ಗಜಾಲಾ ವಹಾಬ್ ಬರೆದ ಈ ಪುಸ್ತಕದಲ್ಲಿ ಚಿಂತನಶೀಲ ಬರಹಗಳಿವೆ. ಇಸ್ಲಾಮಿನ ಧಾರ್ಮಿಕ ರಚನೆ-ನೀತಿನಿಯಮಗಳ ಇತಿಹಾಸವನ್ನು ಆಳವಾಗಿ ಶೋಧಿಸುತ್ತ ಪ್ರವಾದಿಯವರ ಮರಣಾನಂತರ ಖಲೀಫರ ಕಾಲದಿಂದ ಧಾರ್ಮಿಕ ಏಕಸ್ವಾಮ್ಯಕ್ಕಾಗಿ ಶಿಯಾ ಸುನ್ನಿಗಳ ನಡುವಿನ ಮತಬೇಧಗಳು, ಕುಲೀನ ಆಶ್ರಫ್, ಸೈಯದ್ ಮತ್ತು ಪಠಾಣರ ನಡುವಿನ ಶ್ರೇಣೀಕರಣಗಳು ಮುಸ್ಲಿಮ್ ಸಮಾಜವನ್ನು ಒಳಗಿನಿಂದಲೇ ಹೇಗೆ ಶಿಥಿಲಗೊಳಿಸಿದವು ಎಂದು ದಾಖಲಿಸುತ್ತಾರೆ. ಡಾ. ಎಸ್. ಸಿರಾಜ್ ಅಹ್ಮದ್ ಲೇಖನ ಇಲ್ಲಿದೆ.
ಗಜಾಲಾ ವಹಾಬ್ ಅವರ ಪುಸ್ತಕ “ಬಾರ್ನ್ ಮುಸ್ಲಿಮ್ : ಸಮ್ ಟ್ರುತ್ಸ್ ಅಬೌಟ್ ಇಸ್ಲಾಮ್ ಇನ್ ಇಂಡಿಯಾ” ಪುಸ್ತಕವು ಭಾರತೀಯ ಮುಸ್ಲಿಮ್ ಸಮಾಜದ ಇಂದಿನ ಸ್ಥಿತಿ, ಎದುರಿಸುತ್ತಿರುವ ಸವಾಲುಗಳು, ಅದರ ಇತಿಹಾಸ-ಭವಿಷ್ಯವನ್ನು ಕುರಿತು ಸುದೀರ್ಘ ಚಿಂತನೆಯನ್ನು ನಡೆಸುವ ಪುಸ್ತಕವಾಗಿದೆ. ಮುಸ್ಲಿಮರನ್ನು ಕುರಿತ ಅಸಹನೆ, ದ್ವೇಷ, ಹಿಂಸೆಗಳು ಭಾರತದಲ್ಲಿ ಸಾಮಾನ್ಯವಾಗುತ್ತಿರುವ ಕಾಲದಲ್ಲಿ ಪುಸ್ತಕದಲ್ಲಿನ ಪ್ರಶ್ನೆಗಳು ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳೆರಡನ್ನೂ ಆತ್ಮವಿಮರ್ಶೆಗೆ ಹಚ್ಚುವಂತಿವೆ. ಪ್ರಪಂಚದ ಎರಡನೇ ಮುಖ್ಯ ಧರ್ಮವಾಗಿರುವ ಇಸ್ಲಾಮನ್ನು ಅನುಸರಿಸುವವರ ಸ್ಥಿತಿ ಅಮೆರಿಕಾದ ಕಪ್ಪುಜನರಿಗಿಂತ ಯಾಕೆ ಹೀನಾಯವಾಗಿದೆ ಎಂಬುದು ಇಲ್ಲಿನ ವಿಶ್ಲೇಷಣೆಯ ಸಂಗತಿಯಾಗಿದೆ.
ವೃತ್ತಿಯಿಂದ ರಕ್ಷಣಾ ಪತ್ರಿಕೋದ್ಯಮಿಯಾಗಿರುವ ಗಜಾಲಾ ಆತ್ಮಚರಿತ್ರೆ, ಇತಿಹಾಸ, ರಾಜಕೀಯ, ಸಾಮಾಜಿಕ ವಿಶ್ಲೇಷಣೆ, ವರದಿಗಾರಿಕೆ, ಅಂಕಿಅಂಶಗಳು, ಸಂದರ್ಶನಗಳೆಲ್ಲವನ್ನು ಆಧರಿಸಿ ತಮ್ಮ ಬರಹವನ್ನು ರೂಪಿಸಿದ್ದಾರೆ. ಜಾಕೀರ್ ನಾಯಕರಂಥವರ ಮತೀಯ ನಿರೂಪಣೆಗಳಿಗಿಂತ ಭಿನ್ನವಾದ ಇಸ್ಲಾಮನ್ನು ಕುರಿತು ಬರೆಯಬೇಕೆಂಬ ಹಂಬಲ ಹಾಗೂ ದೆಹಲಿಯ ಶಾಹೀನ್ ಬಾಗ್ ನಲ್ಲಿ ಮಹಿಳೆಯರೇ ಎನ್ ಆರ್ ಸಿ ವಿರುದ್ಧ ಮುನ್ನಡೆಸಿದ ಹೋರಾಟಗಳು ಪುಸ್ತಕ ಬರೆಯಲು ಮುಖ್ಯ ಪ್ರೇರಣೆ ಎಂದು ಗಜಾಲಾ ಹೇಳುತ್ತಾರೆ.
ವೃತ್ತಿಯಿಂದ ರಕ್ಷಣಾ ಪತ್ರಿಕೋದ್ಯಮಿಯಾಗಿರುವ ಗಜಾಲಾ ಆತ್ಮಚರಿತ್ರೆ, ಇತಿಹಾಸ, ರಾಜಕೀಯ, ಸಾಮಾಜಿಕ ವಿಶ್ಲೇಷಣೆ, ವರದಿಗಾರಿಕೆ, ಅಂಕಿಅಂಶಗಳು, ಸಂದರ್ಶನಗಳೆಲ್ಲವನ್ನು ಆಧರಿಸಿ ತಮ್ಮ ಬರಹವನ್ನು ರೂಪಿಸಿದ್ದಾರೆ.
ಆಗ್ರಾದ ತಾಜ್ ಮಹಲಿನ ಆಸುಪಾಸಿನಲ್ಲಿರುವ ಕಿಕ್ಕಿರಿದ ಗಲ್ಲಿ ಮೊಹಲ್ಲಾದಲ್ಲಿ ಬದುಕಿದ್ದ ಗಜಾಲಾರ ಕುಟುಂಬ ಆರ್ಥಿಕವಾಗಿ ಸಬಲಗೊಂಡಂತೆ “ಎಲ್ಲರೂ” ಇರುವ ಬಡಾವಣೆಗೆ ಚಲಿಸುತ್ತದೆ. ಎಲ್ಲರೊಂದಿಗೆ ಅತ್ಯುತ್ತಮ ಬಾಂಧವ್ಯ-ಒಡನಾಟವಿದ್ದರೂ ಅಡ್ವಾಣಿಯವರ ರಥಯಾತ್ರೆಯ ಸಂದರ್ಭದಲ್ಲಿ ನೆರೆಮನೆಯ ಹುಡುಗನೇ ಇವರ ಮನೆಗೆ ಬೆಂಕಿ ಹಚ್ಚಲು ಮುಂದಾದಾಗ ಅಕ್ಕಪಕ್ಕದವರನ್ನು ಸೇರಿದಂತೆ ಪೊಲೀಸರೂ ನೆರವಿಗೆ ಬರದಿದ್ದಾಗ ಗಜಾಲಾರ ಇಡೀ ಕುಟುಂಬ ಆಘಾತಕ್ಕೆ ಒಳಗಾಗುತ್ತದೆ. ಶಿಕ್ಷಣ, ಸಾಮಾಜಿಕ ಸ್ಥಾನಮಾನ, ಹಣ, ಒಳ್ಳೆಯ ಒಡನಾಟಗಳಿದ್ದರೂ ನಾವು ಯಾಕೆ ಕೇವಲ ಮುಸ್ಲಿಮರೇ ಆಗಿ ಯಾಕೆ ಕಾಣಿಸಿದೆವು ಎಂದು ಅವರ ತಂದೆ ಮತ್ತು ಇಡೀ ಕುಟುಂಬ ಪ್ರಶ್ನಿಸಿಕೊಳ್ಳುತ್ತದೆ. ಇದು ಕೇವಲ ಗಜಾಲಾರ ಕುಟುಂಬದ ಪ್ರಶ್ನೆ ಮಾತ್ರ ಆಗಿರದೆ ಎಲ್ಲರ ಪ್ರಶ್ನೆಯೂ ಅಗಿದೆಯೆಂದು ಇಲ್ಲಿನ ಕಥನ ಹೇಳುತ್ತದೆ. ಘಟನೆಯ ನಂತರ ಗಜಾಲಾರ ಕುಟುಂಬದವರು ಮತ್ತೆ ತಮ್ಮ ಮೊಹಲ್ಲಾಗೆ ಮರಳುವಂತೆ ಹೇಳಿದರೂ ಅವರ ತಂದೆ ಹೋಗುವುದಿಲ್ಲ-ಕುಟುಂಬದ ಇತರರು ಮೊಹಲ್ಲಾದಿಂದ ಬೇರೆಡೆಗೆ ಹೋಗುವುದಿಲ್ಲ. ಆದರೆ ಈ ಘಟನೆ ಶಿಕ್ಷಿತ ಹಾಗೂ ಮೇಲ್ಮಧ್ಯಮ ವರ್ಗಕ್ಕೆ ಸೇರಿದ ಗಜಾಲಾರ ಕೌಟುಂಬಿಕ ಪರಿಸರದಲ್ಲಿ ಬಹುದೊಡ್ಡ ಬದಲಾವಣೆಯನ್ನು ತರುತ್ತದೆ.
ಹೀಗೆ ಶುರುವಾಗುವ ಕಥನ ನಿಧಾನವಾಗಿ ಸ್ವತಂತ್ರಭಾರತದಲ್ಲಿ ಮುಸ್ಲಿಮರ ಸ್ಥಿತಿಗತಿ, ಭಾರತೀಯ ಇಸ್ಲಾಮ್, ಇಸ್ಲಾಮಿನ ಇತಿಹಾಸ-ನಂಬಿಕೆಗಳು, ರಾಜಕೀಯ ನೇತಾರರು, ಮಹಿಳೆಯರು, ಶಿಕ್ಷಣ, ಜಮಾತ್ ಗಳು, ಬದಲಾಗುತ್ತಿರುವ ಮುಸ್ಲಿಮ್ ಸಮಾಜ ಎಲ್ಲವನ್ನು ವಿಶ್ಲೇಷಿಸುವ ವಿಸ್ತಾರವಾದ ನಿರೂಪಣೆಯಾಗಿ ಬೆಳೆಯುತ್ತದೆ. ಚಿಕ್ಕಂದಿನಿಂದಾಗಿನಿಂದ ನೀವೆಷ್ಟು ಜನರನ್ನು ಮದುವೆಯಾಗಬಹುದು, ನೀವ್ಯಾಕೆ ಸ್ನಾನ ಮಾಡುವುದಿಲ್ಲ, ದಿನಕ್ಕೆಷ್ಟು ಬಾರಿ ಬಿರಿಯಾನಿ ತಿನ್ನುತ್ತೀರಿ.. ಎಂದೆಲ್ಲ ಕುತೂಹಲದಿಂದ ಪ್ರಶ್ನೆ ಕೇಳುತ್ತಿದ್ದವರೆಲ್ಲ ಈಗ ಕಾರಣವನ್ನೇ ಹೇಳದೆ ದ್ವೇಷ-ಹಿಂಸೆಗೆ ಮುಂದಾಗುವ ಬಹುಸಂಖ್ಯಾತ ಪ್ರವೃತ್ತಿ ಗಜಾಲಾರನ್ನು ಎಡೆಬಿಡದೆ ಕಾಡುತ್ತದೆ. ಕೋಮುವಾದಿ ಸಿದ್ಧಾಂತದಲ್ಲಿ ನಂಬಿಕೆ ಇಲ್ಲದ- ಯಾರನ್ನೂ ದ್ವೇಷಿಸದೇ ಇರುವ ಉದಾರವಾದಿಗಳೂ ಸಹ ಮುಸ್ಲಿಮರನ್ನು ಅಸಹನೆಯಿಂದ ಕಾಣುವ ಮನೋಭಾವ ಯಾಕೆ ಎರಡು ಮೂರು ದಶಕಗಳಲ್ಲಿ ಬಲಗೊಂಡಿತು ಎಂದು ಚಿಂತಿಸುತ್ತಾರೆ.
ಸ್ವಾಂತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಇತಿಹಾಸದಲ್ಲಿ ಇದಕ್ಕೆ ಉತ್ತರಗಳು ಸಿಗಬಹುದೇ ಎಂದು ಗಜಾಲಾ ಹುಡುಕುತ್ತಾರೆ. ದೇಶದ ಯಾವುದೇ ಬೀದಿಯಲ್ಲಿ ನಿಂತು ಹೊಟ್ಟೆಹೊರೆದುಕೊಳ್ಳುವ ಒಬ್ಬ ಸಾಮಾನ್ಯ ಮುಸ್ಲಿಮನನ್ನೂ ಸೇರಿದಂತೆ ಓದು-ಬರಹ, ಒಳ್ಳೆಯ ನಡೆನುಡಿ-ವರಮಾನವಿರುವ ಮುಸ್ಲಿಮನನ್ನೂ ಕುರಿತು ಬೇರೂರಿರುವ ಪೂರ್ವಗ್ರಹ, ಅಸಹನೆ, ಕುತ್ಸಿತ ಮನೋಭಾವಗಳಿಗೆ ದೇಶವಿಭಜನೆಯ ಹಿಂಸೆ, ಆಗ ಸುಶಿಕ್ಷಿತ ಮತ್ತು ಆರ್ಥಿಕವಾಗಿ ಸಬಲರಾದ ಮುಸ್ಲಿಮರು ದೇಶವನ್ನು ತೊರೆದು ಪಾಕಿಸ್ತಾನವನ್ನು ಸೇರಿದ್ದು, ಇತಿಹಾಸವನ್ನು ತಿರುಚಿ ಮುಸ್ಲಿಮರನ್ನು ರಾಕ್ಷಸೀಕರಿಸಿದ ಕೋಮುವಾದಿಶಕ್ತಿಗಳು, ಉಲೆಮಾಗಳ ಕಟ್ಟರ್ ಧೋರಣೆಗಳು ಮತ್ತು ಮುಸ್ಲಿಮ್ ನಾಯಕರು ಹಾಗೂ ಶಿಕ್ಷಿತ ವರ್ಗದವರ ನಿಷ್ಕ್ರಿಯತೆ ಕಾರಣವಾಗಿದೆ ಎಂದು ಕಂಡುಕೊಳ್ಳುತ್ತಾರೆ.
ಹಾಗೆಯೇ ಇಸ್ಲಾಮಿನ ಧಾರ್ಮಿಕ ರಚನೆ-ನೀತಿನಿಯಮಗಳ ಇತಿಹಾಸವನ್ನು ಆಳವಾಗಿ ಶೋಧಿಸುತ್ತ ಪ್ರವಾದಿಯವರ ಮರಣಾನಂತರ ಖಲೀಫರ ಕಾಲದಿಂದ ಧಾರ್ಮಿಕ ಏಕಸ್ವಾಮ್ಯಕ್ಕಾಗಿ (ಇಸ್ಲಾಮಿನಲ್ಲಿ ಜಾತಿ ವರ್ಗಗಳಿಲ್ಲದಿದ್ದರೂ) ಶಿಯಾ ಸುನ್ನಿಗಳ ನಡುವಿನ ಮತಬೇಧಗಳು, ಕುಲೀನ ಆಶ್ರಫ್, ಸೈಯದ್ ಮತ್ತು ಪಠಾಣರ ನಡುವಿನ ಶ್ರೇಣೀಕರಣಗಳು ಮುಸ್ಲಿಮ್ ಸಮಾಜವನ್ನು ಒಳಗಿನಿಂದಲೇ ಹೇಗೆ ಶಿಥಿಲಗೊಳಿಸಿದವು ಎಂದು ದಾಖಲಿಸುತ್ತಾರೆ. ಪ್ರವಾದಿಯವರನ್ನು ವಿವಾಹವಾಗಿದ್ದ ಹಿರಿಯ ವಯಸ್ಸಿನ ವಿಧವೆ ಖದೀಜಾ (ವೃತ್ತಿಯಿಂದ ವ್ಯಾಪಾರಿ) ಅವರು ತನ್ನ ಗಂಡ ಇನ್ನೊಂದು ಮದುವೆಯಾಗದಂತೆ ಮದುವೆಗೆ ಮೊದಲೇ ಶರತ್ತು ಹಾಕುವಷ್ಟು ಸ್ವಾತಂತ್ರ್ಯ ಪಡೆದಿದ್ದ ಮುಸ್ಲಿಮ್ ಮಹಿಳೆಯರು ಕಾಲಾಂತರದಲ್ಲಿ ಶಿಕ್ಷಣ ಸ್ವಾತಂತ್ರ್ಯಗಳೆರಡನ್ನೂ ಕಳೆದುಕೊಂಡಿದ್ದು ಮತಪಂಡಿತರಾದ ಉಲೇಮಾಗಳ ಕಾರಣದಿಂದ ಎಂದು ವಿವರಿಸುತ್ತಾರೆ.
ಬಹುಸಂಖ್ಯಾತರ ದ್ವೇಷ ಪೂರ್ವಗ್ರಹಗಳು ಒಬ್ಬ ಸಾಮಾನ್ಯ ಮುಸ್ಲಿಮನಲ್ಲಿ ತನ್ನ ಐಡೆಂಟಿಟಿಯ ಬಗ್ಗೆ ಆತಂಕ, ಅಭದ್ರತೆ ಮತ್ತು ಸಮರ್ಥನೆಯ ತದ್ವಿರುದ್ಧದ ಧೋರಣೆಗಳನ್ನು ಪ್ರಚೋದಿಸುತ್ತವೆ ಎನ್ನುತ್ತಾರೆ ಗಜಾಲಾ. ತಮ್ಮ ಮನೆಯ ಹಲ್ಲೆಯ ಘಟನೆಯ ನಂತರ ಕುಟುಂಬದ ಚಿಕ್ಕಪ್ಪದೊಡ್ಡಪ್ಪಂದಿರ ಮಕ್ಕಳು ಬುರ್ಖಾ ಹಾಕಿಕೊಂಡು ಮುಸ್ಲಿಮ್ ಗೆಳತಿಯರೊಂದಿಗೆ ಇರುವುದೇ ಕ್ಷೇಮ ಎಂಬ ನಿರ್ಧಾರಕ್ಕೆ ಬರುವುದು ಮುಸ್ಲಿಮ್ ಸಮಾಜ ಈಚಿನ ದಿನಗಳಲ್ಲಿ ಪಡೆದುಕೊಳ್ಳುತ್ತಿರುವ ಆತಂಕಿತ ಧೋರಣೆಯ ಕುರುಹಾಗಿದೆ ಎನ್ನುತ್ತಾರೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವ ಮುಸ್ಲಿಮ್ ಮಹಿಳೆಯರ ಕಾರಣದಿಂದಲೇ ಬುರ್ಖಾ ದೊಡ್ಡ ಸಾರ್ವಜನಿಕ ಚರ್ಚೆಯ ವಸ್ತುವಾಗಿದೆ ಎನ್ನುತ್ತಾರೆ.
ಬದಲಾಗುತ್ತಿರುವ ಮುಸ್ಲಿಮ್ ಸಮಾಜವನ್ನು ವಿಶ್ಲೇಷಿಸುತ್ತಾ ಇತ್ತೀಚೆಗೆ ಹೆಚ್ಚಾಗುತ್ತಿರುವ ಕಠೋರ ಸಾಂಪ್ರದಾಯಿಕತೆಯನ್ನು ಪಾಲಿಸುವ ಸೌದಿ ವಹಾಬಿಸಂನ ದೂರಗಾಮಿ ಪರಿಣಾಮಗಳನ್ನು ಗುರುತಿಸುತ್ತಾರೆ.
ಶಾಹೀನ್ ಬಾಗ್ ನಲ್ಲಿ ಧೃತಿಗೆಡದೆ ಎನ್.ಆರ್.ಸಿಯ ವಿರುದ್ಧ ಮಹಿಳೆಯರು ನಡೆಸಿದ ಹೋರಾಟವನ್ನು ಮುಸ್ಲಿಮ್ ಸಮಾಜದ ಹೊಸ ಸಾಮಾಜಿಕ ಚಲನೆಯ ಸಂಕೇತವಾಗಿ ನೋಡುತ್ತಾರೆ. ಗಜಾಲಾ ಹೇಳುವಂತೆ “ಭಯದಿಂದ ಪ್ರತಿಭಟನೆ, ದಿಗಿಲಿನಿಂದ ಆಕ್ರೋಶ, ಸಂಕುಚಿತತೆಯಿಂದ ಸ್ವರಕ್ಷಣೆಯ” ತದ್ವಿರುದ್ಧ ದಿಕ್ಕುಗಳಲ್ಲಿ ಚಲಿಸುತ್ತಿರುವ ಮುಸ್ಲಿಮ್ ಸಮಾಜದ ಅನಿಶ್ಚಿತ ಭವಿಷ್ಯವನ್ನು ತೋರಿಸುತ್ತಲೇ ಪುಸ್ತಕವು ಭಾರತೀಯ ಸಮಾಜದ ಕೂಡುಬಾಳುವೆಗೆ ಬಂದೊದಗಿರುವ ಕಂಟಕವನ್ನೂ ಕಾಣಿಸುತ್ತದೆ.
ಕನ್ನಡ ವಿಮರ್ಶಕ, ಲೇಖಕ, ಅನುವಾದಕ. ಮೂಲತಃ ಚಿತ್ರದುರ್ಗದವರು. ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರು
ಒಳ್ಳೆಯ ಪುಸ್ತಕ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಕೃತಿ ಆರ್