ಮಳೆಯು ಮಳೆಗಾಲವನು ತೊರೆದಿದೆ. ಈಗ ಎಲ್ಲಾ ತಿಂಗಳಲ್ಲಿ ಆತ ಒಮ್ಮೆಯಾದರೂ ಇಣುಕುವ ಅತಿಥಿ. ಅಲ್ಲೆಲ್ಲೊ ಸಮುದ್ರದ ಮೇಲೆ ಆಗಾಗ್ಗೆ ನೂರೆಂಟು ಭಾರಗಳು. ಮಳೆಗೆ ಅಲ್ಲಲ್ಲಿ ಎಕ್ಸ್ಟ್ರಾ ಡ್ಯೂಟಿ. ತರಗತಿಯಲ್ಲಿ ನೋಡಿ ಮಕ್ಕಳೇ ಕಾಲಗಳು ಮೂರು, ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಅಂದೆ. ಒಬ್ಬ ಪೋರ ಕಿಕೀಕ್ ಅಂತ ನಕ್ಕು ಹೇಳಿದ “ಬಿಸಿಲು ಇದ್ದಾಗ ಬರುತ್ತೆ ಚಳಿ ಇದ್ದಾಗಲೂ ಬರುತ್ತಲ್ಲ” ಅಂತ. “ಹೌದು ಮಳೆಗೆ ಈಗ ವಿಶೇಷ ಸೀಸನ್ ಪಾಸ್ ಸಿಕ್ಕಿದೆ” ಎಂದೆ. ಪೋರ ಗಪ್ಪಾದ. ಹೇಳು ಮಳೆಯೆ ಮಕ್ಕಳ ಮುಂದೆ ಹೀಗೆ ನೀನು ಅವಮಾನಿಸುವುದು ಸರಿಯೇ..?
ಮಳೆಯ ಕುರಿತು ಸದಾಶಿವ್ ಸೊರಟೂರು ಬರಹ
ಮಳೆ, ಮುಗಿಲು ನೆಲಕ್ಕೆ ಮಾಡಿದ ಆಣೆ. ಮಗುವೊಂದು ಆಟಿಕೆ ಬಯಸಿ ಹಿಡಿದ ರೊಚ್ಚು, ಮೊದಲ ಬಾರಿ ಹುಡುಗಿಯ ಮುಂದೆ ನಿಂತ ಹುಡುಗನ ಕೈಬೆವರು. ಕವಿಯೊಬ್ಬ ತನ್ನ ಸಂಕಟಕ್ಕೆ ತಾನೇ ಬರೆದುಕೊಂಡು ಪಡೆದುಕೊಂಡ ಬಿಡುಗಡೆ. ಮಳೆ ಆಕಾಶದಿಂದ ಸುರಿವ ಆನಂದಬಾಷ್ಪ. ಕೊಂದ ಪ್ರೀತಿ ಬಾಳಿನುದ್ದಕ್ಕೂ ತರಿಸುವ ಸುರಿವ ಕಣ್ಣೀರು. ಕ್ಷಮಿಸಿ, ನಾನು ಮಳೆ ಬಗ್ಗೆ ಭಾವನೆ ಹುಡುಕುತ್ತಾ ಇದೀನಿ; ಅಭಿಪ್ರಾಯವನ್ನಲ್ಲ.. ನಮಗೆ ಮಳೆಯ ಒಳಜಗತ್ತು ಬೇಕು. ಮೋಡಗಳ ಮಾತು ಬೇಕು.
ಮೂರು ದಿನ ಭಾರೀ ಮಳೆ. ಅಲ್ಲೆಲ್ಲೊ ವಾಯುಭಾರತ ಕುಸಿತ. ಇದು ಭರಣಿ ಮಳೆಯ ನಾಲ್ಕನೆ ಪಾದ. ಉತ್ತರ ದಿಕ್ಕು ಮಿಂಚಿದೆ ಇವತ್ತು ಮಳೆ ಖಚಿತ. ದಟ್ಟ ಮೋಡವಿದೆ ನೋಡಿ ಎಷ್ಟೊಂದು ಮಳೆ ಉಚಿತ. ವಾಡಿಕೆಗಿಂತ ಹೆಚ್ಚು ಮಳೆ ಇಲ್ಲವೆ ಕಡಿಮೆ ಮಳೆ ಅನ್ನುವ ಪ್ರತಿ ಬಾರಿಯ ಶ್ಲೋಕ, ಯಾತಕ್ಕೆ ಮಳೆ ಹೋದವೊ ಅನ್ನುವ ಹಾಡಿನ ಸ್ತೋತ್ರ. ನಿಲ್ಲಿ ಮೋಡಗಳೆ ಎಲ್ಲಿ ಹೋಗುವಿರಿ ಎಂಬ ಸಂಕಟ.. ಓ ಯಾಕೊ ಇವೆಲ್ಲಾ ಸಾಕಾಗಿದೆ.
ಸಾಯುವಷ್ಟು ಅಳಬೇಕು ಅನಿಸುತ್ತೆ. ಅಳುವುದು ಸುಲಭವಿಲ್ಲ ಈ ಜಗತ್ತಿನಲ್ಲಿ. ಕಣ್ಣೀರು ನೋಡಿ ಜಗತ್ತು ನಗುತ್ತದೆ. ಅಳುವಿಗೆ ಜತೆಯಾಗಲಿ ಅಂತ ಕಾದ ಹೊತ್ತಿಗೆ ಮಳೆ ಕೈಕೊಡುತ್ತದೆ. ತಡಿಲಾರದ ಖುಷಿ ಎದೆ ತುಂಬಿದಾಗ ಜಗತ್ತಿಗೆ ಕೇಳುವಷ್ಟು ಜೋರಾಗಿ ಕೂಗಿ ನಗಬೇಕು ಅನಿಸಿದಾಗ ಈ ಮಳೆ ಧೋ ಅನ್ನುತ್ತದೆ. ನನ್ನ ಕೂಗು ಯಾರಿಗೂ ತಲುಪುವುದಿಲ್ಲ. ನನ್ನ ನಗು ಸುರಿವ ಮಳೆಯಲ್ಲಿ ಅಳಿವಿನಂತೆಯೇ ಕಾಣಿಸುತ್ತದೆ. ಇಲ್ಲಿ ಎಲ್ಲರೂ ಪ್ರೀತಿಸುತ್ತಾರೆ ಆದರೆ ಅದು ದಕ್ಕುವುದು ಎಷ್ಟು ಜನಕ್ಕೊ!? ಇಲ್ಲಿ ಮಳೆ ಪ್ರೀತಿಯಂತೆ ಬೀಳುತ್ತಲೇ ಇರುತ್ತದೆ ಆದರೆ ಯಾರಿಗೆ ಎಷ್ಟು ಜತೆಯಾಗುವುದೊ..!
ದೇವರೇ ಈ ಮಳೆಯೇಕೆ ಮನುಷ್ಯರ ಬುದ್ಧಿ ಕಲೀತು. ಅಲ್ಲೆಲ್ಲೊ ಮಳೆ ಬೀಳುತ್ತಿದೆ ಅಂತ ತಿಳಿದಾಗ ಯಾರಿಗೆ ಅಳುವೊ.. ಯಾರಿಗೆ ನಗುವೊ.. ನನಗಿಲ್ಲೆ ಸಂಕಟ.
ಮಳೆಯು ಮಳೆಗಾಲವನು ತೊರೆದಿದೆ. ಈಗ ಎಲ್ಲಾ ತಿಂಗಳಲ್ಲಿ ಆತ ಒಮ್ಮೆಯಾದರೂ ಇಣುಕುವ ಅತಿಥಿ. ಅಲ್ಲೆಲ್ಲೊ ಸಮುದ್ರದ ಮೇಲೆ ಆಗಾಗ್ಗೆ ನೂರೆಂಟು ಭಾರಗಳು. ಮಳೆಗೆ ಅಲ್ಲಲ್ಲಿ ಎಕ್ಸ್ಟ್ರಾ ಡ್ಯೂಟಿ. ತರಗತಿಯಲ್ಲಿ ನೋಡಿ ಮಕ್ಕಳೇ ಕಾಲಗಳು ಮೂರು, ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಅಂದೆ. ಒಬ್ಬ ಪೋರ ಕಿಕೀಕ್ ಅಂತ ನಕ್ಕು ಹೇಳಿದ “ಬಿಸಿಲು ಇದ್ದಾಗ ಬರುತ್ತೆ ಚಳಿ ಇದ್ದಾಗಲೂ ಬರುತ್ತಲ್ಲ” ಅಂತ. “ಹೌದು ಮಳೆಗೆ ಈಗ ವಿಶೇಷ ಸೀಸನ್ ಪಾಸ್ ಸಿಕ್ಕಿದೆ” ಎಂದೆ. ಪೋರ ಗಪ್ಪಾದ. ಹೇಳು ಮಳೆಯೆ ಮಕ್ಕಳ ಮುಂದೆ ಹೀಗೆ ನೀನು ಅವಮಾನಿಸುವುದು ಸರಿಯೇ..?
ನಡುರಾತ್ರಿಯ ಮಳೆಗೆ ಒಂಟಿತನ, ಬೆಳ್ ಬೆಳಗ್ಗೆ ಸುರಿವ ಮಳೆಗೆ ಶಾಪ, ನಡು ಮಧ್ಯಾಹ್ನ ಮಳೆಗೆ ಮುಗಿಲ ತುಂಬಾ ಬಣ್ಣ, ಸಂಜೆ ಮಳೆಗೆ ವಿರಹ, ಕಡು ಸಂಜೆ ಹನಿಗಳ ಮೇಲೆ ಹೆಂಡತಿಯ ಮುನಿಸು.. ಇದು ದಿನದ ಬ್ಯಾಲೆನ್ಸ್ ಶೀಟು. ಕಡು ಬೇಸಿಗೆಯ ಮಳೆಗೆ ಅವಸರ, ಮುಂಗಾರು ಮಳೆಗೆ ಸಡಗರ, ಆಷಾಢದ ಮಳೆಗೆ ಶಾಲೆ ಕಂದನ ಎಳೆಹೆಜ್ಜೆಗಳ ಸರಭರ, ಸುಗ್ಗಿಯ ಮಳೆಗೆ ನೇಗಿಲಯೋಗಿಯ ಮುನಿಸು, ಚಳಿಗಾಲದ ಬಳಿಗೆ ಉದುರುವ ಎಲೆಯ ಸಂಗಾತ.. ಇಂದು ವರ್ಷದ ಬ್ಯಾಲೆನ್ಸ್ ಶೀಟು. ಮಳೆಯ ಬಜೆಟ್ ಮಂಡನೆ ಮುಗಿಲಿಗೆ ಬಿಟ್ಟ ವಿಚಾರ.
ಕಣ್ಣೀರು ನೋಡಿ ಜಗತ್ತು ನಗುತ್ತದೆ. ಅಳುವಿಗೆ ಜತೆಯಾಗಲಿ ಅಂತ ಕಾದ ಹೊತ್ತಿಗೆ ಮಳೆ ಕೈಕೊಡುತ್ತದೆ. ತಡಿಲಾರದ ಖುಷಿ ಎದೆ ತುಂಬಿದಾಗ ಜಗತ್ತಿಗೆ ಕೇಳುವಷ್ಟು ಜೋರಾಗಿ ಕೂಗಿ ನಗಬೇಕು ಅನಿಸಿದಾಗ ಈ ಮಳೆ ಧೋ ಅನ್ನುತ್ತದೆ. ನನ್ನ ಕೂಗು ಯಾರಿಗೂ ತಲುಪುವುದಿಲ್ಲ. ನನ್ನ ನಗು ಸುರಿವ ಮಳೆಯಲ್ಲಿ ಅಳಿವಿನಂತೆಯೇ ಕಾಣಿಸುತ್ತದೆ.
ಮುಗಿಲು ಮೋಡ ತುಂಬುತ್ತಲೇ ಪೋರ ದೋಣಿ ಮಾಡಲು ಅಮ್ಮನ ಕಣ್ ತಪ್ಪಿಸಿ ತನ್ನ ಹೊಸ ನೋಟ್ ಬುಕ್ಕಿನ ಹಾಳೆ ಕೀಳುತ್ತಾನೆ. ಕಿಟಕಿ ಪಕ್ಕ ಕೂತ ಹುಡುಗಿ ಬೀಳುವ ಮೊದಲ ಹನಿಗೆ ಮಾತು ಕಲಿಸುತ್ತಾಳೆ. ಅಲ್ಲೆಲ್ಲೊ ಹುಡುಗ ಮಳೆಯಲ್ಲಿ ನೆನೆಯುತ್ತಾ ಆ ಮಾತುಗಳಿಗೆ ಕಿವಿಯಾಗುತ್ತಾನೆ. ಮೊದಲ ಘಮಕ್ಕೆ ಕವಿತೆಗಳು ಹಾತೆಗಳಂತೆ ಏಳುತ್ತವೆ. ಎಲ್ಲೊ ಒಬ್ಬ ಹೊಸ ಕವಿ ಪೆನ್ನು ಹಿಡಿಯುತ್ತಾನೆ. ಮತ್ತೆಲ್ಲೊ ಹಳೆ ಕವಿ ತನ್ನ ಇಷ್ಟದ ಕವಿತೆಯ ಸಾಲನ್ನು ಗುನುಗುತ್ತಾನೆ. ಅಮ್ಮ ಛತ್ರಿ ಹುಡುಕಿ ತೆಗೆಯುತ್ತಾಳೆ. ಬೇಕು ಅಂತಲೇ ಛತ್ರಿ ಮುರಿದುಕೊಂಡು ಮಗು ಮಳೆಯಲಿ ತೊಪ್ಪೆಯಾಗಿ ಬರುತ್ತದೆ, ಅಮ್ಮ ಮಗನಿಗೆ ಬೈಯದೆ ಮಳೆಗೆ ಬೈಯುತ್ತಾಳೆ.
ಅಂಗೈ ಅಗಲದ ಮೋಡವಷ್ಟೆ ಸಾಕು ಬೆಳೆಯುವವನ ಜೀವಕಳೆಗೆ. ಬಡವನ ಮನೆಯ ಸೂರಿನ ಸಣ್ಣ ತೂತು ಸಾಕು ಮಳೆ ಮನೆ ಆಲಿಂಗನಕೆ. ತುಂಬಿದ ಹೊಳೆ ಸಾಕು ಬೆಳೆದವನ ಕನಸು ಮುಗಿಸಲಿಕ್ಕೆ. ಜೋರು ಹನಿ ಸಾಕು ನಡೆಯುವ ದಾರಿ ತಪ್ಪಲಿಕ್ಕೆ. ಕೇವಲ ಒಂದು ಸೋನೆಯ ಹನಿ ಸಾಕು ಯಾರದೊ ಎದೆಯಲಿ ಬದುಕು ಚಿಗುರಲಿಕ್ಕೆ. ಹಸಿದ ಬೀಜಕೆ ಸಾಕು ಎರಡು ಹನಿ ಹೂ ಮುತ್ತು ಜೀವ ಪಡೆಯಲಿಕ್ಕೆ..
ಮೋಡದೊಳಗೆ ಕಡಲಿನಿಂದ ಓಡಿ ಹೋದ ಕ್ಷಾರವಿದೆ. ಸುರಿವ ಹನಿಯಲ್ಲಿ ಸ್ವಾದದ ಸಿಹಿನೀರಿದೆ. ಮೋಡ ಕಪ್ಪು ಕಳಚುವ ಒಂದೊಂದು ಹನಿಯೂ ಮುತ್ತು. ಸುರಿವಾಗ ಮಿಂಚು ಮೋಡದ ಮೇಳ ಹನಿ ಸುರಿವಾಗ ಎಲ್ಲವೂ ಮಂಗಳಕರ. ಮಳೆ ಪ್ರಕೃತಿ ಬಚ್ಚಿಟ್ಟುಕೊಂಡ ಸೋಜಿಗ. ಪ್ರತಿ ಹನಿಯೂ ಒಂದೊಂದು ಲೀಲೆ
ಸ್ವಾತಿ ಮುತ್ತಿನ ಮಳೆ ಹನಿಯೆ ಮೆಲ್ಲ ಮೆಲ್ಲನೆ ಧರೆಗಿಳಿಯೆ, ಮೊದಲ ಮಳೆಯಂತೆ ಎದೆಗೆ ಇಳಿದೆ ನೀ ಮೆಲ್ಲಗೆ.. ಮುಂಗಾರು ಮಳೆಯೆ ಏನು ನಿನ್ನ ಹನಿಗಳೆ ಲೀಲೆ.. ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ.. ಎಲ್ಲೊ ಮಳೆಯಾಗಿದೆ ಎಂದು.., ಮುತ್ತು ಮುತ್ತು ನೀರ ಹನಿಯ..,ಓ ಮೇಘರಾಜನೆ ಸುರಿ ಸುರಿ.., ಮಳೆ ಬರುವ ಹಾಗಿದೆ.., ಕಿವಿಗೆ ಬೀಳುವ ಒಂದೊಂದು ಮಳೆ ಹಾಡು ಕೆನ್ನೆಗೆ ಬೀಳುವ ಒಂದೊಂದು ಮುದ್ದು ಹನಿಗೂ ಯಾವ ವ್ಯತ್ಯಾಸವೂ ಇಲ್ಲ. ಎರಡರ ಪುಳಕ ಹೊಲಿಸುವುದೆ ಇರಲಾಗುವುದಿಲ್ಲ. ಮಳೆಯಲ್ಲೂ ಹೊಡೆದಾಟ, ಮಳೆಯಲ್ಲೂ ಕುಣಿದಾಟ, ಮಳೆಯಲ್ಲೂ ಕಳೆದುಕೊಂಡ ಪ್ರೀತಿಗೆ ಅಲೆದಾಟ, ಮಳೆಯಲ್ಲೂ ಬೀಳಿಸಿಕೊಂಡ ಬದುಕಿಗೆ ಪರದಾಟ.. ಸಿನೆಮಾ ಒಂದು ನೆವ. ಒಮ್ಮೆ ಒಲವು; ಒಮ್ಮೆ ಛಲವು. ಒಮ್ಮೆ ವಿರಹ; ಒಮ್ಮೆ ದಾಹ. ಒಮ್ಮೆ ನೀತಿ; ಒಮ್ಮೆ ಭ್ರಾಂತಿ. ಸಿನೆಮಾದಲ್ಲಿ ಬದುಕಿನ ಹೊರಗೆ ಮಳೆ; ಬಾಳಲ್ಲಿ ನಮ್ಮ ನಮ್ಮಗಳ ಒಳಗೆ ಮಳೆ.. ಹನಿ ಸುರಿಯದೆ ನಾಳೆಗಳು ಮೊಳೆಯುವುದಾದರೂ ಹೇಗೆ?
ಮಳೆಯ ಚಟಪಟ ಪ್ರಾಸ ಕಿವಿಗೆ ಹೊಕ್ಕುತ್ತಲೇ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ನಡೆದು ‘ಕಾನೂರು ಹೆಗ್ಗಡತಿ’ ಕಾದಂಬರಿಯಲ್ಲಿ ಆಚೆ ಬರುತ್ತೇನೆ. ಪುತಿನ ಸಾಲುಗಳಲ್ಲಿ ಮುಳುಗಿದರೆ ತೋಯಲು ಮಳೆಯೆ ಬೇಡ. ಕಾಯ್ಕಿಣಿ ಮಳೆಯಲ್ಲೆ ಹೃದಯದಲ್ಲಿ ಹೂ ಬೆಳೆಯುತ್ತಾರೆ; ಅದರ ಕಂಪನ್ನು ಕಂಪನ್ನು ಸವಿದವರು ತಣ್ಣಗೆ ನವೆಯುತ್ತಾರೆ. ಲಕ್ಷ್ಮಣರಾವ್ ಅವರ ‘ಬಾ ಮಳೆಯೆ ಬಾ’ ನನ್ನ ನಿತ್ಯದ ಪ್ರೇಮ ಪ್ರಾರ್ಥನೆ. ಬೇಂದ್ರೆ ನನ್ನ ಮಳೆ ನೆನಪುಗಳಿಗೆ ಗೆಜ್ಜೆ ಕಟ್ಟುತ್ತಾರೆ. ಜನಪದ ನನ್ನ ಮಳೆ ಅಕೌಂಟಿನ ಕಾಯಂ ಡಿಪಾಸಿಟ್. ಎಚ್ಚೆಸ್ವಿ ಮನಸಿನೊಳಗೆ ಸುರಿಯುವ ಸುಂದರ ಸೋನೆ. ರೈನ್ ರೈನ್ ಗೋ ಅವೇ.. ಪದ್ಯ ನನ್ನ ಶತ್ರು. ಜಿಎಸ್ಎಸ್ ಅಭಿಷೇಕಕ್ಕೆ ನನ್ನ ಚೆಲುವು ಚಿಗುರುತ್ತದೆ. ಕಣವಿ ಸುರಿಸಿದ ಹನಿಗಳು ಕಣ್ಣಲ್ಲೇ ಉಳಿದಿವೆ. ಅನಂತಮೂರ್ತಿ ಮತ್ತೆ ಮತ್ತೆ ಮತ್ತೆ ಮಳೆ ಹುಯ್ಯುಸುತ್ತಾರೆ. ಕಾವ್ಯದಲ್ಲಿ ಎಂದೊ ಶುರುವಾದ ಮಳೆ ಇನ್ನೂ ನಿಂತಿಲ್ಲ. ನಿಲ್ಲಲೂ ಬಾರದು.
ಅದು ಮಳೆಯಲ್ಲ; ಕವಿಗೋಷ್ಠಿ. ಸುರಿಯುವುದು ನೀರ ಹನಿಗಳಲ್ಲ, ಎಲ್ಲವೂ ಒಂದೊಂದು ಕವಿತೆ. ಅದರ ಪಟಪಟ ಸದ್ದೇ ಕಾವ್ಯ ವಾಚನ. ಅದರ ಓದುವ ಶೈಲಿಯಂತೂ ಅದ್ಭುತ. ಪ್ರತಿ ಹನಿಯಲ್ಲೂ ಭರವಸೆಯಿದೆ. ಆಸೆ ಇದೆ, ಒಳಮರ್ಮ ಇದೆ. ತುಂಬಿಕೊಂಡ ತಲ್ಲಣಗಳ ನಿರಾಳತೆ ಇದೆ. ಹಸಿವಿದೆ, ತೃಪ್ತಿ ಇದೆ, ಸೆಳೆತವಿದೆ, ಲಯ, ಪ್ರಾಸ, ಛಂದಸ್ಸು, ಅಲಂಕಾರ ಎಲ್ಲವೂ ಇದೆ. ಒಂದೊಂದು ಮಳೆಯೂ ಒಂದೊಂದು ಮಹಾಕಾವ್ಯ. ದ್ವಾದಶ ವರ್ಣನೆಗಳಿಂದ ತುಂಬಿ ತುಳುಕುತ್ತವೆ. ಮಳೆ ದೇವರು ಬರೆದ ಕವಿತೆ.
ಸದಾಶಿವ ಸೊರಟೂರು ಅವರು ಹುಟ್ಟಿದ್ದು ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಇವರ ಹಲವಾರು ಲೇಖನಗಳು, ಕತೆ, ಕವನ, ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಹೆಸರಿಲ್ಲದ ಬಯಲು’ ಮತ್ತು ‘ ತೂತು ಬಿದ್ದ ಚಂದಿರ’ (ಕವನ ಸಂಕಲನ) ಹಾಗೂ ಕನಸುಗಳಿವೆ ಕೊಳ್ಳುವವರಿಲ್ಲ ಭಾಗ ೧ ಮತ್ತು ಭಾಗ ೨. ಹೊಸ್ತಿಲಾಚೆ ಬೆತ್ತಲೆ (ಪ್ರಕಟಿತ ಲೇಖನಗಳ ಕೃತಿಗಳು) ಇವರ ಪ್ರಕಟಿತ ಕೃತಿಗಳು.
ಮಳೆಯೊಲವು ಮತ್ತೆ ಮತ್ತೆ ಹನಿಯಾಗಿಸಿ ಬೇಗ ಮಳೆ ಬೀಳಲು ಕಾಯಿಸುವಂತೆ ಮಾಡಿದಿರಿ
ಜೀವನೂತ್ಸಾಹದ ಬರಹ, ಪ್ರತಿ ಮಳೆಗಾಲ ನಮ್ಮೆಲ್ಲರಿಗೂ ಒಂದು ಅಭೂತಪೂರ್ಣ ಸುಂದರ ಅನುಭವ 🙏🙏🌹🍁🌷🌷