Advertisement
ವಿದ್ಯೆ ಹಾಗೂ ವಿವೇಕ – ಒಟ್ಟಿಗೆ ಇರುವುದಿಲ್ಲವೆ?: ಡಾ. ಎಲ್.ಜಿ. ಮೀರಾ ಅಂಕಣ

ವಿದ್ಯೆ ಹಾಗೂ ವಿವೇಕ – ಒಟ್ಟಿಗೆ ಇರುವುದಿಲ್ಲವೆ?: ಡಾ. ಎಲ್.ಜಿ. ಮೀರಾ ಅಂಕಣ

ವಿದ್ಯೆ ಮತ್ತು ವಿವೇಕದ ಪ್ರಶ್ನೆ ಬಂದಾಗ ನಮ್ಮ ಗ್ರಾಮೀಣ ಜನರಲ್ಲಿ ಸಾಕಷ್ಟು ವಿವೇಕವಿರುವುದನ್ನು ನಾವು ಗಮನಿಸುತ್ತೇವೆ. ಉದಾಹರಣೆಗೆ, ಭೂಮಿಯನ್ನು ಲಾಭ ತರುವ ಸರಕು ಎಂದು ನೋಡದೆ ತಾಯಿ ಎಂದು ಕರೆಯುವುದು, ಪರಿಸರವನ್ನು ಹಾನಿಗೊಳಪಡಿಸದಿರುವುದು, ಪ್ರಾಣಿ-ಪಕ್ಷಿ- ಪುಟ್ಟ ಪುಟ್ಟ ಜೀವಗಳಿಗೂ ತಮ್ಮ ಬದುಕಿನಲ್ಲಿ ಸ್ಥಳಾವಕಾಶ ಮಾಡಿಕೊಡುವುದು, ಮಣ್ಣು ಅಂದರೆ ನಗರದವರಂತೆ ಅಸಹ್ಯ ಪಟ್ಟುಕೊಳ್ಳದೆ ಇರುವುದು, ಮನೆಯಲ್ಲಿ ಮಾಡುವ ಸರಳ ಅಡಿಗೆಗಳಲ್ಲಿ ಸಂತೋಷವನ್ನು ಕಾಣುವುದು‌, ದೊಡ್ಡ ದೊಡ್ಡ ಕುಟುಂಬಗಳಲ್ಲಿ ಹೊಂದಿಕೊಂಡು ಹೋಗುವುದು‌ – ಇಂತಹ ಅನೇಕ ಜೀವನ ವಿವೇಕದ ನಿದರ್ಶನಗಳನ್ನು ನಾವು ಅವಿದ್ಯಾವಂತರಾದ ನಮ್ಮ ಹಳ್ಳಿಗರಲ್ಲಿ ಕಾಣಬಹುದು.‌
ಡಾ.
ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ಮೂರನೆಯ ಬರಹ

ಇಂದಿನ ಪ್ರಪಂಚವು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ನೋಡಿದಾಗ ಒಟ್ಟು ಮನುಕುಲದಲ್ಲಿ ವಿದ್ಯೆ ಹೆಚ್ಚುತ್ತಿದ್ದರೂ ವಿವೇಕ ಕಡಿಮೆ ಆಗುತ್ತಿದೆಯೇ ಎಂಬ ಅನುಮಾನ ಬರುತ್ತದೆ.  ವಿದ್ಯೆ ಎಂಬುದನ್ನು ನಾವು ಶಾಕೆ, ಕಾಲೇಜುಗಳಲ್ಲಿ ಕಲಿಯುವ ಔಪಚಾರಿಕ ಶಿಕ್ಷಣ ಎಂದು ವ್ಯಾಖ್ಯಾನಿಸುವುದಾದರೆ, ವಿವೇಕ ಎಂಬುದನ್ನು ಜೀವನದ ಬೇರೆ ಬೇರೆ ಸನ್ನಿವೇಶಗಳನ್ನು ಎದುರಿಸುವಾಗ ನಾವು ತೆಗೆದುಕೊಳ್ಳುವ ಜೀವಪರ ನಿರ್ಧಾರಗಳು ಎಂದು ವ್ಯಾಖ್ಯಾನಿಸಬಹುದು.

ಇಂಗ್ಲಿಷ್‌ನಲ್ಲಿ ವಿವೇಕಕ್ಕೆ ವಿಸ್ಡಂ‌ ಎಂಬ ಪದವನ್ನು ಬಳಸುವುದುಂಟು. ‘ಅ ಲಾಟ್ ಆಫ್ ಕಾಮನ್ ಸೆನ್ಸ್ ಈಸ್ ಈಕ್ವಲ್ ಟು ವಿಸ್ಡಂʼ ( ಸಮಾನ್ಯ ಜ್ಞಾನವು ಬಹಳವಾಗಿದ್ದರೆ ಅದು ವಿವೇಕ) ಎಂಬ ಉಕ್ತಿ ಇದೆ.

ವಿದ್ಯೆ ಕಲಿತವರಲ್ಲಿ ಜೀವನ ವಿವೇಕ ಇರುತ್ತದೆ ಎಂದು ಖಾತ್ರಿಯಾಗಿ ಹೇಳಲಾಗದು‌. ಸಮಯ, ಹಣ, ಶಕ್ತಿ, ಸ್ಥಳ, ಮತ್ತು ವಸ್ತು – ಈ ಐದನ್ನು ತಮಗೆ ಹಾಗೂ ತಮ್ಮ ಸಹಜೀವಿಗಳಿಗೆ ಗರಿಷ್ಠ ಅನುಕೂಲಕರವಾಗುವಂತೆ ಬಳಸುವುದನ್ನು‌ ವಿವೇಕ ಎಂದು‌ ಗುರುತಿಸುತ್ತಾರೆ. ಪದವಿ, ಸ್ನಾತಕೋತ್ತರ ಪದವಿ, ಡಾಕ್ಟರೇಟುಗಳನ್ನು ಹೊಂದಿದ ಅನೇಕರು ಮದ್ಯಪಾನ ವ್ಯಸನ, ಜೂಜು, ಕುಟುಂಬದಲ್ಲಿ ಹೊಂದಾಣಿಕೆ ಇಲ್ಲದ ನಿರಂತರ ಜಗಳ, ವಿಪರೀತ ಸಾಲ, ಚಾಡಿ ಮಾತಾಡುವ ಸ್ವಭಾವ, ಕಾಲಹರಣ, ಕಾಡುಹರಟೆ, ಬೇಕಾದ್ದು-ಬೇಡದ್ದು ಎಂಬ ಪರಿಜ್ಞಾನ ಇಲ್ಲದೆ ವಸ್ತುಗಳನ್ನು ಕೊಳ್ಳುತ್ತಲೇ ಹೋಗುವುದು, ಸಮಾಜವು ನಿಷೇಧಿಸಿರುವ ಸಂಬಂಧಗಳಲ್ಲಿ‌ ಸಿಲುಕಿಕೊಂಡು ಒದ್ದಾಡುವುದು, ರಸ್ತೆಗಳಲ್ಲಿ ಸಂಚರಿಸುವಾಗ ಸಂಚಾರಿ ನಿಯಮಗಳನ್ನು ಪಾಲಿಸದಿರುವುದು, ಪ್ರವಾಸಿ ಸ್ಥಳಗಳಿಗೆ ಹೋದಾಗ ಎಲ್ಲೆಂದರಲ್ಲಿ ಕಸ ಹಾಕುವುದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ತೊಂದರೆ ಮಾಡುವುದು, ವೃದ್ಧರಾದ  ತಂದೆತಾಯಂದಿರನ್ನು ನೋಡಿಕೊಳ್ಳಲಾಗದೆ ಸಾಯಿಸುವ ಮಟ್ಟಕ್ಕೆ ಹೋಗುವುದು –

ಇಂಥವನ್ನೆಲ್ಲ‌ ಮಾಡುವುದನ್ನು ನಾವು ನೋಡುವುದಿಲ್ಲವೆ? ಆಗೆಲ್ಲ ಯಾರ ಮನಸ್ಸಿಗಾದರೂ ಈ‌ ಪ್ರಶ್ನೆ ಬಂದೇ ಬರುತ್ತದೆ “ವಿದ್ಯೆ ವಿವೇಕವನ್ನು ತರುವುದಿಲ್ಲವೆ?”.

****

         ವಿದ್ಯೆ ಮತ್ತು ವಿವೇಕದ ಪ್ರಶ್ನೆ ಬಂದಾಗ ನಮ್ಮ ಗ್ರಾಮೀಣ ಜನರಲ್ಲಿ ಸಾಕಷ್ಟು ವಿವೇಕವಿರುವುದನ್ನು ನಾವು ಗಮನಿಸುತ್ತೇವೆ. ಉದಾಹರಣೆಗೆ, ಭೂಮಿಯನ್ನು ಲಾಭ ತರುವ ಸರಕು ಎಂದು ನೋಡದೆ ತಾಯಿ ಎಂದು ಕರೆಯುವುದು, ಪರಿಸರವನ್ನು ಹಾನಿಗೊಳಪಡಿಸದಿರುವುದು, ಪ್ರಾಣಿ-ಪಕ್ಷಿ- ಪುಟ್ಟ ಪುಟ್ಟ ಜೀವಗಳಿಗೂ ತಮ್ಮ ಬದುಕಿನಲ್ಲಿ ಸ್ಥಳಾವಕಾಶ ಮಾಡಿಕೊಡುವುದು, ಮಣ್ಣು ಅಂದರೆ ನಗರದವರಂತೆ ಅಸಹ್ಯ ಪಟ್ಟುಕೊಳ್ಳದೆ ಇರುವುದು, ಮನೆಯಲ್ಲಿ ಮಾಡುವ ಸರಳ ಅಡಿಗೆಗಳಲ್ಲಿ ಸಂತೋಷವನ್ನು ಕಾಣುವುದು‌, ದೊಡ್ಡ ದೊಡ್ಡ ಕುಟುಂಬಗಳಲ್ಲಿ ಹೊಂದಿಕೊಂಡು ಹೋಗುವುದು‌ – ಇಂತಹ ಅನೇಕ ಜೀವನ ವಿವೇಕದ ನಿದರ್ಶನಗಳನ್ನು ನಾವು ಅವಿದ್ಯಾವಂತರಾದ ನಮ್ಮ ಹಳ್ಳಿಗರಲ್ಲಿ ಕಾಣಬಹುದು.‌ ಅಕ್ಷರ ವಿದ್ಯೆ ಇಲ್ಲದಿದ್ದರೂ ‘ಗಿಡ ನೆಡುವುದರಿಂದ ಪರಿಸರಕ್ಕೆ ಲಾಭ ಇದೆ’ ಎಂಬ ಒಂದು ಸರಳ ತಿಳುವಳಿಕೆಯಿಂದ ಸಾವಿರಾರು‌ ಸಸಿ ನೆಟ್ಟು, ಅವನ್ನು ದೊಡ್ಡ ಮರಗಳಾಗುವಂತೆ ಬೆಳೆಸಿ, ತನ್ನ ಇಡೀ‌ ವಾತಾವರಣವನ್ನು ಹಸಿರಾಗಿಸಿದ ‘ಸಾಲುಮರದ ತಿಮ್ಮಕ್ಕ’ ನಮ್ಮ ಗ್ರಾಮೀಣ ವಿವೇಕಕ್ಕೆ ಅತ್ಯುತ್ತಮ ಉದಾಹರಣೆ‌ ಅಲ್ಲವೆ?

ಇನ್ನು ನಮ್ಮ ಅನಕ್ಷರಸ್ಥ ಹಿರಿಯರು ನಮಗೆ ಬಳುವಳಿಯಾಗಿ ಕೊಟ್ಟಿರುವ ಗಾದೆಮಾತುಗಳು! ಅವಂತೂ ಜೀವನ ವಿವೇಕದ ಅದ್ಭುತ ಭಂಡಾರಗಳಾಗಿವೆ. ಕೈ ಕೆಸರಾದರೆ ಬಾಯಿ ಮೊಸರು, ಅತಿಯಾಸೆ ಗತಿಕೇಡು, ಹಾಸಿಗೆ ಇದ್ದಷ್ಟು ಕಾಲು ಚಾಚು, ಕುಂಬಾರಂಗೆ ವರುಷ, ದೊಣ್ಣೆಗೆ ನಿಮಿಷ, ಹೂವನ್ನು ಕೊಟ್ಟು ಮುಡಿ: ಹಣ್ಣನ್ನು ಹಂಚಿ ತಿನ್ನು, ಗುಡಿಸಿದ್ರೆ ಕಸವಿರಬಾರದು, ಬಡಿಸಿದ್ರೆ ಹಸಿವಿರಬಾರದು, ಕೊಟ್ಟು ಆಡಿಕೊಳ್ಳಬಾರದು: ಇಕ್ಕಿ ಹಂಗಿಸಬಾರದು, ಪುಣ್ಯದೂರಿಗೆ ಏರ್ಬಂಡೆ: ಪಾಪದೂರಿಗೆ  ಜಾರ್ಬಂಡೆ……….

ಅಬ್ಬ! ಇಂತಹ ನೂರು ಉದಾಹರಣೆಗಳನ್ನು ಕೊಡಬಹುದು. ಇಂಥವುಗಳಲ್ಲಿ ಕೆಲವೇ ಕೆಲವನ್ನು ಅಳವಡಿಸಿಕೊಂಡರೂ ಸಾಕು, ನಮ್ಮ ಜೀವನ ಹಸನಾಗುವುದರಲ್ಲಿ ಸಂಶಯವಿಲ್ಲ.

ಎಸ್.ಎಲ್.ಭೈರಪ್ಪನವರ ಪ್ರಸಿದ್ಧ ಕಾದಂಬರಿ ‘ಗೃಹಭಂಗ’ ಜೀವನ ವಿವೇಕವನ್ನು ಒಂದು ಮೌಲ್ಯವಾಗಿ ಚಿತ್ರಿಸುತ್ತದೆ. ತುಂಬ ಬೇಜವಾಬ್ದಾರಿ ವ್ಯಕ್ತಿಯಾದ ಚೆನ್ನಿಗರಾಯನನ್ನು ಮದುವೆಯಾದ ನಂಜಮ್ಮ ಎಂಬ ಹೆಣ್ಣುಮಗಳು ತನ್ನ ಕಷ್ಟಕರ ಜೀವನದ ಪ್ರತಿ ಹಂತದಲ್ಲೂ ತೆಗೆದುಕೊಳ್ಳುವ ಜೀವಪರ ನಿರ್ಧಾರಗಳು ಅವಳನ್ನು ಒಬ್ಬ ಅತ್ಯಂತ ವಿವೇಕಿಯಾದ ವ್ಯಕ್ತಿಯಾಗಿ ಮಂಡಿಸುತ್ತವೆ. ದುಡಿಮೆ, ಪರಿಶ್ರಮ, ಜೀಪಪರತೆ, ಕರುಣೆ-ಅನುಕಂಪಗಳನ್ನು‌ ತನ್ನ ಜೀವನ ಮೌಲ್ಯಗಳಾಗಿಸಿಕೊಂಡ ನಂಜಮ್ಮ, ಬಯ್ಯುವ ಅತ್ತೆ, ಅಡಾವುಡಿ‌ ಸ್ವಭಾವದ ಗಂಡ, ಅಪ್ರಯೋಜಕ ಮೈದುನ- ಇವರೆಲ್ಲರೂ ತನಗೆ ಕೊಡುವ ಕಷ್ಟನಷ್ಟಗಳನ್ನು ಲೆಕ್ಕಿಸದೆ ಧೈರ್ಯದಿಂದ ಬದುಕನ್ನು ಎದುರಿಸುತ್ತಾಳೆ.‌ ತನ್ನ ಮಕ್ಕಳಿಗೆ ‘ವಿವೇಕ‌ ಮುಖ್ಯ ಕಣಪ್ಪ’ ಎಂಬ ಪಾಠವನ್ನು ಬಾಯಲ್ಲಿ‌ ಹೇಳುವುದು ಮಾತ್ರವಲ್ಲದೆ ತಾನು ಪ್ಲೇಗ್ ರೋಗದಿಂದ ಅಕಾಲ ಮರಣವನ್ನಪ್ಪುವ ತನಕವೂ ಈ ವಿವೇಕಕ್ಕೆ ಒಂದು ನಿದರ್ಶನ ಆಗುತ್ತಾಳೆ‌.

‘ಟೊಳ್ಳುಗಟ್ಟಿ’ ನಾಟಕ ಬರೆದ ಟಿ.ಪಿ.ಕೈಲಾಸಂ, ಆ ನಾಟಕದಲ್ಲಿ ಶಾಲೆಯಲ್ಲಿ ಹೆಚ್ಚಿನ ಅಂಕ ಗಳಿಸಿ, ಸ್ವಾರ್ಥಜೀವನ‌ ಮಾಡುವ ಪುಟ್ಟುವಿಗಿಂತ, ಕಡಿಮೆ ಅಂಕ ಗಳಿಸಿದರೂ ಪರೋಪಕಾರಿಯಾಗಿರುವ ಮಾಧುವೇ ಉತ್ತಮ‌ ವ್ಯಕ್ತಿ ಎಂಬ ಅತಿ ಮುಖ್ಯವಾದ ಜೀವನ ಸಂದೇಶವೊಂದನ್ನು ನೀಡಿದ್ದಾರೆ.

ಈ ಜೀವನ ವಿವೇಕವನ್ನು ನಾವು ಮೇಲೆ ಹೇಳಿದಂತಹ ಸಾಹಿತ್ಯ ಕೃತಿಗಳಲ್ಲಿ ಮಾತ್ರವಲ್ಲ, ನಮ್ಮ‌ ಸುತ್ತಮುತ್ತಲೂ ಅನೇಕ ಸಲ ಕಾಣಬಹುದು‌. ಅಂತಹ ಕೆಲವು ಉದಾಹರಣೆಗಳನ್ನು ಒಂದೊಂದಾಗಿ ಇಲ್ಲಿ ಕೊಡುತ್ತಿದ್ದೇನೆ.

  1. ನಾನು ವಿದ್ಯಾವರ್ಧಕ ಸಂಘ – ಮಹಿಳಾ ಪದವಿ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಓದುತ್ತಿದ್ದಾಗ, ಈಗ ವ್ಯಕ್ತಿವಿಕಸನ ಜ್ಞಾನಕ್ಷೇತ್ರದಲ್ಲಿ‌ ಖ್ಯಾತರಾಗಿರುವ ಡಾ.ಗುರುರಾಜ‌ ಕರ್ಜಗಿಯವರು ನಮ್ಮ ಪ್ರಾಂಶುಪಾಲರಾಗಿದ್ದರು. ನಾನು‌ ಅವರ ಕೊಠಡಿಯಲ್ಲಿ ಗಾತ್ರದಲ್ಲಿ ಪುಟ್ಟದಾದ ಒಂದು ಸೂಕ್ತಿಫಲಕವನ್ನು ಗಮನಿಸಿದ್ದೆ. ಅದು ಏನು ಹೇಳುತ್ತಿತ್ತು ಅಂದರೆ ‘ಬಿ ಎ ಪಾರ್ಟ್ ಆಫ್ ಸೊಲ್ಯೂಷನ್'(ಪರಿಹಾರದ ಭಾಗವಾಗಿರಿ). ನಾನು ಓದಿದ ಅತ್ಯಂತ ವಿವೇಕಯುತವಾದ ಮಾತು ಇದು. ಈ ಪ್ರಪಂಚದಲ್ಲಿರುವ  ಸಮಸ್ಯೆಗಳ ಬಗ್ಗೆ ನಾವು ಎಷ್ಟು ಗೊಣಗಿದರೆ ಏನು ಬಂತು? ಅವುಗಳಲ್ಲಿ ಒಂದೇ ಒಂದು ಸಮಸ್ಯೆಯನ್ನು ಆರಿಸಿಕೊಂಡು‌ ಅದಕ್ಕೆ ಪರಿಹಾರ ಕೊಡಲು ನಮಗೆ ಸಾಧ್ಯವೇ ಎಂದು ನಾವು ಯೋಚಿಸಬೇಕು‌ ತಾನೇ?
  1. ನಮ್ಮ ಕುಟುಂಬದಲ್ಲಿ ಹಿಂದೆ ಪದ್ದಮ್ಮ ಎಂಬ ಹಿರಿಯ ಮಹಿಳೆ ಒಬ್ಬರಿದ್ದರು. ಅಬ್ಬಬ್ಬಾ ಅಂದರೆ ಆರನೇ ತರಗತಿ ಓದಿದ್ದಿರಬಹುದು ಆಕೆ.‌ ಆದರೆ ಜೀವನ ವಿವೇಕದ ಮೂರ್ತಿಯಾಗಿದ್ದರು ಆಕೆ.‌ ಮನೆಗೆ ಬಂದವರನ್ನು ಆತ್ಮೀಯವಾಗಿ‌ ಮಾತಾಡಿಸುವುದು, ಆ ಸಮಯಕ್ಕೆ ಸರಿಯಾಗಿ ಕಾಫಿಯೋ, ಮಜ್ಜಿಗೆಯೋ, ಊಟವೋ ಏನು ಕೊಡಬೇಕೋ ಅದನ್ನು ತುಂಬು ಪ್ರೀತಿಯಿಂದ ಕೊಡುವುದು, ಯಾರೇ ಕಷ್ಟವಿದೆ ಎಂದು ಸಹಾಯ ಕೇಳಿಕೊಂಡು ಬಂದರೂ ತಮ್ಮ  ಕೈಲಾದ ಸಹಾಯ ಮಾಡುವುದು, ಎಂಥದೇ ಸಂದರ್ಭ ಬಂದರೂ ರೇಗದೆ, ಕೂಗಾಡದೆ ಸಹನೆಯಿಂದ ನಡೆದುಕೊಳ್ಳುವುದು – ಹೀಗೆ ಇಡೀ‌ ಜೀವನ ತಂಪಾದ ನೆರಳು‌ ಕೊಡುವ ಮರದಂತೆ ಬದುಕಿದ್ದರು ಆಕೆ. ವಿದ್ಯೆ ಇಲ್ಲದಿದ್ದರೂ ಮನುಷ್ಯನಲ್ಲಿ ವಿವೇಕ ಇರಬಹುದು ಎಂಬುದಕ್ಕೆ ಅವರು‌ ಒಂದು ಉತ್ತಮ‌ ಉದಾಹರಣೆ.
  2. ಈಚೆಗೆ ಬಿರುಬಿಸಿಲಿನ‌ ಮಧ್ಯಾಹ್ನವೊಂದರಲ್ಲಿ ಬೆಂಗಳೂರಿನ ಎನ್.ಆರ್.ಕಾಲನಿ‌ಯ ರಸ್ತೆಯೊಂದರಲ್ಲಿ ಆಟೋರಿಕ್ಷಾ ಹಿಡಿಯಬೇಕೆಂದು ನಡೆಯುತ್ತಿದ್ದೆ ನಾನು. ‌ಆಗ ಮನೆಯೊಂದರ ಮುಂದೆ ಒಂದು ಗಡಿಗೆ ಇಟ್ಟಿದ್ದು, ಅದರ ಪಕ್ಕದಲ್ಲಿ ‘ಉಚಿತ ಮಜ್ಜಿಗೆ ಇದೆ. ಕುಡಿಯಿರಿ’ ಎಂದು ಬರೆದಿದ್ದರು! ಅಲ್ಲಿ ಒಬ್ಬರು ಮಹಿಳೆ ಕುಳಿತಿರಲಾಗಿ ನಾನು ಅವರನ್ನು “ಏನಿದು? ನೀವು ಉಚಿತ ಮಜ್ಜಿಗೆಯನ್ನು ‌ಯಾಕೆ ಕೊಡ್ತಿದೀರಿ?” ಎಂದು ಕೇಳಿದೆ. ಅದಕ್ಕೆ ಅವರು “ಬಿಸಿಲಲ್ಲಿ ನಾವು ಎಲ್ಲಾದ್ರೂ ಹೋಗ್ತಿದ್ದರೆ, ಒಂದು ಲೋಟ ಮಜ್ಜಿಗೆ ಕುಡೀಬೇಕು ಅನ್ಸುತ್ತೆ ಅಲ್ವಾ? ಅದಕ್ಕೇ ಇಟ್ಟಿದೀವಿ.‌ ಬಾಯಾರಿಕೆ ಆದೋರು‌ ಕುಡೀತಾರೆ” ಅಂದರು! ನನಗೆ ಒಂದು ಕ್ಷಣ ಅವಾಕ್ಕಾಗುವಂತಾಯಿತು‌ ಪ್ರಚಾರ, ಸದ್ದುಗದ್ದಲ ಇಲ್ಲದ ಮೌನಸೇವೆ‌.

ಸರ್ವಜ್ಞ ಕವಿಯ ‘ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು‌ ಸರ್ವಜ್ಞ’ ತ್ರಿಪದಿ ನೆನಪಾಯಿತು. ಮಜ್ಜಿಗೆಯನ್ನು ಉಚಿತವಾಗಿ‌ ಕೊಡುತ್ತಿದ್ದ ಆ ಮಹಿಳೆ ‘ತನ್ನಂತೆ ಪರರ’ ಬಗೆದರಲ್ಲವೆ.

ಅಂದ ಹಾಗೆ ನಮ್ಮ ಸರ್ವಜ್ಞ ಕವಿಯ ತ್ರಿಪದಿಗಳು ಅಂದರೆ ಅವು ಜೀವನ ವಿವೇಕದ ನುಡಿಗಣಗಳೇ ಸರಿ.

                  *****

          ಕನ್ನಡ ನಾಡಿನ ಶಿಷ್ಟ ಹಾಗೂ ಜನಪದ ವಾಕ್ ಪರಂಪರೆಯಲ್ಲಿ ವಿವೇಕಕ್ಕೆ ಕೊರತೆ ಇಲ್ಲ. ಕೊರತೆ ಉಂಟಾಗಿರುವುದು ಅದರ ಕಲಿಸುವಿಕೆ ಮತ್ತು ಪ್ರಸರಣದಲ್ಲಿ.‌ ನಮ್ಮ ಮಕ್ಕಳಿಗೆ ಅಂಕ ಗಳಿಸುವುದು ಮತ್ತು ಆ ಅಂಕಗಳನ್ನು ಮುಂದೆ ಹಣವಾಗಿ‌ ಪರಿವರ್ತಿಸುವುದು ಎಂಬುದನ್ನೇ ಮುಖ್ಯ ಎಂದು ಬಿಂಬಿಸುವ ನಾವು ಅವರಿಂದ ಮುಂದೆ ಏನು ಜೀವನ ವಿವೇಕವನ್ನು ನಿರೀಕ್ಷಿಸಲು ಸಾಧ್ಯವಿದೆ? ಬೇವಿನ ಬೀಜ ಬಿತ್ತಿ ಮಾವು ಬೇಕೆಂದರೆ ಆಗುತ್ತದೆಯೇ?

ತಂದೆತಾಯಂದಿರು, ಅಧ್ಯಾಪಕರು, ಮಾಧ್ಯಮಗಳು ಹಾಗೂ ಸರ್ಕಾರಗಳು – ಎಲ್ಲರೂ ಯೋಚಿಸಬೇಕಾದ ಮತ್ತು‌ ಆದ್ಯತೆ ನೀಡಬೇಕಾದ ವಿಷಯ ಇದು. ಇಲ್ಲದೆ ಹೋದರೆ ಅತ್ಯಂತ ಹೆಚ್ಚು ವಿದ್ಯಾವಂತರಾದ ಆದರೆ ಅತ್ಯಂತ ಕಡಿಮೆ ವಿವೇಕಿಗಳಾದ ಪೀಳಿಗೆಗಳನ್ನು ನಾವು ಸೃಷ್ಟಿಸಲಿದ್ದೇವೆ.‌ ಮನೆಯಲ್ಲಿ, ಶಾಲೆ-ಕಾಲೇಜುಗಳಲ್ಲಿ ಮಕ್ಕಳಿಗೆ ನಾವು ಉತ್ತಮ ಜೀವನದ ಕಥೆಗಳನ್ನು ಹೇಳುವ ಮೂಲಕ ಜೀವನ ವಿವೇಕದ ಬೀಜಗಳನ್ನು ಬಿತ್ತುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಬೇಕು.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ