ಅವನು ಓಡುವುದರಲ್ಲಿ ಯಾವಾಗಲೂ ಪ್ರಥಮ.. ಹಾಗಾಗಿ ಅವನೇನೊ ತಪ್ಪಿಸಿಕೊಂಡ. ಮರವನ್ನು ಹತ್ತುವುದರಲ್ಲಿ ಅಂತಹ ಅನುಭವವೇನು ಇಲ್ಲದ ನಾನು ನಿಧಾನವಾಗಿ ಮರ ಇಳಿಯುವುದರಲ್ಲಿ ಸಿಕ್ತಿಮ್ಮಜ್ಜ ಹತ್ತಿರವಾಗಿದ್ದ. ಅವನು ಹತ್ತಿರ ಬರುವುದು ಕಂಡದ್ದೇ ಎದೆಬಡಿತ ಜೋರಾಗಿತ್ತು. ಕೈ ಕಾಲುಗಳು ನಡುಗಲು ಪ್ರಾರಂಭಿಸಿದ್ದವು. ನನಗೆ ಬೇರೆ ದಾರಿ ಇರಲಿಲ್ಲ. ನಾನು ಮರದಿಂದ ಇಳಿಯಲಿಲ್ಲ, ಬದಲು ಅದರ ಮಧ್ಯದಲ್ಲಿ ಅವಿತುಕೊಂಡೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ
ಹಳ್ಳಿಯ ಬದುಕಿನ ಕೆಲವೊಂದು ಘಟನೆಗಳು ನಮ್ಮ ಸ್ಮೃತಿಪಟಲದಿಂದ ಮರೆಯಾಗುವುದಿಲ್ಲ. ಹಾಗೆಯೇ ಅಚ್ಚೊತ್ತಿರುತ್ತವೆ. ಬಾಲ್ಯದ ತುಂಟಾಟಗಳಿಗೆ ಪರ್ಯಾಯವಾದುದು ಯಾವುದಿದೆ. ಅವು ನೀಡುವ ಆನಂದಕ್ಕೆ ಸಮನಾದುದು ಯಾವುದೂ ಇಲ್ಲ. ಮತ್ತೆ ಮತ್ತೆ ನೆನಪಾಗುವುದು ಆ ಮಾವಿನತೋಪು… ಈಗಲೂ ಅದರ ನೆನಪು ನನ್ನೆದೆಯಲಿ ಸದಾ ಹಸಿರು. ಅದಕ್ಕೆ ಕಾರಣವೂ ಇದೆ. ಬಾಲ್ಯದಲ್ಲಿ ಅದರ ಬಗ್ಗೆ ನನ್ನಜ್ಜಿ ವಿಧ ವಿಧದ ಕತೆಗಳನ್ನು ಹೇಳುತ್ತಿದ್ದಳು. ಅದರಲ್ಲಿ ಒಂದು ಕತೆ ಮರೆಯಲಾಗದ್ದು. ಬಹುಶಃ ಆ ಕತೆಯಿಂದಲೆ ಅದು ನೆನಪಾಗಿ ಉಳಿದಿದೆ ಎನಿಸುತ್ತದೆ.
ಮಾವಿನ ತೋಪೆಂದರೆ ಊರಿಂದ ಅರ್ಧ ಪರ್ಲಾಂಗು ದೂರ ಇರುವ ಕೆರೆಯ ಹಿಂಭಾಗದಲ್ಲಿ ಬರುವ ನಮ್ಮೂರಿನ ಗೌಡರ ಸುಮಾರು ಎರಡು ಎರಡೂವರೆ ಎಕರೆ ಜಮೀನಿನಲ್ಲಿದ್ದ ಇಡೀ ಊರಿನ ಒಂದೆ ಮಾವಿನ ತೋಪು ಅದಾಗಿತ್ತು. ಅದರ ಪಕ್ಕದಲ್ಲೆ ಒಂದು ವಿಶಾಲವಾದ ಬಾವಿ ಇತ್ತು. ಅದು ಬೇಸಿಗೆಯಲ್ಲಿ ಈಜಾಡಲು ಬಹು ಅಚ್ಚುಮೆಚ್ಚಿನದಾಗಿತ್ತು. ಬೇಸಿಗೆಯಲ್ಲಿ ಈಜಾಡುವುದು ಮಾವಿನ ತೋಪಿಗೆ ಹೋಗುವುದು ಹಾಗೂ ಅಲ್ಲಿ ಮಾವಿನ ಹಣ್ಣುಗಳನ್ನು ಕೀಳುವುದು ನಮ್ಮ ಬೇಸಿಗೆಯ ದಿನ ನಿತ್ಯದ ಕೆಲಸವಾಗಿತ್ತು. ಇದನ್ನೆಲ್ಲ ನಮಗಿಂತ ದೊಡ್ಡ ಹುಡುಗರ ಜೊತೆ ಸೇರಿ ಮಾಡುತ್ತಿದ್ದೆವು. ಅವಾಗಲೆಲ್ಲಾ ನನ್ನಜ್ಜಿ ಅಲ್ಲಿಗೆ ಹೆಚ್ಚು ಹೋಗ್ಬೇಡ ಅಲ್ಲಿ ಹೋದರೆ ಉಳಿಯುವುದು ಕಷ್ಟ ಎಂದು ಹೆದರಿಸುತ್ತಿದ್ದರು. ಅದರ ಹಿಂದೆ ಒಂದು ಕತೆಯೆ ಇದೆ ಎನ್ನುತ್ತಿದ್ದಳು. ಬಲವಂತ ಪಡಿಸಿದಾಗೊಮ್ಮೆ ಆ ಕತೆಯನ್ನು ಹೇಳಿದ್ದಳು.
ಮಾವಿನ ತೋಪಿಗೆ ಹೊಂದಿಕೊಂಡಂತೆ ಅನತಿ ದೂರದಲ್ಲಿ ಒಂದು ಬೃಹತ್ತಾದ ಬಂಡೆಯೊಂದು ಇದೆ. ಅದನ್ನು ತೋಪ್ಗುಂಡಯ್ಯ ಎಂದೆ ಕರೆಯುತ್ತಿದ್ದರು. ಅದರಿಂದ ಉದ್ಭವಿಸಿದ ಆಂಜನೇಯ ಪಕ್ಕದ ಊರಿನಲ್ಲಿ ನೆಲೆಸಿದ್ದಾನೆ. ಆದ್ದರಿಂದ ಅದು ಮಹತ್ವದ ಬಂಡೆ ಎಂಬುದು ಅಜ್ಜಿಯ ಉದ್ಘಾರವಾಗಿತ್ತು. ಅದಕ್ಕೂ ಈ ಮಾವಿನ ತೋಪಿಗೂ ಸಂಬಂಧವಿದೆ. ಆ ಕಾರಣಕ್ಕಾಗಿ ನೀವು ಅಲ್ಲಿಗೆ ಹೋಗಬಾರದು ಎಂದು ಹೇಳುತ್ತಿದ್ದಳು.’
ಒಮ್ಮೆ ನಿಮ್ಮ ತಾತ ಪಕ್ಕದ ಊರಿಗೆ ಕೆಲಸದ ನಿಮಿತ್ತ ಹೋಗಿದ್ದರು. ಬರುವುದಕ್ಕೆ ಕತ್ತಲಾಗಿತ್ತು. ಆದರು ನಿಮ್ಮ ಅಜ್ಜ ಗಟ್ಟಿಗ, ಒಬ್ಬನೆ ನಡೆದುಕೊಂಡು ಬರುವಾಗ ಮಾವಿನ ತೋಪನ್ನು ದಾಟಿಯೆ ಹೋಗಬೇಕಾಗಿತ್ತು. ಅದು ಆ ತೋಪಿನ ನಡುವಿನ ದಾರಿ… ಬೃಹತ್ತಾಗಿ ಬೆಳೆದ ಮರಗಳು ಮತ್ತು ಆ ನಿರ್ಜನ ಪ್ರದೇಶ ಕತ್ತಲಲ್ಲಿ ಎಂತಹವರನ್ನೂ ಎದೆ ನಡುಗಿಸುತ್ತಿತ್ತು. ಆದರೂ ಧೈರ್ಯ ತಂದುಕೊಂಡು ನಡೆದುಕೊಂಡು ಬರುತ್ತಿದ್ದಾನೆ. ಮಾವಿನ ತೋಪಿಗೆ ಬರುವಷ್ಟರಲ್ಲಿ ಇವತ್ತು ಅಮಾವಾಸ್ಯೆಯ ದಿನ ಎಂಬುದು ನೆನಪಾಗಿದೆ. ಅದು ಅವನೊಳಗಿದ್ದ ಭಯ ಹೆಚ್ಚಾಗಲು ಕಾರಣವಾಗಿದೆ. ಆದರೂ ನಡೆದುಕೊಂಡು ಬರುವಾಗ ಅತ್ತ ಇತ್ತ ನೋಡದೆ ಬಂದ ಬಂದ ಬರುತ್ತಲೆ…. ಇದ್ದಾನೆ. ಇದ್ದಕ್ಕಿದ್ದಂತೆ ಕಪ್ಪನೆಯ ಬೃಹತ್ತಾದ ಆಕಾರವೊಂದು ಕಣ್ಣೆದುರಿಗೆ ನಿಂತಂತಾಗಿದೆ. ಅದನ್ನು ನೋಡಿದ್ದೇ, ಏನೂ ತೋಚದೆ ಸುಮ್ಮನೆ ಏದುಸಿರು ಬಿಡುತ್ತ ನಿಂತಿದ್ದಾನೆ. ಕತ್ತಲೆಯಲ್ಲೂ ಆತನಿಗೆ ಅದರ ಆಕಾರ ಸ್ಪಷ್ಟವಾಗಿ ಕಂಡಿದೆ. ಅದೊಂದು ಹಿಂದೆಂದೂ ನೋಡಿರದ ದೊಡ್ಡನೆಯ ಕೊಂಬುಳ್ಳ, ದೊಡ್ಡ ಬಾಲದ ಮಾಂಸಖಂಡಗಳಿಂದ ತುಂಬಿರುವ ಯಮನ ಕೋಣದಂತಿರುವ ಕೋಣವಾಗಿತ್ತು. ಅದನ್ನು ನೋಡಿ ಅಜ್ಜ ಒಮ್ಮೆಲೇ ಬೆವತ್ತಿದ್ದಾನೆ. ಅದು ಇವನನ್ನು ಗಮನಿಸಲಿಲ್ಲ. ಅದರ ಬಾಲವೆ ಅಷ್ಟು ದೊಡ್ಡದಿತ್ತು. ಸುಮ್ಮನೆ ನಡುಗುತ್ತ ನಿಂತಿದ್ದಾನೆ. ಅದರ ಕೊಂಬುಗಳೆ ಎರಡು ಮಾರು ದೊಡ್ಡದಿತ್ತು. ಅದು ಒಮ್ಮೆ ನನ್ನನ್ನು ನೋಡಿ ಮಾಯವಾಯಿತು. ನಾನು ಅಲ್ಲಿಂದ ಒಂದೆ ಉಸಿರಿಗೆ ಓಡಿಬಂದು ಮನೆ ಸೇರಿದ್ದೆ” ಎಂದು ಆಗಾಗ ಮನೆಯಲ್ಲಿ ಹೇಳುತ್ತಿದ್ದನಂತೆ. ಅದಾದ ನಂತರದ ದಿನಗಳಲ್ಲಿ ಕತ್ತಲಲ್ಲಿ ಅಲ್ಲಿ ಓಡಾಡುವುದನ್ನೆ ಬಿಟ್ಟಿದ್ದನು. ಎಂದಾಗ ನಮಗೆ ಕುತೂಹಲ ಹೆಚ್ಚಿ ಅಲ್ಲಿ ಅಷ್ಟು ದೊಡ್ಡದಾದ ಕೋಣ ಬರಲು ಸಾಧ್ಯವೆ ಎಂದು ಪ್ರಶ್ನಿಸಿದ್ದೆವು. ಅಜ್ಜಿಯ ಹತ್ತಿರ ಅದಕ್ಕೂ ಉತ್ತರವಿತ್ತು. ಈ ಹಿಂದೆ ತಿಳಿಸಿದಂತೆ ತೋಪ್ಗುಂಡಯ್ಯ ಎಂದು ಕರೆಯುವ ಆ ಬೃಹತ್ ಬಂಡೆ ವಿಶೇಷವಾದುದು. ಅದರಡಿಯಲ್ಲಿ ಬೇಕಾದಷ್ಟು ಬಂಗಾರದ ಹೊನ್ನಿದೆ. ಅದನ್ನು ಕಾಯುವ ಸಲುವಾಗಿಯೆ ಈ ಕೋಣವಿದೆ ಎನ್ನುತ್ತಿದ್ದಳು. ಅಲ್ಲಿ ಅಷ್ಟೊಂದು ಬಂಗಾರ ಬರಲು ಹೇಗೆ ಸಾಧ್ಯ? ಮನುಷ್ಯರ ಕಣ್ಣಿಗೆ ಕಾಣದ ಕೋಣ ಕಾಯುವುದಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡಿದರೂ ಆ ಕೋಣದ ವರ್ಣನೆಯೆ ನನ್ನನ್ನು ಭಯಭೀತನನ್ನಾಗಿಸಿ ಅದರ ಬಗ್ಗೆ ಕೇಳುವುದನ್ನೆ ಬಿಟ್ಟು ಬಿಟ್ಟೆ. ಆದರೂ ಮಾವಿನ ತೋಪಿನ ಹತ್ತಿರ ಬಂದಾಗ ಅದರ ನೆನಪಾಗಿ ಭಯದ ತುಣುಕೊಂದು ಮನಸ್ಸಿನ ಮೂಲೆಯಲ್ಲಿ ಹಾದು ಹೋಗುತ್ತಿತ್ತು.
ಹೀಗೆಯೆ ಬೇಸಿಗೆಯ ಕಾಲದ ಒಂದು ದಿನ ನಾನು ಗೆಳೆಯರೆಲ್ಲರೂ ಸೇರಿ ಆ ಮಾವಿನ ತೋಪಿನ ಅನತಿ ದೂರದ ಬಾವಿಯಲ್ಲಿ ಎಲ್ಲರೂ ಈಜು ಹೊಡೆದವು. ನಂತರ ಎಂದಿನಂತೆ ಇವತ್ತು ಏನಾದರೂ ಮಾಡಿ ಆ ಮಾವಿನ ಮರದ ಹಣ್ಣುಗಳನ್ನು ಕಿತ್ತು ತರಬೇಕು ಎಂದು ಮೊದಲೆ ಯೋಜಿಸಿದ್ದೆವು. ಆ ಮರ ಈ ವರ್ಷ ಅತಿಹೆಚ್ಚು ಕಾಯಿಗಳನ್ನು ಬಿಟ್ಟಿತ್ತು. ಓರಗೆಯ ಗೆಳೆಯರೆಲ್ಲರೂ ತಾವು ಇಷ್ಟು ಹಣ್ಣು ಕಿತ್ತುಕೊಂಡು ಬಂದ್ವಿ ಎಂದು ಲೆಕ್ಕವನ್ನು ಹೇಳುವಾಗ ನಾವ್ಯಾಕೆ ಕಿತ್ಕೊಂಡು ಬರಬಾರ್ದು ಅನಿಸಿತ್ತು. ಆದರೆ ನಾವು ಯೋಜನೆ ಹಾಕಿಕೊಳ್ಳುವಷ್ಟರಲ್ಲಿ, ಪ್ರತಿಸಲ ಹಣ್ಣುಗಳು ಖಾಲಿಯಾಗುತ್ತಿರುವುದನ್ನು ಕಂಡಿದ್ದ ಊರಿನ ಗೌಡ, ನಮ್ಮೆಲ್ಲರಿಗೂ ಮುಂಚಿತವಾಗಿಯೇ ಹಣ್ಣನ್ನು ವ್ಯಾಪಾರಿಯೊಬ್ಬನಿಗೆ ಗುತ್ತಿಗೆಗೆ ಕೊಟ್ಟಿದ್ದ. ಆತನು ತೋಟವನ್ನು ಕಾಯುವುದಕ್ಕೆ ನಮ್ಮೂರಿನವನೊಬ್ಬನನ್ನು ನೇಮಿಸಿಕೊಂಡಿದ್ದ. ಆತನನ್ನು ನಾವು ಸಿಕ್ತಿಮ್ಮಜ್ಜ ಎಂದೆ ಕರೆಯುತ್ತಿದ್ದೆವು. ಆತ ಬಹಳ ಕೋಪಿಷ್ಟ, ಆದರೆ ನಿಷ್ಟೆಯಿಂದ ತೋಟವನ್ನು ಕಾಯುತ್ತಿದ್ದನು.. ಆ ತೋಟಕ್ಕೆ ಎರಡು ಗೇಟುಗಳಿದ್ದವು. ಗೇಟುಗಳೆಂದರೆ ಕಬ್ಬಿಣದದ್ದಲ್ಲ. ಮುಳ್ಳಿನ ಕಂಟಿಯ ದೊಡ್ಡ ಇಡಿಗಂಟು ಅಲ್ಲಿರುತ್ತಿತ್ತು. ಅದು ಸೀಜನ್ ಮುಗಿಯುವವರೆಗೆ ಮಾತ್ರ. ನಂತರ ಅದನ್ನು ತೆಗೆದು ಬಿಡುತ್ತಿದ್ದರು. ಸುತ್ತಲೂ ಮುಳ್ಳಿನ ಬೇಲಿ ಇರುತ್ತಿತ್ತು. ಬಹಳ ಹಳೆಯ ತೋಪು ಅದಾಗಿರುವುದರಿಂದ ಸುತ್ತಲೂ ಹೊಂಗೆ, ಬೇವು, ಬೇಟೆಗಿಡ, ಹುಲಿಗಿಡ, ತೊಗಸೆ ಗಿಡ, ತಂಕಟೆಗಿಡ, ಇವುಗಳ ಜೊತೆಗೆ ಬೃಹತ್ತಾಗಿ ಬೆಳೆದಿರುವ ಲಂಟಾನ ಆ ತೋಪಿಗೊಂದು ಬೃಹತ್ತಾದ ನೈಸರ್ಗಿಕವಾದ ರಕ್ಷಣೆಯನ್ನು ಒದಗಿಸಿದ್ದವು. ಮಾವಿನ ಹಣ್ಣುಗಳನ್ನು ಕದಿಯಬೇಕೆಂದರೆ ಇವೆಲ್ಲವುಗಳನ್ನು ಎದುರಿಸಿ ದಾಟಿಕೊಂಡು ಹೋಗಬೇಕಾಗಿತ್ತು. ತೋಟದ ತುಂಬ ಯಾವಾಗಲೂ ತಿರುಗುತ್ತಿದ್ದ ಸಿಕ್ತಿಮ್ಮಜ್ಜ. ಆತನನ್ನು ಕಣ್ತಪ್ಪಿಸಿ ಹಣ್ಣುಗಳನ್ನು ಕೀಳುವುದು ಇನ್ನು ಕಷ್ಟಕರವಾಗಿತ್ತು.
ಬೇಸಿಗೆಯಲ್ಲಿ ಈಜಾಡುವುದು ಮಾವಿನ ತೋಪಿಗೆ ಹೋಗುವುದು ಹಾಗೂ ಅಲ್ಲಿ ಮಾವಿನ ಹಣ್ಣುಗಳನ್ನು ಕೀಳುವುದು ನಮ್ಮ ಬೇಸಿಗೆಯ ದಿನ ನಿತ್ಯದ ಕೆಲಸವಾಗಿತ್ತು. ಇದನ್ನೆಲ್ಲ ನಮಗಿಂತ ದೊಡ್ಡ ಹುಡುಗರ ಜೊತೆ ಸೇರಿ ಮಾಡುತ್ತಿದ್ದೆವು. ಅವಾಗಲೆಲ್ಲಾ ನನ್ನಜ್ಜಿ ಅಲ್ಲಿಗೆ ಹೆಚ್ಚು ಹೋಗ್ಬೇಡ ಅಲ್ಲಿ ಹೋದರೆ ಉಳಿಯುವುದು ಕಷ್ಟ ಎಂದು ಹೆದರಿಸುತ್ತಿದ್ದರು. ಅದರ ಹಿಂದೆ ಒಂದು ಕತೆಯೆ ಇದೆ ಎನ್ನುತ್ತಿದ್ದಳು. ಬಲವಂತ ಪಡಿಸಿದಾಗೊಮ್ಮೆ ಆ ಕತೆಯನ್ನು ಹೇಳಿದ್ದಳು.
ನಮ್ಮ ಮನಸ್ಸಿನಲ್ಲಿ ಇದ್ದದ್ದು ಈ ದಿನ ಹೇಗಾದರೂ ಮಾಡಿ ಹಣ್ಣುಗಳನ್ನು ಕಿತ್ತುಕೊಂಡು ಬರಬೇಕು ಅನ್ನುವುದಷ್ಟೆ. ನಮಗೆಲ್ಲ ಲೀಡರ್ರಾಗಿದ್ದು ಹನುಮಂತರಾಯ. ಅವನು ನನಗಿಂತ ಒಂದು ವರ್ಷ ದೊಡ್ಡವ. ನಾನು ನನ್ನ ಸ್ನೇಹಿತ ಮೂರ್ತಿ ಮೂವರೂ ಮಾವಿನ ತೋಪಿನ ಹತ್ತಿರ ಹೋದೆವು. ಎರಡೂ ಗೇಟುಗಳನ್ನು ನೋಡಿಕೊಂಡು ಹೋಗಿದ್ದೆವು. ಅಲ್ಲಿ ಎಲ್ಲಿಯೂ ಒಳಹೋಗಲು ಸ್ಥಳವೆ ಇರಲಿಲ್ಲ. ಅಷ್ಟು ಗಟ್ಟಿಯಾದ ಮುಳ್ಳಿನ ಬೇಲಿ ಅದು. ಹಾಗಾಗಿ ವಾಪಸ್ ಹೋಗೋಣ ಎಂದುಕೊಂಡೆವು. ಆದರೆ ಹನುಮಂತ ಕೇಳಲಿಲ್ಲ. ಇವತ್ತು ನಾನಂತೂ ಹಣ್ಣು ಕಿತ್ಕೊಂಡೆ ಹೋಗೋದು ಅಂದ. ನಾವು ಸುಮ್ಮನಾದೆವು. ಹಗಲೊತ್ತು ಆಗಿದ್ದರಿಂದ ಅಜ್ಜಿ ಹೇಳಿದ ಕತೆಯೇನು ನಮಗೆ ಮಾಡಲಿಲ್ಲ. ನಾವು ಭಯವನ್ನೂ ಪಡಲಿಲ್ಲ. ಸದ್ಯಕ್ಕೆ ಇದ್ದ ಭಯವೆಂದರೆ ಎಲ್ಲಿ ಆವಜ್ಜನ ಕೈಗೆ ಸಿಕ್ಕಿ ಬೀಳ್ತಿವೋ ಎಂಬುದಷ್ಟೆ ಆಗಿತ್ತು. ಯಾಕೆಂದರೆ ಆತ ಹೊಂಗೆಬರ್ಲು ಮುರಿಯೋ ಹಾಗೆ ಹೊಡೆಯುತ್ತಾನೆ ಎಂದು ಈಗಾಗಲೆ ಹಣ್ಣು ಕೀಳಲು ಹೋಗಿದ್ದ ಗೆಳೆಯರು ಹೇಳ್ತಾ ಇದ್ದರು. ಹಾಗಾಗಿ ನಾವು ಅದರಿಂದ ತಪ್ಪಿಸಿಕೊಳ್ಳಬೇಕು ಎಂಬುದಷ್ಟೆ ನಮ್ಮ ತಲೆಯಲ್ಲಿದ್ದದ್ದು.
ಒಂದು ಸುತ್ತು ಇಡೀ ತೋಟವನ್ನು ಸುತ್ತು ಹಾಕಿದೆವು. ಈ ಕಡೆಯಿಂದ ಓಡಾಡಿದರೆ ಆತನಿಗೇನು ಕಾಣುತ್ತಿರಲಿಲ್ಲ. ಆದರೆ ನಾವು ಗಲಾಟೆ ಮಾಡ್ಬಾರ್ದು ಅಷ್ಟೇ. ಸಪ್ಪಳ ಆದ್ರೆ ಸಾಕು ಕಲ್ಲಿನಿಂದ ಬೀಸುತ್ತಿದ್ದ. ಕೊನೆಗೂ ಒಂದು ದಾರಿ ಸಿಕ್ಕಿತು. ಅದೆ ಸಮಯಕ್ಕೆ ಸಿಕ್ತಿಮ್ಮಜ್ಜ ಎಮ್ಮೆ ಮೇಯಿಸಲು ಬಂದಿದ್ದದವರ ಹತ್ತಿರ ಅಡ್ಕೆ ಎಲೆ ಹಾಕ್ಕೊಳ್ಳಕ್ಕೆ ಕೂತು ಬಿಟ್ಟ. ಅವನು ಬರುವುದು ಹೇಗೂ ಲೇಟಾಗುತ್ತೆ ಅಂತೇಳಿ ಹನುಮಂತ ಹೊಂಗೆಮರದ ತುದಿಯೊಂದನ್ನು ಹಿಡಿದುಕೊಂಡು ಲಂಟಾನದ ಪೊದೆಯೊಂದನ್ನು ದಾಟಿ ಗಿಡವನ್ನೇರಿ ಕುಳಿತು ಒಂದೊಂದೆ ಹಣ್ಣುಗಳನ್ನು ಕಿತ್ತು ಎಸೆಯುತ್ತಿದ್ದರೆ, ನಾವು ಹೊರಗಡೆ ನಿಂತುಕೊಂಡು ಅವುಗಳನ್ನು ಸಂಗ್ರಹಿಸುತ್ತಿದ್ದೆವು. ಹಣ್ಣು ಒಂದರ್ಧ ಚೀಲದಷ್ಟು ತುಂಬಿತ್ತು. ಹನುಮಂತ ಬಂದಮೇಲೆ ನಾನು ಗೆಳೆಯ ಒಟ್ಟಿಗೆ ಬೇಲಿಯೊಳಗೆ ನುಗ್ಗಿದೆವು. ಅಷ್ಟರಲ್ಲಿ ಆ ಕಡೆಯಿಂದ ಯಾರನ್ನೊ ಗಾಬರಿ ಮಾಡುತ್ತ ಬಂದ ಸಿಕ್ತಿಮ್ಮಜ್ಜ ನಮ್ಮ ಕಡೆಗೆ ಬರುವುದು ಕಂಡಿತು. ಹನುಮಂತ ಓಡ್ರೊ ಓಡ್ರೊ.. ಆವಜ್ಜ ಬಂದ ಎನ್ನುತ್ತಲೆ ಈಗಾಗಲೆ ಸಂಗ್ರಹಿಸಿದ್ದ ಹಣ್ಣುಗಳನ್ನು ಎತ್ಕೊಂಡು ಓಡಿದ..
ಅವನು ಓಡುವುದರಲ್ಲಿ ಯಾವಾಗಲೂ ಪ್ರಥಮ.. ಹಾಗಾಗಿ ಅವನೇನೊ ತಪ್ಪಿಸಿಕೊಂಡ. ಮೂರ್ತಿಯೂ ಅಜ್ಜ ಬರುವಷ್ಟರಲ್ಲಿ ಒಂದೆ ನೆಗೆತಕ್ಕೆ ಮರದಿಂದ ಎಗರಿದವನು ಲಂಟಾನದ ಪೊದೆಯನ್ನು ಲೆಕ್ಕಿಸದೆ ಹೇಗೊ ತೂರಿಕೊಂಡು ಆಚೆ ಬಂದು ಓಡುವುದಕ್ಕೆ ಶುರುಮಾಡಿದ್ದ. ಮರವನ್ನು ಹತ್ತುವುದರಲ್ಲಿ ಅಂತಹ ಅನುಭವವೇನು ಇಲ್ಲದ ನಾನು ನಿಧಾನವಾಗಿ ಮರ ಇಳಿಯುವುದರಲ್ಲಿ ಸಿಕ್ತಿಮ್ಮಜ್ಜ ಹತ್ತಿರವಾಗಿದ್ದ. ಅವನು ಹತ್ತಿರ ಬರುವುದು ಕಂಡದ್ದೇ ಎದೆಬಡಿತ ಜೋರಾಗಿತ್ತು. ಕೈ ಕಾಲುಗಳು ನಡುಗಲು ಪ್ರಾರಂಭಿಸಿದ್ದವು. ಸಿಕ್ಕಿಬಿದ್ದರೆ ಅಪ್ಪನಿಂದ ಇನ್ನು ಘೋರವಾದ ಶಿಕ್ಷೆ ಆಗುವುದು ಖಚಿತವಾಗಿತ್ತು. ನನಗೆ ಬೇರೆ ದಾರಿ ಇರಲಿಲ್ಲ. ನಾನು ಮರದಿಂದ ಇಳಿಯಲಿಲ್ಲ, ಬದಲು ಅದರ ಮಧ್ಯದಲ್ಲಿ ಅವಿತುಕೊಂಡೆ. ಆತ ಬಂದವನು ನಾವು ತೂರಿ ಹೋಗಿದ್ದ ಬೇಲಿಯಿಂದ ಹೊರಗಡೆ ತೂರಿ ಹೋದ ಮೂರ್ತಿ ಓಡುತ್ತಿದ್ದ ಆತನೆಡೆಗೆ ಕಲ್ಲು ಬೀಸುತ್ತ ಹೋಗುತ್ತಿದ್ದ. ಸ್ವಲ್ಪ ದೂರ ಹೋಗುವಷ್ಟರಲ್ಲಿ ನಾನು ಮರದಿಂದ ಕೆಳಗೆ ನೆಗೆದು ಹೊಂಗೆ ಮರದ ಸಹಾಯದಿಂದ ಬೇಲಿಯನ್ನು ಎಗರಿ ಓಡುವುದಕ್ಕೆ ಶುರುಮಾಡಿದ್ದೆ. ನನ್ನಲ್ಲಿ ಇಷ್ಟೆಲ್ಲ ಶಕ್ತಿ ಬಂದದ್ದು ಹೇಗೆ ಎಂಬುದೆ ತಿಳಿಯಲಿಲ್ಲ. ತತ್ ಕ್ಷಣಕ್ಕೆ ಮೆದುಳು ಮನಸ್ಸು ಹೇಗೆಲ್ಲ ಕೆಲಸ ಮಾಡುತ್ತೆ ಎಂದು ದೊಡ್ಡವನಾದ ಮೇಲೆ ಕೆಲವು ಕತೆಗಳಲ್ಲಿ ಕಾದಂಬರಿಗಳಲ್ಲಿ ವಿಜ್ಞಾನ ಲೇಖನಗಳಿಂದ ತಿಳಿದುಕೊಂಡೆ. ನಾನು ಓಡುತ್ತಿದ್ದರೆ, ನನ್ನ ಹಿಂದೆ ಆತ ಬೆನ್ನಟ್ಟಿದ್ದಾನೆ. ನಾನೇನು ಅವನಿಗೆ ಸಿಗಲಿಲ್ಲ. ಸಣಕಲು ದೇಹದ ನಾನು ಜಿಂಕೆಯಂತೆ ಓಡಿದೆ. ಕೊನೆಗೂ ಆತನಿಗೆ ಸಿಕ್ಕಲಿಲ್ಲ.
ಮೂವರು ವಾಪಸ್ಸು ಬಂದು ಅನತಿದೂರದಲ್ಲಿದ್ದ ಅದೇ ಬಾವಿಯಲ್ಲಿ ಈಜು ಹೊಡೆದೆವು. ಆತ ಅಲ್ಲಿಗೂ ಬಂದ. ಬಂದವನು ನಮ್ಮ ಬಗ್ಗೆಯೇ ವಿಚಾರಿಸುತ್ತಿದ್ದ. ಯಾರಿಗೂ ನಾವು ಹಣ್ಣು ಕೀಳೋದಕ್ಕೆ ಹೋಗಿದ್ದು ಗೊತ್ತಿರಲಿಲ್ಲ. ಹಾಗಾಗಿ ಯಾರು ಅವನಿಗೆ ತಿಳಿಸಲೂ ಇಲ್ಲ. ಆದ್ದರಿಂದ ಒಂದು ಸ್ವಲ್ಪ ಹೊತ್ತು ಬೈಕೊಂಡು ಅಲ್ಲಿಂದ ವಾಪಸ್ಸು ಹೋದ. ಹನುಮಂತ ನಾವೆಲ್ಲ ಕಿತ್ತಿದ್ದ ಹಣ್ಣುಗಳನ್ನು ಬಚ್ಚಿಟ್ಟೇ, ಈಜಿಗೆ ಇಳಿದಿದ್ದ. ಹಾಗಾಗಿ ನಾವು ಇನ್ನೊಮ್ಮೆ ಈಜಾಡಿಕೊಂಡು ವಾಪಸ್ಸು ಬರುವಾಗ ಅವುಗಳನ್ನು ಹಂಚಿಕೊಂಡು ಮನೆಗೆ ಬಂದೆವು. ಅಂತೂ ಮಾವಿನ ತೋಪಿನಲ್ಲಿ ಹಣ್ಣುಗಳನ್ನು ಕೀಳುವ ಯೋಜನೆಯು ಯಶಸ್ವಿಯಾಗಿತ್ತು. ಈಗಲೂ ಮಾವಿನ ತೋಪಿನ ಪಕ್ಕದ ರಸ್ತೆಯಲ್ಲಿ ನಡೆಯುವಾಗ ಅದೆಲ್ಲ ನೆನಪಾಗುತ್ತದೆ. ಮನದ ಮೂಲೆಯಲ್ಲೊಂದು ನಗು ಕಾಣಿಸುತ್ತದೆ. ನನ್ನಜ್ಜ ಆ ಕೋಣ ಬಂದಂತಾಗುತ್ತದೆ. ನನ್ನಜ್ಜಿಯು ಕತೆ ಹೇಳ್ತೀನಿ ಬಾ ಎಂದು ಕರೆದಂತಾಗುತ್ತದೆ…