‘ವರ್ಣ’ ಅಪ್ಪಟ ದಲಿತ ಜಗತ್ತಿನ ಪ್ರಾತಿನಿಧಿಕ ಕವಿತೆ. ಕವಿ ಸುಮ್ಮನೆ ಎಲೆಮರೆಯ ಕಾಯಿಯಂತಿದ್ದರೂ ಬಿಡದೆ ಪ್ರಚೋದಿಸಿ ಅಖಾಡಕ್ಕೆ ಕರೆದು ಕೊನೆಗೆ ಮಣ್ಣುಮುಕ್ಕುವ ಉಢಾಳರಿಗೆ ಎಚ್ಚರಿಕೆಯಂತಿದೆ ಈ ಕವಿತೆ. “ಹಸಿರು, ಕೆಂಪು, ಕಪ್ಪು, ಬಣ್ಣಗಳೊಳಗೆ ಕರಗಿಹೋದ ದಲಿತರ ನೆತ್ತರು ಮತ್ತು ಬೆವರು ಉಳ್ಳವರನ್ನು ಉಸಿರುಗಟ್ಟಿ ಸಾಯಿಸಿದರೆ ಆಶ್ಚರ್ಯಪಡಬೇಕಿಲ್ಲ”. ‘ಹಸಿವು’ ಕವಿತೆ ಅವ್ವನ ಉದಾರತನವನ್ನೂ ಆಕೆಯ ಸಂಸ್ಕಾರವನ್ನೂ ದರ್ಶಿಸಿ ದಂಗುಬಡಿಸುತ್ತದೆ. ಹಸಿವು ಎಂದು ಬಂದವರಿಗೆ ತನ್ನ ಪಾಲಿನ ತಟ್ಟೆಯಲ್ಲಿದ್ದ ಹಿಟ್ಟನ್ನು ಕೊಟ್ಟುಬಿಡುತ್ತಾಳೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ಬಸವರಾಜು ಕುಕ್ಕರಹಳ್ಳಿಯವರ ‘ಅವ್ವ ಬರಲೇ ಇಲ್ಲ’ ಕವನ ಸಂಕಲನದ ಕುರಿತು ಬರೆದಿದ್ದಾರೆ.

ಕನ್ನಡ ಕಥಾಸಾಹಿತ್ಯದಲ್ಲಿ ವಿಶಿಷ್ಟ ಸಂವೇದನೆಗಳ ಮೂಲಕ ಕಥೆಗಳನ್ನು ಬರೆಯುವ ಅತಿಮುಖ್ಯ ಕಥೆಗಾರರಲ್ಲಿ ಬಸವರಾಜು ಕುಕ್ಕರಹಳ್ಳಿ ಅವರು ಒಬ್ಬರು. ಅವರನ್ನು ಎಲೆಮರೆಯ ಕಾಯಿಯ ಕಥೆಗಾರರು ಎಂದು ಕರೆಯುವವರಿದ್ದರೂ ಅವರ ಅಭಿಮಾನಿ ಬಳಗಕ್ಕೆ ಅವರು ಚಿರಪರಿಚಿತರೇ. ‘ಮೊಕಾರ’, ‘ಪುನುಗ’, ‘ಜೀವಾಳ’, ‘ಬಾಳಾಟ’ ಎಂಬ ಕಥಾಸಂಕಲನಗಳು ಮತ್ತು ‘ಕಾಲನೊದ್ದವರು’ ಎಂಬ ‘ನೀಳ್ಗತೆ’ಯನ್ನು ಬರೆದ ಇವರು ೨೦೨೦ರಲ್ಲಿ ‘ಅವ್ವ ಬರಲೇ ಇಲ್ಲ’ ಎಂಬ ಪದ್ಯಗಳ ಸಂಗ್ರಹವನ್ನೂ ಪ್ರಕಟಿಸಿದ್ದಾರೆ. ಕಳೆದ ತಿಂಗಳು ದಿಢೀರನೆ ಬಂದ ಅವರ ಸಾವಿನ ಸುದ್ದಿ ಅವರಿಲ್ಲವೆಂಬುದನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಯಾವ ‘ಇಸಂ’ಗಳ ಪರಿಧಿಯಲ್ಲೂ ಗುರುತಿಸಿಕೊಳ್ಳದ ಬಸವರಾಜು ಅವರು ಸದಾ ಗುಂಪಿನಿಂದ ದೂರವೇ ಉಳಿದುಬಿಡುತ್ತಿದ್ದರು.

ಇತ್ತೀಚೆಗೆ ಬರೆಯುತ್ತಿರುವವರ ಕಾವ್ಯವನ್ನು ಓದುಗರಿಗೆ ಕುತೂಹಲವನ್ನು ಹುಟ್ಟಿಸುವುದಕ್ಕಾದರೂ ನಾಲ್ಕು ಸಾಲು ಬರೆಯಬೇಕು ಎಂದುಕೊಂಡಾಗ ನೆನಪಾದದ್ದು ಇವರ ಸಂಕಲನ. ‘ಅವ್ವ ಬರಲೇ ಇಲ್ಲ’ ಅವರ ಪದ್ಯಗಳ ಸಂಗ್ರಹ. ಕರಡು ಕವನಗುಚ್ಚದ ಶೀರ್ಷಿಕೆಯ ಕೆಳಭಾಗದಲ್ಲಿ ‘ಪದ್ಯಗಳ ಸಂಗ್ರಹ’ ಎಂಬುದನ್ನು ನೋಡಿ ‘ಕವನಸಂಕಲನ’ವಲ್ಲವೇ ಎಂದು ಎಂದು ಸ್ವಲ್ಪ ಮಟ್ಟಿನ ಗೊಂದಲವಾದರೂ ಅದನ್ನು ಅವರು ಬಹುವರ್ಷಗಳ ಹಿಂದೆಯೇ ಬರೆದಿದ್ದಾರೆಂದೂ ಅವೆಲ್ಲವನ್ನು ಸಂಗ್ರಹಿಸಿ ಪ್ರಕಟಿಸುತ್ತಿರುವ ಕಾರಣ ಪದ್ಯಗಳ ಸಂಗ್ರಹವೆಂಬುದಾಗಿ ಇಟ್ಟಿರಬಹುದು. ಇರಲಿ, ಅವರ ‘ಅವ್ವ ಬರಲೇ ಇಲ್ಲ’ ಸಂಕಲನದ ಒಳಹೊಕ್ಕಾಗ ಅಲ್ಲಿ ಕಂಡ ಪ್ರಪಂಚದ ‘ಬಾಳಾಟ’ವನ್ನು ಓದಿಯೇ ತೀರಬೇಕು. ಸುಮಾರು ಮೂವತ್ಮೂರು ಕವನಗಳ ಸಂಗ್ರಹ ಕೆಲವು ‘ಕಥನಕವನ’ಗಳನ್ನೂ, ಕಡಿಮೆ ಸಾಲುಗಳ ಚಿಕ್ಕ ಕವನಗಳನ್ನೂ ಒಳಗೊಂಡಿದೆ.

‘ಲಾಲಿಸೊ’ ಎಂಬ ಕವನದ ಮೂಲಕ ಕುಕ್ಕರಹಳ್ಳಿಯವರ ಈ ಕವನಸಂಕಲನ ಆರಂಭವಾಗುತ್ತದೆ. ಸಮಾಜದ ಕೊಳೆಯನ್ನು ತೊಳೆದು ಶುಭ್ರವಾಗಿಸಿ ಜ್ಞಾನದ ಹಣತೆ ಹಚ್ಚಿದ ಮಹನೀಯರನ್ನು ಇಲ್ಲಿ ನೆನೆದಿದ್ದಾರೆ.

“ಭೋಗ ತೊರೆದು ಬೋಧಿಯಾದ ಗೌತಮನ
ಜಾತಿ ತೊರೆದು ದಾಸೋಹ ಮೆರೆದ ಅಣ್ಣ ಬಸವಣ್ಣನ
ಸರ್ವರೊಳಗೂ ಸರ್ವೋದಯವೆಂದ ಗಾಂಧಿಯ
ಜೀವಪರ ನಿಂತು ಜೀವರಾಶಿಗಳಿಗೂ
ನ್ಯಾಯ ಬರೆದ ಭೀಮನ”..

ಎಲ್ಲರೂ ಮಾನವೀಯತೆಗಾಗಿಯೇ ಜೀವ ತೇದವರು. ಅವರನ್ನು ಕೃತಜ್ಞಾಪೂರ್ವಕವಾಗಿ ನೆನೆದಿರುವುದು ವಿಶೇಷ. ಈ ಪುಸ್ತಕವನ್ನೂ ಸಾಹಿತ್ಯ ಸ್ವರೂಪಿಗಳಾದ ಪೂರ್ವಿಕರಿಗೇ ಅರ್ಪಿಸಿದ್ದಾರೆ. ಆ ಪೂರ್ವಿಕರೇ ಅಕ್ಷರ ಸಂಸ್ಕೃತಿಯ ಆದಿ ಬಂಧುಗಳು ಅವರನ್ನೂ ಕವಿತೆಯಲ್ಲಿ ಸ್ಮರಿಸಿದ್ದಾರೆ.

“ಪೂಜೆಯೊಪ್ಪರು ಅತೀತರು ಪ್ರತಿಮೆಯೊಪ್ಪರು
ನಮನವೀಯ್ವರಲ್ಲಗಳೆವರು”
ಮನುಕುಲದ ಉದ್ಧಾರಕ್ಕೆ ದುಡಿದ ಮಹಾತ್ಮರನ್ನು ಪ್ರತಿಮೆಗಳನ್ನಾಗಿಸಿ ಕೈಮುಗಿಯುವುದನ್ನು ಕಟುವಾಗಿಯೇ ವಿರೋಧಿಸುವ ಕವಿ ವಿಡಂಬನಾತ್ಮಕವಾಗಿ ಪ್ರಚಾರಪ್ರಿಯರಿಗೆ ಚುಚ್ಚಿದ್ದಾರೆ.

‘ಸಸಾಸಮ’ ಕವಿತೆ ಶೀರ್ಷಿಕೆಯಿಂದಲೇ ಸೆಳೆಯುತ್ತದೆ. ಏಪ್ರಿಲ್ ೧೪ ರಂದು ಸಮಾನತೆ ಸಮನ್ವಯತೆಯನ್ನು ಕಾಣಲೋದ ಇವರು ಸಾಲಿನಲ್ಲಿ ನಿಂತು ಸುಸ್ತಾಗಿ ಬಳಲಿ ಬೆಂಡಾಗಿ ಕಿಟಾರನೆ ಕಿರುಚಿಕೊಂಡಾಗ

‘ಸಮಾನತೆ ಸಾರುವ ಬಾಬಾ ಸಾಹೇಬರ
ಎಡಗೈಯ ಹಿಡಿಕೆಯಲ್ಲಿದ್ದೆ.
ಅಸಮಾನತೆ ಧಿಕ್ಕರಿಸುವ
ಅವರ ತೋರು ಬೆರಳ ತುದಿಯಲ್ಲಿದ್ದೆ.

ಎನ್ನುತ್ತಾ ಕವನವನ್ನು ಮುಕ್ತಾಯಗೊಳಿಸುತ್ತಾರೆ. ಅಸಮಾನತೆಯಿಂದ ಬಳಲಿದ ಸಮುದಾಯದ ಪ್ರತಿನಿಧಿಯೊಬ್ಬ ಕೊನೆಗೆ ಅಸಮಾನತೆಯನ್ನು ಧಿಕ್ಕರಿಸುವ ಬಾಬಾ ಸಾಹೇಬರ ದಾರಿಯಲ್ಲಿ ನಡೆಯುವುದು ಇಲ್ಲಿ ಆದ ಗಮನಾರ್ಹ ಬದಲಾವಣೆ. ಈ ದಾರಿ ಕವಿಗೆ ಸ್ಪಷ್ಟವಾಗಿ ಕಾಣುತ್ತಿದೆ.

ಇವರ ಕವನಗಳಲ್ಲಿ ಲೋಕದ ವ್ಯಂಗ್ಯ ಢಾಳಾಗಿಯೇ ಕಾಣುತ್ತದೆ. ‘ಬಡವ’ ಎಂಬ ಕವನ ತೀರಾ ಚಿಕ್ಕದಾದರೂ ಅಲ್ಲಿ ಬರುವ ವ್ಯಾಪಾರಸ್ಥನ ನಾಟಕೀಯತೆ, ಡಾಂಭಿಕತೆ ಮತ್ತು ಕೃತಕತೆಗಳು ಕವಿಯನ್ನು ವಾಪಸ್ಸು ಹೋಗುವಂತೆ ಮಾಡುತ್ತವೆ. ಇದು ತಣ್ಣಗಿನ ಬಂಡಾಯದ ಒಂದು ಮುಖ. ಪ್ರತಿಭಟನೆಯ ಇನ್ನೊಂದು ಮುಖ.

ಅವ್ವ ಮಗನ ಆತ್ಮೀಯ ಸಂಬಂಧ ಮತ್ತು ಆಕೆಯ ಗತಕಾಲದ ನೆನಪುಗಳು ಕವಿಗೆ ಯಾವಾಗಲೂ ಕಾಡುತ್ತವೆ. ದೇಹ ಇಲ್ಲವಾದರೂ ಆಕೆಯ ನೆನಪುಗಳೊಟ್ಟಿಗೆ ಬದುಕು ಕಟ್ಟಿಕೊಂಡ ಕಾರುಣ್ಯದ ಮೂರುತಿಯಾದ ಕವಿ ತೀರಾ ಭಾವುಕನಾಗುವುದು Artificial ಎನಿಸುವುದಿಲ್ಲ.

‘ಬಿಂದು’ ಕವನದಲ್ಲಿ ಅವ್ವನ ‘ಕಣ್ಣು’ಗಳನ್ನು ಕುರಿತು ಹೀಗೂ ಬರೆಯಬಹುದೇ ಎಂಬ ಸೋಜಿಗವನ್ನುಂಟುಮಾಡುತ್ತಾರೆ.

‘ಮೊಟ್ಟೆ ಹೊಡೆದ ಮರಿ
ಕಿವಿಮೂಗಿನ ನತ್ತು
ಹಾದಿಯ ಹರುಕುಗೋಡೆ
ಮುಗಿಲುಮುಟ್ಟಿದ ಕಳಸ
ಹೊಟ್ಟೆಗೂಡಿನ ಬಿಂದು ಅವ್ವನ ಕಣ್ಣು’

‘ಚಿಗುರು ಚೊಟ್ಟು ಕಾಯಿ
ರಾಗಿ ನವಣೆ
ಚೀಕು ಚಿಲವಾನಗಳ
ಚೆಲುವು ಅವ್ವನ ಕಣ್ಣು’

‘ಸರಸವಾಡುವ ತೆರದಿ
ಹರಿದ ತಿಕ ಮೊಖಗಳಿಗೆ
ಸೂಜಿಯಾಡಿಸುವ
ಅವ್ವನ ಕಣ್ಣು
ಈಗ ಮಂಜು ಮಂಜು’

ಇಲ್ಲಿ ಅವ್ವನ ಕಣ್ಣುಗಳು ಕವಿಯ ಕಣ್ಣುಗಳಲ್ಲಿ ಲೀನವಾಗಿವೆಯೇನೋ ಎನಿಸುವಷ್ಟರಮಟ್ಟಿಗಿನ ಆಪ್ತತೆ ಈ ಸಾಲುಗಳಲ್ಲಿದೆ. ಕುಕ್ಕರಗಾಲಿನಲ್ಲಿ ಕೂತು ಅಂತು ನೋಡದ ಅವ್ವ ಪದ್ಯದ ದುರಂತ ಅಂತ್ಯವಾಗುತ್ತಾಳೆ.

ಪ್ರತಿವರ್ಷದ ಪಿತೃಪಕ್ಷದ ಸಂದರ್ಭದ ಹಿರೀಕರನ್ನು ನೆನಪಿಸಿಕೊಳ್ಳುವ ಸಂದರ್ಭದಲ್ಲಿ ಬಸವರಾಜು ಕುಕ್ಕರಹಳ್ಳಿ ಅವರ ‘ಅವ್ವ’ಕವನವೂ ನೆನಪಾಗುತ್ತದೆ. ‘ಲಂಕೇಶರʼ ‘ಅವ್ವ’ ಕವನ ಹಾಗೂ ‘ಬಸವರಾಜು’ ಅವರ ‘ಅವ್ವ’ ಕವನ ಒಂದೇ ತಾಯಿಯ ಎರಡು ಮಕ್ಕಳಂತೆ ಕಾಣುತ್ತಾರೆ. ನೆಲಮೂಲದ ತಾಯೊಬ್ಬಳ ಸೀರೆ ರೂಪಕವಾಗಿ ನಾನಾ ಸಂದರ್ಭಗಳಲ್ಲಿ ಹೇಗೆ ಬಳಕೆಯಾಗುತ್ತದೆ ಎಂಬುದನ್ನು ತೀರಾ ಸಮೀಪದಿಂದ ಗ್ರಹಿಸಿ ಪದ್ಯ ಹೆಣೆದಿದ್ದಾರೆ. ಇಲ್ಲಿ ‘ಬಿದಿರು ನಾನಾರಿಗಲ್ಲದವಳು’ ಸಾಲುಗಳು ನೆನಪಾಗುತ್ತವೆ. ಅವ್ವ ಉಟ್ಟಿದ್ದ ಹಳೆಯ ಸೀರೆಯನ್ನು ನೋಡುತ್ತಿದ್ದ ಮಗ ಇಲ್ಲಿ ಅಸಹಾಯಕನಾಗಿ ಕಣ್ಣೀರಿಡುತ್ತಿಲ್ಲ. ಬದಲಾಗಿ ಹೊಸತೊಂದು ಸೀರೆಯನ್ನು ಕೊನೆಗೆ ತರುತ್ತಾನೆ. ಅದೂ ಅವ್ವನೇ ಇಲ್ಲದ ಅವ್ವನ ಎಡೆಗೆ.

‘ಕಡೆಗೆ
ನಾ ತಂದ ಉಡುಗೆ
ಬಗೆಬಗೆಯ ಅಡುಗೆ
ಮಡುಗಿದ್ದೇನೆ
ಅವಳ ಎಡೆಗೆ’..

ಇಲ್ಲಿ ಮಗ ಅಸಹಾಯಕತೆಯಿಂದ ಕೈಕಟ್ಟಿ ಕೂತಿರದೆ ಸಂಪಾದಿಸಿ ಸೀರೆ ತಂದಿದ್ದಾನೆ. ಸಂಪಾದನೆಯ ಈ ಪಥ ಅಕ್ಷರದ್ದೇ ಆಗಿದೆ. ಬಹುಶಃ ಈ ಕವಿತೆ ತುಂಬ ಹಿಂದೆ ಬರೆದಿದ್ದಿರಬಹುದು. ಆದರೆ ಪ್ರತಿಬಾರಿಯ ಓದುವಿಕೆಯಲ್ಲಿಯೂ ಹಳೆ ಸೀರೆ ಉಟ್ಟು ಬಡಕಲಾದ ಅವ್ವ ಕುಕ್ಕರಗಾಲಿನಲ್ಲಿ ಕೂತಂತೆ ಭಾಸವಾಗುತ್ತಾಳೆ. ಈ ಕವಿತೆ ಅವ್ವನನ್ನು ಮತ್ತು ಆಕೆಯ ಜೀವನವನ್ನು ಗಟ್ಟಿಯಾಗಿ ಕಟ್ಟಿಕೊಟ್ಟ ಕವಿತೆ. ಕುಕ್ಕರಹಳ್ಳಿಯವರ ಈ ಕವಿತೆ ಕನ್ನಡ ಕಾವ್ಯಲೋಕದ Shock ಎಂದರೂ ತಪ್ಪಿಲ್ಲ.

‘ವರ್ಣ’ ಅಪ್ಪಟ ದಲಿತ ಜಗತ್ತಿನ ಪ್ರಾತಿನಿಧಿಕ ಕವಿತೆ. ಕವಿ ಸುಮ್ಮನೆ ಎಲೆಮರೆಯ ಕಾಯಿಯಂತಿದ್ದರೂ ಬಿಡದೆ ಪ್ರಚೋದಿಸಿ ಅಖಾಡಕ್ಕೆ ಕರೆದು ಕೊನೆಗೆ ಮಣ್ಣುಮುಕ್ಕುವ ಉಢಾಳರಿಗೆ ಎಚ್ಚರಿಕೆಯಂತಿದೆ ಈ ಕವಿತೆ. “ಹಸಿರು, ಕೆಂಪು, ಕಪ್ಪು, ಬಣ್ಣಗಳೊಳಗೆ ಕರಗಿಹೋದ ದಲಿತರ ನೆತ್ತರು ಮತ್ತು ಬೆವರು ಉಳ್ಳವರನ್ನು ಉಸಿರುಗಟ್ಟಿ ಸಾಯಿಸಿದರೆ ಆಶ್ಚರ್ಯಪಡಬೇಕಿಲ್ಲ”.

‘ಹಸಿವು’ ಕವಿತೆ ಅವ್ವನ ಉದಾರತನವನ್ನೂ ಆಕೆಯ ಸಂಸ್ಕಾರವನ್ನೂ ದರ್ಶಿಸಿ ದಂಗುಬಡಿಸುತ್ತದೆ. ಹಸಿವು ಎಂದು ಬಂದವರಿಗೆ ತನ್ನ ಪಾಲಿನ ತಟ್ಟೆಯಲ್ಲಿದ್ದ ಹಿಟ್ಟನ್ನು ಕೊಟ್ಟುಬಿಡುತ್ತಾಳೆ. ಈ ದೇಶದ ನಿಜವಾದ ವಾರಸುದಾರರಾದ ಮೂಲನಿವಾಸಿಗಳು ಹೊರಗಿನಿಂದ ಬಂದವರಿಗೆ ಸರ್ವವನ್ನೂ ಕೊಟ್ಟು ಬಡವಾದ ಇತಿಹಾಸ ಕಣ್ಣಮುಂದೆ ಬರುತ್ತದೆ.

‘ಅವತ್ತು
ತುತ್ತು
ಕಣ್ಣಿಗೊತ್ತುಕೊಂಡು
ಇನ್ನೇನು
ಗಂಟಲಿಗಿಳಿಯಬೇಕಿತ್ತು
ಅಷ್ಟರಲ್ಲಿ
ಹೊರಗಿನಿಂದ
ಅವ್ವಾ ಹಿಟ್ಟು
ತಾಯೀ ಹಿಟ್ಟು
ಎಂದು ಹಸಿವು ಕೂಗಿ ಕರೆಯಿತು’

ಇಲ್ಲಿ ‘ಹಸಿವೇ ಕೂಗಿ ಕರೆಯುತ್ತದೆ’ ಇಂಥವು ಕುಕ್ಕರಹಳ್ಳಿ ಬಸವರಾಜು ಅವರ ಕಾವ್ಯದ ಬಹುದೊಡ್ಡ ಶಕ್ತಿಯಾಗಿವೆ. ಕಾಲಾಂತರದಲ್ಲಿ ತೆನೆಯಾದ ಅವ್ವ ‘ಬಿತ್ತಿ ತಿನ್ನಿರಿ’ ಎಂಬ ಸಂದೇಶ ಕೊಡುತ್ತಾಳೆ.

ಮನುಕುಲದ ಉದ್ಧಾರಕ್ಕೆ ದುಡಿದ ಮಹಾತ್ಮರನ್ನು ಪ್ರತಿಮೆಗಳನ್ನಾಗಿಸಿ ಕೈಮುಗಿಯುವುದನ್ನು ಕಟುವಾಗಿಯೇ ವಿರೋಧಿಸುವ ಕವಿ ವಿಡಂಬನಾತ್ಮಕವಾಗಿ ಪ್ರಚಾರಪ್ರಿಯರಿಗೆ ಚುಚ್ಚಿದ್ದಾರೆ.

‘ಪಿಂಚಣಿ’ ಕೊಡುವ ಸರ್ಕಾರವನ್ನು ಕೃತಜ್ಞತೆಯಿಂದ ನೆನೆದಿರುವ ‘ಪಿಂಚಣಿ’ ಕವಿತೆ ಕವಿಯನ್ನು ಸದಾ ಕಾಡಿದೆ. ಇಲ್ಲಿ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುವ ಸ್ವಾರ್ಥವನ್ನು ಬಿಟ್ಟು ಇಲ್ಲದ ಜನರನ್ನು ಕಂಡು ಮರುಗುತ್ತಿದೆ. ‘ಬಾರೆ ತಂಗಿ ನೋಡುಬಾರೆ’ ಎಂಬ ಕವನ ದಮನಿತರ ಧ್ವನಿಯಾದ ಬಾಬಾ ಸಾಹೇಬರನ್ನು ಅವರ ಜೀವನ ಗಾಥೆಯನ್ನು ಕುರಿತು ಬರೆದಿದ್ದಾರೆ. ಇದನ್ನು ಹಾಡಲೂಬಹುದು. ಹಾಗೆಯೇ ಕಪ್ಪು ಜನರ ನಾಯಕ ‘ನೆಲ್ಸನ್ ಮಂಡೇಲಾ’ ಅವರ ಕುರಿತ ಕವನ ಕವಿಯ ಆಕ್ರೋಶದೊಂದಿಗೆ ಸಮಾಪ್ತಿಕಂಡಿದೆ.

ಸಾಕ್ಷರತೆಗಾಗಿ ಹಂಬಲಿಸುವ ಕವಿ ‘ಎಳೆಯರು’ ಎಂಬ ಕವಿತೆಯನ್ನು ಬರೆದಿದ್ದಾರೆ. ‘ಅಕ್ಷರಕ್ಕೆ ಮಾತ್ರ ಅಸ್ಪೃಷ್ಯತೆಯಿಲ್ಲʼವೆಂದು ಪ್ರತಿಪಾದಿಸುವ ಇವರು ತರಗತಿಯ ಕೋಣೆಯೊಳಗೆ ಎಲ್ಲರೂ ಸಮಾನರೆಂದು ಸಾರುತ್ತಾರೆ.

‘ದಿಲ್ಲಿ ನೋಡಿದ್ವಿ
ಬೊಂಬಾಯಿ ನೋಡಿದ್ವಿ
ಕೂಡಿ ಕಳೆಯುವ ಸ್ಕೂಲಲಿ
ಎ ಬಿ ಸಿ ಡಿ ಶುರುವಾದ ಮೇಲೆ
ಪಾರಿನ್ನು ನೋಡತೀವಿ ಸ್ಕೂಲಲಿ
ಪಾರಿನ್ನು ನೋಡತೀವಿ ಸ್ಕೂಲಲಿ’

ತರಗತಿ ಕೋಣೆಯಲ್ಲಿಯೇ ವಿದೇಶವನ್ನು ಸುತ್ತುವ ಮಕ್ಕಳ ಮುಗ್ಧತೆ ಮತ್ತು ಅನಿವಾರ್ಯತೆಗಳು ನಮ್ಮನ್ನು ಭಾವುಕರನ್ನಾಗಿಸುತ್ತವೆ. ಅಕ್ಷರ ಕಲಿಯುವಂತೆ ಪ್ರೇರೇಪಿಸುವ ಈ ಗೀತೆ ಸಮಾಜಕ್ಕೆ ಪ್ರಾರ್ಥನಾ ಗೀತೆಯಂತಿದೆ.

ಗ್ರಂಥಾಲಯ ಕವಿತೆ ಗದ್ಯವೋ ಎನಿಸುತ್ತದೆ. ಪದ್ಯ ಲಕ್ಷಣಗಳಿಲ್ಲದಿದ್ದರೂ ಅದನ್ನು ಪದ್ಯವಾಗಿಯೇ ಓದಿಕೊಳ್ಳಬೇಕು. ಗ್ರಂಥಾಲಯವನ್ನು ಮೊದಲ ಬಾರಿ ನೋಡಿದ ಕವಿಯ ಮನಸ್ಸಿನಲ್ಲಿ ತರಾವರಿ ಯೋಚನೆಗಳು ಮನಸ್ಸಿನೊಳಗೆ ಓಡುತ್ತವೆ.

‘ಬರೇ ಪುಸ್ತಕಗಳನ್ನಿಡಲು ಇಷ್ಟುದೊಡ್ಡ ಬಂಗಲೆಯೆ?
ನಮಗಾದರೂ ಕೊಟ್ಟಿದ್ದರೆ
ಊರಿನವರೆಲ್ಲ ಗಾಳಿ ಮಳೆಯಿಂದ ರಕ್ಷಿಸಿಕೊಂಡು
ದನ ಕರುಗಳನ್ನು ಕಟ್ಟಿಕೊಂಡು ಬೆಚ್ಚಗೆ ಮಲಗುತ್ತಿದ್ದೆವಲ್ಲ’?

ಇಲ್ಲಿ ಕವಿಯ ಸ್ವಾರ್ಥವಿಲ್ಲ. ಆತನೊಬ್ಬನೇ ಮತ್ತು ಆತನ ಕುಟುಂಬವೊಂದೇ ಆ ಬಂಗಲೆಯಲ್ಲಿ ವಾಸಿಸಬೇಕೆಂದು ಯೋಚಿಸುತ್ತಿಲ್ಲ. ಊರಿನವರೂ, ದನ ಕರುಗಳೂ ಎನ್ನುವಲ್ಲಿ ಸಾಮುದಾಯಿಕ ಪ್ರಜ್ಞೆ ಜಾಗೃತವಾಗಿದೆ. ಶತಮಾನಗಳಿಂದ ಅಕ್ಷರವಂಚಿತರಾದ ಬಹುದೊಡ್ಡ ಸಮುದಾಯವನ್ನು ಒಟ್ಟಿಗೆ ಅಕ್ಷರದ ಮಾರ್ಗದಲ್ಲಿ ಕರೆದೊಯ್ಯಲು ಕವಿ ಸಿದ್ಧರಾಗಿಯೇ ಇದ್ದಾರೆ. ಕವನದಂತ್ಯದಲ್ಲಿ ಪುಸ್ತಕರೂಪ ತಾಳಿದ ಮಹನೀಯರು ಇವರಿಗಾಗಿ ಕಾಯುತ್ತಿದ್ದುದು ಮನವರಿಕೆಯಾಗುತ್ತದೆ.

‘ದೇವರನ್ನು ಕಂಡೆಯಾʼ? ಸುದೀರ್ಘ ಕಥನ ಕವನ ಇದು ದೇವರ ಅಸ್ತಿತ್ವವನ್ನು ಪ್ರಶ್ನೆ ಮಾಡುತ್ತದೆ. ನಡೆಯೇ ಬಾರದ ಹಸುಗಂದನ ಮೇಲೆ ನಡೆಯುವ ಅತ್ಯಾಚಾರ ಅದನ್ನು ಬಿಡಿಸಲು ಬರುವ ತಾಯಿಯಮೇಲೂ ಅತ್ಯಾಚಾರ ನಡೆಯುತ್ತದೆ. ಹಿಂದೆಯೇ ಓಡಿ ಬಂದ ಗಂಡನ ಕೊಲೆಯೂ ನಡೆಯುತ್ತದೆ. ಇದಾವುದನ್ನೂ ಲೆಕ್ಕಿಸದ ಜನರು ಬರೀ ದೇವರ ಜಪ ಮಾಡುತ್ತಿರುತ್ತಾರೆ. ಮಂಗಳನ ಅಂಗಳಕ್ಕೆ ಹೋದ ಗಗನ ಯಾತ್ರಿಯನ್ನು ದೇವರನ್ನು ಕಂಡೆಯಾ? ಎಂದು ಪ್ರಶ್ನಿತ್ತಾರೆ. ಜನರು ಮತ್ತು ಗಗನಯಾತ್ರಿಯ ನಡುವೆ ವಾಗ್ವಾದ ನಡೆಯುತ್ತಿರುತ್ತದೆ.
ಆಗ,
‘ಅತ್ಯಾಚಾರದಿಂದಾಗಿ ನಲುಗಿ
ನೊಂದು ಕಂದಿದ್ದ
ಕಂದನ
ಆ ಸಣ್ಣ ಸೂಲನ್ನು ತನ್ನೊಳಗೆಳೆದುಕೊಂಡು,
ಸೆಟೆದೆದ್ದು ಕೂಗಿತು

ಮಾತೇ, ಮಾತೇ,
ಇವರನ್ನೆ ಮಂಗಳನ
ಅಂಗಳಕ್ಕೂ ಸಾಗಿಸುತ್ತೀಯ?
ಅಲ್ಲೂ ಮಹಿಳೆಯ ಮಕ್ಕಳ ಮೇಲೆ ಅತ್ಯಾಚಾರ ಕೊಲೆ
ನಡೆಸುವ ಸಾಹಸಕ್ಕಿಳಿಯುತ್ತೀಯ?
ಇದೇ ನಿನ್ನ ಸಾಧನೆಯಾʼ?

ಎನ್ನುತ್ತಾಳೆ. ಇದು ಸಿಟ್ಟು ಶೋಷಣೆಗೆ ಒಳಗಾದ ಮಹಿಳೆಯರ ಒಟ್ಟಿನ ಕೂಗು. ಇಲ್ಲಿ ಇವಳು ಅಂಥವರ ಪ್ರತಿನಿಧಿ. ದೇವರನ್ನು ‘ಮಾತೇ’ ಎಂದು ಸಂಭೋದಿಸುವುದರ ಹಿಂದೆ ಪುರುಷಲಿಂಗಿ ದೇವರುಗಳ ಮೇಲಿನ ಅಪನಂಬಿಕೆ ಅವಳನ್ನು ಹೀಗೆ ಕೂಗಿಸಿರಬಹುದು. ಅಥವಾ ದೇವರ ಅಸ್ತಿತ್ವದ ಮೇಲೆಯೇ ನಂಬಿಕೆ ಇರದ ಇವಳು ‘ಮಾತೆ’ಯನ್ನೂ ತರಾಟೆಗೆ ತೆಗೆದುಕೊಂಡಿರಬಹುದೇ ಎನಿಸುತ್ತದೆ. “ಜೀವವಿಲ್ಲದ ದನಿ ಕೇಳದ ದೇವರು ಮತ್ತು ಜೀವವಿರುವ ದನಿ ಕೇಳದ ಜನರಿಗೆ ಇಲ್ಲಿ ವ್ಯತ್ಯಾಸ ಹುಡುಕುವುದು ಕಷ್ಟ”ವೆಂದು ಭಾವಿಸಬಹುದು.

ಅದೇ ಮಾದರಿಯ ಮತ್ತೊಂದು ಕಥನ ಕವಿತೆ ‘ನಿರಪರಾಧಿ’. ಗೌರಿಯ ಕಣ್ಣೀರ ಕಥೆಯನ್ನು ಎಳೆಯೆಳೆಯಾಗಿ ಬಿಡಿಸಿಡುತ್ತದೆ. ಇದು ಗೌರಿಯ ಚಂದದ ಸಂಸಾರ ಅವಸಾನವಾದ ಕಥೆ.

ಗಂಡ ಸತ್ತಮೇಲೆ ಸಮಾಜದಲ್ಲಿ ತಳವೂರಲು ಹೆಣಗುತ್ತಿದ್ದಾಗ ಅವಳನ್ನೇ ‘ಹೆಣ’ಮಾಡುವ ಸಮಾಜದ ಕ್ರೌರ‍್ಯವನ್ನು ಕಂಡು ಎಂಥವರಾದರೂ ಬೆಚ್ಚುತ್ತಾರೆ.

‘ಇವಳು
ಗಾಂಧಿಯನ್ನು ಕಂಡವಳಲ್ಲ,
ಬುದ್ಧನನ್ನು ಬಲ್ಲವಳಲ್ಲ
ಬಸವನನ್ನು ಅರಿತವಳಲ್ಲ,
ಕಾರ್ಲ್‌ಮಾರ್ಕ್ಸ್‌ ಮಾವೋ ಲೋಹಿಯಾ
ನೆಲ್ಸನ್ ಮಂಡೇಲಾ ಅಚುಬೆ ಟಾಲ್ ಸ್ಟಾಯ್ ಕುವೆಂಪು
ಯಾರನ್ನೂ ನೋಡಿದವಳಲ್ಲ, ಓದಿದವಳಲ್ಲ..!
ಆದರೆ
ಇವಳು
ಅವರನ್ನೆಲ್ಲ ಬಲ್ಲ
ಬಾಬಾ ಸಾಹೇಬರ ಸಾರಾಂಶದಂತೆ ಜ್ವಲಿಸುತ್ತ , ಪ್ರತಿಫಲಿಸುತ್ತಿದ್ದಳು’.

ಅವಳ ಏಳಿಗೆಯನ್ನು ಸಹಿಸದ ಊರಿನ ಜನರು ಕುತಂತ್ರದಿಂದ ಮೂವರಲ್ಲಿ ಅವಳಿಬ್ಬರು ಮಕ್ಕಳನ್ನು ನ್ಯಾಯಕ್ಕೆಂದು ಕರೆಸಿ ಅಟ್ಟಹಾಸಗೈಯುತ್ತಾರೆ. ಮಕ್ಕಳೆದುರೇ ತಾಯಿಯನ್ನು ಬೆತ್ತಲುಗೊಳಿಸುವ ಸಮಾಜದ ಕ್ರೌರ‍್ಯ ಎಷ್ಟಿರಬೇಕು. ಇವರು ಸಮಾಜದ ನಿಜವಾದ ವಿಕಾರಿಗಳು. ಕೊನೆಗೆ ಅವಳ ಮರ್ಮಾಂಗಕ್ಕೆ ಮರದಪಟ್ಟಿಯನ್ನು ಹಾಕಿ ಕೇಕೆ ಹಾಕುತ್ತಾರೆ. ಇಬ್ಬರು ಮಕ್ಕಳನ್ನೂ ಕೊಲೆ ಮಾಡುತ್ತಾರೆ. ಹೆಣ್ಣನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಸಮಾಜದ ಮತಿಹೀನರು ಇಲ್ಲಿ ಇನ್ನೂ ಪೂಜೆಗೊಳಪಡುತ್ತಿರುವುದು ನಮ್ಮೆಲ್ಲರ ದುರ್ದೈವ. ಉಳಿದ ಒಬ್ಬ ಮಗ ಬಂದು ಮೌನವಾಗಿ ಎದ್ದು ಹೋಗುತ್ತಾನೆ. ಅವನ ‘ಮೌನ’ ತಾಯಿ ಮತ್ತು ಸಹೋದರರನ್ನು ಕೊಂದವರ ಸುಡುತ್ತದೆಯೇ? ಉತ್ತರವಿಲ್ಲದ ಪ್ರಶ್ನೆ.

ಶ್ರಮಿಕ ಕವಿತೆ ಹಳೆಯ ವಸ್ತುಗಳನ್ನೆಲ್ಲ ಜೋಡಿಸಿ ಮರುಬಳಕೆ ಮಾಡುವ ಒಬ್ಬ ವ್ಯಕ್ತಿ.

‘ಬಳಕೆ
ಮರುಬಳಕೆ
ಸದ್ಬಳಕೆ
ಎಂದು ಕೈಗಿಡಿಸಿ ನಡೆಸುವ ಆ ಶ್ರಮಿಕ
ಬೇರಾರೂ ಅಲ್ಲ
ಅವ
ನಮ್ಮ ‘ಪೂರ್ವಿಕ’

ಇದೊಂದು ಮೇಲ್ನೋಟಕ್ಕೆ ಮರುಬಳಕೆ ಮಾಡುವ ‘ಶ್ರಮಿಕ’ನನ್ನು ಕುರಿತದ್ದಾಗಿದ್ದರೂ ಅದರ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಿಕೊಂಡು ಮುಂದೆ ಸಾಗುತ್ತದೆ. ‘ವೇದನೆ ನಿವೇದನೆ’ ಕವಿತೆಯೂ ಶ್ರಮಿಕನೊಬ್ಬನನ್ನು ಕುರಿತ ಕವಿತೆಯೇ. ಇದೊಂದು ಆತನ ನಿಟ್ಟುಸಿರಿನ ಸ್ವಗತ. ದುಡಿದು ಗುಡಿಸಲಿನಲ್ಲಿ ನಿದ್ದೆಗಾಗಿ ಕಾತರಿಸುವ ವ್ಯಕ್ತಿ ಬಡತನದ ಕಾರಣದಿಂದ ಹಲವಾರು ಕಾರಣಗಳಿಂದ ನಿದ್ದೆಯಿಂದ ವಂಚಿತನಾಗುತ್ತಾನೆ. ಸೊಳ್ಳೆ, ತಿಗಣೆ, ಕೋಳಿ ಹೇನುಗಳು ಅವನನ್ನು ಮತ್ತಷ್ಟು ಹೈರಾಣಾಗಿಸುತ್ತವೆ. ದೇಶದ ಸ್ಥಿತಿಯನ್ನು ಇಲ್ಲಿ ಹೋಲಿಸಿ ನೋಡಬಹುದೇನೋ…? ಜಾತಿ, ಬಡತನದ ಕಾರಣದಿಂದ ನೆಮ್ಮ ಮತ್ತು ನೆಲೆಯನ್ನು ಕಳೆದುಕೊಂಡ ಪ್ರತಿಯೊಬ್ಬ ಮೂಲನಿವಾಸಿಯ ಕಥೆಯೇನೋ ಎನಿಸುತ್ತದೆ. ಅವರನ್ನು ಬದುಕಲು ಬಿಡದ ಸಮುದಾಯಗಳು ಸೊಳ್ಳೆ ತಿಗಣೆ ಹೇನುಗಳಿಗಿಂತಲೂ ಅಪಾಯಕಾರಿಯೇ.

ಅಜ್ಜ ಮೊಮ್ಮಗನು ಇಬ್ಬರೂ ಮಕ್ಕಳೇ ಎಂದು ಪ್ರತಿಪಾದಿಸುವ ‘ಇಬ್ಬರೂ ಮಕ್ಕಳೇ’ ಎಂಬ ಕವಿತೆ, ಚಟದ ವಿಶಿಷ್ಟ ವ್ಯಾಖ್ಯಾನದ ‘ಚಟ’ ಕವಿತೆ, ಪರಿಸರ ಕಾಳಜಿಯ ‘ಪಾಳಾಗ ಬೇಕು ಇಳೆ’ ಎನ್ನುವ ದೀರ್ಘ ಕವಿತೆ ಮತ್ತು ‘ಗಿಡದಡಿಯ ಮುದುಕ’ ಕವಿತೆಗಳು ಓದಿಸಿಕೊಳ್ಳವುದರ ಜೊತೆಗೆ ಒಂದಿಷ್ಟು ಸಂದೇಶವನ್ನೂ ನೀಡುತ್ತವೆ. ‘ಗೃಹಲಕ್ಷ್ಮೀ’ ಕವಿತೆ ಪುರುಷರ ನಯವಂಚಕತನ ಮತ್ತು ಆತನ ಹುನ್ನಾರಗಳನ್ನು ತೆರೆದಿಡುತ್ತವೆ. ವಿಜಯಾದಬ್ಬೆಯವರ ‘ನಾರೀಮಣಿಗಳಿಗೊಂದು ಕಿವಿಮಾತು’ ಎಂಬ ಕವಿತೆ ನೆನಪಾಗುತ್ತದೆ. ‘ಗೋಡೆ’ ಕವಿತೆಯಲ್ಲಿ ದೇವರು ದಿಂಡಿರುಗಳನ್ನು ಪೂಜಿಸುವ ಮಗ ಮತ್ತು ಗಾಂಧಿ, ಅಂಬೇಡ್ಕರ್, ಬುದ್ಧ ಬಸವರ ಚಿತ್ರಪಟಗಳನ್ನು ಕೇವಲ ಪೂಜಿಸುವ, ಭಜನೆಗೈಯುವ ಮೊಮ್ಮಗ ಇಬ್ಬರೂ ಅಪಾಯಕಾರಿಗಳೇ.

ಪದ್ಯದ ಕೊನೆಯಲ್ಲಿ ಕವಿ

‘ಇದರ ಅರಿವಿರುವವರಾದರೂ
ಮುರಿದು ಕಟ್ಟಬೇಕು
ಬಿಟ್ ಅವರ
ಹೊಸ ಗೋಡೆಯ’
ಎಂದು ಅಂತ್ಯ ಹಾಡಿದ್ದಾರೆ.
ಮತ್ತೆ ಹೊಸಗೋಡೆಯಾದರೂ ಗೋಡೆಯನ್ನು ಮತ್ತೆ ಕಟ್ಟುವ ಅವಶ್ಯಕತೆಯೇನಿತ್ತು. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲವೆಂಬ ಅಣ್ಣನ ಅಣತಿಯಂತೆ ಗೋಡೆಗಳನ್ನು ಒಡೆದುಹಾಕಿ ಬಯಲಿನಲ್ಲಿ ಬಯಲಾಗಬಹುದಿತ್ತಲ್ಲವೇ ಎನಿಸುತ್ತದೆ.

ಈ ಸಂಕಲನ ಈ ಕಾಲಕ್ಕೆ ತೀರಾ Classic ಆಗಿರುವುದು ಇದರ ಬಹುದೊಡ್ಡ ಶಕ್ತಿ. ಭಾಷೆಯನ್ನು ಸುಲಭವಾಗಿ ಬಳಸುವ ಬಸವರಾಜು ಅವರು ಓದುಗರನ್ನು ಸುಲಭವಾಗಿ ತಲುಪುತ್ತಾರೆ. ಕೆಲವು ಕಡೆ ಬಳಸಿರುವ ಪದಗಳು ಆಡು ಮಾತಿನ ಮಾದರಿಯವು. ಇವುಗಳನ್ನು ಯಥಾವತ್ತಾಗಿ ಬಳಸಿದ್ದಾರೆ. ಅವು ಸ್ಥಳೀಯ ಭಾಷೆ ಮತ್ತು ಸಮುದಾಯದ ಸಾಂಸ್ಕೃತಿಕತೆಯ ಸೂಚಕಗಳಾಗಿರುವುದು ವಿಶೇಷ. ದಲಿತ ಸಾಹಿತ್ಯ ಇತರ ಸಾಹಿತ್ಯಗಳಿಗಿಂತ ಭಿನ್ನವಾಗಿರುವುದು ಇದೇ ಕಾರಣದಿಂದ. ಹೇಳಬೇಕಾದ್ದನ್ನು ಇದ್ದಹಾಗೆಯೇ ಹೇಳುವುದು, ಮಡಿವಂತಿಕೆಯ ಗಡಿಗಳನ್ನು ದಾಟಿ ಬರಹ ಕಟ್ಟುವಿಕೆ, ಮೌನವಾಗಿ ಅಕ್ಷರದಲ್ಲಿಯೇ ಬಂಡಾಯದ ಬಾವುಟ ಹಾರಿಸುವಿಕೆ ‘ಅವ್ವ ಬರಲೇ ಇಲ್ಲ’ ಕವನಸಂಕಲನದ ತೂಕವನ್ನು ಹೆಚ್ಚಿಸುತ್ತದೆ. ನಿಜಕ್ಕೂ ಇವರ ಕಾವ್ಯದೊಳಗಿನ ಪಾತ್ರಗಳು ನಿಜವಾಗಲೂ ‘ಅತೀತರೇ’. ಅವರ ಬರವಣಿಗೆ ಕವಿತೆಯಲ್ಲಿ ‘ಎಲ್ಲವೂ ಮೊಳೆಯುವ ಬೀಜಗಳನ್ನಡೆಯುವುದಿಲ್ಲ..?’ ಎಂಬ ಸಾಲುಗಳನ್ನು ಬರೆದಿರುವ ಕುಕ್ಕರಹಳ್ಳಿ ಬಸವರಾಜು ಅವರು ಕೇವಲ Commercialized ಆದ ಸಾಹಿತ್ಯದ ಬಗೆಗಿನ ಬೇಸರವನ್ನು ಹೊರಹಾಕಿರಲು ಸಾಧ್ಯವಿರಬಹುದು ಎನಿಸುತ್ತದೆ. ಒಂದೇ ಕವನಸಂಕಲನದಲ್ಲಿ ಕಾವ್ಯದ ಕುರಿತು ಇಷ್ಟೊಂದು ಭರವಸೆ ಹುಟ್ಟಿಸಿದ ಬಸವರಾಜು ಅವರು ನಮ್ಮೆಲ್ಲರನ್ನು ಅಗಲಿರುವುದು ಸಾಹಿತ್ಯಕ್ಷೇತ್ರದ ತುಂಬಲಾರದ ನಷ್ಟ.

“ಮೌನ ಮಿಸುಗಾಡದ ಜನ
ತನ್ಮಯತೆಯೆ ಕಣ್ಮುಚ್ಚಿ ಸೊಲ್ಲಾಡದ ಸೂಲು
ನಿಶ್ಯಬ್ದದಲೆ ಲೀನವಾಗಿದ್ದು
ವಪ್ಪತ್ತು ಬಿಟ್ಟು ಎದ್ದೋಯ್ತು”

‘ನಿರಪರಾಧಿ’ ಕವಿತೆಯಲ್ಲಿ ಇವರೇ ಬರೆದ ಸಾಲುಗಳು ಅವರ ಅನುಪಸ್ಥಿತಿಯಲ್ಲಿ ಮತ್ತೆ ಮತ್ತೆ ಕಾಡುತ್ತವೆ.