ನಮಸ್ಕಾರ. ಹೇಗಿದ್ದೀರಿ? ಮನೆ ಕಡೆ ಎಲ್ಲಾ ಆರಾಮ ತಾನೇ…? ಇದೇನು… ನಿಟ್ಟುಸಿರು ಬಿಡುತ್ತಿದ್ದೀರಿ…? ಏನು ಆರಾಮವಪ್ಪಾ…. ಮಳೆ ಇಲ್ಲಾ ಬೆಳೆ ಇಲ್ಲಾ ಇರೋದೊಂದೇ ಈ ಧಗೆ…. ಎನ್ನುತ್ತಿದ್ದಿರಾ… ಹೌದು ಭಾರಿ ಸೆಕೆ… ಬನ್ನಿ.. ಹೀಗೆ ಬನ್ನಿ ನಿಮ್ಮ ಅಂಗಳದಲ್ಲೇ ಕೂತು ಮಾತಾಡೋಣ…

ಓ… ಎಷ್ಟು ಚೆಲುವಾದ ಹೂ ಅರಳಿದೆ ನಿಮ್ಮ ಗಿಡದಲ್ಲಿ! ಈ ಪುಟ್ಟ ಹೂ ಮುದ್ದಾಗಿದೆ, ಆ ದೊಡ್ಡಹೂ ಭವ್ಯವಾಗಿದೆ ಪುಟ್ಟದಾದರೂ ದೊಡ್ಡದಾದರೂ ಹೂವು ಹೂವೇ.. ಚೆಲುವು ಚೆಲುವೇ… ಏನಂತೀರಿ…? ಈ ಹೂವಿನ ಚೆಲುವನ್ನು ನಿಮ್ಮ ಕಣ್ಣುಗಳಲ್ಲಿ ತುಂಬಿ ಕೊಳ್ಳುವಿರಾ? ಈ ಬಣ್ಣದ ಸೊಬಗನ್ನೂ, ದಳಗಳ ಲಾಸ್ಯವನ್ನೂ ನೋಡಿದಿರಾ? ಬಳುಕುವ ಶಲಾಕೆಯೂ, ಗಂಭೀರವಾಗಿ ನಿಂತ ಪರಾಗ ಕೇಸರಗಳೂ ಒಡಗೂಡಿದ ಈ ದೃಶ್ಯ ರಮ್ಯವೆನಿಸದೇ? ಒಮ್ಮೆ ಹೂವನ್ನು ಮೆಲ್ಲನೆ ನೇವರಿಸಿ ಹೂ ನಿಮ್ಮೊಂದಿಗೆ ಮಾತಾಡುತ್ತದೆ ಮೌನದಲ್ಲಿ…

ನಮ್ಮಲ್ಲಿ ಗಿಡವಿದೆ ಹೂವಿಲ್ಲ ಎಂಬ ಕೊರಗೇ? ನಿಮ್ಮ ಗಿಡವೂ ಎಷ್ಟು ಸುಂದರವಾಗಿದೆ ನಿಮ್ಮ ಗಿಡವನ್ನೇ ಒಮ್ಮೆ ನೇವರಿಸಬಾರದೇಕೆ? ಇಗೋ.. ನಿಮ್ಮ ಸ್ಪರ್ಶದಿಂದ ಗಿಡ ತಲೆದೂಗಿ ನಿಮ್ಮೊಂದಿಗೆ ಮಾತಿಗಿಳಿಯಿತು…
ಈಗ ಬನ್ನಿ… ನಾವು ಈ ಕಥೆ ಓದೋಣಾ…

ಅವಳ ಮನ ಮರುಭೂಮಿಯಾಗಿತ್ತು. ತಲೆ ಮೇಲೆ ಸುಡುಸುಡುವ ಸೂರ್ಯ ಪಾದಗಳ ಕೆಳಗೆ ಕೆಂಪಗೆ ಕಾದ ಮರಳು. ಒಂದೆಡೆ ಪ್ರಾಜೆಕ್ಟ್ ಡೆಡ್ ಲೈನ್ಸ್ ಇನ್ನೊಂದೆಡೆ ಸಂಸಾರ ಭಾರ… ಉಸಿರು ಕಟ್ಟಿದಂಥಾ ಅನುಭವ. ಅದೇ ಹಳಸಿದ ದಾರಿಯಲ್ಲಿ ನಡೆದು ಅದೇ ಬೆವರ ಗಂಧ ಕುಡಿದು… ಬಸವಳಿದಿದ್ದಳು. ಆಗಲೋ ಈಗಲೋ ಉಪಕಾರ ಮಾಡುವಂತೆ ಬೀಸುವ ಗಾಳಿಯೂ ಬಿಸಿ. ಜೊತೆಗೆ ಮುಖಕ್ಕೆ ರಾಚುವ ಧೂಳು. ಬಿಸಿ ಗಾಳಿ ಬೀಸಿದರೆ ಸದ್ಯ ಗಾಳಿ ಬೀಸಿತೆಂದು ಸಂತೋಷ ಪಡಬೇಕೋ ಗಾಳಿ ಬಿಸಿಯೆಂದು ಸಿನಿಕತೆ ತೋರಬೇಕೋ…? ತಿಳಿಯದೆ ಬೆಪ್ಪಾಗಿದ್ದಳು… ಜೊತೆಗೆ ಹೇಗೂ ಧೂಳು ಫ್ರೀ…

ಆಕಾಶವೇ ಹತ್ತಿ ಉರಿಯುತ್ತಿದೆಯೇನೂ…? ತಲೆ ಕಾಯುವ ದೇವನೇ ಬೆಂಕಿ ಸುರಿಯುತ್ತಿರಲು ತನು ಕಾಯ್ವ ಭೂತಾಯಿ ಹುರಿದ ಮರಳಾಗಿರುವಳು ಇನ್ನು ಈ ಹುರಿದ ಮರಳಲಿ ತೆವಳುತಿರುವ ಜೀವನ… ಅದರ ಮಾತೇ ಬೇಡಾ. ಧಗೆ.. ಧಗೆ.. ಧಗೆ… ಹೊರಗೂ… ಒಳಗೂ. ಗಂಟಲು ಆರಿ ನಾಲಿಗೆ ಬತ್ತುತ್ತಿದೆ. ಅಗೋ…. ಅಲ್ಲಿ ನೀರು…! ಅಳಿದುಳಿದ ಶಕ್ತಿಯಷ್ಟೂ ಬಳಸಿ ತೇಕುತ್ತಾ ಓಡಿದರೆ ಅಯ್ಯೋ… ಅದು ಮರೀಚಿಕೆ!

******

ಆಗಲೇ ಅವಳು ಎಲ್ಲಿಗೋ ಹೋಗಲು ನಿರ್ಧರಿಸಿದಳು…
ಯು ನೋ ಯುವರ್ ಪ್ರಾಜೆಕ್ಟ್ ಡೆಡ್ ಲೈನ್ಸ್… ರೈಟ್?
ಸ್ಟಿಲ್ ಯು ವಾಂಟು ಗೋ ಲೈಕ್ ದಿಸ್…?
ಯು ಬೆಟರ್ ಗಿವ್ ಅ ಥಾಟ್ ಅಂಡ್ ಡಿಸೈಡ್…
-ಅವಳ ಬಾಸ್

ನೀನು ಹೀಗೆ ಏಕಾಏಕಿ ಹೊರಟು ನಿಂತರೆ ಮನೆ ಗತಿ ಯೇನು?
ನಂಗೆ ಊಟ, ತಿಂಡಿಗೆ ಎಷ್ಟು ಕಷ್ಟ ಆಗುತ್ತೆ ಅಂತ ಯೋಚ್ನೆ ಮಾಡಿದೀಯಾ…?
ನಿಂಗೇನು ಕಡಿಮೆ ಮಾಡಿದೀನಿ ಅಂತ ಹೀಗಾಡ್ತಿದೀಯಾ…?
-ಅವಳ ಗಂಡ

ಆರ್ ಯೂ ಕ್ರೇಝಿ…? ಫರ್ಗೆಟ್ ಇಟ್… ಯೂಆರ್ ನಾಟ್ ಗೋಯಿಂಗ್ ಎನೀವೇರ್… ವಿವಿಲ್ ಡೂ ಸಂ ತಿಂಗ್ ಎಬೌಟ್ ಇಟ್… ಕಮಾನ್ ಐ ವಿಲ್ ಹೆಲ್ಪ್ ಯೂ ಔಟ್… ಲೆಟ್ಸ್ ಹ್ಯಾವ್ ಅ ಟಾಕ್…
-ಅವಳ ಒಬ್ಬ ಸ್ನೇಹಿತೆ.

ಎಷ್ಟು ಖರ್ಚಾಗುತ್ತೆ?ವಾಟ್ ಈಸ್ ಯುವರ್ ಐಟಿನರಿ…? ವಾಟ್ ಆರ್ ಯುವರ್ ಪ್ಲ್ಯಾನ್ಸ್…?
-ಅವಳ ಒಬ್ಬ (ಲೆಕ್ಕಾಚಾರಸ್ಥ ) ಸಹೋದ್ಯೋಗಿ

ಆದರೂ ಅವಳು ಹೊರಟು ನಿಂತಳು ಗಮ್ಯ ಕಾಣದ ಹಾದಿಯಲ್ಲಿ….

ಅವಳು ಆ ಕಲ್ಯಾಣಿಯ ಕೊನೆಯ ಮೆಟ್ಟಿಲಂಚಿನಲ್ಲಿ ಕೂತಿದ್ದಾಳೆ. ನೀರಿನಲ್ಲಿ ಅರೆ ಮುಳುಗಿದ ಬಿಳಿ ಪಾದಗಳನ್ನು ಪುಟಾಣಿ ಬಣ್ಣದ ಮೀನುಗಳು ಕಚ್ಚಿದಾಗಲೆಲ್ಲಾ ಅವಳಿಗೆ ಕಚಗುಳಿಯಾಗುತ್ತಿದೆ. ಸೀರೆಯ ಅಂಚು ಒಡತಿಗೆ ತಿಳಿಯದಂತೆ ಗುಟ್ಟಾಗಿ ನೀರಿನ ಸ್ನೇಹ ಬೆಳೆಸಿ ತಂಪು ಹೀರುತ್ತಿದೆ. ನೀಲಿ ಆಕಾಶದಲ್ಲಿ ಮಲ್ಲಿಗೆ ನಕ್ಕ ಹಾಗೆ ಪುಟ್ಟ ಪುಟ್ಟ ಮೋಡಗಳು ತೇಲುತ್ತಿವೆ. ಹೊರಗಿನ ತಂಪು ಅವಳ ಒಳಗೆ ಇಳಿಯುತ್ತಿಲ್ಲ. ಹತ್ತಿರದ ದೇಗುಲದ ಘಂಟಾನಾದ ಕೇಳುತ್ತಿದೆ. ನಿಟ್ಟುಸಿರೊಂದನ್ನು ಬಿಟ್ಟು ನಿಧಾನವಾಗಿ ಮೆಟ್ಟಿಲು ಏರುತ್ತಾ ಅವಳು ದೇಗುಲದೆಡೆಗೆ ಸಾಗುತ್ತಾಳೆ.

*******

ತಂಗಾಳಿಯಲ್ಲಿ ತೂಗುತ್ತಿರುವ ಮಾವಿನ ಮರಕ್ಕೊರಗಿ ಅವಳು ನಿಂತಿದ್ದಾಳೆ. ಅವಳ ಮುದ್ದಾದ ಮುಂಗುರುಳು ಮಾಂದಳಿರ ಜೊತೆ ಸ್ಪರ್ಧಿಸುತ್ತಾ ತಾನೂ ಲಾಸ್ಯವಾಡುತ್ತಿದೆ. ಸುತ್ತಲೂ ಮಾವಿನ ಹೂಗಳ ನರುಗಂಪು ಅನತಿ ದೂರದಲ್ಲಿ ಬಾಲ-ಬಾಲೆಯರು ಒಟ್ಟಾಗಿ ಹಾಡುತ್ತಾ ಆಟವಾಡುತ್ತಾ ಇದ್ದಾರೆ. ಆ ಮನೋಹರ ದೃಶ್ಯವನ್ನವಳು ಮುದದಿಂದ ನೋಡುತ್ತಿದ್ದಾಳೆ. ಅವಳ ತುಟಿಗಳ ಮೇಲೆ ನಸು ನಗು ಹೌದೋ ಇಲ್ಲವೋ ಎಂಬಂತೆ… ಆದರೂ ಮನಸ್ಸಿನಾಳದಲ್ಲೆಲ್ಲೋ ತಳಮಳ… ಬರು ಬರುತ್ತಾ ಆ ತಳಮಳ ದೊಡ್ಡದಾಗಿ ಬೆಳೆದು ಆ ನಸುನಗುವನ್ನು ನುಂಗಿ ಹಾಕಿ ಬಿಡುತ್ತದೆ… ಅವಳು ನಿಟ್ಟುಸಿರು ಬಿಡುತ್ತಾ ಅಲ್ಲಿಂದ ಸಾಗುತ್ತಾಳೆ…

ಅವಳು ಸಮುದ್ರ ತಡಿಯಲ್ಲಿ ಸೂರ್ಯಾಸ್ತದ ಮನೋಹರ ನೋಟ ನೋಡುತ್ತಾ ಕೂತಿದ್ದಳು. ಬೆಳ್ಳಕ್ಕಿಗಳು ನಸುಗೆಂಪಾದ ಆಕಾಶದ ಹಿನ್ನಲೆಯಲ್ಲಿ ಹಾರಿ ಹೋಗುತ್ತಿವೆ. ಮೀನುಗಾರರು ತನ್ಮಯತೆಯಿಂದ ಹುಟ್ಟು ಹಾಕುತ್ತಿರುವುದು ದೂರದಲ್ಲಿ ಕಾಣುತ್ತಿದೆ. ಪ್ರತಿ ಬಂಗಾರದಲೆಯೂ ಸೋ.. ಎಂದು ಅವಳಿಗಾಗಿಯೇ ಎಂಬಂತೆ ಹಾಡುತ್ತಾ ದಡಮುಟ್ಟಿ (ಅವಳ ಮನಮುಟ್ಟಲು ವಿಫಲವಾಗಿ) ಮುತ್ತಿನ ಮಣಿಯ ನೊರೆಯಾಗಿ ನಿರ್ಗಮಿಸುತ್ತಿವೆ. ಆಕಾಶವು ಕೆಂಪು ನೀಲಿ ಬಂಗಾರವಾಗಿ ಸಾವಿರ ಬೆಳಕಿನ ಚಿತ್ತಾರದ ತೋರಣವಾಗಿ ಸಾಗರದ ಅಲೆ ಅಲೆಗಳಲ್ಲಿ ಪ್ರತಿಫಲಿಸಿ ನಲಿಯುತ್ತಿದೆ. ಆದರೆ ಅವಳ ಮನದ ನಲಿವಿನ ಪಾತ್ರೆಯ ತಳ ತೂತಾಗಿ ಅವಳ ನಲಿವೆಲ್ಲಾ ಸೋರಿ ಹೋಗುತ್ತಿದೆಯೇನೋ ಅನ್ನಿಸುತ್ತಿದೆ. ಅವಳು ಉಸಿರು ಬಿಡುತ್ತಾ ಅಲ್ಲಿಂದ ಏಳುತ್ತಾಳೆ.

ಮುತ್ತಿನ ಮಣಿಯಂಥಾ ನೀರು ತುಂಬಿದ ಆ ಸರಸ್ಸು ಬಿಳಿದಾವರೆ ಹೂಗಳಿಂದ ತುಂಬಿ ಕಂಗೊಳಿಸುತ್ತಿದೆ. ಶ್ವೇತ ಹಂಸಗಳು ಚಂದ್ರಕಾಂತಿಯಂತೆ ಹೊಳೆವ ತಾವರೆಗಳ ನಡುವಲ್ಲಿ ಕೊರಳು ಕೊಂಕಿಸುತ್ತಾ ವಿಹರಿಸುತ್ತಿವೆ ಆ ತಿಳಿನೀರು… ಬಿಳಿದಾವರೆ… ಹಂಸ ಲಾಸ್ಯ… ಆದರೆ ಅವಳ ಮನ ಅಶಾಂತಿಯ ಗೂಡು…

ಹಸಿರು ಗದ್ದೆಯ ಅಂಚಿನಲ್ಲಿ ಅವಳು ಸುಳಿದಾಡುತ್ತಾಳೆ. ಗಿಳಿಯ ಮೈ ಬಣ್ಣದ ಭತ್ತದ ಗರಿಗಳು ಅವಳನ್ನು ಕೈ ಬೀಸಿ ಕರೆಯುತ್ತವೆ. ಆದರೆ ಅವಳ ಮನದ ಆನಂದದ ಪಾತ್ರೆ ಬರಿದು.

ಅವಳು ನೀಲ ಮುಗಿಲ ಹಿನ್ನಲೆಯಲ್ಲಿ ಧೀರ ಗಂಭೀರವಾಗಿ ನಿಂತ ಪರ್ವತ ಶ್ರೇಣಿಯನ್ನು ದಿಟ್ಟಿಸುತ್ತಿದ್ದಾಳೆ. ಹಸಿರು ಮೇಖಲೆ ಧರಿಸಿ ಸೂರ್ಯನ ಹೊಂಬಿಸಿಲಿನಲ್ಲಿ ಬೆಳ್ಳಿಯಾಗಿ ಬಂಗಾರವಾಗಿ ಹೊಳೆವ ಪರ್ವತ ಮಾಲೆ ನೀಲಿ ಬಾನಿನಲ್ಲಿ ಮಂದವಾಗಿ ಚಲಿಸುತ್ತಿರುವ ಮೋಡಗಳಿಂದ ಚಾಮರ ಸೇವೆಗೊಳ್ಳುವ ರಾಜನಂತೆ ವಿರಾಜಮಾನವಾಗಿದೆ. ಆದರೆ ಅವಳ ಮನ ಶಾಂತಿಯಿಂದ ಆನಂದದಿಂದ ತುಂಬಿ ಬರಲಿಲ್ಲ.

ನಿರಾಸೆಯ ದಪ್ಪ ಚಾದರ ಹೊದ್ದು ಭಾರ ಭಾರ ಮನದೊಂದಿಗೆ ಅವಳು ತನ್ನ ಮನೆಗೆ ಮರಳಿದಳು….

***********
ಭಾಗ ಎರಡು
_____________________________

ಅದೊಂದು ಬೆಳಗು ಅವಳು ತನ್ನ ಮನೆಯಂಗಳಕ್ಕೆ ಬಂದಳು. ಆಗ ತಾನೇ ಅರಳಿದ ಹೂವೊಂದು ಅವಳನ್ನೇ ನೋಡಿತು. ಹೂವನ್ನು ಕ್ಷಣಹೊತ್ತು ನೋಡಿದ ಅವಳಿಗೆ ಏನೂ ಅನ್ನಿಸಲಿಲ್ಲ. ಸುಮ್ಮನಿದ್ದು ಬಿಟ್ಟಳು. ಆ ಹೂವು ನಸು ನಗುತ್ತಾ ಏನೋ ಹೇಳ ಹೊರಟಿತು. ಆದರೆ ಆ ಹೂವಿನ ಮಾತು ಅವಳಿಗೆ ಕೇಳಿಸಲೇ ಇಲ್ಲ. ಅವಳು ಹೂವಿಗೆ ಬೆನ್ನು ತಿರುಗಿಸಿ ಹೊರಟು ಹೋಗುವುದರಲ್ಲಿದ್ದಳು.
ಆಗ… ಆಗ ಅವಳಿಗೆ ಕೇಳಿತು ಆ ಧ್ವನಿ!
“ಆ ಹೂವಿನ ಸೊಬಗನ್ನು ನಿನ್ನ ಕಣ್ಣಲ್ಲಿ ತುಂಬಿ ಕೊಳ್ಳಲಾರೆಯಾ?”
‘ಯಾರು…? ಯಾರದೂ…?’

ಅವಳು ಸುತ್ತಲೂ ತಿರುಗಿ ನೋಡಿದಳು. ಯಾರೂ ಕಾಣಿಸಲಿಲ್ಲ. ಎಷ್ಟೋ ಕಾಲದಿಂದ ಮಾತೇ ಬಾರದಂತೆ ಮೂಕವಾಗಿದ್ದ ಆ ಧ್ವನಿ ‘ಇನ್ನು ಸಹಿಸಲಾರೆ’ ಎಂಬಂತೆ ಅಂದು ಸುದೀರ್ಘ ಮೌನ ಮುರಿದು ಮಾತಾಡಿತ್ತು. ಅವಳಿಗೆ ಆ ಧ್ವನಿಯ ಪರಿಚಯವಿದ್ದರೆ ತಾನೇ ಅವಳು ಅದನ್ನು ಗುರುತಿಸುವುದು..? ಅವಳೊಳಗಿನ ಆ ಧ್ವನಿಯನ್ನು ಅವಳು ಈ ಮೊದಲು ಎಂದೂ ಆಲಿಸಿರಲಿಲ್ಲ. ಇಂದು ಕೇಳಲು ‘ಮನಸ್ಸು’ ಮಾಡಿದಳು. ಧ್ವನಿ ಮಾತಾಡಿತು, ಅವಳು ಕಿವಿಯಾದಳು.

**********

‘ಸುಂದರವಾಗಿ ಅರಳಿರುವ ಆ ಹೂವನ್ನು ನೋಡು… ತಂಗಾಳಿಗೆ ಮುಖವೊಡ್ಡಿ ಮನ ತೆರೆದು ನಗುತಿದೆ. ದಿನದ ಸ್ವಾಗತಕ್ಕಾಗಿ ಹಗುರಾಗಿ ಎದೆ ತೆರೆದು ನಿಂತಿದೆ. ನೀನೂ ಆ ಹೂವಿನಂತೆ ದಿನವನ್ನು ಸಂತೋಷದಿಂದ ಸ್ವಾಗತಿಸಲಾರೆಯಾ..? ಹೊಸದಾದ ತಂಗಾಳಿಗೆ ನಿನ್ನ ಮನದ ಮನೆಯ ಬಾಗಿಲು ತೆರೆಯಲಾರೆಯಾ..?’
ಧ್ವನಿ ಕೇಳಿತು
ಅವಳು ‘ಹೂಂ’ ಗುಟ್ಟಿದಳು
“ಆದರೆ ಸಂಜೆಗೆ ಈ ಹೂ ಬಾಡಿ ಹೋಗಿ ಬಿಡುವುದು…” ಎಂದಳು
“ಒಂದು ಹೂ ಅರಳಿ ಸಂಜೆಗೆ ಬಾಡಿದ ಮಾತ್ರಕ್ಕೆ ಗಿಡ ಹೂ ತಳೆಯುವುದನ್ನೇ ನಿಲ್ಲಿಸಿ ಬಿಡುವುದೇ…?
ಅವಳು ಮಾತಾಡಲಿಲ್ಲ.

“ದಿನ ದಿನವೂ ಗಿಡ ಇನ್ನಷ್ಟು ಹೂ ತಳೆಯುವುದು ದಿನದಿನವೂ ಹೊಸಗಾಳಿಗೆ ಹೊಸ ಚೇತನಕ್ಕೆ ಮೈ ತೆರೆದು ಕೊಳ್ಳುವುದು”
ಅವಳು ಕೇಳುತ್ತಿದ್ದಳು.
“ಹೂ ಅರಳುವುದೆಂದರೆ ಏನು ಗೊತ್ತೆ…?”
“ಏನು..?”
“ಹೃದಯ ಮತ್ತು ಮನಸ್ಸು ತೆರೆದು ಸೂರ್ಯ ರಶ್ಮಿಯನ್ನು ಬರಮಾಡಿ ಕೊಳ್ಳುವುದು”
” ಈ ಹೂವಿನ ಹಾಗೇನಾ…” ಅವಳೆಂದಳು

“ಈ ಪುಟ್ಟ ಗಿಡ ದಿನ ದಿನವೂ ಮಾಡುವ ಈ ಕಾರ್ಯವನ್ನು ಇಲ್ಲಿಯವರೆಗೆ ನೀನು ಒಮ್ಮೆಯೂ ಮಾಡದೇ ಹೋದೆಯಲ್ಲಾ…? ” ಧ್ವನಿ ಛೇಡಿಸಿತು
ಅವಳು ಕಣ್ಣು ರೆಪ್ಪೆ ಬಡಿಯದೇ ಆ ಹೂವನ್ನೇ ನೋಡಿದಳು.
“ಅರಳುವುದು ಎಂಬುದು ಸದಾ ನಡೆಯುತ್ತಲೇ ಇರುವ ನಡೆಯುತ್ತಲೇ ಇರಬೇಕಾದ ಕಾರ್ಯ”
ಅವಳಿಗೆ ಏನೂ ಅರ್ಥವಾಗಲಿಲ್ಲ ಸುಮ್ಮನೆ ಹೂಂ ಗುಟ್ಟಿದಳು.
“ಏಕೆ?” ಅವಳ ಪ್ರಶ್ನೆ.
“ಪ್ರತಿ ದಿನವೂ ಹೊಸದಾಗಿ ಅರಳಿದರೆ ಅನಂತ ಸಾಧ್ಯತೆಗಳು ನಿನ್ನ ಮುಂದೆ ತೆರೆದು ಕೊಳ್ಳುವುದು ಮತ್ತು ನೀನು ಯಾವುದನ್ನು ಬೇಕಾದರೂ ಆರಿಸಿಕೊಳ್ಳ ಬಹುದು.”
” ನಾನು ಯಾವುದನ್ನು ಬೇಕಾದರೂ ಆರಿಸಿಕೊಳ್ಳಬಹುದೇ…?” ಮಗುವಿನಂಥಾ ಆಸೆಯ ಕಂಗಳಿಂದ ಅವಳು ಕೇಳಿದಳು.
” ಹೂಂ… ಯಾವುದು ಬೇಕಾದರೂ…. ಆದರೆ ನೀನು ದಿನದಿನವೂ ಅರಳ ಬೇಕಷ್ಟೇ…”
ಎಂದಿತು ಧ್ವನಿ.
“ಹೂಂ… ಸರಿ” ಒಪ್ಪಿಕೊಂಡಳು ಅವಳು.
“ಆದರೆ ಈ ಅನಂತ ಸಾಧ್ಯತೆಗಳಿಂದ ನಾನೇನು ಮಾಡಬಹುದು? ಇದೇಕೆ ನನಗೆ ಬೇಕು…?” ಅವಳ ಸಂದೇಹ
“ನಿನ್ನಿಷ್ಟದ ಸಾಧ್ಯತೆಗೆ ನಿನ್ನನ್ನೊಡ್ಡಿಕೊಂಡು, ನಿನ್ನನ್ನು ನೀನು ಅರಿತು ಕೊಳ್ಳಲು ಈಗಿರುವುದಕ್ಕಿಂಥಾ ಇನ್ನೂ ಹೆಚ್ಚಾಗಿ ಅರಿತು ಕೊಳ್ಳಲು…
“ನಿನ್ನ ಸುತ್ತಲಿನವರನ್ನು ಅರಿತುಕೊಳ್ಳಲು…”
“ಪ್ರಕೃತಿಯನ್ನೂ ಗಿಡ ಮರ ಪ್ರಾಣಿ ಪಕ್ಷಿವಸ್ತುಗಳನ್ನು ಅರಿತುಕೊಳ್ಳಲು…”
“ಅರಿತು ಕೊಳ್ಳುವುದೆಂದರೇನು..?”
ಹೊಸ ಗೊಂದಲವಾಯಿತು ಅವಳಿಗೆ

“ಹೊಸ ದೃಷ್ಟಿಯಿಂದ ಹೊಸ ಬೆಳಕಲ್ಲಿ ನೋಡುವುದು” ವಿವರಿಸಿತು ಧ್ವನಿ
“ನೋಡಿದ ಹೊಸ ಬೆಳಕಲ್ಲಿ ಮಿಂದು ನಿನ್ನನ್ನು ನೀನು ತಿದ್ದಿ ತೀಡಿ ಕೊಳ್ಳುವುದು… ತಿದ್ದಿ ತೀಡಿ ಚೆಂದಗೊಳಿಸಿ ಕೊಳ್ಳುವುದು ಬರೀ ತನುವಿಗಷ್ಟೇ ಸಾಕು ಎಂದು ಭಾವಿಸಿದೆಯಾ…” ಕೇಳಿತು ಧ್ವನಿ

ಅವಳು ರೆಪ್ಪೆ ಅಲುಗಿಸದೆ ಕೆಳತುಟಿ ಕಚ್ಚುತ್ತಲೊಮ್ಮೆ ಯೋಚಿಸಿದಳು…

“ಉಹುಂ… ಮನವನ್ನೂ ಹೊಸ ಬೆಳಕಿನ ಪ್ರಭೆಯಲ್ಲಿ ಚೆಂದಗಾಣಿಸಿಕೊಂಡು ಪುಟವಿಟ್ಟ ಬಂಗಾರವಾಗುವುದು, ಸ್ಪರ್ಶ ಮಣಿಯಾಗುವುದು. ಆ ಬೆಳಕಿನ ಹೊಳೆಯಲ್ಲಿ ಹಿತವಾಗಿ ತೇಲಿ ಹಗುರಾಗುವುದು ಹಾಗೆ ಹಗುರಾಗಿ ಮೇಲೇರುವುದು…”

ಕ್ಷಣ ಕಾಲ ಮೌನ…
“ಹೊಸ ಬೆಳಕು ..? ಅದೆಲ್ಲಿಂದ ಬರುತ್ತದೆ..?” ತಟ್ಟನೆ ಕೇಳಿದಳವಳು.
“ನಾನು ಹೇಳುವುದಿಲ್ಲ. ನೀನೇ ಯೋಚಿಸಿ ಹೇಳು” ಸವಾಲು ಹಾಕಿತು ಧ್ವನಿ.
ಮತ್ತೆ ಮೌನದ್ದೇ ಸಾಮ್ರಾಜ್ಯ. ತಂಗಾಳಿ ಮೆಲ್ಲನೆ ಬೀಸಿತು. ಹೂ ನಸು ನಕ್ಕು ತಲೆ ಅಲುಗಿಸಿತು.
ಅವಳು ಕೆಲಕಾಲ ಯೋಚಿಸಿ ನಿಧಾನವಾಗಿ ಹೇಳಿದಳು
“ಸೂರ್ಯ ರಶ್ಮಿಯಿಂದ ಬೆಳಕು ಬರುತ್ತದೆ”
“ಆಮೇಲೆ?” ಕೇಳಿತು ಧ್ವನಿ
“ಆದರೆ ನಾನು ಹೃದಯ ಮನಸ್ಸು ತೆರೆದು ಸೂರ್ಯ ರಶ್ಮಿಯನ್ನು ಬರಮಾಡಿ ಕೊಳ್ಳಬೇಕು”ಅವಳ ಕಣ್ಣುಗಳಲ್ಲೀಗ ಮಂದಹಾಸ
“ಈ ಹೂವಿನ ಹಾಗೇ…” ಎಂದಿತು ಆ ಧ್ವನಿ
ಅವಳು ನಸು ನಕ್ಕಳು
“ಹಾಗೆ ಬರ ಮಾಡಿಕೊಳ್ಳುವುದಕ್ಕೆ ಏನೆನ್ನುತ್ತಾರೆ?” ಧ್ವನಿ ತುಂಟತನದಿಂದ ಪ್ರಶ್ನಿಸಿತು
“ಅರಳುವುದು”ಅವಳು ಅಷ್ಟೇ ತುಂಟ ನಗುವಿನಿಂದ ಉತ್ತರಿಸಿದಳು
“ಅಲ್ಲಿಗೆ ನಾವು ಒಂದು ಸುತ್ತು ಬಂದೆವು” ಎಂದಿತು ಧ್ವನಿ

********

“ಈ ಹೂವಿನ ಹೃದಯದಲ್ಲೊಮ್ಮೆ ಇಣುಕಿ ನೋಡು” ಧ್ವನಿ ಹೇಳಿತು.
“ನೀಲಿ ಮೋಡಗಳು… ಮಂದ ಮಾರುತ… ಸೂರ್ಯ ರಶ್ಮಿ… ಖನಿಜಗಳು… ಕಾಲ… ಭೂಮಿ…. ಇಡೀ ಬ್ರಹ್ಮಾಂಡವೇ ಕಾಣ ಬರುತ್ತದೆ… ಮೋಡಗಳಿಲ್ಲದೇ ಮಳೆ ಇಲ್ಲ ಮಳೆ ಇಲ್ಲದೆ ಹೂವೇ ಇಲ್ಲ ಹಾಗೆ ನೋಡಿದರೆ ಭೂಮಿಯ ನೆಲೆ ಇಲ್ಲದೆ, ಕಾಲದ ನೆರವಿಲ್ಲದೆ ಹೂ ತಾನೇ ಹೇಗೆ ಅರಳೀತೂ? ಹೂ ಕೇವಲ ಹೂವಷ್ಟೇ ಅಲ್ಲ. ಅದು ಇಡೀ ಬ್ರಹ್ಮಾಂಡವನ್ನೇ ಒಳಗೊಂಡಿದೆ. ಬ್ರಹ್ಮಾಂಡದ ಅಗಣಿತ ಅಂಶಗಳ ಮೇಲೇ ಪೂರ್ತಿ ಅವಲಂಬಿತವಾಗಿದೆ… ಹೀಗೆ ಅವಲಂಬಿತವಾದ ಹೂವಿಗೆ ತನ್ನ ಸ್ವಾತಂತ್ರ್ಯವೆಂಬುದು ಇಲ್ಲವೇ ಇಲ್ಲ ಎಂದು ಅನ್ನಿಸುತ್ತದೆ ಯಲ್ಲವೇ?”, ಅವಳು “ಹೌದು” ಎಂದಳು

“ಆದರೆ ಈ ಹೂವಿನ ದಳಗಳ ಬಣ್ಣವನ್ನೂ, ಅದರ ಸುಕೋಮಲತೆಯನ್ನೂ, ಬಾಗಿದ ಅದರ ಮಾಟವನ್ನೂ, ಜೇನು ತುಂಬಿದ ಹೃದಯವನ್ನೂ ನೋಡು. ನಾಳೆಗಳನ್ನು ತಿದ್ದಿ ತೀಡುವ ಹುರುಪಿನಿಂದ ಠೀವಿಯಿಂದ ಲಾಸ್ಯ ವಾಡುತ್ತಾ ನಿಂತಿರುವ ಇದನ್ನು ನೋಡಿದರೆ ಇದು ಸುಂದರ, ಸ್ವತಂತ್ರ ಅನ್ನಿಸುವುದಿಲ್ಲವೇ…”
ಅವಳು ಆಗಲೂ “ಹೌದು” ಎಂದಳು
“ಹೀಗೆ ಒಂದೇ ಕಾಲಕ್ಕೆ ಇದು ಸ್ವಾತಂತ್ರ್ಯವಿಲ್ಲದ್ದೂ ಹೌದು… ಸ್ವತಂತ್ರವಾದುದ್ದೂ ಹೌದು” ಹೇಳಿತು ಧ್ವನಿ. ಅವಳ ಮನಸ್ಸೀಗ ಶಾಂತ ಪ್ರಶಾಂತವಾಗಿತ್ತು….

“ಅರ್ಥವಾಯಿತೇ.?”
“ಹೂಂ.. ಅರ್ಥವಾಯಿತು”

*********

ನಂತರ ಅವಳು ಅವಳಾಗಿ ಉಳಿಯಲಿಲ್ಲ. ಅದೊಂದು ಹೊಸ ಹುಟ್ಟು… ಅವಳೊಳಗಿನ ಚೇತನದ ಹೊಸ ಜನ್ಮ… ಹಳೆಯ ಕೊಳೆ ಕಳೆದ ಪುನೀತ ಗಂಗಾಸ್ನಾನ… ಕಗ್ಗತ್ತಲಿನ ಮಹಾಸುರಂಗದ ಆ ತುದಿಯಲ್ಲೊಂದು ಬೆಳಕಿನ ಕಿರಣದ ದರ್ಶನ… ಹೊಸ ಶೈಶವ ಪಡೆದ ಅವಳು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಮುಂದೆ ಮುಂದೆ ಸಾಗುತ್ತಿರಲು…

********

ಅವಳೀಗ ಕಲ್ಯಾಣಿಯ ಅಂಚಿನಲ್ಲಿ ಕೂತು ತಂಪಾದ ನೀರಿನಲ್ಲಿ ಕಾಲು ಇಳಿಬಿಟ್ಟರೆ ಮೀನುಗಳು ಕಚ್ಚಿದಾಗ ಕಚಗುಳಿ ಆಗುತ್ತದೆ. ಜೊತೆಗೆ ಮೀನುಗಳ ಕಿಲಕಿಲ ನಗು ಕೇಳುತ್ತದೆ. ತಂಗಾಳಿಯಲ್ಲಿ ತೂಗುವ ಮಾಂದಳಿರ ನೆರಳಲ್ಲಿ ಆಡುವ ಹಾಡುವ ಮಕ್ಕಳ ಹಾಡು ಮನಸ್ಸಿಗೆ ಮುದ ತರುತ್ತದೆ. ಒಮ್ಮೆಮ್ಮೆ ತಾನೂ ಮಕ್ಕಳೊಂದಿಗೆ ಮಗುವಾಗಿ ದನಿ ಬೆರೆಸುತ್ತಾಳೆ. ಸಮುದ್ರ ತೀರದ ಬಂಗಾರದ ಬಣ್ಣದ ಸಾವಿರ ಬೆಳಕಿನ ಚಿತ್ತಾರ ತೆರೆತೆರೆಯಾಗಿ ಅವಳ ಮನದ ನಲಿವಿನ ಪಾತ್ರೆ ತುಂಬಿಸುತ್ತದೆ. ಹಸಿರು ಗದ್ದೆಯ ಗಿಣಿಯ ಮೈ ಬಣ್ಣದ ಗರಿಗಳನ್ನು ಅವಳು ನೋಟದಲ್ಲೇ ಮುದ್ದಿಸುತ್ತಾಳೆ. ಮುತ್ತಿನ ಮಣಿಯಂಥಾ ನೀರುಳ್ಳ ಚಂದ್ರಕಾಂತಿ ಬೀರುವ ಬಿಳಿದಾವರೆ, ಹಂಸದಿಂದ ತುಂಬಿದ ಕೊಳವು ಅವಳಲ್ಲಿ ಪ್ರಶಾಂತತೆ ತುಂಬುತ್ತದೆ. ಹಸಿರು ಮೇಖಲೆ ಧರಿಸಿ ಸೂರ್ಯನ ಬೆಳಕಲ್ಲಿ ಬೆಳ್ಳಿಯಾಗಿ ಬಂಗಾರವಾಗಿ ಹೊಳೆವ ಧೀರ ಗಂಭೀರ ಪರ್ವತ ಶ್ರೇಣಿಯ ದೃಶ್ಯದಿಂದ ಅವಳ ಮನ ಶಾಂತಿಯಿಂದ ಆನಂದದಿಂದ ತುಂಬಿ ಬರುತ್ತದೆ.

ಅವಳ ಮನೆಯ ಅಂಗಳದಲ್ಲಿ ದಿನ ದಿನವೂ ಅರಳುವ ಹೂವಿನಂತೆ ಅವಳೂ ದಿನ ದಿನವೂ ಅರಳುತ್ತಾಳೆ.

*********

ಮನೆಯ ಮುಂದೆ ಅಂಗಳವೂ, ಗಿಡವೂ, ಹೂವೂ ಇಲ್ಲದವರಿಗೊಂದು ಮಾತು. ಇದು ನಮ್ಮ ನಮ್ಮಲ್ಲೇ ಇರಲಿ.

ನೀವು ತರಕಾರಿ ಅಂಗಡಿಗೆ ಹೋದಾಗ ನಿಮ್ಮಾಕೆ ಹೇಳಿದಳೆಂದು ಕೊತ್ತಂಬರಿ ಸೊಪ್ಪು ಕೊಳ್ಳುತ್ತೀರಲ್ಲವೇ? ಒಂದು ಕಟ್ಟು ಕೊತ್ತಂಬರಿ ಸೊಪ್ಪು ಎತ್ತಿ ಅದು ಬಾಡಿದೆಯೇ ಕೊಳೆತಿದೆಯೇ ಎಂದು ತಿರುಗಿಸಿ ತಿರುಗಿಸಿ ನೋಡಿ ‘ಎಷ್ಟಮ್ಮಾ..?’ ಎಂದು ಕೇಳುವ ಹೊತ್ತಿನಲ್ಲಿ ಹೀಗೆ ಮಾಡಿ…

ಕೊತ್ತಂಬರಿ ಗಿಡವನ್ನಷ್ಟು ಗಮನಿಸಿ “ಇದು ನಾಳೆ ದೋಸೆಗೆ ಚಟ್ನಿಯಾಗುವ ಸರಕು ಅಷ್ಟೇ…” ಎಂದು ದಯವಿಟ್ಟು ತಾತ್ಸಾರ ಮಾಡಬೇಡಿ ನಿಧಾನವಾಗಿ ನೋಡಿ… ಅದರ ಎಳೆ ಹಸುರಿನ ಕಾಂಡವೆಷ್ಟು ಮೃದುವಾಗಿದೆ… ಪಚ್ಚೆ ಬಣ್ಣದ ಅದರ ಎಲೆಯನ್ನು ದಿಟ್ಟಿಸಿ ನೋಡಿ.. ಆಕಾಶದಲ್ಲಿ ಗರಿ ಬಿಚ್ಚಿ ಹಾರುವ ಹಕ್ಕಿಯ ಚಿತ್ತಾರದ ರೆಕ್ಕೆಯಂತಿರುವ ಆ ಎಲೆಯ ಸೊಬಗೇ ಸೊಬಗು ಅಲ್ಲವೇ..? ಪ್ರತಿ ಎಲೆಯದೂ ಹೊಸ ಆಕಾರ… ಹೊಸ ಚಿತ್ತಾರ.. ಅಪರೂಪಕ್ಕೊಮ್ಮೆ ಠೀವಿಯಿಂದ ಕೊರಳು ಕೊಂಕಿಸಿ ನಿಂತ ಅಚ್ಚ ಬಿಳಿ ಬಣ್ಣದ ಹೂವಿನ ದರ್ಶನವೂ ಆಗಬಹುದು ನಿಮಗೆ.
ಪ್ರಯಾತ್ನಿಸುತ್ತೀರಾ..? ದಯವಿಟ್ಟು ಒಮ್ಮೆ ಪ್ರಯತ್ನಿಸಿ…

********

ಓದುಗ ಮಹಾಶಯ,
ನಾನು ಈ ಕಥೆಗೆ ಮೊದಲು “ನಮ್ಮ ಮನೆಯಂಗಳದಿ ಬೆಳೆದೊಂದು ಹೂವು”ಎಂಬ ಹೆಸರಿಡಬೇಕೆಂದಿದ್ದೆ. ನಂತರ ಇದು ನಿಮ್ಮ ಮನೆಯ ಅಂಗಳದಲ್ಲೂ ಬೆಳೆಯಬಹುದಾದ ಹೂವೆಂದು ಅರಿವಾಯಿತು. ನಿಮ್ಮ ಮನೆಯ ಹೂವಿಗೆ ನಾನು ಹೇಗೆ ಹೆಸರಿಡುವುದು..? ನಿಮ್ಮ ಮನೆಯಂಗಳದ ಹೂವಿಗೆ ನೀವು ಹೆಸರಿಡುವುದೇ ಸರಿ ಅನ್ನಿಸಿತು ನೀವೂ ಒಪ್ಪುತ್ತೀರಲ್ಲವೇ…?
ಅದಕ್ಕೇ ಕೊನೆಗೆ ನಾನಿದನ್ನು “ಹೆಸರಿಲ್ಲದ ಕಥೆ “ಎಂದೇ ಕರೆದೆ
ಇನ್ನು ಮಿಕ್ಕಿದ್ದು ನಿಮ್ಮ ಚಿತ್ತ…