ವ್ರಜ ಪರಿಕ್ರಮದಲ್ಲಿ ದೀರ್ಘ ಮತ್ತು ಚುಟುಕಾದ ಎರಡು ರೀತಿಯ ಪರಿಕ್ರಮಗಳಿವೆ. ಚಿಕ್ಕಮಟ್ಟದ ಪರಿಕ್ರಮದಲ್ಲಿ ಮಥುರೆಯ ಮುಖ್ಯ ದೇಗುಲ ಮತ್ತು ಪುಣ್ಯಸ್ಥಾನಗಳಿಗೆ ಭೇಟಿ ನೀಡುವುದಷ್ಟೇ ಸೇರಿದೆ. ದೀರ್ಘ ಪರಿಕ್ರಮದಲ್ಲಿ ನಂದಗಾವ್ ಮತ್ತು ಬರ್ಸಾನಾಕ್ಕೆ ಪಾದಯಾತ್ರೆಯನ್ನು ಕೈಗೊಳ್ಳುವುದು ಸೇರಿದೆ.  ದೀರ್ಘ ಪರಿಕ್ರಮವು ಮಥುರಾವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳವುದಕ್ಕೆ ಸಹಕಾರಿ. ಆದರೆ ನಾವೆಲ್ಲ ಕೆಲವೇ ದಿನಗಳ ರಜೆಯಲ್ಲಿ ಮಥುರೆಯನ್ನು ಕ್ಷಿಪ್ರವಾಗಿ ನೋಡಿ ಬರುವವರ ಸಾಲಿಗೆ ಸೇರಿದವರು. ಮಥುರಾ ಯಾತ್ರೆಯ ಕುರಿತ ತಮ್ಮ ಅನುಭವಗಳನ್ನು ಪ್ರಿಯಾ ಭಟ್ ಕಲ್ಲಬ್ಬೆ ಅವರು ಇಲ್ಲಿ ದಾಖಲಿಸಿದ್ದಾರೆ. 

 

ನರಕಚತುರ್ದಶಿಯಂದು ನರಕಾಸುರನ ವಧೆ ಮಾಡಿ ಹದಿನಾರು ಸಾವಿರ ಹೆಂಗಳೆಯರ ಮಾನ ಕಾಪಾಡಿದ ಮಲ್ಲ, ನೂರಾರು ಗೋಪಿಕೆಯರ ಮನ ಕದ್ದ ನಲ್ಲ, ಯಾರಿಗೆ ಗೊತ್ತಿಲ್ಲ ನಮ್ಮ ಗೊಲ್ಲ? ಅಂತಹ ಗೊಲ್ಲ ಕೃಷ್ಣನ ಹುಟ್ಟಿದೂರಿಗೆ ನಮ್ಮ ಪ್ರಯಾಣವೊಂದು ನಿಶ್ಚಿತವಾದ ದಿನ ಅದೆಷ್ಟು ಸಂಭ್ರಮ! ಅದೆಷ್ಟು ಖುಷಿ!

ಮಹಾಭಾರತವೆಂಬ ಕತೆ ನನ್ನೊಳಗೆ ಇಳಿದಾಗಿಂದ ಬಹುಶಃ ಕನಸು ಮನಸುಗಳಲ್ಲಿ ಕೃಷ್ಣನಂತೆ ಸ್ಥಾಪಿತವಾದ ವ್ಯಕ್ತಿತ್ವ ಇನ್ನೊಂದಿಲ್ಲ. ಕಲ್ಪನೆಗೆ, ಖುಷಿಗೆ, ವಾಸ್ತವಕ್ಕೆ, ಕಷ್ಟಕ್ಕೆ, ಕಣ್ಣೀರಿಗೆ, ಒಲವಿಗೆ, ಚೆಲುವಿಗೆ, ಧರ್ಮಕ್ಕೆ, ಕರ್ಮಕ್ಕೆ ಪ್ರತಿಯೊಂದರಲ್ಲೂ ಕೈಹಿಡಿದು ನಡೆಸುವ ನನ್ನ ಕೃಷ್ಣದೇವರ ಕತೆಯೆಂದರೆ ನನಗೆ ಪ್ರೀತಿ. ಅಂತಹ ಶ್ರೀಕೃಷ್ಣ ಪರಮಾತ್ಮ ಹುಟ್ಟಿದ ಓಡಾಡಿದ, ಆಟವಾಡಿದ, ಅಸಂಖ್ಯ ಲೀಲೆಗಳನ್ನು ಈ ಜಗತ್ತಿಗೆ ತೋರಿದ ಆ ಪುಣ್ಯಭೂಮಿಯನ್ನು ಸ್ಪರ್ಶಿಸುವ ಅದೆಷ್ಟು ದಿನಗಳ ತಪ ನಿಜವಾಗುವ ಸಮಯ. ಮಥುರೆಗೆ ಹೋಗೋದಕ್ಕೆ ಅಂತೂ ಸಮಯ ಕೂಡಿ ಬಂದೇ ಬಿಡ್ತು.

ಹೌದು ಕೃಷ್ಣ ಹುಟ್ಟಿದ ನಾಡಿಗೆ ಅವತ್ತು ಹೊರಟಿದ್ದೆವು.

ಕೊರೋನಾದ ಆತಂಕದ ನಡುವೆಯೂ ನಮ್ಮ ಮೊದಲ ವಿಮಾನ ಪ್ರಯಾಣ ಮಂಗಳೂರು ವಿಮಾನ ನಿಲ್ದಾಣದಿಂದ ಆರಂಭವಾಗಿ ಜೈಪುರದಲ್ಲಿ ಮುಗಿದಿತ್ತು. ಮೊದಲ ದಿನವನ್ನು ಜೈಪುರ ಸುತ್ತಾಟದಲ್ಲೇ ಮುಗಿಸಿ ಮರುದಿನ ಜೈಪುರದಿಂದ ಮಥುರಾಗೆ ಹೊರಟಾಗ ನನ್ನೊಳಗಂತೂ ಅನೂಹ್ಯ ಸಂಭ್ರಮ. ಇದು ನಿಜವಾ ಅಂತ ನನಗೆ ನಾನೇ ನೂರು ಬಾರಿ ಕೇಳಿಕೊಂಡಿದ್ದಿದೆ. ಜೈಪುರ ಸುತ್ತಾಡುವಾಗಲೂ, ಮಥುರೆಗೆ ಹೋಗುವುದಿದೆ ಎನ್ನುವ ಯೋಚನೆಯೇ ಸುತ್ತಾಟಕ್ಕೆ ಪ್ರೇರಣೆ.

ಮಥುರೆಯ ನಾಡನ್ನು ಬೃಜ್ ಭೂಮಿ ಅಥವಾ ವ್ರಜಮಂಡಲ ಎನ್ನುತ್ತಾರೆ. ಸಂಸ್ಕೃತದ ‘ವ್ರಜ’ ಪದವು,  ಆಡುಮಾತಿನಲ್ಲಿ ಬೃಜ್ ಭೂಮಿ ಆಗಿರಬಹುದು. ವ್ರಜವೆಂದರೆ ಹುಲ್ಲುಗಾವಲು.  ಸಾಮಾನ್ಯವಾಗಿ ಶ್ರೀಕೃಷ್ಣ ದೇವರಿಗೆ ಸಂಬಂಧಿಸಿದ ಮೂರು ಪರಿಕ್ರಮ ಯಾತ್ರೆಗಳನ್ನು  ಆಸ್ತಿಕರು ಭಕ್ತಿಯಿಂದ ಮಾಡುವುದುಂಟು. ಹರ್ಯಾಣದಲ್ಲಿ ಕುರುಕ್ಷೇತ್ರ ಪರಿಕ್ರಮ, ಉತ್ತರ ಪ್ರದೇಶದ ಮಥುರದಲ್ಲಿ ವ್ರಜ ಪರಿಕ್ರಮ, ಗುಜರಾತ್ ನಲ್ಲಿ ದ್ವಾರಕಾ ಪರಿಕ್ರಮಗಳನ್ನು ಕೈಗೊಳ್ಳುವುದುಂಟು. ವೈಷ್ಣವ ಪಂಥದವರು ಈ ಯಾತ್ರೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಹಾಗೆ ನೋಡಿದರೆ ವ್ರಜ ಪರಿಕ್ರಮವನ್ನು 16ನೇ ಶತಮಾನದಲ್ಲಿ ವೈಷ್ಣವ ಪಂಥದ ಸಾಧುಗಳು ವ್ಯಾಪಕವಾಗಿ ಕೈಗೊಂಡಿದ್ದರಿಂದ, ಆ ಮಾರ್ಗಗಳು ರೂಪುಗೊಂಡಿವೆ ಎನಿಸುತ್ತದೆ.

ವ್ರಜ ಪರಿಕ್ರಮದಲ್ಲಿ ದೀರ್ಘ ಮತ್ತು ಚುಟುಕಾದ ಎರಡು ರೀತಿಯ ಪರಿಕ್ರಮಗಳಿವೆ. ಚಿಕ್ಕಮಟ್ಟದ ಪರಿಕ್ರಮದಲ್ಲಿ ಮಥುರೆಯ ಮುಖ್ಯ ದೇಗುಲ ಮತ್ತು ಪುಣ್ಯಸ್ಥಾನಗಳಿಗೆ ಭೇಟಿ ನೀಡುವುದಷ್ಟೇ ಸೇರಿದೆ. ದೀರ್ಘ ಪರಿಕ್ರಮದಲ್ಲಿ ನಂದಗಾವ್ ಮತ್ತು ಬರ್ಸಾನಾಕ್ಕೆ ಪಾದಯಾತ್ರೆಯನ್ನು ಕೈಗೊಳ್ಳುವುದು ಸೇರಿದೆ. ಇದು ಮಥುರಾವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳವುದಕ್ಕೆ ಸಹಕಾರಿ. ಆದರೆ ನಾವೆಲ್ಲ ಕೆಲವೇ ದಿನಗಳ ರಜೆಯಲ್ಲಿ ಮಥುರೆಯನ್ನು ಕ್ಷಿಪ್ರವಾಗಿ ನೋಡಿ ಬರುವವರ ಸಾಲಿಗೆ ಸೇರಿದವರು.

ಎಳ್ಳಿನ ಹೊಲವಾ ದಾಟಿ

ರೈಲಿನಲ್ಲಿ ಕೂತಾಗ, ಎಡಬಲಕ್ಕೆ ವಿಶಾಲವಾದ ಹೊಲಗಳು.  ನಮ್ಮ ಅರಬ್ಬೀ ಸಮುದ್ರದಂತೆ ವಿಶಾಲವಾಗಿ ಹರಡಲ್ಪಟ್ಟ ಹಸಿರು ಸಾಗರದಂತೆ ತೋರುವ ಸಮೃದ್ಧ ಹೊಲಗಳು. ಮತ್ತು ಅವುಗಳಲ್ಲಿ ಆಗತಾನೇ ತೆನೆ ಒಡೆಯಲು ತಲೆದೂಗಿ ನಿಂತ ಎಳ್ಳಿನ ಗಿಡಗಳು.  ಗೋಧಿ, ಜೋಳ, ಕಡಲೆ ಇಲ್ಲಿನ ಮುಖ್ಯ ಬೆಳೆಗಳು. ಮಳೆ ಕಡಿಮೆಯಾದರೂ ನೀರಾವರಿ ಚೆನ್ನಾಗಿದೆ. ಎಲ್ಲಿ ನೋಡಿದರೂ ಎಷ್ಟು ನೋಡಿದರೂ ಮುಗಿಯದ ಹಸಿರು ನಾಡು ಥೇಟ್ ನಮ್ಮ ಬಯಲು ಸೀಮೆಯಂತೆ ವಿಶಾಲ ನೋಟ . ಅಲ್ಲಿ ಕಾಣುವ ರೈತರೂ ಜನಗಳೂ ನಮ್ಮ ಉತ್ತರ ಕರ್ನಾಟಕದ ಮಂದಿಯಂತೆ. ಮಾತನಾಡುವ ಭಾಷೆ ಮಾತ್ರ ಹಿಂದಿಯ ಗ್ರಾಮ್ಯ ಶೈಲಿ. ತೊಡುವ ಬಟ್ಟೆಯಲ್ಲಿ ಉತ್ತರ ಕರ್ನಾಟಕದಲ್ಲಿ ಪಂಚೆ ಉಡೋರು ಜಾಸ್ತಿ ಕಾಣುತ್ತಾರೆ. ಅಲ್ಲಿ ಅದೇ ಬಿಳಿ ಪಾಯಜಾಮ ಮೇಲೊಂದು ನಿಲುವಂಗಿ ಒಂದು ಟವೆಲ್.. ರೇಲ್ವೆಯೂ ಇಳಿದು ಟ್ಯಾಕ್ಸಿ ಮಾತಾಡಿ ನಿಗದಿತ ಜಾಗಕ್ಕೆ ತಲುಪುವ ಹೊತ್ತಿಗೆ ನಮ್ಮನ್ನ ಕರೆದೊಯ್ಯಲು ಸ್ನೇಹಿತರಾದ ತೇಜವೀರ್ ಹಾಜರಿದ್ದರು. ಮುಂದೆ ನಮಗೆ ಮಥುರೆಯ ದರ್ಶನ ಮಾಡಿಸಿದವರೂ ತೇಜ್ ವೀರ್ ಅವರೇ.

ಇದು ಮಥುರೆ ನನಗೆ ಕಂಡ ಬಗೆಯಷ್ಟೇ. ಕೃಷ್ಣ ಅವರವರ ಭಾವಕ್ಕೆ ದಕ್ಕುವವ. ನನಗವನು ನನ್ನ ಕವಿತೆಗಳ ಭಾವಗಳ ಬದುಕಿನ ರೂಪ. ಮಥುರೆಯೆಂಬ ಸಾಮಾನ್ಯ ಊರನ್ನು ಊಟದ ಹೊತ್ತಿಗೆ ಸರಿಯಾಗಿ ತಲುಪಿದ್ದೆವಾದ್ದರಿಂದ ನಮ್ಮನ್ನ ರೆಸ್ಟೋರೆಂಟ್ ಒಂದರಲ್ಲಿ ಊಟಕ್ಕೆ ಬಿಟ್ಟಿದ್ದರು. ಉತ್ತರ ಕನ್ನಡದ ನಿವಾಸಿಗಳಾದ ನಮಗೆ  ಹಾಲು ಮೊಸರು ತುಪ್ಪ ಯಾವುದೂ ಹೊಸದಲ್ಲ. ಆದರೆ ಮಥುರೆಯ ಮೊದಲ ಊಟದ ಮೊಸರಿನ ರುಚಿ ಬಹುಶಃ ನಾವು ಅಲ್ಲಿಯವರೆಗೆ ಯಾವತ್ತೂ ತಿಂದಿರಲಿಲ್ಲ‌. ಅಷ್ಟು ರುಚಿಯಾದ ಹೆಪ್ಪುಗಟ್ಟಿದ ಮೊಸರಿಗೆ ಮಥುರೆಯ ಸ್ವಾದ ಕಟ್ಟಿಕೊಟ್ಟಂತಿತ್ತು ಊಟ. ಮಥುರೆಯ ಮೊಸರಿನೊಂದಿಗೆ ಕೃಷ್ಣನ ಪ್ರೀತಿ  ಮೆತ್ತಿಕೊಂಡಿತ್ತು. ದಾಲ್ ಚಾವಲ್ ಸಹ ತುಂಬ ಸ್ವಾದಿಷ್ಟವಾಗಿತ್ತು. ಯಾಕೆಂದರೆ ಅದನ್ನೂ ಶುದ್ಧ ಬೆಣ್ಣೆಯಿಂದ ಅಲಂಕರಿಸಿದ್ದರು. ಕೃಷ್ಣನ ಮೊದಲ ದರ್ಶನ ಮೊಸರು ಮತ್ತು ಬೆಣ್ಣೆಯ ಮೂಲಕವೇ ಆಯಿತೆನ್ನಿ. ಊಟ ಮುಗಿಸಿ ಮೊದಲು ಹೊರಟಿದ್ದು ಗೋವರ್ಧನ ಗಿರಿ ದೇಗುಲಕ್ಕೆ.

ಆ ದೇಗುಲ ನಮ್ಮಲ್ಲಿಯಂತೆ ಸಾಕ್ಷಾತ್ ಜನ ನಿಬಿಡ ಜಾತ್ರೆಯ ವಿಪರೀತ ಹಣ ಸುಲಿವ ಪೂಜಾರಿಗಳ, ಚೂರು ಸ್ವಚ್ಛತೆಯಿಲ್ಲದ ಜಾಗದಂತೆ ಕಂಡಿತು. ‘ಇದೇನಪ್ಪ! ಇಷ್ಟು ದೂರ ಬಂದು ಇಷ್ಟೇನಾ?’ ಅಂತನ್ನಿಸುವ ಒಂದು ಕ್ಷಣ. ನಮ್ಮ ಭಕ್ತಿಯಾಚೆ ಏನೂ ಇಲ್ವಲ್ಲ ಅನ್ನಿಸಬಹುದಾದ ಸಾಮಾನ್ಯ ಸ್ಥಳ. ಇದೆಲ್ಲ ಅನ್ನಿಸುವಷ್ಟರಲ್ಲೇ ಅದೆಲ್ಲದರಿಂದ ಬಿಡಿಸಿಕೊಂಡು ಹೊರಬಂದು ನಿಂತು ದೂರದಿಂದ ಆ ದೇಗುಲವನ್ನೊಮ್ಮೆ ಗಮನಿಸುವಾಗ ಅನ್ನಿಸಿದ್ದು ಬೇರೆಯೇ.

ಶ್ರೀಕೃಷ್ಣ ದೇವರಿಗೆ ಸಂಬಂಧಿಸಿದ ಮೂರು ಪರಿಕ್ರಮ ಯಾತ್ರೆಗಳನ್ನು  ಆಸ್ತಿಕರು ಭಕ್ತಿಯಿಂದ ಮಾಡುವುದುಂಟು. ಹರ್ಯಾಣದಲ್ಲಿ ಕುರುಕ್ಷೇತ್ರ ಪರಿಕ್ರಮ, ಉತ್ತರ ಪ್ರದೇಶದ ಮಥುರದಲ್ಲಿ ವ್ರಜ ಪರಿಕ್ರಮ, ಗುಜರಾತ್ ನಲ್ಲಿ ದ್ವಾರಕಾ ಪರಿಕ್ರಮಗಳನ್ನು ಕೈಗೊಳ್ಳುವುದುಂಟು.

ನಮ್ಮ ಕೃಷ್ಣ ಪರ್ವತವನ್ನೇ ಎತ್ತಿ ಗೋವುಗಳನ್ನು ಕಾಯ್ದ ನೆಲ ಇದೇ ಅಲ್ಲವಾ. ಅಲ್ಲಿ ನಮ್ಮ ಕಲ್ಪನೆಯ ಯಾವ ಭಯಂಕರ ಬೆಟ್ಟವೂ ಇಲ್ಲ. ಆದರೆ ಆ ಕಲ್ಪನೆಯ ಹಿನ್ನೆಲೆಯಲ್ಲಿ ಆ ನೆಲವನ್ನು ಸ್ಪರ್ಶಿಸಿದಾಗ ಆ ನೆಲ  ರೋಮಾಂಚನವನ್ನು ಹುಟ್ಟಿಸುವುದರಲ್ಲಿ ಅನುಮಾನವಿಲ್ಲ. ಆದರೆ ಶಾಂತ ಚಿತ್ತದಿಂದ ಹೊರಗಿನ ಗಲಾಟೆಗಳನ್ನೆಲ್ಲ ಬಿಡಿಸಿಕೊಂಡು ನೋಡುವ ಒಳ ದೃಷ್ಟಿಯೊಂದು ನಿಮಗಿದ್ದಲ್ಲಿ ಮಾತ್ರ ಅಲ್ಲಿ ಒಂದಾನೊಂದು ಕಾಲದ ಕತೆಯು ನೆನಪಾಗಬಹುದು. ಇಂದ್ರನ ಅತಿವೃಷ್ಟಿಯಿಂದ ಕಂಗಾಲಾಗಿದ್ದ ಗೋವುಗಳನ್ನೂ ಗೋಪಾಲಕರನ್ನೂ ಒಂದು ವಿಸ್ಮಯದ ಪರ್ವತದ ಅಡಿಯಲ್ಲಿ ಕಾಪಾಡಿದ್ದನ್ನ ಕಲ್ಪಿಸಿಕೊಳ್ಳಬಲ್ಲೆವು. ಅದೊಂದು ಸನಾತನ ಪ್ರಪಂಚದ ಸತ್ಯವೆಂಬಂತೆ ಕಾಣಬಲ್ಲೆವಷ್ಟೆ.

ನಂತರದ ಪ್ರಯಾಣ ನಿಜಕ್ಕೂ ಅವರ್ಣನೀಯ. ಮಥುರೆಯಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಲು ದಾರಿ ಬಹಳ ದೂರದೂರವಿದೆ. ಮಥುರೆಯನ್ನು ಸರಿಯಾಗಿ ನೋಡೋದಕ್ಕೆ, ಅರ್ಥ ಮಾಡಿಕೊಳ್ಳುವುದಕ್ಕೆ  ನಾಲ್ಕಾರು ದಿನಗಳೇ ಬೇಕು. ಆದ್ದರಿಂದ ನಾವು ಆಯ್ಕೆ ಮಾಡಿಕೊಂಡದ್ದು ಕೆಲವು ಪ್ರೇಕ್ಷಣೀಯ ಸ್ಥಳಗಳು. ಅದರಲ್ಲಿ ಬೃಂದಾವನ ನೋಡಲೇಬೇಕಿತ್ತು. ಯಮುನಾ ತೀರ, ಕೃಷ್ಣ ಜನ್ಮ ಭೂಮಿ, ಇವನ್ನೆಲ್ಲ ಮಿಸ್ ಮಾಡೋ ಹಾಗೇ ಇರಲಿಲ್ಲ. ಅದರ ಮಧ್ಯೆ ತೇಜ್ ವೀರ್ ಮತ್ತವರ ಸ್ನೇಹಿತ ಇಬ್ಬರಿಗೂ ನಮಗೆ ‘ದಾವೂ’ ನ ದೇವಸ್ಥಾನ ತೋರಿಸಲೇಬೇಕು ಅಂತ ಸಂಕಲ್ಪ ಆಗಿತ್ತು ಅನ್ನಿಸತ್ತೆ. ಈ ದಾವೂ ಮಹಾರಾಜ್ ಟೆಂಪಲ್ ಬಗೆಗೆ ಅವರಿಬ್ಬರೂ ಪದೇ ಪದೇ ಹೇಳ್ತಿದ್ದರೂ ನಮಗದು ಯಾವ ದೇವಸ್ಥಾನ ಅಂತಾನೇ ತಲೆಗೆ ಹೋಗಿರಲಿಲ್ಲ. ಆಮೇಲೆ ಅಲ್ಲಿಗೆ ಹೋದ ಮೇಲೆ ಅರ್ಥವಾಯ್ತು. ದಕ್ಷಿಣ ಭಾರತದಲ್ಲಿ ನಾವೆಲ್ಲ ಕೃಷ್ಣನ ಈ ಪರಿ ಕೊಂಡಾಡುತ್ತೇವೆ. ಆದರೆ ಮಥುರೆಯ ಜನರಿಗೆ ಈಗಲೂ ಬಲರಾಮನೇ ಮಹಾರಾಜ. ಮತ್ತವನೇ ದೈವ. ಅವರ ಶ್ರದ್ಧಾಕೇಂದ್ರ ಭಕ್ತಿಕೇಂದ್ರ ಎಲ್ಲವೂ ಬಲರಾಮನ ಆ ದೇಗುಲ. ದಕ್ಷಿಣ ಭಾರತದ ಭರ್ಜರಿ ಕಲಾವೈಭವದ ದೇಗುಲಗಳಿಗೆ ಹೋಲಿಸಿದರೆ ಮಥುರೆಯ  ದೇಗುಲಗಳೆಲ್ಲ ಎಷ್ಟು ಸಾಮಾನ್ಯವಾಗಿವೆ ಎಂದರೆ ಯಾವ ಆಡಂಬರವೂ ಇಲ್ಲ. ಬಲರಾಮ ದೇವಸ್ಥಾನದಲ್ಲಿ ಮಾತ್ರ ಎಲ್ಲ ಕಡೆ ಹೂವಿನ ಅಲಂಕಾರವಿತ್ತು. ಉಳಿದಂತೆ ದೇವಸ್ಥಾನಗಳು ನಮ್ಮ ಹಳ್ಳಿಗಳ ಪುಟ್ಟ ಗುಡಿಗಳಂತೆ ಪ್ರಶಾಂತವೂ ಆಡಂಬರ ರಹಿತವೂ ಆಗಿತ್ತು. ಅಲ್ಲಿಯೇ ಜಗತ್ ಪ್ರಸಿದ್ಧ ಮಥುರಾ ಪೇಡೆಯನ್ನ ಅವರದೇ ಪರಿಚಯದವರ ಮೂಲಕ ಕೊಂಡುಕೊಂಡೆವು.

ಅಲ್ಲಿಂದ ಬರಸಾನಾದ ರಾಧಾಕೃಷ್ಣರ ಮಂದಿರಕ್ಕೆ ಹೊರಟೆವು.

ಮಥುರೆಯ ವೈಶಿಷ್ಟ್ಯವೆಂದರೆ ಅಲ್ಲಿ ರಾಧೆ ಅತ್ಯಂತ ಜನಪ್ರಿಯಳು.  ನಾವು ನಮಸ್ಕಾರ ಹೇಳಿದಂತೆ, ಅವರು ರಾಧೇ ರಾಧೇ ಎಂದು ಹೇಳುತ್ತಾರೆ. ಅದು ಅವರ ಮಾತಿನ ಆರಂಭ ಮತ್ತು ಮುಕ್ತಾಯ. ರಾಧೆಯ ಊರು ಬರಸಾನಾದಲ್ಲಿ ರಾಧಾಕೃಷ್ಣರ ಅದ್ಭುತ ಮಂದಿರವಿದೆ. ಅಲ್ಲಿ ರಾಧಾ ಕೃಷ್ಣರ ಅಲಂಕೃತ ಮೂರ್ತಿಗಳಿವೆ. ಮತ್ತು ಜನ ರಾಧೆಯ ಜೈಕಾರದೊಂದಿಗೆ ಪ್ರವೇಶಿಸುತ್ತ ಮೈ ಮರೆತು ಹಾಡಿ ಕುಣಿಯುತ್ತಾರೆ. ಬಣ್ಣ, ಮೆಹಂದಿ, ಕೃಷ್ಣ ರಾಧೆಯ ಹೆಸರಿನ ಚಿತ್ರಗಳು, ಮಡಿಕೆಯ ಲೋಟದಲ್ಲಿ ಕೆನೆಮೊಸರಿನಿಂದ ತಯಾರಿಸಲಾದ ಲಸ್ಸಿ ಇವೆಲ್ಲ ಬರಸಾನಾದ ಸ್ಪೆಷಲ್‌ಗಳು. ಎತ್ತರದಲ್ಲಿರುವ ಆ ದೇವಾಲಯ ಪ್ರವೇಶಕ್ಕೆ ಸಮಯದ ಮಿತಿ ಇದೆ. ಈ ಮಂದಿರದಲ್ಲಿ ದರ್ಶನ ಪಡೆದು ಇಲ್ಲಿಂದ ಹೊರಟು ಬೃಂದಾವನ ಪ್ರವೇಶಿಸುವ ಹೊತ್ತಿಗೆ ಸರಿಯಾಗಿ ಸಂಜೆ ಇಳಿಯುತ್ತಿತ್ತು. ಅಂದುಕೊಂಡ ಸಮಯಕ್ಕೆ ಸರಿಯಾಗಿ ನಾವು ಪ್ರೇಮಮಂದಿರದ ಆವಾರದಲ್ಲಿದ್ದೆವು.

ಜೈಪುರದಲ್ಲಿ ಓಲಾ ಡ್ರೈವರ್‌ನೊಬ್ಬ ನಮ್ಮನ್ನು ‘ಆಗ್ರಾ ನೋಡಕ್ಕೆ ಬಂದಿದ್ದೀರಾ’ ಅಂತ ಕೇಳಿದಾಗ ನಾವು ‘ಹೌದು ಆದರೆ ಮಧ್ಯೆ ಮಥುರಾ ನೋಡಿ ಹೋಗಬೇಕು’ ಅಂದಾಕ್ಷಣ ಅವನು ನಮಗೆ ಪ್ರೇಮಮಂದಿರದ ಬಗೆಗೆ ಹೇಳಿದ್ದ. ಮಥುರಾದಲ್ಲಿ ಎಷ್ಟು ಸಮಯ ಇರಬೇಕಾಗಬಹುದು ಎಂಬ ನಿಶ್ಚಿತ ಯೋಜನೆ ಇರಲಿಲ್ಲ ನಮಗೆ. ಆದರೆ ಅವನ ಆಗ್ರಹವೆಂದರೆ ತಾಜ್‌ಗಿಂತ ಸುಂದರವಾಗಿರೊ ಆ ಪ್ರೇಮಮಂದಿರವನ್ನು ಸಂಜೆಯ ಹೊತ್ತಲ್ಲಿ ನೋಡದೇ ಹೋಗಬೇಡಿ ಅನ್ನೋದು.

ಆ ಪ್ರಕಾರ  ಸಂಜೆಯ ಹೊತ್ತಿಗೆ ಅಲ್ಲಿಗೆ ತಲುಪಿದ್ದೆವು. ನಿಜವಾಗಲೂ ಈ ಕ್ಷಣಕ್ಕೂ ಸಹ ನನಗೆ ಅಲ್ಲಿಯ ಬೃಂದಾವನದ ಚಿತ್ರಣವನ್ನು ಅಕ್ಷರಗಳಲ್ಲಿ ಕಟ್ಟಿಕೊಡೋದು ಸಾಧ್ಯವಾಗುತ್ತಿಲ್ಲ. ನಿಶ್ಚಿತವಾಗಿ ಬೃಂದಾವನದ ರಾಸಲೀಲೆಯ ಕಲ್ಪನೆಗಳನ್ನೆಲ್ಲ ಅದ್ಭುತವಾಗಿ ಅಲ್ಲಿ ಧರೆಗಿಳಿಸಿದ್ದಾರೆ. ಪ್ರತಿಕೃತಿಗಳನ್ನು ಬಳಸಿ ಸೃಷ್ಟಿಸಿದ ಸನ್ನಿವೇಶಗಳು ಅಲ್ಲಿವೆ.  ಅವೆಲ್ಲ ಪ್ರತಿಕೃತಿ ಎಂಬುದಾಗಲೀ, ಮಾನವ ನಿರ್ಮಿತ ಎಂಬುದಾಗಲೀ ನಮ್ಮ ಗ್ರಹಿಕೆಗೆ ತೊಡಕಾಗುವುದಿಲ್ಲ. ಅದೇ ಜಾಗದಲ್ಲಿ ಅದೇ ಕತೆಯನ್ನು ಮರು ಸೃಷ್ಟಿಸುವುದು ಕೂಡ ಅದ್ಭುತ ತಾನೆ.  ರಾಧಾ ಮಾಧವರ ಪ್ರೇಮ ಮಂದಿರವನ್ನು ನೋಡದೇ ಇದ್ದರೆ, ಮಥುರೆಯ ಪ್ರವಾಸ ಪೂರ್ಣವೆನಿಸುತ್ತಿರಲಿಲ್ಲ.

ಇಡೀ ಪ್ರೇಮ ಮಂದಿರವನ್ನು ಬಿಳಿಯ ಅಮೃತ ಶಿಲೆಯಿಂದ ನಿರ್ಮಿಸಲಾಗಿದೆ. ಬಣ್ಣ ಬದಲಾಯಿಸುವ ವಿದ್ಯುತ್ ದೀಪಾಲಂಕಾರದಲ್ಲಿನ ಪ್ರೇಮ ಮಂದಿರ ಅದ್ಭುತವಾಗಿ ಕಾಣುತ್ತದೆ. ರಾಧಾ ಕೃಷ್ಣರ ತುಂಬ ಸುಂದರವಾದ ಮೂರ್ತಿಗಳಿವೆ. ಅವುಗಳನ್ನು ರತ್ನ ಖಚಿತವಾಗಿ ಅಲಂಕರಿಸಿದ್ದಾರೆ. ಸಾಕ್ಷಾತ್ ರಾಧಾ ಕೃಷ್ಣರೇ ಧರೆಗಿಳಿದಂತೆ ಆ ಮಂದಿರವನ್ನು ಮತ್ತು ಅದರ ಪರಿಸರವನ್ನು ಚಂದವಾಗಿರಿಸಿದ್ದಾರೆ. ಅವತ್ತು ವಿಪರೀತ ಚಳಿ ಬೇರೆ. ಸಂಜೆ ಎಂಟರವರೆಗೂ ಅಲಂಕೃತ ಬೆಳಕಿನ ನಡುವೆ ನಾವು ಅಲ್ಲೆ ಇದ್ದೆವು. ನಂತರ ಯಾವುದೋ ಹೊಟೆಲ್‌ನಲ್ಲಿ ವಾಸ್ತವ್ಯ ಕೂಡ ಆಯಿತು.

ಇಷ್ಟೆಲ್ಲ ಓಡಾಟದ ಮಧ್ಯೆ ಕೃಷ್ಣ ಜನ್ಮಭೂಮಿಯನ್ನು ನೋಡುವ ಪ್ಲಾನ್  ಬಿಟ್ಟುಹೋಯಿತು. ನನಗೆ ತುಂಬ ನಿರಾಸೆ ಅನ್ನಿಸಿತ್ತು. ಬೆಳಗ್ಗೆಯೇ ನಾವು ಆಗ್ರಾಕ್ಕೆ ಹೊರಡಬೇಕಿತ್ತು. ಆದರೆ ತೇಜ್ ವೀರ್ ಬೆಳ್ಳಂಬೆಳಗ್ಗೆ ಆರೂವರೆಗೆಲ್ಲ ಸ್ನೇಹಿತನ ಜೀಪ್‌ನೊಂದಿಗೆ ಹಾಜರಾಗಿದ್ದರು. ಯಾವುದೇ ಕಾರಣಕ್ಕೂ ನಮ್ಮನ್ನು “ಜನ್ಮಭೂಮಿ” ಗೆ ಕರೆದೊಯ್ಯದೇ ವಾಪಸ್ ಕಳಿಸಲು ಅವರಿಗೂ ಮನಸಿರಲಿಲ್ಲ. ಟೀ ಸಹ ಕುಡಿಯದೇ ನಾವು ಕೃಷ್ಣ ಜನ್ಮಭೂಮಿಗೆ ಧಾವಿಸಿ  ಹೋದೆವು. ಆಗ ತಾನೇ ಸೂರ್ಯ ಹುಟ್ಟುತ್ತಿದ್ದ. ಬೀದಿಗಳಲ್ಲಿನ್ನೂ ರಂಗೋಲಿ ಜಾರುತ್ತಿದ್ದವು. ನಾವು ಮೊಬೈಲ್, ಚಪ್ಪಲಿ, ಬೆಲ್ಟ್, ಪರ್ಸ್ ಸಹ ಗಾಡಿಯಲ್ಲೇ ಬಿಟ್ಟು ಖಾಲಿ ಕೈಯಲ್ಲಿ ಕೃಷ್ಣ ಮಂದಿರಕ್ಕೆ ನಡೆದೆವು. ಜನರ ಜಂಜಾಟವಿರಲಿಲ್ಲ. ಸೆಕ್ಯುರಿಟಿ ಗಾರ್ಡ್ ಗಳು ಗನ್ ಮ್ಯಾನ್ ಗಳು ಮಾತ್ರ ಎಲ್ಲೆಲ್ಲೂ ಕಾಣುತ್ತಿದ್ದರು. ಚೂರು ಸರತಿಯ ಸಾಲು ಕೂಡ ಇರಲಿಲ್ಲ. ನಿರಾಳವಾಗಿ ದೇವಸ್ಥಾನ ಪ್ರವೇಶಿಸಿ ದರ್ಶನ ಮಾಡಿದೆವು. ಬೆಳಗಿನ ಪೂಜೆ ನಡೆಯುತ್ತಿತ್ತು. ಕೂತು ಪೂಜೆ ನೋಡಿದೆವು. ಭಜನೆಯಲ್ಲಿ ದನಿಗೂಡಿಸಿದೆವು.

ಇಡೀ ದೇವಸ್ಥಾನದಲ್ಲಿ ರಾಮ ಸೀತೆ, ಕೃಷ್ಣ ರುಕ್ಮಿಣಿಯರ ಎಲ್ಲ ಮೂರ್ತಿಗಳಿಗೂ ಸುಂದರವಾದ ಅಲಂಕಾರ ಮಾಡಲಾಗಿತ್ತು. ಪ್ರತಿಯೊಂದನ್ನೂ ನೋಡಿ ಖುಷಿಪಟ್ಟೆವು. ಕೃಷ್ಣ ಹುಟ್ಟಿದ್ದನೆನ್ನಲಾದ ಕಾರಾಗೃಹವನ್ನು ದೂರದಿಂದ ನೋಡಿದೆವಷ್ಟೆ. ಆದರೆ ಆ ನೆಲಕ್ಕೆ ಆ ಗುಡಿಗೆ ಆ ಜಾಗಕ್ಕೆ ಇರಬಹುದಾದ ದೈವೀ ಅನುಭೂತಿ ಮಾತ್ರ ವಿಶೇಷವಾದುದು.  ಕೃಷ್ಣನ ಕಾಣಲು ಕಂಗಳಿದ್ದರೆ ಸಾಲದು. ಮನಸಿರಬೇಕು. ಅವ ಎಲ್ಲೆಲ್ಲೂ ಇದ್ದಾನೆ. ಯಾವಾಗಲೂ ಸಿಗುತ್ತಾನೆ. ಆದರೂ ಆ ನೆಲ ಎಷ್ಟು ಪುಣ್ಯದ್ದು! ಸಾಕ್ಷಾತ್ ಶ್ರೀ ಹರಿಯನ್ನೇ ಧರೆಗಿಳಿಸಿಕೊಂಡ ಪುಣ್ಯ ನೆಲ ಅನಿಸಿತು.

ಅಲ್ಲಿಂದ ಹೊರಟಾಗ ಮಥುರೆಯ ಹೊಲ ನೆಲ ಜಲ ಎಲ್ಲೆಲ್ಲೂ ಕೃಷ್ಣನೇ ಕಾಣುತ್ತಿದ್ದ. ಯಮುನೆಯ ತೀರದಲ್ಲಿ ಅವನ ಗೋವಳಗಳ ಅವಶೇಷಗಳಿವೆ. ಯಮುನಾಘಾಟ್ ಕೂಡ ಸಂಜೆಯ ಹೊತ್ತಲ್ಲಿ ನೋಡಬಹುದಾದ ಸ್ಥಳವಂತೆ. ಆದರೆ ನಮಗದು ಸಮಯಮಿತಿಯಿಂದ ತಪ್ಪಿತು. ಸುಮ್ಮನೆ ಹಾಯ್ದು ಹೋಗುವಾಗ ಯಮುನೆ ಶಾಂತತೆಯಿಂದ ಹರಿಯುತ್ತಿದ್ದಳು. ಇಂದಿಗೂ ಮಥುರೆಯ ಮನೆಗಳಲ್ಲಿ ಸಮೃದ್ಧವಾಗಿರುವ ಗೋವುಗಳು ಕಾಣುತ್ತವೆ. ಹೊಲಗಳು ಅಲ್ಲಿಯ ಮುಗ್ಧ ಜನರು, ಅವರ ಬದುಕಿನ ಶೈಲಿ ನೋಡಿದರೆ ಮಥುರೆ ಭಾರತದ ಮತ್ತೊಂದು ಪ್ರತಿಮೆಯಾಗಿ ತೋರುತ್ತದೆ. ಕೃಷ್ಣ ಜನ್ಮಭೂಮಿಯ ತುಂಬ ಸೆಕ್ಯುರಿಟಿ ನೋಡಿ  ಈ ಬಗ್ಗೆ ಯಾರನ್ನೋ ಕೇಳಿದೆವು. ಅಯೋಧ್ಯೆ ವಿವಾದ ಶುರುವಾದ ಮೇಲೆ ಇಲ್ಲೂ ಕೂಡ ಎಲ್ಲ ಬಿಗಿ ಬಂದೋಬಸ್ತ್ ಮಾಡಲಾಗಿದೆ ಅಂದರು. ಇಲ್ಲಿಯೂ ಪಕ್ಕದಲ್ಲಿ ಮಸೀದೆಯಿದೆ. 1661ರಲ್ಲಿ ನಿರ್ಮಾಣವಾದ ಈ ಮಸೀದಿಯ ಹೆಸರು ಜಾಮಾ ಮಸೀದಿ.

ದುಷ್ಟ ರಾಕ್ಷಸರ ಸಂಹಾರವಾಗಿ ಸ್ತ್ರೀ ಕುಲದ ಮಾನ ಕಾಪಾಡಿದ ಕೃಷ್ಣ ಜನಮಾನಸದ ದೈವ.. ಪ್ರವಾಸವೊಂದು ಹೆಚ್ಚು ಅರ್ಥಪೂರ್ಣ ಆಗುವುದು ಅಲ್ಲಿಯ ಜನರ ಒಡನಾಟದಿಂದ. ಅವರ ಸಂಸ್ಕೃತಿಯ ಅರಿವಿನಿಂದ‌. ಈ ಕಾರಣಕ್ಕೂ ಕೂಡ ಮಥುರೆಯ ಪ್ರವಾಸ ನಮ್ಮ ಪಾಲಿಗೆ ಚಂದದ ನೆನಪುಗಳ ಕಟ್ಟಿ ಕೊಟ್ಟಿತು. ದೀಪಗಳೊಂದಿಗೆ ನಾರಾಯಣನ ನಾನಾ ರೂಪಗಳಲ್ಲಿ ಆರಾಧಿಸುವ ಈ ಹೊತ್ತಲ್ಲಿ ಮತ್ತೆ ಮತ್ತೆ ಮಥುರೆ ಕರೆಯುತ್ತಿದೆ. ಧರ್ಮ ಕರ್ಮ ಸಮನ್ವಯಿಸುವ ಸಮಯದಲ್ಲಿ ಹೀಗೆಲ್ಲ ಒಂದಿಷ್ಟು ಮಥುರೆಯ ನೆನಪುಗಳ ಮರುಕಳಿಕೆ.