ನಡುಗಡ್ಡೆಗಳ ಕಷ್ಟ ಮತ್ತು ಚೆಲುವು

ತಲೆಯೆತ್ತಿ ನೋಡಿದರೆ ನೀಲಾಕಾಶ. ಕಣ್ಣಮುಂದೆ ಆ ಆಕಾಶವೇ ನೆಲಕ್ಕಿಳಿದು ಮಲಗಿದಂತೆ ಕಡಲು. ಹಸಿರುಕೊಡೆಗಳ ತೆಂಗುತೋಟ. ಬಲೆಹಾಕಿದರೆ ಊಟಕ್ಕೆ ಬಗೆಬಗೆಯ ಮೀನು. ಶುದ್ಧಗಾಳಿ. ಲಕ್ಷದ್ವೀಪದ ಜನ ಅದೃಷ್ಟವಂತರು ಅನಿಸಿತು. ಆದರೆ ಆ ನಡುಗಡ್ಡೆಯ ಬಾಳಲ್ಲಿ ಕಷ್ಟಗಳೂ ಇವೆ ಎಂದು ದ್ವೀಪದೊಳಗೆ ಹೋದಾಗ ನಿಧಾನವಾಗಿ ತಿಳಿಯುತ್ತ ಹೋಯಿತು.

ಲಕ್ಷದ್ವೀಪದ ಕಿನಾರೆಗೂ ಕಡಲಿಗೂ ನಡುವೆ ಕೋರಲ್ ದಿಬ್ಬವಿರುವ ಕಾರಣ, ಹಡಗು ಮೂರು ಕಿ.ಮೀ ದೂರದಲ್ಲೇ ಆಳ ಕಡಲಿನಲ್ಲಿ ನಿಂತುಬಿಡುತ್ತದೆ. ಹಡಗಿನಿಂದ ಸಣ್ಣ ದೋಣಿಗಳಿಗೆ ಇಳಿದೇ ಜೆಟ್ಟಿಗಳಿಗೆ ಹೋಗಬೇಕು. ಹಡಗು ಬಂದೊಡನೆ, ರೈಲು ಬಂದರೆ ಹಮಾಲಿಗಳು ಮುತ್ತಿಕೊಳ್ಳ್ಳುವಂತೆ, ಜನರನ್ನೂ ಸಾಮಾನನ್ನೂ ಇಳಿಸಿಕೊಳ್ಳಲು ದೋಣಿಗಳು ಧಾವಿಸುತ್ತವೆ. ಹಡಗಿನಿಂದ ದೋಣಿಗೆ ಇಳಿದು ಹತ್ತುವುದೇ ಒಂದು ರೋಮಾಂಚಕ ಅನುಭವ. ಹಡಗನ್ನು ಲಂಗರು ಹಾಕಿ ನಿಲ್ಲಿಸಿ, ನೀರಿನ ಮಟ್ಟಕ್ಕೆ ಇರುವ ಬಾಗಿಲನ್ನು ತೆರೆದು ಅಲ್ಲಿಂದ ಜನರನ್ನು ದೋಣಿಗೆ ಇಳಿಸಲಾಗುತ್ತದೆ. ಕೈಹಿಡಿದು ಇಳಿಸುವುದಕ್ಕೆ ಕೆಳಗೆ ದೋಣಿಯಲ್ಲಿ ಇಬ್ಬರು; ಮೇಲೆ ಹಡಗಿನಲಿಬ್ಬರು. ಕೊಂಚ ಹೆಚ್ಚುಕಡಿಮೆ ಆದರೂ ಹಡಗು-ದೋಣಿಗಳ ನಡುವಣ ನೀರಿಗೆ ಬೀಳುವುದು ಖಂಡಿತ. ಈ ಸರ್ಕಸ್ಸು ನೆಗೆತ ಇಲ್ಲಿನ ಬದುಕಿನ ಸಹಜ ಲಯವಾಗಿದೆ. ಬಾಳಿನ ಪರಿಸ್ಥಿತಿ ಮತ್ತು ನಿಸರ್ಗದ ಒತ್ತಡಗಳು ಎಂತಹ ಧಾರ್ಮಿಕ ಸಾಮಾಜಿಕ ನಂಬಿಕೆಗಳನ್ನೂ ಬದಲಾಯಿಸಬಲ್ಲವು. ಮಹಿಳಾ ಪಯಣಿಗರ‍್ಯಾರೂ ಪರಪುರುಷರ ಕೈಮುಟ್ಟಿಸಿಕೊಳ್ಳಬೇಕಲ್ಲಾ ಎಂದು ಹಿಂಜರಿಯಲಿಲ್ಲ. ಒಂದೊಮ್ಮೆ ನಖರಾ ಮಾಡಿದರೆ ಪ್ರಾಣ ಹೋಗುತ್ತದೆ. ಇದಕ್ಕೆ ನಿದರ್ಶನ ತೋರಿಸುವಂತೆ, ಹಡಗಿನಿಂದ ದೋಣಿಗೆ ಲಗ್ಗೇಜು ಇಳಿಸುವಾಗ ಒಂದು ಗಂಟು ಕಡಲಿಗೆ ಬಿದ್ದು ಹೋಯಿತು. ನೀರು ಪಾರದರ್ಶಕವಾಗಿದ್ದ ಕಾರಣ, ಗಂಟು ಸಮುದ್ರದ ಆಳದವರೆಗೆ ಹೋಗುವ ತನಕ ಕಾಣುತ್ತಿತ್ತು. ಯಾರೂ ಅದನ್ನು ಉಳಿಸಲು ಯತ್ನಿಸಲಿಲ್ಲ. ಅದು ಆಗದ ಕೆಲಸ ಕೂಡ. ಗಂಟಿನವನು ಮಾತ್ರ ಬೊಬ್ಬೆ ಹೊಡೆದುಕೊಳ್ಳುತ್ತಿದ್ದ. ಅದು ಹಲಸಿನಹಣ್ಣಂತೆ. ಕೊಚ್ಚಿಯ ಹಡಗುಕಟ್ಟೆಯಲ್ಲಿ ನೂರಾರು ಹಲಸಿನಕಾಯಿಗಳು, ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ಬಾಣಂತಿಯರು ತಲೆಗೆ ಬಟ್ಟೆಕಟ್ಟಿಕೊಂಡು ಆಟೋಗೆ ಕಾದು ಕುಳಿತಂತೆ, ಕೆಳಗೂ ಮೇಲೂ ಅಡಕೆ ಹಾಳೆಗಳಲ್ಲಿ ಪ್ಯಾಕಾಗಿ ಕುಳಿತಿದ್ದನ್ನು ಗಮನಿಸಿದ್ದೆವು. ತೆಂಗು ಬಿಟ್ಟರೆ ಬೇರೆ ಮರಗಳೇ ಇಲ್ಲದ (ಬಾಳೆ ಪಪ್ಪಾಯಿಗಳಿದ್ದರೂ ಅವು ಲೆಕ್ಕಕ್ಕಿಲ್ಲ) ನಾಡಿಗೆ ಹಲಸು, ಗಣ್ಯಅತಿಥಿಯಂತೆ ಗತ್ತಿನಿಂದ ಬಂದಿತ್ತು. ಪಾಪ, ಈ ಯಾರ ಹೊಟ್ಟೆ ಸೇರಬೇಕಿತ್ತೊ ಅದು, ತನ್ನ ಪ್ರಯಾಣದ ಕೊನೆಯನ್ನು ಮುಟ್ಟಲೇ ಇಲ್ಲ.

ಕಡಲು ಬಿರುಸಾದಾಗ ದೋಣಿಯ ಅಂಚು ಕೆಳಬಾಗಿಲ ಸಮೀಪಕ್ಕೆ ಬರಗೊಡದಷ್ಟು ಅಲೆಗಳ ಕುದಿತವಿರುತ್ತದೆ. ಆಗ ಕಡಲ ಮರ್ಜಿಗೆ ಕಾಯಲೇಬೇಕು. ಕವರಟ್ಟಿ ದ್ವೀಪದಲ್ಲಿ ಹಡಗು ಹತ್ತುವಾಗ ಇಂತಹ ಅಲೆಗಳ ಅಬ್ಬರ ಎಲ್ಲವನ್ನು ಆತಂಕದಲ್ಲಿ ಕೆಡವಿತು. ಹಡಗಿನ ಮೈಬಳಿಗೆ ಯಾವ ದೋಣಿಯನ್ನೂ ಸುಳಿಯಗೊಡಲಿಲ್ಲ. ದುಡುಕಿ ಹತ್ತಿರ ಹೋದರೆ, ಹಡಗಿನ ಗೋಡೆಗೆ ಬಡಿದು ಮರದ ದೋಣಿ ನುಚ್ಚು ನೂರಾಗುವ ಸಾಧ್ಯತೆಯಿತ್ತು. ನಮ್ಮ ಗುಂಪಿನಲ್ಲಿ ನನ್ನ ಸಹೋದ್ಯೋಗಿ ಡಾ. ಉಷಾ ಅವರ ಮಾವನವರೂ ಇದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ದೊಡ್ಡ ಅಧಿಕಾರಿಯಾಗಿ ನಿವೃತ್ತರಾಗಿದ್ದ ಅವರು ಮಹಾ ಆಸ್ತಿಕರು; ತಮಗೆ ಜಲಕಂಟಕ ಇದೆಯೆಂದು ಜ್ಯೋತಿಷಿಗಳು ಹೇಳಿದ್ದಾರೆಂದೂ ತಾವೂ ಈ ಪ್ರವಾಸಕ್ಕೆ ಬರಬಾರದಿತ್ತು ಎಂತಲೂ, ಈ ಮಕ್ಕಳ ಕಾಟಕ್ಕೆ ಬಂದಿದ್ದೇನೆ ಎಂತಲೂ ನನ್ನ  ಬಳಿ ಹಡಗು ಹತ್ತಿದ ದಿನದಿಂದಲೂ ಅವಲತ್ತುಕೊಳ್ಳುತ್ತ ಇದ್ದರು. ‘ಈ ಕಾಲದಲ್ಲೂ ಅದನ್ನೆಲ್ಲಾ ನಂಬಿದೀರಲ್ಲ ಸಾರ್ ನೀವು?’ ಎಂದು ನಾನು ತಮಾಷೆ ಮಾಡುತ್ತಿದ್ದೆ. ಅವರು ತರಗೆಲೆಯಂತೆ ತೂಗಾಡುತ್ತಿದ್ದ ದೋಣಿಯಲ್ಲಿ ಮೂಕವಾಗಿ ಕೂತು ಈ ಸಲ ಖಂಡಿತ ನನ್ನ ಕತೆ ಮುಗಿಯಿತು ಎಂಬಂತೆ ನನ್ನ ಮುಖ ನೋಡಿದರು- ಎಲ್ಲರಿಗೂ ಲಕ್ಷದ್ವೀಪದ ಹುಗಲುಹಚ್ಚಿ ಎಳೆತಂದ ಪಾಪಿ ನೀನು ಎಂಬಂತೆ. ಹಡಗಿನ ಮೇಲಿಂದ ನಾವಿಕರ ಕೂಗುಗಳು, ದೋಣಿ ಮುಳುಗದಂತೆ ಹರಸಾಹಸ ಮಾಡುತ್ತಿದ್ದ ದೋಣಿಕಾರರ ಆತಂಕ ಕಂಡು ದೋಣಿಯೊಳಗಿನ ಜೀವಗಳು ಉಸಿರು ಬಿಗಿಹಿಡಿದು ಕೂತುಬಿಟ್ಟವು. ನಿಸರ್ಗದ ರೌದ್ರತೆಯ ಮುಂದೆ ಅಸಹಾಯಕರಾಗುವುದು ಬಿಟ್ಟರೆ ಬೇರೇನು ಮಾಡಲು ಸಾಧ್ಯ? ಆದರೆ ಎಷ್ಟೋ ಹೊತ್ತಿನ ಬಳಿಕ ಅಲೆಗಳು ಶಾಂತವಾಗಿ, ಜಲಕಂಟಕ ವಿಧಿಸಿದ್ದ ಜ್ಯೋತಿಷಿಯ ಅಮರವಾಣಿಯನ್ನು ಸುಳ್ಳು ಮಾಡಿದವು. ನಮ್ಮ ಗುಂಪಿನಲ್ಲಿದ್ದ ಬಂಗಾಳಿ ಅಜ್ಜಿ ಮಾತ್ರ ಯಾವ ಆತಂಕವನ್ನೂ ಪಡದೆ, ಆತಂಕ ಪಡುತ್ತಿದ್ದವರನ್ನೆಲ್ಲ ನೋಡಿ ನಗುತ್ತ, ನಿರಾಳವಾಗಿ ಕೂತು ಹಡಗಿಗೆ ದಾಟಿಬಂತು. ಸುದೀರ್ಘ ಜೀವನವನ್ನು ಮಾಡಿದ ಜನ, ಸಾವನ್ನೂ ಹೆದರಿಸಬಲ್ಲರು. ‘ಡೆತ್ ಬಿ ನಾಟ್ ಪ್ರೌಡ್!’

ಹಡಗಿನಿಂದ ದೋಣಿಗಿಳಿವಾಗ ಆಳವಾದ ಕಪ್ಪು ಕಡಲು. ಅದನ್ನು ದಾಟಿ ದ್ವೀಪಗಳಿಗೆ ಹೋಗುವ ದಾರಿಯಲ್ಲಿ, ಆಳವಿಲ್ಲದ ನೀಲ ಸರೋವರ ಮಾಡಿದೊಡನೆ, ನೀರು ನಾಟಕೀಯವಾಗಿ ಬದಲಾಗುತ್ತದೆ. ಇದು ನೀರತಳದಲ್ಲಿರುವ ಬಿಳಿಯ ಕೋರಲ್ ಹುಡಿಯೂ ಮೇಲೆ ಸುರಿವ ಸೂರ್ಯನ ಬೆಳಕೂ ನಿರ್ಮಿಸಿದ ಮಾಯಾಜಾಲ. ನೀಲಿ ಹಸುರಿನ ಈ ದೃಶ್ಯ ಎಷ್ಟು ನೋಡಿದರೂ ತಣಿವಾಗದು. ಬೇರೆಬೇರೆ ಆಳ ಬಂದಂತೆ ನೀರು ಬೇರೆ ಬೇರೆ ವರ್ಣಗಳಲ್ಲಿ ಕಾಣುತ್ತದೆ. ಇಡೀ ಸರೋವರವನ್ನು ದಡದ ಮೇಲಿಂದ ಎತ್ತರದಲ್ಲಿ ನಿಂತು ನೋಡಿದರೆ ನೀರು ಬಗೆಬಗೆಯ ಬಣ್ಣಗಳಲ್ಲಿ ಬರೆದ ವರ್ಣಚಿತ್ರದಂತೆ ಕಾಣುತ್ತದೆ. ನಾವು ಭಾರತದಲ್ಲೇ ಅತ್ಯಂತ ಹಳೆಯ ಲೈಟ್ ಹೌಸ್‌ಗಳಲ್ಲಿ ಒಂದಾದ ಮಿನಿಕಾಯದ ಲೈಟ್ ಹೌಸಿನ ಮೇಲಿಂದ ನೋಡಿದೆವು. ಅದೊಂದು ಮೋಹಕವಾದ ದೃಶ್ಯ. ಲಕ್ಷದ್ವೀಪಗಳು ತಮ್ಮ ಹವಳಗಳಿಗಾಗಿ ಪ್ರಸಿದ್ಧವಾಗಿದೆ. ನಮ್ಮ ಟೂರ್ ಪ್ಯಾಕೇಜಿನ ಹೆಸರೇ ಕೋರಲ್ ಲೀಫ್. ಆದರೂ ಅಂಡಮಾನಿನಂತೆ ಹವಳಗಳನ್ನು ನೋಡಲು ನಮಗೆ ಆಗಲಿಲ್ಲ. ಕಾರಣ ಕರವಟ್ಟಿಯಲ್ಲಿದ್ದ ಹೆಚ್ಚಿನ ಹವಳಗಳು ಸತ್ತಿದ್ದವು. ನೀರಿನೊಳಗೆ ನೂರಾರು ಬಣ್ಣಗಳಿಂದ ಅದ್ಭುತಲೋಕ ನಿರ್ಮಿಸುವ ಅವು, ಮಣ್ಣು ತಿಂದು ಮಾಸಲು ಬಣ್ಣಕ್ಕೆ ತಿರುಗಿದ ಎಲುಬು ರಾಶಿಯಂತೆ ಬಿದ್ದಿದ್ದವು. ಯಾಕೆಂದು ಕೇಳಲು ಗ್ಲೋಬಲ್ ವಾರ್ಮಿಂಗ್ ಎಂದು ಉತ್ತರ ಸಿಕ್ಕಿತು. ಸದ್ಯ ಕೋರಲ್ಲುಗಳು ಸತ್ತಿದ್ದರೂ ಕೋರಲ್ಲುಗಳಲ್ಲೇ ವಾಸಿಸುವ ಸಾವಿರಾರು ಬಣ್ಣದ ಮೀನುಗಳು ಜೀವಂತವಾಗಿವೆ. ಗಾಜುತಳದ ದೋಣಿಗಳಲ್ಲಿ ಅವನ್ನು ನೋಡಬಹುದು. ದೋಣಿಗಿಂತ ಲೈಫ್‌ಜಾಕೆಟ್ ಧರಿಸಿ ತೇಲುತೇಲುತ್ತಾ ನೋಡುವುದರಲ್ಲಿ ಸಿಗುವ ಅನುಭವವೇ ಬೇರೆ. ಮುಖವಾಡದ ಗಾಜು ನೀರಿನಲ್ಲಿ ಭೀತಿ ಹುಟ್ಟಿಸುವ ಆಳದ ಭ್ರಮೆಯನ್ನು ಉಂಟುಮಾಡುತ್ತದೆ. ನಮ್ಮ ದೇಹದ ಕೆಳಗೆ ಅಕ್ಕಪಕ್ಕ ಬಗೆಬಗೆಯ ಮೀನುಗಳು ತಟ್ಟನೆ ಪ್ರತ್ಯಕ್ಷವಾದಾಗ ಜೀವ ಝಲ್ಲೆನ್ನುತ್ತದೆ. ಈಜುಬಾರದವರು ಮೊಣಕಾಲುದ್ದ ನೀರಿರುವ ಕಡೆ ಕೋರಲ್ಲುಗಳನ್ನೂ ಮೀನುಗಳನ್ನೂ ತಿರುಗಾಡಿ ನೋಡಬಹುದು. ಅಂತಹದೊಂದು ಸರೋವರ ಕಲ್ಪನಿಯಲ್ಲಿ ಇದೆ.

ಆದರೆ ಈ ಕಡಲ ಕೊಳಗಳಲ್ಲಿ ತಿರುಗಾಡಿ ಹವಳಗಳನ್ನೂ ಮೀನುಗಳನ್ನೂ ನೋಡಲು ಬಿಡುವುದು ಅವೈಜ್ಞಾನಿಕ. ಮೀನುಗಳಂತೆ ಈಜಿ ತಪ್ಪಿಸಿಕೊಳ್ಳಲಾಗದ ಅನೇಕ ಜೀವಿಗಳು ನೆಲದ ಮೇಲೆ ಸುಮ್ಮನೆ ಮಲಗಿರುತ್ತದೆ. ಅದರಲ್ಲಿ ಕಡಲಸೌತೆ ಎಂಬ ಮೃದ್ವಂಗಿ ಜೀವಿಯೂ ಒಂದು. ಅಂಡಮಾನಿನಲ್ಲಿ ಅಪರೂಪಕ್ಕೆ ಕಾಣುವ ಇವು ರಾಶಿರಾಶಿಯಾಗಿ ಇವೆ. ಕಡಲಜೀವಿಗಳ ಬಗ್ಗೆ ಜೀವನ ಕ್ರಮದ ಅರಿವಿಲ್ಲದ ಪ್ರವಾಸಿಗರು ವಾಟರ್ ವರ್ಲ್ಡ್ ಗಳ ನೀರಾಟಕ್ಕೆ ಬಂದವರಂತೆ ಕುಣಿದಾಡುತ್ತಾರೆ. ಒಮ್ಮೆ ನೀರಲ್ಲಿ ಮುಳುಗಿಕೊಂಡು ಕಡಲಜೀವಿಗಳನ್ನು ನೋಡುವ ರುಚಿಸಿಕ್ಕರೆ ನೀರ ಹೊರಗೆ ಹೋಗುವುದಕ್ಕೆ ಮನಸ್ಸು ಬರುವುದೇ ಇಲ್ಲ. ನಾನೂ ನನ್ನ ಮಗಳು ಶಮಾ, ಲೈಫ್ ಜಾಕೆಟ್ಟನ್ನೂ ಮುಳುಗು ಮುಖವಾಡವನ್ನು ಧರಿಸಿ ಈಜುತ್ತಾ ದೂರದವರೆಗೆ- ಕಡಲಕೊಳವನ್ನು ದಾಟಿ ಓಪನ್ ಸೀ ಬರುವತನಕ- ಹವಳಗಳನ್ನೂ ಮೀನುಗಳನ್ನೂ ನೋಡುತ್ತಾ ಹೋದೆವು. ಒಂದು ಕಡೆ ನೀರಕುದುರೆ ಸಣ್ಣ ಗೂಡೊಳಕ್ಕೆ ಹೋಗುವುದು, ಮೇಲೆ ಬಂದು ಮಿಣಿಮಿಣಿ ಮೈ ಅಲಗಿಸುವುದು ಮಾಡುತ್ತಿತ್ತು. ಆದರೆ ಸ್ಕೂಬಾ ಡೈವಿಂಗ್ ಮಾಡಿದರೆ ಇದಕ್ಕಿಂತಲೂ ಭಿನ್ನವಾದ ಅನುಭವ ಸಿಗುತ್ತದೆ. ಅವಸರಕ್ಕೆ ಹುಟ್ಟಿದ ಈ ಟ್ರಿಪ್ಪಿನಲ್ಲಿ ಇದನ್ನು ಅನುಭವಿಸಲು ಸಾಧ್ಯವಾಗಲಿಲ್ಲ.

ಕಲ್ಪೆಟ್ಟಾದಲ್ಲಿ ಒಂದು ಮರೀನ್ ಮ್ಯೂಸಿಯಂ ಇದೆ. ಲಕ್ಷದ್ವೀಪದ ಕಡಲೊಳಗಿನ ಚರಿತ್ರೆಯನ್ನೇ ತೆರೆದಿಡುವಂತೆ ಅದನ್ನು ರೂಪಿಸಲಾಗಿದೆ. ದ್ವೀಪಗಳಲ್ಲಿ ಹಿಡಿಯಲಾದ ಭಾರೀ ತಿಮಿಂಗಿಲ ಶಾರ್ಕುಗಳ ಅಸ್ಥಿಪಂಜರಗಳೆಲ್ಲ ಅಲ್ಲಿವೆ. ಲಕ್ಷದ್ವೀಪದ ಕಡಲು ಶಾರ್ಕ್‌ಗಳಿಗೆ ಪ್ರಸಿದ್ಧ. ಮ್ಯೂಸಿಯಮ್ಮಿನಲ್ಲಿ ಒಂದು ಭಾರೀ ಕೊಳ ಕಟ್ಟಿಸಿ ಶಾರ್ಕ್ ಮರಿಗಳನ್ನು ಬಿಟ್ಟಿದ್ದರು. ಅವು ಏರ್ ಪೋರ್ಟುಗಳಲ್ಲಿ ತಿರುಗುವ ವಿಮಾನದಂತೆ ಗಂಭೀರವಾಗಿ ಓಡಾಡಿಕೊಂಡಿದ್ದವು. ಬೃಹದಾಕಾರದ ಬೆಳೆಯುವ ಇವನ್ನು ಎಷ್ಟು ದಿನ ಅಂತ ಕೊಳಗಳಲ್ಲಿ ಇಟ್ಟಾರು? ಒಂದಲ್ಲಾ ಒಂದು ದಿನ ಕಡಲಿಗೆ ಬಿಡಲೇಬೇಕು. ಆಗ ಲಕ್ಷದ್ವೀಪದ ಜನರೂ ಒಂದಲ್ಲಾ ಒಂದು ದಿನ ಈ ದ್ವೀಪಗಳನ್ನು ಖಾಲಿ ಮಾಡಬೇಕು ತಾನೇ? ಫರಕೆಂದರೆ, ಶಾರ್ಕ್ ತನ್ನ ಸ್ವಸ್ಥಾನವಾದ ಕಡಲಿಗೆ ಹೋಗುತ್ತದೆ; ಆದರೆ ಲಕ್ಷದ್ವೀಪದ ಜನ ತಮ್ಮ ಸ್ವಸ್ಥಾನ ಬಿಟ್ಟು ಪರದೇಶಕ್ಕೆ ವಲಸಿಗರಾಗಿ ಹೋಗಿ ಬೀಳುತ್ತಾರೆ. ಅನಿಶ್ಚಿತ ಭವಿಷ್ಯವನ್ನು ಮುಂದಿಟ್ಟುಕೊಂಡು ಬದುಕುವಾಗ ಒಂದು ಬಗೆಯ ಅಭದ್ರತೆಯೂ ಇರುತ್ತದೆ. ಬದುಕುವುದಕ್ಕೆ ಒಂದು ತೀವ್ರತೆಯೂ ಒದಗುತ್ತದೆ. ದೂರದ ಭವಿಷ್ಯವನ್ನು ಊಹಿಸಿ ಕಂಗೆಡದೆ ದ್ವೀಪವಾಸಿಗಳು ತಮ್ಮ ನಿತ್ಯದ ತರಲೆ ತಾಪತ್ರಯಗಳಲ್ಲಿ ಮುಳುಗಿದಂತಿತ್ತು. ಬಹುಶಃ ಇದು ಸಾವನ್ನು ಹೆದರಿಸುವ ಎರಡನೇ ವಿಧಾನವಿರಬೇಕು.

ನಡುಗಡ್ಡೆಯ ಜ್ವಾಲಾಮುಖಿಗಳು

ಲಕ್ಷದ್ವೀಪದ ಹವಳದಿಬ್ಬಗಳ ಮೇಲೆ ಅದ್ಯಾವ ರುಚಿ ಕಂಡಿದೆಯೋ, ತೆಂಗು ಮಾತ್ರ ಅಲ್ಲಿ ಮನಸ್ಸೋ ಇಚ್ಛೆಯಾಗಿ ಪಾರ್ಥೇನಿಯಂ ಕಳೆಯಂತೆ ಬೆಳೆದಿದೆ. ಇದನ್ನು ತೆಂಗು ಸರ್ವಾಧಿಕಾರದ ನಾಡೆಂದು ಕರೆಯಬಹುದು. ಹಡಗಿನಿಂದ ದ್ವೀಪಗಳನ್ನು ನೋಡುವಾಗ ಊರು ಮನೆ ಜನ ಏನೂ ಕಾಣುವುದಿಲ್ಲ. ಕಾಣುವುದು ಬರೀ ತೆಂಗುಹಸಿರಿನ ಕುಪ್ಪೆ ಮತ್ತು ಅದರೊಳಗೆ ನೆಟ್ಟ ರಾಕೆಟ್ಟಿನಂತಹ ಲೈಟ್‌ಹೌಸ್. ದ್ವೀಪದೊಳಗೆ ಕಾಲಿಟ್ಟರೆ ಸೂರ್ಯರಶ್ಮಿ ನೆಲಕ್ಕೆ ತಾಗದ ನೆರಳು. ಆ ನೆರಳಿನೊಳಗೆ ಹೊಕ್ಕರೆ ರಸ್ತೆ ಮನೆ ಜನ ಎಲ್ಲಾ ನಿಧಾನವಾಗಿ ಪ್ರತ್ಯಕ್ಷವಾಗುತ್ತದೆ. ದ್ವೀಪಗಳಲ್ಲಿ ಅಡ್ಡಾಡುವಾಗ ಮೊದಲಿಗೆ ಎರಡು ದೃಶ್ಯಗಳು ಕಣ್ಸೆಳೆಯುತ್ತವೆ. ಮೊದಲನೆಯದು- ತೆಂಗಿನಕಾಯಿಗಳ ಅಧಃಪತನ. ಇಲ್ಲಿ ತೆಂಗಿನಕಾಯಿಗಳು ಕಸಕ್ಕಿಂತ ಕಡೆಯಾಗಿ ಎಲ್ಲಿಬೇಕಲ್ಲಿ ಬಿದ್ದಿವೆ. ಮರದೊಡೆಯರು ಬೇಕಾದಾಗ ಅವನ್ನು ಆರಿಸಿ ಕುಪ್ಪೆಹಾಕಿ ಸುಲಿಸಿ ಕೊಬ್ಬರಿ ಮಾಡುತ್ತಾರೆಂದು ಗೊತ್ತಾಯಿತು. ಈ ಒಡೆಯರು ತಂತಮ್ಮ ತೋಟ ಎಂದು ಬೇಲಿಗಳನ್ನು ಕಟ್ಟಿಲ್ಲ. ಬೇಲಿ ಇದ್ದದ್ದು ಕೊಬ್ಬರಿ ಒಣಗಿಸುವ ಮನೆಗಳಿಗೆ ಮಾತ್ರ. ಕಾಗೆಗಳಿಂದ ಕೊಬ್ಬರಿ ಉಳಿಸಲು ಕಡಲ ದಂಡೆಗೆ ಕೊಬ್ಬರಿ ಮನೆಗಳನ್ನು ಕಟ್ಟಿಸುತ್ತಾ ಬಲೆ ಕಟ್ಟಿದ್ದರು. ದೀಪಾವಳಿಯಲ್ಲಿ ಸಾಲಾಗಿ ದೀಪಗಳಿಟ್ಟಂತೆ ಕೊಬ್ಬರಿ ಬಟ್ಟಲುಗಳು. ಎರಡನೆಯದು- ತೆಂಗಿನ ಮರಗಳಿಗೆ ಕಟ್ಟಿ ಹಾಕಿರುವ ಆಡುಗಳದ್ದು. ಈ ದ್ವೀಪದಲ್ಲಿ ನಾವು ಕಂಡ ಏಕೈಕ ನಾಗಾಲಿನ ಜಾನುವಾರೆಂದರೆ ಇದೇ. ನಾಯಿಗಳೂ ಕಾಣಲಿಲ್ಲ. ಆ ಆಡುಗಳು ನಮ್ಮ ಆಡುಗಳಂತೆ ಎತ್ತರವಿಲ್ಲ. ಜಗ್ಗುವ ಕೆಚ್ಚಲಿನ ಗಿಡ್ಡತಳಿಯವು. ಇಂಥ ಆಡುಗಳನ್ನು ಕೇರಳದಲ್ಲೂ ಬಂಗಾಲದಲ್ಲೂ ಕಂಡಿದ್ದೆವು. ನನಗೆ ತಟ್ಟನೆ ವೈಕಂ ಮಹಮದ್ ಬಶೀರರ ‘ಪಾತುಮ್ಮಳ ಆಡು ಕತೆ ನೆನಪಿಗೆ ಬಂತು. ಅಲ್ಲಿ ಆಡು ಮನೆ ತುಂಬಾ ಸುತ್ತಾಡುತ್ತಾ ಅದು ಇದು ಮುರಿದು ಇಡೀ ಕುಟುಂಬದಲ್ಲಿ ಜಗಳ ಹಚ್ಚುತ್ತದೆ, ಆದರೆ ಇಲ್ಲಿ ಅದನ್ನು ಕಡ್ಡಾಯವಾಗಿ ಕಟ್ಟಿ ಮುಂದೆ ತೆಂಗಿನ ಗರಿ ಕಡಿದುಹಾಕಿದ್ದರು. ಆಡು ಒಂದು ಕಡೆ ಒಂದರಗಳಿಗೆ ನಿಲ್ಲುವಂತಹ ಜಾನುವಾರಲ್ಲ. ದಿನವೊಂದಕ್ಕೆ ಸಾವಿರ ಜಾತಿಯ ಗಿಡಗಳಿಗೆ ಬಾಯಿಹಾಕಿ ಎಲೆ ತಿನ್ನುವ ಪ್ರಾಣಿ. ಆದರಿಲ್ಲಿ ಸಿಗುವ ಏಕೈಕ ಹಸಿರಾದ ತೆಂಗಿನಗರಿಯನ್ನು ನಿರ್ವಾಹವಿಲ್ಲದೆ ಕಡಿಯುತ್ತ ಕೈದಿಗಳಂತೆ ತೆಂಗಿನಮರಕ್ಕೆ ಕಟ್ಟಿಸಿಕೊಂಡಿತ್ತು. ಗರಿಯ ಹಸುರನ್ನು ಬಿಡಿಬಿಡಿಸಿ ತಿಂದು, ದಿಂಡಿಗಂಟಿದ ಉಳಿದ ತೆಂಗಿನಕಡ್ಡಿಗಳು ಮೀನಿನ ಅಸ್ಥಿಪಂಜರದಂತೆ ತೋರುತ್ತಿದ್ದವು. ಹುಲ್ಲು ಬೆಳೆಯದ ಇಲ್ಲಿ ಹಸು ಎಮ್ಮೆಗಳಿಗಿರುವುದು ಕಷ್ಟ. ಹೀಗಾಗಿ ಹಾಲಿಗೂ ಮಾಂಸಕ್ಕೂ ಮೇಕೆಯೇ ಗತಿ ಇರಬೇಕು.

ಕೊಚ್ಚಿಯ ಬಂದರಿನಲ್ಲಿರುವ ಲಕ್ಷದ್ವೀಪ ಆಡಳಿತ ಕಛೇರಿಯಲ್ಲಿ ಟಿಕೇಟು ಗುರುತಿನ ಚೀಟಿ ಇತ್ಯಾದಿ ಸಂಗ್ರಹಿಸಿಕೊಂಡು, ಬೆಳ್ಳಗೆ ಕೊಕ್ಕರೆಯಂತೆ ಹೊಳೆಯುತ್ತಿದ್ದ ಟಿಪ್ಪುಸುಲ್ತಾನ್ ಏರುವಾಗಲೇ ಅನಿಸಿತು- ನಾವು ಹೋಗುತ್ತಿರುವುದು ಕೇರಳದ ವಿಸ್ತರಣೆಯಾಗಿರುವ ನಾಡಿಗೆ ಎಂದು. ಮಾಪ್ಳಾ ಮುಸ್ಲಿಮರು ಹಡಗಿನ ತುಂಬ ಹತ್ತಿಕೊಂಡರು. ಲಕ್ಷದ್ವೀಪ ಮತ್ತು ಕೇರಳದ ಮಾಪ್ಳಾ ಜನರ ಇಸ್ಲಾಮಿಗೂ ಭಾರತದ ಉಳಿದ ಕಡೆಯಿರುವ ಇಸ್ಲಾಮಿಗೂ ಬಹಳ ಫರಕಿದೆ. ಇವರ ಇಸ್ಲಾಂ ನೇರವಾಗಿ ಅರಬರಿಂದಲೇ ಬಂದಿದ್ದು. ಇವರಿಗೆ ಇಸ್ಲಾಂ ಪರಿಚಯಿಸಿದ ಸಂತ ಉಬೇದುಲ್ಲಾನ ದರ್ಗಾ, ಅಂದ್ರೋತ್ ನಡುಗಡ್ಡೆಯಲ್ಲಿದೆ. ಈಗಲೂ ಲಕ್ಷದ್ವೀಪದ ಜನರ ಸಾಂಸ್ಕೃತಿಕ ಸಂಬಂಧಗಳಲ್ಲಿ ಅರಬಸ್ಥಾನದ ಚಹರೆಗಳಿವೆ; ಇವರ ಜಾನಪದವು ಅರಬ್ ಪುರಾಣ ಮತ್ತು ಚರಿತ್ರೆಗಳಿಂದ ತುಂಬಿದೆ. ಹೀಗಾಗಿ ಲಕ್ಷದ್ವೀಪಗಳು ಸಾಂಸ್ಕೃತಿಕವಾಗಿ  ಮಲಬಾರು ಮತ್ತು ಅರಬದ ಕಿನಾರೆಗಳು ಮುರಿದು ಚೂರಾಗಿ ತೇಲಿಬಂದಿರುವಂತೆ ಭಾಸವಾಗುತ್ತದೆ.

ಲಕ್ಷದ್ವೀಪಗಳಲ್ಲಿ ಸರ್ವವ್ಯಾಪಿಯಾಗಿರುವ ಮಾಪ್ಳಾ ಸಂಸ್ಕೃತಿಗೆ ಭಿನ್ನವಾದ ದ್ವೀಪವೆಂದರೆ ಮಿನಿಕಾಯ್. ಅದು ಲಕ್ಷ ದ್ವೀಪಗಳಲ್ಲೇ ಶಾನೇ ದೂರವಿದೆ-ಕೊಚ್ಚಿಯಿಂದ ೪೦೦ ನಾಟಿಕಲ್ ಮೈಲಿ ಪಯಣ. ವಾಸ್ತವದಲ್ಲಿ ನಮ್ಮ ಪ್ರವಾಸ ಶುರುವಾಗುವುದೇ ಮಿನಿಕಾಯ್‌ನಿಂದ. ಇಲ್ಲಿಂದ ಜನರನ್ನು ಇಳಿಸುತ್ತಾ ಹತ್ತಿಸಿಕೊಳ್ಳುತ್ತ ದ್ವೀಪಗಳನ್ನು ಸುತ್ತುತ್ತಾ ಹಡಗು ಐದನೇ ದಿನಕ್ಕೆ ಕೊಚ್ಚಿಗೆ ಮರಳುತ್ತದೆ. ಮಿನಿಕಾಯ್‌ನಲ್ಲಿ ಇರುವುದು ಮಾಲ್ಡೀವಿಯನ್ ಸಂಸ್ಕೃತಿ. ಮಾಲ್ಡೀವ್ಸ್ ದೇಶ ಇಲ್ಲಿಗೆ ೭೦-೮೦ ಮೈಲಿ. ಮಾಲ್ಡೀವ್ಸ್ ದೇಶವನ್ನು ಕೆಲವು ಜನ ಪುಂಡರು ದೋಣಿಯಲ್ಲಿ ಹೋಗಿ ಅವರ ರಾಜಧಾನಿ ಮಾಲೆಯನ್ನೇ ಒಮ್ಮೆ ವಶಪಡಿಸಿಕೊಂಡಿದ್ದು ಮತ್ತು ಭಾರತವು ತನ್ನ ಸೇನೆ ಕಳಿಸಿ ಮುಕ್ತಗೊಳಿಸಿಕೊಟ್ಟಿದ್ದು ನೆನಪಿಗೆ ಬಂದಿತು. ಭಾಷಿಕವಾಗಿ ಸಾಂಸ್ಕೃತಿಕವಾಗಿ ಮಾಲ್ಡೀವ್ಸ್‌ನ ಜತೆ ಬೇರುಗಳಿರುವ ಈ ದ್ವೀಪವೀಗ ಭಾರತದ ಆಡಳಿತಕ್ಕೆ ಒಳಪಟ್ಟಿದೆ. ಎರಡು ದೊಡ್ಡ ದೇಶಗಳ ನಡುವೆ ಇರುವ ಯಾವತ್ತೂ ದ್ವೀಪಗಳ ವಿಧಿಯಿದು. ಅವು ತಮ್ಮನ್ನು ಗೆದ್ದುಕೊಳ್ಳುವ ದೇಶಗಳ ಭಾಗವಾಗಿ ಹೋಗುತ್ತವೆ. ಇದರ ಬಗ್ಗೆ ಚರ್ಚೆ ನಡೆದಾಗ, ನಮ್ಮ ಹಡಗಿನಲ್ಲಿ ಹನಿಮೂನಿಗೆಂದು ಬಂದಿದ್ದ ಕನ್ನಡಿಗ ತರುಣ (ಆತ ದಕ್ಷಿಣ ಕನ್ನಡಿಗ ತಂದೆ ಮಲೆಯಾಳಿ ತಾಯಿಯ ಮಗ. ಈತ ಇಡೀ ಹಡಗಿನಲ್ಲಿ ಎಲ್ಲರನ್ನೂ ಅವರವರ ಭಾಷೆಯಲ್ಲಿ ಮಾತನಾಡಿಸುತ್ತಾ ಬಹಳ ಜನಪ್ರಿಯನಾಗಿದ್ದನು.) ‘ರೀ, ಸ್ವಾಮಿ ಇಂಡಿಯಾದಲ್ಲಿ ಇರುವುದು ಮಿನಿಕಾಯ್ ಜನರ ಅದೃಷ್ಟ. ಇವರಿಗೆ ಇಲ್ಲಿ ಇಷ್ಟಾದರೂ ಸೌಲಭ್ಯ ಸಿಕ್ಕಿದೆ. ಮಾಲ್ಡೀವ್ಸಿನಲ್ಲಿದ್ದರೆ ನಾಯಿಪಾಡು ಆಗಿರುತ್ತಿತ್ತು’ ಎಂದು ಹೇಳಿದ.

ಅವನ ಮಾತಲ್ಲಿ ನಿಜವಿರಬಹುದು. ಭಾರತವು ಈ ದ್ವೀಪಗಳಿಗೆ ಅನೇಕ ಸೌಲಭ್ಯ ಒದಗಿಸಿದೆ. ರಾತ್ರಿಯಾದೊಡನೆ ಕತ್ತಲಲ್ಲಿ ಮುಳುಗುವ ಈ ದ್ವೀಪದಲ್ಲಿ ಡೀಸಲ್ ವಿದ್ಯುತ್ ಸ್ಥಾವರ ಸ್ಥಾಪಿಸಿ ಬೆಳಕು ಕೊಟ್ಟಿದೆ. ಇಲ್ಲಿ ಒಳ್ಳೆ ಶಾಲೆಗಳಿವೆ. ಬಡತನ ಎಂಬುದು ಎಲ್ಲೂ ಕಣ್ಣಿಗೆ ಬೀಳಲಿಲ್ಲ. ಆದರೂ ದುರ್ಬಲರಿಗೆ ಯಾವುದು ಒಳ್ಳೆಯದು ಎಂಬುದನ್ನು ಅಧಿಕಾರಸ್ಥರು, ವಿಜೇತರು ನಿರ್ಣಯ ಮಾಡಿಕೊಂಡು ಬಂದಿರುವುದು ಮೊದಲಿಂದಲೂ ನಡೆದುಕೊಂಡು ಬಂದಿದೆ. ಭಾರತದ ಅಗತ್ಯಗಳನ್ನು ಅಮೆರಿಕವು, ನೇಪಾಳದ ಅಗತ್ಯಗಳನ್ನು ಭಾರತವು ನಿರ್ಣಯ ಮಾಡಿಕೊಂಡು ಬಂದಿದೆ. ಮಾಲ್ಡೀವ್ಸ್‌ನ ಕೊಂಚ ಕೆಳಗೆ, ಅರಬ್ಬಿ ಸಮುದ್ರದಲ್ಲಿ ಡಿಯಾಗೋ ಗಾರ್ಸಿಯಾ ಎಂಬ ದ್ವೀಪದಲ್ಲಿ ಬೀಡುಬಿಟ್ಟಿರುವ ಅಮೆರಿಕಾ ಸಾವಿರಾರು ಸೈನಿಕ ವಿಮಾನ ಮತ್ತು ಹಡಗುಗಳನ್ನು ಇಟ್ಟುಕೊಂಡು ಮಾಡುತ್ತಿರುವುದು ಇದೇ ಕೆಲಸ ತಾನೇ?

ಮಿನಿಕಾಯದ ಭಾಷೆ ಮಹಾಲಿ. ಭಾತರದ ಅತಿ ಕಡಿಮೆ ಸಂಖ್ಯೆಯ ಜನರು ಆಡುವ ಭಾಷೆಗಳಲ್ಲಿ ಇದೂ ಒಂದು. ಆದರೆ ಇಲ್ಲಿನ ಕೆಲವು ದ್ವೀಪಗಳಲ್ಲಿ ಆಡಳಿತ ಭಾಷೆ ಮಹಾಲಿ. ಅಲ್ಲಿನ ಬೋರ್ಡುಗಳಲ್ಲಿದ್ದ ಮಹಾಲಿ ಲಿಪಿ, ಮಕ್ಕಳು ಆಟಕ್ಕೆ ಬಳೆ ಚೂರು ಜೋಡಿಸಿಕೊಂಡಂತೆ ವಿಚಿತ್ರವಾಗಿತ್ತು. ಭಾರತದ ಅಥವಾ ಕೇರಳದ ಮುಸ್ಲಿಮರ ಯಾವ ನಡಾವಳಿಯೂ ಮಹಾಲಿ ಮುಸ್ಲಿಮರಲ್ಲಿಲ್ಲ. ಮಹಾಲಿ ಸಂಸ್ಕೃತಿಯು ಶ್ರೀಲಂಕೆಯಿಂದ ಹೋದ ಬೌದ್ಧ ಧರ್ಮ, ಅರಬರ ಇಸ್ಲಾಮಿ ಹಾಗೂ ಕೇರಳದಿಂದ ಹೋದ ಹಿಂದು ಧರ್ಮಗಳ ಸಂಕರ. ಮಿನಿಕಾಯದಲ್ಲಿ ಅಪರೂಪದ ಬೌದ್ಧ ವಿಗ್ರಹಗಳು ಸಿಕ್ಕಿವೆ. ಇಸ್ಲಾಂ ಸ್ವೀಕರಿಸಿದ ಮೇಲೂ ದ್ವೀಪವು ತನ್ನ ಬೌದ್ಧಸ್ಮೃತಿಗಳನ್ನು ಬಿಟ್ಟು ಕೊಟ್ಟಿಲ್ಲ. ಮಹಾಲಿ ಹೆಸರುಗಳಲ್ಲಿ ಅದು ಉಳಿದುಕೊಂಡಿದೆ. ಅವರ ಪಂಗಡದ ಹೆಸರುಗಳಲ್ಲಿ ಬೋಧ ಎಂಬ ಶಬ್ದವಿದೆ. ಅವರ ನಾಯಕನ ಹೆಸರು ಬೋಧುದಾತ. ನಮಗೆ ಪರಿಚಯವಾದ ಹುಡುಗಿಯ ಹೆಸರು ಸುನಿಧಾ.

ಮಿನಿಕಾಯದ ಚರಿತ್ರೆ ಮತ್ತು ವರ್ತಮಾನಗಳನ್ನು ತಿಳಿಸಿದ ಸುನಿಧಾ ನಮ್ಮ ಗುಂಪಿಗೆ ಪರಿಚಯವಾದ ಸಂದರ್ಭವೂ ನಾಟಕೀಯವಾಗಿತ್ತು. ಕೊನೆಯ ದಿನ ಮಿನಿಕಾಯದಿಂದ ಲಕ್ಷದ್ವೀಪದ ರಾಜಧಾನಿ ಕರವಟ್ಟಿಗೆ ಹಡಗು ಹೊರಟಿತ್ತು. ಕರವಟ್ಟಿ, ಕದಮತ್, ಅಂದ್ರೋತ್, ಅಗಟ್ಟಿ ಕೊನೆಯಲ್ಲಿ ಕೊಚ್ಚಿಗೆ ಹೋಗುವ ಜನ ಹತ್ತಿಕೊಂಡರು. ಹಡಗು ಹೊರಟ ಕೂಡಲೆ, ಪ್ರಯಾಣಿಕರಿಗೂ ಹಡಗಿನ ಅಧಿಕಾರಿಗಳಿಗೂ ಜಗಳ ಶುರುವಾಯಿತು. ಜಗಳದಲ್ಲಿ ಒಬ್ಬ ತರುಣಿಯ ದನಿ ಕೊಂಚ ಜೋರಾಗಿತ್ತು. ಅವಳು ಬುರಖಾ ಹಾಕಿಕೊಂಡಿರಲಿಲ್ಲ. ತನ್ನ ದುಂಡನೆಯ ಬೆಳ್ಳನೆಯ ಚಂದ್ರಮುಖಕ್ಕೆ ಅಂಚು ಕಟ್ಟಿದಂತೆ ಕಪ್ಪುತಟ್ಟನ್ನು ಸುತ್ತಲೂ ಸುತ್ತಿಕೊಂಡಿದ್ದಳು. ಅವಳ ಇಂಗ್ಲೀಷ್ ಭಾಷೆ, ದಿಟ್ಟತನ, ಅನ್ಯಾಯ ಪ್ರತಿಭಟಿಸುವ ಗುಣ ಚಕಿತಗೊಳಿಸಿದವು. ಅವಳು ಜಗಳ ಮುಗಿಸಿ ಡೆಕ್ಕಿನ ಕಂಬಿಯ ಬಳಿ ಬಂದು ನಿಂತು ಕಡಲ ಕಡೆ ನೋಡುತ್ತಾ ನಿಂತಳು. ಕೋಪದಿಂದ ಮುಖ ಇನ್ನೂ ಧುಮುಗುಡುತ್ತಿತ್ತು. ಹಕ್ಕು ಪ್ರಜ್ಞೆಯುಳ್ಳ ಒಬ್ಬ ಆಧುನಿಕ ಮುಸ್ಲಿಮ್ ತರುಣಿಯನ್ನು ಕಂಡು ಸಂತೋಷವಾಯಿತು. ಧೈರ್ಯಮಾಡಿ ಬಳಿ ಹೋಗಿ ‘ಕ್ಷಮಿಸಿ, ನೀವು ಹಡಗಿನವರ ಜತೆ ಜಗಳ ಮಾಡಿದಿರಲ್ಲ, ಯಾಕೆಂದು ಕೇಳಬಹುದೇ?’ ಎಂದೆ. ಅವಳ ಕೋಪ ಕಡಿಮೆಯಾಗಿದ್ದರೂ ಹೊಗೆಯಾಟ ಇನ್ನೂ ನಿಂತಿರಲಿಲ್ಲ. ನಾನು ಕರ್ನಾಟಕದವನು ಎಂದು ಗೊತ್ತಾದ ಮೇಲೆ ಅವಳ ರೌದ್ರತೆ ಕಡಿಮೆಯಾಯಿತು. ಮಾತಿಗೆ ಮೃದುತ್ವ ಬಂದಿತು. ಸುನಿಧಾ ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಬಿ.ಎ. ಮಾಡುತ್ತಿದ್ದವಳು. ಅವಳು ಈ ಹಡಗಿನವರಿಂದ ದ್ವೀಪದ ಜನರಿಗೆ ಆಗುತ್ತಿರುವ ಕಷ್ಟಗಳನ್ನು ಹೇಳಿಕೊಂಡಳು. ಮಿನಿಕಾಯದ ಸಂಸ್ಕೃತಿ ಉಳಿದ ದ್ವೀಪಗಳ ಮಾಪ್ಳಾಗಿಂತ ಹೇಗೆ ಬೇರೆ ಎಂಬುದನ್ನು ಹೇಳಿದಳು.

ಅವಳ ಪ್ರಕಾರ ದ್ವೀಪದ ಜನರ ಮುಖ್ಯ ಸಮಸ್ಯೆ ಎರಡು. ಒಂದನೆಯದು ವಾರಕ್ಕೊಮ್ಮೆ ಬರುವ ಹಡಗಿನದು. ಎರಡನೆಯದು ಇಲ್ಲಿನ ಹೆಂಗಸರ ಪಾಡಿನದು. ಹೆಂಗಸರ ಮಾತು ಬಂದೊಡನೆ ನಾನು ‘ಕೊಂಚ ಇರಿ. ನಮ್ಮ ಗುಂಪಿನ ಸದ್ಯಸರನ್ನು ಕರೆತರುವೆ’ ಎಂದು ಓಡಿಹೋಗಿ ‘ಬನ್ನಿ ಮಿನಿಕಾಯದ ಒಂದು ಸುಂದರ ಜ್ವಾಲಾಮುಖಿ ತೋರಿಸುತ್ತೇನೆ’ ಎಂದು ಹೇಳಿ ಬಾನುವನ್ನೂ ಉಷಾ ಅವರನ್ನೂ ಕರೆತಂದೆ. ಅಷ್ಟೊತ್ತಿಗೆ ಸುನಿಧಾ ಜಮಖಾನೆ ಹಾಸಿಕೊಂಡು ಡೆಕ್ಕಿನ ಮೇಲೆ ತನ್ನ ಕುಟುಂಬದವರೊಡನೆ ಕುಳಿತಿದ್ದಳು. ನಮ್ಮ ಚರ್ಚೆ ಇಲ್ಲಿ ಮುಂದುವರೆಯಿತು. ಇಲ್ಲಿನ ಮಹಿಳೆಯರ ಕಷ್ಟ ಎಂದರೆ ಯಾವುದು ಎಂದು ಬಾನು ಕೇಳಿದಳು. ಸುನಿಧಾ ತಟ್ಟನೆ ಹೇಳಿದಳು- ‘ಹೆರಿಗೆಯಲ್ಲಿ ಸಾಯುವುದು!’ ಕಾರಣ, ಇಲ್ಲಿನ ಗರ್ಭಿಣಿಯರಿಗೆ ಹಾಲು ಹಣ್ಣು ತರಕಾರಿ ಸಿಕ್ಕುವುದಿಲ್ಲ. ಅನಿಮಿಕ್ಕಿನಿಂದ ಮಹಿಳೆಯರು ಪ್ರಸವದ ಹೊತ್ತಲ್ಲಿ ಜೀವಬಿಡುತ್ತಾರೆ. ದ್ವೀಪಕ್ಕೊಬ್ಬರಂತೆ ಡಾಕ್ಟರೇನೊ ಇದ್ದಾರೆ. ಹೆರಿಗೆ ಡಾಕ್ಟರ್ ಇರುವುದು ಕರವಟ್ಟಿಯಲ್ಲಿ ಮಾತ್ರ. ಗಂಡಸರು ಮಕ್ಕಳಾಗದ ಆಪರೇಷನ್ ಮಾಡಿಸಿಕೊಳ್ಳುವುದಿಲ್ಲವಾಗಿ, ಮಹಿಳೆಯರು ತಮಗೆ ಮಕ್ಕಳು ಬೇಡವಾದರೆ ತಾವೇ ಆಪರೇಶನ್ ಮಾಡಿಕೊಳ್ಳಬೇಕು. ಸುನಿಧಾ ಹೇಳುತ್ತಿದ್ದ ಕತೆಯನ್ನು ಕೇಳುತ್ತಿದ್ದ ನನ್ನ ಮಗಳು ಭಾವಾವೇಶದಿಂದ ಘೋಷಿಸಿದಳು: ‘ಅಪ್ಪಾ ನಾನು ಡಾಕ್ಟರಾದರೆ ಈ ದ್ವೀಪಗಳಿಗೆ ಬಂದು ಕೆಲಸ ಮಾಡುತ್ತೇನೆ.’ ನಾನು ‘ಆಮೆನ್’ ಎಂದೆ. ಈಗ ವೈದ್ಯಳಾಗಿ ಹೊರಬರಲಿರುವ ಆಕೆ ತನ್ನ ಪ್ರತಿಜ್ಞೆಯನ್ನು ಈಡೇರಿಸುತ್ತಾಳೆಯೊ ಅಥವಾ ಅವಳಿಗೆ ಅದರ ನೆನಪಿದೆಯೊ ಇಲ್ಲವೋ ಗೊತ್ತಿಲ್ಲ.

ದ್ವೀಪಗಳು ಜನರನ್ನು ಬಂಧಿಸುತ್ತವೆ ಎಂದು ನನಗೆ ಯಾವಾಗಲೂ ಅನಿಸುತ್ತದೆ. ಇಲ್ಲಿನ ಹೆಂಗಸರಿಗೆ ಕಾಯುವುದು ಒಂದು ಕಾಯಕ ಆಗಿದೆಯೇ? ಕಡಲ ಮೇಲೆ ಹೋದ ಗಂಡನಿಗಾಗಿ ಕಾಯಬೇಕು. ಎಲ್ಲ ಗಂಡಸರು ಕಡಲಿಗೆ ಹೋಗಿಲ್ಲ; ಕಡಲನ್ನು ದಾಟಿ ಕೆಲವರು ಕೇರಳಕ್ಕೆ ಮತ್ತೆ ಕೆಲವರು ಕೊಲ್ಲಿ ದೇಶಗಳಿಗೆ ಹೋಗಿದ್ದಾರೆ. ಹೀಗಾಗಿ ಹೆಂಗಸರು ಮುದುಕರು ಮಕ್ಕಳೇ ದ್ವೀಪಗಳಲ್ಲಿರುವುದು. ಈ ಕಾರಣಕ್ಕೆ ಹೆಣ್ಣಿಗೆ ಇಲ್ಲಿ ಸಾಮಾಜಿಕ ಬದುಕು ತೆರೆದಿದೆ. ಆದರೆ ಈ ದ್ವೀಪಗಳಲ್ಲಿ ಎಲ್ಲಿ ಹೋಗಬೇಕು ಅವಳು? ಕೇರಳದ ಮಾಪ್ಳಾಗಳು ಹಾಡುವ ಪಾಟ್ಟುಗಳಲ್ಲಿ ಹೆಣ್ಣಿನ ಇಂತಹ ಏಕಾಂತದ ಕ್ಷಣಗಳ ವರ್ಣನೆ ಇದೆಯೆಂದು ಕೇಳಿದ್ದೇನೆ. ಮಿನಿಕಾಯದ ಸಾಂಪ್ರದಾಯಿಕ ಮನೆಗಳನ್ನು ತೋರಿಸಲು ನಮ್ಮನ್ನು ಒಂದು ದೊಡ್ಡಮನೆಗೆ ಕರೆದುಕೊಂಡು ಹೋಗಲಾಗಿತ್ತು. ಹಾಗೆ ಮತ್ತೊಬ್ಬರ ಮನೆಯೊಳಗೆ ನುಗ್ಗಿ ಅವರ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಕುತೂಹಲದಲ್ಲಿ ನೋಡುವುದು ಮುಜುಗರದ ಕೆಲಸ. ಯಾರದೊ ಖಾಸಗಿ ಬದುಕಿನಲ್ಲಿ ನುಗ್ಗುತ್ತಿರುವ ಹಿಂಜರಿಕೆ ಕತ್ತಿಗೆ ಕೈಹಾಕಿ ಅಮುಕುತ್ತದೆ. ಹಿಮಾಲಯದಲ್ಲಿಯೂ ನನಗೆ ಈ ಅನುಭವವಾಗಿತ್ತು.

ಆದರೆ ನಾವು ನೋಡಲು ಹೋದ ಮನೆಯವರು ಪ್ರವಾಸಿಗರನ್ನು ಸಂಭಾಳಿಸುವಲ್ಲಿ ನಮ್ಮ ಹಂಪಿಯ ಜನರಂತೆ ಪಳಗಿದ್ದರು. ನಮಗೆ ಮಾಲ್ಡೀವಿಗರ ಮನೆಗಳಲ್ಲಿ ಎದ್ದುಕಂಡಿದ್ದು ರಾಜರಂತೆ ಕೂರಲು ಮಾಡಿಕೊಂಡಿರುವ ಮೆತ್ತೆದಿಂಬು ಹಾಗೂ ತೂಗು ಮಂಚಗಳು. ದ್ವೀಪದಲ್ಲಿ ತಿರುಗಾಡಲು ಜಾಗವಿಲ್ಲ, ದ್ವೀಪ ಬಿಟ್ಟು ಹೋಗಲು ಸಾಧ್ಯವಿಲ್ಲ, ಜತೆಗೆ ಗಂಡನಿಲ್ಲ ಎಂಬಂತಹ ಇಕ್ಕಟ್ಟುಗಳಲ್ಲಿ ಹೆಂಗಸರು ಕಾಲುದೂಡಲು ಇದೆಲ್ಲಾ ವ್ಯವಸ್ಥೆ ಮಾಡಿಕೊಂಡಿರಬಹುದೇ? ಆದರೆ ಟೀವಿ ಬಂದು ಈ ಗೃಹಬಂಧಿಗಳಿಗೆ ಹೊರಜಗತ್ತಿನ ಕಿಂಡಿಯೊಂದನ್ನು ಕೊರೆದಿದೆ. ಎಲ್ಲರ ಮನೆಗಳಲ್ಲಿ ಟೀವಿ ಉರಿಯುತ್ತಿತ್ತು. ಸುನಿಧಾ ಹೇಳುವ ಪ್ರಕಾರ ಇಲ್ಲಿ ಪಕ್ಕದ ದ್ವೀಪವನ್ನು ಕೂಡ ನೋಡದೇ ಸಾಯುವ ಹೆಂಗಸರು ಬೇಕಾದಷ್ಟು ಇದ್ದಾರೆ. ನನಗೆ ಇದನ್ನು ಕೇಳಿ ತೆಂಗಿನಮರಕ್ಕೆ ಕಟ್ಟಿಸಿಕೊಂಡು ಗರಿ ತಿನ್ನುತ್ತಿರುವ ದ್ವೀಪದ ಆಡುಗಳೇ ನೆನಪಾದವು. ಆದರೆ ಡೆಕ್ಕಿನ ಮೇಲೆ ಬುರುಖಾ ಧರಿಸದೆ ದಿಟ್ಟವಾಗಿ ಓಡಾಡಿಕೊಂಡಿರುವ ಹೊಸತಲೆಮಾರಿನ ಅನೇಕ ಆಧುನಿಕ ತರುಣಿಯರು ಕಂಡರು. ದ್ವೀಪಗಳಲ್ಲಿ ಕಾಲೇಜಿಲ್ಲದ ಕಾರಣ, ಬಡವರು ಹೆಣ್ಣುಮಕ್ಕಳನ್ನು ಓದಲು ಮೇನ್ ಲ್ಯಾಂಡಿಗೆ ಕಳಿಸುವುದಿಲ್ಲವಂತೆ. ಆದರೆ ಸುನಿಧಾ ಇದಕ್ಕೆ ಅಪವಾದವಾಗಿದ್ದಳು.

ಮಿನಿಕಾಯದ ಒಂದು ಕಡೆ ಕಡಲದಂಡೆಗೆ ಮುಖಮಾಡಿದಂತಹ ಒಂದು ತೆಂಗಿನ ಚಪ್ಪರದಲ್ಲಿ ಏಳೆಂಟು ಮಹಾಲಿ ಹೆಂಗಸರು ಗುಡ್ಡೆ ಹಾಕಿಕೊಂಡು ಕುಳಿತ್ತಿದ್ದರು. ಹೆಚ್ಚಿನವರು ವಯಸ್ಸಾದವರು. ನಾವು ಬಂದುದ್ದನ್ನು ಕಂಡು ಮುದುಡಿಕೊಂಡರು. ಬಾನು ಫೋಟೋಗಾಗಿ ವಿನಂತಿಸಿದಳು. ಅವರು ಮಹಾಲಿಯಲ್ಲಿ ಬೇಡಬೇಡ ಎಂದು ಸೆರಗು ಹೊದ್ದುಕೊಂಡರು. ಒಂದು ಅಜ್ಜಿ ‘ತೋಬಾ ತೋಬಾ’ ಎಂದು ಗಲ್ಲ ಬಡಿದುಕೊಂಡಿತು. ಅವರಲ್ಲಿ ಒಬ್ಬಳಿಗೇನೋ ಫೋಟೊಗೆ ಫೋಸು ಕೊಡುವ ಆಸೆಯಿತ್ತು. ಆದರೆ ಇಡೀ ಗುಂಪು ನಿರಾಕರಿಸುವುದನ್ನು ಕಂಡು ಅವಳೂ ಗಪ್ಪಾದಳು. ಕಲ್ಪನಿಯಲ್ಲಿ ಮೇಕೆಗೆ ಬಾಳೆಲೆ ಕಡಿದು ಹಾಕುತ್ತಿದ್ದ ಒಬ್ಬ ಮಾಪ್ಳಾ ಹೆಂಗಸು ಕೂಡ ಫೋಟೊ ತೆಗೆಸಿಕೊಳ್ಳಲು ನಿರಾಕರಿಸಿದಳು. ದೂರದ ಅಂಗಡಿಯಲ್ಲಿ ಕುಳಿತ ಗಂಡಸರು ನಮ್ಮ ಚೇಷ್ಟೆಯನ್ನು ನೋಡುತ್ತಿದ್ದರು. ಇವರ ಧರ್ಮಶ್ರದ್ಧೆ ವಿಚಿತ್ರ ಅನಿಸಿತು. ಆಧುನಿಕ ಲೋಕದ ಕೈಗಳು ತಾಗದ ಅನೇಕ ಮೂಲೆಗಳು ಇಲ್ಲಿರಬಹುದು. ಇದಕ್ಕಾಗಿಯೇ ಸುನಿಧಾ ಮತ್ತೆ ಮತ್ತೆ ಭವಿಷ್ಯದ ಭರವಸೆಯಂತೆ ತೋರಿದಳು. ಸಂತೋಷ ಕೊಟ್ಟಿದ್ದೆಂದರೆ, ಮಿನಿಕಾಯದ ಮಸೀದಿಗಳಲ್ಲಿ ಹೆಂಗಸರಿಗೆ ಪ್ರವೇಶವಿರುವುದು. ಇದು ಇಂಡೋನೇಶಿಯಾದಲ್ಲಿರುವ ಉದಾರವಾದಿ ಇಸ್ಲಾಮಿನ ಪ್ರಭಾವ ಇರಬೇಕು.

ಒಮ್ಮೆ ನಮಗೆ ಮಾಪ್ಳಾ ನೃತ್ಯ ನೋಡುವ ಅವಕಾಶ ಸಿಕ್ಕಿತು. ನೃತ್ಯಗಾರರನ್ನು ಪ್ರವಾಸಿ ಇಲಾಖೆಯೆ ಕರೆಸಿತ್ತು. ಬಿಳಿಯರ ಮೋಜಿಗಾಗಿ ಆಫ್ರಿಕೆಯ ಜನ ತಮ್ಮ ಸಂಸ್ಕೃತಿ ಪ್ರದರ್ಶಿಸುವುದು ನೆನಪಾಯಿತು. ಅದನ್ನು ಬೀದಿ ನಾಟಕದಂತೆ ನೋಡುವುದು ಕಷ್ಟವಾಗುತಿತ್ತು. ಪ್ರವಾಸೋದ್ಯಮದಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಒಂದು ವಸ್ತುವಾಗಿಸುವ ಸ್ಥಳೀಯರನ್ನು ಬಳಸಿಕೊಳ್ಳುವ ಅಂಶವನ್ನು ತೆಗೆದುಹಾಕುವುದು ಸಾಧ್ಯವಿಲ್ಲವೇ? ಇದು ಹಿಂದುಳಿದ ದೇಶಗಳ ಪ್ರವಾಸೋದ್ಯಮದಲ್ಲಿ ಬಿಡಿಸಲಾಗದ ಅವಸ್ಥೆಯೋ? ಪಾಶ್ಚಾತ್ಯ ದೇಶಗಳು ಪ್ರವಾಸಿಗರಿಗೆ ತಮ್ಮ ತಂತ್ರಜ್ಞಾನ ತೋರಿಸಿ ದಂಗುಬಡಿಸಿದರೆ, ನಾವು ನಮ್ಮ ಸಂಸ್ಕೃತಿ ಪ್ರಾಚಿನತೆ ತೋರಿಸಿ ಚಕಿತಗೊಳಿಸುತ್ತೇವೆ. ಪ್ರವಾಸದಲ್ಲಿ ಅನ್ಯ ಸಂಸ್ಕೃತಿಗಳ ದರ್ಶನವಾಗಬೇಕು. ಆದರೆ ಅದು ಟೀ ಕಾಫಿಯನ್ನು ತಟ್ಟೆಯಲ್ಲಿ ತಂದುಕೊಟ್ಟಂತೆ ಆಗಬಾರದು. ಪರಿಜಕ್ಕಳಿ ಎಂಬ ನೃತ್ಯದಲ್ಲಿ ಕುತೂಹಲ ಮೂಡಿಸಿದ್ದು ಕತ್ತಿಗುರಾಣಿ ಹಿಡಿದು ಮಾಡುವ ಯುದ್ಧಾನುಕರಣೆ. ಅರಬ್ಬಿಸಮುದ್ರದ ನಡುವೆ ಅಕ್ಕಿನುಚ್ಚಿನಂತೆ ಇರುವ ಈ ದ್ವೀಪಗಳು ತಮ್ಮ ಚರಿತ್ರೆಯಲ್ಲಿ ಎಷ್ಟೊಂದು ಮಚ್ವೆಗಳನ್ನು ಕಂಡಿವೆಯೋ? ಅವುಗಳಿಂದ ಇಳಿದುಬಂದ ಎಂತೆಂತಹ ಸ್ನೇಹ-ಜಗಳ ಮಾಡಿವೆಯೋ? ಮೊದಲು ಕಣ್ಣಾನೂರಿನ ರಾಜರು ನಂತರ ಪೋರ್ಚುಗೀಸರು, ಬಳಿಕ ಟಿಪ್ಪು, ಕೊನೆಗೆ ಬ್ರಿಟೀಷರು ಈ ದ್ವೀಪವನ್ನು ಆಳಿದರು. ಇವೆಲ್ಲಾ ಅವರ ಜನಪದ ಸಾಹಿತ್ಯದಲ್ಲಿ ನೃತ್ಯದಲ್ಲಿ ಹೇಗೆ ಸುಪ್ತವಾಗಿ ಮೂಡಿವೆಯೊ? ಈ ನೃತ್ಯಕಾರರ ಗುಂಪಿನಲ್ಲಿ ಹಾಡುವ ಗಾಯಕ ಕಪ್ಪನೆಯ ಹುಡುಗನಲ್ಲಿದ್ದ ನೀಗ್ರೊ ಲಕ್ಷಣಗಳು, ಈ ದ್ವೀಪಗಳ ಮೇಲೆ ಹಾದುಹೋದ ಚರಿತ್ರೆಯ ಒಂದು ಛಾಯೆಯಂತಿತ್ತು. ಅವನೊಬ್ಬ ಅದ್ಭುತ ಹಾಡುಗಾರ. ಅವನ ರಾಗಗಳು ತುಂಬ ಹಾಂಟಿಂಗ್ ಆಗಿದ್ದವು. ಒಂದು ಪದದ ರಾಗವು ಮುಂಬೈನ ಹಿಂದಿ ಸಿನಿಮಾದ ಹಾಡಿನ ಅನುಕರಣೆಯಾಗಿತ್ತು.

ತೆಂಗು ಹಾಗೂ ಕಡಲು ಲಕ್ಷದ್ವೀಪಗಳ ಜೀವನಾಡಿ. ಆದರೆ ಎಲ್ಲರೂ ಇವೆರಡನ್ನೂ ನೆಚ್ಚಿ ಬದುಕಲಾಗದು. ಕೆಲಸ ಹುಡುಕಿಕೊಂಡು ಗಂಡಸರು ದ್ವೀಪ ಬಿಟ್ಟುಹೋಗುವುದು ಅನಿವಾರ್ಯ. ಅವರ ಕಷ್ಟ ಹೆಂಗಸರ ಕಾಯುವಿಕೆಗಿಂತ ಕಡಿಮೆಯಾದದ್ದಲ್ಲ. ಮನದನ್ನೆಯನ್ನು ಎಳೆಮಕ್ಕಳನ್ನು ಬಿಟ್ಟು ದೂರ ನಾಡಿಗೆ ದುಡಿಯಲು ಹೋಗುವ ತಮ್ಮ ಯೌವನವನ್ನೆಲ್ಲಾ ಸವೆಸಿ ಭಾರತಕ್ಕೆ ವಿದೇಶಿ ವಿನಿಮಯ ಗಳಿಸಿಕೊಟ್ಟು ಅರೆಮುದುಕರಾಗಿ ಕೈತುಂಬಾ ಹಣದೊಂದಿಗೆ ಬಂದು ಭರ್ಜರಿ ಮನೆ ಕಟ್ಟಿಸಿಕೊಂಡು ಬದುಕುವ ಈ ಗಂಡಸರ ಬಗ್ಗೆ ಯೋಚಿಸಿದರೆ ಮರುಕ ಹುಟ್ಟುತ್ತದೆ. ಇಲ್ಲಿನ ಮಕ್ಕಳಲ್ಲೂ ದ್ವೀಪಗಳನ್ನು ಬಿಟ್ಟು ಹೋಗುವ ಉಮೇದು ಕಂಡಿತು. ಅವರ ಆಟಿಕೆಗಳಲ್ಲೂ ವಲಸೆಯ ನೆರಳೂ ಕಂಡಂತಾಯಿತು. ತೆಂಗಿನ ಮರದ ಕೆಚ್ಚಿನಲ್ಲಿ ಮಾಡಿದ ನಾವೆಗಳಲ್ಲಿ ಅವು ಆಡುತ್ತಿದ್ದವು. ಭಟ್ಕಳದ ನವಾಯಿತರು ಹೆಸರಲ್ಲೂ ನಾವೆಯಿದೆ. ದೋಣಿ ಈ ಜನರ ನಿತ್ಯ ಬದುಕಿನ ಸಂಗಾತಿ. ಇದು ಈ ದ್ವೀಪಗಳಾಚೆ ಅವರನ್ನು ಕರೆದೊಯ್ಯುವ ಕನಸಿನ ಸಂಗಾತಿ ಕೂಡ. ದೂರದ ನಾಡುಗಳಿಗೆ ಹೋಗುವ ಕನಸು ಕಾಣುವುದು ದ್ವೀಪಗಳ ಬದುಕಿನಲ್ಲಿ ಸಾಮಾನ್ಯ. ಮೇನ್‌ಲ್ಯಾಂಡಿನ ಜನ ಬದುಕು ಹುಡುಕಿಕೊಂಡು ದ್ವೀಪಗಳಿಗೆ ಹೋಗುತ್ತಿರುವುದನ್ನು ಅಂಡಮಾನಿನಲ್ಲಿ ನೋಡಿದ್ದೆವು; ಆದರೆ ಇಲ್ಲಿನ ದ್ವೀಪವಾಸಿಗಳು ದುಡಿಮೆ ಹುಡುಕಿಕೊಂಡು ಮೇನ್‌ಲ್ಯಾಂಡಿಗೆ ಹೋಗುತ್ತಿದ್ದರು.

ತಪ್ಪಿಹೋದ ಹಡಗು

ಹೊಸ ಹೊಸಬರು ಬರುವುದು ಈ ದ್ವೀಪಗಳ ಪಾಲಿಗೆ ಶಾಪವೋ ವರವೋ. ನಾನು ಮಾತಾಡಿದ ಬಹಳ ಜನ ಈ ಟೂರಿಸಂನಿಂದ ಖುಶಿಯಾಗಿದ್ದರು. ಟೂರಿಸ್ಟರು ಬಾರದಿದ್ದರೆ ನಮಗೆ ಈಗಿರುವ ನಾಗರಿಕ ಸೌಲಭ್ಯಗಳೂ ಸಿಗುತ್ತಿರಲಿಲ್ಲ ಎಂದು ಹೇಳುತ್ತಾರೆ. ಇಲ್ಲಿನ ಜೀವನದಲ್ಲಿ ತೆಂಗು ಕಡಲು ಬಿಟ್ಟರೆ ಮೂರನೆಯ ಆಸರೆ ಪ್ರವಾಸೋದ್ಯಮ. ಹೀಗಾಗಿ ಟಿಪ್ಪುಸುಲ್ತಾನ ಬಂತೆಂದರೆ ಅವರಿಗೆ ಹೊರಜಗತ್ತಿನ ತುಣಕೊಂದು ಬಂದಂತೆ; ಕೈತುಂಬ ಕೆಲಸ ಸಿಕ್ಕಂತೆ. ಈ ಹಡಗಿನ ಹೆಸರು ಈ ದ್ವೀಪಗಳ ಬದುಕಿನ ಪ್ರವಾದಿಯ ಹೆಸರಷ್ಟೆ ಪವಿತ್ರವಾಗಿರಬೇಕು. ದ್ವೀಪಗಳ ಬದುಕೇ ವಿಚಿತ್ರ. ಅವು ಅತಿಥಿಗಳಿಗಾಗಿ ಕಾಯುತ್ತಾ ಇರುತ್ತದೆ. ಮತ್ತೆಂದೂ ಭೇಟಿಯಾಗದೆ ಹೊರಟುಹೋಗುವ ಅತಿಥಿಗೆ ತಣಿಸಿ, ನೆನಪುಗಳು ತುಂಬಿ ಬೀಳುಕೊಡುತ್ತವೆ. ದ್ವೀಪದ ಜನರಿಗೆ ಕೊಚ್ಚಿಗೆ ಬಂದುಹೋಗಲು ಟಿಕೇಟಿನಲ್ಲಿ ಸಿಕ್ಕಾಪಟ್ಟೆ ರಿಯಾಯಿತಿಯಿದೆ. ಆದರೆ ಸಾಕಾದಷ್ಟು ಹಡಗುಗಳಿಲ್ಲ. ನಿಮ್ಮ ಮುಖ್ಯ ಸಮಸ್ಯೆ ಯಾವುದು ಎಂದರೆ ಎಲ್ಲರೂ ಒಂದು ಹಡಗು ಸಾಲದು ಎಂದೇ ಹೇಳುತ್ತಿದ್ದರು. ಲಕ್ಷ ದ್ವೀಪಗಳನ್ನು ೩೦ ವರುಷಗಳಿಂದ ಪ್ರತಿನಿಧಿಸುತ್ತಿರುವ ಏಕೈಕ ಪಾರ್ಲಿಮೆಂಟ್ ಸದಸ್ಯ ಕಾಂಗ್ರೆಸ್ಸಿನ ಸೈಯದ್ ಬಗ್ಗೆ ಅನೇಕರಿಗೆ ಅಸಮಾಧಾನವಿದೆ. (ಈಚೆಗೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಒಂದು ಪ್ರಯಾಣಿಕ ಸಣ್ಣ ಹಡಗನ್ನು ಬಿಡಲಾಗಿದೆ) ದ್ವೀಪಗಳನ್ನೆಲ್ಲಾ ಸುತ್ತಾಡುವ ಹಡಗಿನಲ್ಲಿ ತನ್ನ ದ್ವೀಪ ಬರುವ ದಿನವನ್ನು ಕಾಯುತ್ತ ಇರಬೇಕು. ಕೆಲವರಿಗೆ ಅವರ ದ್ವೀಪ ನಾಲ್ಕನೇ ದಿನ ಬರುತ್ತದೆ. ಹಡಗಿನಲ್ಲಿ ಎಷ್ಟೇ ರಶ್ ಇದ್ದರೂ ಎಲ್ಲರನ್ನೂ ಹತ್ತಿಸಿಕೊಳ್ಳಲಾಗುತ್ತದೆ. ಆದರೆ ಅವರಿಗೆ ಸೌಲಭ್ಯ ಕೊಡುವುದಿಲ್ಲ, ನಾವು ಒಮ್ಮೆ ಬಂಕರಿಗೆ ಹೋದೆವು. ನೂರಾರು ಹೆಂಗಸರು ಮಕ್ಕಳು ತಂತಮ್ಮ ಲಗೇಜುಗಳೊಂದಿಗೆ ಚಾಪೆ ಹಾಸಿಕೊಂಡು ಅಲ್ಲಲ್ಲೇ ಬಿದ್ದುಕೊಂಡಿದ್ದರು. ಬಂಕರಿನಲ್ಲಿ ಬಿಸಿಯಾದ ವಾತಾವರಣವಿರುವುದರಿಂದ ಹೆಚ್ಚಿನ ಪಯಣಿಗರು ಡೆಕ್ಕಿನ ಮೇಲೆ ಇರುತ್ತಾರೆ. ಡೆಕ್ಕಿನ ಮೇಲಿರುವುದು ಒಂದು ಭಾಗ್ಯ. ಅದರಲ್ಲೂ ರಾತ್ರಿ ಡೆಕ್ಕಿನ ಮೇಲೆ ಅಂಗಾತ ಮಲಗಿಬಿಟ್ಟರೆ ಹಡಗಿನ ಓಲಾಟಕ್ಕೆ ಇಡೀ ಗಗನದ ನಕ್ಷತ್ರಮಂಡಲವೇ ಜೋಕಾಲಿಯಂತೆ ಜೀಕುವುದನ್ನು ನೋಡುತ್ತ ನಿದ್ದೆ ಮಾಡಬಹುದು.

ಪ್ರವಾಸಿಗರು ಐಡೆಂಟಿಟಿ ಕಾರ್ಡು ಕಡ್ಡಾಯವಾಗಿ ಧರಿಸಲು ಹೇಳುತ್ತಾರೆ- ನಮ್ಮ ಮಂದೆಯ ಕುರಿ ಎಂದು ಬೇಗ ಗುರುತಿಸಲು ಸಾಧ್ಯವಾಗುವಂತೆ. ಕರವಟ್ಟಿಯಲ್ಲಿ ಮರೀನ್ ಮ್ಯೂಸಿಯಂ ನೋಡಿದ ಮೇಲೆ, ನಾವು ನಡೆದುಕೊಂಡು ಜೆಟ್ಟಿಗೆ ಬರುತ್ತೇವೆ ಎಂದು ನಮ್ಮ ಮಾಗದರ್ಶಿಗೆ ಹೇಳಿದೆವು. ಆತ ಒಪ್ಪಲಿಲ್ಲ. ನಾವು ವ್ಯಾನಿಗೆ ಹತ್ತದೆ ಉಪಾಯವಾಗಿ ತಪ್ಪಿಸಿಕೊಂಡು ಜೆಟ್ಟಿರೋಟಿನಲ್ಲಿ ನಡೆಯುತ್ತ ಹೊರಟೆವು. ತಲೆಯ ಮೇಲಣ ಟೂರಿಸಂ ಹ್ಯಾಟನ್ನು ತೆಗೆಯದೆ ಇದ್ದದ್ದು ತಪ್ಪಾಯಿತು. ನಮ್ಮನ್ನು ಗುರುತಿಸಿದ ಆತ, ವ್ಯಾನು ನಿಲ್ಲಿಸಿ ಬಲವಂತವಾಗಿ ತುಂಬಿಕೊಂಡು ತಂದು ಮೇನ್‌ಕ್ಯಾಂಪಿಗೆ ಒಗೆದ. ಪ್ಯಾಕೇಜು ಟೂರುಗಳ ಹಣೇಬರೆಹವೇ ಇಷ್ಟು. ಜನರ ಜತೆ ಬೆರೆತು, ಅಲ್ಲಿನ ಬದುಕನ್ನು ತಿರುಗಾಡಿ ನೋಡುವ ಆಸೆಯಿದ್ದವರಿಗೆ ಈ ಪ್ರವಾಸ ನಿರಾಶೆ ತರುತ್ತದೆ. ಆದರೆ ಪ್ರವಾಸಿಗರನ್ನು ಅವರ ಮನಬಂದಂತೆ ತಿರುಗಲು ಬಿಟ್ಟರೆ, ಅವರನ್ನು ಹುಡುಕಿ ಕೂಡಿಸಿ ಹಡಗು ಹತ್ತಿಸುವುದು ಅವರಿಗೂ ತಲೆನೋವು. ತಿರುಗಲು ಹೋದವರಿಗೆ ಹಡಗು ಬಂದಿದ್ದು ಹೋಗಿದ್ದು ಗೊತ್ತೂ ಆಗುವುದಿಲ್ಲ. ಅದು ಎಲ್ಲೋ ಕಡಲಲ್ಲಿ ನಿಂತು, ದೋಣಿಗಳಲ್ಲಿ ಬರುವ ಜನರನ್ನು ಹತ್ತಿಸಿಕೊಂಡು ಸದ್ದಿಲ್ಲದೆ ಹೊರಟು ಹೋಗುತ್ತದೆ. ಹಡಗನ್ನು ತಪ್ಪಿಸಿಕೊಂಡರೆ ಒಂದುವಾರ ಅಲ್ಲೆ ಕೊಳೆಯಬೇಕು. ಹೀಗಾಗಿ ಪ್ರವಾಸಿಗರನ್ನು ಸಾಧ್ಯವಾದಷ್ಟು ಅತ್ತಿತ್ತ ಬಿಡದೆ, ಕೈದಿಗಳನ್ನು ಕಾಯುವಂತೆ ಕಾಯುತ್ತಾರೆ.

ಕೊನೆಯ ದಿನವನ್ನು ನಾವು ಕಲ್ಪನಿಯಲ್ಲಿ ಕಳೆದೆವು. ನಮ್ಮ ಹಡಗು ಬೇರೆ ದ್ವೀಪಗಳಿಗೆ ಜನರನ್ನು ಇಳಿಸಿ ಬರುವವರನ್ನು ಹತ್ತಿಸಿಕೊಂಡು ಬರಲು ಹೋಗಿದ್ದು ಇನ್ನೂ ಬಂದಿರಲಿಲ್ಲ. ಅದು ಬರುವ ತನಕ ಏರ್ಪಡಿಸಿದ್ದ ಮನರಂಜನೆ ಕಿರಿಕಿರಿ ಮಾಡುತ್ತಿತ್ತು. ಅದರಿಂದ ಹೇಗೋ ತಪ್ಪಿಸಿಕೊಂಡು, ನಾನು ಬಾನು ಮಕ್ಕಳನ್ನು ಎಳೆದುಕೊಂಡು ದ್ವೀಪದೊಳಗೆ ತಿರುಗಾಡಿಕೊಂಡು ಹೊರಟೆವು. ಸುಂದರವಾದ ಚೊಕ್ಕಾದ ರಸ್ತೆಗಳು. ಸೈಕಲ್ಲುಗಳಲ್ಲಿ ತಿರುಗಾಡುವ ಹುಡುಗರು. ಒಂದು ಕಡೆ. ಮಕ್ಕಳು ಎಡೆಮೊಟ್ಟೆಯನ್ನು ಬ್ಯಾಟು ಮಾಡಿಕೊಂಡು ಕ್ರಿಕೆಟ್ ಆಡುತ್ತಿದ್ದವು. ನಾವು ಹೋದೊಡನೆ ಮನೆಯೊಳಗೆ ಓಡಿಹೋಗಿ ತಾವು ಆರಿಸಿ ಡಬ್ಬದಲ್ಲಿಟ್ಟುಕೊಂಡಿದ್ದ ಕವಡೆಗಳನ್ನು ತಂದುಕೊಟ್ಟವು. ಕಪ್ಪುಬಣ್ಣದ ಮಿರಿಮಿರಿ ಮಿಂಚುವ ಕವಡೆಗಳವು. ರಸ್ತೆ ಅಕ್ಕಪಕ್ಕದಲ್ಲಿ ಚೆಂದದ ಮನೆಗಳಿದ್ದವು. ಬೀದಿಗಳಲ್ಲಿದ್ದ ಅಂಗಡಿಗಳು ಸಾಮಾನುಗಳಿಂದ ತುಂಬಿಕೊಂಡಿದ್ದವು. ಜಲ್ಲಿಯನ್ನು ಅಮೂಲ್ಯ ವಸ್ತು ಎಂಬಂತೆ ಚೀಲಗಳಲ್ಲಿ ತುಂಬಿಕೊಂಡು ಜೋಪಾನವಾಗಿ ಇರಿಸಿಕೊಂಡಿದ್ದರು. ಕಲ್ಲುನಾಡಾದ ಹಂಪಿಯಿಂದ ಹೋದ ನನಗಂತೂ ಅದನ್ನು ಕಂಡು ಸಂತೋಷವಾಯಿತು. ಅನೇಕ ಭಾರೀ ಕಲ್ಲು ಹೊತ್ತ ದೊಡ್ಡದೋಣಿಗಳು ಜೆಟ್ಟಿಗಳಲ್ಲಿ ನಿಂತಿರುವುದನ್ನು ಕಂಡಿದ್ದೆವು. ಅವೆಲ್ಲ ಮಂಗಳೂರಿನಿಂದ ಬಂದಿದ್ದವು. ಒಂದು ಕಡೆ ಕೊಬ್ಬರಿ ಮಂಡಿಗಳಿದ್ದವು. ಅದರ ಸುತ್ತ ಕೊಬ್ಬರಿ ಎಣ್ಣೆಯ ಗಮಲು ತುಂಬಿಕೊಂಡಿತ್ತು. ಇಲ್ಲಿನ ಮುಖ್ಯ ವ್ಯಾಪಾರವೆಂದರೆ ಕೊಬ್ಬರಿ ಮತ್ತು ತೆಂಗಿನ ನಾರಿನದು ಅನಿಸುತ್ತದೆ. ಹಡಗು ಕಟ್ಟಿಸಿ ಸಮುದ್ರ ವ್ಯಾಪಾರ ಮಾಡುತ್ತಿದ್ದ ಟಿಪ್ಪುವಿಗೆ ಇಲ್ಲಿನ ತೆಂಗಿನನಾರು ಬಹಳ ಮುಖ್ಯವಾಗಿತ್ತು. ಸಿಕ್ಕ ಜನರೊಡನೆ ಮಾತಾಡುತ್ತಾ ಹೋದೆವು. ಹೆಚ್ಚಿನವರಿಗೆ ಮಾಪ್ಳಾ ಬಿಟ್ಟು ಬೇರೆ ಭಾಷೆ ಬಾರದು. ಕೊಲ್ಲಿ ದೇಶಗಳಿಗೆ ಹೋಗಿಬರುವ ಕಾರಣದಿಂದಲೋ ಟೀವಿಗಳಿಂದಲೋ ಹಿಂದಿ ಕೆಲವರಿಗೆ ಬರುತ್ತದೆ.

ದ್ವೀಪಗಳ ಜೀವನವನ್ನು ನೋಡುತ್ತಾ ಹೋದರೆ ಬೇಗ ಏಕತಾನತೆ ಬರುತ್ತದೆ. ಒಂದು ದ್ವೀಪ ಮತ್ತೊಂದರ ಹಾಗೇ ಕಾಣುತ್ತದೆ. ಅದೇ ತೆಂಗು, ಅದೇ ಕಡಲು, ಅದೇ ಬೆಸ್ತರು, ಅವವೇ ಲಗೂನುಗಳು, ಅವೇ ಮರಕ್ಕೆ ಕಟ್ಟಿದ ಮೇಕೆಗಳು. ಸಂಜೆಯಾಗುತ್ತಿತ್ತು. ಸೂರ್ಯಪ್ಪನ ಹೊಂಗಿರಣಗಳು ತೆಂಗುಕಾಂಡಗಳ ಮೂಲಕ ನುಸುಳಿ ದ್ವೀಪಗಳ ಒಳಗೆ ನೆಳಲಿನ ನಕ್ಷೆ ಬಿಡಿಸಿದ್ದವು. ನಾವು ಹೋಗಿದ್ದು ಬೇಸಗೆಯಲ್ಲಿ ಸುಡುವ ಬಿಸಿಲಿಗೆ ಬಳಲಿದ್ದ ನಾವು ಸಂಜೆಗೆ ತೀಡುತ್ತಿದ್ದ ತಂಗಾಳಿ ಮೂಸುತ್ತಾ ನಡೆಯುತ್ತಾ ಹೋದೆವು. ಅಷ್ಟು ಹೊತ್ತಿಗೆ ಯಾರೋ ಒಬ್ಬ ಸೈಕಲ್ಲಿನ ಮೇಲೆ ಬರುತ್ತಿದ್ದವನು, ದ್ವೀಪಕ್ಕೆ ಹೊಸಬರಂತಿದ್ದ ನಮ್ಮನ್ನು ನೋಡಿ ಟೂರಿಸ್ಟಾ? ಎಂದು ಕೇಳಿದೆ. ‘ಅಯೋ! ಟಿಪ್ಪುಸುಲ್ತಾನ ಇಷ್ಟು ಹೊತ್ತಿಗೆ ಹೋಗಿರಬಹುದು’ ಎಂದ. ಅವನು ನೆಂಟರನ್ನು ದೋಣಿಯಲ್ಲಿ ಹತ್ತಿಸಿ ಮರಳಿಬರುತ್ತಿದ್ದ; ಎದೆ ಧಸಕ್ಕೆಂದಿತು. ನಮ್ಮ ಬಣ್ಣಗೆಟ್ಟ ಮುಖಗಳನ್ನು ಕಂಡು ‘ಸಿಕ್ಕರೂ ಸಿಗಬಹುದು ಓಡಿ’ ಎಂದ. ‘ಜೆಟ್ಟಿ ಎಷ್ಟು ದೂರ?’ ಎನ್ನಲು ‘ಮೂರು ಕಿಮಿ! ‘ಯಾವುದಾದರೂ ಆಟೋಗೀಟೋ…?‘ ಇಲ್ಲೆ ಇಲ್ಲೆ ದ್ವೀಪಗಳಲ್ಲಿ ತಿರುಗುವಾಗ ಎಲ್ಲಿ ಹೋಗುತ್ತೇವೆ ಎನ್ನುವುದು ಗೊತ್ತಾಗುವುದಿಲ್ಲ. ದ್ವೀಪ ದುಂಡಗೆ ಇರುತ್ತದೆ. ರಸ್ತೆಗಳು ತಿರುಗು ಮುರುವಾಗಿ ಇರುತ್ತವೆ-ನುಲಿದುಕೊಂಡ ತೆಂಗಿನಮರಗಳಂತೆ. ಎತ್ತಹೋದರೂ ಒಂದೇ ದೃಶ್ಯವಾದ್ದರಿಂದ ಬಂದ ದೂರ ಕೂಡ ಗೊತ್ತಾಗುವುದಿಲ್ಲ. ನಾವು ಜೆಟ್ಟಿಗೆ ಹತ್ತಿರವೇ ಇರಬಹುದೆಂದುಕೊಂಡಿದ್ದೆವು. ಆದರೆ ಇಷ್ಟು ದೂರ ಅದೂ ವಿರುದ್ಧ ದಿಕ್ಕಿನಲ್ಲಿ ಬಂದಿದ್ದೇವೆಂದು ನಂಬಲಾಗಲಿಲ್ಲ. ತಪ್ಪಿನ ಅರಿವಾಗಿ ಓಡತೊಡಗಿದೆವು. ಎಷ್ಟು ಓಡಿದರೂ ಅಲ್ಲೆ ಇರುವಂತೆ ಅನಿಸಿತು. ಎದೆ ಢವಢವ ಎನ್ನುತ್ತಿತ್ತು.

ಒಳಗೊಳಗೆ ಹಡಗು ತಪ್ಪಿದ್ದು ಒಳ್ಳೇಯದೇ ಆಯಿತು ಎಂಬ ವಿಚಿತ್ರವಾದ ಸಂತೋಷವೂ ಆಗುತ್ತಿತ್ತು. ಹಾಳೂ ಟೂರಿಸಂನವರು ತೋರಿಸಿದ್ದು ಮೂರೇ ದ್ವೀಪ. ಅವುಗಳಲ್ಲಿ ಒಂದನ್ನಾದರೂ ವ್ಯವಧಾನದಿಂದ ನೋಡಲು ಬಿಟ್ಟಿರಲಿಲ್ಲ. ನೋಡಬೇಕಾದ ದ್ವೀಪಗಳು ಇನ್ನೂ ಅನೇಕ ಇದ್ದವು. ಕಡಮತ್ ಅಪೂರ್ವ ಹವಳಗಳಿರುವ ದ್ವೀಪ. ಅಂದ್ರೋತ್ ಮಾಟಮಂತ್ರಗಳಿಗೆ ಖ್ಯಾತವಂತೆ. ಹಕ್ಕಿಗಳೇ ನೆಲೆಸಿರುವ ಪಕ್ಕಿಪಿಟ್ಟು ಎಂಬ ನಡುಗಡ್ಡೆಯಿದೆ. ಅಲ್ಲೆಲ್ಲಾ ಎಂತೆಂತಹ ಜೀವನದ ಹೋರಾಟ ಇತ್ತೋ? ಇಡೀ ಪ್ರವಾಸವೇ ನನಗೆ ಅರಗುಕ್ಕಾಗಿತ್ತು. ಹಡಗು ತಪ್ಪಲಿ ಎಂದು ಮನಸ್ಸು ಮಿಡಿಯುತ್ತಿತ್ತು. ಆದರೆ ನಮ್ಮ ಲಗೇಜೆಲ್ಲ ಹಡಗಿನಲ್ಲಿತ್ತು.

ಅಷ್ಟು ಹೊತ್ತಿಗೆ ಹಿಂದುಗಡೆಯಿಂದ ಯಾವುದೋ ಜೀಪು ಬಂತು. ಅದು ಜೆಟ್ಟಿಯತ್ತ ಹೋಗುತ್ತಿತ್ತು. ಕೈಯಡ್ಡಮಾಡಿ ಜೆಟ್ಟಿಜೆಟ್ಟಿ ಎಂದು ಕಿರುಚಿದೆವು. ಆತ ನಿಲ್ಲಿಸಿ ಕೂತುಕೊಳ್ಳಿ ಎಂಬಂತೆ ಸನ್ನೆ ಮಾಡಿದ. ಬಹುಶಃ  ಆ ಸೈಕಲ್ಲಿನವನು ನಮ್ಮ ಬಗ್ಗೆ ಹೇಳಿರಬೇಕು. ಒಳಗೆ ಚಿನ್ನಾಭರಣ ಧರಿಸಿದ ಭಾರಿ ಹೆಂಗಸರು ಕೂತಿದ್ದರು. ಹಡಗು ಸಿಗಬಹುದಾ? ಎಂದು ಹಿಂದಿಯಲ್ಲಿ ಕೇಳಿದೆವು. ಅವರಿಗೆ ನಮ್ಮ ಮಾತು ಅರ್ಥವಾಗಲಿಲ್ಲ.

ಜೆಟ್ಟಿಗೆ ಬಂದರೆ ಎಲ್ಲಾ ಖಾಲಿ. ನಮ್ಮ ಜತೆಗಾರ ಪ್ರವಾಸಿಗರೆಲ್ಲಾ ಹೋಗಿಯಾಗಿತ್ತು. ದೋಣಿಗಳೆಲ್ಲಾ ಹೋಗಿದ್ದವು. ಜೆಟ್ಟಿಯ ಸಮೀಪದಲ್ಲಿದ್ದ ಠಾಣೆಯ ಪೋಲಿಸರು ವಾಕಿಟಾಕಿಯಲ್ಲಿ ಮಾತಾಡುತ್ತಿದ್ದರು. ನಾಲ್ಕು ಜನ ತಪ್ಪಿಸಿಕೊಂಡ ಪ್ರವಾಸಿಗರು ದಡದಲ್ಲಿದ್ದಾರೆ ಎಂದು ಅವರು ಹಡಗಿನವರಿಗೆ ಹೇಳಿರಬಹುದೇ? ಎಲ್ಲಿಂದಲೋ ಬಂದ ದೋಣಿಯೊಂದು ನಮ್ಮನ್ನು ವೇಗವಾಗಿ ಹಡಗಿಗೆ ಕರೆದೊಯ್ಯಿತು. ದೂರದಲ್ಲಿ ಕಡಲೊಳಗೆ ಸಣ್ಣ ಬಿಳಿಯ ಚುಕ್ಕಿಯಂತೆ ಟಿಪ್ಪು ಸುಲ್ತಾನ ಅತ್ಯಂತ ಸಹನೆಯಿಂದ ಕಾಯುತ್ತಿತ್ತು.

ಜ್ವಾಲಾಮುಖಿಯಿಂದ ಹುಟ್ಟಿದ ಈ ದ್ವೀಪಗಳ ಚರಿತ್ರೆ ಕಾಣೆಯಾಗಿಲ್ಲ. ಅವುಗಳ ಕಾಲಡಿಯೇ ಸುಪ್ತವಾಗಿ ಸಾವಿನಬೀಜವನ್ನು ಇಟ್ಟುಕೊಂಡು ಕೂತಿವೆ. ಸುಮಾರು ನೂರು ವರ್ಷಗಳಲ್ಲಿ ಈ ದ್ವೀಪಗಳೆಲ್ಲಾ ಮುಳುಗುತ್ತವಂತೆ- ಕುಸಿಯುತ್ತಿರುವ ಕೆಳಗಿನ ಬಂಡೆಗಳಿಂದ ಹಾಗೂ ಏರುತ್ತಿರುವ ಸಮುದ್ರಮಟ್ಟದಿಂದ. ಒಂದು ಕಾಲದ ನಂತರ ಇಲ್ಲಿ ಏನೂ ಇರಲಿಲ್ಲವೆಂಬಂತೆ ನೀರು ತಾಂಡವವಾಡುತ್ತದಂತೆ. ಆದರೇನು? ಬಂಡೆಗಳನ್ನು ಮಂಗಳೂರಿನಿಂದ ತರಿಸಿ ದಂಡೆಗೆ ಜೋಡಿಸಿ ಊರೊಳಗೆ ನೀರು ನುಗ್ಗದಂತೆ ಮಾಡುತ್ತಿದ್ದರು. ಕಾಲದಲೆಗಳ ಜೊತೆ ಮಾಡುವ ಹೋರಾಟದಂತೆ ಮುಳುಗಿಹೋಗಲಿರುವ ಈ ದ್ವೀಪಗಳ ದಂಡೆರಕ್ಷಣೆ ಮಾಡುವುದು ವ್ಯರ್ಥ ಕೆಲಸವಾಗಿತ್ತು. ಆದರೆ ಬರಲಿರುವ ಕರಾಳ ಭವಿಷ್ಯವನ್ನು ನೆನದು ಯಾರೂ ಅಳುತ್ತ ಕೂತಿಲ್ಲ. ಮೀನು ಹಿಡಿಯುತ್ತ, ತೆಂಗಿನಕಾಯಿ ಆರಿಸುತ್ತಾ ಬದುಕುತ್ತಿದ್ದಾರೆ. ಇರುವಷ್ಟು ದಿನ ಖುಶಿಯಾಗಿ ಬದುಕಬೇಕು ಎಂಬ ಆಸೆಯೇ ಲಕ್ಷದ್ವೀಪಗಳನ್ನು ಜೀವಂತಿಕೆಯಲ್ಲಿ ಇಟ್ಟಂತಿದೆ. ಈ ಜೀವಂತಿಕೆಯೇ ಇಲ್ಲಗಳ ನಾಡನ್ನು ಹಲವು ಇದೆಗಳ ನಾಡಾಗಿಸಿದೆ! ಇಲ್ಲದ್ದಿದ್ದರೆ ಕೊಚ್ಚಿಯಲ್ಲಿ ಹಡಗು ಹತ್ತಲು ಯಾಕಷ್ಟು ಜನಜಂಗುಳಿ ನೆರೆಯಬೇಕು?

ಹಡಗು ಹೊರಟಿತು. ಕತ್ತಲಾವರಿಸುತ್ತಿತ್ತು. ಕಲ್ಪನಿಯ ದ್ವೀಪಗಳು ದೂರವಾಗುತ್ತ, ಮುಸುಕಾಗುತ್ತ ಕೊನೆಗೆ ಮರೆಯಾದವು. ಅದರ ಲೈಟ್ ಹೌಸಿನ ಗರಗರ ತಿರುಗುವ ಬೆಳಕು ಮಾತ್ರ ಬಹಳ ದೂರದವರೆಗೆ ಗಳಿಗೆಗೊಮ್ಮೆ ಫಕ್ಕನೆ ಕಾಣಿಸುತ್ತ ಕಣ್ಣು ಮಿಟುಕಿಸುತ್ತಿತ್ತು.

(ಮುಗಿಯಿತು)