ನನ್ನ ತಲೆಯಿಂದ ದೊಡ್ಡ ಹೊರೆ ಇಳಿದ ಹಾಗನ್ನಿಸಿತು. ಸಾವಿರಾರು ರುಪಾಯಿ ಮಿಗಿಸಿದ ಸಂತೋಷ ಆಯ್ತು. ರೂಪಿ ಸೆವ್ಡ್ ಈಸ್ ರೂಪಿ ಅರ್ನ್‌ಡ್ ಎನ್ನುವ ಫಿಲಾಸಫಿ ನನ್ನದು ಆ ಕಾಲದಿಂದಲೇ…….! ಈ ಸಂತೋಷ ಒಂದುಕಡೆ ಮತ್ತು ಇಡೀ ಜೀವಮಾನ ಅನುಭವಿಸಬೇಕಿದ್ದ ಮಾನಸಿಕ ಒತ್ತಡ ಒಂದುಕಡೆ ನಿವಾರಣೆ ಆದ ಖುಷಿ ಸಿಕ್ತಾ? ಇಂತಹ ಸಮಯದಲ್ಲಿ ನೀವೇನು ಮಾಡ್ತಿರೋ ಗೊತ್ತಿಲ್ಲ. ನಾನು ಜೇಬಿನಿಂದ ನೂರು ರೂಪಾಯಿನ ನೋಟು ತೆಗೆದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತನೆಯ ಕಂತು
ಹಿಂದಿನ ಎಪಿಸೋಡ್ ಹೀಗೆ ಮುಗಿದಿತ್ತು…
“ಸಾಮಿ ದೇವರು ಇದು ಈ ಮರ. ಬ್ರಾಮೀನ್ಸ್ ಮುಂಬಾಗಿಲಿಗೆ ಮಡಗಲ್ಲ ಇದನ್ನ…” ಅಂದ.
“ಮುಂಬಾಗಿಲಿಗೆ ಬೇರೆ ಮರ ಇಡೋಣ. ನೀನು ಇದರ ಬಗ್ಗೆ ತಲೆ ಕೆಡಿಸಿಕೊಬೇಡ…..” ಅಂದೆ, ಗಡಸು ಧ್ವನಿಯಲ್ಲಿ. ಅವನು ಮೀಸೆಯಲ್ಲೇ ನಕ್ಕ ಅಂತ ನನಗೆ ಅನಿಸಿತು. ಸರಿ ಮಲ್ಲಯ್ಯ ನನ್ನ ದಾರಿಗೆ ಬರಬೇಕು ಮತ್ತು ನನ್ನಾಕೆ ಎದುರು ಬೇವಿನ ಮರದ ಬಗ್ಗೆ ನೆಗೆಟಿವ್ ಐಡಿಯಾ ಕೊಡದ ಹಾಗೆ ನೋಡಿಕೊಳ್ಳಬೇಕು ಎನ್ನುವ ಯೋಚನೆ ತಲೆಯಲ್ಲಿ ಬಂದಿತಾ….?
ಮಲ್ಲಯ್ಯನನ್ನು ಟ್ರ್ಯಾಪ್ ಮಾಡುವ ಯೋಜನೆ ತಲೆಯಲ್ಲಿ ನಿಧಾನಕ್ಕೆ ಶೇಪ್ ತೆಗೆದುಕೊಳ್ಳಲು ಶುರು ಹಚ್ಚಿತು. ಅದೂ ಎಂತಹ ಫೆಂಟಾಸ್ಟಿಕ್ ಐಡಿಯಾಗಳು ತಲೆಗೆ ಹೊಳೆದವು ಎಂದರೆ ನನ್ನ ತಲೆಯ ಬಗ್ಗೆ ನನಗೇ ತುಂಬಾ ದೊಡ್ಡ ಮೆಚ್ಚುಗೆ ಹುಟ್ಟಿತು. ನನ್ನ ತಲೆಯನ್ನು ತಬ್ಬಿಕೊಂಡು ಲೊಚ ಲೋಚ ಮುದ್ದಿಸಿ ನನ್ನ ಅಭಿಮಾನ ತೋರಿಸಬೇಕು ಅನಿಸಿಬಿಟ್ಟಿತು!
ಇಂತಹ ಹಿಮಾಲಯದ ಮೇಲೆ ಕೂತ, ಕಾಮನ ಬಿಲ್ಲಿನ ಮೇಲೆ ತೇಲಾಡುತ್ತಿರುವ ಸಮಯದಲ್ಲಿ ನಿಮ್ಮ ಮನೋಭಾವ ಹೇಗಿರುತ್ತೆ? ನನಗೂ ಸಹ ಅದೇ ಆಗಿದ್ದು. ನಿರಾಳವಾಗಿ ಪ್ರಪಂಚ ಮರೆತು ಒಂದು ವಾರ ಮಲಗಿ ಗೊರಕೆ ಹೊಡೆಯಬೇಕು ಅನಿಸುತ್ತೆ ತಾನೇ? ಹೀಗಾಗಿ ನಾನು ಮುಂದಿನ ಕತೆಗಾಗಿ ನಿಮ್ಮನ್ನು ಕಾಯಿಸಲೇಬೇಕಾದ ಅನಿವಾರ್ಯತೆ ಹುಟ್ಟಿದೆ!
ಮಿಕ್ಕಿದ್ದು ಮತ್ತು ಕತೆಯ ಮುಂದಿನ ಭಾಗವನ್ನು ಹಿಮಾಲಯದಿಂದ ಕೆಳಗೆ ಬಂದ ನಂತರ, ಕಾಲಿನ ಕೆಳಗಿನ ಕಾಮನ ಬಿಲ್ಲು ಕರಗಿದ ನಂತರ, ರಿಯಲ್ ಸ್ಟೇಟ್‌ಗೆ ಬಂದ ನಂತರ ಹೇಳಲು ತಮ್ಮ ಅನುಮತಿ ಕೋರುತ್ತೇನೆ……!
ಈಗ ಮುಂದಕ್ಕೆ…
ಮಲ್ಲಯ್ಯನನ್ನು ಮಣಿಸಲು ನನ್ನ ಉಪಾಯಗಳನ್ನು ಹುಡುಕುತ್ತಿದ್ದೆ, ನನ್ನ ಬುರುಡೆ ಎಂತೆಂತಹ ಫೆಂಟಾಸ್ಟಿಕ್ ಐಡಿಯಾ ಕೊಟ್ಟಿತು ಅಂತ ಹೇಳಿದ್ದೆ ತಾನೇ? ಹತ್ತು ಬ್ರಾಂದಿ ಬಾಟಲು ಕೊಟ್ಟು ಅವನನ್ನು ತೆಪ್ಪಗಾಗಿಸುವ ಐಡಿಯ ಮೊದಲು ಹೊಳೆದದ್ದು. ಈ ರೀತಿ ಮಾಡುವುದರಿಂದ ನಾನೇ ಒಂದು ಪರ್ಮನೆಂಟ್ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೆ ಅಂತ ಆರನೇ ಸೆನ್ಸ್ ಹೇಳಿತು. ಕೊಡೋ ಬ್ರಾಂದಿ ಅವನು ಹೂಂ ಅಂದರೂ ಅದು ಮುಗಿದಮೇಲೆ ಸುಮ್ಮನೆ ಇರ್ತಾನಾ ಅನಿಸಿ ಆ ಐಡಿಯ ಓಡಿಸಿದೆ. ದೇವಸ್ಥಾನದ ಪ್ರಸಾದ ತಂದು ಕೊಟ್ಟು ಪೂಸಿ ಮಾಡಿದರೆ ಹೇಗೆ? ಈ ಐಡಿಯ ಸಹ ಕಿತ್ತು ಹಾಕಿದೆ, ಕಾರಣ ಪ್ರಸಾದ ಮತ್ತು ಲಂಚದ ರುಚಿ ಹತ್ತಿದವರು ಯಾವತ್ತೂ ಸಾಕು ನನಗಿದು, ಐ ವಿಲ್ ಹ್ಯಾಂಗ್ ಮೈ ಶೂಸು ಎಂದು ಹೇಳುವುದಿಲ್ಲ. ಮೊದಲನೆಯದಕ್ಕೆ ನಾನೇ ಉದಾಹರಣೆ ಆದರೆ ಎರಡನೇ ಸಾವಿರ ಸಾವಿರ ಜನ ಗೊತ್ತು ನನಗೆ. ಸರಿ ಆ ಐಡಿಯಾ ಸಹ ಡ್ರಾಪ್ ಆಯ್ತು.
ಕಾಸೂ ಖರ್ಚು ಆಗದೇ ಕೆಲಸವೂ ಆಗಬೇಕು ಅಂತ ತೀರ್ಮಾನ ತಗೊಂಡೆ ತಾನೇ? ಅವನೇ ಮಲ್ಲಯ್ಯಾನೆ ಬೇವಿನ ಮರವೇ ಸರಿ ಅಂತ ಹೇಳಬೇಕು ಹಾಗೆ ಮಾಡಬೇಕು ಅಂತ ಹೊಸಾ ಪ್ಲಾನ್ ಮಾಡಿದೆ.
ಹೀಗೆ ಅವನೇ ಬೇವಿನ ಮರದ ಬಾಗಿಲು ಶ್ರೇಷ್ಠ ಅನ್ನಬೇಕು ಅಂತ ಆದರೆ ಅವನಿಗೆ ಮೊದಲು ನಮ್ಮ ಆಧ್ಯಾತ್ಮದ ಟಚ್ ಕೊಡಬೇಕು ಅನ್ನಿಸ್ತಾ? ಸಂಜೆ ಅವನನ್ನು ಎದುರು ಕೂಡಿಸಿಕೊಂಡೆ. ಮಧ್ಯೆ ನಿಕೋಟಿನ್ ಪಾಕೆಟ್ ಇತ್ತು. ಈ ತೀರದಲ್ಲಿ ನಾನು ಆ ತೀರದಲ್ಲಿ ಅವನು. ನನ್ನದು ಈ ತೀರಾ ಅವನದು ಆ ತೀರಾ ನಡುವೆ ಕಡಲ ಅಂತರ… ಉಯ್ಯಾಲೆ ಸಿನಿಮಾ ನೆನಪಾಯ್ತು ತಾನೇ..
ಜಸ್ಟ್ ಇಮ್ಯಾಜಿನ್ ಮಾಡ್ಕೊಳ್ಳಿ. ಧರ್ಮೋಪದೇಶದ ಸೀನ್ ನೆನಪಾಗುತ್ತೆ ತಾನೇ? ಆದರೆ ಪಾತ್ರಧಾರಿಗಳು ಮಾತ್ರ ಬೇರೆ… ಹಾಗೇ ನೋಡಿದರೆ ಇದು ಧರ್ಮೋಪದೇಶದ ಹಾಗೆ ಅಥವಾ ಬ್ರಹ್ಮೋಪದೇಶದ ಹಾಗೆ ಖಂಡಿತ ಅಲ್ಲ.
ಮಲ್ಲಯ್ಯ ಆತ್ಮ ಅಂದರೇನು ಗೊತ್ತಾ? ಮೊದಲನೇ ಕೊಶ್ಚನ್‌ಗೇ ಅವನು ಫ್ಲ್ಯಾಟ್ ಆಗಿಬಿಟ್ಟ!
ಹಾಗಂದರೇನು ಸಾಮಿ…
ಆತ್ಮ ಅಂದರೆ ಅದು ನಮ್ಮ ಒಳಗೆ ಇರುತ್ತೆ. ನಾವು ಹುಟ್ಟಿದಾಗ ನಮ್ಮ ದೇಹದಲ್ಲಿ ಸೇರುತ್ತೆ. ನಾವು ಸತ್ತಮೇಲೆ ನಮ್ಮ ದೇಹದಿಂದ ಆಚೆ ಹೋಗಿ ಆಕಾಶ ಸೇರಿಕೊಳ್ಳುತ್ತೆ…..
ಮಲ್ಲಯ್ಯ ಕಣ್ ಬಾಯಿ ಬಿಟ್ಟುಕೊಂಡಿದ್ದ ಮತ್ತು ನಾನು ಒರೆಗಣ್ಣಿನಲ್ಲಿ ಅವನನ್ನು ನೋಡುತ್ತಾ ಮುಂದುವರೆಸಿದೆ.
ಅದು ಅಂದರೆ ಆತ್ಮ ನಮ್ಮ ಒಳಗೆ ಇರುತ್ತಲ್ಲಾ ಆಗ ಅದು ನಮಗೆ ಕೆಟ್ಟ ಯೋಚನೆ ಕೆಟ್ಟ ಕೆಲಸ ಮಾಡಿದಾಗಲೆಲ್ಲ ಲೇ ಯಪ್ಪಾ ನೀನು ಮಾಡ್ತಾ ಇರೋದು ಸರಿ ಇಲ್ಲ ಕಣೋ ಅಂತ ಹೇಳ್ತಾ ಇರತ್ತೆ. ಒಳ್ಳೇ ಕೆಲಸ ಮಾಡಿದಾಗ ಒಂತರಾ ಹಿತ ಅನಿಸುತ್ತೆ, ಖುಷಿ ಆಗುತ್ತಲ್ಲಾ ಅದೆಲ್ಲಾ ಈ ಆತ್ಮ ಅನ್ನೋದು ಮಾಡೋ ಕೆಲಸ. ನನಗೆ ಪ್ರತಿದಿನ ಈ ಅನುಭವ ಆಗ್ತದೆ. ಏನೋ ಒಳ್ಳೇ ಕೆಲಸ ಮಾಡಿದಾಗ ಮನಸು ಅರಳಿದ ಹಾಗೆ ಕೆಟ್ಟದು ಮಾಡಿದಾಗ ಮನಸು ಮೊಗ್ಗು ಆದಹಾಗೆ ಅನಿಸುತ್ತೆ ತಾನೇ.. ತಮಿಳು ಸಿನಿಮಾ ನೋಡ್ತೀಯ ನೀನು…. ಅಂತ ಒಂದು ಸಪ್ಲಿಮೆಂಟರಿ ಎಸೆದೆ. ನೋಡ್ತೀನಿ ಸಾಮಿ. ನಮ್ಮನೆ ಹತ್ರ ಟೆಂಟ್‌ನಲ್ಲಿ ಬರೀ ತಮಿಳು ಸಿನಿಮಾನೇ ಬರೋದು.. ಅಂದ.
ಈಚೆಗೆ ನೋಡಿದ ಒಂದು ಸಿನಿಮಾ ಜ್ಞಾಪಿಸ್ಕೋ. ಹೀರೋ ಮಂಚದ ಮೇಲೆ ಕೂತಿರ್ತಾನೆ. ಅವನ ತರಹಾನೆ ಇನ್ನೊಂದು ಮುದುಕ ಮಂಚದಿಂದ ದೂರ ನಿಂತ್ಕೊಂಡು ಇವನ ಹತ್ರ ಮಾತಾಡುತ್ತೆ ತಾನೇ?
ಮಲ್ಲಯ್ಯ ಹೂಂ ಅಂದ.
ಅದನ್ನೇ ಆತ್ಮ ಅಂತ ಅನ್ನೋದು ಅಂದೆ!
ಮಲ್ಲಯ್ಯನ ಕಣ್ಣು ಬಾಯಿ ಇನ್ನೂ ಅಗಲ ಆಗಿತ್ತಾ?
ನೆಕ್ಸ್ಟ್ ಡೋಸ್ ಹಾಕಿದೆ.
ಇದು ಅಂದರೆ ಆತ್ಮ ಅನ್ನೋದು ಎಲ್ಲರಲ್ಲೂ ಇರ್ತದೆ. ಅದರ ಯಜಮಾನ ಯಾರಪ್ಪಾ ಅಂದರೆ ಅದು ಪರಮಾತ್ಮ. ಪರಮಾತ್ಮ ಅಂದರೆ ಗೊತ್ತಾ..?

ಮಲ್ಲಯ್ಯನ ಒಂದು ವಿಶೇಷ ಅಂದರೆ ಅವನು ಅವನನ್ನೇ ಸರ್ವಜ್ಞ ಅಂತ ತಿಳಿದುಕೊಂಡಿರೋದು. ಇಂತಹವರ ಮೈಂಡ್ ಸೆಟ್ ಹೇಗಿರುತ್ತೆ ಅಂದರೆ ಪ್ರಪಂಚದಲ್ಲಿ ತಮ್ಮ ಜ್ಞಾನಕ್ಕೆ ಎಟುಕದ ವಿಷಯ ಇಲ್ಲ ಎನ್ನುವ ವಿಶ್ವಾಸ. ಪರಮಾತ್ಮ ಅಂದರೆ ಗೊತ್ತಾ..? ಅಂತ ಕೇಳಿದ ಕೂಡಲೇ ಭೂಮಿಗೆ ಇಳಿದ ಮತ್ತು ಪರಮಾತ್ಮನ ಬಗ್ಗೆ ವಿವರ ನೀಡಿದ. ಅವನ ಪ್ರಕಾರ (ನಮ್ಮೆಲ್ಲರ ಪ್ರಕಾರವೂ ಹೌದು) ಪರಮಾತ್ಮ ಜಗತ್ತಿನ ಪ್ರತಿಯೊಂದನ್ನೂ ನೋಡ್ತಾ ಇರ್ತಾನೆ ಮತ್ತು ತಪ್ಪು ಮಾಡಿದವರಿಗೆ ದೋಸೆ ಮುಗುಚಿ ಹಾಕಿದಷ್ಟೇ ಸುಲಭವಾಗಿ ಅವತ್ತಿನ ಶಿಕ್ಷೆ ಅವತ್ತೇ ಕೊಡ್ತಾನೆ.
ನೋಡು ಅದನ್ನೇ ನಾನೂ ಹೇಳಬೇಕೂಂತ ಇರೋದು. ತಪ್ಪು ಮಾಡೋದು ಅಂದರೇನು? ನಮಗೆ ಗೊತ್ತಿಲ್ಲದೆ ಇರೋ ವಿಷಯವನ್ನೂ ಸರಿ ಅಂತ ಸುಳ್ಳು ಸುಳ್ಳು ಹೇಳೋದು ಸಹ ತಪ್ಪು ಅಂತ ಆಗುತ್ತೆ…
ಮಲ್ಲಯ್ಯನೀಗೆ ಡೈಲಾಗ್ ಎಲ್ಲಿಗೆ ಬಿಡ್ತಾ ಇದೆ ಅಂತ ಕನ್ಫ್ಯೂಸ್ ಶುರು ಆಗಿದೆ ಅನ್ನಿಸಿತು. ಅವನು ಮಾತಾಡಲು ಬಿಡದೇ ನಾನೇ ಮುಂದುವರೆಸಿದೆ. ನನಗೆ ಏನೋ ಫಾಯಿದೆ ಆಗುತ್ತೆ ಅಂತ ಸುಳ್ಳು ಹೇಳೋದು ಬೇರೆಯವರ ಮನಸಲ್ಲಿ ಭಯ ಹುಟ್ಟಿಸೋದು ಇದೆಲ್ಲಾ ಏನಂತಿಯ? ಅದೇ ತಪ್ಪುಗಳು… ನನ್ನ ಮಾತುಗಳೂ ಪೂರ್ತಿ ಮಲ್ಲಯ್ಯನ ತಲೆ ಮೇಲೆ ನೂರು ಮೈಲಿ ಎತ್ತರದಲ್ಲಿ ಹಾರ್ತಾ ಇದೆ ಅನಿಸಿತು. ಅವನು ಇನ್ನೂ ಅತಂತ್ರ ಸ್ಥಿತಿಯಲ್ಲಿ ಗೊಂದಲದಲ್ಲಿ ಇರಬೇಕಾದರೆ ಅವನ ತಲೆ ಮೇಲೆ ಸುತ್ತಿಗೆಯಿಂದ ಬಾರಿಸಬೇಕು ಇದು ನನ್ನ ಪ್ಲಾನ್!
ನೋಡು ಈ ಬೇವಿನ ಮರದ ಬಾಗಿಲ ವಿಷಯವೇ ತಗೋ. ಅದು ದೇವರ ಒಂದು ಭಾಗ ಅಂತಾನೇ ಇರಲಿ. ಆದರೆ ಅದೆಷ್ಟೋ ಸಾವಿರ ವರ್ಷಗಳಿಂದ ಈ ರೀತಿ ಬಾಗಿಲು ಉಪಯೋಗಿಸ್ತಾ ಇದ್ದಾರೆ. ಅವರಿಗೇನಾದರೂ ಆಗಿದ್ಯಾ? ಏನೂ ಆಗಿಲ್ಲ ಅಂದರೆ ದೇವರಿಗೆ ಇದು ಒಪ್ಪಿಗೆ ಇದೇ ಅಂತ ತಾನೇ?
ದೇವರಿಗೇ ಒಪ್ಪಿಗೆ ಇರೋದು ನಾನು ನೀನು ಹುಳುಮಾನವರು ದೇವರಿಗೆ ಒಪ್ಪಿಗೆಯಿಲ್ಲ, ಅವನು ಒಳ್ಳೇದು ಮಾಡಾಕಿಲ್ಲ ಅಂದರೆ ದೇವರಿಗೆ ಕೋಪ ಬರ್ತದೋ ಇಲ್ವೋ? ದೇವರಿಗೆ ಮೈ ಉರಿಯೋ ಅಷ್ಟು ಕೋಪ ಬರ್ತದೆ….
ಮಲ್ಲಯ್ಯ ಹೌದು ಅಂತ ತಲೆ ಆಡಿಸೋದು ಬಿಟ್ಟು ಬೇರೆ ಯೋಚನೆ ಮಾಡುವ ಶಕ್ತಿ ಕಳೆದುಕೊಂಡಿದ್ದ.
ಹೌದು ಸಾಮಿ ದೇವ್ರಿಗೆ ಕೋಪ ಬಂದರೂ ಬರ್ತದೆ… ಅಂದ!
ದೇವ್ರಿಗೆ ಕೋಪ ಬಂದರೂ ಬರ್ತದೆ ಅಲ್ಲ. ಖಂಡಿತ ಅದಕ್ಕೆ ಕೋಪ ಬರ್ತದೆ. ಕೋಪ ಹೇಗೆ ತೋರಿಸೋದು? ಅದಕ್ಕೆ ಅದೇ ಅಂದರೆ ದೇವರು ಒಂದು ದಾರಿ ಹಿಡಕೊಂಡಿರ್ತದೆ. ಏನೂ ಕಾರಣ ಇಲ್ಲದೆ ಕೆಲವರಿಗೆ ವಾಂತಿ ಆಗ್ತದೆ, ಭೇದಿ ಆಗ್ತದೆ, ರಾತ್ರಿ ನಿದ್ದೆ ಇಲ್ಲ. ಮೂರು ಗಂಟೆಗೇ ಎಚ್ಚರ ಆಗಿಬಿಡುತ್ತೆ, ನಾನು ಈಗ ಸತ್ತೋಗ್ತೀನಿ ಅನಿಸಿಬಿಡುತ್ತದೆ… ಮೈಯೆಲ್ಲಾ ನೋವು ಸೋಂಬೇರಿತನ…. ಇವೆಲ್ಲಾ ಯಾಕೆ ಬರ್ತದೆ ಅಂತಿಯಾ? ಇವೆಲ್ಲಾ ದೇವ್ರಿಗೆ ಕೋಪ ಬಂದೈತಲ್ಲ ಅದರ ಪರಿಣಾಮ…..
ಮಲ್ಲಯ್ಯನ ಬಾಯಿಂದ ಮಾತು ಹೊರಡಲಿಲ್ಲ. ತಲೆ ಪೂರ್ತಿ ಕಲಾಸಿಪಾಳ್ಯ ಮಾಡಬಾರದು ಎನ್ನುವ ವಿವೇಕ ನನಗೆ ಆಗಬೇಕೆ?
ನೋಡು ಅದಕ್ಕೇ ಒಂದು ಐಡಿಯಾ ಇದೆ ನನ್ನ ತಾವ…
ತಲೆ ಎತ್ತಿ ನೋಡಿದ. ಅವನ ಕಣ್ಣಲ್ಲಿ ಭಯ ಕಾಣಿಸಿತು.
ಏನ್ರಾ ಅದು ಅಂದ…
ಏನಿಲ್ಲಾ ಸುಳ್ಳು ಪಳ್ಳು ಕಡಿಮೆ ಮಾಡಬೇಕು. ಅದಿಲ್ಲದೆ ಜೀವನ ಸಾಗಿಸೋದು ಕಷ್ಟ ಅಂತ. ಬೇರೆಯವರಿಗೆ ಕೆಟ್ಟದು ಆಗಲಿ ಅನ್ನಬಾರದು. ಅದರಲ್ಲೂ ನಿನ್ನ ವೃತ್ತಿಯಲ್ಲಿ ಇರೋರಿಗೆ ಒಂದು ದೊಡ್ಡ ನಂಬಿಕೆ ಬೇಕು…. ವೃತ್ತಿ ಅಂದರೇನು ಅಂತ ಅವನಿಗೆ ಗೊತ್ತಾಯ್ತಾ ಅನ್ನುವ ಸಂಶಯ ಬಂತಾ? ಅದನ್ನ ಸರಿ ಮಾಡಿದೆ. ಗಾರೆ ಕೆಲಸ ಮೇಸ್ತ್ರಿ ಕೆಲಸ, ಮರಗೆಲಸ ಇವೆಲ್ಲಾ ಇವೆ ನೋಡು. ಇದೆಲ್ಲಾ ದೇವರು ಮಾಡೋ ಕೆಲಸ. ಪ್ರಪಂಚ ಕಟ್ಟಿದವನು ಯಾರಪ್ಪಾ? ದೇವರು ತಾನೇ. ಅವನು ಪ್ರಪಂಚ ಕಟ್ಟಿದ ಅಂತ ನಾವೆಲ್ಲಾ ಇಲ್ಲಿರೋದು… ನಾವು ಮೋಸ ಮಾಡಿದರೆ ಏನಾಗ್ತದೆ ಅಂದರೆ ದೇವ್ರು ಬೇರೆ ತರ ತೋರಿಸತ್ತೆ. ಹೆಂಡ್ತಿಗೆ ಹುಷಾರು ತಪ್ಪತ್ತೆ, ಮಕ್ಕಳಿಗೆ ಹುಷಾರು ತಪ್ಪತ್ತೆ, ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಅನುಭವಿಸೋದು…. ಏನಂತಿಯಾ ಮಲ್ಲಯ್ಯ?
ಅಸೆಂಬ್ಲಿಯಲ್ಲಿ ಕುರ್ಚಿಯಲ್ಲಿ ಕೂತು ನಿದ್ದೆ ಮಾಡ್ತಿರೋ ಮಂತ್ರಿಯನ್ನು ಅಲ್ಲಾಡಿಸಿ ನಿದ್ದೆಯಿಂದ ಎಬ್ಬಿಸಿದರೆ ಹೇಗಿರುತ್ತೆ… ಆಳವಾದ ನಿದ್ದೆಯಿಂದ ಎಬ್ಬಿಸಿದರೆ ಗಾಬರಿಯಿಂದ ಏಳುತ್ತಾರೆ ನೋಡಿ ಹಾಗೆ ಅವನು ಹೂಂ ಅಂದ. ಅದಕ್ಕೇ ನಮ್ಮ ಪುರಾಣದಲ್ಲಿ ಹೇಳೋದು ಸುಳ್ಳು ಹೇಳೋದು ಬೇರೆಯವರಿಗೆ ಕೆಟ್ಟದು ಆಗಲಿ ಅನ್ನೋದು ಎಲ್ವೂ ಮಹಾ ಪಾಪ. ಹೌದು ತಾನೇ…
ಇದೆಲ್ಲಾ ನಿನ್ನ ಹತ್ತಿರ ಯಾಕೆ ಹೇಳ್ತಾ ಇದೀನಿ ಗೊತ್ತಾಯ್ತಾ….? ಅಂದೆ.
ಇಲ್ರಾ ಅದೇನೋ ಮಾತಿನ ಜೋಶ್‌ನಲ್ಲಿ ಇದೀರಾ ಅಂದ್ಕೊಂಡೆ…. ಅಂದ!
ಅದು ಮಾತಿನ ಜೋಶ್‌ನಲ್ಲಿ ಇರೋದು ಅಲ್ಲ. ನೀನು ಬೇವಿನ ಮರದ ವಿಷಯ ಇಲ್ಲಿ ಮನೆ ನೋಡೋಕ್ಕೆ ಬರೋ ನನ್ನ ರಿಲೇಟಿವ್ಸ್ ಎದುರಿಗೇ ಸುಳ್ಳು ಹೇಳಬಾರದು ಅಂತ ಬೇವಿನಮರದಲ್ಲಿ ದೇವರು ಐತೆ ಅಂದರೆ ಮುಗೀತು. ಅದರ ಬಾಗಿಲು ಇಡುವ ಹಾಗಿಲ್ಲ, ಅದರ ಹೊಸಿಲು ಬೇಡ ಅಂತೆಲ್ಲಾ ಸುಳ್ಳು ಹೇಳಿದರೆ ದೇವರು ರಿವೆಂಜ್ ತಗೊಳ್ಳತ್ತೆ. ಮನೇಲಿ ಇರೋರಿಗೆ ಆರೋಗ್ಯ ತಪ್ತದೆ, ಆಸ್ಪತ್ರೆಗೆ ಸುರಿಬೇಕು…. ಇದೆಲ್ಲಾ ಉಪಟಳ ಬೇಕಾ? ಏನೋ ಅರೆ ಬರೆ ವಿಷಯ ಹೇಳದೆ ತೆಪ್ಪಗಿದ್ದರೆ ಆಗಿತ್ತು ಅನಿಸುತ್ತೆ ತಾನೇ?
ಮಲ್ಲಯ್ಯ ತಲೆ ಆಡಿಸಲೇ ಬೇಕಾದ ಅನಿವಾರ್ಯತೆ ಸೃಷ್ಟಿ ಆಗಿತ್ತು, ಆಗಿತ್ತು ಏನು ನಾನೇ ಸೃಷ್ಟಿ ಮಾಡಿಬಿಟ್ಟಿದ್ದೆ!
ಹೌದ್ರಾ… ಅಂದ.
ಹಾಗೆ ಹೇಳ್ತಾ ಎದುರಿನ ಪ್ಯಾಕೆಟ್‌ನಿಂದ ನಾಲ್ಕನೇ ದೋ ಐದನೆದೋ ಎಳೆದು ಬಾಯಿಗಿಟ್ಟು ಕಡ್ಡಿ ಗೀರಿ ಹಚ್ಚಿಕೊಂಡ. ಫ್ರೀ ಸಿಗೋದು ಯಾಕೆ ಬಿಡಬೇಕು ಅಂತ ಅವನ ಫಿಲಾಸಫಿ, ನಂದೂ ಅಷ್ಟೇ!
Nailing the last nail on the coffin ಅಂತ ಎಲ್ಲೋ ಯಾವಾಗಲೋ ಓದಿದ್ದ ನೆನಪು ಬಂತು. ಹಾಗೆಂದರೆ ಹೆಣದ ಪೆಟ್ಟಿಗೆಯ ಮುಚ್ಚಳಕ್ಕೆ ಕೊನೇ ಮೊಳೆ ಹೊಡೆಯೋದಂತೆ. ಅಂದರೆ ಭದ್ರ ಮಾಡೋದು ಅಂತ. ನಾನು ಈಗ ಕೊನೇ ಮೊಳೆ ಹೊಡೆದೆ.
ನೋಡು ಮಲ್ಲಯ್ಯ, ಕೈಯಲ್ಲಿ ಅಗ್ನಿ ದೇವತೆ ಇದೆ. ಅದರ ಎದುರು ಮಾತು ಆಡಿದ್ದಿ, ಸುಳ್ಳು ತಟವತ ವಂಚನೆ ಕೂಡದು ಅಂತ. ಬೇವಿನ ಮರದ ವಿಷಯ ಬಂದರೆ ನನ್ನ ಕಡೆಯವರು ಯಾರೇ ಬರಲಿ ನೀನು ಅದರ ಬಗ್ಗೆ ಒಳ್ಳೆಯ ಮಾತೇ ಹೇಳಬೇಕು. ವಂಶ ನಾಶನ ಆಗ್ತದೆ, ಕೆಟ್ಟದಾಗುತ್ತೆ, ಪೀಡೆ, ಅನಿಷ್ಟ, ಶನಿ… ಈ ಪದಗಳು ಬರಲೇಬಾರ್ದು ನಿನ್ನ ಬಾಯಿಂದ…. ಅಂದೆ.
ಅದು ಮಲ್ಲಯ್ಯನ ಜೀವನದಲ್ಲಿ ಬಂದ ಹಲವು ವೀಕ್ ಮೊಮೆಂಟ್‌ಗಳಲ್ಲಿ ಬಲವಾದ ವೀಕ್ ಮೊಮೆಂಟ್ ಇದೇ ಇರಬೇಕು. ಒಂದು ದೀರ್ಘ ಹೊಗೆ ಒಳಗೆಳೆದು ಸೋಮಿ ಆಯ್ತ್ರಾ…. ಅಂದ!
ನನ್ನ ತಲೆಯಿಂದ ದೊಡ್ಡ ಹೊರೆ ಇಳಿದ ಹಾಗನ್ನಿಸಿತು. ಸಾವಿರಾರು ರುಪಾಯಿ ಮಿಗಿಸಿದ ಸಂತೋಷ ಆಯ್ತು. ರೂಪಿ ಸೆವ್ಡ್ ಈಸ್ ರೂಪಿ ಅರ್ನ್‌ಡ್ ಎನ್ನುವ ಫಿಲಾಸಫಿ ನನ್ನದು ಆ ಕಾಲದಿಂದಲೇ…….! ಈ ಸಂತೋಷ ಒಂದುಕಡೆ ಮತ್ತು ಇಡೀ ಜೀವಮಾನ ಅನುಭವಿಸಬೇಕಿದ್ದ ಮಾನಸಿಕ ಒತ್ತಡ ಒಂದುಕಡೆ ನಿವಾರಣೆ ಆದ ಖುಷಿ ಸಿಕ್ತಾ? ಇಂತಹ ಸಮಯದಲ್ಲಿ ನೀವೇನು ಮಾಡ್ತಿರೋ ಗೊತ್ತಿಲ್ಲ. ನಾನು ಜೇಬಿನಿಂದ ನೂರು ರೂಪಾಯಿನ ನೋಟು ತೆಗೆದೆ. ನಲವತ್ತು ವರ್ಷ ಹಿಂದೆ ನೂರು ರುಪಾಯಿ ಎಷ್ಟು ಅಗಲ ಇತ್ತು ಅಂತ ನಿಮಗೆ ಗೊತ್ತಿರಬಹುದು. ಅದರ ಮೇಲೆ ಹಾಸಿಗೆ ಹಾಸಿ ಮಲಗಬಹುದಿತ್ತು, ಇಲ್ಲ ಅಂದರೆ ಬಾಳೆ ಎಲೆ ತರಹ ಹರಡಿ ಅದರ ಮೇಲೆ ಚಿತ್ರಾನ್ನ ಹಾಕಿಕೊಂಡು ತಿನ್ನಬಹುದಿತ್ತು. ರುಪಾಯಿ ನೋಟನ್ನು ಅಷ್ಟೂ ಅಗಲಕ್ಕೆ ಮಡಿಕೆ ಬಿಚ್ಚಿ ಅವನಿಗೆ ಕೊಟ್ಟೆ. ಮಕ್ಕಳಿಗೆ ಮೈಸೂರು ಪಾಕ್ ತಗೊಂಡು ಹೋಗಿ ಕೊಡು, ಖುಷಿಯಾಗುತ್ತೆ.. ಅಂದೆ. ಮಲ್ಲಯ್ಯ ತುಂಬಾ ವಿನೀತನಾಗಿ ನೂರು ರುಪಾಯಿ ಎರಡೂ ಕೈಗಳಲ್ಲಿ ಸ್ವೀಕರಿಸಿದ..
ಎಷ್ಟೋ ವರ್ಷ ಈ ಮೇಲಿನ ಪ್ರಸಂಗ ಆಗಾಗ ನನ್ನ ತಲೆಯಲ್ಲಿ ಗಿರಗಿಟ್ಟಲೆ ಆಡಿದೆ. ನನ್ನಂತಹ ಪ್ರಜ್ಞಾವಂತ, ವಿಚಾರವಾದಿ, ತಲೆ ತುಂಬಾ ಹೊಸಹೊಸ ಕ್ರಾಂತಿಕಾರಕ ಐಡಿಯಾಗಳನ್ನು ತುಂಬಿಕೊಂಡ ವಿದ್ಯಾವಂತ ಒಬ್ಬ ಬಡವನನ್ನು, ಒಬ್ಬ ಮುಗ್ಧನನ್ನು ಒಬ್ಬ ಕೂಲಿ ಕಾರ್ಮಿಕನನ್ನು ದೇವರ ಹೆಸರು ಹೇಳಿ ಇಂತಹ ಒಂದು ಕಟ್ಟು ಪಾಡಿನಲ್ಲಿ ಸಿಕ್ಕಿಸಿದ್ದು ನ್ಯಾಯವೇ ಎಂದು ನನ್ನ ಆತ್ಮಸಾಕ್ಷಿ ನಡುರಾತ್ರಿಯಲ್ಲಿ ಕೋರ್ಟ್ ಮಾರ್ಷಲ್ ಮಾಡಿದೆ. ಉದ್ದನೆಯ ಬಿಳೀ ಗಡ್ಡ ಬಿಟ್ಟ ಕಾರ್ಲ್ ಮಾರ್ಕ್ಸ್ ದೊಣ್ಣೆ ಹಿಡಿದು ಅಟ್ಟಿಸಿಕೊಂಡು ಬಂದಿದ್ದಾನೆ ಮತ್ತು ನನ್ನ ಬಂಧು ಇಷ್ಟರು ಸುತ್ತಲೂ ನಿಂತು ಗೇಲಿ ಮಾಡಿದ್ದಾರೆ. ಇದೆಲ್ಲಾ ನನ್ನ ಕನಸಿನಲ್ಲಿ ಮಾತ್ರ ಆಗಿರುವುದರಿಂದ ನಾನು ಇನ್ನೂ ಸ್ಥಿಮಿತ ಕಳೆದುಕೊಂಡಿಲ್ಲ!
ಹೀಗೆ ಮಲ್ಲಯ್ಯನನ್ನು ಇಕ್ಕಟ್ಟಿನಲ್ಲಿ ಕೆಡವಿ ನನ್ನ ಮನೆ ಕೆಲಸ ಮುಂದುವರೆಸಿದೆ ತಾನೇ. ಮುಂದೆ ಇಂತಹ ಪ್ರಾಬ್ಲಂ ಇಲ್ಲವಾದರೂ ಬೇರೆ ಬೇರೆ ತೊಂದರೆಗಳು ಆಗಾಗ ಬರ್ತಾ ಇದ್ದವು. ಒಮ್ಮೆ ಇದು ಎಷ್ಟು ವಿಕೋಪಕ್ಕೆ ಹೋಯಿತು ಅಂದರೆ ಅದರ ಒಂದು ಪುಟ್ಟ ಝಲಕ್ ನಿಮಗೆ ಹೇಳಬೇಕು. ಅಂದಹಾಗೆ ಝಲಕ್ ಪದ ವ್ಯಾಕರಣ ಬದ್ಧ ತಾನೇ? ಇಲ್ಲ ಅಂದರೆ ನನಗೆ ಹೆದರಿಕೆ ನಮ್ಮ ಮುಖ್ಯ ಮಂತ್ರಿಗಳು ವ್ಯಾಕರಣ ಸರಿಯಿಲ್ಲ ಅಂತ ವೇದಿಕೆ ಮೇಲೆ ಕರೆಸಿಕೊಂಡು ಬೈದು ಉಪ್ಪು ಹಾಕಿ ಬಿಟ್ಟಾರು…
ಮತ್ತೊಂದು ಮಲ್ಲಯ್ಯನ ಪ್ರಸಂಗ ಮರೆತು ಹೋಗುವ ಮುನ್ನ…
ಪ್ರತಿ ದಿವಸ ಎಷ್ಟು ಜನ ಕೂಲಿಯ ಜನ ಕೆಲಸ ಮಾಡ್ತಾರೆ ಅಂತ ಒಂದು ಡೈರಿಯಲ್ಲಿ ಬರೆದುಕೊಂಡು ಅದಕ್ಕೆ ಮತ್ತಷ್ಟು ಸೇರಿಸಿ ಮಲ್ಲಯ್ಯನಿಗೆ ಕೂಲಿಯ ಹಣ ಕೊಡ್ತಾ ಇದ್ದೆ ತಾನೇ?
ಯಾವುದೋ ಹಬ್ಬದ ಹಿಂದಿನ ವಾರ ತುರ್ತು ದುಡ್ಡು ಬೇಕಿತ್ತು ಅಂತ ಕಾಣುತ್ತೆ. ಸ್ವಲ್ಪ ಜಾಸ್ತಿ ಹಣ ಕೇಳಿದ. ಲೆಕ್ಕ ತೋರಿಸಿ ಅಷ್ಟೊಂದು ಕೊಡಲು ಸಾಧ್ಯ ಇಲ್ಲ ಅಂದೆ. ಯಾಕೆ ಕೊಡೋಲ್ಲ ಅಂತ ತಕರಾರು ತೆಗೆದ. ಕೂಲಿ ಹೆಚ್ಚುಕೊಟ್ಟು ನಾನು ಹೇಗೆ ವಸೂಲಿ ಮಾಡೋದು ಅಂತ ನನ್ನ ಪ್ರಾಬ್ಲಂ. ಅದನ್ನೇ ಅವನಿಗೆ ಹೇಳಿದೆ. ಹೆಚ್ಚಿನ ದುಡ್ಡು ವಾಪಸ್ ಕೊಡ್ತೀನಿ ಅಂದ.(ಕೋಪದ ಮಾತಿನ ಭರದಲ್ಲಿ ಬಿಸಾಕ್ತಿನಿ ಅಂತ ಅವನು ಅಂದದ್ದು). ನನಗೂ ತಲೆ ತುಂಬಾ ಬಿಸಿ ಆಗಿತ್ತು. ಕೊಡೋದೇ ಇಷ್ಟು ಬೇಕಾದ್ರೆ ತಗೋ ಸಾಕಾದ್ರೆ ಬಿಡು ಅಷ್ಟೇ ಅಂತಂದೆ. ಮುನಿಸಿಕೊಂಡು ಹೊರಟು ಹೋದ. ಸರಿ ಇವನ ಋಣ ಮುಗೀತು. ಬೇರೆ ಯಾರನ್ನಾದರೂ ಹುಡುಕಬೇಕು ಅನ್ನುವ ಚಿಂತೆಯಲ್ಲಿ ನಿದ್ದೆ ಇಲ್ಲದೇ ರಾತ್ರಿ ಕಳೆದೆ.
ಬೆಳಿಗ್ಗೆ ಅದೇ ತಾನೇ ನಿದ್ದೆ ಹತ್ತಿದೆ. ಹೊರಗಡೆ ಅದೇನೋ ಶಬ್ದ, ಎಚ್ಚರವಾಯಿತು.
ಮಲ್ಲಯ್ಯ ಬಂದಿದ್ದಾನೆ ನೋಡಿ ಅಂದಳು ರೂಮಿಗೆ ಬಂದ ಹೆಂಡತಿ.
ಅವನಿಗೆ ಕಾಫಿ ಕೊಡು ಅಂದೆ. ಕೊಟ್ಟೆ ಕುಡಿತಾ ಇದಾನೆ.
ಆಚೆ ಬಂದೆ. ಅವನ ಮುಖ ಇನ್ನೂ ಧುಮ ಧೂಧುಮ ಅಂತಿದೆ.
ಕಾಸು ಕೊಡಿ ಅದೇನು ಕೊಡ್ತೀರಿ ಅದು…. ಅಂದ.
ಅಯ್ಯೋ ಪಾಪ ಅನಿಸಿಬಿಡ್ತು. ಯಾಕಪ್ಪಾ ನಿನ್ನೇನೆ ಇಸ್ಕೊಂಡಿದ್ರೆ ಆಗ್ತಾ ಇರ್ಲಿಲ್ಲವೆ.. ಅಂತ ಹೇಳ್ತಾ ಅವನಿಗೆ ಕೊಡಬೇಕಿದ್ದ ಹಣಕ್ಕಿಂತಲು ಕೊಂಚ ಹೆಚ್ಚೇ ಎಣಿಸಿದೆ.
ನಿನ್ನೆನೇ ಈ ಕೆಲಸ ಮಾಡಿದ್ರೆ ಆಗ್ತಾ ಇರ್ಲಿಲ್ಲವಾ. ಒಳ್ಳೇ ಐಲು ದೊರೆ ನೀವು ಅಂತ ದುಡ್ಡು ತಗೊಂಡು ಹೊರಟ……!
ಬೆಟ್ಟದ ಅಲ್ಲ ಪರ್ವತದ ಹಾಗೆ ತೋರಿದ ಈ ಸಮಸ್ಯೆಗಳು ಇಷ್ಟು ಸುಲಭವಾಗಿ ಪರಿಹಾರ ಕಂಡುಕೊಂಡರೆ ಯಾರಿಗೆ ತಾನೇ ಖುಷಿಯಾಗಲ್ಲ ಹೇಳಿ? ನನ್ನ ಮಾತಿನ ಚಾಕಚಕ್ಯತೆ ಎಷ್ಟು ಸೊಗಸಾಗಿ ಉಪಯೋಗಿಸಿದೆ ಅಂತ ಎಷ್ಟೋ ವರ್ಷ ನಾನು ಬೀಗಿದ್ದು ಉಂಟು. ಆದರೆ ಅಂತಹ ಬೀಗುವಿಕೆ ತುಂಬಾ ಅಲ್ಪಕಾಲದ್ದು. ನಾನೂ ಸಹ ಒಬ್ಬ ಬುರ್ಜ್ವಾ ಹಾಗೆ ಬಡವನನ್ನ, ಪಾಪದವನನ್ನು ಶೋಷಣೆ ಮಾಡಿಬಿಟ್ಟೆ ಎನ್ನುವ ನೋವು ಕಾಡ್ತಾ ಇತ್ತು ಆಗ. ಕಾರಣ ನಾನು ಆಗ ಕಾರ್ಲ್ ಮಾರ್ಕ್ಸ್ ಪಕ್ಕಾ ಶಿಷ್ಯ! ಗಡ್ಡ ಬಿಟ್ಟಿದ್ದೆ.
ಮೋಲ್ಡಿಂಗ್ ಆಗಿತ್ತು ಅಂತ ಹೇಳಿದ್ದೆ. ಮಲ್ಲಯ್ಯ ಪೂರ್ತಿ ಆಕ್ರಮಿಸಿಕೊಳ್ಳುವ ಮೊದಲು. ಮೌಲ್ಡಿಂಗ್ ಆಗಿ ಸೆಂಟ್ರಿಂಗ್ ಬಿಚ್ಚಿದ ನಂತರ ಆಗ ನಲವತ್ತು ವರ್ಷದ ಹಿಂದೆ ಕರೆಂಟು ಪಡೆಯುವ ಮತ್ತು ನೀರು ಸರಬರಾಜು ಪಡೆಯುವುದರ ಬಗ್ಗೆ ಚಿಂತೆ ಮತ್ತು ಕಾರ್ಯ ಹಮ್ಮಿಕೊಳ್ಳುವುದು ಆಗಿನ ರೂಢಿ. ಕರೆಂಟ್ ಪಡೆಯಲು ಆಗ ಇದ್ದದ್ದು KEB ಎನ್ನುವ ಸರ್ಕಾರಿ ಸಂಸ್ಥೆ. ನಂತರ ಅದು ಪೀಸ್ ಪೀಸ್ ಪೀಸ್ ಆಗಿ ಒಂದೊಂದು ವಿಭಾಗಕ್ಕೆ ಒಂದೊಂದು ಸರ್ವಿಸ್ ವಿಭಾಗ ಆದವು. ಈಗ ಬೆಂಗಳೂರನ್ನು bescom, ಮಂಗಳೂರನ್ನು mescom ನೋಡಿಕೊಂಡರೆ ಆಗ ಇಡೀ ಕರ್ನಾಟಕಕ್ಕೆ ಒಂದೇ ಬೆಸ್ಕಾಂ ಇದ್ದು ಅದನ್ನು keb ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು ಮತ್ತು ಈಗಿನ ಹಾಗೆಯೇ ಆಗಲೂ ಕಾಸಿಲ್ಲದೆ ಯಾವ ಕೆಲಸವೂ ಆಗುತ್ತಿರಲಿಲ್ಲ! ಇದು ಒಂದು ರೀತಿ ನಮ್ಮ ದೇಶದಲ್ಲಿ ಯೂನಿವರ್ಸಲ್ ವ್ಯವಸ್ಥೆ.
ಮನೆ ಪ್ಲಾಸ್ಟರ್ ಮೊದಲು ಮನೆ ಒಳಗೆ ಬರಬೇಕಾದ ವಿದ್ಯುತ್ ವೈರಿಂಗ್ ಕೆಲಸಕ್ಕೆ ನನಗೆ ಗೊತ್ತಿರುವ ಮತ್ತೊಬ್ಬನನ್ನು ತಂದಿದ್ದೆ. ಮಲ್ಲಪ್ಪನಿಗೇ ಈ ಕೆಲಸ ಸಹ ತಪ್ಪಿತ್ತು. ಈ ಕೆಲಸ ಮಾಡಲು ಬಂದವನು ಸೇಲಂ ಕಡೆ ಹುಡುಗ ಮತ್ತು ಆಗತಾನೇ ಕೆಲಸ ಶುರುಮಾಡಿದ್ದ. ತಲೆ ತುಂಬಾ ತಾನು ಆಗತಾನೇ ಕಲಿತ ವಿಷಯ ತುಂಬಿ ಹೋಗಿತ್ತು.
ಅವನ ತಲೆಯಲ್ಲಿ ಓಡುತ್ತಿದ್ದ ಹೊಸ ಐಡಿಯಾ ನನ್ನ ಮನೆಯಲ್ಲಿ ಅಳವಡಿಸಿ ಅದರಿಂದ ಅವನ ಕಾರ್ಯಜಾಲ ವಿಸ್ತರಿಸಿಕೊಳ್ಳಬೇಕು ಎನ್ನುವ ಐಡಿಯಾ ಅವನ ತಲೆಯಲ್ಲಿ ತುಂಬಿತ್ತು ಅಂತ ಕಾಣ್ಸುತ್ತೆ. ಇವುಗಳನ್ನು ಅವನು ನನ್ನ ಮನೆಯಲ್ಲಿ ಹೇಗೆ ಪ್ರಯೋಗ ಮಾಡಿ ನನ್ನ ಮನೆಯನ್ನು ಒಂದು ವಿಶಿಷ್ಟ ಮ್ಯೂಸಿಯಂ ಪೀಸ್ ಮಾಡಿದ ಎನ್ನುವ ರೋಚಕ ಕತೆಯನ್ನು ನಿಮಗೆ ಹೇಳಲೇಬೇಕು. ಅದಕ್ಕೆ ಮೊದಲು ನಮ್ಮ ಅಂದಿನ keb ಬಗ್ಗೆ ಕೊಂಚ ವಿವರ..

ಎಂಟು ಹತ್ತು ಹೊಸ ಬಡಾವಣೆಗೆ ಒಂದು ಆಫೀಸು. ಅಲ್ಲಿಗೆ ಸಾವಿರಾರು ತೆತ್ತು ಬಂದಿರೋ ಇಂಜಿನಿಯರುಗಳು. ಅರಸನ ಅಂಕೆ ದೆವ್ವದ ಕಾಟ ಇಲ್ಲದೆ ಮೇಯುತ್ತಿದ್ದರು. ಅವರಿಗೆ ನೆರವಾಗಲು ಕೆಲವು ಕಾನೂನು ಅವರ ಹತ್ತಿರ ಇದ್ದವು. ನೇರವಾಗಿ ಗ್ರಾಹಕ ಮನೆಗೆ ವಿದ್ಯುತ್ ಕೊಡಿ ಎಂದು ಕೇಳುವ ಹಾಗಿಲ್ಲ. ವಿದ್ಯುತ್ ಕಂಟ್ರಾಕ್ಟರ್ ಹಿಡಿದು ಅವನು ಫೈಲ್ ರೆಡಿ ಮಾಡ್ಕೊಂಡು ಲಂಚ ಪಂಚ ಮಾತಾಡಿ ನಮ್ಮ ಹತ್ತಿರ ವಸೂಲ್ ಮಾಡ್ತಿದ್ದ ಮತ್ತು ಎಲ್ಲರಿಗೂ ಹಂಚುತ್ತಲೂ ಇದ್ದ…. ಈ ಕತೆಗೆ ಮುಂದೆ ಬರ್ತೇನೆ. ಅಲ್ಲಿಯವರೆಗೂ ಸಾವಧಾನ!

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

ಬೇವಿನ ಪ್ರಹಸನವೆಂಬ ಬೆಲ್ಲ ತಿನ್ನಿಸಿದ್ದೀರಿ.
ನೀವು, ಮಲ್ಲಯ್ಯ ಸೇರಿ ಸಖತ್ ಮುದಗೊಳಿಸಿದ್ದೀರಿ.
ನೆಕ್ಸ್ಟ್, ಕೆಇಬಿಗೆ ಎಂಥ ಶಾಕ್ ಕೊಡುತ್ತೀರಿ, ನೋಡೋಣ.
(ಅರವತ್ತು-ವಜ್ರ-ಮಹೋತ್ಸವ!)
– ಎಚ್. ಆನಂದರಾಮ ಶಾಸ್ತ್ರೀ
ಶ್ರೀ ಆನಂದ ರಾಮ ಶಾಸ್ತ್ರೀ ಅವರೇ, ನಾವು ಚಿಕ್ಕವರಿದ್ದಾಗ , (ಹಾಗೆ ನೋಡಿದರೆ ಈಗಲೂ ನಾನು ಚಿಕ್ಕವನೇ) ಶಕ್ತಿ ಉತ್ಸಾಹಕ್ಕೆ tonos seven ಎನ್ನುವ ಟಾನಿಕ್ ಬರ್ತಿತ್ತು. ಒಟ್ಟಿಗೆ ಎರಡು ಬಾಟಲ್ ಅದನ್ನು ಕುಡಿದ ಹಾಗಾಯ್ತು ,ಧನ್ಯವಾದಗಳು