ಒಂಟಿ ನಾವಿಕ…

ಕೊಳೆತ ಬೇರುಗಳ ಜೀವ ಧಾತು,
ಕಣ್ಣ ಚಿತೆಯಲ್ಲೆ ಉರಿಯುತ್ತಿವೆ
ನನ್ನ ಕಿಚ್ಚಿಲ್ಲದ ಬೇಗೆಗಳು
ನೀನು ಇದ್ದಲ್ಲೆ ಅಂಡಲೆಯುವ ಹಳೆಯ ನಾವಿಕ
ಎತ್ತಲೋ ನನ್ನ ಕೈಹಿಡಿದು ನಡೆಸುತ್ತಲೇ ಇದ್ದಿಯ!

ಇಲ್ಲಿ ಯಾರೋ ಎದೆಗೂಡೆಲುಬಿನಲ್ಲಿ
ತಂಗಿ ಹೋದವರು
ಮಣ್ಣ ಹೊದಿಕೆಯೊಳಗು ನೆನಪಾಗುವವರು
ಅಮ್ಮನ ಸೆರಗಿಗಂಟಿದ ಕಣ್ಣೀರಿನ ಕಥೆಗಳಲ್ಲಿ
ಒಂದನ್ನು ದಕ್ಕಿಸಿಕೊಳ್ಳದೆ ದಂತಕಥೆಯಾದವರು
ಹಾರಿ ಹೋದ ಹೆಂಚಿನೊಳಗಿಂದ ಸುರಿವ
ಸೋನೆ ಮಳೆಗೆ ಬೊಗಸೆಯೊಡ್ಡಿದವರು…

ಏನೆಲ್ಲಾ ಉಂಟು ನಿನ್ನಿರುವಿನಲ್ಲಿ
ರಚ್ಚೆ ಹಿಡಿದು ಗೋಳಿಟ್ಟ ಶಬ್ದ
ಹುಚ್ಚಾಪಟ್ಟೆ ಹರಿಯುವ ಗೆರೆಗಳು
ಇಂತಹದ್ದೆ ಒಂದು ಹಳೆಯ ಪ್ರೀತಿಯ ಸೆಳೆತ
ಬಿರುಕು ಬಿಟ್ಟ ಸಂಬಂಧಗಳ ಗೋಡೆ
ಮೇಲೆ ಅರಳಿಮರದ ಚಿಗುರು
ಕಳ್ಳ ಬಸಿರಿನ ಮಕ್ಕಳಿಗೆಲ್ಲ ಹೆಸರಿಟ್ಟವನು ನೀನೆ,
ನಡೆಯುತ್ತಲೇ ಇದ್ದೇನೆ ಈಗ
ಪೆನ್ಸಿಲ್ ನ ಗೆರೆಗಳಂತೆ ನೀನು ಎಳೆದೊಯ್ದಲ್ಲಿಗೆ …

ಒಳ-ಹೊರಗಿನದ್ದೆಲ್ಲ ತೋರಿಸುತ್ತ
ಪ್ರತಿ ನೆನಪುಗಳಿಗು ಜೋತು ಬೀಳಿಸುತ್ತ
ಶಬ್ದಗಳ ಕೊಟ್ಟು ಖಾಲಿಯಾಗಿಸಿದ್ದಿಯ ನೀನು
ಜಗತ್ತು ನೀರಿನೆಳೆಯಷ್ಟು ನಿನ್ನಂತಿಲ್ಲ
ಸಾಕು ನಡಿ, ಸರಳ ರೇಖೆಗಳ ಮೇಲೆ ನಡೆಯೋಣ
ಅಂತಿದ್ದೆ ನಾನು!
ಪಾಚಿಗಟ್ಟಿದ ನಿನ್ನ ಮನೆಯಂಗಳದಿಂದ
ಒಂಟಿ ನಡೆದು ಬಿಡುವೆ,
ನನ್ನಷ್ಟಕ್ಕೆ ಬಿಡು ನನ್ನ…

ಬುದ್ಧ ನೀಡಿದ ಹೂಗಳು…

ಮಂಜು ತಬ್ಬಿ, ಗಾಳಿಗೆ ಎದೆಮಾಡಿಕೊಂಡು ಮಲಗಿರುವ
ಈ ಕುರಂಜಿ ಬೆಟ್ಟಗಳೊಡಲಲ್ಲಿ ಏನೆಲ್ಲಾ ಅಡಗಿರಬಹುದು!
ನೀಲಿ ಬಣ್ಣದ ನಂಟು, ಕಾಲಿಗೆಲ್ಲ ಇಬ್ಬನಿಯ ಅಂಟಂಟು
ಕಳೆದ ಬಾರಿಯೇ ನನ್ನ ಚಿತ್ತ ಇಲ್ಲೆ ಮಣ್ಣು ಸೇರಿರಬಹುದು
ದಿನವಿಡೀ ದಾರಿ ತಪ್ಪಿ
ನಿನ್ನ ನೆನಪಲ್ಲೆ ಸೊಲಾಡಿ ಸುತ್ತಿದ ನನ್ನ ಪಾದಗಳಿಂದ
ಗರಿಕೆ ಹುಲ್ಲಿಗು ನಿನ್ನದೆ ಅಮಲು, ನುಂಗಿ ತೀರುತ್ತಿತ್ತು ಚಳಿಗಾಳಿಯ ಗಮಲು…

ಪುಸ್ತಕದೊಳಗೆ ಉಸಿರು ಕಟ್ಟುತ್ತ ಮಲಗಿರುವ ಹೂವು
ಈವೋತ್ತು ಏನೆಂದು ಧ್ಯಾನಕ್ಕೆ ಕುಳಿತಿರಬಹುದು..!
ಕಕ್ಕಿದ ಹೊಗೆ ಸುರುಳಿಯಾಗಿ ಸುತ್ತುವುದ ಕಂಡು
ರೋಮಾಂಚನಗೊಂಡ ಅಲೆಮಾರಿಯಂತೆ
ಕನಸ ಹೆಣೆಯುತ್ತಿರಬಹುದು…!
ನಮ್ಮ ಮಸುಕಾದ ನೆನಪುಗಳ ಹೊತ್ತ ಕ್ಷಣಗಳಂತೆ
ನದಿದಂಡೆಗೆ ಬೆನ್ನು ಮಾಡಿ ಅವಳು ಮುಖಮಾಡಿರುವ
ಲೋಕಗಳ ಕಡೆಗೆ ದೃಷ್ಟಿ ನೆಟ್ಟು
ಬಣ್ಣ ಕಳೆದುಕೊಂಡ ನೆರಳೆ ನೆರಳಾಗಿರಬಹುದು
ಅವಳ ಕಣ್ಣ ಬಣ್ಣಕ್ಕಾಗಿ ಕಾಯುತ್ತಲೂ ಇರಬಹುದು…!

ಹೂವಿನ ಪಕಳೆಗಳಂತೆ ಪಡೆದುಕೊಂಡದ್ದೆಲ್ಲ
ಕಳೆದುಕೊಳ್ಳುವ ಕಾಲವೊಂದು ಬರುತ್ತದೆ
ಮುಚ್ಚಿದ ಕಿಟಕಿ, ಬಾಗಿಲುಗಳ ಹಿಂದೆ
ನಾನು ಬಿಕ್ಕಳಿಸಿದ್ದು ಯಾರಿಗೂ ಕೇಳದೇ ಇರಲಿ
ನೆನಪುಗಳು ಏಳಿಸುವ ಅಲೆಗಳ ದಡ
ನುಂಗಿಕೊಂಡಿತು ನನ್ನನ್ನು…
ಈಗ ಅಮಲನ್ನೆ ಉಂಡು ಮಲಗುವ ಈ ರಾತ್ರಿಗಳಲ್ಲಿ
ಇವು ಯಾವೊಂದು ನನಗೆ ನೆನಪಾಗುವುದು ಬೇಡ…

ಮತ್ತೆ ಹುಡುಕುತ್ತಿದ್ದೇನೆ
ಬುದ್ಧ ನೀಡಿದ ಹೂಗಳೆಂದು
ಕೈಗಿತ್ತು ಸಂಭ್ರಮ ಪಟ್ಟಿದ್ದಕ್ಕೆ…
ಯಾರೋ ಹೇಳಿದರು ಅವು ಸತ್ತು ತುಂಬ ಕಾಲವೇ ಆಯ್ತು…!

ಪ್ರಮೋದ್ ಬೆಳಗೋಡ್ ಪ್ರಸ್ತುತ ಮಹಾರಾಜ ಕಾಲೇಜಿನಲ್ಲಿ  ಸೈಕಾಲಜಿ, ಇಂಗ್ಲಿಷ್ ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಕೊನೆಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಸಾಹಿತ್ಯ, ಓದು, ರೇಖಾಚಿತ್ರ, ಊರೂರು ಸುತ್ತುವುದರಲ್ಲಿ ಇವರ ಆಸಕ್ತಿಗಳು.
ಮೈಸೂರಿನ “ನಿರಂತರ ಫೌಂಡೇಶನ್” ರಂಗ ತಂಡದಲ್ಲಿ ಸಕ್ರಿಯ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)