ಒಟೀಲಾಗೆ ಪ್ರಿಯಕರನ ತಾಯಿಯ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇರುವುರಿಂದ ಅಲ್ಲಿಗೆ ಹೋಗುತ್ತಾಳೆ. ಹತ್ತಾರು ಜನರಿರುವ ಆ ಸಮಾರಂಭದಲ್ಲಿ ಅವಳಿಗೆ ಮುಜುಗರ ಉಂಟಾಗುವಂತಾಗುತ್ತದೆ. ಇದಕ್ಕಿಂತ ಪ್ರಮುಖವಾಗಿ ಒಂದು ಪಕ್ಷ ಅವಳು ಗರ್ಭವತಿಯಾಗಿದ್ದರೆ ಹೇಗೆ ಎನ್ನುವ ಪ್ರಶ್ನೆಗೇ ಸುತರಾಂ ಸಿದ್ಧವಾಗಿರುವುದಿಲ್ಲ. ಇದರಿಂದಾಗಿ ಅವಳ ಸ್ನೇಹಿತೆಯಷ್ಟಲ್ಲದಿದ್ದರೂ ಒಟೀಲಾಳು ಸಹ ತನ್ನ ಪ್ರೇಮ ಪ್ರಕರಣದಲ್ಲಿ ಒಟ್ಟಾರೆಯಾಗಿ ಸಾಕಷ್ಟು ಒತ್ತಡದ ಹಂತದಲ್ಲಿದ್ದಾಳೆ.
ಎ.ಎನ್.‌ ಪ್ರಸನ್ನ ಬರೆಯುವ ‘ಲೋಕ ಸಿನೆಮಾ ಟಾಕೀಸ್‌ʼ ನ ನಾಲ್ಕನೆಯ ಕಂತು 

 

ಎರಡನೇ ಮಹಾಯುದ್ಧದ ನಂತರ ಅನೇಕ ಪೂರ್ವ ಯುರೋಪ್ ರಾಷ್ಟ್ರಗಳು ಕಮ್ಯುನಿಸ್ಟ್ ಆಡಳಿತಕ್ಕೆ ಒಳಗಾದವು. ಅವುಗಳಲ್ಲಿ ಕೆಲವು ಕಮ್ಯುನಿಸ್ಟ್ ದೇಶಗಳು ಬಹಳ ಬೇಗನೆ ಭ್ರಷ್ಟಾಚಾರಕ್ಕೆ ತುತ್ತಾದವರ ಕೈಯಲ್ಲಿತ್ತು ಎಂದು ಹೇಳಲಾಗಿದೆ. ರುಮೇನಿಯ ಈ ಆರೋಪಕ್ಕೆ ತುತ್ತಾಗದೆ ಉಳಿದವುಗಳಿಗಿಂತ ಭಿನ್ನ ರೀತಿಯಲ್ಲಿ ಆಡಳಿತ ವ್ಯವಸ್ಥೆಯನ್ನು ಹೊಂದಿತ್ತು.

ಇದಕ್ಕೆ ಮುಖ್ಯ ಕಾರಣ ಅದರ ಪ್ರಭುತ್ವವನ್ನು ಕಳೆದ ಶತಮಾನದ ಅರವತ್ತನೆ ದಶಕದ ಮಧ್ಯ ಭಾಗದಿಂದ ಆಡಳಿತ ವಹಿಸಿದ ಸೀಸೆಕ್ಯೂ ಸ್ಟಾಲಿನ್ನಿನ ಸಿದ್ಧಾಂತಗಳಿಗೆ ಕಡು ನಿಷ್ಠನಾಗಿದ್ದ. ಅವನು ಆರ್ಥಿಕ ವಲಯದಲ್ಲಿಯೂ ಬಹಳ ಉತ್ತಮವಾದ ನೀತಿಗಳನ್ನು ಜಾರಿಗೆ ತಂದರೂ ಗಂಡು ಹೆಣ್ಣಿನ ಲೈಂಗಿಕ ಜೀವನಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಾವಳಿಗಳನ್ನು ವಿಧಿಸಿದ್ದ. ದೇಶದ ಜನಸಂಖ್ಯೆ ಹೆಚ್ಚಾಗಬೇಕೆಂಬ ಉದ್ದೇಶದಿಂದ ಅಬಾರ್ಷನ್ ವಿರುದ್ಧ ಅತ್ಯಂತ ಕಠಿಣ ನಿಯಮಾವಳಿಗಳನ್ನು ರೂಪಿಸಿದ್ದ. ಅದಕ್ಕೆ ಪ್ರಯತ್ನಪಟ್ಟರೆಂದು ರುಜುವಾತಾದವರಿಗೆ ಐದಾರು ವರ್ಷಗಳ ಜೈಲು ವಾಸವೂ ಉಂಟಾಗುತ್ತಿತ್ತು. ಹೀಗಾಗಿ ಅವಿವಾಹಿತರಿಗೆ ಲೈಂಗಿಕ ಸಂಬಂಧಗಳನ್ನು ಅತ್ಯಂತ ಎಚ್ಚರದಿಂದ ನಿರ್ವಹಿಸಬೇಕಾದ ಅಗತ್ಯವಿತ್ತು. ವಿವಾಹಿತರಿಗೆ ಇದರಿಂದ ಸಮಸ್ಯೆ ಇರಲಿಲ್ಲ. ಅಲ್ಲದೆ ಹೆಚ್ಚು ಮಕ್ಕಳಾದವರಿಗೆ ಪಾರಿತೋಷಕ ಬಹುಮಾನ ಇತ್ಯಾದಿಗಳೆಂದು ನೀಡುತ್ತಿದ್ದ. ವಿಶೇಷ ಸಂಗತಿಯೆಂದರೆ ನಲವತ್ತೈದರ ಒಳಗಿನ ಮಹಿಳೆಯರಿಗೆ ತಾಯಿಯಾಗುವುದನ್ನು ಕಡ್ಡಾಯಗೊಳಿಸಿದ್ದ.

(ಕ್ರಿಸ್ತಿಯಾನ್ ಮುಂಜ್ಯೂ (Cristian Mungiu)

ರುಮೇನಿಯಾದ ಕ್ರಿಸ್ತಿಯಾನ್ ಮುಂಜ್ಯೂ (Cristian Mungiu) ಇಂಗ್ಲಿಷ್ ಸಾಹಿತ್ಯದ ಪದವೀಧರ. ಕೆಲವು ಕಾಲ ರಂಗಭೂಮಿಯಲ್ಲಿದ್ದವನು ಪತ್ರಕರ್ತನೂ ಆದ. ಅನಂತರ ಕ್ರಮೇಣ ದೃಶ್ಯಮಾಧ್ಯಮದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡ. ಆ ಕ್ಷೇತ್ರದಲ್ಲಿ ಹಲಕೆಲವು ಚಿತ್ರ ನಿರ್ಮಾಣದವರ ಸಾಹಚರ್ಯವೂ ದೊರೆತ ನಂತರ ರುಮೇನಿಯಾದ ಹೊಸ ಅಲೆಯ ಚಿತ್ರ ನಿರ್ಮಾಣದ ಮುಖ್ಯಸ್ಥನಾದ. ಕಡು ನಿಷ್ಠುರ ವಾಸ್ತವಕ್ಕೆ ಸಂಬಂಧಿಸಿದ ಚಿತ್ರಗಳನ್ನು ನಿರ್ಮಿಸಬೇಕೆಂಬ ನಿಲುವಿನೊಂದಿಗೆ ಇರುವುದಾಗಿ ಹೇಳಿಕೊಂಡಿದ್ದಾನೆ. ಜೊತೆಗೆ ಯಾವುದೇ ವಿಷಯವಾದರೂ ಅದು ಮೂಲಗುಣಗಳ ವಿವಿಧ ರೂಪಗಳನ್ನು ಒಳಕೊಂಡಿರಬೇಕೆಂಬ ಅಪೇಕ್ಷೆ ಇರುವುದಾಗಿಯೂ ಹೇಳಿಕೊಂಡಿದ್ದಾನೆ.

ಅಧ್ಯಾಪಕನಾಗಿ, ಅನಂತರ ಪತ್ರಕರ್ತವಾಗಿ ವೃತ್ತಿ ಆರಂಭಿಸಿದ ಮುಂಜ್ಯೂ ಅನಂತರ ದೃಶ್ಯ ಮಾಧ್ಯಮದ ಸೆಳೆತದಿಂದಾಗಿ ಬುಕಾರೆಸ್ಟ್ ಫಿಲ್ಮ್ ಇನ್‍ಸ್ಟಿಟ್ಯೂಟ್‍ ನಲ್ಲಿ ಅದರ ಬಗ್ಗೆ ಅಭ್ಯಸಿಸಿದ. ರುಮೇನಿಯಾದ ಹೊಸ ಅಲೆ ಚಿತ್ರ ನಿರ್ಮಾಣದ ಹರಿಕಾರನಾದ. ರಾದು ಮುಂಟೀನ್, ಕಾರ್ನೆಲು ಪೊರುಂಬೊ ಮತ್ತು ಕ್ರಿಸ್ತಿ ಪುಜು ಈ ಪಂಥದ ಇತರ ಪ್ರಮುಖ ನಿರ್ದೇಶಕರು. ಕ್ರಿಸ್ತಿಯಾನ್ ಮುಂಜ್ಯೂ 2002ರಲ್ಲಿ ಆಕ್ಸಿಡೆಂಟ್ ಚಿತ್ರ ನಿರ್ಮಿಸಿದ. ಅನಂತರದ ಪ್ರಯತ್ನದಲ್ಲಿ ತನ್ನ ದೇಶಕ್ಕೆ ಕಾನ್ ಚಿತ್ರೋತ್ಸವದ ಗೋಲ್ಡನ್ ಪಾಮ್ ಪ್ರಶಸ್ತಿಯನ್ನು ದೊರಕಿಸಿಕೊಟ್ಟ ಮೊದಲಿಗ. ಅನಾಥಾಶ್ರಮದಲ್ಲಿದ್ದ ಗೆಳತಿಯರಿಬ್ಬರ ಸ್ನೇಹ ಬಾಂಧವ್ಯವನ್ನು ಕುರಿತ ಇವನ ಎರಡನೆಯ ಚಿತ್ರ ಬಿಯಾಂಡ್ ಹಿಲ್ಸ್ಸ್‍ಗೆ 2012ರ ಕಾನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗೆ ಭಾಜನವಾಗಿದೆ ಮತ್ತು ಅದೇ ಚಿತ್ರದಲ್ಲಿ ಗೆಳೆತಿಯರಾಗಿ ಅಭಿನಯಿಸಿದ ಕಾಸ್ಮಿನಾ ಸ್ಟ್ರಾಟಾನ್ ಹಾಗೂ ಕ್ರಿಸ್ಟಿನಾ ಫ್ಲುಟರ್ ಅವರಿಗೆ ಜಂಟಿಯಾಗಿ ಅತ್ಯುತ್ತಮ ಅಭಿನೇತ್ರಿ ವಿಭಾಗದಲ್ಲಿ ಕಾನ್ ಪ್ರಶಸ್ತಿ ಲಭ್ಯವಾಗಿದೆ.

ಕ್ರಿಸ್ತಿಯಾನ್ ಮುಂಜ್ಯೂ ೪ ಮಂತ್ಸ್‌ ೩ ವೀಕ್ಸ್‌ ಅಂಡ್ ೨ ಡೇಸ್‌ ಚಿತ್ರವನ್ನು ಕಮ್ಯುನಿಸ್ಟ್ ಆಡಳಿತದಲ್ಲಿ ಅಬಾರ್ಷನ್ ವಿರುದ್ಧವಾಗಿದ್ದ ನಿಯಮಾವಳಿಗಳನ್ನು ವಿರೋಧಿಸಿ ತನ್ನ ಚಿತ್ರವನ್ನು ನಿರ್ಮಿಸಿದ. ಕ್ರಿಶ್ಚಿಯನ್ ಒತ್ತಡದ ಅಡಿಯಲ್ಲಿ ಬಾಳುವ ಜನತೆಗೆ ತಮ್ಮ ಇಚ್ಛೆಯ ಮೇರೆಗೆ ಈ ನಿಯಮಾವಳಿಗಳನ್ನು ಮುರಿಯಲು ಸಾಧ್ಯ ಎನ್ನುವುದನ್ನು ನಿವೇದಿಸಿದ. ಹಾಗೆ ಮಾಡುವ ಪ್ರಕ್ರಿಯೆಯಲ್ಲಿಯೇ ನಿಯಮಾವಳಿ ನಿರ್ಮಿಸಿದ ಭಯ ಮತ್ತು ಜೀವಕ್ಕೆ ಉಂಟಾಗಬಹುದಾದ ಅಪಾಯವನ್ನು ತಪ್ಪಿಸಿಕೊಳ್ಳಲು ಹೆಣಗಬೇಕಾದ ಪರಿಸ್ಥಿತಿಯನ್ನು ಕೂಡ ಮುಂದಿಡುತ್ತಾನೆ. ಇದರೊಂದಿಗೆ ಈ ಸಂದರ್ಭಕ್ಕೆ ಒಳಗಾದವರನ್ನು ಮನುಷ್ಯ ಸಹಜವಾದ ದೌರ್ಬಲ್ಯಗಳಿಗೆ ಒಳಗಾಗಿ ದುರುಪಯೋಗ ಪಡೆಯುವುದನ್ನು ಕೂಡ ಚಿತ್ರ ಮನಗಾಣಿಸುತ್ತದೆ.

ಕ್ರಿಸ್ತಿಯಾನ್ ಮುಂಜ್ಯೂ ಈ ಚಿತ್ರಕ್ಕೆ ಅವರ ಪರಿಕಲ್ಪನೆಗೆ ಅನುಗುಣವಾಗಿ ಛಾಯಾಗ್ರಹಕ ಒಲೆಗ್‌ ಮುಟು ನ ಸಹಕಾರದೊಂದಿಗೆ ಇಡೀ ಚಿತ್ರವನ್ನು ರಿಯಲ್ ಟೈಮ್ ವಿಧಾನವನ್ನು ಅನುಸರಿಸಿ ಚಿತ್ರಿಸಿದ್ದಾನೆ. ಅಂದರೆ ಚಿತ್ರದಲ್ಲಿ ಜರುಗುವ ಘಟನೆಗಳ ನಿರೂಪಿಸುವ ದೃಶ್ಯಗಳು ನಿಜವಾದ ಅವಧಿಯನ್ನು ಹೊಂದಿರುವ ರೀತಿಯಲ್ಲಿಯೇ ಚಿತ್ರಿಸಿದ್ದಾನೆ. ಈ ಅಭೂತಪೂರ್ವ ಚಿತ್ರೀಕರಣದ ಪ್ರಕ್ರಿಯೆಯಲ್ಲಿ ದೂರ ಚಿತ್ರಿಕೆ ಮತ್ತು ಕೆಲವೊಮ್ಮೆ ಕ್ಯಾಮೆರಾವನ್ನು ಕೈಯಲ್ಲೇ ಹಿಡಿದುಕೊಂಡು ದೃಶ್ಯಗಳನ್ನು ಚಿತ್ರಿಸಿಬೇಕಾದ ಅಗತ್ಯ ಉಂಟಾದದ್ದನ್ನು ತಿಳಿಸುವ ಕ್ರಿಸ್ತಿಯಾನ್ ಇದನ್ನು ತುಂಬಾ ಸಮರ್ಥವಾಗಿ ಪೂರೈಸಿದ್ದಕ್ಕೆ ತನ್ನ ಛಾಯಾಗ್ರಾಹಕನನ್ನು ಅಭಿನಂದಿಸುತ್ತಾನೆ.

ಕ್ರಿಸ್ತಿಯಾನ್ ಇಡೀ ಚಿತ್ರವನ್ನು `ರಿಯಲ್ ಟೈಮ್’ ವಿಧಾನವನ್ನು ಅನುಸರಿಸಿ, ಅಂದರೆ ಘಟನೆಗಳು ಜರುಗುವ ನಿಜವಾದ ಸಮಯದ ಕ್ರಮದಲ್ಲಿಯೇ ಚಿತ್ರಿಸಿ ಸಂಕಲಿಸಿ ತಯಾರಿಸಿದ್ದಾನೆ. ಇದಕ್ಕೆ ಛಾಯಾಗ್ರಾಹಕ ಒಲೆಗ್ ಮತ್ತು ಹೆಚ್ಚಿನ ದೂರ ಚಿತ್ರಿಕೆ ಹಾಗೂ ಅಗತ್ಯವಾದಲ್ಲಿ ಕೈಯಲ್ಲೆ ಕ್ಯಾಮೆರಾ ಹಿಡಿದು ಚಿತ್ರಿಸುವುದು ಸೇರಿ ಇತರ ರೀತಿಯಲ್ಲಿಯೂ ಸಹಕರಿಸಿದ್ದಾನೆ.

ಕಡು ನಿಷ್ಠುರ ವಾಸ್ತವಕ್ಕೆ ಸಂಬಂಧಿಸಿದ ಚಿತ್ರಗಳನ್ನು ನಿರ್ಮಿಸಬೇಕೆಂಬ ನಿಲುವಿನೊಂದಿಗೆ ಇರುವುದಾಗಿ ಹೇಳಿಕೊಂಡಿದ್ದಾನೆ. ಜೊತೆಗೆ ಯಾವುದೇ ವಿಷಯವಾದರೂ ಅದು ಮೂಲಗುಣಗಳ ವಿವಿಧ ರೂಪಗಳನ್ನು ಒಳಕೊಂಡಿರಬೇಕೆಂಬ ಅಪೇಕ್ಷೆ ಇರುವುದಾಗಿಯೂ ಹೇಳಿಕೊಂಡಿದ್ದಾನೆ.

ಚಿತ್ರದ ಕಥಾವಸ್ತು ಹದಿ ಹರೆಯದವರ ಪ್ರೇಮದಲ್ಲಿ ಉಂಟಾಗುವ ಸಮಸ್ಯೆಯನ್ನು ಕುರಿತದ್ದು. ಕೈ ಮೀರಿದ ಸಂದರ್ಭದಲ್ಲಿ‌ ಮದುವೆಯಾಗಿರದ ಯುವತಿಯೊಬ್ಬಳು ಗರ್ಭಪಾತ ಮಾಡಿಸಿಕೊಳ್ಳಬೇಕೆಂಬ ಒತ್ತಡಕ್ಕೆ ಸಿಲುಕಿದ ಪ್ರಯತ್ನ ಮತ್ತು ಅದಕ್ಕೆ ಒದಗಬಹುದಾದ ವಿಪರೀತವೆನಿಸುವ ಸಾಂದರ್ಭಿಕ ಅತಿ ಹೀನವೆನಿಸುವ ದುರುಪಯೋಗದ ಪರಿಯನ್ನು ಬಿಂಬಿಸುವ ಉದ್ದೇಶ ನಿರ್ದೇಶಕರದ್ದು. ನಿರ್ದೇಶಕರ ಪರಿಕಲ್ಪನೆ ಸ್ಥಳೀಯ ಸನ್ನಿವೇಶದ ಚೌಕಟ್ಟಿನಲ್ಲಿ ನೇರ, ಸಹಜವೆನ್ನಿಸಬಹುದಾದರೂ ಪರಿಣಾಮಕಾರಿ ಚಿತ್ರಕಥಾ ರಚನೆ ಹಾಗೂ ಪರಿಪೂರ್ಣ ಚಿತ್ರ ಅಷ್ಟು ಸುಲಭವಲ್ಲ.

ಚಿತ್ರದ ಕಥಾ ಹಂದರ ತೀರ ಸರಳವಲ್ಲ. ಮದುವೆಯಿಲ್ಲದ ಸುಮಾರು ಇಪ್ಪತ್ತೆರಡರ ಯುವತಿ ಗಬೀತಾ ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಅವಳ ರೂಮ್ ಮೇಟ್ ಕಾಲೇಜು ವಿದ್ಯಾರ್ಥಿನಿ ಒಟೀಲಾಳ ಸಹಕಾರವನ್ನು ಕೋರುತ್ತಾಳೆ. ಬಾಯ್ ಫ್ರೆಂಡ್ ವಿಷಯ ಕುರಿತಂತೆ ಸ್ವತಃ ಸಮಸ್ಯೆಯಲ್ಲಿರುವ ಅವಳು ಸಕಲ ವಿಧದಲ್ಲಿಯೂ ಒತ್ತಡದಲ್ಲಿರುವ ತನ್ನ ಗೆಳತಿಯ ಇಷ್ಟಾರ್ಥವನ್ನು ಬೇಬ್ ಎಂಬ ಡಾಕ್ಟರನ ಮೂಲಕ ಪೂರೈಸಲು ಸಹಕರಿಸುತ್ತಾಳೆ. ಈ ಪ್ರಕ್ರಿಯೆಯಲ್ಲಿ ಸ್ನೇಹ, ಆತಂಕ, ಸ್ವಾರ್ಥ, ನಿಸ್ವಾರ್ಥ, ದಡ್ಡತನ, ಭವಿಷ್ಯದ ಕಾಳಜಿ, ಪ್ರೇಮ, ಕಾಮ ಇತ್ಯಾದಿ ಮನುಷ್ಯ ಸಂಬಂಧಿತ ವಿಷಯಗಳು ಪರೀಕ್ಷೆಗೆ, ಮರು ಪರಿಶೀಲನೆಗೆ ಒಳಗಾಗುತ್ತವೆ.

ಚಿತ್ರದ ಶೀರ್ಷಿಕೆಗಳು ಮುಗಿಯುತ್ತಿದ್ದಂತೆಯೇ ಚಿತ್ರಕ್ಕೆ 1987ರ ರುಮೇನಿಯಾದ ಹಿನ್ನೆಲೆ ಎನ್ನುವುದನ್ನು ಸೂಚಿಸಲಾಗುತ್ತದೆ. ಇದು ಆ ದೇಶದಲ್ಲಿ ಕಮ್ಯೂನಿಷ್ಟರ ಆಳಿಕೆ ಇದ್ದ ಅವಧಿ. ಈ ದೊಡ್ಡ ಚೌಕಟ್ಟಿನಲ್ಲಿ ಪ್ರವೇಶಿಸುವ ನಮಗೆ ಫ್ಲಾಟೊಂದರ ಲಿವಿಂಗ್ ರೂಮಿನಂತೆ ತೋರುವ ಮೊದಲ ದೃಶ್ಯದಲ್ಲಿಯೇ ಸಿಗರೇಟು ಸೇದುತ್ತ ಒತ್ತಡದಲ್ಲಿರುವ ಯುವ ಗಬೀತಾ ಕಾಣಿಸುತ್ತಾಳೆ. ಅವಳು ಕಾಣಿಸದ ಒಟೀಲಾಳ ಜೊತೆಯಲ್ಲಿ ನಡೆಸುವ ಮುಂದುವರಿದ ಸಂಭಾಷಣೆಯಲ್ಲಿ ಅವರು ಗೋಪ್ಯವಾಗಿ ಕಾಪಾಡಿಕೊಂಡ ಮುಖ್ಯವಾದ ಕಾರ್ಯಕ್ಕೆ ಸಿದ್ಧವಾಗುತ್ತಿರುವುದರ ಜೊತೆಗೆ ಸಾಂದರ್ಭಿಕ ಸಂಗತಿಗಳೂ ನಮಗರಿವಾಗುತ್ತದೆ. ಅನಂತರ ತನ್ನ ಬಾಯ್ ಫ್ರೆಂಡ್ ನನ್ನು ಭೇಟಿಯಾಗಲು ಹೋಗುವ ಒಟೀಲಾಳ ಆರ್ಥಿಕ ದುಃಸ್ಥಿತಿ ಬಸ್ ಚಾರ್ಜ್‍ ಗೆ ಒದ್ದಾಡುವುದರಿಂದ ನಮಗೆ ತಿಳಿಯುತ್ತದೆ. ಕಾಲೇಜಿನಲ್ಲಿ ಭೆಟ್ಟಿಯಾಗುವ ಅವನಿಂದಲೇ ಅವನ ತಾಯಿಯ ಹುಟ್ಟುಹಬ್ಬಕ್ಕೆ ಹೂಗುಚ್ಛ ತರಲು ಹಣ ಪಡೆಯುತ್ತಾಳೆ. ಇವೆಲ್ಲವೂ ಯಾವುದೇ ತಿರುವಿಲ್ಲದೇ ವಿಷಯ, ಮುಖ್ಯ ಪಾತ್ರಗಳ ಪರಿಚಯ ಹಾಗೂ ಒಟ್ಟಾರೆ ಸಂದರ್ಭವನ್ನು ಸೂಚಿಸುವ ಮಟ್ಟದಲ್ಲಿಯೇ ಜರುಗುತ್ತವೆ.

ಒಟೀಲಾಗೆ ಪ್ರಿಯಕರನ ತಾಯಿಯ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇರುವುರಿಂದ ಅಲ್ಲಿಗೆ ಹೋಗುತ್ತಾಳೆ. ಹತ್ತಾರು ಜನರಿರುವ ಆ ಸಮಾರಂಭದಲ್ಲಿ ಅವಳಿಗೆ ಮುಜುಗರ ಉಂಟಾಗುವಂತಾಗುತ್ತದೆ. ಇದಕ್ಕಿಂತ ಪ್ರಮುಖವಾಗಿ ಒಂದು ಪಕ್ಷ ಅವಳು ಗರ್ಭವತಿಯಾಗಿದ್ದರೆ ಹೇಗೆ ಎನ್ನುವ ಪ್ರಶ್ನೆಗೇ ಸುತರಾಂ ಸಿದ್ಧವಾಗಿರುವುದಿಲ್ಲ. ಇದರಿಂದಾಗಿ ಅವಳ ಸ್ನೇಹಿತೆಯಷ್ಟಲ್ಲದಿದ್ದರೂ ಒಟೀಲಾಳು ಸಹ ತನ್ನ ಪ್ರೇಮ ಪ್ರಕರಣದಲ್ಲಿ ಒಟ್ಟಾರೆಯಾಗಿ ಸಾಕಷ್ಟು ಒತ್ತಡದ ಹಂತದಲ್ಲಿದ್ದಾಳೆ ಎನ್ನುವುದನ್ನು ನಿರ್ದೇಶಕರು ಮನದಟ್ಟು ಮಾಡುತ್ತಾರೆ.

ತನ್ನ ಸಧ್ಯದ ಪರಿಸ್ಥಿಯನ್ನು ಬದಿಗಿಟ್ಟು ತನಗಿಂತ ಹೆಚ್ಚು ಅಪಾಯ ಮತ್ತು ಕರುಣಾಜನಕ ಸ್ಥಿತಿಯಲ್ಲಿರುವ ಸ್ನೇಹಿತೆ ಗಬೀತಾಳಿಗೆ ಸಂಪೂರ್ಣ ನಿಸ್ವಾರ್ಥದಿಂದ ಸಹಕರಿಸಲು ತೊಡಗಿಕೊಳ್ಳುವ ಅವಳ ವ್ಯಕ್ತಿತ್ವ ಚಿತ್ರ ಮುಂದುವರಿದಂತೆ ಹೆಚ್ಚುತ್ತ ಹೋಗುತ್ತದೆ. ಹೊಟೆಲ್‍ ಗೆ ಹಿಂತಿರುಗಿ ಬರುವ ಒಟೀಲಾಗೆ ತಾವು ಕೈಗೊಂಡ ಕೆಲಸದಲ್ಲಿ ಸಫಲರಾಗಿರುವುದು ಅರಿವಾಗಿ ಉಳಿದ ಕೆಲಸವನ್ನೂ ಯಶಸ್ವಿಯಾಗಿ ಪೂರೈಸುತ್ತಾಳೆ.

ನಿರೀಕ್ಷಣೆಗೆ ತಕ್ಕ ಹಾಗೆ ನಡೆಯದಿರುವುದು ಒಟೀಲಾಗೆ ಮೊದಲ ಬಾರಿಗೆ ಅರಿವಾಗುವುದು ಯೋಜಿಸಿದ್ದ ಹೋಟೆಲ್‍ ನಲ್ಲಿ ರೂಮನ್ನು ಗಬೀತಾ ಸರಿಯಾದ ರೀತಿಯಲ್ಲಿ ಬುಕ್ ಮಾಡದಿರುವುದು. ಬೇರೆ ಹೊಟೆಲ್‍ ನಲ್ಲಿ ಕೆಲಸ ಪೂರೈಸಬಹುದೆಂದು ಗಬೀತಾಳಿಗೆ ತಿಳಿಸಿ ಡಾಕ್ಟರ್ ಬೇಬ್‍ ನನ್ನು ಕರೆತರಲು ಹೋದಾಗ ಅವನಿಂದ ಪ್ರಾರಂಭದಲ್ಲಿಯೇ ತಿಕ್ಕಾಟ ಶುರುವಾಗುತ್ತದೆ. ಆ ಹೊಟೆಲ್‍ ನಲ್ಲಿ ತಾನು ಮಾಡುತ್ತಿರುವ ಕೆಲಸ ತನಗೆ ಅಪಾಯ ತರಬಹುದು ಎಂಬ ಸಂದೇಹ ಅವನಿಗೆ. ಇದು ಕಾನೂನು ಬಾಹಿರ ಕೆಲಸವೆನ್ನುವುದು ಗೊತ್ತಿರುವುದರಿಂದ ಇದಕ್ಕೆ ಸಂಬಂಧಪಟ್ಟವರಲ್ಲಿ ನಂಬಿಕೆ ಇರಬೇಕಾದದ್ದು ಅನಿವಾರ್ಯ ಎನ್ನುವುದು ಅವನ ಅಭಿಪ್ರಾಯ. ಜೊತೆಗೆ ಆ ದೇಶದಲ್ಲಿರುವ ಐಡೆಂಟಿಟಿ ಕಾರ್ಡ್ ಬಗ್ಗೆಯೂ ಪ್ರಸ್ತಾಪವಾಗುತ್ತದೆ. ಅಲ್ಲದೆ ಅಹಿತ ಹಾಗೂ ಪರಸ್ಪರ ಅಪನಂಬಿಕೆ, ಆತಂಕದ ಸಂಭಾವ್ಯತೆಗಳ ಹೊಳಹುಗಳು ಗೋಚರಿಸುತ್ತವೆ.

ಚಿತ್ರದಲ್ಲಿನ ಕೆಲವೇ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಒದಗಿಸಿರುವಂತೆ ಕೆಲವು ದೃಶ್ಯಗಳು ಈ ಸನ್ನಿವೇಶದಲ್ಲಿ ಜರುಗುತ್ತವೆ. ಗರ್ಭಪಾತಕ್ಕೆ ಕುರಿತ ಹಾಗೆ ತಾವಿರುವ ಹೊಟೆಲ್ ಬಗ್ಗೆ, ತಾನು ಈ ಕಾರ್ಯ ಮಾಡಬೇಕಾಗಿರುವ ಗಬೀತಾಳನ್ನು ಮುಂಚಿತವಾಗಿ ಭೇಟಿಯಾಗದಿರುವುದರ ಬಗ್ಗೆ ಬೇಬ್ ಆಕ್ಷೇಪ ವ್ಯಕ್ತಪಡಿಸುತ್ತಾನೆ. ಗಬೀತಾ ತಾನೆಷ್ಟು ತಿಂಗಳ ಗರ್ಭಿಣಿ ಎನ್ನುವುದನ್ನು ನಿಖರವಾಗಿ ತಿಳಿಸದಿದ್ದರ ಬಗ್ಗೆ ಬೇಬ್ ಕೋಪಗೊಂಡು ನಾಲ್ಕು ತಿಂಗಳು ದಾಟಿರುವುದರಿಂದ ಅಪಾಯ ಹೆಚ್ಚಿಗೆ ಇರುವುದನ್ನು ತಿಳಿಸುತ್ತಾನೆ. ತನಗೇ ಸ್ಪಷ್ಟವಾಗಿಲ್ಲದ ಕಾರಣ ಹಾಗೆ ಹೇಳಿದೆನೆಂದು ಗಬೀತಾ ಹೇಳುವುದು ಈ ವಿಷಯದ ಬಗ್ಗೆ ಅವಳ ಅಸ್ಥಿರ ಮನಸ್ಸನ್ನು ಸೂಚಿಸುತ್ತದೆಯಾದರೂ ಇತರರಿಗೆ ಸರಿ ಎನ್ನಿಸುವುದಿಲ್ಲ. ಗರ್ಭಪಾತ ಮಾಡಿಸಲು ತಗಲುವ ವೆಚ್ಚದ ಬಗ್ಗೆ ಮಾತು ತಿರುಗಿ ತಾನೀಗ ಭಾಗಶಃ ಹಣ ಕೊಡುವೆನೆಂದು ಒಟೀಲಾ ತಿಳಿಸುತ್ತಾಳೆ. ಇದರಿಂದ ಬೇಬ್ ಬೇಸರ ಪಟ್ಟುಕೊಂಡು ಹೊರಟು ಬಿಡುವ ಪರಿಸ್ಥಿತಿ ಉಂಟಾಗಿ ಅವನನ್ನು ಸಮಾಧಾನಪಡಿಸುವುದನ್ನೂ ಗಬೀತಾ ನಿಭಾಯಿಸುತ್ತಾಳೆ. ಈ ಪ್ರಕ್ರಿಯೆಯಲ್ಲಿ ಅವರಿಗೆ ಅಗತ್ಯವಾದ ಕೆಲಸವನ್ನು ತಾನು ಮಾಡುತ್ತಿರುವುದರ ಪ್ರತಿಫಲವಾಗಿ ಅವಳು ತನ್ನ ದೈಹಿಕ ಅಗತ್ಯವನ್ನು ಪೂರೈಸಬೇಕೆನ್ನುವುದನ್ನು ಪರೋಕ್ಷವಾಗಿ ತಿಳಿಸುತ್ತಾನೆ. ಇಡೀ ದೃಶ್ಯ ಭಾವಸಾಂದ್ರತೆಯಿಂದ ಕೂಡಿರುತ್ತದೆ. ಇಂಥ ದೃಶ್ಯದಲ್ಲಿಯೂ ನಿರ್ದೇಶಕ ಯಾವ ಬಗೆಯ ಹಿನ್ನಲೆ ಸಂಗೀತದ ಬೆಂಬಲವನ್ನೂ ಬಳಸದೆ ಉದ್ದೇಶಿತ ಪರಿಣಾಮವನ್ನು ಉಂಟುಮಾಡುತ್ತಾರೆ.

ಸಾಮಾಜಿಕ, ರಾಜಕೀಯ ಮುಂತಾದ ಪ್ರತಿಕೂಲ ಸಂದರ್ಭದಲ್ಲಿಯೂ ಹೆಣ್ಣೊಬ್ಬಳು ಮತ್ತೊಬ್ಬ ಹೆಣ್ಣಿನ ಒಳಿತಿಗಾಗಿ ಎಂಥದೇ ಗಂಭೀರ ಸಮಸ್ಯೆಯನ್ನು ನಿವಾರಿಸಬಲ್ಲಳು ಎನ್ನುವುದನ್ನು ಚಿತ್ರ ಬಿಂಬಿಸುತ್ತದೆ. ಹೀಗಾಗಿ ಚಿತ್ರದಲ್ಲಿ ತನ್ನ ಸಮಸ್ಯೆಯ ನಿವಾರಣೆಗೆ ಒದ್ದಾಡುವ ಗಬೀತಾ ಕೇವಲ ಪೋಷಕ ಪಾತ್ರಳಾಗುತ್ತಾಳೆ. ಒಟೀಲಾಳ ಪಾತ್ರವೇ ಪ್ರಧಾನವಾಗುತ್ತದೆ. ಗರ್ಭಪಾತ ಮಾಡಲು ಉದ್ಯುಕ್ತನಾಗುವ ಬೇಬ್ ಆತಂಕ, ಅಪಾಯದ ನಡುವೆಯೂ ಒಟೀಲಾಳ ಅಂಗಸಂಗವನ್ನು ಈಡೇರಿಸಿಕೊಳ್ಳುತ್ತಾನೆ. ಇದರ ಮೂಲಕ ನಿರ್ದೇಶಕರು ಪುರುಷನಿಗಿರಬಹುದಾದ ಕೀಳು ಅವಕಾಶವಾದಿತನವನ್ನು ವ್ಯಕ್ತಪಡಿಸುತ್ತಾರೆ.

ಇಡೀ ಚಿತ್ರದಲ್ಲಿ ರೂಮಿನಲ್ಲಿ ಗರ್ಭಪಾತ ಕುರಿತಂತೆ ಜರುಗುವ ಕ್ರಿಯೆಯನ್ನು ಹೊರತುಪಡಿಸಿದರೆ ತೀವ್ರತರವಾದ ಯಾವ ಘಟನೆಯೂ ಸಂಭವಿಸುವುದಿಲ್ಲ. ಮುಕ್ಕಾಲು ಪಾಲು ಅವಧಿಯನ್ನು ಹೋಟೆಲ್ ರೂಮಿನಲ್ಲಿ, ಅದರ ರಿಸೆಪ್ಷನ್ ಬಳಿ ಹೀಗೆ ಬಹುತೇಕ ಒಳಾಂಗಣದಲ್ಲಿ ಚಿತ್ರೀಕರಿಸಲಾಗಿದೆ. ಅದರಲ್ಲಿಯೂ ಸಮೀಪ ಚಿತ್ರಿಕೆಗಳಿಗಿಂತ ಹತ್ತಿರದ ಚಿತ್ರಿಕೆಗಳೇ ಹೆಚ್ಚು. ದೃಶ್ಯಗಳನ್ನು ಕ್ಯಾಮೆರಾ ಚಲನೆಯಿಲ್ಲದೆ ಸ್ಥಿರವಾಗಿರಿಸಿ ಚಿತ್ರಿಸಿದ್ದಾರೆ. ಜೊತೆಗೆ ಪಾತ್ರಗಳ ಸಂಭಾಷಣೆಯನ್ನು ಅವುಗಳ ಅಂತರಂಗವನ್ನು ತೆರೆದಿಡುವುದಕ್ಕಾಗಿಯೇ ಬಳಸಲಾಗಿದೆ. ಹೊರಾಂಗಣದಲ್ಲಿ ನಗರದ ಜನ ವಿರಳ ಪ್ರದೇಶಗಳಲ್ಲಿ ರಾತ್ರಿ ಚಿತ್ರಿಸಲಾದ ಎರಡು ದೃಶ್ಯಗಳಲ್ಲಿ ಕೆಲವು ನಿಮಿಷಗಳಷ್ಟು ದೀರ್ಘ ಅವಧಿಯ ದೂರ ಚಿತ್ರಿಕೆಗಳನ್ನು ಕಾಣುತ್ತೇವೆ. ಈ ಎರಡು ದೃಶ್ಯಗಳಲ್ಲಿಯೂ ಒಲಿಟಾಳೊಬ್ಬಳೇ ಒತ್ತಡದ, ಭಯದ, ಆತಂಕದ ಭಾವಗಳನ್ನು ಪ್ರಕಟಿಸುತ್ತ ಅಭಿನಯಿಸಿದ್ದಾಳೆ.

ಮೊದಲನೆಯದು ಗಬೀತಾಳ ಸ್ಥಿತಿ ಹೇಗಿದೆಯೋ ಎನ್ನುವ ಆತಂಕದಿಂದ ಅವಳು ಪ್ರಿಯಕರನ ಮನೆಯಿಂದ ವಾಪಸು ಬರುವಾಗ ಹಾಗೂ ಇನ್ನೊಂದು ಭ್ರೂಣವನ್ನು ಬೇರೆಯವರಿಗೆ ಕಾಣದಂತೆ ಹಾಕಲು ಅನುಕೂಲವಾದ ಸ್ಥಳವನ್ನು ಹುಡುಕುವಾಗ ಇಡೀ ಚಿತ್ರದಲ್ಲಿರುವಂತೆ ಇವುಗಳಲ್ಲಿಯೂ ಸಾಂದರ್ಭಿಕ ಶಬ್ದಗಳನ್ನು ಬಿಟ್ಟರೆ ಹಿನ್ನೆಲೆಯ ಸಂಗೀತವನ್ನು ಉಪಯೋಗಿಸದಿರುವುದು ಕಂಡು ಬರುತ್ತದೆ. ಹೀಗಿದ್ದೂ ದೃಶ್ಯಗಳು ಉದ್ದೇಶಿತ ಪ್ರಭಾವ ಬೀರುತ್ತವೆ.

ಚಿತ್ರ ಸಕಲ ರೀತಿಯಲ್ಲಿ ಪ್ರಭಾವಶಾಲಿ ಪರಿಣಾಮ ಉಂಟುಮಾಡುವುದಕ್ಕೆ ಪಾತ್ರಗಳ ಅಭಿನಯವೇ ಹೆಚ್ಚು ಕಾರಣ. ಈ ವಿಭಾಗದಲ್ಲಿಯೂ ಒಟೀಲಾಳ ಪಾತ್ರದಲ್ಲಿ ಆನಾಮರೀಯಾ ಮರಿಂಕಾ ಸನ್ನಿವೇಶಕ್ಕೆ ಅಗತ್ಯವಾದ ಭಾವವನ್ನು ನಿಯಂತ್ರಿತವಾಗಿಯೇ ವ್ಯಕ್ತಪಡಿಸಿ ಉದ್ದೇಶಿತ ಪರಿಣಾಮ ಉಂಟುಮಾಡುತ್ತಾಳೆ.