ಡೆಸ್ಡಿಮೋನಾಳ ಕರ್ಚೀಫು

ಡೆಸ್ಡಿಮೋನಾಳ ಕರ್ಚೀಫಿನಲ್ಲಿ ಏನೆಲ್ಲ ಇತ್ತು
ಮುಗುಳುನಗೆ, ಕಣ್ಣೀರು, ಕಂಪನ,

ಕತ್ತಿನ ಬೆವರು, ಕಾಳರಾತ್ರಿಯ ಚಿಂತೆ,
ನಂಬಿಕೆ, ಕನಸು, ಅವಮಾನ ಮತ್ತು ಶೀಲ.

ಶತಮಾನಗಳಿಂದ ಕಳುವಾಗುತ್ತಲೆ ಇದೆ
ಅವಳ ಕರ್ಚೀಫು………
ಪುರಾಣ, ಚರಿತ್ರೆ, ಮಹಾಕಾವ್ಯಗಳಿಂದ
ರಾಜಮಹಲುಗಳ ರಾಣಿವಾಸದಿಂದ
ಗೃಹಿಣಿಯರ ಬೆಡ್‌ರೂಮಿನಿಂದ
ಅಧ್ಯಾಪಕಿಯರ ಬ್ಯಾಗಿನಿಂದ
ಮಹಿಳಾ ಅಧಿಕಾರಿಗಳ ಟೇಬಲ್ಲಿನಿಂದ
ಲೇಖಕಿಯರ ಪುಸ್ತಕಗಳಿಂದ
ದಿನಗೂಲಿ ಹೆಣ್ಣುಮಕ್ಕಳ ಸೊಂಟದಿಂದ
ಅಂಗನವಾಡಿ ಕಾರ್ಯಕರ್ತೆಯರ ಕಪಾಟಿನಿಂದ
ಗಾರ್ಮೆಂಟ್ ಕೆಲಸದ ಹೆಣ್ಣುಮಕ್ಕಳ ಕೈಯೊಳಗಿಂದ
ನಿತ್ಯ ಕಳುವಾಗುತ್ತಲೇ ಇದೆ ಕರ್ಚೀಫು.
ಪ್ರತಿಕಾಲದಲ್ಲೂ ಮುಚ್ಚಿಡಲು ಹಲವು ರಹದಾರಿ
ಅನುಮಾನದ ಹುತ್ತದಲ್ಲಿ ನೂರಾರು ಕಣ್ಣು
ಮತ್ತೆ ಕಟಕಟೆಗೆ ಪ್ರತಿಕಾಲದ ಹೆಣ್ಣು
ಅವಳ ಉತ್ತರಕ್ಕೆ ಸಮಾಧಾನವಿಲ್ಲ
ಸದಾ ತೆರೆದಿದೆ ಅಗ್ನಿಪ್ರವೇಶದ ದಾರಿ.

*****

ಸಮಗಾರ ಹರಳಯ್ಯ

ಸೇಡಂ ರಸ್ತೆಯ ತಿರುವಿನಲ್ಲಿ ಕುಳಿತಿರುವರು
ಸಮಗಾರ ಹರಳಯ್ಯ ಹರಕು ಛತ್ರಿ ಅಡ್ಡ ಹಿಡಿದು
ಉರಿವ ಬಿಸಿಲು ಚಾಚಿದೆ ತನ್ನ ಕೊರಳು
ಹರಳಯ್ಯನವರ ಮೇಲೊಂದಿಷ್ಟು ನೆರಳು
ನೆರಳಿಗೂ ಹೊಂಚು ಹಾಕುವ ಬಿಸಿಲ ಬೆರಳು.

ಉಳಿ, ರೆಂಪಿಗಿ, ಕೊಡತಿ, ಮಸಗಲ್ಲು, ಚಿಮಟಗಿ
ಸಂದಾನ, ರೆಬಿಟ್ಟು, ಸುಲೇಚನ, ದಾರ, ಸೂಜಿ, ಮಂತಣಿ,
ಪಾಲಿಶ್ ಬಣ್ಣ, ಕಟ್ಟಿಗೆ ಮಣಿ ಹರಳಯ್ಯನವರ ಸಕಲ ಸಂಪತ್ತು.
ಕಿತ್ತು ತಿನ್ನುವ ಬಡತನಕ್ಕೆ ಸವಾಲೊಡ್ಡಿದೆ ಮುರುಕು ಪೆಟ್ಟಿಗೆ
ಅಂಟು ಹಾಕಿ ಎಡ ಬಲಕ್ಕೆ ಮೇಲೆ ಕೆಳಕ್ಕೆ ಗುದ್ದಿದರೆ
ಬಾಯಿ ಮುಚ್ಚುವ ಅಂಚು. ಉಂಗುಟ ಕಿತ್ತು, ಪನ್ನಿ ಕಡಿದು
ಮುಂಭಾಗ ಹಿಂಭಾಗ ತೆರೆದರೆ ಬಾಯಿ, ಎಲ್ಲದಕ್ಕೂ ಉಂಟು
ಅದರದೇ ಆದ ಹಕೀಕತ್ತು ಮತ್ತು ಇಲಾಜು.
ಹಿಮ್ಮಡಿಗೆ ನಾಲ್ ಹಾಕಿ ರೆಬಿಟ್ಟು ಬಡಿದರೆ
ಕಾಣಿಸಬಹುದು ಇರುವುದಕ್ಕಿಂತಲೂ ಕೊಂಚ ಎತ್ತರ
ಧೂಳು ಕೊಡವಿ ಮೇಲಿಷ್ಟು ಕರಿಬಣ್ಣ ತಿಕ್ಕಿದರೆ
ಬಿಸಿಲಿಗೆ ಸೆಡ್ಡು ಹೊಡೆವ ಹೊಳಪು.

ಹರಳಯ್ಯನವರು ಪಾದ ನೋಡಿ ಅಂಗೈಯೊಡ್ಡುವರು
ಅವರಿವರ ಪಾದವೇರಿದ ಮೆಟ್ಟು ಇವರ ತೊಡೆ ಮೇಲೆ
ಜಳಕಕ್ಕೆ ತಂದಿಟ್ಟ ಕೂಸಿನಂತೆ ಅತ್ತಿತ್ತ ಹೊರಳಾಡುವುದು
ಕೈಗೆ ಬಂದ ಕೆರದ ಧೂಳು ಇವರ ವಿಭೂತಿ
ಮೈಬೆವರು ಮಂತಣಿಯ ನೀರಲ್ಲಿ ಬೆರೆತು
ಪೂಜೆಗೆ ಸಲ್ಲುವ ಪವಿತ್ರ ಜಲ.
ಚಪ್ಪಲಿ ಮತ್ತು ಕಣ್ಣಿನ ನಡುವೆ ಸೃಷ್ಟಿಯಾಗಿದೆ ಧ್ಯಾನ
ಧೂಳು ತುಂಬಿ, ಮೈಹರಿದು, ತೊಡೆ ಮೇಲೆ ಹೊರಳಾಡಿದ್ದ
ಚಪ್ಪಲಿಯೆ ಹರಳಯ್ಯನವರ ಅಂಗೈಯೊಳಗಿನ ಇಷ್ಟಲಿಂಗ.
ಮಳೆ ಗಾಳಿ ಬಿಸಿಲು ಯಾವುದೂ ತೊಡಕಲ್ಲ ಪೂಜೆಗೆ
ಪೂಜೆ ಎಂಬುದು ಏನೆಂದು ಅರಿತವರಿಗೆ.

ವಿಕ್ರಮ ವಿಸಾಜಿ ಮೂಲತಃ ಬೀದರ ಜಿಲ್ಲೆಯ ಭಾಲ್ಕಿಯವರು
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದದಲ್ಲಿ ಪ್ರಾಧ್ಯಾಪಕ.
ತಮಾಷಾ, ಗೂಡು ಕಟ್ಟುವ ಚಿತ್ರ, ವಿಕ್ರಮ ವಿಸಾಜಿ ಕವಿತೆಗಳು, ಬಿಸಿಲ ಕಾಡಿನ ಹಣ್ಣು (ಕವನ ಸಂಗ್ರಹಗಳು), ಬೆಳಗಿನ ಮುಖ, ನಾದಗಳು ನುಡಿಯಾಗಲೇ (ವಿಮರ್ಶೆ), ರಸಗಂಗಾಧರ, ರಕ್ತ ವಿಲಾಪ (ನಾಟಕ), ಕಂಬಾರರ ನಾಟಕಗಳು, ಮತ್ತೆ ಬಂತು ಶ್ರಾವಣ (ಸಂಪಾದನೆ), ನುಡಿ ಬಾಗಿನ (ಸಂಪಾದನೆ, ಅಮರೇಶ ನುಗಡೋಣಿ ಅವರೊಂದಿಗೆ) ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದಾರೆ