ನೆದರ್‌ಲ್ಯಾಂಡ್ಸ್‌ನ ಮನೆಗಳಲ್ಲಿ ಇನ್ನೂ ಒಂದು ಸಂಗತಿಯನ್ನು ಗಮನಿಸಿದೆ. ಜೊತೆಯಲ್ಲಿ ಆಡಲು ಮಕ್ಕಳು ಸಿಗದೆ ಇರಬಹುದು. ಇದಕ್ಕೆ ಬದಲಾಗಿ, ಪ್ರತಿ ಮನೆಯಲ್ಲೂ ಒಂದೊಂದು ಶಿಶುವಿಹಾರಕ್ಕೆ ಆಗುವಷ್ಟು ಆಟದ ಸಾಮಾನುಗಳು, ಎಲೆಕ್ಟ್ರಾನಿಕ್ ಉಪಕರಣಗಳು ತುಂಬಿ ತುಳುಕುತ್ತಿರುತ್ತವೆ. ಮಕ್ಕಳು ಈ ಉಪಕರಣಗೊಳಡನೆಯೇ ಹೆಚ್ಚು ಸಮಯ ಕಳೆಯುತ್ತಾರೆ. ಆತ್ಮೀಯ ಸಂಬಂಧ ಸ್ಥಾಪಿಸಿಕೊಳ್ಳುತ್ತಾರೆ. ಮಕ್ಕಳು ಬೇರೆ ಬೇರೆ ಪ್ರಾಣಿಗಳ ಬೊಂಬೆಗಳೊಡನೆ ಮಲಗುವುದು, ಮಾತನಾಡುವುದು ತುಂಬಾ ಸಾಮಾನ್ಯ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹತ್ತನೆಯ ಬರಹ
ನೀವು ಬರೇ ಟೆಲಿವಿಷನ್ ನೋಡುತ್ತಿದ್ದರೆ, ಸಾಮಾಜಿಕ ಮಾಧ್ಯಮಗಳನ್ನು ಅನುಸರಿಸುತ್ತಿದ್ದರೆ, ಯುರೋಪು ಎಷ್ಟು ಕ್ರೀಡಾ ಪ್ರೇಮಿಯಾದ ಭೂಭಾಗ ಅನಿಸುತ್ತದೆ. ಆಟಗಳು ಎಷ್ಟು ಜನಪ್ರಿಯ, ಜನ ಎಷ್ಟೊಂದು ಸುಖ, ಸಂತೋಷ, ಶಾರೀರಿಕ, ಆರೋಗ್ಯ, ನೆಮ್ಮದಿ ಬಯಸುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ. ನನಗೂ ಹಾಗೇ ಅನಿಸಿತು.
ಮಕ್ಕಳಿಗೆ ಸಂವೇದನಾಶೀಲವಾಗಿ, ಪ್ರಯೋಗಶೀಲವಾಗಿ ಕಲಿಸುವ ಶಿಕ್ಷಣ ವ್ಯವಸ್ಥೆಯಿದೆ. ಇಲ್ಲಿ ಜೀವನ ಕೌಶಲ್ಯವನ್ನು ಕೂಡ ಕಲಿಸುತ್ತಾರೆ. ಇದನ್ನು ನೋಡುವುದಕ್ಕೆ, ಇದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಯಾರಿಗಾದರೂ ಸಂತೋಷವಾಗುತ್ತದೆ. ಶಾಲೆಗಳ ಆವರಣದಲ್ಲೇ ಕ್ರೀಡಾಂಗಣ ಇರುತ್ತದೆ. ಪ್ರತಿದಿನವೂ ಶಾಲೆಯಲ್ಲಿ ಕ್ರೀಡೆಗೆ ಒಂದಿಷ್ಟು ಸಮಯ ನಿಗದಿಯಾಗಿರುತ್ತದೆ. ಸ್ವಲ್ಪ ಅಶಿಸ್ತಿನ ಮಕ್ಕಳನ್ನು ಹಾದಿಗೆ ತರಲು ಇಲ್ಲಿ ಅನುಸರಿಸುವುದು ಒಂದೇ ಮಾರ್ಗ. ನಿನಗೆ ಆಡಲು ಬಿಡುವುದಿಲ್ಲ, ಅಥವಾ ನಿನಗೆ ಇರುವ ಆಟದ ಸಮಯವನ್ನು ಕಡಿಮೆ ಮಾಡುತ್ತೇವೆ ಎಂದು ಶಿಕ್ಷಕರು ಗದರಿಸಿದರೆ ಸಾಕು, ಎಂತಹ ಅಶಿಸ್ತಿನ ಮಕ್ಕಳೂ ಹಾದಿಗೆ ಬಂದುಬಿಡುತ್ತವೆ.
ಆದರೆ ಇಲ್ಲಿ ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕುತ್ತಾರೆ ಎಂದರೆ ನೀವು ನಂಬಬೇಕು. ಶಾಲೆ ಮುಗಿದ ಮೇಲೆ, ಕೋಚಿಂಗ್ ಕ್ಲಾಸ್ ಮುಗಿದ ಮೇಲೆ, ಮಕ್ಕಳು ಮನೆಯೆಂಬ ಕೋಟೆಯೊಳಗೆ ಸೇರಿಕೊಳ್ಳುತ್ತಾರೆ. ನೆರೆಹೊರೆಯವರ ಜೊತೆ ಬೆರೆಯುವುದಿಲ್ಲ. ಏಕೆಂದರೆ, ನೆರೆಮನೆಯ ಮಕ್ಕಳು ಕೂಡ ಮನೆಯಿಂದ ಹೊರಗೆ ಬರುವುದೇ ಇಲ್ಲ. ಯಾವಾಗ ಹೊರಗೆ ಬಂದರೂ ತಾಯಿ ತಂದೆಗಳ ಜೊತೆಯಲ್ಲೇ ಬರಬೇಕು. ಅವರ ಕಣ್ಣಳತೆಯಲ್ಲೇ ಇರಬೇಕು.
ಮನೆಯ ಮುಂಭಾಗದಲ್ಲಿ, ಅಕ್ಕಪಕ್ಕದ ರಸ್ತೆಗಳಲ್ಲಿ ಮೈದಾನವಿದೆ, ಕ್ರೀಡಾಂಗಣವಿದೆ, ಉದ್ಯಾನವನಗಳಿವೆ, ಆಟವಾಡುವುದಕ್ಕೂ ಅನುಕೂಲವಿದೆ. ಆದರೆ ಮಕ್ಕಳು ಮನೆಯಿಂದ ಹೊರಬರಬೇಕಲ್ಲ! ಬಂದರೂ ಎಲ್ಲ ಶಿಷ್ಟಾಚಾರವನ್ನೂ ಪಾಲಿಸಿಕೊಂಡು ತಂದೆ ತಾಯಿಗಳ ಜೊತೆಯೇ ಬರಬೇಕು. ಹೀಗೆ ಬೇರೆ ಕುಟುಂಬಗಳ ಮಕ್ಕಳು ಬಂದರೂ ತಂದೆ ತಾಯಿಗಳ ನಿಯಂತ್ರಣದಲ್ಲೇ ಇರುತ್ತವೆ.
ನಮ್ಮ ಬೀದಿಯಲ್ಲೇ ನನ್ನ ಮೊಮ್ಮಗನ ವಯಸ್ಸಿನ ಎರಡು ಮೂರು ಮಕ್ಕಳು ಇದ್ದವು. ಆಟವಾಡಲು ಹೊರಬರುತ್ತಿದ್ದವು. ಒಂಟಿಯಾಗಿಯೂ, ಗುಂಪಿನಲ್ಲಿಯೂ. ನಾನು ನನ್ನ ಮೊಮ್ಮಗನಿಗೆ ಹೋಗು ಅವರ ಜೊತೆಗೆ ಬೆರಿ, ಆಟವಾಡು ಎಂದು ಪ್ರಚೋದಿಸುತ್ತಿದ್ದೆ. ಮಗಳು ಅಳಿಯ ನನಗೆ ದಬಾಯಿಸಿದರು. ಎಲ್ಲಾದರೂ ಉಂಟೇ? ಮಕ್ಕಳು ಬೀದಿಗೆ ಬಂದರೂ ಅವರ ಪಾಡಿಗೆ ಅವರು ಆಟವಾಡಿಕೊಂಡು ಹೋಗಬೇಕು, ಅಷ್ಟೇ. ಇದೇ ಇಲ್ಲಿಯ ಶಿಷ್ಟಾಚಾರ, ಸಾಮಾಜಿಕತೆ.
ನನ್ನ ಮೂರು ಪ್ರವಾಸದ ಸಂದರ್ಭದಲ್ಲೂ ಕಂಡು ಬಂದ ಸಾಮಾನ್ಯ ದೃಶ್ಯವೆಂದರೆ ಒಂದೇ ಮಗು ಮನೆಯಿಂದ ಹೊರಬರುವುದು. ತನಗೆ ತಾನೇ ಮಾತನಾಡಿಕೊಳ್ಳುವುದು. ಒಬ್ಬನೇ ಚೆಂಡನ್ನು ನಾನಾ ದಿಕ್ಕಿನಲ್ಲಿ ಒದೆಯುವುದು, ಎಸೆಯುವುದು. ಇಂತಹ ವಾತಾವರಣದಲ್ಲಿ ಬೆಳೆದ ಮಕ್ಕಳಿಗೆ ಗೆಳೆತನದ, ಗೆಳೆಯರ ಗುಂಪಿನ ಕಲ್ಪನೆ, ಅಗತ್ಯವೆಲ್ಲ ಹೇಗಿರಬಹುದು? ಅದು ಹೇಗಾದರೂ ಇರಲಿ, ಈ ಕಾರಣಕ್ಕಾಗಿಯೇ ಮೈದಾನ, ಕ್ರೀಡಾಂಗಣ ಎಲ್ಲ ಖಾಲಿ ಹೊಡೆಯುತ್ತಿರುತ್ತದೆ. ನೂರಾರು ಆಟಗಾರರು ಉಪಯೋಗಿಸಬೇಕಾದ ಕ್ರೀಡಾಂಗಣವನ್ನು ಕೇವಲ ಎಂಟು ಹತ್ತು ಮಕ್ಕಳು ಉಪಯೋಗಿಸುತ್ತಿರುತ್ತಾರೆ.
ಮಗುವಿಗೆ ಯಾವುದಾದರೂ ಕ್ರೀಡೆಯಲ್ಲಿ ತೀವ್ರವಾದ ಆಸಕ್ತಿಯಿದ್ದರೆ, ಆ ಆಟಕ್ಕೆ ಸಂಬಂಧಪಟ್ಟ ಕ್ಲಬ್‌ಗೆ ಸೇರಿಕೊಂಡು ಬಾಲ್ಯದಿಂದಲೇ ವೃತ್ತಿಪರರಾಗಬೇಕಾಗುತ್ತದೆ. ನಾನು ಗಮನಿಸುತ್ತಿದುದು ಆ ರೀತಿಯ ಕ್ರೀಡಾ ಚಟುವಟಿಕೆಗಳ ಬಗ್ಗೆಯಲ್ಲ. ಅನೌಪಚಾರಕವಾಗಿ ತನ್ನದೇ ವಯಸ್ಸಿನವರ ಜೊತೆ ಬೆರೆತು, ಆಟವಾಡಿ, ಮಕ್ಕಳು ಕಲಿಯುವ, ಕಲಿಯಬೇಕಾದ ಸಾಮಾಜಿಕತೆಯ ಬಗ್ಗೆ.
ಇದರಿಂದ ಹೊರ ಬರಲು play day ಎಂಬ ಪರಿಕಲ್ಪನೆ ಜಾರಿಗೆ ಬಂದಿದೆ. ಈಗಾಗಲೇ ಪೋಷಕರ ಸ್ತರದಲ್ಲಿ ಪರಿಚಯವಿರುವ, ಪರಸ್ಪರ ಸಹಮತ ಇರುವ ಕುಟುಂಬಗಳ ಮಕ್ಕಳು ಒಬ್ಬರ ಮನೆಗೆ ಒಬ್ಬರು ಬಂದು ಹೋಗುತ್ತಾರೆ. ಆಟ ಆಡಿಕೊಳ್ಳುತ್ತಾರೆ. ಮನೆಯ ಆವರಣದೊಳಗಡೆಯೇ. ಆದರೆ ಇದಕ್ಕೆ ತುಂಬಾ ಪೂರ್ವ ಸಿದ್ಧತೆ ಮಾಡಬೇಕು. ಮುಂಚಿತವಾಗಿ ತಿಳಿಸಿ ಸಮಯ, ದಿನ, ಅನುಕೂಲವನ್ನು ಗೊತ್ತು ಮಾಡಿಕೊಳ್ಳಬೇಕು. ಮಕ್ಕಳಿಗೆ ಬೇಕಾಗುವಂತಹ ಊಟ ತಿಂಡಿ ತಯಾರಿಸಬೇಕು. ಅವರು ಆಡುವಾಗ ಮಧ್ಯ ಪ್ರವೇಶಿಸದೆ ನಿಗಾ ಕೊಡಲು ಯಾರಾದರೂ ಒಬ್ಬರು ಹಿರಿಯರಿಗೆ ಸಮಯವಿರಬೇಕು. ಇಂತಹ ಅವಕಾಶಕ್ಕೆ ಮಕ್ಕಳು ಹಸಿದಿರುತ್ತವೆ. ಊಟ ತಿಂಡಿ, ಹೊರಗಡೆಯ ಮಳೆ, ಗಾಳಿ, ಶೀತ ಯಾವುದಕ್ಕೂ ಲೆಕ್ಕ ಇಡದೆ ಮೂರು ನಾಲ್ಕು ಘಂಟೆಗಳ ಕಾಲ ಆಟದಲ್ಲಿ ತಲ್ಲೀನವಾಗಿರುತ್ತವೆ. ಆಟದ ವಾತಾವರಣದಿಂದ ಅವರನ್ನು ಹೊರಗಡೆ ತಂದು ಮನೆಗೆ ವಾಪಸ್ ಕಳಿಸುವುದೇ ಕಷ್ಟ. ಮಕ್ಕಳು ಮೈ ಮರೆತು ಆಟ ಆಡುವುದನ್ನು ನೋಡುವುದಕ್ಕೂ ಒಂದು ಸಂತೋಷ. ಈ ನಮ್ಮ ಸಂತೋಷ ಏನೇ ಇದ್ದರೂ, ಮಕ್ಕಳು ಗುಂಪಾಗಿ, ಬಯಲಿನಲ್ಲಿ ಆಡುವ ಸಂತೋಷಕ್ಕೆ ಸಮನಾಗಿರುವುದಿಲ್ಲ.
ಇಂತಹ ಆಟಕ್ಕೂ ಮಕ್ಕಳನ್ನು ಹೊಂದಿಸುವುದು ತುಂಬಾ ಕಷ್ಟ. ಪೋಷಕರ ನಡುವೆ ಮೊದಲು ಸಾಮರಸ್ಯವಿರಬೇಕು, ಒಮ್ಮತವಿರಬೇಕು. ಈವತ್ತಿನ ಒಡನಾಡಿಗಳು ಮುಂದಿನ ವರ್ಷ ಕೂಡ ಸ್ನೇಹದಿಂದಿರುತ್ತಾರೆ ಎಂದು ಹೇಳುವುದು ಹೇಗೆ? ಮಕ್ಕಳು ಸ್ನೇಹದಿಂದಿದ್ದರೂ ಪೋಷಕರ ನಡುವೆ ಸಂಬಂಧ ವಿಷಮವಾದಾಗ ಮಕ್ಕಳ ಸಂಬಂಧ, ಗೆಳೆತನಕ್ಕೆ ಕುತ್ತು ಬರುತ್ತದೆ.
ನೆದರ್‌ಲ್ಯಾಂಡ್ಸ್‌ನ ಮನೆಗಳಲ್ಲಿ ಇನ್ನೂ ಒಂದು ಸಂಗತಿಯನ್ನು ಗಮನಿಸಿದೆ. ಜೊತೆಯಲ್ಲಿ ಆಡಲು ಮಕ್ಕಳು ಸಿಗದೆ ಇರಬಹುದು. ಇದಕ್ಕೆ ಬದಲಾಗಿ, ಪ್ರತಿ ಮನೆಯಲ್ಲೂ ಒಂದೊಂದು ಶಿಶುವಿಹಾರಕ್ಕೆ ಆಗುವಷ್ಟು ಆಟದ ಸಾಮಾನುಗಳು, ಎಲೆಕ್ಟ್ರಾನಿಕ್ ಉಪಕರಣಗಳು ತುಂಬಿ ತುಳುಕುತ್ತಿರುತ್ತವೆ. ಮಕ್ಕಳು ಈ ಉಪಕರಣಗೊಳಡನೆಯೇ ಹೆಚ್ಚು ಸಮಯ ಕಳೆಯುತ್ತಾರೆ. ಆತ್ಮೀಯ ಸಂಬಂಧ ಸ್ಥಾಪಿಸಿಕೊಳ್ಳುತ್ತಾರೆ. ಮಕ್ಕಳು ಬೇರೆ ಬೇರೆ ಪ್ರಾಣಿಗಳ ಬೊಂಬೆಗಳೊಡನೆ ಮಲಗುವುದು, ಮಾತನಾಡುವುದು ತುಂಬಾ ಸಾಮಾನ್ಯ.
ಅಪಾರ್ಟ್ಮೆಂಟ್‌ಗಳಲ್ಲಿ ನೂರಾರು ಫ್ಲಾಟ್‌ಗಳಿರುತ್ತವೆ. ಅಪಾರ್ಟ್ಮೆಂಟ್ ಆವರಣದಲ್ಲೇ ಆಟದ ಮೈದಾನವೂ ಇರುತ್ತದೆ. ಮಕ್ಕಳೂ ಇರುತ್ತಾರೆ. ಆದರೆ ಹೊರಗೆ ಬರುವುದಿಲ್ಲ. ಅಮೆರಿಕದಲ್ಲೂ ಕೂಡ ಹೀಗೇ ಎಂದು ಕೇಳಿದ್ದೇನೆ. ಇದಕ್ಕೆ ಹೋಲಿಸಿದರೆ ಭಾರತದಲ್ಲಿ ಅಪಾರ್ಟ್ಮೆಂಟ್‌ಗಳ ಮುಂದೆ ಇರುವ ಆಟದ ಮೈದಾನದಲ್ಲಿ ಸಂಜೆ ಹೊತ್ತು ಜೀವಂತಿಕೆ, ಸಂಭ್ರಮ, ಕಿತ್ತಾಟ, ಆಟಪಾಟಗಳು ಸುಮಾರು ಎರಡು ಮೂರು ಘಂಟೆಗಳ ಕಾಲ ಇರುತ್ತದೆ.
ಮಕ್ಕಳು ಬೆಳೆಯುವಾಗ ಹಿರಿಯರ, ಪೋಷಕರ ನಿಗಾ ಇರಬೇಕು, ನಿಜ. ಆದರೆ ಎಷ್ಟು, ಯಾವಾಗ? ಮಕ್ಕಳು ಕಲಿಯುವುದು ತಮ್ಮ ಜೊತೆಯವರಿಂದ ಶಿಷ್ಟಾಚಾರದ ಗೈರು ಹಾಜರಿಯಲ್ಲಿ. ಮೊದಲೇ ಮಕ್ಕಳು ಕಡಿಮೆ. ಒಂದೋ ಅಥವಾ ಎರಡೋ. ಪಟ್ಟಣವಾಸದಲ್ಲಿ ಬಂಧು ಮಿತ್ರರು ಬಂದು ಹೋಗುವುದು ಕೂಡ ಕಡಿಮೆ. ಇದರ ಜೊತೆಗೆ ಹೊರಗಡೆ ಹೋಗುವಾಗಲೆಲ್ಲ, ಅಟ ಆಡುವಾಗಲೆಲ್ಲ ಹಿರಿಯರು ಗಮನಿಸುತ್ತಲೇ ಇದ್ದರೆ, ಮಕ್ಕಳಿಗೆ ಬೇಕಾದ ಸ್ವಾತಂತ್ರ‍್ಯ ಬಿಡುಬೀಸುತನ ದೊರಕುವುದು ಯಾವಾಗ?
ಅವಿಭಕ್ತ ಕುಟುಂಬ, ತುಂಬು ಸಾಮಾಜಿಕ ಜೀವನ, ಗೆಳೆಯರ ಗಡಿಬಿಡಿಯಲ್ಲಿ ಬಾಲ್ಯ ಕಳೆದಿರುವ ನನಗೆ ಮಾತ್ರ ಹೀಗೆನ್ನಿಸುತ್ತಿರಬಹುದು. ನಾನು ಇದುವರೆಗೆ ಹೇಳಿದ್ದನ್ನೆಲ್ಲ ಒಂದು ಕೊರತೆ ಎಂದು ಭಾವಿಸಿ ಯಾರೊಬ್ಬರೂ ಕೊರಗುವುದಿಲ್ಲ, ಅಲವತ್ತುಕೊಳ್ಳುವುದಿಲ್ಲ. ಪಶ್ಚಿಮದ ನಗರ ಜೀವನ, ಕೌಟುಂಬಿಕ ವಿನ್ಯಾಸದಲ್ಲಿ ಮಕ್ಕಳಿಗೆ ಆಟಪಾಟಕ್ಕೆ ದೊರಕಬೇಕಾದ, ದೊರಕುವ ವಾತಾವರಣ ಇಂತಹುದೇ ಎಂದು ಎಲ್ಲರೂ ಅಲ್ಲಿ ಒಪ್ಪಿಕೊಂಡು ಜೀವನ ನಡೆಸುತ್ತಿರಬಹುದು. ನನ್ನದೇ “ಅತಿಪ್ರತಿಕ್ರಿಯೆ” ಇರಬಹುದು. ಹೊಸ ಕಾಲದ ಕೌಟುಂಬಿಕ ಶೈಲಿಯ ಅನಿವಾರ್ಯತೆಯನ್ನು ಒಪ್ಪಲು, ಸ್ವೀಕರಿಸಲು ನನ್ನ ಮನಸ್ಸು ಒಳಗಡೆಯೇ ನಿರಾಕರಿಸುತ್ತಿರಬಹುದು.
ಮಕ್ಕಳು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ರೀತಿಗೆ ಹೊಂದಿಕೊಳ್ಳಲು ಕೂಡ ನನಗೆ ಕಷ್ಟವಾಯಿತು.
ಕಛೇರಿಗಳಲ್ಲಿ ಮೀಟಿಂಗ್ ವ್ಯವಸ್ಥೆ ಮಾಡುವಂತೆ ಹುಟ್ಟುಹಬ್ಬದ ಆಚರಣೆಯಿರುತ್ತದೆ. ಈ ಪದ್ಧತಿ ಈಗ ಭಾರತದ ಮಹಾನಗರಗಳಲ್ಲೂ ಚಾಲ್ತಿಗೆ ಬರುತ್ತಿದೆ. ಒಂದು ತಿಂಗಳ ಮುಂಚೆಯೇ ತಯಾರಿ ಪ್ರಾರಂಭವಾಗುತ್ತದೆ. ಮೊದಲು ಪೋಷಕರನ್ನು ಸಂಪರ್ಕಿಸಬೇಕು. ದಿನ, ಸಮಯ, ಸ್ಥಳ ತಿಳಿಸಿ, ಸಮಾರಂಭಕ್ಕೆ ಮಗುವನ್ನು ಕರೆದುಕೊಂಡು ಬರಲು ಅನುಕೂಲವಿದೆಯೇ ಎಂಬ ಮಾಹಿತಿ ಪಡೆಯಬೇಕು. ಪೋಷಕರನ್ನು ಕೂಗಬೇಕೆಂದೇನೂ ಇಲ್ಲ. ಅವರು ಮಕ್ಕಳನ್ನು ಹುಟ್ಟುಹಬ್ಬದ ಸಮಾರಂಭ ನಡೆಯುವ ಕ್ಲಬ್‌ಗೋ, ಹೊಟೆಲ್‌ಗೋ ಕರೆದುಕೊಂಡು ಬಂದು ಬಿಟ್ಟು ಹೋಗಬಹುದು. ಮತ್ತೆ ಸಮಾರಂಭ ಮುಗಿಯುವ ಹೊತ್ತಿಗೆ ವಾಪಸ್ ಬಂದು ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಆಹ್ವಾನವಿಲ್ಲದೆ ಉಳಿದುಕೊಂಡರೆ, ಅವರ ಕಾಫಿ, ತಿಂಡಿ, ಸಮಯ ಕಳೆಯುವ ರೀತಿ ಎಲ್ಲವನ್ನೂ ಅವರೇ ನೋಡಿಕೊಳ್ಳಬೇಕು. ಕೆಲವು ಕುಟುಂಬಗಳಲ್ಲಿ ಪೋಷಕರನ್ನು ಕೂಡ ಆಹ್ವಾನಿಸುತ್ತಾರೆ. ಆವಾಗ ಸಮಾರಂಭದುದ್ದಕ್ಕೂ ಹಾಜರಿರಬಹುದು. ಆದರೆ ಮಕ್ಕಳ ಜೊತೆ ಬೆರೆಯುವ ಹಾಗಿಲ್ಲ.
ಮೊದಲ ಹಂತದಲ್ಲೇ ಆಟವಿರುತ್ತದೆ. ನಂತರ cake cutting, ಸಮೂಹ ಗಾನ. ನಂತರ ಮಕ್ಕಳಿಗೆ ಪ್ರಿಯವಾಗುವ ರೀತಿಯ ಕುರುಕಲು ತಿಂಡಿ, ಪಾನೀಯ. ಮತ್ತೆ ಆಟ, ಆಟ, ಆಟ – ಕ್ಲಬ್ ಆವರಣದಲ್ಲಿರುವ ಉದ್ಯಾನವನಕ್ಕೆ ಬರುತ್ತಾರೆ. ಮಕ್ಕಳು ಸಮವಯಸ್ಕರೊಡನೆ ಬೆರೆತು, ಮೈಮರೆತು ಆಡುತ್ತವೆ. ಈ ರೀತಿಯ ಸಂಭ್ರಮ, ಆಟಪಾಟ ಏಕೆ ದಿನನಿತ್ಯದ, ಪ್ರತಿ ಸಂಜೆಯ ಭಾಗವಲ್ಲ ಎಂದು ಕೇಳುವ ಆಸೆಯಾಗುತ್ತದೆ. ಯಾರನ್ನು ಕೇಳಬೇಕು?
ಈ ಸಲ (2023) ನಾನು ಹೋಗಿದ್ದಾಗ ನನ್ನ ಮೊಮ್ಮಗ ಧ್ರುವನ ಹತ್ತನೇ ವರ್ಷದ ಹುಟ್ಟುಹಬ್ಬ. ಇಬ್ಬರು ಪೋಷಕರು ಮನೆಗೆ ವಾಪಸ್ ಹೋಗದೆ ಸಮಾರಂಭದುದ್ದಕ್ಕೂ ನಮ್ಮ ಜೊತೆಯೇ ಉಳಿದರು. ಒಬ್ಬರು ಕೊಲ್ಲಾಪುರ ಸೀಮೆಯ ಹುಡುಗಿಯನ್ನು ಮದುವೆಯಾಗಿರುವ ಮರಾಠಿಗಳು. ಇನ್ನೊಬ್ಬರು ಅದೇ ತಾನೇ ಜಪಾನ್‌ನಿಂದ ವರ್ಗವಾಗಿ ಬಂದಿದ್ದವರು. ಮರಾಠಿಗಳ ಮನೋಧರ್ಮ, ತಮ್ಮ ಮಕ್ಕಳ ಬಗ್ಗೆ ಇರುವ ಆತಂಕ, ಭಯ, ನಿರೀಕ್ಷೆ, ಇದೆಲ್ಲವನ್ನೂ ಕೇಳಿಸಿಕೊಂಡಾಗ ನಾನು ಇರುವುದು ಭಾರತದಲ್ಲೋ, ನೆದರ್‌ಲ್ಯಾಂಡ್ಸ್‌ನಲ್ಲೋ ಎಂಬ ಅನುಮಾನ ಬರುತ್ತಿತ್ತು. ಕೆಲವರು ಮಾತನಾಡುವ ರೀತಿಯಲ್ಲೇ ಭವಿಷ್ಯದ ಬಗ್ಗೆ ಭಯ ಹುಟ್ಟಿಸುತ್ತಾರೆ. ಈ ಮರಾಠಿ ಮಹಾಶಯ ಅಂಥವರ ಪೈಕಿ ಒಬ್ಬ.
ಜಪಾನೀಯರ ಪರಿಸ್ಥಿತಿ ಕೂಡ ಹೆಚ್ಚು ಕಡಿಮೆ ಭಾರತೀಯರಂತೆಯೇ! ಇದೇ ಮೊದಲ ಬಾರಿಗೆ ಅವನಿಗೆ ಜಪಾನ್‌ನಿಂದ ಇನ್ನೊಂದು ದೇಶಕ್ಕೆ ವರ್ಗವಾಗಿರುವುದು. ಆತನಿಗೆ ಅಲ್ಪಸ್ವಲ್ಪ ಇಂಗ್ಲಿಷ್ ಬರುತ್ತದೆ. ಹೆಂಡತಿಗೆ ಒಂದು ವಾಕ್ಯ ಕೂಡ ಬರುವುದಿಲ್ಲ. ಮಗ ಇಂಗ್ಲಿಷ್ ಕಲಿಯಬೇಕು, ಬೇರೆ ಬೇರೆ ದೇಶಗಳ ಮಕ್ಕಳೊಡನೆ ಬೆರೆಯುವುದನ್ನು ಕಲಿಯಬೇಕು ಅನ್ನೋ ಆಸೆ. ತುಂಬಾ ಕಷ್ಟಪಡುತ್ತಿದ್ದಾನೆ. ಒಬ್ಬನೇ ಒಬ್ಬ ಸಹಪಾಠಿಯ ಜೊತೆಗೆ ಕೂಡ ಮಾತನಾಡಲಾರ. ತುಂಬಾ ಒದ್ದಾಡುತ್ತಿದ್ದಾನೆ. ಕಷ್ಟ ಆದರೂ ಪರವಾಗಿಲ್ಲ, ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗಿಯಾಗಲಿ, ನಾಲ್ಕು ಜನರ ಜೊತೆ ಬೆರೆಯಲಿ ಎಂದು ಬಲವಂತ ಮಾಡುತ್ತಿದ್ದಾರೆ. ಮಗ ಅಳುಮೋರೆ ಮಾಡಿಕೊಂಡೇ ಸಮಾರಂಭದುದ್ದಕ್ಕೂ ಒದ್ದಾಡಿದ.
ಮತ್ತೆ ಜಪಾನಿಗೆ ವರ್ಗವಾದರೆ ಮಗ ಏನು ಮಾಡಬೇಕು, ಮಾಡಬಹುದು ಎಂಬ ಆತಂಕ. ಅದಕ್ಕಾಗಿ ಪ್ರತಿ ಶನಿವಾರ ಆಮಸ್ಟರ್‌ಡ್ಯಾಂನಲ್ಲಿ ಮನೆ ಪಾಠದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪೋಷಕರೇ ಕರೆದುಕೊಂಡು ಹೋಗುತ್ತಾರೆ. ಜಪಾನ್ ಶಾಲೆಗಳ ಪಠ್ಯವನ್ನು ಕೂಡ ಮಗ ಗಮನಿಸಿ, ಕಲಿತು, update ಆಗುತ್ತಿರುತ್ತಾನೆ. ಸದ್ಯಕ್ಕೆ ಅವನಿಗೆ ಯಾರ ಜೊತೆಯೂ ಆಡುವುದಕ್ಕೆ ಇಷ್ಟವಿಲ್ಲವೆಂದು ಮಗುವಿನ ತಂದೆ ನನಗೆ ಮತ್ತೆ ಮತ್ತೆ ಹೇಳುತ್ತಲೇ ಇದ್ದರು.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.
Sir. Excellent article. After reading this, I feel our Indian atmosphere is much much better for children than The Netherlands atmosphere. Of course, no dispute. That’s their culture. We should respect it. But we don’t care much for our children. They play a number of games on the streets with cricket taking a priority. We also enjoy watching them. That builds better human to human communication. I pity the Japanese couples.
sir Thanks for ur kind appreciation.