ನಾನು ವಿದೇಶದಲ್ಲಿರುವ ಪರದೇಶಿ ಎನ್ನಿಸಲಿಲ್ಲ. ಅಮೆರಿಕ  ದೇಶವನ್ನು ನೋಡುವ ದೃಷ್ಟಿಕೋನವೇ ಬದಲಾಯ್ತು. ಆ ದಿನ ನನ್ನುಸಿರಿಗೆ ಉಸಿರು ಕೊಟ್ಟ ಮಾರ್ಟಿನ್. ನನಗೀಗ ಜೀವನ ಬೇಕು ಅನಿಸಲು ಶುರುವಾಯ್ತು. ಒಳಗಿನ ಕಣ್ಣು ಇಂಚಿಂಚೇ ತೆರೆಯ ಹತ್ತಿತು. ಮುಂದಿನ ಎಲ್ಲಾ ದಿನಗಳ ಪ್ರಯಾಣದಲ್ಲಿ ಅಲ್ಲಿನ ಎಲ್ಲೆಡೆಯಲ್ಲೂ ಕೆಳಮಟ್ಟದ ಕೆಲಸ ಎಂದು ಗುರುತಿಸಲ್ಪಟ್ಟಿರುವ ಎಲ್ಲಾ ಕೆಲಸಗಳನ್ನು ಕಪ್ಪು ಜನರೇ ಮಾಡುತ್ತಿದ್ದದ್ದು ಎದ್ದು ಕಾಣುತ್ತಿತ್ತು. ಬಿಳಿಯರ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳಬೇಕೆನ್ನುವ ಹಪಾಹಪಿ ಅವರಲ್ಲಿ ಇನ್ನೂ ಜೀವಂತವಿರುವುದನ್ನು ಕಂಡೆ. ಕಾಮನಬಿಲ್ಲಿನ ಸೌಂದರ್ಯ ಸೃಷ್ಟಿಸುವ ಬಣ್ಣಗಳೇ ಮನುಷ್ಯ ಜೀವನದ ದುರಂತವಾಗಿರುವುದು ನನಗಂತೂ ನೋವಿನ ಸಂಗತಿ.
‘ಕಂಡಷ್ಟು ಪ್ರಪಂಚ’ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

ಇದು ಸಾಧ್ಯವೇ? ಅದು ಸಾಧ್ಯವೇ? ಉಹುಂ, ಅನುಮಾನವೇಯಿಲ್ಲ ಜಗತ್ತಿನ ಎಲ್ಲಾ ಸಾಧ್ಯತೆಗಳಿಗೂ ಬಾಗಿಲು ತೆರೆದುಕೊಂಡೇ ನಿಂತಿರುವ ಜಗತ್ತಿನೊಳಗಿನ ಜಗತ್ತು ಅಮೇರಿಕ ಸಂಸ್ಥಾನ. ಏನೆಲ್ಲಾ ಆಕರ್ಷಣೆ, ಉತ್ಸಾಹ, ಹುಮ್ಮಸ್ಸಿನ ತಾಣವೆನಿಸಿಕೊಂಡಿದ್ದರೂ ಅಲ್ಲಿಗೆ ಹೋದ ಒಂದಷ್ಟು ದಿನಗಳು ನನ್ನನ್ನು ಹಿಡಿದಿಟ್ಟುಕೊಳ್ಳಲು ಸೋತಿತ್ತು ಆ ದೇಶ. ಏನೋ, ಮತ್ತೇನೋ ಹುಡುಕುತ್ತಿದ್ದೆ. ಮನಸ್ಸು ಅರಳುತ್ತಿರಲಿಲ್ಲ, ಮೌನ ತುಂಬುತ್ತಿರಲಿಲ್ಲ. ಆಗತಾನೇ ಆಗಿದ್ದ ಹಸಿಗಾಯವೊಂದು ನೋಯುತ್ತಿತ್ತು. ಔಷಧಕ್ಕೆ ಬಗ್ಗದ್ದು, ಹೇಳಿಕೊಳ್ಳಲು ನಿಲುಕದ್ದು. ಕಳೆದುಕೊಂಡ ಭಾವದಲ್ಲಿಯೇ ತೇಲುತ್ತಾ, ಆಕಾಶದಲ್ಲಿ ದೃಷ್ಟಿ ನೆಟ್ಟು ನ್ಯೂಯಾರ್ಕ್‌ನಿಂದ ವಾಷಿಂಗ್ಟನ್ ಡಿ.ಸಿ. ಕಡೆ ನಡೆದಿದ್ದೆ.

ಓಹ್, ನಿಜಕ್ಕೂ ವಾಷಿಂಗ್ಟನ್ ಡಿ.ಸಿ ಅಮೇರಿಕಾದ ಆತ್ಮವೇ ಸರಿ. ಊರಿಗೆ ಊರೇ ಒಂಥರಾ ಧ್ಯಾನಸ್ಥ ಸ್ಥಿತಿಯಲ್ಲಿರುವಂತೆ ಅನ್ನಿಸುತ್ತೆ. ಸ್ಮಿತ್ಸೋನಿಯನ್ ಸಂಸ್ಥೆಗಳು, ಮ್ಯೂಸಿಯಂಗಳು, ಅಮೇರಿಕಾದ ಸಂಸತ್ತು ದಿ ಕ್ಯಾಪಿಟಾಲ್ , ರಾಷ್ಟ್ರಾಧ್ಯಕ್ಷರ ಮನೆಯಾದ ಶ್ವೇತ ಭವನ, ಆರ್ಲಿಂಗ್ಟನ್ ಸಿಮೆಟ್ಟ್ರಿ (ಇಲ್ಲಿ ಜಾನ್ ಎಫ್ ಕೆನಡಿಯನ್ನು ಹಾಗೂ ನಾಲ್ಕು ಲಕ್ಷಕ್ಕೂ ಹೆಚ್ಚಿನ ಸೈನಿಕರನ್ನು ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸಿದವರನ್ನು ಗೌರವದಿಂದ ಮಣ್ಣು ಮಾಡಲಾಗಿದೆ.) ಫೆಡೆರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಕಚೇರಿ (FBI), ಅಮೇರಿಕಾದ ಸರ್ವೋಚ್ಛ ನ್ಯಾಯಾಲಯ, ಅಚ್ಚುಕಟ್ಟಾದ ರಸ್ತೆಗಳು, ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನಗರವನ್ನು ಸುಂದರವಾಗಿಸಿರುವ ಚೆರ್ರಿ ಬ್ಲಾಸಂ ಮರಗಳು (ಈ ಮರಗಳನ್ನು 1921ರಲ್ಲಿ ಜಪಾನ್ ದೇಶವು ಅಮೇರಿಕಾದೊಡನೆ ಬೆಳೆಯುತ್ತಿರುವ ತನ್ನ ಸ್ನೇಹದ ಪ್ರತೀಕವಾಗಿ ಉಡುಗೊರೆಯಾಗಿ ನೀಡಿತ್ತಂತೆ) ಹೀಗೇ ಇನ್ನೂ ಏನೆಲ್ಲಾ ಇವೆ ಇಲ್ಲಿ.


ಇಪ್ಪತ್ತಕ್ಕೂ ಹೆಚ್ಚು ರಾಷ್ಟ್ರೀಯ ಸ್ಮಾರಕಗಳನ್ನು ಹೊಂದಿರುವ ಈ ನಗರವನ್ನು ಸ್ಮಾರಕಗಳ ನಗರ ಎಂದೇ ಗುರುತಿಸಲಾಗಿದೆ. ಲಿಂಕನ್ ಮತ್ತು ರೂಸ್ವೆಲ್ಟ್ ಸ್ಮಾರಕಗಳ ಸಾಲಿನಲ್ಲಿ ಇಡೀ ಅಮೇರಿಕಾ ಪ್ರವಾಸದಲ್ಲಿ ನನ್ನನ್ನು ಸಂಪೂರ್ಣವಾಗಿ ನನಗೇ ದಕ್ಕಿಸಿಕೊಟ್ಟಿದ್ದು ಎಂದರೆ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌ನ ಸ್ಮಾರಕ. ಇಲ್ಲಿಂದ ಮುಂದಕ್ಕೆ ಅಮೇರಿಕೆಯ ಸ್ವಾದ ಹತ್ತಿಸಿಕೊಡುತ್ತಾ ಹೋದವವನು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್. ಈ ಜೂನಿಯರ್ ಕಿಂಗ್‌ನ ಗುಂಗಿನಲ್ಲಿ ಅಮೇರಿಕಾ ಸುತ್ತುತ್ತಾ ಹೆಚ್ಚು ಹೆಚ್ಚು ಭಾರತೀಯಳಾಗುತ್ತಿದ್ದೆ.

ಲೂಥರ್ ಕಿಂಗ್ ಗಾಂಧಿಯಾಗಿದ್ದಾನೆ ಇಲ್ಲಿ. ಹದಿನೈದು ವರ್ಷ ವಯಸ್ಸಿನ ಥಳ ಥಳ ಹೊಳೆಯುವ ಬಾಲಕನಿಗೆ ಬಸ್ಸಿನ ಚಾಲಕ ಹೇಳುತ್ತಾನೆ “ನೀನೀಗ ಈ ಸೀಟಿನಿಂದ ಏಳಬೇಕು” ಎಂದು. ಉತ್ತರ ತಿಳಿದೂ ಸಣ್ಣದೊಂದು ಅಸಹಾಯಕ ಕ್ರಾಂತಿಯ ಕಿಡಿಯನ್ನು ಮನಸ್ಸಿನ ಕಣ್ಣಿನಲ್ಲಿ ಇಟ್ಟುಕೊಂಡೇ ಬಾಲಕ ಕೇಳುತ್ತಾನೆ “ಯಾಕಾಗಿ?” ಅಂತ. ಆ ದಿನಗಳಲ್ಲಿ ಬಿಳಿಯರಿಗಾಗಿ ಕರಿಯರು ಎದುರಿಸಲೇ ಬೇಕಿದ್ದ ದೌರ್ಜನ್ಯಗಳಲ್ಲಿ ಇದೂ ಒಂದು. ಹೀಗೇ ಒಂದೊಂದೇ ಭೇದಗಳನ್ನು ನೋಡಿ, ಎದುರಿಸಿ, ಮಥಿಸಿ, ಒಳನೋಟ ಬೆಳೆಸಿಕೊಂಡಿದ್ದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮುಂದೊಮ್ಮೆ ಈ ಜಗತ್ತಿನಲ್ಲಿ ಗಾಂಧಿಗೆ ಪರ್ಯಾಯವಾಗಿ ನಿಂತ.

ನಾನೀಗ ಅವನ ಸ್ಮಾರಕದ ಹೆಬ್ಬಾಗಿಲಿನಲ್ಲಿ ನಿಂತಿದ್ದೆ. ಇಲ್ಲೊಂದು ಅನೂಹ್ಯ ಶಾಂತಿ ಇದೆ. ತಾಯಿಯ ಗರ್ಭದಲ್ಲಿ ಇರಬಹುದಾದ ನೆಮ್ಮದಿಯ ಭಾವ ಇದೆ ಇಲ್ಲಿ. ಲಿಂಕನ್ ಮತ್ತು ರೂಸ್ವೆಲ್ಟ್ ಅವರುಗಳ ಸ್ಮಾರಕಗಳಿಗೆ ನೇರವಾಗಿ “ನಾಯಕತ್ವದ ಸಾಲು” ರೂಪಿಸುತ್ತಾ ಎದ್ದು ನಿಂತಿದೆ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸ್ಮಾರಕ. ನಾಲ್ಕು ಎಕರೆಯ ಜಾಗದಲ್ಲಿ ಕಪ್ಪು ಮತ್ತು ಬಿಳಿ ನುಣುಪು ಶಿಲೆಗಳನ್ನು ಬಳಸಿ ಹೆಚ್ಚಿನ ಆಡಂಬರವಿಲ್ಲದೆ, ಇತಿಹಾಸದ ಕರಾಳ ಮುಖವನ್ನು ತೋರಿಸುತ್ತಾ, ಭವಿಷ್ಯದ ಚರಿತ್ರೆಯನ್ನು ಬಿಂಬಿಸುತ್ತಿರುವ ಈ ಜಾಗದಲ್ಲಿ ಅಗಾಧ ಎತ್ತರ, ಅಗಲವಿರುವ ತಿರುವು ಬಾಗುಗಳುಳ್ಳ ನುಣುಪು ಕಪ್ಪು ಶಿಲೆಯ ಮೇಲೆ ಆತನ ವಾಕ್ಯೋಕ್ತಿಗಳನ್ನು ಕಡೆದಿಡಲಾಗಿದೆ.

ಲಿಂಕನ್ ಮತ್ತು ರೂಸ್ವೆಲ್ಟ್ ಸ್ಮಾರಕಗಳ ಸಾಲಿನಲ್ಲಿ ಇಡೀ ಅಮೇರಿಕಾ ಪ್ರವಾಸದಲ್ಲಿ ನನ್ನನ್ನು ಸಂಪೂರ್ಣವಾಗಿ ನನಗೇ ದಕ್ಕಿಸಿಕೊಟ್ಟಿದ್ದು ಎಂದರೆ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ನ ಸ್ಮಾರಕ. ಇಲ್ಲಿಂದ ಮುಂದಕ್ಕೆ ಅಮೇರಿಕೆಯ ಸ್ವಾದ ಹತ್ತಿಸಿಕೊಡುತ್ತಾ ಹೋದವವನು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್.

ಕಿರಿದಾದ ಒಳಗನ್ನು ಹೊಕ್ಕು ಹಿಂತಿರುಗಿ ನೋಡಿದರೆ ನಾವು ಒಳಬಂದ ಎರಡೆರಡು ಬಂಡೆಗಳ ನಡುವನ್ನು “Mountain of Despair” ಎಂದು ಗುರುತಿಸಲಾಗಿದೆ ಎನ್ನುವುದು ತಿಳಿಯುತ್ತದೆ. ಬಲಕ್ಕೆ ತಿರುಗಿ ನೋಡಿದರೆ ಮೂವತ್ತು ಅಡಿ ಅಳತೆಯ, ಅದಕ್ಕೆ ಸರಿಹೊಂದುವಷ್ಟು ಅಗಲದ ಬಿಳಿ ಶಿಲೆಯಲ್ಲಿ, ಎದೆಯ ಮೇಲೆ ಕೈಕಟ್ಟಿಕೊಂಡು ಕಣ್ಣುಗಳಲ್ಲಿ ಆತ್ಮವಿಶ್ವಾಸದ ಕಿಡಿ ಹೊತ್ತಿಸಿಕೊಂಡು ನಿಂತಿರುವ ಮಾರ್ಟಿನ್ ನಿಜಕ್ಕೂ ಕಿಂಗ್ ಆಗಿ ಕಾಣುತ್ತಾನೆ. ಇಂದಿಗೆ 60 ವರ್ಷಗಳ ಹಿಂದೆ, 28 ಆಗಸ್ಟ್ 1963 ರಂದು, ಇದೇ ಸ್ಮಾರಕದ ಬಲ ತುದಿಯಲ್ಲಿರುವ ಲಿಂಕನ್ ಸ್ಮಾರಕದ ಮೆಟ್ಟಿಲುಗಳ ಮೇಲೆ ನಿಂತು ಮಾರ್ಟಿನ್ ವರ್ಣಭೇದವನ್ನು ತೊಡೆದು ಹಾಕಬೇಕೆಂಬ ತನ್ನ ಕನಸನ್ನು ಅಲ್ಲಿ ನೆರೆದಿದ್ದ ಮನಸ್ಸುಗಳಲ್ಲಿ ಬಿತ್ತಿದ್ದ. ಅಂದು ತನ್ನ ಸ್ಮಾರಕವನ್ನು ಇದೇ ಸಾಲಿನಲ್ಲಿ ಎದುರು ನೋಡದ ನಿಸ್ಪೃಹ, ಸಮಾಜಮುಖಿ.

ತಾರತಮ್ಯಗೊಂಡ ಒಡಲುರಿಯನ್ನು ಅರಿತಿದ್ದವ ಮಾತ್ರ ಆಗಿದ್ದ ಅವನು. ತಲೆಯೆತ್ತಿ ಅವನ ಪ್ರತಿಮೆ ಎದುರು ನಿಂತಾಗ ನನ್ನ ಕಿವಿ ರೋಮರೋಮಗಳಲ್ಲಿ ರಿಂಗುಣಿಸುತ್ತಿತ್ತು “I have a dream that my four little children will one day live in a nation where they will not be judged by the color of their skin but by the content of their character” ಯಾಕೋ ಮನಸ್ಸು ಅನಾಯಾಸವಾಗಿ “ಒಬಾಮ” ಇದ್ದ ಶ್ವೇತಭವನದೆಡೆಗೆ ಸೆಳೆಯುತ್ತಿತ್ತು. ಮನದುಂಬುವಷ್ಟು ಹೊತ್ತು ಆತನ ಕಣ್ಣೊಳಗೆ ಕಣ್ಣು ತಾಗಿಸಿ ಏನೆಲ್ಲಾ ನೋವುಗಳನ್ನು ಅವುಡುಗಚ್ಚಿ ಅನುಭವಿಸಿದನಲ್ಲ ಅಂದುಕೊಂಡು ನೋಯುತ್ತಿದ್ದೆ. ಅಂಬೇಡ್ಕರ್ ಕೈಹಿಡಿದು ಭುಜ ಸವರಿದಂತಾಯ್ತು. “ಛೇ, ಮನುಷ್ಯ ಮಾತ್ರ ಯಾಕಿಷ್ಟು ಕ್ರೂರಿಯಾಗಬಲ್ಲ?” ಎಂದುಕೊಂಡು ಪಕ್ಕಕ್ಕೆ ತಿರುಗಿದೆ.

ಅಲ್ಲೊಂದು ಸೋವನಿಯರ್ ಶಾಪ್ ಕಂಡಿತು. ಸರಸರನೆ ಒಳಹೊಕ್ಕವಳು ಒಮ್ಮಿಂದೊಮ್ಮೆಗೆ ಭಾವುಕಳಾಗಿಬಿಟ್ಟೆ. ಕಣ್ಣು ತುಂಬಿ ಬಂತು. ಅಲ್ಲಿದ್ದ ಪುಸ್ತಕಗಳ ಸ್ಟ್ಯಾಂಡಿನಲ್ಲಿ “ನನ್ನ” ಗಾಂಧಿಯ ಆಲೋಚನೆ, ಚಿಂತನೆ, ಮಾತುಗಳಿದ್ದ ಪುಸ್ತಕ ಎದ್ದು ಕಾಣುತ್ತಿತ್ತು. ಹಸು ಕರುವನ್ನು ನೆಕ್ಕುವಂತೆ ಆ ಪುಸ್ತಕದ ಮೇಲೆ ಅಚ್ಚಾಗಿದ್ದ ಗಾಂಧಿ ಚಿತ್ರವನ್ನು ಮುದ್ದಿಸಿದೆ. ನನ್ನ ಕಣ್ಣ ಹನಿಯಿಂದ ಹಾಳೆಗಳು ಒದ್ದೆ ಒದ್ದೆ. ಅದರ ಪಕ್ಕದಲ್ಲೇ ಮಾರ್ಟಿನ್‌ನ ಭಾಷಣಗಳಿದ್ದ ಪುಸ್ತಕವಿತ್ತು. ಮಾರಾಟಗಾರನಾಗಿದ್ದ ಮಾರ್ಟಿನ್‌ನಂತೆಯೇ ಇದ್ದ ಯುವಕನೊಬ್ಬ ಮತ್ತು ನಾನು ಬಿಟ್ಟರೆ ಮತ್ತ್ಯಾರೂ ಅಲ್ಲಿ ಇರಲಿಲ್ಲ. ನಾನು ಅನುಭವಿಸುತ್ತಿದ್ದದ್ದು ಖುಷಿಯೋ, ವೇದನೆಯೋ ಒಂದೂ ಅರಿಯದೆ ಗೊಂದಲದ ಮೌನದಲ್ಲಿದ್ದ ಆ ಹುಡುಗ. ಆದರೆ ಅವನ ಕಣ್ಣಿನಲ್ಲೂ ಒಂದು ಬೆಳಕಿತ್ತು. ಅಲ್ಲಿ ಮಾನವೀಯತೆಯ ಭರವಸೆ ಕಂಡಿತ್ತು.

ಡೇವಿಡ್ ಕೋಲ್ಬೆರ್ಟ್ ಬರೆದಿರುವ “ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ – 10 ದಿನಗಳು” ಪುಸ್ತಕ ಕೊಂಡುಕೊಂಡೆ. ಮತ್ತೊಮ್ಮೆ ಅವನ ಪ್ರತಿಮೆಯ ಬಳಿ ಬಂದು, ಕಾಲ್ಬುಡದಲ್ಲಿ ಕಾಲುಚಾಚಿ ಕುಳಿತು ಇಡೀ ಪುಸ್ತಕವನ್ನು ಒಂದೇ ಉಸುರಿಗೆ ಓದಿ ಮುಗಿಸಿದೆ. ಆತನ ಜೀವನದ ಹತ್ತು ಉತ್ಕಟ ದಿನಗಳು ಆ ಪುಸ್ತಕದಲ್ಲಿ ದಾಖಲಾಗಿವೆ. 14325 ದಿವಸಗಳು ಮನುಷ್ಯ ದೇಹದಲ್ಲಿ ಚೇತನದಂತೆ ಬದುಕಿದ್ದ ಮಾರ್ಟಿನ್ ಕೇವಲ 10 ದಿನಗಳ ತನ್ನ ಅನುಭವದಿಂದ ಜಗತ್ತಿಗೇ ಹೊಸ ನಕ್ಷೆ ಬರೆದುಕೊಟ್ಟದ್ದನ್ನು ಬರೀ ಅದ್ಭುತ ಎಂದು ಬಣ್ಣಿಸಿಬಿಟ್ಟರೆ ಅದು ಸಾಹಿತ್ಯವಾದೀತು ಬದುಕಾಗಲಾರದು.

ಆತ ಗಾಂಧಿಯಿಂದ ಪ್ರಭಾವಿತನಾಗಿದ್ದು ಈಗ ಜಗಜ್ಜಾಹೀರು. ಅದಕ್ಕೇ ಆತನ ಪ್ರತಿ ಪದವೂ ಪೂರ್ತಿ ಪೂರ್ತಿ ಗಾಂಧಿ. “ಒಂದೇ ಒಂದು ಸಮುದಾಯವು ಮೌಢ್ಯದಲ್ಲಿ ಇರುವವರೆಗೂ ನಿಜಾರ್ಥದ ಪ್ರಜಾಪ್ರಭುತ್ವ ಸಾಧ್ಯವಿಲ್ಲ” ಎಂದು ಹೇಳುವಾಗಲೋ “ಗಾಯಗೊಳಿಸದೆಯೂ ಖಚಿತವಾಗಿ, ಫಲಪ್ರದವಾಗಿ, ಹಿಂಸೆಯನ್ನು ಮತ್ತು ಅನ್ಯಾಯವನ್ನು ಕತ್ತರಿಸಬಲ್ಲ ಏಕೈಕ ಅಸ್ತ್ರವೆಂದರೆ ಅಹಿಂಸೆ” ಎನ್ನುವಾಗಲೇ ಆಗಲೀ ಮಾರ್ಟಿನ್ ಲೂಥರ್ ಕಿಂಗ್ ಗಾಂಧಿಯನ್ನೇ ಮಾರ್ದನಿಸುತ್ತಾನೆ.

ಇಲ್ಲಿಂದ ಹೊರಟಾಗ ನಾನು ವಿದೇಶದಲ್ಲಿರುವ ಪರದೇಶಿ ಎನ್ನಿಸಲಿಲ್ಲ. ಆ ದೇಶವನ್ನು ನೋಡುವ ದೃಷ್ಟಿಕೋನವೇ ಬದಲಾಯ್ತು. ಆ ದಿನ ನನ್ನುಸಿರಿಗೆ ಉಸಿರು ಕೊಟ್ಟ ಮಾರ್ಟಿನ್. ನನಗೀಗ ಜೀವನ ಬೇಕು ಅನಿಸಲು ಶುರುವಾಯ್ತು. ಒಳಗಿನ ಕಣ್ಣು ಇಂಚಿಂಚೇ ತೆರೆಯ ಹತ್ತಿತು. ಮುಂದಿನ ಎಲ್ಲಾ ದಿನಗಳ ಪ್ರಯಾಣದಲ್ಲಿ ಅಲ್ಲಿನ ಎಲ್ಲೆಡೆಯಲ್ಲೂ ಕೆಳಮಟ್ಟದ ಕೆಲಸ ಎಂದು ಗುರುತಿಸಲ್ಪಟ್ಟಿರುವ ಎಲ್ಲಾ ಕೆಲಸಗಳನ್ನು ಕಪ್ಪು ಜನರೇ ಮಾಡುತ್ತಿದ್ದದ್ದು ಎದ್ದು ಕಾಣುತ್ತಿತ್ತು. ಬಿಳಿಯರ ಜೊತೆಗೆ ತಮ್ಮನ್ನು ಗುರುತಿಸಿಕೊಳ್ಳಬೇಕೆನ್ನುವ ಹಪಾಹಪಿ ಅವರಲ್ಲಿ ಇನ್ನೂ ಜೀವಂತವಿರುವುದನ್ನು ಕಂಡೆ. ಕಾಮನಬಿಲ್ಲಿನ ಸೌಂದರ್ಯ ಸೃಷ್ಟಿಸುವ ಬಣ್ಣಗಳೇ ಮನುಷ್ಯ ಜೀವನದ ದುರಂತವಾಗಿರುವುದು ನನಗಂತೂ ನೋವಿನ ಸಂಗತಿ. ಮಾರ್ಟಿನ್‌ನ ನಾಡಲ್ಲಾಗಲೀ ಗಾಂಧಿಯ ನೆಲದಲ್ಲಾಗಲೀ ಬಣ್ಣದ ಕ್ರೌರ್ಯ ಇನ್ನೂ ಬದಲಾಗದ್ದು ಜೀವ ಹಿಂಡುವ ವಿಪರ್ಯಾಸವೇ ಹೌದು ಅಂದುಕೊಂಡು ವಾಷಿಂಗ್ಟನ್ ಡಿಸಿಯಿಂದ ಹೊರಟೆ.‌

ಸಣ್ಣ ತುಂತುರು ಮಳೆ, ತುಸು ಹೆಚ್ಚೇ ಎನಿಸುವಷ್ಟು ಚಳಿಯ ಸ್ವಾಗತ ಕೋರಿ ಹಿತ ನೀಡಿದ್ದ ಈ ನಗರದಲ್ಲಿ ಇದ್ದಷ್ಟು ದಿನಗಳೂ ಅದೆಷ್ಟು ಕಿಲೋಮೀಟರ್‌ಗಳಷ್ಟು ನಡೆದೆನೋ?! ಕ್ಯಾಪಿಟಾಲ್ ಕಟ್ಟಡದ ಮೇಲಿನ ಸ್ಟ್ಯಾಚು ಆಫ್ ಫ್ರೀಡಂಅನ್ನು ನೋಡಿಕೊಂಡು, ಮನಸೋಯಿಚ್ಛೆ ನಡೆದು, ಅಲ್ಲಿಯೇ ಮೆಟ್ಟಿಲುಗಳ ಮೇಲೆ ಕೂರುತ್ತಿದ್ದಾಗ ಬೆರಳೆಣಿಕೆಗೂ ಕಡಿಮೆ ಇರುತ್ತಿದ್ದ ಜನಸಂಖ್ಯೆ, ಅಲ್ಲಿನ ಶಾಂತಿ ನೆಮ್ಮದಿಯನ್ನು ಹೆಚ್ಚಿಸುತ್ತಿತ್ತು. ಏಕಾಂತದೊಡನೆ ಮಾತಿಗಿಳಿಯಬೇಕಾದರೆ ವಾಷಿಂಗ್ಟನ್ ಡಿಸಿಯ ರಸ್ತೆಗಳಲ್ಲೊಮ್ಮೆ ನಡೆದು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌ನ ಸ್ಮಾರಕದಲ್ಲಿ ಕುಳಿತು ಬರಲೇ ಬೇಕು.