ಸೇತುವೆ

ನನಗೆ ನನ್ನ ಊರೇ ಶ್ರೇಷ್ಠ
ಆದರೂ ಆ ಊರ ಸಂಪರ್ಕಿಸುವ
ಸೇತುವೆ ಮೇಲೇ ಚಲಿಸಿ
ಒಮ್ಮೆ ಆಚೆ ಒಮ್ಮೆ ಈಚೆಗಳ ಕೌತುಕ
ಸೂರ್ಯೋದಯ ಸೂರ್ಯಾಸ್ತಗಳನ್ನು
ಕಣ್ತುಂಬಿಕೊಳ್ಳದಿದ್ದರೆ
ನಕ್ಷತ್ರಗಳ ಜೋಗುಳ ಕೇಳುವುದಿಲ್ಲ

ಈಗೀಗ ಸೇತುವೆ ಬಿರುಕು ಬಿಡುತ್ತಿದೆ
ಸಂಪರ್ಕಿಸುವ ಸೇತುವೆಯ ಮೇಲೂ ಎಚ್ಚರದಿ ಕಾಲಿಡಬೇಕು
ಬಿರುಕು ಎರಡು ಊರುಗಳ ನಡುವೆ ಅನಾಥ
ಸೇತುವೆ ಆಚೆಗಿನ
ಸೌದೆಯ ಹೊಗೆ ಈ ಊರ ನಿದ್ದೆಗೆಡಿಸಿದೆ
ಈ ಊರ ರೊಟ್ಟಿಯ ಶಬ್ದ ಆ ಊರ ನಿದ್ದೆ ಕದ್ದಿದೆ

ಈ ಊರಿಗೆ ಆ ಊರೊಳು ಸ್ಮಶಾನವಿದ್ದರೆ
ಆ ಊರಿನೊಳಿರಲೇಬೇಕಲ್ಲ ಲೆಕ್ಕ ಪಕ್ಕವಿಡಲು
ಮಳೆಗಾಲ ಬಂದಿದೆ
ಬಾವಲಿಗಳು ತಲೆಕೆಳಗಾಗಿ
ನೀರ ಬಣ್ಣ ಕೆಂಪಾಗಲು
ಮೇಲೂರ ಸೇತುವೆಯ ದೂಷಿಸುತ್ತಿವೆ
ಈಚೆಗಿನ ಗೂಬೆಗಳು ಆಚೆ ಹೆಣಗಳ ಕಾಯುತ್ತಿವೆ

ಶಿಥಿಲ ಸೇತುವೆ ಮತ್ತೆ ಮತ್ತೆ ನೆನಪಾಗುತ್ತಿದೆ!