ಬದುಕಿದ್ದರೆ ಮತ್ತೆ ಭೇಟಿಯಾಗುವೆ

ಮೂರು ದಿನದ
ಹಿಂದಷ್ಟೆಯೇ
ಇಬ್ಬರೂ
ಮಸಾಲೆ ದೋಸೆಯ ತಿನ್ನುತ್ತ
ಕಾಫಿ ಹೀರಿದ್ದು
ಈಗ ಕಾಫಿ ರುಚಿ ಕಳೆದುಕೊಂಡಿದೆ
ಕೈತೋಟದ ಮಲ್ಲಿಗೆ ಹೂವು
ವಾಸನೆ ಕಳೆದುಕೊಂಡು
ಅಂತ್ಯಕ್ಕೆ ಹೂವಾಗುವೆನೆಂದು
ಹೆದರಿಸುತ್ತಿದೆ.

ಶವಸಂಸ್ಕಾರಕ್ಕೂ ಸರದಿನಿಂತ ಜನ
ಶತಶತಮಾನಗಳ ಆಕ್ರೋಶವನ್ನೆಲ್ಲ
ಒಟ್ಟಿಗೆ ತೀರಿಸಿಕೊಳ್ಳಲು
ಬಿಡುವಿಲ್ಲದೇ ಉರಿಯುತ್ತಿರುವ ಚಿತೆಗಳು;
ಚೆಲ್ಲಾಪಿಲ್ಲಿಯಾಗಿ ಬಾಡಿ ಬಿದ್ದಿರುವ
ಹೂವುಗಳು;
ಛಿದ್ರವಾದ ಯಾರದೋ ಸುಖೀ ಕುಟುಂಬ;
ನೆತ್ತರಾಗೇ ಹರಿಯುತ್ತಿರುವ
ಕಣ್ಣೀರು,
ಸಾವಿನ ಹಾದಿ ಸವೆಸಿದಷ್ಟೂ
ಉದ್ದವಾಗುತ್ತಿದೆ.
ಕನಸಿನಲ್ಲಿ ಉದ್ಯಾನವನದೊಳಗೆ ನಿನ್ನೊಡನೆ ನಿಂತಿದ್ದ ನಾನು ಬಿರುಗಾಳಿಗೆ ಕೊಚ್ಚಿಹೋದಮೇಲೆ
ಏನಾಯ್ತು?

ಇಂದೋ ನಾಳೆಯೋ
ನಾಡಿದ್ದೋ
ಕೂಡಿ ಬಾಳುವ ಕನಸಿನ
ಕನವರಿಕೆಗೆ
ಬೆಂಕಿ ತಾಕಿದೆ,
ಉರಿಯುವ ಬೇಗುದಿಯ
ಯಾರೊಡನೆಯಾದರೂ ಹೇಗೆ
ಹೇಳಿಕೊಳ್ಳಲಿ?
ಕುದಿಯುವ ನನ್ನೊಳಗೆ
ನಿನ್ನ ಪ್ರವೇಶವಾದರೂ ಹೇಗೆ
ಸಾಧ್ಯವಾದೀತು?

ಕಳೆದ ಕ್ಷಣಗಳೇ ನನ್ನ ಪಾಲಿನ
ಹೂದೋಟ,
ನಿನ್ನ ನಗುವೇ ಅರಳಿದ ಗುಲಾಬಿ,
ಜಾತಿ-ಧರ್ಮದ
ಮುಳ್ಳುಗಳು
ಗೀರಿ ಇಬ್ಬರನ್ನೂ ಹತಗೊಳಿಸದಿರಲಿ
ಬದುಕಿದ್ದರೆ ಮತ್ತೆ ಭೇಟಿಯಾಗುವೆ..

ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು