ಇವರು ಯಾರೊಬ್ಬರನ್ನು ಬೈದದ್ದಾಗಲಿ, ಯಾರ ಮೇಲೆ ಆಗಲಿ ಸಿಟ್ಟು ಮಾಡಿಕೊಂಡಿದ್ದನ್ನಾಗಲಿ ನಾನು ಯಾವತ್ತೂ ಕಂಡಿರಲಿಲ್ಲ. ಚಂದದ ನಗು ಹಾಗೂ ಮೌನ ಇವರ ಬಲು ದೊಡ್ಡ ಶಕ್ತಿಗಳಾಗಿದ್ದವು. ಇನ್ನೊಬ್ಬರಿಗೆ ಭಾರವಾಗದಂತೆ ಬದುಕಬೇಕು ಅಂತ ಯಾವಾಗಲೂ ಹೇಳುತ್ತಿದ್ದ ಗೋವಿಂದಪ್ಪ ತನ್ನ ಕೈಲಾದ ಕೆಲಸವನ್ನು ಮಾಡುತ್ತಿದ್ದರು. ಅಂತೆಯೇ ಯಾರಾದರೂ ಯಾವುದಾದರೂ ಕೆಲಸವನ್ನು ಹೇಳಿದರೆ ಒಂಚೂರೂ ಬೇಸರವಿಲ್ಲದೆ ಪಾಲಿಸುತ್ತಿದ್ದರು. ಒಂಥರಾ ನಿರುಮ್ಮಳ ಜೀವಿ. ಆದರೆ ಇಂಥ ಗೋವಿಂದಪ್ಪ ನಿದ್ದೆಗೆ ಜಾರಿದಾಗ ಮಾತ್ರ ಸಹಿಸಲಸಾಧ್ಯದ ವ್ಯಕ್ತಿಯಾಗಿಬಿಡುತ್ತಿದ್ದರು. ಏಕೆಂದರೆ ಇವರು ಹೊಡೆಯುತ್ತಿದ್ದ ಗೊರಕೆಯ ಸದ್ದು ಅವರು ಮಲಗಿದ್ದ ಮನೆಯವರಿಗೆ ಮಾತ್ರವಲ್ಲ ಸುತ್ತಲ ಯಾವ ಜೀವಿಯನ್ನೂ ಬಡಪಟ್ಟಿಗೆ ಬಿಡುತ್ತಿರಲಿಲ್ಲ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಏಳನೆಯ ಕಂತು
ಮಿಂಚುಳಗಳೆಂದರೆ ನನಗೆ ವಿಚಿತ್ರ ಸೆಳೆತ. ಅಷ್ಟೇ ವಿಸ್ಮಯ. ಇದು ಬಾಲ್ಯಕಾಲದಿಂದ ಈ ಚಣದ ತನಕ ಹಂಗೇ ಉಳುಕಂಡಿದೆ. ನನ್ನ ಬಾಲ್ಯವೆಲ್ಲ ಊರಾಚೆಯ ತೋಟದ ಮನೆಯಲ್ಲಿ. ಈಗಲೂ ಹಳ್ಳಿಯ ಮನೆ ಇರುವುದು ತೋಟದಲ್ಲೇ. ಸಂಜೆಯ ಹೊಂಬಣ್ಣ ಮಾಸುತ್ತಾ ಕತ್ತಲು ಇಳಿಯತೊಡಗಿದಂತೆ ಮನೆಯ ಮುಂದಲ ತೋಟಾಂಥ ತೋಟವೆಲ್ಲಾ ಕತ್ತಲ ಕಡಲಾಗಿಬಿಡುತ್ತಿತ್ತು. ಅದು ನಾನು ಊರೊಳಗಡೆಯಿಂದ ಆಟ ಆಡಿಕೊಂಡು ಮನೆಗೆ ಬರುವ ಹೊತ್ತು ಕೂಡಾ ಆಗಿರುತ್ತಿತ್ತು. ಆ ಹೊತ್ತಲ್ಲಿ ಪಡಸಾಲೆಯ ಮೂಲೆಯಲ್ಲೋ ಇಲ್ಲಾ ಜಂತೆಯಲ್ಲೋ ಲಾಟೀನನ್ನು ಹಚ್ಚಿಡಲಾಗುತ್ತಿತ್ತು. ಅದರ ಮುಲುಕು ಬೆಳಕು ಪಡಸಾಲೆಯ ಕತ್ತಲಿನೊಂದಿಗೆ ಜಗಳಕ್ಕೆ ಬಿದ್ದಿರುತ್ತಿತ್ತು. ಆಗ ಅಯ್ಯ ಯಾವುದಾದರೂ ಓದು ಇಲ್ಲವೇ ಹಾಡುಗಾರಿಕೆಯಲ್ಲಿ ಮುಳುಗಿರುತ್ತಿತ್ತು. ಹೊಟ್ಟಗೊಂಚೂರು ಹಾಕ್ಕಂಡು ಅಯ್ಯನತ್ತ ಪಡಸಾಲೆಗೆ ಬಂದರೆ ಆ ಓದು ಇಲ್ಲವೇ ಹಾಡುಗಾರಿಕೆ ನನ್ನ ನಿದ್ದೆಯ ಮಂಪರನ್ನು ರವೊಷ್ಟೊತ್ತು ಮುಂದೂಡುತ್ತಿತ್ತು. ಅಂಥ ಹೊತ್ತಲ್ಲಿ ನಿದ್ದೆಯನ್ನು ಮತ್ತಷ್ಟು ಹೊತ್ತು ನಿಲಾಕುತ್ತಿದ್ದ ಹಾಗೂ ಮುದಕೊಡುತ್ತಿದ್ದ ಮತ್ತೊಂದು ಸಂಗತಿ ಇತ್ತು. ಅದೆಂದರೆ ಲಾಟೀನಿನ ಬೆಳಕು ಕತ್ತಲನ್ನು ಎಟಕಿಸಿಕೊಳ್ಳಲಾಗದ ದೂರದಲ್ಲಿ ಮಿನುಗುವ ಕಾಯಕದಲ್ಲಿರುತ್ತಿದ್ದ ಮಿಂಚುಳಗಳ ಹಿಂಡು. ತಮ್ಮ ಪುಟ್ಟ ಪುಟ್ಟ ಹೊಟ್ಟೆಗಳೊಳಗೆ ಪುಟಾಣಿ ಬೆಳಕಿನ ದೀಪಗಳನ್ನು ಇಟ್ಟುಕೊಂಡಂತೆ ಪುಳುಗುಡುತ್ತಾ ನಿಂತಲ್ಲಿ ನಿಲ್ಲದೆ ಕುಂತಲ್ಲಿ ಕೂರದೆ ಮೈ ಪೂರಾ ಕುಲುಕಿದಂತೆ ಅಲುಗಾಡಿಸಿಕೊಂಡು ಆ ಪಡಸಾಲೆಯಂಥ ಪಡಸಾಲೆಗೆ ಮಿಂಚಿನ ರೇಖು ಮೆತ್ತಿ ಮಿನುಗಿಸುತ್ತಾ ಲಾಟೀನಿನ ಕೃತಕ ಬೆಳಕನ್ನು ಅಣಕಿಸಿಕೊಳ್ಳುತ್ತಿರುವಂತೆ ಹಾರಾಡುತ್ತಿದ್ದವು. ಹಂಗೆ ಹಾರಾಡುತ್ತಾ ಹಾರಾಡುತ್ತಾ ಮುನಿಸಿಕೊಂಡಂತೆ ಪಡಸಾಲೆಯಿಂದ ತೋಟದ ಕತ್ತಲ ಕಡಲಿನೊಳಕ್ಕೆ ಧುಮುಕಿಬಿಡುತ್ತಿದ್ದವು. ಪಡಸಾಲೆಯಿಂದ ಹಾರಿದ ಹಿಂಡಿಗೆ ಮತ್ತೆ ಕೆಲವು ಮಿಂಚುಳಗಳ ಹಿಂಡುಗಳು ಕೂಡಿಕೊಳ್ಳುತ್ತಿದ್ದವು. ಆಗಲ್ಲಿ ಮಿಂಚುಳುಗಳ ಕಡಲೇ ಆಗಿಬಿಡುತ್ತಿತ್ತು. ತೋಟದ ಕಡು ಕತ್ತಲೆಗೆ ಕಣ್ಣುಗಳು ಮೂಡಿದಂತೆ, ಆ ಕಣ್ಣುಗಳು ಪಿಳಿಗುಡುತ್ತಾ ತೋಟದಗಲಕೂ ಪುಳುಗುಡುತ್ತಿದ್ದ ಆ ಚಣ ನನ್ನೊಳಗೆ ಮಾತಿಗೆ ನಿಲುಕದ ಪುಳಕವೊಂದು ನನ್ನ ಮೈ ಮನಸ್ಸುಗಳನ್ನು ಆತುಕೊಳ್ಳುತ್ತಿತ್ತು. ಈ ಪುಳಕವನ್ನು ನಾನು ಕೆಲವೊಮ್ಮೆ ಪಡಸಾಲೆಯ ಮೂಲೆಯಲ್ಲಿ ಮಲಗಿರುತ್ತಿದ್ದ ಅಜ್ಜಿಯ ಕಂಬಳಿಯೊಳಕ್ಕೆ ತೂರಿಕೊಂಡು ಕಣ್ಣುಗಳಷ್ಟೇ ಕಾಣುವಂತೆ ಜಾಗ ಬಿಟ್ಟುಕೊಂಡು ಮಿಕ್ಕಂತೆ ಮೈ ಪೂರಾ ಕವುಚಿಕೊಂಡು ಕಂಬಳಿಯೊಳಗಿಂದ ತೋಟದೊಳಗಿನ ಮಿಂಚುಳುಗಳ ಆಟವನ್ನೇ ನೋಡುತ್ತಾ ಅನುಭವಿಸುತ್ತಿದ್ದೆ. ಹಂಗೇ ಯಾವಾಗಲೋ ನಿದ್ದೆಗೆ ಜಾರುತ್ತಿದ್ದೆ. ನನಗಾಗ ಅವುಗಳು ಅಜ್ಜಿ ಹೇಳುತ್ತಿದ್ದ ಕಥೆಗಳ ಮಾಯಾಲೋಕದ ಮಾಯಾವಿಗಳ ವಾರಸುದಾರರಂತೆ ಭಾಸವಾಗುತ್ತಿದ್ದವು. ಆ ಭಾವ ಇವತ್ತಿಗೂ ನನ್ನೊಳಗೆ ಪಟ್ಟಾಗಿ ಕೂತಿದೆ. ಈ ಕಾರಣಕ್ಕೇ ಅಂಥ ಮಿಂಚುಳಗಳ ಮಿಂಚುವ ಬೆಳಕಿಗೆ ಇರಬಹುದಾದ ವೈಜ್ಞಾನಿಕ ಕಾರಣವನ್ನು ತಿಳಿದುಕೊಳ್ಳುವ ಮನಸ್ಸು ಇಂದಿಗೂ ಇಲ್ಲ. ಆಗಾಗ ನಾನು ಇಂಥ ಮಿಂಚುಳಗಳ ಬೇಟೆಗೂ ಇಳಿಯುತ್ತಿದ್ದೆ. ಆಗ ಅವುಗಳೇನಾದರೂ ಅಪ್ಪಿ ತಪ್ಪಿ ನನ್ನ ಕೈಗೆ ಸಿಕ್ಕಿ ಬಿಟ್ಟರೆ ಅವುಗಳ ಕಥೆ ಅಷ್ಟೇ. ಅವುಗಳು ಮತ್ತೆ ತಪ್ಪಿಸಿಕೊಂಡು ಹಾರಿ ಹೋಗಲಾಗದಂತೆ ಹೊದ್ದಿದ್ದ ಕಂಬಳಿಯನ್ನು ತಲೆ ತುಂಬಾ ಕವುಚಿಕೊಂಡು ಅದು ಒಂಚೂರೂ ಕಂಡಿ ಬೀಳದಂತೆ ಸುತ್ತಲೂ ಸಿಕ್ಕಿಸಿಕೊಂಡು ಕೂಡಿಕೊಂಡುಬಿಡುತ್ತಿದ್ದೆ. ಆಗವುಗಳು ಕಂಬಳಿಯೊಳಗೆ ಆಡಿಸುತ್ತಿದ್ದ ಬೆಳಕಿನ ಝಲಕುಗಳು ಮೈ ಜುಮ್ಮೆನ್ನಿಸುತ್ತಿದ್ದವು. ನಾನು ನಿದ್ದೆಯ ಅಧೀನನಾಗುತ್ತಲೇ ಸಿಕ್ಕಿಸಿಕೊಂಡಿದ್ದ ಕಂಬಳಿ ಸಡಿಲವಾಗಿ ಕಂಡಿಬಿಟ್ಟು ಅದಾವ ಮಾಯದಲ್ಲೋ ಅವು ಪೇರಿ ಕಿತ್ತಿರುತ್ತಿದ್ದವು. ಬೆಳಗ್ಗೆ ನನಗೆ ಎಚ್ಚರವಾಗುವ ಹೊತ್ತಿಗಾಗಲೇ ಸೂರ್ಯನ ಎಳೆ ಬಿಸಿಲು ಪಡಸಾಲೆಯ ಮೂಲೆ ಮುಡುಕುಗಳಲ್ಲಿ ಕತ್ತಲನ್ನು ಸಿದುಕಿಸಿದುಕಿ ಸದೆ ಬಡಿದು ತುಂಬಾ ಹೊತ್ತೇ ಆಗಿರುತ್ತಿತ್ತು. ಕೆಲವು ಸಾರ್ತಿ ನಿದ್ದೆ ಬಾರದ ಹೊತ್ತಲ್ಲಿ ಹಂಗೆ ಕೆಲವು ಮಿಂಚುಳಗಳನ್ನು ಹಿಡಿದುಕೊಂಡು ಅವುಗಳಿಗೆ ಹಾರಲು ಆಸ್ಪದವಾಗದಂತೆ ಬೊಗಸೆಯೊಳಗೆ ಕೂಡಾಕಿಕೊಂಡು ಕೈ ಬೆರಳುಗಳ ಸಂಧಿಯಿಂದ ಅವುಗಳ ಮಿನುಗುವಿಕೆಯನ್ನು ಸವಿಯುತ್ತಿದ್ದೆ. ಆಗ ನನ್ನ ಬೆರಳುಗಳು ಬೆಳಕಿನ ತುಣುಕುಗಳಂತೆ ಭಾಸವಾಗಿ ಹಿಗ್ಗು ತರುತ್ತಿತ್ತು. ಈ ಮಿಂಚುಳಗಳು ಹಗಲಿನಲ್ಲಿ ಅದಾವ ಗೂಡಿನಲ್ಲಿ ಅಡಗಿಕೊಂಡಿರುತ್ತವೆ, ಆಗವುಗಳು ತಮ್ಮೊಳಗಿನ ಬೆಳಕಿನ ದೀಪಗಳನ್ನು ಕೆಡಿಸಿಕೊಂಡಿರುತ್ತವ ಮುಂತಾದ ಪ್ರಶ್ನೆಗಳು ನನ್ನೊಳಗೆ ಮೂಡುತ್ತಿದ್ದವು.
ಈ ಮಿಂಚುಳಗಳ ಮಿಣುಕಾಟದ ಮೋಹ ಒಂದೊಂದು ದಿನ ನನ್ನನ್ನು ಪೀಕಲಾಟಕ್ಕೆ ತಳ್ಳಿಬಿಡುತ್ತಿತ್ತು. ನಾನು ಎಷ್ಟೇ ಯಾಸಾ ಹಾಕಿದರೂ ಅವುಗಳು ಸಿಗದಂತೆ ತಪ್ಪಿಸಿಕೊಂಡುಬಿಡುತ್ತಿದ್ದವು. ಆಗ ನಾನು ಪಡಸಾಲೆಯನ್ನು ದಾಟಿ ತೋಟದೊಳಕ್ಕೆ ಮಿಂಚುಳಗಳ ಕಡಲಿಗೇ ಧುಮುಕುತ್ತಿದ್ದೆ. ಹಂಗೆ ಅಲ್ಲಿಯೂ ಅವುಗಳು ನನ್ನನ್ನು ಸತಾಯಿಸುತ್ತಿದ್ದವು. ಅವತ್ತೊಂದು ದಿನ ಹಿಂಗೇ ಅವುಗಳ ಬೇಟೆಗೆ ಇಳಿದಿದ್ದ ನಾನು ನನಗರಿವಿಲ್ಲದಂತೆ ನಮ್ಮ ತೋಟದ ಮೂಲೆಯಲ್ಲಿದ್ದ ಕಲ್ಲು ಬಾವಿಯ ತಡಿಗೆ ಹೋಗಿಬಿಟ್ಟಿದ್ದೆ. ಮಿಂಚುಳಗಳ ಹಿಂಡು ಯಾವಾಗ ಸೀದಾ ಕಲ್ಲುಬಾವಿಯ ಮೇಲೆ ತೇಲತೊಡಗಿದವೋ ಅವುಗಳಿಗಾಗಿ ಕೈ ಚಾಚುತ್ತಾ ತಡಿಯಲ್ಲಿ ನಿಂತಿದ್ದ ನಾನು ಮುಗ್ಗರಿಸಿ ಬಾವಿಯೊಳಗಿನ ಮೆಟ್ಟಿಲುಗಳ ಮೇಲೆ ಬಿದ್ದುಬಿಟ್ಟಿದ್ದೆ. ಆ ವರ್ಷ ಬಾವಿಯಲ್ಲಿ ನೀರು ಐದಾರು ಮೆಟ್ಟಿಲುಗಳಷ್ಟು ಬಿಟ್ಟಿತ್ತು. ಹಂಗಾಗಿ ಬಚಾವಾಗಿದ್ದೆ. ಆದರೆ ಆ ಮಿಂಚುಗಳು ಮಾತ್ರ ಬಾ ಹಿಡಿ ನೋಡುವಾ ಅನ್ನುವಂತೆ ಹಾರಿ ಮುಂದಕ್ಕೆ ಹೋಗಿದ್ದವು.
ಇದೊಂದು ವಿಶೇಷವಾದ ಕಲ್ಬಾವಿ. ಇದು ಸುಮಾರು ಇನ್ನೂರು ಮುನ್ನೂರು ವರ್ಷಗಳಷ್ಟು ಹಳೆಯದು. ಆಗ ಅಜ್ಜಿಯೊಬ್ಬರು ದಾರಿಹೋಕರಿಗೆ ಕುಡಿಯುವ ನೀರಿನ ಸಲುವಾಗಿ ಈ ಬಾವಿಯನ್ನು ಕಟ್ಟಿಸಿತ್ತಂತೆ. ಅದೇ ರೀತಿ ಈ ಬಾವಿಯ ಎದುರಿಗೆ ಕೊಂಚ ವಾರಾಸಿಗೆ ಒಂದಷ್ಟೊತ್ತು ಕೂತು ಉಸಿರು ಬಿಟ್ಟುಕೊಳ್ಳುವ ಸಲುವಾಗಿ ಒಂದು ಕಲ್ಲಿನ ಮಂಟಪವನ್ನೂ ಕಟ್ಟಿಸಿತ್ತಂತೆ. ಹಂಗಂತ ಅಜ್ಜ ನನಗೆ ಹೇಳುತ್ತಿತ್ತು. ಆ ಜಾಗ ಮುಂದೆ ತೋಟವಾದರೂ ಆ ಮಂಟಪಕ್ಕೆ ನಿಲ್ಲಿಸಿದ್ದ ಕಲ್ಲಿನ ಕಂಬಗಳು ಅದೇ ಜಾಗದಲ್ಲಿ ಬಿದ್ದಿದ್ದನ್ನು ನಾನು ಚಿಕ್ಕಂದಿನಲ್ಲಿ ನೋಡಿದ್ದೆ. ಆ ಮಂಟಪಕ್ಕೆ ಹಾಕಿದ್ದ ದುಂಡಿಯಂಥ ದಡಿ ಹಾಸು ಕಲ್ಲೊಂದು ಬಾವಿಯ ಮುಂದಿನ ಪಟ್ಟೆಯಲ್ಲಿ ಇಂದಿಗೂ ಬಿದ್ದಿದೆ. ಬೋರ್ವೆಲ್ಲುಗಳು ಬರುವುದಕ್ಕೆ ಮುಂಚೆ ಇದೇ ಬಾವಿಯ ನೀರನ್ನು ನಾವು ಮನೆಗೆ ಬಳಸುತ್ತಿದ್ದೆವು. ನನ್ನ ದೈನಂದಿನ ಕೆಲಸಗಳಲ್ಲಿ ಈ ಬಾವಿಯಿಂದ ಬಚ್ಚಲು ಮನೆಗೆ ಮತ್ತು ಅಡಿಗೆ ಮನೆಗೆ ನೀರು ತಂದಾಕುವುದೂ ಒಂದು ಆಗಿತ್ತು. ಆಗೆಲ್ಲಾ ಮಳೆಗಾಲ ಚೆನ್ನಾಗಿ ನಡೆಸುತ್ತಿದ್ದರಿಂದ ಬಾವಿಯಲ್ಲಿ ಹೆಚ್ಚೂ ಕಡಿಮೆ ವರ್ಷವಿಡೀ ನೀರು ಇರುತ್ತಿತ್ತು. ಬೇಸಿಗೆಯಲ್ಲಿ ಮಾತ್ರ ಇದರ ನೀರಿನ ಮಟ್ಟ ಅರ್ಧ ಹಂಪಲಿಗೆ ಇಳಿಯುತ್ತಿತ್ತು. ಆದರೆ ಎಂದೂ ಇದರ ತಳ ಕಾಣುವಂತೆ ಪೂರಾ ಬತ್ತಿದ್ದನ್ನು ನಾನು ಕಂಡಿರಲಿಲ್ಲ. ಈ ಕಲ್ಬಾವಿ ನನ್ನ ಬಾಲ್ಯದ ಪುಳಕಗಳಲ್ಲಿ ಒಂದು. ಅದೇ ರೀತಿ ಈ ಕಲ್ಬಾವಿಯ ಬಗ್ಗೆ ನನ್ನ ಅಯ್ಯನಿಗೂ ವಿಶೇಷ ಅಕ್ಕರೆ. ಅವರು ಬದುಕಿರುವವರೆಗೂ ಇದರ ಒಳಗಿರಲಿ ಸುತ್ತಾ ಅಂಚಿನಲ್ಲಿ ಕೂಡಾ ಒಂದೇ ಒಂದು ಗಿಡ ಬಳ್ಳಿ, ಕಡ್ಡಿ ಕಸಾಲೆ ಹುಟ್ಟಲು ಬಿಡುತ್ತಿರಲಿಲ್ಲ. ಸದಾ ತಿಳಿಯಾಗಿರುತ್ತಿದ್ದ ಇದರ ನೀರಿನಲ್ಲಿ ಈಜುವುದೆಂದರೆ ಅಯ್ಯನಿಗೆ ತುಂಬಾ ಖುಷಿ. ಈ ಬಾವಿಯನ್ನು ಕಪ್ಪು ಕಾಡುಗಲ್ಲುಗಳಿಂದ ಕಟ್ಟಲಾಗಿದೆ. ಇದಕ್ಕೆ ಮೂರು ಕಡೆಯಿಂದಲೂ ಇಳಿಯಲು ಸಮತಟ್ಟಾದ ಮೆಟ್ಟಿಲುಗಳಿವೆ. ಆದರೆ ಒಂದು ಕಡೆ ಮಾತ್ರ ಇಳಿಯುವುದಕ್ಕಾಗಿಯೇ ಮೆಟ್ಟಿಲುಗಳ ದಾರಿ ಮಾಡಲಾಗಿದೆ. ಏನಿಲ್ಲಾ ಅಂದರೂ ಐದಾರು ಮಟ್ಟದಷ್ಟು ಆಳವಿದೆ. ಉಲ್ಟಾ ಪಲ್ಟಾ ಮಾಡಿ ಕಲ್ಪಿಸಿಕೊಂಡರೆ ಇದು ಒಂದು ಗೋಪುರದಂತೆ ಕಾಣುತ್ತದೆ.
ಈ ಬಾವಿಯೊಂದಿಗೆ ನನಗೆ ತುಂಬಾ ನೆನಪುಗಳಿವೆ. ಇದರಲ್ಲಿ ಒಂದು ಇಲ್ಲಿ ನಾನು ಈಜು ಕಲಿತದ್ದು. ಇದೇ ಬಾವಿ ಅದೊಂದು ದಿನ ನನ್ನನ್ನು ಸಾವಿನ ಬಾಗಿಲಿಗೆ ಕರೆದೊಯ್ದು ಮತ್ತೆ ವಾಪಸ್ಸು ತಂದು ಬಿಟ್ಟದ್ದು. ಅಯ್ಯನೇ ನನಗೆ ಈಜು ಕಲಿಸಿದ ಗುರು. ಈ ಬಾವಿಯೇ ನನಗಾಗ ಈಜು ಕೊಳ. ಸ್ಕೂಲಿಗೆ ರಜೆ ಇದ್ದು ಆ ದಿನ ಅಯ್ಯ ಊರಲ್ಲಿದ್ದರೆ ಅವತ್ತು ಮಧ್ಯಾಹ್ನ ಖಂಡಿತ ಈಜಿನ ಮೋಜು ಇದ್ದೇ ಇರುತ್ತಿತ್ತು.
ಅವತ್ತು ಭಾನುವಾರ ಸ್ಕೂಲಿಗೆ ರಜೆ ಇತ್ತು. ಅಯ್ಯನೂ ಊರಲ್ಲೇ ಇತ್ತು. ಮಧ್ಯಾಹ್ನಕ್ಕೆಲ್ಲಾ ಇಬ್ಬರೂ ಬಾವಿಯತ್ತ ಹೊರೆಟೆವು. ಆಗ ಬಾವಿಯಲ್ಲಿ ಕೈಗೆಟಕುವಷ್ಟು ಅಂದರೆ ಹೆಚ್ಚೂ ಕಡಿಮೆ ಬಾವಿಯ ತುಂಬಾ ನೀರಿತ್ತು. ಅಯ್ಯನ ಜೊತೆ ನೀರಿಗಿಳಿದ ನಾನು ಸ್ವಲ್ಪ ಹೊತ್ತು ಎದೆ ಮಟ್ಟದ ನೀರಿನಲ್ಲಿ ಮೆಟ್ಟಿಲು ಕಲ್ಲುಗಳ ಮೇಲೆ ನಿಂತು ನೀರ ಮೇಲೆ ರಪರಪ ಕೈಗಳನ್ನು ಬಡಿಯುತ್ತಾ ಅಯ್ಯ ಈಜಾಡುವುದನ್ನೇ ನೋಡುತ್ತಿದ್ದೆ. ನನಗೆ ಆಗ ಅಷ್ಟೋ ಇಷ್ಟೋ ಈಜಲು ಬರುತ್ತಿದ್ದರೂ ಅಷ್ಟು ಆಳದ ನೀರಿನಲ್ಲಿ ಒಬ್ಬನೇ ಎಂದೂ ಎಲ್ಲೂ ಈಜು ಬಿದ್ದಿರಲಿಲ್ಲ. ಅಯ್ಯನಿಗೆ ಚೆನ್ನಾಗಿ ಈಜಲು ಗೊತ್ತಿತ್ತು. ಬಾವಿಯ ಸುತ್ತಾ ಒಂದೆರಡು ಬಾರಿ ಈಜು ಹಾಕಿತು. ನಂತರ ಒಂದಷ್ಟು ಹೊತ್ತು ಅಂತರನಾಗಿ ನೀರಿನ ಮೇಲೆ ನಿಶ್ಚಲವಾಗಿ ತೇಲಿತು. ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ನನಗೆ ಜೀವ ಮಿಳ್ಳೆಂದಿತ್ತು. ಅಯ್ಯನಿಗೆ ನನ್ನನ್ನೂ ಜೊತೆಗಾಕಿಕೊಳ್ಳುವಂತೆ ಕೂಗಿದೆ. ತಕ್ಷಣವೇ ನನ್ನತ್ತ ಬಂದ ಅಯ್ಯ ಒಂದು ಕೈಯ್ಯಲ್ಲಿ ನೀರನ್ನು ಬಗೆ ಮಾಡುತ್ತಾ ಮತ್ತೊಂದು ಕೈಯಲ್ಲಿ ನನ್ನನ್ನು ಹಿಡಿದು ಜೊತೆಗಾಕಿಕೊಂಡು ಹೊರಟರು. ಅಯ್ಯನ ಕೈಯ್ಯ ಆಸರೆ ಇದ್ದ ಕಾರಣಕ್ಕೆ ನಾನು ನಿರ್ಭಯವಾಗಿ ಬಲು ದೊಡ್ಡ ಈಜುಗಾರನಂತೆ ನೀರಿನಲ್ಲಿ ಕೈಕಾಲುಗಳನ್ನು ಜೋರಾಗಿ ಆಡಿಸುತ್ತಾ ಸುಸ್ತಾದಾಗ ಮೀನಿನಂತೆ ತೇಲುವ ಆಟ ಆಡತೊಡಗಿದೆ. ಇದನ್ನು ಗಮನಿಸಿದ ಅಯ್ಯ ನನ್ನನ್ನು ತಮ್ಮ ಬೆನ್ನಿನ ಮೇಲೆ ಮಲಗಿಸಿಕೊಂಡು ಈಜತೊಡಗಿದರು. ನನಗೆ ಇದು ಯಾಕೋ ಅಂಥ ಖುಷಿ ಕೊಡಲಿಲ್ಲ. ನನಗೂ ನಾನಾಗೇ ಈಜ ಬೇಕು ಅನಿಸಿತು. ಅಯ್ಯನಿಗೆ ಹಂಗಂದೆ. ಆಯ್ತು ಅಂತ ಅನ್ನುತ್ತಲೇ ಅವರು ಬೆನ್ನ ಮೇಲಿದ್ದ ನನ್ನನ್ನು ನೀರಿನೊಳಕ್ಕೆ ಮೆಲ್ಲನೆ ಹೊರಳಿಸಿ ಮುಂದೆ ಹೋದರು.

ಹಾಗೆ ನೀರಿನೊಳಕ್ಕೆ ಹೊರಳಿಕೊಂಡ ತಕ್ಷಣ ನಾನು ನನ್ನ ಇದ್ದಬದ್ದ ಬಿರುವನ್ನೆಲ್ಲಾ ಬಿಟ್ಟು ಕಾಲುಗಳಿಂದ ನೀರನ್ನು ಒದೆಯುತ್ತಾ ಮುಂದಕ್ಕೆ ದೇಗಲು ಕೈಗಳಿಂದ ಬರಬರನೆ ಒಂದೇ ಉಸುರಿಗೆ ಬಗೆ ಹಾಕತೊಡಗಿದೆ. ನಾನೂ ನೀರಿನಲ್ಲಿ ತೇಲುತ್ತಾ ಒಂದೆರಡು ಮಾರು ದೂರಕ್ಕೆ ಹೋದೆ. ಆಗ ನನಗಾದ ಖುಷಿ ಅಷ್ಟಿಷ್ಟಲ್ಲ. ಆದರೆ ಈ ಖುಷಿ ಮರುಕ್ಷಣಕ್ಕೇ ಮಾಯವಾಗಿ ಹೋಯ್ತು. ಏಕೆಂದರೆ ನಾನು ಕೈ ಕಾಲುಗಳನ್ನು ಆಡಿಸುತ್ತಿದ್ದ ರಭಸಕ್ಕೆ ಆ ಹೊತ್ತಿಗಾಗಲೇ ಕೈ ಕಾಲುಗಳಿಗೆ ಸೋಲು ಬಂದೋಗಿತ್ತು. ಹಂಗಾಗಿ ನಾನು ಎಷ್ಟೇ ರಾಪಾಡಿದರೂ ಇದ್ದಲ್ಲಿಂದ ಒಂದೇ ಒಂದು ಇಂಚು ಅಲುಗದೆ ಇದ್ದಲ್ಲೇ ಇದ್ದು ಬಿಟ್ಟೆ. ಜೊತೆಗೆ ಅಲ್ಲೇ ನೀರಿನೊಳಕ್ಕೆ ಇಳಿಯತೊಡಗಿದೆ. ಇದರ ಅರಿವೂ ಇಲ್ಲದ ಅಯ್ಯ ಗುಳುಮುಳು ಹಕ್ಕಿಯಂತೆ ಒಮ್ಮೆ ಮುಳುಗುತ್ತಾ ಮತ್ತೊಮ್ಮೆ ತೇಲುತ್ತಾ ಈಜುತ್ತಿತ್ತು.
ಯಾವಾಗ ನಾನು ಮೆಲ್ಲಗೆ ನೀರಿನೊಳಕ್ಕೆ ಇಳಿಯತೊಡಗಿದೆನೋ ನನಗೆ ಅಸಾಧ್ಯ ಭಯವಾಗಿ ಕೂಗಿಕೊಳ್ಳಲು ನೋಡಿದೆ. ಭಯಕ್ಕೆ ಮಾತುಗಳೇ ಹೊರಡಲಿಲ್ಲ. ಹೊರಟಿದ್ದರೂ ನೀರಿನೊಳಗಿನಿಂದ ಯಾರಿಗೂ ಕೇಳಿಸುವಂತಿರಲಿಲ್ಲ. ಕೆಳಕ್ಕೆ ಇಳಿಯತೊಡಗಿದ ನನಗೆ ಪಾಚಿ ಕಟ್ಟಿದ ಬಾವಿಯ ಮೆಟ್ಟಿಲುಗಳು ಬಾವಿಯೊಳಗಾಡುತ್ತಿದ್ದ ಸಣ್ಣಪುಟ್ಟ ಮೀನುಗಳು ಅಸ್ಪಷ್ಟವಾಗಿ ಕಾಣುತ್ತಾ ಕಣ್ಣುಗಳಿಗೆ ಕತ್ತಲು ಕಟ್ಟಿ ಮುಂದಿನದು ಯಾವುದೂ ಅರಿವಿಗೆ ಬಾರಲಿಲ್ಲ. ಎಚ್ಚರವಾದಾಗ ಮಾತ್ರ ನಾನು ಬಾವಿಯ ಬದಿಯ ಬದುವಿನ ಮೇಲಿದ್ದೆ. ಮಧ್ಯಾಹ್ನದ ಬಿಸಿಲು ಕಣ್ಣು ಕುಕ್ಕುತ್ತಿತ್ತು. ಭಯದಿಂದ ಅಯ್ಯನನ್ನೇ ನೋಡಿದೆ. ಅಯ್ಯ ಮುಗುಳ್ನಗುತ್ತಾ` ಒಳ್ಳೆ ಶೂರ ಆಡ್ದಂಗೆ ಆಡ್ತಿದ್ದೆ. ನೀರೊಳ್ಗೆ ಹಂಗೆ ಅವುಸ್ರಕ್ಕೆ ಬಿದ್ರೆ ಬದ್ಕಾದು ಉಂಟ’ ಅಂತು. ಅದು ಈಜಿನಲ್ಲಿ ಅಯ್ಯ ಹೇಳಿಕೊಟ್ಟಿದ್ದ ಬಲು ದೊಡ್ಡ ಪಾಠವಾಗಿತ್ತು.
ಇಂಥ ಈ ಕಲ್ಬಾವಿಗೆ ಸಂಬಂಧಿಸಿದ ಮತ್ತೊಂದು ನೆನಪು. ನನ್ನ ಹತ್ತಿರದ ಸಂಬಧಿಯೊಬ್ಬರಿದ್ದರು. ಹೆಸರು ಗೋವಿಂದಪ್ಪ ಅಂತ. ಸಂತನಂಥ ಬದುಕು ಬದುಕಿದವರು. ಮದುವೆಯಾಗದೇ ಉಳಿದಿದ್ದ ಇವರು ವರ್ಷದಲ್ಲಿ ಕೆಲವು ತಿಂಗಳು ನಮ್ಮ ಮನೆಯಲ್ಲಿ ಉಳಿಯುತ್ತಿದ್ದರು. ಕೆಲವು ಸಾರ್ತಿ ಒಮ್ಮೆ ಬಂದರೆ ವರ್ಷಗಟ್ಟಲೆಯೂ ಉಳಿದುಬಿಡುತ್ತಿದ್ದರು. ಇಂಥ ಗೋವಿಂದಪ್ಪ ಮಹಾ ಜೀವಪರ ಮನಸ್ಸಿನವರಾಗಿದ್ದರು. ಇವರು ಯಾರೊಬ್ಬರನ್ನು ಬೈದದ್ದಾಗಲಿ, ಯಾರ ಮೇಲೆ ಆಗಲಿ ಸಿಟ್ಟು ಮಾಡಿಕೊಂಡಿದ್ದನ್ನಾಗಲಿ ನಾನು ಯಾವತ್ತೂ ಕಂಡಿರಲಿಲ್ಲ. ಚಂದದ ನಗು ಹಾಗೂ ಮೌನ ಇವರ ಬಲು ದೊಡ್ಡ ಶಕ್ತಿಗಳಾಗಿದ್ದವು. ಇನ್ನೊಬ್ಬರಿಗೆ ಭಾರವಾಗದಂತೆ ಬದುಕಬೇಕು ಅಂತ ಯಾವಾಗಲೂ ಹೇಳುತ್ತಿದ್ದ ಗೋವಿಂದಪ್ಪ ತನ್ನ ಕೈಲಾದ ಕೆಲಸವನ್ನು ಮಾಡುತ್ತಿದ್ದರು. ಅಂತೆಯೇ ಯಾರಾದರೂ ಯಾವುದಾದರೂ ಕೆಲಸವನ್ನು ಹೇಳಿದರೆ ಒಂಚೂರೂ ಬೇಸರವಿಲ್ಲದೆ ಪಾಲಿಸುತ್ತಿದ್ದರು. ಒಂಥರಾ ನಿರುಮ್ಮಳ ಜೀವಿ. ಆದರೆ ಇಂಥ ಗೋವಿಂದಪ್ಪ ನಿದ್ದೆಗೆ ಜಾರಿದಾಗ ಮಾತ್ರ ಸಹಿಸಲಸಾಧ್ಯದ ವ್ಯಕ್ತಿಯಾಗಿಬಿಡುತ್ತಿದ್ದರು. ಏಕೆಂದರೆ ಇವರು ಹೊಡೆಯುತ್ತಿದ್ದ ಗೊರಕೆಯ ಸದ್ದು ಅವರು ಮಲಗಿದ್ದ ಮನೆಯವರಿಗೆ ಮಾತ್ರವಲ್ಲ ಸುತ್ತಲ ಯಾವ ಜೀವಿಯನ್ನೂ ಬಡಪಟ್ಟಿಗೆ ಬಿಡುತ್ತಿರಲಿಲ್ಲ. ಈವರೆವಿಗೂ ಗೊರಕೆಯಲ್ಲಿ ಇವರನ್ನು ಮೀರಿಸುವವರನ್ನು ನಾನು ಕಂಡಿಲ್ಲ. ಕ್ಷಣ ಕ್ಷಣಕ್ಕೂ ರಂಗೇರುತ್ತಾ ಬಗೆ ಬಗೆಯ ರಾಗಗಳಾಗುತ್ತಾ ತಾರಕಕ್ಕೇರಿಸುತ್ತಿದ್ದ ಗೋವಿಂದಪ್ಪನ ಗೊರಕೆಯ ಎದುರು ಎಂಥಾ ಕುಂಭ ಕರ್ಣ ನಿದ್ದೆಯೂ ಸೋಲೊಪ್ಪಿಕೊಂಡುಬಿಡುತ್ತಿತ್ತು. `ಒಂದುಪಕ್ಷ ಈ ಪುಣ್ಯಾತ್ಮ ಮದ್ವೆಗಿದ್ವೆ ಅಂತ ಮಾಡ್ಕೆಂಡುದ್ರೆ, ಕಟ್ಕೆಂಡೋಳು ವಾರೊಪ್ಪತ್ಗೆ ಹೇಳ್ದೇ ಕೇಳ್ದೆ ಓಡೋಗಿಬಿಡ್ತಿದ್ಳು’ ಅಂತ ನನ್ನ ಅಜ್ಜ ಆಗಾಗ ತಮಾಷೆ ಮಾಡುತ್ತಿದ್ದರು. ಉರುಟು ಮುಖ, ಅಗಲವಾದ ಹಣೆ, ಸೊಟ್ಟಪಟ್ಟ ಹಲ್ಲುಗಳು, ಆ ಹಣೆಯಲ್ಲಿ ಯಾವಾಗಲೂ ವೀಭೂತಿಯ ಮೂರು ಗೆರೆಗಳು. ಮಾರಿಗೆ ಬಟ್ಟೆಯ ಬನಿಯನ್ನು, ಖಾಕಿ ಚೆಡ್ಡಿ, ಹೆಗಲ ಮೇಲೊಂದು ಟವೆಲ್ಲು, ಗೋವಿಂದಪ್ಪನ ನಿತ್ಯದ ಧಿರಿಸು. ಇವುಗಳ ಜೊತೆಗೆ ಮದುವೆ ಅಥವಾ ಯಾವುದಾದರೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ಇವರ ಚೆಡ್ಡಿಯ ಮೇಲೊಂದು ಲುಂಗಿ ಬರುತ್ತಿತ್ತು. ಬನಿಯನ್ನಿನ ಮೇಲೊಂದು ಅಂಗಿ ಕಾಣಿಸಿಕೊಳ್ಳುತ್ತಿತ್ತು.
ಅಯ್ಯ ತನ್ನ ಭಾಗಕ್ಕೆ ಬಂದಿದ್ದ ತೋಟದಲ್ಲಿ ಮನೆ ಕಟ್ಟಿಸಲು ಶುರು ಮಾಡಿದ್ದರು. ಅದಕ್ಕೂ ಮುಂಚೆ ಒಂದು ತುಂಬಾ ಹಳೆಯ ಮನೆಯೊಂದು ಪಾಲಿಗೆ ಬಂದಿತ್ತು. ಹೊಸ ಮನೆ ಆದ ಮೇಲೆ ಅದು ಖಾಯಮ್ಮಾಗಿ ದನದ ಕೊಟ್ಟಿಗೆಯಾಗಿತ್ತು. ಹೊಸಾ ಮನೆಯ ಗೋಡೆಗಳೆದ್ದು ಅದಕ್ಕೆ ಹೆಂಚುಗಳನ್ನೂ ಕವುಚಿ ಇನ್ನು ಗಾರೆ ಕೆಲಸ ಮಾತ್ರ ಬಾಕಿಯಿತ್ತು. ಆದರೂ ನಾನು ನನ್ನ ಅಣ್ಣ ಮತ್ತು ಹಳೆಯ ಮನೆಯಿಂದ ಹೊಸಾ ಮನೆಗೆ ಮಲಗಲು ಹೋಗುತ್ತಿದ್ದೆವು. ಊರಲ್ಲಿ ಇದ್ದಾಗ ಈ ಗೋವಿಂದಪ್ಪನೂ ನಮ್ಮೊಡನೆ ಬರುತ್ತಿದ್ದರು. ದಿಂಬಿಗೆ ತಲೆ ಕೊಟ್ಟರೆ ಸಾಕು ಗೋವಿಂದಪ್ಪನ ಗೊರಕೆಗಳು ಶುರುವಾಗಿಬಿಡುತ್ತಿದ್ದವು. ಅಣ್ಣ `ಅಯ್ಯೊ ಈ ಗೊರಕೇಲಿ ಅದೆಂಗಪ್ಪ ನಿದ್ದೆ ಮಾಡೋದು,’ ಅಂತ ಗೊಣಗುತ್ತಾ ಎದ್ದು ಕೂತಿರುತ್ತಿದ್ದರು. ಗೊಣಗಿಕೊಂಡೇ ಪಕ್ಕದಲ್ಲಿ ಮಲಗಿರುತ್ತಿದ್ದ ಗೋವಿಂದಪ್ಪನನ್ನು ಜೋರಾಗಿ ಅಲುಗಾಡಿಸುತ್ತಿದ್ದರು. ಹಾಗೆ ಅಲುಗಾಡಿಸಿದಾಗ ಎಚ್ಚರವಾಗಿಬಿಡುತ್ತಿದ್ದ ಗೋವಿಂದಪ್ಪ `ಇದ್ಯಾಕಲ ಮಗಾ ಈಟೊತ್ನಾಗೆ ಎದ್ದು ಕೂತಿದ್ದೀಯಾ,’ ಅಂತ ಅನ್ನುತ್ತಲೇ ಅಗಾ ಇಗಾ ಅನ್ನುವುದರೊಳಗೆ ನನಗೆ ಮತ್ತು ಅಣ್ಣನಿಗೆ ನಿದ್ದೆ ಹತ್ತುವ ಮುನ್ನವೇ ಮತ್ತೆ ನಿದ್ದೆಗೆ ಜಾರಿ ಬಿಡುತ್ತಿದ್ದರು. ತಗೋ ಮರು ಕ್ಷಣಕ್ಕೇ ಗೊರಕೆಯ ಗಾಣವಾಗಿ ಬಿಡುತ್ತಿದ್ದರು. ಅಣ್ಣನಿಗೆ ಅಸಾಧ್ಯ ಸಿಟ್ಟು ಬರುತ್ತಿತ್ತು. ಆದರೂ ಗೋವಿಂದಪ್ಪನ ಮೇಲೆ ರೇಗಾಡಲು ಮನಸ್ಸು ಬಾರದೆ ತೆಪ್ಪಗಾಗಿಬಿಡುತ್ತಿದ್ದರು.
ಇಂಥ ಗೋವಿಂದಪ್ಪನಿಗೂ ನಮ್ಮ ಕಲ್ಬಾವಿಗೂ ಒಂದು ವಿಚಿತ್ರ ನಂಟಿತ್ತು. ಅದೆಂದರೆ ನಮ್ಮ ಊರಿನಲ್ಲಿ ಉಳಿದಿದ್ದಾಗಲೆಲ್ಲಾ ಗೋವಿಂದಪ್ಪ ಬೆಳಗಿನ ಜಾವಕ್ಕೇ ಎದ್ದುಬಿಡುತ್ತಿದ್ದರು. ಆ ಚಣಕ್ಕೆ ಕೆಲವೊಮ್ಮೆ ನನಗೂ ಎಚ್ಚರವಾಗಿಬಿಡುತ್ತಿತ್ತು. ಆದರೆ ಹಂಗೇ ಕಂಬಳಿಯೊಳಗೆ ಸುಂಟಿಕೊಂಡು ಮತ್ತೆ ಮಲಗಿಬಿಡುತ್ತಿದ್ದೆ. ಅವತ್ತು ನಾನು, ಅಣ್ಣ ಮತ್ತು ಗೋವಿಂದಪ್ಪ ಹೊಸ ಮನೆಯಲ್ಲಿ ಮಲಗಿದ್ದೆವು. ಅದು ಡಿಸೆಂಬರ್ ತಿಂಗಳು. ಎಂದಿನಂತೆ ಗೋವಿಂದಪ್ಪ ಬೆಳಗಿನ ಜಾವಕ್ಕೇ ಎದ್ದರು. ನನಗೂ ಎಚ್ಚರವಾಯ್ತು. ಈಟೊತ್ತಿಗೇ ಎದ್ದು ಈ ಮನುಷ್ಯ ಹೋಗುವುದಾದರೂ ಎಲ್ಲಿಗೆ ಅನ್ನುವ ಕುತೂಹಲವೊಂದು ಇದ್ದೇ ಇತ್ತು. ಹಂಗಾಗಿ ನಾನೂ ಮೆಲ್ಲಗೆ ಎದ್ದು ಅವರ ಗಮನಕ್ಕೆ ಬಾರದಂತೆ ಅವರನ್ನೇ ಹಿಂಬಾಲಿಸಿದ್ದೆ. ಅವತ್ತು ಬೆಳಗಿನ ಜಾವಕ್ಕೆ ಬಂದಿದ್ದರೂ ಚಂದ್ರ ಇನ್ನೂ ಎದ್ದೇ ಇದ್ದ. ಅದೂ ಹಾಲಿನಂಥ ಬೆಳಕು ಚೆಲ್ಲುತ್ತಾ. ಚಳಿಯ ಗುಟುರೂ ಚಂದ್ರನ ಬೆಳಕಿನೊಂದಿಗೆ ಪೈಪೋಟಿಗಿಳಿದಿತ್ತು. ಅವರು ಎದ್ದವರೇ ತೋಟದ ಹೊಳೆಬಾಗಿಲಿನ ಪಕ್ಕದಲ್ಲೇ ಇದ್ದ ಬೇವಿನ ಸಸಿಯಿಂದ ಒಂದು ಹಿಡಿ ಬೇವಿನ ಸೊಪ್ಪನ್ನು ಕಿತ್ತುಕೊಂಡು ಹಲ್ಲುಗಳನ್ನು ಉಜ್ಜಿಕೊಳ್ಳುವ ಸಲುವಾಗಿ ಒಂದು ಬೇವಿನಕಡ್ಡಿಯನ್ನು ಮುರುಕಂಡು ಸೀದಾ ಕಲ್ಬಾವಿಯತ್ತ ಹೋದರು. ಹೋದವರೇ ಪುಟಗೋಸಿಯೊಂದಿಗೆ ಬಾವಿಯ ಒಂದೊಂದೇ ಮೆಟ್ಟಿಲುಗಳನ್ನು ಇಳಿದು ಈಜುಬಿದ್ದರು. ಹಲವು ಸುತ್ತು ಬಾವಿಯಲ್ಲಿ ಈಜಾಕಿದರು. ಆಮೇಲೆ ಕುತ್ತಿಗೆಮಟ್ಟ ನೀರಿನಲ್ಲಿ ನಿಂತರು. ಅಲ್ಲೇ ಎಟಕುವಂತೆ ಕಲ್ಲೊಂದರ ಮೇಲೆ ಇಟ್ಟಿದ್ದ ಬೇವಿನ ಸೊಪ್ಪನ್ನು ಒಂದಷ್ಟಷ್ಟೇ ಬಾಯಿಗಾಕಿಕೊಂಡು ಅಗಿದು ನುಂಗಿದರು. ನಂತರ ಬೇವಿನ ಕಡ್ಡಿಯನ್ನು ಕಚ್ಚಿ ಬ್ರಷ್ ಥರ ಮಾಡಿಕೊಂಡು ಹಲ್ಲುಗಳನ್ನು ಉಜ್ಜುತ್ತಾ ಕುತ್ತಿಗೆಮಟ್ಟ ನೀರಿನಲ್ಲಿದ್ದುಕೊಂಡೇ ಜೋರಾಗಿ ಕ್ಯಾಕರಿಸುತ್ತಾ ಬಾವಿಯ ದಡಕ್ಕೆ ಉಗಿದರು. ಇದು ಒಂದೈದು ನಿಮಿಷ ನಡೆಯಿತು. ಅದು ಮುಗಿದ ಮೇಲೆ ನಿಂತಲ್ಲೇ ಬೊಗಸೆಯಿಂದ ನೀರನ್ನು ತಲೆ ಮೇಲಕ್ಕೆ ಎರಚಿಕೊಂಡು ಬರಿಗೈಯ್ಯಲ್ಲೇ ತಲೆಯನ್ನು ಉಜ್ಜಿಕೊಂಡರು. ಇದು ಒಂದು ಹಂತಕ್ಕೆ ಬರುವ ಹೊತ್ತಿಗೆ ಮೂಡಲಲ್ಲಿ ಅಚ್ಚಗಾಗುತ್ತಿತ್ತು. ನಾನು ಹೊದ್ದಿದ್ದ ರಗ್ಗಿನೊಂದಿಗೆ ಬಂದಿದ್ದರೂ ಚಳಿ ಇಕ್ಕಡಿಸುತ್ತಿತ್ತು. ಹಲ್ಲು ಉಜ್ಜಿ ಆದ ಮೇಲೆ ಮತ್ತೊಂದು ಸುತ್ತು ಈಜಿಗಿಳಿದರು. ಈಗ ಮೊದಲಿನಂತೆ ಬಾವಿಯನ್ನು ಸುತ್ತಾಕದೇ ಇದ್ದಕ್ಕಿದ್ದಂತೆ ಮುಳುಗಿದರು. ಮುಳುಗಿ ಒಂದೆರಡು ಚಣ ಕಳೆದರೂ ಮೇಲೇಳಲಿಲ್ಲ. ನನಗೆ ಎದೆ ಹೊಡೆದುಕೊಳ್ಳಲಾರಂಭಿಸಿತು. ಯಾಕಾದರೂ ಬಂದೆನಪ್ಪಾ ಅಂತ ನಡುಗಲಾರಂಭಿಸಿದೆ. ಆ ನಡುಗು ಕಡೆಗೆ ಅಳುವನ್ನು ಒತ್ತರಿಸಿ ತಂತು. ನಾನೂ ಜೋರು ದನಿಯಲ್ಲಿ ಅಳಲು ಶುರುಮಾಡುವುದೂ ಗೋವಿಂದಪ್ಪ ನೀರಿನಿಂದ ಮೇಲೆದ್ದು ಬರುವುದು ಒಂದೇ ಆಯ್ತು. ಅವರಿಗೆ ದಡದಲ್ಲಿ ನಿಂತಿದ್ದ ನನ್ನನ್ನು ನೋಡಿ ಅಚ್ಚರಿಯಾಯ್ತು. `ಎಲಾ ಮಗಾ, ಇಲ್ಲಿಗ್ಯಾಕಪ್ಪ ಬರಾಕೆ ಹೋದೆ’ ಅಂತ ಅನ್ನುತ್ತಾ ದಡದತ್ತ ಬಂದರು. ಚೆನ್ನಾಗೇ ಅಚ್ಚಗಾಯಿತು. ಸೂರ್ಯನೂ ಇಣುಕತೊಡಗಿದ. ಮೊಣಕಾಲು ಮುಳುಗುವಷ್ಟು ನೀರಿಗೆ ಬಂದು ನಿಂತ ಗೋವಿಂದಪ್ಪ ಕೊಂಚ ಮೇಲೆ ಬಂದು ಬಾವಿಯ ಇಳಿಯುವ ಮೆಟ್ಟಿಲುಗಳ ಮೇಲೆ ನಿಂತು ಸೂರ್ಯನತ್ತ ಮುಖ ಮಾಡಿ ದೀರ್ಘ ನಮಸ್ಕಾರ ಮಾಡಿದರು. ನಂತರ ಅಲ್ಲೇ ಇಳಿಯುವ ದಾರಿಯ ಮೆಟ್ಟಿಲುಗಳ ಮೇಲೆ ಜಿಗಿದು ಒಂದಷ್ಟು ಹೊತ್ತು ಕೂತರು. ಗೋವಿಂದಪ್ಪನವರ ಆ ನಡಾವಳಿಕೆ ನನಗೆ ಆಗ ವಿಚಿತ್ರವಾಗಿ ಕಂಡಿತ್ತು. ಒಂದಿನ ನಾನು ಇದ್ಯಾಕೆ ಹಿಂಗೆ ಅಜ್ಜನನ್ನು ಕೇಳಿದ್ದೆ. `ಅವ್ನು ಹಂಗೇಯಾ. ಅದೊಂದು ಭ್ರಾಂತು. ಬೆಳ್ಕರುದ್ಮ್ಯಾಲೆ ಹೋದ್ರೆ ಆಗಲ್ವ. ಮೈ ಬಿಡಾಕಾಗಲ್ಲ ಅಂಥ ಚಳೀಲಿ ಅಲ್ಲಿ ನಿಂತ್ಕಂತಾನಲ್ಲ. ನಾನೂ ಹೇಳಿ ನೋಡ್ದೆ. ಅವ್ನು ಕೇಳಿಸ್ಕಂಡ್ರೆ ತಾನೆ ನನ್ನ ಮಾತ್ನ. ಅದೇನು ಕಂಡ್ಕಂಡಿದಾನೋ ಅದ್ರಲ್ಲಿ. ಹಂಗ್ಮಾಡಾದ್ರಿಂದ ಅದ್ಕೆ ಮನ್ಸು ಹಗುರಾಗಬವ್ದು ಅನ್ಸುತ್ತೆ. ಮಾಡ್ಕಳ್ಲಿ ಬಿಡು’ಅಂತ ಅಂದಿತ್ತು ಅಜ್ಜ.

ಇಲ್ಲಿ ಬರುವ ಅಯ್ಯ, ಅಜ್ಜ, ಅಣ್ಣ, ಗೋವಿಂದಪ್ಪ ಯಾರೊಬ್ಬರೂ ಈಗ ಇಲ್ಲ. ಒಂದು ಕಾಲದಲ್ಲಿ ನಮ್ಮ ಮನೆಗೆ ಆಸರೆಯಾಗಿದ್ದ ಒಡಕು ಲಾಟೀನನ್ನು ಹಳೆಮನೆಯ ಪಡಸಾಲೆಯಲ್ಲಿದ್ದ ಚಾಪೆಗಳನ್ನು ಇಡಲೆಂದು ಮಾಡಿಸಿದ್ದ ಮರದ ಚೌಕಟ್ಟಿಗೆ ಕಟ್ಟಿ ಸುಮಾರು ವರ್ಷ ಕಾಪಾಡಿಕೊಂಡಿದ್ದೆ. ಅದು ಹೆಂಗೆ ಪಡಸಾಲೆಯ ಅಟ್ಟವನ್ನು ಸೇರಿತ್ತೋ ಗೊತ್ತಿಲ್ಲ. ಅದು ಅಲ್ಲೊಂದಷ್ಟು ದಿನ ಕೂಕಾಕಿತು. ಆದರೆ ಅಟ್ಟದಲ್ಲಿ ಕಾಯಿ, ಕೊಬ್ಬರಿಗಳಿಂದ ಪೆಟ್ಟು ತಿಂದು ತಗ್ಗಿ ನುಗ್ಗೇಕಾಯಿಯಾಗಿದ್ದ ಲಾಟೀನು ಅದೊಂದು ದಿನ ಕೊಬ್ಬರಿ ಸುಳಿಯಲು ಬಂದಿದ್ದವರು ತೋಟದ ಬೇಲಿಯೊಳಕ್ಕೆ ಬಿಸಾಡಿದರು. ದಿನ ಕಳೆದಂತೆ ಅದು ಹಂಗೇ ಆ ಬೇಲಿಯಲ್ಲಿ ಕರಗಿಹೋಯ್ತು. ಇವೆಲ್ಲಾ ಆಗಾಗ ನೆನಪಿನ ಕಣ್ಣಿನಲ್ಲಿ ಪೊರೆ ಬಿಡುತ್ತವೆ. ಕಲ್ಬಾವಿ ಈಗಲೂ ಇದೆ. `ಅದ್ಯಾಕೆ ಹಂಗೇ ಹೋಗ್ತೀಯಾ, ನೋಡಲ್ವ ನನ್ನ’ ಅಂತ ಅತ್ತ ಹೋದಾಗಲೆಲ್ಲಾ ನನ್ನೊಡನೆ ಮಾತಿಗಿಳಿಯುತ್ತದೆ. ಆದರೆ ಆ ಮಿಂಚುಳುಗಳು ಮಾತ್ರ ಮಾಯವಾಗಿಬಿಟ್ಟಿವೆ. ಅದಾವ ಮಾಯಾಲೋಕದಲ್ಲಿ ಮನೆ ಮಾಡಿಕೊಂಡಿದ್ದಾವೋ ಗೊತ್ತಿಲ್ಲ. ಊರಿನಲ್ಲಿ ಉಳಿದುಕೊಂಡ ದಿನಗಳಲ್ಲಿ ತೋಟದ ಅದೇ ಕತ್ತಲೆಯನ್ನು ದಿಟ್ಟಿಸುತ್ತೇನೆ. ಮಿಂಚುಳುಗಳ ಹಿಂಡಿಗಾಗಿ ಕಾಯುತ್ತೇನೆ. ಒಂದೇ ಒಂದು ಮಿಂಚುಳದ ಮಿಣುಕೂ ಕಣ್ಣಿಗೆ ಬೀಳುವುದಿಲ್ಲ. ಕೆಲವೊಮ್ಮೆ ಸಂಜೆಗತ್ತಲಲ್ಲಿ ತಿಪಟೂರಿನ ಮನೆಯ ಪಕ್ಕದ ಕೈ ತೋಟವನ್ನು ದಿಟ್ಟಿಸುವಾಗ ಕೈತೋಟದ ತುಂಬಾ ಮಿಂಚುಳಗಳು ಕಂಡಂತೆ, ಮತ್ತೆ ಮಿಂಚಿನಂತೆ ಮಾಯವಾದಂತೆ ಭಾಸವಾಗುತ್ತದೆ.
(ಹಿಂದಿನ ಕಂತು: ಜೇನು ಪೊಟರೆಯ ಹಾವು, ಕ್ವಾಕ್ ಡಾಕ್ಟರ್ ಮತ್ತವಳ ಹಾವು ಹಿಡಿವ ಗಂಡ)

ಎಸ್. ಗಂಗಾಧರಯ್ಯ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕುವಳ್ಳಿಯವರು. ಪ್ರಸ್ತುತ ವಾಸ ತಿಪಟೂರಿನಲ್ಲಿ. ಕಥಾ ಸಂಕಲನ: ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ, ಮಣ್ಣಿನ ಮುಚ್ಚಳ, ಎರೆ ನೆತ್ತಿ -ಈ ತನಕದ ಕಥೆಗಳು, ಕಾದಂಬರಿ: ಗಂಗಪಾಣಿ, ವ್ಯಕ್ತಿಚಿತ್ರ ಸಂಪುಟ: ಬಯಲ ಪರಿಮಳ, ಅನುವಾದ: `ವೈಕಂ ಕಥೆಗಳು’, ಲೋರ್ಕಾ ನಾಟಕ-`ಎರ್ಮಾ’, ಲೋರ್ಕಾಕಾವ್ಯ-`ಚರಮಗೀತೆ’, `ಹಲವು ರೆಕ್ಕೆಯ ಹಕ್ಕಿʼ-ವಿವಿಧ ಲೇಖಕರ ಕಥೆಗಳು, ಟರ್ಜೆನೇವ್‌ರ `ಬೇಟೆಗಾರನ ಚಿತ್ರಗಳು’, ದಾರಿಯೋ ಫೋ ನಾಟಕ-`ಗುಲಾಬಿ ಗರ್ಭ’, ಮಾರ್ಕ್ವೆಜ್ ಸಂದರ್ಶನ-`ಫ್ರೇಗ್ರನ್ಸ್ ಆಫ್ ಗ್ವಾವ’, ಚಿಂಗೀಝ್ ಐತ್ಮತೋವ್‌ನ ಕಾದಂಬರಿ- `ಜಮೀಲಾ’, ಬುನಿನ್ ಕಥೆಗಳು, ಅರ್ನೆಸ್ಟ್ ಹೆಮಿಂಗ್ವೆ -ಇಂಡಿಯನ್‌ಕ್ಯಾಂಪ್ ಮತ್ತು ಇತರ ಕಥೆಗಳು, ಮಾರ್ಕ್ವೆಜ್ ಕಥೆಗಳು, ದಾರಿಯೋ ಫೋ ವಾಚಿಕೆ, ಲೋರ್ಕಾ ನಾಲ್ಕು ನಾಟಕಗಳು, ಇವರ ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಅನುವಾದ – 1996), ಕರ್ನಾಟಕ ಸಾಹಿತ್ಯಅಕಾಡೆಮಿ ಪುಸ್ತಕ ಬಹುಮಾನ (ಕಥೆ – 2018), ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪ್ರಶಸ್ತಿ(2018), ಶಿವಮೊಗ್ಗ ಕರ್ನಾಟಕ ಸಂಘದ ಡಾ.ಯು.ಆರ್.ಅನಂತಮೂರ್ತಿ ಪ್ರಶಸ್ತಿ.(2018), ತುಮಕೂರಿನ ವೀ.ಚಿ.ಪ್ರತಿಷ್ಠಾನದ ವೀ.ಚಿ.ಪ್ರಶಸ್ತಿ (2018), ಸೇಡಂನ ಅಮ್ಮ ಪ್ರಶಸ್ತಿ(2022), ಶಾ. ಬಾಲೂರಾವ್ ಅನುವಾದ ಪ್ರಶಸ್ತಿ(2023) ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳು ಇವರಿಗೆ ದೊರೆತಿವೆ.

