ಲತಾ ಅವರ ಕಂಠದಿಂದ ಹೊರಹೊಮ್ಮಿದ ಮಧುರಗೀತೆಗಳು ಅವರನ್ನು ಸದಾ ಸ್ಮರಣೆಯಲ್ಲಿ ಹೊಂದಿರುವಂತಹದ್ದಾಗಿದ್ದು, ಅವರ ಬಗೆಗಿನ ಗೌರವವನ್ನು ಹೆಚ್ಚಿಸುತ್ತದೆ. ಇನ್ನು ಹಿತ್ತಲ ಗಿಡ ಮದ್ದಲ್ಲ ಎಂಬ ಶೀರ್ಷಿಕೆಯ ಲೇಖನವೂ ಸಹ ಸೊಗಸಾಗಿದೆ. ಒಂದು ಸಾಧಾರಣ ಕಾಯಿಲೆಯನ್ನು ಗುಣಪಡಿಸಲು ನಮ್ಮ ಹೈಟೆಕ್ ಆಸ್ಪತ್ರೆಗಳು ಅದೆಷ್ಟು ಹಣ ಪೀಕಿಸುತ್ತವೆ, ಅದೇ ನಾಟಿವೈದ್ಯರು ಪರಂಪರಾಗತವಾಗಿ ತಮ್ಮ ಕೈಚಳಕದಿಂದ ಮತ್ತು ಅಪಾರ ಅನುಭವದಿಂದ ಕಾಯಿಲೆಯ ಮೂಲಕ್ಕೇ ಹೋಗಿ ರೋಗ ನಿವಾರಣೆ ಮಾಡುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂತಹದ್ದು.
ಮಂಜುಳ ಡಿ. ಅವರ “ಕೇದಿಗೆ ಗರಿ” ಅಂಕಣ ಬರಹಗಳ ಸಂಕಲನದ ಕುರಿತು ಎಂ.ಎನ್. ಸುಂದರ್ ರಾಜ್ ಬರೆದ ಲೇಖನ

 

“ಕೇದಿಗೆ ಗರಿ” ಎಂಬ ಅಂಕಣ ಬರಹಗಳ ಸಂಕಲನವನ್ನು ಓದಿದಾಗ,  ಲೇಖಕಿಯ ಆಲೋಚನಾ ಲಹರಿ, ಪ್ರತಿ ವಿಷಯದ ತಳಸ್ಪರ್ಶಿ ಅಧ್ಯಯನ, ಬರವಣಿಗೆ ಓಘ ಎಲ್ಲವೂ ಮನಮುಟ್ಟಿತ್ತು. ಕೆಲವು ಪ್ರಸಂಗಗಳಂತೂ ಒಂದು ಕಾದಂಬರಿ ಬರೆಯುವಷ್ಟು ವಿಷಯವನ್ನು ಹೊಂದಿದ್ದರೂ ಅದನ್ನು ಒಂದೆರಡು ಪುಟಗಳಿಗೆ ಸೀಮಿತಗೊಳಿಸಿ ಬರೆಯುವುದು ನಿಜಕ್ಕೂ ಸವಾಲಿನ ಕೆಲಸ. ಒಬ್ಬ ಲೇಖಕರು ಒಂದೆಡೆ ಅಂಕಣ ಬರಹದ ಬಗ್ಗೆ ಹೀಗೆ ಉಲ್ಲೇಖಿಸಿದ್ದಾರೆ, “ಸಾಗರದಷ್ಟು ವಿಷಯವನ್ನು ಸಾಸಿವೆ ಕಾಳಿನಲ್ಲಿ ತುಂಬಿ ಬರೆಯುವುದೇ ಅಂಕಣ ಬರಹ” ಎಂದು ಅದಕ್ಕೆ ಪೂರಕವಾಗಿ ಈ ಕೃತಿಯಿದೆ ಎಂದು ನನ್ನ ಭಾವನೆ.

(ಮಂಜುಳ ಡಿ)

ಪ್ರಸ್ತುತ ಮಂಜುಳಾ ಅವರ ಅಂಕಣ ಬರಹ ಸಂಕಲನದಲ್ಲಿ ಒಟ್ಟು 24 ಲೇಖನಗಳಿವೆ. ಖ್ಯಾತ ಅಂಕಣಕಾರ ಪ್ರೇಮಶೇಖರ್ ಅವರ ಮುನ್ನುಡಿಯ ಗರಿಯಿದೆ. ವಿವಿಧ ವಿಷಯಗಳನ್ನು ಕೈಗೆತ್ತಿಕೊಂಡು ಬರೆದಿರುವ ಕೆಲವು ಲೇಖನಗಳಂತೂ ಮನಮುಟ್ಟುವಂತಿದೆ. ಇಲ್ಲಿರುವ ಬಹುತೇಕ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದರಿಂದ ಜನಪ್ರಿಯವೂ ಆಗಿವೆ.

ನನಗೆ ಪ್ರಿಯವಾದ ಕೆಲವು ಲೇಖನಗಳ ಬಗ್ಗೆ ಪ್ರಸ್ತಾಪಿಸುತ್ತೇನೆ. ಹಾಗೆಂದ ಮಾತ್ರಕ್ಕೆ ಉಳಿದವುಗಳು ಅಪ್ರಿಯ ಎಂದು ಭಾವಿಸಬಾರದು. ಎಲ್ಲವನ್ನೂ ಪರಿಚಯಿಸುತ್ತಾ ಹೋದರೆ, ಪುಟಮಿತಿ ಮೀರಬಹುದೆಂಬ ಆತಂಕ ಅಷ್ಟೇ. ಲತಾ ಮಂಗೇಶ್ಕರ್ ಅವರ ಬಗ್ಗೆ ಬರೆದ ಲೇಖನ ನಿಜಕ್ಕೂ ಮನಮುಟ್ಟುವಂತಿದೆ. ಲತಾ ಅವರ ಜೀವನ ಯಾತ್ರೆಯಲ್ಲಿ ಕೈಹಿಡಿದರೂ ವಿವಾಹವಾಗದೆ ಇದ್ದ ರಾಜ್ ಸಿಂಗ್ ಅವರ ಪ್ರೀತಿ, ಕಾಳಜಿ ಮೆಚ್ಚತಕ್ಕದ್ದು. ಲತಾ ಅವರ ಕಂಠದಿಂದ ಹೊರಹೊಮ್ಮಿದ ಮಧುರಗೀತೆಗಳು ಅವರನ್ನು ಸದಾ ಸ್ಮರಣೆಯಲ್ಲಿ ಹೊಂದಿರುವಂತಹದ್ದಾಗಿದ್ದು, ಅವರ ಬಗೆಗಿನ ಗೌರವವನ್ನು ಹೆಚ್ಚಿಸುತ್ತದೆ. ಇನ್ನು ಹಿತ್ತಲ ಗಿಡ ಮದ್ದಲ್ಲ ಎಂಬ ಶೀರ್ಷಿಕೆಯ ಲೇಖನವೂ ಸಹ ಸೊಗಸಾಗಿದೆ. ಒಂದು ಸಾಧಾರಣ ಕಾಯಿಲೆಯನ್ನು ಗುಣಪಡಿಸಲು ನಮ್ಮ ಹೈಟೆಕ್ ಆಸ್ಪತ್ರೆಗಳು ಅದೆಷ್ಟು ಹಣ ಪೀಕಿಸುತ್ತವೆ, ಅದೇ ನಾಟಿವೈದ್ಯರು ಪರಂಪರಾಗತವಾಗಿ ತಮ್ಮ ಕೈಚಳಕದಿಂದ ಮತ್ತು ಅಪಾರ ಅನುಭವದಿಂದ ಕಾಯಿಲೆಯ ಮೂಲಕ್ಕೇ ಹೋಗಿ ರೋಗ ನಿವಾರಣೆ ಮಾಡುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂತಹದ್ದು. ಇಂತಹ ನಾಟಿ ವೈದ್ಯಕ್ಕೆ ಹೆಸರಾದ ಮುತ್ತಮ್ಮನಂತಹ ಅನೇಕ ಗ್ರಾಮೀಣ ಭಾಗದ ವೈದ್ಯರಿಗೆ ಪ್ರೋತ್ಸಾಹ ನೀಡಬೇಕೆಂಬ ಲೇಖಕಿಯ ಅಳಲು ಮೆಚ್ಚಕತ್ಕದ್ದೇ.

ವಿದ್ವಾನ್ ಕೃಷ್ಣಮೂರ್ತಿಯವರು ತಮ್ಮ ಅಂಗವೈಕಲ್ಯದಲ್ಲಿಯೂ ನೆಮ್ಮದಿಯಿಂದ ಇದ್ದು, ಸ್ವತಃ ರಾಷ್ಟ್ರಪತಿ ಕಲಾಂ ಅವರು “ನಾನು ನಿಮಗೆ ಏನು ಮಾಡಬಲ್ಲೆ?” ದಯಮಾಡಿ ತಿಳಿಸಿರಿ ಎಂದರೂ ಸಹ ಏನನ್ನೂ ಯಾಚಿಸದೆ, ತಮ್ಮ ಮಧುರ ಕಂಠದಿಂದ ತ್ಯಾಗರಾಜರ ಕೀರ್ತನೆಯನ್ನು ಹಾಡಿ ರಂಜಿಸಿದ್ದನ್ನು ಓದಿ ರೋಮಾಂಚನವಾಯಿತು. ಹಾಗೆಯೇ ಸಾಹಿತ್ಯಕ್ಕೆ ಪುರುಷ ಹಾಗೂ ಮಹಿಳಾ ಟ್ಯಾಗ್ ಇಲ್ಲದೆ ಸಮ್ಮೇಳನಗಳನ್ನು ಆಯೋಜಿಸಬೇಕೆಂಬ ಲೇಖಕಿಯ ಮನೋಧರ್ಮ ಪ್ರಿಯವಾಯಿತು.

‘ನೀ ತಂದ ನೋವಿಗೆ ಮೊದಲೆಲ್ಲಿ, ಕೊನೆಯೆಲ್ಲಿ?’ ಎಂಬ ಲೇಖನ ಒಂದು ಕಾದಂಬರಿ ಬರೆಯುವಷ್ಟು ವಸ್ತುವನ್ನು ಹೊಂದಿದೆ. ಅದನ್ನು ಮಾರ್ಮಿಕವಾಗಿ ನಿರೂಪಿಸಿರುವ ಜಾಣ್ಮೆ ಬೆರಗುಗೊಳಿಸುವಂತಹದು. ಡಾಂಟೆ-ಬಿಟ್ರಿಯಾಸ್, ಲಾರಾ-ಪೆಟ್ರಾಕ್, ಕಚ-ದೇವಯಾನಿ ಮುಂತಾದವರ ಜೀವನದ ಘಟನೆಗಳು ಹೇಗೆ ತಿರುವು ಪಡೆಯಿತು ಎಂಬುದನ್ನು ಸೊಗಸಾಗಿ ನಿರೂಪಿಸಲಾಗಿದೆ.

(ಎಂ.ಎನ್.ಸುಂದರ್ ರಾಜ್)

ಹವಾಲ್ದಾರ್ ಇಷಾರ್ ಸಿಂಗನ ಸಾಹಸವನ್ನು ಸಾರಿ ಹೇಳುವ ಲೇಖನ, ಇವಾನ್ ಫರ್ನಾಂಡೀಸನ ಕ್ರೀಡಾ ಮನೋಭಾವವನ್ನು ಬಿಂಬಿಸುವ ಲೇಖನ, ಕವಿ ಸಿದ್ಧಲಿಂಗಯ್ಯನವರ ಅಂತಿಮ ದರ್ಶನದ ದೃಶ್ಯದ ವರ್ಣನೆ ಮತ್ತು ಅದಕ್ಕೆ ಬಳಸಿರುವ ಕವನ ಎಲ್ಲವೂ ಓದುಗನ ಮನಸ್ಸಿನಲ್ಲಿ ಕೆಲಹೊತ್ತು ನೆಲೆಗೊಳ್ಳುತ್ತದೆ.

ಅದೇರೀತಿ ತುಳಸೀ ಮುಂಡಾ ಅವರ ಸಾಧನೆ, ಹ್ಯೂಮನ್ ಲೈಬ್ರರಿಯ ಬಗೆಗಿನ ವಿವರ, ಶೆರ್ಪಾಗಳ ಶೌರ್ಯ ಮುಂತಾದ ವಿಷಯಗಳು ಓದುಗರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿವೆ.

ಲೇಖಕಿ ಮಂಜುಳಾ ಅವರ ಕೈ ಪಳಗಿದೆ. ಯಾವುದೇ ವಿಚಾರಗಳನ್ನು ಸಮರ್ಥವಾಗಿ ಮಂಡಿಸುವ ಪ್ರತಿಭೆಯಿದೆ. ಬರವಣಿಗೆಯ ಶೈಲಿ ಸಹ ಪ್ರಶಂಸನೀಯ. ಆದರೆ ಕೆಲವು ಲೋಪದೋಷಗಳನ್ನು ಹೇಳದಿದ್ದರೆ, ಈಕೆ ತಿದ್ದಿಕೊಳ್ಳುವುದಾದರೂ ಹೇಗೆ? ಲೇಖನದ ತಲೆಬರಹ ನೋಡಿಯೇ ಓದಬೇಕೆಂಬ ಕುತೂಹಲ ಕೆರಳಬೇಕು. ಅಂತಹ ತಲೆಬರಹ ನೀಡುವುದು ಒಳಿತು. ಅತಿ ಉದ್ದವಾದ ತಲೆಬರಹವಿರಬಾರದು. ‘ಕೆಲವೊಮ್ಮೆ ತಲೆಬರಹ ನೋಡಿ ಓದುವವರೂ ಇದ್ದಾರೆ. ಅಲ್ಲದೆ, ಅಲ್ಲಲ್ಲಿ ನುಸುಳಿರುವ ಕೆಲವು ಮುದ್ರಣ ದೋಷವನ್ನು ಪ್ರಯತ್ನಿಸಿದ್ದರೆ ತಪ್ಪಿಸಬಹುದಿತ್ತು ಎನಿಸುತ್ತದೆ. ಇವೇನೂ ಅಂತಹ ದೋಷಗಳಲ್ಲವೆಂದರೂ ಸಹ ಜಾಗೃತಿ ವಹಿಸುವುದು ಒಳಿತು. ಉಳಿದಂತೆ ಇದೊಂದು ಉತ್ತಮ ಪ್ರಯತ್ನ. ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದರಿಂದ ಅವುಗಳಿಗೆ ಓದುಗರ ಒಪ್ಪಿಗೆಯ ಮೊಹರು ಬಿದ್ದಿದೆ ಎಂದೇ ಭಾವಿಸಬಹುದು.

(ಕೃತಿ: ಕೇದಿಗೆ ಗರಿ, ಲೇಖಕರು: ಡಿ.ಮಂಜುಳಾ, ಪ್ರಕಾಶಕರು: ತೇಜು ಪಬ್ಲಿಕೇಷನ್, ಬೆಲೆ: 90/-)