ನಾವು ನೋಡುತ್ತಿರುವುದೇ ಸತ್ಯ ಎಂದು ಯಾಕೆ ಹೇಳುತ್ತೇವೆ…? ಗೂಬೆ ಅಂದುಕೊಂಡಿರುವುದು ಸರಿ ಆಗಿರಬಹುದು… ನಾಯಿ ನೋಡುತ್ತಿರುವುದೇ ಸರಿ ಇರಬಹುದಲ್ಲ…! ಹೀಗಾಗಿ ಭೂಮಿಗೆ ಅದರದೇ ಒಂದು ಕ್ಯಾರೆಕ್ಟರ್ ಇಲ್ಲ. ಎಲ್ಲಾ ನಾವು ಮಾಡಿಕೊಂಡಿರುವುದು. ನೀರಿಗೆ ಹೆಣ್ಣಿನ ಹೆಸರನ್ನೇ ಯಾಕೆ ಇಟ್ಟಿದ್ದಾರೆ..? ಅದು ಹೇಳಿತ್ತೇ ನಾನು ಹೆಣ್ಣೆಂದು ಆದರೆ ನಾವು ಹೆಣ್ಣು ಎಂದು ಮಾಡಿಕೊಂಡಿದ್ದೇವೆ. ಇವೆಲ್ಲ ನಮ್ಮ ಕಲ್ಪನೆಗಳು ಇದನ್ನು ಮೀರಿ ಹೇಳಬೇಕು. ಈ ಪ್ರಪಂಚ ಎನ್ನುವುದು ನಾವು ನೋಡಿದಂತೆ ಅದಕ್ಕೆ ತನ್ನದೇ ಆದ ಕ್ಯಾರೆಕ್ಟರ್ ಇಲ್ಲ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್ ಹೆತ್ತೂರು ಕೃತಿ “ಶಿವ ಮೇಡ್ ಬೈ ತೇಜಸ್ವಿ”ಯ ಆಯ್ದ ಭಾಗ
ಬಹಳ ದಿನದಿಂದ ಇದ್ದ ಆನುಮಾನವನ್ನು ಹೊರಗೆಡವಿದೆ. ಚಿತ್ರ ಕಲಾವಿದರಾದ ಕೆ.ಟಿ ಶಿವಪ್ರಸಾದ್ ನನ್ನ ಮುಖವನ್ನು ನೋಡಿ ಒಮ್ಮೆ ನಕ್ಕರು. ನಿನಗೆ ಅನ್ನಿಸಿದಂತೆ ನೋಡು ಎಂದರು. ಸರಿಯಾಗಿ ನೋಡು..
ನಾನು ಮತ್ತೆ ಪೇಯಿಂಟಿಂಗ್ ನೋಡಿದೆ. ನನಗೆ ಅರ್ಥವಾಗುತ್ತಿಲ್ಲ ಎಂದೆ.
ಕರೆದು ಕೂರಿಸಿಕೊಂಡ ಕೆಟಿ ಒಂದು ಘಟನೆ ಹೇಳಿದರು. ` ಬೆಂಗಳೂರಿನ ಚಿತ್ರ ಕಲಾ ಪರಿಷತ್ ನಲ್ಲಿ ಹೀಗೆ ಒಂದು ನನ್ನ ಪೇಯಿಂಟಿಂಗ್ ಎಕ್ಸಿಬಿಷನ್ ಮಾಡಿದ್ದೆ. ಬೇರೆ ಬೇರೆ ರಾಜ್ಯದ ಕಲಾವಿದರೆಲ್ಲ ಬಂದಿದ್ದರು.
ಈ ಮಧ್ಯೆ ಒಬ್ಬ ಇಂಗ್ಲೀಷ್ ವ್ಯಕ್ತಿ ಬಂದು ನೀವೇನಾ ಶಿವಪ್ರಸಾದ್ ಎಂದರು.
ಹೌದು ಎಂದೆ.
ನನ್ನನ್ನೇ ಸ್ವಲ್ಪ ಹೊತ್ತು ನೋಡಿ ಬೇಸರ ಮಾಡಿಕೊಳ್ಳಬೇಡಿ `ನೀವು ಯಾಕೆ ತಲೆಕೆಳಗಾಗಿ ಯಾಕೆ ಪೇಯಿಂಟಿಂಗ್ ಮಾಡುತ್ತೀರಿ’ ಎಂದರು…
`ಅದು ಒಂದು ವಿಧಾನ ಸಾರ್’ ಎಂದೆ.
ಸ್ವಲ್ಪ ಹೊತ್ತು ನಿಂತು ಮಾತನಾಡಿ ಮತ್ತೆ ನನ್ನ ಪೇಯಿಂಟಿಂಗ್ ನೋಡಿಕೊಂಡು ಬಂದವನು `ಯೆಸ್’ ನೀವು ಹೇಳಿದ್ದು ಸರಿ ಎಂದರು.
ಪೇಯಿಂಟಿಂಗ್ ಒಳಗೆ ನಾವು ಓಡಾಡಲು ಸಾಧ್ಯವಿಲ್ಲ. ನೋಟಕ್ಕೆ ಸಂಬಂಧಿಸಿದ್ದನ್ನು ಡೀಲ್ ಮಾಡುವುದೇ ಪೇಯಿಂಟಿಂಗ್. ಇದು ಸಾಹಿತ್ಯದಂತಲ್ಲ. ಅದು ನಮ್ಮ ನೋಟದ ಲಿಮಿಟೇಷನ್‌ಗೆ ಒಳಪಟ್ಟಿದೆ ಎಂದರು.
ಉದಾಹರಣೆಗೆ ನಮಗೆ ಭೂಮಿ ಹೇಗೆ ಕಾಣುತ್ತದೆ ಎಂಬುದು ಅವರ ನೋಟಕ್ಕೆ ಸೀಮಿತವಾಗಿದೆ. ಭೂಮಿ ಗುಂಡಗಿದೆ ಎಂಬುದು ಗೊತ್ತಾಗಿದ್ದೇ ವಿಜ್ಞಾನ ಮುಂದುವರೆದಂತೆ. ಹೀಗಾಗಿ ನೋಟಕ್ಕೆ ಲಿಮಿಟ್ ಇದೆ. ಇದು ಗೊತ್ತಾಗುವವರೆಗೆ ಭೂಮಿಯನ್ನು ಗುಂಡಾಗಿದೆ ಎಂದರೆ ನಂಬುತ್ತಿದ್ದರೇ…? ಹಾಗೆ ನೋಡುವ ದೃಷ್ಠಿಕೋನದಲ್ಲೂ ಬದಲಾವಣೆ ಇರಲಿಲ್ಲ.
ನಮ್ಮ ನೋಟದ ಲಿಮಿಟೇಷನ್ ಹೇಗಿದೆ ಎಂದರೆ, ಉದಾಹರಣೆಗೆ ದನಗಳಿಗೆ ಕಲರ್ ಕಾಣಲ್ಲ. ಆದರೆ ನಮಗೆ ಕಲರ್ ಕಾಣುತ್ತದೆ. ನಮಗೆ ರಾತ್ರಿ ಎನ್ನುವುದು ಗೂಬೆಗೆ ಹಗಲು, ನಮಗೆ ಹಗಲು ಎನಿಸಿದ್ದು ಗೂಬೆಗೆ ಕತ್ತಲು, ನಾಯಿಗೆ ಹಗಲು, ರಾತ್ರಿ ಎರಡೂ ಸಮಯ ಕಣ್ಣು ಕಾಣುತ್ತ್ತದೆ, ಹದ್ದು ಟೆಲಿಸ್ಕೋಪಿಕ್ ಕಣ್ಣುಗಳಿವೆ ಮುನ್ನೂರು ಅಡಿ ಮೇಲಿಂದ ಭೂಮಿ ಮೇಲಿನ ಒಂದು ಇಲಿಯನ್ನೂ ಗುರುತಿಸುತ್ತದೆ. ಹೀಗಿರುವಾಗ ನಾವು ನೋಡುತ್ತಿರುವುದೇ ಸತ್ಯ ಎಂದು ಯಾಕೆ ಹೇಳುತ್ತೇವೆ…? ಗೂಬೆ ಅಂದುಕೊಂಡಿರುವುದು ಸರಿ ಆಗಿರಬಹುದು… ನಾಯಿ ನೋಡುತ್ತಿರುವುದೇ ಸರಿ ಇರಬಹುದಲ್ಲ…! ಹೀಗಾಗಿ ಭೂಮಿಗೆ ಅದರದೇ ಒಂದು ಕ್ಯಾರೆಕ್ಟರ್ ಇಲ್ಲ. ಎಲ್ಲಾ ನಾವು ಮಾಡಿಕೊಂಡಿರುವುದು. ನೀರಿಗೆ ಹೆಣ್ಣಿನ ಹೆಸರನ್ನೇ ಯಾಕೆ ಇಟ್ಟಿದ್ದಾರೆ..? ಅದು ಹೇಳಿತ್ತೇ ನಾನು ಹೆಣ್ಣೆಂದು ಆದರೆ ನಾವು ಹೆಣ್ಣು ಎಂದು ಮಾಡಿಕೊಂಡಿದ್ದೇವೆ. ಇವೆಲ್ಲ ನಮ್ಮ ಕಲ್ಪನೆಗಳು ಇದನ್ನು ಮೀರಿ ಹೇಳಬೇಕು. ಈ ಪ್ರಪಂಚ ಎನ್ನುವುದು ನಾವು ನೋಡಿದಂತೆ ಅದಕ್ಕೆ ತನ್ನದೇ ಆದ ಕ್ಯಾರೆಕ್ಟರ್ ಇಲ್ಲ. ತೇಜಸ್ವಿ ಇದನ್ನು ಕತೆ ಗಳಲ್ಲಿ ಹೇಳುತ್ತಿದ್ದರು. ನಾನು ಪೇಯಿಂಟಿಂಗ್ ನಲ್ಲಿ ಹೇಳುತ್ತಿದ್ದೇನೆ. ಎಲ್ಲವೂ ಚಲನೆಗೆ ಸಂಬಂಧಿಸಿದ್ದು. ಈ ಭೂಮಿ ಯಾವಾಗಲೂ ಹೇಗೆ ಸುತ್ತುತ್ತಿರುತ್ತದೆಯೋ ಹಾಗೆ ನಾವು ಸದಾ ಚಲನೆಯಲ್ಲಿರಬೇಕು. ಯಾವಾಗ ನಾವು ಚಲನೆಯನ್ನು ಕಳೆದುಕೊಳ್ಳುತ್ತೇವೋ ಅವತ್ತು ನಾವು ಕಳೆದು ಹೋದಂತೆ ಹೀಗೆಂದು ನಿಟ್ಟುಸಿರುಬಿಟ್ಟರು ಕೆ.ಟಿ.
ಹೌದಲ್ಲವಾ ಎನಿಸಿತು.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ


