ಏನೋ ಗಂಭೀರವಾದ ವಿಷಯವಿರಬೇಕೆಂದು ಕರೆ ಸ್ವಿಕರಿಸಿದೆ, ಕರೆ ಸ್ವಿಕರಿಸುತ್ತಿದ್ದಂತೆ ವಿಷ್ಣು ಸ್ವಲ್ಪ ಗಾಬರಿಯಿಂದ ಅಣ್ಣ ಸ್ವಲ್ಪ ಅರ್ಜೆಂಟಾಗಿ ಹಡಿನಬಾಳಕ್ಕೆ ಬಂದು ಹೋಗು. ತಿಮ್ಮಪ್ಪಜ್ಜ ಬಹಳ ಸಿರಿಯಸ್ ಆಗಿದ್ದು ಇನ್ನೇನು ಒಂದೆರಡು ತಾಸು ಬದುಕಿರಬಹುದೇನೋ. ಕಣ್ಣೆಲ್ಲಾ ಮೇಲಕ್ಕೆ ಹೋಗಿ ನಾಲಿಗೆ ಹೊರಕ್ಕೆ ಬಂದಿದೆ ಅಂದ. ತಿಮ್ಮಪ್ಪಜ್ಜನ ವಿಚಾರ ಕೇಳಿ ನನಗೂ ಸ್ವಲ್ಪ ಕನಿಕರ ಹುಟ್ಟಿ ಕೂಡಲೆ ಬರುವುದಾಗಿ ಶುಗರ್, ಹಿಮೊಗ್ಲೊಬಿನ್ ಪರೀಕ್ಷಿಸುವ ಮಿಟರ್ ಹಾಗೂ ಬಿ.ಪಿ ನೋಡುವ ಮೀಟರ್ ತೆಗೆದುಕೊಂಡು ವೈದ್ಯಾಧಿಕಾರಿಗಳ ಅನುಮತಿ ಪಡೆದು ಹೊರಟೆ, ನಾನು ತಿಮ್ಮಪ್ಪಜ್ಜನ ಮನೆಗೆ ತಲುಪಿದಾಗ ಅರ್ಧ ಊರೆ ಅಲ್ಲಿ ನೆರೆದಿತ್ತು.
ವಿನಾಯಕ ಎಸ್. ನಾಯಕ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ
ಆರೋಗ್ಯ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ನನಗೆ ಆಗಾಗ ಪ್ರಯೋಗಾಲಯದ ಕೆಲಸದ ಅವಧಿಯಲ್ಲಿ ಬಹಳಷ್ಟು ಜನರನ್ನು ಭೇಟಿಯಾಗುವ ಅವರ ಕುಶಲೋಪಚಾರವನ್ನು ವಿಚಾರಿಸುವ ಸಂದರ್ಭ ದೊರಕುತ್ತಲೇ ಇರುತ್ತದೆ. ಕೆಲವೊಂದು ಸನ್ನಿವೇಶಗಳು ಬಹಳ ಘೋರವಾಗಿದ್ದರೆ ಇನ್ನೂ ಕೆಲವು ಸನ್ನಿವೇಶಗಳು ಬಹಳ ಹಾಸ್ಯ ಮಿಶ್ರಿತವಾಗಿರುತ್ತದೆ. ಇಂತಹ ಸನ್ನಿವೇಶಗಳು ಎದುರಾದಾಗಲೆಲ್ಲಾ ನಮ್ಮ ಸುದೀರ್ಘ ಸೇವಾ ಪರಿಚಯಗಳು ಜನರನ್ನು ಮಾತನಾಡಿಸಲು ಅವರ ಕಷ್ಟಕ್ಕೆ ಅಥವಾ ಸುಖಕ್ಕೆ ಬೆಂಬಲ ಸೂಚಿಸಲು ಹಾಗೂ ಉಪಯುಕ್ತ ಮಾಹಿತಿ ನೀಡಲು ನಮಗೆ ನೆರವಾಗುತ್ತದೆ. ಒಂದೇ ಕಡೆಯಲ್ಲಿ ಹದಿನೇಳು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ನನ್ನ ಕಾರ್ಯಕ್ಷೇತ್ರದ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ನನ್ನದೆ ಆದ ಅಭಿಮಾನಿ ಬಳಗವೂ ಇದೆ. ಅವರೆಲ್ಲ ಕೆಲವೊಮ್ಮೆ ನನ್ನಿಂದ ಆರೋಗ್ಯ ಸಲಹೆ ಪಡೆಯಲು ವೈದ್ಯಾಧಿಕಾರಿಗಳ ಬಗ್ಗೆ ವಿಚಾರಿಸಲು, ಏನಾದರೂ ಗಂಭೀರ ಖಾಯಿಲೆ ಬಂದಾಗ ಮಂಗಳೂರಿನಂತಹ ಆಸ್ಪತ್ರೆಗೆ ಹೋಗಲು ಅಲ್ಲಿ ದೊರಕುವ ಸರ್ಕಾರಿ ಸವಲತ್ತುಗಳ ಬಗ್ಗೆ ಮಾಹಿತಿ ಪಡೆಯಲು ಸಹಾಯ, ಸೂಚನೆ ಪಡೆಯುತ್ತಲೆ ಇರುತ್ತಾರೆ. ಹೀಗೆಯೆ ಸೂಕ್ತ ಮಾಹಿತಿ ಪಡೆದು ಮಾಡಿದ ಸಣ್ಣ ಸಹಾಯವನ್ನು ನೆನಪಿನಲ್ಲಿಟ್ಟುಕೊಂಡು ಹೊಗಳಿ ದೇವ ಮಾನವನಂತೆ ಬಿಂಬಿಸುತ್ತಾರೆ. ಹಲವಾರು ಸಾರಿ ಬೇಡವೆಂದರು ಸಣ್ಣ-ಪುಟ್ಟ ಕೊಡುಗೆಯನ್ನು ನೀಡಿ ಕೃತಾರ್ಥಗೊಳಿಸುವಷ್ಟರ ಮಟ್ಟಿಗೆ ಈ ಕಾರ್ಯ ಮುಂದುವರೆಯುತ್ತದೆ. ಒತ್ತಾಯ ಪೂರ್ವಕವಾಗಿ ತುಪ್ಪ, ಬೆಲ್ಲ, ಕಬ್ಬು ಇಂತಹವುಗಳನೆಲ್ಲಾ ಮನೆಗೆ ತಂದು ನಾನಿಲ್ಲದ ವೇಳೆಯಲ್ಲಿ ಕೊಟ್ಟು ಕೈ ತೊಳೆದುಕೊಳ್ಳುವುದು ಇದೆ. ಇಷ್ಟೆಲ್ಲಾ ಪೀಠಿಕೆಗಳು ಈ ಲೇಖನಕ್ಕೆ ತಳಪಾಯವಿದ್ದಂತೆ ಇದು ತಿಳಿದಿದ್ದರೆ ಮಾತ್ರ ಓದುಗರಿಗೆ ನಾನು ಅನುಭವಿಸಿದ ಒಂದು ಹಾಸ್ಯ ಸನ್ನಿವೇಶವನ್ನು ಕಟ್ಟಿಕೊಡಬಹುದೆಂಬ ದೃಷ್ಟಿಯಿಂದ ಸೇವಾ ಕಾಲದಲ್ಲಾದ ಒಂದು ಹಾಸ್ಯ ಸನ್ನಿವೇಶವನ್ನು ಈ ಮೂಲಕ ನಿಮ್ಮಲ್ಲಿ ವಿವರಿಸುತ್ತಿದ್ದೇನೆ.
ನನ್ನ ಬಹಳ ಆತ್ಮೀಯ ಗೆಳೆಯ ಹೊನ್ನಾವರ ತಾಲೂಕಿನ ಕಡಗೇರಿ ನಿವಾಸಿಯಾದ ವಿಷ್ಣು ಎಂಬ ವ್ಯಕ್ತಿಯ ಕುರಿತಾದ ಈ ಸನ್ನಿವೇಶ ಹೀಗಿದೆ. ಹಡಿನಬಾಳ ಹಾಗೂ ಕಡಗೇರಿ ಗ್ರಾಮದ ಆಸು-ಪಾಸಿನಲ್ಲೆಲ್ಲಾ ಬಹಳ ಜನಾನುರಾಗಿಯಾಗಿ ಗುರುತಿಸಿಕೊಂಡಿರುವ ಈ ವ್ಯಕ್ತಿ ಊರಲ್ಲಿ ಯಾರಿಗೆ ಆದರೂ ಆರೋಗ್ಯ ಸಮಸ್ಯೆ, ಮನೆಯಲ್ಲಿ ಸಾವು ಸಂಭವಿಸಿದಲ್ಲೆಲ್ಲಾ ತಟ್ಟನೆ ಅಲ್ಲಿಗೆ ಹಾಜರಿದ್ದು ಶಖ್ಯಾನುಸಾರ ತನ್ನಿಂದಾಗುವ ಸಹಾಯವನ್ನು ಯಾವ ಪ್ರತಿಪಲಾಕ್ಷೆಯನ್ನು ನಿರೀಕ್ಷಿಸದೆ ಮಾಡುತ್ತಿರುತ್ತಾನೆ. ಸುತ್ತಲಿನ ಐದಾರು ಹಳ್ಳಿಗಳಿಗೆಲ್ಲಾ ಇತನೆ ಆಪತ್ಫಾಂದವ. 108 ಕ್ಕೆ ಕರೆ ಮಾಡಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವುದು, ಹೊನ್ನಾವರದ ಪ್ರಖ್ಯಾತ ವೈದ್ಯರ ಭೇಟಿಗೆ ಚೀಟಿ ಮಾಡಿಕೊಡುವುದು, ರೋಗಿ ಮನೆಯವರ ಹತ್ತಿರ ಸಾಂತ್ವನದ ಮಾತಾಡಿ ಏನು ಆಗುವುದಿಲ್ಲವೆಂದು ಧೈರ್ಯ ತುಂಬುವುದು, ಕ್ಯಾನ್ಸರ್ ರೋಗಿಗಳನ್ನು ಮಣಿಪಾಲ, ಮಂಗಳೂರಿಗೆ ಕರೆದುಕೊಂಡು ಹೋಗುವುದು, ಮರದಿಂದ ಕೆಳಗೆ ಬಿದ್ದಿರುವವರಿಗೆ ಅನುದಾನ ಕೊಡಿಸುವುದು, ನಿರ್ಗತಿಕರಿಗೆ ಪಂಚಾಯತ್ ಮನೆ ಕೊಡಿಸುವುದು, ಹೀಗೆ ಹತ್ತು-ಹಲವಾರು ಜನೋಪಯೋಗಿ ಕೆಲಸದಲ್ಲಿ ನಿರತನಾಗಿರುವ ಈತ ಬಹಳ ಚಟುವಟಿಕೆ ಹೊಂದಿರುವ ಕಾರ್ಯನಿರತ ಮನುಷ್ಯ. ಈತನಿಗೆ ಅಪ್ಪ ಮಾಡಿಟ್ಟ ಸಣ್ಣ ತೋಟ ಹಾಗೂ ಚಿಕ್ಕ-ಪುಟ್ಟ ಕಾಮಗಾರಿಗಳೆ ಬಂಡವಾಳ. ತಕ್ಕ ಮಟ್ಟಿಗೆ ಶಿಕ್ಷಿತನಾಗಿರುವ ಈತ ಮನೆ ಮಾರುಗಳನ್ನೆಲ್ಲಾ ಕಟ್ಟಿ ಹಳ್ಳಿಯ ಪರಿಸರದಲ್ಲೆ ಸ್ವಲ್ಪ ಅನುಕೂಲಸ್ಥನೆಂದು ಅನಿಸಿಕೊಳ್ಳಲು ಬೇಕಾದ ಎಲ್ಲಾ ಮೂಲಸೌಕರ್ಯವನ್ನು ಹೊಂದಿರುವ ಸಾದಾ-ಸಿದಾ ಮನುಷ್ಯ, ಇಂತಿಪ್ಪ ಈತನ ಜನಾನುರಾಗಿ ಕೆಲಸದಲ್ಲಿ ಒಮ್ಮೆ ನಾನು ಹಾಸ್ಯವನ್ನು ಕಂಡಿದ್ದು ಹೀಗೆ. ಅದೇನೆಂದರೆ ಸದಾ ಬಿಳಿಯ ಬಟ್ಟೆ ತೊಟ್ಟು ಹಡಿನಬಾಳದ ಗುಂಡಬಾಳ ಸೇತುವೆಯ ಪಕ್ಕ ಕುಳಿತು ಮೊಟು ಬೀಡಿ ಸೆದುತ್ತಿದ್ದ ತಿಮ್ಮಪ್ಪಜ್ಜ ಅನ್ನೋ ವ್ಯಕ್ತಿಯ ಕುರಿತಾದ ಈ ಸನ್ನಿವೇಶ ವಿಷ್ಣುವಿಗೂ ನನಗೂ ಇನ್ನೂ ಹಾಸ್ಯದ ಸರಕಾಗಿ ಎಂದಾದರೊಮ್ಮೆ ಪರಸ್ಪರ ಭೇಟಿ ಆದಾಗ ನಗುವ ವಿಷಯವಾಗಿ ಸದಾ ಕಾಡುತ್ತಲೆ ಇದೆ. ಅದು ನಡೆದಾದ್ದರು ಹೇಗೆ ಎಂಬುದನ್ನು ನಾನೀಗ ವಿವರಿಸುತ್ತೇನೆ.
ಬಹುಶಃ ಬಿರು ಬಿಸಿಲಿನ ಮಾರ್ಚ್ ತಿಂಗಳಿರಬೇಕು ಸುಮಾರು ಹನ್ನೆರಡು ಗಂಟೆಯ ಸಮಯ ತುಸು ಹೆಚ್ಚಿನ ರೋಗಿಗಳು ಆ ದಿನ ನಮ್ಮ ಆಸ್ಪತ್ರೆಯಲ್ಲಿ ವೈದ್ಯರ ಭೇಟಿಗಾಗಿ ಕಾಯುತ್ತಲ್ಲಿದ್ದರು, ನಾನು ಸಹ ಶುಗರ್, ಹಿಮೊಗ್ಲೊಬಿನ್, ಅಂತೆಲ್ಲ ಕೆಲಸದಲ್ಲಿ ನಿರತನಾಗಿದ್ದೆ. ಆಗಲೇ ವಿಷ್ಣುವಿನ ಕರೆ ನನ್ನ ಮೊಬೈಲ್‌ನಲ್ಲಿ ಒಂದೆ ಸಮನೆ ರಿಂಗಣಿಸುತ್ತಿತ್ತು. ನಂತರ ಕರೆ ಮಾಡಿದರಾಯಿತು ಎಂದು ಅಂದುಕೊಂಡು ಒಂದೆರಡು ಬಾರಿ ಕರೆಯನ್ನು ಕಡಿತಗೊಳಿಸಿದರು ಸಹ ಮತ್ತೆ ಕರೆ ಪುನರಾವರ್ತಿತವಾಗುತ್ತಿತ್ತು. ಏನೋ ಗಂಭೀರವಾದ ವಿಷಯವಿರಬೇಕೆಂದು ಕರೆ ಸ್ವಿಕರಿಸಿದೆ, ಕರೆ ಸ್ವಿಕರಿಸುತ್ತಿದ್ದಂತೆ ವಿಷ್ಣು ಸ್ವಲ್ಪ ಗಾಬರಿಯಿಂದ ಅಣ್ಣ ಸ್ವಲ್ಪ ಅರ್ಜೆಂಟಾಗಿ ಹಡಿನಬಾಳಕ್ಕೆ ಬಂದು ಹೋಗು. ತಿಮ್ಮಪ್ಪಜ್ಜ ಬಹಳ ಸಿರಿಯಸ್ ಆಗಿದ್ದು ಇನ್ನೇನು ಒಂದೆರಡು ತಾಸು ಬದುಕಿರಬಹುದೇನೋ. ಕಣ್ಣೆಲ್ಲಾ ಮೇಲಕ್ಕೆ ಹೋಗಿ ನಾಲಿಗೆ ಹೊರಕ್ಕೆ ಬಂದಿದೆ ಅಂದ. ತಿಮ್ಮಪ್ಪಜ್ಜನ ವಿಚಾರ ಕೇಳಿ ನನಗೂ ಸ್ವಲ್ಪ ಕನಿಕರ ಹುಟ್ಟಿ ಕೂಡಲೆ ಬರುವುದಾಗಿ ಶುಗರ್, ಹಿಮೊಗ್ಲೊಬಿನ್ ಪರೀಕ್ಷಿಸುವ ಮಿಟರ್ ಹಾಗೂ ಬಿ.ಪಿ ನೋಡುವ ಮೀಟರ್ ತೆಗೆದುಕೊಂಡು ವೈದ್ಯಾಧಿಕಾರಿಗಳ ಅನುಮತಿ ಪಡೆದು ಹೊರಟೆ, ನಾನು ತಿಮ್ಮಪ್ಪಜ್ಜನ ಮನೆಗೆ ತಲುಪಿದಾಗ ಅರ್ಧ ಊರೆ ಅಲ್ಲಿ ನೆರೆದಿತ್ತು, ಇನ್ನೇನು ತಿಮ್ಮಪ್ಪಜ್ಜನ ಕೊನೆಯ ಉಸಿರನ್ನು ನಿರೀಕ್ಷಿಸುತ್ತಿದ್ದವರಂತೆ ಎಲ್ಲರೂ ದಂಗೂ ಬಡಿದು ನಿಂತಿದ್ದರು. ನಾನು ತಿಮ್ಮಪ್ಪಜ್ಜನ ಹತ್ತಿರ ಹೋಗಿ ಆತನ ಶುಗರ್, ಹಿಮೊಗ್ಲೊಬಿನ್, ಬಿಪಿ ಎಲ್ಲಾ ಪರೀಕ್ಷಿಸಲಾಗಿ ಎಲ್ಲವೂ ನಾರ್ಮಲ್ ಇತ್ತು. ನನ್ನ ಸುದೀರ್ಘ ಸೇವಾ ಅನುಭವದಿಂದ ವಿಶ್ಲೇಷಿಸಿದಾಗ ನನಗೆ ಅನಿಸಿದ್ದು ಸಾಮಾನ್ಯವಾಗಿ ವಯಸ್ಸಾದ ವ್ಯಕ್ತಿಗಳಲ್ಲಿ ಬೇಸಿಗೆ ಸಮಯದಲ್ಲಿ ಅತಿಯಾದ ಬೆವರು ಹಾಗೂ ನಿಶ್ಯಕ್ತಿಯ ಕಾರಣ ದೇಹದಲ್ಲಿ ನಿರ್ಜಲೀಕರಣ ಉಂಟಾಗಿ ಎಲೆಕ್ಟ್ರೋಲೈಟ್(ಸೊಡಿಯಮ್, ಪೊಟಾಶಿಯಮ್, ಕ್ಲೋರೈಡ್)ಅಂಶ ಕಡಿಮೆಯಾಗುತ್ತದೆ. ಇದರಿಂದಾಗಿ ಕಣ್ಣೆಲ್ಲ ಮೇಲೆಹೋಗಿ ಸ್ಮೃತಿ ತಪ್ಪಿ ಬೀಳುವುದನ್ನು ನಾನು ಬಹಳಷ್ಟು ಬಾರಿ ನೋಡಿದ್ದೇನೆ. ಹಾಗಾಗಿ ಕೂಡಲೆ 108 ಗೆ ಕರೆ ಮಾಡಿ, ತಿಮ್ಮಪ್ಪಜ್ಜನನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿ ಅಲ್ಲಿನ ಜನಾನುರಾಗಿ ವೈದ್ಯರಾಗಿದ್ದ ಡಾ ಪ್ರಕಾಶ ನಾಯ್ಕರನ್ನು ಸಂಪರ್ಕಿಸಿ ವಿಷಯ ತಿಳಿಸಿದೆ. ಇಲ್ಲಿಗೆ ನನ್ನ ಜವಾಬ್ದಾರಿ ಮುಗಿಯಿತೆಂದು ಅರಿತು ಅಲ್ಲಿಂದ ಹೊರಟು ಬಂದೆ. ಹೀಗೆ ದಿನವೂ ಕಳೆಯಿತು ತಿಮ್ಮಪ್ಪಜ್ಜನ ವಿಷಯವೂ ಮರೆತು ಹೋಯಿತು. ವಿಷ್ಣುವಿನ ಕರೆಯೂ ಬರಲಿಲ್ಲ. ಒಟ್ಟಾರೆಯಾಗಿ ಒಂದು ತಿಂಗಳು ಕಳೆದು ಹೋಗಿತ್ತು.

ಒಂದು ಮುಂಜಾನೆ ನನ್ನ ಬಟ್ಟೆ ಇಸ್ತ್ರಿ ಕೊಡಲು ಹಡಿನಬಾಳಾದ ಬ್ರಿಜ್‌ನ ಹತ್ತಿರ ಕಾರು ನಿಲ್ಲಿಸಿದಾಗ ಸತ್ತೆ ಹೋದ ಎಂದು ಅಂದುಕೊಂಡಿದ್ದ ತಿಮ್ಮಪ್ಪಜ್ಜ ಅದೆ ಬ್ರಿಜ್‌ನ ತುದಿಗೆ ಕುಳಿತು ಸುದೀರ್ಘವಾಗಿ ಬೀಡಿ ಎಳೆಯುತ್ತಿರುವುದನ್ನು ಕಂಡು ನನ್ನ ಮೇಲೆಯೆ ನನಗೆ ಹೆಮ್ಮೆ ಎನಿಸಿ ನಾನೆ ಇತನ ಜೀವ ಉಳಿಸಿಬಿಟ್ಟೆನು ಎಂದು ಅಂದುಕೊಂಡು ಮನಸಲ್ಲೆ ಖುಷಿಪಟ್ಟೆ. ಕಾರು ಅಲ್ಲಿಂದ ಮುಂದುವರೆದಂತೆಲ್ಲ ಆ ಊರಿನ ಜನರ ಕಣ್ಣುಗಳು ನನ್ನನ್ನೆ ಬಹಳ ಹೆಮ್ಮೆಯಿಂದ ನೋಡುತ್ತಿರುವಂತೆಯೆ ಭಾಸವಾಯಿತು. ಅಲ್ಲಿಂದ ಹೊರಟ ನಾನು ಮುಂದೆ ನನ್ನದೆ ಕೆಲಸದಲ್ಲಿ ನಿರತನಾದೆ. ಎಲ್ಲ ವಿಷಯಕ್ಕೂ ಮರೆವಿನ ಲೇಪನ ಬಿದ್ದಾಗಿತ್ತು. ಹೀಗೆ ಈ ಘಟನೆಯ ಫಲಿತಾಂಶದ ಅರಿವು ನನಗೆ ಮೂಡಿದ್ದು ಸುಮಾರು ಒಂದುವರೆ ವರ್ಷದ ನಂತರವೆ. ಅಲ್ಲಿಯವರೆಗೂ ಗುಪ್ತಗಾಮಿನಿಯಾಗಿ ಉಳಿದಿದ್ದ ಈ ಸತ್ಯ ಮನಪಟಲದಲ್ಲಿ ಮರೆತೆಹೋಗಿದ್ದ ತಿಮ್ಮಪ್ಪಜ್ಜನನ್ನು ಮತ್ತೆ ನೆನಪಿಸಿತ್ತು.
ಅಷ್ಟೇನು ರೋಗಿಗಳಿಲ್ಲದ ಆ ದಿನ ಆಸ್ಪತ್ರೆಯಲ್ಲಿ ನಾನು ಮತ್ತು ನನ್ನ ವೈದ್ಯಾಧಿಕಾರಿಗಳು ಪುರುಸೊತ್ತಿನಲ್ಲಿ ಕೂತು ಮಾತನಾಡುತ್ತಿದ್ದೆವು. ಆಗ ಯಾರೋ ಒಬ್ಬ ಹುಡುಗ ಹೊರಗಡೆ ನನ್ನನ್ನು ವಿಚಾರಿಸುತ್ತಿದ್ದುದು ನನ್ನ ಕಿವಿಗೆ ಬಿತ್ತು ತಕ್ಷಣ ಆತನನ್ನು ಒಳಗಡೆ ಬರ ಹೇಳಿ ಮಾತನಾಡಿಸಿದೆ. ಆಗ ಆತ ವೈಕುಂಠ ಸಮಾರಾಧನೆಯ ಕಾರ್ಡನ್ನು ಕೈಗಿತ್ತು ಬರುವಂತೆ ಕೋರಿದ, ಒಮ್ಮೆ ಕಾರ್ಡಿನ ಮೇಲೆ ಕಣ್ಣಾಡಿಸಿದ ನಾನು ತಿಮ್ಮಪ್ಪಜ್ಜನ ಫೋಟೊ ನೋಡಿ ಪಾಪ ತಿಮ್ಮಪ್ಪಜ್ಜ ಯಾವಾಗಾ ಸತ್ತ ಅಂದೆ. ಆಗ ಬಂದ ಮಾಹಿತಿ ಕೇಳಿ ತಲೆ ತಿರುಗಿ ಬಿಳುವ ಸರದಿ ನನ್ನದಾಗಿತ್ತು. ಅದೇನೆಂದರೆ ಅಣ್ಣಾ ನಾನು ತಿಮ್ಮಪ್ಪಜ್ಜನ ಅಣ್ಣನ ಮಗ. ಆತನ ಮಕ್ಕಳು ಯಾರು ಸಹ ಆತನ ಅಪರಕರ್ಮ ಮಾಡಲು ಸಿದ್ಧರಿಲ್ಲವಾದ್ದರಿಂದ ಅದನ್ನು ನಾವು ಮಾಡುತ್ತಿದ್ದೇವೆ. ನಿವೇನೋ ಆತನನ್ನು ಒಮ್ಮೆ ಉಳಿಸಿ ಮತ್ತಷ್ಟು ತಾಪತ್ರಯಕ್ಕೆ ಅವರನ್ನು ತಳ್ಳಿಬಿಟ್ಟಿರಿ. ಆಗಲೆ ಸತ್ತಿದ್ದರೆ ಒಳ್ಳೆಯದಿತ್ತು. ಮನೆಯಾದರೂ ಉಳಿಯುತ್ತಿತ್ತು. ಈಗ ಅದನ್ನು ಮಾರಿಬಿಟ್ಟಿದ್ದಾನೆ ಬಡ್ಡಿ ಮಗ. ಅಂದ ಹಾಗೆ ಅವನು ಇದ್ದ ಬದ್ದ ಜಮೀನನ್ನೆಲ್ಲಾ ಕುಡಿತ, ಜೂಜಿಗೆ ಅಡ ಇಟ್ಟು ಅದನ್ನು ನುಂಗಿ ನೀರು ಕುಡಿದಿದ್ದಾನೆ. ಪಾಪ ಆತನ ಹೆಂಡತಿ ಈತನ ಕಾಟ ತಾಳಲಾರದೆ ತವರು ಮನೆಯಲ್ಲಿ ಹೋಗಿ ಉಳಿದಿದ್ದಾಳೆ. ಇದ್ದಾಗ ಕುಡಿದು ಬಂದು ಮಕ್ಕಳೆಲ್ಲರಿಗೂ ಹೊಡೆದು ಬಡಿದು ಮಾಡುತ್ತಿದ್ದ ಈತನನ್ನು ಬಾಯಿಗೆ ಬಂದ ಹಾಗೆ ಬೈಯುತ್ತಾರೆ ಮಕ್ಕಳು. ಹೆಣ ಸುಡಲು ಸಹ ಬರದೆ ಸತ್ತರೆ ಸಾಯಲಿ ನಮಗೂ ಆತನಿಗೂ ಸಂಬಂಧ ಇಲ್ಲವೆನ್ನುತ್ತಿದ್ದಾರೆ ಅಂದ. ಆತನನ್ನು ನೀವು ಒಮ್ಮೆ ಉಳಿಸಿದ್ದಾಗ ನಿಮಗೂ ಹಾಗೂ ವಿಷ್ಣುವಿಗೂ ಅವರ ಮನೆಯವರೆಲ್ಲಾ ಹಿಗ್ಗಾಮುಗ್ಗಾ ಬೈದಿದ್ದರು, ಎಂದವನು ಹೇಳಿದಾಗ, ಪೆಚ್ಚಾಗುವ ಸರದಿ ನನ್ನದು! ಮುಂದಿನದು ನಿಮ್ಮ ಊಹೆಗೆ ಏನಂತಿರಾ.

ವಿನಾಯಕ ಎಸ್ ನಾಯಕ ವಿನಾಯಕ ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಖರ್ವಾದಲ್ಲಿ ಹಿರಿಯ ಪ್ರಯೋಗಶಾಲಾ ತಂತ್ರಜ್ಞರಾಗಿ ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. “ಕಾಲಮಾನ” (ಕವನ ಸಂಕಲನ-೨೦೧೭), ನಗೆಯ ಹೂ ಚೆಲ್ಲಿ (ಕವನ ಸಂಕಲನ), ಬೊಂಬೆಮಿಠಾಯಿ (ಕಥಾಸಂಕಲನ), ಖಂಡತುಂಡೋಕ್ತಿ (ಹೇಳಿಕಾ ಗುಚ್ಚ) ಕುಚ್ಚೋಡಿ (ಕಾದಂಬರಿ) ಸೇರಿ ಒಟ್ಟು ಎಂಟು ಕೃತಿಗಳು ಪ್ರಕಟವಾಗಿವೆ.
