ಸಮುದ್ರ ತೀರದಲ್ಲಿ ನಿಂತರೆ ಮುಂದೆ ಇನ್ನೊಂದು ಸುಂದರ ಸಣ್ಣ ದ್ವೀಪ, ಸಮುದ್ರದಲ್ಲಿ ಚೆಲ್ಲಾಪಿಲ್ಲಿಯಾಗಿ ನಿಂತಿರುವ ಹಾಯಿ ದೋಣಿಗಳು. ದೂರದ ಆಳ ಕಡಲು, ಮಲಕ್ಕಾ ಜಲಸಂಧಿಯಲ್ಲಿ ಓಡಾಡುವ ದೊಡ್ಡ ದೊಡ್ಡ ಹಡಗುಗಳು. ಸಣ್ಣ ಊರಿನ ಪ್ರೀತಿ ತುಂಬಿದ ಜನ. ಬೀಚಿನ ಪಕ್ಕ, ಸಣ್ಣ ಸಣ್ಣಅಂಗಡಿಯಲ್ಲಿ ಕಾಯುತ್ತಿರುವ ನಿಗಿ, ನಿಗಿ, ಕೆಂಡದ ಮೇಲೆ ಸುಡುತ್ತಿರುವ ಜೋಳ. ಬೀಚಿನಲ್ಲಿ ನಿಂತು, ಮಾತನಾಡಿ ನಗುತ್ತಾ ನಿಂತಿರುವ ಜನ, ನೀರಾಟದಲ್ಲಿ ಮಗ್ನರಾದ ಮಕ್ಕಳು. ಪಕ್ಕದ ಕಾಡಿನ ಮರಗಲ್ಲಿ ಹಕ್ಕಿ-ಪಕ್ಕಿಗಳ ಎಂದೂಕೇಳೆ ಇರದ ಹೊಸ ಹೊಸ ಕೂಗುಗಳು.
ನರೇಂದ್ರ ಬಾಬು ಶಿವನಗೆರೆ ಬರೆದ ಪ್ರವಾಸ ಕಥನ

 

ಈಗ ಇಲ್ಲಿ ಕ್ವಾಲಲುಂಪುರದಲ್ಲಿ ಡಿಸೆಂಬರಿನ ಮಳೆಗಾಲ. ಬೆಳಿಗ್ಗೆಯೆಲ್ಲ ಸ್ವಲ್ಪ ಚುಮು ಚುಮು ಬಿಸಿಲು, ಆಮೇಲೆ ಮಧ್ಯಾಹ್ನ ಆಯ್ತು ಅಂತಾದರೆ ಬಿಸಿಲು ಕಾದು, ಕಾದು, ಬೆವರಿಳಿದು ಊಟ ಮುಗಿಯುವ ಹೊತ್ತಿಗೆ, ಮೆಲ್ಲಗೆ ಆ ಪಕ್ಕಕ್ಕೆ ಇರುವ ತಿತಿವಾಂಗ್ಸಾ ಬೆಟ್ಟಗಳ ಮೇಲಿಂದ ಮೋಡಗಳ ಸವಾರಿ ಶುರುವಾಗುತ್ತೆ. ಈ ಡಿಸೆಂಬರ್‌ ನಲ್ಲಿ ವಿಯೇಟ್ನಾಮ್ ಕಡೆಯ ದಕ್ಷಿಣ ಚೀನಾ ಸಮುದ್ರದಿಂದ ಕರಿ, ಕರಿ, ಮೋಡಗಳು ಮೆಲ್ಲಗೆ ಮೇಲೇರಿ ತಿಟಿವಂಗ್ಸಾ ಬೆಟ್ಟಗಳಿಗೆ ಗರ್ಷಣೆ ಹೊಡೆದು, ದಟ್ಟ ಹರಿದ್ವರ್ಣ ಕಾಡುಗಳನ್ನೆಲ್ಲ ತೋಯಿಸಿ ಮಿಕ್ಕ ಮಳೆ ಮೋಡಗಳು ಇಲ್ಲಿಗೆ ಬಂದು ಧೋ… ಅಂತ ಸುರಿಯಕ್ಕೆ ಮೊದಲಾಯ್ತು ಅಂದ್ರೆ ಇನ್ನು ಆ ದಿನದ ಸಂಜೆ, ಮಳೆಗೆ ಹೋಮ ಮಾಡ್ದಂಗೆ ಸರಿ.

ಇನ್ನೇನು ಈ ಮಳೆಗಾಲದ ಶನಿವಾರ ಭಾನುವಾರ ಅಂದ್ರೆ ಬೆಳಿಗ್ಗೇನೇ ಎದ್ದು ನಮ್ಮ ಮನೆ ಪಕ್ಕ ಇರುವ ಸುಂದರ ಕೆರೆ ಏರಿ ಮೇಲೆ ಒಂದು ಐದು ರೌಂಡು ವಾಕ್ ಮಾಡಿ, ಹಂಗೆ, ನಡ್ಕೊಂಡು ಹತ್ತಿರದ ಬೆಳಗಿನ ಒದ್ದೆ ಸಂತೆಗೆ (ಇಲ್ಲಿನ ವೆಟ್ ಮಾರ್ಕೆಟ್) ಹೋಗಿ ಚೀನಿ, ಮಲೆಯ ಮತ್ತು ಹಿಂದುಸ್ತಾನದ ಸುಂದರ, ಘಾಟಿ ಮುದುಕಿಯರ ಬಳಿ ಚೌಕಾಸಿ ಮಾಡಿ, ತರಕಾರಿ ಕೊಂಡು, ಸಂತೆ ಮುಂದಿನ ಸಿಲ್ವ ಹೋಟೆಲ್ಲಿನ ದೋಸೆ ತಿನ್ನುವ ಹೊತ್ತಿಗೆ ಮೆಲ್ಲಗೆ ಬಿಸಿಲು ಏರುತ್ತೆ. ಹೋದ ಶನಿವಾರನೂ ಹೀಗೆ ಬೆಳ್ಳಿಗ್ಗೆ ವಾಕಿಂಗ್ ಮುಗಿಸಿ, ಒದ್ದೆ ಸಂತೆಯಲ್ಲಿ ತರಕಾರಿ ಮಾಡಿ, ಸಿಲ್ವ ಹೋಟೆಲಿನ ದೋಸೆ ತಿನ್ನುವ ಹೊತ್ತಿಗೆ ಮೆಲ್ಲಗೆ ಬಿಸಿಲು ಏರುತ್ತಾ ಇತ್ತು. ಈ ಮಳೆಗಾಲದ ಶನಿವಾರ, ಭಾನುವಾರ ಏನಪ್ಪಾ ಮಾಡದು ಅಂತ ಒಂದು ದೊಡ್ಡ ಚಿಂತೆ. ನಾನು ಮತ್ತು ಅವಳು ಈಪೋ ಊರಿಗೆ ಹೋಗಿ ಅಲ್ಲಿ ಇರೋ ಒಳ್ಳೆ ಚೈನೀಸ್ ಊಟಹೊಡ್ಕೊಂಡು, ಅಲ್ಲೇ ಒಂದು ದಿನ ರಾತ್ರಿ ಕಳೆದು ಭಾನುವಾರ ಬಂದ್ರೆ ಹೆಂಗೆ ಅಂತ ಪ್ಲಾನ್ ಆಯ್ತು.

ಇನ್ನೇನು ಮನೆಗೆ ಹೋಗಿ ಒಂದೆರಡು ಜೊತೆ ಬಟ್ಟೆ, ಸೋಪು, ಪೇಸ್ಟು ಅಂತ ಬ್ಯಾಗಿಗೆ ಎಲ್ಲ ತುಂಬ್ಕೊಂಡು ಕಾರು ಹೊರಡ್ಸಿದ್ದು ಆಯ್ತು. ಹೈವೇ ಗೆ ಕಾರು ಬಿದ್ದ ಮೇಲೆ ಟ್ರಾಫಿಕ್ಕೊ ಟ್ರಾಫಿಕ್. ರೋಡಿನ ಈ ಬದಿ ತಾಳೆ ತೋಟಗಳು, ಎತ್ತ ಎತ್ತ ನೋಡಿದರು ಮುಗಿಯದ ದಟ್ಟ ತೋಟಗಳು. ಒಂದು ನೂರು ವರ್ಷದ ಹಿಂದೆ ಇಲ್ಲಿಗೆ ಬಂದ ಬ್ರಿಟಿಷರು ಇಲ್ಲಿ ಇದ್ದ ದಟ್ಟ ನಿತ್ಯಹರಿದ್ವರ್ಣ ಮಳೆ ಕಾಡುಗಳನ್ನು ಸವರಿ ತಾಳೆ ತೋಟ ಮಾಡಿದ್ದರು. ಆ ಕಡೆ ನೋಡಿದರೆ ಎತ್ತರೆತ್ತರಕ್ಕೆ ಸಾಲಾಗಿ ನಿಂತಿರುವ ದಟ್ಟ ಅರಣ್ಯದ ತಿಟಿವಂಗ್ಸಾ ಬೆಟ್ಟಗಳು, ಮಧ್ಯದಲ್ಲಿ ನಮ್ಮ ಇಪೋಗೆ ಸಾಗುವ ಹಾದಿ. ಹಾದಿಯ ಅಲ್ಲಲ್ಲಿ ನಮ್ಮ ಹಾದಿಯ ಕೆಳಗೆ ಹರಿವ ತಣ್ಣಗಿನ ನದಿಗಳು. ಈ ನದಿಗಳು ಆ ತಿಟಿವಂಗ್ಸಾ ಬೆಟ್ಟಗಳ ತುತ್ತ ತುದಿಯಲ್ಲಿ ಹುಟ್ಟಿ, ಜಲಪಾತಗಳಾಗಿ ಕೆಳಗೆ ಧುಮುಕಿ, ಸ್ಪಟಿಕದ ನೀರು ಮೆಲ್ಲಗೆ ಹರವಿ ಹರವಾಗಿ ಹರಿದು, ಈ ಹೈವೇ ದಾಟಿ, ಆ ತಾಳೆತೋಟಗಳ ಒಳಗೆ ಸುರುಳಿಸುರುಳಿಯಾಗಿಸುತ್ತಿ ಹರಿದು, ಅಲ್ಲಿ ದೂರದಲ್ಲಿ ಕಾಣುವ ಕಡಲಿಗೆ ಸೇರುತ್ತವೆ. ನಾವು ಹಾಗೆ ಮುಂದುವರಿಯುತ್ತಾ ಇದ್ದಾಗ ಅಲ್ಲೇ ಪಕ್ಕದಲ್ಲಿ ಒಂದು ದೊಡ್ಡ ಬೆಟ್ಟ ಕಾಣುಸ್ತು. ಬೆಟ್ಟಾನ ಪೂರ್ತಿ ಸವರಿ ತಾಳೆತೋಟ ಮಾಡಿದ್ರು, ಮೇಲೆ ಬೆಟ್ಟದ ಉತ್ತುಂಗದಲ್ಲಿ ಸ್ವಲ್ಪ ದಟ್ಟ ಕಾಡನ್ನು ಹಂಗೆ ಬಿಟ್ಟಿದ್ರು, ನಾನು ಅವಳನ್ನು ಕೇಳ್ದೆ, “ಏನು ಈ ಬೆಟ್ಟ ಚನ್ನಾಗಿ ಇದ್ಯಲ್ವ” ಅಂತ. ಅವ್ಳು ಹೇಳ್ತ ಹೋದ್ಲು.

ಈ ಬೆಟ್ಟದ ಹಿಂದೇನೆ ಇರೋ ಊರಿನ ಹೆಸ್ರು ತೇಲೂಕ್ ಇಂಟಾನ್ (ಮಲಯ ಭಾಷೆಯಲ್ಲಿ ಇಂಟಾನ್ ಅಂದ್ರೆ ವಜ್ರ) ಅಂತ, ಅಲ್ಲೇ ಸ್ವಲ್ಪ ಮುಂದೆ ಹೋದ್ರೆ, ಬಗಾನ್ ದಾತೊ ಅನ್ನೋ ಊರು ಸಿಗುತ್ತೆ. ಅದು ನಮ್ಮ ತಾತ ಭಾರತದಿಂದ ಮಲಯ ದೇಶಕ್ಕೆ ಬಂದು ದಡ ಮೆಟ್ಟಿದ ಜಾಗ ಅಂತ. ತಿಟಿವಂಗ್ಸಾ ಬೆಟ್ಟಗಳಲ್ಲಿ ಹುಟ್ಟುವ ಪೆರಾಕ್ ನದಿ ಹರಿದು ಹರಿದು ತೆಲೂಕ್ ಇಂಟಾನ್ ಸಾಗಿ, ಬಗಾನ್ ದಾತೊ ಮುಟ್ಟಿ ಅಲ್ಲೇ ಕಡಲನ್ನು ಸೇರುತ್ತೆ. ಬಗಾನ್ ದಾತೊ ಇಂದ ಪೆರಾಕ್ ನದಿಯನ್ನ ಸೇತುವೆ ಮೇಲೆ ಹಾದು ಆ ಕಡೆ ದಡ ಮುಟ್ಟಿದರೆ ಸಿಗುವುದು ಲುಮುಟ್ ಅನ್ನೋ ಊರು. ತುಂಬಾ ಸುಂದರ ಊರು. ದಟ್ಟ ಹರಿದ್ವರ್ಣ ಮಳೆ ಕಾಡುಗಳ ನಡುವೆ ಇರುವ ಊರು, ಪಕ್ಕಕ್ಕೆ ಪ್ರಶಾಂತ ಸಮುದ್ರ, ಊರಿನ ಮುಂದೇನೆ ಸಮುದ್ರ ಸೇರುವ ಮಾಂಜುಂಗ್ ನದಿ. ನದಿಯ ಹತ್ತಿರ ಇರುವ ದೋಣಿ ನಿಲ್ದಾಣ. ಅಲ್ಲಿಂದ ಒಂದು ದೋಣಿ ಹತ್ತಿದರೆ ಒಂದು ಮುಕ್ಕಾಲು ಗಂಟೆ ಮಾಂಜೂಂಗ್ ನದಿಯಲ್ಲೇ ಸಾಗಿ, ಕಡಲನ್ನು ಸೇರಿ ಮುಂದೆ ಸಾಗಿದರೆ ದುತ್ತನೆ ಎದುರಾಗುವ ಭೂ ಲೋಕದ ಸ್ವರ್ಗ ದ್ವೀಪ ಪಾಂಗ್ಕೋರ್.

ಇನ್ನೇನು, ನಮ್ಮ ಇಪೂ ಪ್ರವಾಸಕ್ಕೆ ಎಳ್ಳು ನೀರು ಬಿಟ್ಟಾಯ್ತು. ನಾನು ಮತ್ತು ಅವಳು ಲುಮುಟ್ ಕಡೆ ಕಾರನ್ನ ತಿರುಗಿಸಿದ್ದು ಆಯ್ತು. ಲುಮುಟ್ ತಲುಪಿ, ಅಲ್ಲೇ ದೋಣಿ ನಿಲ್ದಾಣದಲ್ಲಿ ಇರುವ ಕಾರ್ ಪಾರ್ಕಿಂಗ್‌ನಲ್ಲಿ ಒಂದು ದಿನದ ಮಟ್ಟಿಗೆ ಕಾರನ್ನು ಪಾರ್ಕ್ ಮಾಡಿ, ದೋಣಿ ನಿಲ್ದಾಣದ ಟಿಕೆಟ್ ಕೌಂಟೆರ್‌ಗೆ ಬರುವ ಹೊತ್ತಿಗೆ ಸಂಜೆ ಐದು. ಎರಡು ಟಿಕೆಟ್ ಕೊಂಡು ದೋಣಿ ಹತ್ತಿ ಹೊರಟಿದ್ದು ಆಯ್ತು. ದೋಣಿ ಅಂದರೆ ಎರಡು ಡೆಕ್ಕು ಇರುವ ದೋಣಿ, ಕೆಳಗಿನ ಡೆಕ್ಕು ಹವಾ ನಿಯಂತ್ರಿತ ಡೆಕ್ಕು. ಹಂಗೆ, ಮೆಟ್ಟಿಲನ್ನು ಏರಿ ಮೇಲೆ ಹೋದರೆ, ಒಂದು ಐವತ್ತು ಜನ ನಿಲ್ಲಬಹುದಾದ ತೆರೆದ ಡೆಕ್ಕು. ತೆರೆದ ಡೆಕ್ಕಿನಲ್ಲಿ ನಿಂತರೆ, ಹೊರಗೆ ಎಲ್ಲ ನೋಡಬಹುದು. ದೋಣಿ ಹೊರಟಿತು, ಸುತ್ತ ತಾಳೆ ಮರದ ತೋಟಗಳು, ದಟ್ಟ ಕಾಡು, ನದಿ ಮತ್ತು ಸಮುದ್ರದ ಅಳಿವೆಯಲ್ಲಿ ನೌಕಾನೆಲೆ. ಮೆಲ್ಲನೆ ಮುಂದೆ ಸಮುದ್ರದಾಳಕ್ಕೆ ಹೋದಂತೆ ಪೂರ್ತಿ ಲುಮುಟ್ ಊರಿನ ದರ್ಶನ. ಒಂದು ಅರ್ಧ ಗಂಟೆ ಪ್ರಯಾಣದ ನಂತರ ಕಾಣುವುದೇ ಪಾಂಗ್ಕೋರ್ ದ್ವೀಪ. ದಟ್ಟ ಕಾಡಿನಿಂದ ಆವೃತವಾದ ಒಂದು ಹತ್ತು ಬೆಟ್ಟಗಳಿಂದ ಕೂಡಿ, ಸರಿ ಸುಮಾರು ಸುತ್ತಳತೆಯಲ್ಲಿ ೧೦ ಮೈಲಿಯ ದ್ವೀಪ. ನಾವು ದ್ವೀಪದ ಬಳಿಸಾರುವ ಹೊತ್ತಿಗೆ ಆಗಲೇ ಸಂಜೆ ೬ ಘಂಟೆ, ಮೆಲ್ಲಗೆ ದ್ವೀಪದ ಮನೆಗಳಿಂದ ಹೊಗೆ ಏಳುತಿತ್ತು. ಸೂರ್ಯ ಆಗಲೇ ದ್ವೀಪದ ಬೆಟ್ಟಗಳ ಹಿಂದೆ ಮುಳುಗುವ ಸನ್ನಾಹದಲ್ಲಿ ಇದ್ದ, ಎಲ್ಲ ಮೀನುಗಾರರ ದೋಣಿಗಳು ಒಂದೊಂದೇ ದ್ವೀಪಕ್ಕೆ ಹಿಂತಿರುತ್ತಾ ಇದ್ದವು. ನಾನು ಮತ್ತು ಅವಳು ದೋಣಿ ಇಳಿದು ಪಾಂಗ್ಕೋರ್ ನ ದೋಣಿ ನಿಲ್ದಾಣಕ್ಕೆ ಬಂದು, ಒಬ್ಬ ಇಂಡಿಯನ್ ಮನುಷ್ಯನ ಬಳಿ ಒಂದು ಸ್ಕೂಟರನ್ನು ಒಂದು ದಿನದ ಮಟ್ಟಿಗೆ ಬಾಡಿಗೆ ಪಡೆದು ನಮ್ಮ ವಸತಿಗೃಹಕ್ಕೆ ಪ್ರಯಾಣ ಹೊರಟೆವು.

ನಮ್ಮ ಸ್ಕೂಟರು ಒಂದು ಲಡ್ಕಾಸಿ ಮಾದರಿಯದ್ದು, ನಮ್ಮ ಮುಖ ನೋಡಿ, ಆ ಇಂಡಿಯನ್ ಮನುಷ್ಯ ನಮಗೆ ಅದನ್ನ ಅಂಟು ಹಾಕಿದ್ದ. ದಿನಕ್ಕೆ ೪೦ ರಿಂಗೆಟ್ ಬಾಡಿಗೆ, ಪೆಟ್ರೋಲ್ ನಮ್ಮ ದುಡ್ಡಲ್ಲೇ ಹಾಕಬೇಕಾಗಿತ್ತು. ಒಂದು ಸ್ವಲ್ಪ ದೂರ ಬಂದ ಮೇಲೆ, ಅಲ್ಲೊಂದು ಪೆಟ್ರೋಲ್ ಅಂಗಡಿ ಕಾಣಿಸ್ತು, ಪೆಟ್ರೋಲ್ ಹಾಕುತ್ತಿದ್ದವಳು ಒಬ್ಬ ಚೈನೀಸ್ ಮುದುಕಿ. ನಮ್ಮನ್ನು ನೋಡಿ ಅವಳು ನಸುನಕ್ಕು ಸ್ವಾಗತಿಸಿ, ಒಂದು ೫ ರಿಂಗೇಟ್‌ ಗೆ ಪೆಟ್ರೋಲ್ ತುಂಬಿದಳು. ನಾನು ಅಜ್ಜಿ ೫ ರಿಂಗೆಟ್ ಪೆಟ್ರೋಲ್ ಸಾಕ ಅಂತ ಅವಳಿಗೆ ಪ್ರಶ್ನೆ ಎಸೆದಾಗ, ಅವಳು “ಇಸ್ಟು ಪೆಟ್ರೋಲ್ ಗೆ ನೀನು ಈ ದ್ವೀಪ ನ ಒಂದು ೫ ರೌಂಡ್ ಹಾಕ್ಬೊದು ಮಗು” ಅಂತ ಉತ್ತರ ಕೊಟ್ಳು. ಹೆಂಗಿದ್ರೂ ತುಂಬಾ ಚಿಕ್ಕ ದ್ವೀಪ ಇದು!

ದಟ್ಟ ಹರಿದ್ವರ್ಣ ಮಳೆ ಕಾಡುಗಳ ನಡುವೆ ಇರುವ ಊರು, ಪಕ್ಕಕ್ಕೆ ಪ್ರಶಾಂತ ಸಮುದ್ರ, ಊರಿನ ಮುಂದೇನೆ ಸಮುದ್ರ ಸೇರುವ ಮಾಂಜುಂಗ್ ನದಿ. ನದಿಯ ಹತ್ತಿರ ಇರುವ ದೋಣಿ ನಿಲ್ದಾಣ. ಅಲ್ಲಿಂದ ಒಂದು ದೋಣಿ ಹತ್ತಿದರೆ ಒಂದು ಮುಕ್ಕಾಲು ಗಂಟೆ ಮಾಂಜೂಂಗ್ ನದಿಯಲ್ಲೇ ಸಾಗಿ, ಕಡಲನ್ನು ಸೇರಿ ಮುಂದೆ ಸಾಗಿದರೆ ದುತ್ತನೆ ಎದುರಾಗುವ ಭೂ ಲೋಕದ ಸ್ವರ್ಗ ದ್ವೀಪ ಪಾಂಗ್ಕೋರ್.

ನಮ್ಮ ವಸತಿಗೃಹ ಇದ್ದಿದ್ದು ಆ ಊರಿನ ಒಂದು ತುತ್ತ ತುದಿಯಲ್ಲಿ, ಪಕ್ಕಕ್ಕೆ ಸಮುದ್ರ ತೀರ. ಸಮುದ್ರ ತೀರದಲ್ಲಿ ನಿಂತರೆ ಮುಂದೆ ಇನ್ನೊಂದು ಸುಂದರ ಸಣ್ಣ ದ್ವೀಪ, ಸಮುದ್ರದಲ್ಲಿ ಚೆಲ್ಲಾಪಿಲ್ಲಿಯಾಗಿ ನಿಂತಿರುವ ಹಾಯಿ ದೋಣಿಗಳು. ದೂರದ ಆಳ ಕಡಲು, ಮಲಕ್ಕಾ ಜಲಸಂಧಿಯಲ್ಲಿ ಓಡಾಡುವ ದೊಡ್ಡ ದೊಡ್ಡ ಹಡಗುಗಳು. ಸಣ್ಣ ಊರಿನ ಪ್ರೀತಿ ತುಂಬಿದ ಜನ. ಬೀಚಿನ ಪಕ್ಕ, ಸಣ್ಣ ಸಣ್ಣಅಂಗಡಿಯಲ್ಲಿ ಕಾಯುತ್ತಿರುವ ನಿಗಿ, ನಿಗಿ, ಕೆಂಡದ ಮೇಲೆ ಸುಡುತ್ತಿರುವ ಜೋಳ. ಬೀಚಿನಲ್ಲಿ ನಿಂತು, ಮಾತನಾಡಿ ನಗುತ್ತಾ ನಿಂತಿರುವ ಜನ, ನೀರಾಟದಲ್ಲಿ ಮಗ್ನರಾದ ಮಕ್ಕಳು. ಪಕ್ಕದ ಕಾಡಿನ ಮರಗಲ್ಲಿ ಹಕ್ಕಿ-ಪಕ್ಕಿಗಳ ಎಂದೂಕೇಳೆ ಇರದ ಹೊಸ ಹೊಸ ಕೂಗುಗಳು. ಹೊಂಬಣ್ಣದ ಸೂರ್ಯನ ಬೆಳಕು ನೀರಲ್ಲಿ ಮುಳುಗಿ, ಬಣ್ಣ ಬಣ್ಣದ ಚಿತ್ತಾರ ಆಗಸದಲ್ಲಿ. ಇದು ಗೋಧೂಳಿ ಸಮಯ, ನಾದಮಯ ಪ್ರಪಂಚ.
ನಮ್ಮ ಅದೃಷ್ಟ, ಸಂಜೆವರೆಗೂ ಇಲ್ಲಿ ಮಳೆನೇ ಬಂದಿರ್ಲಿಲ್ಲ, ಈಗ ಮೆಲ್ಲಗೆ ಮೋಡ ಬಂದು ಮಳೆ ಶುರುವಿಟ್ಟಿತು. ಮಳೆ ಅಂದ್ರೆ ಈ ಜನಕ್ಕೆ ತುಂಬಾನೇ ಪ್ರೀತಿ. ಈ ಟ್ರಾಪಿಕಲ್ ದೇಶಗಳಲ್ಲಿ ವರ್ಷವೆಲ್ಲ ಒಂದೇ ಕಾಲ. ಬೆಳಿಗ್ಗೆಯೆಲ್ಲ ಬಿರು ಬಿಸಿಲು, ದಿನಕೊಮ್ಮೆ ಮಳೆ, ಸಂಜೆಗೆ ಆ ಕಡೆ ಸುಮಾತ್ರಾ ದೇಶದಿಂದ ಸಮುದ್ರದ ಮೇಲೆ ಬೀಸಿ ಬರುವ ತಂಗಾಳಿ. ಈ ಜನಕ್ಕೆ ಬಿಸಿಲು, ಮಳೆ, ಜೀವನ ಅಂದ್ರೆ ತುಂಬಾ ಪ್ರೀತಿ. ಇನ್ನೇನು ಮಳೆ ಧೋ… ಅಂತ ಬೀಳೋಕ್ಕೆ ಶುರುವಾಯ್ತು. ಪಕ್ಕದಲ್ಲೇ ಇದ್ದ ಜೋಳದ ಅಂಗಡಿಯ ಮುಸಲ್ಮಾನ ಪಚ್ಚಿ (ಅಂಕಲ್) ನಮ್ಮನ್ನು ಕರೆದು, ಈ ಮಳೆಗಾಲದ ಮಳೆಗೆ ನೆನೆಯಬಾರ್ದು ಅಂತ ಹೇಳಿ ಒಂದು ಒಳ್ಳೆ ಜೋಳನ್ನು ಚೆನ್ನಾಗಿ ಹುರಿದು ಕೊಟ್ಟ. ನಮ್ಮಿಬ್ಬರ ಬಗ್ಗೆ ವಿಚಾರಿಸಿಕೊಂಡು, ಈ ಮಳೆ ಏನು ಬಹಳ ಹೊತ್ತು ಬೀಳಲ್ಲ, ಸ್ವಲ್ಪ ಹೊತ್ತು ಆದ್ಮೇಲೆ ನಿಂತು ಬಿಡುತ್ತೆ, ಆ ಮೇಲೆ ನೀವು ಪಾಂಗ್ಕೋರ್ ಊರಿಗೆ ಒಂದು ರಾತ್ರಿ ರೌಂಡ್ ಹೊಡೀಬಹುದು ಅಂದ. ಅವಳು ಪಚ್ಚಿ ಬಗ್ಗೆ ವಿಚಾರಿಸಕ್ಕೆ ಸ್ಟಾರ್ಟ್ ಮಾಡುದ್ಲು.

ಪಚ್ಚಿ ಕುಟುಂಬ ತಲೆತಲಾಂತರದಿಂದ ಈ ದ್ವೀಪದಲ್ಲೇ ಇದ್ದಾರಂತೆ. ಅವರ ಮುತ್ತಜ್ಜ, ತಲೆ ಅಜ್ಜಗಳು ಕೂಡ ಇಲ್ಲೆ ಬಾಳಿ ಬದುಕ್ಕಿದ್ದಂತೆ. ಪಚ್ಚಿ ತಲೆ, ತಲೆ ಅಜ್ಜ ಒಬ್ಬ ಕಡಲ್ಗಳ್ಳನಂತೆ, ಥೈಲ್ಯಾಂಡ್ ನ ಯಾವುದೋ ಒಂದು ದ್ವೀಪದಿಂದ ಇಲ್ಲಿಗೆ ಬಂದು ನೆಲೆಸಿದವನಂತೆ. ಮಲಕ್ಕಾ ಜಲಸಂಧಿಯಲ್ಲಿ ಕಡಲ್ಗಳ್ಳರ ಕಾಲವೆಲ್ಲಾ ಮುಗಿದು, ಡಚ್ಚರು ಇಲ್ಲಿಗೆ ಬಂದಾಗ, ಇವನು ಅವರ ಬಂದೂಕುಗಳನ್ನು ಹೊರುವ ಕೆಲ್ಸಮಾಡಿಕೊಂಡಿದ್ದನಂತೆ. ಆ ಮೇಲೆ ಬ್ರಿಟಿಷರು ಬಂದು ಇಡೀ ಮಲಯ ದೇಶಗಳನ್ನು ಗುಲಾಮಗಿರಿ ಮಾಡಿದಾಗ, ಅವರ ಬಂದೂಕುಗಳನ್ನು ಹೊತ್ತು ತಿರುಗುವ ಕೆಲಸ ಮಾಡಿದ್ದನಂತೆ. ಪಚ್ಚಿಯ ತಾತ, ತಂದೆಯರು ಮೀನುಗಾರರಾಗಿ ಚೆನ್ನಾಗಿ ಬದುಕಿ, ಈಗಿನ ಕಾಲಕ್ಕೆ ಪಚ್ಚಿ ಈ ಸಣ್ಣ ಗೂಡಂಗಡಿ ಇಟ್ಟು, ಸಂಜೆ ಪ್ರವಾಸಿಗರಿಗೆ ಜೋಳ ಮಾರುವ ಕೆಲಸಕ್ಕೆ ಕುಷಿಯಾಗಿದ್ದಾನಂತೆ. ಪಚ್ಚಿ ಹೇಳ್ತಾ ಹೋದ, ನಾನು ಇಲ್ಲಿ ಹುಟ್ಟಿ ೬೫ ವರ್ಷ ಆಯ್ತು, ಈ ದ್ವೀಪ ಬಿಟ್ಟು ನಾನು ಹೋರ್ಗಡೇನೆ ಹೋಗಿಲ್ಲ. ನನಗೆ ಪ್ರಪಂಚೆ ನೋಡ್ಬೇಕು ಅಂತ ಅನ್ಸೆ ಇಲ್ಲ, ಇಡೀ ಪ್ರಪಂಚದ ಜನ ಇಲ್ಲಿಗೆ ಬರ್ತಾರೆ, ನಾನು ಅವ್ರಲ್ಲೇ ಪ್ರಪಂಚಾನ ನೋಡ್ತೀನಿ. ನನಗೆ ದಿನಾ ಬೆಳ್ಳಿಗೆ ಎದ್ದು ಪಾಂಗ್ಕೋರ್ ನಲ್ಲಿ ಸೂರ್ಯ ಹುಟ್ಟೋದನ್ನ ನೋಡ್ಬೇಕು ಅಂತ ಆಸೆ, ಹಾಂಗೆ, ದಿನದ ಕಡೆಗೆ ಸೂರ್ಯ ಮುಳ್ಗೊದನ್ನೂ ನೋಡ್ಬೇಕು, ಇಲ್ಲ ಅಂದ್ರೆ ನನಗೆ ಇರಕ್ಕೆ ಆಗಲ್ಲ. ಪಾಂಗ್ಕೋರ್ ಆ ಕಡೆ ಇಂದ ಈ ಕಡೆಗೆ ೧ ಮೈಲಿ, ಬೆಳಿಗ್ಗೆ ಆ ಕಡೆ ಸಮುದ್ರ ತೀರಕ್ಕೆ ಹೋಗಿ ಬೆಳಗಿನ ಸೂರ್ಯನನ್ನೂ ನೋಡ್ಬೋದು, ಸಂಜೆಗೂ ಈ ಕಡೆ ಸಮುದ್ರದಲ್ಲಿ ಅವ್ನು ಮುಳುಗೋದನ್ನೂ ನೋಡ್ಬೋದು.

ಮಳೆ ಸ್ವಲ್ಪ ಕಡ್ಮೆ ಆಯ್ತು, ಪಚ್ಚಿ ಹೇಳ್ದ, ಬೇಗ ಹೊರಡಿ, ಒಂದು ರೌಂಡ್ ಪಾಂಗ್ಕೋರ್ ನ ನಿಮ್ಮ ಸ್ಕೂಟ್ರಲ್ಲಿ ಒಂದು ರೌಂಡ್ ಹೊಡ್ದು, ಅಲ್ಲೇ ಊರಿನ ವೃತ್ತದ ಮೂಲೆ ಅಂಗಡಿಯ ಚೈನೀಸ್ ಮಾಚಿ (aunty) ಹತ್ರ ಒಂದು ಒಳ್ಳೆ ಟೊಮ್ಯಂ ತಿಂದು, ಹೋಗಿ ಮಲಗಿ ಅಂತ ಹೇಳ್ದ. ನಮ್ಮ ಲಡ್ಕಾಸಿ ಸ್ಕೂಟರ್ ಏರಿ ಪಾಂಗ್ಕೋರ್ ಊರಿನ ಒಳಗೆ ಹೊರಟಿದ್ದು ಆಯ್ತು. ಆಗಲೇ ೮ ಘಂಟೆ, ಇದೊಂದು ನಿದ್ದೆಯ ಊರು, ಎಲ್ಲ ಅಂಗಡಿಗಳೆಲ್ಲ ಮುಚ್ಚಿದ್ದವು. ಇಲ್ಲಿನ ಜನ ಇಲ್ಲ ಮೀನುಗಾರರು, ಇಲ್ಲ ಪ್ರವಾಸೋದ್ಯಮದಲ್ಲಿ ಕೆಲಸ ಮಾಡುವವರು. ಎಲ್ಲರೂ ದಿನವೆಲ್ಲಾ ದುಡಿದು, ದಣಿದು ಇಡೀ ಊರು ಬೇಗ ವಿಶ್ರಮಿಸುವುದು ಮಾಮೂಲಿ. ಊರಿನ ಮಧ್ಯೆ ಇರುವುದೇ ದೋಣಿ ನಿಲ್ದಾಣ, ಆಗಲೇ ದೋಣಿ ನಿಲ್ದಾಣ ಖಾಲಿ ಖಾಲಿ, ೬ ಗಂಟೆಗೆ ಕಡೆಯ ದೋಣಿ. ಕಡೆಯ ದೋಣಿ ಹೊರಟ ಮೇಲೆ, ಆ ಪ್ರಪಂಚ ಮತ್ತು ಪಾಂಗ್ಕೋರ್ ಪ್ರಪಂಚ ಎರಡು ಬೇರೆ ಬೇರೆಯದೇ, ಒಂದು ಪ್ರಪಂಚದ ಆಚೆಯ ಇನ್ನೊಂದು ಸುಂದರ ಪ್ರಪಂಚ. ದೋಣಿ ನಿಲ್ದಾಣದಿಂದ ಮುಂದೆ ಹೋಗಿ ಒಂದು ಸಣ್ಣ ಗುಡ್ಡದ ಮೇಲೆ ತಿರುವು, ಅಲ್ಲೇ ತಿರುವಿನ ಆಚೆ ಮಾರಿಕಾಂಬಾ ಗುಡಿ. ನೂರಾರು ವರ್ಷಗಳ ಹಿಂದೆ ಬ್ರಿಟಿಷರು ತಂದ ಇಂಡಿಯನ್ ಎಸ್ಟೇಟ್ ಕಾರ್ಮಿಕರು ಕಟ್ಟಿದ ಗುಡಿ. ಸಮುದ್ರದ ಅಲೆಗಳ ಮೇಲೆ ತಾಯಿ ಮಾರಿಯಮ್ಮಳ ಗುಡಿ. ಮುಂದೆ ಅದೇ ರೋಡಿನಲ್ಲಿ ಸಾಗಿದರೆ ಚೀನಾ ದೇಶದಿಂದ ಬಂದ ಟಿನ್ ಮೈನಿಂಗ್ ಕಾರ್ಮಿಕರು ಕಟ್ಟಿದ ಬುದ್ದನ ಗುಡಿ. ಮುಂದೆ ಹಾಗೆ ಸಾಗಿದರೆ ಚೈನೀಸ್ ಜನರ ಮನೆಗಳು, ಹಾದಿಬದಿಯ ಚೈನೀಸ್ ಮನೆಯೊಳಗಿನ ಹೋಟೆಲುಗಳು. ಮತ್ತೂ ಮುಂದಕ್ಕೆ ಹೋದರೆ ಮಲೆಯ ಮುಸ್ಲಿಂ ಜನರ ಮಸೀದಿ, ಮಲೆಯ ಜನರ ಮೀನುಗಾರರ ಮನೆಗಳು, ಮನೆಯೊಳಗೆ ಮಿಣಿ ಮಿಣಿ ಮಬ್ಬು ದೀಪಗಳು. ಇಡೀ ಊರು ಸಮುದ್ರ ತೀರದ ಅಲೆಗಳ ಮೇಲೆ. ಅಸ್ಟೇ, ಅಲ್ಲಿಗೆ ಊರು ಮುಗೀತು. ನಮ್ಮ ಲಡ್ಕಾಸಿ ಸ್ಕೂಟರನ್ನು ಹಾಗೆ ತಿರುಗಿಸಿ ವಾಪಸ್ಸು ಹೊರಟಿದ್ದು ಆಯ್ತು.

ಸರಕ್ಕನೆ ಹಿಂದಿಂದ ಒಬ್ಬ ಚೈನೀಸ್ ಮುದುಕ ಸ್ಕೂಟರಿನ ಮೇಲೆ ನಮ್ಮ ಪಕ್ಕ ಹಾದು ಹೋದ. ನೋಡಿದರೆ ಎಡ ಕೈಯಲ್ಲಿ ಹಿಡಿವ ಗಾಳ, ಗಾಳಕ್ಕೆ ಸಿಕ್ಕಿಬಿದ್ದ ದಪ್ಪದೊಂದು ಬಿಳಿ ಮೀನು. ಇನ್ನೂ ಒದ್ದಾಡುತ್ತಿದ್ದ ಬಿಳಿ ಮೀನನ್ನು ಹಿಡಿದು ಅವನು ಒಂದೇ ಕೈಯಲ್ಲಿ ಸ್ಕೂಟರನ್ನು ಬಿಡುತ್ತಾ, ಸರಕ್ಕನೆ ಒಂದು ಸಣ್ಣ ಗಲ್ಲಿಯ ಮನೆಯೊಳಗೆ ಕಣ್ಮರೆಯಾದ. ಇಲ್ಲೆ ಪಕ್ಕದಲ್ಲೇ ಸಮುದ್ರದಲ್ಲಿ ಮೀನು ಹಿಡಿದು, ಇನ್ನೂ ಮೀನು ಒದ್ದಾಡುತ್ತ ಇರುವಾಗಲೇ ಮನೆಯ ಬಾಣಲೆಗೆ ಬೀಳುವುದನ್ನು ನೋಡಿದ್ದು ನಾನು ಇದೆ ಮೊದಲು.

ನಮ್ಮ ಸ್ಕೂಟರು ಒಂದು ಲಡ್ಕಾಸಿ ಮಾದರಿಯದ್ದು, ನಮ್ಮ ಮುಖ ನೋಡಿ, ಆ ಇಂಡಿಯನ್ ಮನುಷ್ಯ ನಮಗೆ ಅದನ್ನ ಅಂಟು ಹಾಕಿದ್ದ. ದಿನಕ್ಕೆ ೪೦ ರಿಂಗೆಟ್ ಬಾಡಿಗೆ, ಪೆಟ್ರೋಲ್ ನಮ್ಮ ದುಡ್ಡಲ್ಲೇ ಹಾಕಬೇಕಾಗಿತ್ತು. ಒಂದು ಸ್ವಲ್ಪ ದೂರ ಬಂದ ಮೇಲೆ, ಅಲ್ಲೊಂದು ಪೆಟ್ರೋಲ್ ಅಂಗಡಿ ಕಾಣಿಸ್ತು, ಪೆಟ್ರೋಲ್ ಹಾಕುತ್ತಿದ್ದವಳು ಒಬ್ಬ ಚೈನೀಸ್ ಮುದುಕಿ. ನಮ್ಮನ್ನು ನೋಡಿ ಅವಳು ನಸುನಕ್ಕು ಸ್ವಾಗತಿಸಿ, ಒಂದು ೫ ರಿಂಗೇಟ್‌ ಗೆ ಪೆಟ್ರೋಲ್ ತುಂಬಿದಳು.

ನಮ್ಮ ಲಡ್ಕಾಸಿ ಸ್ಕೂಟರು, ಗಾಟಿ ರೋಡಿನ ಸುರುಳಿ ಸುರುಳಿಯಲ್ಲಿ ಕುಯ್ಯೋ ಮರ್ರೋ ಎನುತ್ತಾ ಊರಿನ ನಡುವೆ ಇರುವ ವೃತ್ತದ ಬಳಿ ಚೈನೀಸ್ ಮಾಚಿ ಅಂಗಡಿ ಬಳಿ ನಿಂತಿತು. ಅದೊಂದು ಹಳ್ಳಿ ಹೋಟೆಲ್ಲು, ಮೇಲೆ ಟಿನ್ ಶೀಟು, ಮಧ್ಯದಲ್ಲಿ ಒಂದು ಟಿ.ವಿ, ಟಿ.ವಿಯಲ್ಲಿ ಚೀನಾ ದೇಶದ ಯಾವುದೋ ಒಂದು ಪೌರಾಣಿಕ ನಾಟಕ ನಡೀತಾ ಇತ್ತು. ಹೋಟೆಲ್ಲಿನ ಮುಂದೆ ಗಾಜಿನಿಂದ ಮಾಡಿದ ಮೂರು ಸ್ಟಾಲ್ ಗಳು. ಒಂದು ಸ್ಟಾಲಿನಲ್ಲಿ ಬಿಸಿಬಿಸಿ ಹಬೆಯಾಡುತ್ತಾ ಇರುವ ಪಾವ್ ಗಳು (ಕಡುಬು), ಪಕ್ಕದ ಸ್ಟಾಲಿನಲ್ಲಿ ಕುದಿಯುತ್ತಿರುವ ನೀರು ಮತ್ತು ಅಕ್ಕಿಯಿಂದ ತಯಾರಿಸಿದ ನೂಡಲ್ ಗಳು. ಪಕ್ಕದ ಸ್ಟಾಲ್ ಮಲಯ, ತಿಂಡಿಗಳದ್ದು. ಆ ಊರಿನ ಚೀನೀ ಸುಂದರಿಯರೆಲ್ಲ ಮನೆ ಬಿಟ್ಟು, ತಮ್ಮ ತಮ್ಮ ಚೀನಾ ದೇಶದಿಂದ ಆಮದಾದ ಸ್ಕೂಟರುಗಳಲ್ಲಿ ಮಾಚಿ ಅಂಗಡಿಗೆ ಬಂದು, ತಾವು ತಂದ ಟಿಫ್ಫೀನ್ ಡಬ್ಬಗಳಲ್ಲಿ ಮಾಚಿಯ ಕೈಯಿಂದ ಬಿಸಿ ಬಿಸಿ ಟೊಮ್ಯಂ ಅನ್ನು ತುಂಬಿಸಿ, ಎರಡೆರಡು ತೆಂಗಿನ ಕಾಯಿಯ, ಕಡಲೆ ಬೀಜದ, ಇಲ್ಲ ರೆಡ್ ಬೀನ್ ತಿರುಳಿನ ಪಾವ್ ಗಳನ್ನು ಕೊಂಡು ವೈಯ್ಯಾರವಾಗಿ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದರು. ನಾವು ಕೂಡ ಹೋಗಿ ಒಂದು ಟೇಬಲ್ ಹಿಡಿದು ಕೂತಿದ್ದು ಆಯ್ತು.

ಪಕ್ಕದ ಟೇಬಲ್ ಗಳಲ್ಲಿ ಕಟ್ಟುಮಸ್ತಾದ ಹಳ್ಳಿಯ ಯುವಕರು ತಮ್ಮ ಕೆಲಸಗಳನ್ನು ಮುಗಿಸಿ ಸ್ಕೂಟರುಗಳಲ್ಲಿ ಬಂದು ಕುಳಿತಿದ್ದರು. ಅವರ ವೇಷ ಭೂಷಣಗಳನ್ನು ಕಂಡರೆ ಯಾವುದೋ ಕಡಲುಗಳ್ಳರ ಗುಂಪಿನ ಸದಸ್ಯರ ತರನೇ ಕಾಣಿಸುತ್ತಾ ಇದ್ದರು. ಮಾಚಿ ಬಳಿ ಒಂದು ಟೊಮ್ಯಂ ಆರ್ಡರ್ ಮಾಡುವ ಹೊತ್ತಿಗೆ ಮತ್ತೊಂದು ರೌಂಡ್ ಮಳೆ ಶುರು ಇಟ್ಟಿತು. ಮತ್ತೆ ಇನ್ನೇನು, ಮಳೆ ಜೊತೆ ಬಿಸಿ ಬಿಸಿ ಟೊಮ್ಯಂ ಅಂದ್ರೆ ಅವಳಿಗೆ ಪಂಚಪ್ರಾಣ. ಅಲ್ಲಿಗೆ ಆ ದಿನ ಮುಗಿದು ನಮ್ಮ ವಸತಿಗೃಹ ಮುಟ್ಟಿ ಮಲಗಿದ್ದು ಆಯ್ತು.

ರಾತ್ರಿಯೆಲ್ಲ ಜೋರು ಮಳೆ. ಬೆಳಗಿನ ೭ರ ಸುಮಾರಿಗೆ ಎದ್ದು, ನಾನೂ, ಅವಳೂ ಸಮುದ್ರದ ದಂಡೆಯಲ್ಲಿ ವಾಕ್ ಮಾಡಲಿಕ್ಕೆ ಶುರು ಮಾಡಿದ್ವಿ. ಆಗ ತಾನೆ ಬೆಳಗಾಗಿ, ಸೂರ್ಯ ದ್ವೀಪದ ಆ ಕಡೆಯಲ್ಲಿ ಹುಟ್ಟಿದ್ದ. ದ್ವೀಪದ ಈ ಕಡೆಯಲ್ಲಿ ಪ್ರಶಾಂತ ಸಾಗರ, ಅಲೆಗಳಸ್ಟೇ ಇಲ್ಲಿ. ಇನ್ನೂ ಯಾರೂ ಸಮುದ್ರದ ದಂಡೆಗೆ ಬಂದಿರಲಿಲ್ಲ. ಹಾಗೆ ದಂಡೆಯಲ್ಲಿ ವಾಕ್ ಮಾಡುತ್ತಾ ಇದ್ದಾಗ ಪಕ್ಕದಲ್ಲೆ ದಭದಭ ಸದ್ದು ಕೇಳಿಬಂತು. ಪಕ್ಕಕ್ಕೆ ತಿರುಗಿ ನೋಡಿದರೆ, ಒಂದು ದೊಡ್ದ ಗಾತ್ರದ ಹಕ್ಕಿ ಬಂದು ಪಕ್ಕದ ಮರದ ಮೇಲೆ ಕುಳಿತಿತು. ಅದೊಂದು ಅಗಾಧ ಹಕ್ಕಿ. ಹಳದಿಯಾದ ದೊಡ್ದ ಕೊಕ್ಕು, ಕಪ್ಪು ಮತ್ತು ಬಿಳುಪಿನ ದೇಹ. ಕಪ್ಪು ಮತ್ತು ಬಿಳುಪಿನ ಪಟ್ಟೆಯ ರೆಕ್ಕೆಪುಕ್ಕ. ಒಂದೊಂದು ರೆಕ್ಕೆಗಳೂ ಒಂದೊಂದು ಮೀಟರು ಅಗಲವೇನೋ?. ಅದೇ ಅತ್ಯಂತ ಸುಂದರ ಮಂಗಟ್ಟೆ ಹಕ್ಕಿ. (great hornbill). ಅಸ್ಟರಲ್ಲೆ ಪಕ್ಕದ ವಸತಿಗೃಹದ ಚೀನೀ ಪಾಚಿ (uncle) ಓಡಿ ಬಂದು ಹೋ, ಇದು ದಿನಾ ಬೆಳಗ್ಗೆ ಇಲ್ಲೇ ಪಕ್ಕದಲ್ಲಿ ಕಾಣುವ ಗುಡ್ಡದಕಾಡಿನಿಂದ ಒಂದು ರೌಂಡು ಬರುತ್ತೆ. ಮನುಷ್ಯರನ್ನು ಕಂಡರೆ ಈ ಹಕ್ಕಿಗೆ ಬಹಳ ಸದರ ಅಂತ ಹೇಳಿದರು. ನಾನಂತು ನನ್ನ ಜೀವನದಲ್ಲೇ ಮಂಗಟ್ಟೆ ಹಕ್ಕಿಯನ್ನ ಇಷ್ಟು ಹತ್ತಿರದಿಂದ ಕಂಡಿರಲಿಲ್ಲ. ಹಕ್ಕಿಯ ಚಿತ್ರ ಎದುರು ಬೆಳಕಿನಲ್ಲಿ ಅಸ್ಟು ಚೆನ್ನಾಗಿ ಬರಲಿಲ್ಲ. ಅಸ್ಟರಲ್ಲಿ ಹಕ್ಕಿ ಧಬಧಬನೆ ಹಾರಿ ಕಣ್ಮರೆ ಆಯಿತು. ನಾನೂ, ಅವಳೂ ಸಮುದ್ರದ ದಂಡೆಯಲ್ಲಿ ಇನ್ನೂ ಒಂದು ಘಂಟೆ ವಾಕ್ ಮಾಡಿ ವಸತಿಗೃಹಕ್ಕೆ ಹೋಗಿ ಸ್ನಾನ, ತಿಂಡಿ ಎಲ್ಲ ಮುಗಿಸಿ, ಪ್ಯಾಕಿಂಗ್ ಮಾಡಿ ನಮ್ಮ ಲಡ್ಕಾಸಿ ಸ್ಕೂಟರ್ ಹತ್ತಿ ದ್ವೀಪವನ್ನು ಒಂದುಸುತ್ತು ಹೊಡೆದು ಆಮೇಲೆ ಇಲ್ಲಿಂದ ಹೊರಡಬೇಕು ಅಂತ ರೆಡಿಆದ್ವಿ.

(ಚಿತ್ರಗಳು: ನರೇಂದ್ರ ಶಿವನಗೆರೆ)

ಎಲ್ಲಾ ಸಾಮಾನುಗಳನ್ನು ನಮ್ಮ ಸ್ಕೂಟರಿಗೆ ಹೊರಿಸಿ, ನಾನೂ, ಅವಳೂ ಹತ್ತಿ ಹೊರಡುವ ಹೊತ್ತಿಗೆ, ೧೦ ಘಂಟೆ. ನಮ್ಮ ಸ್ಕೂಟರು ಸವಾರಿ ಶುರುವಾಯಿತು. ಸಮುದ್ರದ ದಂಡೆಗುಂಟ ಸಾಗುವ ದಾರಿ, ದಟ್ಟ ಕಾಡು, ಎತ್ತರೆತ್ತರದ ಬೆಟ್ಟಗಳು, ಘಾಟಿ ಹಾದಿ. ಮೋಡಗಳು ಚುಂಬಿಸುವ ಬೆಟ್ಟಗಳ ಶಿಖರಾಗ್ರ. ಸ್ವಲ್ಪ ದೂರ ಹೊಗುವ ಹೊತ್ತಿಗೆ, ಒಂದುಸಣ್ಣ ಊರು ಎದುರಾಯ್ತು. ಎಡ ಪಕ್ಕದಲ್ಲಿ ಸಮುದ್ರ, ಬೀಚು, ಪಕ್ಕಕ್ಕೆ ಸಣ್ಣ, ಸಣ್ಣ, ತಿಂಡಿ ಅಂಗಡಿಗಳು. ಬಲ ಪಕ್ಕದಲ್ಲಿ ಪ್ರವಾಸಿಗರು ಇಳಿದುಕೊಳ್ಳಲು ಹೊಟೆಲ್ಲುಗಳು. ಮೆಲ್ಲನೆ ನಮ್ಮ ಸ್ಕೂಟರು ನಿಲ್ಲುತ್ತಾ ಇರುವಾಗಲೇ, ಅದೇ ಧಭಧಭ ಶಬ್ಧ, ನೋಡಿದರೆ, ಮಂಗಟ್ಟೆ ಹಕ್ಕಿಗಳಗುಂಪೆ ಪಕ್ಕದ ಮರದ ಮೇಲೆ ಕುಳಿತಿದೆ. ಕಣ್ಣಿಗೆ ಹಬ್ಬ. ಆ ಹಕ್ಕಿಗಳು ಮನುಷ್ಯರ ಪರಿವೆಯೇ ಇಲ್ಲದೆ ಅಕ್ಕ ಪಕ್ಕ ಹಾರಾಡುತ್ತಿದ್ದವು. ಅಂತಹ ಮನಮೋಹಕ ದೃಶ್ಯವನ್ನು ನಾವು ನೋಡಿದ್ದು ಅದೇ ಮೊದಲು. ಪಕ್ಕನೆ ಇನ್ನೊಂದು ಜೋಡಿ ಹಕ್ಕಿಗಳು ಆ ಕಡೆ ಬೆಟ್ಟದಿಂದ ಈ ಕಡೆ ಬೀಚಿಗೆ ಹಾರಿ ಬಂದು ಪಕ್ಕದ ಮರದ ಮೇಲೆ ಕುಂತವು. ಈ ಹಕ್ಕಿಗಳು ನೋಡಲು ಸ್ವಲ್ಪ ಬೇರೆಯ ತರಹಾನೆ ಕಾಣುತ್ತಿದ್ದವು. ನೀವು ತುಂಬಾ ಸನಿಹದಿಂದನೊಡಿದರೆ ಮಾತ್ರ ಗೊತ್ತಾಗುವಂತೆ ಅವು ಬೇರೆ ಪ್ರಭೇದದ ಮಂಟೆಹಕ್ಕಿಗಳು (Oriental Pied Hornbill).

ಕಾಡಿನಲ್ಲೆನೈಸರ್ಗಿಕವಾಗಿ ಬೆಳೆದ ಈ ಹಕ್ಕಿಗಳ ಸೌಂದರ್ಯ ನೋಡಲು ಎಸ್ಟೊಂದು ಖುಶಿ. ಆ ಹಕ್ಕಿಗಳ ಲವಲವಿಕೆ, ರೆಕ್ಕೆ ಪುಕ್ಕಗಳ ದಟ್ಟ ಬಣ್ಣಗಳು, ಅವು ಹಾರಾಡುವ ರೀತಿ ಬಣ್ಣಿಸಲು ಅಸದಳ. ಅಷ್ಟು ಹೊತ್ತಿಗೆ, ಪಕ್ಕದ ಹೊಟೆಲ್ಲಿನ ಪಚ್ಚಿ, ಸ್ವಲ್ಪ ಅನ್ನವನ್ನು ತಂದು ಅಲ್ಲೆ ಪಕ್ಕಕ್ಕೆ ಸುರಿದ. ಆ ಮಂಗಟ್ಟೆಹಕ್ಕಿಗಳ ಜೋಡಿ ಹಕ್ಕಿಗಳು, ಪಕ್ಕನೆ ಗಿಡದಿಂದ ಹಾರಿ, ಅನ್ನ ತಿನ್ನಲು ಶುರುಇಟ್ಟವು. ನಮಗೆ ದೊಡ್ಡ ಆಶ್ಚರ್ಯ! ಅನ್ನ ತಿನ್ನುವ ಮಂಗಟ್ಟೆಹಕ್ಕಿಗಳನ್ನು ನಾವು ನೋಡಿದ್ದು ಇದೇ ಮೊದಲು. ಮಂಗಟ್ಟೆಹಕ್ಕಿಗಳನ್ನು ನೋಡುತ್ತಾ ಒಂದು ಘಂಟೆ ಹೋದದ್ದೆ ತಿಳಿಯಲಿಲ್ಲ, ನಮ್ಮ ಸ್ಕೂಟರನ್ನು ಹೊರಡಿಸಿ ಸಮುದ್ರದ ದಂಡೆಗುಂಟ ಸಾಗಿ, ಗುಡ್ಡ ಹತ್ತಿ, ಇಳಿಜಾರಿನಲ್ಲಿ ಸಾಗಿ ದೋಣಿ ನಿಲ್ದಾಣ ಮುಟ್ಟಿದ್ದಾಯ್ತು. ದಾರಿಯಲ್ಲಿ ಅಲ್ಲಲ್ಲಿ ಮಳೆ, ಮಳೆಯಲ್ಲಿ ಅಲ್ಲಲ್ಲಿ ತೋಯ್ದಿದ್ದೂ ಆಯ್ತು. ದೋಣಿ ನಿಲ್ದಾಣದಲ್ಲಿ ನಮ್ಮ ಲಡ್ಕಾಸಿ ಸ್ಕೂಟರನ್ನು ಇಂಡಿಯನ್ ಮನುಷ್ಯನಿಗೆ ತಲುಪಿಸಿ ಲುಮುಟ್ಗೆ ದೊಣಿಹತ್ತಿದ್ದು ಆಯ್ತು. ಪಂಗ್ಕೋರ್ ನ ಎಲ್ಲ ಪ್ರೀತಿಯ ಜನರ, ಮಂಗಟ್ಟೆಹಕ್ಕಿಗಳ ನೆನಪನ್ನು ಮನಸಲ್ಲಿ ಉಳಿಸಿ, ಲುಮುಟ್ಗೆ ತಲುಪಿ ಅಲ್ಲಿ ಇಂಡಿಯನ್ ಹೊಟೆಲ್ಲಿನಲ್ಲಿ ಒಳ್ಳೆ ಬಾಳೆಲೆ ಊಟ ಮಾಡಿ, ಇನ್ನೇನು ಕೌಲಲಂಪುರ ತುಂಬಾ ದೂರ ಏನು ಇಲ್ಲ….

ಪಾಂಗ್ಕೋರ್ ದ್ವೀಪದ ಮಂಗಟ್ಟೆ ಹಕ್ಕಿಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ