Advertisement
ಪ್ರಕೃತಿ ದೇವಿಗೆ ಮೊದಲ ನಮನ: ದೇವಿಕಾ ನಾಗೇಶ್‌ ಬರಹ

ಪ್ರಕೃತಿ ದೇವಿಗೆ ಮೊದಲ ನಮನ: ದೇವಿಕಾ ನಾಗೇಶ್‌ ಬರಹ

ಪ್ರಕೃತಿಯ ಪುನರುತ್ಪತ್ತಿ ಕ್ರಿಯೆಯನ್ನು ಬಲ್ಲ ಹಿರಿಯರಿಗೆ ಪ್ರಕೃತಿಯ ಅಗಾಧತೆಯ ಅರಿವು ಇರುತ್ತದೆ. ಆದ್ದರಿಂದಲೇ ಅವರಲ್ಲಿ ವಿನೀತ ಭಾವ ಕಾಣಿಸಿಕೊಳ್ಳುತ್ತದೆ… ಇದು ದೈವೀಕತೆಯಲ್ಲದೆ ಮತ್ತೇನಲ್ಲ. ಕೃಷಿ ಚಟುವಟಿಕೆಗಳಲ್ಲಿ ಒಂದು ಧ್ಯಾನಸ್ಥ ಸ್ಥಿತಿಯಿದೆ. ಅದು ಯಾವ ಬಿರುದು ಬಾವಲಿಯನ್ನು ಬಯಸುವುದಿಲ್ಲ. ತಲ್ಲೀನತೆ ಹಂಚಿಕೊಂಡು ಬಾಳುವುದು ಕೃಷಿ ಬದುಕಿನ ಜೀವನ ಮೌಲ್ಯಗಳು. ರೈತರು ಹಿಂದೆ ಊರಿನಿಂದ ಊರಿಗೆ ಹೋಗುವಾಗ ಬೀಜಗಳನ್ನು ಬಿತ್ತಿ  ಸಾಲುಮರಗಳನ್ನು ಬೆಳೆಸುತ್ತಿದ್ದರು. ನೆತ್ತಿಗೆ ನೆರಳು ನೀಡುವ ಈ ಮರಗಳ ಮೌಲ್ಯ ಅರಿತಿದ್ದ ಅವರು ಪ್ರತಿ ಊರಿನಲ್ಲೂ ಗುಂಡು ತೋಪುಗಳನ್ನು ಮಾಡುತ್ತಿದ್ದರು.
ಅ. ನಾ. ಯಲ್ಲಪ್ಪ ರೆಡ್ಡಿಯವರ “ಅರಣ್ಯೆ ನಿನಗೆ ಶರಣು” ಕೃತಿಯ ಕುರಿತು ದೇವಿಕಾ ನಾಗೇಶ್‌ ಬರಹ

ದೇಹ ಭಾಷೆಗಿಂತ ಉತ್ಕೃಷ್ಟವಾದುದ್ದು ಪ್ರಕೃತಿ ಭಾಷೆ. ಇದು ನಾವಿರುವ ಭೂಮಿಯ ವೈವಿಧ್ಯಮಯ ಜೀವ ಜಾಲಗಳ ಅಂತರಂಗದ ಭಾಷೆ. ಕೆಲವೊಮ್ಮೆ ಇದು ಸಾಂಕೇತಿಕವಾಗಿರುತ್ತದೆ. ಸಂಜ್ಞೆ ಆಗಿರುತ್ತದೆ. ಬಣ್ಣ ಬದಲಿಸುವಿಕೆ ಆಗಿರುತ್ತದೆ… ವಾತಾವರಣದಲ್ಲಿ ಬದಲಾಗುವ ವಿದ್ಯಮಾನಗಳು, ಉಷ್ಣ, ಶೀತಗಳು  ಕೂಡ ತಿಳಿಸಿ ಹೇಳುವುದು ಪ್ರಕೃತಿಯಲ್ಲಿ ಎಲ್ಲೋ ಏನೋ ಎಡವಟ್ಟಾಗಿದೆ ಎನ್ನುವ ಸೂಚನೆ. ತಲೆಮಾರಿನಿಂದ ತಲೆಮಾರಿಗೆ ಮುಟ್ಟಿಸುವ ಕೆಲಸ ಮಾಡಬೇಕಾಗಿರುವವರು ನಾವು ಹುಲುಮಾನವರು. ಇದು ಬರಹದ ರೂಪದಲ್ಲಿರಬಹುದು, ಬಾಳಿ ಬದುಕುವ ರೀತಿಯಲ್ಲಿರಬಹುದು ಯಾವುದಾದರೂ ಸರಿಯೇ… ಪ್ರಕೃತಿಯೆಂದರೆ ಕಾಡು -ನಾಡು-ನುಡಿ ಸಂಸ್ಕೃತಿಯನ್ನು ಒಳಗೊಂಡಂತಹ ಭೂಮಿಯ ಎಲ್ಲ ಜೀವಜಾಲಗಳ ಅದ್ಭುತ ಸಂಯೋಜನೆ. ಇಲ್ಲಿ ಪ್ರತಿಯೊಂದಕ್ಕೂ  ಅದರದೇ ಆದ ಸ್ಥಾನ ಮಾನ ಇರುತ್ತದೆ. ಭೂಮಿಯಲ್ಲಿ ಇರುವೆಯ ಹರವು ಕಡಿಮೆಯಾದರೆ ಸಮುದ್ರದಲ್ಲಿ ಮೀನು ಬೆಳೆ ಕಡಿಮೆಯಾಗುತ್ತದೆ ಎನ್ನುವ ಮಾತಿದೆ. “ಪರಿಸರ ಎಂದರೆ ಅಪ್ಪನಿಂದ ಬಂದ ಬಳುವಳಿಯಲ್ಲ, ಮಕ್ಕಳಿಂದ ಪಡೆದ  ಸಾಲ”. ಎಂಬ  ಮಾತಿದೆ. ಗಣಿಗಾರಿಕೆ, ರಸ್ತೆ ಅಗಲೀಕರಣ, ಮುಳುಗಡೆ, ಅಣೆಕಟ್ಟು, ನದಿ ತಿರುವು ಯೋಜನೆ ಇತ್ಯಾದಿ ಭೂಮಿಯ ಮೇಲೆ ನಡೆಯುವ ನಿರಂತರ ಅತ್ಯಾಚಾರ. ಇದು ತಂದೊಡ್ಡುವ ಸಂಕಷ್ಟಗಳ ಬಗ್ಗೆ ದೃಷ್ಟಿಹರಿಸೋಣ.

“ಅರಣ್ಯ ನಿನಗೆ ಶರಣು” ಭಾರತ ಸರಕಾರದ ಸೇವೆಯಲ್ಲಿ ಸುದೀರ್ಘಕಾಲ ಅರಣ್ಯಾಧಿಕಾರಿಯಾಗಿದ್ದ ಪರಿಸರ ಸಂರಕ್ಷಣೆಯ ಹೋರಾಟಗಾರರಾಗಿಯೂ ನಮ್ಮ ನಡುವೆ ಇರುವ ಅ. ನಾ. ಯಲ್ಲಪ್ಪ ರೆಡ್ಡಿಯವರ 11 ಲೇಖನಗಳು, ಮೂರು ಪರಿಸರ ಸಂಬಂಧಿ ಪ್ರಸ್ತುತ ವಿದ್ಯಮಾನಗಳ ವಿಶ್ಲೇಷಣೆಯನ್ನು ಒಳಗೊಂಡ ಕೃತಿ. ಈ ಪುಸ್ತಕದ ಇನ್ನೊಂದು ವಿಶೇಷತೆ ಎಂದರೆ ಪರಿಸರದ ಒಡಲಲ್ಲಿ ಅರಳಿದ ಕೆಲವು ವಿಶಿಷ್ಟ ಚೇತನಗಳ ದರ್ಶನವನ್ನು ನೀಡುತ್ತದೆ. ಈ ಕೃತಿ ವಿಶಿಷ್ಟ ಅನಿಸುವುದು ಕೆಲವು ಕಾರಣಕ್ಕಾಗಿ… ಅರಿಯದೇ ಆಗಿ ಹೋದ ನಷ್ಟಗಳ ಬಗ್ಗೆ ಪರಿತಪಿಸಬೇಕಾಗಿಲ್ಲ. ಅರಣ್ಯದ ಆಗುಹೋಗುಗಳ ಬಗ್ಗೆ ಸಾಮಾನ್ಯ ಜ್ಞಾನ ಬೆಳೆಸಿಕೊಂಡರೆ ಇಲ್ಲಿ ಈಗ ಉಳಿದಿರುವ ಜೀವ ಸಂಕುಲಗಳ ಪ್ರತಿಯೊಂದು ಪ್ರಾಣಿ-ಪಕ್ಷಿ ಗಿಡ ಮರ ಹುಲ್ಲು ಕಡ್ಡಿಗಳ ಸತತ ಪೋಷಣೆಯಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು.  ಈಗಾಗಲೇ ಆಗಿರುವ ನಾಶವನ್ನು ಸರಿಪಡಿಸಬಹುದಾದ ಸಾಧ್ಯತೆ ಇನ್ನೂ ಇದೆ… ಇರುವ ಸ್ಥಿತಿಯಲ್ಲಿ ಅದನ್ನು ಹಾಗೆ ಬಿಟ್ಟರಾಯಿತು  ಎನ್ನುವ ಭರವಸೆಯ ಮಾತುಗಳು ಈ ಕೃತಿಯಲ್ಲಿದೆ.

“ಮೇಕೆ ದಾಟು ಕಾವೇರಿ ಅಭಯಾರಣ್ಯ ಆನೆಕಾಡು 50 ಲಕ್ಷ ವರ್ಷಗಳಲ್ಲಿ ನಿಸರ್ಗ ಸೃಷ್ಟಿ ಮಾಡಿರುವ ಸ್ವಾಭಾವಿಕ ಅರಣ್ಯ. ಈ ಅರಣ್ಯದಲ್ಲಿರುವ ಕಮ್ಮರ ಅಂಜರ್ ಮರದ ಬೇರುಗಳು ಬಂಡೆಕೊರೆದು 25-30 ಅಡಿ ಆಳಕ್ಕೆ ಹೋಗುತ್ತದೆ. ಇದರ ತೊಗಟೆಗೆ ಪಾದರಸ ಹೀರುವ ವಿಶೇಷ ಗುಣ ಇದೆ. ಹೊಳೆಮತ್ತಿ ಕಾವೇರಿ ನದಿ ಸುತ್ತ  ಇದೆ ಇದರ ತೊಗಟೆ ಹೃದಯ ಸಂಬಂಧಿ ರೋಗಕ್ಕೆ ಉತ್ತಮ ಔಷಧಿ ಕಪ್ಪೆ ಏಡಿಗಳಿಗೂ ಇವು ಟಾನಿಕ್ ಆಗಿ ಬರುತ್ತದೆ” ಕಾಡಿನ ಗುಣ ಧರ್ಮವನ್ನು ಅರಿತ ಯಲ್ಲಪ್ಪ ರೆಡ್ಡಿಯವರು ಅಲ್ಲಿನ ಔಷಧೀಯ ಗುಣಗಳಿರುವ ಮರ ಗಳ ದೊಡ್ಡ ಪಟ್ಟಿ ನೀಡುತ್ತಾರೆ. ನಾಡು ಉಳಿಸಲು ಕಾಡು ಬೇಕು. ಇದು ಬೆಳೆಸಲು ಸಾಧ್ಯವಿಲ್ಲ… ತನ್ನಿಂತಾನೇ ಬೆಳೆದು ಬಾಳುವ ಕಾಡಿನ ನಿನಾದವನ್ನು ಆಲಿಸುತ್ತ ಸುಮ್ಮನೆ ಇದ್ದು ಬಿಟ್ಟರೆ ಆಯ್ತು. ರೈತರು ಈ ಕೆಲಸವನ್ನು ತಾವು ಬದುಕುವ ರೀತಿಯಿಂದ ಮಾಡುತ್ತಿದ್ದರು ಎನ್ನುತ್ತಾರೆ.

(ಅ. ನಾ. ಯಲ್ಲಪ್ಪ ರೆಡ್ಡಿ)

ಇತ್ತೀಚೆಗೆ ಗೆಳೆಯರೊಬ್ಬರ ರೀಲ್‌ನಲ್ಲಿ ತಮ್ಮ ತೋಟದ ನಿಂಬು ಗಿಡ ಕಾಯಿ ಬಿಡದೆ ಬಹಳ ವರ್ಷಗಳಿಂದ ಸತಾಯಿಸುತ್ತಿತ್ತು. ಚೆನ್ನಾಗಿ ಬೈದು ಭೂತ  ಬಿಡಿಸಿದ ನಂತರ ಈಗ ಕಾಯಿ ಬಿಟ್ಟಿದೆ ಎಂದಿದ್ದರು. ಏನೋ ರೈಲ್ ಬಿಟ್ಟಿದ್ದಾರೆ ಎಂದುಕೊಂಡಿದ್ದೆ. ಯಲ್ಲಪ್ಪ ರೆಡ್ಡಿ ಅವರು ಈ ಪುಸ್ತಕದಲ್ಲಿ ಪ್ರಕೃತಿಯ ಒಡನಾಟದಲ್ಲಿ ಮಾಡುವ ಯಾವುದೇ ಕೆಲಸ ಯಾಂತ್ರಿಕವಾಗಲು ಸಾಧ್ಯವಿಲ್ಲ ಅಲ್ಲಿ ಸ್ವಯಂ ಕಲಿಕೆ ಇರುತ್ತದೆ ಎನ್ನುತ್ತಾರೆ.

ಮಹಿಳೆಯರು ಬಿತ್ತನೆಯ ಕಾಯಕದಲ್ಲಿ ಅಪಾರ ಆತ್ಮ ಗೌರವ ಕಾಣುತ್ತಿದ್ದಾರೆ. ಇವರು ಬೀಜ ಹಾಕುವಾಗಲೇ ಎಲ್ಲಾ ಕಷ್ಟಗಳನ್ನು ತಡೆದುಕೊಂಡು ಬೆಳೆಯಿರಿ ಎಂದು ಆಶೀರ್ವಾದ ಮಾಡುತ್ತಾರೆ. ಯಾವುದೇ ಗಿಡವು ತನ್ನ ಒಳಗಡೆ ಒಬ್ಬ ಕಳ್ಳ ಅಂದರೆ ರೋಗಕಾರಕ ಸೇರಿಕೊಂಡಿದ್ದರೆ ಎಲ್ಲ ಸೇರಿ ಅದನ್ನು ಹೇಗೆ ಹೊರಗೆ ಹಾಕಬೇಕು ಎಂದು ಲೆಕ್ಕಾಚಾರ ಹಾಕುತ್ತಿರುತ್ತವೆ. ಗಿಡಗಳು ಆ ಕಳ್ಳ ಸಾಯುವವರಿಗೆ ತಾವು ಊಟ ತಯಾರಿಸುವುದು ಬೇಡ ಎಂದು ತೀರ್ಮಾನಿಸಿ ಕೆಲ ಸಮಯ ಅವು ಏನು ಫಸಲು ಕೊಡದೆ ನಿಂತುಕೊಂಡಿರುವುದನ್ನು ನೋಡಬಹುದು.  ಸೊಕ್ಕಿ ಬೆಳೆದ ನುಗ್ಗೆ ಮರ ಹೂ ಕಾಯಿ ಬಿಡದೆ ಇದ್ದದ್ದು ಕಂಡು ಕಡಿದ ನಂತರ ಮತ್ತೆ ಚಿಗುರಿ ಹೂ ಕಾಯಿ ಬಿಟ್ಟದ್ದು ಕಂಡ ಅನುಭವ ಇರುವ ನನಗೆ ಪ್ರಕೃತಿಯ ಈ ವಿರೋಧಾಭಾಸಗಳನ್ನು ಕಂಡು ಅಚ್ಚರಿ ಆಗುತ್ತದೆ.

ಆದರೆ ಪ್ರಕೃತಿಯ ಪುನರುತ್ಪತ್ತಿ ಕ್ರಿಯೆಯನ್ನು ಬಲ್ಲ ಹಿರಿಯರಿಗೆ ಪ್ರಕೃತಿಯ ಅಗಾಧತೆಯ ಅರಿವು ಇರುತ್ತದೆ. ಆದ್ದರಿಂದಲೇ ಅವರಲ್ಲಿ ವಿನೀತ ಭಾವ ಕಾಣಿಸಿಕೊಳ್ಳುತ್ತದೆ… ಇದು ದೈವೀಕತೆಯಲ್ಲದೆ ಮತ್ತೇನಲ್ಲ. ಕೃಷಿ ಚಟುವಟಿಕೆಗಳಲ್ಲಿ ಒಂದು ಧ್ಯಾನಸ್ಥ ಸ್ಥಿತಿಯಿದೆ. ಅದು ಯಾವ ಬಿರುದು ಬಾವಲಿಯನ್ನು ಬಯಸುವುದಿಲ್ಲ. ತಲ್ಲೀನತೆ ಹಂಚಿಕೊಂಡು ಬಾಳುವುದು ಕೃಷಿ ಬದುಕಿನ ಜೀವನ ಮೌಲ್ಯಗಳು. ರೈತರು ಹಿಂದೆ ಊರಿನಿಂದ ಊರಿಗೆ ಹೋಗುವಾಗ ಬೀಜಗಳನ್ನು ಬಿತ್ತಿ  ಸಾಲುಮರಗಳನ್ನು ಬೆಳೆಸುತ್ತಿದ್ದರು. ನೆತ್ತಿಗೆ ನೆರಳು ನೀಡುವ ಈ ಮರಗಳ ಮೌಲ್ಯ ಅರಿತಿದ್ದ ಅವರು ಪ್ರತಿ ಊರಿನಲ್ಲೂ ಗುಂಡು ತೋಪುಗಳನ್ನು ಮಾಡುತ್ತಿದ್ದರು. ಪ್ರಾಣ ವಾಯುವಿಗಿಂತ ಮಿಗಿಲಾದ ಔಷಧಿ ಇಲ್ಲ ಎಂದು ಬಲ್ಲವರಾಗಿದ್ದ ಇವರು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಗುಂಡು ತೋಪು ಮಳೆ ನೀರನ್ನು  ತಯಾರು ಮಾಡುತ್ತದೆ ಎಂದು ತಿಳಿದಿದ್ದರು.

ಅ. ನಾ.ಯಲ್ಲಪ್ಪ ರೆಡ್ಡಿ  “ಪ್ರತಿ ಗ್ರಾಮಕ್ಕೂ ಗುಂಡು ತೋಪು ಮಾಡುವಂತೆ ಸರಕಾರವನ್ನು ಜನ ಒತ್ತಾಯಿಸಬೇಕು. ಪಂಚಾಯತ್ ವ್ಯಾಪ್ತಿಯಲ್ಲಿರುವ ಮರಗಳನ್ನು ಯಾರೂ ಕಡೆಯಕೂಡದು ಎಂಬ ಕಟ್ಟುನಿಟ್ಟಿನ ಶಾಸನ ಜಾರಿಗೆ ತಂದರೆ ಕಾಡು ಉಳಿಸಲು ಸಾಧ್ಯವಾಗುತ್ತದೆ ಕಾಡುಗಳನ್ನು ಯಥಾ ಸ್ಥಿತಿಯಲ್ಲಿ ಇಡಲು ಮರ ಕಡಿಯದಂತೆ  ಸರಕಾರ ಕಟ್ಟುನಿಟ್ಟಿನ  ಕಾಯ್ದೆ  ಮಾಡಿದರೆ ಸಹಕಾರಿಯಾಗುತ್ತದೆ. ಕೆಜಿಎಫ್ ಹತ್ತಿರದ ಕುಪ್ಪಂ ಬಳಿ 170 ಎಕರೆ ಬರಡು ಭೂಮಿಯನ್ನು ಜೀವ ವೈವಿಧ್ಯಗಳಿರುವ ಅರೇ ನಿತ್ಯ ಹರಿದ್ವರ್ಣ ಕಾಡಾಗಿ ಪರಿವರ್ತನೆಯಾದ ಹಿನ್ನೆಲೆಯಲ್ಲಿ” ತಾವು ಮಾಡಿದ ವಿನ್ಯಾಸವನ್ನು ಹೇಳುತ್ತಾರೆ.

ಇವರು ಹೇಳುವ ಬೀಜ ತೋಪುಗಳ ಅದ್ಭುತ ತಯಾರಿಯೂ ವಿಶಿಷ್ಟವಾಗಿದೆ. ಒಂದು ಗ್ರಾಮದಲ್ಲಿ ಸಾವಿರ ಆರೋಗ್ಯವಂತ  ತಾಯಿ ಮರಗಳನ್ನು ಗುರುತಿಸಿ ಅದರ ಬೀಜಗಳನ್ನು ಸಂಗ್ರಹಿಸಿ ಬೀಜ ತೋಪುಗಳನ್ನು ಮಾಡಿ ಉತ್ತಮ ವೈವಿಧ್ಯತೆಯನ್ನು ಒಳಗೊಂಡ ಸಸಿಗಳನ್ನಷ್ಟೇ ನೆಟ್ಟು ಬೆಳೆಸಿದರೆ ಇವು ಸಾವಿರಾರು ವರ್ಷ ಬದುಕುತ್ತವೆ. ಸಹಜ ಪರಾಗ ಸ್ಪರ್ಶದಿಂದ ಉತ್ಪತ್ತಿಯಾದ ಬೀಜದ ಸಸಿಗಳೇ ಅತ್ಯುತ್ತಮ ಎನ್ನುತ್ತಾರೆ. ಸಿಲ್ವರ್ ಮತ್ತು ತೇಗ ಮರದ ಎಲೆಗಳು ಉದುರಿದರೂ ಅವು ಮಣ್ಣಿನಲ್ಲಿ ಕರಗಿ ಗೊಬ್ಬರವಾಗಿ ಪರಿವರ್ತಿತವಾಗುವ ಗುಣವನ್ನು ಹೊಂದುವುದಿಲ್ಲ. ಕಾಫಿ ತೋಟಗಳಲ್ಲಿ ಗದ್ದೆ ಬದುಗಳಲ್ಲಿ ಮಲೆನಾಡಿನಲ್ಲಿ ಸಾಮಾನ್ಯವಾಗಿ ಬೆಳೆಸುವ ಸಸ್ಯಗಳಿವು. ಈ ಗಿಡದ ಎಲೆಗಳಲ್ಲಿ ಅಲ್ಯುಮಿನಿಯಂ  ಅಂಶ ಹೆಚ್ಚಾಗಿರುವುದರಿಂದ ಗಿಡಗಳಲ್ಲಿ ಹೊಸ ಬೇರು ಬೆಳೆಯಲು ಅನಾನುಕೂಲವಾಗುತ್ತದೆ. ಕೊಳೆರೋಗ ಬರುತ್ತದೆ.  ಆದ್ದರಿಂದ ಈ ಸಸಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದಿಲ್ಲ ಅನ್ನೋದು ಬಹುತೇಕ ಜನರಿಗೆ ಗೊತ್ತೇ ಇಲ್ಲ. ಆದ್ದರಿಂದಲೇ ಇಂತಹ ಪಠ್ಯಗಳು ಜನಸಾಮಾನ್ಯರನ್ನು ರೈತಾಪಿಗಳನ್ನು ತಲುಪಬೇಕು. ಯಾವ ನೆಲಕ್ಕೆ ಯಾವ ಸಸ್ಯ ಸೂಕ್ತ ಎನ್ನುವ ಸಾಮಾನ್ಯ ಜ್ಞಾನ ಜನರಿಗೆ ಇರಬೇಕು, ಆಗ ಪಂಚಾಯಿತಿಯಲ್ಲಿ ಪುಕ್ಕಟೆಯಾಗಿ ಸಿಗುವ ಇಂತಹ ಗಿಡಗಳನ್ನು ಅವರು ನಿರಾಕರಿಸುತ್ತಾರೆ ಎನ್ನುತ್ತಾರೆ.

ಜೈವಿಕ ವೈವಿದ್ಯಗಳಲ್ಲಿ ದುಂಬಿಗಳ ಪಾತ್ರ ವಿಶೇಷವಾದದ್ದು. ಭೂಮಿಯ ಚಲನಶೀಲತೆಯನ್ನು ವಾತಾವರಣವನ್ನು ಸುಸ್ಥಿತಿಯಲ್ಲಿಡಲು ಕಾಲಕಾಲಕ್ಕೆ ಮಳೆ ಬೆಳೆಗಳಾಗಲು ಜೀವಿ ಆವಾಸ ವ್ಯವಸ್ಥೆ ಸೃಷ್ಟಿಯಾಗಬೇಕು. ಪ್ರಾಣಿ ಪಕ್ಷಿ ದುಂಬಿ ಕ್ರಿಮಿಕೀಟಗಳುಗಳು ತಾರತಮ್ಯ ಇಲ್ಲದೆ ರೈತರಿಗೆ ಸಹಾಯ ಮಾಡುತ್ತವೆ.

ಹಳ್ಳಿಯಲ್ಲಿ ತೋಟಗಳಿಗೂ ಕಾಂಕ್ರೀಟ್ ಬೇಲಿಗಳು ಆಗಿರುವ ಈ ಹೊತ್ತು ಸಹಜ ಬೇಲಿಯ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳುವುದು ಉತ್ತಮ. ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಎಲೆ ಗೊಬ್ಬರಗಳು ಸಹಜ ಬೇಲಿಯಿಂದ ಲಭ್ಯವಾಗುತ್ತದೆ. ಸಾರಜನಕ ಒದಗಿಸುತ್ತದೆ. ಭೂಮಿಯ ಫಲವತ್ತತೆಯನ್ನು ಕಾಯುವ ಶಕ್ತಿ ಇಂತಹ ಗಿಡಗಳಿಗೆ ಇವೆ.

“ಶಕ್ತಿ ಅನ್ನೋದು ಯಾಂತ್ರಿಕವಾದುದಲ್ಲ ತಡೆಯಿಲ್ಲದ ಶಕ್ತಿಯ ಹರಿವಿನಿಂದ ಸಾಮರಸ್ಯ ಉಂಟಾಗುತ್ತದೆ. ಸಾಮರಸ್ಯ ಅನ್ನೋದು ಒಂದು ಕಲೆ ಒಂದು ಕೌಶಲ್ಯ. ರೈತ ಮತ್ತು ಅವನ ಹೆಂಡತಿ ತಮ್ಮ ದುಡಿಮೆಯಿಂದ ಸ್ವಚ್ಛಂದವಾದ ಬದುಕಿನ ಕ್ರಮದಿಂದ ದಕ್ಕಿಸಿಕೊಂಡ “ಕ್ವಾಲಿಟಿ ಆಫ್ ಲೈಫ್” ಪೈಲ್ವಾನರು ಗರಡಿ ಮನೆಯಲ್ಲಿ ಸಾಧನೆ ಮಾಡಿಯೂ ಬೆಳೆಸಿಕೊಳ್ಳಲಿಕ್ಕಾಗಲಿಲ್ಲ. ರೈತನ ಹೆಂಡತಿ ಕೈಯಲ್ಲಿ ಹಿಂಡಿದ ಹುಚ್ಚೆಳ್ಳು ಎಣ್ಣೆ ಪೈಲ್ವಾನರಿಗೆ ಊಟ ಬಡಿಸುವಾಗ ನೀಡಿ ಸತ್ಕರಿಸಿದ ಕಥೆ  ಇದರಲ್ಲಿ ಇದೆ.

ನಮ್ಮ ಹಿರಿಯರಿಗೆ ಪರಿಸರದ ಬಗ್ಗೆ ಅತಿ ಸೂಕ್ಷ್ಮವಾದ  ಒಳಗಣ್ಣು ಇತ್ತು. ಬನ್ನಿ ಬಂಗಾರ ಎಂದು ಇವರು ಪೂಜಿಸುವ ಇದು ಇರುವೆಗಳ ಆವಾಸಸ್ಥಾನ.. ನೇಚರ್ಸ್ ಬ್ಲಡ್ ಬ್ಯಾಂಕ್ ಎಂದು ಕರೆಯುವ ನೇರಳೆ ಸ್ಥಳಿಯ ಗುಣಗಳನ್ನು ಮೈಗೂಡಿಸಿಕೊಂಡು ಫಲವತ್ತಾಗಿ ಬೆಳೆಯುತ್ತದೆ. ನಮ್ಮ ಹಿರಿಯರು ದೇವರ ಕಾಡು ನಾಗಬನ ಪವಿತ್ರವನ ಗುಂಡು ತೋಪು ಇತ್ಯಾದಿ ಪರಿಕಲ್ಪನೆಗಳ ಮೂಲಕ 880 ಮರಗಳಿಗೆ ಆಧ್ಯಾತ್ಮಿಕ ವ್ಯಾಖ್ಯೆ ಕೊಟ್ಟಿದ್ದಾರೆ. ಮರಗಳಿದ್ದರೆ ಜೇನು,

ಜೇನು ನೊಣಗಳಿದರೆ ಪರಾಗಸ್ಪರ್ಶ. ಸಮೃದ್ಧವಾದ ಮಳೆ ಬೆಳೆ ಎರಡಕ್ಕೂ ಜೇನುನೊಣಗಳು ಬೇಕೇ ಬೇಕು.

ಗುಂಡು ತೋಪುಗಳು ಎಂದರೆ ವೃತ್ತಾಕಾರವಾಗಿ ಒಂದು ಗ್ರಾಮದ ಸುತ್ತ ಇರುವ ವನಸಂಪತ್ತು. ಇಲ್ಲಿ 70 ಶೇಕಡಾ ವೃಕ್ಷಗಳು ಇರಬೇಕು. ಬಯಲು ಪ್ರದೇಶದಲ್ಲಿ 40 ಶೇಕಡಾ ಮರಗಳಿರಬೇಕು. ಆಗ ಸೂರ್ಯ ಚಂದ್ರ ಗಾಳಿ ಬಿಸಿಲು ಪರಿಪೂರ್ಣವಾಗಿ ಭೂಮಿಗೆ ದಕ್ಕುತ್ತದೆ ಅನ್ನೋದು ನಮ್ಮ ಹಿರಿಯರ ಪರಿಕಲ್ಪನೆಯಾಗಿತ್ತು. ಈ ಪ್ರಕೃತಿಯಲ್ಲಿ ಏನಿಲ್ಲ ಏನಿದೆ. ಕಾಡಿನಲ್ಲಿ ಪರಿಮಳ ಬೀರುವ ಒಂದಷ್ಟು ಹೂಗಳು ಎಲೆ ಮರವೇ ಕಾಣದಂತೆ ಕಂಗೊಳಿಸುತ್ತಿದೆ ಎಂದರೆ, ಅಲ್ಲಿ ಏನೋ ಸಂಚಲನ ಉಂಟು ಮಾಡುತ್ತಿದೆ ಎಂದು ಅರ್ಥ.. ವಾತಾವರಣದಲ್ಲಿ ಭೂಮಿ ಮತ್ತು ಆಕಾಶದ ಮಧ್ಯದಲ್ಲಿ ಇರುವ ವಲಯದಲ್ಲಿ ಬೇಸಿಗೆಯ ಕಾಲದಲ್ಲಿ ರೋಗಕಾರಕ ವೈರಸ್ ಶಿಲೀಂದ್ರ ಬ್ಯಾಕ್ಟೀರಿಯಾಗಳೆಲ್ಲ ಉತ್ಪತ್ತಿಯಾಗುತ್ತಿರುತ್ತದೆ. ಆಗ ಹೂವಿನ ಸುವಾಸನೆಗಳಲ್ಲಿ ಇರುವ ರೋಗನಿರೋಧಕ ಶಕ್ತಿ ವಾತಾವರಣದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.

ಜಾಲರಿ ಹೂವು ಇಂತದೊಂದು ಹೂ. ಜಾಲರಿ, ಆಲದ ಮರಗಳಲ್ಲಿ ವಾಸಿಸುವ ಕೀಟಕ್ಕೆ ಸಂತಾನೋತ್ಪತ್ತಿ ಮಾಡುವ ವಿಶೇಷ ಗುಣ ಆ ಮರಗಳಿಗೆ ಇದೆ ಎಂದರೆ ಹೇಳಿ! ಈ ವಿಸ್ಮಯವೇ ನಾವಿರುವ ಪರಿಸರ. ಇದನ್ನು ಕಾಣುವ ಕಣ್ಣು ಅರಿಯುವ ಹೃದಯ ನಮಗಿರಬೇಕು. ಈ ಮರಗಳಲ್ಲಿ ಉತ್ಪತ್ತಿಯಾಗುವ ಅರಗು ಪೈಂಟ್‌ಗಳನ್ನು ತಯಾರಿಸಲು ಮುದ್ರೆಗಳನ್ನು ಮಾಡಲು ಬಳಸುತ್ತಾರೆ. ಜಾಲರಿ ಮರದ ಹೂವು ಯಥೇಷ್ಟವಾಗಿ ಬೆಳೆದು ಮಿಕ್ಕಿದ್ದು ನೆಲಕ್ಕೆ ಉದುರಿ ಬೀರುವ ಸುವಾಸನೆ ಅದರಲ್ಲಿರುವ ಎಣ್ಣೆಯ ಅಂಶ ಮಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ಅತ್ತಿ ಮರ ರಾಣಿ ವೃಕ್ಷ ಎಂದು ಕರೆಯುತ್ತಾರೆ. ಅತ್ತಿ ಮರವನ್ನು ಸಕಲ ಕೊಳೆ ತೊಳೆಯುವ ಔದುಂಬರ ಎಂದೂ ಕರೆಯುತ್ತಾರೆ. ನಮ್ಮ ಹಳ್ಳಿಗಳಲ್ಲಿ ನೀರಿನ ಆವಾಸಸ್ಥಾನ ಇರುವಲ್ಲಿ ಅತ್ತಿ ಮರ ಇರುವುದನ್ನು ನಾವು ಕಂಡಿದ್ದೇವೆ.

ಮಳೆ ಬರುವ ಮುನ್ನ ಅತ್ತಿ ಮರವು ಹಣ್ಣು ಬಿಡುತ್ತದೆ. ಈ ಹಣ್ಣುಗಳನ್ನು ಪಕ್ಷಿಗಳು ತಿಂದು ಮಿಕ್ಕಿದ್ದು ಮಣ್ಣಿನಲ್ಲಿ ಸೇರಿಕೊಂಡು ಮಳೆ ಬರುವ ಕಾಲಕ್ಕೆ ಹರಿದು ಬರುವ ನೀರನ್ನು ಶುದ್ದೀಕರಿಸಿ ಕೆರೆಗೆ ಬಿಡುತ್ತದೆ. ಕೆರೆ, ಹಳ್ಳ ಬಾವಿಗಳ ಸುತ್ತ ಅತ್ತಿ ಮರಗಳು ಯಾಕೆ ಬೇಕು ಎನ್ನುವುದು ನಮ್ಮ ಹಿರಿಯರಿಗೆ ಗೊತ್ತಿತ್ತು.

ಭೂಮಿಯ ಗೆದ್ದಲು ಹುಳವೂ ಸೇರಿದಂತೆ ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿ ಹೀಗೆ ಸಕಲ ಜೀವ ಜಂತುಗಳಿಗೆ ನಿರಂತರ ಆಹಾರವನ್ನು ಪೂರೈಸುವ ಅತ್ತಿ ಮರ  ಪ್ರಾಣಿಗಳಿಗೆ ಸೂಕ್ಷ್ಮ ಜೀವಿಗಳಿಗೆ ಒಳ್ಳೆಯ ಪೌಷ್ಟಿಕ ಆಹಾರವಾಗುತ್ತದೆ. ಕೊಳಗಳಲ್ಲಿ ನಗುವ ಕಮಲದ ಸೊಬಗಿಗೂ ಇದೇ ಕಾರಣವೆಂದರೆ ಯಾರಿಗಾದರೂ ಆಶ್ಚರ್ಯವಾದಿತಲ್ಲವೇ. ಮುಂಗಾರಿನ ಮೊದಲ ಮಳೆ ನೀರು ಹೊತ್ತು ತಂದ ಭೂಮಿಯನ್ನು ಕಲುಷಿತಗೊಳಿಸುವ ಪಾದರಸ, ಸೀಸ, ಆರ್ಸ್‌ನಿಕ್, ಇತ್ಯಾದಿ ಬಾರ ಲೋಹಗಳನ್ನು ವಿಭಜಿಸಿ ಕಮಲಕ್ಕೆ ಉಣ ಬಡಿಸುತ್ತದೆ. ಅಶ್ವತ್ಥ, ವಟ, ಬಸರಿ, ಗೋಣಿ ಜಂಬು ನೇರಳೆ ಮರಗಳಿಗೂ ಈ ಗುಣವಿದೆ ಎಂದರೆ ಆಶ್ಚರ್ಯವಲ್ಲವೇ?

ಯಾವುದೇ ಭೂಮಿ ಏಕ ಬೆಳೆಯನ್ನು ಸಹಿಸುವುದಿಲ್ಲ. ಪ್ರಕೃತಿಯಲ್ಲಿ ಪ್ರತಿಯೊಂದು ಸಸ್ಯಕ್ಕೂ ತನ್ನದೇ ಆದ ಗುಣ ಸ್ವಭಾವಗಳಿವೆ ಇವು ತಮ್ಮ ಸಂತತಿಯನ್ನು ಬೆಳೆಸಿಕೊಂಡು ತಮ್ಮದೇ ರಕ್ಷಣೆ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತವೆ. ಬಹುಶಃ ನಾವಿಂದು ಬೆಳೆಸುತ್ತಿರುವ ಆರ್ಥಿಕ ಬೆಳೆಗಳಾದ ಕಾಫಿ ಅಡಿಕೆಗಳಿಗೆ ಉಂಟಾಗುವ ರೋಗ ಬಾಧೆಗೆ ಇದೇ ಕಾರಣವಿರಬಹುದು.

ಪರಿಸರ ಸುರಕ್ಷತೆ ವೈವಿಧ್ಯತೆಗಳಿಗೆ ಮತ್ತು ಪರಾಗಸ್ಪರ್ಶಗಳಿಗೂ ನೇರ ಸಂಬಂಧವಿದೆ. ಪರಕಿಯ ಪರಾಗಸ್ಪರ್ಶದಿಂದ ತಳಿ ಸ್ಥಿರತೆ ಇಕಾಲಜಿಕಲ್ ಸೆಕ್ಯೂರಿಟಿ ಉಂಟಾಗುತ್ತದೆ. ಬೀಜಗಳ ಗಾತ್ರವು ದೊಡ್ಡದಿರುತ್ತದೆ… ಪ್ರಕೃತಿಯ ಬಗ್ಗೆ ನಮಗಿರುವ ಅಸಡ್ಡೆಗಳಿಗೆ ಉತ್ತರವನ್ನು ಈ ಕೃತಿ ಸಂವಾದಿಸುತ್ತದೆ. ಪರಾಗಗಳಿಂದ ಮಳೆಯಾಗುತ್ತದೆ.  ಏರೋಪ್ಲೇನ್ ಚಿಟ್ಟೆಯೊಂದು ರೆಕ್ಕೆ ಆಡಿಸಿದಾಗ ಗಾಳಿಯ ರಭಸದಲ್ಲಿ ಬದಲಾವಣೆಯಾಗುತ್ತದೆ. ಹಿಂದೂ ಮಹಾಸಾಗರಕ್ಕೊ ಅರಬಿ ಸಮುದ್ರಕ್ಕೊ ಒಂದು ಹನಿ ಬಣ್ಣದ ನೀರನ್ನು ಸೇರಿಸಿದರೆ ಪ್ರಪಂಚದ ಎಲ್ಲಾ ಸಾಗರವನ್ನು ಸುತ್ತಿಕೊಂಡು ಮೂರ್ನಾಲ್ಕು ವರ್ಷಕ್ಕೆ ನಾವು ಬಣ್ಣದ ನೀರು ಹಾಕಿದ ಜಾಗಕ್ಕೆ ಬಂದು ಸೇರಿಕೊಳ್ಳುತ್ತದೆ ಎಂದರೆ, ಯಾರಾದರೂ ಊಹಿಸಿಕೊಳ್ಳಬಹುದು; ಪ್ರಕೃತಿಯ ವಿಸ್ಮಯ ಅಗಾಧತೆ ನಮ್ಮ ನಿರೀಕ್ಷೆಗೆ ಮೀರಿದ್ದು ಎನ್ನುವಂತದ್ದು ಎಂದು.

ಪ್ರಕೃತಿ, ಪರಿಸರದ  ಮೇಲೆ ಹಾನಿ ಮಾಡುವ ಯೋಜನೆಗಳ ಬಗ್ಗೆ  ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ಮೊದಲಾದ ವಿಜ್ಞಾನಿಗಳ ಸಲಹೆ ನಿರ್ಲಕ್ಷ್ಯ ಮಾಡಿದ ಸರಕಾರದ ನೀತಿ ನಿರೂಪಣೆಗಳಿಂದ ಯುನಿಸ್ಕೋ ಗುರುತಿಸಿರುವ ಅಪರೂಪದ ಜೀವ ವೈವಿದ್ಯಗಳ ತಾಣ ಪಶ್ಚಿಮ ಘಟ್ಟ ಅಪಾಯದ ಅಂಚಿನಲ್ಲಿದೆ. ೨೦-೩೦ಕೋಟಿ ವರ್ಷಗಳಿಂದ ವಿಕಾಸ ಹೊಂದಿರುವ ಮಹಾನ್ ಪರಿಸರ ವ್ಯವಸ್ಥೆ ಇದು. ಭೂಮಿಯ ಮೇಲೆ ಮತ್ತು ಕೆಳಗಿನ ಐದು ಪದರಿಗೂ ನೀರಿನ ಹರವನ್ನು ಹೆಚ್ಚಿಸುವ ತೋಡು ಮಾಡುವ ಇರುವೆ, ಗೆದ್ದಲು… ಇತ್ಯಾದಿ ಪ್ರಾಣಿ ವೈವಿದ್ಯ ಇಲ್ಲಿದೆ. ೨೦೦-೫೦೯ ಎಂ. ಎಂ. ನೀರು ಸುರಿಸುವ ಗುಡ್ಡ ಬೆಟ್ಟಗಳ ಎದೆಯಿಂದ ದುಮ್ಮಿಕ್ಕುವ ಇಲ್ಲಿನ ನದಿ ತೊರೆಗಳು ನಾಡಿನ ಜೀವ ನಾಡಿ….

   “ಅರಣ್ಯೆ ನಿನಗೆ ಶರಣು” ಕೃತಿಯು ಪ್ರಕೃತಿಯ ಒಡನಾಟದೊಂದಿಗೆ ಮನುಷ್ಯ ಹಾಗೂ ಭೂಮಿಯ ಇನ್ನಿತರ ಜೀವಿಗಳು  ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಹೇಗೆ ಬದುಕು ನಡೆಸಬಹುದು ಎನ್ನುವ ಒಂದಷ್ಟು ನಿಜದ ಸಂಗತಿಗಳನ್ನು ಮನದಟ್ಟು ಮಾಡಿಕೊಡುವ ಕೃತಿ. ಇದರ ಮನನ ಇಂದಿನ ಅಗತ್ಯ. ಧರ್ಮಾತೀತವಾದ ಈ ಕೈಪಿಡಿ ಒಂದಷ್ಟು ಮಿಥ್ಯ ಮೀಮಾಂಸೆಗಳೊಂದಿಗೆ ಬದುಕುವ ನಮಗೆ ಮಾರ್ಗದರ್ಶನ ನೀಡುತ್ತದೆ. ಈ ದರ್ಶನ ಬದುಕಿನ ದರ್ಶನವಾದಾಗ ನಾವು ಅದನ್ನು ಅನುಸರಿಸಿದಾಗ ನಾವಿರುವ ಈ ಒಂದೇ ಭೂಮಿಯನ್ನು ಮುಂದಿನ ತಲೆಮಾರಿಗೆ ಒಂದಷ್ಟು ಆತ್ಮವಿಶ್ವಾಸದೊಂದಿಗೆ ಬಿಟ್ಟು ಬಿಡಲು ನಾವು ಸಿದ್ದರಾಗುತ್ತೇವೆ. ಕಾಡು ಬೆಳೆಸುವುದು ನಾಡು ಉಳಿಸುವುದು ಅಂದರೆ ಈ ಬಗ್ಗೆ ನಾವು ಹೆಚ್ಚು ಹೆಚ್ಚು ತಿಳಿದುಕೊಳ್ಳುವುದು. ಮತ್ತು ಅದನ್ನು ಬದುಕಿನಲ್ಲಿ ಅನುಸರಿಸುವುದು. ಹೀಗೆ ಅನುಕರಿಸುವ ಮೂಲಕ ಕಿರಿಯ  ತಲೆಮಾರಿಗೆ ನಮ್ಮ ಹಿರಿಯರು ಹಾಕಿಕೊಟ್ಟ ಬದುಕಿ ಬಾಳುವ ಕಿವಿ ಮಾತುಗಳನ್ನು ವರ್ಗಾಯಿಸುವುದು.

About The Author

ದೇವಿಕಾ ನಾಗೇಶ್

ದೇವಿಕಾ ನಾಗೇಶ್ ಹಾಸನ ಜಿಲ್ಲೆಯ, ಬೇಲೂರು ತಾಲೂಕಿನ, ಹಸುರು ಗುಡ್ಡದ ಮೂಲದವರು. ಈಗ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಎದೆಯ ಮುಳ್ಳುಗಳು (ಕಥಾ ಸಂಕಲನ ), ಹರಿವ ತೇವದಿ  ಉರಿವ ತೊಡರು (ಲೇಖನ ಸಂಕಲನ), ಸಾರ ಅಬೂಬಕರ್ (ಜೀವನ ಚರಿತ್ರೆ), ಮುಸ್ಸಂಜೆ (ಕವನ ಸಂಕಲನ) ಪ್ರಕಟಿತ ಕೃತಿಗಳು. ಓದು, ಬರಹ, ತಿರುಗಾಟ, ಸಿನೆಮಾ ನೋಡುವುದು ಇವರ  ಹವ್ಯಾಸಗಳು.  

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ