ಪ್ರಸನ್ನ ಬೋಲಿಂಗ್‌ನಲ್ಲಿ ಎಷ್ಟು ಪ್ರಭಾವಶಾಲಿಯಾಗಿದ್ದರೆಂದರೆ ಅವರು ಬೋಲರ್‌ಗಿಂತ ಒಬ್ಬ ಬಾಲ್ ಹಿಡಿದ ಚೆಸ್ ಆಟಗಾರ ಎಂದು ಆಫ್ ಸ್ಪಿನ್ನರ್ ಮ್ಯಾಲೆಟ್ ಹೇಳುತ್ತಾರೆ. ಅವರ ಎದುರಿಗೆ ಆಡಿದ ಮಾಜಿ ಆಸ್ಟ್ರೇಲಿಯಾದ ನಾಯಕ ಇಯನ್ ಛಾಪೆಲ್ ಪ್ರಸನ್ನರನ್ನು ಪ್ರಪಂಚದ ಅತ್ಯಂತ ಸುಪ್ರಸಿದ್ಧಿ ನಂಬರ್ 1 ಬೋಲರ್ ಎಂದು ಘೋಷಿಸಿದರು. ಬಹಳ ಆಟಗಾರರು ಅವರನ್ನು ಮಾಂತ್ರಿಕ ಎಂದೂ ಕರೆದಿದ್ದಾರೆ. ಅವರು ತಲೆಯಲ್ಲೇ ಬ್ಯಾಟ್ಸ್ಮನ್‌ರನ್ನ ಹೇಗೆ ಔಟ್ ಮಾಡಬೇಕೆಂದು ರೂಪುರೇಶೆಯನ್ನು ಹಾಕಿ ಒಬ್ಬ ಚೆಸ್ ಆಟಗಾರನ ರೀತಿ ಚಾಣಾಕ್ಷನ ತರಹ ಅವರ ಎದುರಾಳಿಯನ್ನು ಅವರ ವಶಕ್ಕೆ ತೆಗೆದುಕೊಳ್ಳುತ್ತಿದ್ದರು!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ

ಕ್ರಿಕೆಟ್‌ನಲ್ಲಿ ಭಾರತ ಮುಂಚಿನಿಂದಲೂ ಸ್ಪಿನ್ನರ್‌ಗಳಿಗೆ ಪ್ರಸಿದ್ಧಿಯಾಗಿತ್ತು, ಇತ್ತೀಚೆಗೆ ಕಳೆದ 20 ವರ್ಷದಿಂದ ವೇಗವಾಗಿ ಮಾಡುವ ಬೋಲರ್‌ಗಳೂ ಬಂದಿದ್ದಾರೆ. ಆದರೂ ಈಗಲೂ ಸ್ಪಿನ್ನರ್‌ಗಳಿಗೆ ಭಾರತ ಅಷ್ಟೇ ಪ್ರಸಿದ್ಧಿ. ಅವರ ಬೋಲಿಂಗ್ ಈಗಲೂ ಅಷ್ಟೇ ಪರಿಣಾಮಕಾರಿ. ಐವತ್ತರ ದಶಕದಲ್ಲಿ ವಿನೂ ಮಂಕಡ್, ಸುಭಾಷ್ ಗುಪ್ತೆ ಮತ್ತು ಗುಲಾಂ ಮಹಮದ್ ಭಾರತಕ್ಕೆ ಆಡಿದ ಸ್ಪಿನ್ನರ್‌ಗಳಲ್ಲಿ ಹೆಸರುವಾಸಿಯಾಗಿದ್ದರು. ವಿನೂ ಮಂಕಡ್ ಬ್ಯಾಟಿಂಗ್ ಮತ್ತು ಬೋಲಿಂಗ್ ಎರಡರಲ್ಲೂ ಪ್ರಖ್ಯಾತಿ ಹೊಂದಿ ಒಳ್ಳೆ ಆಲ್ ರೌಂಡರ್ ಆಗಿದ್ದರು.

ಇಂಗ್ಲೆಂಡಿನಲ್ಲಿ 1952ರ ಲಂಡನ್‌ನ ಲಾರ್ಡ್ಸ್‌ ಟೆಸ್ಟಿನಲ್ಲಿ ಎಡಗೈ ಸ್ಪಿನ್ನರ್ ಆದ ಮಂಕಡ್ ಸೆಂಚುರಿ ಹೊಡೆದು ಎರಡು ಇನ್ನಿಂಗಿನಲ್ಲೂ ವಿಕೆಟ್ ತೆಗೆದರು. ಮಂಡಕ್‌ರ ಹೆಸರು ಲಾರ್ಡ್ಸ್‌ನ ಹೆಸರುವಾಸಿಯಾದ ‘ಬೋಲಿಂಗ್ ಮತ್ತು ಬ್ಯಾಟಿಂಗ್‌ನ ಪಟ್ಟಿಯಲ್ಲಿ’ ಬಂದ ಮೊದಲ ಭಾರತೀಯರು. ಇಂಗ್ಲೆಂಡಿನ ವಿರುದ್ದ ಬೋಲಿಂಗ್‌ನಲ್ಲಿ 5 ವಿಕೆಟ್ ತೆಗೆದು ಅಲ್ಲಿನ ವಿಶೇಷ ಕನಿಷ್ಟ 5 ವಿಕೆಟ್ ತೆಗೆದವರ ಬೋಲಿಂಗ್‌ನ ಪಟ್ಟಿಯಲ್ಲಿ ಅವರ ಹೆಸರು ಬಂತು. ಮಂಕಡ್ ಮೊದಲನೇ ಇನ್ನಿಂಗ್ಸ್‌ನ ಬ್ಯಾಟಿಂಗ್‌ನಲ್ಲಿ 72 ರನ್ ಹೊಡೆದು ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ವಿಕೆಟ್ಟುಗಳು ಬೀಳುತ್ತಿದ್ದಾಗ 184 ರನ್ ಹೊಡೆದು ಅವರ ಪ್ರತಿಭೆಯನ್ನು ತೋರಿಸಿದರು. ಅವರ ಹೆಸರು ಬ್ಯಾಟಿಂಗ್‌ನಲ್ಲೂ ಸೆಂಚುರಿ ಹೊಡೆದವರ ಪಟ್ಟಿಯಲ್ಲಿ ಸೇರಿತು. ಇಷ್ಟಾದರೂ ಭಾರತ ಸೋಲನ್ನು ಅನುಭವಿಸಬೇಕಾಯಿತು. ಆದರೂ ಅದು ‘ಮಂಕಡ್ ಟೆಸ್ಟ್’ ಎಂದು ಹೆಸರುವಾಸಿಯಾಯಿತು.

(ವಿನೂ ಮಂಕಡ್)

ಮಂಕಡ್ ನ್ಯೂಜಿಲೆಂಡಿನ ವಿರುದ್ಧ ಪಂಕಜ್ ರಾಯ್ ಜೊತೆ ಜನವರಿ 1956ರಲ್ಲಿ ಮೊದಲನೇ ವಿಕೆಟ್‌ಗೆ 413 ರನ್ ಹೊಡೆದು ವಿಶ್ವ ದಾಖಲೆಯನ್ನು ಮಾಡಿದರು. ಮಂಕಡ್ 231 ರನ್ ಹೊಡೆದು ಡಬಲ್ ಸೆಂಚುರಿ ಹೊಡೆದ ಎರಡನೇಯ ಭಾರತೀಯರಾದರು.

ಆಗಿನ ಕಾಲದಲ್ಲಿ ಸುಭಾಷ್ ಗುಪ್ತೆ ಬಹಳ ಒಳ್ಳೆ ಲೆಗ್ ಸ್ಪಿನ್ನರ್. ಅವರು ಒಂದು ಮ್ಯಾಚಿನಲ್ಲಿ 9 ವಿಕೆಟ್ ತೆಗೆದುಕೊಂಡವರ ಭಾರತದ ಮೊದಲ ಬೋಲರ್. ಪ್ರಪಂಚದ ಪ್ರಸಿದ್ಧ ಬ್ಯಾಟ್ಸ್ಮನ್‌ರನ್ನು ಅವರು ಔಟ್ ಮಾಡಿ ಆ ಕಾಲದ ಶ್ರೇಷ್ಟ ಬೋಲರ್‌ರಲ್ಲಿ ಒಬ್ಬರಾಗಿದ್ದರು. ಹೈದರಾಬಾದಿನ ಗುಲಾಂ ಮಹಮ್ಮದ್‌ ಆಫ್- ಸ್ಪಿನ್ನರ್ ಆಗಿ ಭಾರತದ ತಂಡಕ್ಕೆ ನಾಯಕರಾಗಿದ್ದರು.

*****

ಇದಾದಮೇಲೆ 1965ರಿಂದ ಸುಮಾರು 20 ವರ್ಷಗಳ ಕಾಲ ನಾಲಕ್ಕು ಸ್ಪಿನ್ನರ್‌ಗಳು ಭಾರತದ ಬೋಲಿಂಗ್‌ನ ನಾಯಕತ್ವ ವಹಿಸಿ ಎಷ್ಟೋ ಮ್ಯಾಚುಗಳನ್ನು ಗೆಲ್ಲಲು ಕಾರಣರಾದರು. ಏಕ ಕಾಲಕ್ಕೆ, ಸಮಕಾಲೀನರಾಗಿ ಭಾರತದಲ್ಲಿ ಮತ್ತು ಬೇರೆ ದೇಶಗಳಲ್ಲೂ ನಮ್ಮ ವಿಜಯಭೇರಿ ಮೊಳಗಲು ಕಾರಣರಾಗಿದ್ದರು. ‘ಸ್ಪಿನ್ ಕ್ವಾರ್ಟೆಟ್’ ಎಂದು ಪ್ರಸಿದ್ಧಿಯಾದ ಪ್ರಸನ್ನ, ಬೇಡಿ, ಚಂದ್ರಶೇಖರ್ ಮತ್ತು ವೆಂಕಟರಾಘವನ್ ಅವರ ಬೋಲಿಂಗ್ ಎಷ್ಟೋ ಸರ್ತಿ ಹೊಸ ಬಾಲಿನಲ್ಲಿ ಇನ್ನೂ ಹೊಳಪಿರುವಾಗಲೇ ಇನ್ನಿಂಗ್ಸ್ ಶುರುವಿನಿಂದಲೇ ಕ್ಯಾಪ್ಟನ್‌ಗಳು ಉಪಯೋಗಿಸುತ್ತಿದ್ದರು. ಬಹಳ ವರ್ಷಗಳ ಕಾಲ – ಅಂದರೆ ಕಪಿಲ್ ದೇವ್ ಬರುವ ತನಕ – ಭಾರತದಲ್ಲಿ ಹೊಸ ಬಾಲಿನಲ್ಲಿ ಓಡಿಬಂದು ಮಾಡುವ ಫಾಸ್ಟ್ ಬೋಲರ್‌ಗಳೇ ಇರಲಿಲ್ಲ! ಇದೊಂದು ಸೋಜಿಗ ಹಾಗೂ ಶೋಚನೀಯ ಸ್ಥಿತಿಯಾಗಿತ್ತು. ಅಬಿದ್ ಆಲಿ, ಸೋಲ್ಕರ್ ಕೊನೆಗೆ ಸುನಿಲ್ ಗವಾಸ್ಕರ್ ಕೂಡ ವೇಗವಾಗಿ ಮಾಡುವ ಬೋಲರ್ ಆಗಿದ್ದರು ಎಂದರೆ ನೀವೇ ಊಹಿಸಿಕೊಳ್ಳಿ ಎಂಥಹ ಅಧೋಗತಿಗೆ ಇಳಿದಿತ್ತು ನಮ್ಮ ವೇಗದ ಬೋಲಿಂಗ್! ವಿಧಿಯಿಲ್ಲದೆ ನಾಯಕರಾದ ನವಾಬ್ ಪಟೌಡಿ, ವಾಡೆಕರ್ ಹೊಸ ಬಾಲನ್ನು ಉಜ್ಜಿ ಅದರ ಹೊಳಪನ್ನು ತೆಗೆದು, ಸ್ಪಿನ್ನರ್‌ಗಳಿಗೆ ಬಾಲನ್ನು ಆರಂಭದಲ್ಲೇ ಕೊಡುತ್ತಿದ್ದರು! ಇದರಲ್ಲಿ ಪ್ರಸನ್ನ ಮತ್ತು ಚಂದ್ರಶೇಖರ್ ಕರ್ನಾಟಕದವರು. ಬೇಡಿ ಮತ್ತು ವೆಂಕಟರಾಘವನ್ ಮುಂದೆ ಭಾರತದ ನಾಯಕತ್ವವನ್ನು ವಹಿಸಿಕೊಂಡಿದ್ದರು.

ಪ್ರಸನ್ನ 1962 ಇಂಗ್ಲೆಂಡಿನ ವಿರುದ್ಧ ಅವರ ಟೆಸ್ಟ್ ಕ್ರಿಕೆಟ್ ಜೀವನವನ್ನು ಶುರುಮಾಡಿದರು. ಅವರ ಬೋಲಿಂಗ್‌ನಲ್ಲಿ ಎಷ್ಟು ಪ್ರಭಾವಶಾಲಿಯಾಗಿದ್ದರೆಂದರೆ ಅವರು ಬೋಲರ್‌ಗಿಂತ ಒಬ್ಬ ಬಾಲ್ ಹಿಡಿದ ಚೆಸ್ ಆಟಗಾರ ಎಂದು ಆಫ್ ಸ್ಪಿನ್ನರ್ ಮ್ಯಾಲೆಟ್ ಹೇಳುತ್ತಾರೆ. ಅವರ ಎದುರಿಗೆ ಆಡಿದ ಮಾಜಿ ಆಸ್ಟ್ರೇಲಿಯಾದ ನಾಯಕ ಇಯನ್ ಛಾಪೆಲ್ ಪ್ರಸನ್ನರನ್ನು ಪ್ರಪಂಚದ ಅತ್ಯಂತ ಸುಪ್ರಸಿದ್ಧಿ ನಂಬರ್ 1 ಬೋಲರ್ ಎಂದು ಘೋಷಿಸಿದರು. ಬಹಳ ಆಟಗಾರರು ಅವರನ್ನು ಮಾಂತ್ರಿಕ ಎಂದೂ ಕರೆದಿದ್ದಾರೆ. ಅವರು ತಲೆಯಲ್ಲೇ ಬ್ಯಾಟ್ಸ್ಮನ್‌ರನ್ನ ಹೇಗೆ ಔಟ್ ಮಾಡಬೇಕೆಂದು ರೂಪುರೇಶೆಯನ್ನು ಹಾಕಿ ಒಬ್ಬ ಚೆಸ್ ಆಟಗಾರನ ರೀತಿ ಚಾಣಾಕ್ಷನ ತರಹ ಅವರ ಎದುರಾಳಿಯನ್ನು ಅವರ ವಶಕ್ಕೆ ತೆಗೆದುಕೊಳ್ಳುತ್ತಿದ್ದರು! ಬಾಲಿಗೆ ದಾರ ಕಟ್ಟಿದ ಹಾಗೆ ಅದನ್ನು ಹಿಂದೆ, ಮುಂದೆ, ಹಾಕಿ ಬ್ಯಾಟ್ಸ್ಮನ್ಗೆ ಮುಂದೆ ಈತ ಏನು ಹಾಕುತ್ತಾನೋ ಎಂಬ ಗೊಂದಲದಲ್ಲಿ ಸಿಕ್ಕಿಸಿ ಅವರನ್ನು ಬಲೆಯಲ್ಲಿ ಹಾಕಿ ಅವರೇ ಅದರಿಂದ ತಪ್ಪಿಸಿಕೊಳ್ಳಲು ಹೋಗಿ, ತಪ್ಪನ್ನು ಮಾಡಿ ಔಟಾಗಿ ಎಂತಹ ಕೆಲಸ ಮಾಡಿಬಿಟ್ಟೆ ಎಂದು ತಲೆ ಚಚ್ಚಿಕೊಂಡು ಹೋದವರೇ ಬಹಳ ಬ್ಯಾಟ್ಸ್‌ಮನ್‌ಳು!

ಒಬ್ಬ ಬೇಟೆಗಾರ ತನ್ನ ಬೇಟೆಗೆ ಏನೇನು ಬತ್ತಳಿಕೆ ಬೇಕೋ ಅದನ್ನು ಬಳಸುವ ಹಾಗೆ ಪ್ರಸನ್ನ ಒಬ್ಬ ಬ್ಯಾಟ್ಸ್ಮನ್ನಿಗೆ ರನ್ನಿನ ರುಚಿತೋರಿಸಿ, ಮತ್ತೆ ಅದನ್ನೇ ಹೊಡೆಯಲು ಹೋದ ಅವರನ್ನು ಔಟು ಮಾಡುತ್ತಿದ್ದರು. ಅವರ ಬೋಲಿಂಗಿನ ಯಶಸ್ಸಿಗೆ ಕಾರಣ ಬಹುಪಾಲು ಏಕ್ನಾಥ್ ಸೋಲ್ಕರ್ ಅವರಿಗೆ ಮತ್ತು ವಿಕೆಟ್ ಕೀಪರ್ ಕಿರ್ಮಾನಿಯವರಿಗೆ ಸೇರಬೇಕು. ಬ್ಯಾಟ್ಸ್ಮನ್ನನ್ನು ಕಟ್ಟಿಹಾಕಿ ರನ್ ಬರದ ಹಾಗೆ ಮಾಡಿ ಅವರಿಗೆ ಹೇಗೋ ಬಚಾವ್ ಆಗುವ ಅಂತ ಬ್ಯಾಟನ್ನಿಟ್ಟಾಗ ಅದು ವಿಕೆಟ್ ಹತ್ತಿರವೇ ಕ್ಯಾಚ್ ಹೋಗುವುದು ಸಾಧಾರಣ. ಅದನ್ನು ನಿರೀಕ್ಷಿಸಿ ಹಿಡಿಯುವುದು ಅತ್ಯಂತ ಕಷ್ಟಕರ. ಹಾಗಿರುವಾಗ ಭೂಮಿಯನ್ನೇ ಅಗೆದು ಕ್ಯಾಚ್ ಹಿಡಿಯುವುದರಲ್ಲಿ ಏಕ್ನಾಥ್ ಸೋಲ್ಕರ್ ನಿಸ್ಸೀಮರಾಗಿದ್ದರು! ನಮ್ಮ ನಾಲ್ಕೂ ಸ್ಪಿನ್ನರ್‌ಗಳ ಯಶಸ್ಸಿಗೆ ಶ್ರೇಯಸ್ಸಿಗೆ ಸೋಲ್ಕರ್ ಅವರ ಕೊಡುಗೆ ಅಪಾರವಾದದ್ದು ಎಂದು ನನ್ನ ಭಾವನೆ.
ಪ್ರಸನ್ನ ತಮ್ಮ ಬೋಲಿಂಗಿಗೆ ಬಹಳ ಚೆನ್ನಾಗಿ ಫೀಲ್ಡಿಂಗ್ ಮಾಡುತ್ತಿದ್ದರು. ಎಷ್ಟೋ ವೇಳೆ ಅವರೇ ಕ್ಯಾಚ್ ಬರುವ ಹಾಗೆ ಮಾಡಿ ಅದನ್ನು ಹುಲಿಯ ಹಾಗೆ ಹಾರಿ ಹಿಡಿಯುತ್ತಿದ್ದರು. ಪ್ರಸನ್ನ 100 ವಿಕೆಟ್ಟನ್ನು ಕೇವಲ 20 ಟೆಸ್ಟ್‌ಗಳಿಗೆ ತೆಗೆದುಕೊಂಡು ಆಗಿನ ಕಾಲಕ್ಕೆ ಒಂದು ದಾಖಲೆಯನ್ನು ಸ್ಥಾಪಿಸಿದರು. ಅದನ್ನು ಅಶ್ವಿನ್ ರವಿಚಂದ್ರನ್ ಈಗ ಸ್ವಲ್ಪ ವರ್ಷಗಳ ಹಿಂದೆ ಮುರಿದರು.

ಪ್ರಸನ್ನ ಇಂಗ್ಲೆಂಡಿನ ವಿರುದ್ಧ 1962 ಶುರುಮಾಡಿದ ಮೇಲೆ ಅವರನ್ನು ವೆಸ್ಟ್ ಇಂಡೀಸ್‌ಗೆ ಹೋಗಲು ಕಮಿಟಿ ಆಯ್ಕೆ ಮಾಡಿದರು. ವಿದ್ಯಾಭ್ಯಾಸಕ್ಕೆ ಮನ್ನಣೆ ಕೊಟ್ಟ ಅವರ ತಂದೆಗೆ ಆಗಿನ ಕೆ ಎಸ್ ಸಿ ಎ ಸೆಕ್ರಟರಿ ಚಿನ್ನಸ್ವಾಮಿ, ಪ್ರಸನ್ನರ ಮನೆಗೆ ಹೋಗಿ ಅವರ ತಂದೆ ತಾಯಿಗೆ ಮನವರಿಕೆ ಮಾಡಿ ಟೂರ್‌ಗೆ ಹೋಗಲು ಒಪ್ಪಿಸಿದರು. ಮುಂದೆ ಪ್ರಸನ್ನ ಮೈಸೂರಿನ ಎನ್ ಐ ಇ ನಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡಿದರು. ಭಾರತದ ಟೀಮಿನಲ್ಲಿ ಇಂಜಿನಿಯರ್ ( ಫರೂಖ್) ಎಂಬ ಹೆಸರಿನ ಆಟಗಾರ ಬರುವುದಕ್ಕೆ ಮುಂಚೆ ಪ್ರಸನ್ನ ಒಬ್ಬ ಇಂಜಿನಿಯರ್ ಆಗಿ ಬಂದರು! ಹಾಗೆಯೇ ವೆಂಕಟರಾಘವನ್ ಕೂಡಾ ಇಂಜಿನಿಯರ್ ಆಗಿದ್ದರು.

ಪ್ರಸನ್ನ 16 ವರ್ಷಗಳ ಅವಧಿಯಲ್ಲಿ ಒಟ್ಟು 49 ಟೆಸ್ಟ್ ಆಡಿ 189 ವಿಕೆಟ್ 3038 ಸರಾಸರಿಯ ಹಾಗೆ ಪಡೆದರು. ಒಂದು ಇನ್ನಿಂಗ್ಸಿನಲ್ಲಿ 5 ವಿಕೆಟ್ 10 ಬಾರಿ ಪಡೆದಿದ್ದಾರೆ. ಎರಡು ಸರ್ತಿ 10 ವಿಕೆಟ್ ಗಳಿಸಿದರು. 8 ವಿಕೆಟ್ 76 ರನ್‌ಗಳಿಗೆ ತೆಗೆದ ಅವರ ಅತ್ತ್ಯುತ್ತಮ ಬೋಲಿಂಗ್.

189 ವಿಕೆಟ್‌ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 31 ವಿಕೆಟ್ ತೆಗೆದು ಅಲ್ಲಿ ಒಂದು ಪಂದ್ಯದಲ್ಲಿ 6/104 ತೆಗೆದರು. ಸುಮಾರು ಅರ್ಧ, 95 ವಿಕೆಟ್ ಭಾರತದಲ್ಲಿ ತೆಗೆದರು. ನ್ಯೂಝಿಲೆಂಡ್ ವಿರುದ್ಧ ಅವರ ಅತ್ಯುತ್ತಮ ಪ್ರದರ್ಶನ 8/76 ಆಗಿತ್ತು.

ಅವರು ಮೊದಲನೇ ದರ್ಜೆ (ಫಸ್ಟ್ ಕ್ಲಾಸ್) ಮ್ಯಾಚುಗಳಲ್ಲಿ 235 ಪಂದ್ಯಗಳನ್ನಾಡಿ 957 ವಿಕೆಟ್ ಸರಾಸರಿ 23.45 ರಲ್ಲಿ ತೆಗೆದಿದ್ದಾರೆ. ಇದು ಅತ್ಯುತ್ತಮ ಬೋಲಿಂಗ್‌ನ ಪ್ರದರ್ಶನ.

*****

(ಅನಂತರಾವ್ ಶ್ರೀನಿವಾಸ ಪ್ರಸನ್ನ)

ಎರಾಪಲ್ಲಿ ಅನಂತರಾವ್ ಶ್ರೀನಿವಾಸ ಪ್ರಸನ್ನ 22 ಮೇ ತಿಂಗಳಲ್ಲಿ 1940 ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದರು. ಬೆಂಗಳೂರು ಹೈಸ್ಕೂಲ್ ಮತ್ತು ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿ ಅಲ್ಲಿ ಕ್ರಿಕೆಟ್ ಟೀಮಿನ ನಾಯಕರಾದರು. ಅವರು ಬೆಂಗಳೂರಿನ ‘ಸಿಟಿ ಕ್ರಿಕೆಟರ್ಸ್’ ಟೀಮಿನಲ್ಲಿ ಆಡುತ್ತಿದ್ದಾಗ, ಸಿಟಿ ಕ್ರಿಕೆಟರ್ಸ್‌ನ ಸೀನಿಯರ್ ಕ್ರಿಕೆಟರ್ ಹಾಗೂ ರಣಜಿ ಪ್ಲೇಯರ್ ಕೆ.ಎಸ್. ವಿಶ್ವನಾಥ್ ಅವರಿಗೆ ಬಹಳ ಸಹಾಯ ಮಾಡಿದರೆಂದು ಪ್ರಸನ್ನ ಒಂದು ಕಡೆ ಹೇಳಿಕೊಂಡಿದ್ದಾರೆ. 1961ರಲ್ಲಿ ಇಂಗ್ಲೆಂಡಿನ ವಿರುದ್ಧ ಮೊದಲ ಟೆಸ್ಟ್ ಆಡಿದ ಪ್ರಸನ್ನ ತಮ್ಮ ಇಂಜಿನಿಯರಿಂಗ್ ವ್ಯಾಸಾಂಗವನ್ನು ಮುಗಿಸಿ ಡಿಗ್ರಿ ಪಡೆಯುವ ಸಲುವಾಗಿ ಕ್ರಿಕೆಟ್ಟಿನಿಂದ ವಿಶ್ರಾಂತಿ ಪಡೆದು 1967ರಲ್ಲಿ ವಾಪಸ್ಸಾಗಿ ಬಂದ ತಕ್ಷಣವೇ ಇಂಗ್ಲೆಂಡಿನ ಮೇಲೆ ಚೆನ್ನಾಗಿ ಪ್ರದರ್ಶನ ತೋರಿಸಿದರು.

ಬೆಂಗಳೂರಿನ ಅನೇಕ ಆಟಗಾರರ ತರಹ ಇವರೂ ಚಿಕ್ಕವರಾಗಿದ್ದಾಗ ಬೇಸಿಗೆ ರಜದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಮ್ಯಾಚುಗಳನ್ನಾಡಿ ಅದರಿಂದ ತಮ್ಮ ಬೋಲಿಂಗ್‌ಗೆ ಉಪಕಾರವಾಗಿದೆಯೆಂದು ಭಾವಿಸುತ್ತಾರೆ. ಆರ್ಮುಗಂ ಸರ್ಕಲ್, ಕೊಹಿನೂರ್ ಗ್ರೌಂಡ್ಸ್‌, ಮಾಧವನ್ ಪಾರ್ಕಿನಲ್ಲಿ ಆಡುತ್ತಿದ್ದರು. ಉತ್ತರಾಧಿಮಠದಲ್ಲೂ ಅಲ್ಲಿನ ಟೀಮಿನವವರಾದ ಅನಂತು, ಗಿರ, ಭಾಷ್ಯಂ, ರಾಮು, ಕಿಟ್ಟ ಅವರ ಜೊತೆ ಆಡಿದ್ದಾರೆ. ಕರ್ನಾಟಕ ಸರ್ಕಾರ ಬೆಂಗಳೂರಿನ ದೊಮ್ಲೂರಿನಲ್ಲಿ ಅವರ ಹೆಸರಿನಲ್ಲಿ ‘ಇ ಎ ಎಸ್ ಪ್ರಸನ್ನ’ ಎಂದು ರಸ್ತೆಗೆ ಹೆಸರನ್ನು ಇಟ್ಟಿದ್ದಾರೆ.

ಅವರಿಗೆ 1970ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. 2006ರಲ್ಲಿ ಕ್ಯಾಸ್ಟ್ರೋಲ್ ಲೈಫ್ ಟೈಮ್ ಪ್ರಶಸ್ತಿಯನ್ನು ಕೊಟ್ಟರು. ಅವರ ನಾಯಕತ್ವದಲ್ಲಿ ಕರ್ನಾಟಕ ರಣಜಿ ಟ್ರೋಫಿಯನ್ನು ಎರಡು ಬಾರಿ ಕರ್ನಾಟಕಕ್ಕೆ ಗೆದ್ದಿದೆ. ಅವರು ‘ವನ್ ಮೊರ್ ಓವರ್’ ನಾಮಾಂಕಿತ ಆತ್ಮ ಚರಿತ್ರೆಯನ್ನು ಬರೆದಿದ್ದಾರೆ.

1985ರಲ್ಲಿ ಪ್ರಸನ್ನ ಮ್ಯಾನೇಜರ್ ಆಗಿ ಸುನಿಲ್ ಗವಾಸ್ಕರ್ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾದ ವಿಕ್ಟೋರಿಯ ಒಡಿಐ ವರ್ಲ್ಡ್ ಚಾಂಪಿಯನ್‌ಷಿಪ್ ಗೆದ್ದರು. ಆವಾಗ ಕೋಚ್, ಮ್ಯಾನೇಜರ್ ಆಗಿ ಒಬ್ಬರೇ ಇದನ್ನು ನಿಭಾಯಿಸಿದರು. ಇವರು ಬೆಂಗಳೂರಿನಲ್ಲಿ ತಮ್ಮ ಪತ್ನಿ ಶೈಮ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದಾರೆ.

‘ಸ್ಪಿನ್ ಕ್ವಾರ್ಟೆಟ್’ ಎಂದು ಪ್ರಸಿದ್ಧಿಯಾದ ಪ್ರಸನ್ನ, ಬೇಡಿ, ಚಂದ್ರಶೇಖರ್ ಮತ್ತು ವೆಂಕಟರಾಘವನ್ ಅವರ ಬೋಲಿಂಗ್ ಎಷ್ಟೋ ಸರ್ತಿ ಹೊಸ ಬಾಲಿನಲ್ಲಿ ಇನ್ನೂ ಹೊಳಪಿರುವಾಗಲೇ ಇನ್ನಿಂಗ್ಸ್ ಶುರುವಿನಿಂದಲೇ ಕ್ಯಾಪ್ಟನ್‌ಗಳು ಉಪಯೋಗಿಸುತ್ತಿದ್ದರು. ಬಹಳ ವರ್ಷಗಳ ಕಾಲ – ಅಂದರೆ ಕಪಿಲ್ ದೇವ್ ಬರುವ ತನಕ – ಭಾರತದಲ್ಲಿ ಹೊಸ ಬಾಲಿನಲ್ಲಿ ಓಡಿಬಂದು ಮಾಡುವ ಫಾಸ್ಟ್ ಬೋಲರ್‌ಗಳೇ ಇರಲಿಲ್ಲ!

1971 ಭಾರತದ ಕ್ರಿಕೆಟ್ಟಿಗೆ ಒಂದು ವಿಶೇಷ ಸಂವತ್ಸರ. ಅಜಿತ್ ವಾಡೇಕರ್ ಅವರ ನೇತೃತ್ವದಲ್ಲಿ ಬಿ.ಎಸ್. ಚಂದ್ರಶೇಖರ್ ಭಾರತಕ್ಕೆ ಇಂಗ್ಲೆಂಡಿನ ವಿರುದ್ಧ ಓವಲ್‌ಲ್ಲಿ ಆಡಿದ ಟೆಸ್ಟ್ ಪಂದ್ಯದಲ್ಲಿ ಮೊಟ್ಟ ಮೊದಲ ಬಾರಿ ಮ್ಯಾಚು ಮತ್ತು ಸರಣಿ 1-0 ಯಲ್ಲಿ ವಿಜಯವನ್ನು ತಂದುಕೊಟ್ಟರು. ಚಂದ್ರಶೇಖರ್ ಅವರು ತೆಗೆದ 6 ವಿಕೆಟ್ 38 ರನ್ನಿಗೆ ಭಾರತಕ್ಕೆ ಅತ್ಯಂತ ಮಹತ್ತರವಾದ ಗೆಲುವನ್ನು ತಂದುಕೊಟ್ಟಿತು. 1972ರಲ್ಲಿ ಗ್ರಂಥಕಾರ ವಿಸ್ಡ್‍ನ್ ಆ ವರ್ಷದ ‘ ಅತ್ಯುತ್ತಮ 5 ಆಟಗಾರರಲ್ಲಿ ಒಬ್ಬರು’ ಅನ್ನುವ ಪ್ರಶಸ್ತಿ ಚಂದ್ರಶೇಖರ್ ಅವರಿಗೆ ಕೊಟ್ಟಿತು. ಆವರ ಬೋಲಿಂಗನ್ನು ಹೊಗಳುತ್ತಾ, ‘ನಿರ್ಜೀವವಾಗಿದ್ದ ಓವಲ್ ಪಿಚ್‌ನಲ್ಲಿ ಒಬ್ಬ ಸ್ಪಿನ್ನರ್ ಇಷ್ಟು ವೇಗವಾಗಿ ಬೋಲಿಂಗ್ ಮಾಡಬಲ್ಲ ಅಂತ ತೋರಿಸಿಕೊಟ್ಟರು’ ಎಂದು ಅವರನ್ನು ಹಾಡಿ ಹೊಗಳಿತು. ಆ ಪಂದ್ಯದಲ್ಲಿ ಶ್ರೇಷ್ಟ ಆಟಗಾರ ಎಡ್ರಿಚ್‌ರನ್ನು ಚಂದ್ರಶೇಖರ್ ಬೋಲ್ಡ್ ಔಟ್‌ ಮಾಡಿ ಗೆಲುವಿನ ಬಾಗಿಲನ್ನು ತೆರೆದರು.

1964ರಲ್ಲಿ ಟೆಸ್ಟ್ ಶುರುಮಾಡಿದ ಚಂದ್ರಶೇಖರ್ ಮೊದಲ ಟೆಸ್ಟ್ ಮುಂಬೈನಲ್ಲಿ 4 ವಿಕೆಟ್ ಪಡೆದರು. ಇದಾಗುವುದಕ್ಕೆ ಮುಂಚೆ ಅವರು ಇಂಗ್ಲೆಂಡಿನ ವಿರುದ್ಧ ದಕ್ಷಿಣ ವಲಯದ ಪಂದ್ಯವೊಂದರಲ್ಲಿ ಬೆಂಗಳೂರಿನಲ್ಲಿ ಆಡುತ್ತಿದ್ದರು. ಅಲ್ಲಿ ಚೆನ್ನಾಗಿ ಆಡಿದರೆ ಮುಂಬೈನಲ್ಲಿ ಅವರಿಗೆ ಆಡಲು ಸಿಗಬಹುದೆಂದು ಪ್ರೇಕ್ಷಕರು ನಿರೀಕ್ಷೆ ಮಾಡಿದ್ದರು. ಇಂಗ್ಲೆಂಡಿನ ಬ್ಯಾಟ್ಮನ್ ಮತ್ತು ನಾಯಕ ಮೈಕ್ ಸ್ಮಿತ್ ಆಡುವಾಗ ಚಂದ್ರ ಅವರ ಬೋಲಿಂಗ್ ಅರ್ಥವಾಗದೆ ಒದ್ದಾಡುತ್ತಾ ಇದ್ದರು. ಅದನ್ನು ನೋಡಿ ವಲಯದ ನಾಯಕ ಚಂದ್ರಶೇಕರ್‌ಗೆ ಮುಂದೆ ಬೋಲಿಂಗ್ ಕೊಡಲಿಲ್ಲ. ಪ್ರೇಕ್ಷಕರು ಉದ್ವಿಗ್ನರಾದರು. ಆದರೆ ಅವರನ್ನು ಮುಂಬೈ ಟೆಸ್ಟಿಗೆ ಆಡಲು ಆಯ್ಕೆ ಮಾಡಿದ್ದಾರೆಂದು ಸಂಜೆ 6 ಘಂಟೆ ನ್ಯೂಸ್ ಕೇಳಿದಾಗಲೇ ಎಲ್ಲರಿಗೂ ಏನು ವಿಷಯವೆಂದು ಗೊತ್ತಾಯಿತು! ಅವರಿಗೆ ಇಲ್ಲಿ ಬೋಲಿಂಗ್ ಕೊಡದೆ ಸೀದಾ ಟೆಸ್ಟಿಗೆ ಆಡಿಸಬೇಕೇಂದು ಸೆಲೆಕ್ಟರ್‌ಗಳು ನಿಶ್ಚಯ ಮಾಡಿದ್ದರು. ಮೊದಲನೇ ಟೆಸ್ಟಿನಲ್ಲಿ ಚಂದ್ರಶೇಖರ್ 4 ವಿಕೆಟ್ ಪಡೆದರು. ಅವರು ಎಗರಿ ಎಡಗೈಲಿ ಕ್ಯಾಚ್ ಹಿಡಿದು ಬೋಲಸ್ ಎಂಬ ಬ್ಯಾಟ್ಸಮನ್‌ ಔಟಾದಾಗ ಎಲ್ಲರಿಗೂ ಅಚ್ಚರಿ ಮತ್ತು ಇಷ್ಟವೂ ಆಯಿತು.

1976ರಲ್ಲಿ ಚಂದ್ರಶೇಖರ್ ಮತ್ತು ಪ್ರಸನ್ನ -ಕರ್ನಾಟಕದ ಸ್ಪಿನ್ ಬೋಲರ್‌ಗಳು – ಒಟ್ಟಿಗೆ ಆಡಿ 19 ವಿಕೆಟ್ ಪಡೆದು ಭಾರತಕ್ಕೆ ಅದ್ಭುತ ವಿಜಯವನ್ನು ಸಾಧಿಸಿ ಕೊಟ್ಟರು. 1977-78 ರಲ್ಲಿ ಭಾರತ ಆಸ್ಟ್ರೇಲಿಯಾಗೆ ಹೋದಾಗ ಚಂದ್ರ ಬೋಲಿಂಗ್‌ನಿಂದ ಭಾರತಕ್ಕೆ ವಿಜಯ ಸಿಕ್ಕಿತು. ಅವರು ಎರಡು ಇನಿಂಗ್ಸ್‌ನಲ್ಲೂ 52 ರನ್ನಿಗೆ 6 ವಿಕೆಟ್ ಪಡೆದರು! ನ್ಯೂಜಿಲೆಂಡಿನಲ್ಲಿ ಅಂಪೈರ್ ಯಾವುದಕ್ಕೂ ಔಟ್ ಕೊಡದ ಅಂಪ್ಯರ್‌ಗೆ ಯಾರೋ ಬೊಲ್ಡ್ ಔಟಾದಾಗ ಚಂದ್ರಶೇಖರ್ ಅಂಪೈರ್ಗೆ ‘ಹೌದು ಇವರು ಬೋಲ್ಡ್ ಆಗಿದ್ದಾರೆ, ಆದರೆ ಔಟಾ!’ ಎಂದು ಕೇಳಿದರು!

ಅವರು ಒಂದೇ ವರ್ಷದ ಅವಧಿಯಲ್ಲಿ ರಾಜ್ಯದ ಪಿ. ರಾಮಚಂದ್ರ ರಾವ್ ಟ್ರೋಫಿ, ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಕೊನೆಗೆ ಭಾರತಕ್ಕೆ ಟೆಸ್ಟ್ ಮ್ಯಾಚ್ ಆಡಿದರು. ಅವರು ಜೂನಿಯರ್ ಬಿ ಎಸ್ ಸಿ ಮಾಡುತ್ತಿದ್ದಾಗ ಭಾರತಕ್ಕೆ ಕ್ರಿಕೆಟ್ ಆಡಿ ದೇಶಕ್ಕೆ, ಕರ್ನಾಟಕಕ್ಕೆ ಮತ್ತು ಅವರು ಓದುತ್ತಿದ್ದ ನ್ಯಾಷನಲ್ ಕಾಲೇಜಿಗೂ ಕೀರ್ತಿ ತಂದರು. ಆದರೆ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ನರಸಿಂಹಯ್ಯ ಚಂದ್ರಶೇಕರ್‌ಗೆ ಅಟೆನ್ಡೆನ್ಸ್ ಇಲ್ಲದ ಕಾರಣ ಅವರನ್ನು ಉತ್ತೀರ್ಣಗೊಳಿಸಲಿಲ್ಲ. ಕೆ ಎಸ್ ಸಿ ಎ ನ ಚಿನ್ನಸ್ವಾಮಿಯವರು ಕಾಲೇಜಿಗೆ ದೌಡಾಯಿಸಿ ಅವರನ್ನು ಕಂಡು ಅವರನ್ನು ಸಮಜಾಯಿಸಿ ಮತ್ತೆ ಅವರಿಗೆ ಪರೀಕ್ಷೆಯನ್ನು ಕೊಟ್ಟು ಪಾಸಾದಮೇಲೆ ಅವರನ್ನು ಉತ್ತೀರ್ಣ ಮಾಡಲಾಯಿತು!

58 ಟೆಸ್ಟ್ ಆಡಿದ ಚಂದ್ರಶೇಖರ್ 29.74 ಸರಾಸರಿಯಲ್ಲಿ 242 ವಿಕೆಟ್ ತೆಗೆದು ಭಾರತದ ಅಗ್ರಗಣ್ಯ ಬೋಲರ್ ಆದರು. ಫಸ್ಟ್ ಕ್ಲಾಸ್ ಪಂದ್ಯಗಳಲ್ಲಿ 24ರ ಮ್ಯಾಚುಗಳಾಡಿ 1063 ವಿಕೆಟ್ ಪಡೆದರು. ಅವರು 5 ವಿಕೆಟ್ 10 ಸಲ ಮತ್ತು 10 ವಿಕೆಟ್ ಎರಡು ಸಲ ತೆಗೆದುಕೊಂಡಿದ್ದಾರೆ. ಅವರಿಗೆ ನಾಯಕನಾಗಿದ್ದ ನವಾಬ್ ಆಫ್ ಪಟೌಡಿಯಿಂದ ಬಹಳ ಉತ್ತೇಜನ ಸಿಕ್ಕಿತೆಂದು ಹೇಳಿಕೊಂಡಿದ್ದಾರೆ.

ಭಗವತ್ ಸುಬ್ರಮಣ್ಯ ಚಂದ್ರಶೇಖರ್ 17 ಮೇ 1945ರಲ್ಲಿ ಮೈಸೂರಿನಲ್ಲಿ ಹುಟ್ಟಿದರು. ಆಮೇಲೆ ಬೆಂಗಳೂರಿಗೆ ಬಂದ ಚಂದ್ರಶೇಖರ್ ಬೆಂಗಳೂರಿನ ಸಿಟಿ ಕ್ರಿಕೆಟರ್ಸ್‌ನ ಟೀಮಿಗೆ ಆಡಲು ಶುರು ಮಾಡಿದರು. ಮುಂಚೆ ಟೆನ್ನಿಸ್ ಬಾಲಿನಲ್ಲಿ ಆಡುತ್ತಿದ್ದ ಚಂದ್ರಶೇಖರ್‌ ಅವರು ಬೆಂಗಳೂರಿನ ಉತ್ತರಾಧಿಮಠದ ರಸ್ತೆಯಲ್ಲಿ ಹತ್ತಿರವಿದ್ದ ಶಂಕರಪುರಂ ಬಡಾವಣೆಯಲ್ಲಿ ವಾಸವಾಗಿದ್ದರು. ಅವರು ಪ್ರಾರಂಭ ಮಾಡಿದ್ದು ಟೆನಿಸ್ ಬಾಲಿನ ಕ್ರಿಕೆಟ್. ಅವರ ಮನೆಯ ಹತ್ತಿರವಿದ್ದ ಡಾಕ್ಟರ್ ಮೂರ್ತಿಯವರ ಮನೆಯ ಮುಂದೆಯೇ ಆಟದ ಪಿಚ್ ಆಗಿತ್ತು! ಡಾಕ್ಟರ್ ಮೂರ್ತಿ ಅವರು ಕ್ಲಿನಿಕ್‌ಗೆ ಹೋಗುವುದಕ್ಕೆ ಅವರ ಹೆರಾಲ್ಡ್ ಕಾರು ತೆಗೆದಮೇಲೇನೇ ಆಟಕ್ಕೆ ಮೈದಾನ ಸಿಗುವುದು! ‘ಮೈದಾನ’ ಮೂರ್ತಿಯವರ ಮನೆ ಮುಂದೆ ಇದ್ದ ರೋಡು! ಆಗೆಲ್ಲಾ ರಸ್ತೆಯಲ್ಲಿ ಕಾರುಗಳು ಕಡಿಮೆ. ಸ್ಕೂಟರ್‌ಗಳೂ ಇರಲಿಲ್ಲ. ಸೈಕಲ್‌ಗಳ ಮಧ್ಯೆ ಆಟ ಆರಾಮವಾಗಿ ಸಾಗುತ್ತಿತ್ತು! ಮೂರ್ತಿಯವರ ತಮ್ಮ ಭಾಷ್ಯಂ, ಚೊಕ್ಕ, ನಾಗಭೂಷಣ, ರಾಮು, ಅಡ್ಡ ಕಿಟ್ಟ, ಗಿರಿ ಮುಂತಾದವರು ಅಲ್ಲಿ ಆಡುವುದಕ್ಕೆ ಬರುತ್ತಿದ್ದರು. ಆಗ ಚಂದ್ರಶೇಖರ್ ಅವರ ಹೆಸರು ಸ್ನೇಹಿತರು ಕರೆಯುತ್ತಿದ್ದುದು ಚಂದು ಎಂದು. ಭಾನುವಾರ ಮೂರ್ತಿಯವರ ಕಾರ್ ಅಲ್ಲೇ ಇದ್ದ ಕಾರಣ, ಮೈದಾನ ಸಿಗದಿದ್ದ ಕಾರಣ ಆಟವಿರುತ್ತಿರಲಿಲ್ಲ. ಆಗೆಲ್ಲ ಉತ್ತರಾಧಿಮಠದ ಗ್ರೌಂಡ್ಸಿನಲ್ಲಿ ಹೋಗಿ ಆಟ ಆಡುತ್ತಿದ್ದರು.

ಅವರಿಗೆ 5 ವರ್ಷವಾಗಿದ್ದಾಗ ಅವರ ಬಲಗೈಗೆ ಪೊಲಿಯೊ ಬಂದು ಅದರಲ್ಲಿ ಬಲಹೀನತೆ ಉಂಟಾಯಿತು. ಎಡಗೈಯಲ್ಲೇ ಅಭ್ಯಾಸ ಮಾಡಿ ಆ ಕೈಯಲ್ಲಿ ಟೇಬಲ್ ಟೆನಿಸ್ ಮತ್ತು ಬ್ಯಾಡ್ಮಿಂಟನ್ ಆಡುತ್ತಿದ್ದರು ಜೊತೆಗೆ ಬಲಗೈಗೆ ಔಷದಿ, ಕಸರತ್ತು ಮಾಡಿ ಆ ಕೈಗೆ ಕೂಡ ಬಲಬಂತು. ಅವರ ಬೋಲಿಂಗ್ ಸ್ಪೀಡ್ ನಮ್ಮ ಫಾಸ್ಟ್ ಬೋಲರ್ಸ್‌ಗಿಂತ ಆಧಿಕವಾಗಿರುತ್ತೆ ಎಂದು ಅನೇಕ ನುರಿತ ಕ್ರಿಕೆಟ್ಟಿಗರ ಅಭಿಪ್ರಾಯವಾಗಿತ್ತು!

ಅಲ್ಲಿಂದ ಸಿಟಿ ಕ್ರಿಕೆಟರ್ಸ್‌ಗೆ ಸೇರಿ ಅಲ್ಲಿ ಚಂದ್ರಶೇಖರ್ ಅವರ ಪ್ರತಿಭೆಯನ್ನು ಕರ್ನಾಟಕಕ್ಕೆ ರಣಜಿ ಟ್ರೋಫಿ ಆಡಿದ ಕೆ ಎಸ್ ವಿಶ್ವನಾಥ್ ಮತ್ತು ಹಿರಿಯ ಕ್ರಿಕೆಟ್ಟಿಗ ರಾಮ್ ಪ್ರಸಾದ್ ಕಂಡು ಅವರನ್ನು ಪ್ರೋತ್ಸಾಹಿಸಿದರು. ಪ್ರಸನ್ನ ಮತ್ತು ಚಂದ್ರಶೇಖರ್ ಇಬ್ಬರೂ ತಮಗೆ ಕ್ಲಬ್ಬಿನ ಹಿರಿಯರಿಂದ ಸಿಕ್ಕ ಪ್ರೋತ್ಸಾಹಕ್ಕೆ ಋಣಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

(ಭಗವತ್ ಸುಬ್ರಮಣ್ಯ ಚಂದ್ರಶೇಖರ್)

ಹಿಂದಿ ಹಾಡಿನ, ಅದರಲ್ಲೂ ಮುಖೇಶ್ ಅವರ ಹಾಡಿಗೆ ಚಂದ್ರಶೇಖರ್ ಮಾರುಹೋಗಿದ್ದರು. ಬಹಳ ಸರ್ತಿ ಅವರ ಹಾಡುಗಳು ಚಂದ್ರಶೇಖರ್‌ಗೆ ಸ್ಪೂರ್ತಿದಾಯಕವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಸ್ವತಃ ಅವರೇ ಚೆನ್ನಾಗಿ ಹಾಡುತ್ತಾರೆ. ಮುಖೇಶ್ ಮತ್ತು ಚಂದ್ರಶೇಖರ್ ಗಾಢ ಮಿತ್ರರಾಗಿ ಒಬ್ಬರೊಬ್ಬರ ಸಂಗೀತ ಮತ್ತು ಆಟವನ್ನು ಕೇಳಿದ್ದಾರೆ, ವೀಕ್ಷಿಸಿದ್ದಾರೆ.

ಅವರಿಗೆ ಒಂದು ಸಲ ಒಂದು ಬಸ್‌ನ ಅಪಘಾತದಲ್ಲಿ ಕಾಲಿಗೆ ಪೆಟ್ಟಾಗಿ ಶಸ್ತ್ರಚಿಕಿತ್ಸೆಯಾಗಿ ವಾಸಿ ಮಾಡಿಕೊಂಡು ಮೊದಲಿನ ಚಟುವಟಿಕೆಯಿಂದಲೇ ಓಡಾಡುತ್ತಿದ್ದರು. 77 ವರ್ಷ ತುಂಬಿದ ಚಂದ್ರಶೇಖರ್ ಪತ್ನಿ ಸಂಧ್ಯ ಜೊತೆ ಬೆಂಗಳೂರಿನಲ್ಲಿ ಇದ್ದರೆ, ಅವರ ಮಗ ಅಮೆರಿಕದ ಸಾನ್ ಹೊಸೆಯಲ್ಲಿ ನೆಲೆಸಿದ್ದಾನೆ. ಚಂದ್ರಶೇಖರ್ ಈಗ ಎರಡು ಮೊಮ್ಮಕ್ಕಳ ಅಜ್ಜ! ಭಾರತ ಸರ್ಕಾರ ಅವರಿಗೆ ಅರ್ಜುನ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು 1972 ರಲ್ಲಿ ಕೊಟ್ಟು ಗೌರವಿಸಿತು.

ಚಂದ್ರಶೇಖರ್ ಅವರ ಹೆಸರು ಕ್ರಿಕೆಟ್ ಆಟ ಇರುವವರೆಗೆ ಆವರ ಬೋಲಿಂಗ್‍ನ ಶೈಲಿ, ಅವರು ಬೋಲಿಂಗ್ ಮಾಡಿದ ರೀತಿ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿರುತ್ತೆ. ಅವರ ಬೋಲಿಂಗನ್ನು ಎಷ್ಟೋ ರೀತಿ ವಿವರಿಸಿದ್ದಾರೆ, ಬಣ್ಣಿಸಿದ್ದಾರೆ. ಅವರ ಷರ್ಟು ಗಾಳಿಗೆ ಹಾರುತ್ತಾ ಅವರು ಬಂದು ಬೋಲಿಂಗ್ ಮಾಡುವಾಗ ಅದರ ಸ್ಪಿನ್ ಮತ್ತು ಅದು ಬರುವ ರಭಸ ಎಲ್ಲರ ಮನಸ್ಸಿನಲ್ಲಿ ನಾಟಿರುತ್ತೆ. ಆವರ ಬೋಲಿಂಗ್‌ನಲ್ಲಿ ಯಾವಾಗ ಬೇಕಾದರೂ ಒಂದು ವಿಕೆಟ್ ಬೀಳುತ್ತೆ ಅನ್ನುವ ನಿರೀಕ್ಷೆ ಪ್ರೇಕ್ಷಕರಲ್ಲಿ ಯಾವಾಗಲೂ ಇರುತ್ತಿತ್ತು. ಎಷ್ಟೋ ಸಲ ಅದು ನಿಜವಾಗುತ್ತಿತ್ತು. ಅದೇ ನಾವು ಕೊಡುವ ಉಡಿಗೊರೆ ಅವರಿಗೆ. ಒಂದು ಬೋಲರ್‌ಗೆ ಪ್ರೇಕ್ಷಕರು ಕೊಡುವ ಬೆಲೆಬಾಳುವ ಉಡುಗೊರೆ.