ಕಾದಂಬರಿಯ ಬಹುಮುಖ್ಯ ಗುರಿಯಿರುವುದು ದೇವದಾಸಿ ಪದ್ಧತಿಯ ಅನಿಷ್ಟವನ್ನು ಚರ್ಚೆಯ ಮುನ್ನೆಲೆಗೆ ತರುವುದು. ಕೆಳಜಾತಿಗಳ ದೇವಳ ಪ್ರವೇಶ ಹಾಗೂ ಕೆರೆ ನೀರ ಬಳಕೆಯಂತಹ ಮೂಲಭೂತ ಹಕ್ಕುಗಳ ವಿಷಯವನ್ನು ಪ್ರಸ್ತಾಪಿಸುವುದು. ಇಂತಹ ಜಟಿಲ ವಿಷಯಗಳ ಪ್ರಸ್ತಾಪನೆ ಮಾತ್ರ ಸಾಕಾಗುವುದಿಲ್ಲವೆಂಬ ಅರಿವಿನ ಕಾದಂಬರಿಕಾರ ಪರಿವರ್ತನೆಯ ಮುನ್ನೆಲೆ ನಾಯಕರನ್ನೂ ಅದನ್ನು ಬಯಸುವ ಸಮಾಜದಿಂದಲೇ ಸೃಷ್ಟಿಸಿದ್ದಾರೆ.
ವೈ.ಎಸ್.‌ ಹರಗಿಯವರ ‘ಕೆಂಡದ ನೆರಳು’ ಕಾದಂಬರಿಗೆ ಕೇಶವ ಮಳಗಿ ಬರೆದ ಮುನ್ನುಡಿ

 

ಕನ್ನಡ ಸಾಹಿತ್ಯದಲ್ಲಿ ಅದೇಕೋ ಒಂದಷ್ಟು ಕಾಲ ಮರೆಯಾಗಿದ್ದ ಕಾದಂಬರಿ ಪ್ರಕಾರವು ಇತ್ತೀಚಿನ ವರ್ಷಗಳಲ್ಲಿ ಮತ್ತೆ ಮುಂಚೂಣಿಗೆ ಬರುತ್ತಿರುವ ಪ್ರಕಾರವಾಗಿದೆ. ಅಪಾರವಾದ ತನ್ಮಯತೆ, ವಿಶಾಲ ಜೀವನ ದೃಷ್ಟಿಕೋನ, ಕುಶಲತೆ ಮತ್ತು ಒಂದು ವಸ್ತುವನ್ನು ಅದರೆಲ್ಲ ಮಗ್ಗುಲುಗಳಿಂದ ಕಂಡಿರಿಸುವ ಸಾತತ್ಯಗಳನ್ನು ಬೇಡುವ ಈ ಪ್ರಕಾರಕ್ಕೆ ಅನೇಕ ಹೊಸ ತಲೆಮಾರಿನ ಲೇಖಕರು ಒಲಿಯುತ್ತಿರುವುದು ಸಂತಸಕರವೂ, ಸಕಾರಾತ್ಮಕವೂ ಆದ ಸಂಗತಿ. ಕಾವ್ಯವನ್ನು ಪ್ರಯೋಗಮತಿ ಪರಿಣಿತರೂ, ಕಥೆಯನ್ನು ಕಲೆ ಕುಶಲಿಗರು, ಶಾಸ್ತ್ರಗಳನ್ನು ಪಂಡಿತರು ಪ್ರೀತಿಯಿಂದ ಅಪ್ಪಿಕೊಳ್ಳುವರು ಎಂಬುದು ವಾಡಿಕೆಯ ಮಾತು. ಇವೆಲ್ಲವುಗಳ ಸಂಯೋಗವಾದ ಕಾದಂಬರಿ ಪ್ರಕಾರವನ್ನು ಬಿಗಿದಪ್ಪಿಕೊಳ್ಳುವ ಬೆಡಂಗರು ಕಾವ್ಯಪರಿಣತ, ಕುಶಲಶಾಸ್ತ್ರಕೋವಿದರಾಗಿರಬೇಕೆಂಬುದು ಓದುಗರ ನಿರೀಕ್ಷೆ.

ವೈ.ಎಸ್. ಹರಗಿಯವರು ಅಂಥದನ್ನು ಸಾಧಿಸುವ ಪ್ರಯತ್ನಗಳಲ್ಲಿರುವ ಲೇಖಕರು. `ಕೆಂಡದ ನೆರಳು’ ಅವರ ನಾಲ್ಕನೆಯ ಕಾದಂಬರಿ. ಅವರ ಮೂರನೆಯ ಕಾದಂಬರಿ `ಉರಿವ ಜಲ’ದಂತೆಯೇ ಸ್ವಾತಂತ್ರ್ಯಪೂರ್ವದ ಗ್ರಾಮೀಣ ಭಾರತವನ್ನು ಹಿನ್ನೆಲೆಯಾಗಿಟ್ಟುಕೊಂಡ ಕಾದಂಬರಿ. ಆದರೆ ಕಥಾವಸ್ತು ಮಾತ್ರ ಅತ್ಯಂತ ವಿಭಿನ್ನವಾಗಿದೆ. ಕಥೆ ನಡೆಯುವ ಕಾಲಾವಧಿಯನ್ನು ಹೇಳಿದ್ದೇ ಭೂಮಾಲಿಕ ಪ್ರಾಬಲ್ಯದ, ಜಾತಿ-ವರ್ಗ ಸಂಘರ್ಷದ ಚಿತ್ರಗಳು ಕಣ್ಮುಂದೆ ಬರಬಲ್ಲವು. ಅಂತೆಯೇ, ರಾಷ್ಟ್ರೀಯ ಆಂದೋಲನ, ಆಗ ಪ್ರಚಲಿತವಿದ್ದ ಸಾಮಾಜಿಕ ಅನಿಷ್ಟಗಳು, ಸುಧಾರಕರು ಸ್ಮೃತಿಯಲ್ಲಿ ಸುಳಿದು ಹೋಗಬಹುದು.

(ವೈ.ಎಸ್.‌ ಹರಗಿ)

ವಿರುದ್ಧ ಹಿತಾಸಕ್ತಿಗಳಿಂದ ವಿಘಟಿತವಾಗಿದ್ದ, ಸಕಲ ಅಪಸವ್ಯಗಳನ್ನೂ ತನ್ನ ದೇಹದಲ್ಲಿರಿಸಿಕೊಂಡಿದ್ದ ಅಸಮಾನ ಭಾರತದ ಕಥೆ ದಾರುಣದ್ದು. ಒಂದೆಡೆ ಸೂರ್ಯ ಮುಳುಗದ ಸಾಮ್ರಾಜ್ಯದ ವ್ಯಾಪಾರಿ ಪ್ರತಿನಿಧಿಗಳ ಅಟ್ಟಹಾಸದ ಆಳ್ವಿಕೆ, ಇನ್ನೊಂದೆಡೆ ಸ್ವಜನರ ಸ್ವಾರ್ಥ, ಕೌರ್ಯಗಳು ತುಂಬಿದ್ದ ದಬ್ಬಾಳಿಕೆ. ಸಾಮಾನ್ಯ ಜನ ನೆಲದ ಮಹಾಕಾವ್ಯಗಳೆಂದು ಆರಾಧಿಸುವ ರಾಮಾಯಣ, ಮಹಾಭಾರತದ ಲೋಕ ಪ್ರತಿ ಹಳ್ಳಿಯಲ್ಲೂ ನಗ್ನನೃತ್ಯ ಮಾಡುತ್ತಿದ್ದ ಸಮಾಜವದು.

`ಕೆಂಡದ ನೆರಳು’ ಕಾದಂಬರಿಯು ಮೇಲೆ ಹೇಳಿದ ಎಲ್ಲ ಅಂಶವನ್ನೂ ಒಳಗೊಂಡಿರುವ ಕಾದಂಬರಿ. ಬಸವಿಪುರ, ಹನುಮಾಪುರ ಎಂಬ ಅವಳಿ ಗ್ರಾಮಗಳ ಕಥೆಯನ್ನು ಹೇಳುತ್ತಿದ್ದರೂ ಆ ಕಾಲಘಟ್ಟದ ಭಾರತದ ವಸ್ತುಸ್ಥಿತಿಯನ್ನು ತೆರೆದಿಡುವಂಥದ್ದು. ಇಲ್ಲಿನ ಜನರ ಸ್ವಾರ್ಥ, ಹದ್ದುಮೀರಿದ ಕಾಮ, ದುರ್ವತನೆ, ದುರಾಸೆ, ಮುಗ್ಧತೆ, ಅಸಹಾಯಕತೆ, ನೋವು ಎಲ್ಲ ಸಮಾಜಗಳಲ್ಲೂ ಇರುವಂಥದ್ದಾದರೂ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಒಡೆದು ಕಾಣುತ್ತಿದ್ದ ಸತ್ಯ. ಈ ಕ್ರೂರ ಭಯಾನಕ ಸತ್ಯವನ್ನು ಬದಲಿಸಲು ಅಸ್ತಿತ್ವವೇ ಇಲ್ಲದ ಸಾಮಾನ್ಯರು, ಸಮಾಜದ ಅನಿಷ್ಟವನ್ನು ತೊಲಗಿಸಲು ಕಟಿಬದ್ಧರಾಗಿದ್ದ ಸುಧಾರಕರು, ಸಮಾಜವನ್ನು ಮುನ್ನಡೆಸುವ ಶಕ್ತಿವಂತರು ಹೇಗೆ ಪ್ರಯತ್ನಿಸಿದರು, ತಮ್ಮ ಬಲಿದಾನದ ಮೂಲಕ ಲೋಕಹಿತವನ್ನು ಬಯಸಿದರು ಎಂಬುದನ್ನು ‘ಕೆಂಡದ ನೆರಳು’ ಅನಾವರಣಗೊಳಿಸುತ್ತದೆ.

ಸ್ವಾತಂತ್ರ್ಯಪೂರ್ವದ ಭೂಮಾಲಿಕ ವ್ಯವಸ್ಥೆಯ ಪಟ್ಟಭದ್ರರಾಗಿದ್ದ ದೇಸಾಯರು, ಕುಲಕರ್ಣಿ, ಪೂಜಾರಿಗಳು ಮತ್ತು ಆ ವ್ಯವಸ್ಥೆಯ ಸಮರ್ಥಕರು ಒಂದೆಡೆಯಿದ್ದರೆ, ಇನ್ನೊಂದೆಡೆ ಜನಸಾಮಾನ್ಯರು, ಬದಲಾವಣೆ ಬಯಸುವ ಕನಸುಗಾರರು, ಸಮಾಜ ಮುನ್ನಡೆಸುವ ದಾರ್ಶನಿಕರು ಇದ್ದಾರೆ. ಈ ಎರಡು ಸಮುದಾಯಗಳಿಂದ ತಮ್ಮ ಹಿತಾಸಕ್ತಿಯನ್ನು ಹೇಗೆ ಸಾಧಿಸಬೇಕೆಂಬುದರಲ್ಲಿ ಪರಿಣಿತರಾದ ಬ್ರಿಟಿಶ್ ಆಡಳಿತಗಾರರೂ ಇದ್ದಾರೆ.

ಕಥಾಸ್ಥಳ ಬಸವಿಪುರ ಮತ್ತು ಹನುಮಾಪುರ, ಸುತ್ತಮುತ್ತಲಿನ ಪ್ರದೇಶ. ಕಥೆಯ ಮುಖ್ಯ ಹಂದರ: ದೇಸಾಯರು ಮತ್ತು ಅವರು ನಿರ್ಮಿಸಿಕೊಂಡ ಬಲಾಢ್ಯ ವ್ಯವಸ್ಥೆಯಲ್ಲಿ ಸಿಲುಕಿ ನಲಗುವ ಸಾಮಾನ್ಯರು. ಕಥೆಗೆ ಇನ್ನಷ್ಟು ನಿರ್ದಿಷ್ಟತೆಯನ್ನು ತರಲು ಆ ಕಾಲದಲ್ಲಿ ಪ್ರಚಲಿತವಾಗಿದ್ದ, ಸಾಮಾಜಿಕ ಅನಿಷ್ಟವಾಗಿದ್ದ ದೇವದಾಸಿ ಪದ್ಧತಿ, ಕೆರೆ ನೀರಿನ ಬಹಿಷ್ಕಾರ, ದೇವಳ ಪ್ರವೇಶ, ಸ್ವಾತಂತ್ರ್ಯ ಹೋರಾಟಗಳನ್ನು ಕಾದಂಬರಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಥೆಯ ಕಾಲ: ಇಪ್ಪತ್ತನೆಯ ಶತಮಾನದ ಆರಂಭಿಕ ದಶಕಗಳು.

ಲಿಂಗಪ್ಪ ದೇಸಾಯಿ, ಅವರ ಮಲತಮ್ಮ ಸಿ.ಕೆ. ದೇಸಾಯಿ, ಕುಲಕರ್ಣಿ ಯಂಕಪ್ಪ, ಜಮಾದಾರ ಬಾಳಪ್ಪ, ಲಕ್ಷ್ಮಯ್ಯ ಮಠಪತಿ ಮುಂತಾದವರು ಒಂದು ವ್ಯವಸ್ಥೆಯನ್ನು ಪ್ರತಿನಿಧಿಸಿದರೆ, ಲಚ್ಚವ್ವ, ಕರಿಯವ್ವ, ಸರಸವ್ವ, ಕಾಕಾ ಸಾಹೇಬ, ನಾಮದೇವ ಕಾಳೆ, ಮುಕ್ತಾಬಾಯಿ, ದುರ್ಬೀನು ಸಾಹೇಬ, ಅದುಬುಲ್ಲ ಸಾಬ್ ಮುಂತಾದವರು ಇನ್ನೊಂದು ಧ್ರುವವನ್ನು ಪ್ರತಿನಿಧಿಸುವ ಮನುಷ್ಯ ಪ್ರಪಂಚದಲ್ಲಿರುವವರು. ದೇವದಾಸಿ ಪದ್ಧತಿ, ಕೆರೆ ನೀರು, ಓಕಳಿ, ಕಳವು, ಹಾದರ, ಹತ್ಯೆ, ಬದಲಾವಣೆಯ ಕನಸಗಳನ್ನು ಹೊತ್ತು ಮನುಷ್ಯ ಮತ್ತು ವಿಧಿಲಿಖಿತ ಸಂಗತಿಗಳಿಗೆ ಪಕ್ಕಾಗುವ ಈ ಎಲ್ಲ ಪಾತ್ರಗಳು ಸಂಕ್ರಮಣ ಸ್ಥಿತಿಯ ಸಮಾಜ ಮತ್ತು ಬದುಕನ್ನು ಕಥಿಸುತ್ತವೆ. ಹಳೆಯ ಹೊಸದರ ಸಂಘರ್ಷದಲ್ಲಿ ಹೊಸತು ಗೆಲುವು ಸಾಧಿಸಿತು ಎಂದರೂ ಅದಕ್ಕೆ ಮನುಷ್ಯಲೋಕ ತೆರಬೇಕಾದ ಬೆಲೆ ಅಸಾಧಾರಣವಾದುದು. ಬಲಿದಾನ ಮತ್ತು ತ್ಯಾಗಕ್ಕೆ ಸಂಬಂಧಿಸಿದ್ದು ಎಂದು ಕಾದಂಬರಿ ಹೇಳುತ್ತದೆ.

ಸ್ವಾತಂತ್ರ್ಯಪೂರ್ವದ ಭೂಮಾಲಿಕ ವ್ಯವಸ್ಥೆಯ ಪಟ್ಟಭದ್ರರಾಗಿದ್ದ ದೇಸಾಯರು, ಕುಲಕರ್ಣಿ, ಪೂಜಾರಿಗಳು ಮತ್ತು ಆ ವ್ಯವಸ್ಥೆಯ ಸಮರ್ಥಕರು ಒಂದೆಡೆಯಿದ್ದರೆ, ಇನ್ನೊಂದೆಡೆ ಜನಸಾಮಾನ್ಯರು, ಬದಲಾವಣೆ ಬಯಸುವ ಕನಸುಗಾರರು, ಸಮಾಜ ಮುನ್ನಡೆಸುವ ದಾರ್ಶನಿಕರು ಇದ್ದಾರೆ.

ಇತಿಹಾಸ, ಕನಸು, ಕಲ್ಪನೆಗಳ ಮಿಶ್ರಣವಾದ ಈ ಕಾದಂಬರಿಯಲ್ಲಿ ಕಲ್ಪಿತ ಪಾತ್ರ, ಘಟನೆಗಳಂತೆಯೇ ನಿಜ ಜೀವನದ ಪಾತ್ರಗಳಾದ ಅಂಬೇಡ್ಕರ್, ಗಾಂಧಿ, ಕಾಕಾ ಕಾರಖಾನೀಸ, ಕೌಜಲಗಿ ಹನುಮಂತ ರಾವ್, ಉತ್ತಂಗಿ ಚನ್ನಪ್ಪ ಮುಂತಾದವರು ಉಲ್ಲೇಖವಾಗಿ, ಹಲವೊಮ್ಮೆ ಪ್ರತ್ಯಕ್ಷ-ಪರೋಕ್ಷವಾಗಿ ಸುಳಿದಾಡುತ್ತಾರೆ. ಹೀಗಾಗಿ, ಇದೊಂದು ಕನಸು-ಕಲ್ಪನೆಗಳ ಕಥಾನಕವಾಗಿರುವಂತೆಯೇ ಇತಿಹಾಸ ಲೇಪಿತ ನಿರೂಪಣೆಯೂ ಹೌದು.

ಕಾದಂಬರಿಯಲ್ಲಿ ಸಂಭಾಷಣೆಗೆ, ನಾಟಕೀಯತೆಗೆ ಪ್ರಾಧಾನ್ಯತೆ. ಒಳಹೊರ ಸುಳಿಗಳಂತೆ ಪ್ರಸಂಗಗಳು ಒಂದಕ್ಕೊಂದು ಸೇರುತ್ತ, ಸೇರುತ್ತ, ಜಟಿಲವೂ, ನಿಗೂಢವೂ ಆಗುತ್ತ ಹೋಗುವುದು ವಿಶಾಲವಾದ ತಂತ್ರ. ಕೆರೆ ನೀರನ್ನು ಕೆಳಜಾತಿಯವರು ಬಳಸದಂತೆ ತಡೆಯಾಜ್ಞೆ ತರುವ ಸಿ.ಕೆ. ದೇಸಾಯಿ, ಪಂಚಾಯಿತಿಯಲ್ಲಿನ ತಿಜೋರಿ ಕಳುವಾಗುವುದು, ಸಿ.ಕೆ. ದೇಸಾಯಿಯ ಬಾಲವಿಧವೆ ಸೋದರಿ ಸುಶೀಲ, ನಿರ್ಗುಣಾನಂದ ಸ್ವಾಮೀಜಿ ಕಣ್ಮರೆ, ಬುದ್ಧಿಮಾಂದ್ಯ ಮಗು (ಯಂಕಪ್ಪನ ಮಗಳು) ತುಂಗವ್ವ ದೇವರ ಕೆರೆಯಲ್ಲಿ ಮುಳುಗಿ ಸಾಯುವುದು, ಹುಚ್ಚಮಲ್ಯಾನ ಹತ್ಯೆ, ಪಾಪಪ್ರಜ್ಞೆಯಿಂದ ಎದೆ ಒಡೆದುಕೊಂಡ ದುರ್ಮರಣವಪ್ಪುವ ಲಿಂಗಪ್ಪ ದೇಸಾಯಿ, ಮೇಲ್ಜಾತಿಯ ಷಡ್ಯಂತ್ರದಿಂದ ಮದುವೆಯಾಗಿ ಸಂಸಾರವಂದಿಗಳಾಗಿದ್ದ ದೇವದಾಸಿ ಕುಲದ ಸಂಗವ್ವ ಮುತ್ತುಕಟ್ಟುವ ಕಟುಶಿಕ್ಷೆಗೆ ಗುರಿಯಾಗುವುದು… ಹೀಗೆ ಅಕ್ಷರಶಃ ನೂರಾರು ಪ್ರಸಂಗಗಳನ್ನು ಈ ಕಾದಂಬರಿಯಲ್ಲಿ ಎದುರುಗೊಳ್ಳುತ್ತೇವೆ. ಕಥಾಪ್ರಸಂಗಗಳ ಹರಹು, ವ್ಯಾಪ್ತಿ ಮತ್ತು ಅದು ನೀಡಲು ಬಯಸುವ ಕಾಣ್ಕೆಗಳು ಹಿರಿದಾದುವಾದುದರಿಂದ ಕಾದಂಬರಿಯ ಗಾತ್ರವೂ ದೊಡ್ಡದು. ಘಟನೆಗಳನ್ನು ಹಾಸುಹೊಕ್ಕಾಗಿಸುವಾಗ ಕೆಲವೆಡೆ ಜಾಣ್ಮೆ ಮೇಲುಗೈ ಸಾಧಿಸಿದ್ದರೆ, ಕೆಲವೆಡೆ ಕೇವಲ ಸಾಂಕೇತಿಕವಾಗಿವೆ.

ಕಾದಂಬರಿಯ ಬಹುಮುಖ್ಯ ಗುರಿಯಿರುವುದು ದೇವದಾಸಿ ಪದ್ಧತಿಯ ಅನಿಷ್ಟವನ್ನು ಚರ್ಚೆಯ ಮುನ್ನೆಲೆಗೆ ತರುವುದು. ಕೆಳಜಾತಿಗಳ ದೇವಳ ಪ್ರವೇಶ ಹಾಗೂ ಕೆರೆ ನೀರ ಬಳಕೆಯಂತಹ ಮೂಲಭೂತ ಹಕ್ಕುಗಳ ವಿಷಯವನ್ನು ಪ್ರಸ್ತಾಪಿಸುವುದು. ಇಂತಹ ಜಟಿಲ ವಿಷಯಗಳ ಪ್ರಸ್ತಾಪನೆ ಮಾತ್ರ ಸಾಕಾಗುವುದಿಲ್ಲವೆಂಬ ಅರಿವಿನ ಕಾದಂಬರಿಕಾರ ಪರಿವರ್ತನೆಯ ಮುನ್ನೆಲೆ ನಾಯಕರನ್ನೂ ಅದನ್ನು ಬಯಸುವ ಸಮಾಜದಿಂದಲೇ ಸೃಷ್ಟಿಸಿದ್ದಾರೆ. ಲಚ್ಚವ್ವ ಅಂತಹ ಆದರ್ಶ ಪಾತ್ರವಾಗಿ ಹೊರಹೊಮ್ಮಿದ್ದಾಳೆ. ದೇವದಾಸಿಯಾದ ಆಕೆ ಊರ ಬಲಾಢ್ಯ ಪುರುಷರ ಕಾಮಕ್ಕೆ ಮೈ ತೆರೆದುಕೊಳ್ಳುವವಳು. ಲಿಂಗಪ್ಪ ದೇಸಾಯಿ, ಸರ್ಕಾರಿ ಅಧಿಕಾರಿಗಳು, ಜಮಾದಾರ ಬಾಳಪ್ಪ ಹೀಗೆ ಆಕೆಯನ್ನು ಎಲ್ಲರೂ ಶೋಷಿಸುವವರೆ. ಆದರೆ, ಒಂದು ನಿರ್ಣಾಯಕ ಘಟ್ಟದಲ್ಲಿ ಆಕೆ ಸಿಡಿದೇಳುತ್ತಾಳೆ. ಆಕೆಯನ್ನು ಮದುವೆಯಾಗಿ ಅವಳಿಗೆ ಒತ್ತಾಸೆಯಾಗಿ ನಿಲ್ಲುವವನು ಅಬ್ದುಲ್ ಸಾಹೇಬ.(ಹಳ್ಳಿಗರು ಆ ಹೆಸರನ್ನು ಅದುಬುಲ್ಲ ಎಂದು ಅಪಬ್ರಂಶವಾಗಿ ಉಚ್ಚರಿಸುತ್ತಾರೆ)ಲಚ್ಚವ್ವಳಿಗೆ ಬಾಳಪ್ಪನಿಂದ ಹುಟ್ಟಿದ ಸರಸವ್ವ ಎಂಬ ಮಗಳಿದ್ದಾಳೆ. ಆತನಾದರೂ ಮಗಳನ್ನೇ ಮೋಹಿಸುವ ಧೂರ್ತ. ಬಾಳಪ್ಪನ ಮಗ ಶಿವಲಿಂಗನೂ ಸರಸಿಯ ಪ್ರಿಯಕರನೇ. ತಂದೆ-ಮಗನ ಕಾಮಸಮರದಲ್ಲಿ ಬಾಳಪ್ಪ ಸೆರೆವಾಸಿಯಾಗುವುದು ಇಲ್ಲಿನ ಚೋದ್ಯ.

(ಕೇಶವ ಮಳಗಿ)

ಲಚ್ಚವ್ವಳ ಆದರ್ಶವನ್ನು ಜೀವಂತವಾಗಿರಿಸಲು ಅಬ್ದುಲ್ಲ, ಕಾಕಾ ಸಾಹೇಬ ಪಾಟೀಲ, ನಾಮದೇವ ಕಾಳೆ, ಮುಕ್ತಾಬಾಯಿಯಂಥ ಸಮಾಜ ಸುಧಾರಕರಿದ್ದಾರೆ. ತನ್ನ ದಾರಿ ತಪ್ಪಿದ ಬದುಕಿನ ಅರಿವಾದದ್ದೇ ಆಕೆಯ ಮಗಳು ಸರಸವ್ವ ಕೂಡ ಹೊಸ ಸಮಾಜದ ಕನಸಿನೊಂದಿಗೆ ಹೆಜ್ಜೆ ಹಾಕುತ್ತಾಳೆ. ಮೊದಲೊಮ್ಮೆ ಹೇಳಿದಂತೆ, ಬದಲಾವಣೆಗೆ ಪ್ರತಿಯಾಗಿ ಕಾಲ ಬಯಸುವುದು ತ್ಯಾಗ ಮತ್ತು ಬಲಿದಾನ. ಲಚ್ಚವ್ವ ಅದನ್ನೂ ಸಾಧಿಸುತ್ತಾಳೆ. ದೇವದಾಸಿಯರಿಗೆಂದು ಇನಾಮಾಗಿ ನೀಡಿದ್ದ ಸರ್ಕಾರಿ ಜಮೀನಿನಲ್ಲಿ ಕೆರೆ ನಿರ್ಮಿಸಿ ತಮ್ಮದೆಂದು ಸಾಧಿಸುವ ಬಲಾಢ್ಯರಿಗೆ ತನ್ನ ಜೀವವನ್ನೇ ನೀಡುವ ಮೂಲಕ ಪಾಠವನ್ನು ಕಲಿಸುತ್ತಾಳೆ. ಮೌಢ್ಯ ತುಂಬಿದ, ವಿವೇಚನಾರಹಿತವಾದ, ಬಲವನ್ನಷ್ಟೇ ನಂಬಿರುವ ಅಧಿಕಾರ ಕೇಂದ್ರಕ್ಕೆ ಬಲಿದಾನದ ಮೂಲಕ ಕಣ್ಣು ತೆರೆಸುತ್ತಾಳೆ. ಕಾದಂಬರಿಯಲ್ಲಿ ಸುಖದ ಗಳಿಗೆಗಿಂತ ದುಃಸ್ವಪ್ನಗಳೇ ಕಿಕ್ಕಿರಿದು ಕೇಕೆ ಹಾಕಿ ವಿಷಮ ಸಾಮಾಜಿಕ ರಚನೆಯೇ ಕಾರಣವೆಂದು ಕಾದಂಬರಿ ಸೂಚಿಸುತ್ತಿರುವಂತಿದೆ. ಕಾದಂಬರಿಯಲ್ಲಿ ನಿರ್ಲಿಪ್ತ ಮೌನಿಯಂತೆ ಕಾಣುವ ಬೋಧಿ ಭಂತಜ್ಜ ಮತ್ತು ಭಂತಜ್ಜನ ಗುಡಿಯು(ವಿಹಾರ) ತುಳಿತಕ್ಕೊಳದಾವರಿಗೆ ಆಶ್ರಯ ತಾಣವಾಗುವದನ್ನು ಲೇಖಕರು ಸಾಂಕೇತಿಕವಾಗಿ ಬಿಂಬಿಸಿದ್ದಾರೆ.

ದೇವದಾಸಿ ಪದ್ಧತಿ, ನಿರ್ಮೂಲನೆಯಾಯಿತೆ, ಕೆಳಜಾತಿಗಳು ಎಲ್ಲ ಕಾಲಕ್ಕೂ ದೇವಳ ಪ್ರವೇಶ ಪಡೆದವೆ, ನೀರು ಎಲ್ಲ ಮನುಷ್ಯರ
ಮೂಲಭೂತ ಹಕ್ಕಾಯಿತೆ? ಎಂಬ ಪ್ರಶ್ನೆಗಳು ಕಾದಂಬರಿ ಮುಗಿದ ನಂತರವೂ ಉಳಿಯುವುದು ನಾವು ಬದುಕುವ ಕಾಲದ ಕೌರ್ಯವನ್ನೇ ತೋರುವುದು. ಗಾಂಧಿ, ಅಂಬೇಡ್ಕರ್ ಮತ್ತು ಅವರ ಸಹಚರರ ಸಮಾಜ ಸುಧಾರಣೆಯ ಕನಸು, ತ್ಯಾಗ, ಅವರು ಕೈಗೊಂಡ ಎಲ್ಲ ಬಗೆಯ ಉಪಕ್ರಮಗಳನ್ನು ವಾರಸುದಾರರಾಗಿ ನಾವು ಜತನದಿಂದ ಉಳಿಸಿಕೊಳ್ಳಲು ಸಫಲರಾಗಿದ್ದೇವೆಯೇ? ಎಂದು ಕೇಳಿಕೊಳ್ಳುವ ಪ್ರಶ್ನೆಗಳು ಆ ನಿಟ್ಟಿನಲ್ಲಿ ಮತ್ತೆ ನಾವು ಯೋಚಿಸಬೇಕಾದ ಅಗತ್ಯವಿದೆ ಎಂಬಲ್ಲಿಗೆ ನಮ್ಮನ್ನು ತಂದು ನಿಲ್ಲಿಸಬಹುದು. ಈ ಕಾದಂಬರಿಯ ಓದು ಅಂತಹ ಪ್ರಶ್ನೆಗಳನ್ನು ನಮ್ಮಲ್ಲಿ ಹುಟ್ಟಿಸಬಲ್ಲುದು.

ಕಾದಂಬರಿಯನ್ನು ಹಸ್ತಪ್ರತಿಯಲ್ಲಿ ಓದಿದಾಗ ಮೂಡಿದ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿರುವೆ. ಲೇಖಕರ ಪರಿಶ್ರಮ, ತಾಳ್ಮೆ ಮತ್ತು ಕಾದಂಬರಿಯಲ್ಲಿ ಪ್ರಸ್ತಾಪಿಸಿದ ವಿಷಯಗಳ ಕುರಿತ ಅವರ ಕಾಳಜಿಗಳನ್ನು ಓದುಗರು ಅರಿತರೆ ಹರಗಿಯವರು ಫಲಪ್ರದರಾಗಿದ್ದಾರೆಂದೇ ಅರ್ಥ. ಅದೇ ಕಾದಂಬರಿಯ ನಿಜವಾದ ಯಶಸ್ಸು.