”ಆ ದಿನಗಳಲ್ಲಿ ಎಲ್ಲವೂ ನನಗೆ ಹೊಸತು. ಸೈಕಲ್ಲನ್ನು ತುಳಿದುಕೊಂಡು ಕೆಲಸಕ್ಕೆ ಬರುವ,ಬೆಳಗಿನ ವ್ಯಾಯಾಮಕ್ಕಾಗಿ ಓಡಿಕೊಂಡು ಬರುವ ಸಹೋದ್ಯೋಗಿಗಳನ್ನು ನೋಡುತ್ತಿದ್ದೆ. ಮೊಲೆಗಳು ಹೊರಬೀಳುತ್ತವೇನೋ ಎಂಬಂತ ಬಟ್ಟೆಗಳಲ್ಲಿ ಆಸ್ಪತ್ರೆಗೆ ಬರುವ ನನ್ನ ಸಹೋದ್ಯೋಗಿಗಳನ್ನು ನೋಡಿ ಭಾರೀ ಆಶ್ಚರ್ಯವಾಗುತ್ತಿತ್ತು. ಸಮಾಜದಲ್ಲಿಯೂ ಇದಕ್ಕೆ ಕೊರತೆಯಿರಲಿಲ್ಲ. ಅದಾಗಲೇ ನಾಲ್ಕುವರ್ಷ ಈ ದೇಶದಲ್ಲಿ ಕೆಲಸ ಮಾಡಿದ್ದ ನನ್ನ ಗಂಡನಿಗಾಗಲೀ, ಹೊಸದಾಗಿ ಇಲ್ಲಿಗೆ ಬರುವ ನಮ್ಮ ಭಾರತೀಯ ಗಂಡಸರಿಗಾಗಲೀ ಹೇಗನಿಸಿರಬಹುದು ಎಂದು ಕೂಡ ಅನಿಸಿತು”
ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.

 

“ You should learn to lie through your tongue…” ಹೀಗೆಂದು ನೇರವಾಗಿ ನನಗೆ ಹೇಳಿಕೊಟ್ಟಿದ್ದು ಒಬ್ಬ ಹಿರಿಯ ಆಂಗ್ಲ ಸಹೋದ್ಯೋಗಿ, ತರಬೇತುದಾರ. ಬಹುಷಃ ಅದಕ್ಕೆ ನನ್ನ ನೇರ ಬೋಳೇವಾದದ ವರ್ತನೆಯೂ ಕಾರಣವಿರಬೇಕು. ಮುಗ್ಧತೆಯೂ ಇರಬಹುದು. ಮೊದಲೇ ಹೇಳಿದಂತೆ ಬ್ರಿಟಿಷರ ಮಾತುಗಳಲ್ಲಿ ಉತ್ಪ್ರೇಕ್ಷೆ, ಸುಳ್ಳು, ಹೊಗಳಿಕೆ ಹಾಸುಹೊಕ್ಕಾಗಿರುತ್ತದೆ. ನಡವಳಿಕೆ ನಿಯಂತ್ರಿತವಾಗಿರುತ್ತದೆ. ಅದರಲ್ಲೂ ವಿದೇಶೀ ಜನರಾದ ನಮ್ಮೊಡನೆ ಅವರು ತೆರೆದುಕೊಳ್ಳುವುದಿಲ್ಲ. ಪರದೇಶಿಗಳಾದ ನಮ್ಮದೂ ಬಹಳ ಮೇಲ್ನೋಟದ ಸಂಬಂಧಗಳೇ. ಆಕಸ್ಮಿಕವಾಗಿ ಮನಸ್ಸನ್ನು ತೆರೆದುಕೊಳ್ಳುವವರೂ ಇದ್ದಾರೆ. ನಾನು ಹೇಳುತ್ತಿರುವುದು ಬಹುತೇಕರಿಗೆ ಅನ್ವಯವಾಗುವ ವಿಚಾರಗಳನ್ನು ಮಾತ್ರ ಎಂದು ಮೊದಲೇ ಹೇಳಿಬಿಡುತ್ತೇನೆ. ಮೇಲಿನ ಮಾತನ್ನು ಹೇಳುವ ಮುನ್ನ ಕೂಡ ಆತ ನನ್ನನ್ನು ಅಳೆಯಲು ಸಾಕಷ್ಟು ಸಮಯ ತೆಗೆದುಕೊಂಡಿದ್ದ . ಕಾರಣಗಳೇನೇ ಇದ್ದರೂ ಆತ ಬ್ರಿಟಿಷ್ ಸಮಾಜದಲ್ಲಿನ ಒಂದು ಸಣ್ಣ ನಡಾವಳಿಯನ್ನು ನನಗೆ ತಿಳಿಸಿ ಹೇಳಿದ್ದ.

‘ಸೂರ್ಯ ಮುಳುಗದ ಸಾಮ್ರಾಜ್ಯ’ವನ್ನು ಹೊಂದಿದ್ದ ಅಥವಾ ಹಾಗೆಂದು ಖ್ಯಾತವಾದ ಈ ನಾಡಿಗೆ ‘ಸೂರ್ಯ’ನೆಂಬ ಹೆಸರಿನ ನನ್ನ ಮಗನನ್ನು ಕರೆದುಕೊಂಡು ಬಂದು ಸೂರ್ಯನನ್ನು ಹುಡುಕಬೇಕಾದ ವಿಪರ್ಯಾಸವನ್ನು ನೆನೆದು ನಗುತ್ತಲೇ ವರ್ಷಗಳು ಕಳೆದು ಮಗನನ್ನು ಶಾಲೆಗೆ ಸೇರಿಸುವ ಸಮಯವಾಗಿತ್ತು. ಇನ್ನು ಗೊಣಗುತ್ತ ಕುಳಿತಿರಲು ಸಾಧ್ಯವಿರಲಿಲ್ಲ. ನಾನೂ ಕೆಲಸ ಶುರುಮಾಡಿದ್ದೆ. ಪೂರ್ವಾಗ್ರಹಗಳಿಲ್ಲದೆ ನಾವು ಇನ್ನೊಂದು ದೇಶಕ್ಕೆ ಹೋಗುವುದಿಲ್ಲ, ಅಲ್ಲಿ ಬದುಕುವುದಿಲ್ಲ. ಅಂತೆಯೇ ಅವರಿಗೂ ನಮ್ಮಗಳ ಬಗ್ಗೆ ಪೂರ್ವಾಗ್ರಹಗಳಿರುತ್ತವೆ. ಅವುಗಳು ಸವೆಯಲು ಕೆಲ ಸಮಯವಂತೂ ಖಂಡಿತವಾಗಿ ಬೇಕಾಗುತ್ತದೆ. ನಾವು ಅವರ ನೆಲದಲ್ಲಿರುವ ಕಾರಣ ಪ್ರಯತ್ನ ನಮ್ಮಿಂದಲೇ ಶುರುವಾಗಬೇಕು ಎನ್ನುವುದು ನನ್ನ ನಂಬಿಕೆ. ಹಾಗಂತಲೇ ಪ್ರತಿಶತ ಪ್ರಾಮಾಣಿಕವಾಗಿ ಸಮಯ ಪಾಲನೆ, ಕೆಲಸಗಳಲ್ಲಿ ತೊಡಗಿಕೊಂಡಿದ್ದೆ. ಕಲಿಯುವುದರಲ್ಲಿ, ಪರೀಕ್ಷೆಗಳನ್ನು ಪಾಸುಮಾಡುವುದರಲ್ಲಿ ನಿರತವಾಗಿದ್ದೆ. ತರಬೇತಿಯ ಸಮಯದಲ್ಲಿ ಇವರಿಗೊಂದು ತತ್ವವಿದೆ.

“We can train a monkey but the monkey should be willing to learn…” (ಕಲಿಯಲು ಮಂಗನೂ ಇಚ್ಛಿಸಿದರೆ ಅದಕ್ಕೂ ನಾವು ಕಲಿಸುತ್ತೇವೆ) ಎನ್ನುವುದು. ಹಾಗಾಗಿ ನಾನವರ ಕೈಯಲ್ಲಿನ ಮಂಗವಾಗಲೂ ತಯಾರಿದ್ದೆ. ಅಷ್ಟೇನು ಬುದ್ದಿವಂತಳಲ್ಲದಿದ್ದರೂ ನನ್ನ ಪ್ರಾಮಾಣಿಕ ಪ್ರಯತ್ನದಿಂದ ವರ್ಷದಿಂದ ವರ್ಷಕ್ಕೆ ನನ್ನ ಕೆಲಸ ಮುಂದುವರೆಯಿತು. ಆದರೂ ನನಗೊಬ್ಬ ಬಿಳಿಯ ವ್ಯಕ್ತಿಯ ಜೊತೆ ಸ್ಪರ್ಧೆಯಿದ್ದಿದ್ದರೆ ನನ್ನ ಪ್ರಾಮಾಣಿಕತೆಗಿಂತ ಹೆಚ್ಚಾಗಿ ಆ ವಿಚಾರವೇ ಜಾಸ್ತಿ ತೂಗುತ್ತದೆ ಎನ್ನುವ ಸತ್ಯದಿಂದ ನಾನೆಂದೂ ದೂರ ಸರಿಯಲಿಲ್ಲ. ಹಾಗಂತ ಅದನ್ನೇ ನನ್ನ ಆಯ್ಕೆದಾರರ ವಿರುದ್ಧವಾಗಿ ಎತ್ತಿಹಿಡಿದು ವ್ಯತಿರಿಕ್ತತೆಯನ್ನೂ ತೋರಿಸಿಕೊಳ್ಳಲಿಲ್ಲ.

ದಶಕದ ಹಿಂದೆ ಸ್ಕಾಟ್ ಲ್ಯಾಂಡಿನಲ್ಲಿ ಮೊದಲ ಬಾರಿಗೆ ಕೆಲಸ ಶುರುಮಾಡಿದಾಗ ಪರದೇಶದ ಆಸ್ಪತ್ರೆಗಳ ಮೊದಲ ಅನುಭವ ಸಿಗತೊಡಗಿತು. ಇದಕ್ಕೂ ಮೊದಲು ಆರು ತಿಂಗಳ ಕಾಲ ಯಾವುದೇ ಪಗಾರವಿಲ್ಲದೆ ಅನುಭವಕ್ಕಾಗಿ ಇದೇ ಆಸ್ಪತ್ರೆಯಲ್ಲಿ ಎಲ್ಲರ ಹಿಂದೆ ಮುಂದೆ ಓಡಾಡಿಕೊಂಡು ಕೆಲಸ ಕಲಿತಿದ್ದೆ. ನನ್ನ ಈ ಹೊಸ ಕೆಲಸ ನಮಗೆ ಸಂಬಂಧಪಟ್ಟ ಪರಿಣತಿಯಲ್ಲಿ ಅತಿ ಕೆಳವರ್ಗದ್ದಾಗಿತ್ತು. ‘ಸೀನಿಯರ್ ಹೌಸ್ ಆಫೀಸರ್’ ಎಂಬ ಹೆಸರಾದರೂ ನಾವುಗಳೇ ಇಲ್ಲಿ ಜೂನಿಯರ್ ಗಳು! ಅಂಥ ಜೂನಿಯರ್ ಗಳು ಇಬ್ಬರಿದ್ದೆವು. ನಡುವೆ ಸಾಮಾನ್ಯವಾಗಿ ಇರಬೇಕಿದ್ದ ರಿಜಿಸ್ಟ್ರಾರ್ ಹುದ್ದೆ ಇರಲಿಲ್ಲ. ಹಾಗಾಗಿ ನಮ್ಮ ಮೇಲಕ್ಕೆ ಉನ್ನತ ಹುದ್ದೆಯ ಕನ್ಸಲ್ಟಂಟ್ ಗಳು ಮಾತ್ರ ಇದ್ದರು. ಇವರುಗಳೇ ನಮಗೆ ಕೆಲಸ ಕಲಿಸುತ್ತಿದ್ದ ಮತ್ತು ನಮ್ಮಿಂದ ಕೆಲಸ ತೆಗೆಯುತ್ತಿದ್ದ ಗುರುಗಳು.

ಆ ದಿನಗಳಲ್ಲಿ ಎಲ್ಲವೂ ನನಗೆ ಹೊಸತು. ಸೈಕಲ್ಲನ್ನು ತುಳಿದುಕೊಂಡು ಕೆಲಸಕ್ಕೆ ಬರುವ, ಬೆಳಗಿನ ವ್ಯಾಯಾಮಕ್ಕಾಗಿ ಓಡಿಕೊಂಡು ಬರುವ ಸಹೋದ್ಯೋಗಿಗಳನ್ನು ನೋಡುತ್ತಿದ್ದೆ. ಮೊಲೆಗಳು ಹೊರಬೀಳುತ್ತವೇನೋ ಎಂಬಂತ ಬಟ್ಟೆಗಳಲ್ಲಿ ಆಸ್ಪತ್ರೆಗೆ ಬರುವ ನನ್ನ ಸಹೋದ್ಯೋಗಿಗಳನ್ನು ನೋಡಿ ಭಾರೀ ಆಶ್ಚರ್ಯವಾಗುತ್ತಿತ್ತು. ಸಮಾಜದಲ್ಲಿಯೂ ಇದಕ್ಕೆ ಕೊರತೆಯಿರಲಿಲ್ಲ. ಅದಾಗಲೇ ನಾಲ್ಕುವರ್ಷ ಈ ದೇಶದಲ್ಲಿ ಕೆಲಸ ಮಾಡಿದ್ದ ನನ್ನ ಗಂಡನಿಗಾಗಲೀ, ಹೊಸದಾಗಿ ಇಲ್ಲಿಗೆ ಬರುವ ನಮ್ಮ ಭಾರತೀಯ ಗಂಡಸರಿಗಾಗಲೀ ಹೇಗನಿಸಿರಬಹುದು ಎಂದು ಕೂಡ ಅನಿಸಿತು. ಹಾಗಂತ ಗಂಡನನ್ನು ಕೇಳಿಯೂ ನೋಡಿದೆ. ಇನ್ಯಾರನ್ನಾದರೂ ಕೇಳುವಂತಿರಲಿಲ್ಲವಲ್ಲ!
“ಅಯ್ಯೋ ಎಷ್ಟು ಅಂತ ನೋಡ್ತೀಯ, ಎಲ್ಲಿ ನೋಡಿದರೂ ಬರೀ ಮಾಂಸ ಪರ್ವತಗಳು” ಎನ್ನುವ ಉತ್ತರ ಬಂತು!

ನಾನವರ ಕೈಯಲ್ಲಿನ ಮಂಗವಾಗಲೂ ತಯಾರಿದ್ದೆ. ಅಷ್ಟೇನು ಬುದ್ದಿವಂತಳಲ್ಲದಿದ್ದರೂ ನನ್ನ ಪ್ರಾಮಾಣಿಕ ಪ್ರಯತ್ನದಿಂದ ವರ್ಷದಿಂದ ವರ್ಷಕ್ಕೆ ನನ್ನ ಕೆಲಸ ಮುಂದುವರೆಯಿತು. ಆದರೂ ನನಗೊಬ್ಬ ಬಿಳಿಯ ವ್ಯಕ್ತಿಯ ಜೊತೆ ಸ್ಪರ್ಧೆಯಿದ್ದಿದ್ದರೆ ನನ್ನ ಪ್ರಾಮಾಣಿಕತೆಗಿಂತ ಹೆಚ್ಚಾಗಿ ಆ ವಿಚಾರವೇ ಜಾಸ್ತಿ ತೂಗುತ್ತದೆ ಎನ್ನುವ ಸತ್ಯದಿಂದ ನಾನೆಂದೂ ದೂರ ಸರಿಯಲಿಲ್ಲ.

ಇಲ್ಲಿನ ಮಹಿಳೆಯರ ಸಾಧಾರಣ ಎತ್ತರ ಐದೂವರೆ ಅಡಿ. ತುಂಬಿದ ಮೈಯವರು. ಹುಡುಗರು ಹದಿನಾಲ್ಕು- ಹದಿನೈದು ವರ್ಷಕ್ಕೆ ಆರಡಿಗಳ ಮೇಲಿರುವುದು ಸರ್ವೇ ಸಾಮಾನ್ಯ. ಹಾಗೆಯೇ ಉತ್ತಮ ದೇಹರ್ದಾಡ್ಯದವರು. ಆರಡಿ ಎತ್ತರದ ನನ್ನ ಗಂಡ ಇಪ್ಪತ್ತು ಕೇಜಿ ಸೂಟುಕೇಸನ್ನು ಎತ್ತುಲು ಕಷ್ಟ ಪಟ್ಟರೆ ಇಲ್ಲಿಯ ಗಂಡಸರು ಅಂತಹ ಎರಡೆರಡು ಸೂಟ್ ಕೇಸುಗಳನ್ನು ನಿರಾಯಾಸವಾಗಿ ಎತ್ತಿಕೊಂಡು ನಡೆದು ಹೋಗುತ್ತಾರೆ. ಜಗತ್ತಿನ ಹಲವು ಜನಾಂಗಗಳನ್ನು ನೋಡಿದಾಗ ಈ ಭಾಗದ ಬಿಳಿಯ ತೊಗಲಿನ ಹೆಂಗಸರ ಮೈಮಾಟ ಅತ್ಯಂತ ಪ್ರಮಾಣಬದ್ಧವಾದದ್ದು ಎಂದು ನನಗೆ ಅನ್ನಿಸುತ್ತದೆ. ಅದಕ್ಕೇ ಇವರು ಸುಂದರ ಜನಾಂಗದವರು. ಸಣ್ಣ ಸೊಂಟ, ಅಗಲ ನಿತಂಬದ ಇವರ ಮೈ ಮಾಟವನ್ನು ‘ಪೇರ್’ ಹಣ್ಣಿನ ಮಾಟಕ್ಕೆಹೋಲಿಸುವ ವಾಡಿಕೆಯಿದೆ. ಅಂತೆಯೇ ದಪ್ಪ ಹೊಟ್ಟೆ ಸಣ್ಣ ಕೈ ಕಾಲುಗಳ ಏಷಿಯನ್ ಜನರನ್ನು ಸೇಬು ಹಣ್ಣಿಗೆ ಹೋಲಿಸಲಾಗಿದೆ.

ಮುಂದೆ ಸೌಂದರ್ಯ ಶಾಸ್ತ್ರದ ಬಗ್ಗೆ ಓದುತ್ತ ಹೋದಂತೆ ಮನುಷ್ಯನ ಮೆದುಳಿಗೆ ಪ್ರಮಾಣ ಬದ್ಧತೆಯನ್ನು ಸೌಂದರ್ಯ ಎಂದು ಗುರುತಿಸುವ ಗುಣವಿದೆಯೆಂದು ಕೂಡ ಕಲಿತೆ. ಆ ಕಾರಣದಿಂದಲೇ ಇವರ ಉಡುಗೆ ತೊಡುಗೆಗಳು ಅಸಹ್ಯ ಎಂದೆನಿಸುವುದಿಲ್ಲ. ‘ಚಹರೆಗಳು ಚೆನ್ನಾಗಿಲ್ಲ’ ಎನ್ನುವವರು ಕೂಡ ನಮಗಿಂತ ಅತ್ಯಂತ ಸುಂದರವಾಗಿಯೇ ಕಾಣುತ್ತಾರೆ. ಇಲ್ಲಿನ ಬಿಳಿಯ ಚರ್ಮದವರಲ್ಲಿ ಕೂಡ ನಾನಾ ಬಗೆಯ ಬಿಳಿಯ ತ್ವಚೆಗಳಿವೆ. ಈ ‘ಬಿಳಿ’ ಬಣ್ಣ ವರ್ಷವಿಡೀ ಬಿಸಿಲಿರುವ ಏಶಿಯಾ, ಆಫ್ರಿಕಾ ದೇಶದವರಿಗೆ ಮಾತ್ರ ಅಪ್ಯಾಯಮಾನವಾದ ವಿಚಾರವೇನೋ ಎಂದುಕೊಂಡಿದ್ದೆ. ಆದರೆ ಬಿಳಿಯರ ದೇಶದಲ್ಲಿಯೂ ಕೆಲವು ಬಗೆಯ ಬಿಳಿಯ ಬಣ್ಣದ ಚರ್ಮಕ್ಕೆ ಹೆಚ್ಚಿನ ಬೆಲೆಯಿದೆಯೆಂದು ತಿಳಿದು ಅಚ್ಚರಿಯಾಯಿತು. “ಈ ಪ್ರಪಂಚದಲ್ಲಿರುವ ಅತಿ ಬೆಳ್ಳಗಿನ ಸುಂದರಿ ಯಾರು?” ಎನ್ನುವ ಪ್ರಶ್ನೆಯನ್ನು ಪಾಶ್ಚಾತ್ಯ ಜಾನಪದ ಕಥೆ ‘ಸ್ನೋ ವೈಟ್’ ನಲ್ಲಿ ಓದಿಲ್ಲವೇ ಎಂಬ ನೆನಪೂ ಆಯಿತು.

ಬೆಳ್ಳಗಾಗಲು ನಮ್ಮ ಜನರು ನಾನಾ ರೀತಿಯ ಕ್ರೀಂ ಗಳನ್ನು, ಪೌಡರನ್ನು ಪೂಸಿಕೊಳ್ಳುತ್ತಾರೆ. ಬೆಳ್ಳನೆಯ ಚರ್ಮವಿರುವ ಇಲ್ಲಿಯ ಮಹಿಳೆಯರೂ ಕೂಡ ತಮ್ಮ ಚರ್ಮದ ಬಣ್ಣವನ್ನು ಮತ್ತದರ ಕಾಂತಿಯನ್ನು ಹೆಚ್ಚಿಸಲು ಒಂದಿಂಚು ಮೇಕಪ್ಪನ್ನು ಬಳಿದುಕೊಳ್ಳುತ್ತಾರೆ. ಚರ್ಮದ ಕುಂದುಗಳನ್ನು ಮುಚ್ಚಲು, ಸಮನಾದ ಮುಖಚರ್ಮವನ್ನು ಹೊಂದಲು, ನಿರಿಗೆಗಳನ್ನು ಮುಚ್ಚಲು ನಾನಾ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳುತ್ತಾರೆ. ಬೊಟಾಕ್ಸ್, ಡರ್ಮಲ್ ಫಿಲ್ಲರ್ ಗಳಿಗಾಗಿ ಬರೀ ಹೆಂಗಸರಿಗೇ ಅಲ್ಲದೆ ಅಷ್ಟೇ ಪ್ರಮಾಣದಲ್ಲಿ ಗಂಡಸರೂ ಎಡತಾಕುತ್ತಾರೆ, ಸಾವಿರಾರು ಮಂದಿ ಶಸ್ತ್ರಚಿಕಿತ್ಸೆಗಳನ್ನು ಕೂಡ ಮಾಡಿಸಿಕೊಳ್ಳುತ್ತಾರೆ. ‘ಬೋಟಾಕ್ಸ್ ಬ್ರಿಟನ್’ ಎಂಬ ಅಡ್ಡ ಹೆಸರು ಇರುವ ನಾಡಿದು ಎಂಬುದನ್ನು ಅರಿತುಕೊಂಡೆ. ಚೆಂದವಾದ ಹುಟ್ಟಿನೊಂದಿಗೆ ಚೆನ್ನಾಗಿ ಕಾಣಬೇಕೆನ್ನುವ ಹಂಬಲವೂ ಸೇರಿ ಇಲ್ಲಿನ ಜನರು ವಯಸ್ಸಾದರೂ ಸುಂದರವಾಗಿಯೇ ಇರುತ್ತಾರೆ. ಎಲ್ಲ ವಯಸ್ಸಿನಲ್ಲಿಯೂ ಒಬ್ಬರನ್ನು ಬಿಟ್ಟು ಇನ್ನೊಬ್ಬರನ್ನು ಆಕರ್ಷಿಸುವ ಅಗತ್ಯದಿಂದ ಸಮಾಜದಲ್ಲಿ ಈ ವರ್ತನೆಯಿದೆಯೇ ಎಂದು ನನ್ನನ್ನೇ ನಾನು ಕೇಳಿಕೊಂಡಿದ್ದೇನೆ.

ಇಲ್ಲಿನ ಜನರು ಸ್ವಚ್ಚಂದವಾದ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡತೆ ಕಂಡರೂ ಪಾಶ್ಚಾತ್ಯ ಸಮಾಜಕ್ಕೆ ಅದರದೇ ಆದ ನೀತಿ ನಿಯಮಗಳಿವೆ. ಸಮ್ಮತಿಯಿಲ್ಲದೆ ಗಂಡನೂ ಹೆಂಡತಿಯನ್ನು ಮುಟ್ಟುವಂತಿಲ್ಲ. ಭಾರತದಲ್ಲಿ ಈ ಬಗ್ಗೆ ವಿಚಿತ್ರ ನಂಬಿಕೆಗಳಿವೆ. ಹಲವರು ಪಾಶ್ಚಾತ್ಯ ಹೆಂಗಸು ಎಂದರೆ ಯಾರ ಜೊತೆ ಬೇಕಾದರೂ ಮಲಗಿಬಿಡುತ್ತಾರೆ ಎಂಬ ಹುಂಬ ನಂಬಿಕೆಗಳನ್ನು ಹೊಂದಿ ಅವರನ್ನು ಕೀಳಾಗಿ ನೋಡುತ್ತಾರೆ. ಇದು ಸಂಪೂರ್ಣ ತಪ್ಪು ಗ್ರಹಿಕೆ. ಸ್ವತಃ ಅವರ ಸಮ್ಮತಿಯಿಲ್ಲದೆ ಯಾವ ರೀತಿಯಲ್ಲೂ ಇವರನ್ನು ಬೇರೆಯವರು ಮುಟ್ಟುವುದನ್ನು ಕೂಡ ಇವರು ಸಹಿಸುವುದಿಲ್ಲ. ಕಾನೂನು ಕೂಡ ಅದನ್ನು ಗೌರವಿಸುತ್ತದೆ.

ನಮಗೆ ತಿಳಿದ ಭಾರತೀಯ ವೈದ್ಯನೋರ್ವ ಯಾರೋ ನರ್ಸ್ ಒಬ್ಬಳ ಅಂಡನ್ನು ಅದುಮಿದ ಎಂದು ಅವಳು ಆರೋಪ ಹೊರಿಸಿದ ದಿನವೇ ಆತನನ್ನು ಸಸ್ಪೆಂಡ್ ಮಾಡಲಾಯ್ತು. ನಂತರ ವಿಚಾರಣೆ ಶುರುವಾಯ್ತು. ಮುಂದೆ ಇದೇ ವ್ಯಕ್ತಿ ತನ್ನ ವೈದ್ಯೆ ಹೆಂಡತಿ, ನಾಲ್ಕು ವರ್ಷದ ಮಗ ಇಬ್ಬರಿಗೂ ಮೋಸ ಮಾಡಿ ತನಗಿಂತ ಹಿರಿಯ ಇನ್ನೊಬ್ಬ ದಾದಿಯೊಬ್ಬಳನ್ನು ಕಟ್ಟಿಕೊಂಡು ತಿರುಗಲು ಶುರುಮಾಡಿದ್ದ. ಪ್ರತಿ ದಿನದ ಜಗಳ, ಗಲಾಟೆ ಎಲ್ಲ ನಡೆದ ಮೇಲೆ ಈತನನ್ನು ತೊರೆದು ಮಗನನ್ನು ಕರೆದುಕೊಂಡು ಈಕೆ ಭಾರತಕ್ಕೆ ತೆರಳುವ ಮುನ್ನ ನಮಗೆ ಮನೆಯ ಬೀಗವನ್ನು ಕೊಡಲು ಬಂದಳು. ಎರಡು ವರ್ಷಗಳಲ್ಲಿ ಗಂಡನ ಬಗ್ಗೆ ನಮ್ಮೊಡನೆ ಚಕಾರ ಎತ್ತದೆ ದಿವ್ಯ ಮೌನ ವಹಿಸಿದ್ದ ಅವಳು ಅವತ್ತು ಕೂಡ ಇನ್ನೊಂದು ಪದವನ್ನೂ ಆಡದೆ ತನ್ನ ಸಂಯಮದ ಪರಮಾವಧಿಯನ್ನು ಮೆರೆದಳು. ಕೆ.ಟಿ. ಗಟ್ಟಿಯವರು ಕೆಂಡಸಂಪಿಗೆಯಲ್ಲಿ ಈ ಹಿಂದೆ ಬರೆದಂತೆ ‘ಅಶ್ಲೀಲತೆ ಎನ್ನುವುದು ನೋಡುವ ಕಣ್ಣುಗಳಲ್ಲಿದೆ’. ಪಾಶ್ಚಾತ್ಯರ ಉಡುಪಿನಲ್ಲಾಗಲೀ, ಅವರ ಸಾಮಾಜಿಕ ನಂಬಿಕೆಗಳಲ್ಲಾಗಲೀ, ಸಂಸ್ಕೃತಿಯಲ್ಲಾಗಲೀ ಇಲ್ಲವೇ ಇಲ್ಲ. ಅದು ವ್ಯಕ್ತಿತ್ವಗಳಿಗೆ ಸಂಬಂಧಿಸಿದ ವಿಚಾರ ಮಾತ್ರವೇ ಹೌದೆಂದು ಬಹುಬಾರಿ ಅನ್ನಿಸಿದೆ.

2006 ರಲ್ಲಿ ನಮ್ಮಿಬ್ಬರಿಗೂ ಕೆಲವೊಮ್ಮೆ ಆಸ್ಪತ್ರೆಯ ವಾರಾಂತ್ಯದ ಕರ್ತವ್ಯಗಳು ಬೀಳತೊಡಗಿದವು. ಆದರೆ ಮಗನನ್ನು ಎಲ್ಲಿ ಬಿಡುವುದು? ಎನ್ನುವ ಪ್ರಶ್ನೆ ಶುರುವಾಯ್ತು. ನರ್ಸರಿಗೆ ಮೊದಲು ಮತ್ತು ನಂತರ ಕೆಲ ಗಂಟೆಗಳ ಕಾಲ ನೋಡಿಕೊಳ್ಳುವ ಜನರೇನೋ ಇದ್ದರು. ಆದರೆ ಈ ವಾರಾಂತ್ಯದ ಕೆಲಸ ಎಂದರೆ, ಶನಿವಾರದ ಬೆಳಿಗ್ಗೆ ಎಂಟಕ್ಕೆ ಶುರುವಾದರೆ ಸೋಮವಾರ ಮಧ್ಯಾನ್ಹಕ್ಕೆ ಮನೆಗೆ ಬರುತ್ತಿದ್ದೆವು. ಹಾಗಾಗಿ ಹಗಲು ರಾತ್ರಿ ಯಾರಾದರೂ ಮನೆಯಲ್ಲೇ ಇದ್ದು ನೋಡಿಕೊಳ್ಳುವ ಜನ ಬೇಕಾಗಿತ್ತು. ಭಾರತದಿಂದ ಬರುವ ಜನರಿಗೆ ವೀಸಾ ಸಿಗುವುದು ಸುಲಭವಾಗಿರಲಿಲ್ಲ. ಹಾಗಾಗಿ ಕೆಲವು ಮಧ್ಯವರ್ತಿ ಸಂಸ್ಥೆಗಳ ಮೂಲಕ ಯೂರೋಪಿನಿಂದ ‘ನ್ಯಾನಿ’ ಕೆಲಸಕ್ಕೆ ಜನರನ್ನು ಕರೆಸತೊಡಗಿದೆವು. ಹಾಗೆ ಬಂದ ಮೊದಲಿಬ್ಬರು ಹಂಗೇರಿ ದೇಶದವರು. ನಂತರ ಪೋಲ್ಯಾಂಡ್, ಚೆಕ್ ರಿಪಬ್ಲಿಕ್, ಫ್ರಾನ್ಸ್, ಲ್ಯಾಟ್ವಿಯ ದೇಶದ ಸುಂದರಿಯರು ಬಂದು ಹೋದರು. ಸುಮಾರು ಹತ್ತು ವರ್ಷಗಳ ಕಾಲ ಒಬ್ಬರಲ್ಲ ಒಬ್ಬರು ನಮ್ಮೊಡನೆ ಇದ್ದುಹೋದರು.

ಅಷ್ಟು ಅವಧಿಯಲ್ಲಿ ನಮಗೆ ಇವರೆಲ್ಲರ ದೇಶಗಳ ಅಭ್ಯಾಸಗಳು, ಸಂಸ್ಕೃತಿಯ ಪರಿಚಯವೂ ಆಯ್ತು. ಇಪ್ಪತ್ತು ವರ್ಷಕ್ಕೆಲ್ಲ ಆರಡಿ ಇದ್ದ ಇಬ್ಬರು ಹುಡುಗಿಯರು, ಸಲಿಂಗಕಾಮಿಯಾದ ಒಬ್ಬ ಹುಡುಗ, ಐವತ್ತು ವರ್ಷದ ಮಹಿಳೆ ಇವರೆಲ್ಲರಿಗೂ ನಮ್ಮ ಮನೆ ಸಂಸಾರ, ಸಸ್ಯಾಹಾರ ಭೋಜನ, ಹಬ್ಬಗಳು ಎಲ್ಲದರ ಪರಿಚಯ ಮಾಡುತ್ತಲೇ ಇದ್ದೆವು. ಕೆಲವರು ಆಪ್ತ ಸ್ನೇಹಿತೆಯರಾದರೆ ಮಿಕ್ಕ ಕೆಲವರು ಸೋಮಾರಿಗಳೂ, ನಂಬಿಕಸ್ತರೂ ಆಗಿರಲಿಲ್ಲ. ಅಂಥವರಿಂದ ಸಣ್ಣ ಪುಟ್ಟ ಕಳ್ಳತನಗಳೂ ಆದವು. 35 ವರ್ಷದ ಒಬ್ಬಳು 51 ವರ್ಷದ ಇಂಗ್ಲಿಷಿನವನೊಡನೆ ಸ್ನೇಹ ಬೆಳಸಿ ಇದೇ ದೇಶದಲ್ಲಿ ಇರತೊಡಗಿದಳು. ಇವರೆಲ್ಲರಿಗೂ ಅಡಿಗೆ ಮಾಡಿ ಹಾಕುವ ಸರದಿ ನನ್ನದಾಯ್ತು. ಯುಕೆಯ ಜೀವನ ಶೈಲಿಯನ್ನು ಸವಿಯುವ ಅವಕಾಶವನ್ನು ಹುಡುಕಿ ಬಂದ ಹಲವರಿಗೆ ಬರೀ ಕೆಲಸ, ಮಗು ಅಂತ ಪರದಾಡುವ ನಮ್ಮ ಬದುಕು ನೀರಸವಾಗಿ ಕಂಡಿದ್ದರೆ ಅದು ನೂರಕ್ಕೆ ನೂರು ಸತ್ಯವೂ ಆಗಿತ್ತು.

ಹಲವರು ಪಾಶ್ಚಾತ್ಯ ಹೆಂಗಸು ಎಂದರೆ ಯಾರ ಜೊತೆ ಬೇಕಾದರೂ ಮಲಗಿಬಿಡುತ್ತಾರೆ ಎಂಬ ಹುಂಬ ನಂಬಿಕೆಗಳನ್ನು ಹೊಂದಿ ಅವರನ್ನು ಕೀಳಾಗಿ ನೋಡುತ್ತಾರೆ. ಇದು ಸಂಪೂರ್ಣ ತಪ್ಪು ಗ್ರಹಿಕೆ. ಸ್ವತಃ ಅವರ ಸಮ್ಮತಿಯಿಲ್ಲದೆ ಯಾವ ರೀತಿಯಲ್ಲೂ ಇವರನ್ನು ಬೇರೆಯವರು ಮುಟ್ಟುವುದನ್ನು ಕೂಡ ಇವರು ಸಹಿಸುವುದಿಲ್ಲ. ಕಾನೂನು ಕೂಡ ಅದನ್ನು ಗೌರವಿಸುತ್ತದೆ.

ಕಡಿಮೆ ದುಡಿದರೂ ಒಪ್ಪವಾಗಿ ಕಾಣುವ, ಗಮ್ಮೆಂದು ಸುವಾಸನೆ ಹಾಕಿಕೊಳ್ಳುವ, ಕುಣಿದು ಕುಪ್ಪಳಿಸಲು ಇಚ್ಚಿಸುವ ಇವರು ಬದುಕನ್ನು ಪೂರ್ಣ ಪ್ರಮಾಣದಲ್ಲಿ ಕಾಣಲು ಬಯಸುತ್ತಾರೆ. ಉನ್ಮತ್ತತೆ, ನಗು, ಸಂತೋಷ ಬೇಡುವ ಯೂರೋಪಿನ ಇವರ ಬದುಕುಗಳು ಬ್ರಿಟಿಷರ ಬದುಕಿಗೆ ಬಹಳ ಹತ್ತಿರ. ಆದರೂ ನಮ್ಮಲ್ಲಿ ಪ್ರತಿ ರಾಜ್ಯದವರ ಪದ್ಧತಿ, ಸಂಸ್ಕೃತಿಯೂ ಭಿನ್ನವಿದ್ದಂತೆ ಯೂರೋಪಿನ ಜನರ ಬದುಕಿನ ಶೈಲಿಯೂ ಕೂಡ ಬೇರೆ ಬೇರೆ. ಅದರಲ್ಲೂ ಪೂರ್ವ ಯೂರೋಪಿನ ಜನರು ಬಹಳ ಬಡವರು ಎಂದು ಹೇಳಬಹುದು. ಭಾಷೆಗಳು ಕೂಡ ಬಹಳ ಭಿನ್ನ. ಮಕ್ಕಳನ್ನು ನೋಡಿಕೊಳ್ಳಲು ಬರುವ ಉದ್ದೇಶ ಊಟ, ವಸತಿಯ ಜೊತೆ ಪಗಾರ ಗಳಿಸುತ್ತ, ಮಕ್ಕಳು ಶಾಲೆ ಅಥವಾ ನರ್ಸರಿಗೆ ಹೋದಾಗ ಇವರು ಇಲ್ಲಿನ ಕಾಲೇಜುಗಳಲ್ಲಿ ಇಂಗ್ಲೀಷು ಕಲಿಯಲು ಹೋಗುವುದೇ ಆಗಿರುತ್ತದೆ. ಇವರಲ್ಲಿ ಕೆಲವರಿಗೆ ಹಲವು ಆಂಗ್ಲ ಶಬ್ದಗಳು ಅರ್ಥವಾದರೂ ಇನ್ನು ಕೆಲವರಿಗೆ ಕೈ ಬಾಯಿ ಸನ್ನೆಯಲ್ಲೇ ಮಾತಾಡಿಸಬೇಕಿತ್ತು. ಇಲ್ಲವೇ ಪೇಪರಿನ ಮೇಲೆ ಬರೆದರೆ ಅವರು ಅದನ್ನು ತಮ್ಮ ಫೋನಿನ ಗೂಗಲ್ ಟ್ರಾನ್ಸ್ಲೇಟರಿನ ಮೂಲಕ ಓದಿಕೊಂಡು ನಮಗೆ ಉತ್ತರ ಬರೆದು ತಿಳಿಸುತ್ತಿದ್ದರು. ಆದರೆ ಕನ್ನಡವೂ ಬರದ, ಇಂಗ್ಲಿಷೂ ಬರದ ನನ್ನ ಮಕ್ಕಳು ಎಲ್ಲ ದೇಶದವರೊಟ್ಟಿಗೂ ಹೇಗೋ ಹೊಂದಿಕೊಂಡು ಹೋಗುತ್ತಿದ್ದರು! ಯೂರೋಪಿನ ಜನರ ಹಲವು ಭಾಷೆಗಳಿಗೆ ಸ್ಪಂದಿಸುವಷ್ಟು ತಯಾರಾಗಿದ್ದರು. ನಾವು ಹೋಗಿದ್ದು ಒಂದೇ ದೇಶಕ್ಕಾದರು ನಮ್ಮ ಮನೆಗೆ ಹಲವು ಯೂರೋಪಿನ ದೇಶಗಳು ವರ್ಷಾನುಗಟ್ಟಲೆ ಬಂದು ಹೋಗಿದ್ದವು.

(ಚಿತ್ರಗಳು: ಡಾ. ಪ್ರೇಮಲತ ಬಿ.)

ಸ್ಕಾಟ್ ಲ್ಯಾಂಡಿನಲ್ಲಿ 2010 ರಲ್ಲಿ ದಾಖಲೆ ಪ್ರಮಾಣದಲ್ಲಿ ಸ್ನೋ ಸುರಿದಿತ್ತು. ಇಂತಹ ದಿನಗಳ ಮುನ್ಸೂಚನೆ ಸಿಕ್ಕ ಕೂಡಲೆ ಸರ್ಕಾರ ನೆಲಕ್ಕೆ ಮರಳು (ಗ್ರಿಟ್) ಹಾಕಿ ಮುಖ್ಯರಸ್ತೆಗಳಲ್ಲಿ ವಾಹನಗಳು ಸಂಚರಿಸಲು ಅನುವು ಮಾಡಿಕೊಡುತ್ತದೆ. ಮನೆಯಿಂದ 25 ಕಿ.ಮೀ. ದೂರದಲ್ಲಿದ್ದ ಕೆಲಸಕ್ಕೆ ಪ್ರತಿದಿನದಂತೆ ಕಾರಿನಲ್ಲಿ ಹೋಗಿದ್ದೆ. ಬೆಳಿಗ್ಗೆಯಿಂದಲೇ ಮತ್ತೆ ಸ್ನೋ ಬೀಳಲು ಶುರುವಾಯ್ತು. ವಾಪಸ್ಸು ಮನೆಗೆ ಹೋಗುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ಮಗನ ಶಾಲೆಯಿಂದ ಮಕ್ಕಳನ್ನು ಬೇಗ ಮನೆಗೆ ಕರೆದೊಯ್ಯಬೇಕೆಂದೂ, ಶಾಲೆಗೆ ರಜೆ ಘೋಷಿಸಲಾಗಿದೆಯೆಂದೂ ಕರೆಬಂತು. ವಿಧಿಯಿಲ್ಲದೆ ಬೀಳುತ್ತಿರುವ ಸ್ನೋ, ಕತ್ತಲೆ (ಚಳಿಗಾಲದಲ್ಲಿ 4 ಗಂಟೆಗೆಲ್ಲ ದಟ್ಟ ಕತ್ತಲೆ ಶುರುವಾಗಿಬಿಡುತ್ತದೆ) ಮತ್ತು ಕ್ರಮಿಸಲು ದುಸ್ಸಾದ್ಯ ಎನ್ನುವಂತಿದ್ದ ರಸ್ತೆಗಿಳಿದಿದ್ದೆ! ಮನೆಸೇರಲು ಇನ್ನೂ 7 ಕಿ. ಮೀ. ಇದೆ ಎನ್ನುವಾಗ ಮುಖ್ಯ ರಸ್ತೆ ಬಿಟ್ಟು, ಸಣ್ಣ ರಸ್ತೆಗೆ ಬರಬೇಕಿತ್ತು. ಅರ್ಧ ರಸ್ತೆ ಕ್ರಮಿಸಿದ್ದೆ ಅಷ್ಟರಲ್ಲಿ ಹಳೆಯ ಮಂಜುಗಡ್ಡೆ ಮತ್ತು ಅದರ ಮೇಲೆ ಬಿದ್ದಿದ್ದ ಒಂದಡಿ ಸ್ನೋ ಕೆಳಗೆ ಕಾರಿನ ಚಕ್ರಗಳು ಸಿಕ್ಕಿಕೊಂಡವು. ಸಣ್ಣ ರಸ್ತೆಗಳಾಗಿದ್ದ ಕಾರಣ ಈ ರಸ್ತೆಗಳಿಗೆ ಸರ್ಕಾರ ಗಮನ ಕೊಡಲು ಸಾಧ್ಯವಾಗಿರಲಿಲ್ಲ. ಏನು ಮಾಡಿದರೂ ಗೊರ್ ಎಂದು ಕಾರು ಹರತಾಳ ಹೂಡಿತ್ತು. ರಸ್ತೆಯಲ್ಲಿ ಸಂಚಾರವೇ ಇರಲಿಲ್ಲ. ಸುಮಾರು ಅರ್ಧ ಗಂಟೆಯಾಗುವಷ್ಟರಲ್ಲಿ ನನ್ನ ಕೈಗಳೂ ಮರಗಟ್ಟಿ, ಈಗೇನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಬೀಳುತ್ತಿರುವ ಹಿಮದಲ್ಲಿ ಬ್ರಿಟಿಷ್ ವ್ಯಕ್ತಿಯೊಬ್ಬ ನಡೆದು ಬರುವುದು ಕಾಣಿಸಿತು. ಯಾರೋ, ಏನೋ… ಜೊತೆಗೆ ಹೇಗೆ ಸಹಾಯ ಕೇಳುವುದು ಎನ್ನುವ ತರ್ಕದಲ್ಲಿರುವಾಗಲೇ ಆತನೇ ಬಳಿಬಂದು ‘ಕ್ಯಾನ್ ಐ ಹೆಲ್ಪ್ ಯು?’ ಅಂತ ಕೇಳಿದ. ಬೀಳುತ್ತಿರುವ ಸ್ನೋನಲ್ಲಿ ಅವನೇನು ಸುರಕ್ಷಿತವಾಗಿರಲಿಲ್ಲ. ಆದರೆ ಸತತ 20 ನಿಮಿಷಗಳ ಪರಿಶ್ರಮ ಪಟ್ಟು ಕಾರನ್ನು ಹಿಂದಕ್ಕು ಮುಂದಕ್ಕು ಆಡಿಸಿ, ಕೈಯಿಂದ ತಳ್ಳಿ ಅತ್ಯಂತ ಪರಿಶ್ರಮ ಪಟ್ಟು ಆ ಜಾಗದಿಂದ ಮುಂದೆಹೋಗಲು ನೆರವು ನೀಡಿದ. ಬರಿಯ ಥ್ಯಾಂಕ್ಯೂ ವನ್ನು ಮೀರಿಸಿದ ಭಾವಾವೇಶದಿಂದ ಅವನಿಗೆ ವಂದನೆಗಳನ್ನು ಸಲ್ಲಿಸಿ ಹೇಗೋ ಮನೆ ಸೇರಿದೆ.

ಮರುದಿನದ ವಾರ್ತೆಗಳಲ್ಲಿ ಗ್ರಿಟ್ ಹಾಕಲು ಬರುವ ವಾಹನಗಳೂ ಭಾರಿಯಾಗಿ ಸುರಿದ ಹಿಮದಲ್ಲಿ ಸಿಲುಕಿ ನೂರಾರು ಮಂದಿ ವಾಹನಗಳನ್ನು ರಸ್ತೆಗಳಲ್ಲೇ ತೊರೆದು ಹತ್ತಿರದ ಶಾಲೆಗಳಲ್ಲಿ ಇನ್ನಿತರೆಡೆ ವಾಸ್ತವ್ಯ ಹೂಡಬೇಕಾದ ಕಥೆಗಳು ಬಿತ್ತರಗೊಂಡವು!
ಈ ಪಶ್ಚಿಮ ದೇಶಗಳಲ್ಲಿ ಮಕ್ಕಳ ಲಿಂಗವನ್ನು ಅವರ ಬಟ್ಟೆಯ ಬಣ್ಣದ ಆಧಾರದ ಮೇಲೆ ಗುರುತಿಸುತ್ತಾರೆ. ನೀಲಿ ಗಂಡು ಸಂತಾನಕ್ಕೆ, ಗುಲಾಬಿ ಹೆಣ್ಣಿಗೆ ಎನ್ನುವ ಅಲಿಖಿತ ನಿಯಮವಿದೆ. ನನ್ನ ಮಕ್ಕಳಿಗೆ ವರ್ಣ ಭೇದ ಮಾಡದೆ ನಾನು ಎಲ್ಲ ಬಟ್ಟೆಗಳನ್ನು ಹಾಕುತ್ತಿದ್ದೆ. ಮಗನನ್ನು ‘ಶಿ’ ( she) ಎಂದರೆ, ಮಗಳನ್ನು ‘ಹಿ’ (he ) ಎಂದರೆ ಬದಲಾಗುವುದೇನೆಂಬ ಉಡಾಫೆ ನನ್ನದು. ಮುಂದಿನ ವರ್ಷಗಳಲ್ಲಿ ನಾನು ಬಸುರಿ ಎಂದು ತಿಳಿದ ಮತ್ತೊಬ್ಬ ಹಿರಿಯ ನೆರೆ ಮನೆಯ ಮುದುಕಿಯೊಬ್ಬರು “ಎಂತ ಮಗು ಗೊತ್ತೆ?” ಎಂದು ಕೇಳಿ ತಿಳಿದುಕೊಂಡು ಮಗು ಹುಟ್ಟುವ ವೇಳೆಗೆ ಕೈಯಾರೆ ಒಂದು ಗುಲಾಬಿ ಬಣ್ಣದ ಶಾಲನ್ನು ಹೆಣೆದು ಬಳುವಳಿಯಾಗಿ ಕಳಿಸಿದಾಗ ನಮಗೆ ಸ್ಕಾಟರ ಒಳ್ಳೆಯತನದ ಬಗ್ಗೆ ಹಿಗ್ಗು. ಇವರ ಹಬ್ಬ ಕ್ರಿಸ್ಮಸ್ ಗೆ ನಾವೂ ಉಡುಗೊರೆಯನ್ನು ತಪ್ಪದೆ ಕಳಿಸುತ್ತಿದ್ದೆವು.
ಬಹಳಷ್ಟು ಜನ ಸಾಮಾನ್ಯ ಬ್ರಿಟಿಷರು ಈ ರೀತಿಯ ಒಳ್ಳೆಯತನವನ್ನು ಮೆರೆದ ಘಟನೆಗಳು ಹಲವು. ಇಂತಹ ಹತ್ತು ಹಲವು ಉದಾಹರಣೆಗಳನ್ನು ಪ್ರತಿವರ್ಷ ಕೇಳುತ್ತಲೇ ಇರುತ್ತೇವೆ. ಮಾನವೀಯತೆಯ ನಡವಳಿಕೆಗೆ ಇಂದಿನ ಜನಸಾಮಾನ್ಯರು ಬಹಳ ಪ್ರಧಾನತೆ ಕೊಡುತ್ತಾರೆ. ಪ್ರಪಂಚದಲ್ಲಿ ಎಲ್ಲಿಯೋ ಆಗುವ ಭೂಕಂಪ, ಪ್ರವಾಹ, ಸಿವಿಲ್ ಯುದ್ಧ, ಭೀಕರ ಖಾಯಿಲೆಗಳಿಗೆ ಕೈ ಯೆತ್ತಿ ದೇಣಿಗೆ ನೀಡುತ್ತಾರೆ. ಪ್ರತಿದಿನ ಗುಂಡೇಟಿನ ಅಪಾಯವಿರುವ ಸ್ಥಳಗಳಿಗೂ ಇವರು ಧರ್ಮಾರ್ಥ ಕಾರ್ಯಗಳಿಗೆ ಇಲ್ಲಿರುವ ಸವಲತ್ತುಗಳನ್ನೆಲ್ಲ ಬಿಟ್ಟು ಹೋಗುತ್ತಾರೆ. ಎಬೋಲದಂತ ಖಾಯಿಲೆ ಬಂದ ಕಡೆಗೂ ಸ್ವಾರ್ಥವಿಲ್ಲದೆ ಹೋಗಿ ಸೇವೆ ಮಾಡಿಬರುತ್ತಾರೆ. ಸ್ವಾನುಭವದಿಂದ ಹೇಳಬೇಕೆಂದರೆ ಇವತ್ತಿನ ಯು.ಕೆ.ಯ ಜನಸಾಮಾನ್ಯರು ಅತ್ಯಂತ ಸಭ್ಯರು ಎನ್ನಬಹುದು. ಸ್ವಂತ ದುಡಿಮೆಗೆ ಮಾತ್ರ ಸ್ವಾರ್ಥದಿಂದ ಬರುವ ನಮ್ಮಂತ ಸಾಧಾರಣ ಮಂದಿಗೆ ಇವರ ಮುಖಗಳ ಪರಿಚಯವಾಗುತ್ತ ಹೋದಂತೆಲ್ಲ ಚರಿತ್ರೆಯಲ್ಲಿ ಸಿಗುವ ಇವರ ಕರಾಳ ಮುಖಗಳು ಮಸುಕಾಗುತ್ತ ಹೋಗುವುದು ಸುಳ್ಳಲ್ಲ.

(ಮುಂದುವರೆಯುವುದು)