ಹೇ ಪ್ರಭು

ಎದೆ ಬಾಣಲೆಯಲ್ಲಿ
ಕುದ್ದು ಬೆಂದ ಜೀವದ
ದನಿ ಕೇಳು

ಮೂರೆಳೆಯಿಂದ ಬೆಳೆದು
ಒಪ್ಪಿದವಳಿಗೆ ತಾಳಿಕಟ್ಟಿ
ಆರೆಳೆಯ ದಾರ
ಹಾಕಿಕೊಂಡದ್ದೇ ಬಂತು
ಎದೆಯಮೇಲದನು
ಮುಷ್ಟಿಯಲ್ಲೆಣೆಸಿ
ಗೊಣಗಿದ್ದೇ ಬಂತು
ಬೆನ್ನಿಗೆ ಸೊಳ್ಳೆ ಮುತ್ತಿಡಲು
ಅದರಿಂದಲೇ–
ತುರಿಸಿದ್ದೇ ಬಂತು…

ಬೇಡುತಿರುವೆ —
ಕೇಳು, ಹೇ ಪ್ರಭು
ನೀನಿದ್ದರೆ ಛಂಗನೆ
ಜಿಗಿದು ಬಂದುಬಿಡು
ಕಣ್ತುಂಬಿಕೊಳ್ಳುವೆ…

ನೆರೆಹೊರೆಯ ಒಲವು
ಮರೆಮಾಚುತಿರಲು
ದಿನವೂ ರವಷ್ಟು
ಕುಗ್ಗುತಿರುವೆ…

ಇಲ್ಲವೇ, ಅನುದಿನವೂ–
ಅಲ್ಲಿಂದಲೇ
ಒಂದು ಗುಲಗುಂಜಿಯಷ್ಟೇ
ಹಿಗ್ಗು ಕೊಡು

ಕುಗ್ಗಿನಲ್ಲಿಹಿಗ್ಗು ಕಲಸಿ
ಮುಗುಳು ನಗುತ
ಮುನ್ನಡೆವೆ…
ಇಂದುಗಳನು
ಅಂದ ಗೊಳಿಸುವೆ…

ಪ್ರಭುರಾಜ ಅರಣಕಲ್ ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಅರಣಕಲ್‌ನವರು
ಮೌನ ನುಂಗುವ ಶಬ್ದಗಳು ಇವರ ಪ್ರಕಟಿತ ಕವನ ಸಂಕಲನ