ಮುದಿ ಕಾಗೆಯ ಕೂಗು

ಹಾಳೂರ ಸಂತೆಯ.
ಗರುಡಗಂಬದ ಮೇಲಿನ
ಮುದಿ ಕಾಗೆಯ ಕೂಗು.!

ಬೀದಿ ಬದಿಯಲ್ಲಿನ
ಅವಳ ಹಾದರದ ನಗು.
ನೀರವಿಯಾಗಿ ಬತ್ತಿದಂತಹ ಅವಳ ಬಟ್ಟಲುಕಂಗಳು.!

ದಿನದ ಲೆಕ್ಕಚಾರದಿ ಮುಳುಗಿರುವ
ಆ ಕೇರಿಯ ಕುಡುಕಿ ಮುದುಕಿ.
ಅವಳ ಕಣ್ತಪ್ಪಿಸಿ ಲಪಟಾಯಿಸಲು ನಿಂತು
ಕಾಯುತ್ತಿರುವ ಅವಳ ಏಕಮಾತ್ರ ಕರುಳಕುಡಿ.!

ಒಣಮೀನ ಮಬ್ಬಿನಲಿ ಮಂಕಾಗಿ ನಿಂತ
ಆ ಮುಸಲರ ವ್ಯಾಪಾರಿ.
ಆತನ ಮೊಗದ ಮೇಲೊಂದು
ದಿನಗೆದ್ದ ಸಡಗರ.!

ಕೆಂದುಟಿಯ ಹಾಲುಗೆನ್ನೆಯ
ಊರ ಗೌಡರೊಡತಿಯ ಬಳಕು ನಡಿಗೆ.
ಕದ್ದಾಕೆಯ ತುಸುಕಾಣುವ ಸೊಂಟ ನೋಡಿ
ಕನಸಾಗುವ ಊರ ಚಿಗುರು ಮೀಸೆಯ ಹುಂಬ.!

ಹಾದರಕ್ಕೆ ದಣಿದು ಬೆವರೊಡೆದು
ಮರೆಯಲ್ಲಿ ಮರೆಯಾದ ಊರ ಪಟಿಂಗ ಗೌಡ.
ಗಂಡನ ಪಾದ ಪೂಜೆಯ ತಯಾರಿ ವಸ್ತುವಿನ
ಕೊಂಡುಕೊಳ್ಳುವಿಕೆಯಲ್ಲಿ ಗೌಡತಿ ಮಗ್ನ.!

ಹಾಳೂರ ಸಂತೆಯ ಗರಡುಗಂಬ.
ಮುದಿಕಾಗೆಯ ಕೂಗು.
ಹಾಗೂ ಅದರಡಿ ಇಲ್ಲದ ನನ್ನಾಕೆಯ ದ್ಯಾನದಲಿ ಮಗ್ನನಾಗಿರುವ ನಾನು.

 

 

ರಂಜಿತ್ ಕವಲಪಾರ ಭರವಸೆಯ ಯುವ ಬರಹಗಾರ.
ಇವರು ಕೊಡಗಿನ ಮಡಿಕೇರಿಯವರು.

 

(ಕಲೆ:ಉಂಬರ್ಟೋ ಬೊಚಿನೀ, ಇಟಲಿಯ ಪ್ರಸಿದ್ಧ ಕಲಾವಿದ)