ಆ ಇಕ್ಕಟ್ಟಿನಲ್ಲೇ ಹಿಮಗಟ್ಟಿದ ನೀರು ಕಾಯಿಸಿ, ಅಡುಗೆ ಬೇಯಿಸಿ ತಿನ್ನಬೇಕು. ಅಪ್ಪಿ ತಪ್ಪಿಯೂ ಆ ಒಲೆಯಿಂದ ಬರುವ ಹೊಗೆ ಬೆಂಕಿ ಕಾಣಿಸಕೂಡದು. ಒಂದು ವೇಳೆ ಕಂಡರೆ ಕೆಲವೇ ನಿಮಿಷಗಳಲ್ಲಿ ಈ ಡ್ರ್ಯಾಗನ್ ಸೈನಿಕರ ಶೆಲ್ ದಾಳಿಗೆ ತುತ್ತಾಗಿ ಬಂಕರುಗಳ ಇವರ ಶವ ಎಣಿಸಲು ಬರುವವರಿಗಾಗಿ ಒಂದು ವಾರ ತಿಂಗಳಾದರೂ ಕಾಯಬೇಕು. ಇಲ್ಲವೆಂದರೆ ಇವರ ಇರುವಿಕೆಯೇ ಹಿಮ ಪಾತದಿಂದಾಗಿ ಇಲ್ಲವಾಗಿ ಮಿಲಿಟರಿ ದಫ್ತರುಗಳಲ್ಲಿ ಇವರ ಹೆಸರು ಯುದ್ಧದಲ್ಲಿ ಕಣ್ಮರೆಯಾದವರ ಪಟ್ಟಿಯಲ್ಲಿ ನಮೂದಾಗಿಬಿಡುವ ಸಂಭವವಿರುತ್ತದೆ.ಡಾ. ಲಕ್ಷ್ಮಣ ವಿ.ಎ. ಅಂಕಣ

 

ಅದು 1958 ಡಿಸೆಂಬರ ತಿಂಗಳಿನ ಚಳಿ ಮೈ ಮನಗಳನ್ನು ಮರುಗಟ್ಟಿಸುತ್ತಿತ್ತು .ಚಿಕ್ಕ ಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಕಾಮಗಾನಹಳ್ಳಿಯ ಕುಗ್ರಾಮದ ಯುವಕನೊಬ್ಬ ಕಾಣೆಯಾದ ಸುದ್ದಿ ಊರ ಮೂಲೆ ಮೂಲೆಗೆ ತಲುಪಿ ಎಲ್ಲರಲ್ಲೂ ಆತಂಕ ಹುಟ್ಟಿಸಿತ್ತು. ಆ ಯುವಕನ ತಂದೆ ತಾಯಿ ಊಟ ಬಿಟ್ಟು ಬೆಂಗಳೂರಿನಿಂದ ಬರುವ ಕೊನೆಯ ಬಸ್ಸಿನ ದಾರಿ ಕಾಯುತ್ತ ಕುಳಿತಿದ್ದರು …..ಕಾಣೆಯಾದವನು ಯುವಕ, ಮೇಲಾಗಿ ಓದಿಕೊಂಡವನು; ಮನೆಯಲ್ಲಿ ಜಗಳ ಮಾಡಿಕೊಂಡು ಬೆಂಗಳೂರು ಪೇಟೆಯಲ್ಲಿ ಕೆಲಸ ಹುಡುಕಿಕೊಂಡು ಹೋಗಿರಬಹುದೆಂಬ ಧೈರ್ಯ ಊರಿನವರಿಗೆ. ಹೀಗೆ ಕಾಯುತ್ತ ಕುಳಿತ ಈ ಮುದಿ ತಂದೆ ತಾಯಿಯವರಿಗೆ ಬಂದದ್ದು ಮಗನಲ್ಲ ಮಿಲಿಟರೀ ಲಕೋಟೆಯಲ್ಲಿನ ಮಗನ ಪತ್ರ, ಅದೂ ಒಂದು ವಾರದ ಮೇಲೆ. ಉತ್ತರ ಭಾರತದ ಇವರು ಜೀವಮಾನದಲ್ಲೆಂದೂ ಕಂಡು ಕೇಳರಿಯದ ಫೈಜಾಬಾದ್ ಎಂಬ ಊರಿನಿಂದ.

ಕಾಣೆಯಾದ ಹುಡುಗನ ಹೆಸರು ನಾರಾಯಣ. ಗೌರಿಬಿದನೂರು ತಾಲೂಕಿನ ಕಾಮಗಾನಹಳ್ಳಿಯ ನಾರಾಯಣ, ಮನೆಯಲ್ಲಿದ್ದ ಒಂದು ಮೂಟೆ ರಾಗಿ ಶೆಟ್ಟರ ಅಂಗಡಿಯಲ್ಲಿ ಮಾರಿಕೊಂಡು, ಬಂದ ದುಡ್ಡಿನಲ್ಲಿ ಮನೆಯವರಿಗೆ ಅನುಮಾನ ಬಾರದಿರಲೆಂದು ಮೈ ಮೇಲೆ ಎರಡೆರಡು ಬಟ್ಟೆ ಹಾಕಿಕೊಂಡು ಬೆಳಗಿನ ಜಾವದ ಬಸ್ಸು ಹಿಡಿದು ಬೆಂಗಳೂರು ಪೇಟೆ ಸೇರಿ, ಯಾರೋ ಕೊಟ್ಟ ವಿಳಾಸ ಹಿಡಿದು ಮದ್ರಾಸ್ ಆರ್ಟಿಲರಿ ರೆಜಿಮೆಂಟಿನಲ್ಲಿ ಸಿಪಾಯಿಯಾಗಿ ತಿಂಗಳಿಗೆ ಮೂವತ್ತಾರು ರೂಪಾಯಿ ಸಂಬಳ ಕೊಟ್ಟು ಊಟ ಬಟ್ಟೆ ಸಾಬೂನು ಸಬಕಾರಿ ಅವರೇ ಕೊಡುವಂತಹ ಮಿಲಿಟರಿಗೆ ಭರ್ತಿಯಾಗಿದ್ದ. ಇವನ ರಾಗಿ ಕೊಂಡ ಶೆಟ್ಟರು ಮಾತ್ರ ಈ ವಿಚಾರ ಯಾರ ಬಳಿಯೂ ಹೇಳಿಕೊಳ್ಳದೆ ಮುಗುಮ್ಮಾಗೇ ಇದ್ದರು.

ಆಗಿನ ಕಾಲದಲ್ಲಿ ಮಿಲಿಟರಿ ಸೇರುವುದೆಂದರೆ ದೊಡ್ಡ ಅಪಾಯದ ಕೆಲಸವೆಂದೂ ಹಾಗೆ ಮಿಲಿಟರಿ ಸೇರಿದವರ ಪ್ರಾಣಪಕ್ಷಿ ಯಾವಾಗ ಬೇಕಾದರೂ ಹಾರಿ ಹೋಗಬಹುದೆಂದೂ ಮತ್ತು ಮಡಿ ಮೈಲಿಗೆಯಂತಹ ಉಳ್ಳ ಕುಟುಂಬದವರು ಅಲ್ಲಿ ಕೊಡುವ ಮಾಂಸ ಮದ್ಯ ಸೇವಿಸಿ ಜಾತಿಭ್ರಷ್ಟರಾಗುವವರೆಂದೂ ಹಾಗೆ ಯುದ್ಧದಲ್ಲಿ ಮರಣಹೊಂದಿದವರ ಕಳೇಬರಗಳು ಮನೆಗೆ ಬರದೆ ಅಲ್ಲೇ ಮಣ್ಣು ಮಾಡುವರೆಂದೂ ಅವರು ಹಾಕಿಕೊಳ್ಳುವ ಬಟ್ಟೆ ಬರೆ ಮಾತ್ರ ಕಳುಹಿಸಿ ಇಲ್ಲಿಯ ಜಿಲ್ಲಾಧಿಕಾರಿಗಳು ಆ ಬಟ್ಟೆಯನ್ನು ಸಕಲ ಸರ್ಕಾರೀ ಮರ್ಯಾದೆಯೊಂದಿಗೆ ಇವರ ಮನೆ ತಲುಪಿಸಿ ನಂತರದ ಆಯಾ ಧರ್ಮದವರ ವಿಧಿ ವಿಧಾನದ ಪ್ರಕಾರ ಅಂತ್ಯಸಂಸ್ಕಾರ ಮಾಡುವರೆಂದೂ ಬಲವಾಗಿ ನಂಬಿದಂತಹ ಕಾಲ. ಹೀಗಾಗಿ ಈ ಯೋಧರ ಬಗ್ಗೆ ಆಗ ಗೌರವ ಭಕ್ತಿಗಳಿಗಿಂತ ಭಯ ಜಾಸ್ತಿ.

ಮಿಲಿಟರೀ ಸೇರಿದವರೆಲ್ಲ ಯಾವಾಗ ಬೇಕಾದರೂ ಸಾಯಬಹುದಾದ ನಡೆದಾಡುವ ದೆವ್ವಗಳೆಂದೂ ಯಾರೂ ಹೆಣ್ಣು ಕೂಡ ಕೊಡುತ್ತಿರಲಿಲ್ಲ. ಹೀಗಾಗಿ ನಾರಾಯಣನೆಂಬ ಯುವಕ ಮದುವೆಯಾಗಿದ್ದು ತನ್ನ ಅಖಂಡ ಹದಿನಾರು ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಯಾದ ಮೇಲೆ.

ಹೀಗೆ ಮದ್ರಾಸ್‌ ಆರ್ಟಿಲರಿ ರೆಜಿಮೆಂಟಿನ ಸಿಪಾಯಿಯಾಗಿ ಸೇರಿದ ಅಚ್ಚಕನ್ನಡದ ಹುಡುಗ ಹಿಂದೀ ಕಲಿಯಬೇಕಾದ ಕಷ್ಟ ಅಷ್ಟಿಷ್ಟಲ್ಲ. ಆದರೂ ಕಲಿತ. ಆರು ತಿಂಗಳ ಕಠಿಣ ಟ್ರೈನಿಂಗು, ಪೆರೇಡು, ಕವಾಯತು ಪಾಸು ಮಾಡಿಕೊಂಡು ಊರಿಗೆ ಬಂದಾಗ ಸಂಭ್ರಮಪಟ್ಟವರಿಗಿಂತ ಸಂಕಟಪಟ್ಟವರೇ ಹೆಚ್ಚು.

ಹೀಗೆ ಊರಿಗೆ ರಜೆಗೆ ಬಂದ ಮಗ ಹದಿನೈದು ದಿನಗಳೂ ಕಳೆದಿರಲಿಲ್ಲ. ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿರುವುದರಿಂದ ತಕ್ಷಣ ರಜೆ ಮೊಟುಕುಮಾಡಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಮಿಲಿಟರಿ ಪಡೆಯಿಂದ ತುರ್ತು ಟೆಲಿಗ್ರಾಂ ಬಂದಿತ್ತು. ನಾರಾಯಣ ಬಂದು ಒಂದು ವಾರವೂ ಕಳೆದಿರಲಿಲ್ಲ. ಅನ್ಯಮಾರ್ಗಗಳಿಲ್ಲದೇ ದುಡಿಯುವ ಏಕೈಕ ಅನ್ನದ ಮಾರ್ಗವಾಗಿಯೂ ಕರ್ತವ್ಯ ನಿಷ್ಠೆಯಾಗಿಯೂ ಕಲಕತ್ತಾದ ರೈಲು ಹತ್ತಿದ್ದರು.

ಪೋಸ್ಟಿಂಗ್ ಇದ್ದದ್ದು ಚೈನಾ ಗಡಿಯಲ್ಲಿನ ಬಾಗದೋಗ್ರಾ ಏರೋಡ್ರಮ್ಮಿಗೆ. ಈಗಿನ ಉತ್ತರಾಖಂಡ ರಾಜ್ಯದ ದಾರ್ಜಲಿಂಗ್ ನ ಹತ್ತಿರ. 1961 ರ ಅಕ್ಟೋಬರ್ ತಿಂಗಳು ಭಾರತದ ಗಡಿಯಲ್ಲಿ ಚೈನಾದೊಂದಿಗೆ ಆಕಸ್ಮಿಕ ಯುದ್ಧ ಜಾರಿಯಲ್ಲಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು ಕೆಲವೇ ಕೆಲವು ವರ್ಷಗಳಾಗಿದ್ದವು. ನೆಹರು ಆಗಿನ ಪ್ರಧಾನಿಯಾಗಿದ್ದರು. ದೇಶದ ಮಿಲಿಟರಿ ಅಷ್ಟೊಂದು ಬಲಶಾಲಿಯಾಗಿರಲಿಲ್ಲ.

ಭಾರತೀಯ ಸೈನಿಕರಿಗೆ ತಿಂಗಳುಗಟ್ಟಲೇ ಆ ಕೊರೆಯುವ ಮೈನಸ್ ಡಿಗ್ರಿ ಚಳಿಯಲ್ಲಿ ಹೊದ್ದುಕೊಳ್ಳಲು ಸರಿಯಾದ ಒಂದು ಸ್ವೆಟರು ಜರ್ಕಿನ್ ಗಳಿಲ್ಲದೆ ತುಕ್ಕು ಹಿಡಿದ ಬಂದೂಕು ಹಿಡಿದು ಹರಕು ಮುರುಕು ಬೂಟಿನಲ್ಲಿ ವೈರಿಯೊಂದಿಗೆ ಸೆಣಸಬೇಕಿತ್ತು. ಪ್ರಭುತ್ವದ ಕೆಟ್ಟ ನೀತಿಯಿಂದಾದ ಯಡವಟ್ಟಿಗೆ ಭಾರತದ ಇತಿಹಾಸದಲ್ಲಿ ಹಿಮಾಲಯನ್ ಬ್ಲಂಡರ್ ಎಂಬ ದುಃಸ್ವಪ್ನ ಭಾರತೀಯರನ್ನು ಇಂದಿಗೂ ಅವಮಾನದಿಂದ ಕುಗ್ಗುವಂತೆ ಮಾಡುತ್ತದೆ. ಸರಿಯಾದ ತರಬೇತಿಯಿಲ್ಲದ ಸೂಕ್ತ ತಯಾರಿಯಿಲ್ಲದ ಭಾರತದ ಸೈನ್ಯಕ್ಕೆ ಇದೊಂದು ಅನಿರೀಕ್ಷಿತ ಆಘಾತವೇ ಆಗಿತ್ತು,

ಚೈನಾ ಇದಕ್ಕೆ ತದ್ವಿರುದ್ಧವಾದ ಸರಿಯಾದ war strategy ಯನ್ನು ಮಾಡಿಕೊಂಡು ಸೂಕ್ತ ಸಮಯಕ್ಕೆ ಹೊಂಚು ಹಾಕಿ ಕುಳಿತು ಸರಿಯಾದ ಭಾರತಕ್ಕೆ ಮರ್ಮಾಘಾತವನ್ನೇ ಮಾಡಿ ಸೈನಿಕರನ್ನು ಎದೆಗುಂದುವಂತೆ ಮಾಡಿತ್ತು. ಚೈನಾದ ಡ್ರ್ಯಾಗನ್ ಸೈನ್ಯ ಭಾರತೀಯ ಸೈನಿಕರನ್ನು ನಿರ್ದಯವಾಗಿ ಕೊಲ್ಲುತ್ತಿತ್ತು. ಆದರೆ ವೈರಿಗಳು ಹಾರಿಸಿದ ಬಂದೂಕಿನ ಗುಂಡುಗಳಿಗಿಂತ ಭಾರತೀಯ ಸೈನಿಕರು ಸತ್ತಿದ್ದು ತಡೆಯಲಾರದ ಚಳಿಯಿಂದ, ಉಪವಾಸದಿಂದ ಮತ್ತು ಯಾವ ಸಮಯಕ್ಕೆ ಬೇಕಾದರೂ ಆಗಬಹುದಾದ ಹಿಮಪಾತಗಳಿಂದ.

ಮೂವತ್ತು ದಿನಗಳಿಗಿಂತಲೂ ಹೆಚ್ಚು ದಿನ ನಡೆದ ಈ ಯುದ್ಧದಲ್ಲಿ ಚೈನಾ ಗೆದ್ದಿತ್ತು. ಭಾರತದ ಸೈನಿಕರೂ ಸುಮಾರು ಎಂಟು ನೂರು ಚೈನಾ ಸೈನಿಕರನ್ನು ಕೊಂದಿದ್ದರು. ಇದ್ದ ಸಂಪನ್ಮೂಲಗಳನ್ನೇ ಬಳಸಿಕೊಂಡು ತಮ್ಮ ಕೊನೆಯ ಉಸಿರು ಇರುವವರೆಗೆ ಹೋರಾಡಿದ್ದರು.

ಭಾರತದ ಎರಡೂವರೆ ಸಾವಿರ ಸೈನಿಕರು ಹತರಾದರು. ಕೆಲವರು ಕೈ ಕಳೆದುಕೊಂಡರು. ಕೆಲವರು ಕಾಲು ಕಳೆದುಕೊಂಡರು. ಎಷ್ಟೋ ಜನ ಯುದ್ಧ ಕೈದಿಗಳಾದರು, ಮತ್ತೆಷ್ಟೋ ಜನ ಕಾಣೆಯಾದರು. ಅಂತಹ ನಿರಂತರ ಹಿಮಪಾತದ ಗಳಿಗೆಯಲ್ಲಿ ಸರಿಯಾಗಿ ಹೆಣ ಎನಿಸಲೂ ಆಗುವುದಿಲ್ಲ. ರಾತ್ರಿ ಎಣಿಸಿದ ಅಂಕಿ ಸಂಖ್ಯೆಗಳು ಬೆಳಗಾಗುವಷ್ಟರಲ್ಲಿ ಬದಲಾಗಿ ಬಿಡಬಹುದು. ಈ ಯುದ್ಧಗಳು ಯಾರನ್ನು ಜಯಿಸಲು ಬಿಟ್ಟಿವೆ? ಈ ಸಂದರ್ಭದಲ್ಲಿ ಗಾನಕೋಗಿಲೆ ಲತಾ ಮಂಗೇಶ್ಕರ ಹಾಡಿದ “ಏಯ್ ಮೇರೆ ವತನ ಕೇ ಲೋಗೋ” ಹಾಡಿಗೆ ಸ್ವತಃ ನೆಹರು ಕಣ್ಣೀರಾದದ್ದನ್ನು ಇಂದಿಗೂ ನೆನಪಿಸಿಕೊಳ್ಳುತ್ತೇವೆ.

ಇಂತಹ ಯೋಧರಲ್ಲಿ ಒಬ್ಬರಾದ ಮದ್ರಾಸ್ ರೆಜಿಮೆಂಟ್ ನ ಸಿಪಾಯಿ ವೀರ ನಾರಾಯಣ ರವರ ಕೆಲಸ ಏನೆಂದರೆ ಗಡಿಯಲ್ಲಿ ಬಂಕರು ನಿರ್ಮಿಸಿಕೊಂಡು ಅಲ್ಲೊಂದು ಪುಟ್ಟ ವೈರಲೆಸ್ ಇಟ್ಟುಕೊಂಡು, ಇಂಟಲಿಜೆನ್ಸ್ ನವರು ಕೊಟ್ಟ ಡಾಟಾ ಅನುಸರಿಸಿ ಎದುರಾಳಿ ವಿಮಾನದ ದಿಕ್ಕು (direction,) elevation ಹಾರಾಟದ ಎತ್ತರ ಹಾಗು ಅದರ ವೇಗಕ್ಕನುಗುಣವಾಗಿ ಇಲ್ಲಿ ಆಗಲೇ ಮದ್ದು ತುಂಬಿ ಸಿದ್ಧಪಡಿಸಿದ ತೋಪುಗಳಿಂದ ಚೈನಾದವರ ವಿಮಾನಗಳನ್ನು ಹೊಡೆದುರುಳಿಸುವುದು. ಮತ್ತೆ ಖಾಲಿಯಾದ ತೋಪುಗಳಲ್ಲಿ ಮದ್ದು ತುಂಬಿ ಆದಷ್ಟು ಬೇಗ ಬಂಕರುಗಳಲ್ಲಡಗಿ ಇನ್ನೊಂದು ಸಂದೇಶ ಬರುವವರೆಗೆ ಕಾಯುವುದು. ಏಕೆಂದರೆ ಆ ಕಡೆಯಿಂದಲೂ ನಿರಂತರವಾಗಿ ಶೆಲ್ ದಾಳಿಯಾಗುತ್ತಲೇ ಇರುತ್ತದೆ. ಹೀಗಾಗಿ ಬಂಕರುಗಳೇ ಇವರ ತಾತ್ಕಾಲಿಕ ಅಡಗುದಾಣಗಳು.

ಆ ಇಕ್ಕಟ್ಟಿನಲ್ಲೇ ಹಿಮಗಟ್ಟಿದ ನೀರು ಕಾಯಿಸಿ, ಅಡುಗೆ ಬೇಯಿಸಿ ತಿನ್ನಬೇಕು. ಅಪ್ಪಿ ತಪ್ಪಿಯೂ ಆ ಒಲೆಯಿಂದ ಬರುವ ಹೊಗೆ ಬೆಂಕಿ ಕಾಣಿಸಕೂಡದು. ಒಂದು ವೇಳೆ ಕಂಡರೆ ಕೆಲವೇ ನಿಮಿಷಗಳಲ್ಲಿ ಈ ಡ್ರ್ಯಾಗನ್ ಸೈನಿಕರ ಶೆಲ್ ದಾಳಿಗೆ ತುತ್ತಾಗಿ ಬಂಕರುಗಳ ಇವರ ಶವ ಎಣಿಸಲು ಬರುವವರಿಗಾಗಿ ಒಂದು ವಾರ ತಿಂಗಳಾದರೂ ಕಾಯಬೇಕು. ಇಲ್ಲವೆಂದರೆ ಇವರ ಇರುವಿಕೆಯೇ ಹಿಮ ಪಾತದಿಂದಾಗಿ ಇಲ್ಲವಾಗಿ ಮಿಲಿಟರಿ ದಫ್ತರುಗಳಲ್ಲಿ ಇವರ ಹೆಸರು ಯುದ್ಧದಲ್ಲಿ ಕಣ್ಮರೆಯಾದವರ ಪಟ್ಟಿಯಲ್ಲಿ ನಮೂದಾಗಿಬಿಡುವ ಸಂಭವವಿರುತ್ತದೆ.

ಮನುಷ್ಯನಿಗೆ ಸತ್ವ ಪರೀಕ್ಷೆಗಳು ಹೇಗೆ ಎದುರಾಗುತ್ತವೆ ನೋಡಿ. ಕಷ್ಟಗಳು ಬಂದರೆ ಕಡಲಿನ ಅಲೆಯಂತೆ ಸಾಲು ಸಾಲಾಗಿ ಅಂತೆ ಇಂತಹ ಈ ವಿಷಮಗಳಿಗೆಯಲ್ಲೇ ನಾರಾಯಣನವರ ತಂದೆ ಇತ್ತ ಕಾಮಗಾನಹಳ್ಳಿಯಲ್ಲಿ ಮರಣಹೊಂದುತ್ತಾರೆ. ಇವರಿಗೆ ವಿಷಯ ಟೆಲಿಗ್ರಾಂ ಮೂಲಕ ತಲುಪಿದ್ದು ಹದಿನೈದು ದಿನಗಳ ನಂತರ. ಈಗ ಈ ಬಡ ಸಿಪಾಯಿ ನಾರಾಯಣ ಹೊರಗಿನ ವಿರೋಧಿಗಳ ಬಾಂಬು ಬಂದೂಕುಗಳಿಂದಲೂ ತಂದೆಯನ್ನು ಕಳೆದುಕೊಂಡ ತನ್ನ ಒಳಗಿನ ಬೇಗುದಿಯೊಂದಿಗೂ ಏಕಕಾಲಕ್ಕೆ ಹೋರಾಡುವ ಸಂದಿಗ್ಧತೆ, ಅನಿವಾರ್ಯತೆ. ಯುದ್ಧ ನಡೆದಿದೆ, ರಜೆ ಕೇಳುವಂತಿಲ್ಲ, ಅಪ್ಪ ತೀರಿದ್ದಾನೆ ಯೋಧ ಅಳುವಂತಿಲ್ಲ. ಎಷ್ಟು ಬೇಡಿಕೊಂಡರು ಅಪ್ಪ ಬೇಡ ಬೇಡ ಮಗನೇ ಈ ಮಿಲಿಟರಿ ಸಹವಾಸವೆಂದು?

ಆದರೆ ನಾರಾಯಣ ಹಠ ಬಿಡಲಿಲ್ಲ. ಬಡತನ; ತಾನು ಓದಿದ ಎಸ್ಸೆಸ್ಸೆಲ್ಸಿ ಗೆ ಯಾವ ನೌಕರೀ ಸಿಕ್ಕೀತು?

ಕಷ್ಟಪಟ್ಟು ಪರೀಕ್ಷೆಗೆ, ಬಟ್ಟೆಗೆ ಕೂಡಿಟ್ಟ ದುಡ್ಡು ಕೊಟ್ಟು ಅಪ್ಪ, ಮಗ ನೌಕರೀ ಮಾಡಲೆಂದು ಓದಿಸಿದ್ದ. ಆದರೆ ಈ ನಾರಾಯಣ ಮನೆಯಲ್ಲಿನ ರಾಗಿ ಕದ್ದು ಬೆಂಗಳೂರಿಗೆ ಓಡಿ ಹೋಗಿ ಮಿಲಿಟರಿ ಸೇರಿದ್ದ.

ಈಗೇನೂ ಮಾಡುವಂತಿಲ್ಲ, ಮನೆಯಲ್ಲಿ ನಾರಾಯಣನೇ ಕೊನೆಯ ಮಗ. ಅಪ್ಪನಿಗೆ ಇವರೇ ಚಿತೆಯೇರಿಸಬೇಕು. ಉಹುಂ! ಆಗಲಿಲ್ಲ ಮಿಲಿಟರಿಯಲ್ಲಿನ ಪುರೋಹಿತರೇ ಇವನ ಪಾಲಿನ ಕ್ರಿಯಾವಿಧಿ ಮಾಡಿ ಮುಗಿಸಿದರು.

ನಿಮಗೆ ಗೊತ್ತಿರಲಿ, ಆಗಿನ ಕಾಲದಲ್ಲಿ ಯುದ್ಧದಲ್ಲಿ ಮಡಿದ ಯೋಧರ ಕಳೇಬರ ಊರಿಗೆ ಕಳುಹಿಸುತ್ತಿರಲಿಲ್ಲ. ಹೀಗಾಗಿ ಪ್ರತಿಯೊಂದು ಧರ್ಮದನುಸಾರವಾಗಿ ಅಂತ್ಯಕ್ರಿಯೆ ಮಾಡುವ ಪುರೋಹಿತರನ್ನು ಮಿಲಿಟರಿಯೇ ನಿಯಮಿಸಿಕೊಳ್ಳುತ್ತಿತ್ತು. ಈಗ ಕಾಲ ಬದಲಾಗಿದೆ, ಶವಗಳನ್ನು ಪೆಟ್ಟಿಗೆಗಳಲ್ಲಿ ಸುತ್ತಿ ಸಕಲ ಸರಕಾರೀ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ನಮ್ಮೆಲ್ಲರ ಪುಣ್ಯ, ಅವರ ಅಂತಿಮ ದರ್ಶನದ ಭಾಗ್ಯವಾದರೂ ಸಿಗುತ್ತದೆ.

*****

ಅದು 1972, ಭಾರತ ಪಾಕಿಸ್ತಾನದ ಮೇಲೆ ಯುದ್ಧ ಸಾರಿತ್ತು. ಪೂರ್ವಪಾಕಿಸ್ತಾನ, ಅಂದರೆ ಇಂದಿನ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಲು ಆಗಿನ ಪ್ರಧಾನಿ ದುರ್ಗಾ ಎಂದೇ ಖ್ಯಾತಿಯಾದ ಇಂದಿರಾಗಾಂಧಿ ಮಹತ್ವದ ನಿರ್ಧಾರ ಕೈಗೊಂಡು ಏಕಕಾಲಕ್ಕೆ ಪಾಕಿಸ್ತಾನ ಹಾಗು ಬಾಂಗ್ಲಾ ವಿಮೋಚನೆಗಾಗಿ ಭಾರತದ ಸೈನ್ಯವನ್ನು ನುಗ್ಗಿಸಿದ್ದರು. ಇತ್ತ ಚೈನಾದೊಂದಿಗಿನ ಸೋಲಿನಿಂದ ಪಾಠ ಕಲಿತಿದ್ದ ಭಾರತ ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಯುದ್ಧದಲ್ಲಿ ಜಯಶಾಲಿಯಾಗಿತ್ತು.

ಅಷ್ಟರಲ್ಲಾಗಲೇ ನಾರಾಯಣರವರ ಕರ್ತವ್ಯ ಕ್ಷಮತೆ ಮೆಚ್ಚಿ ಆರ್ಟಿಲೆರಿ ರೆಜಿಮೆಂಟಿನಿಂದ core of military police ರಾಗಿ ವರ್ಗಾವಣೆ ಹೊಂದಿ ಮಿಲಿಟರಿ ಪೋಲಿಸ್ ರಾಗಿದ್ದರು. ಇವರ ಕೆಲಸವೆಂದರೆ ಮಿಲಿಟರಿ ವಾಹನಗಳ ಟ್ರಾಫಿಕ್ ನಿಯಂತ್ರಣ ಹಾಗು ಆ ವಾಹನದ ದಾರಿಗಳಿಗೆ ಸುಗಮ ಸಂಚಾರ ಮತ್ತು ಸುರಕ್ಷತೆ ಖಾತ್ರಿ ಪಡಿಸುವುದು.

ಮಿಲಿಟರಿ convey ಗಳು ಸಾಲು ಸಾಲಾಗಿ ಬರುವಾಗ ಅವು ಸಾಗುವ ದಾರಿಯಲ್ಲಿ ವೈರಿಗಳಿಂದ ನೆಲಬಾಂಬು ಸ್ಫೋಟಿಸುವುದಾಗಲೀ ಅಥವ ದಾರಿಯಲ್ಲೇ ಆಗಬಹುದಾಂತಹ ಅನಿರೀಕ್ಷಿತ ಅವಘಡಗಳನ್ನು ಸಂಭಾವ್ಯ ದಾಳಿಗಳನ್ನು ತಪ್ಪಿಸುವುದು ಹಾಗು ಬೇಹುಗಾರಿಕೆ ನಡೆಸಿ (intelligence) ವರದಿ ನೀಡುವುದು. ಅದರ ಪ್ರಕಾರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು. ಇತ್ತೀಚಿಗೆ ಪುಲ್ವಾಮಾ ದಾಳಿಯಲ್ಲಿ ಇದೇ ತರಹದ ಮಿಲಿಟರಿ ವಾಹನದ ಮೇಲೆ ಭಯೋತ್ಪದಕರು ದಾಳಿ ನಡೆಸಿದ ದುಃಸ್ವಪ್ನ ಇನ್ನೂ ಹಸಿ ಹಸಿಯಾಗಿಯೇ ನಮ್ಮ ಕಣ್ಣುಮುಂದಿದೆ.

ಭಾರತದ ಮಿಲಿಟರಿ ಬಾಂಗ್ಲಾದೇಶದ ಚಿತ್ತಗಾಂಗ್ ತನಕ ಇನ್ ಸರ್ಜೆನ್ಸಿ ನಡೆಸಿ ಮುಂದೆ ನಡೆದಿತ್ತು. ಪಾಕಿಸ್ತಾನದ ಪ್ರಜೆಗಳು ಪಾಕಿಸ್ತಾನದ ಕಡೆಗೆ ರಾತ್ರೋ ರಾತ್ರಿ ಪರಾರಿಯಾಗಲು ಭಾರತೀಯ ಸೈನ್ಯ ಕೂಡ ಸಹಾಯ ಮಾಡುತ್ತಿತ್ತು. ಎಷ್ಟೋ ಕುಟುಂಬಗಳು ತಮ್ಮ ಪಿತ್ರಾರ್ಜಿತ ಆಸ್ತಿ ಅಂತಸ್ತು ಮನೆ, ಅಂಗಡಿ, ಒಡವೆ-ವಸ್ತ್ರಗಳನ್ನು ಇದ್ದ ಜಾಗದಲ್ಲೇ ಬಿಟ್ಟು ಸದ್ಯ ಪ್ರಾಣ ಉಳಿದರೆ ಸಾಕೆಂದು ಪಲಾಯಗೈಯುತ್ತಿದ್ದರು.

ಮಿಲಿಟರಿಯ ಇಂತಹ ದಂಗೆಯ ದಿನಗಳಲ್ಲಿ ವಿಪ್ಲವದ ತುರ್ತು ಪರಿಸ್ಥಿತಿಯಲ್ಲಿ ನಾರಾಯಣರಿಗೆ ಎದುರಾಗಿದ್ದು ರಹೀಮ್ ಬೀ ಎಂಬ ಮದರಾಸೀ ಮುಸ್ಲಿಂ ಮಹಿಳೆ. ಎರಡು ಪುಟ್ಟ ಮಕ್ಕಳನ್ನು ಎದೆಗವುಚಿಕೊಂಡು ತನ್ನ ರಕ್ಷಣೆಗಾಗಿ ಭಾರತೀಯ ಸೇನೆಯತ್ತ ಓಡುತ್ತಿದ್ದಳು. ರಹೀಮ್ ಬೀ ಯ ಗಂಡ ಹರ್ನಿಯಾ ಚಿಕಿತ್ಸೆಗೆಂದು ಮದರಾಸಿಗೆ ಹೋದವನು ವಾಪಸು ಬಂದಿರಲಿಲ್ಲ. ಬರಲು ಈ ಕಡೆಯಿಂದ ಗಡಿಯಲ್ಲಿ ನಾಕಾಬಂಧಿಯಿದೆ, ಅಳುವ ಮಕ್ಕಳು ರಸ್ತೆಯಲ್ಲಿ. ಎಲ್ಲಿ ನೋಡಿದರಲ್ಲಿ ರಕ್ತಪಾತ. ದುಷ್ಕರ್ಮಿಗಳು ಪರಿಸ್ಥಿತಿಯ ಲಾಭ ಪಡೆದು ಬ್ಯಾಂಕುಗಳನ್ನು ಕೊಳ್ಳೆ ಹೊಡೆಯುತ್ತಿದ್ದರು. ಎಲ್ಲೆಲ್ಲೂ ಕಳ್ಳತನ, ಅತ್ಯಾಚಾರ, ಕೊಲೆ ಸುದ್ದಿಗಳು ಚಿತ್ತಗಾಂಗ್ ಎಂಬ ನಗರದ ತುಂಬ.

ಈ ಮದರಾಸೀ ಮುಸ್ಲಿಂ ಕುಟುಂಬ ಮದರಾಸಿನಿಂದ ಯಾವುದೋ ಕಾಲಕ್ಕೆ ಚಿತ್ತಗಾಂಗ್ ಗೆ ವಲಸೆ ಹೋಗಿ ಬಟ್ಟೆ, ದಿನಸಿ ಅಂಗಡಿ ಇಟ್ಟುಕೊಂಡು ಬದುಕು ಸಾಗಿಸುತ್ತಿದ್ದವರು. ನಿನ್ನೆ ರಾತ್ರಿಯ ತನಕ ಪಾಕಿಸ್ತಾನ ಧ್ವಜ ಹಾರಾಡುವಲ್ಲಿ ಬೆಳಗಾಗುವಷ್ಟರಲ್ಲಿ ಬಾಂಗ್ಲಾ ಎಂಬ ಹೊಸ ದೇಶ ಹುಟ್ಟಿಕೊಂಡಿದೆ. ಈಗ ಈ ಬಂಗಾಲಿಗಳಿಗೆ ಭಾರತೀಯರೂ ಬೇಡ ಪಾಕಿಗಳೂ ಬೇಡ. ಹೀಗಾಗಿ ಸಿಕ್ಕ ಸಿಕ್ಕಲ್ಲಿ, ಇವರನ್ನೆಲ್ಲ ಗುರುತು ಮಾಡಿಕೊಂಡು ಸಾಧ್ಯವಾದಷ್ಟು ಇವರಿಂದ ನಗ-ನಾಣ್ಯ ದೋಚಿ ಇವರನ್ನು ಗಡೀಪಾರು ಮಾಡುವುದು.

ಈ ರಹೀಮ್ ಬೀ ಎಂಬ ನತದೃಷ್ಟ ಹೆಣ್ಣು ಮಗಳೊಬ್ಬಳು ಬಂಗಾಳದ ಬೀದಿಯಲ್ಲಿ ಅನಾಥಳಾಗಿ ರಕ್ಷಣೆಗಾಗಿ ಭಾರತೀಯ ಸೈನ್ಯದ ಯುನಿಫಾರ್ಮ್ ನವರೆಂದು ಇವಳಿಗೆ ಅದು ಹೇಗೋ ಗೊತ್ತಿತ್ತು. ಮತ್ತು ಹಿಂದೀ ಮಾತನಾಡುವ ಮಿಲಿಟರಿಯವರನ್ನು ಮಾತನಾಡಿಸಿ ಹೇಗಾದರೂ ಮಾಡಿ ಗಡಿ ದಾಟಿಸಿ ಭಾರತಕ್ಕೆ ಬಿಡಲು ಕಾಲಿಗೆ ಬಿದ್ದು ಗೋಗರೆದಿದ್ದನ್ನು ನೆನೆದು ನಾರಾಯಣ ಈಗಲೂ ಕಣ್ಣೀರಾಗುತ್ತಾರೆ. ಮಾತಿನ ಮಧ್ಯ ಮಧ್ಯ ಮೌನವಾಗುತ್ತಾರೆ.

ಒಬ್ಬ ಮುಸ್ಲಿಮ್ ಯುವ ಹೆಂಗಸು ಕೇವಲ ಭಾರತೀಯನೆಂಬ ಕಾರಣಕ್ಕೆ ನಾರಾಯಣರ ಧರ್ಮ ಯಾವುದೆಂದೂ ಯೋಚಿಸುವಷ್ಟು ಪುರುಸೊತ್ತಿರದೇ ಇರುವಾಗ ಧರ್ಮದ ಹೆಸರಿನಲ್ಲಿ ಇಡೀ ಖಂಡ ಆಗ ಹೊತ್ತಿ ಉರಿಯುತ್ತಿತ್ತು.

ನಾರಾಯಣರವರು ಯಾವ ಹಿಂದೇಟೂ ಹಾಕದೇ ಭಾರತದ ಸೈನ್ಯದ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಸ್ವಂತ ಖರ್ಚಿನಲ್ಲಿ ಕಲಕತ್ತೆಯವರೆಗೂ ಬಂದು ಆ ಮಹಿಳೆಯ ಕುಟುಂಬವನ್ನು ಬೀಳ್ಕೊಟ್ಟು ಹೋದರು.

ಇಂತಹ ನಾರಾಯಣ ಎಂಬ ಎಂಬತ್ತು ವರುಷದ ಯೋಧ ನನ್ನೆದುರು ಯುದ್ಧದ ದಿನಗಳನ್ನು ನೆನಪಿಸಿಕೊಂಡು ನನ್ನೆದುರಿಗೆ ಎಷ್ಟು ಸಲ ಬಿಕ್ಕಿದರೊ? ತಮ್ಮ ಹದಿನಾರು ವರ್ಷಗಳ ಮಿಲಿಟರೀ ಸರ್ವಿಸ್ ನಲ್ಲಿ ಪಡೆದ ಮೆಡಲುಗಳೆಷ್ಟೋ, ಶೌರ್ಯದ ಕತೆಗಳೆಷ್ಟೋ… ಅದನ್ನೆಲ್ಲಾ ಕೇಳಲು ನಾನು ಇನ್ನೊಮ್ಮೆ ಪುರುಸೊತ್ತು ಮಾಡಿಕೊಂಡು ಬರುತ್ತೇನೆಂದು ಮಾತು ಕೊಟ್ಟಿದ್ದೇನೆ.

ಹೀಗೆ ಕೇವಲ ಸಿನೇಮಾಗಳಲ್ಲಿ ನೋಡಿದ, ಕೇವಲ ಪುಸ್ತಕಗಳಲ್ಲಿ ಓದಿದ ವೀರನೊಬ್ಬನ ಜೊತೆಗಿನ ಒಡನಾಟ ಮಾಡುವ ಅದೃಷ್ಟವಂತ ನಾನು… ಈ ಯುದ್ಧದ ಕತೆಗಳನ್ನು ಕೇಳುತ್ತ ಹೋದರೆ ಒಂದೆರಡು ದಿನವೂ ಸಾಲುವುದಿಲ್ಲ. ಅಷ್ಟೊಂದು ಕತೆಗಳ ಅನುಭವಗಳ ಬತ್ತಳಿಕೆ ಇದೆ ಇವರ ಸ್ಮೃತಿ ಪಟಲದಲ್ಲಿ. ಎಂಬತ್ತರ ಇಳಿವಯಸ್ಸಿನ ಇವರು ಮಾತಿಗೆ ಕುಳಿತರೆ ತಮ್ಮ ಮೈಮೇಲೆ ಮತ್ತೆ ಯೂನಿಫಾರ್ಮ್ ಹಾಕಿಕೊಂಡವರಂತೆ ಶಿಸ್ತಿನ ಸಿಪಾಯಿಯ ಕಣ್ಣುಗಳು ಸಿಡಿ ಗುಂಡುಗಳಾಗುತ್ತವೆ. ಗೂನು ಬೆನ್ನು ಸೆಟೆದು ನಿಲ್ಲುತ್ತದೆ. ನಾನು ನನ್ನ ಕಣ್ಣುತೆರೆದುಕೊಂಡು ಕತೆ ಕೇಳಿಸಿಕೊಳ್ಳುವ ಪುರುಸೊತ್ತು ಮಾಡಿಕೊಳ್ಳಬೇಕಷ್ಟೇ.