ನನ್ನಲ್ಲಿ ಲೇಡೀಸ್ ಹಾಸ್ಟೆಲ್ ಬಗೆಗೊಂದು ಅಸೀಮ ಕುತೂಹಲ ಬೆಳೆದಿತ್ತು. ಹಾಸ್ಟೆಲ್ ಲ್ಲಿ ಹುಡುಗಿಯರ ಸಾಮ್ರಾಜ್ಯ ಹೇಗಿದ್ದೀತು? ಹರಟೆಯ ಹೊತ್ತಲ್ಲಿ ಏನೆಲ್ಲ ವಾಗ್ವಾದ ನಡೀಬಹುದು? ಅಡುಗೆ ಸರೀಗಿಲ್ಲ ಅಂದ್ರೆ ಅಡುಗೆಯವ್ರಿಗೆ ಕ್ಲಾಸ್ ತಗೋತಾರಾ? ಪೊಲಿಟಿಕ್ಸ್ ಬಗ್ಗೆ ಮಾತಾಡ್ತಾರಾ? ಹೊಡೆದಾಟಗಳು ನಡೆದ್ರೆ ಹೇಗೆ ನಡೀತದೆ? ಸಂಚುಗಳು ಹೆಂಗೆ ಎಕ್ಸಿಕ್ಯೂಟ್ ಆಗ್ತವೆ? ರೂಮು ಗಲೀಜು ಇಟ್ಕೊಂಡಿರ್ತಾರಾ ಅಥವಾ ಸಿಕ್ಕಾಪಟ್ಟೆ ನೀಟಾಗಿರ್ತದಾ?… ಹೀಗೆ ತರಹೇವಾರಿ ತರ್ಕಗಳು. ಯುನಿವರ್ಸಿಟಿಗೆ ಕಾಲಿಟ್ಟು ವರ್ಷ ಕಳೆದ ನಂತರ, ನನ್ನ ತಲೆಗೆ ಒಮ್ಮೆಲೇ ಈ ಪ್ರಶ್ನೆಗಳನ್ನು ತಂದು ಸುರಿದದ್ದು 2011ರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಮ್ಯಾಚು. -ಸಹ್ಯಾದ್ರಿ ನಾಗರಾಜ್ ಬರೆಯುವ ‘ಸೊಗದೆ’ ಅಂಕಣ ನಿಮ್ಮ ಓದಿಗೆ.

ಯಾರಾದರೂ ಹುಡುಗಿ ನನ್ನನ್ನು ಗಮನಿಸುತ್ತಿರಬಹುದಾ ಅಂತ ವರ್ಕಿಂಗ್ ವಿಮೆನ್ಸ್ ಹಾಸ್ಟೆಲಿನ ಕಿಟಕಿಗಳನ್ನು ಕಣ್ಣಲ್ಲೇ ಜಾಲಾಡಿದೆ. ಅಂಥದ್ಯಾವುದೂ ಕೀಟಲೆಯ ಕಂಗಳು ಕಾಣಿಸ್ಲಿಲ್ಲ. ಮತ್ತೊಮ್ಮೆ ಆ ಪೋಸ್ಟರ್ನಲ್ಲಿ ಬರೆದಿದ್ದ ಅಕ್ಷರಗಳನ್ನು ಇನ್ನಷ್ಟು ಹತ್ತಿರದಿಂದ ಗಮನಿಸಿದೆ. ಬಹಳ ಸಾವಕಾಶವಾಗಿ, ಚಂದಾತಿಚಂದ ಬರೆದ ಸಾಲು ಅದು. ಎದುರಿನ ಹಾಸ್ಟೆಲಿನ ಯಾರೋ ಹುಡುಗಿಯದೇ ಕರಾಮತ್ತು ಇರ್ಬೇಕು ಅಂದ್ಕೊಂಡು, ನನ್ನ ಪಾಡಿಗೆ ನಾನು ಪೋಸ್ಟರ್ ತೆರವುಗೊಳಿಸಿ ಜಾಗ ಖಾಲಿ ಮಾಡಿದೆ. ಆದರೂ, ಅವತ್ತಿಂದ ಲೇಡಿಸ್ ಹಾಸ್ಟೆಲ್ ಕಡೆಗೆ ಜಾಸೂಸಿ ಕಣ್ಣಿಂದ ನೋಡುವುದು ಹೆಚ್ಚೂಕಮ್ಮಿ ಚಾಳಿಯೇ ಆಗೋಯ್ತು.

ಇದಕ್ಕೆಲ್ಲ ತಳಪಾಯ ಹಾಕಿದ್ದು ‘ಮೋನ್ ಅಂಕಲ್’ ಎಂಬ ಫ್ರೆಂಚ್ ಸಿನಿಮಾ. (ಕುವೆಂಪು ಯುನಿವರ್ಸಿಟಿಯ) ನಮ್ಮ ಡಿಪಾರ್ಟ್ಮೆಂಟ್ನಿಂದ ಪ್ರತಿ ವರ್ಷ ಥೀಮುಗಳನ್ನು ಆಧರಿಸಿದ ಚಲನಚಿತ್ರೋತ್ಸವ ಶುರುವಾಗಿತ್ತು. ಆ ವರ್ಷ ಹಲವು ಭಾಷೆಯ ಕ್ಲಾಸಿಕ್ಸ್ಗಳ ಪ್ರದರ್ಶನ. ಅದರಲ್ಲಿ ‘ಮೋನ್ ಅಂಕಲ್’ ಕೂಡ ಒಂದು. ಮೇಲ್ನೋಟಕ್ಕೆ ಚೂರು ಕಾಮಿಡಿ ಅನ್ನಿಸಿದರೂ, ಒಂದು ಕಾಲಘಟ್ಟದ ಫ್ರಾನ್ಸ್ ಜನಜೀವನದ ಮೇಲೆ ಬೆಳಕು ಚೆಲ್ಲುವ ನಿಧಾನಗತಿಯ ಗಂಭೀರ ಸಿನಿಮಾ ಅದು. ಪ್ರದರ್ಶನದ ದಿನ ಚಿತ್ರದ ಕ್ಲೈಮಾಕ್ಸ್ ಹೊತ್ತಿಗೆ ಹಿರೇಮಠ ಹಾಲ್ನಲ್ಲಿ ಉಳಿದಿದ್ದವರು ನಾವೊಂದಷ್ಟು ಮಂದಿ ಸಂಘಟಕರು, ನಮ್ಮದೇ ಡಿಪಾರ್ಟ್ಮೆಂಟಿನ ಮೇಷ್ಟ್ರುಗಳು ಮಾತ್ರ. ತಮಾಷೆ ಅಂದ್ರೆ, ನಮ್ಮ ಕ್ಲಾಸ್ಮೇಟ್ಗಳು ಕೂಡ ಪೇರಿ ಕಿತ್ತಿದ್ರು!

ಚಿತ್ರೋತ್ಸವ ಮುಗಿದ ನಂತರ, ಕ್ಯಾಂಪಸ್ಸಿನುದ್ದಕ್ಕೂ ಅಲ್ಲಲ್ಲಿ ಮರಗಳಿಗೆ ಕಟ್ಟಲಾಗಿದ್ದ ಪೋಸ್ಟರ್ ತೆರವುಗಳಿಸುವ ಕಾರ್ಯಾಚರಣೆ. ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್ ಎದುರಿಗೆ ಹಾಕಲಾಗಿದ್ದ ಪೋಸ್ಟರ್ನಲ್ಲಿ, ‘ಮೋನ್ ಅಂಕಲ್’ ಸಿನಿಮಾದ ಚಿತ್ರವನ್ನು ಮಾರ್ಕ್ ಮಾಡಿ, ಒಂದು ಗೆರೆ ಎಳೆದು, ‘ಸಿಕ್ಕಾಪಟ್ಟೆ ಬೋರಿಂಗ್ ಸಿನಿಮಾ’ ಅಂತ ಬರೆಯಲಾಗಿತ್ತು! ತಲೆ ಮೇಲೆ ಗುಡ್ಡ ಬಿದ್ದಿರುವಷ್ಟು ಸೀರಿಯಸ್ಸಾಗಿ ಕೆಲಸ ಮಾಡ್ತಿದ್ದವನಿಗೆ ಉಳ್ಳಾಡಿಕೊಂಡು ನಗು. ಹಿಂದೆಯೇ, ಈ ಮಧುರ ಕಿತಾಪತಿ ಮಾಡಿದ ಹುಡುಗಿ ಯಾರಿರಬಹುದು, ಯಾವ ಡಿಪಾರ್ಟ್ಮೆಂಟ್ ಇರಬಹುದು, ನೋಡೋಕೆ ಹೇಗಿರಬಹುದು, ಎಷ್ಟು ತರಲೆ ಆಗಿರಬಹುದು, ಅವಳ ನಗು ಹೆಂಗಿರಬಹುದು? ಇಂಥದ್ದೊಂದು ಮಸ್ತ್ ಐಡಿಯಾ ಅವಳಿಗೆ ಹೇಗೆ ಬಂದಿರಬಹುದು… ಅಂತೆಲ್ಲ ಬಣ್ಣಬಣ್ಣದ ಆಲೋಚನೆ. ‘ಅಪಾಯಿಂಟ್ಮೆಂಟ್ ವಿತ್ ಲವ್’ ಕತೆಯಲ್ಲಿ, ಹೊಲಿಸ್ ಮೆನೆಲ್ ಹಸ್ತಾಕ್ಷರ ಕಂಡಾಗ ಲೆಫ್ಟಿನೆಂಟ್ ಬ್ಲಾಂಡ್ಫೋರ್ಡ್ನಿಗೆ ಆದಂತೆಯೇ ಇಲ್ಲಿ ನನಗೂ ಆಗಿಹೋಗಿತ್ತು. ಆದರೆ, ಗೊತ್ತಿದ್ದ, ಕಂಡಿದ್ದ, ಕೇಳಿದ್ದ, ಓದಿದ್ದ ಯಾವುದೇ ಅಸ್ತ್ರ ಹೂಡಿ ಜಾಸೂಸಿ ಮಾಡಿದ್ರೂ, ಪೋಸ್ಟರ್ ಮೇಲೆ ಬರೆದ ಹುಡುಗಿ ಯಾರು ಅಂತ ಪತ್ತೆ ಮಾಡೋಕ್ಕಾಗ್ಲಿಲ್ಲ.
ಅಸಲಿಗೆ, ಈ ಜಾಸೂಸಿ ಶುರುಮಾಡುವ ಮುನ್ನವೇ, ಲೇಡೀಸ್ ಹಾಸ್ಟೆಲ್ ಬಗೆಗೊಂದು ಅಸೀಮ ಕುತೂಹಲ ಬೆಳೆದಿತ್ತು. ಹಾಸ್ಟೆಲ್ನಲ್ಲಿ ಹುಡುಗಿಯರ ಸಾಮ್ರಾಜ್ಯ ಹೇಗಿದ್ದೀತು? ಹರಟೆಯ ಹೊತ್ತಲ್ಲಿ ಏನೆಲ್ಲ ವಾಗ್ವಾದ ನಡೀಬಹುದು? ಅಡುಗೆ ಸರೀಗಿಲ್ಲ ಅಂದ್ರೆ ಅಡುಗೆಯವ್ರಿಗೆ ಕ್ಲಾಸ್ ತಗೋತಾರಾ? ಪೊಲಿಟಿಕ್ಸ್ ಬಗ್ಗೆ ಮಾತಾಡ್ತಾರಾ? ಹೊಡೆದಾಟಗಳು ನಡೆದ್ರೆ ಹೇಗೆ ನಡೀತದೆ? ಸಂಚುಗಳು ಹೆಂಗೆ ಎಕ್ಸಿಕ್ಯೂಟ್ ಆಗ್ತವೆ? ರೂಮು ಗಲೀಜು ಇಟ್ಕೊಂಡಿರ್ತಾರಾ ಅಥವಾ ಸಿಕ್ಕಾಪಟ್ಟೆ ನೀಟಾಗಿರ್ತದಾ?… ಹೀಗೆ ತರಹೇವಾರಿ ತರ್ಕಗಳು. ಯುನಿವರ್ಸಿಟಿಗೆ ಕಾಲಿಟ್ಟು ಹೆಚ್ಚೂಕಮ್ಮಿ ವರ್ಷ ಕಳೆಯುತ್ತ ಬಂದಿದ್ದರೂ, ಕ್ಯಾಂಪಸ್ನಲ್ಲಿದ್ದ ಮೂರು ಲೇಡೀಸ್ ಹಾಸ್ಟೆಲ್ ಬಗೆಗೆ ಎಳ್ಳಷ್ಟೂ ಕುತೂಹಲ ಇಲ್ಲದಿದ್ದ ನನ್ನ ತಲೆಗೆ ಒಮ್ಮೆಲೇ ಇಷ್ಟೆಲ್ಲವನ್ನೂ ತಂದು ಸುರಿದದ್ದು 2011ರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಮ್ಯಾಚು.

ವರ್ಕಿಂಗ್ ವಿಮೆನ್ಸ್ ಹಾಸ್ಟೆಲ್ ಎದುರಿಗೆ ಹಾಕಲಾಗಿದ್ದ ಪೋಸ್ಟರ್ನಲ್ಲಿ, ‘ಮೋನ್ ಅಂಕಲ್’ ಸಿನಿಮಾದ ಚಿತ್ರವನ್ನು ಮಾರ್ಕ್ ಮಾಡಿ, ಒಂದು ಗೆರೆ ಎಳೆದು, ‘ಸಿಕ್ಕಾಪಟ್ಟೆ ಬೋರಿಂಗ್ ಸಿನಿಮಾ’ ಅಂತ ಬರೆಯಲಾಗಿತ್ತು! ತಲೆ ಮೇಲೆ ಗುಡ್ಡ ಬಿದ್ದಿರುವಷ್ಟು ಸೀರಿಯಸ್ಸಾಗಿ ಕೆಲಸ ಮಾಡ್ತಿದ್ದವನಿಗೆ ಉಳ್ಳಾಡಿಕೊಂಡು ನಗು.

ಇನ್ನೇನು ಮಧ್ಯರಾತ್ರಿ ದಾರಿಯಲ್ಲಿತ್ತು. ಯುವರಾಜ್ ಮತ್ತು ಧೋನಿ ಸೇರ್ಕಂಡು, ಆಗಷ್ಟೇ ಬಸ್ಸಾರು-ಮುದ್ದೆ ಉಂಡು ಕಲ್ಲು ಬೀಸೋಕೆ ಕುಂತವ್ರ ಥರ ಯರ್ರಾಬಿರ್ರಿ ಆಟ ಆಡಿ ಇಂಡಿಯಾಗೆ ಚಾಂಪಿಯನ್ ಪಟ್ಟ ತೊಡಿಸಿದ್ರು. ಆಮೇಲೆ ಸೆಲೆಬ್ರೇಷನ್ನೋ ಸೆಲೆಬ್ರೇಷನ್ನು. ತಬ್ಬಿಕೊಂಡು ಕುಣಿಯೋದು, ಯಾವ್ಯಾವ್ ಕಡೇನೋ ನೋಡ್ತಾ ಕಣ್ಣೀರಧಾರೆ ಹರಿಸೋದು, ನೆಲದಲ್ಲಿ ಉರುಳಾಡೋದು, ತೆಂಡೂಲ್ಕರನನ್ನು ಎತ್ಕೊಂಡು ಮೆರೆಸಿದ್ದು, ಪೆಕರನಂತೆ ನಿಂತಿದ್ದ ಶರದ್ ಪವಾರ್ನಿಂದ ಟ್ರೋಫಿಯನ್ನು ಹೆಚ್ಚೂಕಮ್ಮಿ ಕಸಿದುಕೊಂಡು ಶಾಂಪೇನ್ನಲ್ಲಿ ಸ್ನಾನ ಮಾಡಿಸಿದ್ದು… ಇದನೆಲ್ಲ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದ ನಮ್ಮ ಓಲ್ಡ್ ಬಾಯ್ಸ್ ಹಾಸ್ಟೆಲ್ಲಿನ ಹುಡುಗರ ಕೈಯಲ್ಲಿ ಊಟದ ತಟ್ಟೆಗಳು ಹಲ್ಕಿರಿದುಕೊಂಡು ಕುಂತಿದ್ದವು. ಅತ್ತ, ಎಲ್ರೂ ಸಮಾಧಾನ ಮಾಡಿಕೊಂಡು ವಾಂಖೇಡೆಯಿಂದ ಹೊರನಡೆಯೋಕೆ ತಯಾರಾಗುವ ಹೊತ್ತಿಗೆ, ಇತ್ತ, ಮೂರ್ಛೆಯಿಂದ ಆಗಷ್ಟೆ ಎಚ್ಚರಾದವರಂತೆ ನಮ್ಮ ಹುಡುಗರೂ ಊಟದ ಹಾಲ್ನಿಂದ ರೂಮುಗಳ ಕಡೆಗೆ ಮೆಲು ನಡಿಗೆ ಆರಂಭಿಸಿದರು.

ಪ್ರತಿದಿನ ರಾತ್ರಿ ಊಟವಾದ ಮೇಲೆ ಹಾಸ್ಟೆಲ್ನಿಂದ, ಪೋಸ್ಟ್ ಆಫೀಸ್ ಇದ್ದ ಸರ್ಕಲ್ವರೆಗೆ ಒಂದು ರೌಂಡ್ ವಾಕ್ ಹೋಗಿಬರೋದು ಓಲ್ಡ್ ಬಾಯ್ಸ್ ಹಾಸ್ಟೆಲ್ ಹುಡುಗರ ಜನ್ಮಸಿದ್ಧ ಹಕ್ಕೇ ಆಗಿತ್ತು. ವರ್ಲ್ಡ್ ಕಪ್ ಗೆದ್ದ ಖುಷಿ ಬೇರೆ. ಇಡೀ ಹಾಸ್ಟೆಲ್ ಹುಡುಗರು ಹೆಚ್ಚೂಕಮ್ಮಿ ಒಂದೇ ಗುಂಪಿನಲ್ಲಿ ವಾಕ್ ಶುರುಮಾಡಿದರು. ಮುನಾಫ್ ಪಟೇಲನ ಗಾಂಚಲಿ, ಯುವರಾಜ್ ಸ್ಟೈಲು, ಧೋನಿಯ ಹೆಲಿಕಾಪ್ಟರ್ ಶಾಟು, ಜಹೀರ್ನ ಚಮತ್ಕಾರಿ ಬೌಲಿಂಗ್ ಸ್ಪೆಲ್ಲು, ಜಯವರ್ಧನೆ ಸೆಂಚುರಿ, ಪರೇರಾ ಎಸೆತಗಳು, ದಿಲ್ಶಾನ್ ಅನ್ಯಾಯವಾಗಿ ಔಟಾಗಿದ್ದು… ಹಿಂಗೆ ಒಂದೊಂದು ದಿಕ್ಕಿನಿಂದಲೂ ಒಂದೊಂದು ವಿಷಯದ ಸೊಗಸಾದ ವಿವರಣೆ. ಯಾರಾದರೂ ಕೇಳಿಸಿಕೊಂಡಿದ್ರೆ, ಇವೆಲ್ಲ ಸೀದಾ ವಾಂಖೇಡೆಯಿಂದಲೇ ಬರ್ತಿವೆ ಅಂತ ಸಲೀಸಾಗಿ ನಂಬಿಬಿಡುವಷ್ಟು ಜೋರಿತ್ತು ಮಾತುಕತೆ.

ಪೋಸ್ಟ್ ಆಫೀಸ್ ಸರ್ಕಲ್ ಬಳಿಯ ಆಲದಮರದ ಅಡಿಯಲ್ಲಿ ಎಲ್ಲರೂ ನ್ಯಾಯವಾಗಿ ಯೂ-ಟರ್ನ್ ಏನೋ ತಗೊಂಡ್ರು. ಆದರೆ, ಗುಂಪಿನ ಬಾಲದಲ್ಲಿದ್ದ ನಾಲ್ಕೈದು ಮಂದಿಗೆ, ಇನ್ನೂ ದೀಪ ಉರಿಯುತ್ತಿದ್ದ ಲೇಡೀಸ್ ಹಾಸ್ಟೆಲ್ ಕಂಡೊಡನೆ ಅದೇನಾಯಿತೋ ಏನೋ, ಕಿವಿ ಗಡಚಿಕ್ಕುವಂತೆ ಒಂದರ ಹಿಂದೊಂದು ಶಿಳ್ಳೆ ಮೊಳಗಿದವು. ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಲೇಡೀಸ್ ಹಾಸ್ಟೆಲ್ ಒಳಗಿಂದಲೂ ಶಿಳ್ಳೆ ಕೇಳಿಸಿದ್ದೇ ತಡ ಹುಡುಗರು ರೊಚ್ಚಿಗೆದ್ದರು. ಧೋನಿ, ಯುವರಾಜ್, ಜಹೀರ್, ಸಚಿನ್, ಹರ್ಭಜನ್, ಗ್ಯಾರಿ ಕರ್ಸ್ಟನ್, ಟೀಮ್ ಇಂಡಿಯಾ ಹೆಸರಿನಲ್ಲಿ ಜಯಘೋಷಗಳು. “ಹೇಯ್ ಹೇಯ್…” ಅಂತೊಂದು ಗುಂಪುಸನ್ನಿಯ ಕೂಗು. ಇದಕ್ಕೆ ಸರಿಯಾಗಿ ಲೇಡೀಸ್ ಹಾಸ್ಟೆಲ್ನಿಂದಲೂ ಜಯಘೋಷ, ಶಿಳ್ಳೆ, ಕೂಗು. ತಗೋ… ಹಾಸ್ಟೆಲ್ನಿಂದ ವಾಕ್ ಹೊರಡುವಾಗ ಬಾಲದಲ್ಲಿದ್ದ ಗುಂಪು, ಇದೀಗ ಲೇಡೀಸ್ ಹಾಸ್ಟೆಲ್ ಕಡೆಗೆ ಲೀಡ್ ತೆಗೆದುಕೊಂಡಿತು!

ನಾವೆಲ್ಲ ಒಂದಷ್ಟು ಮಂದಿ ಜೂನಿಯರ್ಸ್ ದಂಗಾಗಿ, ನಿಂತಲ್ಲೇ ನಿಂತ್ವಿ. ಸೆಕ್ಯುರಿಟಿಯವ್ರು ಜೋರು ವಿಸಿಲ್ ಹಾಕುತ್ತ, ಸುತ್ತಮುತ್ತ ಇದ್ದ ತಮ್ಮ ಸಹೋದ್ಯೋಗಿಗಳನ್ನು ಕರೆಸಿಕೊಂಡ್ರು. ಗುಂಪಿನ ಮುಂಚೂಣಿಯಲ್ಲಿ ಇದ್ದವರ ಮನವೊಲಿಸುವ ಕೆಲಸ ಶುರುವಾಯ್ತು. ಅಷ್ಟೊತ್ತಿಗೆ ವಾರ್ಡನ್ ಗೀತಾ ಮೇಡಂ ಕ್ವಾಟ್ರರ್ಸ್ನಿಂದ ಓಡಿಬಂದವರೇ, ಹಾಸ್ಟೆಲ್ ಎದುರಿನ ಬೀದಿ ದೀಪ ಆಫ್ ಮಾಡಿಸಿ, “ಎಲ್ರೂ ಹೊರಡಿ, ಸಾಕು,” ಅಂತ ಗುಟುರು ಹಾಕಿದರು. ಎರಡೂ ಬದಿಯ ಶಿಳ್ಳೆ, ಜಯಘೋಷ ಇದ್ದಕ್ಕಿದ್ದಂತೆ ರಾತ್ರಿಯ ಕೆರೆನೀರಿನಷ್ಟು ತಣ್ಣಗಾಗಿ, ಅದಾದ ಐದೇ ನಿಮಿಷದಲ್ಲಿ ವಿಜಯೋತ್ಸವದ ನಡಿಗೆಗೆ ಸಂಪೂರ್ಣ ತೆರೆ ಬಿದ್ದಿತ್ತು. ಈ ಘಟನೆಯ ನಂತರವೇ ಲೇಡೀಸ್ ಹಾಸ್ಟೆಲ್ ಬಗೆಗೆ ಅಷ್ಟೆಲ್ಲ ಕುತೂಹಲದ ಗುಚ್ಛ ತಲೆಯಲ್ಲಿ ಚಿಗುರೊಡೆದದ್ದು.

ಲೇಡೀಸ್ ಹಾಸ್ಟೆಲ್ ಮಾಹೋಲ್ ಬಗೆಗೆ ನನ್ನೊಳಗೆ ಕುತೂಹಲದ ಕಲಹ ಹುಟ್ಟುಹಾಕಿದ ಓಲ್ಡ್ ಬಾಯ್ಸ್ ಹಾಸ್ಟೆಲ್ ಹುಡುಗರ ಐತಿಹಾಸಿಕ ನಡಿಗೆ (2011ರ ಏ.2) ಮತ್ತು ‘ಮೋನ್ ಅಂಕಲ್’ ಪೋಸ್ಟರ್ ಪ್ರಸಂಗದ (2012ರ ಫೆಬ್ರವರಿ) ನಡುವೆ ಒಂದು ಮಹತ್ವದ ಘಟನೆ ನಡೆದಿತ್ತು. 2011ರ ಅಕ್ಟೋಬರ್ 2, ಭಾನುವಾರ. ಜರ್ನಲಿಸಂ ಕಲೀತಿದ್ದಾಗಿನ ಕಿಡಿಗೇಡಿ ಬುದ್ಧಿ ಇತ್ತಲ್ಲ, ಒಂದು ಐಡಿಯಾ ಹೊಳೆಯಿತು. ಗಾಂಧಿ ಜಯಂತಿ ಭಾನುವಾರ ಬಂದಿದ್ದರಿಂದ ಆಚರಣೆಯಲ್ಲಿ ಏನು ವ್ಯತ್ಯಾಸವಾಯ್ತು, ಆಚರಿಸುವ ಮಂದಿಗೆ ಎಷ್ಟರಮಟ್ಟಿಗೆ ಆಸಕ್ತಿ ಇತ್ತು ಅಂತೊಂದು ಸ್ಟೋರಿ ಮಾಡುವ ಅನ್ನಿಸಿ, ಕಾರ್ಯಾಚರಣೆ ಶುರು. ಯುನಿವರ್ಸಿಟಿ ಆಸುಪಾಸಿನ ಎರಡು ಗ್ರಾಮ ಪಂಚಾಯ್ತಿ ಆಫೀಸು, ಶಾಲೆ-ಕಾಲೇಜು ಮತ್ತು ನಮ್ಮ ಕ್ಯಾಂಪಸ್… ಇಷ್ಟೂ ಕಡೆ ಅಡ್ಡಾಡಿ ಮಾಹಿತಿ ಸಂಗ್ರಹ, ಮಾತುಕತೆ ನಡೆಸಿದ್ವಿ. ಕ್ಯಾಂಪಸ್ ಕ್ವಾಟ್ರರ್ಸ್ನಲ್ಲಿ ಓಡಾಡುವಾಗ, ಅಲ್ಲೊಂದೆರಡು ಬಿಲ್ಡಿಂಗ್ನಲ್ಲಿ ಸ್ಟೂಡೆಂಟ್ಸ್ ಕೂಡ ಇದ್ದಾರೆ ಅನ್ನೋ ಸುದ್ದಿ ಸಿಕ್ತು. ಸಹಜವಾಗಿ ಹೀಗೆ ಮಾತನಾಡಿಸುವಾಗ, ಭಟ್ಕಳದ ಹುಡುಗಿಯೊಬ್ಬಳು ಎಷ್ಟು ಖಡಕ್ಕಾಗಿ ಮಾತನಾಡಿದಳು ಎಂದರೆ, ನಾನಂತೂ ಆ ಕ್ಷಣವೇ ಸಂಪೂರ್ಣ ಶರಣಾಗಿದ್ದೆ!

ಮರುದಿನ ನಮ್ಮ ಡಿಪಾರ್ಟ್ಮೆಂಟ್ ಲ್ಯಾಬ್ ಜರ್ನಲ್ನಲ್ಲಿ ನ್ಯೂಸ್ ಸ್ಟೋರಿ ಪ್ರಕಟವಾಯ್ತು. ಅದರಲ್ಲಿ ಅವಳ ಮಾತುಗಳೂ ಇದ್ದವು. ಜರ್ನಲ್ನ ಎರಡು ಕಾಪಿ ಎತ್ಕೊಂಡು ಕ್ವಾಟ್ರರ್ಸ್ ಕಡೆ ವೇಗವಾಗಿ ನಡೆದು, ಆಕೆಯ ಕೈಗೊಂದು ಪ್ರತಿ ಇಟ್ಟು, ಥ್ಯಾಂಕ್ಸ್ ಹೇಳಿ ಬಂದೆ. ಮಾತಾಡಿಸುವಾಗ, ತನ್ನದು ಪೊಲಿಟಿಕಲ್ ಸೈನ್ಸ್ ಡಿಪಾರ್ಟ್ಮೆಂಟ್ ಅಂತಲೂ, ಮೊದಲ ವರ್ಷದ ವಿದ್ಯಾರ್ಥಿ ಅಂತಲೂ ಹೇಳಿಕೊಂಡಿದ್ದಳು. ಅಂದರೆ, ನಮ್ಮದೇ ಬಿಲ್ಡಿಂಗು. ಆದರೆ, ಎಂದೂ ಕಂಡೇ ಇರಲಿಲ್ಲ! ಮರುದಿನ ಇದನ್ನೇ ಯೋಚಿಸುತ್ತ ಡಿಪಾರ್ಟ್ಮೆಂಟ್ ಕಡೆ ಹೆಜ್ಜೆ ಹಾಕುತ್ತಿದ್ದರೆ, ಎದುರಲ್ಲಿಯೇ ಆಕೆ! ನಂತರದಲ್ಲಿ ಈ ದೃಶ್ಯ ಹೆಚ್ಚೂಕಡಿಮೆ ದಿನವೂ ಪುನರಾವರ್ತನೆ ಆಗತೊಡಗಿತು. ಕ್ರಮೇಣ, ನಮ್ಮಿಬ್ಬರ ನಡುವಿನ ಭೇಟಿ, ಮಾತು, ನಗು, ಚರ್ಚೆ ಮತ್ತು ಅವಳೆಡೆಗಿನ ಆಕರ್ಷಣೆ ಹೆಚ್ಚುತ್ತಲೇ ಹೋಯ್ತು.

ರಾಜಕೀಯ ಸಂಗತಿಗಳ ಕುರಿತ ಅವಳ ಆಲೋಚನೆ, ವಿಶ್ಲೇಷಣೆಗಳು ಎಷ್ಟು ಹರಿತ ಮತ್ತು ನಿಷ್ಠುರವಾಗಿರುತ್ತಿದ್ದವು ಎಂದರೆ, ಎಷ್ಟೋ ಬಾರಿ ನಾನು ಮರುಮಾತಾಡುವ ಅವಶ್ಯಕತೆಯೇ ಇರುತ್ತಿರಲಿಲ್ಲ! ಇದುವರೆಗಿನ ಬದುಕಲ್ಲಿ ನಾನು ಅತ್ಯಂತ ಹೆಚ್ಚು ರಾಜಕೀಯ ಚರ್ಚೆ ಮಾಡಿರೋದು ಅವಳೊಟ್ಟಿಗೇ. ಈ ಭಟ್ಕಳದ ಬಾಲೆಯಿಂದಾಗಿ ಲೇಡೀಸ್ ಹಾಸ್ಟೆಲ್ ಒಳಗಿನ ಮಾಹೋಲ್ ಹೆಂಗಿರುತ್ತೆ ಅಂತ ಡೀಟೇಲಾಗಿ ಪರಿಚಯವಾಯ್ತು. ಕ್ಯಾಂಪಸ್ ಹೆಣ್ಣುಮಕ್ಕಳ ಬಿಡುವಿನ ಮಾತುಕತೆಗಳಲ್ಲಿ ರಾಜಕೀಯ ಚರ್ಚೆ ತೀರಾ ಸಾಮಾನ್ಯ ಎಂಬ ಸಂಗತಿ ಗೊತ್ತಾಯ್ತು.

2012ರ ಚಲನಚಿತ್ರೋತ್ಸವ ನಡೆಯುವ ಹೊತ್ತಿಗೆ ಆಕೆ ನನ್ನ ಆತ್ಮೀಯ ಗೆಳತಿ. ನನ್ನಲ್ಲಿ ಆಕೆಯ ಬಗೆಗಿರುವುದು ಪ್ರೀತಿಯಾ ಎಂಬ ಆಲೋಚನೆಯಲ್ಲಿ ಇರುತ್ತಿದ್ದ ದಿನಗಳವು. ಹಾಗಾಗಿ, ಕುವೆಂಪು ಪ್ರತಿಮೆ ಬಳಿ ಕುಂತಿದ್ದಾಗೊಮ್ಮೆ, ಆಕೆಯನ್ನು ರೇಗಿಸಲೆಂದೇ, ‘ಮೋನ್ ಅಂಕಲ್’ ಪೋಸ್ಟರ್ ಪ್ರಸಂಗ ಹೇಳಿ, ‘ಅಪಾಯಿಂಟ್ಮೆಂಟ್ ವಿತ್ ಲವ್’ ಕತೆಯನ್ನೂ ಸೇರಿಸಿದೆ. ಯಾವಾಗಲೂ ಚಟಪಟ ಮಾತನಾಡುತ್ತಿದ್ದವಳು ಎತ್ತಲೋ ನೋಡತೊಡಗಿದಳು. ನನಗೆ ಗಾಬರಿ. ಆಕೆ ತಿರುಗಿದ್ದ ಕಡೆಗೆ ಹೋಗಿ ಮೊಗ ದಿಟ್ಟಿಸಿದರೆ ತಡೆಹಿಡಿದು ನಗುತ್ತಿದ್ದಾಳೆ! ನನ್ನ ಪೆಚ್ಚು ಮುಖ ಕಂಡಾಕ್ಷಣ ಅವಳ ನಗು ಇನ್ನೂ ಜೋರಾಯ್ತು.

ಅವಳ ನಗುವನ್ನು ಕಣ್ತುಂಬಿಕೊಳ್ಳುತ್ತ, ಕರೆಂಟು ತಾಗಿದ ಕಾಗೆಯಂತೆ ಸ್ವಲ್ಪ ಹೊತ್ತು ಹಾಗೆಯೇ ಅಲುಗಾಡದೆ ಕುಂತಿದ್ದೆ. ಕೊನೆಗೆ ಅವಳೇ ಸುಧಾರಿಸಿಕೊಂಡು ಹೇಳಿದಳು, “ಅಲ್ರೀ, ಅಷ್ಟ್ ಕೆಟ್ಟ ಸಿನಿಮಾನಾ ತೋರ್ಸೋದು? ಪೋಸ್ಟರ್ನಲ್ಲಿ ಹಾಗಂತ ಬರೆದಿದ್ದು ನಾನೇ!” ತಬ್ಬಿಬ್ಬಾಗಿ ಅವಳ ಕಣ್ಣನ್ನೇ ದಿಟ್ಟಿಸಿದೆ. ಹ್ಞಾಂ… ನಿಜ ಹೇಳುತ್ತಿದ್ದಳು. ಆದರೂ ನನಗೆ ನಂಬಿಕೆಯೇ ಬರಲಿಲ್ಲ! “ಎಲ್ಲಿ… ನಿನ್ನ ಹ್ಯಾಂಡ್ ರೈಟಿಂಗ್ ಕಾಣ್ಸು,” ಅಂತ, ಅವಳ ನೋಟ್ಸ್ ತೆರೆದು ಕಣ್ಣಾಡಿಸಿದರೆ, ಥೇಟ್ ಅದೇ ಕೈಬರಹ! ಮತ್ತೆ ಅಚ್ಚರಿಯಿಂದ ಅವಳ ಮೊಗ ದಿಟ್ಟಿಸಿದೆ. ಅವಳ ನಗು ಮತ್ತೆ ಉಕ್ಕಿತು. ಉಫ್…