ಕಾವ್ಯದ ಆರಂಭದ ಭಾಗದಲ್ಲಿ ಮಾತ್ರವಲ್ಲದೇ ಕಾವ್ಯದ ಮುಂದುವರಿದ ಕೆಲ ಭಾಗಗಳಲ್ಲೂ ಸ್ತುತಿ ಪದ್ಯಗಳು ರಚನೆಗೊಂಡಿವೆ. ಷಡಕ್ಷರ ಕವಿ ತನ್ನ ಮೂರು ಕಾವ್ಯಗಳಾದ ವೃಷಭೇಂದ್ರ ವಿಜಯದಲ್ಲಿ ನಲವತ್ತಕ್ಕೂ ಹೆಚ್ಚು, ಶಬರ ಶಂಕರ ವಿಳಾಸದಲ್ಲಿ ಐದು ಮತ್ತು ರಾಜಶೇಖರ ವಿಳಾಸದಲ್ಲಿ ಹನ್ನೆರೆಡು,  ಹೀಗೆ ಒಟ್ಟಿನಲ್ಲಿ ಐವತ್ತೈದಕ್ಕೂ ಹೆಚ್ಚು ಶಿವ ಸ್ತುತಿಗಳು, ಮತ್ತು ಅಷ್ಟೇ ಸಮನಾಗಿ ಪಾರ್ವತಿ ಪ್ರಾರ್ಥನೆಗಳು ಸಿಗುತ್ತವೆ. ದೈವದ ಅನುಗ್ರಹಕ್ಕೆ ಹಂಬಲಿಸಿದಂತೆ ಭಕ್ತಿರಸವೇ ಇವುಗಳಲ್ಲಿ ಪ್ರಧಾನವಾಗಿ ಕಂಡುಬರುತ್ತದೆ. ಇಷ್ಟದೈವವೂ, ರಾಜಾಶ್ರಯವೂ ಅಲ್ಲದೆ ಪರಂಪರೆಯ ಪೂರ್ವಸೂರಿಗಳ ಸ್ಮರಣೆಯು ಅತ್ಯಂತ ಗೌರವದಿಂದ ಸಾಗಿಬಂದಿದೆ.
ಕೃಷ್ಣ ದೇವಾಂಗಮಠ ಅಂಕಣ

 

ಆದಿ ಪ್ರಾರ್ಥನೆ ಎಂದರೆ ಯಾವುದೇ ಕಾರ್ಯದ ಆರಂಭಕ್ಕೆ ಸಾಧ್ಯವಾಗಿಸುವ ಸ್ತುತಿ ರೂಪದ ಪ್ರಥಮ ಇಷ್ಟದೇವತಾ ಪೂಜೆ ಅಥವಾ ದೈವವೆಂದು ನಂಬಿದ ಯಾವುದರ ಪೂಜೆಯೂ ಆಗಬಹುದು. ಕವಿಗಳು ಕಾವ್ಯದ ರಚನೆಯ ಆರಂಭದಲ್ಲಿ ತಮ್ಮ ಕಾವ್ಯ ಕಟ್ಟುವ ಸದ್ಯದ ಕಾವ್ಯದ ಹಾದಿ ನಿರ್ವಿಘ್ನವಾಗಿ ಸಾಂಗವಾಗಿ ಸಾಗಲಿ ಎನ್ನುವ ಆಶಯದಿಂದ ಪ್ರಾರ್ಥಿಸುವ ಮೊದಲ ಸಾಲುಗಳೇ ಈ ಆದಿ ಪ್ರಾರ್ಥನೆಗಳು.

ಆದಿ ಪ್ರಾರ್ಥನೆಯೆಂದು ನಾನು ಕರೆದಿರುವ ಪದ್ಯಗಳನ್ನು ಸ್ತುತಿ ಪದ್ಯಗಳು ಮತ್ತು ನಾಂದಿ ಪದ್ಯಗಳು ಎಂಬುದಾಗಿ ಕರೆದಿದ್ದಾರೆ. ಅವುಗಳಲ್ಲಿ ಜಿನಸ್ತುತಿ, ಇಷ್ಟದೇವತಾಸ್ತುತಿ, ಗುರು ಸ್ಮರಣೆ, ಪರಂಪರೆ, ರಾಜಾಶ್ರಯ, ಕಾವ್ಯ ಮೀಮಾಂಸೆ, ಕುಕವಿ ನಿಂದೆ ಮತ್ತು ಪ್ರಶಂಸೆ ಇನ್ನೂ ಮುಂತಾದವನ್ನು ತಿಳಿಸುತ್ತವೆ. ಜೈನ ಕಾವ್ಯದ ಇಷ್ಟದೇವತಾ ನಾಂದಿ ಪದ್ಯಗಳಲ್ಲಿ ಇತರ ಅಂದರೆ (ಸರಸ್ವತಿ ಸ್ತುತಿ, ಗಣಪತಿ ಸ್ತುತಿ, ಶಿವ ಸ್ತುತಿ, ವಿಷ್ಣು ಸ್ತುತಿ, ವಿರೂಪಾಕ್ಷ ಸ್ತುತಿ, ಮನ್ಮಥ ಸ್ತುತಿ, ಸೂರ್ಯ ಸ್ತುತಿ) ಇತ್ಯಾದಿ ದೈವಗಳ ಪ್ರಾರ್ಥನೆಗಿಂತಲೂ ರಾಜನೇ ಇಷ್ಟ ದೇವತೆಯಾಗಿ ಕವಿಗಳಿಂದ ಸ್ತುತಿಸಲ್ಪಡುತ್ತಾನೆ. ಆದಿ ಪ್ರಾರ್ಧನೆಗಳ ಮೂಲ ಆದ್ಯತೆ ಸ್ತುತಿಸುವುದೇ ಆಗಿದೆ.

(ಪಂಪ ಕವಿ)

ಲೌಕಿಕ ಮತ್ತು ಆಗಮಿಕ ನೆಲೆಗಳಲ್ಲಿ ಈ ಸ್ತುತಿಗಳು ಇವೆ. ಜೈನ ಕಾವ್ಯದ ಆದಿ ಪ್ರಾರ್ಥನೆಗಳಲ್ಲಿ ಜಿನಸ್ತುತಿಯು ಆಗಮಿಕ ಕಾವ್ಯಗಳಲ್ಲಿ, ಇಷ್ಟದೇವತಾ, ರಾಜಾಶ್ರಯಗಳ ಕುರಿತು ಲೌಕಿಕ ಕಾವ್ಯಗಳಲ್ಲು ಕಂಡುಬರುತ್ತವೆ. ‘ಬೆಳಗುವೆನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ’ ಎಂದು ಪಂಪ ತನ್ನ ಪಂಪಭಾರತದಲ್ಲಿ ಹೇಳಿಕೊಂಡಿದ್ದಾನೆ. ಈ ಮೂಲಕ ಮುಂದಿನ ಕವಿಗಳಿಗೆ ರಾಜಮಾರ್ಗವನ್ನು ನಿರ್ಮಿಸಿಕೊಟ್ಟಿದ್ದಾನೆ.

ಶ್ರೀ ಮತ್ಪರಗಂಭೀರ ಸ್ಮಾದ್ವಾದಾಮೋಘ ಲಾಂಛನಂ
ಜೀಯಾತ್ ತ್ರೈಲೋಕ್ಯನಾಥಸ್ಯ ಶಾಸನಂ ಜಿನಶಾಸನಂ||

ಜೈನರ ಕಾಲದಲ್ಲಿ ಹೀಗೆ ಆರಂಭವಾಗುವ ಶ್ಲೋಕವನ್ನು ಶಾಸನಗಳಲ್ಲಿ ಬರೆಯುತ್ತಿದ್ದರು. ಪ್ರಾಚೀನ ಶಾಸನಗಳಲ್ಲಿ ಶ್ರೀ, ಸ್ವಸ್ತಿ, ಸ್ವಸ್ತಿಶ್ರೀ, ಎಂಬ ಪದಗಳನ್ನು ಶುಭ ಸೂಚಕಗಳಾಗಿ ಬಳಸುತ್ತಿದ್ದರು. ಜೈನರು ಜಿನಸ್ತುತಿಯ ಮೂಲಕ ತಮ್ಮ ಇಷ್ಟದೇವರನ್ನು ಸ್ತುತಿಸಿದರೆ ವೈಷ್ಣವರು ವಿಷ್ಣುವನ್ನು, ಶೈವರು ಶಿವನನ್ನು ಸ್ತುತಿಸಿ ಕಾವ್ಯಗಳನ್ನು ಆರಂಭಿಸುತ್ತಾರಾದರೂ ಕ್ರಿ.ಶ.ಒಂಭತ್ತು ಮತ್ತು ಹತ್ತನೇ ಶತಮಾನದ ಕೆಲವು ಶಾಸನಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ತ್ರೈಪುರುಷರನ್ನು ಒಟ್ಟಿಗೆ ಸ್ತುತಿಸಲಾಗಿದೆ.

ಶ್ರೀದೇವೆಂದ್ರ ಮುನೀಂದ್ರ ವಂದಿತ ಗುಣವ್ರಾತಂ ಜಗತ್ಸಾಮಿ ಸಂ-
ದಾದಿಬ್ರಹ್ಮನಗಾಧಬೋಧನಿಳಯಂ ದುರ್ವಾರಸಂಸಾರವಿ|
ಚ್ವೇದೋಪಾಯನಿಯುಕ್ತಸೂಕ್ತಿ ವೃಷಮಾರ್ಗಾಗ್ರೇಸರಂ ಪಾಪಹೃ-
ತ್ವಾದಾಬ್ಜಂ ದಯೆಗೆಯ್ವನಕ್ಕೆಮಗೆ ಮುಕ್ತಿಶ್ರೀಸುಖಾವ್ಯಾಪ್ತಿಯಂ||
[ಆದಿಪುರಾಣ ೧.೧]

ಹೀಗೆ ಪಂಪ ಕವಿಯು ತನ್ನ ಆದಿಪುರಾಣದ ಆರಂಭದಲ್ಲಿ ವಿದ್ಯಾಗುರುಗಳಾದ ದೇವೆಂದ್ರ ಮುನಿಯನ್ನು ಪ್ರಾರ್ಥಿಸುವುದರ ಮೂಲಕವಾಗಿ ಜಿನಸ್ತುತಿಯನ್ನು ಮಾಡುತ್ತಾನೆ.

ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದುಂ ದರಿತ್ರಿಯಾ
ಜೀಯನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನ್ನೊತ್ತಿಕೊಂಡುಮಾ
ತ್ಮೀಯ ಸುಪುಷ್ಟವೃಷ್ಟಿಯನೊಡಂಬಡೆ ತಾಳ್ದಿಯುಮಿಂತುದಾತ್ತನಾ
ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯಕೋಟಿಯಂ
[ ಪಂಪಭಾರತ ೧.೧ ]

ಈ ಮೇಲಿನ ಪದ್ಯದಲ್ಲಿ ಪಂಪನಿಗೆ ತನ್ನ ದೊರೆಯನ್ನು ಉದಾತ್ತನೆಂಬ ಗುಣ ವಿಶೇಷಣದಿಂದ ಕರೆಯುವ ಮನಸ್ಸು ಇರುವುದರಿಂದ ಉದಾತ್ತ ನಾರಾಯಣನೆನಿಸಿಕೊಂಡಿರುವ ಅರಿಕೇಸರಿಯು ಸೌಖ್ಯವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸಿರುವನು.

ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಹೀಗೆ ರಾಜನನ್ನೇ ದೈವವಾಗಿ ಪ್ರಾರ್ಥಿಸುವುದು ವಿಶಿಷ್ಟವಾಗಿದೆ. ಈ ರೀತಿಯ ಸ್ತುತಿ ಪದ್ಯಗಳನ್ನು ವಿಭಾಗಗಳನ್ನಾಗಿ ವಿಂಗಡಿಸಿ ಚರ್ಚಿಸಬಹುದು.

೧) ಇಷ್ಟದೇವರು ಒಳಿತುಂಟುಮಾಡಲಿ ಎಂದು ಬೇಡಿಕೊಳ್ಳುವ ರೀತಿಯ ಅನುಗ್ರಹ ಯಾಚನ ಪದ್ಯಗಳು

ಮದಮಣಮಿಲ್ಲ ದಾನಗುಣದಿಂ ನೆಗಳ್ದುಂ ನೃಪಸಿಂಹನಾಗಿಯುಂ
ವಿದಿತ ವಿಶುದ್ಧ ಭದ್ರಗುಣನಂತೆ ವಿರುದ್ಧಮಿದೇಂಬಿನಂ ನಿಜಾ|
ಭ್ಯುದಯನಿವೇದ ದೀರ್ಘಕರ ಮೊಪ್ಪೆ ಜಗತ್ಪ್ರಿಯನಾದ ದೇವನಂ
ಕದ ಗಣನಾಯಕಂವರದನಕ್ಕೆಮಗಮ್ಮನಗಂಧವಾರಣಂ
[ ಗದಾಯುದ್ಧ ೧.೧೦ ]

ಪಂಪನು ಅರಿಕೇಸರಿಯನ್ನು ಉದಾತ್ತ ನಾರಾಯಣನೆಂದು ಕರೆದಂತೆ ಗದಾಯುದ್ಧದಲ್ಲಿ ರನ್ನನು ತನ್ನ ದೊರೆಯಾದ ಸತ್ಯಾಶ್ರಯನನ್ನು ದಾನಗುಣಗಳಿಂದ ಜಗತ್ತಿಗೆ ಪ್ರಿಯನಾದವನು ಎಂದು ಸಂಬೋಧಿಸುತ್ತಾ ಗಣಪತಿಯಂತೆ ಪ್ರಸನ್ನನಾಗಿ ವರಗಳನ್ನು ದಯಪಾಲಿಸಲಿ ಎಂಬುದಾಗಿ ಪ್ರಾರ್ಥಿಸಿರುವನು.

೨) ಇಷ್ಟದೇವರಿಗೆ ಭಕ್ತಿ ಸಮರ್ಪಣೆಯ ಮೂಲಕ ಮಹಿಮೆಯನ್ನು ಪಾಡುವ ಪದ್ಯಗಳು

ತರುಣೋತ್ತುಂಗಶಶಾಂಕಖಂಡಮೆ ಸುಧಾಬೀಜಂ ಭುಜುಂಗೇಂದ್ರನಂ
ಕುರಮುನ್ಮೀಲಿತಮಟ್ಟಹಾಸವೇ ದಳಾನೀಕಂ ವೃಷಂಪುಷ್ಟಮೀ|
ಶ್ವರಶೈಲಂ ಫಲಮಾಗೆ ಕೋಮಲಮುಖೀ ಗೌರಿಲತಾಶ್ಲೀಷ್ಟ ಶಂ
ಕರಕಲ್ಪದ್ರುಮನೀಗಭೀಷ್ಟ ಫಲಮಂ ಚಾಳುಕ್ಯ ನಾರಾಯಣಂ||
[ಗದಾಯುದ್ಧ ೧.೨]

ಜೈನರು ಜಿನಸ್ತುತಿಯ ಮೂಲಕ ತಮ್ಮ ಇಷ್ಟದೇವರನ್ನು ಸ್ತುತಿಸಿದರೆ ವೈಷ್ಣವರು ವಿಷ್ಣುವನ್ನು, ಶೈವರು ಶಿವನನ್ನು ಸ್ತುತಿಸಿ ಕಾವ್ಯಗಳನ್ನು ಆರಂಭಿಸುತ್ತಾರಾದರೂ ಕ್ರಿ.ಶ. ಒಂಭತ್ತು ಮತ್ತು ಹತ್ತನೇ ಶತಮಾನದ ಕೆಲವು ಶಾಸನಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ತ್ರೈಪುರುಷರನ್ನು ಒಟ್ಟಿಗೆ ಸ್ತುತಿಸಲಾಗಿದೆ.

ಈ ಪದ್ಯದಲ್ಲಿ ರನ್ನನು ತನಗೆ ರಾಜಾಶ್ರಯ ನೀಡಿದ ಸತ್ಯಾಶ್ರಯನನ್ನು ಶಂಕರಸ್ವರೂಪಿ ಎಂಬುದಾಗಿ ಭಕ್ತಿ ಸಮರ್ಪಣೆ ಮಾಡಿದ್ದಾನೆ. ಇನ್ನೊಂದು ಪದ್ಯದಲ್ಲಿ

ಶ್ರೀಯುವತೀಪ್ರಿಯಂ ಬಲಯುತ ಬಲಿದರ್ಪಹರಂ ಜಿತಾರಿದೈ
ತೇಯನನಂತಭೋಗ ನಿಲಯಂ ಪ್ರತಿಪಾಲಿತಧರ್ಮಚಕ್ರನ
ಬ್ಜಾಯತನೇತ್ರನಾದಿಪುರುಷಂ ಪುರುಷೋತ್ತಮನೀಚಳುಕ್ಯನಾ
ರಾಯಣದೇವನೀಗೆಮಗೆ ಮಂಗಳಕಾರಣಮುತ್ಸವಂಗಳಂ
[ಗದಾಯುದ್ಧ ೧.೧]

ರನ್ನನು ಚಾಳುಕ್ಯನಾರಾಯಣನೆಂದು ಸತ್ಯಾಶ್ರಯನನ್ನು ಕೊಂಡಾಡುತ್ತಾನೆ. ರಾಜ್ಯದ ಸಂಪತ್ತಿಗೆ ಒಡೆಯನೂ, ಸೈನ್ಯವಂತನೂ, ಬಲಿಷ್ಠ ಶತ್ರುಗಳ ದರ್ಪವನ್ನು ಹರಣ ಮಾಡಿ ಗೆದ್ದವನೂ, ಅನಂತ ಸುಖದಲ್ಲಿ ವಾಸನಾದವನೂ, ಧರ್ಮವನ್ನು ಪಾಲಿಸಿದವನೂ, ವಿಶಾಲವಾದ ಕಮಲದಂತಹ ಕಣ್ಣುಳ್ಳವನೂ, ರಾಜ್ಯಕ್ಕೆ ಪ್ರಥಮನೂ, ಪುರುಷ ಶ್ರೇಷ್ಠನೂ ಎಂಬುದೆಲ್ಲವಾಗಿ ಮಹಿಮೆಯನ್ನು ಪಾಡುತ್ತಾನೆ.

ಶ್ರೀತಳ್ತುರದೊಳ್ ಕೌಸ್ತುಭ ಜಾತದ್ಯುತಿ ಬಳಸಿ ಕಾಂಡಪಟದಂತಿರೆ
ಸಂಪ್ರೀತಿಯಿಂ ಆವನನ್ ಅಗಲಳ್ ನೀತಿ
ನಿರಂತರ ಉದಾರನಂ ಆ ನೃಪತುಂಗ  [ ಕವಿರಾಜಮಾರ್ಗ ೧.೧ ]

ಕನ್ನಡದ ಮೊದಲ ಲಾಕ್ಷಣಿಕ ಕೃತಿಯಾದ ಕವಿರಾಜಮಾರ್ಗದಲ್ಲಿಯೇ ಈ ಸ್ತುತಿ ಪದ್ಯಗಳು ಆರಂಭವಾಗಿ ಈವರೆಗೂ ಬಂದಿವೆ. ಉದಾರನೂ, ನೀತಿವಂತನೂ ಆಗಿರುವ ತನ್ನ ಆಶ್ರಯದಾತ ನೃಪತುಂಗನನ್ನು ನಾರಾಯಣನಿಗೆ ಹೋಲಿಸಿ ಇಷ್ಟದೇವರನ್ನೂ ಮತ್ತು ಪ್ರಭುವನ್ನೂ ಒಟ್ಟಿಗೆ ಶ್ರೀವಿಜಯನು ಸ್ತುತಿ ಮಾಡುತ್ತಾನೆ. ಮೇಲೆ ಉಲ್ಲೇಖಿಸಿದ ಪದ್ಯದಲ್ಲಿ ಉದಾರನಂ ಆ ನೃಪತುಂಗಾ ಎಂದು ಸ್ತುತಿಸಿರುವುದು ಸಮಾನವಾಗಿ ಉದಾರ, ಉದಾತ್ತ ಪದವಾಗಿ ಪಂಪನಲ್ಲಿ ಬಂದಿದೆ.

ದೈವಾನುಗ್ರಹದಿಂದಲೇ ಯಾವೊಂದು ಕಾರ್ಯವಾದರೂ ಸಫಲವಾಗುತ್ತದೆಯೆಂಬ ನಂಬಿಕೆಯಿಂದಲೇ ದೇವತಾಸ್ತುತಿಯನ್ನು ಮಾಡುತ್ತಿದ್ದರು. ಹೀಗೆ ಸ್ತುತಿಸುವಾಗ ತಮ್ಮ ಇಷ್ಟದೈವದ ಪಾರಮ್ಯವನ್ನು ಎತ್ತಿ ಕೊಂಡಾಡಲು ತಮ್ಮ ಕವಿತ್ವದ ಸಾಮರ್ಥ್ಯವನ್ನು ಬಳಸಿದ್ದಾರೆ ಮತ್ತು ಹೀಗೆ ಬಳಸುವಾಗ ಉಳಿದೆಲ್ಲ ದೈವಗಳಿಗಿಂತಲೂ ಸರ್ವಶಕ್ತಿ ಸಂಪನ್ನವೆಂದೂ ತಮ್ಮ ವರ್ಣನೆಯಲ್ಲಿ ವಿಶೇಷವಾಗಿ ಪ್ರಕಟಿಸಿದ್ದಾರೆ. ಪಂಪನು ಆದಿಪುರಾಣದಲ್ಲಿ ಮೊದಲ ತೀರ್ಥಂಕರನಾದ ಪುರುದೇವನನ್ನು, ದೇವೇಂದ್ರಮುನಿ, ಸಮಂತಭದ್ರ ಮೊದಲಾದ ಪೂರ್ವಾಚಾರ್ಯರನ್ನು, ಜಯನಂದಿ, ಸಿದ್ಧಾಂತಮುನಿಗಳನ್ನೂ ಸ್ತುತಿಸುತ್ತಾನೆ. ಅಂತೆಯೇ ರನ್ನನು ಅಜಿತ ಪುರಾಣದಲ್ಲಿ ಅಜಿತನಾಥನ ಜಿನಸ್ತುತಿಯನ್ನು ಮತ್ತು ಸಿದ್ಧರನ್ನು, ಆಚಾರ್ಯರನ್ನು ಸ್ತುತಿಸುತ್ತಾನೆ. ಪೊನ್ನನು ಶಾಂತಿ ಪುರಾಣದಲ್ಲಿ ಜಿನಸ್ತುತಿಯನ್ನು, ನಯಸೇನನು ತನ್ನ ಧರ್ಮಾಮೃತದಲ್ಲಿ ಜಿನಸ್ತುತಿಯನ್ನು, ರಾಘವಾಂಕ, ಹರಿಹರ ವಿರೂಪಾಕ್ಷನನ್ನು ಇಷ್ಟದೈವವಾಗಿಯೂ, ಮಲ್ಲಿಕಾರ್ಜುನನು ವಿಷ್ಣುವನ್ನು, ದೇವರಾಜನು ಮತ್ತು ಷಡಕ್ಷರಿಯು ಶಿವಸ್ತುತಿಯನ್ನು, ಲಕ್ಷ್ಮೀಶನು ಲಕ್ಷ್ಮೀನಾರಾಯಣನನ್ನೂ ಸ್ತುತಿಸಿರುವುದು ತಿಳಿದುಬರುತ್ತದೆ. ಹಾಗು ಪ್ರಾಚೀನ ಕನ್ನಡ ಕಾವ್ಯದಲ್ಲಿ ಹೀಗೆ ಇಷ್ಟದೇವತೆಗಳೊಂದಿಗೆ ಕವಿಗಳು ಇತರ ದೇವತೆಗಳನ್ನು ಸ್ತುತಿಸಿರುವುದನ್ನು ಕಾಣಬಹುದು.

ಜಗನ್ನಾಥ ವಿಜಯದಲ್ಲಿ ರುದ್ರಭಟ್ಟನು ಬ್ರಹ್ಮ, ಸೂರ್ಯ, ಗಣಪತಿ, ಶಿವನನ್ನು ಸ್ತುತಿಸಿರುವುದು ಕಾಣುತ್ತದೆ. ಕರ್ಣಾಟ ಭಾರತ ಕಥಾಮಂಜರಿಯಲ್ಲಿ ಕುಮಾರವ್ಯಾಸನು ಲಕ್ಷ್ಮೀ, ಶಾರದೆ, ಪಾರ್ವತಿಯನ್ನು ಸ್ತುತಿಸಿದ್ದಾನೆ. ಹರಿಹರನು ಇಷ್ಟದೈವವಾಗಿ ವಿರೂಪಾಕ್ಷನನ್ನು ಪೂಜಿಸಿದರೂ ಇತರ ದೇವತೆಗಳಾದ ಷಣ್ಮುಖ, ಪಾರ್ವತಿ, ಗಣೇಶರನ್ನು ಗಿರಿಜಾಕಲ್ಯಾಣದಲ್ಲಿ ಸ್ತುತಿಸಿದ್ದಾನೆ.

ಶ್ರೀವಾಗ್ದೇವಿಗೆ ಶಬ್ದದಿ
ನಾವಾವಿಂದ್ರಿಯದ ವಿಷಯಮಂ ಶ್ರೋತ್ರದೊಳು
ದ್ಭಾವಿಪ ನಿರ್ಮಳಮೂರ್ತಿಗಿ
ಳಾವಂಧ್ಯೆಗೆ ಶಾಸ್ತ್ರಮುಖದೊಳವನತನಪ್ಪೆಂ
[ಶಬ್ಧಮಣಿ ದರ್ಪಣಂ ೧.೧]

ಕೇಶೀರಾಜನು ತನ್ನ ಶಬ್ದಮಣಿ ದರ್ಪಣಂ ದಲ್ಲಿ ವಾಗ್ದೇವಿಯಾದ ಸರಸ್ವತಿ ಶಬ್ದದಿಂದಲೇ ಪಂಚೇಂದ್ರಿಯಗಳ ಅನುಭವವನ್ನ ತರುವಂತಹವಳು, ಅಂತಹವಳು ನಿರ್ಮಲಳು, ಅವಳಿಗೆ ಈ ಕೃತಿಯ ಪ್ರಾರಂಭದಲ್ಲಿ ವಂದಿಸುತ್ತೇನೆ ಎಂಬುದಾಗಿ ಹೇಳುತ್ತಾನೆ.

ಪರಮಜಿನೇಂದ್ರವಾಣಿಯೇ ಸರಸ್ವತಿ ಬೇರದು ಪೆಣ್ಣರೂಪವ
ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವಪೂಜಿಪಾ
ಧರಿಸುವ ಭವ್ಯಕೋಟಿಗೆ ನಿರಂತರ ಸೌಖ್ಯಮನೀವುದಾನವ
ರ್ಕೆರೆದಪೆನಾ ಸರಸ್ವತಿಯೆ ಮಾಳ್ಕೆಮಗಿಲ್ಲಿಯೆ ವಾಗ್ವಿಳಾಸಮಂ
[ ಆದಿಪುರಾಣ ೧.೯ ]

ಪರಮ ಜಿನೇಂದ್ರವಾಣಿಯೇ ಸರಸ್ವತಿ ಬೇರೆ ಹೆಣ್ಣಿನ ರೂಪ ಧರಿಸಿ ನಿಂದುದಲ್ಲ. ಹಾಗೆ ಭಾವಿಸಿ ಓದುವ, ಕೇಳುವ, ಪೂಜಿಸುವ, ಆದರಿಸುವ ಎಲ್ಲರಿಗೂ ನಿರಂತರ ಸೌಖ್ಯವನ್ನು ಕೊಡಲೆಂದು ಮತ್ತು ಸರಸ್ವತಿಯು ನಮಗೆ ವಿಶೇಷವಾದ ಮಾತಿನ ಚಾತುರ್ಯವನ್ನು ದಯಪಾಲಿಸಲಿ ಎಂದು ಹೇಳುತ್ತಾನೆ. ಸರಸ್ವತಿ ಸ್ತುತಿ ಕವಿರಾಜಮಾರ್ಗದಿಂದಲೇ ಆರಂಭವಾದರೂ ಆದಿಪುರಾಣದ ಈ ಸ್ತುತಿಯು ಸರ್ವಸಾಮಾನ್ಯ ಸಂಪ್ರದಾಯಕ್ಕಿಂತ ವಿಭಿನ್ನವಾದ ಅರ್ಥಪೂರ್ಣ ಸ್ತುತಿಯಾಗಿದೆ. ಪುರಾಣ ಕಾಲದಿಂದಲೂ ಸರಸ್ವತಿ ಎಂದರೆ ಎಲ್ಲರೂ ಹೆಣ್ಣು ದೇವತೆ ಅಂತಲೇ ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ ಪಂಪ ಅದನ್ನು ಅಲ್ಲಗಳೆದು ಪರಮ ಜಿನೇಂದ್ರವಾಣಿಯೇ ಸರಸ್ವತಿ, ಅಂದರೆ ಶ್ರೇಷ್ಠರಾದ ತೀರ್ಥಂಕರರ ಮಾತೆ ಸರಸ್ವತಿ ಎಂಬುದಾಗಿ ಹೇಳಿರುವುದು ವಿಶೇಷವಾಗಿದೆ.

ಸರಸ್ವತಿಯನ್ನು ಶ್ರೀವಿಜಯ, ಪಂಪ, ರನ್ನ, ನಾಗವರ್ಮ, ನಯಸೇನ, ನೇಮಿಚಂದ್ರ, ಮಲ್ಲಿಕಾರ್ಜುನ, ರತ್ನಾಕರ, ಲಕ್ಷ್ಮೀಶ, ಹೀಗೆ ಹಲವು ಕವಿಗಳು ತಮ್ಮ ಕಾವ್ಯಗಳಲ್ಲಿ ಮತ್ತೆ ಮತ್ತೆ ಪ್ರಾರ್ಥಿಸುತ್ತಾರೆ. ಪಂಪ ಮತ್ತು ಆನಂತರದ ಹಲವು ಕವಿಗಳ ಕೃತಿಗಳಲ್ಲಿ ಸರಸ್ವತಿಯ ಸ್ತುತಿ ಹೇಗೆ ಮೂಡಿದೆ ಎಂಬುದನ್ನು ಮಾರ್ಗಕಾರರಲ್ಲಿ ಸರಸ್ವತಿಯ ದರ್ಶನ, ದೇಸಿಕಾವ್ಯದಲ್ಲಿ ಸರಸ್ವತಿಯ ದರ್ಶನ, ಹೊಸಕಾವ್ಯದಲ್ಲಿ ಸರಸ್ವತಿಯ ದರ್ಶನ ಎಂದು ಮೂರು ಭಾಗಗಳಾಗಿ ಮಾಡಿ ಒಟ್ಟಾಗಿ ‘ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ’ ಎಂಬ ಲೇಖನದಲ್ಲಿ ರಂ.ಶ್ರೀ.ಮುಗಳಿಯವರು ವಿಮರ್ಶಾತ್ಮಕವಾಗಿ ಚರ್ಚಿಸಿದ್ದಾರೆ.

ಕಾವ್ಯದ ಆರಂಭದ ಭಾಗದಲ್ಲಿ ಮಾತ್ರವಲ್ಲದೇ ಕಾವ್ಯದ ಮುಂದುವರಿದ ಕೆಲ ಭಾಗಗಳಲ್ಲೂ ಸ್ತುತಿ ಪದ್ಯಗಳು ರಚನೆಗೊಂಡಿವೆ. ಷಡಕ್ಷರ ಕವಿ ತನ್ನ ಮೂರು ಕಾವ್ಯಗಳಾದ ವೃಷಭೇಂದ್ರ ವಿಜಯದಲ್ಲಿ ನಲವತ್ತಕ್ಕೂ ಹೆಚ್ಚು, ಶಬರ ಶಂಕರ ವಿಳಾಸದಲ್ಲಿ ಐದು ಮತ್ತು ರಾಜಶೇಖರ ವಿಳಾಸದಲ್ಲಿ ಹನ್ನೆರೆಡು,  ಹೀಗೆ ಒಟ್ಟಿನಲ್ಲಿ ಐವತ್ತೈದಕ್ಕೂ ಹೆಚ್ಚು ಶಿವ ಸ್ತುತಿಗಳು, ಮತ್ತು ಅಷ್ಟೇ ಸಮನಾಗಿ ಪಾರ್ವತಿ ಪ್ರಾರ್ಥನೆಗಳು ಸಿಗುತ್ತವೆ. ದೈವದ ಅನುಗ್ರಹಕ್ಕೆ ಹಂಬಲಿಸಿದಂತೆ ಭಕ್ತಿರಸವೇ ಇವುಗಳಲ್ಲಿ ಪ್ರಧಾನವಾಗಿ ಕಂಡುಬರುತ್ತದೆ.

ಇಷ್ಟದೈವವೂ, ರಾಜಾಶ್ರಯವೂ ಅಲ್ಲದೆ ಪರಂಪರೆಯ ಪೂರ್ವಸೂರಿಗಳ ಸ್ಮರಣೆಯು ಅತ್ಯಂತ ಗೌರವದಿಂದ ಸಾಗಿಬಂದಿದೆ. ಈ ಪದ್ಧತಿಯ ಮೂಲಕ ಸಾಹಿತ್ಯ ಪರಂಪರೆಯಲ್ಲಿಯೇ ತಮ್ಮ ಕಾವ್ಯಕ್ರಿಯೆಯೂ ಮುಂದುವರೆದಿದೆ ಎಂಬ ತಿಳಿವು ಸ್ಪಷ್ಟವಾಗುತ್ತದೆ. ಪೂರ್ವಸೂರಿಗಳ ಕಾವ್ಯದ ಉತ್ತಮ ಲಕ್ಷಣಗಳು ತಮ್ಮ ಕಾವ್ಯದಲ್ಲೂ ಮೂಡಲಿ ಎಂಬ ಆಶಯ ಮತ್ತು ಅವರನ್ನು ನೆನೆವ ಮೂಲಕ ವಿನಯವನ್ನು ತೋರಿಸಿದ್ದಾರೆ.

ವ್ಯಾಸ ಮುನೀಂದ್ರ ರುಂದ್ರ ವಚನಾಮೃತವಾರ್ಧಿಯನೀಸುವೆನ್
ಕವಿವ್ಯಾಸನೆನ್ ಎಂಬ ಗರ್ವಮೆನಗಿಲ್ಲ
[ ಪಂಪಭಾರತ ೧.೧೩ ]

ಪಂಪ ಹೇಳುವ ಮಾತನ್ನು ಗಮನಿಸಿದರೆ ವ್ಯಾಸರಿಂದ ಮಹಾಭಾರತದ ವಿಷಯವನ್ನು ಆರಿಸಿಕೊಂಡಿದ್ದರೂ ವಿನಯಪೂರ್ವಕವಾಗಿ ಕವಿವ್ಯಾಸನೆಂಬ ಗರ್ವ ನನಗಿಲ್ಲ ಎಂದು ಹೇಳಿಕೊಂಡಿದ್ದಾನೆ. ಪಂಪನ ಈ ಸಂಪ್ರದಾಯ ಮುಂದಿನ ಕವಿಗಳಿಗೆ ಮಾರ್ಗವಾಯಿತು.

ಎನಗೆ ಅನುಕೂಲಮಕ್ಕೆ ಗುಣವರ್ಮನ ಜಾಣ್ಣುಡಿ
ಪಂಪನ ಇಂಪು, ಪೊನ್ನನ ಬಗೆ, ನಾಗವರ್ಮನ
ಬಹುಜ್ಞತೆ, ರನ್ನನ ಕಾಂತಿ , ನಾಗಚಂದ್ರನ ರಸಭಾವ
ಪುಷ್ಪಬಾಣನ ಮೃದುಬಂಧ.
[ಅನಂತನಾಥ ಪುರಾಣ ೧.೩೦]

ಜನ್ನ ಕವಿಯು ತನ್ನ ಅನಂತನಾಥ ಪುರಾಣದಲ್ಲಿ ಗುಣವರ್ಮನ ಜಾಣ್ಣುಡಿ, ಪಂಪನಲ್ಲಿನ ಇಂಪು, ರನ್ನನ ಕಾಂತಿ, ನಾಗಚಂದ್ರನ ರಸಭಾವವು, ಪುಷ್ಪಬಾಣನ ಮೃದುರಚನೆ ಎಲ್ಲವೂ ತನ್ನ ಕಾವ್ಯದಲ್ಲಿ ಅಂತರ್ಗತವಾಗಲಿ ಎನ್ನುತ್ತಾನೆ.

ದುರಿತ ಕುಲಗಿರಿ ವಜ್ರದಂಡನು
ಧರೆಯ ಜಂಗಮ ಮೂರ್ತಿ ಕವಿತಾ
ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜ ವಂದಿತನು
ತರಳನನು ತನ್ನವನೆನುತ ಪತಿ
ಕರಿಸಿ ಮಗನೆಂದೊಲಿದು ಕರುಣದಿ
ವರವನಿತ್ತನು ದೇವ ವೇದವ್ಯಾಸ ಗುರುರಾಯ
[ಕುಮಾರವ್ಯಾಸ ಭಾರತ ೧.೧೧]

ವ್ಯಾಸಭಾರತದ ಪ್ರಭಾವ ಕುಮಾರವ್ಯಾಸನನ್ನು ಪ್ರಭಾವಿಸಿದ ಕಾರಣ ತನ್ನನ್ನು ತಾನು ವ್ಯಾಸನ ಮಗ ಕುಮಾರವ್ಯಾಸನೆಂದು ಕರೆದುಕೊಂಡ. ಕುಮಾರವ್ಯಾಸನ ಕಾವ್ಯ ಕರ್ಣಾಟ ಭಾರತ ಕಥಾಮಂಜರಿಯು ಕುಮಾರವ್ಯಾಸ ಭಾರತವೆಂದೇ ಪ್ರಸಿದ್ಧವಾಗಿದೆ.

ಇಲ್ಲಿ ಕವಿ ಕುಮಾರವ್ಯಾಸನು ಪೂರ್ವಕವಿಯಾದ ವ್ಯಾಸರನ್ನು ಶ್ರೇಷ್ಠ ಪರ್ವತಕ್ಕೆ ವಜ್ರದಂತಿರುವ, ಸೂರ್ಯನಂತೆ ಪ್ರಕಾಶವಾದ, ಭೂಮಿಗೆ ಜಂಗಮ ಮೂರ್ತಿಯಾದ ಸಮಸ್ತ ಯತಿಗಳಲ್ಲಿ ಶ್ರೇಷ್ಠನಾದ ದೇವತೆಗಳಿಂದ ವಂದಿಸಿಕೊಳ್ಳುವ ಮಹರ್ಷಿ ವ್ಯಾಸರು ಬಾಲಕನೆಂದು ತನಗೆ ಒಲಿದು ತನ್ನನ್ನು ಮಗನೆಂದು ವರವನ್ನು ಕೊಟ್ಟರೆಂಬುದಾಗಿ ಹೇಳಿರುವನು.

ಸಂಸ್ಕೃತ ಕಾವ್ಯಗಳಲ್ಲಿ ಇಲ್ಲದ ಕವಿಕಾವ್ಯಗಳ ಸ್ಮರಣೆ ಕನ್ನಡದಲ್ಲಿ ವಿಶೇಷವಾಗಿದೆ.

ಪೂರ್ವಕಾವ್ಯ ರಚನೆಗಳಂ ಮೊದಲೊಳ ಕಲ್ತಂಗಲ್ಲದೆ
ಪದದೊಳ ಜಾಣುಂ ಬೆಡಗುಂ ಅಕ್ಕುವೆ ಕೃತಿಯೊಳ್

ಎಂಬುದಾಗಿ ಕವಿರಾಜಮಾರ್ಗಕಾರನೇ ಸೂಚಿಸುತ್ತಾನೆ. ಹಿಂದಿನ ಕಾವ್ಯ ರಚನೆಗಳ ಓದು ಅಗತ್ಯವಾದ ವ್ಯುತ್ಪತ್ತಿಯ ಅಂಗವಾಗಿದೆ ಎಂಬುದಾಗಿಯೂ, ಸಾಹಿತ್ಯ ಪರಂಪರೆಯ ಕುರಿತು ಕವಿಗಿರಬೇಕಾದ ಎಚ್ಚರವನ್ನೂ ಇಲ್ಲಿ ಮಾರ್ಗಕಾರ ಸ್ಪಷ್ಟವಾಗಿ ಸೂಚಿಸಿದ್ದಾನೆ.

ಇದನ್ನು ನೆನಪಿನಲ್ಲಿಟ್ಟುಕೊಂಡೇ ಕವಿಗಳು ಮುಂದುವರಿಯುವುದು ಉತ್ತಮ ಕಾವ್ಯಗಳನ್ನು ಕನ್ನಡಕ್ಕೆ ಕೊಡಬಹುದಾದ ಸಾಧ್ಯತೆಗಳನ್ನು ಕಾಣಿಸುತ್ತದೆ. ನಾವು ಈಗಿನ ಕಾವ್ಯಗಳಲ್ಲಿ ಪೂರ್ವಕವಿಗಳ ಸ್ಮರಣೆ ಮಾಡದಿದ್ದರೂ ಪೂರ್ವಸೂರಿಗಳನ್ನು ಓದಿ ಆ ತಿಳಿವಿನಿಂದ ಬರಹಕ್ಕೆ ತೊಡಗುವುದೇ ಅವರಿಗೆ ವಂದಿಸಿದಂತೆ ಆಗುತ್ತದೆ.