರಯತ್ನ ಪೂರ್ವಕವಾಗಿ ರೂಢಿಸಿಕೊಂಡಿದ್ದ. ಬೆಳಿಗ್ಗೆ 5ರ ಜಾವಕ್ಕೆ ಇವನ ಪೆಟ್ಟಿ ಅಂಗಡಿ ತನ್ನ ಜೋಡಿರೆಕ್ಕೆಯಂತ ಬಾಗಿಲುಗಳ ಬಿಡಿಸಿಕೊಳ್ಳುತ್ತಿತ್ತು. ಅಲ್ಲಿಗೆ ಅಂದಿನ ದಿನಪತ್ರಿಕೆಗಳೆಲ್ಲ ಬಂಡಲ್‌ನಲ್ಲಿ ಬಂದು ಬೀಳುತ್ತಿದ್ದವು. ಮುಂದೆ ಇಲ್ಲಿಂದ ತಲುಪಬೇಕಾದ ಊರು, ಮನೆ, ಅಂಗಡಿ, ಹೋಟಲ್‌ಗಳ ನಿರ್ಧರಿಸಿಕೊಂಡು ಇತರರ ಕೈಸೇರಲು ಸಿದ್ಧವಾಗುತ್ತಿತ್ತು. ಪ್ರತಿ ಪತ್ರಿಕೆಗಳ ಆ ದಿನದ ವಿಶೇಷ ಪುರವಣಿಗಳ ನಯವಾಗಿ ಜೋಡಿಸಿಕೊಳ್ಳುತ್ತ, ಅದಕ್ಕೆ ಸಿಕ್ಕ ಸ್ಥಳೀಯ ಜಾಹೀರಾತುದಾರರ ಕರಪತ್ರಗಳಿದ್ದರೆ ಅದನ್ನು ಒಳಗೆ ತುರುಕುತ್ತಿದ್ದ. ಈ ಕಾರ್ಯಕ್ಕೆಂದು ಅವರಿಂದ ಇವನಿಗೆ ಇಷ್ಟು ಹಣ ಸಂದಾಯವಾಗುತ್ತಿತ್ತು. ಮಳೆ, ಚಳಿ ಎನ್ನದೆ ಅನಾಯಾಸವಾಗಿ ಬೆಳಕು ಕಾಣುವ ಮುನ್ನವೇ ಈ ಎಲ್ಲಾ ಕಾರ್ಯ ಚಟುವಟಿಕೆಗಳು ವಸೀಬನ ಪೆಟ್ಟಿ ಅಂಗಡಿ ಬಳಿ ನಡೆದು ತೀರುತ್ತಿದ್ದವು. ಈ ಸ್ಥಳೀಯ ಸಣ್ಣಪುಟ್ಟ ಜಾಹೀರಾತು ಕರಪತ್ರಗಳ ದಿನಪತ್ರಿಕೆಯೊಂದಿಗೆ ಸೇರಿಸುವ ಜವಾಬ್ದಾರಿಯನ್ನು ವಸೀಬ ವಹಿಸಿಕೊಂಡಿರುತ್ತಿದ್ದ. ಇದು ಅವನ ನೇತೃತ್ವದಲ್ಲಿ ನಡೆಯುವ ಕಾರ್ಯವಾಗಿತ್ತು. ಈ ರೀತಿ ತಮ್ಮ ಜಾಹೀರಾತುಗಳ ಕರಪತ್ರಗಳಲ್ಲಿ ಮುದ್ರಿಸಿಕೊಂಡವರು ವಸೀಬನ ಭೇಟಿ ಮಾಡಿ ವ್ಯವಹಾರ ಕುದುರಿಸುತ್ತಿದ್ದರು. ಅದೇನಂಥ ಮಹಾವ್ಯವಹಾರವಲ್ಲದೆ ಹೋದರೂ ಖುದ್ದು ನಿಂತು ತಲುಪಿಸುವ ಕೆಲಸ ಕಡಿಮೆಯದ್ದಾಗಿರಲಿಲ್ಲ. ಇದರಿಂದ ವಸೀಬನಿಗೆ ಹೇಳಿಕೊಳ್ಳುವ ಲಾಭವಿರಲಿಲ್ಲ. ಆದರೆ, ಜನರೊಂದಿಗಿನ ಸಂಪರ್ಕ ಮತ್ತು ವಿಶ್ವಾಸಕ್ಕೆ ಅಡಿಪಾಯವಾಗಿತ್ತು. ಹಾಗೆ ನೋಡಿದರೆ ವಸೀಬನ ವಿದ್ಯಾಭ್ಯಾಸ ಕೂಡ ಸಹಿ ಹಾಕಲಷ್ಟೆ ಸೀಮಿತವಾಗಿದ್ದು, ಆದರಾಚೆಗೆ ಓದುವ, ಬರೆಯುವ ಯಾವ ಹವ್ಯಾಸಗಳು ಇರಲಿಲ್ಲ. ಕೇಳಿದವರಿಗೆ ಮಾತ್ರ ಬೇಕಾದ ಪತ್ರಿಕೆಯನ್ನು ತಪ್ಪಿಲ್ಲದೆ ಎತ್ತಿಕೊಡುತ್ತಿದ್ದ. ಇದು ಅವನಿಗೆ ಅನುಭವದಿಂದ ಸಿದ್ಧಿಸಿರುವ ಕಲೆಯಾಗಿತ್ತು. ಇವನ ಬಳಿ ಬರುವ ಕೆಲ ತೀರ ಪರಿಚಿತರು “ಅಂಗಡಿ ತುಂಬಾ ಜ್ಞಾನ ತುಂಬಿಕೊಂಡು ತಲೆ ಖಾಲಿ ಇಟ್ಟಕೊಂಡಿದ್ಯಲ್ಲಾ ವಸೀಬಾ, ಚೂರು ಸಮಾಧಾನಕ್ಕಾದ್ರು ಓದು ಕಲೀ ಬೇಡ್ವೆ?” ಎಂದು ಕೇಳಿದರೆ ವಸೀಬ “ನಮ್ದು ಅಂಗಡಿ ಗ್ಯಾನ ಎಲ್ಲಾ ನಾವೇ ತಲೆಗೆ ತುಂಬಕೊಂಡ್ರೆ ಗಿರಾಕಿಗೆ ಏನ್ ಮಾರೋದು? ನಮ್ಗೆ ತಲೆಗೆ ಇಲ್ಲಾಂದ್ರೆ ನಡೆತೂದೆ, ಹೊಟ್ಟೆಗೆ ಇಲ್ಲಾಂದ್ರೆ ಕಷ್ಟ” ಎನ್ನುವ ಮಾತಿನ ತರ್ಕವನ್ನು ಹೊಟ್ಟೆಯ ದೃಷ್ಟಿಕೋನದಲ್ಲಿ ನೋಡಲು ಸರಿ ಎಂದುಕೊಂಡರು. ಆದರೆ, ಜ್ಞಾನವೆಂದರೆ ಖರ್ಚಾಗುವುದು, ಖಾಲಿಯಾಗುವುದೆಂದು ಭಾವಿಸಿದ ಈ ಮುಠ್ಠಾಳನಿಗೆ ಮುಂದೇನು ಹೇಳುವುದೆಂದು ತಿಳಿಯುತ್ತಿರಲಿಲ್ಲ. ವಸೀಬನ ಮುಖ ನೋಡಲು ಅಲ್ಲಿ ಸಣ್ಣ ಕಿರುನಗೆಯೊಂದು ಇಣುಕಿ ನೋಡುತ್ತ ಸರಿಯಾದ ಜವಾಬ್‌ಕೊಟ್ಟನೆಂದು ಹೆಮ್ಮೆ ಪಡುತ್ತಿತ್ತು.
ಇವನ ಈ ಪೆಟ್ಟಿ ಅಂಗಡಿ ವ್ಯಾಪಾರ ಬೆಳಿಗ್ಗೆ 10ರ ಮೇಲೆ ಕುಳಿತು ಮಾತನಾಡುತ್ತ ದೇಶಕಾಲಗಳ ಹಾದುಹೋಗುವವರ ಪಾಲಿಗೆ ಮೆಚ್ಚಿನ ಹರಟೆ ತಾಣವಾಗಿ ಮಾರ್ಪಾಟಾಗುತ್ತಿತ್ತು. ಜನನಿಬಿಡ ಪ್ರದೇಶವಾದರೂ ಅಷ್ಟೊಂದು ಸದ್ದುಗದ್ದಲದ ನಡುವೆ ಇಲ್ಲಿ ಸೇರಿದ ಗುಂಪು ವರ್ತಮಾನಗಳ ಸುದ್ದಿ ಪಡೆದು ಅದರ ಸಾಧಕ, ಬಾಧಕಗಳ ಬಗ್ಗೆ ಚರ್ಚಿಸುತ್ತಿತ್ತು. ವಸೀಬ ಜಾವದಲ್ಲೆ ಎದ್ದು ಬಂದ ಪರಿಣಾಮ ಕುಳಿತಲ್ಲೆ ನಿದ್ದೆ ಹೋಗುತ್ತಿದ್ದ. ಮಧ್ಯಾಹ್ನ 12 ಆಗುತ್ತಲೆ ಅಂಗಡಿಗೆ ಬೀಗ ಬಿದ್ದು ಮತ್ತೆ ಸಂಜೆ 4ಕ್ಕೆ ತೆರೆಯುತ್ತಿತ್ತು. ಈ ಬಿಡುವಿನ ಸಮಯದಲ್ಲಿ ವಸೀಬ ತನ್ನ ಇತರೆ ಕಾರ್ಯಗಳ ಮಾಡಿಕೊಳ್ಳುತ್ತಿದ್ದ. ಇವನ ಸಂಸಾರವು ತುಸು ದೊಡ್ಡದ್ದಾಗಿದ್ದು, ಇಬ್ಬರು ಹೆಣ್ಣುಮಕ್ಕಳು ಮದುವೆಗೆ ಬಂದಿದ್ದರು. ಉಳಿದ ಮೂವರು ಗಂಡು ಮಕ್ಕಳಲ್ಲಿ ಇಬ್ಬರು ಶಾಲೆ, ಕಾಲೇಜು ಓದುತ್ತ ಮತ್ತೊಬ್ಬ ಕೆಲಸಕ್ಕೆ ಹೋಗುತ್ತಿದ್ದ. ಅವನಿಗೆ ವಿದ್ಯೆ ತಲೆಗೆ ಹತ್ತಲಿಲ್ಲವೆಂಬ ಸಬೂಬು ಜೊತೆಗಿತ್ತು. ಅವನನ್ನು ತಂದು ಈ ಅಂಗಡಿಯಲ್ಲಿ ಕೂರಿಸಿಕೊಳ್ಳಲು ಸಾಕಷ್ಟು ಯತ್ನಿಸಿದನಾದರು ಆ ಹುಡಗನಿಗೆ ಈ ಪೆಟ್ಟಿ ಅಂಗಡಿ, ಪತ್ರಿಕೆಗಳ ನೋಡುತ್ತಲೆ ಜಿಗುಪ್ಸೆ ಬಂದು “ಕುಂತು ಹೊಡಿತ್ತೀನಿ ಅಂದ್ರೆ ನೊಣವು ಮುತ್ತೋಲ್ಲ ಈ ಅಂಗಡಿಗೆ, ನನ್ಗೆ ಇದು ಬೇಡ” ಎಂದು ಹೇಳಿ ಅಲ್ಲಿಂದ ಓಡಿ ಬಿಡುತ್ತಿದ್ದ. ಸ್ವಲ್ಪ ತುಂಟತನದ ಜೊತೆ ಹೆಚ್ಚು ಲವಲವಿಕೆಯ ಹುಡುಗನಿಗೆ ಈ ಪೆಟ್ಟಿ ಅಂಗಡಿ ಸ್ತಬ್ಧಚಿತ್ರದಂತೆ ಕಾಣುತ್ತಿತ್ತು. ಇನ್ನೂ ಪತ್ರಿಕೆ, ಓದು ಎಂದರೆ ಈಗಾಗಲೆ ಆ ಕಾರಣಕ್ಕೆ ಶಾಲೆ ಬಿಟ್ಟು ಬಂದವನಿಗೆ ಇದ್ಯಾವೂದೋ ಸುತ್ತಿ ಬಳಸಿ ತನ್ನನೆ ಹಿಡಿಯುವ ಹುನ್ನಾರ ನಡೆಸುತ್ತಿದೆ ಎಂದು ಭಾಸಗೊಂಡು ಗ್ಯಾರೇಜ್ ಸೇರಿಕೊಂಡಿದ್ದ.
ವಸೀಬನಿಗೆ ಈ ಪತ್ರಿಕೆಗಳ ಮಾರಾಟದ ಕೆಲಸ ಚಿಕ್ಕಪ್ಪನಿಂದ ಬಂದ ಬಳುವಳಿಯಾಗಿತ್ತು. ಇವನದೂ ಅಣ್ಣ-ತಮ್ಮ, ಅಕ್ಕ-ತಂಗಿಯರೆಂಬ ದೊಡ್ಡ ಕುಟುಂಬ. ಪತ್ರಿಕೆಗಳ ಮಾರಾಟದ ಸಹಾಯಕ್ಕೆ ಚಿಕ್ಕಪ್ಪನ ಬಳಿ ಕೆಲಸಕ್ಕೆ ಸೇರಿಕೊಂಡಾಗ ಇವನಿಗೆ 9ರ ಪ್ರಾಯ. ಅಂದಿನಿಂದಲೆ ಇದರೊಂದಿಗೆ ಬೆಳೆಯುತ್ತ ಸಾಕಷ್ಟು ಪಳಗಿದನಾದರು ಬೇರೆ ವ್ಯವಹಾರಗಳ ಕಡೆ ತಲೆ ಹಾಕಲಿಲ್ಲ. ಅವನಿಗೆ ಈ ಕೆಲಸ ಒಂದು ಹಂತಕ್ಕೆ ತೃಪ್ತಿಕೊಟ್ಟಂತೆ ಆರಾಮಾದಾಯಕವಾಗಿತ್ತು. ಚಿಕ್ಕಪ್ಪನೂ ಕಾಲವಾದ ನಂತರ ಇದನ್ನು ಮುನ್ನೆಡೆಸುವ ಜವಾಬ್ದಾರಿ ವಹಿಸಿಕೊಂಡವನು ಈ ಮೂಲಕ ಬದುಕು ಕಂಡುಕೊಂಡಿದ್ದ. ಎಂಥಾ ಪತ್ರಿಕೆ, ನಿಯತಕಾಲಿಕೆಗಳಾದರು ಸರಿ ಅವುಗಳು ಮಾರಾಟಕ್ಕೆ ತನ್ನ ಅಂಗಡಿಗೆ ಬರಬೇಕೆಂಬುದು ಅವನ ಹೆಬ್ಬಯಕೆಯಾಗಿತ್ತು. ಇದಕ್ಕೆ ಭಾಷೆ, ರಾಜ್ಯ, ದೇಶಗಳೆಂಬ ಯಾವುದೇ ನಿಯಮಗಳಿರಲಿಲ್ಲ. ಈ ಕಾರಣಕ್ಕಾಗಿಯೇ ಎಲ್ಲೂ ಸಿಗದ ಅಪರೂಪದ ನಾನಾ ಭಾಷೆಯ ಪತ್ರಿಕೆಗಳೆಲ್ಲ ಇಲ್ಲಿ ಲಭ್ಯವಿದ್ದವು. ಅವುಗಳನ್ನೂ ನೋಡಲು ಆಕರ್ಷಕವಾಗಿರುವಂತೆ ಒಪ್ಪಓರಣವಾಗಿ ಜೋಡಿಸಿಟ್ಟಿರುತ್ತಿದ್ದ. ಹಳೇ ಪತ್ರಿಕೆಗಳು ಅಷ್ಟೇ ಒಂದು ರಟ್ಟಿನ ಡಬ್ಬಿಯೊಳಗೆ ಜಾಗ್ರತೆಯಾಗಿ ಉಳಿದು ಎರಡು ವಾರದ ಬಳಿಕ ಏಜಿಂಟರ್‌ಗಳ ಮೂಲಕ ತಲುಪಬೇಕಾದ ಸ್ಥಳ ಸೇರಿಕೊಳ್ಳುತ್ತಿದ್ದವು. ವಸೀಬ ಇಲ್ಲಿನ ವ್ಯಾಪಾರಕ್ಕೆ ಹಳಬನಾದ್ದರಿಂದ ಅವನ ಅನುಭವಕ್ಕೆ ಪ್ರತಿ ಹೊಸಪತ್ರಿಕೆಗಳ ಮುಂದಿನ ಭವಿಷ್ಯ ಏನೆಂಬುದು ಬೇಗನೆ ನಿರ್ಧರಿಸಬಲ್ಲವನಾಗಿದ್ದ. ಹಾಗೆ ಯಾವ ಪತ್ರಿಕೆಗೆ ಎಂಥ ಓದುಗರು ಎಂಬುದು ಅವನಿಗೆ ತಕ್ಕ ಮಟ್ಟಿಗೆ ತಿಳಿದಿತ್ತು. ವಸೀಬನಿಗೆ ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರು, ಉಪಸಂಪಾದಕರು ನಿಕಟವಾಗಿ ಪರಿಚಯವಿದ್ದು, ಇವನೊಂದಿಗೆ ಅವರು ಕೆಲವು ಬಾರಿ ಉಭಯಕುಶಲೋಪರಿ ನಡೆಸುತ್ತಿದ್ದರು. ಈ ಪತ್ರಿಕೆಗಳಿಗೆ ಬೇಕಾದ ಬಿಡಿ ಜಾಹೀರಾತುಗಳ ಬುಕ್ ಮಾಡಿಸಿಕೊಳ್ಳುವ ಏಜೆಂಟ್‌ನಾಗಿಯು ಕಾರ್ಯ ನಿರ್ವಹಿಸುತ್ತಿದ್ದ.
ದಿನ ಕಳೆದಂತೆ ಹೊಸ ಉದ್ಯಮಗಳು, ವ್ಯವಹಾರಗಳು ಜಾಹೀರಾತಿಗಾಗಿ ಹಂಬಲಿಸಿಕೊಂಡು ಜನರ ತಲುಪುವ ನಾನಾ ಮಾರ್ಗಗಳ ಹುಡುಕುತ್ತಿದ್ದವು. ಹಬ್ಬಗಳು ಬಂದರೆ ಖರೀದಿ ಭರಾಟೆ ಜೋರು ಮಾಡಿಕೊಳ್ಳಲು, ರಿಯಾಯತಿ ನೀಡಿ ಜನರ ಸೆಳೆಯಲು ಇತರೆ ವಿವಿಧ ರೀತಿಯ ಪ್ರಚಾರಕಾರ್ಯದ ವಸ್ತುಗಳು ತಮ್ಮದೊಂದು ಕರಪತ್ರ ಮುದ್ರಿಸಿ ಅದನ್ನು ಇಂತಿಷ್ಟು ಹಣದಲ್ಲಿ ಹೆಚ್ಚು ಜನರಿಗೆ ತಲುಪಿಸುವ ಸುಲಭ ಅವಕಾಶದಂತೆ ವಸೀಬನ ಕೈಗೆ ಇಡುತ್ತಿದ್ದವು. ಇವನು ಬಂದ ಕಾಸಿಗೆ ಅನುಗುಣವಾಗಿ ಪ್ರಚಾರಕಾರ್ಯಕ್ಕೆ ಮುಂದಾಗುತ್ತಿದ್ದ. ತನಗೆ ಒಂದಲ್ಲೊಂದು ಏನಾದರು ಪತ್ರಿಕೆಗಳ ಜೊತೆಯಿಟ್ಟು ಜನರ ತಲುಪಿಸುವಂತೆ ಕರಪತ್ರಗಳು ಬರುವುದು ಮಾಮುಲಾದರು ಅದು ಏನೆಂದು? ಅದರಲ್ಲಿರುವ ಮಾಹಿತಿ, ಬರಹ ಯಾವುದೆಂದು ವಸೀಬ ಎಂದಿಗೂ ಯೋಚಿಸಿರಲಿಲ್ಲ. ಯಾರೋ ತಂದುಕೊಟ್ಟಿದ್ದನ್ನು ಹಾಗೆ ಪತ್ರಿಕೆ ಒಳಗೆ ಹಾಕಿ ಸಾಗಿಸುತ್ತಿದ್ದ. ಇಲ್ಲಿಗೆ ಬರುವವರು ಅಷ್ಟೇ ಇವನ ಹೊರತು ಬೇರೆ ಇನ್ಯಾರಿಗೂ ಈ ಕೆಲಸ ಕೊಡುತ್ತಿರಲಿಲ್ಲ. ವಡವೆ, ವಸ್ತ್ರ, ಉಚಿತ ತಪಸಣಾ ಶಿಬಿರ, ಮನೆ ಬಾಡಿಗೆ, ಭೋಗ್ಯ, ಮಾರಾಟ, ಖರೀದಿ, ಹೊಸ ಹೋಟಲ್ ಅದರ ರುಚಿಗಳು, ಸ್ಕೂಲು, ಕಾಲೇಜ್, ಟ್ಯೂಷನ್‌ಗಳು, ತಲೆಕೂದಲ ಸಮಸ್ಯೆ, ಲೈಂಗಿಕ ಸಮಸ್ಯೆ, ಜೋತಿಷ್ಯ ಕೇಳಲೂ ಕೊನೆಗೆ ಮರಳು, ಜಲ್ಲಿ, ಸಂಪು ಕ್ಲೀನಿಂಗ್, ಜಿಗಣಿ ಸಮಸ್ಯೆ ನಿವಾರಣೆ, ಯು.ಪಿ.ಎಸ್. ಹೊಸಬ್ಯಾಂಕ್ ಲೋನ್‌ಗಳ ಆದಿಯಾಗಿ ಅನಾಥಾಶ್ರಮಕ್ಕೆ ಯಾರನ್ನಾದರು ಸೇರಿಸುವವರು, ಸಹಾಯ ಮಾಡುವವರು ಸಂಪರ್ಕಿಸಿ ಎನ್ನುವಲ್ಲಿನ ತನಕ ಸಾಕಷ್ಟು ಕರಪತ್ರಗಳು ವಸೀಬನ ಬಳಿ ಬರುತ್ತಿದ್ದವು. ಅವನು ಇವೆಲ್ಲದಕ್ಕೂ ಒಂದೇ ರೀತಿಯಲ್ಲಿ ವರ್ತಿಸುತ್ತ ಹೆಚ್ಚು ತಲೆ ಕೆಡಿಸಿಕೊಳ್ಳದೆ “ಹ್ಹೇ ಚೂರ ಕಾಗ್ದ ಯಾವುದಕ್ಕಾದ್ರು ಆಯ್ತದೆ ಬಿಸಾಡು” ಎನ್ನುತ್ತಿದ್ದ. ಇದರಲ್ಲಿ ಕೆಲವೊಂದು ಸುಂದರವಾಗಿ ಮುದ್ರಣ ಕಂಡು ಆರ್ಕಷಿಸಿದವಾದರು ಅದೇನೆಂದು ತಿಳಿದುಕೊಳ್ಳುವ ಆಸಕ್ತಿ ಅವನಿಗಿರಲಿಲ್ಲ.
ಹಾಗೆ ನೋಡಿದರೆ ವಸೀಬನ ವಿದ್ಯಾಭ್ಯಾಸ ಕೂಡ ಸಹಿ ಹಾಕಲಷ್ಟೆ ಸೀಮಿತವಾಗಿದ್ದು, ಆದರಾಚೆಗೆ ಓದುವ, ಬರೆಯುವ ಯಾವ ಹವ್ಯಾಸಗಳು ಇರಲಿಲ್ಲ. ಕೇಳಿದವರಿಗೆ ಮಾತ್ರ ಬೇಕಾದ ಪತ್ರಿಕೆಯನ್ನು ತಪ್ಪಿಲ್ಲದೆ ಎತ್ತಿಕೊಡುತ್ತಿದ್ದ. ಇದು ಅವನಿಗೆ ಅನುಭವದಿಂದ ಸಿದ್ಧಿಸಿರುವ ಕಲೆಯಾಗಿತ್ತು.
ಅಂಥ ಕರಪತ್ರಗಳು ಬಂದ ಹಾಗೆ ಸಾಗಿಸಿ ಕೈತೊಳೆದುಕೊಳ್ಳುತ್ತಿದ್ದ ವಸೀಬನಿಗೆ ಈ ರೀತಿಯ ಕರಪತ್ರ ಒಂದು ತನ್ನನೂ, ತನ್ನ ಬದುಕನ್ನು ವಿಷವರ್ತುಲದ ತುದಿಗೆ ತಂದು ನಿಲ್ಲಿಸಬಹುದೆಂಬ ಕಲ್ಪನೆಯೇ ಇರಲಿಲ್ಲ. ಹಬ್ಬ, ಹರಿದಿನ, ಬೇಸಿಗೆ ರಜೆಗಳೆಲ್ಲ ಮುಗಿದ ಸಂದರ್ಭದಲ್ಲಿ ವಸೀಬನಿಗೆ ಜಾಹೀರಾತಿನ ಕರಪತ್ರಗಳಷ್ಟು ಹರಿದು ಬರದೆ ವಾರಕ್ಕೆ ಎರಡು, ಮೂರು ಸಿಗುತ್ತಿದ್ದವು. ತಾನು ಜಾಹೀರಾತಿನ ಕರಪತ್ರಗಳ ನಂಬಿ ಜೀವನ ನಡೆಸುವವನಲ್ಲವೆಂದು ತಿಳಿದಿದ್ದರು ಏತಕ್ಕಾದರೂ ಮೇಲು ಖರ್ಚಿಗೆ ಆಗುವ ಹಣ ಕಮ್ಮಿಯಾಗಲು ಸ್ವಲ್ಪ ಚಿಂತೆ ಮಾಡಿದ್ದ. ಇದು ಶ್ಯೂನಕಾಲವೆಂದು ಅವನಿಗೂ ಗೊತ್ತಿತ್ತು.
ಆ ದಿನ ರಾತ್ರಿ 8ಕ್ಕೆ ಅಂಗಡಿ ಬಾಗಿಲು ಮುಚ್ಚಿ ಹೊರಡುವ ವೇಳೆಗೆ ಕೈಚೀಲ ನೇತಾಕಿದ ವ್ಯಕ್ತಿಯೊಬ್ಬ ವಸೀಬನಿಗೆ ಎದುರಾದ. ನೋಡಲು ಸ್ವಲ್ಪ ಕುಳ್ಳಗೆ, ಕಪ್ಪಗೆ, ಸಾಧಾರಣ ಮೈಕಟ್ಟಿನ ಆ ವ್ಯಕ್ತಿ ಗಡ್ಡ ಬಿಟ್ಟಿದ್ದು ಕನ್ನಡಕ ಧರಿಸಿದ್ದ. ಈ ಮೊದಲು ಅವನ ಇಲ್ಲೆಲ್ಲೂ ಕಂಡ ನೆನಪು ವಸೀಬನಿಗಿರಲಿಲ್ಲ. ಅವನು ತನ್ನ ಬಳಿ ಮಾತನಾಡಲು ಕಾಯುತ್ತಿರುವುದು ವಸೀಬನಿಗೆ ಸ್ಪಷ್ಟವಾಗಲು ತಾನೇ ಕೇಳಿದ “ಏನ್ ಬೇಕಿತ್ರೀ?” ಆ ವ್ಯಕ್ತಿ ಸಣ್ಣ ನಗೆಯೊಂದಿಗೆ “ವಸೀಬ ಅಂದ್ರೆ ನೀವೇ ಅಲ್ವಾ?” ವಸೀಬ “ಹೌದು, ನಾನೇ ಏನಾಗಬೇಕಿತ್ತು?” ವ್ಯಕ್ತಿ ಸ್ವಲ್ಪ ಚಡಪಡಿಕೆಯಲ್ಲಿದ್ದವನು ಸುತ್ತಮುತ್ತ ನೋಡಿ “ಅಂಗಡಿ ಬಾಗಿಲು ಹಾಕಿದ್ರೀ ಅನ್ಸುತ್ತೆ ನಾಳೆ ಬರ್ತೀನಿ ಬಿಡಿ” ಎಂದು ಹೇಳಲು ವಸೀಬನಿಗೆ ಕುತೂಹಲ ಶುರುವಾಯಿತು. ಈ ವ್ಯಕ್ತಿ ತನ್ನಿಂದ ಏನೋ ನಿರೀಕ್ಷಿಸುತ್ತಿರುವುದು ಅವನ ಮುಖಭಾವದಲ್ಲಿ ಎದ್ದು ಕಾಣುತ್ತಿತ್ತು. ಅವನು ಒಂದೇ ಸಮ ಓಡೋಡಿ ಬಂದಿರುವುದರ ಕುರುಹಂತೆ ಮುಖದ ಮೇಲಿನ ಬೆವರು ಗಡ್ಡಕ್ಕೆ ಇಳಿದು ಅಲ್ಲಿದ್ದ ಬಿಳಿ ಕೂದಲುಗಳು ಎದ್ದು ಕಂಡವು. ವಸೀಬ “ಏನ್ ಬೇಕೇಳಿ? ನಮ್ಗೆ ಗಿರಾಕಿ ಮುಖ್ಯ ಯಾವ್ ಪೇಪರು, ಮ್ಯಾಗ್ಜೀನ್ ಕೊಡ್ಲಿ” ಎಂದು ಅಂಗಡಿಗೆ ಹಾಕಿದ ಬೀಗ ಬಿಚ್ಚಿದ. ಇದರಿಂದ ವ್ಯಕ್ತಿಗೆ ಸ್ವಲ್ಪ ಸಮಾಧಾನವಾದಂತೆ ಮುಂದೆ ಬಂದವನೆ “ನನಗೇನು ಬೇಡ. ಆದ್ರೆ, ಈ ಕರಪತ್ರಗಳು ನಾಳೆ ಎಲ್ಲಾ ಪತ್ರಿಕೆ ಓದೋರಿಗೆ ಸಿಗಬೇಕು” ಎಂದು ಏದುಸಿರಿನಲ್ಲಿ ಹೇಳಿ ತನ್ನ ಬ್ಯಾಗಿನಲ್ಲಿದ್ದ ಕರಪತ್ರಗಳ ಬಂಡಲ್ ಎತ್ತಿ ವಸೀಬನ ಕೈಗೆ ಕೊಟ್ಟ. ವಸೀಬ ಈ ಕರಪತ್ರ ಏನು? ಏಕೆ? ಎಂದು ವಿಚಾರಿಸದೆ “ಇಷ್ಟೇನಾ ತಲುಪುತ್ತೆ ಬಿಡಿ” ಎಂದು ಆ ಬಂಡಲ್ ತಗೆದು ಒಳಗಿಟ್ಟು ಆ ವ್ಯಕ್ತಿ ಮುಖ ನೋಡಲು ಅವನು ತುಸು ಗಾಬರಿಯಿಂದ “ಅದ್ರಲ್ಲಿ ಏನ್ ವಿಷ್ಯಾಯಿದೆ ಅಂತಾ ನೋಡೋಲ್ವಾ?” ಎಂದರೆ ವಸೀಬ ಅಸಡ್ಡೆಯಿಂದಲೆ “ಪೇಪರ್ ಒಳಗೆ ಹಾಕ್ತಿವಲ್ಲ ಅವ್ರೆ ನೋಡ್ತಾರೆ ಬಿಡಿ. ನಮಗ್ಯಾಕೆ ಅದು. ನಮ್ದು ಚಾರ್ಜ್ ಕೊಡಿ ಸಾಕು” ಎಂದು ಕೇಳಲೂ ವ್ಯಕ್ತಿ ತಾನು ಯಾವುದೋ ಅಪಾಯದಿಂದ ಸದ್ಯಕ್ಕೆ ಪಾರಾದೆನೆಂಬಂತೆ ದೊಡ್ಡ ಮೊತ್ತದ ನೋಟನ್ನು ವಸೀಬನಿಗೆ ಕೊಡಲು ಅವನು “ಚಿಲ್ರೆ ಇಲ್ಲ” ಎನ್ನುತ್ತಲೆ ವ್ಯಕ್ತಿ “ಪರವಾಗಿಲ್ಲ ಇಟ್ಟಕೊಳ್ಳಿ. ಇನ್ನೊಂದು ಸಾರಿ ಬಂದಾಗ ತಗೋತೀನಿ. ಆದ್ರೆ, ಅದ್ನ್ ಮಿಸ್ ಮಾಡ್ದೇ ಎಲ್ರೂಗೂ ತಲುಪಿಸಿ” ಎಂದಾಗ ವಸೀಬ “ಬೆಳಿಗ್ಗೆ ಆಗುತ್ತೆ ಬಿಡಿ ಸಾರ್” ಎಂದು ಭರವಸೆ ನೀಡಲು ಆ ವ್ಯಕ್ತಿ ವಸೀಬನ ಕೈಕುಲುಕಿ ಅಲ್ಲಿಂದ ಬಂದ ವೇಗದಲ್ಲೆ ಮಾಯವಾದ. ಇತ್ತ ಇವನು ಅಂಗಡಿಗೆ ಬೀಗ ಹಾಕಿ ಸುತ್ತ ನೋಡಲು ಆ ವ್ಯಕ್ತಿ ಕಾಣದೆ ಇರುವುದನ್ನು ಏನೋ ವಿಚಿತ್ರ ಜನ ಎಂದುಕೊಂಡು ಮನೆ ಕಡೆ ಹೊರಟ.
ಎಂದಿನಂತೆ ಕೆಲಸಕ್ಕೆ ಹಾಜರಾದವನು ನೆನ್ನೆ ಕೈಗೆ ಬಂದ ಬಂಡಲ್‌ಅನ್ನು ತೆಗೆದು ಒಂದೊಂದೇ ಕರಪತ್ರಗಳ ದಿನಪತ್ರಿಕೆಗಳ ಒಳಗೆ ಹಾಕುತ್ತಿದ್ದ. ಹುಡುಗರು ಬರುವ ಮುನ್ನ ಈ ಕಾರ್ಯ ಮುಗಿಸಿಕೊಳ್ಳುವುದು ವಸೀಬನಿಗೆ ವಾಡಿಕೆಯಾಗಿತ್ತು. ಬಂದ ಹುಡುಗರು ಸಿದ್ಧವಾದ ಪತ್ರಿಕೆಗಳ ಹೊತ್ತು ಸೈಕಲ್ ಏರಿ ಹೋದರು. ಆ ದಿನವು ಯಥಾಪ್ರಕಾರವಾಗಿ ತನ್ನ ಪೆಟ್ಟಿ ಅಂಗಡಿಯೊಳಗೆ ವ್ಯಾಪಾರಕ್ಕೆ ಕುಳಿತ. ಹುಡುಗರು ಪತ್ರಿಕೆಗಳ ತಲುಪಿಸ ಬೇಕಾದ ಜಾಗಗಳ ತಲುಪಿಸಿ ತಮ್ಮ ಮನೆಗಳತ್ತ ನಡೆದರು. ಓದಲು ಪತ್ರಿಕೆ ಬಿಡಿಸಿದವರಿಗೆ ಮೊದಲು ಕರಪತ್ರ ಸಿಗುತ್ತಿತ್ತು. ಕೆಲವರು ಅದನ್ನ ಕೇರ್ ಮಾಡದೆ ಸುದ್ದಿಗಳ ಕಡೆ ಗಮನ ನೀಡಿದರೆ, ಮತ್ತೂ ಕೆಲವರು ಕುತೂಹಲಕ್ಕೆಂದು ಅದರ ಮೇಲೆ ಕಣ್ಣಾಯಿಸಿದರೆ ಕರಪತ್ರದ ಮೇಲೆ ಮುದ್ರಿತಗೊಂಡ ವಿಷಯ ತೀರ ಬಾಲಿಶವಾಗಿ ಕಂಡಿತ್ತು. ನಿರ್ದಿಷ್ಟ ಧರ್ಮ ಮತ್ತು ದೇವರ ಬಗ್ಗೆ ಅವಹೇಳನಕಾರಿಯಾದ ಬರಹ ಒಂದನ್ನು ಮುದ್ರಿಸಿ ಹಂಚಲಾಗಿತ್ತು. ಈ ಕೃತ್ಯವನ್ನು ಯಾರು ಅಷ್ಟು ಸುಲಭವಾಗಿ ಒಪ್ಪುವಂತಿರಲಿಲ್ಲ. ಧರ್ಮ ಮತ್ತು ದೇವರನ್ನು ಈ ರೀತಿಯಾಗಿ ಕೆಟ್ಟದಾಗಿ ಚಿತ್ರಿಸಿ ಜನರಲ್ಲಿ ಬಿತ್ತಲೊರಟ ವಿಷಬೀಜವಾದರೂ ಎಂಥದ್ದೆಂಬ ಕುತೂಹಲಗಳು ಶುರುವಾದವು. ಈ ಕರಪತ್ರದ ಸುದ್ದಿ ಅನಾಯಾಸವಾಗಿ ಬಾಯಿಂದ ಬಾಯಿ ತಲುಪಿ ಪತ್ರಿಕೆ ಪುಟ ತೆರೆಯುತ್ತಲೆ ಸಿಗುವ ಕರಪತ್ರದ ಮೂಲಕ ಧರ್ಮ ಮತ್ತು ದೇವರ ಅವಮಾನಿಸುವುದು ಹೇಯಕೃತ್ಯವೆಂದು ಹಲವರು ಆಕ್ರೋಶ ವ್ಯಕ್ತ ಪಡಿಸಿದರು. ಇದನ್ನು ಜನಗಳ ನಡುವೆ ತಂದು ಹಂಚಿದ ಕಿಡಿಗೇಡಿಗಳು ಯಾರೆಂಬ ಪ್ರಶ್ನೆ ಉದ್ಭವಿಸಲು ಎಲ್ಲರ ಕೈಬೆರಳುಗಳು ತೋರಿದ್ದು ವಸೀಬನ ಕಡೆ.
ಕೆಲವರು ಈ ಬರಹದಿಂದ ನೆತ್ತಿಗೆರಿದ ಸಿಟ್ಟನ್ನು ತಡೆದುಕೊಳ್ಳಲಿಲ್ಲ. ತಮ್ಮಂಥ ಇನ್ನೊಂದಷ್ಟು ಜನರ ಕೂಡಿಕೊಂಡು ಗುಂಪು ಸೇರಿ ಸಭೆ ನಡೆಸಿ ಅಲ್ಲಿ ಈ ಕರಪತ್ರದ ವಿಷಯವಾಗಿ ಚರ್ಚೆ ನಡೆಸಿದರು. ಇದು ಸಮಾಜದ ಸಾಮರಸ್ಯ ಕೆಡಿಸಲು ಧರ್ಮ, ಧರ್ಮಗಳ ವಿರುದ್ಧ ಯಾರೋ ನಡೆಸುತ್ತಿರುವ ದೊಡ್ಡ ಪಿತೂರಿಯಾಗಿ ಕಂಡಿತು. ಇದನ್ನು ಇಲ್ಲಿಗೆ ಬಿಡದೆ ಇದರ ಹಿಂದಿರುವ ಕಿಡಿಗೇಡಿಗಳ ಹುಡುಕಿ ಬುದ್ಧಿ ಕಲಿಸುವ ತನಕ ಬಿಡಬಾರದೆಂದು ನಿಶ್ಚಯಿಸಿದರು. ತಮ್ಮ ಧರ್ಮ ಮತ್ತು ದೇವರನ್ನು ಈ ರೀತಿ ಕರಪತ್ರಗಳಲ್ಲಿ ಅಲ್ಲಗಳೆಯುವ ಮೂಲ ವಾಸ್ತವಾಂಶದ ಉದ್ದೇಶವಾದರು ಏನೆಂಬುದು ಯಾರೊಬ್ಬರಿಗೂ ಸಂಪೂರ್ಣವಾಗಿ ಅರ್ಥವಾಗಲಿಲ್ಲ. ಅಲ್ಲಿಯ ತನಕ ಬರೀಯ ಕರಪತ್ರವಾಗಿದ್ದ ಆ ಇಷ್ಟಗಲದ ಹಾಳೆ ಇದ್ದಕ್ಕಿದ್ದಂತೆ ಕೋಮುದಳ್ಳುರಿಗೆ ಸಿಕ್ಕಿದ್ದನ್ನೆಲ್ಲಾ ಉರಿಸಿ ಬಿಡುವ ಮಹಾವಸ್ತುವಾಗಿ ಪರಿಣಮಿಸಿತು. ಅದಕ್ಕೆ ಕಿಡಿ ಸೋಕಿಸುವ ಮುನ್ನ ಈ ಕೃತ್ಯಕ್ಕೆ ಕಾರಣವಾದವರ ಹುಡುಕುವುದು ಸವಾಲಾಗಿತ್ತು. ಹಲವರು ಇದೊಂದು ಕೆಟ್ಟ ಮನಸ್ಥಿತಿಯ ಕೃತ್ಯ, ಸಮಾಜದ ವಾತಾವರಣವನ್ನು ಕೆಡಿಸಲು ಸೃಷ್ಟಿಸಿದ್ದೆಂದು ಭಾವಿಸಿದರು. ಕೆಲವರು ಮಾತ್ರ ಇದನ್ನು ಇಲ್ಲಿಗೆ ಬಿಟ್ಟುಕೊಡಲು ಸಿದ್ಧವಿರಲಿಲ್ಲ. ಅಲ್ಲಿಗೆ ಆ ಕರಪತ್ರ ಊರಿನಲ್ಲಿ ಸಣ್ಣಗೆ ಕೋಲಾಹಲವನ್ನೆ ಎಬ್ಬಿಸಿತ್ತು.
ಇತ್ತ ವಸೀಬ ಪೆಟ್ಟಿ ಅಂಗಡಿಯೊಳಗೆ ಯಾರೋ ಅನಾಮಿಕನೊಬ್ಬ ಕೊಟ್ಟ ಕರಪತ್ರವನ್ನು ಪತ್ರಿಕೆಗಳಲ್ಲಿಟ್ಟು ಹಂಚಿದ್ದೆ ತನ್ನ ಕಾರ್ಯ ಮುಗಿಯಿತೆಂಬಂತೆ ಕುಳಿತಿದ್ದ. ಅವನಿಗೆ ಈ ಕರಪತ್ರ ಈಗಾಗಲೇ ಸೃಷ್ಟಿಸಿರುವ ಅವಾಂತರ ತಿಳಿಯಲಿಲ್ಲ. ಪರಿಚಿತನೊಬ್ಬ ಅವಸರವಾಗಿ ವಸೀಬನಲ್ಲಿಗೆ ಬಂದಿದ್ದೆ “ಹ್ಹೇ ವಸೀಬಾ ಏನೋ ಇದು? ಇದ್ನ್ ಪತ್ರಿಕೆಗಳಲ್ಲಿಟ್ಟಿದ್ದು ನೀನೇ ಏನೋ?” ಎಂದು ತನ್ನ ಕೈಲ್ಲಿದ್ದ ಕರಪತ್ರವ ಅವನ ಮುಂದೆ ಹಿಡಿದ. ಅದು ಕಾಣುತ್ತಲೆ ವಸೀಬ “ಹೌದು ಸಾಬ್ ನಾನೇ. ಈ ಕೆಲ್ಸ ಮಾಡೋಕು ಜನ ಎಲ್ಲಿಂದ ತರೋದು, ಕೂಲಿ ಎಲ್ಲಿಂದ ಕೊಡೋದು” ಎಂದು ಎಂದಿನ ತನ್ನ ತಮಾಷೆ ದಾಟಿಯಲ್ಲಿ ಉತ್ತರ ಕೊಡಲು ಕೇಳಿದವನು ಗಾಬರಿ ಬಿದ್ದ. ಅದೇ ದನಿಯಲ್ಲಿ “ಅಯ್ಯೋ ಬೇಕೊಫ್ ಯಾಕೋ ಇಂಥಾ ಅಲ್ಕಟ್ ಕೆಲ್ಸ ಮಾಡ್ದೆ. ಇನ್ನೊಂದು ಧರ್ಮ, ದೇವ್ರ ಬೈದು ಹಿಂಗ್ ಪ್ರಿಂಟ್ ಮಾಡಿ ಹಂಚಿದ್ರೆ ಏನೋ ಸಿಗುತ್ತೆ ನಿನ್ಗೆ. ಈ ಸುದ್ದಿ ದೊಡ್ಡದಾದ್ರೆ ನಿನ್ನ ಸುಮ್ನ್ ಬಿಡ್ತಾರೆ ಅನ್ಕೋಂಡ್ಯಾ?” ಎಂದು ಕೇಳಲು ಈಗ ಗಾಬರಿ ಬೀಳುವ ಸರದಿ ವಸೀಬನದಾಗಿತ್ತು. ಎದುರಿನವನ ಮಾತು, ಮುಖ ಚಹರೆ ನೋಡುತ್ತಲೆ ಏನೋ ಅನಾಹುತವಾಗಿರುವುದು ಬುದ್ಧಿಗೆ ಹೊಳೆಯಿತು. ಹಾಗೆ ಧರ್ಮ, ದೇವರು ಎಂಬ ಪದಗಳ ಕೇಳುತ್ತಲೆ ವಸೀಬನಿಗೆ ಜೀವ ತಣ್ಣಗೆ ಆದ ಅನುಭವವಾಯಿತು. ಇದರಿಂದ ಹೇಗೋ ಸುಧಾರಿಸಿಕೊಂಡವನೆ “ಸಾಬ್ ಏನಾ ಹೇಳ್ತಾ ಇದೀರಾ ನನಗೇನೂ ಗೊತ್ತಾಗ್ತಿಲ್ಲ… ಆ ಪಾಂಪ್ಲೇಟ್‌ನಲ್ಲಿ ಏನಿದೆ?” ಈ ದನಿಯೊಳಗಿನ ಭಯದ ಭಾವವನ್ನು ಗುರುತಿಸಿದ ವ್ಯಕ್ತಿ ವಸೀಬನ ಮುಖ ನೋಡಲು ಅದು ಸಂಪೂರ್ಣ ಬದಲಾಗಿತ್ತು. ಈತ ಕಾಲದಿಂದ ವಸೀಬನ ಬಲ್ಲವನಾಗಿದ್ದರಿಂದ ಇವನೇನೋ ಎಡವಟ್ಟು ಮಾಡಿಕೊಂಡಿರುವುದು ಖಾತ್ರಿಯಾಗುತ್ತಲೆ ಸಮಾಧಾನ ತಂದುಕೊಂಡು “ದಡ್ಡ ಶಿಖಾಮಣಿ. ಇಲ್ಲಿ ಏನಿದೇ ಅಂತ್ಲೂ ಗೊತ್ತಿಲ್ಲದೆ ಅದ್ಹೇಗೆ ಊರಿಗೆಲ್ಲ ಹಂಚಿದ್ಯೋ? ಎಲ್ಲೋ ನಡೆದ ಕೃತ್ಯಕ್ಕೆ, ಪ್ರಕೃತಿ ವಿಕೋಪಕ್ಕೆ ಧರ್ಮ, ದೇವ್ರ್ನ್ ಈ ರೀತಿ ಬಹಿರಂಗವಾಗಿ ದೂರೋದ್ರಿಂದ ಸಮಾಜದ ಶಾಂತಿ ಕೆಡುತ್ತೆ. ಧರ್ಮ ಮತ್ತು ದೇವ್ರ ಸೂಕ್ಷ್ಮವಾದ ವಿಚಾರ. ಅವರವರ ನಂಬಿಕೆಗಳಿಗೆ ಬಿಟ್ಟಿದ್ದು. ಅದ್ನ್ ಹೀಗೆಲ್ಲಾ ಸಾರ್ವಜನಿಕವಾಗಿ ಅವಹೇಳನ ಮಾಡಬಾರ್ದು ವಸೀಬಾ ಇದರಿಂದ ಅಪಾಯಗಳೇ ಹೆಚ್ಚು” ಎಂದು ತನಗೆ ತಿಳಿದ ವಿಚಾರಗಳ ಹೇಳಿದ. ವಸೀಬ “ಯಾ ಅಲ್ಲಾ, ಸಾಬ್ ನನ್ನ ಮಕ್ಕಳಾಣೆಗೂ ನನ್ಗೆ ಇದ್ಯಾವುದು ಗೊತ್ತಿಲ್ಲ” ಎಂದರೆ ಪರಿಚಿತ “ಮತ್ತೆ ನಿನಗೆಲ್ಲಿ ಸಿಕ್ತೋ ಇದು?” ವಸೀಬ “ರಾತ್ರಿ ಯಾರೋ ಬಾಗಿಲಾಕೋ ಟೈಮ್‌ನಲ್ಲಿ ಬಂದ್ ಕೊಟ್ಟು ಬೆಳಿಗ್ಗೆ ಹಂಚಿ ಅಂದ ಸಾಬ್. ನಾನು ಮಾಮುಲಿ ಯಾವುದೋ ಪಾಂಪ್ಲೇಟು ಅಂತಾ ಎಲ್ಲಾ ಡಿಸ್ಟ್ರಿಬ್ಯೂಟ್ ಮಾಡಿಸಿದೇ ಅಷ್ಟೇ. ನೀವು ನೋಡಿದ್ರೆ ಧರ್ಮ, ದೇವ್ರ ಏನೇನೋ ಹೇಳ್ತೀದೀರ ನನ್ಗೆ ಭಯ ಆಗ್ತಿದೆ ಸಾಬ್” ಎಂದು ಹೇಳುವ ವೇಳೆಗೆ ಅವನ ಮುಖ ಪೂರ್ತಿ ಬೆವತು ಹೋಗಿತ್ತು.
ವಸೀಬ ಅನ್ಯಧರ್ಮೀಯನಾದ ಕಾರಣಕ್ಕೊ ಏನೋ ತಕ್ಷಣಕ್ಕೆ ಈ ಕರಪತ್ರದ ಹಿಂದಿನ ಕೃತ್ಯಕ್ಕೆ ಇವನೇ ಅಪರಾಧಿ ಎಂದು ಬಿಂಬಿತವಾಯಿತು. ಸುದ್ದಿ ಹರಡಿ ಒಂದೇ ಸಾರಿಗೆ ಜನಗಳ ಗುಂಪು ಪ್ರವಾಹದಂತೆ ವಸೀಬನ ಪೆಟ್ಟಿ ಅಂಗಡಿ ಬಳಿ ಹರಿದು ಬಂತು. ಯಕಶ್ಚಿತ್ ವಸೀಬ ಮುಂದಿನದನ್ನು ನಿರೀಕ್ಷಿಸಿದವನು ಬಂದವರ ಕೈ, ಕಾಲುಗಳ ಕಟ್ಟಿ ತಾನು ಈ ಕೆಲಸ ಮಾಡಿಲ್ಲವೆಂದು ಬೇಡಿಕೊಳ್ಳುತ್ತಿದ್ದ. ಇವನ ಪರವಾಗಿ ಕೆಲವರು ನಿಂತು ಸಮಸ್ಯೆಯನ್ನು ತಿಳಿಗೊಳಿಸಲು ಮುಂದಾದರು. ಅವರೆತ್ತುವ ಪ್ರಶ್ನೆಗಳಿಗೆ ಉತ್ತರ ಕೊಡುವುದು ಅಷ್ಟು ಸುಲಭವಾಗಲಿಲ್ಲ. ಈ ಕರಪತ್ರದ ರೂವಾರಿ ವಸೀಬನಲ್ಲದೆ ಹೋದರೆ ಬೇಡ ಅವನ್ಯಾರೆಂದು ತೋರಿಸು ಅವನಿಗೆ ಸರಿಯಾಗಿ ತಾವು ಬುದ್ಧಿ ಕಲಿಸುವುದಾಗಿ ಪಟ್ಟು ಹಿಡಿದರು. ವಸೀಬ ರಾತ್ರಿ ಬಂದ ಅನಾಮಿಕನ ಯಾವೊಂದು ಮಾಹಿತಿಯನ್ನು ಕೇಳಿರಲಿಲ್ಲ. ಎದುರು ನಿಂತ ಗುಂಪಿಗೆ ನಡೆದ ಘಟನೆಯನ್ನು ಎಷ್ಟು ಸ್ವಾರಸ್ಯಕರವಾಗಿ ಕಟ್ಟಿಕೊಟ್ಟರೂ ಅವರು ಅದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಅಲ್ಲಿ ಧರ್ಮ ಮತ್ತು ದೇವರ ಕುರಿತಾಗಿ ದೊಡ್ಡ, ದೊಡ್ಡ ಮಾತುಕತೆಗಳೆ ನಡೆಯುತ್ತ ಮನುಷ್ಯ, ಮನುಷ್ಯತ್ವವೆಂಬುದು ತೀರ ಹಿಂದೆ ಸರಿದು ನಿಂತಿತ್ತು.
ಕೆಲ ಸಿಟ್ಟಿಗೆದ್ದವರು ವಸೀಬನ ಎಳೆದಾಡಿ ಜುಬ್ಬ ಹರಿದು ಅವನ ಮೇಲೆ ಕೈ ಮಾಡಿದರು. ವಸೀಬನ ಪರವಾಗಿ ವಾದಿಸ ನಿಂತ ಪ್ರತಿಯೊಬ್ಬರಿಗೂ ಇವರ ಆರ್ಭಟದ ಅಬ್ಬರದ ನಡುವೆ ಸೋಲಾಗುತ್ತಿತ್ತು. ಕೃತ್ಯಕ್ಕೆ ಕಾರಣವಾದವರು ಸಿಗಬೇಕು ಅಥವಾ ಇದರ ಸಂಪೂರ್ಣ ಹೊಣೆಯನ್ನು ವಸೀಬನೇ ಹೊರಬೇಕೆಂದು ಅವರು ಆಗ್ರಹಿಸಿದರು. ವಸೀಬ “ಇಲ್ಲಾ, ನಾ ಅಂಥವ್ನಲ್ಲ. ಅದ್ರಲ್ಲಿ ಈ ಥರ ವಿಷ್ಯ ಅಂತಾ ಗೊತ್ತಿರಲಿಲ್ಲ. ತಪ್ಪಾಗಿದೆ. ನನ್ನ ಅಗ್ಯಾನ ಅದ್ನ್ ತಿಳಿಲಿಲ್ಲ..” ಎಂದೆಲ್ಲಾ ಬಡಬಡಿಸುತ್ತ ಎರಡು ಕೈಗಳ ಮುಗಿದು ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡ. ಇದರಿಂದ ಬಹುತೇಕರು ಸಮಾಧಾನವಾದರು. ಕಾಲದಿಂದ ವಸೀಬನ ಕಂಡವರಿಗೆ ಇವನು ಅಂಥವನಲ್ಲ ಎಂಬ ವಿಶ್ವಾಸ ಬಂದರೆ, ಇನ್ನೂ ಕೆಲವರಿಗೆ ಧರ್ಮ ಮತ್ತು ದೇವರ ಕುರಿತ ಕರಪತ್ರದಲ್ಲಿನ ಬರಹ ಸರಿಯಾಗಿ ನಶೆ ಏರಿಸಿ ಬಿಟ್ಟಿತ್ತು. ಈ ದುಷ್ಕೃತ್ಯಕ್ಕೆ ತಕ್ಕ ಉತ್ತರ ಕೊಟ್ಟು ಆ ಕಿಡಿಗೇಡಿಗಳ ಪಕ್ಕೆಲುಬು ಪುಡಿ ಪುಡಿ ಮಾಡಲು ಕಾದಿದ್ದರು. ಇವರಿಗೆ ವಸೀಬನ ಮೇಲೆ ಚೂರು ನಂಬಿಕೆ, ವಿಶ್ವಾಸಗಳಿರಲಿಲ್ಲ. ಇವನೇ ಈ ಕೆಲಸ ಮಾಡಿ ಮತ್ತೊಬ್ಬರ ತಲೆಗೆ ಕಟ್ಟುತ್ತಿದ್ದಾನೆಂದು ತಗಾದೆ ತೆಗೆದವರೆ ಶಾಂತವಾಗುತ್ತಿದ್ದ ಪರಿಸ್ಥಿತಿಯನ್ನು ಉದ್ರೇಕಕ್ಕೆ ತಗೆದುಕೊಂಡು ಹೋದರು. ಇದನ್ನು ತಪ್ಪಿಸುವ ಶಕ್ತಿ ಮಾತ್ರ ಸದ್ಯಕ್ಕೆ ಅಲ್ಲಿ ಯಾರಿಗೂ ಇರಲಿಲ್ಲ. ಈ ಕಾರಣದಿಂದ ವಸೀಬನ ಪೆಟ್ಟಿ ಅಂಗಡಿಗೆ ನೋಡು, ನೋಡುತ್ತಿದ್ದಂತೆ ಬೆಂಕಿಬಿತ್ತು. ಇದನ್ನು ತಡೆಯಲು ಯತ್ನಿಸಿದರೆ ತನ್ನನು ಅದರಲ್ಲಿ ದಹಿಸಲು ಹೇಸದ ಮನುಷ್ಯ ರೂಪಿ ರಾಕ್ಷಸರ ನಡೆ ಕಂಡು ವಸೀಬ ಕಣ್ಮಂದೆ ತನ್ನ ಬದುಕೇ ಉರಿದು ಹೋಗುವುದನ್ನು ಕಾಣುತ್ತ ಕಣ್ಣೀರಾದ. ಅಲ್ಲಿಗೆ ಸುದ್ದಿ ತಲುಪಿ ಪೊಲೀಸರು, ಅಗ್ನಿಶಾಮಕದಳದವರು ಬರುವ ವೇಳೆಗೆ ಪೆಟ್ಟಿ ಮತ್ತೆ ಉಪಯೋಗಕ್ಕೆ ಬಾರದಂತೆ ಉರಿದು ಹೋಗಿತ್ತು. ನಂತರ ಉದ್ರಿಕ್ತಗೊಂಡ ಗುಂಪನ್ನು ಚದುರಿಸಿದ ಪೊಲೀಸರು ವಸೀಬನ ಠಾಣೆಗೆ ಕರೆದುಕೊಂಡು ಹೋದರು.
ಆರ್. ಪವನ್ ಕುಮಾರ್ ಮೂಲತಃ ಶ್ರೀರಂಗಪಟ್ಟಣದವರು. ಸಿನಿಮಾ ಮತ್ತು ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಕತೆಗಳು ಮತ್ತು ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ