ಇಡೀ ಜೀವನವನ್ನು ಭೌತಶಾಸ್ತ್ರದ ಅಧ್ಯಯನ ಮತ್ತು ಆರಾಧನೆಯಲ್ಲಿ ಕಳೆದ ಫೇನ್ಮನ್ ಒಬ್ಬ ಅಸಾಧ್ಯ ಕುತೂಹಲಿ ಮತ್ತು ಮಹಾತುಂಟ. ವಿಜ್ಞಾನಿ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ `ಗಂಭೀರ, ನಗಲು ಬಾರದ, ಚಿಂತನಾಪರ, ಮಿತಭಾಷಿ ವ್ಯಕ್ತಿತ್ವ’ಕ್ಕೆ ಒಂದು ವಿರುದ್ಧಪದ ಇವರು! ಸದಾ ಯಾರದಾದರೂ ಕಾಲೆಳೆಯತ್ತಾ ನಗುತ್ತಾ ನಗಿಸುತ್ತಾ, ಚಿತ್ರ ಬರೆಯಲು ಕಲಿಯುತ್ತಾ, ವಾದ್ಯ ನುಡಿಸಲು ಪ್ರಯತ್ನಿಸುತ್ತಾ, ಕ್ಯಾಬರೆ ನೃತ್ಯಗಾತಿಯರ ಜೊತೆಯಲ್ಲಿ ಸಂಭಾಷಣೆ ಮಾಡುತ್ತಾ…..
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತೆಂಟನೆಯ ಬರಹ
`ಪ್ರಪಂಚದ ಶ್ರೇಷ್ಠ ಭೌತವಿಜ್ಞಾನಿಗಳ ಹೆಸರು ಹೇಳಿ’ ಎಂದು ಯಾರನ್ನಾದರೂ ಕೇಳಿದರೆ ಅವರು ತಕ್ಷಣ ನ್ಯೂಟನ್, ಐನ್‌ಸ್ಟೈನ್‌ರ ಹೆಸರು ಹೇಳುವುದು ಸಾಮಾನ್ಯ. ಆದರೆ ಜನರು ಅಷ್ಟಾಗಿ ನೆನೆಯದ ಆದಾಗ್ಯೂ ಭೌತವಿಜ್ಞಾನದ ಸಂಶೋಧನೆ ಮತ್ತು ಅಧ್ಯಾಪನಗಳಿಗೆ ಸಂಬಂಧಿಸಿದ ಜ್ಞಾನದ ಮೊತ್ತಕ್ಕೆ ಮರೆಯಬಾರದ ಕೊಡುಗೆ ಕೊಟ್ಟ ಒಬ್ಬ ವಿಜ್ಞಾನಿ ಅಂದರೆ ರಿಚರ್ಡ್ ಫಿಲಿಪ್ಸ್ ಫೇನ್ಮನ್.
ರಿಚರ್ಡ್ ಫಿಲಿಪ್ಸ್ ಫೇನ್ಮನ್ (11 ಮೇ 1918 – 15 ಫೆಬ್ರವರಿ 1988) ಅಮೆರಿಕಾದ ಸೈದ್ಧಾಂತಿಕ ಭೌತಶಾಸ್ತ್ರಜ್ಞರು (ಸೈದ್ಧಾಂತಿಕ ಭೌತಶಾಸ್ತ್ರ ಅಂದರೆ ನೈಸರ್ಗಿಕ ವಿದ್ಯಮಾನಗಳನ್ನು ವಿವರಿಸಲು ಮತ್ತು ಮುನ್ಸೂಚಿಸಲು ಹಾಗೂ ತರ್ಕಬದ್ಧಗೊಳಿಸಲು ಗಣಿತೀಯ ಮಾದರಿಗಳನ್ನು ಹಾಗೂ ಭೌತಿಕ ವಸ್ತುಗಳ ಮತ್ತು ವ್ಯವಸ್ಥೆಗಳ ಅಮೂರ್ತೀಕೃತ ನೆಲೆಗಳನ್ನು ಬಳಸಿಕೊಳ್ಳುವ ಭೌತಶಾಸ್ತ್ರದ ಒಂದು ಶಾಖೆ. ಇದೇ ವಿದ್ಯಮಾನಗಳನ್ನು ಪ್ರಾಯೋಗಿಕ ಉಪಕರಣಗಳಿಂದ ಪರಿಶೀಲಿಸುವ ಪ್ರಾಯೋಗಿಕ ಭೌತವಿಜ್ಞಾನಕ್ಕಿಂತ ಇದು ತುಂಬ ಭಿನ್ನ, ಅದಕ್ಕೆ ವೈದೃಶ್ಯವಾದುದು ಅನ್ನಬಹುದು). `ಕ್ವಾಂಟಮ್ ಎಲೆಕ್ಟ್ರೋಡೈನಮಿಕ್ಸ್’ ಎಂಬ ಭೌತಶಾಸ್ತ್ರದ ಶಾಖೆಯ ಬೆಳವಣಿಗೆಗೆ ಇವರು, ತಾವು ಜ್ಯೂಲಿಯನ್ ಸ್ಕ್ಯಾವೆಂಜರ್ ಮತ್ತು ಸಿಂಚಿರೋ ಟೊಮೊಂಗಾರ ಜೊತೆ ಕೆಲಸ ಮಾಡಿ ನೀಡಿದ ಕೊಡುಗೆಗಾಗಿ 1965ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು. ಮನಹಟನ್ ಕಾರ್ಯಯೋಜನೆ, ಶಬ್ಧಗತಿ ಅಲೆ ಸಮೀಕರಣ, ಬೆತೆ-ಫೇನ್ಮನ್ ಸೂತ್ರ, ಫೇನ್ಮನ್ ಚೌಕಳಿ ಹಲಗೆ (ಚೆಕ್ಕರ್ ಬೋರ್ಡ್), ಫೇನ್ಮನ್ ಚಿತ್ರಗಳು, ಫೇನ್ಮನ್ ಅಳತೆ ಸಾಧನ(ಗಾಜ್), ಫೇನ್ಮನ್-ಕಾಕ್ ಸೂತ್ರ, ಫೇನ್ಮನ್ ಸ್ಥಿರರಾಶೀಕರಣ, ಫೇನ್ಮನ್ ಬಿಂದು, ನ್ಯಾನೋ ತಂತ್ರಜ್ಞಾನ, ಕ್ವಾಂಟಂ ಗಣಕೀಕರಣ(ಕಂಪ್ಯೂಟಿಂಗ್), ಏಕ-ಎಲೆಕ್ಟ್ರಾನ್ ವಿಶ್ವ, ಕ್ವಾಂಟಂ ಎಲೆಕ್ಟ್ರೊಡೈನಮಿಕ್ಸ್, ವ್ಹೀಲರ್-ಫೇನ್ಮನ್ ಹೀರಕ ತತ್ವ….. ಹೀಗೆ ಹತ್ತು ಹಲವು ಸ್ಮರಣೀಯ ಕೊಡುಗೆಗಳನ್ನು ಕೊಟ್ಟ ಶ್ರೇಷ್ಠ ವಿಜ್ಞಾನಿ ಇವರು. ತಮ್ಮ ಕಾಲದಲ್ಲಿ ಅತ್ಯಂತ ಜನಪ್ರಿಯ ವಿಜ್ಞಾನಿ ಎಂದು ಹೆಸರು ಪಡೆದಿದ್ದವರು.
ಪರಮಾಣುಗಳ ಒಳಗೆ ಇರುವಂತಹ ಅತಿ ಚಿಕ್ಕ ಚಿಕ್ಕ ಕಣಗಳ ಚಲನೆ ಮತ್ತು ವರ್ತನೆಗಳನ್ನು ಅರಿಯಲು ಇವರು ಚಿತ್ರಗಳ ಮೂಲಕ ಕೊಟ್ಟ ವಿವರಣೆಯು ಪೇನ್ಮನ್ ಡಯಾಗ್ರಮ್ಸ್(ಚಿತ್ರಗಳು) ಎಂದೇ ಪ್ರಸಿದ್ಧವಾಗಿದೆ.
ಇಷ್ಟೇ ಮುಖ್ಯವಾದ ಇನ್ನೊಂದು ವಿಷಯವೆಂದರೆ ಪೇನ್ಮನ್‌ರ ಭೌತಶಾಸ್ತ್ರದ ಉಪನ್ಯಾಸ ಸರಣಿ(ಫೇನ್ಮನ್ ಲೆಕ್ಚರ್ ಸೀರೀಸ್). ವಿದ್ಯಾಥಿಗಳಿಗೆ ಭೌತಶಾಸ್ತ್ರವೆಂಬ ಕ್ಲಿಷ್ಟ ಜ್ಞಾನಶಿಸ್ತಿನ ಆಳ-ಅಗಲ, ಬೆಳಕು ಬೆರಗುಗಳನ್ನು ಅತ್ಯಂತ ಸರಳವಾಗಿ ಹಾಗೂ ಸಮರ್ಥವಾಗಿ ವಿವರಿಸಿದ ಕೀರ್ತಿ ಈ ಉಪನ್ಯಾಸ ಮಾಲಿಕೆಯದು. ಈ ವಿಜ್ಞಾನಿಗೆ ಭೌತಶಾಸ್ತ್ರ ಕ್ಷೇತ್ರದಲ್ಲಿ ಈ ಉಪನ್ಯಾಸಗಳು ಅಜರಾಮರವಾದ ಕೀರ್ತಿಯನ್ನು ಗಳಿಸಿ ಕೊಟ್ಟಿವೆ. ನಾವು ಬದುಕುತ್ತಿರುವ ವಿಶ್ವದ ನೈಸರ್ಗಿಕ ವಿದ್ಯಮಾನಗಳು ಹಾಗೂ ಭೌತಶಾಸ್ತ್ರದ ಸಂಬಂಧ, ಭೌತವಿಜ್ಞಾನಕ್ಕೂ ಇತರ ವಿಜ್ಞಾನಗಳಿಗೂ ಇರುವ ಸಂಬಂಧ, ಕಷ್ಟವೆನ್ನಿಸಿದರೂ ಸರಿ, ಭೌತಶಾಸ್ತ್ರದ ವಿದ್ಯಾರ್ಥಿಗಳು ಇವನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ, ಈ ವಿಶ್ವದಲ್ಲಿ ನಮಗೆ ಇನ್ನೂ ಗೊತ್ತಿರದ ಅನೇಕ ಸಂಗತಿಗಳು – ಇವೆಲ್ಲದರ ಕಡೆ ಆ ಉಪನ್ಯಾಸಗಳು ವಿದ್ಯಾರ್ಥಿಗಳ/ಭೌತಶಾಸ್ತ್ರಾಸಕ್ತರ ಗಮನವನ್ನು ಸೆಳೆಯುತ್ತಾ ನಿಧಾನವಾಗಿ ಕೈಹಿಡಿದು ನಡೆಸುತ್ತಾ ಭೌತಶಾಸ್ತ್ರವೆಂಬ ಸುಂದರ ಆದರೆ ದುರ್ಗಮ ಕಾಡಿನಲ್ಲಿ ಕರೆದೊಯ್ಯುತ್ತವೆ.
ಭೌತವಿಜ್ಞಾನಿಯಾದ ಫೇನ್ಮನ್‌ರ ಬಗ್ಗೆ ನಾನು ಮೊದಲು ಕೇಳಿದ್ದು ನಾನು ಕನ್ನಡ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿರುವ ಮಹಾರಾಣಿ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ! ಪಾಠಗಳ ಬಗ್ಗೆ ಹೀಗೇ ಮಾತಾಡುತ್ತಿದ್ದಾಗ ಆ ಇಂಗ್ಲಿಷ್ ಮಿತ್ರರು `ಫೇನ್ಮನ್ಸ್ ಲವ್ ಲೆಟರ್ ಟು ಹಿಸ್ ಡೆಡ್ ವೈಫ್’ ಎಂಬ ಪಾಠವು ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಇದೆ, ಹಾಗೂ ಬರೆದವರು ಒಬ್ಬ ಭೌತವಿಜ್ಞಾನಿ’’ ಅಂದರು. ಒಬ್ಬ ವಿಜ್ಞಾನಿಯು ತನ್ನ ಮೃತಪತ್ನಿಗೆ ಬರೆದ ಪ್ರೇಮಪತ್ರ ಮತ್ತು ಇದು ಇಂಗ್ಲಿಷ್ ಪದವಿ ತರಗತಿಗಳ ಪಠ್ಯ! ನನಗೆ ತೀರಾ ಆಶ್ಚರ್ಯವಾಯಿತು. ನಾನು ಆ ಪ್ರೇಮಪತ್ರದ ಪಾಠವನ್ನು ಓದಿದೆ. ಅದರ ಭಾವತೀವ್ರತೆ ಮತ್ತು ಪ್ರೇಮದ ಔನ್ನತ್ಯಗಳು ನನ್ನ ಮನಸ್ಸನ್ನು ಮುಟ್ಟಿದವು.
ಇದಾದ ನಂತರ ನಾನು ಫೇನ್ಮನ್‌ರ ಹೆಸರು ಕೇಳಿದ್ದು ನಮ್ಮ ಭೌತಶಾಸ್ತ್ರ ವಿಭಾಗದ ಸಹೋದ್ಯೋಗಿಯೊಬ್ಬರೊಂದಿಗಿನ ಮಾತುಕತೆಯಲ್ಲಿ. `ಫೇನ್ಮನ್ ಅವರ ಪುಸ್ತಕ ಓದ್ತಾ ಇದೀನಿ ಮೇಡಂ. ವಿದ್ಯಾರ್ಥಿಗಳಿರಲಿ, ಮೇಷ್ಟ್ರುಗಳಿಗೇ ಅರ್ಥ ಆಗಲ್ಲ ಅವರ ಭೌತಶಾಸ್ತ್ರ ಬರವಣಿಗೆ, ತುಂಬ ಸವಾಲಿನದು’ಅಂದರು.
ನನಗೆ ಆಶ್ಚರ್ಯವಾಯಿತು. ಇದೇನು! ಮೇಷ್ಟ್ರುಗಳಿಗೇ ಅರ್ಥವಾಗದಷ್ಟು ಸಂಕೀರ್ಣವೇ ಇವರ ವಿಚಾರಗಳು- ವಿವರಣೆಗಳು? ಜೊತೆಗೆ ಬಿ.ಎಸ್ಸಿ. ಎಂ.ಎಸ್ಸಿ. ಪಾಠಗಳಲ್ಲೂ ಇವರ ಸಂಶೋಧನೆಗಳ ವಿಷಯ ಇರುವುದಿಲ್ಲವಂತೆ. ಆದರೂ ಪೇನ್ಮನ್‌ರು ಒಬ್ಬ ಅದ್ಭುತ ಭೌತಶಾಸ್ತ್ರ ಅಧ್ಯಾಪಕ ಅನ್ನುವ ಮಾತು ನನ್ನ ಕಿವಿ ಮೇಲೆ ಬೀಳುತ್ತಲೇ ಇತ್ತು. ಒಂದಷ್ಟು ಓದಿಕೊಂಡಾಗ ಇನ್ನು ಕೆಲವು ವಿಷಯಗಳು ಸ್ಪಷ್ಟಗೊಂಡವು.
ಇಡೀ ಜೀವನವನ್ನು ಭೌತಶಾಸ್ತ್ರದ ಅಧ್ಯಯನ ಮತ್ತು ಆರಾಧನೆಯಲ್ಲಿ ಕಳೆದ ಫೇನ್ಮನ್ ಒಬ್ಬ ಅಸಾಧ್ಯ ಕುತೂಹಲಿ ಮತ್ತು ಮಹಾತುಂಟ. ವಿಜ್ಞಾನಿ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ `ಗಂಭೀರ, ನಗಲು ಬಾರದ, ಚಿಂತನಾಪರ, ಮಿತಭಾಷಿ ವ್ಯಕ್ತಿತ್ವ’ಕ್ಕೆ ಒಂದು ವಿರುದ್ಧಪದ ಇವರು! ಸದಾ ಯಾರದಾದರೂ ಕಾಲೆಳೆಯತ್ತಾ ನಗುತ್ತಾ ನಗಿಸುತ್ತಾ, ಚಿತ್ರ ಬರೆಯಲು ಕಲಿಯುತ್ತಾ, ವಾದ್ಯ ನುಡಿಸಲು ಪ್ರಯತ್ನಿಸುತ್ತಾ, ಕ್ಯಾಬರೆ ನೃತ್ಯಗಾತಿಯರ ಜೊತೆಯಲ್ಲಿ ಸಂಭಾಷಣೆ ಮಾಡುತ್ತಾ….. ಜಪಾನ್‌ಗೆ ಹೋದಾಗ ಅಲ್ಲಿನ ಜೀವನಶೈಲಿಯನ್ನು ಪರಿಚಯಿಸಿಕೊಳ್ಳಬೇಕೆಂದು ಜಪಾನೀ ಶೈಲಿಯ ಹೋಟಲಿನಲ್ಲಿ ಉಳಿದುಕೊಂಡು, ಅಲ್ಲಿನ ಭಾಷೆಯನ್ನು ಕಲಿಯಲು ಪ್ರಯತ್ನಿಸಿ …… ಅವರ ಬಗ್ಗೆ ಓದುವವರಿಗೆ ಒಂದು ಕಡೆ ಬೆರಗು, ಇನ್ನೊಂದು ಕಡೆ ಮುಗುಳ್ನಗು ಬರದಿರಲು ಸಾಧ್ಯವೇ ಇಲ್ಲ ಎಂಬಂತಹ ವ್ಯಕ್ತಿತ್ವ ಇವರದು! ಬೇಂದ್ರೆ ಹೇಳಿದಂತೆ “ತುಂ ತುಂ ತುಂ ತುಂ ತುಂ ತುಂ ತುಂ ತುಂ ತುಂಬ ಬಂದಿತ್ತಾ …. ಬೆಳಕಿಗಿಂತ ಬೆಳ್ಳಗಿತ್ತಾ ಗಾಳಿಗಿಂತ ತೆಳ್ಳಗಿತ್ತಾ ..” ಎಂಬಂತೆ ಬದುಕಿದ ವ್ಯಕ್ತಿ. ಸತ್ತ ತನ್ನ ಹೆಂಡತಿಗೆ ಪ್ರೇಮಪತ್ರ ಬರೆದವರು, ಸಮುದ್ರ ತೀರದಲ್ಲಿ, ಕೇವಲ ಒಂದು ಒಳ ಉಡುಪು ಧರಿಸಿ ಅನೇಕ ಚೆಂಡುಗಳನ್ನು ಒಟ್ಟಿಗೆ ಕುಣಿಸುವ ಮಾಯದಾಟ ಆಡಿದವರು, ಪಂಥ ಕಟ್ಟಿ ಜೂಜಾಡಿಸುವವರೊಂದಿಗೆ ಒಡನಾಡಿದವರು…… ಅಯ್ಯೋ… ಯಾವ ಚೌಕಟ್ಟಿಗೂ ಸಿಗದ ಚಿತ್ರವಾಗಿ ಬದುಕಿದವರು. ಮನುಷ್ಯನಾಗಿ ಬದುಕುವ ಎಲ್ಲ ಸಾಧ್ಯತೆಗಳನ್ನೂ ಬಿಡದೆ ಪರಿಶೀಲಿಸಿದವರು, ಅದಕ್ಕೇ ಇಷ್ಟ ಆಗುವವರು. ಇವರನ್ನು `ಬಿಢೆ ಇಲ್ಲದೆ ಬದುಕಿದ ಭೌತವಿಜ್ಞಾನಿʼ ಅನ್ನಬಹುದು.
*****
ರಿಚರ್ಡ್ ಫಿಲಿಪ್ ಫೇನ್ಮನ್‌ರ ಜೀವನರೇಖೆ:
ಇವರು 1918ರಲ್ಲಿ ನ್ಯೂಯಾರ್ಕ್‌ನ ಹೊರವಲಯದಲ್ಲೇ ಮತ್ತು ಸಮುದ್ರದ ಹತ್ತಿರದಲ್ಲಿ ಇರುವ ಫಾರ್ ರಾಕ್‌ಅವೇ ಅನ್ನುವ ಸ್ಥಳದಲ್ಲಿ ಹುಟ್ಟಿದರು. ಅಲ್ಲೇ 1935ರ ತನಕ ಅಂದರೆ ತಮಗೆ 17 ವರ್ಷವಾಗುವ ತನಕ ಇದ್ದರು. ನಂತರ ಎಂಐಟಿಗೆ ಆಮೇಲೆ ಸುಮಾರು 1939ರಲ್ಲಿ ಪ್ರಿನ್ಸ್ಟನ್‌ಗೆ ಹೋದರು. ಇವರು ಪ್ರಿನ್ಸ್ಟನ್‌ನಲ್ಲಿ ಇದ್ದಾಗ ಮನ್‌ಹಟನ್ ಕಾರ್ಯಯೋಜನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. (ಮನ್‌ಹಟನ್ ಕಾರ್ಯಯೋಜನೆ ಅಂದರೆ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಉತ್ತರ ಅಮೆರಿಕಾದ ಮನ್‌ಹಟನ್ ಅನ್ನುವ ಸ್ಥಳದಲ್ಲಿ ನಡೆದಂತಹ ಒಂದು ಕಾರ್ಯಯೋಜನೆ, ಪ್ರಪಂಚದ ಮೊದಲನೆಯ ಅಣುಬಾಂಬನ್ನು ತಯಾರಿಸಲು ಮಾಡಿದಂತಹ ಕಾರ್ಯಕ್ರಮ ಇದು). ಅಂತಿಮನಾಗಿ ಅವರು ಏಪ್ರಿಲ್ 1943ರಲ್ಲಿ ಲಾಸ್ ಅಲ್ಮಾಸ್‌ಗೆ ಹೋದರು, ಮತ್ತು 1946ರ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಕಾರ್ನೆಲ್‌ಗೆ ಹೋದರು.
ಇವರು 1941ರಲ್ಲಿ ಆರ್ಲಿನ್‌ರನ್ನು ಮದುವೆಯಾದರು. ಆಕೆ ಇವರು ಲಾಸ್‌ಅಲ್ಮಾಸ್‌ನಲ್ಲಿದ್ದಾಗ 1946ರಲ್ಲಿ ಕ್ಷಯರೋಗದಿಂದ ತೀರಿಕೊಂಡರು.
ಇವರು ಕಾರ್ನೆಲ್‌ನಲ್ಲಿ ಸುಮಾರು 1951ರವರೆಗೂ ಇದ್ದರು. 1949ರ ಬೇಸಗೆಯಲ್ಲಿ ಬ್ರೆಝಿಲ್‌ಗೆ ಹೋದರು ಮತ್ತು 1951ರ ಅರ್ಧಭಾಗವನ್ನು ಅಲ್ಲಿ ಕಳೆದರು. ನಂತರ ಅವರು ಕಾಲ್ಟೆಕ್‌ಗೆ ಹೋದವರು ತಮ್ಮ ಜೀವನದ ಕೊನೆಯ ತನಕ ಅಲ್ಲಿಯೇ ಇದ್ದರು.
*****
ಫೇನ್ಮನ್‌ರ ವರ್ಣರಂಜಿತ ವ್ಯಕ್ತಿತ್ವವು ಪ್ರಕಟವಾದ ಕೆಲವು ಪ್ರಸಂಗಗಳನ್ನು ನೋಡೋಣ.
- ಫೇನ್ಮನ್ ಅವರು ಜಪಾನೀ ಭಾಷೆ ಕಲಿಯಲು ಹೊರಟದ್ದು ಒಂದು ಸ್ವಾರಸ್ಯಕರ ಅನುಭವ. ತನ್ನ ಸ್ನೇಹಿತ ರಾಲ್ಫ್ ಲೀಟನ್ ಅವರಿಗೆ ಹೇಳಿದ ತಮ್ಮ ಜೀವನ ಕಥೆಗಳ ಗುಚ್ಛ “ಶರ‍್ಲಿ ಯು ಆರ್ ಜೋಕಿಂಗ್ ಮಿ.ಫೇನ್ಮನ್!”ನಲ್ಲಿ ಈ ಅನುಭವವು ದಾಖಲಾಗಿದೆ.
ಫೇನ್ಮನ್‌ರು ಬ್ರೆಜಿಲ್‌ನಲ್ಲಿ ಇದ್ದಾಗ ಅವರಿಗೆ ಜಪಾನ್ ದೇಶಕ್ಕೆ ಹೋಗುವ ಒಂದು ಅವಕಾಶ ಬರುತ್ತದೆ. ಎರಡನೆಯ ಮಹಾಯುದ್ಧದ ನಂತರ ಜಪಾನ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಕಾಲ ಅದು ಜಪಾನ್‌ಗೆ ಹೋಗುವಾಗ ಅದರ ಬಗ್ಗೆ ತಿಳಿದುಕೊಳ್ಳೋಣ, ಜಪಾನೀ ಭಾಷೆ ಸ್ವಲ್ಪ ಕಲಿಯೋಣ ಅಂದುಕೊಂಡ ಫೇನ್ಮನ್‌ರು ಆ ದೇಶದ ಬಗ್ಗೆ ತುಂಬ ಓದುತ್ತಾರೆ ಮತ್ತು ಬ್ರೆಜಿಲ್‌ನಲ್ಲಿದ್ದ ಒಬ್ಬ ಮಹಿಳೆಯಿಂದ ಜಪಾನೀ ಭಾಷೆ ಮತು ಉಚ್ಚಾರಗಳನ್ನು ಕಲಿಯಲು ಪ್ರಯತ್ನ ಮಾಡುತ್ತಾರೆ. ಈ ಕಲಿಕೆಗಾಗಿ ತುಂಬ ಕಷ್ಟ ಪಡುತ್ತಾರೆ. ನಂತರ ಅವರು ತಮ್ಮ ಸ್ನೇಹಿತ ಮಾರ್ಷಕ್‌ನೊಂದಿಗೆ ಜಪಾನ್ ತಲುಪಿದಾಗ ಅಲ್ಲಿನ ಹೋಟಲ್ ಒಂದರಲ್ಲಿ ಊಟ ಮಾಡುತ್ತಾರೆ. ಇನ್ನೇನು ಊಟ ಮುಗಿಯುತ್ತದೆ ಅನ್ನುವಾಗ ಅಲ್ಲಿನ ಪರಿಚಾರಿಕೆಗೆ “ಕೋಹಿ ಒ ಮೊತ್ತೆ ಕೈತ್ ಕುದಾಸಾಯ್” ಅನ್ನುತ್ತಾರೆ, ಅವಳು ಇವರಿಗೆ ಬಾಗಿ ನಮಸ್ಕರಿಸಿ ನಿರ್ಗಮಿಸುತ್ತಾಳೆ. ಇದರಿಂದ ಫೇನ್ಮನ್‌ರೊಂದಿಗಿದ್ದ ಸ್ನೇಹಿತ(ಮಾರ್ಷಕ್)ರಿಗೆ ತುಂಬ ಆಶ್ಚರ್ಯವಾಗುತ್ತದೆ. ಅವರು“ಏನು, ಏನು” ಅನ್ನುತ್ತಾರೆ. ಫೇನ್ಮನ್ `ನಾನು ಜಪಾನೀ ಭಾಷೆ ಮಾತಾಡ್ತೀನಿ’’ ಅನ್ನುತ್ತಾರೆ. ಈ ಸಂಭಾಷಣೆ ಕೆಳಕಂಡಂತೆ ಮುಂದುವರಿಯುತ್ತದೆ.
ಮಾರ್ಷಕ್ – ಏಯ್, ಕಳ್ಳಾ! ನಿಂಗೆ ಯಾವಾಗ್ಲೂ ಮಕ್ಕಳಾಟಿಕೆ, ಅಲ್ವಾ ಫೇನ್ಮನ್?
ಫೇನ್ಮನ್(ಗಂಭೀರ ಧ್ವನಿಯಲ್ಲಿ)–ಏನ್ ಮಾತಾಡ್ತಿದೀಯಾ ನೀನು?
ಮಾರ್ಷಕ್ – ಸರಿ, ನೀನೇನು ಕೇಳಿದೆ?
ಫೇನ್ಮನ್ – ಅವ್ಳಿಗೆ ನಾನು ನಮಗಾಗಿ ಕಾಫಿ ತಗೊಂಡು ಬಾ ಅಂತ ಹೇಳಿದೆ.
ಮಾರ್ಷಕ್(ನಂಬದೆ) – ನಿನ್ಜೊತೆ ನಾನು ಪಂಥ ಕಟ್ತೀನಿ. ಅವ್ಳು ಕಾಫಿ ತಂದ್ರೆ …………
ಅಷ್ಟರಲ್ಲಿ ಆ ಪರಿಚಾರಿಕೆಯು ಕಾಫಿ ತರುತ್ತಾಳೆ. ಮಾರ್ಷಕ್ ಪಂಥದಲ್ಲಿ ಸೋಲುತ್ತಾರೆ.

- ಕೊಯೋಟೊದಲ್ಲಿದ್ದಾಗ ಫೇನ್ಮನ್‌ರು ಜಪಾನೀ ಭಾಷೆಯನ್ನು ಮುಯ್ಯಿ ತೀರಿಸಿಕೊಳ್ಳುವವರಂತೆ ಕಲಿತರು. ಸಾಕಷ್ಟು ಪರಿಶ್ರಮ ಪಟ್ಟು ಎಷ್ಟರ ಮಟ್ಟಿಗೆ ಅವರು ಆ ಭಾಷೆಯನ್ನು ಕಲಿತರೆಂದರೆ ಟ್ಯಾಕ್ಸಿಗಳಲ್ಲಿ ಓಡಾಡುತ್ತಾ ಆರಾಮವಾಗಿ ತಮ್ಮ ಕೆಲಸ ತಾವು ಮಾಡಿಕೊಳ್ಳುವಷ್ಟರ ಮಟ್ಟಿಗೆ ತಯಾರಾದರು. ಒಬ್ಬ ಜಪಾನೀ ಮನುಷ್ಯನಿಂದ ಪ್ರತಿ ದಿನ ಅರ್ಧ ಗಂಟೆ ಜಪಾನೀ ಭಾಷೆಯ ಪಾಠಗಳನ್ನು ಕಲಿಯಲಾರಂಭಿಸಿದರು.
ಒಂದು ದಿನ ಆ ಜಪಾನೀ ಮನುಷ್ಯ ಇವರಿಗೆ ನೋಡು(ಸೀ) ಎಂಬ ಪದವನ್ನು ಕಲಿಸಿದರು. ನಂತರ “ಸರಿ, ನೀವೀಗ `ನಾನು ನಿಮ್ಮ ತೋಟವನ್ನು ನೋಡಬಹುದೇ?’ಅನ್ನಬೇಕು. ಏನಂತ ಕೇಳ್ತೀರ ಹೇಳಿ?”
ಫೇನ್ಮನ್‌ರು ತಾವು ಈಗಷ್ಟೇ ಕಲಿತ ಪದವನ್ನು ಬಳಸಿ ಒಂದು ವಾಕ್ಯ ಮಾಡಿದರು.
`ಅಲ್ಲ, ಅಲ್ಲ,’ ಅಂದರು ಆ ಜಪಾನೀ ಮನುಷ್ಯ “ನೀವು ನನ್ನ ತೋಟವನ್ನು ನೋಡಲು ಬಯಸುತ್ತೀರಾ?’’ಎಂದು ಕೇಳುವಾಗ ಮೊದಲನೆಯ `ನೋಡು’ ಅನ್ನು ಬಳಸಬೇಕು. ಆದರೆ ನೀವು ಇನ್ನೊಬ್ಬರ ತೋಟವನ್ನು ನೋಡಲು ಬಯಸುವಾಗ, ಇನ್ನೂ ಹೆಚ್ಚು ವಿನಮ್ರವಾಗಿರುವ ಇನ್ನೊಂದು `ನೋಡು’ಅನ್ನು ಬಳಸಬೇಕು.
“ನನ್ನ ಬಡತೋಟದ ಮೇಲೆ ತಾವೊಮ್ಮೆ ದಯವಿಟ್ಟು ತೇಲುನೋಟ ಬೀರಲು ಇಷ್ಟ ಪಡುವಿರಾ?”- ಮೂಲತಃ ಹೀಗೆ ಹೇಳಬೇಕಾಗಿರುವುದು ನೀವು. ಆದರೆ ಬೇರೆಯವರ ತೋಟವನ್ನು ನೀವು ನೋಡಲು ಬಯಸುವಾಗ ನೀವು ಹೀಗನ್ನಬೇಕು – “ನಾನು ನಿಮ್ಮ ಚಿತ್ತಾಕರ್ಷಕ ತೋಟವನ್ನು ಕಣ್ತುಂಬಿಕೊಳ್ಳಬಹುದೇ?”. ಅಂದರೆ ಎರಡು ಬೇರೆ ಬೇರೆ ರೀತಿಯ ನೋಡುಗಳನ್ನು ಬಳಸುವುದಿರುತ್ತದೆ ಎಂದು ಫೇನ್ಮನ್ ಅರಿತರು.
ಆಮೇಲೆ ಜಪಾನೀ ಮನುಷ್ಯ ಮತ್ತೊಂದು ವಾಕ್ಯ ಮಾಡಲು ಹೇಳಿದರು – “ನೀವು ಒಂದು ದೇವಸ್ಥಾನಕ್ಕೆ ಹೋಗುತ್ತೀರಿ, ಅಲ್ಲಿ ನೀವು ತೋಟವನ್ನು ನೋಡಬಯಸಿದಾಗ ……..”
ಈಗ ಪೇನ್ಮನ್ ವಿನಮ್ರ `ನೋಡು’ವನ್ನು ಬಳಸಿ ವಾಕ್ಯ ಮಾಡಿದರು.
“ಇಲ್ಲ, ಇಲ್ಲ! ದೇವಸ್ಥಾನದ ತೋಟಗಳು ಮತ್ತಷ್ಟು ಲಾವಣ್ಯಮಯವಾಗಿರುತ್ತವೆ. ಆದ್ದರಿಂದ ನೀವು `ನಾನು ನಿಮ್ಮ ಅತ್ಯಂತ ಸೊಗಸಾದ ತೋಟದ ಮೇಲೆ ನನ್ನ ಕಣ್ಣನ್ನು ತೂಗುಹಾಕಲೇ?’ ಎಂದು ಕೇಳಬೇಕು” ಎಂದರು ಆ ಜಪಾನೀ ಮನುಷ್ಯ.
ಫೇನ್ಮನ್‌ರಿಗನ್ನಿಸಿತು –`ಅಯ್ಯೋ, ಒಂದೇ ಸಂಗತಿಯನ್ನು ಹೇಳಲು ಮೂರು-ನಾಲ್ಕು ಅರ್ಥಛಾಯೆಯ ಪದಗಳು! ಏಕೆಂದರೆ ನಾನು ಮಾಡಿದರೆ ಅದು ದೀನ-ಶೋಚನೀಯ, ನೀವು ಮಾಡಿದರೆ ಅದು ಲಲಿತ-ಲಾವಣ್ಯಮಯ’. ತಾನು ಜಪಾನೀ ಭಾಷೆಯನ್ನು ಮುಖ್ಯವಾಗಿ ತಾಂತ್ರಿಕ ವಿಷಯಗಳಿಗಾಗಿ ಬಳಸಲು ಕಲಿಯುತ್ತಿದ್ದುದರಿಂದ ಈ ಭಾಷಾಸಮಸ್ಯೆಯು ವಿಜ್ಞಾನಿಗಳ ಮಾತುಕತೆಯಲ್ಲೂ ಇರುತ್ತದೆಯೇ ಎಂದು ಪರಿಶೀಲಿಸಲು ಅವರು ನಿರ್ಧರಿಸಿದರು.
ಸರಿ, ಮಾರನೆಯ ದಿನ ಅಧ್ಯಯನ ಕೇಂದ್ರದಲ್ಲಿ ಜಪಾನೀ ಮಂದಿಯನ್ನು ಕೇಳಿದರು “ನಾನು ಡೆರಾಕ್ ಸಮೀಕರಣವನ್ನು ಬಿಡಿಸುತ್ತೇನೆ”- ಇದನ್ನು ಜಪಾನೀ ಭಾಷೆಯಲ್ಲಿ ಹೇಗೆ ಹೇಳಬೇಕು?’’
ಅವರ ಸಹೋದ್ಯೋಗಿಗಳು ಹೀಗ್ಹೀಗೆ ಹೇಳಬೇಕು ಎಂದರು.
“ಸರಿ, ಈಗ ನಾನು ಹೇಳಬೇಕು – `ನೀವು ಡೆರಾಕ್ ಸಮೀಕರಣವನ್ನು ಬಿಡಿಸುವಿರಾ?’– ಇದನ್ನು ಹೇಗೆ ಹೇಳುವುದು?’’ ಫೇನ್ಮನ್ ಕೇಳಿದರು.
“ಹಾಂ, ನೀವು ಬಿಡಿಸುವುದಕ್ಕೆ ಬೇರೆ ಒಂದು ಪದವನ್ನು ಬಳಸಬೇಕು” ಅಂದರು ಅವರು.
“ಯಾಕೆ?’’ಫೇನ್ಮನ್ ಪ್ರತಿಭಟಿಸಿದರು. “ನೀವು ಬಿಡಿಸುವಾಗ ಏನು ಮಾಡ್ತೀರೋ ಅದೇ ಸುಡುಗಾಡನ್ನೇ ತಾನೆ ನಾನೂ ಮಾಡೋದು!”
“ಆಂ… ಹೌದೂ ….. ಆದರೆ ಅದು ಬೇರೆ ಪದ. ಹೆಚ್ಚು ವಿನಮ್ರವಾದದ್ದು”.
ಅಲ್ಲಿಗೆ ಫೇನ್ಮನ್ ಜಪಾನೀ ಭಾಷೆಯನ್ನು ಕಲಿಯುವುದನ್ನು ಕೈಬಿಟ್ಟರು. “ಈ ಭಾಷೆ ನನಗಲ್ಲ ಬಿಡು’’ ಎಂದು ಅವರಿಗನ್ನಿಸಿತು.
*****
- ಪೇನ್ಮನ್‌ರ ಒಂದು ಅನುಭವ ಕಥನವನ್ನು ಅವರ ಮಾತುಗಳಲ್ಲೇ ಕೇಳೋಣ.
“ನಾನು ಬ್ರೆಝಿಲ್‌ನಲ್ಲಿದ್ದಾಗ ಅಲ್ಲಿನ ಸ್ಥಳೀಯ ಭಾಷೆಯನ್ನು ಕಲಿಯಲು ಸಾಕಷ್ಟು ಒದ್ದಾಡಿ ಶ್ರಮವಹಿಸಿದೆ ಹಾಗೂ ಪೋರ್ಚುಗೀಸ್ ಭಾಷೆಯಲ್ಲಿ ಭೌತಶಾಸ್ತ್ರದ ಉಪನ್ಯಾಸಗಳನ್ನು ಕೊಡಲು ನಿರ್ಧರಿಸಿದೆ. ನಾನು ಕ್ಯಾಲ್ಟೆಕ್‌ಗೆ ಮರಳಿದ ನಂತರ ಪ್ರೊಫೆಸರ್ ಬ್ಯಾಚರ್‌ರು ಆಯೋಜಿಸಿದ ಸಂತೋಷಕೂಟಕ್ಕೆ ನನ್ನನ್ನು ಆಹ್ವಾನಿಸಲಾಯಿತು. ನಾನು ಆ ಸಂತೋಷಕೂಟದ ಸ್ಥಳ ತಲುಪುವ ಮುನ್ನ ಪ್ರೊಫೆಸರ್ ಬ್ಯಾಚರ್‌ರು “ನೋಡಿ, ಈ ಫೇನ್ಮನ್ ಒಂದಿಷ್ಟೇ ಇಷ್ಟು ಪೋರ್ಚುಗೀಸ್ ಭಾಷೆ ಕಲಿತುಬಿಟ್ಟೆ ಅನ್ನೋ ಕಾರಣಕ್ಕೆ ತನ್ನನ್ನು ತಾನು ತುಂಬ ಬುದ್ಧಿವಂತ ಅಂದ್ಕೊಂಡ್ಬಿಟ್ಟಿದಾರೆ, ಅವರಿಗೆ ಇವತ್ತು ಒಂದು ಸರಿಯಾದ ಪಾಠ ಕಲಿಸೋಣ ಆಯ್ತಾ?” ಎಂದು ಅಲ್ಲಿ ಸೇರಿದ್ದ ಜನರಿಗೆ ಹೇಳಿದ್ದರು. ಮತ್ತು ಈ ಮುಂದಿನ ಮಾತನ್ನೂ ಜೊತೆಗೆ ಸೇರಿಸಿದ್ದರು – “ಮಿಸೆಸ್ ಸ್ಮಿತ್ (ಅವರು ಅಪ್ಪಟ ಕಕೇಶಿಯನ್ ಮೂಲದವರು)ರು ಚೈನಾದಲ್ಲಿ ಬೆಳೆದಿದ್ದಾರೆ. ಈಕೆಯಿಂದ ಪೇನ್ಮನ್‌ರಿಗೆ ಚೈನೀ ಭಾಷೆಯಲ್ಲಿ ಶುಭಾಶಯ ಹೇಳಿಸೋಣ”.
ಇದೇನೂ ಅರಿಯದ ನಾನು ಸಂತೋಷಕೂಟ ನಡೆಯುತ್ತಿದ್ದ ಜಾಗಕ್ಕೆ ತಲುಪಿದೆ. ಮಿ.ಬ್ಯಾಚರ್‌ರು ಅಲ್ಲಿನ ಜನರಿಗೆಲ್ಲ ನನ್ನನ್ನು ಪರಿಚಯಿಸಲಾರಂಭಿಸಿದರು.
“ಮಿ.ಫೇನ್ಮನ್ ಇವರು ಮಿ…. ಅಂತ’’.
“ನಿಮ್ಮನ್ನು ಭೇಟಿಯಾಗಿದ್ದು ತುಂಬ ಸಂತೋಷ ಮಿ.ಪೇನ್ಮನ್”.
“ಮತ್ತು ಇವರು ಮಿ…. ಅಂತ”.
“ತುಂಬ ಸಂತೋಷ ….ಮಿ. ಫೇನ್ಮನ್’’.
“ಮತ್ತು ಇದು ಮಿಸೆಸ್ ಸ್ಮಿತ್’’.
ಆಕೆ ವಿನಯದಿಂದ ಬಾಗಿ “ಚೂಂಗ್ ಗಾಂಗ್ ಜಿಯಾ’’ ಎಂದರು.
ಇದರಿಂದ ನನಗೆ ಎಷ್ಟು ಆಶ್ಚರ್ಯವಾಯಿತೆಂದರೆ ಅದೇ ಹುರುಪಿನಲ್ಲಿ ಉತ್ತರಿಸುವುದೊಂದೇ ನಾನು ಮಾಡಬಹುದಾದದ್ದು ಎಂದು ನಾನರಿತೆ. ನಾನು ಸಹ ಆಕೆಯ ಮುಂದೆ ವಿನಯದಿಂದ ಬಾಗಿ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ, “ಆಹ್, ಚಿಂಗ್ ಜಾಂಗ್ ಜಿಯೇನ್’’.
“ಓಹ್, ದೇವರೇ’’ …… ತಮ್ಮ ಶಾಂತತೆ ಕಳೆದುಕೊಂಡು ಉದ್ವಿಗ್ನಗೊಂಡ ಆಕೆ “ಹೀಗಾಗುತ್ತೆ ಅಂತ ನಂಗೆ ಗೊತ್ತಿತ್ತು – ನಾನು ಮ್ಯಾಂಡಾರಿನ್ ಮಾತಾಡಿದ್ರೆ ಅವರು ಕ್ಯಾಂಟೋನೀಸ್ ಮಾತಾಡ್ತಾರೆ!” ಎಂದರು.

ಇಷ್ಟು ತುಂಟತನದ, ಹರ್ಷಭರಿತ ಜೀವನ ಮಾಡಿದ ಹಾಗೂ ನಿರಂತರವಾಗಿ ಕಲಿಯುತ್ತಲೇ ಹೋದ ವಿಜ್ಞಾನಿಯ ಬಗ್ಗೆ ಯಾರಿಗೆ ಕುತೂಹಲ ಮೂಡುವದಿಲ್ಲ ಹೇಳಿ! ಫೇನ್ಮನ್‌ಗೆ ಫೇನ್ಮನ್‌ರೇ ಸಾಟಿ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

