ರಂಗಭೂಮಿಯಲ್ಲಿ ಪ್ರತಿಯೊಂದು ಅಂಗಗಳು ಒಂದೊಂದು ಮಜಲುಗಳಾಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಈ ಕ್ಷೇತ್ರದಲ್ಲಿ ಮರುಚಿಂತನೆಯ ಅಗತ್ಯವಿದೆ ಎನ್ನುವುದು ಒಪ್ಪತಕ್ಕ ಮಾತು. ಆದರೆ ಮರುಚಿಂತನೆಯ ಹೊಣೆಗಾರಿಕೆಯನ್ನು ಒಬ್ಬರು ಮತ್ತೊಬ್ಬರ ಹೆಗಲಿಗೆ ವರ್ಗಾಯಿಸುತ್ತ ಕೂರುವುದರಿಂದ ಪ್ರಯೋಜನವಿಲ್ಲ.  ಮೂರು ದೃಷ್ಟಿಕೋನಗಳ ನಿಟ್ಟಿನಲ್ಲಿ ಮರುಚಿಂತನೆಯ ಅಗತ್ಯವಿದೆ. ರಂಗನಟ, ರಂಗತಂಡ ಮತ್ತು ರಂಗಕರ್ಮಿಗಳ ದೃಷ್ಟಿಕೋನಗಳನ್ನು ಇಲ್ಲಿ ಗಮನಿಸಬೇಕಾಗುತ್ತದೆ. 
‘ರಂಗಭೂಮಿಯಲ್ಲಿ ಮುರುಚಿಂತನೆಯ ಅಗತ್ಯʼ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಪ್ರಭಾಕರ ರಾವ್ ಇಲ್ಲಿ ಪ್ರಸ್ತುತಪಡಿಸಿದ್ದಾರೆ. 

 

ಬಯಸಿದರೂ ಬಯಸದಿದ್ದರೂ ಬದಲಾವಣೆ ಅಗತ್ಯ ಎಂದು ತಾತ್ವಿಕವಾಗಿ ನುಡಿಯಬಹುದು. ಹಾಗೆಯೇ ಈಗ ಬದಲಾವಣೆಯ ಕಾಲ ಬಂದಿದೆ ಎಂದೂ ಸಹ ನಿಸ್ಸಂಕೋಚವಾಗಿ ಹೇಳಬಹುದು. ಬದಲಾವಣೆ ಅವಶ್ಯಕವೇ ಸಮರ್ಪಕವೇ ಎಂಬುದು ಬೇರೆ ಮಾತು. ಆದರೆ ಮರುಚಿಂತನೆಯ ಅವಶ್ಯಕತೆಯಂತೂ ಅವಶ್ಯವಾಗಿ ಬೇಕಾಗಿದೆ. ಹಾಗಂತ ಇದು ಹೊಸದಾಗಿ ಅಪ್ಪಳಿಸುತ್ತಿರುವುದೇನಲ್ಲ. ಹಾಗಂತ ಮರುಚಿಂತನೆಯು ಬದಲಾವಣೆ ಎಂಬ ಪದದಿಂದ ಹೊರಗುಳಿಯುವಂಥದ್ದೇನಲ್ಲ. ಮರುಚಿಂತನೆಯ ಹೊರಪದರೇ ಬದಲಾವಣೆ.

1920ರ ಸುಮಾರಿಗೆ ಟಿ ಪಿ ಕೈಲಾಸಂ ಅವರು ಕನ್ನಡ ರಂಗಭೂಮಿಗೆ ಹೊಸ ಹಾದಿ ಹಾಕಿಕೊಟ್ಟರು. ಸುಮಾರು ಅದೇ ಕಾಲಕ್ಕೆ ಸಂಸ ಅವರ ಕೆಲವು ರುದ್ರನಾಟಕಗಳು ರಚಿತವಾದವು. ಕೈಲಾಸಂ ಅವರ ಹಾಸ್ಯ, ವಿಡಂಬನೆ ಅವರ ನಾಟಕಗಳ ಖ್ಯಾತಿಗೆ ಕಾರಣವಾಯಿತು. ಸಂಸರ ಕೃತಿಗಳು ಗ್ರಂಥಸ್ಥವಾಗಿಯೇ ಉಳಿದವು. ಆದರೆ  ಅಂದು ನಾಟಕಗಳನ್ನು ಆದರದಿಂದ ನೋಡುತ್ತಿದ್ದ ಸಾವಿರಾರು ಸಾಮಾನ್ಯ ಜನರನ್ನು ಕೈಲಾಸಂ ಅವರ ನಾಟಕಗಳು ಮುಟ್ಟಲಿಲ್ಲ; ಅವರ ರಂಗಸೇವೆಯ ಪ್ರತಿಭೆ ಅಂದು ಯಾರಿಗೂ ತಟ್ಟಲಿಲ್ಲ. ಅನಂತರ ವಿಲಾಸಿ ರಂಗಭೂಮಿಯ ಪ್ರಭಾವ ಹೆಚ್ಚಾಗುತ್ತಾ ಹೋಯಿತು. ಅನೇಕ ರಂಗತಂಡಗಳು ಹುಟ್ಟಿಕೊಂಡವು. ಸಮಾಜವನ್ನು ನೋಡುವ ಸ್ವಾಸ್ಥ್ಯ ಬದಲಾಯಿತು. ಶ್ರೀರಂಗರು ಹಾಗೂ ಪರ್ವತವಾಣಿಯವರ ನಾಟಕಗಳು ಹೊಸ ಮಜಲನ್ನು ಕಟ್ಟಿಕೊಟ್ಟವು. ಹಾಗೆಂದು ಇಲ್ಲಿ ಯಾರು ಮುಖ್ಯ ಅಮುಖ್ಯ ಎಂಬ ವಾದವೂ ಅಲ್ಲ; ಅವಶ್ಯ ಅನಾವಶ್ಯ ಎಂಬ ಪರಿಕಲ್ಪನೆಗಳ  ವಿತಂಡವೂ ಅಲ್ಲ. ಇಲ್ಲಿ ಗಮನದಲ್ಲಿಡಬೇಕಾದ ಅಂಶವೆಂದರೆ ಕಾಲಕಾಲಕ್ಕೆ ಬದಲಾಗುವ ಹಾಗೂ ಬದಲಾಗುತ್ತಿರುವ ಕೃತಿಗಳ ಶೈಲಿ.

ಈ ಸಂವೇದನೆ ಕೇವಲ ರಂಗಭೂಮಿಯಷ್ಟೇ ಅಲ್ಲದೆ ಚಿತ್ರರಂಗಕ್ಕೂ ಕೂಡ ಕಾಡದಿದ್ದುದೇನಲ್ಲ. ಈ ಕರೋನಾವಧಿಯಲ್ಲಿ, ಚಿತ್ರಮಂದಿರಗಳ ಅನುಪಸ್ಥಿತಿಯಲ್ಲಿ ಓಟಿಟಿ ಪ್ಲಾಟ್ ಫಾರ್ಮ್ ಗಳ ಪ್ರಭಾವ ಹೆಚ್ಚಿವೆ ಎಂಬುದು ಅತಿಶಯೋಕ್ತಿಯ ಮಾತೇನಲ್ಲ. ಆದರೆ ಗಮನಿಸಬೇಕಾದ ಅಂಶವೇನೆಂದರೆ ಕನ್ನಡೇತರ ಚಿತ್ರಗಳು ಸದ್ದು ಮಾಡಿದಷ್ಟು ಕನ್ನಡ ಚಿತ್ರಗಳು ಮಾಡಲಿಲ್ಲ . ಹಾಗೆಂದು ಕನ್ನಡ ಚಿತ್ರಗಳ ಗಣನೆ ಕಡಿಮೆಯಾಗಿತ್ತು ಎಂದೇನೂ ಅಲ್ಲ. ರಂಗಭೂಮಿ ಮಿತ್ರರೇ ಸೇರಿಕೊಂಡು ಹಲವು ಕನ್ನಡ ಚಿತ್ರಗಳನ್ನು ತಯಾರಿಸಿದ್ದುಂಟು. ಕಾರಣಗಳು ಸಾಕಷ್ಟಿರಬಹುದು, ಆದರೆ ನಮ್ಮ ಚಿತ್ರಗಳನ್ನು ನಮ್ಮದೇ ಆದ ಪ್ರೇಕ್ಷಕರಿಗೆ ಮುಟ್ಟಿಸಲು ಏನು ಮಾಡಬೇಕೆಂಬ ಮರು ಚಿಂತನೆಯಂತೂ ಖಂಡಿತ ಅವಶ್ಯ. ಕನ್ನಡದಲ್ಲಿ ಒಟ್ಟು 250 ಚಿತ್ರಗಳು ಈ ವರ್ಷ ಬಿಡುಗಡೆಗೆ ತಯಾರಾಗಿವೆಯಂತೆ.

ಅದೇನೇ ಇರಲಿ ರಂಗಭೂಮಿಯಲ್ಲಿಯೂ ಸಹ ಚಿಂತಿಸಬೇಕಾದ ಸಮಯ ಈಗ ಬಂದಿದೆ. ಅನೇಕ ಸಹೃದಯರು ಸೇರಿ ಸಹೃದಯ ಕಾವ್ಯ ಅಥವಾ ಕೃತಿಯನ್ನು ಸಹೃದಯ ಪ್ರೇಕ್ಷಕರಿಗೋಸ್ಕರ ಸಮರ್ಪಿಸುವುದೇ ನಾಟಕದ ಮುಖ್ಯ ಕಾಯಕವಾಗಿದೆ. ಈ ಕಾಯಕಕ್ಕೆ ಅನೇಕ ಅಂಗಗಳು ಪುಷ್ಟಿ ಕೊಡುತ್ತವೆ. ಪ್ರತಿಯೊಂದು ಅಂಗಗಳು ಒಂದೊಂದು ಮಜಲುಗಳಾಗಿ ಕಾರ್ಯನಿರ್ವಹಿಸುತ್ತವೆ. ಅವುಗಳಲ್ಲಿ ಮುಖ್ಯವಾಗಿ ಮೂರನ್ನು ವಿಭಾಗೀಕರಿಸಿ ಅವುಗಳ ದೃಷ್ಟಿಯಿಂದ ಮರುಚಿಂತನೆಯ ಅಗತ್ಯವನ್ನೂ ಅವುಗಳ ಘಟ್ಟಗಳನ್ನೂ ಪರಿಶೀಲಿಸುತ್ತಾ ಸಾಗೋಣ.

ರಂಗನಟನಿಂದ ಮರುಚಿಂತನೆಯ ಅಗತ್ಯತೆ:

ಒಬ್ಬ ನಟನು, ರಂಗಭೂಮಿಗಾಗಿ ತನ್ನನ್ನು ತಾನು ಸಿದ್ಧಗೊಳಿಸಿಕೊಳ್ಳುವುದು ಅವಶ್ಯಕ. ಹಾಗೆಯೇ ನಟನು ತನ್ನನ್ನು ತಾನು ಕಾಲಕಾಲಕ್ಕೆ ತಕ್ಕಂತೆ ಹುರಿಗೊಳಿಸಿಕೊಳ್ಳುವುದು ಅನಿವಾರ್ಯವೂ ಹೌದು. ಜನಗಳಿಗೆ ಏನು ಬೇಕು ಅವರ ಅಪೇಕ್ಷೆಯೇನು ಎಂಬುದಕ್ಕಿಂತ ಕೃತಿ ಏನನ್ನು ಹೇಳಲು ಬಯಸುತ್ತಿದೆ, ನಾಟಕಕಾರ ಏನನ್ನು ಭಿನ್ನವಿಸಿಕೊಳ್ಳಲು  ಹವಣಿಸುತ್ತಿದ್ದಾನೆ ಎನ್ನುವ ಸಮಾಲೋಚನೆ ಒಬ್ಬ ನಟನಿಗೆ ಅಗತ್ಯ.

ರಂಗನಟನು ರಂಗಕೃತಿಗೂ ಹಾಗೂ ಪ್ರೇಕ್ಷಕನಿಗೂ ಸೇತು ಎಂಬುದನ್ನು ಸದಾ ಅರಿತಿರಬೇಕು ಹಾಗೂ ಅದು ಅವನ ಜವಾಬ್ದಾರಿಯಾಗಿರಬೇಕು. ಕೃತಿ ಏನು ಹೇಳುತ್ತಿದೆ ನಾಟಕಕಾರನ ಒಕ್ಕಣೆ ಏನು ಎಂಬಿತ್ಯಾದಿ ಮುಖ್ಯ ವಿಷಯಗಳನ್ನು ಸದಾ ಗಮನಿಸಿ ನಟನೆಯ ಮೂಲಕ ಅದನ್ನು ಸಾದರಪಡಿಸುವುದು ನಟನ ಕರ್ತವ್ಯ ಹಾಗೂ ಹೊಣೆಯಾಗಿರುತ್ತದೆ. ಕಾಲ ಬದಲಾದಂತೆ, ಕೃತಿ ಬದಲಾದಂತೆ ನಟನು ತನ್ನ ನೈಪುಣ್ಯವನ್ನು ಹುರಿಗೊಳಿಸಿ ಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಒಂದರಿಂದ ಎಂಟನೆಯ ಶತಮಾನದವರೆಗೂ ಬಂದ ಸಂಸ್ಕೃತ ನಾಟಕಗಳು ಗೀತ ನಾಟ್ಯಗಳಿಂದ ಕೂಡಿದ್ದು ಸ್ವಾಭಾವಿಕವಾಗಿ ಛಂದಸ್ಸಿನ ಲಯವನ್ನು ಹೊಂದಿಕೊಂಡಿದ್ದವು ಆಮೇಲೆ ಗೀತ ಹೋಗಿ, ಬರಿಯ ಛಂದಸ್ಸು ಉಳಿದುಕೊಂಡಿತು. ಆನಂತರದಲ್ಲಿ ನಾಟಕೀಯತೆ ಹೆಚ್ಚುತ್ತಾ ಛಂದಸ್ಸು ಮರೆಯಾಗುತ್ತ ಬಂತು. ಗತಿಯ ಗದ್ಯದ ಮಿಶ್ರಣಗಳು ಕಾಣಿಸಿಕೊಂಡವು. ಕೊನೆಗೆ ನಾಟಕಗಳಲ್ಲಿ ಛಂದಸ್ಸು ಅಸ್ವಾಭಾವಿಕವೆಂದು ಬರಿಯ ಗದ್ಯ ಪ್ರಯೋಗ ಇಂದು ಪ್ರಚಲಿತದಲ್ಲಿದೆ. ಇವೆಲ್ಲವುದರ ತೌಲನಿಕ ಕನಿಷ್ಠ ಜ್ಞಾನ ನಟನಿಗೆ ಇರಬೇಕಾದದ್ದು ಅವಶ್ಯಕ. ಇವೆಲ್ಲವೂ ಇದ್ದ ಪಕ್ಷದಲ್ಲಿ ಚಿಂತನೆಗೆ ಆಸ್ಪದವಾಗುತ್ತದೆ. ಕಾಲಕ್ಕೆ ತಕ್ಕಂತೆ ಮರುಚಿಂತನೆ ಅವಶ್ಯವೇ ಎಂಬ ಸಾಧಾರಣ ಪ್ರಶ್ನೆಯಾದರೂ ಹೊಳೆಯುತ್ತದೆ ಹಾಗೂ ಇದು ಅವಶ್ಯ ಕೂಡ.

ಅಂದು ನಾಟಕಗಳನ್ನು ಆದರದಿಂದ ನೋಡುತ್ತಿದ್ದ ಸಾವಿರಾರು ಸಾಮಾನ್ಯ ಜನರನ್ನು ಕೈಲಾಸಂ ಅವರ ನಾಟಕಗಳು ಮುಟ್ಟಲಿಲ್ಲ; ಅವರ ರಂಗಸೇವೆಯ ಪ್ರತಿಭೆ ಅಂದು ಯಾರಿಗೂ ತಟ್ಟಲಿಲ್ಲ. ಅನಂತರ ವಿಲಾಸಿ ರಂಗಭೂಮಿಯ ಪ್ರಭಾವ ಹೆಚ್ಚಾಗುತ್ತಾ ಹೋಯಿತು. ಅನೇಕ ರಂಗತಂಡಗಳು ಹುಟ್ಟಿಕೊಂಡವು.

ರಂಗಕರ್ಮಿಯಿಂದ ಮರುಚಿಂತನೆಯ ಅಗತ್ಯತೆ:

ಹಾವು ತನ್ನ ಪೊರೆ ಕಳಚಿ ಪುನರ್ ಜನ್ಮ ತಳೆದು ನಿಲ್ಲುವಂತೆ ಆಗಾಗ ನಾಟಕಗಳು ತಮ್ಮ ಅಂತರ್ಗತ ಅಂಶಗಳನ್ನು ಅವಲೋಕಿಸಿ ಇಂದಿನ ಕಾಲಕ್ಕೆ ಹೊಂದಿಕೊಳ್ಳುವಂತೆ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಪರಿಗಣಿಸಲು ರಂಗಕರ್ಮಿಗಳ ಪರಿಶ್ರಮ ಅವಶ್ಯವಾಗಿದೆ.

ಇದಕ್ಕೆ ಸಮರ್ಪಕವಾಗಿ ಎರಡು ವಿಷಯಗಳ ಅವಗಾಹನೆ ಮುಖ್ಯ. ನಾಟಕೋತ್ಕರ್ಷ ಕಾರ್ಯಕ್ರಮಗಳು ಹಾಗೂ ಎರಡನೆಯದು ನಾಟಕ ರಚನೆ. ಈ ಎರಡು ವರ್ಷಗಳ ಕರೋನಾವಸ್ಥೆಯಲ್ಲಿ ಇವು ಆಗಿಲ್ಲವೆಂಬುದೇನೂ ಇಲ್ಲ. ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಕೆಲವು ರಂಗಕರ್ಮಿಗಳಿಂದ ಆಯೋಜಿಸಲಾದ ಶಂಕರ ಫೌಂಡೇಶನ್ನಿನ ಡಮರು ರಂಗಮಂದಿರದಲ್ಲಿ ಪ್ರದರ್ಶನವಾದ ತಮಾಷಾ ಎಂಬ ಪ್ರಹಸನ ಮಾಲೆಯ ಕಾರ್ಯಕ್ರಮ. ಸಾಮಾನ್ಯ ಪ್ರೇಕ್ಷಕನಿಗೆ ಪ್ರವೇಶವಿಲ್ಲದಿದ್ದಾಗ್ಯೂ ರಂಗ ಗೆಳೆಯರ ಬಳಗವನ್ನು ಆಹ್ವಾನಿಸಿ ಯುವ ನಾಟಕಕಾರ ನಿರ್ದೇಶಕರಿಂದ ಕಟ್ಟಲಾದ ಕಿರು ನಾಟಕಗಳು ರಂಗಕರ್ಮಿಗಳ ಹೃದಯಾಂತರಾಳದಲ್ಲಿ ಮರೆಯಲಾಗದ ಅನುಭವವಂತೂ ಕೊಟ್ಟಿತ್ತು. ಇಂತಹ ಅನುಭವಗಳೇ ಮತ್ತಷ್ಟು ರಂಗದ ಕಾರ್ಯದೆಡೆಗೆ ಕೊಂಡೊಯ್ಯುತ್ತವೆ ಎಂಬುದರಲ್ಲಿ ಸಂಶಯವಿಲ್ಲ.

ಈಗ್ಗೆ ಮೊನ್ನೆ ಕೆಲವು ಹಿನ್ನೆಲೆ ರಂಗದ ಮಿತ್ರರು ಸೇರಿ ‘ಬ್ಯಾಕ್ ಆನ್ ಸ್ಟೇಜ್ ‘ ಎಂಬ ಹೆಸರಿನಲ್ಲಿ ಎರಡು ತಿಂಗಳ ಕಾಲ ಹಲವು ರಂಗನಟರನ್ನು ಸೇರಿಸಿ ಪೂರ್ಣಪ್ರಮಾಣದಲ್ಲಿ ತಾಲೀಮು ನಡೆಸಿ ಎರಡು ನಾಟಕವನ್ನು ಸಿದ್ಧಪಡಿಸಿ ಪ್ರದರ್ಶನದ ಎಕ್ಕೆಗಿಟ್ಟರು. ಇದಕ್ಕೆ ನಮ್ಮ ರಂಗಕರ್ಮಿಗಳಿಂದಲೂ ನಮ್ಮ ರಂಗತಂಡಗಳಿಂದಲೂ ಎಷ್ಟರಮಟ್ಟಿಗೆ ಪ್ರೋತ್ಸಾಹ ಸಿಕ್ಕಿತೆಂಬುದು ನಿರ್ವಚನೆಯ ಸಂಗತಿ. ಕೆಲವರಿಗೆ ಪ್ರೋತ್ಸಾಹ ಸಿಗುವುದಿಲ್ಲವೆಂದು ಹಲವರು. ಆ ಹಲವರ ಕಾರ್ಯಕ್ರಮಗಳಿಗಾದರೂ ಏಕೆ ಹೋಗಬೇಕೆಂಬುದಾಗಿ ಮತ್ತೆ ಕೆಲವರು. ಈ ಕೆಲವು ಹಲವರಿಂದಾಗುವ ಆಗುತ್ತಿರುವ ಭಿನ್ನಾಭಿಪ್ರಾಯಗಳು ಹಲವಾರು ಪ್ರೇಕ್ಷಕರನ್ನು ರಂಗಭೂಮಿಯೆಡೆಗೆ ಮುಖ ಮಾಡದಂತೆ ಪ್ರೇರೇಪಿಸುತ್ತವೆ. ಏಕೆಂದರೆ ಇಲ್ಲೊಂದು ಸಂಕುಚಿತ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಇದರ ಹೊರತಾಗಿ ಕೆಲವು ರಂಗತಂಡಗಳು ಮುಂದೆ ಬಂದು ಸ್ವರಚಿತ ಅಥವಾ ಹೊಸದಾಗಿ ರಚಿಸಿರುವ ನಾಟಕಗಳ ಉತ್ಸವವನ್ನು ಮಾಡುವುದಾಗಿ ಘೋಷಿಸಿದ್ದಾಗ್ಯೂ ಹಲವು ಹೊಸ ಕನ್ನಡ ನಾಟಕಗಳ ಹರಿವು ಸಾಧ್ಯವಾಗುತ್ತದೆ.

ಇನ್ನು ಎರಡನೆಯದಾಗಿ ನಾಟಕ ರಚನೆಗಳಿಗೆ ಕನ್ನಡ ರಂಗಭೂಮಿಯಲ್ಲಿ ಮೊದಲಿನಿಂದಲೂ ಉತ್ತೇಜನವಿಲ್ಲ ಎಂಬ ಮಾತು ಆಗಾಗ್ಗೆ ಕಿವಿಗೆ ಬೀಳುತ್ತಲೇ ಇರುತ್ತದೆ. ಇದರ ಮುಖ್ಯ ಪಾತ್ರವನ್ನು ಸರ್ಕಾರವೇ ನಿಭಾಯಿಸಬೇಕಾಗುತ್ತದೆ. ಹೊಸ ನಾಟಕಗಳನ್ನು ರಚಿಸುವುದಕ್ಕೆ ನಾಟಕಕಾರರಿಗೆ ಉತ್ತೇಜನ, ಕಮ್ಮಟಗಳ ಆಯೋಜನೆ, ವಿಚಾರ ಮಂಡನೆಗಳು ಇತ್ಯಾದಿ. ಆಡುವವರಿಲ್ಲವೆಂದು ಬರೆಯುವವರು ಸ್ಥಗಿತಗೊಳ್ಳುವುದು, ಬರೆಯುವವರು ಇಲ್ಲವೆಂದು ಆಡುವವರು ಸ್ತಬ್ಧ ಹೊಂದುವುದು ಆಗಕೂಡದು. ಈ ಹಿಂದೆಯೂ ಸಹ ಕನ್ನಡ ರಂಗಭೂಮಿಯಲ್ಲಿ ಇದೇ ಸಮಸ್ಯೆ ತಲೆದೋರಿದಾಗ ಆಗ ಕೆಲವು ನಾಟಕಕಾರರು ಅನುಸರಿಸಿದ್ದು ಸಂಸ್ಕೃತ ಹಾಗೂ ಇಂಗ್ಲಿಷ್ ನಾಟಕಗಳನ್ನು. ಇಂಗ್ಲಿಷ್ ಬಾರದ ಸಂಸ್ಕೃತ ಪಂಡಿತರು ಇಂಗ್ಲಿಷ್ ಬಲ್ಲವರ ನೆರವಿನಿಂದ ಶೇಕ್ಸ್ ಪಿಯರ್ ನಾಟಕಗಳ ಅನುವಾದಕ್ಕೆ ಕೈಗಿಟ್ಟರು. ಮುಂದುವರೆದು ರಂಗಕೃತಿಗಳಿಗೆ ಹೊಸ ಮೆರುಗನ್ನು ಕೊಟ್ಟವರು ನಾಟಕಕಾರ ಜಾರ್ಜ್ ಬರ್ನಾಡ್ ಶಾ. ಅವರು ಇಂಗ್ಲಿಷ್ ರಂಗಭೂಮಿಗೆ ಮಾಡಿದ ಕೆಲಸವನ್ನು ಕನ್ನಡ ನಾಡಿಗೆ ಮಾಡಿದವರು ಕೈಲಾಸಂ. ತದನಂತರ ಕಂಪನಿ ಶೈಲಿಯ ಅನೇಕ ನಾಟಕಗಳು ಜನಮನ ಸೂರೆ ಮಾಡಿದವು.

ಈಗಲೂ ಜನ ಮನ ಮುಟ್ಟುವ ನಿರಂತರತೆಯಲ್ಲಿ ನಾಟಕ ರಚನೆಯ ವೈವಿಧ್ಯಗಳನ್ನು ಚಿಂತಿಸುವ ಸಮಯ ಬಂದಿದೆ.

ರಂಗತಂಡಗಳಿಂದ ಮರುಚಿಂತನೆಯ ಅಗತ್ಯತೆ:

ರಂಗತಂಡಗಳು ಇಂದು ನಾಟಕ ಉತ್ಪತ್ತಿಯ ಬಗ್ಗೆ ಯೋಚಿಸಬೇಕಾದ್ದು, ಚಿಂತಿಸಬೇಕಾದ್ದು ಧರ್ಮಪ್ರಾಯ. ವಿಲಾಸಿ ರಂಗಭೂಮಿ ಎಂದು ಕರೆಯಲ್ಪಟ್ಟ ಇಂದಿನ ಹವ್ಯಾಸಿ ರಂಗಭೂಮಿಯ ಅನೇಕ ರಂಗ ಮಿತ್ರರು ಇಂದು ಬೇರೆ ಕೆಲಸಗಳಿಗೆ ಹೋಗಿ ತೊಡಗಿಸಿಕೊಂಡರೂ, ರಂಗತಂಡವನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಎಲ್ಲವೂ ಸಮರ್ಪಕವಾಗಿದ್ದು ಕಾಲವೂ ಸಾತ್ ಕೊಡುತ್ತಿದ್ದರೆ ಮಾತ್ರ ನಾಟಕದ ಬಗ್ಗೆ ಯೋಚಿಸುವ ಹವ್ಯಾಸಿ ರಂಗ ತಂಡಗಳು ಸೂಕ್ಷ್ಮ ಸಂದರ್ಭಗಳಲ್ಲಿ ರಂಗೋತ್ಕರ್ಷದ ಚಿಂತನೆ ನಡೆಸುವುದಿಲ್ಲವೆಂಬ ಆಪಾದನೆ ಇದೆ. ಇದರ ಸರಿ ತಪ್ಪುಗಳನ್ನು ವಿಶ್ಲೇಷಿಸಬೇಕಿದೆಯಾದರೂ, ಸರ್ಕಾರದ ಅನುದಾನ ದೊರೆಯದಿದ್ದರೆ ಹವ್ಯಾಸಿ ರಂಗ ತಂಡಗಳು ನಾಟಕದ ಚಿಂತನೆ ನಡೆಸುವುದೇ ಇಲ್ಲವೆಂಬ ಮತ್ತೊಂದು ಘೋರ ಆಪಾದನೆಯೂ ಇದೆ. ಇವು ಖಂಡಿತ ಪೂರ್ಣಸತ್ಯವಲ್ಲ. ಎಷ್ಟೋ ರಂಗತಂಡಗಳು ವರ್ಷವಿಡೀ ನಾಟಕ ಮಾಡುತ್ತಾ ಬಂದಿದ್ದರೂ ಸರ್ಕಾರದ ಗಮನಕ್ಕೆ ಬಾರದೆ ಹೋಗಿವೆ. ಇಂತಹ ರಂಗತಂಡಗಳು ಇಂತಹ ಸಂದರ್ಭಗಳಲ್ಲಿ ಯಾವ ರೀತಿಯಲ್ಲೂ ಹಿಂಜರಿಯದೆ ಸಕ್ರಿಯವಾಗಬೇಕು. ರಂಗಕೃತಿಯ ವಿಶ್ಲೇಷಣೆ, ಪ್ರದರ್ಶನಗಳ ವಿಮರ್ಶೆ, ಅನುಭವಿ ರಂಗಕರ್ಮಿಗಳ ವಿಚಾರ ಮಂಡನೆಗಳಿಂದ ರಂಗಭೂಮಿಯನ್ನು ಸಿಂಗರಿಸಬೇಕು. ರಂಗಭೂಮಿಯಲ್ಲಿ ಮರುಚಿಂತನೆ ಮಾಡಬೇಕಾದರೆ, ಈ ರೀತಿಯ ಸಿಂಗಾರಕ್ಕೆ ಅವಶ್ಯಕವಾದ ಸಂಪನ್ಮೂಲಗಳು ಕೂಡ ಅವಶ್ಯ ಎಂಬುದನ್ನು ಗುರುತಿಸಬೇಕು.

ರಂಗಭೂಮಿಯಲ್ಲಿ ಮರುಚಿಂತನೆ ಕುರಿತು ಪ್ರಕಟವಾದ  ಬರಹಗಳು:

‘ಪ್ರೇಕ್ಷಕರಿಗೆ ರಂಗಭೂಮಿಯೇನೂ ಅನಿವಾರ್ಯವಲ್ಲ’

ರಂಗಭೂಮಿಯಲ್ಲಿ ಮರುಚಿಂತನೆ ಮತ್ತು ಗಾಂಧಿ ನಡಿಗೆ