ಈ ಮಾಯಾಲೋಕವೇ ತನ್ನ ನೂರಾರು ಕನಸುಗಳನ್ನೇ ನನಸಿನ ತಟ್ಟೆಯಲ್ಲಿಟ್ಟು ತಿನ್ನಿಸುವ ಮೃಷ್ಟಾನ್ನವಾಗಿತ್ತು ಚಂದ್ರಮ್ಮನಿಗೆ. ಆದರೆ 2005 ರಲ್ಲಿ ನೂರಾರು ಜೀವಗಳಿಗೆ ಉಸಿರು ಕೊಡುತ್ತಿದ್ದ ಕಂಪೆನಿಯ ಉಸಿರೇ ನಿಂತು ಹೋದಾಗ ಚಂದ್ರಮ್ಮನ ಕುಟುಂಬ ತತ್ತರಿಸಿತು. ತನ್ನೊಳಗೆ ಇಳಿದುಹೋದ, ತನ್ನದೇ ಹುಟ್ಟು ಮಗು ಎನ್ನುವ ಪ್ರಾಮಾಣಿಕತೆಯಲ್ಲೇ, ಪ್ರೀತಿಯಿಂದಲೇ ಪೊರೆದ ಕಂಪೆನಿ ಕಣ್ಣು ಮುಚ್ಚಿದಾಗ ಅರೆಕ್ಷಣ ಮುಂದೇನು ಮಾಡೋದು? ಅನ್ನೋ ಚಿಂತೆ ಚಂದ್ರಮ್ಮನನ್ನು ಆವರಿಸಿತಾದರೂ ಅದಾಗಲೇ ಕುದುರೆಮುಖ ಅವಳನ್ನು ಪೊರೆದಿತ್ತು.
ಕುದುರೆಮುಖ ಅನ್ನೋ ಕಾಡ ಒಡಲಿನಲ್ಲಿ ಬದುಕು ಕಟ್ಟಿಕೊಂಡಿರುವ ಪೇರಳೆ ಮಾರುವ ಚಂದ್ರಮ್ಮಳ ಕುರಿತು ಬರೆದಿದ್ದಾರೆ ಪ್ರಸಾದ್ ಶೆಣೈ ಆರ್.ಕೆ

 

ಚಂದ್ರಮ್ಮ ಕೊಡುವ ಪೇರಳೆಯಲ್ಲೊಂದು ವಿನೂತನವಾದ ಪರಿಮಳವಿರುತ್ತದೆ. ಕುದುರೆಮುಖದ ಅಷ್ಟೂ ಪರ್ವತ ಶ್ರೇಣಿಗಳ ರಾಶಿ ರಾಶಿ ಚೆಂದ, ಇಲ್ಲೇ ಹುಟ್ಟಿ ಬೇರೆ ಬೇರೆ ದಿಕ್ಕುಗಳಲ್ಲಿ ನೀಳವಾಗಿ ಹರಿದು ಗೆಜ್ಜೆ ಸದ್ದು ಮಾಡುತ್ತ ಹರಿದೋಡುವ ತುಂಗೆ-ಭದ್ರೆಯರ ಕಿಲ ಕಿಲ ನಗು, ಆ ನದಿಗಳ ಪವಿತ್ರ ಮೈಯ ತಂಪು, ಚಿಟ್ಟು ಗಿಳಿಗಳ ಉದಯರಾಗ, ನಿಗೂಢ ಮೌನದಲ್ಲೂ ಸ್ವಲ್ಪ ಸ್ವಲ್ಪ ತುಟಿಪಿಟಿಕ್ಕೆನ್ನುತ್ತ ಮಾತಿಗಿಳಿಯುವ ಗಿರಿವನಗಳ ಕೊರಳ ಕಲರವ ಎಲ್ಲವೂ ಚಂದ್ರಮ್ಮ ಕೊಡುವ ಪೇರಳೆಯಲ್ಲಿರುತ್ತದೆ.

ಆಗಷ್ಟೇ ಕನಸಿಗೆ ನನಸಿನ ಪರದೆ ಎಳೆದಂತೆ ಮಲೆನಾಡ ಮಂಜು, ಎಳೆ ಬಿಸಿಲಿಗೆ ಪರದೆ ಎಳೆಯಲು ಹೋಗಿ, ಆ ಎಳೆತುಂಟ ಬಿಸಿಲು ಮೈಗೆ ಬಿಸಿಯ ಸುಖ ಕೊಟ್ಟಾಗ ಬೇರೆ ಗತ್ಯಂತರವಿಲ್ಲದೇ ಕರಗಿಹೋಗುತ್ತಿತ್ತು. “ನಾನು ಬರೀ ಶಾಖ ಕೊಟ್ಟರೆ ಸಾಕಾ? ಬಿಸಿಯಾದ ನನ್ನ ಮೈಗೆ ಸ್ವಲ್ಪ ಚಳಿ ನೀನು ಕೊಡ್ಬೇಕು” ಎನ್ನುತ್ತ ಎಳೆ ಬಿಸಿಲು, “ಸಾಲು ಸಾಲು ಬೆಟ್ಟಗಳ ಮೇಲೆ ಇಬ್ಬರೂ ಚಾರಣ ಮಾಡೋಣ ಬಾ ಎಂದು ಮಂಜಿಗೆ ಆಹ್ವಾನವಿತ್ತು, ಕೂಡಲೇ ಆನೆಗುಡ್ಡದ ಮೇಲೆ ಚಾರಣ ಶುರುಮಾಡಿತು. ಆಸೆಯಿಂದ ಮಂಜು ಇನ್ನಷ್ಟು ಬೆಳ್ಳಗಾಗುತ್ತ ಬಿಸಿಲನ್ನು ಫಾಲೋ ಮಾಡುತ್ತ ಹೋಯ್ತು. ಈ ಮಂಜು-ಬಿಸಿಲು ಹೀಗೆ ಮಾಡಿದರೆ ಅದನ್ನು ಅನುಭವಿಸುವ ನಮಗೆ ಮನಸ್ಸು ಎಷ್ಟೊಂದು ಪ್ರಫುಲ್ಲವಾಗುವುದಿಲ್ಲ ಹೇಳಿ? ಮೈಗೆಲ್ಲಾ ಕೋಟಿ ಕಿರಣಗಳು ಮೂಡಿ ಸೂರ್ಯನಾದಂತೆ. ಅರೆಕ್ಷಣದಲ್ಲೇ ಆ ಕಿರಣಗಳಿಗೆ ತಂಪು ಮೂಡಿ ಮಂಜಾದಂತೆ ಅನ್ನಿಸುತ್ತಿತ್ತು.

ಮಂಜೆಲ್ಲಾ ರಸ್ತೆಯಲ್ಲಿ ಬಿದ್ದು, ಬಿಸಿಲು ಚುರುಕಾದಂತೆಲ್ಲಾ ಬೆಣ್ಣೆಯ ತುಂಡಿನಂತೆ ಕರಗುತ್ತಿತ್ತು. ಅಲ್ಲೇ ಎಳೆಬಿಸಿಲಿನಿಂದ ಲಕ ಲಕ ಹೊಳೆಯುತ್ತಿದ್ದ ಮರವೊಂದರ ಕೆಳಗೆ ಮಂಜಿನಂತೆಯೇ ಕೂತಿದ್ದಳು ಚಂದ್ರಮ್ಮ, ಅವಳು ಕೂತಿದ್ದ ಕಲ್ಲು ಬೆಂಚಿನ ಮೇಲೆಲ್ಲಾ ತುಂಬಿದ್ದ ಕಾಡು ಪೇರಳೆಗಳು ಅವಳ ಸಖ್ಯದಲ್ಲಿ ಅಷ್ಟೊತ್ತು ಸುಖಿಯಾಗಿದ್ದರೂ, “ನಾವಿವತ್ತು ಯಾರ ಬಾಯಿಗೆ ಸೇರುವೆವೋ, ಪ್ರೀತಿಯ ಚಂದ್ರಮ್ಮನನ್ನು ಬಿಟ್ಟುಹೋಗಬೇಕಲ್ಲಾ”? ಅಂತ ದುಃಖದಿಂದಲೇ ಘಮಘಮಿಸುತ್ತಿದ್ದವು.

ನನಗಂತೂ ಈ ಕಾಡು ದಾರಿಯಲ್ಲಿ ಯಾವ ವ್ಯಕ್ತಿ ಸಿಕ್ಕರೂ ಅವರನ್ನೂ ಮಾತಾಡಿಸಲೇಬೇಕು ಅನ್ನಿಸುತ್ತದೆ. ಯಾಕೆಂದರೆ ಅವರೊಳಗೊಂದು ನಾನು ಕಾಣದೇ ಇದ್ದ ಬದುಕಿರುತ್ತದೆ, ಕೇಳದೇ ಇದ್ದ ಕತೆಯಿರುತ್ತದೆ. ನೋಡದೇ ಇದ್ದ ಗತದ ಸಾವಿರ ದೃಶ್ಯಗಳಿರುತ್ತದೆ, ಎಲ್ಲಕ್ಕಿಂತಲೂ ಹೆಚ್ಚಾಗಿ ಎಲ್ಲರನ್ನೂ, ಎಲ್ಲವನ್ನೂ ಮಮತೆಯಿಂದ ಸಲಹುವ ನೋಟವಿರುತ್ತದೆ. ಎಳೆಬಿಸಿಲಿಗೆ ತನ್ಮಯಳಾಗಿ ಕೂತ ಚಂದ್ರಮ್ಮನನ್ನು ನೋಡುವಾಗ ಅವಳ ಕಣ್ಣುಗಳಲ್ಲಿ ನಾ ಕಂಡಿದ್ದು ಕೂಡ ಅದೇ ಮಮತೆ, ಉಲ್ಲಾಸದ ಅಕ್ಷಯ ಒರತೆ. ಪ್ರತೀ ಸಲ ಈ ದಾರಿಯಾಗಿ ಬಂದಾಗಲೂ ಚಂದ್ರಮ್ಮಳೂ, ಅವಳ ಪೇರಳೆ ವ್ಯಾಪಾರವೂ ನಂಗೆ ಕಾಡುತ್ತಲೇ ಇರುತ್ತದೆ. ಮಾಸ್ತಿ ವೆಂಕಟೇಶ ಅಯ್ಯಂಗಾರರ ಕತೆಗಳಲ್ಲಿ ಬರುವ ವ್ಯಾಪಾರದ ಜೊತೆ ಜೊತೆಗೆ ಪ್ರೀತಿ, ಸಂಬಂಧಗಳನ್ನು ಬೆಸೆಯುತ್ತ ಮಮತೆಗೆ ಮಡಿಲಾಗುವ ಸ್ತ್ರೀ ಪಾತ್ರಗಳನ್ನು ಚಂದ್ರಮ್ಮನಿಗೆ ಹೋಲಿಸಿ ಖುಷಿಪಡೋದಂದ್ರೆ ನಂಗೆ ಪರಮಸುಖ. ಚಂದ್ರಮ್ಮ ನಂಗೆ ಕತೆಗೆ ದಾರಿಯಾಗಿದ್ದಾಳೆ. ಅವಳ ಮೌನದಲ್ಲಿಯೂ ನಂಗೆ ನೂರಾರು ಸಂಗತಿಗಳು ಕಾಣಿಸಿವೆ.

ಕುದುರೆಮುಖ ಅನ್ನೋ ಪಚ್ಚೆ ಭೂರಮೆಯ ಊರಿನಲ್ಲಿ ಕಾಡು ಪೇರಳೆ ಮಾರುತ್ತ ಮಲೆನಾಡಿನ ಸ್ವರ್ಗದಂತಹ ಊರುಗಳಾದ ಕಳಸ, ಬಾಳೆಹೊನ್ನೂರು, ಹೊರನಾಡು, ಕೊಪ್ಪದತ್ತ ಸಾಗುವವರಿಗೆ ಕಾಡು ಪೇರಳೆಯ ಕಾಡಿಸುವವಳು ಚಂದ್ರಮ್ಮ, ಇವಳಿಂದ ಪೇರಳೆ ತಿನ್ನುವವರಿಗೆ ಅದೊಂದು ರುಚಿ, ತತ್ಕಾಲಕ್ಕೆ ಹಸಿವು ನೀಗಿಸುವ ಹಣ್ಣಷ್ಟೇ. ಆದರೆ ಚಂದ್ರಮ್ಮಗೆ ಪೇರಳೆ ಅಂದರೆ ಬರೀ ಹಣ್ಣಲ್ಲ, ಬದುಕಿನ ಏಕಾಂತ, ಸಂಭ್ರಮ, ಧ್ಯಾನ, ಸಡಗರ, ನೋವುಗಳನ್ನೆಲ್ಲಾ ಕಾಣಿಸುವ ಕಣ್ಣು,

ಕುದುರೆಮುಖದ ದಟ್ಟ ಕಾಡಿನ ಏಕತಾನತೆಯಲ್ಲಿ ಕೂತು ಚಂದ್ರಮ್ಮ ಮಲೆನಾಡ ಮಣ್ಣಿನ ಪರಿಮಳದಲ್ಲಿ ಬೆಳೆದ ಕಾಡುಪೇರಳೆಗೆ ಉಪ್ಪು, ಮೆಣಸಿನ ಹುಡಿ ಬೆರಸಿ ಗ್ರಾಹಕರಿಗೆ ಕೊಟ್ಟರೆ ಆ ರುಚಿಯಲ್ಲಿ ಇಡೀ ಮಲೆನಾಡಿನ ಸೊಗಡಿರುತ್ತದೆ. ಬೇಸಿಗೆಯಲ್ಲಿ ಜಾಂಬು ಹಣ್ಣು, ನೆಲ್ಲಿಕಾಯಿಗಳನ್ನೂ ಚಂದ್ರಮ್ಮ ಮೊಗೆದು ಕೊಟ್ಟರೆ ಆ ಸ್ವಾದದ ಹೆಸರೇ ಸ್ವರ್ಗ. ಆದರೆ ಆ ಸ್ವಾದವನ್ನು ಅಲ್ಲೇ ಕೂತು ತಿಂದು ಅನುಭವಿಸಿದರೆ ಮಾತ್ರ ಹೊಸತೇನೋ ದಕ್ಕುತ್ತದೆ.

ನಿಮಗೆಲ್ಲಾ ಕುದುರೆಮುಖ ಅದಿರು ಕಂಪೆನಿಯ ನೆನಪಿರಬಹುದು. 1976 ರಲ್ಲಿ ದಟ್ಟ ಕಾಡು ಗುಡ್ಡಗಳಿಂದಲೇ ತುಂಬಿದ್ದ ಕುದುರೆಮುಖ ಬೆಟ್ಟಗಳ 4,605 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿಣದ ಗಣಿಗಾರಿಕೆ ಮಾಡಲು ಕುದುರೆಮುಖ ಐರನ್ ಕಂಪೆನಿ ಶುರುವಾದಾಗ ಆ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡವಳು ಚಂದ್ರಮ್ಮ, ನೂರಾರು ಕುಟುಂಬಗಳಿಗೆ ಉಸಿರಾಗಿದ್ದ ಕಂಪೆನಿ ಚಂದ್ರಮ್ಮಳ ಕನಸಿನ ಕಿಂಡಿಯ ಬಾಗಿಲ ತೆರೆಯಿತು. ಕಸ ಗುಡಿಸೋದು, ಕಂಪೆನಿಯ ಪರಿಸರದ ಸ್ವಚ್ಛತೆ ಕಾಪಾಡೋದು, ಇನ್ನೂ ಯಾರೂ ನಡೆಯದ ಹಾದಿಯ ಕಳೆಗಳನ್ನೆಲ್ಲಾ ಕಿತ್ತು ಹೊಸ ಹೆಜ್ಜೆಗಳಿಗೆ ದಾರಿತೋರಿಸೋದು, ಏನು ಕೆಲಸ ಕೊಟ್ಟರೂ ತುಟಿಪಿಟಕ್ಕೆನ್ನದೇ ಖುಷಿಯಿಂದ ಮಾಡುತ್ತಲೇ ಇದ್ದಳು ಚಂದ್ರಮ್ಮ, ದಾವಣಗೆರೆಯಿಂದ ಬಂದ ಚಂದ್ರಮ್ಮನ ಗಂಡ, ಮಗ ಕಂಪೆನಿಯಲ್ಲೇ ಉಸಿರಾಡತೊಡಗಿದರು. ಆ ಕಾಲದಲ್ಲೇ ಇಂದ್ರನ ನಂದನವನದಂತೆ ಅಹೋರಾತ್ರಿ ಮಿರಿ ಮಿರಿ ಮಿಂಚುತ್ತಿದ್ದ, ಸಾವಿರಾರು ಜೀವಗಳ ನರನಾಡಿಯಾಗಿದ್ದ, ಹತ್ತಾರು ಭಾಷೆಗಳಲ್ಲೇ ಮುಳುಗೇಳುತ್ತಿದ್ದ, ಪ್ರವಾಸಿಗರ ಕೇಕೆಗಳಿಂದ ನಗುತ್ತಿದ್ದ, “ನಾನು ಯಾವ ಊರಿನಂತೆಯೂ ಅಲ್ಲ, ನನಗೆ ಬಯಸಿದಂತೆ ಬದುಕು ಮಾಡಿಕೊಂಡಿರುವ ದೊಡ್ಡ ಪ್ರಪಂಚ” ಎನ್ನುವ ಗತ್ತಿನಿಂದ ಬೀಗುತ್ತಿತ್ತು ಕುದುರೆಮುಖ.

ಈ ಮಂಜು-ಬಿಸಿಲು ಹೀಗೆ ಮಾಡಿದರೆ ಅದನ್ನು ಅನುಭವಿಸುವ ನಮಗೆ ಮನಸ್ಸು ಎಷ್ಟೊಂದು ಪ್ರಫುಲ್ಲವಾಗುವುದಿಲ್ಲ ಹೇಳಿ? ಮೈಗೆಲ್ಲಾ ಕೋಟಿ ಕಿರಣಗಳು ಮೂಡಿ ಸೂರ್ಯನಾದಂತೆ. ಅರೆಕ್ಷಣದಲ್ಲೇ ಆ ಕಿರಣಗಳಿಗೆ ತಂಪು ಮೂಡಿ ಮಂಜಾದಂತೆ ಅನ್ನಿಸುತ್ತಿತ್ತು.

ಈ ಮಾಯಾಲೋಕವೇ ತನ್ನ ನೂರಾರು ಕನಸುಗಳನ್ನೇ ನನಸಿನ ತಟ್ಟೆಯಲ್ಲಿಟ್ಟು ತಿನ್ನಿಸುವ ಮೃಷ್ಟಾನ್ನವಾಗಿತ್ತು ಚಂದ್ರಮ್ಮನಿಗೆ. ಆದರೆ 2005 ರಲ್ಲಿ ನೂರಾರು ಜೀವಗಳಿಗೆ ಉಸಿರು ಕೊಡುತ್ತಿದ್ದ ಕಂಪೆನಿಯ ಉಸಿರೇ ನಿಂತು ಹೋದಾಗ ಚಂದ್ರಮ್ಮನ ಕುಟುಂಬ ತತ್ತರಿಸಿತು. ತನ್ನೊಳಗೆ ಇಳಿದುಹೋದ, ತನ್ನದೇ ಹುಟ್ಟು ಮಗು ಎನ್ನುವ ಪ್ರಾಮಾಣಿಕತೆಯಲ್ಲೇ, ಪ್ರೀತಿಯಿಂದಲೇ ಪೊರೆದ ಕಂಪೆನಿ ಕಣ್ಣು ಮುಚ್ಚಿದಾಗ ಅರೆಕ್ಷಣ ಮುಂದೇನು ಮಾಡೋದು? ಅನ್ನೋ ಚಿಂತೆ ಚಂದ್ರಮ್ಮನನ್ನು ಆವರಿಸಿತಾದರೂ ಅದಾಗಲೇ ಕುದುರೆಮುಖ ಅವಳನ್ನು ಪೊರೆದಿತ್ತು. ಕುದುರೆಮುಖದ ಕಾಡನ್ನು ಕಬಳಿಸುವ ಕಂಪೆನಿಗೆ ಚಂದ್ರಮ್ಮ ಆವತ್ತು ಸೇರಿ ಬದುಕು ಕಟ್ಟಿಕೊಂಡಿದ್ದರೂ, ಇಂದು ಇಲ್ಲಿನ ಕಾಡು ಇವಳ ಮೇಲೆ ಸಿಟ್ಟು ಮಾಡಿಕೊಳ್ಳದೇ ಇವಳನ್ನು ಪೊರೆಯಿತು. ತನ್ನ ಪುಟ್ಟ ಮನೆಯ ಬಗಲಿನ ಕಾಡ ಪೇರಳೆಮರಗಳಲ್ಲಿ ತೂಗುತ್ತಿದ್ದ ಪೇರಳೆ ಗೊಂಚಲನ್ನು ಕಂಡದ್ದೇ ಅವಳು ಹಬ್ಬವಾದಳು, ಕಾಡಿನ ಚಳಿಗೆ ಆಗಷ್ಟೇ ಅರಳಿ ಹಣ್ಣಾಗುತ್ತಿದ್ದ ಪೇರಳೆಯ ಪರಿಮಳ, “ನಾನಿದ್ದೇನೆ ನಿನ್ನ ಜೊತೆ ನನ್ನನ್ನೇ ನಂಬು” ಎನ್ನುತ್ತಾ ಅವಳ ಮೈಮನದ ತುಂಬೆಲ್ಲಾ ಸೋಕಿಬಿಟ್ಟಿತು. ಅವಳು ಕೀಳುತ್ತಿದ್ದಂತೆಲ್ಲಾ ಬುಟ್ಟಿ ತುಂಬಾ ತನ್ನ ಮೈಯನ್ನು ಮತ್ತೂ ನಳನಳಿಸಿ ಕೂತುಬಿಟ್ಟಿತು ಪೇರಳೆ.

ಪೇರಳೆಯ ಬುಟ್ಟಿ ಹಿಡಿದು ಇದೀಗ ಗತದ ಮಾನವನಿರ್ಮಿತ ವೈಭೋಗಳನ್ನೆಲ್ಲಾ ಕಳಚಿಕೊಂಡು ಕಾಡೇ ಆಗಿಹೋಗಿರುವ ಕುದುರೆಮುಖ ಬಸ್ ಸ್ಟಾಪಿನ ಪಕ್ಕದಲ್ಲಿರುವ ಕಲ್ಲು ಬೆಂಚಿನ ಮೇಲೆ ಕೂತು ಪೇರಳೆಯ ರುಚಿ ಮಾತ್ರವಲ್ಲ, ಬಾಯ್ತುಂಬಾ ಸಿಹಿಮಾತುಗಳನ್ನೂ ಹಂಚುತ್ತಾಳೆ ಚಂದ್ರಮ್ಮ. ಕಂಪೆನಿಯ ಗತದ ಗುಂಗೇ ಮರೆತುಹೋಗುವಂತೆ ಪೇರಳೆಗಳು ಅವಳ ಕಾಡಿನ ವ್ಯಾಪಾರದ ಧ್ಯಾನದಲ್ಲಿ ಒಂದಾಗುತ್ತ ಅವಳ ಬಾಳಿಗೆ ಸಿಹಿ ಒಸರಿಸುವ ಡ್ಯೂಟಿಯನ್ನು ಒಂದಿನಿತೂ ತಪ್ಪಿಸುತ್ತಿಲ್ಲ..

“ಬದುಕಿನ ದಾರಿ ತೋರಿದ್ದು ಈ ಕಾಡ ಪೇರಳೆಯೇ, ಬೇರ್ಯಾವುದೋ ಕೆಲಸ ಮಾಡಿ ಇರುವುದಕ್ಕಿಂತ ಪೇರಳೆಯ ಸಿಹಿ ಹಂಚುತ್ತ. ಈ ಕಾಡಿನ ಮೌನದಲ್ಲಿ ಕೂತು ಸಿಕ್ಕ ಹಣದಲ್ಲಿ ಖುಷಿಯಿಂದ ಬಾಳುತ್ತಿರುವೆ” ಎನ್ನುವ ಚಂದ್ರಮ್ಮ, ಪೇರಳೆಗೆ ರೂ 10 ರಂತೆ ಮಾರುತ್ತ ದಿನಕ್ಕೆ ಇನ್ನೂರೋ, ಮುನ್ನೋರೋ ದುಡಿಯುತ್ತಾಳೆ, ಯಾರೂ ಪೇರಳೆ ಕೊಳ್ಳಲು ಬಂದಿಲ್ಲ ಅಂದರೆ ಶಬರಿಯಂತೆ ಕಾಯುತ್ತಾಳೆ, ಹಣವಿಲ್ಲದಿದ್ದರೆ ಇಸ್ಕೊಳ್ಳಿ ತಿನ್ನಿ, ಹಣ ಇದ್ರೆ ಕೊಡಿ, ಇಲ್ಲಾಂದ್ರೆ ಯಾವತ್ತಾದ್ರೂ ಕೊಡಿ ಅಂತಾಳೆ,

“ಒಂದಿನ ಯಾರೋ ಪುಣ್ಯಾತ್ಮ ಕಾರು ನಿಲ್ಲಿಸಿ “ಎಲ್ಲಾ ಪೇರಳೆ ಕೊಟ್ಟು ಬಿಡಿ” ಎಂದ. ನಾನು ಇದ್ದಬದ್ದ ಪೇರಳೆಗಳನ್ನು ಆ ವ್ಯಕ್ತಿಯ ಚೀಲಕ್ಕೆ ಹಾಕಿದೆ, 500 ಆಯ್ತು ಅಂದೆ. ಅವರು ಹಣ ಕೊಟ್ಟರು.

“ಏನ್ ಸಾಮಿ, ನೀವೇನಾದ್ರೂ ಪೇರಳೆ ವ್ಯಾಪಾರ ಮಾಡ್ತೀರಾ ಇಷ್ಟೊಂದೆಲ್ಲಾ ಪೇರಳೆ ಎಂತಕ್ಕೆ?” ಅಂತ ಕೇಳಿದಾಗ ಆ ವ್ಯಕ್ತಿ :”ಅಮ್ಮ ನಾನು ಆಯುರ್ವೇದಿಕ್ ಡಾಕ್ಟ್ರು, ಈ ಪೇರಳೆ ಕೆಲವೊಂದು ರೋಗಗಳಿಗೆ ಮದ್ದಾಗುತ್ತೆ ಇದರ ಪೌಡರ್ ಮಾಡಕೆ ತಗೊಂಡು ಹೋಗ್ತಿದ್ದೀನಿ” ಅಂದಾಗ ಚಂದ್ರಮ್ಮ ಉಬ್ಬಿ ಹೋದಳು. ತನ್ನ ಬದುಕೇ ಆಗಿಹೋದ ಕಾಡ ಪೇರಳೆ ಮದ್ದಾಗುತ್ತಾ? ಅಂತ ಚಂದ್ರಮ್ಮ ಆ ದಿನದಿಂದ ಪೇರಳೆಯನ್ನು ಇನ್ನಷ್ಟು ಪ್ರೀತಿಸತೊಡಗಿದಳು. ಗಂಡ ಕ್ಯಾನ್ಸರ್ ನಿಂದ ತೀರಿ ಹೋದ ಮೇಲೆ, ಮಗ ಮೇಸ್ರ್ತಿ ಕೆಲಸದಲ್ಲಿ ತೊಡಗಿದ.

ಚಂದ್ರಮ್ಮ ಬೇಸಿಗೆಯಲ್ಲಿ, ಚಳಿಗಾಲದಲ್ಲಿ ಒಳ್ಳೊಳ್ಳೆ ಪೇರಳೆಗಳನ್ನು ಆಯ್ದು ಕುದುರೆಮುಖದ ಕಾಡು ನೋಡುತ್ತ ವ್ಯಾಪಾರಕ್ಕೆ ಕೂತು ಬಿಡುತ್ತಾಳೆ, ಹಾಗೇ ಕೂತ ಮಧ್ಯಾಹ್ನಗಳಲ್ಲಿ ಅವಳಿಗೆ ಒಂದಾನೊಂದು ಕಾಲದ ಕುದುರೆಮುಖ ಅನ್ನೋ ಮಾಯಾಲೋಕ ಕಣ್ಣ ಮುಂದೆ ಬಂದಂತಾಗುತ್ತದೆ, ಗಣಿ ಕಾರ್ಮಿಕರು ಕೂಗು ಹಾಕಿದಂತೆ, ಮೆಶಿನ್ನುಗಳು ಕಿರುಚಿದಂತೆ, ತನ್ನ ತೀರಿಹೋದ ಗಂಡ ಕೆಲಸ ಮುಗಿಸಿ ದಣಿದು ಬಂದಂತೆ, ತಾನು ಗಣಿಕಾಲನಿಯ ಕಸ ಗುಡಿಸಿದಂತೆ ಎಲ್ಲಾ ಚಿತ್ರಗಳು ಕಾಡ ರಸ್ತೆಯಲ್ಲಿ ನಲಿದಂತೆ ಕಾಣುತ್ತದೆ. ಮರುಕ್ಷಣವೇ ಒಂದು ಕಾಲದಲ್ಲಿ ಇಷ್ಟೊಂದು ವೈಭವದ ಪಟ್ಟಣ ಇಲ್ಲಿತ್ತಾ ಎನ್ನುವ ಭ್ರಮೆ ಅವಳನ್ನು ಆವರಿಸುತ್ತದೆ. ಹಾಗಾಗಿ “ಹಿಂದೆ ಕುದುರೆಮುಖ ಪಟ್ಟಣ ಹೇಗಿತ್ತು ಚಂದ್ರಮ್ಮ”? ಎಂದು ಪ್ರಶ್ನೆ ಮಾಡಿದರೆ ಸಾಕು “ಅಯ್ಯೋ ಏನ್ ಹೇಳೋದು. ಆಗಿನ ವೈಭವ ಬೇರೆಯೇ ಬಿಡಿ. ಒಂದು ಮಿನಿ ಬೆಂಗಳೂರಿನ ಹಾಗಿತ್ತು ಇಲ್ಲಿ” ಎನ್ನುತ್ತ ಅರಳುಗಣ್ಣು ಬಿಡುತ್ತಾಳೆ. ಹೌದಾ ಹಾಗಾದ್ರೆ ಚಂದ್ರಮ್ಮ ನಿಮ್ಗೆ ಆ ಕಾಲವೇ ಚೆಂದ ಅನ್ನಿಸುತ್ತ? ಒಂದು ವೇಳೆ ಕಂಪೆನಿ ಈಗಲೂ ಇಲ್ಲಿದ್ದಿದ್ದರೆ ಇಲ್ಲಿನ ಕಾಡೆಲ್ಲಾ ಕಾಣೆಯಾಗ್ತಿತ್ತು ಆಗ ಈ ಕಾಡಿನ ವೈಭವ ನೋಡಲು ಸಿಗ್ತಿತ್ತಾ ಹೇಳಿ?” ಎಂದು ಪ್ರಶ್ನೆ ಹಾಕಿದರೆ,

“ಕಾಡು ಉಳಿಬೇಕು ನೋಡಿ. ಈ ಊರು ಬದಲಾಗ್ಬಾರ್ದು. ನಮ್ಮ ಬದುಕೂ ಕೂಡ ಹಾಳಾರ್ಬಾರ್ದು” ಎನ್ನುತ್ತಾಳೆ.

ಅಷ್ಟೊತ್ತಿಗೆ “ಪೇರಳೆ ಕೊಡಿ ಅಮ್ಮ” ಅನ್ನೋ ಧ್ವನಿಗೆ ಎಚ್ಚೆತ್ತು ಮತ್ತೆ ಪೇರಳೆಯಂತೆ ಸಿಹಿಯಾಗುತ್ತಾಳೆ, ಯಾವೂರಿಂದ ಬಂದ್ರಿ? ನೋಡಿ ಇದು ಕಾಡು ಪೇರಳೆ, ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾ ಪೇರಳೆ ತಿನ್ನುವಂತೆ ಪ್ರೆರೇಪಿಸುತ್ತಾಳೆ. ಸೂರ್ಯ ನಡುನೆತ್ತಿಗೆ ಬರುವಾಗ ಕುದುರೆಮುಖದ ದಾರಿಯಲ್ಲೆಲ್ಲಾ ಸೂರ್ಯದೇವನೇ ಕಾಲು ಚಾಚಿ ನಿದ್ದೆ ಹೊಡೆದಂತೆ ಭಾಸವಾಗುತ್ತದೆ. ಸಿಳ್ಳಾರ ಎಲ್ಲೋ ಜೋರಾಗಿ ಕೂಗುತ್ತದೆ, ಕಾಡು ಕಾಗೆಯ ಕೂಗು ಈ ದಾರಿಯಲ್ಲಿ ಕರ್ಕಶವೆನ್ನಿಸದೇ ಒಂದೇ ಶ್ರುತಿಯಲ್ಲಿ ಮೊಳಗುವ ಸಿತಾರಿನಂತೆ ಕೇಳುತ್ತದೆ. ಚಂದ್ರಮ್ಮ ಮನೆಯಿಂದ ಮಾಡಿ ತಂದ ಊಟದ ಬುತ್ತಿಯನ್ನು ಹಗುರನೇ ಬಿಚ್ಚಿ ಮಧ್ಯಾಹ್ನದ ಭೋಜನ ಮಾಡುವ ಶೈಲಿಯೇ ಎಷ್ಟು ಸ್ವಾದಿಷ್ಟ. ಅವಳು ಬಡತನದಲ್ಲಿಯೂ ಎಷ್ಟೊಂದು ಸಿರಿವಂತೆ ಎಂದು ಅವಳನ್ನು ನೋಡಿದಾಗೆಲ್ಲಾ ಅನ್ನಿಸುತ್ತದೆ. ಮಧ್ಯಾಹ್ನ ಮೀರುತ್ತಿದ್ದಂತೆಯೇ ಕೆಲವೊಂದು ವಾಹನಗಳು ಚಂದ್ರಮ್ಮನನ್ನು ದಾಟಿ ಹೋದರೆ ಮತ್ತೆ ಕೆಲವು ಪೇರಳೆ ಪರಿಮಳಕ್ಕೆ ಅಲ್ಲಿಯೇ ನಿಲ್ಲುತ್ತದೆ.

“ಪೇರಳೆ ಚೂರು ಕಪ್ಪಾಗಿದೆ, ಸಣ್ಣದಿದೆ, ಅದಕ್ಕೆ ಏಟಾದ ಹಾಗಿದೆ” ಅಂತೆಲ್ಲಾ ಬಂದವರು ತಕರಾರು ತೆಗೆದರೆ

“ಇದು ಕಾಡು ಕೊಟ್ಟ ಹಣ್ಣು, ಕಾಡೇನು ಕೊಟ್ಟಿದೆಯೋ ಅದನ್ನು ತಂದಿದ್ದೇನೆ ಅಷ್ಟೇ, ಬೆಲೆ ಕಡಿಮೆ ಕೊಡಿ ಅಡ್ಡಿಲ್ಲ” ಎನ್ನುತ್ತಾಳೆ. ಸಂಜೆಯಾಗುತ್ತಿದ್ದಂತೆ ಕಾಡು ಕಪ್ಪಾಗುತ್ತದೆ, ಮಧ್ಯಾಹ್ನದ ವೇಳೆಗೆ ಬಿಸಿಲಿನ ಜೊತೆ ಕೈ ಕೈ ಹಿಡಿದು ಕುಣಿದು ಕಳೆದುಹೋಗಿದ್ದ ಮಂಜು, ಮತ್ತೆ ದಾರಿಯಲ್ಲೆಲ್ಲಾ ಮುತ್ತಲು ಶುರುಮಾಡುತ್ತದೆ. ಕಾಡು ಕೋಣಗಳು, ಕಡವೆ, ಸಿಂಗಳೀಕಗಳು ಅಲ್ಲೆಲ್ಲೋ ಓಡಾಡುವಾಗ ಆಗುವ ಪೊದೆಯ ಸದ್ದು ಸುತ್ತೆಲ್ಲಾ ಕೇಳುತ್ತದೆ. ಕಾಡ ಹಕ್ಕಿಗಳ ಸಂಧ್ಯಾರಾಗದಲ್ಲಿ ಕಾಡಿಗೆ ಕಾಡೇ ಸಂಗೀತವಾಗುತ್ತದೆ.

“ಅಲ್ಲ ಚಂದ್ರಮ್ಮ, ಇಷ್ಟು ವರ್ಷದಿಂದ ನಿಮ್ಗೆ ಪ್ರಾಣಿಗಳೇನಾದರೂ ಕಾಣೋಕೆ ಸಿಕ್ಕಿದ್ಯಾ” ಅಂತ ಕೇಳಿದರೆ, ಹೌದು ಕಡವೆ, ಜಿಂಕೆ, ಕಾಡುಕೋಣ ಸಾಮಾನ್ಯ ಸಿಕ್ತಾನೇ ಇರ್ತವೆ. ಕೆಲವೊಮ್ಮೆ ಫಾರೆಸ್ಟ್ ಅವ್ರು, ಚಿರತೆ ಈ ಕಡೆ ಬಂದಂತಿದೆ” ಅಂತ ಹೆದರಿಸುವ ಉದ್ದೇಶದಿಂದಲೇ ಹೇಳ್ತಾರೆ.
“ಇದು ತಾನು ನಂಬಿಕೊಂಡು ಬಂದ ಕಾಡು, 29 ವರ್ಷಗಳಿಂದ ತನ್ನಲ್ಲಿ ಉಸಿರಾಡುತ್ತಿರುವ ಕಾಡು, ನನ್ನಷ್ಟಕ್ಕೆ ಬದುಕುತ್ತಿರುವ ನನಗೆ ಯಾವ ಕಾಡುಪ್ರಾಣಿಗಳು ಯಾಕೆ ಕಾಟ ಕೊಡಬೇಕು, ಈ ವರೆಗೂ ನನ್ನನ್ನು ರಕ್ಷಿಸಿದ್ದೇ ಅವುಗಳು, ಎಂದು ಹೇಳಿದಾಗ ಅವರು ಸುಮ್ಮನಾಗ್ತಾರೆ” ಎಂದು ಧೈರ್ಯದಿಂದ ಹೇಳುವ ಚಂದ್ರಮ್ಮನೊಳಗೊಂದು ಭರವಸೆ ಇದೆ, ಕಾಡಿನ ಕುರಿತೊಂದು ಪ್ರೀತಿಯಿದೆ.

ಸಂಜೆ ಕತ್ತಲಾಗುತ್ತಿದ್ದಂತೆಯೇ ಉಳಿದ ಪೇರಳೆಗಳನ್ನು ಗಂಟು ಕಟ್ಟುತ್ತಾ, ಕಳಸದಿಂದ ಬರುವ ಬಸ್ಸಿಗೆ ಕೈಯೊಡ್ಡುತ್ತ, ಬಸ್ಸತ್ತಿ ಮನೆಯ ದಾರಿ ಹಿಡಿಯುವ ಚಂದ್ರಮ್ಮನಿಗೆ ಕುದುರೆಮುಖ ಅನ್ನೋ ಊರು ಬದುಕಿಸಿದೆ, ಒಮ್ಮೆ ಮುಳುಗಿಸಿದೆ, ಮರುಜನ್ಮ ನೀಡಿದೆ. ಕುದುರೆಮುಖದ ಸಾಕ್ಷಿಪ್ರಜ್ಞೆಯಂತೆಯೇ ಇರುವ ಈಕೆಗೆ ಈ ಕಾಡು ರಕ್ಷಿಸುತ್ತಲೇ ಇದೆ. ಒಂದು ಪಟ್ಟಣ ರಚನೆಯಾಗುವಾಗ ಸೃಷ್ಟಿಯಾಗುವ ಸದ್ದು, ಮೌನ, ಕಲಹ, ಸಂಭ್ರಮ, ಖಾಲಿತನ, ಕನಸು, ವಾಸನೆ, ಪರಿಮಳ, ಸುಖ, ದುಖ, ಅಳು, ನಗು ಎಲ್ಲವನ್ನೂ ಅನುಭವಿಸಿ ಮತ್ತೆ ಪಟ್ಟಣ ಮುಳುಗಿದಾಗ ಅಂತದ್ದೇ ಭಾವಗಳನ್ನು ಬೇರೊಂದು ರೀತಿಯಲ್ಲಿ ಅನುಭವಿಸಿ, ಈಗ ಮುಳುಗಿದ ಪಟ್ಟಣದಲ್ಲಿಯೇ ತನ್ನದ್ದೇ ಸ್ವಂತ ಬದುಕು ಕಟ್ಟಿಕೊಂಡು ನೆಮ್ಮದಿಗೆ ದಾರಿ ಮಾಡಿಕೊಂಡ ಚಂದ್ರಮ್ಮ ನನ್ನನ್ನು ನೂರಾರು ರೀತಿಯಲ್ಲಿ ಕಾಡುತ್ತಾಳೆ. ಚಂದ್ರಮ್ಮನಂತೆ ಭರವಸೆಯಿಂದ ಬದುಕು ಕಟ್ಟಿಕೊಂಡವರ ಕತೆ ಹುಡುಕುವ ಆಸೆಯೂ ಅತೀಯಾಗುತ್ತಿದೆ.

(ಫೋಟೋಗಳು: ಲೇಖಕರವು)