“ಶಾಲಾಮಕ್ಕಳ ಕಲಿಕೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಾಲಿಸಿ, ಮಕ್ಕಳ ನಿರ್ಧಾರಗಳಿಗೆ, ಆಯ್ಕೆಗೆ, ನಡೆನುಡಿಗೆ ಮತ್ತು ಅವರ ದನಿಗೆ ಮೊದಲ ಆದ್ಯತೆ. ಶಿಕ್ಷಕರೊಂದಿಗೆ ಜೊತೆಗೂಡಿ ಶಾಲೆಗೆ ಸಂಬಂಧಿಸಿದ, ಕಲಿಕಾ ವಸ್ತು, ಸಾಮಗ್ರಿ ಮತ್ತು ವಿಧಾನಗಳಿಗೆ ಸಂಬಂಧಪಟ್ಟ ನಿಯಮಗಳನ್ನು, ಕ್ರಮಗಳನ್ನು ಮಕ್ಕಳು ಚರ್ಚಿಸಿ, ಸಹಮತದಿಂದ ಆಚರಣೆಗೆ ತರುತ್ತಾರೆ. ಸರಿಯಿಲ್ಲವೆಂದೆನಿಸಿದರೆ ಬದಲಾವಣೆ ಮಾಡಲು ಬೇಕಷ್ಟು ಅವಕಾಶಗಳು ಮತ್ತು ಪರಸ್ಪರ ಒಪ್ಪಿಗೆಯಿರುತ್ತದೆ.” 
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

‘ಪೆಟ್ ಪೆರೇಡ್’ ಎನ್ನುವ ದಿನ ನಿರ್ಧರಿತವಾದ ಕೂಡಲೇ ಎಲ್ಲರಿಗಿಂತಲೂ ನನಗೆ ಅದೇನೋ ಸಂಭ್ರಮ. ಮೊದಲ ಬಾರಿ ಅದನ್ನು ಕೇಳಿದಾಗ ಸಾಕುಪ್ರಾಣಿಗಳನ್ನು ಪ್ರದರ್ಶನಕ್ಕಿಟ್ಟು ಪೆರೇಡ್ ಮಾಡಿಸುವುದೇ? ಅವಕ್ಕೆ ಹಿಂಸೆಕೊಟ್ಟು ನಾವು ಅದನ್ನು ನೋಡುತ್ತಾ ಇರುವುದೇ? ಇದರಲ್ಲಿ ಪಾಲುದಾರರಾಗುವುದು ಚೆನ್ನಿಲ್ಲ, ಎಂದು ಮುಖ್ಯಸ್ಥರ ಬಳಿ ದೂರಿದ್ದೆ.

“ನಿನ್ನ ಆತಂಕ ನನಗೆ ಅರ್ಥವಾಗುತ್ತದೆ. ಪ್ರತಿವರ್ಷವೂ ನಿನ್ನಂತಹ ತಂದೆತಾಯಿಯರು ಇದೇ ಹೇಳುತ್ತಾರೆ. ಆದರೆ ಆ ದಿನ ಬಂದಾಗ ನೀನೇ ನೋಡುತ್ತೀಯ. ನಾವೆಲ್ಲರೂ ಪ್ರಾಣಿಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀವಿ ಎನ್ನುವುದು ನಿನಗೆ ಮನದಟ್ಟಾಗುತ್ತದೆ”, ಎಂದವರು ಹೇಳಿದರೂ ನನಗೆ ಸಮಾಧಾನವಾಗಿರಲಿಲ್ಲ. ಆಗ ನಮ್ಮ ಮನೆಯಲ್ಲಿ ಸಾಕುಪ್ರಾಣಿ ಇರಲಿಲ್ಲ. ಮಗ ಬಂದು, “ಇಲ್ಲದಿದ್ದರೂ ಪರವಾಗಿಲ್ಲವಂತೆ; ದೊಡ್ಡವರಲ್ಲೇ ಒಬ್ಬರು ಆ ದಿನ ನನ್ನ ಸಾಕುಪ್ರಾಣಿಯಾಗುತ್ತಾರೆ”, ಎಂದಾಗ ಕುತೂಹಲ ಮೂಡಿತ್ತು. ಆ ದಿನ ಬಂದೇಬಿಟ್ಟಿತು. ಆದರೆ ನಾನು ಹೋಗಿನೋಡುವ ಅವಕಾಶ ಸಿಕ್ಕಲಿಲ್ಲ. ಮರುವರ್ಷ ಅದೇ ಸಂದರ್ಭ ಮರುಕಳಿಸಿದಾಗ ಪುಣ್ಯಕ್ಕೆ ಆವತ್ತು ನನಗೆ ಟೀಚಿಂಗ್ ಇರಲಿಲ್ಲ.

ಮೈದಾನದಲ್ಲಿ ಮಕ್ಕಳು, ದೊಡ್ಡವರು ಕುರ್ಚಿಗಳನ್ನ ತಂದಿಟ್ಟುಕೊಂಡರು. ಕೆಲವರು ಮನೆಯಿಂದ ಕ್ಯಾಂಪಿಂಗ್ ಚೇರ್ ತಂದಿದ್ದರು. ಒಂದಷ್ಟು ಮಕ್ಕಳು ಮರಗಳ ಮೇಲೆ ಆಟವಾಡುತ್ತಿದ್ದರು. ಅಲ್ಲಲ್ಲಿ ಮುದ್ದು ನಾಯಿಗಳು, ಬೆಕ್ಕುಗಳು ಓಡಾಡುತ್ತಿದ್ದವು. ತಮ್ಮತಮ್ಮ ಪೆಟ್ಟಿಗೆಗಳಲ್ಲಿ ಚಿಕ್ಕ ಇಲಿಗಳು, ಗಿನಿಪಿಗ್, ಹಲ್ಲಿ, ಲವ್ ಬರ್ಡ್ಸ್, ಮೀನು ಪೆಟ್ಟಿಗೆಯಲ್ಲಿ ತರಾವರಿ ಮೀನುಗಳು, ಅಲ್ಲೊಂದು ಇಲ್ಲೊಂದು ಹಾವು, ಕೋಳಿ, ಬಾತುಕೋಳಿಗಳ ಹಿಂಡು, ಒಂದೆರಡು ಮೇಕೆಗಳು ಇದ್ದವು. ಹಿರಿಯ ಮಕ್ಕಳು ಬಂದು ಎಲ್ಲರ ಗಮನವನ್ನು ಸೆಳೆದು ಈ ವರ್ಷದ ಪೆಟ್ ಪೆರೇಡ್ ಆರಂಭ ಎಂದು ಘೋಷಿಸಿದರು. ಮಕ್ಕಳು ಒಬ್ಬರ ನಂತರ ಒಬ್ಬರು ಜೋಪಾನವಾಗಿ, ಬಲು ಕಾಳಜಿಯಿಂದ ತಮ್ಮ ಜೊತೆ ತಮ್ಮ ಮುದ್ದು ಪ್ರಾಣಿಯನ್ನು ಕರೆತಂದು ಅದರ ಹೆಸರು, ವಯಸ್ಸು, ಅದರ ವ್ಯಕ್ತಿತ್ವ, ಅದಕ್ಕೆ ಏನೆಲ್ಲಾ ಇಷ್ಟ/ಕಷ್ಟ ಎಂಬಂತೆ ವಿವರಗಳನ್ನು ಹೇಳಿದರು. ಜೊತೆಗೆ ಅವರ ಹಿರಿಯರು ಸಹಾಯಕ್ಕಿದ್ದರು. ನೋಡುಗರು ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದರು. ಪ್ರತಿಯೊಂದು ಪ್ರಾಣಿಗೂ ಪ್ರೋತ್ಸಾಹಕರ ಬಿರುದು-ಬಾವಲಿಗಳನ್ನ ಕೊಟ್ಟರು. ಒಳ್ಳೆ ಚರ್ಮ, ದೊಡ್ಡ ಕಣ್ಣು, ಬಲು ಚೆಂದನೆಯ ಬಾಲ, ಆಕರ್ಷಕ ಕೂಗು, ಮುದ್ದು ಉಕ್ಕಿಸುವ ಚೆನ್ನಿಗ, ಮನಸೆಳೆಯುವ ಹುಡುಗಿ, ತನ್ನ ಪಾಡಿಗೆ ತಾನು ಇರುವವ, ಸಹಕರಿಸಿದ ಸಂಯಮಗಾರ್ತಿ, ಎಂದೆಲ್ಲ ಬಿರುದುಗಳನ್ನ ಕೇಳಿ ಮಕ್ಕಳು ಹರ್ಷಿಸಿದರು. ಅಭ್ಯಾಸವಿದ್ದ ಪ್ರಾಣಿಗಳನ್ನು ಮಾತ್ರ ಅಪ್ಪಿಕೊಂಡೋ ಅಥವಾ ಹತ್ತಿರ ಬಂದು ನೋಡಿಯೋ ಮಾಡಿದರು. ನನ್ನ ಮಗನ ಸಾಕು ಪ್ರಾಣಿಯಾಗಿ ಪುನಃ ಅದೇ ಮುಖ್ಯಸ್ಥರು ಬಂದರು. ಮಗ ಇದು ನನ್ನ ಬೆಕ್ಕು ಎಂದು ಹೇಳುತ್ತಾ ತನ್ನ ಬೆಕ್ಕಿನಲ್ಲಿ ತನಗೆ ಬೇಕಿದ್ದ ಗುಣಗಳ ಬಗ್ಗೆ ಹೇಳಿಕೊಂಡ. ನೋಡುಗರ ಬಳಿ ಹೋಗಿ ಬೆಕ್ಕು ಮಿಯಾವ್ಮಿಯಾವ್ ‘ಅಂದರು’.


ಪ್ರತಿ ಅಕ್ಟೋಬರ್ ತಿಂಗಳಲ್ಲಿ ಇಡೀ ಮಕ್ಕಳು, ಪೋಷಕರು, ಶಿಕ್ಷಕರು ಎಲ್ಲರೂ ಕೂಡಿ ೨೪ ಕಿಲೋಮೀಟರ್ ಸೈಕಲ್ ಯಾತ್ರೆ ಮಾಡುತ್ತಾರೆ. ಚಿಕ್ಕಮಕ್ಕಳ ಪಕ್ಕದಲ್ಲಿ ದೊಡ್ಡವರು, ಸುಸ್ತಾದವರ ಸೈಕಲ್ಲನ್ನು ಏರಿಸಿಕೊಂಡು ಮುಂದೆ ಸಾಗುವ ಕಾರ್, ನೀರು ಕುಡಿಯುವ ಬ್ರೇಕ್, ದಾರಿಯಲ್ಲೊಮ್ಮೆ ಪಿಕ್ನಿಕ್ – ಹೀಗೆ ನಡೆಯುವ ಈ ಯಾತ್ರೆಯ ಸೊಗಸನ್ನ ನೋಡಿಯೇ ಅರಿಯಬೇಕು ಅನ್ನಿಸಿಬಿಡುತ್ತದೆ. ಇದಲ್ಲದೆ ವರ್ಷಕ್ಕೊಮ್ಮೆ ಕ್ಯಾಂಪಿಂಗ್, ಸ್ಥಳೀಯ ಮ್ಯೂಸಿಯುಮ್, ಆರ್ಟ್ ಗ್ಯಾಲರಿ, ಝೂ, ಬೀಚ್, ಆಸ್ಟ್ರೇಲಿಯನ್ ಬುಷ್ ಮುಂತಾದವಕ್ಕೆ ಭೇಟಿಕೊಡುವುದು ನಡೆದೇ ಇರುತ್ತದೆ. ಮಕ್ಕಳಿಗೆ ಆ ಕ್ಷಣಕ್ಕೆ ಹೊಳೆಯುವ ಐಡಿಯಾ ಆ ದಿನವೇ ಕಾರ್ಯರೂಪಕ್ಕೆ ಬರುತ್ತದೆ. ಒಮ್ಮೆ ಶಾಲೆ ಪಕ್ಕದಲ್ಲಿದ್ದ ಎತ್ತರದ ಪ್ರದೇಶದಲ್ಲಿ ಅಂಗಡಿಗಳಿಂದ ಪುಕ್ಕಟೆಯಾಗಿ ಕೊಟ್ಟಿದ್ದ ದೊಡ್ಡ ಹೋರ್ಡಿಂಗ್ ಹಾಳೆಗಳನ್ನ ಪೇರಿಸಿದ್ದು ನನ್ನ ಮಗ ಮತ್ತವನ ಸ್ನೇಹಿತನ ಕಣ್ಣಿಗೆ ಬಿತ್ತು. ಕಷ್ಟಪಟ್ಟು ಆ ಹಾಳೆಗಳನ್ನ ಬೇರ್ಪಡಿಸಿ ಏರು ಪ್ರದೇಶಕ್ಕೆ ಎಳೆದುತಂದು ಹಾಳೆಯ ಮೇಲೆ ಕೂತು ಅಲ್ಲಿಂದ ಜಾರಿಯೇಬಿಟ್ಟರು. ಈ ಚಟುವಟಿಕೆ ಎಲ್ಲರನ್ನೂ ಆವಾಹಿಸಿಕೊಂಡು ವರ್ಷ ಪೂರ್ತಿ ನಡೆಯಿತು. ಮಕ್ಕಳ ಆನಂದ ಹೇಳತೀರದು. ನಾವು ಪೋಷಕರು, ಶಿಕ್ಷಕರು ಕಡೆಗೆ, ಒಂದಿಬ್ಬರು ಅಜ್ಜ ಅಜ್ಜಿಯರೂ ಕೂಡ ಜಾರಿ ನಕ್ಕಿದ್ದೇ ನಕ್ಕಿದ್ದು. ಮುಖ್ಯವಾಹಿನಿಯ ಯಾವುದೇಶಾಲೆ ಇಂತಹ ಚಟುವಟಿಕೆಗೆ ಅವಕಾಶ ಕೊಡುವುದಿಲ್ಲ.

ಇಂತಹ ಚಟುವಟಿಕೆಗಳು ನಡೆಯುವ ಆ ಸ್ಥಳ ಡೆಮೊಕ್ರಟಿಕ್ ಸ್ಕೂಲ್. ಅಂದರೆ ಶಾಲಾಮಕ್ಕಳ ಕಲಿಕೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಾಲಿಸಿ, ಮಕ್ಕಳ ನಿರ್ಧಾರಗಳಿಗೆ, ಆಯ್ಕೆಗೆ, ನಡೆನುಡಿಗೆ ಮತ್ತು ಅವರ ದನಿಗೆ ಮೊದಲ ಆದ್ಯತೆ. ಶಿಕ್ಷಕರೊಂದಿಗೆ ಜೊತೆಗೂಡಿ ಶಾಲೆಗೆ ಸಂಬಂಧಿಸಿದ, ಕಲಿಕಾ ವಸ್ತು, ಸಾಮಗ್ರಿ ಮತ್ತು ವಿಧಾನಗಳಿಗೆ ಸಂಬಂಧಪಟ್ಟ ನಿಯಮಗಳನ್ನು, ಕ್ರಮಗಳನ್ನು ಮಕ್ಕಳು ಚರ್ಚಿಸಿ, ಸಹಮತದಿಂದ ಆಚರಣೆಗೆ ತರುತ್ತಾರೆ. ಸರಿಯಿಲ್ಲವೆಂದೆನಿಸಿದರೆ ಬದಲಾವಣೆ ಮಾಡಲು ಬೇಕಷ್ಟು ಅವಕಾಶಗಳು ಮತ್ತು ಪರಸ್ಪರ ಒಪ್ಪಿಗೆಯಿರುತ್ತದೆ. ಶಾಲಾಪಠ್ಯಯನ್ನು ಮತ್ತು ಪ್ರಾಥಮಿಕ ಹಂತದ ಶಿಕ್ಷಣವನ್ನು ಚಟುವಟಿಕೆಗಳ ಮತ್ತು ಸ್ವಾನುಭವದ ಮೂಲಕ ಮಕ್ಕಳು ಪಡೆಯುತ್ತಾರೆ. ಹೆಚ್ಚಿನ ಕಲಿಕೆ ಹೊರಾಂಗಣದ ಪರಿಸರದಲ್ಲಿ ನಡಿಯುವುದಲ್ಲದೆ, ಕಲೆ, ಸಂಗೀತ, ಕುಶಲಕಲೆಗಳ ಕಡೆ ಹೆಚ್ಚಿನ ಗಮನವೂ ಇರುತ್ತದೆ. ಮಕ್ಕಳ ಹಕ್ಕುಗಳಿಗೆ ಇಲ್ಲಿ ಪ್ರಾಧಾನ್ಯತೆ. ಮಕ್ಕಳಿಗೆ ಮತ್ತು ಶಿಕ್ಷರಿಗೆ ಸಮಾನ ಅಧಿಕಾರ. ಮಕ್ಕಳನ್ನು ದರ್ಪದಿಂದ, ಅಧಿಕಾರದ ದನಿಯಿಂದ ಮಾತನಾಡಿಸುವ ದೃಶ್ಯಗಳು ಕಾಣುವುದಿಲ್ಲ. ವರ್ತನ-ಸಂಬಂಧಪಟ್ಟ ವೈಪರೀತ್ಯಗಳು ಇರುವ ಮಕ್ಕಳು, ಕಲಿಕೆಗೆ ಸಂಬಂಧಿಸಿದ ವೈಪರೀತ್ಯಗಳು ಇರುವ ಮಕ್ಕಳು ಮತ್ತು ಅಂತಹ ಸಮಸ್ಯೆಗಳು/ವೈಪರೀತ್ಯಗಳು ಇಲ್ಲದ ಮಕ್ಕಳು ಎಲ್ಲರೂ ಒಟ್ಟಾಗಿ ಬೆರೆತು ಕಲಿಯುವ ವಾತಾವರಣ ಇಲ್ಲಿ ಕಾಣುತ್ತದೆ.

(ಇಂಗ್ಲೆಂಡಿನ ಸಮ್ಮರ್ ಹಿಲ್ ಶಾಲೆ)

ನಾವು ಮೆಲ್ಬರ್ನ್ ನಗರದಲ್ಲಿದ್ದಾಗ ಅಲ್ಲಿದ್ದ ನಾಲ್ಕು ಡೆಮಕ್ರಾಟಿಕ್ ಶಾಲೆಗಳಿಗೆ ಭೇಟಿಕೊಟ್ಟು ನಮ್ಮ ಮಗುವಿಗೆ ಆ ಶಾಲೆಗಳು ಇಷ್ಟವಾಗುತ್ತದೆಯೇ ಎಂದು ಯೋಚಿಸಿದ್ದೆವು. ವಿಲೇಜ್ ಸ್ಕೂಲ್, Preshil, Hurstbridge Learning Co-Op, Fitzroy Community School ಬಲು ವಿಭಿನ್ನವಾದವು. ಒಂದೊಂದರ ತತ್ವ, ವಿಚಾರಧಾರೆ, ಕಲಿಕೆಯನ್ನು ಮಕ್ಕಳ ಅನುಭವಕ್ಕೆ ಒಪ್ಪಿಸುವ ವಿಧಾನ, ಮಕ್ಕಳಿಗಿರುವ ಸ್ವಾತಂತ್ರ್ಯ, ಶಾಲೆಯ ಒಳಪರಿಸರ ಹೇಗಿದೆ, ಕಲಿಕಾ ಸಂಪನ್ಮೂಲಗಳು ಯಾವುವು, ಹೊರಗಿನ ಪರಿಸರದಲ್ಲಿ ಮಕ್ಕಳ ಅನುಭವಗಳಿಗೆ ತಕ್ಕ ಪ್ರೋತ್ಸಾಹಕ ಅಂಶಗಳಿವೆಯೇ ಎನ್ನುವ ಪ್ರಶ್ನೆಗಳಿಗೆ ಇಂತಹ ಶಾಲೆಗಳಲ್ಲಿ ಸದಾ ಸ್ವಾಗತವಿದೆ. ಹೆಚ್ಚಿನ ಮಟ್ಟಿಗೆ ಈ ಶಾಲೆಗಳಲ್ಲಿ ಮಕ್ಕಳು ಪರೀಕ್ಷೆಗಳನ್ನು ಬರೆಯುವುದಿಲ್ಲ. ಅವರಿಗೆ ಹೋಮ್ ವರ್ಕ್ ಅಂದರೆ ಏನು ಎನ್ನುವ ಗಂಧಗಾಳಿಯೂ ಇರುವುದಿಲ್ಲ. ಮೂರುನಾಲ್ಕು ತಿಂಗಳಿಗೆ ಯಾವ ಟೀಚರ್ ಕೂಡ ಪ್ರೋಗ್ರೆಸ್ ರಿಪೋರ್ಟ್ ಬರೆಯುವುದಿಲ್ಲ. ಮಕ್ಕಳು ಸಮವಸ್ತ್ರವನ್ನು ಧರಿಸುವುದಿಲ್ಲ. ಮಕ್ಕಳು ಮತ್ತು ದೊಡ್ಡವರು ಹವಾಮಾನಕ್ಕೆ ತಕ್ಕಂತೆ ಉಡುಪು ಮತ್ತು ಪಾದರಕ್ಷೆ ಆರಿಸಿಕೊಳ್ಳುತ್ತಾರೆ. ವಾರಕ್ಕೊಮ್ಮೆ ಎಲ್ಲರ ಮನೆಯಲ್ಲೂ ಒಂದು ಆಹಾರಖಾದ್ಯವನ್ನು ಮಾಡಿ, ಶಾಲೆಗೆ ತಂದು, ಎಲ್ಲಾ ಆಹಾರ ಪದಾರ್ಥಗಳನ್ನು ಒಟ್ಟಿಗೆ ಜೋಡಿಸಿಟ್ಟು ಮಕ್ಕಳು ಹಂಚಿಕೊಂಡು ತಿನ್ನುತ್ತಾರೆ. ಹೊರಗಿನವರಿಗೆ ಇದೇನಪ್ಪಾ ಇದು ಶಾಲೇನಾ ಅಥವಾ ಮಾರ್ಕೆಟ್ಟಾ ಎಂಬಂತೆ ಗಾಬರಿ ಹುಟ್ಟಿಸುವಂತಹ ಗಲಾಟೆ, ಕಲರವ, ನಗು ಅಲ್ಲಿರುತ್ತದೆ. ಆದರೆ ನನ್ನಂಥವರಿಗೆ ಹೌದು, ಪ್ರಾಥಮಿಕ ಶಾಲೆ ಎಂದರೆ ಹೀಗಿರಬೇಕು ಎನ್ನುವ ಹಿಗ್ಗು!

ಕೆಲಶಾಲೆಗಳು ಸರ್ಕಾರದ ಶಿಕ್ಷಣ ಖಾತೆಯಿಂದ ಅಲ್ಪಸ್ವಲ್ಪ ಹಣಕಾಸು ಸಹಾಯ ಪಡೆಯುತ್ತವೆ. ಮತ್ತು, ಬೋರ್ಡ್ ಸದಸ್ಯರಾಗಿರುತ್ತಾರೆ, ಹಾಗಾಗಿ ಒಂದಿಷ್ಟು ರಾಷ್ಟೀಯ ಶಿಕ್ಷಣ ಪದ್ಧತಿಯ ಪಠ್ಯವನ್ನು ಅಳವಡಿಸಿಕೊಳ್ಳುತ್ತಾರೆ. ಕೆಲಶಾಲೆಗಳು ಸಂಪೂರ್ಣವಾಗಿ ಸ್ವತಂತ್ರವಾಗಿವೆ. ಬಹುತೇಕ ಡೆಮೊಕ್ರಾಟಿಕ್ ಶಾಲೆಗಳು ಮಕ್ಕಳ ತಂದೆತಾಯಿಯರು ಆರಂಭಿಸಿದ್ದು. ಹಾಗಾಗಿ ಎಷ್ಟೋ ವಿಷಯಗಳನಿರ್ಧಾರ ಆಯಾ ನಿರ್ದಿಷ್ಟ ಶಾಲೆಗೇ ಸೇರಿರುತ್ತದೆ. ಇಂತಹ ‘ಪ್ರತಿಯೊಂದು ಶಾಲೆಯೂ ಭಿನ್ನ’ ಎಂಬ ಸನ್ನಿವೇಶ ಮುಖ್ಯವಾಹಿನಿಗೆ ತದ್ವಿರುದ್ಧವಾದುದು.

ಶಾಲಾಮಕ್ಕಳ ಕಲಿಕೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಾಲಿಸಿ, ಮಕ್ಕಳ ನಿರ್ಧಾರಗಳಿಗೆ, ಆಯ್ಕೆಗೆ, ನಡೆನುಡಿಗೆ ಮತ್ತು ಅವರ ದನಿಗೆ ಮೊದಲ ಆದ್ಯತೆ. ಶಿಕ್ಷಕರೊಂದಿಗೆ ಜೊತೆಗೂಡಿ ಶಾಲೆಗೆ ಸಂಬಂಧಿಸಿದ, ಕಲಿಕಾ ವಸ್ತು, ಸಾಮಗ್ರಿ ಮತ್ತು ವಿಧಾನಗಳಿಗೆ ಸಂಬಂಧಪಟ್ಟ ನಿಯಮಗಳನ್ನು, ಕ್ರಮಗಳನ್ನು ಮಕ್ಕಳು ಚರ್ಚಿಸಿ, ಸಹಮತದಿಂದ ಆಚರಣೆಗೆ ತರುತ್ತಾರೆ.

ಅಂತಹ ಭಿನ್ನತೆಯೇ ಕೆಲ ಬಾರಿ ಶಾಲೆಗೆ ಶತ್ರುವಾಗಬಹುದು. ಶಾಲೆಯ ಕೆಲಮಂದಿ ಅಥವಾ ಶಾಲೆಯನ್ನು ಶುರುಮಾಡಿದ ಮಂದಿ ಸೇರಿಕೊಂಡು ಕಣ್ಣಿಗೆ ಕಾಣದ ರೀತಿ ಅಧಿಕಾರವನ್ನು ಚಲಾಯಿಸಬಹುದು, ಯಾವ ಮಗು/ಕುಟುಂಬ ಶಾಲೆಗೆ ಸೇರಬಹುದು ಎಂಬ ನಿರ್ಧಾರ ಕೂಡ ಆ ಕೆಲವರೇ ತೀರ್ಮಾನಿಸಬಹುದು. ಶಾಲೆಗೇ ಗೂಟ ಹೊಡೆದುಕೊಂಡು ವರ್ಷಗಳ ಕಾಲ ಕೂತ ಹಿರಿಯರು ಆ ಸ್ಥಾನದಿಂದ ಇಳಿಯದೆ ಕಿರಿಕಿರಿ ಮಾಡಿ, ಹೊಸ ನೀರು ಹರಿಯದಂತೆ ತಡೆಯಬಹುದು. ಸರಕಾರದಿಂದ ಬರುವ ಕಿರಿಕಿರಿಯನ್ನು ತಾಳದೆ ಹೋಗಬಹುದು. ಇಂತಹ ಅನೇಕ ಸಂದರ್ಭಗಳು ನಡೆದ ಉದಾಹರಣೆಗಳೂ ಇವೆ. ಆಗೆಲ್ಲ ಇಂಥ ಶಾಲೆಗಳು ಮುಚ್ಚಿವೆ, ಕೆಲವೊಮ್ಮೆ ಮರು ತೆರೆದಿವೆ. ಹೊಸ ರೂಪವನ್ನು ಪಡೆದಿವೆ. ನೆಲ ಕಚ್ಚಿಹೋದರೂ ಪುನರ್ಜನ್ಮ ಪಡೆದು ಹಕ್ಕಿಯಂತೆ ಹಾರಿವೆ. ಮಕ್ಕಳು/ಕುಟುಂಬಗಳು ತಂಡೋಪತಂಡವಾಗಿ ಬಿಟ್ಟುಹೋದ ಸಂದರ್ಭಗಳೂ ಇವೆ. ಹಾಗಾಗಿ ಇಂತಹ ಶಾಲೆಗಳನ್ನು ನಡೆಸುವುದೇ ಬಹು ಕಷ್ಟ ಎನ್ನುವುದು ಸಾರ್ವತ್ರಿಕ ಅಭಿಪ್ರಾಯ.

ಇಂದು ಹಲವಾರು ಪಾಶ್ಚಾತ್ಯ ದೇಶಗಳಲ್ಲಿರುವ ಪರ್ಯಾಯ ಶಿಕ್ಷಣ /ಡೆಮೊಕ್ರಾಟಿಕ್ ಶಾಲೆಗಳ ಪಟ್ಟಿಯಲ್ಲಿ ಇಂಗ್ಲೆಂಡಿನ ಸಮ್ಮರ್ ಹಿಲ್ ಶಾಲೆ (A.S.Neill’s Summerhill school) ಮಾದರಿ ಶಾಲೆ ಎಂದು ಗುರುತಿಸಲ್ಪಟ್ಟಿದೆ. ಮತ್ತೊಂದು ಸ್ಯಾಂಡ್ಸ್ (Sands) ಸ್ಕೂಲ್. ದೇಶದಾದ್ಯಂತ ಅಲ್ಲಲ್ಲಿ ಬೆರಳೆಣಿಕೆಯಷ್ಟು ಇಂಥ ಶಾಲೆಗಳಿವೆ. ಅಮೆರಿಕೆಯಲ್ಲಿ ಸಡ್ಬರೀ (Sudbury) ಶಾಲೆಗಳು ಪ್ರಸಿದ್ಧವಾದವು. ದಕ್ಷಿಣ ಅಮೆರಿಕ, ಯುರೋಪ್ ದೇಶಗಳಲ್ಲಿ ಎಂಬಂತೆ ಹಲವಾರು ಡೆಮೊಕ್ರಾಟಿಕ್ ಶಾಲೆಗಳಿವೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ Currumbena, Kinma ಹೆಸರುಗಳಿಸಿವೆ. ಬ್ರಿಸ್ಬನ್ ನಗರದಲ್ಲಿ ಪೈನ್ ಕಮ್ಯುನಿಟಿ ಸ್ಕೂಲ್ (Pine Community School) ಮತ್ತು ಬ್ರಿಸ್ಬೇನ್ ಇಂಡಿಪೆಂಡೆಂಟ್ ಸ್ಕೂಲ್ (Brisbane Independent School) ಇವೆ. ನಗರದ ಹೊರಗೆ ಸನ್ ಶೈನ್ ಕೋಸ್ಟ್ (Sunshine Coast) ಹಿಂಭಾಗದ ಪ್ರದೇಶದಲ್ಲಿ ಆನಂದ ಮಾರ್ಗಿಗಳು ನಡೆಸುವ ಶಾಲೆ, ಮತ್ತಿತರ ಎರಡು ಶಾಲೆಗಳು ಇವೆ. ಅಮೆರಿಕೆಯ ಸ್ವಯಂಸೇವಾ ಸಂಸ್ಥೆ AERO (Alternative Education Revolution Organisation) ಪ್ರತಿ ವರ್ಷವೂ ಡೆಮೊಕ್ರಾಟಿಕ್ ಶಿಕ್ಷಣ ಪದ್ಧತಿಯ ವಿಷಯದಲ್ಲಿ ಸಮಾನಾಸಕ್ತರ ಕೂಟವನ್ನು ನಡೆಸುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಟರ್ ನ್ಯಾಷನಲ್ ಡೆಮೊಕ್ರೆಟಿಕ್ ಎಜುಕೇಷನ್ ಕಾನ್ಫರೆನ್ಸ್ (International Democratic Education Conference) ಅದೇರೀತಿ ಕೂಟಗಳನ್ನು ನಡೆಸುತ್ತದೆ. ಇದಲ್ಲದೆ ಅದರ ಉಪಸಂಸ್ಥೆಗಳು ಯುರೋಪ್ ಹಾಗೂ ಏಷ್ಯಾ ಖಂಡದಲ್ಲಿ ಇವೆ.

ಭಾರತದ ಮಟ್ಟಿಗೆ ಹೇಳುವುದಾದರೆ ತಕ್ಷಣಕ್ಕೆ ಹೊಳೆಯುವುದು ರವೀಂದ್ರನಾಥ್ ಟಾಗೋರ್ ರ ಶಾಂತಿ ನಿಕೇತನ. ಅವರು ಶಿಕ್ಷಣದಲ್ಲಿ ಅಳವಡಿಸಿದ ಹೊರಾಂಗಣ ಪರಿಸರದಲ್ಲಿ ಪಾಠಕಲಿಕೆ, ನಾಟ್ಯ, ಸಂಗೀತ, ಕಲೆಗಳು, ಮರಕೆಲಸ, ಒಂದೇ ಎರಡೇ! ಹಿಂದೆ ಕರ್ನಾಟಕದಲ್ಲಿ ಶಿವರಾಮ ಕಾರಂತರು ಆರಂಭಿಸಿ ನಡೆಸಿದ ಬಾಲವನ ಮತ್ತೊಂದು ಅತ್ಯುತ್ತಮ ಉದಾಹರಣೆ. ಮತ್ತೊಂದು ಉದಾಹರಣೆಯೆಂದರೆ ಇಂಗ್ಲೆಂಡಿನ ಪೈಲಟ್ ಡೇವಿಡ್ ಹಾರ್ಸ್ ಬರ್ಗ್ ಕೆಲಸ ಬಿಟ್ಟು, ಇಂಗ್ಲೆಂಡ್ ಬಿಟ್ಟು ಕರ್ನಾಟಕ-ಆಂಧ್ರ ಪ್ರದೇಶದ ಗಡಿಯಲ್ಲಿ ಹಳ್ಳಿಮಕ್ಕಳಿಗೆಂದು ಆರಂಭಿಸಿದ ಪ್ರಾಯೋಗಿಕ ಶಿಕ್ಷಣ ಶಾಲೆ ನೀಲ್ ಭಾಗ್. ಅವರ ಬಳಿ ಅವರ ಹೊಸ ಪ್ರಯೋಗ ಶಿಕ್ಷಣದ ರೀತಿಯನ್ನು ಕಲಿತು, ಅರಿತು ಅವರ ಶಿಷ್ಯಂದಿರು ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಸಿದ ಶಿಕ್ಷಣ ಪ್ರಯೋಗಗಳು. ಇವುಗಳಲ್ಲಿ ಬೆಂಗಳೂರಿನ ಕನಕಪುರ ರಸ್ತೆಯ ಬದಿಯಿರುವ ಮಾಲತಿ ಅಕ್ಕನ ‘ವಿಕಸನ’ ಕೇಂದ್ರ ದೇಶ ವಿದೇಶಗಳಿಂದ ಪರ್ಯಾಯ ಶಿಕ್ಷಣದಲ್ಲಿ ಆಸಕ್ತಿ ಇರುವವರನ್ನು ಆಕರ್ಷಿಸುತ್ತದೆ. ಮತ್ತೊಂದು ರೀತಿಯ ಪ್ರಾಯೋಗಿಕ, ಪ್ರಗತಿಪರ, ಭಿನ್ನತೆಯುಳ್ಳದ್ದು ಜಿದ್ದು ಕೃಷ್ಣಮೂರ್ತಿ ತತ್ವವನ್ನು ಅನುಸರಿಸುವ ವ್ಯಾಲಿ ಶಾಲೆಗಳು (The Valley Schools).

ಈಗ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಅನೇಕ ಪ್ರಗತಿಪರ, ಪರ್ಯಾಯ ಶಾಲೆಗಳಿವೆ. ಉದಾಹರಣೆಗೆ ಮಾಗಡಿಯ ಹತ್ತಿರ ಇರುವ ಸೆಂಟರ್ ಫಾರ್ ಲರ್ನಿಂಗ್ (Centre for Learning), ಕನಕಪುರ ರಸ್ತೆಯ ಶಿಬುಮಿ (Shibumi) ಶಾಲೆ. ಜಿದ್ದು ಕೃಷ್ಣಮೂರ್ತಿ ತತ್ವವನ್ನು ಅಲ್ಪ ಸ್ವಲ್ಪ ಬದಲಿಸಿಕೊಂಡು ಜನ್ಮ ತಳೆದ ಹೊಸ ಶಾಲೆಗಳು, ಪರಿಸರ ಪ್ರೇಮಿಗಳಿಗೆ ಬೇಕಾದ ಶಾಲೆ, ಆರ್ಟ್ಸ್ ವಿಷಯಗಳನ್ನು ಮುಖ್ಯವಾಗಿಟ್ಟುಕೊಂಡ ಶಾಲೆ, ಯಾವುದೇ ಯಾರದೇ ತತ್ವವನ್ನು ಅನುಸರಿಸದ ತೀರ ಪ್ರಾಯೋಗಿಕ ಫಿಲೋಸೋಫಿಯುಳ್ಳ ಶಾಲೆ, ಹೀಗೆ ಬೇಕಾದಷ್ಟು ಪ್ರಗತಿಪರ ಪರ್ಯಾಯ ಶಾಲೆಗಳಿವೆ. ಇವು ಹೆಚ್ಚುಹೆಚ್ಚು ಮಕ್ಕಳ ಆಯ್ಕೆ/ನಿರ್ಧಾರ/ಭಾಗವಹಿಸುವಿಕೆಗಳನ್ನ ಅಳವಡಿಸಿಕೊಂಡು, ವಿದೇಶಗಳ ಇತರೆ ಪರ್ಯಾಯ ಮತ್ತು ಪ್ರಗತಿಪರ ಶಿಕ್ಷಣವನ್ನು ನೋಡಿ, ಗಮನಿಸಿ, ಸೂಕ್ತಬದಲಾವಣೆಗಳನ್ನು ಮಾಡಿಕೊಂಡ ಶಾಲೆಗಳು. ರುಡೊಲ್ಫ್ ಸ್ಟೆಯಿನೆರ್ ತಾವು ಹಿಂದೂ ಧರ್ಮದ ದಾರ್ಶನಿಕತೆಯಿಂದ ಪ್ರಭಾವಿತರಾಗಿ, ಮರುಚಿಂತನೆ ನಡೆಸಿ ಶುರುಮಾಡಿದ ಸ್ಟೆಯಿನೆರ್ ಶಿಕ್ಷಣ ವಿಧಾನ ಕೂಡ ಭಾರತದಲ್ಲಿ ಪ್ರಸಿದ್ಧಿ.

ಆಸ್ಟ್ರೇಲಿಯಾದಲ್ಲಿ ಈ ಡೆಮೊಕ್ರಾಟಿಕ್ ಶಾಲೆಗಳಿಗಿಂತಲೂ ಜನಪ್ರಿಯವಾಗಿರುವುದು ಹೋಂ ಸ್ಕೂಲಿಂಗ್. ಹೆಸರಿಗೆ ಹೋಮ್ ಸ್ಕೂಲಿಂಗ್ ಅಂತಿದ್ದರೂ ಹೋಮ್ ಸ್ಕೂಲಿಂಗ್ ಕುಟುಂಬಗಳು ನೂರಾರು ತರಹದ ನೆಟ್ವರ್ಕ್ ಗಳನ್ನ ಹೊಂದಿವೆ. ಅವುಗಳ ಮೂಲಕ ತಮಗೆ ಬೇಕಿರುವ ಚಟುವಟಿಕೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ. ಪ್ರಾದೇಶಿಕವಾಗಿ ಕೂಡ ಅವರ ಗುಂಪುಗಳು ಇವೆ. ಇದಲ್ಲದೆ ಅನ್ ಸ್ಕೂಲಿಂಗ್ (Unschooling) ಚಳವಳಿ ಇನ್ನೊಂದು ಜನಪ್ರಿಯವಾದದ್ದು. ಮುಖ್ಯವಾಹಿನಿ ಶಿಕ್ಷಣ ವ್ಯವಸ್ಥೆಗೆ ಇದು ಸಂಪೂರ್ಣ ತದ್ವಿರುದ್ಧ. ಹಾಗೆಂದು ಪರ್ಯಾಯ ಶಿಕ್ಷಣ ಪದ್ಧತಿಗಳನ್ನೂ ಈ ಚಳವಳಿ ಒಪ್ಪುವುದಿಲ್ಲ.

ಅದರ ತಂಗಿಯೋ ತಮ್ಮನೋ ಎಂಬಂತೆ ಇರುವುದು ಹ್ಯುಮೇನ್ ಎಜುಕೇಷನ್ (Humane Education), ರ್ಯಾಡಿಕಲ್ (Radical) ಸ್ಕೂಲಿಂಗ್ ಮುಂತಾದವು. ತಮ್ಮಷ್ಟಕ್ಕೆ ತಾವಿದ್ದುಕೊಂಡು ಇವು ಹೆಚ್ಚಿನ ಅಥವಾ ಯಾವುದೇ ಪ್ರಚಾರವಿಲ್ಲದೆ ತಮ್ಮ ಪಾಡಿಗೆ ತಾವು ಕೆಲಮಕ್ಕಳೊಂದಿಗೆ ಅನುಭವಕಲಿಕೆಯನ್ನ ಆನಂದಿಸುತ್ತಿದ್ದಾರೆ. ಓದು, ಬರಹ, ಗಣಿತ ಎಂಬ ರಗಳೆಯ ಕಟ್ಟುನಿಟ್ಟಿನ ಶಿಕ್ಷಣವನ್ನು ಪಕ್ಕಕ್ಕಿಟ್ಟು ನೋಡಿದರೆ ಬೇಕಾದಷ್ಟು ಅವಕಾಶಗಳು ಕಾಣುತ್ತವೆ. ಮಕ್ಕಳು ಅನುಭವ ಕಲಿಕೆಯನ್ನು ಎಷ್ಟು ಮೆಚ್ಚುತ್ತಾರೆ ಎನ್ನುವುದು ಕಣ್ಣಿಗೆ ಕಟ್ಟುತ್ತದೆ.