ಇನ್ನೇನು ಸುರಂಗ ಕೊರೆಯುವ ಕೆಲಸ ಮುಕ್ತಾಯವಾಗುತ್ತ ಬಂದಿತ್ತು. ಕೆಲವೇ ಅಡಿಗಳಷ್ಟೇ ಕೊರೆಯುವ ಕೆಲಸ ಬಾಕಿ ಉಳಿದಿತ್ತು. ಸುರಂಗ ಮುಂದೆ ಸಾಗಿದಂತೆ ಮರದ ದೊಡ್ಡ ದಿಮ್ಮಿಗಳನ್ನಿಟ್ಟು ಆಧಾರದಂತೆ ಕೊಡುವುದು ಇದಿನಬ್ಬನಿಗೆ ಮರೆತು ಹೋಗಿತ್ತು. ಆ ವಿಷಯ ನೆನಪಾಗುತ್ತಲೇ, ಓಡಿ ಓಡಿ ಎಂದು ಕಿರುಚಿದ. ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಉಳಿದವರು ಅಡ್ಡಲಾಗಿದ್ದದ್ದರಿಂದ ಇದಿನಬ್ಬನಿಗೆ ಓಡಲಾಗಲಿಲ್ಲ‌. ಇದ್ದಕ್ಕಿದ್ದಂತೆ ಭಾರೀ ಸದ್ದಿನೊಂದಿಗೆ ಗುಡ್ಡದ ಒಂದು ಭಾಗ ಜರ್ರನೆ ಕುಳಿತೇ ಬಿಟ್ಟಿತು. ಇದಿನಬ್ಬನೂ ಸೇರಿ ನಾಲ್ಕೈದು ಜ‌ನರು ಆ ಮಣ್ಣಿನೊಳಗೆ ಸಿಕ್ಕಿಹಾಕಿಕೊಂಡರು.
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಎಂಟನೆಯ  ಕಂತು.

ಮಾರಿ ಅಳುತ್ತಾ ಹೇಳಿದ:
‘ನಮ್ಮ ಶಿವಂ ತೀರಿ ಬಿಟ್ಟ, ರೈಲ್ವೇ ರಸ್ತೆ ಅಗೆಯುತ್ತಿದ್ದಂತೆ ಅಚಾನಕ್ಕಾಗಿ ಬೆಟ್ಟ ಜರಿದು ಆಧಾರ ಸ್ಥಂಭದ ಅಡಿಯಲ್ಲಿ ಸಿಲುಕಿ ಮೃತಪಟ್ಟ, ಅವನ ಶವವನ್ನು ತಂದಿದ್ದೇವೆ.’ ಇದಿನಬ್ಬನ ಕಂಠವೊಮ್ಮೆ ನಡುಗಿತು.

ಕೊನೆಯ ಬಾರಿ ಶಿವಂನನ್ನು ನೋಡ ಬೇಕೆನಿಸಿತು. ನೋಡುವುದೇನು? ತಲೆ ಹಿಂದಕ್ಕೆ ತಿರುಗಿದೆ, ರಕ್ತ ಸಿಕ್ತ ಮೈಯಲ್ಲಿ ತುಂಬಾ ಮಣ್ಣು ಯಾತ್ರೆಯಲ್ಲಿ ಗಾಡಿಯಲ್ಲಿ ಇರಿಸಿಕೊಂಡದ್ದರಿಂದ ಅರ್ಧ ಕೊಳೆತು ಹೋಗುವ ಸ್ಥಿತಿಗೆ ಬಂದಿತ್ತು. ತಲೆ ಬುರುಡೆ ಒಡೆದು ಮಿದುಳು ಹೊರಬಂದಿದೆ. ದುಃಖ ಒತ್ತರಿಸಿ ಬರುತ್ತಿತ್ತು. ಇದಿನಬ್ಬ ಬಿಕ್ಕಿದ ಸದ್ದು ಹೊರ ಬೀಳಲೂ ಇಲ್ಲ‌. ‘ಇಂದು ಅವನು, ನಾಳೆ ನಾವೂ ಹೋಗಲೇ ಬೇಕು. ಸಮಾಧಾನ ಪಡಿಸಿದ. ಅಂದು ರಾತ್ರಿ ಕೆಲಸ ಮುಗಿದ ಬಳಿಕ ಶಿವಂನನ್ನು ಮಣ್ಣು ಮಾಡಿದರು. ಒಳ್ಳೆಯ ಗೆಳೆಯ ಕಳೆದುಕೊಂಡ ದುಃಖ ಅವರಲ್ಲಿದ್ದ ಹೆಚ್ಚಿನ ಕೂಲಿಗಳಿಗೆ ಅನುಭವವಾಗಿತ್ತು. ಕಡಲ್ಕೊಳಂದೆಯ ತಾಯಿ ಮಾತ್ರ ವಿಪರೀತ ಅಳುತ್ತಲೇ ಇದ್ದಳು‌. ಗೆಣಸು ಕೊಟ್ಟ ಋಣ ಅವಳಿಂದ ಹೀಗೆ ಮಾತ್ರ ತೀರಿಸಲು ಸಾಧ್ಯ.

ಮರುದಿನ ಶಿವಂ ಬದಲಿಯಾಗಿ ಅಧಿಕಾರಿಗಳು ಕೂಲಿಯಾಳೊಬ್ಬನನ್ನು ಆರಿಸಬೇಕಿತ್ತು. “ಯಾರಾಗಬಹುದು?” ಚರ್ಚೆಯ ಬಳಿಕ ಕಪ್ಪಗಿನ ಧೃಡಕಾಯ ಇದಿನಬ್ಬನಿಗೆ ಅಧಿಕಾರಿಯೊಬ್ಬ ಕೈ ತೋರಿಸುತ್ತಾ,
“ದಿಸ್ ಪಿಗ್ ಈಸ್ ಸ್ಯೂಟೆಬಲ್(ಈ ಹಂದಿ ಈ ಕೆಲಸಕ್ಕೆ ಸೂಕ್ತ ವ್ಯಕ್ತಿ)”

ಎನ್ನುತ್ತಾ ಮಾರಿ, ಮುತ್ತಿನ ಜೊತೆಯಲ್ಲೇ ಗಾಡಿ ಹತ್ತಲು ಹೇಳಿದರು. ಇದಿನಬ್ಬ ಹೊರಡುವುದು ಖಚಿತವಾದಾಗ ಕೂಲಿಯವರೆಲ್ಲಾ ಒಂದಾಗಿ ಪ್ರೀತಿ ಸ್ನೇಹಕ್ಕೆ ಪ್ರತೀಕದಂತೆ ತಮ್ಮಲ್ಲಿದ್ದ ಚೂರು ಪಾರು ನಾಣ್ಯ,ಬೆಳ್ಳಿಗಳಿರುವ ಸಣ್ಣ ಪುಟ್ಟ ಗಂಟುಗಳನ್ನು ಕೈಗಿತ್ತರು. ಇದಿನಬ್ಬ ದುಃಖದಿಂದ “ಹೋಗಿ ಬರುವೆ” ಅಂದ. ಅಷ್ಟರಲ್ಲಿ ತಮಿಳು ಸಿಂಹಳ ಬಾಷೆಗಳೂ ಅವನಿಗೆ ಮಾತನಾಡಲು ಬರುತ್ತಿತ್ತು. ಮತ್ತೆ ಅದೇ ಗಾಡಿ ಸ್ವಲ್ಪ ದಾರಿ ಕ್ರಮಿಸಿ ವಿಶಾಲ ರಸ್ತೆಯ ಬಳಿ ನಿಂತಿತು. ಗಾಡಿಯ ಹಣ ಕೇಳುವಾಗ ಅಧಿಕಾರಿ ಗಾಡಿಯವನನ್ನು ನೋಡಿ ಕಣ್ಣರಳಿಸಿದ. ಅವನು ಹೆದರಿಕೊಂಡು ಮರು ಮಾತನಾಡದೆ ಹೊರಟು ಹೋದ. ಮತ್ತೆ ಟ್ರಕ್ ಮಾರಿ ಮತ್ತು ಮುತ್ತು ಇಡೀ ರೈಲ್ವೇ ಹಳಿಗಳ ಕಾಮಾಗಾರಿಗೆ ಪಡುವ ಕಷ್ಟ, ಬೆಟ್ಟ ಕೊರೆಯವ ಪ್ರಕ್ರಿಯೆ ಸಾಹಸಗಳನ್ನೆಲ್ಲಾ ಹೇಳಿ ಇದಿನಬ್ಬನಿಗೆ ಹೆದರಿಕೆ ತುಂಬುತ್ತಿದ್ದರು. ಆದರೆ ಅವರ ಉದ್ದೇಶ ಹೆದರಿಸುವುದಾಗಿರದೆ ನೋವುಗಳನ್ನು ಹೊರಗೆಡಹುವುದು ಮಾತ್ರವಾಗಿತ್ತು.

“ಇನ್ನೆಷ್ಟು ದೂರವಿರಬಹುದು ಮುತ್ತು?”

ಇದಿನಬ್ಬ ಕೇಳಿದಂತೆ “ಸಾಕಷ್ಟು” ಅನ್ನುವಷ್ಟೇ ಅಳತೆ ಅವರಿಗೆ ಗೊತ್ತಿದ್ದುದು. ಎರಡೋ ಮೂರು ದಿನಕ್ಕೆ ಗೆಣಸು ತಿನ್ನಲು ಸಿಗುತ್ತಿತ್ತು. ಮೂರು ನಾಲ್ಕು ದಿನಗಳೊಳಗಾಗಿ ಗಾಡಿ ಕೊಲೊಂಬೋದ ಪಟ್ಟಣ ತಲುಪಿತ್ತು. ಪಟ್ಟಣವೆಂದರೆ ನಾಲ್ಕು ಸಣ್ಣ ಕಟ್ಟಡ, ಒಂದು ಸಮತಟ್ಟಾದ ರಸ್ತೆ ಬಿಟ್ಟರೆ ಇನ್ನೇನಿತ್ತು. ಅಲ್ಲಲ್ಲಿ ಹಣ್ಣು, ತರಕಾರಿ, ಮೀನು ಮಾರುವ ಚಿಲ್ಲರೆ ವ್ಯಾಪರಸ್ಥರು, ಕೂಲಿಗಳ ಮಾರುಕಟ್ಟೆ. ಮುಗಿಯಿತು. ರಸ್ತೆ ಕೊಲಂಬೋದ ಪಟ್ಟಣ ದಾಟಿ ಮುಂದೆ ಪರ್ವತದಂತೆ ಭಾಸವಾಗುವ ಘಾಟಿ ಹತ್ತಲಾರಂಭಿಸಿತು. ಬರುವಾಗ ಇಳಿಯುತ್ತ ಬಂದ ಸಣ್ಣ ದಾರಿಯ ನೆನಪುಗಳು ಆಗಾಗ ಮಿಂಚುವಾಗ ಮಾರಿ-ಮುತ್ತು ಪರಸ್ಪರ ” ಇದಲ್ವಾ, ಇದೇ ” ಎಂದು ಚರ್ಚಿಸುತ್ತಾ ಸರಿಯಾದ ಉಪಸಂಹಾರಕ್ಕೂ ಬರದೆ ಎಲ್ಲಿ ತಲುಪಿದೆವೆಂದೂ ತಿಳಿಯದೆ ಇದೇ ರಸ್ತೆಯೆಂದು‌ ಕಂಡು ಹಿಡಿಯಲಾರದಷ್ಟು ಅನಕ್ಷರಸ್ಥರಾಗಿದ್ದರು. ಸ್ವಲ್ಪ ಹೊತ್ತಿನಲ್ಲಿ ಟ್ರಕ್ಕು ನಿಂತಿತು. ಮುತ್ತು ಮತ್ತು ಮಾರಿಗೆ ಶಿವಂ ಹೋದ ಬೇಸರ ಒಂದೆಡೆ. ಮತ್ತೊಂದೆಡೆ ತಮ್ಮ ಜೊತೆಗೆ ಇದಿನಬ್ಬ ಬಂದ ಖುಷಿ. ಅಂತೂ ಅಧಿಕಾರಿಗಳು‌ ಕೆಲಸಕ್ಕೆ ಸ್ಥಳ ಗೊತ್ತುಪಡಿಸಿದರು. ಆಗ ಕೊಲೊಂಬೋಗೆ‌ ವಿವಿಧ ಸ್ಥಳಗಳಿಂದ ಕಾಫಿ ಬೆಳೆಯನ್ನು ತರಲಾಗುತ್ತಿತ್ತು. ಮುಂದೆ ಅದು ಕೊಲಂಬೋ ಬಂದರಿನ ಮೂಲಕ ಯುರೋಪಿಗೆ ರಫ್ತಾಗುತ್ತಿತ್ತು. ಲಕ್ಷಾಂತರ ಟನ್ ಕಾಫಿ ಬೀಜ ಗಾಡಿಗಳ ಮೂಲಕ ಸಾಗಿಸುವುದೆಂದರೆ ಸುಲಭದ ಮಾತಲ್ಲ. ಅದಕ್ಕೆ ಬಹಳವೇ ಸಮಯ ತಗಲುತ್ತಿತ್ತು. ಅದಕ್ಕಾಗಿ ಅವರೇ ಕಂಡು ಹಿಡಿದ ರೈಲು ಮಾರ್ಗ ಅತಿ ಸುಲಭದ ದಾರಿಯೆಂದು ಬ್ರಿಟಿಷರು ಮನಗಂಡಿದ್ದರು. ಶ್ರೀಲಂಕಾದಲ್ಲಿ ಕೊಲಂಬೋವನ್ನು‌ ಮುಖ್ಯ ಸ್ಥಳವಾಗಿ ಪರಿಗಣಿಸಿ ಅಲ್ಲಿಗೆ ಕಾಫಿ ಫಸಲನ್ನು ತರಲು ಅತಿ ಸುಲಭವಾದ ರೈಲು ಹಳಿಯನ್ನು ಸ್ಥಾಪಿಸಲು ಹೊರಟಿದ್ದರು. ಅದಕ್ಕೆ ಪೂರಕವಾಗಿ ಕೂಲಿಗಳ ಕೊರತೆ ಕಾಡದಂತೆ ಈ ರೀತಿ ಭಾರತದಿಂದಲೋ ಅಥವಾ ಇನ್ನಾವುದೇ ವಸಹಾತು ದೇಶಗಳಿಂದ ಕೂಲಿಯವರನ್ನು ಕರೆತರುತ್ತಿದ್ದರು.

ಕೆಲಸ ಪ್ರಾರಂಭವಾಯಿತು. ಮೈಮುರಿಯುವ ಕೆಲಸ. ಹಾರೆ ಗುದ್ದಲಿಗಳಿಂದ ಬೆಟ್ಟ ಅಗೆಯಬೇಕಾದ ಅಧ್ವಾನ ಹೇಳಬೇಕೇ. ಮಳೆಯ ಮಧ್ಯೆ ಬರುವ ಸುಡುಬಿಸಿಲು ಸ್ವಲ್ಪ ಆಪ್ಯಾಯಮಾನವಾದರೂ, ಮಳೆಯೇ ತುಂಬಿ ಹೋದ ಆ ಮಳೆಗಾಲದಲ್ಲಿ ಬೇಸರ ಹುಟ್ಟಿಸುತ್ತಿತ್ತು. ಭೀಕರ ಬಂಡೆಗಳಿಗೆ ಸ್ಫೋ ಟಕಗಳನ್ನಿಟ್ಟು ಒಡೆಯುತ್ತಿದ್ದರು. ಕೆಲವೊಮ್ಮೆ ಎಡವಟ್ಟಾಗಿ ಹತ್ತಾರು ಜನ ಅಸ್ಪತ್ರೆಯ ಪಾಲಾಗುತ್ತಿದ್ದರು. ಕರಾರುಗಳ ಪ್ರಕಾರ ಅವರ ಆಸ್ಪತ್ರೆ ಖರ್ಚನ್ನು ಸರಕಾರ ಭರಿಸುತ್ತಿತ್ತು. ಆರೋಗ್ಯ ಸರಿಯಾದರೆ ಮತ್ತೆ ಕೂಲಿಗೆ, ಇಲ್ಲದಿದ್ದರೆ ಮನೆಗೆ -ಅನ್ನುವಷ್ಟು ಮಾತ್ರ ಮನುಷ್ಯರಿಗೆ ಬೆಲೆ ಅಲ್ಲಿ. ಮೊದ ಮೊದಲಲ್ಲಿ ಅಲ್ಲಿದ್ದ ಕಷ್ಟದ ಕೆಲಸ ಹೊಸಬರಿಗೆ ಹೊರಿಸುತ್ತಿದ್ದರು. ರಸ್ತೆ ಕೊರೆಯುವಲ್ಲಿ ಕಗ್ಗಾಡಾದ್ದರಿಂದ ಆಗಾಗ ಹಾವಿನ ಕಡಿತ, ಹುಲಿಗೆ ಬಲಿಯಾವುದೆಲ್ಲ ಸಾಧಾರಣವಾಗಿತ್ತು. ಸುಮಾರು ಆರು ತಿಂಗಳುಗಳ ತರುವಾಯ, ಇದಿನಬ್ಬನಿಗೆ ಕೆಲಸದಲ್ಲಿ ಹೊಸ ಹಿಡಿತ ಬಂದಿತ್ತು. ಅಲ್ಲಿದ್ದ ಎಲ್ಲರಿಗಿಂತ ಸ್ವಲ್ಪ ತಂತ್ರ ಪೂರ್ವಕವಾಗಿ ಎಲ್ಲಾ ಕೆಲಸಗಳನ್ನೂ ಮಾಡಿ ಮುಗಿಸುತ್ತಿದ್ದದ್ದು ಅವನೊಬ್ಬನೇ.

ಪರ್ವತ ಕೊರೆಯುತ್ತಾ ಸುರಂಗ ಅಗೆಯುತ್ತಾ ರಸ್ತೆ ತಯ್ಯಾರಾಗುತ್ತಿತ್ತು. ಹಿಂದೊಮ್ಮೆ ಶಿವಂ ಇಲ್ಲೇ ಬೆಟ್ಟ ಜರಿದು ಮೈಮೇಲೆ ಬಿದ್ದು ಮೃತನಾಗಿದ್ದ. ಅದೇ ಪರ್ವತ ಅಗೆದು ಮುಗಿಸಲು ಇನ್ನೆರಡು ದಿನ ಮಾತ್ರ; ಅದು ಕಡೆದರೆ ಕೆಲಸಗಾರರಿಗೆ ವಿಶೇಷ ಔತಣ ಸರಕಾರದ ಕಡೆಯಿಂದ ಸಿಗುವುದಿತ್ತು. ಹಾಗೊಂದು ಅಲಿಖಿತ ಕರಾರನ್ನು ಇಂಜಿನಿಯರ್ ಹೇಳಿ‌ ಹೋಗಿದ್ದ. ಇನ್ನು‌ ೧೫ ಅಡಿ ಕೊರೆದರೆ ಪರ್ವತ ಸಂಪೂರ್ಣ ಕೊರೆದಂತೆ. ಇಂಜಿನಿಯರ್ ಬೇರೆ ಆ ದಿನ ಬಂದಿರಲಿಲ್ಲ. ಎಲ್ಲರೂ ಇದಿನಬ್ಬನಿಗೆ‌ ಕೆಲಸ ವಹಿಸಿ‌ ಹಿಂದಿನಿಂದ ನಿಂತರು. ಕೆಲಸ ಭರದಿಂದ ಸಾಗುತ್ತಿದೆ. ಐದಕ್ಕಿಂತಲೂ ಹೆಚ್ಚು ಅಡಿಯಷ್ಟು ಸುರಂಗ ಮುಂದೆ ದಾಟಿದೆ. ಇನ್ನೂ‌ ಸ್ವಲ್ಪವೇ ಉಳಿದಿದೆ ಅನ್ನುವಷ್ಟಕ್ಕೆ ಇದಿನಬ್ಬನಿಗೆ ಅಪಾಯದ ಅರಿವಾಯಿತು. “ಎಲ್ಲರೂ ಹೊರಗೆ ಓಡಿ ” ಇದಿನಬ್ಬ ಜೋರಾಗಿ ಕಿರುಚಿದ. ಮುಂದೆ ಸಾಗಿದಂತೆ ಮರದ ದೊಡ್ಡ ದಿಣ್ಣೆಗಳನ್ನಿಟ್ಟು ಆಧಾರದಂತೆ ಕೊಡುವುದು ಇದಿನಬ್ಬನಿಗೆ ತಡವಾಗಿ ನೆನಪಿಗೆ ಬಂದಿತ್ತು. ಇದಿನಬ್ಬನ‌ ಮಾತು ಕೇಳುತ್ತಿದ್ದಂತೆ ಅರ್ಧಕ್ಕರ್ಧ ಜನ ಪೇರಿ ಕಿತ್ತರು. ಆ ಹೊತ್ತಿಗೆ ಇದಿನಬ್ಬ ಬೇಗ ಬೇಗನೆ ಅಲ್ಲಿದ್ದ‌ ನಾಲ್ಕೈದು ಮರದ ತುಂಡುಗಳನ್ನು ಸುರಂಗಕ್ಕೆ ಆನಿಸಿದಂತೆ ” ಭರ ಭರ” ಎನ್ನುತ್ತಾ ಗುಡ್ಡದ‌ಕೊನೆ ಜರಿಯುವ ಶಬ್ದ ಕೇಳಿ ಬಂತು. ಓಡಿ ಓಡಿ ಎನ್ನುತ್ತಿದ್ದ ಇದಿನಬ್ಬನಿಗೆ ಉಳಿದವರು ಅಡ್ಡಲಾಗಿದ್ದದ್ದರಿಂದ ಓಡಲಾಗಲಿಲ್ಲ‌. ಮುಕ್ಕಾಲು ಜನರು‌ ಹೊರಗೋಡಿ ಬಂದರು. ಇದ್ದಕ್ಕಿದ್ದಂತೆ ಭಾರೀ ಸದ್ದಿನೊಂದಿಗೆ ಗುಡ್ಡದ ಒಂದು ಭಾಗ ಜರ್ರನೆ ಕುಳಿತೇ ಬಿಟ್ಟಿತು. ಆನಿಸಿದ ಮರದ ಕೊರಡೊಂದು ಬಾಗಿ ಇದಿನಬ್ಬನ ಕಾಲಿಗೆ ಬಿತ್ತು. ಎದ್ದು ಓಡುವಷ್ಟಕ್ಕೆ ಬೆನ್ನಿನ ನೇರಕ್ಕೆ ದೊಡ್ಡ ಕಲ್ಲೊಂದು ಬಿತ್ತು. ಮತ್ತೆ ಮಣ್ಣು ಪರ ಪರನೆ ಜರಿಯಿತು. ಇದಿನಬ್ಬನೂ ಸೇರಿ ನಾಲ್ಕೈದು ಜ‌ನ ಮಣ್ಣಿನೊಳಗೆ ಅಂತರ್ಧಾನವಾದರು. ಇದಿನಬ್ಬನ ಕಣ್ಣು ಕಪ್ಪಿಟ್ಟಿತು.

*****

ಶ್ರೀಲಂಕಾದ ಕೊಲೊಂಬೋ, ಸಂತ ತೆರೆಸಾ ಆಸ್ಪತ್ರೆಯಲ್ಲಿ ದಾದಿಯರೆಲ್ಲಾ ಭಾರಿ ಕೆಲಸದಲ್ಲಿ ನಿರತರಾಗಿದ್ದಾರೆ. ರೋಗಿಗಳ ಶುಶ್ರೂಶೆಯಲ್ಲಿದ್ದಾರೆ. ಹೊಸ ರೋಗಿಗಳು, ಗಾಯಾಳುಗಳ ಆಗಮನವಾಗುತ್ತಿದೆ. ಔಷಧಿಯ ವಾಸನೆ, ಕಮಟು ವಾಸನೆ ಅಲ್ಲೆಲ್ಲಾ ವ್ಯಾಪಿಸಿದೆ. ಎತ್ತರದ ಕಲ್ಲು ಕಟ್ಟಡ ಆಸ್ಪತ್ರೆಯ ಹೊರ ಆವರಣದಲ್ಲಿ ಹತ್ತಾರು ಎತ್ತಿನ ಗಾಡಿಗಳು ಸಾಲು ನಿಂತಿವೆ. ಬೆಳ್ಳಕ್ಕಿಗಳಂತೆ ನಡೆದಾಡುವ ಜೀವ ರಕ್ಷಕ ದಾದಿಯರ ದಂಡೇ ಇದೆ.ಕಾರುಗಳು ಬರುತ್ತವೆ‌. ಕೈಯಲ್ಲೊಂದು ಕಬ್ಬಿಣದ ಸಂದೂಕ ಹಿಡಿದುಕೊಂಡು ಬಿಳಿಯ ವೈದ್ಯರು ಆಸ್ಪತ್ರೆಯೊಳಗೆ ಬರುತ್ತಾರೆ. ಸ್ಥಳೀಯರು ಬರುವುದು ಎತ್ತಿನಗಾಡಿಯಲ್ಲಿ, ಅವರೆಲ್ಲರೂ ರೋಗಿಗಳಾಗಿಯೋ, ರೋಗಿಗಳ ಮನೆಯವರಾಗಿಯೋ ಬರುವವರು.

ಇದ್ದಕ್ಕಿದ್ದಂತೆ ದಾದಿಯೊಬ್ಬಳು ಸಂತೋಷ ಭರಿತಳಾಗಿ ಕುಣಿಯುತ್ತಾ ಬಂದಳು.

“ಡಾಕ್ಟರ್, ಡಾಕ್ಟರ್, ಗಾಡ್ ಈಸ್ ಗ್ರೇಟ್, ಅವರ್ ಪೇಷಂಟ್ ಹ್ಯಾಸ್ ಓಪನ್ಡ್ ಹಿಸ್ ಐಸ್ ”

ಒಂದೇ ಹೆಸರಿನಲ್ಲಿ ಉದ್ವೇಗದಿಂದ ಹೇಳಿ ಮುಗಿಸಿದ್ದಾಳೆ. ಮೂರ್ನಾಲ್ಕು ಡಾಕ್ಟರ್ಗಳು ಅವಳ ಮಾತನ್ನು‌ ಕೇಳಿತ್ತಲೇ ” ಹೂ ಇಸ್ ಹಿ” ಎನ್ನುತ್ತಾ ಅವಳನ್ನು ಹಿಂಬಾಲಿಸುತ್ತಿದ್ದಾರೆ. ಜನರಲ್ ವಾರ್ಡಿನ ಮೂಲೆಗೆ ಓಡುತ್ತಿದ್ದ ಅವಳ ಹಿಂದೆ ನಾಲ್ಕೈದು ಬ್ರಿಟಿಷ್ ಡಾಕ್ಟರ್ಗಳಿದ್ದಾರೆ. ಕೃಶವಾದ ಶರೀರವೊಂದು ಪಿಳಿ ಪಿಳಿ ಕಣ್ಣು ಬಿಡುತ್ತಾ ಸುತ್ತಲೂ ನೋಡುತ್ತಿದೆ. ತಲೆಯಲ್ಲಿ ಕೂದಲು ಸುರುಳಿಗಟ್ಟಿದೆ ಮುಖ ಕುಳಿ ಬಿದ್ದಿದೆ.

“ವಾಟ್ ಇಸ್ ಯುವರ್ ನೇಮ್ ”

ಡಾಕ್ಟರ್ ಖುಷಿಯಿಂದ ಕೇಳಿದ ಆ ಪ್ರಶ್ನೆಗೆ ಅಲ್ಪ ಸ್ವಲ್ಪ ಹೊರಳಾಡುತ್ತಾ “ಇದಿನಬ್ಬ ” ಎನ್ನುವ ಕ್ಷೀಣ ಉತ್ತರ ಬಂತು.

“ಇದಿನಬ್ಬ ಯೂ ಆರ್ ಅಲೈವ್”

ತಮ್ಮ ಜೊತೆಗೆ ಇದಿನಬ್ಬ ಬಂದ ಖುಷಿ. ಅಂತೂ ಅಧಿಕಾರಿಗಳು‌ ಕೆಲಸಕ್ಕೆ ಸ್ಥಳ ಗೊತ್ತುಪಡಿಸಿದರು. ಆಗ ಕೊಲೊಂಬೋಗೆ‌ ವಿವಿಧ ಸ್ಥಳಗಳಿಂದ ಕಾಫಿ ಬೆಳೆಯನ್ನು ತರಲಾಗುತ್ತಿತ್ತು. ಮುಂದೆ ಅದು ಕೊಲಂಬೋ ಬಂದರಿನ ಮೂಲಕ ಯುರೋಪಿಗೆ ರಫ್ತಾಗುತ್ತಿತ್ತು.

ಅನ್ನುತ್ತಿದ್ದಂತೆ ಕುಳಿತುಕೊಳ್ಳಲು ಹೊರಟ ಇದಿನಬ್ಬನಿಗೆ ಸಮಾಧಾನ ಹೇಳುತ್ತಾ ಡಾಕ್ಟರ್ ಧೈರ್ಯ ತುಂಬುತ್ತಿದ್ದಾರೆ. ಆರು ತಿಂಗಳಿಂದ ಮೂರ್ಛೆ ಹೋದ ಸ್ಥಿತಿಯಲ್ಲಿಯೇ ಇದ್ದ ಇದಿನಬ್ಬನಿಗೆ ಪ್ರಜ್ಞೆ ಮರುಕಳಿಸಿತ್ತು. ಕುತ್ತಿಗೆ ಮುರಿದ ಎಲುಬಿಗೆ ಪಟ್ಟಿ ಕಟ್ಟಲಾಗಿದೆ. ವಿಪರೀತ ನೋವು ಭಾಸವಾಗುತ್ತಿದೆ. ಬೆನ್ನಿಗೆ ಬಿದ್ದ ಕಲ್ಲಿನ ರಭಸಕ್ಕೆ ಕುತ್ತಿಗೆ ಮೇಲೆ ಗಾಯವಾಗಿದ್ದು ಬಿಟ್ಟರೆ ಇದಿನಬ್ಬನಿಗೆ ಅತೀ ದೊಡ್ಡ ಗಾಯವೇನೂ ಆಗಿರಲಿಲ್ಲ. ಒಂದೆರಡು ವಾರದಲ್ಲಿ ಸರಿಹೋಗಿ, ಒಂದು ತಿಂಗಳು ವಿಶ್ರಾಂತಿ ಪಡೆದರೆ ಸರಿ ಹೋಗಬಹುದೆಂಬುವುದು ವೈದ್ಯರ ಭರವಸೆ. ಇದಿನಬ್ಬರಿಗೆ ರೈಲ್ವೈ ಅಧಿಕಾರಿಗಳ ಜೊತೆ ಸೇರಿ ಈಗ ಇಂಗ್ಲೀಷ್ ಅರ್ಥವಾಗುತ್ತಿದೆ. ಇಂಗ್ಲೀಷರ ಜೊತೆ ಕೆಲಸ ಮಾಡಿದ್ದರಿಂದ ಹರುಕು ಮುರುಕು ಮಾತನಾಡಲು ಬರುತ್ತದೆ. ಆದಷ್ಟು ಬೇಗ ಔಷಧಿಗೆ ಇದಿನಬ್ಬನ ದೇಹ ಹೊಂದಿಕೊಳ್ಳುತ್ತಿದೆ. ಎರಡು ವಾರಗಳಲ್ಲೇ ಕುತ್ತಿಗೆಯ ಎಲುಬು ಸರಿಯಾಗಲಿದೆ. ಕೃಶವಾದ ದೇಹಕ್ಕೆ ವಿಶ್ರಾಂತಿ ಮತ್ತು ಪೋಷಣೆ ಅಗತ್ಯವಿರುವಾಗ ದಾದಿಯರು ದೇವರ ಕೆಲಸದಂತೆ ಸಹಕರಿಸುತ್ತಲೇ ಬಂದಿದ್ದಾರೆ. ದೇಹ ಮತ್ತೆ ಹಿಂದಿನಷ್ಟೇ ಶಕ್ತಿಯುತವಾಗುತ್ತಿದೆ, ಗುಳಿಗೆಗಳನ್ನು ತಿಂದು, ಎಣ್ಣೆ ತಿಕ್ಕಿ ಹೇಗೂ ಎರಡು ವಾರವೂ ಕಳೆಯಿತು.
“ನಿಮಗಿನ್ನೂ ಹೋಗಬಹುದು” ಎನ್ನುವಾಗ ಯಾರೂ ಇಲ್ಲದೆ ಅನಾಥ ಶವದಂತೆ ಮಲಗಿದ್ದ ತನ್ನನ್ನು ಬಹಳ‌ ಜತನದಿಂದ ಕಾಪಿಟ್ಟ ದಾದಿಯರಿಗಾಗಿ ಕಣ್ಣೀರು ಸುರಿಸಿ ಡಾಕ್ಟರ್ಗಳಲ್ಲಿ ವಿದಾಯ ಕೇಳಿ ಇದಿನಬ್ಬ ಗೊತ್ತು ಗುರಿಯಿಲ್ಲದ ಪ್ರಯಾಣಕ್ಕಾಗಿ ಮತ್ತೆ ಹೊರಟು ನಿಂತ. ಇನ್ನೇನು ಹೊರಡಬೇಕಿರುವಾಗ “ನೀವು ಹೋಗುವ ಮೊದಲೊಮ್ಮೆ ವೈದ್ಯರ ಜೊತೆ ಮಾತನಾಡಬೇಕಂತೆ” ಎಂಬ ದೂತನ ಮಾತಿಗೆ ಇದಿನಬ್ಬ ಮತ್ತೆ ಹಿಂದಕ್ಕೆ ಹೆಜ್ಜೆ ಹಾಕಿ, ಅಧಿಕಾರಿಯನ್ನು ಭೇಟಿಯಾದ.

“ವೆಲ್ಕಂ ಇದಿನಬ್ಬ, ನಿನ್ನ ಜೊತೆ ಮಣ್ಣಿನಲ್ಲಿ ಸಿಲುಕಿದವರಾರು ಬದುಕಿ ಉಳಿದಿಲ್ಲ, ನೀನೊಬ್ಬ ಮಾತ್ರ ಸಾವನ್ನು ಜಯಿಸಿದ್ದೀಯಾ ”
ವೈದ್ಯರು ಹೇಳಿ ಮುಗಿಸುತ್ತಿದ್ದಂತೆ ಇದಿನಬ್ಬನ ಕಣ್ಣಲ್ಲಿ ಕಣ್ಣೀರ ಧಾರೆ. ದೇವನನ್ನು ಸ್ಮರಿಸಿ ಹೊಸ ಚೈತ‌ನ್ಯವನ್ನು ತಂದು ಕೊಂಡ. ವೈದ್ಯರು ಮತ್ತೆ ನೋಡಿ, “ಗುಡ್ ಲಕ್ ಯಂಗ್ ಮ್ಯಾನ್ ಯೂ ಆರ್ ಫ್ರೀಟು ಗೋ”
ಎನ್ನುತ್ತಾ ಬೆನ್ನು ತಟ್ಟಿದರು.

” ನಾನು ಹೋಗಬಹುದು, ಎಲ್ಲಿಗೆ ಹೇಗೆ? ಕೈಯಲ್ಲೊಂದಾಣೆ ಇಲ್ಲದೆ ದೂರದೂರಿಗೆ ಮರಳುವುದೆಂದರೆ?” ಛೇ ಆದಾಗಲಿಕ್ಕಿಲ್ಲ”

ಸ್ವತಃ ತೀರ್ಮಾನದೊಂದಿಗೆ ನಾನು ಊರು ಬಿಟ್ಟದ್ದು. ಮತ್ತೆ‌ ನಾನು ಹೊರಡಬೇಕಾದರೆ ದುಡಿಯಬೇಕು. ಹಣ‌ ಸಂಪಾದಿಸಬೇಕು. ಎಲ್ಲವನ್ನೂ‌ ಮನನ ಮಾಡಿಕೊಂಡು‌ ಇದಿನಬ್ಬ ಮತ್ತೆ ಕೊಲಂಬೋ‌ ಪಟ್ಟಣಕ್ಕೆ‌ ಬಂದ. ಅಲ್ಲೆಲ್ಲಾ ಕೆಲಸಕ್ಕಾಗಿ ಅಲೆದ. ಕೊನೆಗೆ ಯಾರೋ ಬಂದರಿಗೆ ಮೀನು ಹೊರುವ ಕೂಲಿಯಾಳಾಗಿ ಕೆಲಸ ಮಾಡಿದರೆ ಹಣ ಮಾಡಬಹುದೆಂದು ಹೇಳಿದರು. ಅವರ ಜೊತೆ ಕೂಡಿಕೊಂಡು‌ ಒಂದಷ್ಟು ಬುಟ್ಟಿ ಮೀನು ಹೊತ್ತು‌ ಸಂಜೆ ಕಛೇರಿಯಲ್ಲಿ ಹೆಬ್ಬೆಟ್ಟು ಹಾಕಿ ತಲುಪಿದಾಗ ಅರ್ಧಾಣೆ ಕೂಲಿ ಸಿಗುತ್ತದೆ. ಅದನ್ನು ಪಡೆದು ಹೊಟ್ಟೆಗೆ ತಿನ್ನುವಷ್ಟು ಊಟ ಮಾಡಿದರಾಯ್ತು”ಎಂದು ತೀರ್ಮಾನಿಸಿದ್ದೂ ಆಯಿತು. ಹಾಗೇಯೇ ದಿನಗಳು ಕಳೆಯಿತು. ಆದರೆ ಇದರಿಂದ ಹೆಚ್ಚಿನದ್ದೇನೂ ಉಳಿಸಿಕೊಳ್ಳಲು ಸಾಧ್ಯವಿಲ್ಲವೆಂದು ಅನಿಸಿದಾಗ ‘ಇನ್ನು ಯಾವುದಾದ್ರೂ ಕೆಲಸ ಸಿಗಬಹುದೇ?’ ಎಂದು ಹುಡುಕುತ್ತಿರುವಾಗ ಯಾರೋ ಒಬ್ಬ ದಲ್ಲಾಳಿ ಪೇಟೆಯಲ್ಲಿ ಕೂಲಿಗಳ ವಿಚಾರ ಮಾತನಾಡುತ್ತಿರುವುದು ಇದಿನಬ್ಬನಿಗೆ ಕಂಡಿತು.

ಆತ ದಲ್ಲಾಳಿಯೆಂದು ಖಚಿತ ಪಡಿಸಿಕೊಂಡ ಇದಿನಬ್ಬ ನೇರ ಹೋದವನೇ “ನನಗೊಂದು‌ ಕೆಲಸ ಸಿಗಬಹುದೇ? ” ಎಂದು ಕೇಳಿಕೊಂಡ. “ಹಾ ಅದಕ್ಕೇನು, ಸ್ವಲ್ಪ ದೂರ ಆಗಬಹುದಾ” ಅಂದ. “ಭೂಮಿಯ ಮೇಲೆ ಎಲ್ಲಾದರೂ ಆದೀತು” ಎಂದು ಇದಿನಬ್ಬ ಉತ್ತರ ಕೊಡಬೇಕಾದರೆ ದಲ್ಲಾಳಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಷ್ಟೇ ಖುಷಿ. ಮರುದಿನವೂ ಮೀನು ಬುಟ್ಟಿ ಹೊತ್ತು ಊಟ ಮಾಡುವಾಗಲೂ ದಲ್ಲಾಳಿ ಅಲ್ಲೇ ಇದ್ದ . ಇದಿನಬ್ಬ ಅವನಲ್ಲಿ ಕೆಲಸದ ವಿಷಯ ಮಾತನಾಡಿದ. ಒಂದಿಷ್ಟು ನಾಣ್ಯ ಕೊಡುತ್ತಾ “ಇದು ನಿನ್ನ ಈಗಿನ ಖರ್ಚಿಗೆ ಇನ್ನರೆಡು ದಿನ ಕ್ಕೆ ಬಂದರಿಗೆ ಬಾ, ಇದು ನಿನ್ನ ಮುಂಗಡ ಹಣ, ಉಳಿದದ್ದು ಕೆಲಸ ಮುಗಿದ ಬಳಿಕ ಕೊಡುತ್ತೇನೆ” ಎಂದು ಹೇಳಿ ಹೊರಟು ಬಿಟ್ಟ. ಇದ್ದಷ್ಟು ದಿನ ಮೀನು ಬುಟ್ಟಿ ಹೊರುವ ಕೆಲಸ, ರಾತ್ರಿ ಸರಕಾರಿ ಛತ್ರದ ಹತ್ತಿರ ಮರದ ಕೆಳಗೆ ಮಲಗುವುದರಲ್ಲೇ ದಿನಗಳು ಉರುಳಿದವು. ಆ ದಿನ ಬಂತು. ಮತ್ತೆ ಅದೇ ಸ್ಥಳಕ್ಕೆ ಬಂದರೆ ದಲ್ಲಾಳಿಯ ಸುಳಿವೇ ಇಲ್ಲ. ಹಣ ಬೇಕಿತ್ತು, ಕೆಲಸ ಕೈಗೂಡಲೇ ಇಲ್ಲ. ನಿರಾಶೆಯಿಂದ ಹಿಂದಿರುಗಬೇಕು ಅನ್ನುವಷ್ಟರಲ್ಲಿ , ಹಿಂದಿನಿಂದ ಯಾರೋ ಕರೆದಂತಾಯ್ತು. ನೋಡಿದರೆ, ಅದೇ ದಲ್ಲಾಳಿ ನಿಂತಿದ್ದ! ಇದಿನಬ್ಬನಿಗೆ ಹೋದ ಜೀವ ಬಂದಂತಾಯ್ತು.

“ನಾಳೆ ಬೆಳಿಗ್ಗೆ ದೂರದ ಒಂದೂರಿಗೆ ಹೋಗುವ ಹಡಗು ಬಂದರಿಗೆ ಬರ್ತಿದೆ, ನೀನು ಅದರಲ್ಲಿ ಹೋಗಬಹುದು, ಐದು ವರ್ಷದ ಕರಾರಿನ ಬಳಿಕ ಸಂಬಳ ಸಿಗುತ್ತದೆ” ಈ ಕೆಲಸವನ್ನು ನಿನಗೆ ವಹಿಸಿಕೊಟ್ಟದ್ದಕ್ಕೆ ಮುಂಗಡವಾಗಿ‌ ನಿನ್ನ ಸಂಬಳದಲ್ಲೇ ಹಣ ಮುರಿದುಕೊಳ್ಳುವೆ” ಎಂದುತ್ತರಿಸಿದ್ದ. ಇದಿನಬ್ಬನಿಗೂ ಕೆಲಸವೇ ಬೇಕಿತ್ತು. ಊರೂರು ಅಲೆಯುತ್ತಾ ಅದಾಗಲೇ ಏಳು ವರ್ಷಗಳು ಕಳೆದಿದ್ದವು. ಇನ್ನು ಯಾವ ಊರಾದರೂ ಪರವಾಗಿಲ್ಲ. ದೂರ ಅಂದರೆ ಕಡಲು, ಇನ್ನಷ್ಟು ಕಡಲು ಅಷ್ಟೇ.

ಮರುದಿನ ಸೂರ್ಯ ಮೂಡುವ ಹೊತ್ತಿಗೆ ಇದಿನಬ್ಬ ಬಂದರಿಗೆ ಬಂದ. ಮಂಗಳೂರಿನ ಬಂದರಿನಷ್ಟೇ ದೊಡ್ಡ ಬಂದರು. ವಲಸಿಗ ತಮಿಳರಿಂದಲೇ ತುಂಬಿ ಹೋಗಿದ್ದ ಬಂದರಿನಲ್ಲಿ ಮೀನಿನ ಕಮಟು ಮೂಗಿಗೆ ಬಡಿಯುತ್ತಿತ್ತು. ಬೆಕ್ಕು, ಕಾಗೆ , ನಾಯಿಗಳೆಲ್ಲಾ ಸತ್ತು ಬಿದ್ದ ಜಲಚರಗಳನ್ನೆಲ್ಲಾ ತಿನ್ನುತ್ತಾ‌ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಇದಿನಬ್ಬ ಎಷ್ಟೋ ಹೊತ್ತು ಹಾಗೆಯೇ ಕಡಲು ನೋಡಿ ಕಲ್ಲಾಗಿದ್ದ. ಕಡಲೆಂದರೆ ಅದ್ಭುತ ಸೃಷ್ಟಿ. ಮನುಷ್ಯನಿಗೆ, ಪ್ರಾಣಿಗಳಿಗೆ, ಪಕ್ಷಿಗಳಿಗೆ ಆಹಾರ ನೀಡುತ್ತಲೇ ಇದೆ. ಇಂದು‌ ನಿನ್ನೆಯಿಂದಲ್ಲ. ಕೋಟಿ ಕೋಟಿ ವರ್ಷಗಳ ಹಿಂದಿನಿಂದಲೂ. ಅಷ್ಟರಲ್ಲೇ ಸೂರ್ಯನ ಕಿರಣಗಳು ಪ್ರಖರಗೊಳ್ಳತೊಡಗಿದವು. ಜನರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಕೂಲಿಗಳು ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಅಷ್ಟರಲ್ಲಿ ದಲ್ಲಾಳಿ ನಾಲ್ಕೈದು ಜನರ ತಂಡದೊಂದಿಗೆ ಪ್ರತ್ಯಕ್ಷಗೊಂಡ! “ಹಾ… ಇದಿನಬ್ಬ, ಬಾ ಹೋಗೋಣ” ಎನ್ನುತ್ತಿದ್ದಂತೆ ಇದಿನಬ್ಬನೂ ಅವರ ಜೊತೆ ಕೂಡಿಕೊಂಡ. ಕುರುಬನು ಕುರಿಗಳನ್ನು ಮುನ್ನಡೆಸುವಂತೆ ಕೂಲಿಗಳು ಅವನ ಹಿಂದೆ ಹೆಜ್ಜೆ ಹಾಕುತ್ತಿದ್ದರು‌. ಬಂದರು ಕಟ್ಟೆಗೆ ಬರುತ್ತಿದ್ದಂತೆ ಎಲ್ಲ ಕೂಲಿಯವರು ಗಾಬರಿಗೆ ಬಿದ್ದರು. ಅಲ್ಲಿ ರಾಕ್ಷಸಾಕಾರದ ಮೀನೊಂದು ಸತ್ತು ಬಿದ್ದಿತ್ತು.

ಅದರ ಬಾಯಿಯನ್ನು ಬೃಹತ್ ಕೊಂಡಿಯಲ್ಲಿ ಸಿಕ್ಕಿಸಿ ಮೇಲೆ ಕಟ್ಟಲಾಗಿತ್ತು. ನೂರಾರು ಜನ ಅದರ ಹೊಟ್ಟೆಯೊಳಗೆ ಹೋಗಿ ಬರುತ್ತಿದ್ದರು. ಅದರ ಚೂಪಾದ ಹಲ್ಲುಗಳು ಒಬ್ಬ ನೀಳಕಾಯದ ಮನುಷ್ಯನಿಗಿಂತ ಉದ್ದವಿತ್ತು. ಹಡಗಿನ ಹತ್ತಿರ ಬಂದರೂ ಯಾರಿಗೂ ಮೀನನ್ನು ನೋಡಿ ಮುಗಿದಿರಲಿಲ್ಲ.

ಕತ್ತು ನೋಯುವಷ್ಟು ಎತ್ತರದ ಬೃಹತ್ ಹಡಗು. ಉದ್ದಕ್ಕೆ ಏನೋ ನಾಲ್ಕಕ್ಷರಗಳಲ್ಲಿ ಅದರ ಹೆಸರು ಗೀಚಿತ್ತು. ಅವರೆಲ್ಲಾ ನಿರಕ್ಷರ ಕುಕ್ಷಿಗಳಾದ ಕಾರಣ ಅವರ ಕಣ್ಣಿಗೆ ಗೀಚಿದ ಹಾಗೆ ಅನಿಸಿದ್ದಷ್ಟೇ ಹೊರತು ಅದರ ಬಗ್ಗೆ ಬೇರೇನೂ ಹೇಳಲಿಕ್ಕಿರಲಿಲ್ಲ. ಅಂತೂ ಹಡಗಿನೊಳಗೆ ಪ್ರವೇಶ ಸಿಕ್ಕಿತು. ತಲೆಗೆ ಇಷ್ಟರಂತೆ ಹಣ ಪಡೆದ ದಲ್ಲಾಳಿ ಬ್ರಿಟಿಷ್ ಅಧಿಕಾರಿಯೊಂದಿಗೆ ಮಾತನಾಡಿ ಹೊರಟು ಹೋದ. ಹಡಗಿನ ಬಾಗಿಲು ಮುಚ್ಚಲಾಯಿತು. ಮೆದುವಾಗಿ ಕುಲುಕಿದಂತೆ ಭಾಸವಾದಂತೆ ಇದಿನಬ್ಬನಿಗೆ ಹಡಗು ತೀರ ಬಿಟ್ಟದ್ದು ಖಾತ್ರಿಯಾಯ್ತು. ಹಡಗಿನ ಪ್ರಯಾಣ ಇದಿನಬ್ಬನಿಗೆ ಅಭ್ಯಾಸವಾಗಿತ್ತು. ಇದು ಬ್ರಿಟನ್ ಸರಕಾರದ ಹಡಗು. ದಿನಕ್ಕೊಂದು ಬಾರಿ ಮೀನು ಹುರಿದು ಬ್ರೆಡ್ಡು ಕಳಿಸಿಕೊಡುತ್ತಿದ್ದರು.
ಹಿಂದಿನ ಎಲ್ಲಾ ಹಡಗಿಗಿಂತಲೂ ಆರಾಮದಾಯಕ. ವಾಂತಿ ಮಾಡುವವರು ಮಾಡುತ್ತಲೇ ಇದ್ದರು‌. ಮಹಿಳೆಯರು ಮಕ್ಕಳು ವಯಸ್ಕರು ಎಂಬ ಭೇದವಿಲ್ಲದೆ ಕೂಲಿಯಾಳುಗಳು ತುಂಬಿ ಹೋಗಿದ್ದರು. ಒಂದೊಂದು ಊರಿನವರದ್ದು ಒಂದೊಂದು ಭಾಷೆ. ಯಾರಾದರೂ ನಮ್ಮೂರಿನವರು ಸಿಗುವರೇ ಅನ್ನುತ್ತಾ ಹುಡುಕಿದ್ದೂ ಆಯಿತು. ದುರದೃಷ್ಟವಶಾತ್ ಯಾವೊಬ್ಬನೂ ಸಿಗಲಿಲ್ಲ. ಯಾರಾದ್ರೂ ಸಿಕ್ಕರೆ ಹೇಗೆ ಮಾತನಾಡಿಸಬೇಕೆನ್ನುವಷ್ಟು ಬ್ಯಾರಿ ಭಾಷೆಯ ಪ್ರಾಥಮಿಕ ಭಾಷಾ ಜ್ಞಾನ ಸಂಪೂರ್ಣವಾಗಿ ಮರೆತೇ ಹೋಗಿತ್ತು! ಏನು ಮಾಡುವುದು, ಇನ್ನು ಮನೆ ತಲುಪುವುದು ಅಸಾಧ್ಯವೇ ಸರಿ ಎಂಬ ಚಿಂತೆ ಇದಿನಬ್ಬರನ್ನು ಅಗಾಧವಾಗಿ ಕೊರೆಯಲಾರಂಭಿಸಿತು.

ಕಡಲಿನಲ್ಲಿ ಹಲವು ದಿನಗಳು ಕಳೆದವು. ಈಗೀಗ ಹಡಗಿನ ಅಧಿಕಾರಿಗಳ ಪರಿಚಯವಾಗಿ ಕ್ಯಾಬಿನ್ ಗೆ ಹೋಗುವುದಕ್ಕೂ ಸಲುಗೆ ಇರುತ್ತಿತ್ತು. ಆಗಾಗ ಅಧಿಕಾರಿಗಳಿಗೆ ಒಳ್ಳೆಯ ಭೋಜನ ಮಾಡಿಕೊಡುವ ಕೆಲಸವನ್ನೂ ಇದಿನಬ್ಬ ನಿರ್ವಹಿಸಿಕೊಡುತ್ತಿದ್ದ. ಬ್ರಿಟಿಷರ ಜೊತೆ ಕಲೆತು ಇಂಗ್ಲೀಷ್ ಸರಾಗವಾಗಿ ಮಾತನಾಡಲು ಬರುತ್ತಿತ್ತು. ಕ್ಯಾಬಿನ್ ನಲ್ಲಿ ನಿಂತು ಗಾಳ ಹಾಕುವಾಗ ಅಧಿಕಾರಿಗಳಿಗೆ ಇದಿನಬ್ಬ ಊರಿನ ಕೆಲವೊಂದು ತಂತ್ರಗಳನ್ನು ಹೇಳಿಕೊಡುತ್ತಿದ್ದ. ಪುಣ್ಯಕ್ಕೆ ಅವೆಲ್ಲಾ ಯಶಸ್ವಿಯಾಗುತ್ತಿದ್ದುದರಿಂದ ಇಂಗ್ಲೀಷರಿಗೆ ಇದಿನಬ್ಬನ ಮೇಲೆ ಒಲವು ಹೆಚ್ಚು. ಕೆಳಸ್ತರದಲ್ಲಿ ಬಲೆ ಕಟ್ಟುತ್ತಿದ್ದುದರಿಂದ ಒಳ್ಳೊಳ್ಳೆಯ ಮೀನು ಸಿಕ್ಕರೆ ಇದಿಬ್ಬನದೇ ಮಸಾಲೆ. ಜೊತೆ ಸೇರಿಕೊಂಡ ತಮಿಳನೊಂದಿಗೆ ಇದಿನಬ್ಬ ಅಧಿಕಾರಿಗಳ ಖಾಸಗಿ ಅಡುಗೆ ಕೋಣೆಯಲ್ಲಿ ಅದ್ಭುತ ಅಡುಗೆ ಮಾಡಿಕೊಡುತ್ತಿದ್ದ . ಹೊಸ ಹೊಸ ರೀತಿಯಲ್ಲಿ ಕರಿಯುವ ಮೀನಿಗೆ ವಿಶಿಷ್ಟ ರುಚಿ. ಒಬ್ಬ ಅಧಿಕಾರಿಗಂತೂ ದಿನವೂ ಇದಿನಬ್ಬನೇ ಅಡುಗೆ ಮಾಡಿಕೊಡಬೇಕೆಂಬ ಒತ್ತಾಯವಿದ್ದುದರಿಂದ ಮೀನು ಶಿಕಾರಿಯಲ್ಲೂ ರುಚಿಕಟ್ಟಾದ ಅಡುಗೆ ಮಾಡುವುದರಲ್ಲೂ ಆ ಸಿಬ್ಬಂದಿಯ ಹಿಂದೆ ಮುಂದೆ ಇದಿನಬ್ಬ ಯಾವಾಗಲೂ ಇರುತ್ತಿದ್ದ. ಅಧಿಕಾರಿಗಳು ತಿಂದು ಹೆಚ್ಚಿಗೆಯಾದುದರಲ್ಲಿ ಇವರಿಬ್ಬರೂ ಹೊಟ್ಟೆ ತುಂಬಿಸುತ್ತಿದ್ದರು. ದಿನಗಳು ಉರುಳಿದವು. ಇದಿನಬ್ಬ ಒಮ್ಮೆ ಅಧಿಕಾರಿಗಳಿಗೆ ಬಡಿಸುವುದರಲ್ಲಿ ನಿರತನಾಗಿದ್ದ. ಅವನ ಗಮನವೆಲ್ಲ ಅವರ ಮಾತುಕತೆಗಳಲ್ಲಿ ಇತ್ತು. ಅವರ ಮಾತುಗಳನ್ನು ಕೂಡಿಸಿ ಕಳೆದು ತಾಳೆ ಮಾಡಿದಾಗ ಇದಿನಬ್ಬನಿಗೆ ಒಂದು ವಿಷಯ ಸ್ಪಷ್ಟವಾಯಿತು. ಹಡಗು ಕಗ್ಗತ್ತಲ ಖಂಡ ಆಫ್ರಿಕಾಗೆ ಹೋಗುತ್ತಿತ್ತು. ಒಂದು ಕ್ಷಣ ಇದಿನಬ್ಬ ತಣ್ಣಗೆ ನಡುಗಿದ. ಆಫ್ರಿಕಾ ಎಂದರೆ ಆ ಕಾಲದಲ್ಲಿ ಹಾಗಿತ್ತು. ಮನೆ ಬಿಟ್ಟ ಮೇಲೆ ಗಳಿಸಿದ ಅಪಾರ ಲೋಕಜ್ಞಾನದಿಂದ ಇದಿನಬ್ಬ ಈಗ ಮೊದಲಿನಂತಿರಲಿಲ್ಲ. ಅವನಿಗೆ ಬದುಕು ಬಹಳ ಕಲಿಸಿತ್ತು. ಸಿಲೋನ್ ನಿಂದ ಆಫ್ರಿಕಾಗೆ ಸರಿಸುಮಾರು ೬೦೦೦ ಕಿಮೀ ದೂರ ಕನಿಷ್ಟ ಪಕ್ಷ ೭೫ ದಿನಗಳ ಪ್ರಯಾಣ.

ಪ್ರಯಾಣದುದ್ದಕ್ಕೂ ಅಪಾರ ಕಷ್ಟ ಕೋಟಲೆಗಳ ಸರಮಾಲೆಗಳು ಎದುರಾಗುತ್ತಿದ್ದವು. ಅನಿರೀಕ್ಷಿತವಾಗಿ ಬಂದೆರಗುವ ಆಘಾತಗಳಿಗೆ ತತ್ತರಿಸುತ್ತಿದ್ದ ಅವರಿಗೆ ಅದರಿಂದ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯುತ್ತಿತ್ತು. ಈ ಎಲ್ಲ ಗಂಡಾಂತರಗಳ ನಡುವೆಯೂ ಗಾಳ ಹಾಕುವುದು ತರಹೇವಾರಿ ಅಡುಗೆ ಮಾಡಿ ಅಧಿಕಾರಿಗಳಿಗೆ ಬಡಿಸುವುದು ಮುಂತಾದ ಸಣ್ಣ ಪುಟ್ಟ ವಿನೋದಗಳಲ್ಲಿ ದಿನ ಕಳೆಯುವುದು ಗೊತ್ತಾಗುತ್ತಿರಲಿಲ್ಲ. ಒಂದು ದಿನ ಹಡಗಿನ ಕ್ಯಾಬಿನ್ನಲ್ಲಿ ನಿಂತು ಇದಿನಬ್ಬ ಮತ್ತು ಅಧಿಕಾರಿಗಳಿಬ್ಬರು ಸೇರಿ ಗಾಳ ಹಾಕುತ್ತಿದ್ದರು. ಅದು ಸುಮಾರು ಮಧ್ಯಾಹ್ನ ಸಮಯ ಹತ್ತಿರದಲ್ಲಿ ಕಲ್ಲಿನಂತೆ ಕಡಲ ಮಧ್ಯೆ ಸಣ್ಣ ಮೈದಾನದಂತಹ ಪ್ರದೇಶ ಕಂಡಂತಾಯಿತು. ಅಧಿಕಾರಿಗಳು ಬಹಳ ಖುಷಿಯಿಂದ ಆ ಅದ್ಭುತ ವನ್ನು ನೋಡುತ್ತಾ ನಿಂತರು. ಅದರಲ್ಲೊಬ್ಬ ಅಧಿಕಾರಿ “ಹುರ್ರೇ ಹುರ್ರೇ” ಎಂದು ಕಿರುಚುತ್ತಾ “ಕಡಲ ಮಧ್ಯೆ ಎದ್ದಿರುವ ಕರಿ ಬಂಡೆ” ಎಂದ. ಮತ್ತೊಬ್ಬನಿಗೆ ಆ ವಾದ ಸರಿಯೆನಿಸಲಿಲ್ಲ. ಇಲ್ಲ ಅದ್ಯಾವುದೋ ಪ್ರಾಣಿಯಿರಬೇಕೆಂದು ಇನ್ನೊಬ್ಬ.

ಇಬ್ಬರ ಜಗಳ ತಾರಕಕ್ಕೇರಿತ್ತು, ಹಡಗು ಮೆಲ್ಲನೆ ಚಲಿಸುತ್ತಿತ್ತು. ಬಂಡೆಯು ಹಿಂದೆಯೇ ತೇಲುತ್ತಾ ಬಂದಂತೆ ಭಾಸವಾಯಿತು‌. ಇಬ್ಬರ ಜಗಳವೂ ಇತ್ಯರ್ಥವಾಗುವುದರಲ್ಲಿರಲಿಲ್ಲ. ಕೊನೆಗೆ ಅವರ ಮಧ್ಯೆ ಇದಿನಬ್ಬ ಬಾಯಿ ಹಾಕುತ್ತ “ಸರ್, ನಾವೊಂದು ಕೆಲಸ ಮಾಡೋಣ, ಸ್ವಲ್ಪ ಬೆಂಕಿ ಹಾಕಿ ನೋಡೋಣ, ಪ್ರಾಣಿಯಾಗಿದ್ದರೆ ಖಂಡಿತಾ ಹೊರಟು ಹೋಗುತ್ತದೆ” ಅಂದ. ಈ ಉಪಾಯ ಅವರಿಬ್ಬರಿಗೂ ಹಿಡಿಸಿತು. ಸ್ವಲ್ಪ ಕೆಂಡದ ಚೂರುಗಳನ್ನು ಒಟ್ಟು ಮಾಡಿ ಕರಿ ಬಂಡೆಗೆ ಸುರಿದರು. ಯಾವುದೇ ಪ್ರತಿಕ್ರಿಯೆ ಉಂಟಾಗಲಿಲ್ಲ. ಕರಿ ಬಂಡೆ ಎಂದ ಅಧಿಕಾರಿ ಹಿರಿ ಹಿರಿ ಹಿಗ್ಗಿದ. ಐದು ನಿಮಿಷಗಳ ತರುವಾಯ ಬಂಡೆ ಮಂಗ ಮಾಯ! ಸ್ವಲ್ಪ ದೂರ ತಲುಪಿದಂತೆ ಮತ್ತೆ ಅಂತದ್ದೇ ಬಂಡೆಗಳ ದರ್ಶನವಾಯ್ತು. ಈ ಬಾರಿ ಉರಿಯುವ ದೊಡ್ಡ ಮರದ ತುಂಡುಗಳನ್ನೆಲ್ಲಾ ಅದರ ಮೇಲೆ ಸುರಿದು ಕೆಂಡ ಸುರಿದು ಪೆಟ್ರೋಲ್ ಸುರಿದು ಬೆಂಕಿ ಬಂಡೆಯ ಮೇಲೆ ದಗದಗನೆ ಉರಿಯತೊಡಗಿತು. ಎರಡು ನಿಮಿಷದಲ್ಲಿ ಹಡಗನ್ನು ಎತ್ತಿ ಎಸೆಯುವಂತೊಮ್ಮೆ ಶಕ್ತಿಯಾದ ಕಂಪನದ ಅನುಭವವಾಯ್ತು.


ಅಧಿಕಾರಿಗಳು ಎಡ ಮೂಲೆಯಿಂದ ಬಲ ಮೂಲೆಗೆಸೆಯಲ್ಪಟ್ಟರು. ಮತ್ತೊಮ್ಮೆ ಕುಲುಕಿದಂತಾಗಿ ಕಡಲು ಶಾಂತವಾಯ್ತು. ನೋಡ ನೋಡುತ್ತಿದ್ದಂತೆ ಭೀಕರ ತಿಮಿಂಗಿಲದ ಬಾಲವೊಂದು ಪ್ರತ್ಯಕ್ಷವಾಗಿ ಬಂಡೆ ಮುಳುಗಿತು. ಎಲ್ಲರೂ ಭಯಕ್ಕೆ ಬಿದ್ದರು. ಅಸಿಸ್ಟೆಂಟ್‌ ಕ್ಯಾಪ್ಟನ್ ಕೂಡಲೇ ಕ್ಯಾಬಿನ್ಗೆ ಓಡಿ ಬಂದ. ಅಧಿಕಾರಿಗಳ ಆಟಕ್ಕೆ ಸರಿಯಾಗಿ ಛೀಮಾರಿ ಹಾಕುತ್ತ ತಿಮಿಂಗಿಲಗಳ ಕ್ರೂರ ಅಟ್ಟಹಾಸದ ಬಗ್ಗೆ ಹೇಳತೊಡಗಿದ. ಊರಿಗೆ ನುಸುಳುವ ಕಾಡಾನೆಗಳಂತೆ ಭೀಕರವಾಗಿ ಅವುಗಳು ಪ್ರತಿಕ್ರಿಯಿಸುತ್ತವಂತೆ, ಒಮ್ಮೊಮ್ಮೆ ಭೀಮಾಕಾರದ ಹಡಗನ್ನೇ ಮಗುಚಿ ಹಾಕಿದ ಚರಿತ್ರೆಗಳ ಬಗ್ಗೆ ಕೆದಕಿ ಎಲ್ಲರಿಗೂ ಹೆದರಿಕೆ ಹುಟ್ಟಿಸಿದ. ಆ ಬಳಿಕ ಬಂಡೆಗೆ ಬೆಂಕಿ ಹಾಕುವ ಹುಚ್ಚು ನಿಂತು ಹೋಯಿತು.
ಕಡಲ‌ ಪ್ರಯಾಣಕ್ಕೇರ್ಪಟ್ಟು ಅರ್ಧ ತಿಂಗಳೇ ಕಳೆದು ಹೋಗಿತ್ತು.