ನನ್ನ ಪ್ರಿಯಕರನ ಹೆಸರು
ನನ್ನ ಪ್ರಿಯಕರನ ಹೆಸರ ಕೇಳಲೇಬೇಡ
ನಿನಗೆ ಹೆದರುತ್ತೇನೆ
ಆ ಅತ್ತರಿನ ಬಾಟಲಿ ಉಗುಳುವ
ಸುವಾಸನೆಯಿಂದ
ಅಮಲೇರಿಸಿ ಮುಳುಗಿಸಿ
ಪರಿಮಳದಲ್ಲಿ ಅದ್ದಿ ತೆಗೆದರೆ!
ಆ ದೇವರಿಂದ ನೀನು ಶಾಪದ
ಪತ್ರ ರವಾನಿಸಿದರೂ ಸರಿ
ದಾರಿಯುದ್ದಕ್ಕೂ
ನೀಲಿಮಲ್ಲಿಗೆಯ ರಾಶಿ ಬೀಳುತ್ತದೆ,
ನನ್ನ ಎದೆಯಲ್ಲಂತೂ
ಹುಡುಕಲೇಬೇಡ
ಸೂರ್ಯಾಸ್ತದ ಗುಂಟ
ಓಟ ಕೀಳಿಸಿದ್ದೇನೆ
ಪಾರಿವಾಳಗಳ ನಗಿಸುವವನಲ್ಲಿ
ಚಿಟ್ಟೆಗಳ ರೆಕ್ಕೆ ಬಡಿತದಲ್ಲಿ
ಸಾಗರದಾಳದ ಕಣಿವೆಗಳ ಉಸಿರಿನಲ್ಲಿ
ಪ್ರತಿಯೊಂದು ಕೋಗಿಲೆಯ ಹಾಡಿನಲ್ಲಿ
ರೋಧಿಸುವ ಚಳಿಗಾಲದ ಕಣ್ಣ ಹನಿಗಳಲ್ಲಿ
ಉದಾರವಾದ ಮೋಡಗಳ ದೇಣಿಗೆಯಲ್ಲಿ
ನೀನದನ್ನು ಕಾಣಬಹುದು,
ಸೂರ್ಯಾಸ್ತದಷ್ಟೇ ಸೊಗಸಾದ
ಅವನ ತುಟಿಗಳ ಕುರಿತು ಕೇಳಬೇಡ
ಶುದ್ಧತೆಯ ಕಿನಾರೆಯಂತಹ
ಅವನ ನಯನಗಳ ಕುರಿತು
ರೆಂಬೆಯಂತೆ ಓಲಾಡುವ
ಅವನ ಟೊಂಕದ ಕುರಿತು
ಹಾಗೂ,
ಯಾವ ಪುಸ್ತಕದಲ್ಲೂ ಉಲ್ಲೇಖಿಸದ
ಯಾವ ಸಾಹಿತ್ಯದ ಗರಿಯೂ
ಬಣ್ಣಿಸಲಾಗದ ಅವನ
ಕಾಂತಿಯ ಕುರಿತು
ಮತ್ತೆ,
ಅವನ ಕಂಠ, ಎದೆ
ನಿನ್ನಂತೆಯೆ
ಓ ನನ್ನ ಪ್ರೇಮಿಯೇ
ನಾನೆಂದೂ ಅವನ ಹೆಸರನ್ನು
ಉಸುರುವುದಿಲ್ಲ…….!
ಭುವನಾ ಹಿರೇಮಠ ಯುವ ಕವಯತ್ರಿ
ಬೆಳಗಾವಿ ಜಿಲ್ಲೆಯವರು
ಸರಕಾರಿ ಪ್ರೌಢಶಾಲೆ ಹಿರೇನಂದಿಹಳ್ಳಿಯಲ್ಲಿ ಗಣಿತ ಶಿಕ್ಷಕಿ
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ