ಪ್ಲಾಸ್ಟಿಕ್ ಚೇರಿನ ಎತ್ತರದ ಹಿಡಿಗಳನ್ನು ಭದ್ರವಾಗಿ ಹಿಡಕೊಂಡು ಹಿಂದಿನ ಸಾಲಲ್ಲಿ ಕೂತಿದ್ದ ಇವರಿಗೆ ಏನೇನೋ ನೆನಪು ಆವರಿಸಿ ಅಲ್ಲಾಡಿಸುತ್ತಿತ್ತು. ಕತ್ತನ್ನು ನೋವಾಗುವಷ್ಟು ಚಾಚಿ ಸ್ಟೇಜಿನ ಮೇಲೆ ನಡೆಯುವುದನ್ನು ನೋಡುತ್ತಿದ್ದರೂ ಮನಸ್ಸು ಎಲ್ಲೆಲ್ಲೋ ಅಲೆಯುತಿತ್ತು. ಎಪ್ಪತ್ತು ದಾಟಿದ್ದ ಇವರ ಕುಗ್ಗಿದ ಸಣ್ಣ ದೇಹ, ಬಾಗಿದ ಬೆನ್ನು ಗೌರವಕ್ಕಿಂತ ಹೆಚ್ಚಾಗಿ ಕನಿಕರವನ್ನೇ ಹುಟ್ಟಿಸುತ್ತಿತ್ತು. ಆ ವಯಸ್ಸಿನಲ್ಲಿ ನೆನಪಿಗೇನು ಬರ. ತುಂಬಿ ಭೋರ್ಗರೆಯುವಷ್ಟಿತ್ತು. ಆದರೆ ಯಾಕೋ ಯಾವುದೂ ಸ್ಪಷ್ಟವಲ್ಲ. ನೆನ್ನೆ ಮೊನ್ನೆಯ ಸಂಗತಿ ಹತ್ತಾರು ವರ್ಷ ಹಳೆಯದು ಎಂಬಂತೆ ಮತ್ತು ಹತ್ತಾರು ವರ್ಷ ಹಳೆಯದು ನೆನ್ನೆ ತಾನೆ ನಡೆದುದು ಅನಿಸುತ್ತಿತ್ತು. ಈ ಪ್ಲಾಸ್ಟಿಕ್ ಚೇರುಗಳಿಗಿಂತ ಮಡಚುವ ಗೋಡ್ರೆಜ್ ಚೇರಿನಲ್ಲಿ ಕೂತು, ಪಕ್ಕದ ಕಂಬಿಯನ್ನೇ ಹಿಡಿಯಾಗಿ ಹಿಡಿಯುವುದು ಇವರಿಗೆ ಸುಲಭ.

ಕವನಸಂಕಲನದ ಬಿಡುಗಡೆ ಸಮಾರಂಭ ಇವರಿಗೆ ಹೆಚ್ಚೇನೂ ಸೊಗಸುವುದಿಲ್ಲ. ಹಾಗೆ ನೋಡಿದರೆ ಇವರನ್ನೂ ಅಹ್ವಾನಿಸಿ ಸ್ಟೇಜಿನ ಮೇಲೆ ಕೂಡಿಸಿ ಭಾಷಣ ಮಾಡಿಸಬೇಕಿತ್ತು. ಆದರೆ ಅದರ ಬಗ್ಗೆ ಇವರಿಗೇನು ಬೇಸರವಿರಲಿಲ್ಲ. ಅಷ್ಟೇ ಅಲ್ಲ ಸ್ಟೇಜಿನಲ್ಲಿ ಕೂರುವುದು, ಪದ್ಯದ ಬಗ್ಗೆ ಮಾತಾಡೋದು ಇವರಿಗೆ ಮುಜುಗರದ ಸಂಗತಿಯೇ. ಅಂದು ಇವರ ಉದ್ವೇಗ ಬೇರೆ ಬಗೆಯದು. ಸಮಾರಂಭದ ಕವಿ ಕೆಟ್ಟ ಕೆಟ್ಟ ಪದ್ಯಗಳನ್ನು ಬರೆದು ಜನಪ್ರಿಯವಾಗಿದ್ದರೂ ಕೂಡ ಅವನ ಬಗ್ಗೆ ಇವರಿಗೆ ಏನೋ ಕುತೂಹಲ. ಹೀಗೆಲ್ಲಾ ಇದ್ದುಕೊಂಡೂ ಕಾವ್ಯ ಬರೆಯಬಹುದಾ ಅಂತ. ಅವನ ಸಾಲುಗಳ ಚಂದ ಮತ್ತು ಜಾಣ್ಮೆ ಹಿಡಿಸಿತ್ತು. ಆ ಜಾಣ್ಮೆ ಎಂದೂ ಅಹಂಕಾರವಾಗದೆ, ಸರಿಯಾದ ವಿಚಾರದ ಬಗ್ಗೆಯೇ ಇರುವುದೂ ಹಿಡಿಸಿತ್ತು. ಯಾವುದೋ ದೊಡ್ಡ ಕಂಪನಿಯ ಪ್ರಾಯೋಜನೆಯ ಅಡಿ ನಡೆಯುತ್ತಿದ್ದ ಆ ಸಮಾರಂಭದ ಜಗಮಗಿಸುವ ಬೆಳಕು, ಊರೆಲ್ಲಾ ಕೇಳಿಸುವಂಥ ಸದ್ದು ಗದ್ದಲಕ್ಕೆ ಬೇಸರಕ್ಕಿಂತ ಹೆಚ್ಚಾಗಿ ಒಳಗೊಳಗೇ ನಗುತ್ತಿದ್ದರು.

ಹಾರ ತುರಾಯಿಗಳೆಲ್ಲಾ ಮುಗಿದು ಕವಿ ತನ್ನೆರಡು ಪದ್ಯವನ್ನು ಓದಲು ನಿಂತಾಗ ಇವರು ಕಿವಿ ಚುರುಕಾಗಿಸಿ ನೆಟ್ಟಗೆ ಕೂತರು. ಅದಕ್ಕಾಗಿಯೇ ಅಲ್ಲಿಗೆ ಬಂದಿದ್ದು. ಅಷ್ಟು ಚೆನ್ನಾದ ಸಾಲುಗಳನ್ನು ಕವಿಯ ಬಾಯಿಂದಲೇ ಕೇಳುವುದಕ್ಕೆ ಇಳಿವಯಸ್ಸಿನಲ್ಲೂ ಇವರಿಗೆ ರೋಮಾಂಚನವಾಗುತ್ತಿತ್ತು. ಆದರೆ ವಿಚಿತ್ರವೆಂದರೆ ಕವಿ ಮೊದಲೆರಡು ಸಾಲು ಓದುವಷ್ಟರಲ್ಲೇ ಇವರ ಮನಸ್ಸು ಏಲ್ಲೋ ಹೋಗಿಬಿಟ್ಟಿತ್ತು. ಪದ್ಯದ ಮೊದಲಲ್ಲೇ ಬರುವ “ನೋಟದ ಬಾಣ ಹೂಡಲು ಬಿಲ್ಲಾದ ಹುಬ್ಬು” ಎಂಬ ಸಾಲು ಇವರನ್ನು ತುಂಬಾ ದೂರ ಒಯ್ದುಬಿಟ್ಟಿತ್ತು. ತನ್ನ ಪ್ರೇಯಸಿ ಎಂದು ತಾವು ಗುಪ್ತವಾಗಿ ಖುಷಿಪಡುತ್ತಿದ್ದ ಆ ಹುಡುಗಿಯ ಹುಬ್ಬುಗಳು, ಅವಳ ಒಡನಾಟ ತದೇಕಚಿತ್ತದ ನೋಟ ಏಲ್ಲಾ ನೆನಪಾದವು. ಆದರೆ ಆ ನೆನಪಿಂದ ಇಹಕ್ಕೆ ಮರಳುವಷ್ಟರಲ್ಲಿ ಕವಿಯ ಎರಡು ಪದ್ಯಗಳೂ ಮುಗಿದು ವಂದನಾರ್ಪಣೆಯೂ ಮುಗಿದಿತ್ತು. ಜನ ಏಳುತ್ತಿದ್ದರು. ತಾವು ಎಲ್ಲೋ ಕಳೆದು ಹೋಗಿರುವುದು ಎಲ್ಲರಿಗೂ ಗೊತ್ತಾಗಿಬಿಟ್ಟಿತೇನೋ ಎಂದು ದಡಬಡಿಸಿದರು. ಅಲ್ಲದೆ ತಮ್ಮ ಪ್ರೇಯಸಿಯ ಹುಬ್ಬಿನ ಸಂಗತಿ ಎಲ್ಲರಿಗೂ ಗೊತ್ತಾಗಿ ಬಿಟ್ಟಿತೋ ಎಂಬಂತೆ ನಾಚಿಕೆಯಿಂದ ಅತ್ತಿತ್ತ ನೋಡಿ ತಲೆ ತಗ್ಗಿಸಿ ಹೊರನಡೆದರು.

ಕಣ್ಣು ಕುಕ್ಕುವ ಬೆಳಕಿನ ಸಭಾಂಗಣದಿಂದ ಹೊರಗೆ ಬೀದಿಗೆ ಬಂದೊಡನೆ ಕತ್ತಲೆಯಲ್ಲಿ ಒಂದೆರಡು ನಿಮಿಷ ಕಣ್ಣು ಕಾಣದೆ ಇವರು ಹಾಗೇ ನಿಂತರು. ನಿಧಾನಕ್ಕೆ ಕತ್ತಲು ಕಣ್ಣಿಗೆ ಒಗ್ಗಿದಂತೆ ದೂರದಲ್ಲಿರುವ ಬಸ್‌ಸ್ಟಾಪ್ ಕಂಡಿತು. ಆ ದಿಕ್ಕಿಗೆ ಹೋಗುವುದು ನಡುವೆ ಯಾವುದಾದರೂ ಆಟೋ ಸಿಕ್ಕರೆ ಸರಿ ಎಂದುಕೊಂಡರು. ಜನರೆಲ್ಲಾ ಸ್ಕೂಟರ್, ಕಾರುಗಳಲ್ಲಿ ಸರಸರ ಹೊರಡುತ್ತಿದ್ದಂತೆ ಸಣ್ಣಗೆ ಮಳೆ ಶುರುವಾಯಿತು. ಒಂದೆರಡು ಹನಿಗಳು ಇವರ ಹೆಜ್ಜೆಯನ್ನು ಚುರುಕುಗೊಳಿಸಿತು. ಅಷ್ಟರಲ್ಲಿ ಇವರ ಪಕ್ಕ ಒಂದು ಕಾರು ಹತ್ತಿರದಲ್ಲೇ ಹಾದು ಹೋಯಿತು. ಕೊಂಚ ಗಾಬರಿಯೇ ಆಗಿ ಪಕ್ಕಕ್ಕೆ ನಿಂತುಬಿಟ್ಟರು. ಆದರೆ ಕಾರು ತುಸುವೇ ದೂರ ಹೋಗಿ ನಿಂತಿತು. ಅದರಿಂದ ಚೆನ್ನಾಗಿ ಶೇವ್‌ಮಾಡಿಕೊಂಡ ಒಳ್ಳೆ ಶರ್ಟು ಪ್ಯಾಂಟು ತೊಟ್ಟ ಇಪ್ಪತ್ತರ ಹುಡುಗ ಇಳಿದ. ನಗು ನಗುತ್ತಾ ಇವರತ್ತಲೇ ಬಂದ. ಗುರುತು ಹತ್ತಲಿಲ್ಲ. ಬಂದವನೇ ಇವರ ಕೈ ಹಿಡಿದು ನಮಸ್ಕಾರ ಹೇಳಿದ. ಇವರು ಪಿಳಿಪಿಳಿ ನೋಡುತ್ತಲೇ ಇದ್ದರು. ತಮ್ಮ ಹಳೆಯ ಕವನವೊಂದರ ಸಾಲು ನೆನಪಾಯಿತು. ಸಾಲಿನ ಪದಗಳಲ್ಲ ಅದರಲ್ಲಿ ಬರುವ ಚಿತ್ರ. ಇವನನ್ನೇ ಮನಸ್ಸಿನಲ್ಲಿಟ್ಟುಕೊಂಡು ಅದನ್ನು ಬರೆದನ ಅಂತ ಅನುಮಾನವಾಯಿತು. ಆದರೆ ಆ ಸಾಲು ಬರೆದು ದಶಕಗಳೇ ಕಳೆದಿದ್ದವು. ಏನದು ಸಾಲು ಎಂದು ಮಾತ್ರ ಹೊಳೆಯಲಿಲ್ಲ. ಇವರ ತಲೆಯಲ್ಲಿ ಇಂದಿನ ಇವನೇ ಅಂದಿನ ಸಾಲಿಗೆ ಪ್ರೇರಣೆ ಎಂಬ ಭಾವ ಬಲವಾಯಿತು. ಅದು ಸಾಧ್ಯವಿಲ್ಲ ಅನಿಸಿದರೂ ಕೂಡ. ಯಾಕೆ ಸಾಧ್ಯವಿಲ್ಲ ಅಂತ ಮನಸ್ಸಿನ ಇನ್ನೊಂದು ಭಾಗ ತಕರಾರು ಮಾಡುತ್ತಿತ್ತು.

ಅಷ್ಟರಲ್ಲಿ ಹುಡುಗ ಏನೋ ಹೇಳಿದ್ದಕ್ಕೆ ಇವರು ಸರಿ ಎಂದು ತಲೆಯಾಡಿಸಿಬಿಟ್ಟಿದ್ದರು. ಹುಡುಗ ಮೆಲ್ಲನೆ ಕೈಹಿಡಿದು ಇವರನ್ನು ಕಾರಿನಲ್ಲಿ ಕೂಡಿಸಿಯೂ ಆಗಿತ್ತು. ಕಾರು ನಿಂತೇ ಇದೆ ಎಂಬಂತೆ ಭಾಸವಾಗುತ್ತಿದ್ದರೂ ಕಿಟಕಿಯ ಹೊರಗೆ ಬೆಳಕು ಪಟಪಟನೆ ಹಾದು ಹೋಗುತ್ತಿತ್ತು. ಈ ಊರಿನಲ್ಲಿ ಇಷ್ಟು ಜೋರಾಗಿ ಕಾರು ಬಿಡಬಹುದ ಎಂದು ಕೇಳಬೇಕನಿಸಿತು. ಡ್ರೈವ್ ಮಾಡುತ್ತಿದ್ದ ಹುಡುಗ ತಮ್ಮ ಭೋಳೇತನಕ್ಕೆ ನಗಬಹುದು ಎಂದು ಸುಮ್ಮನಾದರು. ಇವರಿಗೆ ಹಾಗನಿಸಿದ್ದು ಆ ಹುಡುಗನಿಗೆ ಗೊತ್ತಾದಂತೆ ತಿರುಗಿ ಹಲ್ಲು ಬಿಟ್ಟು ನಕ್ಕ. ಅವನೂ ಮೊದಲಿನ ಹುಡುಗನಂತೇ ಕಂಡ. ಬಾಗಿ ಮುಂದೆ ಕೂತಿದ್ದ ಮೊದಲ ಹುಡುಗನನ್ನು ನೋಡಿದರು. ಅವನು ತಿರುಗಿ “ಏನು ಸಾರ್‍? ನೀರು ಬೇಕ?” ಎಂದು ನೀರಿನ ಬಾಟಲು ಚಾಚಿದ. ಇವರು “ಬೇಡ” ಎಂದು ತಲೆಯಾಡಿಸಿ ಹೊರಗೆ ನೋಡಿದರು. ಕಾರು ಯಾವ ದಿಕ್ಕಲ್ಲಿ ಹೋಗುತ್ತಿದೆ ಎಂದು ತಿಳಿಯಲಿಲ್ಲ. ಡ್ರೈವ್ ಮಾಡುತ್ತಿದ್ದ ಹುಡುಗನ ಕಡೆ ತಿರುಗಿ “ಎಲ್ಲಿ ಬಂದಿವಿ…” ಎಂದು ಅನುಮಾನದಿಂದಲೇ ರಾಗವೆಳೆದರು. ತಟ್ಟನೆ ಆ ಹುಡುಗ “ನಿಮ್ಮನೆ ಗೊತ್ತು ಸಾರ್ ನನಗೆ. ಒಂದು ಚೂರು ಈ ಕಡೆ ಕೆಲಸ ಇತ್ತು‍. ಅದನ್ನ ಮುಗಿಸಿಕೊಂಡು ಸೀದ ಹೊರಟುಬಿಡೋಣ” ಎಂದು ಇನ್ನೇನೇನೋ ಹೇಳತೊಡಗಿದ. ಬಸ್ಸೋ ಆಟೋನೋ ಸಿಕ್ಕಿ ಮನೆ ತಲುಪುವದಕ್ಕಿಂತ ಏನೆಂದರೂ ಇದು ಬೇಗ ಆಗುತ್ತದೆ ಎಂದು ಸುಮ್ಮನಾದರು.

ತೇಲುವಂತೆ ಅನಿಸುತ್ತಿತ್ತು. ಕಾರು ಹೆಚ್ಚೆಚ್ಚು ಜೋರಾಗಿ ಹೋಗುತ್ತಿದೆಯೇನೋ ಅಂತ ಅನಿಸಿದರೂ ಏನೂ ಹೇಳಲಿಲ್ಲ. ಈ ತೇಲುವುದು ಯಾಕೆ ಖುಷಿಕೊಡುತ್ತದೆ ಎಂದು ಮನಸ್ಸಲ್ಲಿ ಏನೇನೋ ವಿಚಾರಗಳ ಅಲೆಗಳೆದ್ದವು. ತೇಲುವಾಗ ಕಾಲಿನ ಹಂಗಿಲ್ಲ ಎಂತಲೇ ಇರಬೇಕು ಅಂದುಕೊಂಡರು. ಮರುಕ್ಷಣ ಅಲ್ಲ ಅಲ್ಲ ಹೆಜ್ಜೆಗುರುತು ಮೂಡಿಸುವ ಗೋಜೇ ಇಲ್ಲ ಅಂತಲೇ ಇರಬೇಕು ಅಂತ ಖಾತ್ರಿಯಾಯಿತು. ತೇಲು, ಕಾಲು, ಹೆಜ್ಜೆ, ಗೋಜು ಎಂದು ಮತ್ತೆ ಮತ್ತೆ ಹೇಳಿಕೊಳ್ಳಬೇಕನಿಸಿತು. ಅದೇ ಪದಗಳು ಹೊಸದಾಗಿ ಕಾಣತೊಡಗಿತು. ಎಷ್ಟು ಚೆನ್ನಾಗಿದೆಯಲ್ಲ ಎಂದು ಪದಗಳನ್ನು ಮತ್ತೆ ಮತ್ತೆ ಮುಟ್ಟಿ ನೋಡಿದರು. ಕೈಗೆತ್ತಿಕೊಂಡು ಆಡಿಸತೊಡಗಿದರು. ಅವುಗಳು ಕೈಯಲ್ಲಿ ಕಚಗುಳಿ ಕೊಡುವಂತೆ ಕುಣಿಯುತ್ತಾ ಜಾರುತ್ತಾ ಇದ್ದವು. ಇವರಿಗೂ ನಗು ಬಂದಿತು. ಅಷ್ಟರಲ್ಲಿ ‘ಹುಷಾರಾಗಿ ಹೋಗು ಅಷ್ಟೆ’ ಎಂದೇನೋ ಹೇಳಿದರೆಂದು ಕಾಣುತ್ತದೆ. ಡ್ರೈವ್ ಮಾಡುತ್ತಿದ್ದ ಹುಡುಗ ತಿರುಗಿ “ಸರಿ ಸಾರ್” ಎಂದು ತನ್ನ ಸಂಗಾತಿಯನ್ನು ನೋಡಿ ನಕ್ಕ. ಅವನೂ ಹಿಂದೆ ಬಗ್ಗಿ ಇವರನ್ನು ನೋಡಿ ನಕ್ಕ. ಆ ನಗುವಿನಲ್ಲಿ ಕೃತ್ರಿಮತೆ ಏನೂ ಅವರಿಗೆ ಕಾಣಲಿಲ್ಲ. ಅವರ ತೇಲುವ ಸುಖದಲ್ಲಿ ಅದು ಇದ್ದಿದ್ದರೂ ಕಾಣುವುದು ಸಾಧ್ಯವಿರಲಿಲ್ಲ. ಕಣ್ಣು ಮುಚ್ಚಿ ಕೂತರು.

ಕಣ್ಣು ಬಿಟ್ಟಾಗ ಕಾರಿನಲ್ಲಿ ಇವರ ಪಕ್ಕದಲ್ಲೆ ಇನ್ನೊಬ್ಬ ಹೊಸ ಹುಡುಗ ಇದ್ದ. ಸ್ವಲ್ಪ ಕುಳ್ಳಗೆ ಕಪ್ಪಗೆ ದಪ್ಪಗಿದ್ದ. ಅವನೂ ಮುಂಚಿನ ಇನ್ನಿಬ್ಬರಂತೆ ಹಚ್ಚಗೆ ನಕ್ಕ. ಇವರ ಕೈಹಿಡಿದು ಹಣೆಗೆ ಒತ್ತಿಕೊಂಡ. ನಿನ್ನ ಹೆಸರೇನು ಎಂದು ಕೇಳಬೇಕೆಂದು ಅನಿಸಿದರೂ, ಆ ಹುಡುಗನ ಬೆಚ್ಚಗಿನ ಕೈ ತನ್ನ ಕೈ ಮುಟ್ಟಿದ್ದೇ ತುಂಬಾ ಹಿತವಾಯಿತು. ತುಂಬಾ ಎಳೆಯ ಕೈಯದು. ದಪ್ಪಗೆ ಕುಳ್ಳಗಿದ್ದವನ ಕೈ ಒರಟಿರಬೇಕಾಗಿತ್ತಲ್ಲ ಎಂದು ಇವರಿಗೆ ಯಾಕೋ ಅನಿಸಿದ್ದು ಅದು ಹಾಗಿಲ್ಲದಾಗ ಅರಿವಿಗೆ ಬಂದಿತು. ಬಲವಾಗಿ ಹಿಡಿದುಕೊಳ್ಳದಿದ್ದರೂ, ಹಿಡಿತ ಬಿಡಿಸಿಕೊಳ್ಳಲಾಗದಂತೆ ಇದೆಯಲ್ಲ ಎಂದು ಅಚ್ಚರಿಪಟ್ಟರು. ಯಾಕೋ ತನ್ನ ಬಾಲ್ಯದ ಗೆಳೆಯ ಶಂಕರ ನೆನಪಾದ. ಮೊನ್ನೆ ಕೂಡ ಅವನೊಡನೆ ಮಾತಾಡಿದ್ದೆನ ಎಂದು ಕೇಳಿಕೊಂಡರು. ಅದು ಹೇಗೆ ಸಾಧ್ಯ ಎಂದು ಆ ಹುಡುಗ ನಕ್ಕಂತೆ ಅನಿಸಿತು. ಇವನಿಗೇನು ಗೊತ್ತು ಎಂಬಂತೆ ಮುನಿದುಕೊಂಡರು. ಶಂಕರನ ಅಮ್ಮ ಶುಭ್ರವಾದ ಮಾಸಿದ ಸೀರೆಯುಟ್ಟು ಸ್ಕೂಲಿನ ಗೇಟಿನ ಒಳಗೆ ಬರದೆ ನಿಲ್ಲುವುದು. ಅಲ್ಲಿಂದಲೇ ಪಿಯೂನ್ ಕರೆದು ಫೀಸ್ ಕಟ್ಟುತ್ತಿದ್ದುದ್ದು ಎಲ್ಲ ಮತ್ತೆ ನೋಡಿದರು. ಮತ್ತೆ ಎಂದಿನಂತೆ ಕಣ್ಣು ತೇವವಾಯಿತು, ಗಂಟಲಲ್ಲಿ ಗಂಟಿಕ್ಕಿಕೊಂಡಿತು. ಶಂಕರ ತನ್ನ ಬೆಚ್ಚಗಿನ ಕೈಯನ್ನು ಹೀಗೇ ಹಿಡಿದು ಮಾತಾಡುತ್ತಿದ್ದುದು. ಕ್ಷುಲ್ಲಕಗಳನ್ನು ಅತ್ಯಂತ ದಟ್ಟವಾಗಿ, ಹೊಳಪಿನಿಂದ ಹೇಳುತ್ತಾ ಕಣ್ಣಲ್ಲಿ ಕಣ್ಣಿಟ್ಟು ನಮ್ಮ ಗುಟ್ಟಿದು ಎನ್ನುವಂತೆ ನೋಡುತ್ತಿದ್ದ. ಶಂಕರನ ಕೈ ಮಾತ್ರ ಒರಟಾಗಿ ಇರುತ್ತಿತ್ತಲ್ಲ ಎಂದು ಈ ಹುಡುಗನ ಕೈ ನೋಡಿದರು. ಇವರ ಕಣ್ಣಿನ ತೇವ ನೋಡಿ ಅವನು “ಏನು ಸಾರ್ , ಕಣ್ಣಿಗೇನಾದರೂ ಧೂಳು ಬಿತ್ತ?” ಅಂತ ಕೇಳಿದಾಗ ತಾನು ಈ ಹುಡುಗರ ಜತೆ ಯಾವುದೋ ಬಿಲ್ಡಿಂಗಿನ ಒಳಗೆ ಲಿಫ್ಟಿನಲ್ಲಿರುವುದು ಅರಿವಿಗೆ ಬಂದಿತು.

ಲಿಫ್ಟ್ ಬಾಗಿಲು ತೆರೆದಾಗ ಹೊರಗೆ ಕಾಲಿಡಬೇಕೆಂದು ಇವರಿಗೆ ಅನಿಸಲೇ ಇಲ್ಲ. ಒಂದು ಕ್ಷಣ ಹುಡುಗರೂ ಕಾದರು. ಕೂಡಲೇ ಇವರ ನಿಧಾನಕ್ಕೆ ಅಸಹನೆಗೊಂಡಂತೆ ಒಬ್ಬ ಇವರನ್ನು ಮೆದುವಾಗಿ ಆದರೆ ಬಲವಾಗಿ ಬಾಗಿಲತ್ತ ತಳ್ಳಿದ. ತಟ್ಟಕ್ಕನೆ ತಾನಿವರ ಬಂಧಿ ಅಂತ ಅನಿಸಿ ಇವರು ಹೆಜ್ಜೆ ಇಡಲು ಹಿಂಜರಿದರು. ಆದರೆ, ಆ ಪುಟ್ಟ ದೇಹಕ್ಕೆ ಹಿಂದಿನಿಂದ ತಳ್ಳಿದ ಕೈ ಯಾಕೋ ತುಂಬಾ ದೊಡ್ಡದು ಅನಿಸಿತು. ಆ ಕೈಗಳ ಹಿಂದೆ ವಿಚಿತ್ರವಾದ ಶಕ್ತಿ ಇರುವಂತೆ. ಕ್ರೂರ ಮನಸ್ಸಿರುವಂತೆ ತನಗೆ ಯಾಕೆ ಅನಿಸುತ್ತಿದೆ ಎಂದು ಕೇಳಿಕೊಂಡರು. ಎಮರ್ಜನ್ಸಿಯ ದಿನಗಳಲ್ಲಿ ಒಂದು ವಾರ ಜೈಲಲ್ಲಿ ಕಳೆದಾಗ ನಗುತ್ತಿದ್ದ ಪೋಲೀಸ್ ಕೂಡ ಹೀಗೇ ಗಟ್ಟಿಯಾಗಿ ಹಿಡಿಯುತ್ತಿದ್ದ. ತನ್ನ ಪದ್ಯಗಳನ್ನು ಓದಿಲ್ಲದಿದ್ದರೂ ತಾನು ಕವಿ ಎಂದು ಆ ಪೋಲೀಸಿಗೆ ಗೊತ್ತಿತ್ತಂತೆ. “ಏನು ಮಾಡೋದು ಸಾರ್? ನಮಗಿದು ಇಷ್ಟಾನೇ? ಮೇಲಿಂದ ಆರ್ಡರ್ ಆಗಿದೆ” ಎಂದು ಪೆಚ್ಚುಪೆಚ್ಚಾಗಿ ನಗುತ್ತಿದ್ದ. ಆ ಪೇದೆಯ ಚೂಪು ಚೂಪು ತುಟಿಗಳ ಮೇಲೆ ಗೆರೆಯೆಳೆದಂತ ಮೀಸೆ ನೋಡಿ ಇವರಿಗೆ ನಗು ಬಂದಿತ್ತು. ಕ್ರೌರ್ಯ ಇದ್ದದ್ದು ಪೇದೆಯಲ್ಲಿ ಅಲ್ಲ ಅವನು ಕಾಪಾಡುತ್ತಿದ್ದ ಅವನ ಮೇಲಿನವರಲ್ಲಿ. ಅದಕ್ಕೇ ಅವನನ್ನು ನೋಡಿದರೆ ನಗು ಮತ್ತು ಹೆದರಿಕೆ ಎರಡೂ ಆಗುತ್ತಿತ್ತು.

ಕಾಲಿನಡಿಯ ನೆಲದ ನುಣುಪು ಅವರು ಹೆಜ್ಜೆಯನ್ನು ಬಲವಾಗಿ ಇಡುವಂತೆ ಮಾಡುತ್ತಿತ್ತು. ತಿರುಗಿ ನೋಡಿದರೆ ಹಿಂದೆ ಯಾರೂ ಇಲ್ಲ. ಮೂರೂ ಜನ ಹುಡುಗರು ಪಕ್ಕದಲ್ಲಿದ್ದಾರೆ. ಒಬ್ಬನ ಕೈ ಮಾತ್ರ ತಮ್ಮ ಬೆನ್ನಿಗಿದೆ. ಲಿಫ್ಟಿನಲ್ಲಿ ಮುಂದಕ್ಕೆ ಹೋಗಲು ಬಲವಾಗಿ ಒತ್ತಾಯಿಸುತ್ತಿದ್ದ ಕೈಯದು ಈಗ ನಾಜೂಕಾಗಿ ಸವರುತ್ತಿದೆ. ಆದರೆ ಸುತ್ತ ಕಂಪ್ಯೂಟರುಗಳಿರುವ ರೂಮಿನಲ್ಲಿ ನಿಂತಿದ್ದೇನೆ ಎಂದು ಗೊತ್ತಾಗಿ ಅತೀವ ಗೊಂದಲವಾಯಿತು. ತನ್ನ ಪುಟ್ಟ ಮನೆಯ ಬಾಗಿಲ ಪಕ್ಕದ ಕಿಟಕಿಯಲ್ಲಿ ಹೆಂಡತಿ ಹೊರಗೆ ನೋಡುತ್ತಾ ನಿಂತಿರುವುದು ಚಿತ್ರದಂತೆ ಕಂಡಿತು. ಅನ್ನ ಬಡಿಸಿಟ್ಟ ತಟ್ಟೆ ಕಂಡಿತು. ಮನೆಗೆ ಹೋಗಬೇಕು ಅನಿಸುತ್ತಿರುವುದು ಇಲ್ಲಿ ತಾನು ಬಂಧಿ ಎಂಬ ಭಾವದಿಂದಲೇ ಇರಬೇಕು ಅನಿಸಿತು. ಈ ಪುಟ್ಟ ಹುಡುಗರು ತನಗೇನು ಮಾಡಬಲ್ಲರು ಎಂದುಕೊಳ್ಳುವಾಗಲೇ ಅವರ ಸ್ವಚ್ಛ ನಗುಗಳ ನೆನಪು ಯಾಕೋ ಇವರನ್ನು ನಡುಗಿಸಿತು. ಅಂತಹ ಸ್ವಚ್ಛ ನಗು ಹೊಮ್ಮಿಸಲು ಅವರ ಮನಸ್ಸೂ ಅಷ್ಟೇ ಸ್ವಚ್ಛವಾಗಿರಬೇಕಲ್ಲವೆ. ಅದು ಸಾಧ್ಯವೆ? ಇಲ್ಲದಿದ್ದರೆ ಇದು ತೋರಿಕೆಯ ನಗುವಿರಬಹುದೇ? ಅಷ್ಟೊಂದು ಸ್ವಚ್ಛವಾಗಿ ತೋರಿಕೆಗಾಗಿ ನಗಲು ಸಾಧ್ಯವೆ? ಹೌದಾದರೆ ಈ ಪುಟ್ಟವರೆಷ್ಟು ಅಪಾಯಕಾರಿಗಳು. ಏನೇ ಆಗಲಿ ತನಗೆ ಇಲ್ಲೇನು ಕೆಲಸ ಎಂದು ಅವರತ್ತ ನೋಡಿದರು. ಚಿನಕುರಳಿಯಂತೆ ಓಡಾಡುವ, ಬಾಬ್ಕಟ್, ಪ್ಯಾಂಟು ಶರ್ಟಿನ ಹುಡುಗಿಯೊಬ್ಬಳು ಅಲ್ಲಿದ್ದ ಕಂಪ್ಯೂಟರ್ ಪರದೆ ಒಂದೊಂದಾಗಿ ಹೊತ್ತಿಸುತ್ತಿದ್ದಳು. ರೂಮಿನಲ್ಲಿ ಅಷ್ಟೇನೂ ಬೆಳಕಿರಲಿಲ್ಲ. ಸಂಜೆಗತ್ತಲಲ್ಲಿ ಮನೆಯ ಎದುರು ದೀಪ ಹೊತ್ತಿಸುವಂತೆ ಇವರಿಗೆ ಕಂಡಿತು. ಇವಳು ಎಲ್ಲಿಂದ ಬಂದಳು? ಯಾವಾಗ ಬಂದಳು? ಬೇಕಂತಲೇ ತನಗೆ ಮುಖ ತೋರಿಸುತ್ತಿಲ್ಲವಲ್ಲ ಎಂದು ಇವರಿಗೆ ಕಸಿವಿಸಿಯಾಯಿತು. ಏನೋ ಕೇಳಬೇಕೆಂಬಷ್ಟರಲ್ಲಿ ಮೊದಲು ಸಿಕ್ಕ ಹುಡುಗನೂ ಹೋಗಿ ಒಂದು ಕಂಪ್ಯೂಟರ್ ಮುಂದೆ ಕೂತ. ಕಾರು ಡ್ರೈವ್ ಮಾಡಿದವ ಮತ್ತು ಕಪ್ಪಗೆ ಕುಳ್ಳಗಿನವ ದೂರದಲ್ಲಿ ಪಿಸಿಪಿಸಿ ಮಾತಾಡುತ್ತಿದ್ದರು. ಆ ಕುಳ್ಳಹುಡುಗ ಇವರತ್ತ ನೋಡಿ ಹತ್ತಿರ ಬಂದು ಪಕ್ಕದಲ್ಲಿದ್ದ ಚೇರು ಸರಿಸಿ “ಕೂತ್ಕೊಳ್ಳಿ ಸಾರ್” ಎಂದು ಬಂದಷ್ಟೇ ವೇಗವಾಗಿ ವಾಪಸಾದ. ಅವರೆಲ್ಲಾ ಏನೋ ಕೇಳಲು ತಯಾರಿ ಮಾಡಿಕೊಳ್ಳುತ್ತಿರುವಂತಿತ್ತು. ಆ ಬಾಬ್ಕಟ್ ಹುಡುಗಿ ಕೂಡ ಕಂಪ್ಯೂಟರ್‍ ಮುಂದೆ ಇವರಿಗೆ ಬೆನ್ನು ಹಾಕಿ ಕೂತು ಏನೋ ವೇಗವಾಗಿ ಕುಟ್ಟುತ್ತಿದ್ದಳು.

ಇವರೆಲ್ಲಾ ಎಷ್ಟು ಗಂಭೀರವಾಗಿ, ಎಷ್ಟು ನಿಚ್ಚಳ ಮನಸ್ಸಿನವರ ಹಾಗೆ ಕಾಣುತ್ತಾರಲ್ಲ ಎಂದು ಇವರಿಗೆ ಆಶ್ಚರ್ಯವಾಯಿತು. ಆ ವಯಸ್ಸೇ ಅಂಥಾದ್ದು. ಎಲ್ಲವೂ ಸ್ಪಷ್ಟ. ಗೊಂದಲ ಕಡಿಮೆ. ನಿಜವಾದ ಗೊಂದಲ ಹುಟ್ಟಲು, ತುಳಿದ ದಾರಿಯ ಬಗ್ಗೆ ಅನುಮಾನ ಬರಲು ಇನ್ನೊಂದೈದು ಹತ್ತು ವರ್ಷ ಹೋಗಬೇಕು ಅನಿಸಿ ತಟ್ಟನೆ ನಾಚಿಕೆಯೂ ಆಯಿತು. ತಾನೇನು ಇವರಿಗೆ ಶಾಪ ಹಾಕುವಂತೆ ಯೋಚಿಸುತ್ತಿದ್ದೇನೆ. ಬಹುಶಃ ಇವರಿಗೆ ಗೊಂದಲವೇ ಬರದಿರಬಹುದು. ಎಲ್ಲವೂ ಕೊನೆಯವರೆಗೂ ಸ್ಪಷ್ಟವಾಗಿಯೇ ಉಳಿಯಬಹುದು. ಹೀಗೆಲ್ಲಾ ಅನಿಸುತ್ತಿರುವಾಗ “ಯಾರಿಗೆ ಗೊತ್ತು?” ಎಂದು ಮಾತ್ರ ಜೋರಾಗಿ ಹೇಳಿದರೆಂದು ಕಾಣುತ್ತದೆ. ಮೂಲೆಯಲ್ಲಿದ್ದ ಹುಡುಗರ ಜತೆಗೆ ಮೊದಲು ಸಿಕ್ಕವ ಮತ್ತು ಹುಡುಗಿ ಇವರತ್ತ ಒಟ್ಟಿಗೇ ತಿರುಗಿದರು. ಮೂಲೆಯ ಹುಡುಗರು ಹತ್ತಿರ ಬಂದು “ಏನಿಲ್ಲ ಸರ್. ನಿಮ್ಮ ಪದ್ಯಗಳನ್ನೆಲ್ಲಾ ಕಂಪ್ಯೂಟರೈಸ್ ಮಾಡೋಣ ಅಂತ ಯೋಚನೆ. ಅದಕ್ಕೆ ನಿಮ್ಮ ಅನುಮತಿ ಬೇಕು” ಅಂದು ಇವರನ್ನೇ ನೋಡುತ್ತಾ ನಿಂತರು. ಹಾಗೆ ಮಾಡಿದರೆ ಏನಾಗತ್ತೆ ಎಂದು ಕೇಳಬೇಕು ಅಂತ ಅಂದುಕೊಳ್ಳುವಾಗಲೇ ಆ ಹುಡುಗಿ “ಆವಾಗ ಇಂಟರ್ನೆಟ್ಟಿನಲ್ಲಿ ಎಲ್ಲರೂ ನಿಮ್ಮ ಪದ್ಯ ಓದಬಹುದು ಸರ್” ಎಂದಳು. ಅವಳ ಮುಖವನ್ನೇ ನೋಡಿದರು. ಆ ಮುಖದಲ್ಲಿನ ದಿಟ್ಟತನಕ್ಕೇ ಇವರು ಮಾರು ಹೋದರು. “ನೀನು ನನ್ನ ಪ್ರೇಯಸಿಯಾಗುತ್ತೀಯ?” ಎಂದು ಕೇಳಬೇಕು ಎಂಬ ತುಂಟ ಯೋಚನೆ ತಲೆಯಲ್ಲಿ ಮೂಡಿ ತುಟಿಯಲ್ಲಿ ಅಷ್ಟೇ ತುಂಟ ನಗುವೊಂದನ್ನು ಮಿಂಚಿಸಿತು. ಎಷ್ಟು ಚಿಕ್ಕವಳು ಇವಳು, ನನ್ನ ಪ್ರೇಯಸಿ ಹೇಗಾದಾಳು. ಈ ಹುಡುಗರಲ್ಲೇ ಇವಳಿಗೆ ಯಾರ ಮೇಲೋ ಮನಸ್ಸಿರಬಹುದು. ಯಾರು ಇವಳಿಗೆ ಸರಿಹೋಗುತ್ತಾರೆ ಎಂದು ಮೂರೂ ಹುಡುಗರನ್ನು ನೋಡಿದರು. ಮೊದಲು ಸಿಕ್ಕ ಹುಡುಗ ಇವರ ನಗು ಗಮನಿಸಿ “ಏನೋ ಹುಚ್ಚು ವಿಚಾರ ಅಂತ ನಗಬೇಡಿ ಸರ್. ತುಂಬಾ ಜನ ಕವಿಗಳ ಪದ್ಯಗಳನ್ನು ಈಗಾಗಲೇ ಕಂಪ್ಯೂಟರೈಸ್ ಮಾಡಿಬಿಟ್ಟಿದ್ದೀವಿ. ನೀವು ಕೈಗೇ ಸಿಗದೆ ಕಷ್ಟ ಆಗಿತ್ತು.” ಎಂದು ಏನೋ ಒತ್ತಾಯಿಸುವವನ ಧಾಟಿಯಲ್ಲಿ ಹೇಳಿದ. ಇವರ ತಲೆಯಲ್ಲಿ ಮೂಡಿದ ಹುಚ್ಚು ವಿಚಾರವನ್ನು ಹೇಳುವ ಧೈರ್ಯ ಎಂದಿನಂತೆ ಇರಲಿಲ್ಲ. ಆ ಹುಡುಗಿಗೆ ಏನಾದರೂ ಅರ್ಥವಾಯಿತ ಎಂದು ಅನುಮಾನವಾಯಿತು. ಯಾಕೆಂದರೆ ಅವಳ ಮುಖ ಕೊಂಚವೇ ರಂಗೇರಿ ತಲೆ ಕೆಳಗೆ ಹಾಕಿದಳು. ಕೂಡಲೇ ಸಾವರಿಸಿಕೊಂಡು ತಲೆಯೆತ್ತಿ ಇವರನ್ನೇ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು. ಈಗ ನಾಚಿ ತಲೆ ತಗ್ಗಿಸುವ ಸರದಿ ಇವರದಾಯಿತು.

ಅಷ್ಟರಲ್ಲಿ ಕುಳ್ಳುಹುಡುಗ ಹತ್ತಿರ ಬಂದ. “ಒಂದು ದೊಡ್ಡ ಕಂಪನಿ ನಮ್ಮನ್ನ ಈ ಕೆಲಸಕ್ಕೆ ಹಚ್ಚಿದೆ. ನಿಮಗೆ ಇಲ್ಲೀ ತನಕ ಯಾರೂ ಕೊಟ್ಟಿರದಷ್ಟು ದುಡ್ಡು ಕೊಡತೀವಿ. ಸಾಲಿಗಿಷ್ಟು ಅಂತ ಬೇಕೋ, ಪದ್ಯಕ್ಕೆ ಇಷ್ಟೂ ಅಂತ ಬೇಕೋ, ಪೇಜಿಗೆ ಇಷ್ಟೂ ಅಂತ ಬೇಕೋ ನೀವೇ ಹೇಳಿ. ಅಥವಾ ಒಟ್ಟಾರೆ ಇಷ್ಟೂ ಅಂತ ಕೊಟ್ಟುಬಿಡಿ ಅಂದರೆ ಅದೂ ಸರಿ. ಏನು ಬೇಕಾದರೂ ಡೀಲ್ ಮಾಡಬಹುದು. ಆದರೆ ಈವತ್ತು ನಿಮ್ಮ ಪದ್ಯದ ಕೆಲಸ ಶುರು ಮಾಡಲೇಬೇಕು.” ಅಂದ. ಅವನ ಮಾತಲ್ಲೇನೂ ನೇರವಾಗಿ ಕಠಿಣತೆ ಇಲ್ಲದಿದ್ದರೂ ಅವನು ಹೇಳ್ತಿರೋದನ್ನ ಅರಗಿಸಿಕೊಳ್ಳೋದು ಇವರಿಗೆ ಕಠಿಣವೇ ಆಯ್ತು. ಇವರು ಬರೆದಿರುವುದೇ ಕಡಿಮೆ. ಆದರೆ ಬರೆದದನ್ನ ಕನ್ನಡ ಸಾಹಿತ್ಯದಲ್ಲಿ ಮೈಲಿಗಲ್ಲು ಅಂತ ಕರೆದಿದ್ದಾರೆ. ಅದರ ಬಗ್ಗೆ ಇವರಿಗೆ ಹೆಮ್ಮೆನೂ ಇದೆ. ಜತೆಗೆ ಅನುಮಾನಾನೂ ಇದೆ. ತನ್ನ ಪದ್ಯಾನ ತನ್ನದೂ ಅಂತ ಹೇಳಿಕೊಳ್ಳೋದೇ ಕಷ್ಟ ಆಗಿರೋವಾಗ. ಯಾರದೋ ಸಾಲು ನನ್ನ ತಲೇನಲ್ಲಿ ಇನ್ನೇನೋ ಆಗುವಾಗ. ಯಾರದೋ ಬದುಕಿನ ವಿವರ ನನಗೆ ಸಾಮಗ್ರಿಯಾಗಿರುವಾಗ. ಯಾರದೋ ನಗು, ಯಾರದೋ ಅಳು. ಎಲ್ಲ ತುಂಬಿರೋ ಪದ್ಯ ಮಾತ್ರ ನನ್ನದು ಅನ್ನೋದು ಹೇಗೆ. ಇವೆಲ್ಲಾ ಬಲೇ ಗೋಜಲು. ವಯಸ್ಸು ಆದ ಹಾಗೆ ಈ ಗೋಜಲೆಲ್ಲಾ ಕಡಿಮೆಯಾಗತ್ತೆ ಅನ್ನೋದು ಮಹಾ ಬೂಟಾಟಿಕೆ. “ಥತ್ ಇನ್ನು ಮೇಲಾದರೂ ನಾನೇನೂ ಬರದೇ ಇಲ್ಲ ಅಂದುಬಿಡಬೇಕು” ಅಂತ ಹತ್ತಾರು ಸಲ ಈ ಮುಂಚೇನೆ ಹೇಳಿಕೊಂಡಿದ್ದಾರೆ. ಅದಕ್ಕೂ ಧೈರ್ಯ ಬೇಕಲ್ಲ.

ಇವರು ತಮ್ಮ ಬಗ್ಗೆ ಅನುಮಾನಪಡುತ್ತಿದ್ದಾರೆ ಅಂತ ಡ್ರೈವ್ ಮಾಡಿದ ಹುಡುಗನಿಗೆ ಅನಿಸಿರಬೇಕು. ಹತ್ತಿರ ಬಂದು ಕೂತ. ಅವರ ಕೈಹಿಡಿದು “ಸಾರ್, ನಿಮಗಿಂತ ನಾನು ತುಂಬಾ ಚಿಕ್ಕವನು. ನೀವು ಹಿರಿಯರು, ಅನುಭವಸ್ತರು. ನಿಮಗೆ ನಾನು ಏನು ಹೇಳೋದಿದೆ. ಆದರೂ ಹೇಳ್ತಿದೀನಿ. ಯಾಕೆ ಅಂದರೆ, ಇದು ಈ ಕಾಲದ ಸಮಾಚಾರ ಅದಕ್ಕೆ. ನಿಮ್ಮ ಕಾಲವೇ ಬೇರೆ, ನಮ್ಮ ಕಾಲವೇ ಬೇರೆ”. ಇವರಿಗೆ ಅವನ ಕಪಾಳಕ್ಕೆ ಒಂದು ಬಾರಿಸದರೆ ಹ್ಯಾಗೆ ಅನಿಸಿತು. ಆಡದ ಮಾತು, ಮಾಡದ ಕೆಲಸ ಯಾರಿಗೆ ಗೊತ್ತಾಗಬೇಕು. ಹುಡುಗ ಮುಂದುವರಿಸಿದ “ನೋಡಿ ಸಾರ್. ನಾವು ಇದನ್ನೆಲ್ಲಾ ಮಾಡ್ತಾ ಇರೋದು ಕನ್ನಡದ ಮೇಲಿನ ಪ್ರೀತಿಯಿಂದ. ನಮ್ಮ ಭಾಷೆ, ಸಾಹಿತ್ಯದ ಮೇಲಿನ ಮಮತೆಯಿಂದ. ಬೇರೆ ಏನಾದರೂ ಕೆಲಸದಲ್ಲಿ ಇಷ್ಟೇ ಆಸ್ಥೆ ವಹಿಸಿದರೆ ಇಷ್ಟೊತ್ತಿಗೆ ನಾವು ಕೋಟ್ಯಾಂತರ ಮಾಡಬಹುದಾಗಿತ್ತು. ಅವಕಾಶಗಳು ಇದ್ದಾಗಲೂ…” ಅವನ ಕಿವಿಯನ್ನು ಜೋರಾಗಿ ಹಿಂಡಿ ಅಲ್ಲಿಂದ ಎದ್ದು ಹೋಗಿಬಿಡೋಣ ಅನಿಸಿತು. ಆದರೆ ಮಾಡಲಿಲ್ಲ. ಯಾಕೆಂದು ಅವರಿಗೇ ಗೊತ್ತಿಲ್ಲ. ಯಾತಕ್ಕಾಗಿ ನಾನಿಲ್ಲಿ ಕೂತಿದ್ದೀನಿ ಅಂತ ಕೇಳಿಕೊಂಡರು. ನಿಮಗಿರೋ ಅಷ್ಟು ದಿಟ್ಟತೆ ನನಗಿಲ್ಲ ಕಣ್ರೋ. ಆದರೆ ಅದು ಮುಖ್ಯ ಅಲ್ಲ. ಹಾಗಂತ ನನ್ನ ಪದ್ಯಾನೂ ಮುಖ್ಯ ಅಲ್ಲ. ಅಂತೆಲ್ಲಾ ಉದ್ದಕ್ಕೆ ಹೇಳಬೇಕು ಅಂತ ಉಸಿರೆಳೆದುಕೊಂಡರು. ಆದರೆ ಅಷ್ಟರಲ್ಲಿ ಆ ಹುಡುಗನನ್ನು ಪಕ್ಕಕ್ಕೆ ಸರಿಸಿ, ಬಾಬ್ಕಟ್ ಹುಡುಗಿ ಬಂದು ಪಕ್ಕದಲ್ಲೇ ಕೂತಳು. ಮಲ್ಲಿಗೆಯ ಪರಿಮಳ ತಟ್ಟನೆ ಮೂಗಿಗೆ ಅಡರಿತು. ಹುಡುಗಿ ಮಲ್ಲಿಗೆ ಮುಡಿದಿಲ್ಲ. ಆದರೂ ಪರಿಮಳ! ಎಲ್ಲಿಯದು? ಇದು ಬರೀ ತನ್ನ ತಲೆಯಲ್ಲೋ? ಹುಡುಗಿ ಹಚ್ಚಿಕೊಂಡ ಪರ್ಫ್ಯೂಮ್ ಇಷ್ಟೆಲ್ಲಾ ತಲೆ ಕೆಡಿಸುವ ವಯಸ್ಸಲ್ಲ ಇವರದು. ಆದರೆ ನೆನಪಿಗೆ, ನೆನಪು ಹುಟ್ಟಿಸುವ ಮೈ ಶಾಖಕ್ಕೆ ಎಲ್ಲಿಯ ವಯಸ್ಸು?

ಆ ಹುಡುಗಿ “ಅಂಕಲ್, ನೀವು ನಮ್ಮ ತಂದೆಯ ತಂದೆ ವಯಸ್ಸಿನವರು. ಆದರೆ ಅವರಿಗಿಂತ ಹೆಚ್ಚು ಪ್ರತಿಭಾವಂತರು. ನಿಮ್ಮ ಪದ್ಯಗಳು ಮುಂದಿನ ತಲೆಮಾರಿಗೆ ಸಿಕ್ಕದೆ ಕಳೆದು ಹೋದರೆ ತುಂಬಾ ನಷ್ಟ ತಾನೆ? ಮುಂದಿನ ಪೀಳಿಗೆಯವರಿಗೆ ನಮ್ಮ ಆಸ್ತಿಯಾದ ನಿಮ್ಮ ಪದ್ಯಗಳನ್ನು ಉಳಿಸಬೇಕಂತ ನಾವು ಇಷ್ಟೆಲ್ಲಾ ಪರದಾಡತಾ ಇರೋದು. ಯಾಕೆಂದರೆ, ನಿಮ್ಮ ಕಾಲದ ನಂತರ…” ಆ ಮಾತು ಕೇಳಿದ್ದೇ ಇವರಿಗೆ ತಟ್ಟನೆ ಕೋಪ ಉಕ್ಕಿಬಂತು. ಅವಳ ಕಪಾಳಕ್ಕೆ ಒಂದು ಹೊಡೆದೇ ಬಿಟ್ಟರು. ಕುರ್ಚಿಯಿಂದ ಬೀಳುವಂತಾದ ಅವಳನ್ನು ಹಿಡಿಯಲು ಉಳಿದ ಹುಡುಗರು ಸಹಾಯಕ್ಕೆ ನುಗ್ಗಿದರು. ಮೊದಲು ಕಾರಿಗೆ ಹತ್ತಿಸಿದ ಹುಡುಗ “ನಿಮ್ಮನ್ನ ಏನೋ ಅನ್ಕೊಂಡಿದ್ವಿ ಸಾರ್! ಹುಡುಗಿ ಮೇಲೆ ಕೈಮಾಡೋ ಅಷ್ಟು ನೀಚರು ಅಂತ ಗೊತ್ತಿರಲಿಲ್ಲ” ಎಂದು ಹೇಳುವಾಗ ಉಳಿದಿಬ್ಬರು ಅವಳನ್ನು ಹೊರಗೆ ಕರಕೊಂಡು ಹೋದರು. ಏನೇನೋ ಬಡಬಡಿಸಿ ಈ ಹುಡುಗನೂ ಅವರ ಹಿಂದ ಧಡಾರನೆ ಬಾಗಿಲು ಹಾಕಿಕೊಂಡು ಹೋದ. ಇವರೊಬ್ಬರೇ ರೂಮಿನಲ್ಲಿ. ಮೆಲ್ಲನೆ ಬಾಗಿಲತ್ತ ಹೋಗಿ ತೆರೆಯಲು ನೋಡಿದರು. ಆಗಲಿಲ್ಲ. “ತಪ್ಪಾಯಿತು” ಎಂದು ಪಿಸುಗುಡುವಂತೆ ಹೇಳಿದರು. ಅದು ಹೇಗೆ ಅಷ್ಟು ಸುಲಭವಾಗಿ ಹುಡುಗಿಯ ಮೇಲೆ ಕೈಯೆತ್ತಿಬಿಟ್ಟೆ ಎಂದು ನಾಚಿಕೆಯಾಯಿತು. ಹುಡುಗರ ಮುಂದೆ ಕುನ್ನಿಯಂತೆ ಇದ್ದವನಿಗೆ ಆ ಹುಡುಗಿಯ ಮುಂದೆ ಮಾತ್ರ ಹೇಗೆ ಧೈರ್ಯವಾಯಿತು. ಇದೆಂತ ಗಂಡಸುತನ ತನ್ನದು ಅಂತೆಲ್ಲಾ ಪೇಚಾಡಿಕೊಂಡು ಬಾಗಿಲಿಗೆ ಒರಗಿ ನಿಂತರು. ಹೊರಗೆ ಅತ್ತಿತ್ತ ಓಡಾಡುವ ಬೂಟಿನ, ಚಪ್ಪಲಿಯ ಸಪ್ಪಳಕ್ಕೆ ಕಿವಿಗೊಟ್ಟರು. ಸುಸ್ತಾದರೂ ಯಾಕೋ ತಾವು ಬಂಧಿ ಅನ್ನುವ ವಿಚಾರ ಹೆದರಿಸುವ ಬದಲು ಒಳಗಿಂದಲೇ ಶಕ್ತಿ ಕೊಡಲು ಶುರ ಮಾಡಿತು.

ಬಾಗಿಲು ಎಷ್ಟು ಜಗ್ಗಿದರೂ ತೆರೆಯದಾಗ, “ಯಾರಾದರೂ ಇದ್ದೀರ?” ಎಂದು ಕೂಗಿದಾಗಲೂ ಯಾರೂ ಓಗೊಡದಾಗ ತಮ್ಮ ಬಂಧನ ಖಾತ್ರಿಯಾಯಿತು. ಅಂದರೆ ಇನ್ನು ಉಳಿದಿರುವುದು ಇಲ್ಲಿಂದ ತಪ್ಪಿಸಿಕೊಳ್ಳುವ ಬಗೆಯನ್ನು ಹುಡುಕುವುದು. ಎಲ್ಲಾ ಬಂಧನದ ಕತೆಗಳಲ್ಲೂ ಹೀಗೇ ಅಲ್ಲವೆ ಆಗೋದು. ಪದ್ಯಗಳಲ್ಲಿ ಮಾತ್ರ, ಬಂಧನ ಮತ್ತು ವಿಮೋಚನೆ ಒಂದಾದ ಮೇಲೆ ಒಂದು ಬರುವುದಿಲ್ಲ. ಅಥವಾ ಬಂಧನದ ನಂತರ ವಿಮೋಚನೆಯೂ ಇಲ್ಲ. ಎರಡೂ ಒಟ್ಟಿಗೆ ಅಥವಾ ವಿಮೋಚನೆಯ ನಂತರದ ಬಂಧನ. ಹೀಗೇ ಕಿಂಚಿತ್ತೂ ಲಾಭವಿಲ್ಲದ ವಿಷಯಗಳನ್ನೇ ಯೋಚಿಸುತ್ತಾ ಹೊರಗೆ ಏನೂ ಕಾಣದ ಕಿಟಕಿಯ ಬಳಿ ಸುಮಾರು ಹೊತ್ತು ನಿಂತಿದ್ದರು. ಯಾರೋ ಬೆನ್ನು ತಟ್ಟಿದರು. ತಿರುಗಿ ನೋಡಿದರೆ. ತಮ್ಮನ್ನು ಕೂಡಿಹಾಕಿದ ನಾಲ್ಕೂ ಜನ ನಿಂತಿದ್ದರು. ಏನೂ ಆಗದವರಂತೆ ಇವರನ್ನೇ ನೋಡುತ್ತಿದ್ದಾರೆ. ಆ ಹುಡುಗಿಯೂ ಕೂಡ! ಇವರು ಅಗಲವಾಗಿ ನಕ್ಕರು. ಅಲ್ಲಿಂದ ತಪ್ಪಿಸಿಕೊಳ್ಳಲು ಇರುವುದು ಅದೊಂದೇ ದಾರಿ ಎಂಬುದು ಅವರ ತಲೆಯಲ್ಲಿ ಹೊಕ್ಕಿರುವಂತಿತ್ತು. ಆದರೆ, ಹುಡುಗರೂ ನಗುತ್ತಾ ಹತ್ತಿರ ಬಂದು ಒಂದು ಟೇಬಲ್ಲಿನ ಎದುರು ಕೂಡಿಸಿದರು. ಏನೋ ಎಲ್ಲಾ ನಿರ್ಧಾರವಾಗಿ ಹೋಗಿದೆ ಅನ್ನುವಂತೆ ಇವರೂ ಮತ್ತು ಆ ಹುಡುಗರೂ ಒಪ್ಪಿಕೊಂಡಂತೆ ಇತ್ತು. ಇದು ಹೇಗಾಯಿತು ಎಂದು ಯಾರೂ ಪ್ರಶ್ನಿಸುವ ಯೋಚನೆ ಮಾಡಲಿಲ್ಲ. ಇವರು ನಿರಾಳದಿಂದ ತಮ್ಮ ಮುಂದಿನ ನುಣುಪಾದ ಟೇಬಲ್ಲಿನ ಮೇಲೆ ಕೈ ಚಾಚಿ ಅಗಲಕ್ಕೂ ಸವರಿದರು. ತುಂಬಾ ಸುಖವಾಯಿತು. ಆದರೆ ತಮ್ಮ ಸುಖವನ್ನು ಜೋರಾಗಿ ಜಗತ್ತಿಗೆ ಸಾರುವಂತೆ ಕೈ ಸವರಿದ ಸದ್ದು ಹತ್ತುಪಟ್ಟಾಗಿ ಕೇಳಿತು. ತಮಗೆ ಹೀಗೇಕೆ ಆಗುತ್ತಿದೆ ಎಂದುಕೊಳ್ಳುವಷ್ಟರಲ್ಲಿ “ಸಾರ್ ಹುಷಾರು” ಅನ್ನುತ್ತಾ ಅವರ ಎದುರಿದ್ದ ಮೈಕನ್ನು ಕಾರು ಹತ್ತಿಸಿದ ಹುಡುಗ ಸ್ವಲ್ಪ ಹಿಂದಕ್ಕಿಟ್ಟ.

ಕಿವಿಗೆ ದೊಡ್ಡ ಹೆಡ್‌ಪೋನ್ ಹಾಕಿಕೊಂಡು ಪಕ್ಕದಲ್ಲೇ ಇದ್ದ ಕಂಪ್ಯೂಟರ್ ಮುಂದೆ ಕೂತಿದ್ದ ಹುಡುಗಿ ಎಲ್ಲರಿಗೂ ಸುಮ್ಮನಿರುವಂತೆ ಬಾಯಿಗೆ ಬೆಟ್ಟಿಟ್ಟು, ಕಂಪ್ಯೂಟರ್ ಕೀ ಒತ್ತಿ ನಂತರ ತಂಬ್ಸ್ ಅಪ್ ಮಾಡಿದಳು. ಎಲ್ಲರೂ ಇವರತ್ತ ನೋಡಿದರು. ಇವರಿಗೆ ಏನು ಮಾಡಬೇಕೆಂದು ಯಾರೂ ಹೇಳೇ ಇರಲಿಲ್ಲ. ಕುಳ್ಳುಹುಡುಗ ಮೈಕ್ ತೋರಿಸಿ ಅದರಲ್ಲಿ ಹೇಳಿ ಅನ್ನುವಂತೆ ಸನ್ನೆ ಮಾಡಿದ. ಇವರು ಮೈಕಿನತ್ತ ನೋಡಿದರು. ಜೋರಾಗಿ ಗಂಟಲು ಸರಿ ಮಾಡಿಕೊಂಡರು. ಹುಡುಗಿ ಒಮ್ಮೆ ಮುಖ ಕಿವುಚಿದಳು. ಎಲ್ಲರೂ ಅವಳತ್ತ ನೋಡಿ ಸಣ್ಣಗೆ ನಕ್ಕರು. ಇವರು ತಮಗೆ ಏನು ಮಾಡಬೇಕು ಏನು ಹೇಳಬೇಕು ಎಂದು ಗೊತ್ತಿದೆ ಅನ್ನುವಂತೆ ಸ್ವಲ್ಪ ಮುಂದಕ್ಕೆ ಬಾಗಿ ಮೈಕಿಗೆ ಹತ್ತಿರವಾದರು. ಇವರ ತಲೆಯಲ್ಲಿ ಹತ್ತು ಹಲವಾರು ವಿಚಾರಗಳು ಹಾದು ಹೋದಂತಿತ್ತು. ಯಾವುದೂ ಮಾತಾಗಲು ಒಪ್ಪುತ್ತಿಲ್ಲವೆನ್ನುವಂತಿತ್ತು. ಪದ್ಯ, ಬದುಕು, ಪ್ರೇಯಸಿ, ಶಾಲೆಯ ಶಂಕರ. ಅವನ ಒರಟು ಕೈ, ಗೇಟಾಚೆ ನಿಂತ ಅವನ ಅಮ್ಮ, ಎಮರ್ಜನ್ಸಿಯ ಪೇದೆಯ ಮೀಸೆ, ಕಿಟಕಿಯೆದುರು ನಿಂತ ಹೆಂಡತಿ, ಆಕೆಯಿಟ್ಟ ಊಟದ ತಟ್ಟೆ ಯಾವುದೂ ಮಾತಿನಲ್ಲಿ ಘನವಾಗುತ್ತಿಲ್ಲ ಎಂದು ಆತಂಕಗೊಂಡಂತಿತ್ತು. ಹೇಗೆ ಇದನ್ನೆಲ್ಲಾ ಹೇಳೋದು? ಹೇಳಿದರೂ ಈ ಹುಡುಗರಿಗೆ ಅದು ಮುಖ್ಯ ಅನಿಸಲು ಹೇಗೆ ಸಾಧ್ಯ? ಆ ಹುಡುಗರಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯ ಮುಖ್ಯವಂತೆ. ಅದನ್ನು ಮುಂದಿನ ತಲೆಮಾರಿಗೆ ತಲುಪಿಸುವುದು ಮುಖ್ಯವಂತೆ. ಇವರಿಗೋ ತಮ್ಮ ಬದುಕನ್ನು ಒಂದು ಹನಿಯೂ ಬಿಡದ ಹಾಗೆ ಹೀರುವುದು, ಹೀರುವಾಗಿನ ಆನಂದವನ್ನು ಹೇಳುವುದು, ಅಷ್ಟೆ. ನಾವೆಲ್ಲಾ ಒಂದೇ ರೂಮಿನಲ್ಲಿದ್ದರೂ ಇವೆಲ್ಲಾ ಅಜಗಜಾಂತರವಾಯಿತಲ್ಲ ಎಂದು ಸುಮ್ಮನೆ ಕಣ್ಣುಮುಚ್ಚಿ ಕೂತರು. ಇವರು ಗಹನವಾದ್ದು ಹೇಳಲು ಶುರುಮಾಡುತ್ತಾರೆ ಎಂದು ಆ ಹುಡುಗರು ಕಾದೇ ಕಾದರು. ಗಂಟೆಗಳೇ ಕಳೆದಿರಬಹುದು. ಒಬ್ಬರನ್ನೊಬ್ಬರು ನೋಡಿಕೊಂಡರು. ಅಸಹನೆ ಮೆಲ್ಲನೆ ತೆವಳುತ್ತಾ ಬಂದು ಎಲ್ಲರ ಕಾಲು ನೆಕ್ಕುತ್ತಿತ್ತು. ಎಷ್ಟು ಓಡಿಸಿದರೂ ದೂರ ಹೋಗುತ್ತಿಲ್ಲ. ಕಾಲಿನ ಮೂಲಕ ಮೈಯೆಲ್ಲಾ ಸೇರಿಕೊಂಡಿತು. ಬಾಬ್ಕಟ್ ಹುಡುಗಿ ನಿಟ್ಟುಸಿರುಬಿಟ್ಟು ಕಂಪ್ಯೂಟರ್ ಮೇಲೆ ಫಟ್ ಎಂದು ಕುಟ್ಟಿ “ರೆಡಿಯಾದಾಗ ಹೇಳಿ, ರೆಕಾರ್ಡ್ ಸ್ಟಾರ್ಟ್ ಮಾಡ್ತೀನಿ” ಎಂದು ತಲೆಕೆಳಗೆ ಹಾಕಿದಳು. ಇವರು ಬೆಚ್ಚಿ ಕಣ್ಣುಬಿಟ್ಟರು.

ಡ್ರೈವ್ ಮಾಡಿದ ಹುಡುಗ “ಯಾಕೆ ಸಾರ್ ಸುಮ್ಮನಾದರಿ? ನಿಮಗೆ ತುಂಬಾ ಇಷ್ಟವಾದ ನಿಮ್ಮ ಪದ್ಯ ಒಂದು ಹೇಳಿಬಿಡಿ. ನಾವು ಮಾಡ್ತಿರೋ ವೆಬ್‌ಸೈಟಿಗೆ ನಿಮ್ಮದೇ ರೆಕಾರ್ಡಿಂಗ್ ಹಾಕಬೇಕು. ನಿಮ್ಮ ಕಾಲದ ನಂತರ…” ಹೇಳಬಾರದನ್ನು ಹೇಳಿದವನಂತೆ ತುಟ್ಟಿ ಕಚ್ಚಿ ಸುಮ್ಮನಾದ. ಅವನ ಮಾತನ್ನು ಮರೆಸುವಂತೆ ಕುಳ್ಳು ಹುಡುಗ “ಎಷ್ಟೋ ಜನಕ್ಕೆ ನಿಮ್ಮ ಧ್ವನಿಯಲ್ಲೇ ನಿಮ್ಮ ಪದ್ಯ ಕೇಳೋ ಆಸೆ ಇರತ್ತಲ್ಲ ಅದಕ್ಕೆ. ಯಾವುದಾದರೂ ಪರವಾಗಿಲ್ಲ. ಚಿಕ್ಕದಾದರೆ ಒಳ್ಳೇದು. ದೊಡ್ಡ ಪದ್ಯ ಇಂಟರ್ನೆಟ್‌ನಲ್ಲಿ ಕೇಳೋಕೆ ಕಷ್ಟ ಆಗಬಹುದು…” ನನಗೆ ಇಷ್ಟವಾದ್ದು ದೊಡ್ಡದಾಗಿದ್ದರೆ? ಎಂದು ಕೀಟಲೆ ಮಾಡಬೇಕು ಅನಿಸಿಯೂ ಸುಮ್ಮನಾದರು. ಯಾಕೆಂದರೆ ಅವರ ಆತಂಕ ಬೇರೇನೇ ಆಗಿತ್ತು. ತನ್ನ ಪದ್ಯಗಳಲ್ಲಿ ತನಗೆ ಇಷ್ಟವಾದ್ದು ಯಾವುದು ಎಂದು ಅವರು ಯೋಚಿಸಿಯೇ ಇರಲಿಲ್ಲ. ಯಾವುದೋ ಒಂದನ್ನು ಆರಿಸಿಕೊಳ್ಳೋಣ ಅಂದರೆ ಯಾವುದೂ ನೆನಪಿಗೆ ಬರುತ್ತಿಲ್ಲ. ಇದೆಂತಾ ಗೋಳು ಅಂತ ಗೊಣಗಿಕೊಂಡರು. ಯಾಕೆ ಒಂದು ಸಾಲೂ ನೆನಪಿಗೆ ಬರುತ್ತಿಲ್ಲ? ತನ್ನ ಪದ್ಯಗಳ ಬಗ್ಗೆ ಪುಟಗಟ್ಟಲೆ ಬರೆದಿದ್ದಾರಲ್ಲ, ನನಗೆ ಒಂದು ಸಾಲೂ ನೆನಪಾಗ್ತಿಲ್ಲವಲ್ಲ ಎಂದು ಪೇಚಾಟವಾಯಿತು. ಕಿವಿಯಿಂದ ಹೆಡ್‌ಫೋನ್ ತೆಗೆದ ಹುಡುಗಿಯ ಮುಖವನ್ನು ನೋಡಿದರು. ಅವಳು ಮುಜುಗರದಿಂದ ಕಂಪ್ಯೂಟರಿಗೆ ಮುಖ ತಿರುಗಿಸಿ ಏನೋ ಮಾಡಲು ತೊಡಗಿದಳು. ತಾವು ಬರೆದ ಒಂದು ಪದ್ಯ ನೆನಪಾಯಿತು. ಇಂಥದೇ ಹುಡುಗಿಯ ಸೊಂಟ ತೊಡೆ ಮೊಲೆಗಳ ಬಗ್ಗೆ ಬರೆದಿದ್ದೆನಲ್ಲ. ಒಂದು ಚೂರೂ ಅಶ್ಲೀಲವಾಗದ ಹಾಗೆ… ಎಂದು ನೆನಪಿಸಿಕೊಳ್ಳಲು ಕಷ್ಟಪಟ್ಟರು. ಅದನ್ನು ಮನುಷ್ಯನ ಆಂತರಿಕ ಹೊಯ್ದಾಟದ ಅಭೂತಪೂರ್ವ ಚಿತ್ರಣ ಅಂತ ಯಾರೋ ಹೊಗಳಿದ್ದರು. ಅಲ್ಲ ಕಣ್ರೋ! ನನ್ನ ಪ್ರೇಯಸಿಯನ್ನು ಹತ್ತಿರದಿಂದ ನೋಡುವ ಆಸೆಯನ್ನು ತೋಡಿಕೊಂಡಿದ್ದೆ. ಹೌದು ಅದು ನಿಜವಾಗಿಯೂ ನನ್ನ ಕಾಮದ ಅನುಭವ ಆಗಿತ್ತು ಮತ್ತು ಆಸೆಗಳ ಬಗ್ಗೆ ಆಗಿತ್ತು. ಹೌದು ಅಶ್ಲೀಲವಾಗಿಯೇ ಬರೀಬೇಕಿತ್ತು. ಆವಾಗ ಯಾರೂ ಅದನ್ನ ಇಲ್ಲದ ವ್ಯಾಖ್ಯಾನ ಮಾಡಿ ವಿವರಿಸೋಕೆ ಆಗ್ತಾ ಇರಲಿಲ್ಲ. ಆದರೆ, ಹಾಗೆ ಬರೆಯೋದಕ್ಕೆ ನನಗೆ ಎದೆಗಾರಿಕೆ ಇತ್ತ? ಈಗಲಾದರೂ ಅದನ್ನ ಹೇಳ್ತೀನಿ. ನೋಡೋಣ ಏನಗತ್ತೆ ಅಂತ. ಅವಳ ಮೈಯುದ್ದಕ್ಕೂ ನನ್ನ ಕೈಯನ್ನು ಹರಿದಾಡಿಸುವ ಸಾಲುಗಳು ಯಾವುದದು? ಬಹುಶಃ ಅದೇ ನನ್ನ ಇಷ್ಟವಾದ್ದು ಇರಬೇಕು. ಅದಕ್ಕೇ ನೆನಪಾಗುತ್ತಿದೆ. ಆದರೆ ಸಾಲುಗಳು ನೆನಪಾಗ್ತಾ ಇಲ್ಲ. ಮೊದಲ ಪದ ನೆನಪಾದರೆ, ಸಾಲು ನೆನಪಾಗಬಹುದು. ಮೊದಲ ಪದವಿರಲಿ ಆ ಪದ್ಯದ ಹೆಸರೇನು? ಏನೇನೋ ಹೆಸರು ಯೋಚಿಸಿ ಕಡೆಗೆ ತಾನಿಟ್ಟ ಹೆಸರು ಯಾವುದು? ಪ್ರೇಯಸಿಯ ಕೈಕಾಲು ಮೈಮಾಟ ಇವೇ ಚೆನ್ನಾಗಿ ಕಣ್ಣ ಮುಂದೆ ಹಾದು ಹೋದವೇ ಹೊರತು, ಪದ್ಯದ ಶುರುವಾಗಲೀ ಅಥವಾ ಅದರಲ್ಲಿ ಬರುವ ಬೇರೆ ಒಂದು ಪದವೂ ನೆನಪಾಗುತ್ತಿಲ್ಲ.

ರೂಮಿನಲ್ಲಿದ್ದವರಿಗೆ ಇವರ ಮೌನ ಅರ್ಥವಾಗಲಿಲ್ಲ. ಒಟ್ಟಿಗೇ ಗುಸುಗುಸು ಮಾತಾಡಿಕೊಳ್ಳಲು ಶುರುಮಾಡಿದರು. ಇವರು ಯಾಕೆ ಹಟಮಾಡ್ತಾ ಇದ್ದಾರೆ ಅಂತ ಅವರಿಗೆ ಗೊಂದಲ ಶುರುವಾಗಿತ್ತು. ತಮ್ಮ ತಮ್ಮಲ್ಲೇ ಏನೋ ಮಾತಾಡಿಕೊಂಡರು. ಇವರಿಗೆ ಏನೂ ಸರಿಯಾಗಿ ಕೇಳಲಿಲ್ಲ. ಕಿವಿ ಎಷ್ಟು ಚುರುಕಾಗಿಸಿದರೂ ಪ್ರಯೋಜನವಾಗಲಿಲ್ಲ. ಹುಡುಗರು ಏನೋ ನಿರ್ಧಾರಕ್ಕೆ ಬಂದವರಂತೆ ಕಂಡಿತು. ಮೊದಲು ಕಾರು ಹತ್ತಿಸಿದ ಹುಡುಗ ಇವರ ಬಳಿ ಬಂದು ಬಗ್ಗಿ – “ನಿಮಗೆ ದುಡ್ಡು ಜಾಸ್ತಿ ಬೇಕಂದರೆ ಹೇಳಿ. ಈಗಲೇ ಫೋನ್‌ ಮಾಡಿ ವಿಚಾರಿಸ್ತೀನಿ. ಅವೆಲ್ಲಾ ಒಪ್ಪಿಗೆ ಆಗಿತ್ತು ಅನ್ಕೊಂಡಿದ್ವಿ” ತುಂಬಾ ಮೆದುವಾಗಿ ಹೇಳಿದ. ತಾನು ಏನಕ್ಕೆ ಒಪ್ಪಿಕೊಂಡಿದ್ದೆ ಎಂದು ಇವರಿಗೆ ಹೊಳೆಯಲಿಲ್ಲ. ಏನು ಒಪ್ಪಿಗೆಯಾಗಿತ್ತು ಅನ್ನುವುದೂ ತಿಳಿಯಲಿಲ್ಲ. ಯಾವಾಗ ಮಾತಾಡಿದೆವು ಎಂದು ಕೇಳಬೇಕು ಅಂದುಕೊಂಡದ್ದು ಗಂಟಲಲ್ಲೇ ಉಳಿಯಿತು – “ನನಗೆ ಯಾವ ಸಾಲೂ ನೆನಪ ಆಗ್ತಾ ಇಲ್ಲ” ಅಂತ ಪುಟ್ಟ ಶಾಲೆಯ ಹುಡುಗನಂತೆ ಹೇಳಿದರು. ನಾಳೆ ಗಟ್ಟು ಮಾಡಿಕೊಂಡು ಬರುತ್ತೀನಿ ಅನ್ನುವ ವರಸೆಯಲ್ಲಿ. ಆ ಹುಡುಗ ಏನೋ ಹೊಳೆದವನಂತೆ ಇವರನ್ನು ಕೈ ಹಿಡಿದು ಎಬ್ಬಿಸಿದ. ಮೂಲೆಯಲ್ಲಿದ್ದ ಕಿಟಕಿಯ ಬಳಿ ಕರೆದುಕೊಂಡು ಹೋದ. ಅಲ್ಲಿಂದ ಏನೂ ಕಾಣುವುದಿಲ್ಲವಲ್ಲ ಎಂದು ಇವರು ಯೋಚುಸುವಾಗಲೇ ಅವನು ಕಿಟಕಿಯ ಪಕ್ಕ ಒಂದು ಬಟನ್ ಒತ್ತಿದ. ಕಿಟಕಿಗೆ ಜೀವ ಬಂದಂತೆ ಹೊರಗೆ ಕಾಣತೊಡಗಿತು. ಹೊರಗೆಂದರೆ ಬೆಟ್ಟ ಬಯಲು ರೋಡು ರಸ್ತೆ ಅಲ್ಲ. ಅದೇ ದೊಡ್ಡ ಬಿಲ್ಡಿಂಗಿನ ಇನ್ನೊಂದು ಭಾಗ. ದೂರದಲ್ಲಿ ಕೆಳಗಿನ ಒಳಾಂಗಣದಲ್ಲಿ ತುಂಬಾ ಬೆಳಕಿತ್ತು. ಇವರ ಕಣ್ಣು ಕುಕ್ಕುವಂತಾಗಿ ಕಿರಿದು ಮಾಡಿಕೊಂಡರು. ಮತ್ತೆ ಕಣ್ಣು ಒಗ್ಗಿಕೊಂಡಾಗ ಕೆಳಗೆ ಯಾವುದೋ ಉತ್ಸವದಂತೆ ದೊಡ್ಡ ಪಾರ್ಟಿ ನಡೆಯುತ್ತಿರುವುದು ಕಂಡಿತು. ಮೆಲ್ಲನೆ ಆ ಪಾರ್ಟಿಯಲ್ಲಿರುವವರೆಲ್ಲಾ ಇವರಿಗೆ ಗುರುತಾಯಿತು.

ಪಕ್ಕದಲ್ಲಿ ನಿಂತ ಹುಡುಗನಿಗೆ “ಅದೆಲ್ಲಿ ನಡೀತಿದೆ?” ಎಂದು ಕೇಳಿದರು. “ನೀವು ಅವರ ಮೂಲಕಾನೇ ಹಾದು ಬಂದರಲ್ಲ” ಎಂದು ಇವರಿಗೆ ಮತ್ತಷ್ಟು ಅಚ್ಚರಿ ಹುಟ್ಟಿಸಿದ. ಇವರಿಗೆ ನೆನಪಾಗಲಿಲ್ಲ. ಅಲ್ಲಿದ್ದ ಸಣ್ಣ ವಯಸ್ಸಿನ ಕವಿಗಳನ್ನೆಲ್ಲಾ ನೋಡಿದರು. ತುಂಬಾ ಖುಷಿಯಿಂದ ಮಾತಾಡಿಕೊಂಡಿದ್ದರು. ಗಾಜಿನ ಕಿಟಕಿಯಾಚೆ ಅವರ ಮಾತುಗಳು ಕೇಳಿಸುತ್ತಿರಲಿಲ್ಲ. ತನ್ನ ವಯಸ್ಸಿನವರೂ ಅಲ್ಲಿ ಇದ್ದದ್ದು ಕಂಡು ಬೆಚ್ಚಿದರು. ಅವರೂ ಜೋರಾಗಿ ಏನೋ ಮಾತಾಡುತ್ತಾ ನಗುತ್ತಿದ್ದರು. ಎಲ್ಲರ ಕೈಯಲ್ಲೂ ಗಾಜಿನ ಲೋಟಗಳು ಅದರಲ್ಲಿ ಬಣ್ಣದ ಪಾನೀಯ ಕಂಡಿತು. ಚಂದ ಚಂದದ ಸೀರೆ ತೊಟ್ಟುಕೊಂಡ, ಬಣ್ಣಬಣ್ಣದ ಹತ್ತು ಹಲವಾರು ಬಗೆಯ ಉಡುಗೆ ತೊಡುಗೆಯ ಹೆಂಗಸರು, ಹೆಣ್ಣು ಮಕ್ಕಳು ಓಡಾಡಿಕೊಂಡಿದ್ದರು. ಅವರಲ್ಲೂ ಕೆಲವರು ಕವಿಗಳು ಎಂದು ಇವರಿಗೆ ಗೊತ್ತಿತ್ತು. ಏನು ನಡೀತಿದೆ ಎಂದು ಕೇಳಬೇಕೆಂದುಕೊಂಡರೂ ಮೊದಲು ಎಲ್ಲ ನೋಡಿಬಿಡೋಣ ಎಂಬ ತವಕದಿಂದ ಎಂಬಂತೆ ಕಿಟಕಿಯ ಹತ್ತಿರಕ್ಕೆ ತುಸು ಸರಿದರು. ತನಗೆ ಗೊತ್ತಿದ್ದ ಒಬ್ಬ ಕವಿ ಒಂದು ಚೆಂದದ ಹುಡುಗಿಯ ಹಿಂದೆ ಓಡಾಡುತ್ತಿದ್ದುದು ಕಂಡು ಇವರಿಗೆ ನಗು ಬಂದಿತು. ಈಗ ಅವನು ಸಿನೆಮಾಕ್ಕೂ ಬರೀತಾನೆ ಅಂತ ಗೊತ್ತಾಗಿತ್ತು. ಅವನ ಜತೆ ಮಾತಾಡುತ್ತಿರುವವಳು ಸಿನೆಮಾ ನಟಿಯೇ ಇರಬೇಕು. ವಯ್ಯಾರ ಮಾಡುತ್ತಿದ್ದಾಳಲ್ಲ. ಅವಳ ಹೆಗಲಿಗೆ ಕೈಯಿಕ್ಕಿ ತುಂಬಾ ಸಲಿಗೆ ತೋರಿಸುತ್ತಿದ್ದಾನಲ್ಲ. ತನಗೆ ಹೊಟ್ಟೆಯುರಿಯೆ ಎಂದು ಕೇಳಿಕೊಂಡರು. ಅದಕ್ಕೆ ಉತ್ತರಿಸಿಕೊಳ್ಳುವಷ್ಟರಲ್ಲಿ ಕಿಟಕಿಗೆ ಕರೆತಂದ ಹುಡುಗ ತಟ್ಟನೆ ಬಟನ್ ಒತ್ತಿಬಿಟ್ಟ. ಮತ್ತೆ ಕಿಟಕಿಯಾಚೆ ಕತ್ತಲು. ಇನ್ನೊಂದು ಚೂರು ನೋಡಬೇಕು ತೋರಿಸಪ್ಪಾ ಅನ್ನುವ ಮಗುವಿನಂತೆ ಅವನತ್ತ ನೋಡಿದರು. ಅವನು ಗಂಭೀರವಾಗಿ “ಅವರೆಲ್ಲಾ ನಾವು ಕೇಳಿದ ತಕ್ಷಣ ಪದ್ಯ ಹೇಳಿಬಟ್ಟರು. ಕೆಲವರಂತೂ ನೆನಪಿಂದಲೇ ತಮ್ಮ ಇಡೀ ಪುಸ್ತಕ ಒಂದು ಪದ ಆಚೀಚೆ ಆಗದಂತೆ ಹೇಳಿದರು. ನಿಮಗ್ಯಾಕೋ ಇನ್ನೂ ನಮ್ಮ ಬಗ್ಗೆ ಅನುಮಾನ ಇರೋ ಹಾಗಿದೆ.” ಎಂದು ಬಿರುಸಾಗಿ ನುಡಿದ.

ಒಂದು ಕ್ಷಣ ಇವರಿಗೆ ಎದೆ ನಡುಗಿತು. ಸಣ್ಣ ಹುಡುಗನಾದರೂ ಅವನು ಸ್ಕೂಲಿನ ಮೇಷ್ಟ್ರಂತೆ ದೊಡ್ಡದಾಗಿ ಕಂಡ. ಇವರಿಗೆ ಬಾಯಿ ಒಣಗಿ ಬಂತು. ಇನ್ನೊಂದಿಷ್ಟು ಕಿಟಕಿಯಾಚೆಯ ತನ್ನ ಪರಿಚಯದವರನ್ನ ನೋಡಿದ್ದರೆ ಚೆನ್ನಿತ್ತು ಅಂತ ಅನಿಸುವಾಗಲೇ ನಾನೀಗ ಏನಾದರೂ ಹೇಳಬೇಕು ಎಂಬ ಒತ್ತಾಯ ಒಳಗಿಂದ ಮೂಡಿತು. ಏನು ಹೇಳಲು ಹೊರಟರೂ ಪದಗಳೆಲ್ಲಾ ತೊದಲುತ್ತೆನ್ನುವ ಭಯ ಮಾತಾಡದಿದ್ದರೂ ಅನಿಸತೊಡಗಿತು. ತಮಗೇ ಅಂಕೆಯಿಲ್ಲದ ಹಾಗೆ “ಇನ್ನೊಂದು ಚೂರು ಕಿಟಕಿಯಾಚೆ ತೋರಿಸುತ್ತೀಯ, ದಯವಿಟ್ಟು!” ಎಂದು ಬಿಟ್ಟರು. ಯಾಕೆ ಬೇಡುತ್ತಿದ್ದೇನೆ ಅಂತ ಅರಿವಾಗಲಿಲ್ಲ. ಆದರೆ ಆ ಹುಡುಗ ಅಲ್ಲಿಂದ ತಿರುಗಿ ಹೊರಟು ಬಿಟ್ಟ. ಇವರು ಸಣ್ಣ ಮಗುವಿನಂತೆ ಅವನನ್ನು ಹಿಂಬಾಲಿಸಿದರು. “ಒಂದೇ ಒಂದು ಸಲ.. ಎರಡೇ ನಿಮಿಷ” ತಾನೇಕೆ ಮಗುವಿನ ತರ ಆಡ್ತಿದ್ದೀನಿ? ತನ್ನ ಮೇಲೆ ತನಗೇ ಹತೋಟಿ ಇಲ್ಲವಲ್ಲ. ಇವರೆಲ್ಲಾ ಏನು ಮೋಡಿ ಹಾಕಿದ್ದಾರೆ? “ಒಂದು ಸಲ ಕಿಟಕಿ ಹೊರಗೆ ತೋರಿಸಿದರೆ, ಏನು ಬೇಕಾದರೂ ಮಾಡ್ತೀನಿ” ಎಂದು ಅವನ ಅಂಗಿ ತೋಳು ಹಿಡಿದು ಜಗ್ಗಿದರು. ಅಲ್ಲೇ ಇದ್ದ ಬಾಬ್ಕಟ್ ಹುಡುಗಿ “ಒಂದು ಪದ್ಯ ಹೇಳಿಬಿಡಿ. ಆಮೇಲೆ ಎಷ್ಟು ಬೇಕಾದರೂ ನೋಡಿವಿರಂತೆ” ಎಂದು ಮೆಲ್ಲನೆ ಮತ್ತೆ ಮೇಜಿನ ಮುಂದೆ, ಮೈಕೆದುರು ಕೂಡಿಸಿದಳು. ಡ್ರೈವ್ ಮಾಡಿದ ಹುಡುಗ ಮತ್ತು ಕುಳ್ಳು ಹುಡುಗ ಎದುರು ಕೂತಿದ್ದಾರೆ. ಸರಿ ಒದರಿ ಬಿಡ್ತೀನಿ ಎಂದು ಮೇಜಿನ ಮೇಲೆ ಕೈಯೂರಿ ನೆಟ್ಟಗೆ ಕೂತರು. ಹುಡುಗಿ ಮತ್ತೆ ಕಿವಿಗೆ ಹೆಡ್‌ಫೋನ್ ಏರಿಸಿಕೊಂಡು ತಂಬ್ಸ್ ಅಪ್ ಮಾಡಿದಳು.

“ಬಾಲ್ಯದ ಗೆಳೆಯನ ಒರಟು ಕೈಯಲ್ಲಿದ್ದ ಗೆರೆಗಳು ಅವನ ಕೈಮೀರಿ ಬೆಳೆಯುತ್ತದೆ” ಎಂದು ಶುರು ಮಾಡಿದರು. ಲಯವೇ ಇರಲಿಲ್ಲ. ಪದ್ಯದ ಬದಲು ಕತೆ ಹೇಳುತ್ತಿರುವಂತೆ ಅವರಿಗೇ ಅನಿಸಿತು. ಈಗ ನಿಲ್ಲಿಸಬಾರದು ಎಂದು ಹಟತೊಟ್ಟಂತೆ “ಕೈಮೇಲಿದ್ದ ಗೆರೆಗಳಿಗಿಂತ ಕೈ ಮೀರಿ ಬೆಳೆದ ಗೆರೆಗಳೇ ಅವನ ಬದುಕನ್ನ ಹಿಡಿದು ಅಲ್ಲಾಡಿಸಿದ್ದು. ಅವನೆಷ್ಟು ಹಿಡಿತದಲ್ಲಿಟ್ಟುಕೊಂಡರೂ ಆ ಗೆರೆಗಳೇ ಅವನಿಗೆ ಕುಡಿತ ಕಲಿಸಿತು. ಕಡೆಕಡೆಗೆ ಆ ಗೆರೆಗಳ ಸುಕ್ಕುಸುಕ್ಕೇ ಪಾಶದಂತೆ ಅವನ ಕೊರಳು ಬಿಗಿದು ಕೂಪದಲ್ಲಿ ನರಳುವಂತೆ ಮಾಡಿತು…” ದೂರದಲ್ಲಿ ಕಂಪ್ಯೂಟರ್‍ ಮುಂದೆ ಕೂತಿದ್ದ ಮೊದಲು ಕಾರು ಹತ್ತಿಸಿದ ಹುಡುಗ ಥಟ್ಟನೆ ತಿರುಗಿ “ಒಂದು ನಿಮಿಷ ತಡೀರಿ” ಎಂದು ಕೈ ಎತ್ತಿದ. ಕುಳ್ಳು ಹುಡುಗ “ತುಂಬಾ ಚೆನ್ನಾಗಿದೆ ಸಾರ್!” ಎನ್ನುತ್ತಲೇ ಎಲ್ಲರೂ ಕೈಯೆತ್ತಿದವನತ್ತ ತಿರುಗಿದರು. ಏನೋ ಕಂಡು ಹಿಡಿದವನಂತೆ ಇವರನ್ನೇ ದುರುಗುಟ್ಟಿ ನೋಡಿದ. ಇವರಿಗೆ ಏನೆಂದು ಅರ್ಥವಾಗದೆ ಪಿಳಿಪಿಳಿ ಕಣ್ಣುಬಿಟ್ಟುಕೊಂಡು ಕೂತೇ ಇದ್ದರು. ಇವನು ನಿಜವಾದ ಮೇಷ್ಟ್ರೇ ಇರಬೇಕು ಎಂದು ಹೆದರಿಕೆ ಆಯಿತು. ಕೂಡಲೆ “ನಾನೇನು ಇನ್ನೂ ಶಾಲೆ ಹುಡುಗನೇ?” ಎಂದು ಧೈರ್ಯ ಹೇಳಿಕೊಂಡರು. ಆದರೂ ಒಳಗೊಳಗೇ ಅಳುಕು.

ಕೈಯೆತ್ತಿದ ಹುಡುಗ “ಅದು ನಿಮ್ಮ ಪದ್ಯ ಅಲ್ಲ. ನಮಗೆ ಬೇಕಾಗಿರೋದು ನಿಮ್ಮ ಪದ್ಯ” ಅಂದುದು ಕೇಳಿ ಇವರಿಗೆ ತುಸು ನಿರಾಳವೂ ಸಿಟ್ಟೂ ಒಟ್ಟೊಟ್ಟಿಗೆ ಆಯಿತು. ನನ್ನ ಪದ್ಯ ಅಲ್ಲ ಅಂತ ಇವನಿಗೆ ಹೇಗೆ ಗೊತ್ತು ಎನಿಸುತ್ತಲೇ “ನಿಮ್ಮ ಎಲ್ಲ ಪದ್ಯ ಈ ಕಂಪ್ಯೂಟರಿನಲ್ಲಿ ಇದೆ. ಅದರಲ್ಲಿ ಪದಪದಾನೂ ಹುಡುಕಬಹುದು. ಸಾಲುಸಾಲೂನು ಹುಡುಕಬಹುದು. ನಿಮ್ಮ ಇಡೀ ಪದ್ಯಗಳಲ್ಲಿ ಯಾವ ಯಾವ ಪದ ಹೆಚ್ಚು ಉಪಯೋಗಿಸಿದ್ದೀರಿ ಅಂತ ಲೆಕ್ಕ ಹಾಕಬಹುದು. ಯಾವ ಸಾಲಿನ ಪ್ಯಾಟರ್ನ್ ಮತ್ತೆ ಮತ್ತೆ ಬಂದಿದೆ. ಯಾವ ಪದಕ್ಕೆ ಯಾವ ವಿಭಕ್ತಿ ಪ್ರತ್ಯಯ ಜಾಸ್ತಿ ಉಪಯೋಗಿಸ್ತೀರ. ನಿಮ್ಮ ಪದ್ಯಗಳ ಸರಾಸರಿ ಉದ್ದ ಎಷ್ಟು. ಪದಗಳ ಲೆಕ್ಕದಲ್ಲಿ ಎಷ್ಟುದ್ದ. ಸಾಲಿನ ಲೆಕ್ಕದಲ್ಲಿ ಎಷ್ಟು. ಸರಾಸರಿ ನಿಮ್ಮ ಪದ್ಯದ ಸಾಲಿನ ಉದ್ದ ಎಷ್ಟು. ಅದನ್ನೂ ಅಕ್ಷರಗಳಲ್ಲಿ ಲೆಕ್ಕ ಹಾಕಬಹುದು. ಪದಗಳಲ್ಲಿ ಲೆಕ್ಕ ಹಾಕಬಹುದು. ಹೀಗೆ ವೈಜ್ಞಾನಿಕವಾಗಿ ಏನು ಬೇಕಾದರೂ ಮಾಪನಗಳನ್ನು ಮಾಡಬಹುದು” ಎಲ್ಲರೂ ಒಬ್ಬರನ್ನೊಬ್ಬರು ನೋಡಿಕೊಂಡು ಬೀಗುತ್ತಾ ಮುಗಳ್ನಕ್ಕರು. ನಿರಾಳಕ್ಕಿಂತ ಸಿಟ್ಟೇ ಹೆಚ್ಚಾಗಿ ಇವರು ಥಟ್ಟನೆ “ನಾನು ಬರೀದೆ ಇರೋ ಪದ್ಯಗಳನ್ನ ಹೇಗೆ ಲೆಕ್ಕಾಚಾರ ಹಾಕ್ತೀರ? ನಾನೀಗ ಹೇಳೋಕೆ ಶುರು ಮಾಡಿದ ಪದ್ಯ ನಾನಿನ್ನೂ ಬರದೇ ಇಲ್ಲ. ನನ್ನ ತಲೆನಲ್ಲಿ ಆಗಾಗ ಬಂದು ಹೋಗಿ, ಮೂಡಿ ಮುಳಗತಾ ಇದೆ. ಅದನ್ನ ನನ್ನದು ಅಲ್ಲ ಅಂತ ಹ್ಯಾಗೆ ಹೇಳ್ತೀಯ?” ಸ್ವಲ್ಪ ಜೋರಾಗಿಯೇ ಕೂಗಿದರೆಂದು ಕಾಣುತ್ತದೆ. ಭಾಷಣ ಬಿಗಿದ ಹುಡುಗ ಸ್ವಲ್ಪ ಮೆತ್ತಗಾದಂತೆ ತೋರಿತು.

“ನೋಡಿ, ನೀವು ಬರೀದೇ ಇರೋ ಪದ್ಯದ ಬಗ್ಗೆ ಎರಡು ತೊಡಕಿದೆ. ಒಂದು ಅದು ನಿಮ್ಮದು ಅಂತ ನೀವು ಸಾಧಿಸಿ ತೋರಿಸೋಕೆ ಆಗಲ್ಲ. ಈ ಮೊದಲೇ ಪ್ರಕಟ ಆಗಿದ್ದರೆ ಅದು ನಿಮ್ಮ ಹೆಸರಲ್ಲಿ ಇರತ್ತೆ. ಆಗ ಯಾರೂ ಪ್ರಶ್ನೆ ಎತ್ತೋ ಹಾಗಿಲ್ಲ.”

“ಏನಯ್ಯ ಹೇಳ್ತಿದ್ಯ? ಅದಕ್ಕೇನಾದರೂ ಅರ್ಥಪರ್ಥ ಇದೆಯ? ಎಲ್ಲಾ ಪದ್ಯಗಳೂ ಹಾಗೇ ಅಲ್ವ? ಮೊದಲಿಗೆ ಪ್ರಕಟ ಆದಾಗಲೂ ಹಾಗೇ ಕೇಳಬಹುದಲ್ವ? ಸಂಪಾದಕರು ಇದು ನಿಮ್ಮದೇ ಪದ್ಯ ಅಂತ ಆಧಾರ ಕೊಡಿ ಅಂದರೆ ಒಂದು ಪದ್ಯಾನೂ ಪ್ರಕಟವೇ ಆಗಲ್ಲ… ನೀವಿನ್ನೂ ಎಳಸು, ಬದುಕು ಹೇಗೆ ಏನು ಅಂತ ನಿಮಗಿನ್ನೂ ಗೊತ್ತಿಲ್ಲ. ಬದುಕ್ಕಲ್ಲಿ ವಿಶ್ವಾಸ ಇರಬೇಕು. ಕವಿಗೆ ಪದ್ಯದ ಮೇಲೆ. ಸಂಪಾದಕನಿಗೆ ಕವಿ ಮೇಲೆ. ಜನರಿಗೆ ಸಂಪಾದಕನ ಮೇಲೆ. ಮುಖ್ಯವಾಗಿ ಕವಿಗೆ ಓದುವ ಜನರ ಮೇಲೆ. ಈ ಸಂಬಂಧ ಇದೆಯಲ್ಲಾ – ಇದು ಯಾವ ಕಾಲ ಆದರೂ, ಯಾವ ತಲೆಮಾರಾದರೂ ಅಷ್ಟೆ…”

ಇಷ್ಟರವರೆಗೆ ಸುಮ್ಮನಿದ್ದ ಡ್ರೈವ್ ಮಾಡಿದ ಹುಡುಗ ಗಂಟಲು ಸರಿಮಾಡಿಕೊಂಡು “ಅದಕ್ಕೆ ನೋಡಿ ಸಾರ್ ಕಾಲ ಬದಲಾಗಿದೆ ಅನ್ನೋದು. ಈಗಿನ ತಲೆಮಾರಿನವರು ಯೋಚಿಸೋ ರೀತೀನೇ ಬೇರೆ. ಅವನು ಹೇಳೋ ಮಾತು ಪೂರ್ತಿ ಕೇಳಿ” ಎಂದು ಮೊದಲು ಭಾಷಣ ಮಾಡಿದ ಹುಡುಗನತ್ತ ಕೈಮಾಡಿದ.

ಮತ್ತೆ ತನ್ನ ಸರದಿ ಎಂಬಂತೆ ಆ ಹುಡುಗ “ಎರಡನೇ ತೊಡಕು ಏನಪ್ಪ ಅಂದರೆ…” ಎನ್ನುವಷ್ಟರಲ್ಲೇ ಇವರಿಗೆ ಸಿಟ್ಟು ಬಂದು ಮೈಕು ಹಿಂದಕ್ಕೆ ತಳ್ಳಿ ಎದ್ದು ನಿಂತರು. ಅವರ ಕೈ ನಡುಗುತ್ತಿತ್ತು, ತುಟಿ ಅದುರುತ್ತಿತ್ತು, ಸಣ್ಣಗೆ ಬೆವರುತ್ತಿದ್ದರು. ಅದು ವಯಸ್ಸಿನಿಂದಲೋ ಸಿಟ್ಟಿನಿಂದಲೋ ಹೇಳುವುದು ಕಷ್ಟ. ಅಲ್ಲಿಂದ ಹೊರಟು ಬಿಡಬೇಕನ್ನುವ ನಿರ್ಧಾರವಂತೂ ಚೆನ್ನಾಗಿ ಕಾಣುತ್ತಿತ್ತು. ಬಾಬ್ಕಟ್ ಹುಡುಗಿ ಹತ್ತಿರ ಬಂದು ದಿಟ್ಟವಾಗಿ ಅವರ ಹೆಗಲಿಗೆ ಕೈಹಾಕಿ “ಕೂತ್ಕೊಳ್ಳಿ ಅಂಕಲ್. ಸಿಟ್ಟಾಗ ಬೇಡಿ. ಪದ್ಯಗಳನ್ನ ಬರಹಗಳನ್ನ ನೋಡೋ ರೀತಿ ಓದೋ ರೀತಿ ಈಗ ಬದಲಾಗಿದೆ. ನೀವು ಅದನ್ನ ಅರ್ಥಮಾಡಿಕೋ ಬೇಕು. ಆಗ ನಿಮ್ಮ ಎಲ್ಲ ಗೊಂದಲಕ್ಕೂ ಪರಿಹಾರ ಸಿಕ್ಕತ್ತೆ. ನೀವು ವಿಶ್ವಾಸದ ಬಗ್ಗೆ ಮಾತಾಡಿದರಲ್ಲ. ಅದನ್ನ ಈಗೀಗ ಬೆಳಸ್ಕೊಳ್ಳೋ ರೀತೀನೆ ಬೇರೆ. ನಾವು ಒಬ್ಬ ಕವಿಯ ಪದ್ಯಗಳ ರಚನೆ, ಪದಗಳ ಉಪಯೋಗ, ಸಾಲಿನ ಆಕೃತಿ ಎಲ್ಲವನ್ನೂ ವಿಶ್ಲೇಷಿಸಿ ಗ್ರಾಫ್‌ಗಳ ಮೂಲಕ ಜನರಿಗೆ ಪರಿಚಯಿಸ್ತೀವಿ. ಆಗ, ನೀವು ಹೊಸದೊಂದು ಬರೆದರೆ ಅದು ನಿಮ್ಮದೋ ಅಲ್ಲವೋ ಅಂತ ತಾನೇ ತಾನಾಗಿ ಜನಕ್ಕೆ ಗೊತ್ತಾಗಿ ಬಿಡತ್ತೆ. ಈವತ್ತು ನೀವು ಹೇಳಿದ ಪದ್ಯ ನಿಮ್ಮ ಮುಂಚಿನ ಯಾವ ಪದ್ಯದ ರಚನೆಗೂ ಆಕೃತಿಗೂ ಹತ್ತಿರವಾಗಿಲ್ಲ. ನಿಮಗೆ ಒಂದೊಂದು ಪದ್ಯವೂ ವಿಶಿಷ್ಟ ಅನ್ನಿಸಬಹುದು. ಆದರೆ, ಎಲ್ಲದರ ಅಡಿಗೂ ಒಂದು ಸಾಮಾನ್ಯ ವಿನ್ಯಾಸ ಇರತ್ತೆ. ಆ ವಿನ್ಯಾಸವೋ ಪ್ಯಾಟರ್ನೋ ನಿಧಾನಕ್ಕೆ ಬದಲಾಗಬಹುದು. ಆದರೆ ಒಂದೇ ಸಲ ಮುರಿಯಲ್ಲ, ಬದಲಾಗಲ್ಲ. ಇದು ವೈಜ್ಞಾನಿಕ ತಿಳಿವಳಿಕೆ. ಅದನ್ನು ಒಪ್ಪದೇ ಇರೋಕೆ ತುಂಬಾ ಗಟ್ಟಿಯಾದ ವಾದ ಹುಟ್ಟಹಾಕಬೇಕು…”

“ಯಾಕೆ ಹುಟ್ಟಹಾಕಬೇಕು? ವಾದ ಯಾಕೆ ಬೇಕು? ನಾನೇನು ಲಾಯರ್ ಅಲ್ಲ. ವಿಜ್ಞಾನಿ ಅಲ್ಲ. ನಾನು ಒಬ್ಬ ಮನುಷ್ಯ. ಪದ್ಯ ಬರೀತೀನಿ. ಅದಕ್ಕೆ ಜನ ನನ್ನನ್ನ ಕವಿ ಅಂತಾರೆ. ಎಷ್ಟೋ ಸಲ ನನ್ನ ಪದ್ಯ ನನ್ನದು ಅಲ್ಲವೇ ಅಲ್ಲ ಅಂತ ಅನ್ನಿಸಿದೆ. ಅದಕ್ಕೆ ವೈಜ್ಞಾನಿಕ ವಿಶ್ಲೇಷಣೆ ಬೇಕಾಗಿಲ್ಲ. ಅದು ಎಲ್ಲಿಂದ ಹುಟ್ಟತು ಯಾವುದರಿಂದ ಹುಟ್ಟತು… ಅಷ್ಟೇ ಸಾಕು. ಸುಮ್ಮನೆ ಟೈಮ್ ವೇಸ್ಟ್ ಮಾಡ್ತಾ ಇದ್ದೀರ… ಎಷ್ಟು ಹುಡುಕಿದರೂ ನಿಮಗೆ ಕಾವ್ಯ ಸಿಗಲ್ಲ… ಬೇರೆ ಎಲ್ಲಾ ಸಿಗತ್ತೆ… ಆದರೆ ಕಾವ್ಯ ಸಿಗಲ್ಲ…”

ಕುಳ್ಳು ಹುಡುಗ “ಹಾಗೆ ಹೇಳಬೇಡಿ ಸಾರ್. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ… ಬೇಕಾದವರಿಗೆ ಅವೆಲ್ಲಾ ಇರತ್ತೆ. ನನ್ನಂತವರಿಗೆ ನಿಮ್ಮ ಪದ್ಯಗಳ ಸಾಲುಗಳೂ ಇರ್ತವೆ. ಈಗ ನೋಡಿ ನಿಮ್ಮ ಹರಿಗೋಲು ಅನ್ನೋ ಪದ್ಯ ನನಗೆ ತುಂಬಾ ಇಷ್ಟ. ನೀವು ಹರಿಗೋಲನ್ನ ಬರೇ ರಮ್ಯವಾಗಿ ದಾಟಿಸುತ್ತದೆ ಎಂದು ನೋಡಲ್ಲ. ಮೊದಲ ಸಲ ಓದಿದಾಗ ಭಕ್ತಿಯ ರೂಪಕ್ಕಿಂತ ಇಲ್ಲಿ ಬೇರೆ ಏನೋ ಇದೆ ಅನ್ನಿಸಿತು. ಅಮೇಲೆ ಅದು ಮೂಲವಾಗಿ ನಂಬಿಕೆಯ ಬಗ್ಗೆ ಅಂತ ಹೊಳೀತು. ಆಮೇಲೆ ಮತ್ತೆ ಓದಿದಾಗ ಥಟ್ಟನೆ ಹರಿಗೋಲನ್ನು ಹರಿ-ಕೋಲೆಂದು, ರಾಜದಂಡದ ರೂಪವಾಗಿ ಕೂಡ ಬಳಿಸಿದ್ದೀರಲ್ಲಾ ಅಂತ ಅಚ್ಚರಿಯಾಯಿತು. ಹಾಗೆ ಅನ್ನಿಸಿದಾಗ ಎಷ್ಟು ಖುಷಿಯಾಯ್ತು ಅಂದರೆ, ಆ ಖುಷಿನಲ್ಲಿ ಆ ಪದ್ಯಾನ ಹತ್ತಾರು ಸಲ ಓದಿದೆ. ಫ್ರೆಂಡ್ಸ್‌ಗೆ ಓದಿ ಹೇಳಿದೆ. ಈಗೀಗ ಆ ಹರಿ-ಕೋಲು ಬರೇ ದಶಗುಣ ಕಲಿಸುವ ದಂಡಕ್ಕಿಂತ, ದಶಗುಣವನ್ನು ಅಳೆಯುವ ಕೋಲಾಗಿ ಕಾಣ್ತಾ ಇದೆ…”

ಇವರಿಗೆ ನಿಜಕ್ಕೂ ಧಿಗ್ಭ್ರಮೆಯಾಯಿತು. ಅವಕ್ಕಾಗಿ ಆ ಹುಡುಗನನ್ನೇ ನೋಡುತ್ತಾ ಕುಳಿತರು. ಅವನು ತನ್ನ ಪದ್ಯಕ್ಕೆ ತೆರೆದುಕೊಂಡ ರೀತಿ, ಅದನ್ನು ಅರಿತುಕೊಂಡ ರೀತಿ, ಎಲ್ಲ ಕೇಳಿ ಅವನನ್ನು ಅಲ್ಲೇ ಅಪ್ಪಿಕೊಳ್ಳಬೇಕು ಅನಿಸಿತು. ಆ ವಯಸ್ಸಿನ ಹುಡುಗರೆಲ್ಲಾ ಬರೇ ಮೋಜಿನಲ್ಲಿ ಮುಳುಗಿರುತ್ತಾರೆ ಅಂತ ಅಂದುಕೊಳ್ಳೋದೇ ದೊಡ್ಡ ಅಪರಾಧ ಅನ್ನಿಸಿತು. ಅವನ ಮೃದುವಾದ ಕೈ ಹಿಡಿದು “ತಪ್ಪಾಯಿತು” ಅಂದು ಬಿಟ್ಟರು. ಹೇಳುವ ಅಗತ್ಯವಿರಲಿಲ್ಲ. ಆದರೆ ಅನಿವಾರ್ಯತೆ ಇತ್ತು. ಯಾಕೋ ಆ ಹುಡುಗನ ಬಗ್ಗೆ ತುಂಬಾ ಹೆಮ್ಮೆ ಅನಿಸಿತು. ತಮ್ಮ ಪದ್ಯವನ್ನು ಹೊಗಳಿಬಿಟ್ಟ ಅನ್ನುವುದಕ್ಕಿಂತ ಅವನ ಅರಿವಿನ ಶಕ್ತಿ ಮತ್ತು ಅದನ್ನು ಬಳಸಿದ್ದಕ್ಕಾಗಿ.

ಆ ಹುಡುಗನ ಕೈಹಿಡಿದು ಕುರ್ಚಿಯಿಂದ ಎದ್ದು ಅಲ್ಲೇ ಟೇಬಲ್ಲಿನ ಬುಡದಲ್ಲಿ ನೆಲದಲ್ಲಿ ಕೂತುಬಿಟ್ಟರು. ಬೇರೆ ದಾರಿಕಾಣದೆ ಆ ಹುಡುಗನೂ ಇವರ ಎದುರು ಕೂತ. ಎದುರು ಕೂತ ಹುಡುಗನ ಕಣ್ಣು ನೋಡಿದಂತೆಲ್ಲಾ ತಮ್ಮನ್ನು ಮರೆತು ಹೊರದೇಶದಲ್ಲಿರೋ ಮಗನ ನೆನಪು ತುಂಬಾ ಆಯಿತು.

“ನನ್ನ ಮಗನಿಗೆ ಪದ್ಯದ ಬಗ್ಗೆ ಒಂದಿಷ್ಟೂ ಒಲವಿಲ್ಲ. ಬೇಡ ಅವನು ಸಾಫ್ಟ್‌ವೇರ್ ಇಂಜಿನಿಯರ್. ನಿಮ್ಮ ಥರ. ಆದರೆ ತನ್ನ ಮಕ್ಕಳಿಗೆ ಕನ್ನಡವನ್ನೂ ಕಲಿಸಿಲ್ಲ. ಆ ಮಕ್ಕಳಿಗೆ ತನ್ನ ತಂದೆ ಕವಿ ಅಂತ ಕೂಡ ಹೇಳಿಲ್ಲ. ತಿಂಗಳು ತಿಂಗಳು ದುಡ್ಡು ತಪ್ಪದೆ ಕಳಿಸ್ತಾನೆ. ನಾಕೈದು ವರ್ಷಕ್ಕೊಮ್ಮೆ ಬಂದು ತಪ್ಪದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪೂರ್ತಿ ಟೆಸ್ಟ್ ಮಾಡಿಸ್ತಾನೆ. ಸಾಕಾ ಹೇಳಿ? ನನ್ನ ಹೆಂಡತಿ ವಾರಕ್ಕೊಮ್ಮೆ ತಪ್ಪದೆ ಫೋನು ಬರಲಿಲ್ಲ ಅಂತ ಹಂಬಲಿಸ್ತಾಳೆ. ಈ ಪದ್ಯ ಯಾವುದೂ ನನ್ನದಲ್ಲ. ಯಾಕೆಂದರೆ ಈಗೀಗ ಅನ್ನಿಸೋದು ಏನು ಗೊತ್ತ? ನನ್ನ ನಿಜವಾದ ನೋವನ್ನ, ಖುಷಿನ, ಆಸೆನ ನಾನು ಪದ್ಯದಲ್ಲಿ ಬರದೇ ಇಲ್ಲ. ಯಾರದೋ ಮಾತಿಗನುಗುಣವಾಗಿ ಬರದಿದೀನಿ ಅಂತ ಹೆದರತೀನಿ. ಬರೀವಾಗ ಅದು ನನ್ನ ಅಪ್ಪಟ ಅನುಭವ ಅನಿಸಿತ್ತು, ಆಗಿತ್ತು ಕೂಡ. ಒಂದು ಚೂರು ಅನುಮಾನ ಇರಲಿಲ್ಲ. ಆದರೆ ಈಗೀಗ…” ಕಣ್ಣೊರೆಸಿಕೊಂಡು ಏನಾದರೂ ಮಾಡಿಕೊಳ್ಳಿ ಎಂಬಂತೆ ಕೂತುಬಿಟ್ಟರು. ಕಂಪ್ಯೂಟರಿನ ಪರದೆಗಳು ಒಂದೊಂದಾಗಿ ಕಪ್ಪಾಗಿ ಏನೇನೋ ಆಕೃತಿಗಳನ್ನು ಚಿತ್ರವಿಚಿತ್ರವಾಗಿ ತೋರಿಸ ಹತ್ತಿದವು. ಒಂದೇ ಒಂದು ಪದವೂ ಇಲ್ಲದೆಯೂ ಇರುವ ಚಂದವನ್ನು ಅಚ್ಚರಿಯಿಂದ ಬಾಯಿಬಿಟ್ಟುಕೊಂಡು ನೋಡುತ್ತಾ ಇದ್ದರು. ಚುಕ್ಕೆಗಳು, ಗೀಟುಗಳು, ಬಣ್ಣಗಳು, ಚೌಕಗಳು, ಗೋಲಗಳು. ಚೌಕವಾಗುವ ಗೋಲಗಳು. ಬಣ್ಣ ಬದಲಿಸುವ ಹೂವು, ಮೋಡ, ಹುಲ್ಲು ಕಣಿವೆ ಬೆಟ್ಟ. ಇವನ್ನೇ ನೋಡುತ್ತಾ ಕೂತವರಿಗೆ ಎಷ್ಟು ಹೊತ್ತಾಯಿತು ಎಂದೇ ತಿಳಿಯಲಿಲ್ಲ. ನಂತರ ಕಣ್ಣು ಮುಚ್ಚಿದಾಗ ಕಣ್ಣಿನ ಒಳಗೂ ಅವೇ ಆಕೃತಿಗಳು ಬಂದು ಹೋಗತೊಡಗಿದವು. ತಮ್ಮ ನರನಾಡಿಗಳಲ್ಲಿ ತಾವೇ ಸಂಚಾರ ಹೊರಟಂತೆ ಕಂಡಿತು. ನರನಾಡಿಗಳ ಕಾಡುಮೇಡು ಸುಂದರವಾಗೇ ಇದ್ದವು.

ಇದ್ದಕ್ಕಿದ್ದ ಹಾಗೆ ಯಾರೋ ಪಿಸುಗುಟ್ಟಿದಂತಾಯಿತು. ಆ ಪಿಸುಗುಟ್ಟುವುದರಲ್ಲಿ ಆತಂಕವೂ ಇರುವಂತೆ ಭಾಸವಾಯಿತು. ಏನು ಆತಂಕ? ಆತಂಕವಿರಬೇಕಾದ್ದು ತನಗಲ್ಲವೆ? ಬಂಧಿತ ತಾನಲ್ಲವೆ? ಎಂಬೆಲ್ಲಾ ಪ್ರಶ್ನೆಗಳು ಇವರ ತಲೆಯಲ್ಲಿ ಹರಿದಾಡಿದವು. ಅವುಗಳಿಗೆ ಉತ್ತರ ಹುಡುಕುವ ಗೋಜಿಗೆ ಹೋಗುವುದೇ ಬೇಡ ಎನ್ನುವಂತೆ ಕಣ್ಣುಮುಚ್ಚಿಕೂತೇ ಇದ್ದರು. ಮತ್ತೆ ಮತ್ತೆ ಪಿಸುಗುಡುವುದು ಕೇಳಿತು. ಸಣ್ಣ ಮಗುವಿನ ದನಿಯಂತೆ ಕೇಳಿತು. ಉತ್ತರ ಬೇಡ ಅನಿಸಿದರೂ ಈಗ ಕುತೂಹಲ ಹೆಚ್ಚಾಯಿತು. ಕಣ್ಣು ಬಿಟ್ಟರೆ ಎದುರಿಗೆ ಕುಳ್ಳು ಹುಡುಗನೂ ತನ್ನೊಡನೆ ಕೂತೇ ಇದ್ದಾನೆ. ಆ ರೂಮಿನಲ್ಲಿ ಇನ್ನಾರೂ ಇಲ್ಲ ಎಂದು ಸುತ್ತ ನೋಡದೆಯೂ ಅರಿವಿಗೆ ಬಂದಿತು.

ಇವರು ಕಣ್ಣು ಬಿಡುವುದನ್ನೇ ಕಾದಿದ್ದ ಹುಡುಗ “ಬೇಗ ಹೊರಡಬೇಕು ಸಾರ್. ತಪ್ಪಿಸಿಕೊಳ್ಳೋಕೆ ಈಗಲೇ ಒಳ್ಳೆ ಚಾನ್ಸು. ಅವರು ವಾಪಸ್ಸು ಬಂದು ಬಿಟ್ಟರೆ ಕಷ್ಟ. ಬೇಗ ಏಳಿ ಸಾರ್.” ಎಂದು ಕೈಹಿಡಿದು ಒತ್ತಾಯಿಸಿದ. ವಯಸ್ಸಿನ ಅಂತರನೋ ಮತ್ತೇನೋ ಆ ಹುಡುಗ ತೋರಿಸುತ್ತಿದ್ದ ಆತಂಕದ, ಗಡಿಬಿಡಿಯ ಕಿಂಚಿತ್ತು ಭಾಗವೂ ಇವರಲ್ಲಿ ಇರಲಿಲ್ಲ. ಸಣ್ಣಗೆ ನಕ್ಕರು ಎಂದು ಕಾಣುತ್ತದೆ. ಆ ಹುಡುಗ “ತಮಾಷೆ ಅನ್ಕೋಬೇಡಿ ಸಾರ್. ನಿಮಗೆ ಗೊತ್ತಿಲ್ಲ. ಅವರು ವಾಪಸು ಬಂದರೆ ನಿಮ್ಮನ್ನು ಸುಮ್ಮನೆ ಬಿಡಲ್ಲ. ತುಂಬಾ ಗೋಳು ಹೋಯ್ಕೋತಾರೆ. ನೀವು ಬದುಕಿ ಉಳೀಬೇಕಾದರೆ ಬೇಗ ಓಡಿ ಹೋಗಬೇಕು” ಎಂದು ಮತ್ತಷ್ಟು ಗಾಬರಿ ಹುಟ್ಟಿಸಲು ಹವಣಿಸಿದ. ಇವರಿಗೆ ಎಲ್ಲಿಗೆ ಓಡಿಬೇಕು, ಯಾರಿಂದ ಓಡಬೇಕು, ಹೇಗೆ ಓಡಬೇಕು ಎಂಬುದು ಹೊಳೆಯಲೇ ಇಲ್ಲ. ಹುಡುಗರು ಒಳ್ಳೆಯವರಂತಲೇ ಕಂಡರಲ್ಲ? ಡ್ರೈವ್ ಮಾಡುವ ಹುಡುಗ ಇಲ್ಲದೆ ಓಡುವುದು ಹೇಗೆ? ಮನೆಗಾದರೆ ಹತ್ತಿರದಲ್ಲೇ ಬಸ್ ಸ್ಟಾಪೋ ಆಟೋನೋ ಸಿಗೊಲ್ಲವ? ಅಷ್ಷರಲ್ಲಿ ಹುಡುಗ ನೆಲದ ಮೇಲೆ ತೆವಳುತ್ತಾ ಬಾಗಲಿಗೆ ಹೋಗಿ ಅದರ ಕೀಲಿ ಕೈ ಕಿಂಡಿಯಿಂದ ಹೊರಗೆ ಇಣುಕ ತೊಡಗಿದ. ಇದು ನಾಟಕವೋ ನಿಜವೋ ಇವರಿಗೆ ಗೊತ್ತಾಗಲಿಲ್ಲ. ಎಲ್ಲ ಸರಾಗವಾಗಿ ನಡೀತಿತ್ತಲ್ಲ. ಈಗೆಲ್ಲಿ ಶುರುವಾಯಿತು ಈ ಕಳ್ಳ ಪೋಲೀಸ್ ಆಟ? ಕಣ್ಣಾ ಮುಚ್ಚಾಲೆ? ಯಾರು ಕಳ್ಳರು – ಅವರ ನಾವ? ಅವರು ನಮ್ಮನ್ನು ಹಿಡಿಯಲು ಬರುತ್ತಿದ್ದಾರೆಂದ ಮೇಲೆ ಅವರು ಕಳ್ಳರಿರಬೇಕು. ಯಾಕೆಂದರೆ ನಾವು ಒಳ್ಳೆಯವರಲ್ಲವೆ ಎಂದು ಪಕಪಕ ನಗಲು ತೊಡಗಿದರು. ಹುಡುಗ ಹಿಂದೆ ಇವರತ್ತ ತಿರುಗಿ ಶ್! ಎಂದು ಹುಬ್ಬುಗಂಟಿಕ್ಕಿ ಬೆರಳೆತ್ತಿ ಸಣ್ಣಗೆ ಗದರಿದ. ಇವರು ಗಪ್ಪನೆ ನಗು ನಿಲ್ಲಿಸಿ ಸೆಟೆದು ಕೂತರು.

ಹುಡುಗ ಸರಕ್ಕನೆ ತಿರುಗಿ “ಬಂದರು, ಬಂದರು – ಬರ್ತಾ ಇದ್ದಾರೆ. ಇಲ್ಲೇ ಬಚ್ಚಿಟ್ಟುಕೊಳ್ಳೋಣ ಬನ್ನಿ…” ಎಂದು ಇವರನ್ನು ಎಳೆದುಕೊಂಡು ಅಲ್ಲೇ ಮೂಲೆಯ ಕತ್ತಲಿಗೆ ಎಳೆದುಕೊಂಡು ಹೋಗಿ ಅಲುಗಾಡದಂತೆ ತಬ್ಬಿ ಹಿಡಿದ. ಇವರಿಗೆ ಈಗ ತಾನು ಇನ್ನೊಂದು ರೀತಿಯ ಬಂಧಿ ಅನಿಸತೊಡಗಿತು. ಈ ಹುಡುಗ ಅಪ್ಪಿರುವುದು ಪ್ರೀತಿಯಿಂದಲೋ, ಹೆದರಿಕೆಯಿಂದಲೋ ಅಥವಾ ತಾನು ಓಡಿಹೋಗದಂತೆ ನೋಡಿಕೊಳ್ಳಲೋ ಎಂದು ಗೊತ್ತಾಗಲಿಲ್ಲ. ಆ ಹಿತವಾದ ಹಿಡಿತದಲ್ಲಿ ಎಲ್ಲವೂ ಕೊಂಚ ಕೊಂಚ ಇತ್ತೆಂದು ಇವರಿಗೆ ಆ ಹಿಡಿತವೇ ಹೇಳುತ್ತಿತ್ತು. ಅದಕ್ಕೆ ಯಾವ ಪುರಾವೆಯೂ ಬೇಕಾಗಿರಲಿಲ್ಲ. ಈ ಮೂಲೆ ಎಷ್ಟು ಕತ್ತಲೆಯಲ್ಲಾ ಎಂದು ಅಚ್ಚರಿಯಾಯಿತು. ಈ ಕತ್ತಲೆ ಮುಂಚೆ ಇತ್ತೆ ಅಥವಾ ತಮಗೋಸ್ಕರ ಈ ಕ್ಷಣ ಹುಟ್ಟಿತೆ ಎಂದು ಕೇಳಬೇಕೆಂದುಕೊಂಡ ಪ್ರಶ್ನೆ “ಇಲ್ಲಿ ನಿಂತರೆ ಅವರಿಗೆ ಕಾಣೋಲ್ವ?” ಎಂಬ ರೂಪ ಪಡೆಯಿತು. ಎಷ್ಟು ಬಾಲಿಶ ಪ್ರಶ್ನೆಯಾಯಿತಲ್ಲ ಎಂದು ಇವರಿಗೇ ಅಚ್ಚರಿಯಾಯಿತು. ಆದರೆ ಇವರ ಪ್ರಶ್ನೆಗೆ ಉತ್ತರಕೊಡುವುದು ಹುಡುಗನಿಗೆ ಬೇಕಾಗಿರಲಿಲ್ಲ. ಅವನು ಇವರತ್ತ ನೋಡಲೂ ಇಲ್ಲ. ಅವನ ದೃಷ್ಟಿ, ಗಮನ ನೂರಕ್ಕೆ ನೂರರಷ್ಟು ಆ ಬಾಗಿಲ ಮೇಲೆ. ಆ ಹುಡುಗನ ತಲೆ ನೇವರಿಸಲು ಕೈ ಬಿಡಿಸಕೊಂಡರು. ಹುಡುಗನ ತಲೆ ಮುಟ್ಟಿದ್ದೇ ಕಿರಿಕಿರಿಗೊಂಡು ತಲೆ ದೂರ ಸರಿಸಿ ಮತ್ತೆ ಕೈ ಹಿಡಿದುಕೊಂಡ. ಅವನು ಉಸಿರೇ ಆಡುತ್ತಿಲ್ಲ ಅನಿಸುತಿತ್ತು.

ಧಡಕ್ಕನೆ ಬಾಗಿಲು ತೆಗೆದುಕೊಂಡಿತು. ರೂಮೆಲ್ಲಾ ಬೆಳಕಾಯಿತು. ಮೂಲೆಯಲ್ಲಿ ಇವರು ಅವಿತಿದ್ದ ಕತ್ತಲು ಥಟ್ಟನೆ ಹಾರಿಹೋಯಿತು. ರೂಮಿನ ಹೊರಗೆ ಇಷ್ಟು ಬೆಳಕು ನಮಗಾಗಿ ಕಾದಿತ್ತೆ ಎಂದು ಹುಟ್ಟಿದ ಅಚ್ಚರಿ ಕ್ಷಣಾರ್ಧದಲ್ಲಿ ಆ ಹುಡುಗನ ನಡುಗುವ ಕೈಗಳಿಂದಾಗಿ ಮಾಯವಾಗಿ ಇವರೂ ಉಸಿರು ಬಿಗಿ ಹಿಡಿದರು. ಬಾಗಿಲಿಗೆ ಯಾರಾದರೂ ಬರಬಹುದು ಎಂದು ಕಾದರು. ಕೆಲವು ಹೊತ್ತು ಯಾರೂ ಬರಲಿಲ್ಲ. ಹೊರಗೆ ಜೋರು ಜೋರಾದ ಮಾತುಗಳು ಕೇಳಿದವು. ಇವರಿಗೆ ಆ ಧ್ವನಿಗಳು ಗುರುತು ಹತ್ತಿ ಬಾಗಿಲಿಗೆ ಹೋಗಬೇಕು ಅನಿಸಿತು. ಕಿಟಕಿಯಿಂದ ಕೆಳಗೆ ನೋಡಿದವರೆಲ್ಲಾ ಅಲ್ಲೇ ಬಾಗಿಲ ಪಕ್ಕವೇ ಹೋಗುತ್ತಿದ್ದಾರೆ. ಎಷ್ಟು ಜೋರಾಗಿ ಮಾತಾಡುತ್ತಿದ್ದಾರೆ! ಹೊರಗೆ ಕಣ್ಣುಕುಕ್ಕುವಷ್ಟು ಬೆಳಕಿದೆ. ನಾನೂ ಹೋಗಬೇಕೆಂದರೆ ಈ ಕುಳ್ಳು ಹುಡುಗ ಬಿಡುತ್ತಿಲ್ಲ. ಅಷ್ಟರಲ್ಲಿ ತನಗೆ ಗುರುತಿನ ಸಣ್ಣವಯಸ್ಸಿನ ಕವಿಯೊಬ್ಬ ಬಾಗಿಲಲ್ಲಿ ನಿಂತು ಯಾರಿಗೋ ಪದ್ಯ ಬರೆಯುವುದು ಹೇಗೆ ಎಂದು ಹೇಳುತ್ತಿದ್ದುದು ಕೇಳಿತು. ಮೂರೇ ಹೆಜ್ಜೆಯಂತೆ. ಆ ಮೂರು ಹೆಜ್ಜೆಯನ್ನು ಕರಗತ ಮಾಡಿಕೊಂಡರೆ ಲೋಕ ಅಲುಗಾಡಿಸುವಂತ ಪದ್ಯ ಬರೆಯುಬಹುದಂತೆ. ಇವರಿಗೆ ಏನದು ಮೂರು ಹೆಜ್ಜೆ ಎಂದು ಕೇಳಬೇಕು ಅನ್ನುವ ತವಕ. ತಮಗೆ ಯಾಕೆ ಪದ್ಯ ಬರೆಯಲು ಅಷ್ಟು ಕಷ್ಟವಾಗುತ್ತದೆ. ಮೂರು ಹೆಜ್ಜೆ ಸಾಕಂತಲ್ಲ ಎಂದು ತಮ್ಮನ್ನೇ ಕೇಳಿಕೊಂಡರು. ನಾನು ಅಷ್ಟು ಪೆದ್ದನ ಹಾಗಾದರೆ? ಅಥವಾ ಅವನೇನಾದರೂ ಕೀಟಲೆ ಮಾಡುತ್ತಿರಬಹುದ? ಗೊತ್ತಾಗಬೇಕಾದರೆ ಮುಖ ನೋಡಬೇಕು. ಮುಖನೋಡೋದಿರಲಿ ಆ ಕತ್ತಲಿದ್ದ, ಈಗ ಬೆಳ್ಳಂಬೆಳಕಾಗಿರೋ ಮೂಲೆಯಿಂದ ಒಂದು ಹೆಜ್ಜೆ ಹೋಗಲೂ ಈ ಹುಡುಗ ಬಿಡುತ್ತಿಲ್ಲ. ಅವನು ಇವರನ್ನು ರಕ್ಷಿಸುತ್ತಿದ್ದಾನೋ ಅಥವಾ ಇವರಿಂದ ರಕ್ಷಣೆ ಪಡೆಯುತ್ತಿದ್ದಾನೋ ಹೇಗೆ ಹೇಳುವುದು. ಇವರ ತಲೆಯಲ್ಲೂ ಅದೇ ಯೋಚನೆ ಸುಳಿದು ಹೋಯಿತು. ಏಕೆಂದರೆ ಅಷ್ಟರಲ್ಲಿ ಬಾಗಿಲಿಗೆ ಆ ಹುಡುಗಿ ಬಂದು ನಿಂತು ಹೊರಗೆ ಯಾರೊಡನೆಯೋ ವಯ್ಯಾರದಿಂದ ಮಾತಾಡುತ್ತಿದ್ದಳು. ಬಾಬ್ಕಟ್ ಕೂದಲಿನ ಕುಳ್ಳು ಕೂದಲನ್ನೇ ಹಣೆಯಿಂದ ಪಕ್ಕಕ್ಕೆ ಸರಿಸಿಕೊಳ್ಳುತ್ತಿದ್ದಳು. ನಾಚುತ್ತಿದ್ದಳೇ? ಇಷ್ಟು ಕೆಂಪಗಿದ್ದಳೇ ಈ ಹುಡುಗಿ. ಮೊದಲು ಹಾಗನಿಸಲಿಲ್ಲವಲ್ಲ? ಅಥವಾ ನಾಚಿಕೆಯಿಂದ ಕೆಂಪಾಗಿರಬೇಕು. ಏನದು ಅಂಥ ನಾಚುವಂಥ ಸಮಾಚಾರ ಎಂದು ಇವರಿಗೆ ಕುತೂಹಲ ಕೆದರಿತು. ತನಗೆ ಗೊತ್ತಿದ್ದ ಸಣ್ಣ ವಯಸ್ಸಿನ ಕವಿ ಜೋರಾಗಿ ಪದ್ಯ ಬರೆಯುವ ಮೂರು ಹೆಜ್ಜೆಗಳ ಬಗ್ಗೆ ಭಾಷಣ ಬಿಗಿಯುತ್ತಲೇ ಇದ್ದ. ಆ ಹುಡುಗಿ ಏನೋ ಮೆಲ್ಲಗೆ ಉಸಿರಿ ರೂಮಿನ ಒಳಗೆ ತಿರುಗಿದಳು.

ತಿರುಗಿದ್ದೇ ಏನೋ ನೆನಪಾದವಳಂತೆ ಥಟ್ಟನೆ ನಿಂತಳು. ಇಡೀ ರೂಮನ್ನು ಒಮ್ಮೆ ನೋಡಿದಳು. ಇವರಿಬ್ಬರ ದಿಕ್ಕಿನಲ್ಲೂ ನೋಡಿದಳು. ಇವರು ಅವಳಿಗೆ ಕಂಡೇ ಇಲ್ಲದಂತೆ ಮುಖ ನಿರಾಳವಾಯಿತು. ಮತ್ತೆ ಬಾಗಿಲ ಕಡೆ ತಿರುಗಿ “ಬನ್ನಿ ಬನ್ನಿ” ಎಂದಳು. ಒಳಗೆ ಅವನು ಕಾಲಿಟ್ಟೊಡನೆ “ಏ ಹೇಗಿದ್ದೀಯ?” ಎಂದು ಇವರಿಗೆ ಕೂಗಬೇಕನಿಸಿತು. ತನಗಿಂತ ಒಂದೆರಡು ವರ್ಷವಷ್ಟೇ ಚಿಕ್ಕವನಾದ ಜನಪ್ರಿಯ ಕವಿ. ಕೂಗಿದ್ದರೂ ಕೇಳುತ್ತಿರಲಿಲ್ಲವೇನೋ ಎಂದು ಬಲವಾಗಿ ಅನಿಸಿದ್ದರಿಂದ ಸುಮ್ಮನಾದರು. ಆ ಹುಡುಗಿಗೆ ತಾನು ಕಾಣಲೇ ಇಲ್ಲವಲ್ಲ. ತನ್ನನ್ನು ಹಿಡಿದ ಹುಡುಗನಿಗೆ “ಅವರ ಕಣ್ಣಿಗೆ ನಾವು ಕಾಣಲ್ವ?” ಎಂದು ಮಕ್ಕಳಂತೆ ಕೇಳಿದರು. ಅವನು ಅಷ್ಟೇ ಮೆದುವಾಗಿ “ಅಲ್ಲಾಡಬೇಡಿ. ಮಾತಾಡಬೇಡಿ. ಅವರಿಗೆ ಗೊತ್ತಾಗಲ್ಲ. ಗೊತ್ತಾದರೂ ಅಲ್ಲಾಡದಿದ್ದರೆ ಅವರ ಗಮನಕ್ಕೆ ನಾವು ಬರಲ್ಲ” ಅಂದ. ಇವರಿಗೆ ಅರ್ಥವಾಗಲಿಲ್ಲ. ಅದು ಹೇಗೆ ಸಾಧ್ಯ ಎಂದು ಕೇಳಬೇಕನಿಸಿತು. ಆದರೆ, ನಿಯಮ ಹಾಗಿದ್ದರೆ ಒಳ್ಳೇದೇ ಅನಿಸಿ ಸುಮ್ಮನಾದರು. ಅವರಿಗೆ ಆ ಪಟಿಂಗ ಏನು ಮಾಡ್ತಾನೋ ನೋಡಬೇಕಾಗಿತ್ತು.

ಆ ಹುಡುಗಿ ವಯ್ಯಾರವಾಗಿ ಅವನತ್ತ ಆಗಾಗ ತನ್ನ ಚೆಲುವಿನ ನೋಟ ಬೀರುತ್ತಾ ನಡೆದು ಕಂಪ್ಯೂಟರ್ ಮುಂದೆ ಹೋಗಿ ಕೂತಳು. ಆ ಕವಿ ಕೈಯಲ್ಲಿದ್ದ ಗ್ಲಾಸಿಂದ ಕುಡಿಯುತ್ತಾ ಅವಳ ಪಕ್ಕದಲ್ಲೇ, ಅವಳ ಹೆಗಲಿಗೆ ಕೈಹಾಕಿ ನಿಂತ. ಅವಳು ಕಂಪ್ಯೂಟರಿನಲ್ಲಿ ಏನೋ ತೆರೆದು ತೋರಿಸಲು ತೊಡಗಿದೊಡನೆ ಅವನ ಕೈ ಅವಳ ಕತ್ತನ್ನು ಮೆಲ್ಲನೆ ಸವರಿತು. ಆ ಹುಡುಗಿಗೆ ಮುಜುಗರವಾಗಿ ಅತ್ತಿತ್ತ ಕತ್ತನ್ನು ತಪ್ಪಿಸಲು ನೋಡಿದಳು. ಆ ಹುಡುಗಿ ತೋರಿಸಿದ ಕಂಪ್ಯೂಟರ್ ಸ್ಕ್ರೀನನ್ನು ಕಷ್ಟಪಟ್ಟು ಕನ್ನಡಕದ ಮೂಲಕ ನೋಡಲು ಬಹಳೇ ಕಷ್ಟಪಡುತ್ತಿದ್ದ. ಅಲ್ಲಿ ಏನೋ ಕಂಡೊಡನೆ ಆ ಹುಡುಗಿ ಥಟ್ಟನೆ ಅವನತ್ತ ತಿರುಗಿ ನಕ್ಕಳು. ಅವನ ಮುಖದಲ್ಲೂ ನಗು ಮೂಡಿತು. ಒಂದಿಷ್ಟು ಉತ್ಸಾಹ ಬಂದವನಂತೆ ಜೋರಾಗಿ “ಬೇರೊಂದು ಮರವ ಹತ್ತಿ ಎಲೆಗಾಗಿ ಬಾಯ್ದೆರೆದು…” ಎಂದು ಉಸಿರು ಬಿಡದೆ ಪದ್ಯದ ಸಾಲುಗಳನ್ನು ಹೇಳಿದ. ಹುಡುಗಿ ಕಂಪ್ಯೂಟರ್ ಮೇಲೆ ತಟಪಟನೆ ಟೈಪ್‌ಮಾಡಿ “ಆ ಪದ್ಯ ನಿಮ್ಮದ?” ಎಂದು ಕೇಳಿದಳು. ಇವರು “ಅಲ್ಲ – ಅವನದಲ್ಲ… ಕಳ್ಳ… ಅದು ನನ್ನ ಸಾಲು” ಎಂದು ಚೀರಲು ಬಾಯ್ತೆರೆದರು. ಅಷ್ಟರಲ್ಲಿ ಇವರೊಡನಿದ್ದ ಹುಡುಗ ತಟ್ಟನೆ ಅವರ ಬಾಯಿ ಮುಚ್ಚಿಬಿಟ್ಟ. ಅವನಿಗೆ ಇವರ ಪ್ರತಿಕ್ರಿಯೆಯ ಬಗ್ಗೆ ಮುಂಚೆಯೇ ಗೊತ್ತಿರುವಂತಿತ್ತು. ಆ ಕವಿ ಮೆಲ್ಲನೆ ತುಂಬಾ ಬಿಗುಮಾನದಿಂದ ಹೌದೆಂಬಂತೆ ತಲೆಹಾಕಿದ. ಆ ಹುಡುಗಿ ತಲೆ ತಗ್ಗಿಸಿಯೇ ಏನೋ ಯೋಚಿಸುವಂತೆ ಕಾಣುತ್ತಿತ್ತು. ಕುಳ್ಳು ಹುಡುಗ ಇವರತ್ತ ನೋಡಿ ಸಣ್ಣಗೆ ನಕ್ಕ. ಇವರಿಗೆ “ನೀವೆಲ್ಲಾ ಬೆಪ್ಪುಗಳು… ಅವನು ಸುಳ್ಳು ಹೇಳ್ತಾ ಇದ್ದಾನೆ…” ಎಂದು ಹೇಳ ಹೊರಟಿದ್ದು, ಹುಡುಗ ಮುಚ್ಚಿದ ಕೈಯಡಿ ಗವಗವ ಎಂದಷ್ಟೇ ಆಯಿತು. ಅಷ್ಟರಲ್ಲಿ ಆ ಬಾಬ್ಕಟ್ ಹುಡುಗಿ ತಲೆಯೆತ್ತಿ – “ಸಾರ್. ಯಾಕೆ ಸುಳ್ಳು ಹೇಳ್ತಾ ಇದ್ದೀರ? ಅದು ನಿಮ್ಮ ಪದ್ಯ ಅಲ್ಲ… ಅದು…” ಎಂದು ಮಾತು ಪೂರ್ತಿ ಮಾಡುವಷ್ಟರಲ್ಲಿ ಆ ಕವಿಯ ಮುಖದ ಮೇಲಿನ ನಗು ಮಾಯವಾಗಿ ಬಿಗುವಾಯಿತು. “ಹಾ… ಎಲ್ಲಾರೂ… ಹಾಗೇ ಹೇಳೋದು… ಅವನು ಅದು ನನ್ನಿಂದ ಕದ್ದಿದ್ದು… ನಾನು ಎಷ್ಟೋ ಹಿಂದೆ ಬರೆದಿದ್ದ ಪದ್ಯದ ಸಾಲದು. ಪ್ರಕಟ ಆಗಿರಲಿಲ್ಲ. ಅವನಿಗೆ ತೋರಿಸಿದ್ದೆ…” ಇವರು ಹುಡುಗನ ಕೈಯಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಲೇ ಇದ್ದರು. ಕವಿಯ ಕೈ ಹುಡುಗಿಯ ಕತ್ತನ್ನು ಬಿಟ್ಟು ಜಗಳಕ್ಕೆ ನಿಲ್ಲುವಂತೆ ತನ್ನ ಸೊಂಟಕ್ಕೆ ಏರಿತು.

ಆ ಹುಡುಗಿ ಮತ್ತೆ ಏನೋ ಒಂದಷ್ಟು ಟೈಪ್ ಮಾಡಿದೊಡನೆ – ಕಂಪ್ಯೂಟರ್ ಪರದೆಯ ಮೇಲೆ ಒಂದು ಗ್ರಾಫ್ ಚಿತ್ರ ಮೂಡಿತು. ಆ ಕವಿ ಅದನ್ನು ತನ್ನ ಕಣ್ಣಿನ ಕೊನೆಯಿಂದ ನೋಡುತ್ತಾ ನಿಂತಿರುವಾಗ ಆ ಹುಡುಗಿ – “ಇದು ನೋಡಿ ಸಾರ್…” ಎಂದು ಅವರ ಗಮನ ಸೆಳೆದಳು. ಕವಿ ಅದರತ್ತ ಉಡಾಫೆಯಿಂದ ನೋಡುತ್ತಾ ನಿಂತಿದ್ದು ನೋಡಿ ಆ ಹುಡುಗಿ “ನಿಮ್ಮ ಪದ್ಯಗಳ ಅನಾಲಿಸಿಸ್ ಪ್ರಕಾರ, ಅದು ನಿಮ್ಮ ಸಾಲು ಆಗಿರಲಿಕ್ಕೆ ಸಾಧ್ಯವೇ ಇಲ್ಲ. ಬರೇ ಸರ್ಫೇಸ್, ಅಂದರೆ ಮೇಲುಮೇಲಿನ ಅನಾಲಿಸಿಸ್‌ನಿಂದಾನೆ ಇದು ಗೊತ್ತಾಗತ್ತೆ. ಇನ್ನೂ ಆಳದ ಅನಾಲಿಸಿಸ್ ಮಾಡಿದರೆ ಖಾತ್ರಿ ಆಗತ್ತೆ. ವಿವರಿಸಬೇಕೂಂದರೆ ಈಗ ನೋಡಿ, ನೀವು ‘ಬೇರೊಂದು’ ಪದವನ್ನು ಮತ್ತೊಂದು ಅನ್ನೋ ಅರ್ಥದಲ್ಲೇ ೯೯.೫% ಸಲವೂ ತಂದಿದ್ದೀರ. ಆದರೆ ಇಲ್ಲಿ ಅದು ‘ಒಂದು ಬೇರು’ ಅನ್ನುವ ಅರ್ಥದಲ್ಲಿ ಬಂದಿದೆ. ನಿಮ್ಮ ಪದ್ಯದಲ್ಲಾಗಿದ್ದರೆ ‘ಒಂದು ಬೇರು’ ಎಂದೇ ಬರುತ್ತಿತ್ತು ಎಂದು ಈ ಅನಾಲಿಸಿಸ್ ಹೇಳುತ್ತದೆ. ನಿಮ್ಮ ಪದ್ಯಗಳಲ್ಲಿ ‘ಬೇರು’ ಎಂದು ನೀವು ಎಂದೂ ಬರದೇ ಇಲ್ಲ – ಯಾವಾಗಲೂ ‘ಬೇರುಗಳು’ ಅಂತಲೇ ಬರದಿದ್ದೀರ – ನೂರಕ್ಕೆ ನೂರರಷ್ಟು ಸಲವೂ. ಇದು ಬರೇ ವರ್ಡ್ ಯೂಸೇಜ್ ವಿಷಯದಲ್ಲಿ. ಇನ್ನು ಪ್ರತಿಮೆಗಳ ವಿಷಯಕ್ಕೆ ಬಂದರೆ… ನೀವು ಮರ, ಬೇರು, ಎಲೆ ಇವುಗಳನ್ನು ರೂಪಿಸುವ ಪ್ರತಿಮೆ ಬೇರೆ ಬಗೆಯದು… ಈ ಅನಾಲಿಸಿಸ್ ನೋಡಿ ಇಲ್ಲಿ – ಯೂಸೇಜ್ ಆಫ್ ಇಮೇಜರಿ ಅನಾಲಿಸಸಿನ ಪ್ರಕಾರ…” ಕವಿಗೆ ಸಿಟ್ಟು, ಅವಮಾನ ಹತಾಶೆ ಎಲ್ಲಾ ಒಟ್ಟಿಗೆ ಆದ ಹಾಗಾಗಿ ಆ ಹುಡುಗಿಯ ಮಾತು ಮುಗಿಸಲು ಕಾಯದೆ ರೂಮಿಂದ ಹೊರಗೆ ನಡೆದು ಬಿಟ್ಟ. ಆತ ಅಲ್ಲಿ ಇಲ್ಲದಿರುವುದನ್ನು ನೋಡಿ ಆ ಹುಡುಗಿ ನಿರಾತಂಕವಾಗಿ ಕಂಪ್ಯೂಟರಿನ ಪರದೆಯನ್ನು ಆರಿಸಿ ಮೆಲುನಗೆ ನಗುತ್ತಾ ತಾನೂ ಅಲ್ಲಿಂದ ಹೊರಟಳು. ಇದನ್ನೆಲ್ಲಾ ನೋಡುತ್ತಾ ಇವರಿಗೆ ಖುಷಿ ತಡೆಯಲಾರದೆ ಆ ಹುಡುಗನನ್ನು ಬಲವಾಗಿ ಅಪ್ಪಿಕೊಂಡರು.

ಆ ಹುಡುಗಿ ಬಾಗಿಲು ಹಾಕಿಕೊಂಡು ಹೋದೊಡನೆ ಮತ್ತೆ ಇವರಿಬ್ಬರನ್ನು ಕತ್ತಲು ತಬ್ಬಿತು. ಇವರಿಗಂತೂ ಆ ಹುಡುಗಿ ಮತ್ತು ಉಳಿದ ಹುಡುಗರ ಬಗ್ಗೆ ಈ ಕಪ್ಪು ಕುಳ್ಳು ಹುಡುಗ ಸುಳ್ಳು ಹೇಳುತ್ತಿದ್ದಾನೆ ಎಂದು ಅನುಮಾನವೇ ಉಳಿಯುಲಿಲ್ಲ. ಅವನಿಂದ ತಪ್ಪಿಸಿಕೊಳ್ಳಲು ಆಗದಷ್ಟು ಬಿಗಿಯಾಗಿ ಹಿಡಿದಿದ್ದಾನೆ. ಆ ಹಿಡಿತವೇ ಅವನ ಕ್ರೌರ್ಯವನ್ನು ಸಾಬೀತು ಮಾಡುವಂತಿತ್ತು. ಅವನ ನೋಟ ಕೂಡ ಅದೇ ಕತೆ ಹೇಳುತ್ತಿರುವಂತೆ ಇವರಿಗೆ ಭಾಸವಾಯಿತು. ಆದರೆ, ಈಗ ಏನೂ ಮಾಡುವಂತಿರಲಿಲ್ಲ. ಆ ಗಟ್ಟಿ ಕೈಗಳು ಸಡಿಲಾಗುವವರೆಗೂ ಕಾಯುವುದು ಒಂದನ್ನು ಬಿಟ್ಟು. ಈಗ ಮತ್ತೆ ಯಾರಿಂದ ತಪ್ಪಿಸಿಕೊಳ್ಳಬೇಕು, ಯಾರು ತನ್ನನ್ನು ಬೇಟೆಯಾಡುತ್ತಿದ್ದಾರೆನ್ನುವುದು ಇವರಿಗೆ ತಿಳಿಯದಂತ ಸ್ಥಿತಿ ನಿರ್ಮಾಣಗೊಂಡಿತು. ಈ ಹುಡುಗನ ಹಿಡಿತದಲ್ಲಿದ್ದ ಪ್ರೀತಿ ಈಗ ಕಾಣೆಯಾಗಿ ಬರೇ ಹುಂಬತನ ಮತ್ತು ಒರಟುತನ ಕಾಣತೊಡಗಿತು. ಇವನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸತೊಡಗಿದರು. ಯಾವುದೇ ದಾರಿ ತೋರದೆ ಒಂದು ಬಗೆಯ ಹತಾಶೆ ಇವರನ್ನು ಆವರಿಸಿತು.

ಇವರ ಹತಾಶೆ ಗೊತ್ತಾದಂತೆ ಆ ಹುಡುಗ “ಬೇಸರ ಪಡಬೇಡಿ ಸಾರ್. ನಿಮ್ಮನ್ನ ನಾನು ಮನೆಗೆ ಕರಕೊಂಡು ಹೋ‌ಗ್ತೀನಿ. ಬನ್ನಿ” ಎಂದು ಕೈ ಹಿಡಿದು ದರದರನೆ ಬಾಗಿಲಿನ ಎದುರಿನ ಗೋಡೆ ಕಡೆ ಎಳೆದುಕೊಂಡು ಹೋದ. ಅಲ್ಲೆಲ್ಲಿ ಹೋಗೋದು ಎಂದು ಕೇಳುವಷ್ಟರಲ್ಲಿ ಅಲ್ಲೊಂದು ಗೋಡೆಯಲ್ಲಿದ್ದ ಬಾಗಿಲನ್ನು ಆ ಹುಡುಗ ತೆಗೆದ. ಅರೆ ಅಲ್ಲೊಂದು ಬಾಗಿಲು ಇತ್ತ? ಏನಿದು ತನ್ನ ಸುತ್ತಲೂ ಇದ್ದದ್ದು ಕಾಣ್ತಿಲ್ಲ, ಇದ್ದಕ್ಕಿದ್ದ ಹಾಗೆ ಅಲ್ಲಿವರೆಗೂ ಕಾಣದ್ದು ಧುತ್ತನೆ ಅವತರಿಸಿಬಿಡತ್ತೆ. ಈ ಜಗತ್ತಿನ ನಿಯಮಗಳೇನು ಎಂದು ಈ ಹುಡುಗನನ್ನು ಕೇಳಬೇಕು ಎನಿಸಿ ಅವನತ್ತ ನೋಡಿದರೆ, ಅವನು ಇವರ ಯಾವುದೇ ತಾಕಲಾಟಕ್ಕೂ ಮನಸ್ಸು ಕೊಡದೆ ಅಲ್ಲಿಂದ ತಪ್ಪಿಸಿಕೊಳ್ಳುವ ದಾರಿ ಹುಡುಕುವುದರಲ್ಲಿ ಮಗ್ನವಾಗಿದ್ದಂತಿತ್ತು. ಇವರನ್ನು ಕರೆದುಕೊಂಡು ಲಿಫ್ಟಿನ ಎದುರೇ ಹೋಗುವಾಗ ಲಿಫ್ಟಲ್ಲಿ ಹೋಗಬಹುದಲ್ಲ ಎಂದು ಅನಿಸಿತು. ಆ ಹುಡುಗ “ಲಿಫ್ಟ್‌ ಬೇಡ ಸಾರ್. ಕೆಳಗೆ ಕಾಯ್ತಾ ಇರತಾರೆ. ಅವರ ತಲೆ ಹೇಗೆ ಓಡತ್ತೆ ಅಂತ ನನಗ್ಗೊತ್ತು. ನೀವು ಹೀಗ್ಬನ್ನಿ” ಎಂದು ಇನ್ನೆತ್ತಲೋ ಎಳೆದೊಯ್ದ. ಅಲ್ಲಿದ್ದ ಮೆಟ್ಟಿಲೊಂದನ್ನು ಹತ್ತಿಸತೊಡಗಿದ. ಕೆಳಗೆ ಹೋಗಬೇಕಲ್ಲ. ಈಗಷ್ಟೇ ಅವನೇ ಹೇಳಿದನಲ್ಲ. “ಈಗೇನು ಮೇಲಕ್ಕೆ?” ಎಂದು ಕೇಳಿದರು. ಅವನು ಬಾಯಿಗೆ ಬೆಟ್ಟಿಟ್ಟು ಸುಮ್ಮನೆ ಮೆಟ್ಟಿಲು ಹತ್ತಿಸಿದ. ಒಂದು ಮಹಡಿ. ಎರಡು ಮಹಡಿ. ಮೂರು. ನಾಕು… ಇವರಿಗೆ ಏದುಸಿರು ಬರಹತ್ತಿತ್ತು. ಆ ಹುಡುಗ ತಿರುಗಿ “ಆಗತ್ತ ಸಾರ್?” ಎಂದು ತುಂಬಾ ಕಾಳಜಿಯಿಂದ ಕೇಳಿದೊಡನೆ ಇವರಿಗೆ ಮನಸ್ಸು ಕರಗಿತು. ತನಗಾಗಿ ಇಷ್ಟು ಕಷ್ಟಪಡುತ್ತಿದ್ದಾನಲ್ಲ ಅನಿಸಿ ಪರವಾಗಿಲ್ಲ ಎಂದು ಮೆಟ್ಟಿಲು ಹತ್ತಿದರು. ಮತ್ತೊಂದು ಮಹಡಿ, ಮತ್ತೆ ಮೇಲಕ್ಕೆ. ಏದುಸಿರು ಬಂದು ಸುಧಾರಿಸಿಕೊಳ್ಳಲು ನಿಂತು ಆ ಹುಡುಗನ ಕೈಹಿಡಿದು “ಇನ್ನೂ ಎಷ್ಟು ಹತ್ತಬೇಕು?” ಎಂದು ಕೇಳಿದರು. ಆ ಹುಡುಗ ಮೇಲೆ ನೋಡಿ “ಇನ್ನೊಂದು ಐದಾರು ಮಹಡಿ ಅಷ್ಟೆ ಸಾರ್. ತಾರಸಿಗೆ ಹೋದಕೂಡಲೆ…” ಇವರಿಗೆ ಗಕ್ಕನೆ ಚುಚ್ಚಿದಂತಾಯಿತು. ಇವನ್ಯಾಕೆ ತಾರಸಿಗೆ ಕರಕೊಂಡು ಹೋಗ್ತಾ ಇದ್ದಾನೆ. ಸರಿಯಾಗಿ ಪದ್ಯ ಹೇಳಲಿಲ್ಲ ಅಂತಾನೋ, ತನ್ನ ಯಾವ ಪದ್ಯದ ಸಾಲೂ ನೆನಪಿರದಕ್ಕೆ ಸಿಟ್ಟಾಗಿದಾನ. ಮೇಲಿಂದ ತಳ್ಳಿ ಕೊಲ್ಲೋ ಯೋಚನೆ ಇರಬಹುದ. ಇವರ ಹೆಜ್ಜೆ ನಿಧಾನವಾದವು. ಸುಸ್ತಿನ ಜತೆ ಅನುಮಾನ ಭಯ ಏನೆಲ್ಲಾ ಸೇರಿಕೊಂಡವು. ಎದೆ ಡವಡವ ಅನ್ನುತ್ತಿತ್ತು.

ಒಂದು ಮಹಡಿಗೆ ಬಂದೊಡನೆ ಪಕ್ಕದ ಬಾಗಿಲಿನ ಹೊರಗೆ ಏನೇನೋ ಮಾತುಗಳು ಕೇಳತೊಡಗಿತು. ಕೆಲವು ದನಿಗಳು ಇವರಿಗೆ ಪರಿಚಯವಾಯಿತು. ಆ ಹುಡುಗಿ ಮತ್ತು ಉಳಿದ ಹುಡುಗರ ನಡುವೆ ಆತಂಕದ ಮಾತುಗಳು ಅಸ್ಪಷ್ಟವಾಗಿ ಕೇಳುತ್ತಿದ್ದವು. ಜತೆಗೆ ಕೆಲವು ಕವಿ ಗೆಳೆಯರ ಮಾತುಗಳೂ ಸೇರಿಕೊಂಡಿದ್ದವು. ಆಗಾಗ ಮಾತು ಪಿಸುಮಾತಿಗೆ ಇಳಿಯುತ್ತಿತ್ತು. ಏನು ನಡೀತಿದೆ ಅವರ ನಡುವೆ ಅನ್ನುವ ಕುತೂಹಲ ಇವರನ್ನು ತಿನ್ನುತಿತ್ತು. ಪಿಸುಮಾತಿನಲ್ಲೂ ಇವರ ಹೆಸರು ಕೇಳಿಬಂದಂತೆ ಅನಿಸಿತು. ಅಂದರೆ ಅವರೆಲ್ಲಾ ಎನೋ ಪಿತೂರಿ ನಡೆಸುತ್ತಿದ್ದಾರೆಯೆ? ಈ ಹುಡುಗ ಹೇಳುವುದು ನಿಜವಿರಬಹುದು. ಇಲ್ಲಿಯವರೆಗಿನದೆಲ್ಲಾ ತನ್ನನ್ನು ನಂಬಿಸಲು ನಡೆದ ನಾಟಕವಿರಬೇಕು. ತಾನು ಅಷ್ಟು ಬೇಗೆ ಮೋಸಹೋದೆನಲ್ಲ. ಹೀಗೆಲ್ಲಾ ತಲೆಯಲ್ಲಿ ಅನುಮಾನದ ಅಸ್ಪಷ್ಟ ಅಲೆಗಳು ಏಳುತ್ತಿರುವಾಗ ಏನು ಮಾಡಲೂ ತೋಚದೆ ಕುಳ್ಳು ಹುಡುಗನತ್ತ ನೋಡಿದರು. ಇವರ ಮುಖದಿಂದಲೆ ಮನದ ತಳಮಳ ಅರಿತುಕೊಂಡವನಂತೆ ಆ ಹುಡುಗ ಬಾಗಿಲಿಗೆ ಕಿವಿಗೊಟ್ಟು “ನಾನು ಹೇಳಲಿಲ್ಲವ? ನೋಡಿ-ನನಗೆ ಗೊತ್ತಿತ್ತು” ಎಂದು ಇವರ ಕೈಯನ್ನು ಬಿಗಿಯಾಗಿ ಹಿಡಿದ. ಇವನಿಂದ ಬಿಡಿಸಿಕೊಂಡು ಆ ಬಾಗಿಲ ಬಳಿ ಹೋಗಿ ಸ್ಪಷ್ಟವಾಗಿ ಕೇಳಬೇಕು ಅಂತ ಇವರಿಗೆ ಬಲವಾಗಿ ಅನಿಸಿತು. ಆದರೆ ಆ ಹುಡುಗ ಇವರನ್ನು ಬಾಗಿಲಿಂದ ದೂರ ಹಿಡಿದಿದ್ದ. “ಸಾರ್. ಅವರು ತುಂಬಾ ಅಪಾಯ! ಆಗಲೇ ಹೇಳಿದನಲ್ಲ, ಅರ್ಥವಾಗಲಿಲ್ಲವ!” ಎಂದು ಎಚ್ಚರಿಸುವಂತೆ ದನಿಯೆತ್ತರಿಸಿ ಹೇಳಿದ್ದು ಇವರನ್ನು ಮೆತ್ತಗಾಗಿಸಿತು. ಅವನು ಎಚ್ಚರಿಸದಿದ್ದರೂ ಅವನಲ್ಲದೆ ಇವರಿಗೆ ಈಗ ಯಾರು ಗತಿ ಎಂಬಂತಾಗಿತ್ತು. ಅವನ ಜತೆ ಮೆಟ್ಟಿಲು ಹತ್ತ ತೊಡಗಿದರು.

ಹುಡುಗ ಥಟ್ಟನೆ ನಿಂತುಬಿಟ್ಟ. ಇವರನ್ನು ಅಲ್ಲೇ ಹಿಡಿದು ನಿಲ್ಲಿಸಿಕೊಂಡ. ಏನೆಂದು ಇವರು ಇಣುಕಿ ನೋಡಲೂ ಬಿಡದೆ “ತಡೀರಿ ಸಾರ್, ಮುಂದೆ ಹೋಗೋದು ಬೇಡ… ಥೂ… ನಾಚಿಕೆ ಬಿಟ್ಟವರು…” ಎಂದ. ಇವರ ಕುತೂಹಲ ದ್ವಿಗುಣವಾಯಿತು. ತಮ್ಮ ನಡುಗುವ ಕೈಗಳಿಂದ ಬಿಡಿಸಿಕೊಂಡು ಇಣುಕಲು ಹಾತೊರೆಯುವಾಗ, ಆ ಕುಳ್ಳು ಹುಡುಗ ಸೋತವನಂತೆ ಇವರ ಕೈಬಿಟ್ಟು ಅಲ್ಲೇ ದಬ್ಬಕ್ಕನೆ ಕೂತುಬಿಟ್ಟ. ಮುಖ ಮುಚ್ಚಿಕೊಂಡು ಮುಸಿಮುಸಿ ಅಳುತೊಡಗಿದ. ಇವರಿಗೆ ಕಳವಳವಾಯಿತು. ಅಂತಹದೇನದು ಎಂಬಂತೆ ಒಂದು ಮೆಟ್ಟಿಲು ಮೇಲೆ ಹತ್ತಿ ನೋಡಿ ಇವರು ಅವಕ್ಕಾದರು. ಬಾಬ್ಕಟ್ ಹುಡುಗಿಯೂ, ಡ್ರೈವ್ ಮಾಡಿದ ಹುಡುಗನೂ ಚುಂಬಿಸುತ್ತಾ ಒಬ್ಬರನ್ನೊಬ್ಬರು ಮುದ್ದಿಸುತ್ತಾ ಮೈಮರೆತ್ತಿದ್ದರು. ಇವರು ಕೈಗೆ ಬಾಯಿಟ್ಟು ಒಂದು ಹೆಜ್ಜೆ ಹಿಂದಕ್ಕೆ ಬಂದೊಡನೆ, ಆ ಹುಡುಗಿಗೆ ಯಾರೋ ನೋಡಿದರು ಎಂದು ಅನಿಸಿರಬೇಕು. ಥಟ್ಟನೆ ದೂರ ಸರಿದು ಕೂದಲು ಬಟ್ಟೆ ಸರಿ ಮಾಡಿಕೊಂಡು ಮೆಟ್ಟಿಲು ಇಳಿದು ಬಂದಳು. ಇವರು ಬಂದು ಆ ಹುಡುಗನ ಬಳಿ ನಿಂತೊಡನೆ ಆ ಹುಡುಗಿಯೂ ಕೂತ ಹುಡುಗನ ಬಳಿ ಬಂದು ಅವನ ಬೆನ್ನಿಗೆ ಕೈಹಾಕಿ ಕೂತಳು. ಅವನ ಕಿವಿಯಲ್ಲಿ ಏನೋ ಪಿಸುಗುಟ್ಟುತ್ತಲೇ ಇದ್ದಳು. ಅಳುತ್ತಿದ್ದ ಹುಡುಗ ಅವಳನ್ನು ದೂರ ತಳ್ಳುತ್ತಾ ತಲೆಯಾಡಿಸುತ್ತಲೇ ಇದ್ದ. ಅವನ ಭುಜದ ಮೇಲೆ ಕೈ ಹಾಕಿ ಸಾಂತ್ವನ ಮಾಡುತ್ತಲೇ ಇದ್ದಳು. ಇಬ್ಬರೂ ತಮ್ಮನ್ನು ಮರೆತವರಂತೆ ಇರುವುದು ನೋಡಿ ಇವರ ಮನಸ್ಸಿನಲ್ಲಿ ವಿಚಿತ್ರವಾದ ಭಾವಗಳು ಮೂಡಿತು. ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂದೇ? ತಮ್ಮದೇ ಲೋಕದಲ್ಲಿ ಕಳೆದುಹೋಗಿದ್ದಾರೆ ಎಂದೇ? ತಮ್ಮ ಬಗ್ಗೆ ತೋರಿದ ಆಸಕ್ತಿಯೆಲ್ಲಾ ಸುಳ್ಳು ಎಂದೇ? ಒಂದೂ ಗೊತ್ತಾಗಲಿಲ್ಲ. ಗಂಟಲು ಸರಿಪಡಿಸಿಕೊಳ್ಳುವಂತೆ ಸದ್ದು ಮಾಡಿದರು. ಕೂಡಲೇ ತಮ್ಮ ಬಗ್ಗೆಯೇ ನಾಚಿಕೆಯಾಯಿತು. ಏನನ್ನೋ ಪರಿಹರಿಸಿಕೊಳ್ಳುತ್ತಿರಬೇಕಾದರೆ ತನ್ನದು ಸ್ವಾರ್ಥ ಅನಿಸಿತು. ತಮ್ಮ ಇರವನ್ನು ನೆನಪಿಸುವುದು ಅತಿ ಕ್ಷುಲ್ಲಕ ಅನಿಸಿತು.

ಒಂದು ಹೆಜ್ಜೆ ಮೇಲೆ ಹೋಗಿ ಸುಸ್ತಾದವರಂತೆ, ಕಾಯುವವರಂತೆ ಕೂತುಬಿಟ್ಟರು. ಕ್ಷಣ ಕಳೆದು ಇಬ್ಬರೂ ಗುಸುಗುಸು ಎಂದು ಮಾತಾಡಿಕೊಳ್ಳುತ್ತಲೇ ಎದ್ದು ನಿಂತರು. ಆ ಹುಡುಗಿ ಇವರತ್ತ ತಿರುಗಿ “ಇಲ್ಲೇ ಇರಿ. ಒಂದು ನಿಮಿಷ ಬರುತೀವಿ” ಎಂದವಳೇ ಇಬ್ಬರೂ ಮೆಟ್ಟಿಲು ಇಳಿದು ಹೊರಟು ಬಿಟ್ಟರು. ಇವರಿಗೆ ಒಳಗೆ ಹೊರಗೆ ಮೇಲೆ ಕೆಳಗೆ ಎಲ್ಲ ಬಿಕೋ ಅನಿಸತೊಡಗಿತು. ಏನು ಯೋಚಿಸುವುದೂ ಅರ್ಥಹೀನ ಅನಿಸಿತು. ಯಾವುದಕ್ಕೂ ಬೆಲೆಯಿಲ್ಲ ಎಂಬಂತೆ ಮೂಡಿದ ಭಾವಕ್ಕೆ ತಾವೇ ಬೆಚ್ಚಿಬಿದ್ದರು. ತಮ್ಮ ಹೆಂಡತಿಯನ್ನು ಮೊದಲು ಭೇಟಿಮಾಡಿದ ದಿನ. ಅವಳು ಕಾಲೇಜಿಗೆ ಹೋಗುತ್ತಾ ತಮ್ಮತ್ತ ಬೀರಿದ ಕುಡಿನೋಟ. ತಮ್ಮ ತಲೆಯಲ್ಲಿ ಎದ್ದ ಹುಚ್ಚು ಅಲೆ. ಹಲವಾರು ದಿನ ಅವಳು ಹೋಗಿ ಬಂದತ್ತ ಅಲೆದದ್ದು. ಯಾವುದೋ ಲೇಖಕರ ಭಾಷಣಕ್ಕೆ ಆಕೆ ಬಂದಿದ್ದು ನೋಡಿ ಇವರಿಗೆ ಸ್ವರ್ಗವೇ ಸಿಕ್ಕಂತಾಗಿದ್ದು. ಕಾಲೇಜಲ್ಲಿ ಇಲ್ಲದ ಧೈರ್ಯ ಅಲ್ಲಿ ಹೇಗೇ ಉಕ್ಕಿ ಬಂದು ಅವಳ ಪಕ್ಕವೇ ಹೋಗಿ ಕೂತು ಮಾತು ಶುರುಮಾಡಿದ್ದು. ಅದು ಹರಟೆಯಾಗಿದ್ದು. ಭಾಷಣಕ್ಕೆ ಇಬ್ಬರೂ ಕಿವಿಗೊಡದೆ ಮಾತಾಡುತ್ತಾ ಅಕ್ಕಪಕ್ಕದವರ ಕೈಯಲ್ಲಿ ಶ್ಶ್ ಅನ್ನಿಸಿಕೊಂಡದ್ದು, ಅನ್ನಿಸಿಕೊಂಡದ್ದಕ್ಕೆ ಏನೋ ಅರ್ಥವಿದೆ ಅಂತ ಇಬ್ಬರಿಗೂ ಅನಿಸಿತ್ತು. ಇಬ್ಬರೂ ಕೇಳದ ಭಾಷಣ ಮುಗಿದಿದ್ದೇ ಆಕೆ ಥಟ್ಟನೆ ಹೊರಟುಹೋಗಿದ್ದು. ಮರುದಿನ ಕಾಲೇಜಲ್ಲಿ ಏನೂ ಆಗದವಳಂತೆ, ತನ್ನ ಗುರುತೇ ಇಲ್ಲದವಳಂತೆ ಇದ್ದದ್ದು ನೆನಪಾಗಿ ಮೈ ಬೆಚ್ಚಗಾಯಿತು. ಯಾಕೋ ನಾವು ಅಂದಿನ ಹರಟೆ ಮುಗಿಸಲೇ ಇಲ್ಲ. ಆಮೇಲೆ ಏನೇನೋ ಮಾತಾಡಿದ್ದೇವೆ. ಆದರೆ ಆ ಮೊಟ್ಟಮೊದಲ ಹರಟೆಗೆ ಮರಳಿಯೇ ಇಲ್ಲ. ಅದನ್ನು ಮುಗಿಸಿಲ್ಲ ಎಂದು ತೀವ್ರ ಕಳವಳವಾಯಿತು. ಹೆಚ್ಚು ದಿನ ಉಳಿದಿಲ್ಲ ಎಂಬಂತ ಭಾವ ಮೊದಲ ಬಾರಿಗೆ ಎದೆ ನಡುಗಿಸಿತು.

ಎದೆ ನಡುಗಿದ್ದೇ ಬೇಗ ಮನೆಗೆ ಹೋಗಬೇಕು ಎಂಬ ತವಕ ಹತ್ತಿಕೊಂಡಿತು. ಮನೆ ತಲುಪಿದ್ದೇ ಆ ಹರಟೆಯನ್ನು ಮುಗಿಸಬೇಕು ಅಂತ ತಮಗೇ ಮೇಷ್ಟ್ರು ಮಗುವಿಗೆ ಹೇಳಿಕೊಂಡಂತೆ ಹೇಳಿಕೊಂಡರು. (ಮಗುವಿನ ಮನಸ್ಸಿನ ಚಂಚಲತೆಯಿಂದ ಅದು ಮರೆಬಹುದು ಎಂಬ ಮೇಷ್ಟ್ರಿನ ವಿವೇಕ ಬಲವಾಗಿತ್ತು.) ಎದ್ದು ಬಟ್ಟೆ ಕೊಡವಿಕೊಂಡು ಮೂಲೆಯಲ್ಲಿ ಕಾಣುತ್ತಿದ್ದ ಬಾಗಿಲಿಗೆ ನಡೆದರು, ಇನ್ನೇನು ಬಾಗಿಲಿಗೆ ಕೈಹಚ್ಚಬೇಕು ಅನ್ನುವಾಗ ಅದು ಧಡಕ್ಕನೆ ತೆಗೆದುಕೊಂಡು ಆ ಹುಡುಗಿ ಕಾಣಿಸಿಕೊಂಡಳು. ಅವಳ ಮುಖದಲ್ಲಿ ಕಿಂಚಿತ್ತೂ ನಾಚಿಕೆಯಾಗಲಿ ಇಲ್ಲದ್ದು ಇವರಿಗೆ ಸೋಜಿಗವಾಯಿತು. ಆ ಹುಡುಗನ ಜತೆ ಮುದ್ದಾಡುತ್ತಿದ್ದವಳು ಇವಳೆಯೇ ಎಂದು ಕೇಳಿಕೊಂಡರು. ಆ ಹುಡುಗಿ ಬಂದವಳೇ ಇವರನ್ನು ತಬ್ಬಿಕೊಂಡು ಬಿಟ್ಟಳು. ಪಿಸುಮಾತಲ್ಲಿ “ನಿಮ್ಮ ಬಗ್ಗೆ ಎಷ್ಟು ಆತಂಕವಾಗಿತ್ತು ಗೊತ್ತ? ಸದ್ಯ ಸಿಕ್ಕಿದರಲ್ಲ!” ಎಂದು ಅವರ ಭುಜ ಹಿಡಿದು ಚಂದವಾಗಿ ನಕ್ಕಳು. ಇವರಿಗೆ ಅವಳ ನಗುವಿನಲ್ಲಿದ್ದ ಎಲ್ಲ ಭಾವಗಳೂ ಅರ್ಥವಾದ ಹಾಗನಿಸಿತು. “ಆ ಹುಡುಗನ ಜತೆ ನೀನು…” ಎಂದು ಏನೋ ಹೇಳಲು ಹೊರಟವರನ್ನು ಅವಳೇ ತಡೆದು “ನಮ್ಮ ಪ್ರಾಜೆಕ್ಟ್‌ನಲ್ಲೆಲ್ಲಾ ನಾನೇ ಒಬ್ಬಳೇ ಹುಡುಗಿ. ನನಗೆ ಒಬ್ಬನ ಮೇಲೇ ಮನಸ್ಸಿರೋದು. ಉಳಿದವರು ಕಷ್ಟ ಕೊಡಬಹುದು ಅಂತ ಅವರ ಜತೆ ಸಲಿಗೆಯಿಂದ ನಡಕೋತೀನಿ. ಅದನ್ನೋಡಿ ತಪ್ಪು ತಿಳಕೋಕೂಡದು…” ಇವರಿಗೆ ತಟ್ಟನೆ ನಾಚಿಕೆಯಾಗಿ “ಛೆ! ಇಲ್ಲ ಇಲ್ಲ… ತಪ್ಪು ಯಾಕೆ ತಿಳಕೋಬೇಕು.” ಎಂದು ಅವಳು ಮೊಮ್ಮಗಳು ಎನ್ನುವಂತೆ ತಲೆ ನೇವರಿಸಲು ಕೈಯಿಟ್ಟೊಡನೆ ಅವಳು “ನೀವಲ್ಲ ಅಂಕಲ್. ಇದಾರೆ ಜನ. ನೀತಿ ನಿಯತ್ತು ಇಲ್ಲದೋರು. ನನಗೆ ಪ್ರಾಜೆಕ್ಟ್‌ಗಿಂತ ಹುಡುಗರಲ್ಲೇ ಹೆಚ್ಚು ಆಸಕ್ತಿ ಅಂತ ಮೊದಲೇ ಅಂದುಕೊಂಡು ಮಾತು ಶುರು ಮಾಡ್ತಾರೆ. ತೆಗೆದು ಕಪಾಳಕ್ಕೆ ಬಾರಿಸಬೇಕು ಅನ್ಸತ್ತೆ. ಅಯ್ಯೋ ನನ್ನ ಕತೆ ಬಿಡಿ… ನೀವೀಗ ಏನು ಮಾಡಬೇಕು ಅಂತಿದೀರಿ?” ಎಂದು ನಿಂತು ಮುಂದಿನ ಹೆಜ್ಜೆ ನಿರ್ಧರಿಸುವಂತೆ ಕೇಳಿದಳು.

“ಅಂದುಕೊಂಡ ಹಾಗೆ ಏನೂ ಆಗ್ತಿಲ್ಲ, ಆಗಿದ್ದನ್ನ ನಾನು ಅಂದುಕೊಂಡೇ ಇರಲಿಲ್ಲ. ಆಗೋದು ನಮ್ಮ ಅನಿಸಿಕೆಯನ್ನು ರೂಪಿಸಿಬಿಡತ್ತೆ. ಎಚ್ಚರವಾಗಿರಬೇಕು.” ಎಂದೆಲ್ಲಾ ಹೇಳಬೇಕನಿಸಿತೇ ಹೊರತು ಬೇಗ ಮನೆಗೆ ಹೋಗಬೇಕು, ಮುಖ್ಯವಾದ ಕೆಲಸ ಇದೆ ಎಂದು ಹೇಳಲು ಬಾಯೇ ಬರಲಿಲ್ಲ. ಅದರ ಬದಲು “ನನ್ನನ್ನ ಇಲ್ಲಿ ಯಾಕೆ ಕರಕೊಂಡು ಬಂದಿರಿ?” ಎಂದು ಮಾತ್ರ ಕೇಳಿದರು. “ನಾವೆಲ್ಲಿ ಕರಕೊಂಡು ಬಂದಿವಿ? ನೀವೇ ಬಂದಿದ್ದಲ್ವ? ಕಂಪ್ಯೂಟರ್ ಅಂದರೆ ತುಂಬಾ ಆಸಕ್ತಿ. ನಿಮ್ಮ ಪದ್ಯಗಳನ್ನೆಲ್ಲಾ ಅದರಲ್ಲಿ ಹಾಕಿ ಮುಂದೆ ಬರೋ ತಲೆಮಾರಿಗೆ ಉಳಿಸಬೇಕು. ಅದೊಂದು ಆಸೆ ಉಳಿಕೊಂಡಿದೆ ಅಂದಿದ್ರಂತೆ?” ಆ ಹುಡುಗಿಯ ಮಾತನ್ನು ನಿರಾಕರಿಸಲು ಬಾಯೇ ಬರಲಿಲ್ಲ. ಅವಳು ನಿಜ ಹೇಳುತ್ತಿರಬಹುದೆಂಬ ಅನುಮಾನಕ್ಕಿಂತ ಹೆಚ್ಚಾಗಿ ಅದನ್ನು ನಿರಾಕರಿಸಿ ಸಾಧಿಸುವುದು ಹೇಗೆ ಅಂತ ಅವರಿಗೆ ತೋಚಲಿಲ್ಲ. “ಅದು ಹಾಗಲ್ಲ. ಕಂಪ್ಯೂಟರ್ ಬಗ್ಗೆ ನನಗೂ ಆಸಕ್ತೀನೆ. ಆದರೆ…” ಎಂದು ಪದಗಳಿಗೆ ಹುಡುಕವಾಗ ಆ ಹುಡುಗಿಯೇ ಇವರ ಕಷ್ಟ ನೋಡಲಾಗದೆ “ಹೋಗಲಿ ಬಿಡಿ. ಡ್ರೈವ್ ಮಾಡೋನು ಬರ್ತಾನೆ ಆದಷ್ಟು ಬೇಗ ಇಲ್ಲಿಂದ ತಪ್ಪಿಸಿಕೊಂಡು ಹೋಗೋಣ” ಅಂದಿದ್ದೆ ಅರೆ ಈ ಹುಡುಗಿಯೂ ತಪ್ಪಿಸಿಕೊಳ್ಳುವ ಮಾತಾಡ್ತಾ ಇದ್ದಾಳಲ್ಲ. ಯಾರಿಂದ ಎಂದು ಯಾರೂ ಹೇಳಲ್ಲ. “ಯಾಕಮ್ಮ ತಪ್ಪಿಸಿಕೋಬೇಕು?” ಎಂದು ಕೇಳಿಯೇ ಬಿಟ್ಟರು. ಆ ಹುಡುಗಿ ತಟ್ಟನೆ “ನಿಮ್ಮನ್ನ ಇಲ್ಲಿ ಕರಕೊಂಡು ಬಂದನಲ್ಲ ಅವನಿಂದ ತಪ್ಪಿಸಿಕೊಳ್ಳದೇ ಇದ್ದರೆ ಅಷ್ಟೆ. ನಿಮ್ಮನ್ನ ಮೇಲೆ ಕರಕೊಂಡು ಹೋಗಿ ಕೆಳಗೆ ತಳ್ಳಬೇಕು ಅಂತ ಪ್ಲಾನ್ ಮಾಡಿದ್ದನಂತೆ. ಈಗ ಬಿಡಿ ಉಪಾಯದಿಂದ ಇಲ್ಲಿಂದ ಕರಕೊಂಡು ಹೋಗಿ ಅವನನ್ನು ರೂಮಲ್ಲಿ ಕೂಡಿ ಹಾಕಿ ಬಂದಿದ್ದೀನಿ” ಎಂದು ಹೇಳುವಾಗಲೇ ಪಾರ್ಟಿ ನಡೆದ ಜಾಗಕ್ಕೆ ಬಂದರು. ಅಲ್ಲಿ ಪಾರ್ಟಿ ನಡೆದಿತ್ತು ಅಂತ ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ತಟ್ಟೆ ಲೋಟದಿಂದ ಹೇಳಬಹುದಿತ್ತು. ಆದರೆ ಇವರಿಗೆ ಆಶ್ಚರ್ಯವಾಗಿದ್ದು ಅಲ್ಲಿ ಬಿದ್ದಿದ್ದ ಬಟ್ಟೆ ಬರೆ, ಚಪ್ಪಲಿ ಶೂಸು ನೋಡಿ. ಏಲ್ಲಿ ಹೋಗಿದ್ದಾರೆ ಇವರೆಲ್ಲಾ? ಇಲ್ಲಿ ಯಾಕೆ ಇವೆಲ್ಲ ಬಿದ್ದಿದೆ ಎಂದು ಯೋಚಿಸುವಾಗಲೇ ಆ ಹುಡುಗಿ “ಈ ಕಡೆ ಬನ್ನಿ. ನಮ್ಮ ಜನಕ್ಕೆ ಒಂದು ಚೂರೂ ಬುದ್ಧಿ ಇಲ್ಲ. ನೋಡಿ ಹೇಗೆ ಕಸ ಮಾಡಿದ್ದಾರೆ. ಕ್ಲೀನರ್ಸ್ ಬೆಳಿಗ್ಗೆ ಬರೋವರಗೂ ಹೀಗೆ ಇರತ್ತೆ. ಥತ್, ಮಾನ ಮರ್ಯಾದೆ ಬಿಟ್ಟವರು.” ಎಂದು ಹೇಳುತ್ತಾ ಕಾಲಿಗೆ ಸಿಕ್ಕ ಚಪ್ಪಲಿಯನ್ನು ಪಕ್ಕಕ್ಕೆ ಒದ್ದದ್ದು ನೋಡಿ ಇವರಿಗೆ ಆ ಹುಡುಗಿಯ ಬಗ್ಗೆ ಯಾಕೋ ತುಂಬಾ ಅಭಿಮಾನವಾಯಿತು. ಅವಳ ಹೃದಯ ಸರಿಯಾದ ಕಡೆಯೇ ಇದೆ ಎಂದು ಖಾತ್ರಿಯಾಯಿತು.

ಆದರೂ ಚಪ್ಪಲಿ ಶೂಸು ಬಗೆಹರಿಯಲಿಲ್ಲ. ಅದನ್ನೇ ನೋಡುತ್ತಾ ನಿಂತವರನ್ನು ಹೊರಡಿಸುವಂತೆ ಅವಳು “ಇಲ್ಲಿ ಗಲಾಟೆಯಾಗಿದ್ದು ನಿಮಗೆ ಗೊತ್ತಿಲ್ವ? ಎಲ್ಲೆಲ್ಲಿಂದಲೋ ಪೋಕರಿಗಳೆಲ್ಲಾ ಬಂದು ಕಲ್ಲು ಹೊಡೆದಿದ್ದು, ಪಾರ್ಟಿಯೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದು, ಒಂದಿಬ್ಬರಿಗೆ ಕಲ್ಲು ತೂರಾಟದಿಂದ ಏಟಾಗಿ ರಕ್ತ ಹರಿದಿದ್ದು? ಅವರೆಲ್ಲಾ ಬಡವರಂತೆ, ತಿನ್ನೋಕೆ ಇಲ್ವಂತೆ. ಅದಕ್ಕೆ ಇಲ್ಲಿ ಬಂದು ಕಲ್ಲು ಹೊಡೆದರೆ ಊಟ ಸಿಗತ್ತ? ಹೋಗಿ ಗೌರ್ಮೆಂಟನ್ನ ಕೇಳಬೇಕು” ಎಂದು ಸಿಡುಕಿನಿಂದ ಹೇಳಿದಳು. ಅವಳಿಗೆ ಅರ್ಥವಾಗುವಂತೆ ಹೇಳಬೇಕು ಅನಿಸಿದರೂ, ಇಲ್ಲಿ ಗಲಾಟೆಯಾಗಿದ್ದು, ಅದು ತಮಗೆ ಗೊತ್ತಾಗದೇ ಹೋಗಿದ್ದು ಇವೇ ಇವರನ್ನು ಆವರಿಸಿಕೊಂಡುಬಿಟ್ಟಿತು. ಅದು ಹೇಗೆ ಒಂದೇ ಬಿಲ್ಡಿಂಗನಲ್ಲಿದ್ದೂ ನಡೆಯೋ ಘಟನೆ ಗೊತ್ತಾಗೋದೇ ಇಲ್ಲ? ಗೊತ್ತಾದರೂ ಯಾರು ಯಾಕೆ ಗಲಾಟೆ ಮಾಡಿದರು ಅನ್ನೋದು ಎಷ್ಟು ಬೇಗ ಪುರಾಣ ಆಗಿ ಹೋಗತ್ತಲ್ಲ. ಪುರಾಣದ ಸುಳ್ಳಿನ ಮೂಲಕ ಸತ್ಯ ಬಿಚ್ಚಿಡಬಹುದು. ಆದರೆ ನಮ್ಮ ಚಾಣಾಕ್ಷತನದಲ್ಲಿ ಪುರಾಣಗಳನ್ನು ಸತ್ಯ ಬಚ್ಚಿಡೋದಕ್ಕೆ ಬಳಸ್ತೀವಲ್ಲ? ಇದೆಲ್ಲಾ ಬಗೆಹರೀದೆ ಇವಳಿಗೆ ಹೇಗೆ ಅರ್ಥಮಾಡಿಸೋದು? ಕಾಲಲ್ಲಿ ಏನೋ ಚುರಕ್ ಅಂದ ಹಾಗಾಯಿತು. ಸ್ಸ್ ಎನ್ನುತ್ತಾ ಕೂತು ಕಾಲಿಗೆ ಚುಚ್ಚಿಕೊಂಡ ಗಾಜಿನ ತುಂಡನ್ನು ಕಿತ್ತುಕೊಂಡರು. ಸವೆದ ಚಪ್ಪಲಿ ಒಳಗಿಂದ ಚುಚ್ಚಿತ್ತು. ರಕ್ತ ಬಳಕ್ಕನೆ ಚಿಮ್ಮಿತು. ಹುಡುಗಿ “ಅಯ್ಯೋ, ತಡೀರಿ ಬ್ಯಾಂಡೇಜ್ ತರ್ತೀನಿ” ಅಂತ ಓಡಿದಳು. ಇವರು ಸುತ್ತ ಕಿಟಕಿ ಬಾಗಿಲು ನೋಡಿದರು. ಒಂದೂ ಗಾಜೂ ಒಡೆದಿರಲಿಲ್ಲ. ಇದೆಲ್ಲಿಂದ ಬಂತು ಹಾಗಾದರೆ ಎಂದು ಕೈಯಲ್ಲಿದ್ದ ಗಾಜು ನೋಡದಾಗ ಅದು ಯಾವುದೋ ಲೋಟದ ಪೀಸು ಅಂತ ಗೊತ್ತಾಯಿತು. ಅಷ್ಟರಲ್ಲಿ ಆ ಬಾಬ್ಕಟ್ ಹುಡುಗಿ ಚುರುಕಾಗಿ ಬಂದು ಗಾಯ ಒರೆಸಿ, ಬ್ಯಾಂಡೇಜ್ ಅಂಟಿಸಿಬಿಟ್ಟಳು. ಅವಳ ಚುರುಕುತನಕ್ಕೆ ಇವರು ಬೆರಗಾದರು. ನೀನು ನರ್ಸ್ ಆಗಬೇಕಿತ್ತು ಎಂದು ಅನಿಸಿದ್ದನ್ನು ಹೇಳಲಿಲ್ಲ. ಎಂತ ಕ್ಲೀಷೆ ಅನಿಸಿತು. ಇವರ ಕಾಲಿಗೆ ಇನ್ನೆಲ್ಲಾದರೂ ಏಟಾಗಿದೆಯ ಎಂದು ನೋಡುತ್ತಾ “ನಮ್ಮ ಕೆಲಸ ಈ ಪುಂಡರಿಗೆ ಅರ್ಥ ಆಗಲ್ಲ. ಅದಕ್ಕೆ ನಮ್ಮನ್ನ ಅನುಮಾನದಿಂದ ನೋಡ್ತಾರೆ. ಚಾನ್ಸ್ ಸಿಕ್ಕಿದ ತಕ್ಷಣ ಕಲ್ಲು ಹೊಡೀತಾರೆ. ಒಂದಿಷ್ಟೂ ಕಂಟ್ರೋಲೆ ಇಲ್ಲ.” ಎಂದು ಗೊಣಗಿಕೊಳ್ಳುವಾಗ ದೂರದಿಂದ ಡ್ರೈವ್ ಮಾಡಿದ ಹುಡುಗ ಪೋಕರಿಯಂತೆ ನಿಂತು ಇವರನ್ನೇ ನೋಡುತ್ತಿದ್ದ.

ಇವರು ಆ ಹುಡುಗ ಯಾರೋ ಎಂದು ಗೊತ್ತಾಗದೆ ಹೆದರಿ ಆ ಹುಡುಗಿಯನ್ನು ಮೆದುವಾಗಿ ತಿವಿದರು. ಅವಳು ತಲೆಯೆತ್ತಿ ಇವರ ದೃಷ್ಟಿ ಅನುಕರಿಸಿ ಅವನನ್ನು ನೋಡಿ ಕೈಮಾಡಿ ಕರೆದಳು. ಅವನು ಬೇಡ ನೀವೇ ಬನ್ನಿ ಎಂಬಂತೆ ಸನ್ನೆ ಮಾಡಿದ. ಆ ಹುಡುಗಿ “ಇವನೊಬ್ಬ ದಡ್ಡ” ಎನ್ನುತ್ತಾ ಅವನ ಬಳಿ ಇವರನ್ನು ಕೈ ಹಿಡಕೊಂಡು ಹೋದಳು. ಹತ್ತಿರ ಹೋದೊಡನೆ ಅವನೇ ಅವಳ ಬಳಿ ಬಂದು ಪಿಸುದನಿಯಲ್ಲಿ ಇವರಿಗೆ ಕೇಳದ ಹಾಗೆ ಏನೇನೋ ಹೇಳಿದ. ಅವಳು ಅದಕ್ಕೆ ಸಮಜಾಯಷಿಯನ್ನೂ ಹೇಳಿದಳು. ಸ್ವಲ್ಪ ಮುಂಚೆಯಷ್ಟೇ ಮೆಟ್ಟಿಲಲ್ಲಿ ನಿಂತು ಒಬ್ಬರಲ್ಲೊಬ್ಬರು ಮೈಮರೆತಿದ್ದರಲ್ಲ. ಈಗ ಎಷ್ಟು ಗಂಭೀರವಾಗಿ ಮಾತಾಡುತ್ತಿದ್ದಾರಲ್ಲ. ಇಬ್ಬರ ಕಣ್ಣಲ್ಲೂ ಮೋಹದ ಅಮಲಿಲ್ಲವಲ್ಲ ಎಂದು ಮತ್ತೆ ಮತ್ತೆ ಅವರ ಕಣ್ಣುಗಳಲ್ಲಿ ಹುಡುಕಿದರು.

ನೋಡ ನೋಡುತ್ತಾ ಇವರನ್ನು ಕಾರಿನ ಬಳಿ ಕರಕೊಂಡು ಬಂದು ಇಬ್ಬರೂ ಒಳಗೆ ಕೂಡಿಸಿದರು. ಇದ್ದಕ್ಕಿದ್ದ ಹಾಗೆ ಆ ಹುಡುಗಿ ತಾನೂ ಬಗ್ಗಿ ಇವರನ್ನೂ “ಬಗ್ಗಿ ಬಗ್ಗಿ” ಎಂದು ಒತ್ತಾಯಿಸಿದಳು. ಇವರು ಯಾಕೆಂದು ಅರ್ಥವಾಗದಿದ್ದರೂ ಆ ಹುಡುಗಿಯ ದನಿಯಲ್ಲಿದ್ದ ಆತುರತೆಯನ್ನು ಗುರುತಿಸಿ ಬಗ್ಗಿಬಿಟ್ಟರು. ಹೊರಡಬೇಕಾಗಿದ್ದ ಕಾರು ಹೊರಡದೇ ಇರುವಾಗ “ಹೊರಡೋ… ಬೇಗ!” ಎಂದು ಪಿಸುಗುಟ್ಟಿದ್ದಳು. ಡ್ರೈವ್ ಮಾಡುವ ಹುಡುಗ “ಅವರು ನೋಡಿ ಬಿಟ್ಟಿದ್ದಾರೆ.” ಎನ್ನುವಾಗಲೇ ಇವರ ಕಿಟಕಿ ಬಳಿ ಮೊದಲು ಸಿಕ್ಕ ಹುಡುಗ ಬಂದು ನಿಂತಿದ್ದ. ಇನ್ನೊಂದು ಕಿಟಕಿ ಬಳಿ ಕುಳ್ಳುಹುಡುಗ. ಇಬ್ಬರೂ ಆವೇಶದಿಂದ ಇದ್ದರು. ಅವರ ಹಿಂದ ಕೈಯಲ್ಲಿ ದೊಣ್ಣೆ ಖಡ್ಗ ಹಿಡಿದ ಹಲವಾರು ಕಾರಿನ ಬಳಿ ಬರಲು ನುಗ್ಗುತ್ತಿದ್ದರು. ಇವರಿಬ್ಬರು ಅವರನ್ನೆಲ್ಲಾ ತಡೆದು ಹಿಂದಕ್ಕೆ ಹಿಡಿದಂತಿತ್ತು. ಹುಡುಗಿ ಹಿಂದೆ ತಿರುಗಿ ನೋಡಿ ಚಿಟ್ಟನೆ ಚೀರಿದಳು. ದೂರದಲ್ಲಿ ಒಂದು ಕಾರು ಧಗಧಗ ಎಂದು ಉರಿಯುತ್ತಿತ್ತು. ಅದನ್ನು ನೋಡಿ ಇವರು ಹುಡುಗಿಯ ಕೈಯನ್ನು ಬಲವಾಗಿ ಹಿಡಿದರು. “ಹೆದರಬೇಡಿ. ಇವರಿಬ್ಬರು ಇದ್ದಾರಲ್ಲ. ಏನೂ ಆಗಲ್ಲ” ಎಂದು ಅವಳು ಹೇಳುತ್ತಿದ್ದರೂ ಇವರಿಗೆ ಗೊತ್ತಿರುವ ಹುಡುಗರೇ ಹೆದರಿಕೆ ಹುಟ್ಟಿಸುವಂತಿದ್ದರು. ಅವರ ಕಣ್ಣುಗಳೂ ಉಳಿದವರ ಕಣ್ಣುಗಳಂತೆ ನಿಗಿನಿಗಿ ಉರಿಯುತ್ತಿದೆಯೋ ಅಥವಾ ಅದು ಬರೇ ನನ್ನ ಭ್ರಮೆಯೋ ಎಂದು ಕೇಳಿಕೊಳ್ಳುವಾಗಲೇ ಮೊದಲು ಸಿಕ್ಕ ಹುಡುಗ ಹಚ್ಚಗೆ ನಕ್ಕ. ಮೊದಲು ಸಿಕ್ಕಾಗಲೂ ಹೀಗೇ ನಕ್ಕಿದ್ದ ಅಂದುಕೊಂಡರು. ತನ್ನ ಹಳೇ ಪದ್ಯದ ನಾಯಕನಲ್ಲವೇ ಇವನು ಎಂದು ಇವರೂ ನಕ್ಕರು. ಆದರೆ ಒಳಗೊಳಗೆ ಆ ನಗುವಿನ ಹಿಂದೆ ಸಣ್ಣ ಅಣಕವೂ ಇದ್ದಂತೆ ಅನಿಸಿ ಬೆವತರು.

ಅಷ್ಟರಲ್ಲಿ ಆ ಕುಳ್ಳು ಹುಡುಗ ಡ್ರೈವ್ ಮಾಡುವವನಿಗೆ ಹೋಗೆನ್ನುವಂತೆ ಸೂಚಿಸಿದ. ಇವರಿಗೆ ತಲೆಬಾಗಿ ಕೈಮುಗಿದ. ಇವರಿಗೆ ಏನು ಮಾಡಬೇಕೆಂದು ಹೊಳೆಯಲಿಲ್ಲ. ಅವನ ಮೃದು ಕೈಗಳನ್ನಾದರೂ ಒಮ್ಮೆ ಹಿಡಿಯಬೇಕನಿಸಿತು. ಅನಿಸಿದ್ದು ತಡೆಯಲಾರದ ಒತ್ತಡವಾಗಿ “ಕಾರು ನಿಲ್ಸಿ” ಎಂದು ಪಿಸುಗುಟ್ಟಿದರು. ಆ ಹುಡುಗಿ ತಟ್ಟನೆ “ಬೇಡ… ಬೇಡ…ಬೇಗ ಹೋಗು… ನಿಮಗೇನಾಗಿದೆ?” ಎಂದು ಕೇಳಿದರು. ಇವರಿಗೆ ತನ್ನ ಬಾಲ್ಯದ ಗೆಳೆಯ ಶಂಕರನ ಬಗ್ಗೆ ಈ ಹುಡುಗಿಗೆ ಎಲ್ಲ ಹೇಳಬೇಕು ಅನಿಸಿ ಎಲ್ಲಿ ಶುರು ಮಾಡುವುದು ಎಂದು ಯೋಚಿಸಿದರು. ಆ ಗಳಿಗೆಯಲ್ಲೇ ಇವರಿಗೆ ತನಗೆ ಕತೆ ಹೇಳಲು ಬರೋದಿಲ್ಲ ಅನಿಸಿತು. ಪದ್ಯ ಬರೀಬಹುದು. ಆದರೆ ಕತೆ ಹೇಳಲಿಕ್ಕೆ ಹೋದರೆ ಕತೆ ಹೇಳಿಸಿಕೊಂಡವರು ಮತ್ತು ಕೇಳಿದವರು ಇಬ್ಬರಿಗೂ ತಾನು ಅಪಚಾರ ಮಾಡಿದಂತಾಗುತ್ತದಲ್ಲ. ಇದೆಂತಾ ಸಂದಿಗ್ಧ ಎಂದು ಹಿಡಿದಿದ್ದ ಆ ಹುಡುಗಿಯ ಕೈಬಿಡುತ್ತಾ “ನಿನ್ನ ಕೈ ಕೂಡ ತುಂಬಾ ಮೃದುವಾಗಿದೆ” ಅಂದರು. ಆ ಹುಡುಗಿ ಅಸಹ್ಯದಿಂದೆಂಬಂತೆ ಕೈ ತಟ್ಟನೆ ಹಿಂದಕ್ಕೆಳೆದುಕೊಂಡು ಹೊರನೋಡುತ್ತಾ ಕುಳಿತಳು.

ಇವರ ಮನೆಯ ರಸ್ತೆಗೆ ತಿರುಗುವುದು ಬೇಡ, ನೋಡಿದವರು ಏನಂದುಕೊಂಡಾರು ಎಂದು ಆತಂಕದಿಂದ ಇವರು “ಇಲ್ಲೇ ಬಿಡಿ” ಎಂದೊಡನೆ ಇವರ ಮಾತಿನ ಇಂಗಿತ ಅರಿತವನಂತೆ ಡ್ರೈವ್ ಮಾಡುತ್ತಿದ್ದ ಹುಡುಗ ನಿಲ್ಲಿಸಿದ. ಇವರು ನಿಧಾನಕ್ಕೆ ನಡೆದು ಮನೆಯ ಬಾಗಿಲವರೆಗೂ ಹಿಂದೆ ತಿರುಗಿ ನೋಡಲಿಲ್ಲ. ನೋಡಿದರೆ ಏನೋ ಕಾದಿದೆ ಎಂಬಂತ ಆತಂಕದಲ್ಲೇ ನಡೆದರು. ಬಾಗಿಲು ತಟ್ಟಿ ಕಡೆಗೊಮ್ಮೆ ಎಂಬಂತೆ ಹಿಂದಕ್ಕೆ ತಿರುಗಿ ನೋಡಿದರು. ಕಾರು ಹೊರಟು ಹೋಗಿತ್ತು. ದಡಬಡನೆ ಬಾಗಿಲು ತೆಗೆದ ಹೆಂಡತಿ “ಇಷ್ಟು ಬೇಗ ಬಂದುಬಿಟ್ಟರ? ಆಟೋಲಿ ಬಂದರ? ಆಟೋ ಸದ್ದೇ ಆಗಲಿಲ್ಲ” ಎನ್ನುವಾಗ ಒಳಗೆ ಬಂದು ಚಪ್ಪಲಿ ಬಿಚ್ಚಿ ಕಾಲು ತೊಳೆದುಕೊಳ್ಳಲು ಒಳಗೆ ಹೋಗುವಾಗ ಹೆಂಡತಿ ಬಾಗಿಲು ಹಾಕುವ ಸದ್ದು ಕೇಳಿ ದಡಬಡನೆ ಬಚ್ಚಲಿಂದ ಹೊರಬಂದು “ಬಾಗಿಲು ಹಾಕಬೇಡ, ತೆಗೆದೇ ಇರಲಿ… ” ಎಂದು ಹೇಳಿ ಮತ್ತೆ ಮೆಲ್ಲಗೆ ಬಚ್ಚಲಿಗೆ ನಡೆದರು.