”ರಾಣಿಯು ವಿದೇಶೀಯರ ಮೇಲೆ ಕಿಡಿ ಸೂಸುವ ಹೆಣ್ಣು. ರಾಜನಾದರೋ ಆ ಕಾಟಕರನ್ನು ಕಂಡರೆ ಸಿಡಿಮಿಡಿಕೊಳ್ಳುವ ಗಂಡು. ಆ ಸಿಂಹಿಣಿಗೂ ಈ ಶೃಗಾಲಕ್ಕೂ ಸರಿಬೀಳುವುದೆಂತು? ಬಂಗರಾಜನನ್ನು ಆ ಚೌಟ ಕುಮಾರಿ ಕೇವಲ ಪ್ರತಿಷ್ಠೆ ಗೌರವಕ್ಕಾಗಿ ವಿವಾಹವಾಗಿದ್ದಳು. ಗಂಡಹೆಂಡಿರಾಗಿ ಅವರೆಂದೂ ಒಟ್ಟಿಗೆ ಬಾಳಲಿಲ್ಲ. ಹೃದಯ ಒಂದಾಗಿ ಬೆಸೆಯಲಿಲ್ಲ. ಸುಖದುಃಖವನ್ನು ಒಂದುಗೂಡಿ ಸವಿಯಲಿಲ್ಲ. ಇದೇ ಅವರ ದಾಂಪತ್ಯದ ಸೌಭಾಗ್ಯ”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು‘ ಸರಣಿಯ ಐದನೆಯ ಕಥೆ ಈ ಭಾನುವಾರದ ನಿಮ್ಮ ಓದಿಗಾಗಿ.

 

ದಿಗಂತದಲ್ಲಿ ಮೊಳಗಿದ ವಿಜಯನಗರದ ಕೀರ್ತಿಯು ಅನೇಕ ವಿದೇಶಿಯರನ್ನು ಇತ್ತ ಆಕರ್ಷಿಸಿತು. 16 ಮತ್ತು 17ನೇ ಶತಮಾನಗಳಲ್ಲಿ ಪೋರ್ಚುಗೀಸರು ಪಶ್ಚಿಮ ಸಮುದ್ರದಲ್ಲಿ ಸಂಚರಿಸುತ್ತ ತುಳುನಾಡ ಕರಾವಳಿಯಲ್ಲಿ ಚಂಚು ಪ್ರವೇಶಮಾಡಿದರು. ಜೀಯೆಂದು ಬೇಡಿ ವ್ಯಾಪಾರ ಕೇಂದ್ರಗಳನ್ನು ಅರಸುತ್ತ ಕಾಲಿಟ್ಟ ಜನರು ಸ್ಥಳಿಕ ರಾಯರ ಸಮರಂಗದಲ್ಲಿ ಕೈಯಿಕ್ಕಿ ಕಾಲುತೊಡಕಾದರು. ಅವರ ಬೇರುಗೊಲೆಗಾಗಿ ಹವಣಿಸಿದವರಲ್ಲಿ ಮಂಗಳೂರಿನ ಒಬ್ಬ ವರ್ತಕ ಶೆಟ್ಟಿಯು ಅಗ್ರಗಣ್ಯನು.

ಕ್ರಿ.ಶ. 1530 ರಷ್ಟು ಹಿಂದೆಯೇ ಆ ವೀರನು ಅವರನ್ನು ಪ್ರತಿಭಟಿಸಿ ಅಮರನಾದನು. ಪ್ರಾಕ್ ಪದ್ಧತಿಯಂತೆ ಅವನು ಮಂಗಳೂರಲ್ಲಿ ಅಕ್ಕಿ ವ್ಯಾಪಾರವನ್ನು ಸಾಗಿಸುತ್ತಿದ್ದನು. ಪೋರ್ಚುಗೀಸರು ಅವನ ಮೇಲೆ ಸುಂಕವನ್ನು ಹೇರಿದರು. ಶೆಟ್ಟಿಯು ಅದನ್ನು ಅತಿಗಳೆದು ವ್ಯಾಪಾರವನನ್ನು ಮುಂದೊತ್ತಿದನು. ಆಗ ಪೋರ್ಚುಗೀಸ್ ಗವರ್ನರನು ಅವನ ಅದಟನ್ನು ಕಂಡು ಕೋಪಾಟೋಪದಿಂದ ಅವನನ್ನು ಕಟ್ಟಿ ತರುವುದಕ್ಕಾಗಿ ಒಂದು ನೌಕಾಪಡೆಯನ್ನಟ್ಟಿದನು. ಆಗ ಮಂಗಳೂರಿನ ಹರದರೆಲ್ಲ ಒಗ್ಗಾಗಿ ಶತ್ರುನೌಕೆಗಳು ಅಳಿವೆಯೊಳಗೆ ಸುಳಿಯದಂತೆ ತಳಿಗೋಂಟೆಯನ್ನೆಬ್ಬಿಸಿ ಕಾಯುತ್ತಿದ್ದರು. ಆದರೂ ಸುಮಾರು 240 ಮಂದಿ ಯೋಧರು ಕೋವಿ ಗುಂಡುಗಳನ್ನು ಹಿಡಿದುಕೊಂಡು ಒಳನುಗ್ಗಿದರು. ವರ್ತಕ ಶ್ರೇಷ್ಠಿಯು ಬರಿಯ ಕತ್ತಿ ಭಲ್ಲೆಯಗಳನ್ನು ಹಿಡಿದ ಧಡಿಗರ ಒಂದು ದಂಡನ್ನು ಕಟ್ಟಿಕೊಂಡು ಅವರ ಮೇಲೆರಗಿದನು. ಎರಡು ಸೈನ್ಯಗಳೂ ಕಡುಪಿನಿಂದ ಕಾದಾಡಿದುವು. ಆದರೆ ಈ ಅಸಮ ಯುದ್ಧದಲ್ಲಿ ವರ್ತಕರ ದಂಡು ಸೋತುಹೋಯಿತು. ದುರ್ದೈವಿಯಾದ ಶೆಟ್ಟಿಯು ನದಿ ದಾಟುವ ಯತ್ನದಲ್ಲಿ ನೇತ್ರಾವತಿಗೆ ಆಹುತಿಯಾದನು.

ಹೆಸರು ದೆಸೆಯೊಂದೂ ಅರಿಯದ ಈ ವರ್ತಕ ಶೆಟ್ಟಿಯು ಅಂದಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದನಾದರೂ ಅವನು ಹಿಡಿದ ಸ್ವಾತಂತ್ರ್ಯ ಧ್ವಜವನ್ನು ಅಭಿಮಾನ ಮೇರುವಾದ ಎರಡನೇ ಅಬ್ಬಕ್ಕದೇವಿಯು ಎತ್ತಿ ಹಿಡಿದಳು. ತಳರುಗಿಡಿಯಾದ ಅವಳು ಪೋರ್ಚುಗೀಸರನ್ನು ತುಳುನಾಡಿನಿಂದ ಸಮೂಲ ಉಚ್ಚಾಟನೆಗೊಳಿಸಲು ಮೂವತ್ತು ವರ್ಷಗಳ ಕಾಲ ಹಗಲು ಹಸಿವಿಲ್ಲದೆ ರಾತ್ರಿ ನಿದ್ದೆಯಿಲ್ಲದೆ ಸತತವಾಗಿ ಹೋರಾಡಿದಳು. ತನ್ನ ಪಕ್ಷವರ್ತಿಗಳಾದ ಕಲ್ಲಿಕೋಟೆಯ ಸಾಮುದ್ರಿ ರಾಜ, ಕಣ್ಣಾನೂರಿನ ಚರ್ಕಲ್ ರಾಜರು ಪೋರ್ಚುಗೀಸರ ದರ್ಪಕ್ಕೆ ಗುರಿಯಾದಾಗ ಅವಳೊಬ್ಬಳು ಎದೆಗೊಟ್ಟು ನಿಂತಳು. ಅಬ್ಬಕ್ಕ ದೇವಿಯು ಎಡೆಹರೆಯಕ್ಕೆ ಕಾಲಿಟ್ಟಿದ್ದಳು. ಸಿಡಿಲುರುಬೆಗೆ ಸೆಡೆಯದ ಸಿಂಹಿಣಿಯಂತಿದ್ದಳು. ಎಣ್ಣೆಗೆಂಪಿನ ಮೊಗದಲ್ಲಿ ಸ್ವಾಭಿಮಾನದ ಕೆಚ್ಚು ಸೂಸುತ್ತಿದ್ದಿತು. ರೇಶಿಮೆ ದಡಿ ಸೇರೆಯುಟ್ಟು, ಮೆರುಗಿನ ಕುಪ್ಪಸ ತೊಟ್ಟು, ವೀರ ತೊಡರನ್ನಿಟ್ಟ ಆ ಚೌಟ ರಾಣಿಯನ್ನು ಕಂಡರೆ ಮನಸ್ಸಿನಲ್ಲಿ ಅಬ್ಬ ಎನ್ನಿಸುತ್ತಿತ್ತು. ಕ್ರಿ.ಶ. 1555 ರಲ್ಲಿ ಮಂಗಳೂರಿನ ಐಸಿರಿಯ ಅಂಗಡಿಗೇರಿ ಮಳಿಗೆಗಳೆಲ್ಲ ಕಿಚ್ಚಿನಲ್ಲಿ ಸುಡುತ್ತಿದ್ದಾಗ ಡೋಮ್ ಅಲ್ಪರಿಸ್ ಡಿಸಲ್ವೇರಾ ಎಂಬ ನೌಕಾಧಿಕಾರಿಯು 21 ಹಡಗುಗಳೊಂದಿಗೆ ಮುನಿದೆತ್ತಿ ಬಂದು ಉಳ್ಳಾಲವನ್ನು ಮುತ್ತಿದನು. ತುಮುಲ ಯುದ್ಧಕ್ಕೆ ಸನ್ನಣವಾಯಿತು. ಆಗ ಸಾಮುದ್ರಿಯು ನೌಕಾಧಿಕಾರಿಗೂ ರಾಣಿಗೂ ಒಂದು ಒಪ್ಪಂದವನ್ನು ಮಾಡಿಸಿ ಯುದ್ಧವನ್ನು ಒಮ್ಮೆಗೆ ನಿಲ್ಲಿಸಿದನು.

ಇದಾದ ಮೂರೇ ವರ್ಷಗಳಲ್ಲಿ ಪೋರ್ಚುಗೀಸರು ತಮ್ಮ ತಹಬಂದಿಗೆ ವಿರೋಧವಾಗಿ ಚರ್ಕಲ್ ಅರಸರ ಒಂದು ಖಾಸಗಿ ಹಡಗನ್ನು ಕಡಲಿನಲ್ಲಿ ಹಿಡಿದರು. ಈ ಕೈ ದುಡುಕನ್ನು ಕಂಡು ಕೆರಳಿ ಕೆಂಡವಾಗಿ ರಾಣಿಯು ಚರ್ಕಲ್ ಅರಸನ ಪಕ್ಷ ವಹಿಸಿ ಪೋರ್ಚುಗೀಸರ ವಿರೋಧವನ್ನು ಕಟ್ಟಿಕೊಂಡು ಸುಂಕ ತೆರುವುದನ್ನು ನಿಲ್ಲಿಸಿದಳು. ಆಗ ಲೂಯಿ ಡಿ ಮೆಲ್ಲೋ ಎಂಬ ನೌಕಾಧಿಪತಿಯು ಉರಿದು ಕೆಂಡವಾಗಿ ದಂಡಿನೊಡನೆ ಧಾವಿಸಿದನು. ಆ ಕಾಟಕರ ದಂಡು ಪಸರಿಸಿ ಹಬ್ಬಿ ಉಳ್ಳಾಲದ ಕಲಿ ಸಮೂಹವನ್ನು ಇದಿರಿಸಿ ಅತ್ಯಂತ ಭಯಂಕರ ಕಾಳಗವೆಸಗಿತು. ಈ ಇರುಕಿನಲ್ಲಿ ಸಿಕ್ಕಿಬಿದ್ದ ಪಡೆವಳನು ಈದ ಹುಲಿಯನ್ನು ಕೆಣಕಿ ಕೆಟ್ಟೆನೆಂದು ಕಂಗಾಲಾಗಿ ಏನು ಮಾಡಬೇಕೆಂದರಿಯದೆ ನಗರಕ್ಕೆ ಕೊಳ್ಳಿಯಿಟ್ಟನು. ತನ್ನ ಗೆಲವಿನ ದಾರಿಯಲ್ಲಿ ಸಿಕ್ಕಿದವರನ್ನೆಲ್ಲ ಕೊಂದಿಕ್ಕಿದನು.

ಕ್ರಿ.ಶ. 1566 ರಲ್ಲಿ ಚರ್ಕಲ್ ಅರಸನೊಡನೆ ಕಾಲು ಕೆದರಿ ಹುಯ್ಲೆಬ್ಬಿಸಿದಾಗ ರಾಣಿಯು ಮುನಿಸಿನಿಂದ ಮಾರಾಂತು ಕದನಕ್ಕೆ ಕರೆ ಕೊಟ್ಟಳು. ಅವಳನ್ನು ಮರ್ದಿಸುವ ಹವಣಿಕೆಯಿಂದ ಪೋರ್ಚುಗಲ್ ಗವರ್ನರನು ಚೋವಾ ಪಿಯೆಕ್ಸೊಟೊ ಎಂಬ ಸಮರ್ಥ ಪಡೆವಳನನ್ನು ಸೇನೆಯೊಂದಿಗೆ ಕಳುಹಿಸಿದನು. ಅವನು ಉರವಣೆಯಿಂದ ಬಂದು ರಾಣಿಯ ದಂಡನ್ನು ಇದಿರಿಸಿದನು. ಎರಡು ಸೇನೆಗಳೂ ಬಿನ್ನಣದಿಂದ ತೊಡರಿಕೊಂಡು ಉಬ್ಬಿನಿಂದ ಸೆಣಸಾಡಿದುವು. ಪುಂಡುಗಾರರನ್ನು ಹಣಿಯುತ್ತ ರಾಣಿಯು ಇಟ್ಟಣಿಸಿ ಬರುವ ರಿಪುದಳವನ್ನು ಪಡಲ್ಪಡಿಸಿ ಪಡೆವಳನನ್ನು ಅಂತ್ಯಗೊಳಿಸಿದಳು. ಹೀಗೆ ಬಲಿತು ಮಲೆತು ಮಾರ್ಮಲೆವ ಆ ಉಚ್ಚಂಡ ಭೈರವಿಯ ಕೋಡು ಮುರಿಯಬೇಕೆಂದು ಪೋರ್ಚುಗೀಸ್ ವೈಸರಾಯ್ ಜೋಮ್ ಅನ್ತಾವೊಡೆ ನರೋನ ಎಂಬವನು ಗೋವೆಯಿಂದ ಏಳು ಹಡಗು ಇಪ್ಪತ್ತು ಬಗಲೆ ಇಪ್ಪತ್ತೇಳು ಮಂಜಿಗಳ ಸಹಿತ 3000 ವೀರ ಯೋಧರ ಒಂದು ದೊಡ್ಡ ನೌಕಾಪಡೆಯನ್ನು ತೆಗೆದುಕೊಂಡು ಉಳ್ಳಾಲಕ್ಕೆ ಸ್ವತಃ ಬಂದಿಳಿದನು.

12000 ಮಂದಿ ಪೋರ್ಚುಗೀಸ್ ಹೂಣಿಗರು ಅಸ್ತ್ರಶಸ್ತ್ರ ಸಜ್ಜಿತರಾಗಿ ನಗರವನ್ನು ಕಾಯುತ್ತಿದ್ದರು. ನದಿಯಿಂದ ಸಮುದ್ರಕ್ಕೆ ಹೋಗುವ ದಾರಿಯಲ್ಲಿ ಒಂದು ಗೋಡೆ ನಿಂತಿತ್ತು. ಆರಿಸಿದ ಕೆಲವು ಮಂದಿ ವೀರರು ತುಪಾಕಿಗಳನ್ನು ಹಿಡಿದು ಅಲ್ಲಿ ಕಾಪಿಡುತ್ತಿದ್ದರು. ವೈಸರಾಯ್ ಗೋಡೆಯನ್ನೊಡೆದು ನಗರವನ್ನು ಭೇದಿಸಬೇಕೆಂದಿದ್ದ ಒಂದೆಡೆಯಲ್ಲಿ, ಡಾನ್ ಫ್ರಾನ್ಸಿಸ್ಕೊ ಮಸ್ಕರೆನಾಸ್ ಎಂಬ ಪಡೆವಳನು ಚಿಕ್ಕ ದಂಡಿನೊಡನೆ ಹೊಂಚುತ್ತಿದ್ದನು. ಸೈನಿಕರೆಲ್ಲ ಉಗ್ರಾಟೋಪದಿಂದಿದ್ದರು. ಕತ್ತಲು ಮುಸುಕಿದೊಡನೆ ಬೇಕಷ್ಟು ತಿಂದು ಕುಡಿದು ಮದೋನ್ಮತ್ತರಾಗಿ ಮೋಜಿನಲ್ಲಿದ್ದರು.

ಅಷ್ಟರಲ್ಲಿ ಮೂರರು, ಮರಕಾರರು, ಮುಖಾರಿಗಳಿಂದ ಕೂಡಿದ ಉಳ್ಳಾಲ ರಾಣಿಯ 500 ಮಂದಿ ಕಟ್ಟಾಳುಗಳು ಸೂಟೆಗಳನ್ನು ಬೀಸುತ್ತ ಹಠಾತ್ತನೆ ಮಸ್ಕರೆನಾಸನ ಸೈನ್ಯದ ಮೇಲೆರಗಿದರು. ಅವರ ಹಿಂದೆ ಮತ್ತೂ 1500 ಮಂದಿ ವೀರರು ಭರದಿಂದ ಮೇಲ್ವಾಯ್ದರು. ಸೂಟೆಯ ಅರೆ ಬೆಳಕಿನ ನಸುಕಿನಲ್ಲಿ ಶತ್ರುಗಳು ಕುರುಡರಂತಾಗಿದ್ದರು. ಶತ್ರುಗಳು ಯಾರು ಮಿತ್ರರು ಯಾರೆಂದು ಯಾರಿಗೂ ತಿಳಿಯಲಿಲ್ಲ. ಹಡಗಿನಿಂದ ಇಳಿಯುತ್ತಿದ್ದವರೆಲ್ಲ ನೀರಿಗೆ ಬಿದ್ದರು. ಬೇರೆ ತಾಗುಡಿಗಳಾಗಿ ನಿಲ್ಲಿಸಲ್ಪಟ್ಟವರು ಯಾರಿಗೆ ಸಹಾಯ ಮಾಡಬೇಕೆಂದರಿಯದೆ ಗೊಂಬೆಗಳಂತೆ ನಿಂತಿದ್ದರು. ಎಲ್ಲೆಲ್ಲಿಯೂ ರಾಣಿಯ ಸೈನಿಕರ ಖಡ್ಗಗಳು ಮಿಂಚುತ್ತಿದ್ದುವು. ಸಿಡಿಯುವ ಗುಂಡುಗಳು ಒಂದೇ ಸಮನೆ ಗರ್ಜಿಸುತ್ತಿದ್ದುವು. ಈ ಗಂಡಾಂತರದಲ್ಲಿ ಪೋಚುರ್ಗೀಸ್ ಪಡೆಯು ದಿಕ್ಕೆಟ್ಟೋಡಿತು.

ಇದಾದ ಮೂರೇ ವರ್ಷಗಳಲ್ಲಿ ಪೋರ್ಚುಗೀಸರು ತಮ್ಮ ತಹಬಂದಿಗೆ ವಿರೋಧವಾಗಿ ಚರ್ಕಲ್ ಅರಸರ ಒಂದು ಖಾಸಗಿ ಹಡಗನ್ನು ಕಡಲಿನಲ್ಲಿ ಹಿಡಿದರು. ಈ ಕೈ ದುಡುಕನ್ನು ಕಂಡು ಕೆರಳಿ ಕೆಂಡವಾಗಿ ರಾಣಿಯು ಚರ್ಕಲ್ ಅರಸನ ಪಕ್ಷ ವಹಿಸಿ ಪೋರ್ಚುಗೀಸರ ವಿರೋಧವನ್ನು ಕಟ್ಟಿಕೊಂಡು ಸುಂಕ ತೆರುವುದನ್ನು ನಿಲ್ಲಿಸಿದಳು. ಆಗ ಲೂಯಿ ಡಿ ಮೆಲ್ಲೋ ಎಂಬ ನೌಕಾಧಿಪತಿಯು ಉರಿದು ಕೆಂಡವಾಗಿ ದಂಡಿನೊಡನೆ ಧಾವಿಸಿದನು.

ಇಂಥ ಭೀಕರ ಪರಿಸ್ಥಿತಿಯಲ್ಲಿಯೂ ವೈಸರಾಯ್ ಎದೆಗೆಡಲಿಲ್ಲ. ರಣೋತ್ಸಾಹದಿಂದ ಕಹಳೆಯನ್ನೂದುತ್ತ ತನ್ನ ಬಳಿಯಿದ್ದ ಸೈನಿಕರನ್ನು ಕೂಡಿಕೊಂಡು ಮಸ್ಕರೆನಾಸನ ತಾವಿಗೆ ಸಾಗಿದನು. ಅವನೊಂದಿಗೆ ಕೆಲವೇ ಮಂದಿ ಸೈನಿಕರಿದ್ದರು. ಅವನು ಐದು ತೀವ್ರ ಗಾಯಗೊಂಡಿದ್ದನು. ಉರುಬಿ ತರುಬಿ ಕೈಗೈವ ಶತ್ರುಗಳೊಂದಿಗೆ ಜೀವದಾಸೆ ಬಿಟ್ಟು ಹೊಯ್ದಾಡುತ್ತಿದ್ದನು. ಕ್ರಿ.ಶ. 1568ನೇ ಜನವರಿ 5ರ ಬೆಳಿಗ್ಗೆ ವೈಸರಾಯ ಗೋಡೆಯನ್ನೇರಿ ನಗರವನ್ನು ಎಂತಾದರೂ ಹೊಗಬೇಕೆಂದಿದ್ದನು. ಎಲ್ಲರೂ ಹರುಪಿನಿಂದ ಗೋಡೆಯೆನ್ನೇರಲು ಅಣಿಯಾದರು. ಆಗ ವೈಸರಾಯ ತನ್ನ ಮನಸ್ಸನ್ನು ಕಡಿಕನೆ ಬದಲಾಯಿಸಿ ಯುದ್ಧವನ್ನು ನಾಳೆಗೆ ಮುಂದುವರಿಸೋಣವೆಂದು ಆಜ್ಞಾಪಿಸಿದನು. ಶತ್ರುಗಳ ಮೇಲೆ ಕೆರಳಿ ಕೆಂಡ ಕಾರುತ್ತಿದ್ದ 200 ಮಂದಿ ಪೋರ್ಚುಗೀಸ್ ಸೈನಿಕರು ವೈಸರಾಯ ಆಜ್ಞೆಯನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಗೋಡೆಯನ್ನೇರಿ ಮದೋದ್ರೇಕದಿಂದ ಮುನಿದು ಮುಂಬರಿದು ಇದಿರಾಳುಗಳನ್ನು ನುಗ್ಗು ನುಸಿ ಮಾಡಿ ರಣದಲ್ಲಿ ಮಗ್ಗಿಸಿದರು. ವೈಸರಾಯ ಕ್ರಿಸ್ತನ ಪಟವನ್ನು ಹಿಡಿದುಕೊಂಡು ಕಡಲ ದಡದಲ್ಲಿ ನಿಂತನು. ಆಗ 500 ಮಂದಿ ಹಡಗಿನಿಂದಿಳಿದರು.

ಮರುದಿನ ಎಪಿಫನಿ ಹಬ್ಬ. ಮಸ್ಕರೆನಾಸನು ಸೈನಿಕರನ್ನು ಕೂಡಿಕೊಂಡು ಇಮ್ಮಡಿ ಹುರುಪಿನಿಂದ ಕಡಂಗಿ ಕಾದಿದನು. ತಮ್ಮ ಸೇಡಿನ ಉಬ್ಬಿಗೆ ಉರಿಯಾದ ರಾಣಿಯ ಸೈನಿಕರನ್ನು ಹತ್ತೊತ್ತಿ ಕೋವಿಯ ಬರ್ಚಿಗಳಿಂದ ದಬ್ಬಿದರು. ಬೇರೆ ಬೇರೆ ಬಾಗಿಲುಗಳಿಂದ ನಗರವನ್ನು ಹೊಕ್ಕು ಒಂದೆಡೆ ಕಲೆತರು. ನಗರವನ್ನು ಸೇರಿದ 6000 ಮಂದಿ ರಾಣಿಯ ಸೈನಿಕರು ಒಟ್ಟಾಗಿ ಕತ್ತಿ ಭಲ್ಲೆಯಗಳನ್ನು ಹಿಡಿದು ನೆತ್ತರ ತೃಷೆಯಿಂದ ಶತ್ರುಗಳನ್ನು ಸದೆಬಡಿದರು. ಆದರೆ ಒತ್ತೊತ್ತಿ ಆವರಿಸುವ ಮಾರ್ಬಲವನ್ನು ಇದಿರಿಲಾರದೆ ತಲ್ಲಣಿಸಿ ಹಿಮ್ಮೆಟ್ಟಿ ಚೆದರಿ ಚೆಲ್ಲಾಪಿಲ್ಲಿಯಾದರು. ರಾಣಿಯು ಉಚ್ಚಿಲ ತಲಪಾಡಿ ಅರಮನೆಯನ್ನು ಸೇರಿದಳು.

ರಾಣಿಯ ಸೈನಿಕರಲ್ಲಿ 40 ಮಂದಿ ಮಾತ್ರ ಮಡಿದಿದ್ದರು. ಕೆಲವರು ಗಾಯಗೊಂಡಿದ್ದರು. ಪೋರ್ಚುಗೀಸರಲ್ಲಿ 300 ಮಂದಿ ಮಡಿದಿದ್ದರು. ಆದರೆ ಅವರು ನಗರಕ್ಕೆ ಕಿಚ್ಚಿಟ್ಟು ಫಲ ಮರಗಳನ್ನು ಕಡಿದಿಕ್ಕಿ ತಮ್ಮ ಮುಯ್ಯನ್ನು ತೀರಿಸಿಕೊಂಡರು. ಬಳಿಕ ಅವರು ಮಂಗಳೂರಲ್ಲಿ ಒಂದು ಭವ್ಯವಾದ ಕೋಟೆಯನ್ನು ಕಟ್ಟಿಸಿದರು. ಸಂತ ಸೆಬಸ್ಟಿಯನ್ ದಿನ ಕಟ್ಟಲ್ಪಟ್ಟುದರಿಂದ ಅದಕ್ಕೆ ಸಂತ ಸೆಬಸ್ಟಿಯನ್ ಕೋಟೆಯೆಂದು ಹೆಸರಾಯಿತು. ಅದಕ್ಕೆ ನೇರ ಇದಿರಾಗಿ ಉಳ್ಳಾಲದಲ್ಲಿ ರಾಣಿಯು ಇನ್ನೊಂದು ಕೋಟೆಯನ್ನು ಕಟ್ಟಿಸಿದಳು. ಪೋರ್ಚುಗೀಸರೊಡನೆ ಹಲವು ಸಂಗ್ರಾಮಗಳಲ್ಲಿ ಸೋತರೂ ಪ್ರತಾಪಾನ್ವಯದ ಆ ಧೀರೆಯು ತನ್ನ ಅದಟು ಬಿಡಲಿಲ್ಲ.

ಕ್ರಿ.ಶ. 1570 ರಲ್ಲಿ ಒಮ್ಮೆ ಕಲ್ಲಿಕೋಟೆಯ ಸಾಮುದ್ರಿಯ ನೌಕಾಧೀರ ಕುಟ್ಟಿ ಪೋಕ್ರೆ ಎಂಬವನು ರಾಣಿಯ ಪ್ರೇರಣೆಯಿಂದ ಪೋರ್ಚುಗೀಸರ ಒಂದು ಕೋಟೆಯನ್ನು ಫಕ್ಕನೆ ಹಿಡಿದನು. ಆದರೆ ಶತ್ರುಗಳು ತೋರಿದ ಲಂಚದಾಸೆಯಿಂದ ಪೋಕ್ರೆಯ ಸೈನಿಕರು ಅವರ ವಶರಾದರು. ಇದನ್ನು ಕೇಳಿ ದಶಾಹೀನಳಾದ ರಾಣಿ ಬೊಟ್ಟು ಕಚ್ಚಿಕೊಂಡಳು. ಇಂತ ಎಂಟದೆಯ ರಾಣಿ ಅಬ್ಬಕ್ಕದೇವಿ. ತಿರುಮಲರಾಯ ಚೌಟನಿಗೆ ಅಳಿಯಂದಿರು ಇರಲಿಲ್ಲ. ರಾಯನ ನಂತರ ಆತನ ಪತ್ನಿಯೂ ಪಟ್ಟವೇರಿದಳು. ಅವಳಿಗೂ ಬಾಧ್ಯಸ್ಥರಾರೂ ಇರಲಿಲ್ಲವಾದುದರಿಂದ ಅವಳ ನಂತರ ಈ ಅಬ್ಬಕ್ಕದೇವಿಗೆ ಪಟ್ಟವಾಯಿತು. ಅವಳು ಪಟ್ಟವೇರುವ ಮುಂಚೆಯೇ ಜೈನರಾಜದಲ್ಲಿ ಪ್ರಮುಖನೆನಿಸಿದ್ದ ಲಕ್ಷ್ಮಪ್ಪರಸ ಬಂಗರಾಜನೊಡನೆ ವಿವಾಹವಾಗಿದ್ದಿತು. ಅಬ್ಬಕ್ಕದೇವಿ ಆ ಸಮಯದಲ್ಲಿ ಉಳ್ಳಾಲ ಅರಮನೆಯಲ್ಲಿ ಸುಖವಾಗಿದ್ದಳು. ಲಕ್ಷ್ಮಪ್ಪರಸನು ಬಂಗರ ಕೋಟೆಯಲ್ಲಿದ್ದನು. ವಿಜಯನಗರದ ಅರಸನು ಆ ಹೋಬಳಿಗೆ ತನ್ನ ಒಬ್ಬ ಒಡೆಯನನ್ನು ನೇಮಿಸಿದ್ದರೂ ಮಂಗಳೂರಿನ ಅಧಿಕಾರವೆಲ್ಲ ಬಂಗರಾಯನ ಕೈಯಲ್ಲೇ ಇತ್ತು. ಅವಳ ಅಧೀನ ದೊಡ್ಡ ಸೈನ್ಯವಿತ್ತು. ವಿಪುಳ ಸಂಪತ್ತೂ ಇತ್ತು.

ಬಂಗರಕೋಟೆ ಆಯತಾಕಾರವಾಗಿತ್ತು. ಕಲ್ಲಿನ ಪಂಚಾಂಗದ ಮೇಲೆ 35 ಅಡಿ ಎತ್ತರದ ಗೋಡೆಗಳು ಆವರಿಸಿದ್ದುವು. ನಾಲ್ಕು ಸುತ್ತುಗಳಲ್ಲಿ ಉನ್ನತವಾದ ಏಳು ಬತ್ತೇರಿಗಳಿದ್ದುವು. ಪೂರ್ವ ದಿಕ್ಕಿನಲ್ಲಿ ಒಂದು ಆಗಸೆ ಬಾಗಿಲಿತ್ತು. ಕೋಟೆಯ ಸುತ್ತಲೂ ಆಳವಾದ ಕಂದಕಗಳಿದ್ದುವು. ತೆಂಕು ದಿಕ್ಕಿನ ಒಂದು ಸುರಂಗದಿಂದ ಹೊಳೆಯ ನೀರು ಹರಿದು ಬಂದು ಅವನ್ನು ತುಂಬಿದ್ದುವು. ಅಂದಿನ ಅಳಿವೆಗೆ ಸಮೀಪವಾದ ಈ ಬೋಳೂರು ವ್ಯಾಪಾರಕ್ಕೆ ಹೆದ್ದಾರಿಯಾಗಿತ್ತು. ಕೋಟೆಯ ನಡುವೆ ಅಂದವಾದ ಉಪ್ಪರಿಗೆ ಅರಮನೆಯಲ್ಲಿ ಬಂಗರಾಜನು ಐಸಿರಿ ಅಯಿಬೋಗದಿಂದ ವಾಸವಾಗಿದ್ದನು. ರಾಣಿಯು ವಿದೇಶೀಯರ ಮೇಲೆ ಕಿಡಿ ಸೂಸುವ ಹೆಣ್ಣು. ರಾಜನಾದರೋ ಆ ಕಾಟಕರನ್ನು ಕಂಡರೆ ಸಿಡಿಮಿಡಿಕೊಳ್ಳುವ ಗಂಡು. ಆ ಸಿಂಹಿಣಿಗೂ ಈ ಶೃಗಾಲಕ್ಕೂ ಸರಿಬೀಳುವುದೆಂತು? ಬಂಗರಾಜನನ್ನು ಆ ಚೌಟ ಕುಮಾರಿ ಕೇವಲ ಪ್ರತಿಷ್ಠೆ ಗೌರವಕ್ಕಾಗಿ ವಿವಾಹವಾಗಿದ್ದಳು. ಗಂಡಹೆಂಡಿರಾಗಿ ಅವರೆಂದೂ ಒಟ್ಟಿಗೆ ಬಾಳಲಿಲ್ಲ. ಹೃದಯ ಒಂದಾಗಿ ಬೆಸೆಯಲಿಲ್ಲ. ಸುಖದುಃಖವನ್ನು ಒಂದುಗೂಡಿ ಸವಿಯಲಿಲ್ಲ. ಆಟಿಗೋ ಸೋಣೆಗೋ ಎಂದಾದರೊಮ್ಮೆ ಕಂಡರಾಯಿತು. ಇದೇ ಅವರ ದಾಂಪತ್ಯದ ಸೌಭಾಗ್ಯ. ಗೃಹ ಕಲಾಪದ ಈ ಕಾಲ್ತೊಡಕನ್ನು ಕಿತ್ತೊಗೆಯಬೇಕೆಂದೆಣಿಸಿ, ಅರಸನು ವಿವಾಹ ಕಾಲಕ್ಕೆ ಕೊಟ್ಟಿದ್ದ ತಾಳಿಬಂದಿ ಒಡವೆ ವಸ್ತುಗಳನ್ನೆಲ್ಲ ಹಿಂತಿರುಗಿ ಕೊಟ್ಟುಬಿಟ್ಟಳು. ರಾಣಿಯ ಈ ತಿರಸ್ಕಾರದ ಸಡಕನ್ನು ಕಂಡು ಬಂಗರಾಜನು ಸಂತಪ್ತನಾದನು.

ಒಂದು ದಿನ ರಾಣಿಯು ನೇತ್ರಾವತಿಯಲ್ಲಿ ವಿಹರಿಸುತ್ತಿದ್ದಳು. ದಿಗಂತದಲ್ಲಿ ಸೂರ್ಯಾಸ್ತದ ಹೊಂಬೆಳಕು ಬಾನೆಲ್ಲ ತುಂಬಿ ಕುಂಕುಮದೋಕುಳಿಯಂತೆ ಹೊಳೆಯ ನೀರಿನಲ್ಲಿ ಚೆಲ್ಲಿತ್ತು. ತೆರೆಯ ತುಂತುರುಗಳಿಂದ ತೊಯ್ದ ತಂಗಾಳಿಯು ಸುಳಿಯುತ್ತಿತ್ತು. ರಾಣಿಯು ಕುಳಿತ ಹಂಸಾಕಾರದ ನಾವೆಯೂ ನೀರನ್ನು ಸೀಳಿಕೊಂಡು ಮುಂದುವರಿಯುತ್ತಿತ್ತು. ರಾಣಿಯೊಂದಿಗೆ ನಾಲ್ಕಾರು ಮಂದಿ ಮೈಗಾವಲಿನವರು ಮಾತ್ರವಿದ್ದರು. ಒಬ್ಬನು ರಾಣಿಯ ಮೇಲೊಂದು ಸತ್ತಿಗೆಯನ್ನು ಎತ್ತಿ ಹಿಡಿದಿದ್ದನು.

ಕ್ರಿ.ಶ. 1570 ರಲ್ಲಿ ಒಮ್ಮೆ ಕಲ್ಲಿಕೋಟೆಯ ಸಾಮುದ್ರಿಯ ನೌಕಾಧೀರ ಕುಟ್ಟಿ ಪೋಕ್ರೆ ಎಂಬವನು ರಾಣಿಯ ಪ್ರೇರಣೆಯಿಂದ ಪೋರ್ಚುಗೀಸರ ಒಂದು ಕೋಟೆಯನ್ನು ಫಕ್ಕನೆ ಹಿಡಿದನು. ಆದರೆ ಶತ್ರುಗಳು ತೋರಿದ ಲಂಚದಾಸೆಯಿಂದ ಪೋಕ್ರೆಯ ಸೈನಿಕರು ಅವರ ವಶರಾದರು. ಇದನ್ನು ಕೇಳಿ ದಶಾಹೀನಳಾದ ರಾಣಿ ಬೊಟ್ಟು ಕಚ್ಚಿಕೊಂಡಳು. ಇಂತ ಎಂಟದೆಯ ರಾಣಿ ಅಬ್ಬಕ್ಕದೇವಿ. ತಿರುಮಲರಾಯ ಚೌಟನಿಗೆ ಅಳಿಯಂದಿರು ಇರಲಿಲ್ಲ. ರಾಯನ ನಂತರ ಆತನ ಪತ್ನಿಯೂ ಪಟ್ಟವೇರಿದಳು. ಅವಳಿಗೂ ಬಾಧ್ಯಸ್ಥರಾರೂ ಇರಲಿಲ್ಲವಾದುದರಿಂದ ಅವಳ ನಂತರ ಈ ಅಬ್ಬಕ್ಕದೇವಿಗೆ ಪಟ್ಟವಾಯಿತು.

ಮೇಲೆ ಕಾಯುತ್ತಿದ್ದ ಬಂಗರಾಜನು ರಾಣಿಯನ್ನು ಸೆರೆಹಿಡಿಯಲು ಇದೇ ತಕ್ಕ ಸಮಯವೆಂದು ಹಲವು ದೋಣಿಗಳಲ್ಲಿ ತನ್ನ ಭಟರನ್ನು ಕಳುಹಿಸಿಕೊಟ್ಟನು. ಆ ಓಡಗಳೆಲ್ಲ ಭರದಿಂದ ನುಗ್ಗಿ ನಾವೆಯನ್ನು ಸುತ್ತುಗಟ್ಟಿದುವು. ರಾಣಿಯು ಸೆರೆ ಸಿಕ್ಕಿದಳು. ಭಟರು ಅವಳನ್ನು ಒಯ್ದುಕೊಂಡು ಹೋಗಿ ಅರಸನ ಮುಂದೆ ನಿಲ್ಲಿಸಿದರು. ಅವನ ಕಣ್ಣು ಬೆಳ್ಳಿ ಕೊಡೆಯ ಮೇಲೆ ಬಿತ್ತು. ‘ಬೆಳ್ಳಿ ಸತ್ತಿಗೆಯ ಬಿರುದೇ ಈ ಕುಲ ಕಲಂಕೆಗೆ?’  ಎಂದು ಗುಡುಗುತ್ತ ಸತ್ತಿಗೆಯವನನ್ನು ತಿವಿದು ಸತ್ತಿಗೆಯನ್ನು ಮುರಿದು ನೆಲಕ್ಕೊಗೆದನು.

ಅಂಥ ಪೋರ್ಚುಗೀಸರನ್ನು ಹಣ್ಣು ಹಣ್ಣು ಮಾಡಿದ ಆ ಧೀರೆಯು ಬಂಗರಾಜನ ಈ ಗರ್ಜನೆಗೆ ಬಗ್ಗುವಳೇ? ಗಂಡೆದೆಯ ಆಕೆಯ ಧೈರ್ಯಗೆಡಲಿಲ್ಲ. ಕೆಚ್ಚನು ಸೂಸುವ ಕಣ್ಣುಗಳಿಂದ ಒಮ್ಮೆ ಅರಸನನ್ನು ನೋಡಿದಳು. ಆ ತೀವ್ರದೃಷ್ಟಿಯನ್ನು ಇದರಿಸಲಾರದೆ ಆ ಹೆಣ್ಣಿಗನು ತಲೆತಗ್ಗಿಸಿಕೊಂಡನು. ಗಂಭೀರವಾಗಿ ಹೂನಗೆಯನ್ನು ಸೂಸುತ್ತ ತನ್ನ ಇಂಪಾದ ದನಿಯಿಂದ ಬಿನ್ನಾಣದ ಮಾತುಗಳನ್ನಾಡಿ ಅವನ ಮನಸ್ಸನು ಒಲಿಸಿಕೊಂಡು ಅವನಿಂದ ಹೇಗೋ ಪಾರಾದಳು. ಆದರೆ ಈ ಅಪಮಾನದಿಂದ ಹೊತ್ತಿದ ಮುನಿಸುಗಿಚ್ಚಿನ ಉಲ್ಪಣವು ಆರದಷ್ಟು ಉಜ್ವಲವಾಗಿತ್ತು. ತನ್ನ ರಾಜ್ಯ ಚಿಹ್ನವಾದ ಬಿರುದಿನ ಸತ್ತಿಗೆ ಮಣ್ಣು ಮುಕ್ಕಿದ ದುಃಖವು ಅವಳ ಮನಸ್ಸನ್ನು ಕೊರೆಯುತ್ತಲೇ ಇತ್ತು.


ಆಗ ಪೋರ್ಚುಗೀಸರ ಹಾವಳಿಯು ತುಳುನಾಡಿನಲ್ಲಿ ಮಿಕ್ಕು ಮೀರಿದುದನ್ನು ಕಂಡು ಕೋಪಾವಿಷ್ಟನಾಗಿ ಇಕ್ಕೇರಿಯ ವೆಂಕಟಪ್ಪನಾಯಕನು ಅವರ ದರ್ಪವನ್ನು ಅಡಗಿಸಲು ಹವಣಿಸುತ್ತಿದ್ದನು. ಈ ಸಂಧಿಯನ್ನರಿತು ಅಬ್ಬಕ್ಕದೇವಿಯ ಅವನ ಆಶ್ರಯವನ್ನು ಸಾರಿದಳು. ಆಗ ದೋಖಂಡೇರಾಯ ವೆಂಕಟಪ್ಪ ನಾಯಕನು ಪ್ರಬಲವಾದ ಸೈನ್ಯದೊಡನೆ ನೆಲವನ್ನು ನಡುಗಿಸುತ್ತ ಮಂಗಳೂರಿನಲ್ಲಿ ಬೀಡುಬಿಟ್ಟನು. ಬಂಗ ರಾಜನು ಪೋರ್ಚುಗೀಸರ ಮೊರೆಹೊಕ್ಕನು. ಎರಡು ಮಹಾ ಸೈನ್ಯಗಳೂ ಬೋಳೂರಲ್ಲಿ ದುರ್ಧರವಾದ ಕಾಳಗಗೊಟ್ಟವು. ವೆಂಕಟಪ್ಪ ನಾಯಕನು ನಿಸ್ತುಲ ಪರಾಕ್ರಮದಿಂದ ಹೋರಾಡಿ ಕೋಟೆಯನ್ನೆಲ್ಲ ಹಾಳುಗೆಡವಿ ಅರಮನೆಯನ್ನು ನೆಲಸಮ ಮಾಡಿದನು. ರಾಣಿಯು ತನ್ನ ಬಿರುದಿನ ಸತ್ತಿಗೆಯನ್ನು ಮರಳಿ ಪಡೆದಳು. ಅದೇ ಸಮಯದಲ್ಲಿ ತುಳುರಾಯ ದಲ್ಲಣನಾದ ವೆಂಕಟಪ್ಪ ನಾಯಕನು ತುಳುವ ಅರಸರನ್ನೆಲ್ಲ ಹಣ್ಣು ಮಾಡಿ ತನ್ನ ಅಂಕೆಗೆ ತಂದನು. ಇವರಲ್ಲಿ ಪೋರ್ಚುಗೀಸರೊಡನೆ ಒಪ್ಪಂದ ಮಾಡಿಕೊಂಡ ಕಾರ್ನಾಡ ರಾಣಿಯೂ ಇದ್ದಳು. ಮಂಗಳೂರಿನಿಂದ ನಗರಕ್ಕೆ ತೆರಳುವಾಗ ವೆಂಕಟಪ್ಪ ನಾಯಕನು ಪೋರ್ಚುಗೀಸರ ಶಸ್ತ್ರಾಸ್ತ್ರ ನಿಶಾನೆಗಳನ್ನೂ ಕೊಂದವರ ತಲೆಗಳನ್ನೂ ತೆಗೆದುಕೊಂಡು ಹೋಗಿ ಕೋಟೆಯ ಹೆಬ್ಬಾಗಿಲಲ್ಲಿಟ್ಟನು. ಈ ಯುದ್ಧದಿಂದಲಾದರೂ ಪೋರ್ಚುಗೀಸರನ್ನು ಬಗ್ಗು ಬಡಿದುದಕ್ಕಾಗಿ ಅಬ್ಬಕ್ಕದೇವಿಗೆ ತುಸು ಅಭಿಮಾನವುಂಟಾಯಿತು. ತುಳುನಾಡಿನಲ್ಲೆಲ್ಲ ಅವಳ ಕೀರ್ತಿ ಗೌರವವು ಹೆಚ್ಚಿತು. ಜೀವಮಾನವನ್ನೆಲ್ಲ ಪೋರ್ಚುಗೀಸರೊಡನೆ ಹೋರಾಡಿ ಬಳಲಿದ ಆಕೆಯು ಕ್ರಿ.ಶ. 1582 ರಲ್ಲಿ ಚಿರವಿಶ್ರಾಂತಿಯನ್ನು ಪಡೆದಳು. ಪರಾಕ್ರಮಪಟುವಾದ ಆ ಚೌಟ ರಾಣಿಯು ಎತ್ತಿಹಿಡಿದ ಹೆಮ್ಮೆಯ ಬಾವುಟವು ನಮ್ಮ ಜೀವನಾಡಿಗಳಲ್ಲಿ ಚಿರಸ್ಫೂರ್ತಿನ್ನು ತುಂಬದಿರದು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ:

ಹಿಂದಿನ ಕಂತಿನಲ್ಲಿ ಕರಾವಳಿಯಲ್ಲಿ ಪೋರ್ಚುಗೀಸರ ಹಾವಳಿಯನ್ನು ದಾಖಲಿಸಿ ಚಿತ್ರಿಸಿರುವ ಎಸ್. ವೆಂಕಟರಾಜರ ‘ಬರ್ಸಲೋರ್ ಬಾಬ್ರಾಯ’ ಕತೆಯನ್ನು ಓದಿದೆವು. ಆ ಕತೆ ನಡೆದ ಕಾಲದಲ್ಲಿಯೇ ಉಳ್ಳಾಲದ ಚೌಟವಂಶದ ರಾಣಿ ಅಬ್ಬಕ್ಕ ಪೋರ್ಚುಗೀಸರ ಹಾವಳಿಯನ್ನು ದಿಟ್ಟತನದಿಂದ ಎದುರಿಸಿದ್ದಳು. ಈ ಘಟನೆ ದಕ್ಷಿಣಕನ್ನಡಿಗರ ಮನದಲ್ಲಿ ಎಂದೂ ಮರೆಯದಂತೆ ಅಚ್ಚಳಿಯದೆ ಉಳಿದಿರುವುದು ವಿಶೇಷವಾಗಿದೆ. ಇದಕ್ಕೆ ಕಾರಣ ಅಗಣಿತ ಸಾಹಿತ್ಯ ಕೃತಿಗಳಲ್ಲಿ ಅಬ್ಬಕ್ಕ ರಾಣಿಯ ಸಾಹಸ ದಾಖಲಾಗಿ ಇಲ್ಲಿನ ಜನರಿಗೆ ಆತ್ಮಾಭಿಮಾನದ ಸಂಕೇತವೂ, ಸ್ಫೂರ್ತಿಯೂ ಆಗಿರುವುದು. ಜತೆಗೆ ಈ ಸಾಹಸಗಾಥೆ ಸಾಹಿತ್ಯ ಕೃತಿಗಳಲ್ಲಿ ಮತ್ತು ನಾಟಕಗಳಲ್ಲಿ ದಾಖಲಾಗಿ ಪ್ರಸಾರವಾಗಲು ಬ್ರಿಟಿಷ್ ಆಳ್ವಿಕೆಯಲ್ಲಿ ಯಾವ ನಿರ್ಬಂಧವೂ ಇಲ್ಲದಿದ್ದುದು ಒಂದು ಪ್ರಬಲ ಕಾರಣವಾಗಿರಬಹುದು. ಯಾಕೆಂದರೆ ಭಾರತದಲ್ಲಿ ಪೋರ್ಚುಗೀಸರು ಬ್ರಿಟಿಷರ ವೈರಿಗಳಾಗಿದ್ದುದರಿಂದ ಬ್ರಿಟಿಷ್ ಆಳ್ವಿಕೆಯ ಹಿತಾಸಕ್ತಿಗಳಿಗೆ ಈ ಐತಿಹಾಸಿಕ ಘಟನೆಯ ಪುನರುಚ್ಚಾರದಿಂದ ಧಕ್ಕೆಯೇನೂ ಇರಲಿಲ್ಲ. ಹಾಗಾಗಿ ಉಳ್ಳಾಲದ ಅಬ್ಬಕ್ಕನ ಸಾಹಸದ ಕತೆಯ ಸಾತತ್ಯಕ್ಕೆ ಅಡ್ಡಿಯುಂಟಾಗಲಿಲ್ಲ. (ಅದೇ ವೇಳೆಗೆ ಬ್ರಿಟಿಷರ ವಿರುದ್ಧದ ‘ಕಲ್ಯಾಣಪ್ಪನ ಕಾಟಕಾಯಿ’ ಎಂಬ ಸ್ವಾತಂತ್ರ್ಯ ಹೋರಾಟದ ಕತೆ ವಿಸ್ಮೃತಿಗೆ ಸಂದುಹೋದಂತಿತ್ತು. ನಿರಂಜನ, ಪಾ. ದೇವರಾವ್, ದೇವಿಪ್ರಸಾದ್ ಸಂಪಾಜೆ, ಪ್ರಭಾಕರ ಶಿಶಿಲ, ಡಿ.ಕೆ.ಚೌಟ, ಪ್ರಭಾಕರ ನೀರ್ಮಾರ್ಗ ಮುಂತಾದವರು ಮತ್ತೆ ಈ ಹೋರಾಟವನ್ನು ತಮ್ಮ ಬರಹಗಳ ಮೂಲಕ ಕನ್ನಡಿಗರ ಸ್ಮೃತಿವಲಯಕ್ಕೆ ತಂದಿದ್ದಾರೆ).
ಉಳ್ಳಾಲದ ಅಬ್ಬಕ್ಕ ರಾಣಿ ಪೋರ್ಚುಗೀಸರ ಹಡಗಿಗೆ ಬೆಂಕಿ ಕೊಟ್ಟು ಅವರನ್ನು ಓಡಿಸಿದ ಸಾಹಸವನ್ನು ವಸ್ತುವಾಗಿ ಇರಿಸಿಕೊಂಡಿರುವ ನಾಟಕಗಳು ದಕ್ಷಿಣ ಕನ್ನಡದ ಶಾಲೆಗಳ ವಾರ್ಷಿಕೋತ್ಸವಗಳಲ್ಲಿ ಹೆಚ್ಚಾಗಿ ಪ್ರದರ್ಶಿತವಾಗುತ್ತಿದ್ದವು. ಹಸ್ತಪ್ರತಿ ರೂಪದಲ್ಲಿ ಅಂತಹ ಹತ್ತಾರು ನಾಟಕಗಳು ಚಾಲ್ತಿಯಲ್ಲಿದ್ದವು (ಈಗ ಅವು ಕಾಣೆಯಾಗಿವೆ! ಶಾಲಾ ವಾರ್ಷಿಕೋತ್ಸವಗಳ ಸ್ವರೂಪ ಬದಲಾಗಿರುವುದು, ಅಲ್ಲಿ ಪ್ರದರ್ಶಿತವಾಗುವ ಸಾಂಸ್ಕೃತಿಕ ಚಟುವಟಿಕೆಗಳ ವಸ್ತು, ಆಶಯಗಳೆಲ್ಲ ಪಲ್ಲಟಗೊಂಡಿರುವುದು ಬೇರೊಂದು ಕುತೂಹಲಕರ ಅಧ್ಯಯನಕ್ಕೆ ವಿಷಯವಾಗಬಲ್ಲುದು).
ಲಭ್ಯ ಕೃತಿಗಳ ಬಗ್ಗೆ ಹೇಳುವುದಾದರೆ ರಾ. ಮೊ. ವಿಶ್ವಾಮಿತ್ರ ಅವರ ‘ಅಭಯ ರಾಣಿ’, ಅನುಪಮಾ ನಿರಂಜನ ಮತ್ತು ಡಿ. ಎಸ್. ನಂದಾ ಅವರ ‘ದಿಟ್ಟೆ’, ವಿ. ಕೆ. ಯಾದವ್ ಅವರ ‘ವೀರ ವನಿತೆ’ ಕಾದಂಬರಿಗಳು; ಕೆ. ಬಾಲಕೃಷ್ಣ ಭಂಡಾರಿ, ರಾಮ ಕಿರೋಡಿಯನ್, ಸೀತಾರಾಮ ಕುಲಾಲ್, ಕುದ್ಕಾಡಿ ವಿಶ್ವನಾಥ ರೈ ಮತ್ತು ಕಾವೂರು ರತ್ನಾಕರ ರಾವ್ ಇವರ ನಾಟಕಗಳು ರಾಣಿಯ ಸಾಹಸವನ್ನು ವೈಭವೀಕರಿಸುವ ಕಥಾನಕಗಳಾಗಿವೆ. ಇಲ್ಲೆಲ್ಲ ಪೋರ್ಚುಗೀಸರು ದುಷ್ಟರು, ದಾಳಿಕೋರರು, ವಂಚಕರು ಎನ್ನುವ ತಿರಸ್ಕಾರ ಮತ್ತು ದ್ವೇಷ ಭಾವವಿದೆಯೆ ಹೊರತು ಅವರನ್ನು ವೈಭವೀಕರಿಸುವ ಒಂದೇ ಒಂದು ಕೃತಿಯೂ ನನ್ನ ಗಮನಕ್ಕೆ ಬಂದಿಲ್ಲ.
ಉಳ್ಳಾಲದ ಅಬ್ಬಕ್ಕ ರಾಣಿಯ ಸಾಹಸವನ್ನು ದಾಖಲಿಸುವ ಪ್ರಾತಿನಿಧಿಕ ಕಥೆಯಾಗಿ ಬೇಕಲ ರಾಮ ನಾಯಕರ ರಚನೆಯನ್ನೇ ಆಯ್ದುಕೊಂಡಿದ್ದೇನೆ. ನಾಯಕರು ಅಬ್ಬಕ್ಕ ರಾಣಿಯ ಬಗ್ಗೆ ಇತಿಹಾಸ ರೂಪದ ಕಥಾನಕವೊಂದನ್ನು ಬರೆದಿದ್ದಾರೆ. ಅದರ ನಿರೂಪಣಾಕ್ರಮದಿಂದಾಗಿ ಅದನ್ನು ಸಾಹಿತ್ಯ ಕೃತಿಯೆಂದು ಕೂಡಾ ಪರಿಗಣಿಸುವಂತಿದೆ. ಸಮಗ್ರವೂ, ಸಂಕ್ಷಿಪ್ತವೂ ಆಗಿರುವುದರಿಂದ ಅಬ್ಬಕ್ಕ ಕಥನದ ಪ್ರಾತಿನಿಧಿಕ ಕೃತಿಯಾಗಿ ಅದನ್ನೇ ಬಳಸಿಕೊಂಡಿದ್ದೇನೆ. ಅದು ಇತಿಹಾಸವನ್ನೇ ಕತೆಯ ರೂಪದಲ್ಲಿ ಹೇಳಿರುವುದಾಗಿದೆ.
ಹಿನ್ನೆಲೆ:
ಈಗಾಗಲೇ ಚರ್ಚಿಸಿರುವಂತೆ ಪೋರ್ಚುಗೀಸರು ಮತ್ತು ಬ್ರಿಟಿಷರಿಗೆ ಇದ್ದ ವ್ಯತ್ಯಾಸವೆಂದರೆ ಪೋರ್ಚುಗೀಸರಿಗೆ ತಾವು ಒಂದು ರಾಜ್ಯವನ್ನು ಕಟ್ಟಿ ಆಳಬೇಕು, ತಾವು ಪಡೆಯುವ ಕಪ್ಪಕ್ಕೆ ಪ್ರತಿಯಾಗಿ ಇಲ್ಲಿನವರಿಗೆ ಉತ್ತಮ ಪ್ರಭುತ್ವವನ್ನು ಕೊಡಬೇಕು ಎಂಬ ಯೋಚನೆಯೇ ಇರಲಿಲ್ಲ. ಅವರು ಸಿಕ್ಕಿದ್ದನ್ನು ದೋಚುವ ದರೋಡೆಗಾರರ ಮನೋಭಾವದಿಂದ ಕಪ್ಪವನ್ನು ವಸೂಲಿಮಾಡಿಕೊಂಡು ಹೋಗಿಬಿಡುತ್ತಿದ್ದರು. ಆದುದರಿಂದ ಅಬ್ಬಕ್ಕ ರಾಣಿಯಂಥವರು ಅವರು ಕಪ್ಪ ಕೇಳಲು ಬಂದಾಗ ಪ್ರತಿಭಟಿಸುತ್ತಿದ್ದರು. ಅಬ್ಬಕ್ಕ ರಾಣಿಯ ಕಾಲಮಾನದ ಬಗ್ಗೆ ಸಿಕ್ಕಾಪಟ್ಟೆ ಗೊಂದಲಗಳಿವೆ. ಮುಖ್ಯವಾಗಿ ಅಬ್ಬಕ್ಕ ರಾಣಿಯರು ಮೂವರಿದ್ದು ಅವರಲ್ಲಿ ಪೋರ್ಚುಗೀಸರನ್ನು ಸೋಲಿಸಿದ ರಾಣಿ ಯಾರು ಎನ್ನುವುದು ತೀರ್ಮಾನವಾಗದೆ ಉಳಿದಿದೆಯೆ ಎನ್ನುವ ಸಂಶಯ ಉಂಟಾಗುತ್ತದೆ. ಎಂ. ಗಣಪತಿ ರಾವ್ ಐಗಳ್ ಅವರು ಅಬ್ಬಕ್ಕ ರಾಣಿಯ ಕಾಲಮಾನ 1544 ರಿಂದ 1582; ಅವಳು ಪೋರ್ಚುಗೀಸರನ್ನು ಸೋಲಿಸಿದ್ದು 1567 ರಲ್ಲಿ ಎನ್ನುತ್ತಾರೆ.
ಡಾ. ಜ್ಯೋತ್ಸ್ನಾ ಕಾಮತ್ ಅವರು ಕಸ್ತೂರಿ ಪತ್ರಿಕೆಯಲ್ಲಿ (ಆಗಸ್ಟ್ 2011) ಒಂದು ಲೇಖನ ಬರೆದು ಪೋರ್ಚುಗೀಸರನ್ನು ಸೋಲಿಸಿದ ಅಬ್ಬಕ್ಕ ದೇವಿಯನ್ನು 17 ನೆಯ ಶತಮಾನದ ಪ್ರವಾಸಿ ‘ಡೆಲ್ಲವೆಲ’ ಭೇಟಿಯಾಗಿದ್ದನೆಂದು; ಅವಳು 1618 ರಲ್ಲಿ ಪೋರ್ಚುಗೀಸರ ಹಡಗುಗಳನ್ನು ಸುಡಿಸಿ ಅವರನ್ನು ಓಡಿಸಿದ ಸಾಹಸ ವಸಾಹತು ಜಗತ್ತಿನಲ್ಲೆಲ್ಲ ಪ್ರಸಿದ್ಧವಾಗಿತ್ತು ಎಂದು ಬರೆದಿದ್ದಾರೆ. ‘‘The March of Karnataka” ಪತ್ರಿಕೆಯಲ್ಲಿ (ಆಗಸ್ಟ್ 2011) ಎ. ಗಿರೀಶ್ ರೈಯವರು ಇದೇ ಘಟನೆಯ ಬಗ್ಗೆ ಹೆಚ್ಚು ಖಚಿತವಾಗಿ ಹೇಳುತ್ತಾ, ಘಟನೆ ನಡೆದುದು 1568 ರಲ್ಲಿ ಎನ್ನುತ್ತಾರೆ. ಅವರು ಕೂಡಾ ಅಬ್ಬಕ್ಕಳ ಸಾಹಸ ಯುರೋಪಿನಲ್ಲಿ ದೊಡ್ಡ ಸುದ್ದಿಯಾಗಿತ್ತು, ಪರ್ಷಿಯಾದ (ಇರಾನ್) ದೊರೆ ಶಾ ಅಬ್ಬಾಸ್ ಎಂಬ ಪ್ರಸಿದ್ಧ ದೊರೆ ಡೆಲ್ಲಾವಲ್ಲೆಗೆ ಅಬ್ಬಕ್ಕಳ ವಿಷಯ ತಿಳಿಸಿ ಅವನು ಭಾರತಕ್ಕೆ ಭೇಟಿ ನೀಡಲೇ ಬೇಕು ಮತ್ತು ರಾಣಿ ಅಬ್ಬಕ್ಕಳನ್ನು ಭೇಟಿಯಾಗಲೇಬೇಕು ಎಂದು ಒತ್ತಾಯಿಸಿದ್ದನೆಂದು ದಾಖಲಿಸಿದ್ದಾರೆ.
ಬೇಕಲ ರಾಮನಾಯಕರು, ಸಾಂತ್ಯಾರು ವೆಂಕಟರಾಜರು, ವಿ. ಕೆ. ಯಾದವ್ ಮುಂತಾದವರಲ್ಲದೆ ಅಂತರ್ಜಾಲ ಮಾಹಿತಿ ತಾಣವಾದ ವಿಕಿಪಿಡಿಯದವರು ಕೂಡಾ ಅಬ್ಬಕ್ಕ 16 ನೆಯ ಶತಮಾನದವಳು ಎನ್ನುತ್ತಾರೆ. ಸಾಹಿತ್ಯದ ಅಧ್ಯಯನಕಾರರಿಗೆ ಒಬ್ಬಳು ಅಬ್ಬಕ್ಕ ರಾಣಿ ಇಂತಹ ಸಾಹಸವನ್ನು ಮೆರೆದಿದ್ದಳು ಎನ್ನುವ ಸಂಗತಿಯೇ ಮುಖ್ಯವಾಗುತ್ತದೆ.
ಈಗಾಗಲೇ ನಾವು ಓದಿರುವ ಸಾಂತ್ಯಾರು ವೆಂಕಟರಾಜರ ‘ಬರ್ಸಲೋರ್ ಬಾಬ್ರಾಯ’ ಎಂಬ ನೀಳ್ಗತೆಯಲ್ಲಿ ಅವರು ಅಬ್ಬಕ್ಕ ರಾಣಿಯನ್ನೂ ಉಲ್ಲೇಖಿಸಿರುವುದನ್ನು ಗಮನಿಸಿ. ಆ ಕತೆಯಲ್ಲಿ ವೆಂಕಟರಾಜರು ಅಂದಿನ ಪರಿಸ್ಥಿತಿಯನ್ನು ಖಚಿತವಾಗಿಯೂ, ಸ್ಪಷ್ಟವಾಗಿಯೂ ವಿವರಿಸಿದ್ದಾರೆ: “ಹಲಹಲವು ತಡವೆ ಈ ದೇಶೀಯರು ಅವರನ್ನು (ಪೋರ್ಚುಗಿಸರನ್ನು) ಹಿಂದಕ್ಕಟ್ಟಿದರೂ ಅವರು ಮತ್ತೂ ಮತ್ತೂ ಮೇಲೆ ಬಿದ್ದು ಬರುತ್ತಿದ್ದರು. ಅವರು ಸಮುದ್ರದಲ್ಲೆ ಹಡಗು ನಿಲ್ಲಿಸಿ ದೂರ ಗುರಿಯ ಫಿರಂಗಿಗಳಿಂದ ಗುಂಡಿನ ಮಳೆ ಸುರಿದಾಗ ಕರಾವಳಿಯ ಎಲ್ಲಾ ಪಟ್ಟಣಗಳೂ ತತ್ತರಿಸುತ್ತಿದ್ದವು. ಆದುದರಿಂದಲೇ ಸಾಮಾನ್ಯವಾಗಿ ಎಲ್ಲಾ ಅರಸರೂ ಅವರ ಕೂಡೆ ಕಲಹ ಹೂಡದೆ ಅವರ ವಾಂಛಿತದಂತೆ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡುವ ಕರಾರು ಮಾಡಿಕೊಂಡಿದ್ದರು.
“ಆಗಲಾಗ ಈ ಜಿಲ್ಲೆಯಲ್ಲಿ ಯಾವ ಪ್ರಬಲವಾದ ಆಡಳಿತೆಯೂ ಇದ್ದಿಲ್ಲ. … ಇಲ್ಲಿ ಚಿಕ್ಕ ಚಿಕ್ಕ ಸಂಸ್ಥಾನಿಕರೇ ತಾವು ತಾವೆಂದು ತಲೆಯೆತ್ತುತ್ತಿದ್ದರು. ಆದರೂ ಉಳ್ಳಾಲದ ರಾಣಿ ಅಬ್ಬಕ್ಕ ದೇವಿ ಗಂಗೊಳ್ಳಿಯ ತನಕದ ಕರಾವಳಿಯ ಒಡತಿಯಾಗಿದ್ದು ಅದನ್ನು ಚೆನ್ನಾಗಿ ಕಾದುಕೊಳ್ಳುತ್ತಿದ್ದಳು. ಆ ಹದಿನಾರನೇ ಶತಕದ ಪೋರ್ತುಗೀಸರಿಗೆ ಇಲ್ಲಿ ಏನಾದರೂ ಎದುರಾಡಿದವರಿದ್ದರೆ ಅದು ಆ ಧೀರ ಮಹಿಳೆಯೊಬ್ಬಳೇ ಸರಿ. ಇನ್ನು ಕಲ್ಲಿಕೋಟೆಯ ಝಮೋರಿನ್ನರ ಸಮರ್ಥ ಸೇನಾನಿ ಪೋಕ್ರು ಕುಟ್ಟಿ ಈ ಫರಂಗಿಗಳನ್ನು ಕಂಡ ಕಂಡಲ್ಲೆಲ್ಲ ಬೆನ್ನಟ್ಟುತ್ತಿದ್ದನು.”  ವೆಂಕಟರಾಜರು 60 ವರ್ಷಗಳ ಹಿಂದೆ ಬರೆದಿದ್ದ ಈ ವಿವರಗಳನ್ನು ಈಗ ವಿಕಿಪಿಡಿಯಾದಲ್ಲಿ ದೊರೆಯುವ ಮಾಹಿತಿಯ ಜತೆಗೆ ಹೋಲಿಸಿ ನೋಡಿದಾಗ ಆಶ್ಚರ್ಯವಾಗುತ್ತದೆ.
(ಮುಂದಿನ ಕಂತಿನಲ್ಲಿ ಬೇಕಲ ರಾಮರಾಯರ ಇನ್ನೊಂದು ಕಥೆ : ‘ತಿಮ್ಮನಾಯಕನ ಫಿತೂರಿ’)