ಕಥಾ ಪ್ರಕಾರದಲ್ಲಿ ನಾಗರೇಖ ಪ್ರಯೋಗಶೀಲರು ಎಂಬುದಕ್ಕೆ ‘ಸ್ಟಾಕ್ ಹೋಮ್ ಸಿಂಡ್ರೋಮ್’ನ್ನು ಹೆಸರಿಸಬಹುದು. ಕಥೆಗೆ ಮನಃಶಾಸ್ತ್ರದ ಹಿನ್ನೆಲೆ ಇದೆ. ನೋಯಿಸಿದವರನ್ನು ನಿಷ್ಠುರವಾಗಿ ನಿರಾಕರಿಸಲಾರದ ಅಸಹಾಯಕತೆಯಲ್ಲಿ ಅವರ ಬಾಂಧವ್ಯಕ್ಕೆ ಅಂಟಿಕೊಳ್ಳುವ ವಿಚಿತ್ರ ಮನೋವ್ಯಾಕುಲತೆಯಿದು. ಸಂಪ್ರೀತ, ಸಾತಮ್ಮ ಮತ್ತು ಡಾ. ಸುದತಿಯರ ಮನೋಮಾರ್ಗದ ಮೂಲಕ ಚಲಿಸುವ ಕಥಾ ರಥದ ನಿರೂಪಣೆ ವಿಶಿಷ್ಟವಾಗಿದೆ. ಡಾ. ಸುದತಿ ತನ್ನಂತೆಯೇ ಗಂಡನ ವ್ಯಗ್ರತೆಯನ್ನು ಪ್ರೀತಿಸುವ ಸಾತಮ್ಮನನ್ನು ವಿಷಾದದ ಕನ್ನಡಿಯಲ್ಲಿ ನೋಡುತ್ತಾಳೆ. ಸಿದ್ಧಾಂತವೊಂದರ ಅಳತೆಗೆ ಕಥೆಯನ್ನು ಹೊಲಿಯುವ ತಂತ್ರ ಹೊಸತನ್ನು ಹೇಳಲಾರದು.
ನಾಗರೇಖಾ ಗಾಂವಕರ ಹೊಸ ಕಥಾ ಸಂಕಲನ “ಮೌನದೊಳಗೊಂದು ಅಂತರ್ಧಾನ” ಕ್ಕೆ ಶ್ರೀಧರ ಬಳಗಾರ ಬರೆದ ಮುನ್ನುಡಿ

ಹೊಸ ಕಾಲದ ಲೇಖಕಿಯರ ಸಾಹಿತ್ಯ ರಚನೆಯಲ್ಲಿ ಆತ್ಮವಿಮರ್ಶೆ ಮತ್ತು ಆತ್ಮವಿಶ್ವಾಸ ಎರಡೂ ಗುಣಗಳನ್ನು ಕಾಣಬಹುದಾಗಿದೆ. ಸ್ತ್ರೀಯರಿಗೇ ವಿಶಿಷ್ಟವಾದ ಅನುಭವ ಮತ್ತು ಹೊಸ ಸಂವೇದನೆಯಿಂದ ಬರೆಯುತ್ತಿರುವ ಜಾಗ್ರತ ಲೇಖಕಿಯರು ‘ಮಹಿಳಾ ಸಾಹಿತ್ಯ’ ಎಂಬ ರಿಯಾಯಿತಿಯನ್ನೊ ಮೀಸಲಾತಿಯನ್ನೊ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಪುರುಷ ಕಟ್ಟಿಕೊಟ್ಟ ವ್ಯಕ್ತಿತ್ವವನ್ನು ಕಳಚಿಕೊಂಡು ತನ್ನ ಅಂತಃಸತ್ವವನ್ನು ರೂಪಿಸಿಕೊಂಡಿದ್ದಾರೆ ಮತ್ತು ಕಥನ ನಿರೂಪಣೆಯಲ್ಲಿ ಸ್ತ್ರೀಯರು ಮಾತ್ರ ಕಾಣಬಹುದಾದ ಹೊಸ ಜೀವನಸತ್ಯದ ದರ್ಶನವನ್ನು ಸಮರ್ಥವಾಗಿ ಶೋಧಿಸುವ ಯತ್ನದಲ್ಲಿದ್ದಾರೆ. ಭಿನ್ನ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಅವರ ರಚನೆಗಳು ವೈವಿಧ್ಯತೆಯಿಂದ ಸಮೃದ್ಧವಾಗಿವೆ. ವಸ್ತು ವಿನ್ಯಾಸ ಮತ್ತು ಭಾಷಾ ಬಳಕೆಯಲ್ಲಿ ಪ್ರಯೋಗಶೀಲರಾಗಿದ್ದಾರೆ. ಪುರುಷನಿಗೆ ಸಂಬಂಧಿಸಿದ ನೆಲೆಯಲ್ಲಿ ಸ್ತ್ರೀಯನ್ನು ತಾಯಿಯಾಗಿ, ಹೆಂಡತಿಯಾಗಿ, ಪ್ರಿಯತಮೆಯಾಗಿ ನಿರೂಪಿಸಿದ ಘಟ್ಟದಿಂದ ಆರಂಭಿಸಿ ಹೆಣ್ಣು-ಗಂಡಿನ ನಡುವಿನ ಸಂಕೀರ್ಣ ಸಂಬಂಧದಲ್ಲಿ ಪ್ರತಿಭಟನೆಯನ್ನು ಸಾಮಾಜಿಕ ವಾಸ್ತವವನ್ನಾಗಿ ಪರಿಗಣಿಸಿ ಮುಂದೊರೆದು ಸ್ತ್ರೀಯ ಅಸ್ಮಿತೆಯನ್ನು ಶೋಧಿಸುವವರೆಗೆ ಕಥನ ಸಾಗಿದೆ.

(ನಾಗರೇಖಾ ಗಾಂವಕರ)

ಹೆಣ್ಣಿನ ಚಾರಿತ್ರಿಕ ಸ್ಥಿತಿಗತಿಗಳ ಅರಿವು, ಬದಲಾದ ವರ್ತಮಾನದ ಸಾಮಾಜಿಕ ಒತ್ತಡಗಳ ಪರಿಚಯ, ಆಧುನಿಕ ಶಿಕ್ಷಣದಿಂದ ಪ್ರಾಪ್ತವಾದ ಆರ್ಥಿಕ ಸ್ವಾತಂತ್ರ್ಯದ ಬಿಕ್ಕಟ್ಟುಗಳ ಅನುಭವ, ಕೌಟುಂಬಿಕ ವಿಘಟನೆಗಳ ಸಂಕಟ, ಅಸಮಾನತೆಯ ಅವಮಾನ, ಸ್ತ್ರೀ ವಿಮೋಚನಾ ಚಳುವಳಿಗಳ ಪ್ರಭಾವಗಳ ಎಚ್ಚರವನ್ನು ಬೆನ್ನಿಗೆ ಕಟ್ಟಿಕೊಂಡೇ ಲೇಖಕಿಯರು ಸಾಹಿತ್ಯವನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಇಂಥಾದ್ದೊಂದು ಪರಂಪರೆಯ ಕೆಲವು ಎಳೆಗಳ ನೇಯ್ಗೆಯನ್ನು ನಾಗರೇಖಾರವರ ಕತೆಗಳಲ್ಲಿ ಕಾಣುತ್ತೇವೆ. ಅಂತಃಕರಣವಿಲ್ಲದೆ ಪ್ರೀತಿ, ಕ್ರಾಂತಿಯಂತೆ ಬರೆವಣಿಗೆಯು ಕೂಡ ಸಾಧ್ಯವಿಲ್ಲವೆಂದು ನಂಬಿಯೇ ಈ ಲೇಖಕಿ ಬರೆಯುತ್ತಿದ್ದಾರೆ ಎಂಬುದಕ್ಕೆ ಈ ಸಂಕಲನದ ಕೆಲವು ಕಥನ ಕ್ಷಣಗಳು ಸಾಕ್ಷಿಯಾಗಿವೆ. ಮಹಾಭಾರತದಿಂದ ಎ. ಕೆ. ರಾಮಾನುಜನ್ ಆಯ್ದ ಉಪಕಥೆಯ ಓದು ನಾಗರೇಖಾರವರ ಕಥನ ಪ್ರವೇಶಕ್ಕೆ ಸೂಕ್ತ ದಾರಿ ಎಂದು ಭಾವಿಸಿರುವೆ:

‘ವನಪರ್ವದಲ್ಲಿ-ದೇಶಾಂತರಗೊಂಡ ಪಾಂಡವರು ಕಾಡಿನಲ್ಲಿ ವಸತಿ ಮಾಡಿಕೊಂಡು ಬದುಕುತ್ತಿದ್ದಾರೆ. ಹಿರಿಯನಾದ ಯುಧಿಷ್ಠಿರನು ಜೂಜಾಡಿ ರಾಜ್ಯವನ್ನು ಕಳೆದುಕೊಂಡು ಉಚ್ಛಾಟಿತನಾಗಿ ಇದೀಗ ಹತಾಶೆಯಲ್ಲಿ ಮುಳುಗಿದ್ದಾನೆ. ಹೀಗಿರುವಾಗ ಒಬ್ಬ ಮುನಿಯು ಅಲ್ಲಿಗೆ ಬಂದು ಆತನಿಗೆ ನಳಮಹಾರಾಜನ ಕಥೆಯನ್ನು ಹೇಳುತ್ತಾನೆ. ಆ ಕಥೆಯು ಅನಾವರಣಗೊಳ್ಳುತ್ತ ಹೋದಂತೆ ನಳನೂ ಜೂಜಾಡಿ ರಾಜ್ಯವನ್ನೂ ಹೆಂಡತಿಯನ್ನೂ ಕಳೆದುಕೊಂಡು ಕಾಡಿನಲ್ಲಿ ಅಲೆಯುತ್ತ ಹೋಗುತ್ತಾನೆ. ಅಂತಿಮವಾಗಿ ಮತ್ತೆ ಪಣವನ್ನು ಗೆದ್ದು, ಸಹೋದರನನ್ನು ಸೋಲಿಸಿ, ಪತ್ನಿಯೊಡಗೂಡಿ ರಾಜ್ಯಕ್ಕೆ ಮರಳುತ್ತಾನೆ, ಮತ್ತೆ ಮಹಾರಾಜನಾಗುತ್ತಾನೆ. ಈ ಬಗೆಯಲ್ಲಿ ನಳನ ಸಾಹಸಗಾಥೆಯ ಚಕ್ರವು ಇಡೀ ಒಂದು ಸುತ್ತು ತಿರುಗಿ ಬಂದಿರುವುದನ್ನು ಗಮನಿಸುವ ಯುಧಿಷ್ಠಿರನು, ತಾನಿನ್ನೂ ಚಕ್ರದ ಅರ್ಧಮಾತ್ರವನ್ನು ಕ್ರಮಿಸಿದ್ದೇನೆ ಎಂಬುದನ್ನು ಅರಿತುಕೊಳ್ಳುತ್ತಾನೆ. ತನ್ನದು ಇನ್ನೂ ಅರ್ಧ ಕಥಾನಕ, ಮುಗಿತಾಯವು ಮುಂದಕ್ಕಿದೆ ಎಂಬುದನ್ನು ಕಂಡುಕೊಳ್ಳುತ್ತಾನೆ. ಹೀಗೆ, ತನ್ನ ವರ್ತಮಾನವನ್ನು ತ್ರಿಕಾಲಗಳ ಪ್ರತ್ಯಂತರದಲ್ಲಿ ಗ್ರಹಿಸಿಕೊಳ್ಳುತ್ತಾನೆ.’

ಮುನಿ ಹೇಳುವ ನಳಮಹಾರಾಜನ ಪೂರ್ಣವೃತ್ತದ ಕಥೆಯಲ್ಲಿ ಯುಧಿಷ್ಠಿರ ಅದಾಗಲೆ ಅರ್ಧ ಸಾಗಿಬಂದ ತನ್ನ ಕಥೆಯ ಮುಂದಿನ ಪಾಡನ್ನು ಕಲ್ಪಿಸಿಕೊಳ್ಳುತ್ತ ಉಳಿದಿರುವ ನೋವನ್ನು ಸಹಿಸಿಕೊಳ್ಳಲು ಸಿದ್ಧನಾಗುತ್ತಾನೆ. ನಳಮಹಾರಾಜನ ಕಥೆ ಸಹನೆ ಮತ್ತು ಸಹಾನುಭೂತಿಯ ಕನ್ನಡಿಯಾಗಿ ಯುಧಿಷ್ಠಿರನಿಗೆ ಒದಗುತ್ತದೆ. ಆತ್ಮರತಿಯ, ರಂಜನೆಯ, ಸ್ವಪ್ರತಿಮೆಯ ಸುಧಾರಣೆಯ ಲೌಕಿಕ ಉಪಯೋಗ ಹೊಂದಿರುವ ಕನ್ನಡಿ, ಕಥೆಯ ಸಂದರ್ಭದಲ್ಲಿ ಪರರ ಸಂಕಟದಲ್ಲಿ ತನ್ನನ್ನು ವಿಸ್ತರಿಸಿಕೊಳ್ಳುವ, ತನ್ನ ನೋವಿನಲ್ಲಿ ಇತರರನ್ನು ಒಳಗೊಳ್ಳುವ ಅಂತಃಕರಣದ ಪ್ರತಿಫಲನದಲ್ಲಿ ಮುಖಾಮುಖಿಯಾಗಿಸುವ ಆಶಯವಾಗುತ್ತದೆ. ನಾಗರೇಖಾರವರ ಕಥೆಗಳು ತಮ್ಮ ಆಶಯ ಮತ್ತು ಆಕೃತಿಯ ನಡಿಗೆಯಲ್ಲಿ ಕನ್ನಡಿಯಾಗುವ ರೀತಿಯನ್ನು ಗಮನಿಸಬಹುದು.

‘ಕಥನ ಕನ್ನಡಿ’ಯ ಮಾದರಿಯಾಗಿ ‘ಮೌನದೊಳಗೊಂದು ಅಂತರ್ಧಾನ’ದ ವಸ್ತು ನಿರ್ವಹಣೆಯನ್ನು ಉದಾಹರಿಸಬಹುದು. ನಿತ್ಯ ನರಕವಾದ ವೈವಾಹಿಕ ವ್ಯವಸ್ಥೆಯಲ್ಲಿ ಸ್ತ್ರೀ ಅನುಭವಿಸುವ ಹಿಂಸೆಯ ಆವೃತ್ತಿಗಳನ್ನು ಎರಡು ಕುಟುಂಬಗಳ ಚೌಕಟ್ಟುಗಳ ವೈದೃಶ್ಯವನ್ನು ಎದುರುಬದರಿಡುವ ಕತೆ ಇದು. ಸುಶಿಕ್ಷಿತ, ಸೂಕ್ಷ್ಮ ಸಂವೇದನೆಯ ನಿರೂಪಕಿ ಸಂಸಾರದ ಒತ್ತಡದಲ್ಲಿ ಗಂಡನ ಉದಾಸೀನತೆಗೆ ಅಗಾಧ ಸಂಯಮದಿಂದ ತೆರೆದುಕೊಂಡವಳು; ಇದಕ್ಕೆ ಸಮಾಂತರದಲ್ಲಿ ತವರಿನ ಗೆಳತಿ, ಸ್ತ್ರೀ ಸಹಜ ಮಾತೃ ಬಯಕೆಯ ಮಾಣುವಿನ ಮೇಲೆ ನಡೆಯುವ ‘ಗಂಡಸ್ತನ’ವನ್ನು ಸಾಬೀತುಗೊಳಿಸುವ ದೌರ್ಜನ್ಯ ಮತ್ತು ಅವಳ ದುರಂತ ಅಂತ್ಯವನ್ನು ನೋಡಿದ ನಂತರ ಗಂಡನ ಅಹಂಕಾರಕ್ಕೆ ಮೌನವನ್ನೇ ಪ್ರತಿರೋಧ ಅಸ್ತ್ರವನ್ನಾಗಿ ಬಳಸುತ್ತಾಳೆ. ಇಡೀ ಸಮುದಾಯ ಅವಳ ದುರಂತಕ್ಕೆ ಕಾರಣರಾದ ಗಂಡ ಮತ್ತು ವೆಂಕಟನನ್ನು ಪ್ರಶ್ನಿಸದೆ ಮಾಣುವನ್ನು ಬಲಿ ಪಶುವಾಗಿಸುವುದು ಅಸಹಾಯಕತೆಯನ್ನು ಅದೆಷ್ಟು ತೀವ್ರಗೊಳಿಸುತ್ತದೆ ಎಂದರೆ ನಿರೂಪಕಿ ಮೌನಿಯಾಗುತ್ತಾಳೆ. ಈ ಅರ್ಥಪೂರ್ಣ ಮೌನದಿಂದ ‘ಆಕೆ’ ಮೂಕ ರೋಧನದ ಎಲ್ಲ ಸ್ತ್ರೀಯರ ಪ್ರಾತನಿಧಿಕ ದನಿಯಾಗುತ್ತಾಳೆ. ಪ್ರಾದೇಶಿಕ ವಿವರಗಳು, ಸಹಜ ನುಡಿಗಟ್ಟುಗಳು ಕಥೆಯೊಳಗೆ ತಮ್ಮ ಪಾಡಿಗೆ ತಾವಿದ್ದ ರೀತಿ ಇಷ್ಟವಾಯಿತು. ಲೇಖಕಿಯ ವಿಮರ್ಶಾ ಪ್ರಜ್ಞೆ ಜಾಗೃತವಾದಾಗಲೆಲ್ಲ ನಿರೂಪಣೆ ವಿವರಣೆಯ ಹಾದಿ ಹಿಡಿದು ಅಸಹಜವೆನಿಸುತ್ತದೆ.

ಲಿಂಗ ಅಸಮಾನತೆಯಿಂದ ನರಳುವ ಪರಿಮಳ ಮತ್ತು ಲೈಂಗಿಕ ಅನ್ಯಾಯಕ್ಕೆ ಬಲಿಯಾದ ಮಾದೇವಿಯ ಕತೆಯನ್ನು ‘ಒಂದೇ ಗುಂಡಿನ ಎರಡು ಸದ್ದು’ ಬಿಂಬ-ಪ್ರತಿಬಿಂಬವಾಗಿ ಚಿತ್ರಿಸುತ್ತದೆ. ತಾಯಿಯೇ ತನ್ನ ಮತ್ತು ಅಣ್ಣನ ನಡುವೆ ಭೇದಭಾವ ಕಲ್ಪಿಸುವುದನ್ನು ಪರಿಮಳ ಹೆಜ್ಜೆ ಹೆಜ್ಜೆಗೆ ಅನುಭವಿಸುತ್ತಾಳೆ. ಹನ್ನೆರೆಡು ವರ್ಷದ ಬಾಲೆಯ ಹೆಗಲಿಗೆ ಮನೆಯ ಜವಬ್ದಾರಿಯನ್ನು ಹೇರಲಾಗಿದೆ. ಅತ್ತ ಮಾದೇವಿಯ ತಂದೆ ಹುಲಿಯಪ್ಪ ಮಗಳನ್ನು ಅಕ್ರಮ ಸಂಬಂಧದಿಂದ ಬಸಿರು ಮಾಡಿದ ಹೋಟೆಲಿನ ಮಾಲಿಕನನ್ನು ಹೊಣೆಗಾರನನ್ನಾಗಿಸದೆ ಮಗಳನ್ನೇ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಿದ್ದಾನೆ. ಹೆಣ್ಣಿಗೆ ಮಾತ್ರ ಸೀಮಿತಗೊಳಿಸಿದ ಕೆಲಸ ಮತ್ತು ನೈತಿಕ ಕಟ್ಟುಪಾಡುಗಳಿಂದ ಪುರುಷರಿಗೆ ವಿನಾಯಿತಿ ನೀಡಿದ ಪುರುಷ ಪ್ರಧಾನ ಸಮಾಜದ ಸಂಪ್ರದಾಯವನ್ನು ವಿಡಂಬಿಸುವ ಚಿತ್ರವನ್ನು ಈ ಕಥೆ ಯಾವ ಆವೇಶವಿಲ್ಲದೆ ಕಟ್ಟಿಕೊಡುತ್ತದೆ.

ಪೌರೋಹಿತ್ಯವನ್ನು ಕಾಯಕ ಮಾಡಿಕೊಂಡಿರುವ ‘ಬಿಳಿಬಟ್ಟೆಯೂ… ಪಾದರಕ್ಷೆಯೂ’ ಕಥೆಯ ಉಮ್ಮಣ್ಣ ಭಟ್ಟರು ಮತ್ತು ತುಸು ಆಧುನಿಕರು ಎಂದೆನಿಸಿದ ಹೆಬ್ಬಾರರು ಸಮಾನ ದುಃಖಿಗಳು. ಇಬ್ಬರಿಗೂ ಅನ್ಯ ಜಾತಿಯ ಸೊಸೆಯಂದಿರಿದ್ದಾರೆ. ಜಾತಿಗಿಂತ ಸಂತಾನದ ಮೂಲಕ ಕುಲೋಭಿವೃದ್ಧಿ ಮುಖ್ಯ ಎನ್ನುವುದು ಹೆಬ್ಬಾರರ ನಿಲುವು. ಕೃಷಿಕರಾದ ಅವರಿಗೆ ಈ ಧೋರಣೆ ನಡೆದೀತು; ಆದರೆ ಪುರೋಹಿತರಾದ ಮಡಿವಂತಿಗೆಯ ಉಮ್ಮಣ್ಣ ಭಟ್ಟರಿಗೆ ಜಾತಿ ಸಂಕರವನ್ನು ಒಪ್ಪಿಕೊಳ್ಳುವುದು ಅಷ್ಟು ಸುಲಭದ ವಿಷಯವಲ್ಲ. ಕೊನೆಯಲ್ಲಿ ಉಮ್ಮಣ್ಣ ಭಟ್ಟರು ಹೆಬ್ಬಾರರ ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕುವ ತೀರ್ಮಾನದಿಂದ ಜಾತಿ ಸಂಬಂಧಿ ತನ್ನ ಮನದ ಮಾಯೆಯನ್ನು ತೊಡೆಯುವುದು ಸಾಧ್ಯವಾಗುತ್ತದೆ. ಬದಲಾದ ಕಾಲ ಚಲನೆಗೆ ಸೈಕಲ್ ಸಂಕೇತವಾಗಿದೆ. ಯಾವ ತಾತ್ವಿಕ ಚಳುವಳಿಗೂ ಸಾಧ್ಯವಾಗದ ಜಾತಿ ಮೀರುವ ಕ್ರಿಯೆ ಪರಿಸ್ಥಿತಿಯ ಒತ್ತಡದಿಂದ ಸಂಭವಿಸುವುದನ್ನು ಕಥೆ ಸದ್ದಿಲ್ಲದೆ ನಿರೂಪಿಸುತ್ತದೆ. ಕಥೆಯ ಧೋರಣೆಯನ್ನು ಪೊರೆಯುವ ಅನುಭವ ಗಾಢವೆನಿಸುವುದಿಲ್ಲ.

ಬಡತನ ಸೃಷ್ಟಿಸಿದ ಅಸಹಾಯಕತೆ ಮತ್ತು ನೈತಿಕ ಕಟ್ಟುಪಾಡುಗಳ ನಡುವೆ ಆಸೆ ಬದುಕನ್ನು ದಾರುಣಗೊಳಿಸುವ ಚಿತ್ರವನ್ನು ನಿರೂಪಿಸುವ ‘ಜರಿಲಂಗ ಮತ್ತು ಸಣ್ಣು’ ಓದುಗರಲ್ಲಿ ಸಹಾನುಭೂತಿಯನ್ನು ಉಕ್ಕಿಸುವ ಕತೆ. ನಾಯಕರ ಮಗಳ ಜರಿಲಂಗವನ್ನು ಲಪಟಾಯಿಸುವ ಸಣ್ಣು ಅಪರಾಧಿ ಎನಿಸದ ಹಾಗೆ ಅವಳ ಈಡೇರದ ಸಹಜ ಆಸೆಯ ವಿವರವಿದೆ. ಹನ್ನೆರೆಡರ ಬಾಲೆ ಸಣ್ಣು ತಮ್ಮನಿಗೆ ಗಂಜಿ ಬೇಯಿಸಿ ಕೊಟ್ಟು, ದೇವರ ಮೆರವಣಿಗೆ ತನ್ನ ಗುಡಿಸಲ ಎದುರು ಹಾದು ಹೋಗುವುದನ್ನು ಸಂಭ್ರಮಿಸುತ್ತ ಅಂಗಳಕ್ಕೆ ಸಗಣಿ ಸಾರಿಸುತ್ತ ಮನೆವಾರ್ತೆಯಲ್ಲಿ ತಾಯಿಗೆ ಸಮಾನವಾಗಿದ್ದಾಳೆ. ಜರಿಲಂಗ ತೊಟ್ಟ ಕ್ಷಣದಲ್ಲಿ ನವಿಲುಗಳು ಮೊಣಕಾಲ ಮೇಲೆ ಕುಣಿದಂತೆ ಸಂಭ್ರಮಿಸುವ ಚಿತ್ರದ ಸೌಂದರ್ಯ ಅಪೂರ್ವವಾಗಿದೆ. ಮಿಣಿ ಮಿಣಿ ಹುಳಗಳ ಗೊಬ್ಬರದ ಕುಳಿಯಲ್ಲಿ ಸಣ್ಣು ಲಂಗ ಮಾತ್ರವಲ್ಲ ಅವಳ ಚೆಲುವಾದ ಕನಸನ್ನೂ ಹುಗಿದಿದ್ದಾಳೆ. ಕಥೆಯ ಕೊನೆಯಲ್ಲಿ ಅವಳು ಅನುಭವಿಸುವ ದೈಹಿಕ ನೋವಿನ ಪ್ರಸಂಗ ಅಗತ್ಯವಿರಲಿಲ್ಲ.

ಪುರುಷನಿಗೆ ಸಂಬಂಧಿಸಿದ ನೆಲೆಯಲ್ಲಿ ಸ್ತ್ರೀಯನ್ನು ತಾಯಿಯಾಗಿ, ಹೆಂಡತಿಯಾಗಿ, ಪ್ರಿಯತಮೆಯಾಗಿ ನಿರೂಪಿಸಿದ ಘಟ್ಟದಿಂದ ಆರಂಭಿಸಿ ಹೆಣ್ಣು-ಗಂಡಿನ ನಡುವಿನ ಸಂಕೀರ್ಣ ಸಂಬಂಧದಲ್ಲಿ ಪ್ರತಿಭಟನೆಯನ್ನು ಸಾಮಾಜಿಕ ವಾಸ್ತವವನ್ನಾಗಿ ಪರಿಗಣಿಸಿ ಮುಂದೊರೆದು ಸ್ತ್ರೀಯ ಅಸ್ಮಿತೆಯನ್ನು ಶೋಧಿಸುವವರೆಗೆ ಕಥನ ಸಾಗಿದೆ.

‘ದೊಂಗ’ ತುಸು ಭಿನ್ನ ಧಾಟಿಯ ಕಥೆ. ಹೆಚ್ಚಿನ ಕಥೆಗಳಲ್ಲಿ ಹೆಣ್ಣಿನ ಶೋಷಣೆಯನ್ನು ಅನಾವರಣಗೊಳಿಸುವ ನಾಗರೇಖ ಇಲ್ಲಿ ದೊಂಗನಿಗಾದ ಅನ್ಯಾಯವನ್ನು ಗಮನಿಸಲು ಒತ್ತಾಯಿಸುತ್ತಾರೆ; ಆದರೆ ಸರಿ-ತಪ್ಪುಗಳ ಸರಳ ನೈತಿಕ ಲೆಕ್ಕಾಚಾರಕ್ಕೆ ಹೋಗುವುದಿಲ್ಲ. ಮಾದೇವಿ ಉಪಾಯದಿಂದ ಕಳ್ಳದಾರಿಯಿಂದ ಸಂಸಾರದ ಸುಖವನ್ನು ಪಡೆಯಲು ಯತ್ನಿಸುವವಳು. ಮೋಸವನ್ನು ಮುಚ್ಚಿಡುವ ಜಾಣೆಯಂತೆ ಕಾಣುವ ಅವಳು ತನಗೆ ಬೇಕಾದ್ದನ್ನು ಪಡೆದುಕೊಳ್ಳಲು ಹಿಂಜರಿದವಳಲ್ಲ. ದೇವಿಯನ್ನು ಮೈ ತುಂಬಿಕೊಳ್ಳುವುದು ಗಂಡನಿಂದ ದೂರವಿರಲು, ಗಿರಿಧರನನ್ನು ಬರಮಾಡಿಕೊಳ್ಳಲು ಮತ್ತು ಆ ಮೂಲಕ ತನ್ನ ಭೌತಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಅವಳು ಆಡಿದ ಆಟ ಎಂಬುದು ನಿಚ್ಚಳವಾಗುತ್ತದೆ. ಗಿರಿಧರ ಕುತ್ತಿಗೆಗೆ ಸುತ್ತಿಕೊಳ್ಳುತ್ತಿದ್ದ ಟವೆಲ್ಲನ್ನು ದೊಂಗ ಕೋಣೆಯಲ್ಲಿ ನೋಡಿ ಮಾನಸಿಕ ರೋಗಿಯಾಗುವುದು ಅತ್ಯಂತ ಸೂಕ್ಷ್ಮ ಸಂಜ್ಞೆಯಾಗಿದೆ. ಇದು ಲೇಖಕಿಯಲ್ಲಿ ಅಲ್ಲಲ್ಲಿ ಜಾಗೃತವಾಗುವ ಕಲಾ ಪ್ರಜ್ಞೆಗೆ ಸಾಕ್ಷಿ.

ಕಥಾ ಪ್ರಕಾರದಲ್ಲಿ ನಾಗರೇಖ ಪ್ರಯೋಗಶೀಲರು ಎಂಬುದಕ್ಕೆ ‘ಸ್ಟಾಕ್ ಹೋಮ್ ಸಿಂಡ್ರೋಮ್’ನ್ನು ಹೆಸರಿಸಬಹುದು. ಕಥೆಗೆ ಮನಃಶಾಸ್ತ್ರದ ಹಿನ್ನೆಲೆ ಇದೆ. ನೋಯಿಸಿದವರನ್ನು ನಿಷ್ಠುರವಾಗಿ ನಿರಾಕರಿಸಲಾರದ ಅಸಹಾಯಕತೆಯಲ್ಲಿ ಅವರ ಬಾಂಧವ್ಯಕ್ಕೆ ಅಂಟಿಕೊಳ್ಳುವ ವಿಚಿತ್ರ ಮನೋವ್ಯಾಕುಲತೆಯಿದು. ಸಂಪ್ರೀತ, ಸಾತಮ್ಮ ಮತ್ತು ಡಾ. ಸುದತಿಯರ ಮನೋಮಾರ್ಗದ ಮೂಲಕ ಚಲಿಸುವ ಕಥಾ ರಥದ ನಿರೂಪಣೆ ವಿಶಿಷ್ಟವಾಗಿದೆ. ಡಾ. ಸುದತಿ ತನ್ನಂತೆಯೇ ಗಂಡನ ವ್ಯಗ್ರತೆಯನ್ನು ಪ್ರೀತಿಸುವ ಸಾತಮ್ಮನನ್ನು ವಿಷಾದದ ಕನ್ನಡಿಯಲ್ಲಿ ನೋಡುತ್ತಾಳೆ. ಸಿದ್ಧಾಂತವೊಂದರ ಅಳತೆಗೆ ಕಥೆಯನ್ನು ಹೊಲಿಯುವ ತಂತ್ರ ಹೊಸತನ್ನು ಹೇಳಲಾರದು.

‘ಹೆದ್ದಾರಿಯ ಅಡ್ಡಹಾದಿ ಗುಂಟ’ ಮತ್ತು ‘ಕುಸಿದ ಬದುಕಿನ ಸುತ್ತ’ ತನ್ನ ಸುತ್ತಲಿನ ಸಾಮಾಜಿಕ ವರ್ತಮಾನಕ್ಕೆ ಲೇಖಕಿ ಸ್ಪಂದಿಸಿದನ್ನು ನಿರೂಪಿಸುವ ಕಥೆಗಳು. ಹೆದ್ದಾರಿಯ ಸನಿಹದಲ್ಲಿರುವ ಎರಡು ಊರುಗಳ ಗೆಳೆಯರಾದ ಪ್ರಕಾಶ ಮತ್ತು ಮಹೇಂದ್ರರ ನಡುವೆ ರಾಜಕೀಯ ದ್ವೇಷದ ಬೆಂಕಿ ಹೊತ್ತಿಕೊಂಡು ಅದರಲ್ಲೆ ಸುಟ್ಟು ಹೋಗುವುದನ್ನು ‘ಹೆದ್ದಾರಿಯ ಅಡ್ಡಹಾದಿ ಗುಂಟ’ ಪ್ರಸ್ತಾಪಿಸುತ್ತದೆ. ಆಧುನಿಕತೆಗೆ ರಾಜಕೀಯದ ಅನೈತಿಕ ಸೋಂಕು ತಗಲಿದಾಗ ಸಂಭವಿಸುವ ದುರಂತ ದರ್ಶನವನ್ನು ಈ ಕಥೆ ಮಾಡಿಸುತ್ತದೆ. ಇಂಥ ಕೇಡನ್ನು ಅರಗಿಸಿಕೊಳ್ಳುವ ಶಕ್ತಿ ಊರವರ ದೈವಿಕ ಶ್ರದ್ಧೆಗಿರುವುದನ್ನು ಕಥೆ ವಾಚ್ಯವಾಗಿ ಹೇಳಿ ಬಿಡುತ್ತದೆ.

ಜಾತಿ ಮತ್ತು ಆರ್ಥಿಕ ಸ್ಥಿತಿವಂತಿಕೆಯಿಂದ ಮೇಲು-ಕೀಳಿನ ಅಂತಸ್ತಿನ ಅಂತರದಲ್ಲಿ ಬದುಕುತ್ತಿರುವ ಹುಲಿಯಪ್ಪ ಮತ್ತು ದಾಸ ನಾಯಕರ ಕುಟುಂಬಗಳು ಬೆರೆತು ಬದುಕಬೇಕೆಂಬ ನಿಯಮ ಪ್ರಕೃತಿಯ ಅಂತರ್ಯದ ಸದಾಶಯವೇನೊ ಎಂಬ ಸೂಚನೆಯನ್ನು ‘ಕುಸಿದ ಬದುಕಿನ ಸುತ್ತ’ ಪರೋಕ್ಷವಾಗಿ ಧ್ವನಿಸುತ್ತದೆ. ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಮಧುರಾಳನ್ನು ರಕ್ಷಿಸಲು ಜಿಗಿಯುವ, ಅವಳನ್ನು ಅಂತರ್ಯದಲ್ಲಿ ಪ್ರೀತಿಸುವ ರಾಕು ದಡ ಸೇರಲಾಗದ ಜಾತಿಯ ಪ್ರವಾಹದ ವಿರುದ್ಧ ಸೆಣಸಾಡುವ ಬದಲು ಈ ಕ್ಷಣದ ವಾಸ್ತವ ಪ್ರವಾಹದಲ್ಲಿ ಮಧುರಾಳ ಜೊತೆಯಾಗಿ ಸಾವಿನಲ್ಲಿ ಒಂದಾಗುವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಬಡತನ ಮತ್ತು ಜಾತಿಯ ಬಂಧನದಿಂದ ಬಿಡುಗಡೆ ಸದ್ಯದ ಸಾಮಾಜಿಕ ಸಂದರ್ಭದಲ್ಲಿ ಸಾಧ್ಯವಿಲ್ಲವೆನ್ನುವ ಸತ್ಯವನ್ನು ಲೇಖಕಿ ಮತ್ತೆ ಮತ್ತೆ ವಿಷಾದದಿಂದ ಹೇಳುತ್ತಾಳೆ.

(ಶ್ರೀಧರ ಬಳಗಾರ)

ಪಾಂಜ ಮತ್ತು ಕುಂಜಳಿ ಎಂಬ ಕೋಳಿ ದಂಪತಿಗಳ ಸಂಸಾರದ ಗೋಳಿನ ನೆಲೆಯಲ್ಲಿ ನಿಂತು, ಆಧುನಿಕ ಮನುಷ್ಯ ಪ್ರಕೃತಿಯನ್ನು ಆಕ್ರಮಿಸಿ, ಅಭಿವೃದ್ಧಿಯ ಹಿಂಸೆಯಲ್ಲಿ ಜೀವ ಜಗತ್ತಿಗೆ ಕಂಟಕಪ್ರಾಯನಾಗುತ್ತಿರುವುದನ್ನು ‘ಕಾಳಿಯ ಬಗಲಲ್ಲಿ’ ನಿರೂಪಿಸುತ್ತದೆ. ಜಾನಪದ ಶೈಲಿಯ ಕಥನ ನಿರೂಪಣೆ ಕುತೂಹಲಕರವಾಗಿದೆ. ಆಧುನಿಕ ಸ್ತ್ರೀಯ ಪ್ರೇಮ ಕಲ್ಪನೆ ಪುರುಷ ನಿರ್ಮಿತ ಹೆಣ್ಣಿನ ಸಾಂಪ್ರದಾಯಕ ಪ್ರತಿಮೆಗಿಂತ ತೀರ ಭಿನ್ನವಾಗಿ ವ್ಯಕ್ತವಾಗಿ ಪುರುಷ ಜಗತ್ತನ್ನು ದಂಗುಗೊಳಿಸುವ ‘ಪ್ರೀತಿಯ ಹೊಸ ಭಾಷ್ಯ’ದ ನಾಟಕೀಯತೆ ನಾಗರೇಖ ಹೊಸ ದಿಕ್ಕಿನತ್ತ ಮುಖ ಮಾಡಿರುವ ಸೂಚನೆಯಂತಿದೆ.

‘ನೊಣವೊಂದರ ಮೊರೆತ’ ಮತ್ತು ‘ಜೀವನ್ಮರಣ ಸಂತೆಯಲ್ಲೊಂದು ದಿನ’ ಕತೆಗಳಲ್ಲಿ ನಾಗರೇಖ ಕಾವ್ಯ ಮನೋಧರ್ಮ ಬಿಟ್ಟು ಕೊಡದೆ ಬರೆಯುವ ಲೇಖಕಿ ಎಂದನಿಸದೆ ಇರದು. ‘ನೊಣವೊಂದರ ಮೊರೆತ’ದ ಸುಮಯ್ಯಾ ಬೀಡಿ ಕಟ್ಟುವ ಬಡವಿ. ಯೌವನದಲ್ಲಿ ಬ್ಯಾರಿ, ಮೊಜೆಸ್‌ನನ್ನು ಆಕರ್ಷಿಸುತ್ತಿದ್ದ ಅವಳೀಗ ಅಸಹಾಯಕತೆಯಲ್ಲಿ ಅಸೂಯೆಯಿಂದ ಬಾಯಮ್ಮನತ್ತ ವಾಲಿದ, ಒಲಿದ ಜಗತ್ತನ್ನು ನೋಡಿ ನರಳುತ್ತಿದ್ದಾಳೆ. ಸುಮಯ್ಯಾ ನೋಡುವ ನಿತ್ಯದ ವಿವರಗಳು ನಿಜವೆನಿಸುವುದು ‘ಬದಲಾದ ಗೇರು’, ‘ಪೀಡಿಸುವ ನೊಣ’ದ ಪ್ರತಿಮೆಗಳು ಪ್ರತೀಕಗಳಾಗಿ ನಮ್ಮನ್ನು ಕಾಡುವುದರಿಂದ.

‘ಜೀವನ್ಮರಣ ಸಂತೆಯಲ್ಲೊಂದು ದಿನ’ ಕರೋನಾ ಕೇಂದ್ರಿತ ಕತೆ. ಈ ರೋಗದ ಕುರಿತು ಬಂದಿರುವ ಮಾಹಿತಿಗಳ ಅಪಾಯದಿಂದ ಕತೆಯನ್ನು ರಕ್ಷಿಸಿದ್ದು ನಿರೂಪಣೆಯ ಕಾವ್ಯಾತ್ಮಕ ಧ್ವನಿ. ಸಾವಿನ ದಾರುಣತೆಯನ್ನು ಅನುಭವಿಸುವ ಪ್ರಣೀತ ಅಚವೆಯ ಹುಲ್ಲು ಗುಡಿಸಲ ಮನೆಯ ಗೀಜಗನ ಗೂಡನ್ನು ನೆನೆಯುವುದರ ಮೂಲಕ ಬಾಲ್ಯದ ಸ್ಮರಣೆ ಮರಣದ ಭಯಕ್ಕೆ ಸಾಂತ್ವನ ನೀಡುವಂತಿದೆ.

ನಾಗರೇಖ ಕಥಾ ಭಾಷೆಯನ್ನು ಒಲಿಸಿಕೊಂಡಿದ್ದಾರೆ. ಅವರಿಗೆ ಅವರದೇ ಆದ ಅನನ್ಯ ಕಥನ ಪ್ರಪಂಚವಿದೆ. ಸೈದ್ಧಾಂತಿಕ ಓದನ್ನು ಭಾರಗೊಳಿಸದೆ, ಜನಪ್ರಿಯ ವಿವಾದಗಳ ಪ್ರಲೋಭನೆಯ ಅಪಾಯಕ್ಕೆ ಗುರಿಯಾಗದೆ ತನ್ನೊಳಗೆ ಕಥೆಯಾಗಲು ಹವಣಿಸುತ್ತಿರುವ ಮುಗ್ಧ ಪ್ರಪಂಚದ ಅನುಭವ ಪಾವಿತ್ರ್ಯವನ್ನು ಜತನದಿಂದ ಕಾಪಾಡಿಕೊಂಡು ಅವರು ಇನ್ನಷ್ಟು ಒಳ್ಳೆಯ ಕಥೆಗಳನ್ನು ಕನ್ನಡಕ್ಕೆ ನೀಡಬಲ್ಲರು ಎಂಬ ನಂಬಿಕೆಯನ್ನು ಈ ಸಂಕಲನ ಗಟ್ಟಿಗೊಳಿಸುತ್ತದೆ. ನನ್ನ ಪೂರ್ವ ನುಡಿಗಳಿಗೆ ಅವಕಾಶವಿತ್ತ ಅವರ ಅಕ್ಕರೆಗೆ ಧನ್ಯವಾದಗಳು.

(ಕೃತಿ: ಮೌನದೊಳಗೊಂದು ಅಂತರ್ಧಾನ (ಕಥಾ ಸಂಕಲನ), ಲೇಖಕರು: ನಾಗರೇಖಾ ಗಾಂವಕರ, ಪ್ರಕಾಶನ: ಎಸ್.ಎಲ್.‌ ಎನ್.‌ ಪಬ್ಲಿಕೇಷನ್ಸ್‌, ಬೆಲೆ: 100/-)