ಕಾಫಿಬೋರ್ಡು ಮಧ್ಯವರ್ತಿಗಳ ಹಾವಳಿಯನ್ನೂ ತಪ್ಪಿಸಲಾಗದೆ ದಲ್ಲಾಳಿಗಳ ಕೈಗೊಂಬೆಯಂತೆ ವರ್ತಿಸಿತು. ಕಾಫಿ ಬೆಳೆಯನ್ನು ಬಿಟ್ಟರೆ ಎಲ್ಲಾ ಬೆಳೆಗಾರರು ತಮ್ಮ ಉತ್ಪಾದನೆಯನ್ನು ತಾವೇ ಮಾರಿಕೊಳ್ಳುತ್ತಿದ್ದರು. ಕಾಫಿ ಬೆಳೆಗಾರನು ಎದುರಿಸುತ್ತಿದ್ದ ಸಮಸ್ಯೆ ಮತ್ತು ಮುಂದೊದಗಬಹುದಾದ ಆಪತ್ತು ವಿಪತ್ತುಗಳನ್ನು ಚಿಂತಿಸಿ ೧೯೭೧ರಲ್ಲೇ ತೇಜಸ್ವಿಯು ತಾವು ಬೆಳೆದ ಕಾಫಿಯನ್ನು ಸಂತೆಯಲ್ಲಿ ಮಾರಿಕೊಳ್ಳುವೆನೆಂಬ ಹೇಳಿಕೆ ಕೊಟ್ಟು ಕಾಫಿ ಬೋರ್ಡಿನ ಬಗ್ಗೆ ಮೊಟ್ಟಮೊದಲ ಬಾರಿಗೆ ಸಿಡಿದೆದ್ದರು. ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ

 

(ಮೂಡಿಗೆರೆ ಪೇಟೆಯಲ್ಲಿ: ತೇಜಸ್ವಿ ವರ್ಣಚಿತ್ರ)

ಕಾಫಿ ಬೋರ್ಡಿನ ಅವಸಾನಕ್ಕೆ ಮೂಲ ಕಾರಣ ಸರ್ಕಾರ ಮತ್ತು ಕಾಫಿಮಂಡಳಿ ಆಡಳಿತ ವರ್ಗದ ಪ್ರತಿಗಾಮಿ ಧೋರಣೆ. ಕಾಫಿಯ ಈ ಪೂಲ್ ಮಾರುಕಟ್ಟೆ ವ್ಯವಸ್ಥೆಯನ್ನು ನಾಶ ಮಾಡಬೇಕೆನ್ನುವ ಕಂಪನಿ ತೋಟಗಳ ಮತ್ತು ದೊಡ್ಡ ಬೆಳೆಗಾರರ ಕುತಂತ್ರಕ್ಕೆ ವಿರುದ್ಧವಾಗಿ ಇಲ್ಲಿಯವರೆಗೂ ಕಾಫಿ ಬೋರ್ಡಿಗೆ ಬೆಂಬಲವಾಗಿ ನಿಂತಿದ್ದವರು ಸಣ್ಣ ಕಾಫಿ ಬೆಳೆಗಾರರು. ತಾವು ಬೆಳೆದ ಕಾಫಿಯನ್ನು ತಾವೇ ಮಾರಾಟ ಮಾಡುವ ದೇಶವಿದೇಶಗಳಿಗೆ ರಫ್ತು ಮಾಡುವ ಶಕ್ತಿ ಇಲ್ಲದ ಇವರು ಈ ವ್ಯವಹಾರವನ್ನು ಕಾಫಿಬೋರ್ಡು ಮಾಡಿದರೆ ಒಳ್ಳೆಯದೆಂದು ತೀರ್ಮಾನಿಸಿ ಕಾಫಿಬೋರ್ಡಿಗೆ ಬೆಂಬಲ ಕೊಟ್ಟಿದ್ದರು. ಆದರೆ ಬೋರ್ಡಿನ ಅವ್ಯವಹಾರದಿಂದಾಗಿ ಅಸಮಾಧಾನ ಶುರುವಾಯಿತು.

ಮೊದಲಿಗೆ ಕಾಫಿಬೋರ್ಡಿನವರು ಬೆಳೆಗಾರರಿಗೆ ಇನಿಷಿಯಲ್ ಪೇಮೆಂಟ್ ನಂತರ ಸಂದಾಯವಾಗಬೇಕಿದ್ದ ಹಣವನ್ನು ಸರಿಯಾಗಿ ಪಾವತಿಸದೆ ವಿಳಂಬ ಮಾಡುತ್ತಿದ್ದರು. ಎಷ್ಟೋ ವೇಳೆ ಪಾಯಿಂಟ್ ಡಿಕ್ಲೇರ್ ಮಾಡುವುದೇ ತಡಮಾಡುತ್ತಿದ್ದರು. ಕ್ಯೂರಿಂಗ್ ವರ್ಕ್ಸ್‌ಗಳಲ್ಲಿ ಕಾಫಿ ಕದ್ದು ಸಾಗಿಸಲ್ಪಟ್ಟಿತು. ಇದನ್ನು ಕಾಯಲು ನಿಯಮಿಸಿದ ವಿಜಿಲೆನ್ಸ್ ಸಿಬ್ಬಂಧಿಯವರೇ ಈ ಕೆಲಸ ಮಾಡತೊಡಗಿದರು. ಕಾಫಿಬೋರ್ಡಿನ ಕಾಫಿ ಡಿಪೋಗಳಿಂದ ಕಾಫಿ ನಾಪತ್ತೆಯಾಯ್ತು. ಬೆಳೆಗಾರರಿಗೆ ವಿತರಿಸಲೆಂದು ಕಾಫಿಬೋರ್ಡು ಪಾವತಿ ಮಾಡಿದ ಹಣವನ್ನೇ ಕ್ಯೂರಿಂಗ್ ವರ್ಕ್ಸ್‌ನವರು ದುರುಪಯೋಗ ಮಾಡಿಕೊಂಡರು. ಈವರೆಗೆ ಕಾಫಿ ಬೋರ್ಡಿಗೆ ಬೆಂಬಲ ಕೊಡುತ್ತಿದ್ದ ಸಣ್ಣ ಬೆಳೆಗಾರರು ಕಂಗಾಲಾಗಿ ಹೋದರು.

ಅಲ್ಲದೆ ಕಾಫಿ ಉತ್ಪಾದನೆ ದೇಶದ ಅಗತ್ಯಕ್ಕಿಂತ ಎಷ್ಟೋ ಪಟ್ಟು ಹೆಚ್ಚಾಗಿದೆ. ಇದೂ ಸಹ ಅನೇಕ ಹೊಸ ಸಮಸ್ಯೆಗಳನ್ನು ತಂದೊಡ್ಡಿತು. ಈವರೆಗೂ ಕೇವಲ ರಫ್ತಿನ ಮೇಲೆ ಗಮನ ಇರಿಸಿಕೊಂಡಿದ್ದ ಸರ್ಕಾರ ಮತ್ತು ಕಾಫಿಬೋರ್ಡು ಭಾರತದೊಳಗೆ ಕಾಫಿಯ ಆಂತರಿಕ ಬೇಡಿಕೆಯನ್ನು ಹೆಚ್ಚಿಸಲು ಹೋಗಲಿಲ್ಲ. ಮಧ್ಯವರ್ತಿಗಳಾದ ಕಾಫಿ ವ್ಯಾಪಾರಿಗಳಂತೂ ಮಾರಾಟವಾಗುತ್ತಿದ್ದ ಕಾಫಿಯಲ್ಲೇ ಬೇಕಾದಷ್ಟು ಲಾಭಗಳಿಸುತ್ತಿದ್ದರಿಂದ ಆಂತರಿಕ ಮಾರುಕಟ್ಟೆಯನ್ನು ಹೆಚ್ಚಿಸುವ ತೊಂದರೆಯನ್ನೇ ತಗೆದುಕೊಳ್ಳಲಿಲ್ಲ. ಇಷ್ಟು ಹೊತ್ತಿಗೆ ಇತರ ಖಾಸಗಿ ಸಂಸ್ಥೆಗಳಂತೆ ಕಾಫಿಬೋರ್ಡು ಚೈತನ್ಯಶೀಲ ಸಂಸ್ಥೆಯಾಗಿ ಉಳಿಯಲಿಲ್ಲ. ಕಾಫಿಬೋರ್ಡು ಮಧ್ಯವರ್ತಿಗಳ ಹಾವಳಿಯನ್ನೂ ತಪ್ಪಿಸಲಾಗದೆ ದಲ್ಲಾಳಿಗಳ ಕೈಗೊಂಬೆಯಂತೆ ವರ್ತಿಸಿತು. ಕಾಫಿ ಬೆಳೆಯನ್ನು ಬಿಟ್ಟರೆ ಎಲ್ಲಾ ಬೆಳೆಗಾರರು ತಮ್ಮ ಉತ್ಪಾದನೆಯನ್ನು ತಾವೇ ಮಾರಿಕೊಳ್ಳುತ್ತಿದ್ದರು. ಕಾಫಿ ಬೆಳೆಗಾರನು ಎದುರಿಸುತ್ತಿದ್ದ ಸಮಸ್ಯೆ ಮತ್ತು ಮುಂದೊದಗಬಹುದಾದ ಆಪತ್ತು ವಿಪತ್ತುಗಳನ್ನು ಚಿಂತಿಸಿ ೧೯೭೧ರಲ್ಲೇ ತೇಜಸ್ವಿಯು ತಾವು ಬೆಳೆದ ಕಾಫಿಯನ್ನು ಸಂತೆಯಲ್ಲಿ ಮಾರಿಕೊಳ್ಳುವೆನೆಂಬ ಹೇಳಿಕೆ ಕೊಟ್ಟು ಕಾಫಿ ಬೋರ್ಡಿನ ಬಗ್ಗೆ ಮೊಟ್ಟಮೊದಲ ಬಾರಿಗೆ ಸಿಡಿದೆದ್ದರು. ಆದರೆ ಬೆಳೆಗಾರರು ಅದರಲ್ಲೂ ಸಣ್ಣ ಬೆಳೆಗಾರರು ತಣ್ಣಗೇ ಮಲಗಿದ್ದರು.

ತರುವಾಯ ನಡೆದು ಬಂದ ದಾರಿ ಸುಧೀರ್ಘವಾದದ್ದು. ಸಮಾನ ಮನಸ್ಕರುಗಳು ಕೂಡಿ ದಕ್ಷಿಣ ಭಾರತದ ಬೆಳೆಗಾರರ ಒಕ್ಕೂಟ ಒಂದನ್ನು ಕಟ್ಟಿಕೊಂಡು ಹೋರಾಟ ಮಾಡಿದರು. ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯನ್ನೆಲ್ಲ ಅರಿವಿಗೆ ಬರುವಂತೆ ಮಾಡಿದರು. ಚಳವಳಿಯೂ ನಡೆಯಿತು. ಇದೆಲ್ಲದರ ಪರಿಣಾಮವಾಗಿಯೂ ಮತ್ತು ಜಗತ್ತಿನಲ್ಲಾಗುತ್ತಿದ್ದ ಬದಲಾವಣೆಯೂ ಇರಬಹುದು. ಬೆಳೆಗಾರ ಈಗ ಅಥವಾ ಇನ್ನೆಂದೂ ಇಲ್ಲ ಎನ್ನುವ ಐತಿಹಾಸಿಕ ಸಂದರ್ಭಕ್ಕೆ ಬಂದಿದ್ದರು. ಅಂದು ಕೈಗೊಂಡ ದಿಟ್ಟ ನಿರ್ಧಾರ ಇಡೀ ಕಾಫಿ ಉದ್ಯಮವನ್ನೇ ಕ್ರಾಂತಿಕಾರಕವಾಗಿ ಬದಲಾಯಿಸಿತು. ೧೯೯೩ರಲ್ಲಿ ಮೊಟ್ಟಮೊದಲ ಬಾರಿಗೆ ಕಾಫಿ ಮುಕ್ತ ಮಾರುಕಟ್ಟೆಯನ್ನು ಎದುರಿಸಿತು. ಅಂದಿನ ವರ್ಷ ಬೆಳೆಗಾರನಿಗೆ ಹರ್ಷ ವರುಷವಾಯಿತು. ಈ ಹಿಂದೆ ಒಂದು ಮೂಟೆ ಕಾಫಿ ಬೀಜಕ್ಕೆ ಏಳುನೂರು ರೂಪಾಯಿಗಳಿಗೆ ಮಾರಾಟವಾಗುತ್ತಿತ್ತು. ಎಫ್.ಎಸ್.ಕ್ಯೂ.ನಿಂದಾಗಿ ಮೂಟೆಗೆ ಏಳುಸಾವಿರ ರೂಪಾಯಿಯನ್ನೂ ಮುಟ್ಟಿತು. ಆದರೆ ಸುಮಾರು ಬೆಳೆಗಾರರು ಒಂದೂವರೆ ಸಾವಿರ ರೂಪಾಯಿಗೆ ಏರಿದಾಗಲೆ ಹೆಚ್ಚಾಯಿತೆಂದು ಮಾರಿಕೊಂಡಿದ್ದರು. ಎಲ್ಲವನ್ನೂ ಬಹಳ ಸರಳೀಕರಿಸಿ ಹೇಳಿರುವೆನು.

ಎಲ್ಲೋ ಮೂಲೆಯೊಂದರ ಸಣ್ಣ ಕಾಫಿ ಶಾಪಿನಲ್ಲಿ ಒಬ್ಬ ಮಾಪಿಳ್ಳೆ ಮಾತನಾಡುತ್ತಿದ್ದನಂತೆ, ‘ಯಾರೋ ಕುಯೆಂಪು ಅನ್ನೊರ ಮಗನಂತೆ ಇದನ್ನೆಲ್ಲ ಮಾಡಿದ್ದು’ ಎಂಬುದನ್ನು ಬಹಳ ಸಂತೋಷದಿಂದ ನೆರೆಯ ತೋಟದವರು ಮನೆಗೆ ಬಂದು ಹೇಳಿ ಹೋಗಿದ್ದರು. ಕಾಫಿ ತೋಟಗಳು ಬಹುಜನಗಳಿಂದ ನಡೆಯಬೇಕಾದ ಕೆಲಸ, ಹಾಗೂ ವರ್ಷವೆಲ್ಲಾ ಕೆಲಸವಿರುತ್ತದೆ. ನಾನು ಐವತ್ತರ ದಶಕದಲ್ಲಿ ಇಂಟರ್‌ಮೀಡಿಯೆಟ್‌ನಲ್ಲಿ ಓದುವಾಗ ಎಕನಾಮಿಕ್ಸ್ ಪಠ್ಯಪುಸ್ತಕದಲ್ಲಿ ಓದಿದ್ದೆ ಕಾಫಿ ತೋಟಗಳನ್ನು ಅಗ್ಗದ ಕಾರ್ಮಿಕರು ಸಿಗುವ ಕಡೆ ಮಾಡುತ್ತಾರೆಂದು. ಅಂದರೆ, ಅವರು ಲಭ್ಯವಿದ್ದರೆ ಮಾತ್ರ ತೋಟ ಮಾಡಲು ಸಾಧ್ಯವಾಗುತ್ತೆಂದು. ಯಾವ ಕಾಲದಲ್ಲಿ ಆ ಪಠ್ಯ ಪುಸ್ತಕ ಸಿದ್ಧಮಾಡಿದ್ದರೋ ನಾಕಾಣೆ. ಅರವತ್ತರ ದಶಕದಲ್ಲಿ ನಾವು ತೋಟಮಾಡಲು ಬಂದಾಗ ಪಠ್ಯ ಪುಸ್ತಕದಲ್ಲಿನ ಮಾತಿಗೂ ಇಲ್ಲಿಗೂ ಬೇರೆಯದೇ ಅನುಭವವಾಯಿತು. ಇವತ್ತಿಗೆ ಇನ್ನೂ ಬದಲಾದ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ.

(ಫೋಟೋ: ತೇಜಸ್ವಿ)

ಎಪ್ಪತ್ತರ ದಶಕದಲ್ಲಿ ನನಗೆ ನೆನಪಿದ್ದಂತೆ ಅಂದಿನ ಕಾರ್ಮಿಕರು ಸಂತೆ ದಿನದ ರಜೆಯಲ್ಲಿ ತಲೆಗೆ ಎಣ್ಣೆ ಸುರಿದುಕೊಂಡು ಗಟ್ಟಿ ಬಾಚಿಕೊಂಡು ವಾರದ ಸಂತೆಗೆ ಹೋಗಿ ಬರುತ್ತಿದ್ದರು. ವಾರದಲ್ಲಿ ಒಂದೇ ದಿವಸ ತಲೆ ಕೂದಲು ಬಾಚಣಿಗೆ ಕಾಣುತ್ತಿದ್ದುದು. ಆದರೆ ಇಂದು ಸಂತೆ ದಿನ ಬ್ಯೂಟಿ ಪಾರ್ಲರಿಗೂ ಹೋಗುವರು. ಮೂಡಿಗೆರೆಯೆಂಬಂತ ಸಣ್ಣ ಊರಿನಲ್ಲಿ ಎಷ್ಟಿರಬಹುದು ಹೇಳಿ ಈ ಪಾರ್ಲರ್‌ಗಳು. ಹದಿಮೂರು! ಮುಂದಿನ ಸರ್ತಿ ನಾವು ಅಲ್ಲಿಗೆ ಒಂದು ನಿಮಿಷದ ಭೇಟಿ ಕೊಡೋಣಂತೆ. ಮರಗಸಿ ಮಾಡುವ ಗಂಡಾಳುಗಳು ಸೊಂಟದ ಪಟ್ಟಿಯಲ್ಲಿರುವ ಕೊಕ್ಕೆಗೆ ಕತ್ತಿ ಸಿಕ್ಕಿಸಿಕೊಂಡು ಉಡದಂತೆ ಸೊಯ್ಯೆಂದು ಸರಸರ ಮರಹತ್ತಿ ತುತ್ತ ತುದಿ ತಲುಪಿ ಮರದ ಬೇಡವಾದ ಕೊಂಬೆ ಗೆಲ್ಲುಗಳನ್ನು ಕಡಿಯುತ್ತಾ ಈ ಕೊಂಬೆಯಿಂದ ಆ ಕೊಂಬೆಗೆ ದಾಟಿಕೊಳ್ಳುವುದು ನೋಡಿದರೆ ಎದೆ ಝಲ್ಲೆನ್ನುತ್ತೆ. ಯಾವ ರಿಸ್ಕಿನಲ್ಲಿ ಕೆಲಸ ಮಾಡುತ್ತಾರೆ ಅವರು. ಹಿಂದೆಯೆಲ್ಲಾ ಪ್ರತಿ ತೋಟಗಳಲ್ಲಿ ಕೂಲಿ ಲೈನೆಂದು ನಾಲ್ಕು ಗೋಡೆ, ಒಂದು ಬಾಗಿಲು, ಮಾಡೆಂಬಂತೆ ತೋಟದ ಆಳುಗಳ ಮನೆ ಕಟ್ಟಿರುತ್ತಿದ್ದರು. ಈಗ ಅವೆಲ್ಲಾ ಖಾಲಿ. ಸರ್ಕಾರ ಕೊಟ್ಟಿರುವ ನಿವೇಶನದಲ್ಲಿ ಅವರವರ ಸ್ವಂತ ಮನೆ. ಅಷ್ಟೇ ಅಲ್ಲ ಅನೇಕರ ಮನೆಗಳಲ್ಲಿ ಬಣ್ಣದ ಟಿವಿ, ಮಿಕ್ಸಿ, ಸ್ಟೀಲ್ ಬೀರು ಇರುತ್ತೆ. ಎಲ್ಲರ ಮನೆಯಲ್ಲಿ ಫೋನೂ ಇರುತ್ತೆ. ನಮ್ಮ ತೋಟಕ್ಕೆ ಕೆಲಸಕ್ಕೆ ಬರುವವರೆಲ್ಲರ ಮಕ್ಕಳು ಎಸ್.ಎಸ್.ಎಲ್.ಸಿ.ಗೆ ಬಂದರು ಕೂತರು. ಕೆಲವರು ಡಿಗ್ರಿ ಓದುತ್ತಾರೆ. ಅಕ್ಷರ ತಬ್ಬುವಿಕೆಯಿಂದಾಗಿ ಅನೇಕ ಬದಲಾವಣೆಗಳಾಗುತ್ತಿವೆ. ಈ ತಲೆಮಾರಿನವರು ಯಾರೂ ತೋಟದ ಕೆಲಸಕ್ಕೆ ಬರಲೊಪ್ಪರು. ಕಡಿಮೆ ಸಂಬಳವಾದರೂ ಸೈ, ಕಡೇ ಪಕ್ಷ ಮೂಡಿಗೆರೆ ಬಟ್ಟೆಯಂಗಡಿಯಲ್ಲಿ ಸೇಲ್ಸ್ ಹುಡುಗಿ ಅನ್ನಿಸಿಕೊಳ್ಳಲಿಕ್ಕೆ ಇಷ್ಟಪಡುತ್ತಾಳೆ ಅಥವಾ ಬೆಂಗಳೂರಿಗೆ ಕೆಲಸ ಅರಸಿ ಹೊರಡುತ್ತಾಳೆ.

ಮೂಡಿಗೆರೆಯ ಮೂಡಿ ಚಂದ್ರ 

(ಮೂಡಿಗೆರೆಯ ಪೂರ್ಣಚಂದ್ರ)

ನಮ್ಮೂರಿನ ಚಂದ್ರ ಬಲು ಚಂದ. ಪೂರ್ಣಚಂದ್ರ ಮತ್ತೂ ಚಂದ. ನಗರದವರಂತೂ ನೋಡಿರಲಿಕ್ಕೇಯಿಲ್ಲ ಇಂತಹ ಚಂದ್ರನನ್ನೂ, ಆಹ್ಲಾದಕರವಾದ ಇಂತಹ ಆಕಾಶವನ್ನೂ. ನಾನಂತೂ ಮಲಗಿದ್ದವಳು ಎದ್ದೆದ್ದು ಮತ್ತೆಮತ್ತೆ ನೋಡುವೆನು ಪೂರ್ಣಚಂದ್ರನನ್ನು. ಉಳಿದಂತೆ ಅಡುಗೆ ಮಾಡುತ್ತಾ ಕಿಟಕಿ ಮೂಲಕ, ಮರದ ಕೊಂಬೆಗಳ ಸಂದಿಯಿಂದ ಬಾಗಿದ ಬೆಳ್ಳಿ ಕಡ್ಡಿಯಂತಿರುವನೋ ಅಥವಾ ಮುಕ್ಕಾದಂತವನೋ ನಮ್ಮನ್ನೇ ನೋಡುತ್ತಿರುವಂತೆ ಅನ್ನಿಸುತ್ತೆ. ಮನೆಯಲ್ಲಿರುವವರನ್ನೆಲ್ಲ ಕೂಗಿ ಕರೆದು ತೋರಿಸಿ ಹಂಚಿಕೊಳ್ಳುವಂತಾಗುತ್ತೆ. ಆಹ್ ಆ ದೃಶ್ಯ! ಎಷ್ಟು ಸಚ್ಛಕಾಡಿನ ಮಧ್ಯೆ ಇರುವ ಮೂಡಿಗೆರೆ! ಶುಭ ಆಕಾಶದಲ್ಲಿ ಮಿಂದ ಚಂದ್ರ ಧೂಳಿಲ್ಲ, ಸದ್ದಿಲ್ಲ, ಮೊದಲೇ ವಿದ್ಯುಚ್ಛಕ್ತಿಯ ಬೆಳಕಿಲ್ಲ ಅವನನ್ನೇ ಮಂಕಾಗಿಸಲು. ಈ ತಿಂಗಳುಗಳಲ್ಲಿ ಮಾತ್ರ ಈ ಸೌಭಾಗ್ಯ ನಮಗೆ. ಮಿಕ್ಕಂತೆಲ್ಲ ಮೋಡ ಅಥವ ಮಳೆ ಆರೆಂಟು ತಿಂಗಳುಗಳು. ಹೀಗೆ ರಾತ್ರಿ ಎದ್ದು ಚುಕ್ಕಿ ಚಂದ್ರಮನನ್ನು ನೋಡ ನೋಡುತ್ತಿದ್ದಂತೆ ಬಿಳಿ ತೆರೆಯ ಮಂಜು ಮುಸುಕುತ್ತೆ. ಇದು ಸ್ವಪ್ನ ಲೋಕಕ್ಕೇ ಕರೆದೊಯ್ಯುತ್ತೆ. ಎಲ್ಲ ಸ್ಪಷ್ಟ ಆದರೆ ಎಲ್ಲವೂ ಅಸ್ಪಷ್ಟ.

ಇದರಾಟ ನೋಡಿ. ನೋಡು ನೋಡುತ್ತಿದ್ದಂತೇ ಮಂಜು ಕರಗಿ ಹೋಗುತ್ತಾ ಹುಣ್ಣಿಮೆ ಚಂದ್ರ ಮಂಜಿನ ಪರದೆ ಮುಂದೆ ಪ್ರತ್ಯಕ್ಷ. ಸ್ಫಟಿಕದಷ್ಟು ಶುಭ್ರ ಆಕಾಶ! ಈಗ ನಮ್ಮ ಆತ್ಮೀಯರೊಡನೆಯೋ, ನಮ್ಮಲ್ಲೆ ಬೆಸೆದುಕೊಂಡು ಬದುಕುವ ಇನ್ನೊಂದು ಜೀವದೊಂದಿಗೋ ಹಾಗೇ ರಾತ್ರಿಯಲ್ಲಿ ಬಿಸಿಲಿನ ಬೆಳದಿಂಗಳ ರಾತ್ರಿಯಲ್ಲಿ ಕಾಫಿತೋಟದ ಮರದ ನೆರಳಿನಲ್ಲಿ ಅಡ್ಡಾಡಿದಾಗ ನಾವು ಎಲ್ಲಿಗೆ ಹೋದರಲ್ಲಿಗೆ ಬರುವನು – ಒಂದು ಮಧುರ ಗೀತೆಯ ಸುಮಧುರ ಪಂಕ್ತಿ ಸಂಕ್ತಿಯ ಹಾಗೆ. ಈ ರಾತ್ರಿಗೆ ನಾವು ಕಾಯಬೇಕು. ಕಡೇ ಪಕ್ಷ ಇದನ್ನು ಓದಿ. ಇದಕ್ಕೇನೂ ಕಾಯಬೇಕಾದ್ದಿಲ್ವೆಲ್ಲ.

ನಾವೊಂದಷ್ಟು ಪುಸ್ತಕ ಓದಿಕೊಂಡೋ ಮತ್ತೊಬ್ಬರ ಬಾಯಲ್ಲಿ ಕೇಳಿಯೋ ನಕ್ಷತ್ರಗಳ ಹೆಸರನ್ನಷ್ಟೇ ನೆನಪಿಟ್ಟುಕೊಂಡಿದ್ದರೂ ಸಾಕು, ಚುಕ್ಕಿ ಚಂದ್ರಮರು ಕುಣಿ ಕುಣಿಯುತ್ತ ನಮ್ಮನ್ನು ಸ್ವಾಗತಿಸುತ್ತಾರೆ. ಆಕಾಶ ವೀಕ್ಷಣೆಗೆ ಕಣ್ಣು ಅಲ್ಲಿಗೇ ಹೊರಳುತ್ತಿರುತ್ತೆ. ಆಕಾಶಗಂಗ(ಮಿಲ್ಕಿ ವೇ), ಶೂಟಿಂಗ್ ಸ್ಟಾರ್‍ಸ್, ಅಲ್ಡೆಬರಾನ್, ಸಿರಿಯಾಸ್, ಬೆಳ್ಳಿ ಶುಕ್ರಗ್ರಹ, ದೃವ ನಕ್ಷತ್ರ, ಸಪ್ತರ್ಷಿ ಮಂಡಲ ಯಾವುದಿರಬಹುದೆಂದು ನೋಡುವ, ಗುರುತಿಸಿ ತಿಳಿದುಕೊಳ್ಳುವ ತವಕ ಬರುತ್ತೆ. ಇನ್ನೂ ಒಂದು ಆಶ್ಚರ್ಯ ರಾತ್ರಿ ಮಲಗುವ ಮುಂಚೆ ಮನೆ ಹಿಂಭಾಗದಲ್ಲಿ ನೋಡಿದ ರಾಶಿ ಬೆಳಗಿನ ಜಾವ ಮಲಗುವ ಕೋಣೆ ಮುಂಭಾಗಕ್ಕೆ ಬಂದು ಮುಳುಗುತ್ತಿರುತ್ತೆ. ಆಕಾಶ ನೋಡುತ್ತಾ ಸಮಯದ ಪರಿವೆ ನಮ್ಮ ಅರಿವಿಗೇ ಬರೋಲ್ಲ. ಮನೆ ಒಳಗೆ ನಿಧಾನಕ್ಕೆ ಎದ್ದರಾಯಿತು ಅಂತಾಗುತ್ತೆ. ಇನ್ನಷ್ಟು ನೋಡುವ, ಇನ್ನಷ್ಟು ಗುರುತಿಸುವ ಇನ್ನಷ್ಟು ಓದಿ ತಿಳಿಯುವ ಉತ್ಕಟಾಕಾಂಕ್ಷೆ ಮೊಳಕೆ ಒಡೆಯುತ್ತೆ. ಇಂದಿನ ಮಕ್ಕಳಿಗೆ ನಗರಗಳಲ್ಲಿ ದೂರದ ಆಕಾಶ, ಮಿನುಗುವ ನಕ್ಷತ್ರ ನೋಡಲಿಕ್ಕೆ ಅವಕಾಶವಿದೆಯಾ? ಸಮಯವಿದೆಯಾ? ಒಮ್ಮೆ ನೋಡ ಬನ್ನಿ ಮಕ್ಕಳನ್ನೂ ಕಟ್ಟಿಕೊಂಡು ಬನ್ನಿ ಇಲ್ಲಿಗೆ.

ಈ ಮಾಗಿ ಮಾಸ ಸಂಭ್ರಮ ಉಕ್ಕಿಸುವಂತದ್ದು. ಮಳೆಗಾಲದ ಮಳೆಗೆ ನಲುಗಿದ ಹೂವಿನ ಗಿಡಗಳು ವಿಶ್ರಾಂತಿಯನ್ನು ಪಡೆದು ಈಗ ಬಿಸಿಲಿಗೆ ಚಿಗುರೊಡೆಯಲು ಸೂಕ್ತ ಸಮಯ. ಒಂದಷ್ಟು ಕೆಲಸ ನಡೆಸಬೇಕಷ್ಟೆ. ಕಳೆ ಕೀಳುವುದು, ಮಣ್ಣು ಬದಲಿಸುವುದು, ಗೊಬ್ಬರ ಕೊಡುವುದು ಇತ್ಯಾದಿ. ಇಲ್ಲಿ ಯಾವ ಹೂವಿನ ಗಿಡವನ್ನಾದರೂ ಚೆನ್ನಾಗಿ ಬೆಳೆಯಬಹುದಾದಂತ ಅಗತ್ಯ ವಾತಾವರಣವಿದೆ. ನಮ್ಮ ಶ್ರಮವೂ ಅಷ್ಟೇ ಅಗತ್ಯ. ಅಸಾಲಿಯ, ನಾಗಲಿಂಗ ಪುಷ್ಪ, ಪೀಕಾಕ್ ಜಿಂಜರ್(ನವಿಲು ಶುಂಠಿ) ಐರಿಸ್(ನೆಲಸಂಪಿಗೆ) ಬರ್ಡ್ ಆಫ್ ಪ್ಯಾರಡೈಸ್ (ಸ್ವರ್ಗದ ಹಕ್ಕಿ) ಮ್ಯಾಗ್‌ನೋಲಿಯಾ ಗ್ರ್ಯಾಂಡಿಫ್ಲೋರಾ, ಆಲ್‌ಪೇನಿಯನ್ ಜಾರಂಬೆಟ್, ಗುಲಾಬಿ, ಗೊರಂಟೆ, ಅಂಬಲಿಗೆ ಹೀಗೆ ಹಲವು ಹತ್ತು ಬಗೆಯವು. ಆದರೆ ಪರದೇಶದ ನನ್ನ ಪ್ರೀತಿಯ ಟ್ಯುಲಿಪ್ ಮಾತ್ರ ಎರಡೇ ಹೂ ಅರಳಿಸಿ ಮುಂದೆ ಬೆಳೆಯಲು ನಿರಾಕರಿಸಿತು. ನನ್ನಲ್ಲಿ ಕ್ಯಾಕ್‌ಟಸ್ ಜಾತಿಯ ಕುಡುಕನ ಕನಸು ಎಂಬ ಹೆಸರಿನ ಅಪರೂಪದ ಗಿಡವೊಂದಿದೆ. (ರಿಫ್‌ಸಾಲಿಸ್ ಸಾಲಿಕಾರ್‌ನಾಯಿಡ್ಸ್) ಸಣ್ಣ ಸಣ್ಣ ಬಾಟ್ಲ್(ಶೀಸೆ)ನಂತೆ ಕಾಣುವ ಹಸಿರು ಕಾಳಿನ ತುದಿಗೆ ಇನ್ನೊಂದು ಬಾಟ್ಲ್ ಅಂಟಿಕೊಂಡಂತೆ ಇರುವ ಸಸ್ಯ ಗಿಡಪೂರ್ತಿ ಒಂದಕ್ಕೊಂದು ಅಂಟಿಕೊಂಡಿರುವ ಶೀಸೆ. ಈ ಬಾಟಲುಗಳ ಉದ್ದ ಒಂದೆರಡು ಸೆಂಟಿಮೀಟರ್. ತುದಿಯಲ್ಲಿ ವರ್ಷಕ್ಕೊಂದು ಸಾರ್ತಿ ಹಳದಿ ಹೂ ಬಿಡುತ್ತೆ. ನೋಡಲು ಬಲುಚೆಂದ.

ದಟ್ಟವಾದ ಮಂಜು ಮುಸುಕಿದ ರಾತ್ರೆ ಕಳೆದು ಬೆಳಗಾದರೂ ಮಂಜು ಮುಸುಕಿರುತ್ತೆ. ಈ ಮಂಜು ಚಿಗುರೊಡೆದ ಹೂವಿನ ಗಿಡಗಳನ್ನು ತಂಪಾಗಿಸಿ ನಳನಳಿಸುವಂತೆ ಮಾಡುತ್ತೆ. ಅಂಗಳದಲ್ಲಿನ ಶಾದ್ವಲದ ಮೇಲಿನ ಮುತ್ತಿನ ಮಣಿ ಮಾಲೆಯನ್ನು ನೋಡವುದೇ ಸೊಗಸು. ಮಕ್ಕಳಿಗೆ ಮತ್ತು ಆಫೀಸುಗಳಿಗೆ ಹೋಗುವವರು ಮಂಜು ನೋಡಿದರೂ ಲೆಕ್ಕಿಸದಂತೆ ಬೆಚ್ಚನೆ ಉಡುಗೆ ತೊಟ್ಟು ತಮ್ಮ ತಮ್ಮ ಕೆಲಸಗಳತ್ತವೆ ಗಮನ. ಹೆಚ್ಚೆಂದರೆ ಏನು ಮಂಜು ಈವತ್ತು ಅಂತ ಒಂದು ಉದ್ಗಾರ. ಅದರೆ ತೋಟದ ಮನೆಯ ಹಿರಿಯರಿಗೆ ಬೇರೆಯದೇ ಲೆಕ್ಕಾಚಾರ ಹೊಳೆಯುತ್ತೆ. ಹೂವಿನ ಮಳೆ ದೂರಾಯ್ತೇನೋ ಒಳ್ಳೆದೇ ಆತು ಅಂದುಕೊಳ್ಳುವವರು. ಇನ್ನೂ ಕಾಫಿ ಕೊಯ್ಯಲು ಪೂರೈಸಿಲ್ವೆಲ್ಲ ಅದಕ್ಕೇ.

ಈ ತಿಂಗಳ ತೋಟದ ಕೆಲಸಗಾರರು ಓಡೋಡಿ ಬರ್‍ತಾರೆ ಕೆಲಸಕ್ಕೆ ಕಾಫಿ ಕೊಯ್ಯಲು, ಏನು ಮಂಜು ಸುರಿತಾಯ್ತೇ ಎಂದು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಲೇ ಲಗುಬಗೆಯಿಂದ ಕೆಲಸಕ್ಕೆ ಓಡ್ತಾರೆ. ಹಾಜರಿಗೆ ಇಂತೆಷ್ಟೆಂದು ಕುಯ್ದರೆ ಉಳಿದದ್ದೆಲ್ಲ ಲಾಭಕ್ಕೆ. ಕೈ ಚುರುಕಾದರೆ ಲಾಭದ ದುಡ್ಡು ಹೆಚ್ಚು. (ಇಷ್ಟಾದರೂ ಕಾಫಿ ಕುಯ್ಯಲು ತೋಟಗಳಲ್ಲಿ ಆಳುಗಳೇ ಲಭ್ಯವಿಲ್ಲವೆನ್ನುವುದು ಇಂದಿನ ಎಲ್ಲ ಕಡೆಯ ಮಾತು)

ನಮ್ಮಲ್ಲಿ ಬೆಳೆಯುವ ಕಾಫಿಗಳಲ್ಲಿ ಅರೇಬಿಕಾ ಮತ್ತು ರೋಬಸ್ಟಾ ಎಂಬೆರಡು ತಳಿಗಳಿವೆ. ಇತ್ತೀಚೆಗೆ ಕಾವೇರಿ ಎಂಬ ಹೆಸ ತಳಿಯೂ ಸೇರ್ಪಡೆಯಾಗಿದೆ. ಮೊದಲಿಗೆ ಅರೇಬಿಕಾ ಕಾಫಿ ಕುಯ್ಯಲು ಬರುತ್ತೆ. ಈ ತಳಿಯ ಗಿಡಗಳು ಗಿಡ್ಡವಾಗಿರುವುದರಿಂದ ನೋಡಲು ಅಂದವಾಗಿರುತ್ತೆ. ಹಣ್ಣು ಕುಯ್ಯಲೂ ಕೊಂಚ ಸುಲಭ.

ರೊಬಸ್ಟಾ ಜಾತಿಯ ಗಿಡಗಳನ್ನು ಇಳಿಜಾರು ಪ್ರದೇಶಗಳಲ್ಲಿ ನೆಟ್ಟಿರುವುದಿಲ್ಲ. ಸ್ವಲ್ಪ ಸಮತಟ್ಟಾದ ಭೂ ಭಾಗಗಳಲ್ಲಿ ಬೆಳೆಯುತ್ತಾರೆ. ಈ ಗಿಡಗಳು ಒಡ್ಡೊಡ್ಡಾಗಿ ಬೆಳೆಯುವಂತ ಗಿಡಗಳು. ಬೀಜಗಳು ಗಾತ್ರದಲ್ಲಿ ಚಿಕ್ಕವು. ಸಾಮಾನ್ಯವಾಗಿ ಈ ತಳಿಯ ಬೀಜವನ್ನು ಚೆರ್ರಿಯಂತೆಯೇ ಒಣಗಿಸುವರು. ಪಾರ್ಚುಮೆಂಟು ಮಾಡುತ್ತರಾದರೂ ಕಡಿಮೆ. ಅರೇಬಿಕಾ ಪಾರ್ಚುಮೆಂಟ್ ಬೆಲೆಯ ಅರ್ಧದಷ್ಟು ಬೆಲೆ ರೊಬಸ್ಟಾ ಚೆರ್ರಿಗೆ. ಕೆಲವು ಪ್ರದೇಶಗಳಲ್ಲಿ ಇದೇ ಚೆನ್ನಾಗಿ ಬೆಳೆದು ಫಸಲು ಹೆಚ್ಚು ಕೊಡುವುದರಿಂದ ಇದನ್ನೇ ಬೆಳೆಯುತ್ತಾರೆ. ಅರೇಬಿಕಾ ಕಾಫಿಗಿಂತ ರೊಬಸ್ಟಾ ಕಾಫಿ ಬೆಳೆಯುವುದು ಸುಲಭ, ಕೆಲಸ ಕಡಿಮೆ, ಖರ್ಚೂ ಕಡಿಮೆ. ಈ ಕಾಫಿ ಎಲ್ಲಾದರೂ ಬೆಳೆಯಲಿ ಇದರ ರುಚಿ ಅರೇಬಿಕಾ ಕಾಫಿಗಿಂತ ಭಿನ್ನ. ಇದರಿಂದಾಗಿಯೇ ಇನ್‌ಸ್ಟೆಂಟ್ ಕಾಫಿ ತಯಾರಿಕೆಯಲ್ಲಿ ರೋಬಸ್ಟಾ ಕಾಫಿಯ ಬಳಕೆ ದಿನೇ ದಿನೇ ಹೆಚ್ಚುತ್ತಿದೆ.