ವೈಲ್ಡ್‌ ಅಂಡ್‌ ವಿಯರ್ಡ್

ನಾವಿಬ್ಬರು ಊರು
ತಿರುಗಿದೆವು
ಆಕಾಶದ ನೀಲಿಯನ್ನು
ಸಮವಾಗಿ ಹಂಚಿಕೊಂಡೆವು
ಪುಟುಬಾತಿನಲ್ಲಿ ಗಂಟೆಗಟ್ಟಲೆ
ಎಷ್ಟೋ ಸಲ
ನಿಂತುಕೊಂಡು ತೂಕಡಿಸಿದೆವು

ನಾನೊಂದಷ್ಟು ಸುಳ್ಳು ಹೇಳಿದೆ
ನೀನು ಅದರಷ್ಟೇ ಮೋಸ ಮಾಡಿದೆ
ಒಂದೇ ಸಮನೆ
ಒಂದು ಬೇಸನ್‌ ಸಮೋಸ ತಿಂದು
ತಣ್ಣನೆಯ ಪೆಪ್ಸಿಗಾಗಿ ಹಪಹಪಿಸಿದೆ ನೀನು
ನಾನು ಮಳ್ಳನಂತೆ ನಕ್ಕೆ

ತುಟಿ ಕಿತ್ತು ಬರುವಂತೆ
ನೀನು ನನಗೆ ಮುತ್ತು ಕೊಟ್ಟೆ
ನಾನು ಪ್ರತಿ ಸಂಜೆ
ಕಂಠಮಟ್ಟ ಕುಡಿದು ಮಲಗಿದೆ
ಹೇಳಬೇಕೆಂದರೆ ನಾವಿಬ್ಬರೂ
ಸ್ವಲ್ಪ ನಿದ್ದೆಯಲ್ಲಿಯೇ ಹೆಚ್ಚು ಉಸಿರಾಡಿದೆವು
ಒಂದೇ ಚಾದರದಲ್ಲಿ ಜ್ವರದ ಕಾವು
ಅನುಭವಿಸಿ ಗಳಗಳನೆ ಅತ್ತೆವು

ನೀನು ನನ್ನನು ಪ್ರೇಮಿ ಎಂದು
ಒಪ್ಪಲಿಲ್ಲ
ನಾನು ಏನನ್ನೂ ಕೇಳಲಿಲ್ಲ
ತನ್ನಿಂದಾತಾನೇ
ನಮಗೆಲ್ಲವೂ ಸಿಗುತ್ತಾ ಹೋಯಿತು
ನಾವು ಕಳೆದುಕೊಳ್ಳುತ್ತಾ ಹೋದೆವು

ನೆನಪಿದೆಯೇ
ಅರ್ಧ ವರ್ಷಕ್ಕಿಂತ ಹೆಚ್ಚು ನಾವಿಬ್ಬರು
ಮಾತಾಡಲಿಲ್ಲ
ಮತ್ತೆ ಇನ್ನೆಂದೋ ಸಿಕ್ಕಾಗ
ಉನ್ಮತ್ತರಾಗಿ
ನಮ್ಮ ಹೆಸರನ್ನೆ ನಾವೇ
ಅತಿ ಜೋರಾಗಿ ಕೂಗಿಕೊಂಡೆವು
ಕತ್ತಲಲ್ಲಿ ಚುಂಬಿಸುತ್ತಾ
ಮತ್ತೆ ಎಷ್ಟೊಂದು ರಾತ್ರಿ ಕಳೆದೆವು

ಈಗ ಹೇಳು
ಮುಂದಿನ ಸೀನ್‌ ಏನು..?

*

ಎಳನೀರಿನ ಗಂಜಿ

ಗಲಭೆಯ ಊರಿನಲ್ಲಿ
ದಿಕ್ಕು ತಪ್ಪಿ
ಅಳುತ್ತಾ ನಿಂತ ಕೂಸಿಗೆ
ಕಡು ಕೆಂಪು ಗೋರಂಟಿ ತುಂಬಿದ
ಕಿರುಬೆರಳು ದಾರಿ ತೋರುವುದಾದರೆ
ನೀನು ನನ್ನ ಬಾದಾಮಿ ಕಣ್ಣಿನ ಅಕ್ಕ

ಅಪ್ಪನ ಚಪ್ಪಲಿ ರಿಪೇರಿಗೆಂದು
ಅಣ್ಣನ ಉದ್ದ ತೋಳಿನ ಅಂಗಿ ತೊಟ್ಟು
ಸಲೀಸಾಗಿ ಬೀದಿ ದಾಟಿ
ಚಮ್ಮಾರನ ಬಳಿ ನಿಂತು ಎದುಸಿರನಲ್ಲಿ
ಚೌಕಾಶಿ ಮಾಡಿ
ನನಗೊಂದು ಕೇಸರಿ ಐಸ್‌ಕ್ಯಾಂಡಿ
ಜಬರಿಸಿ ಕೊಡಿಸುವ ದಿವ್ಯ ಕಿಡಿ ನನ್ನ ಅಕ್ಕ

ರೈಲಿನ ಸದ್ದಿಗೆ ಬೆದರಿ
ಅಮ್ಮನ ಸೆರಗಿನಲ್ಲಿ ಮುದುಡುವ
ಕೇಸರಿಬಾತಿನಲ್ಲಿ
ಉರಿದ ದ್ರಾಕ್ಷಿ ಹೆಕ್ಕಿ ತಿನ್ನುವ
ಬಿಗಿಯಾದ ಜುಟ್ಟು ತೆಗೆದು
ಒಂಟಿ ಸಂಪಿಗೆ ಹೂ ಮುಡಿಯುವ
ಅಯಸ್ಕಾಂತದ ಮೊನಚು ನನ್ನ ಅಕ್ಕ

ಮಾಳಿಗೆ ನಿಚ್ಚಣಿಕೆ
ಸರಭರ ಏರಿ
ʻಪುಕ್ಕಲʼ ಎಂದು ನನ್ನ ಕೆಣಕುತ್ತಾ
ಇಳಿ ಸಂಜೆ ಕನ್ನಡಿ ಎದುರು ನಾಲ್ಕು ತಾಸು
ಗಲ್ಲದ ಮೇಲಿನ ಮೊಡವೆ
ಚಿವುಟುತ್ತಾ ನಿಲ್ಲುವ
ಕಾಮನ ಬಿಲ್ಲಿನ ದಿಕ್ಕು ನನ್ನಕ್ಕ

ಗಂಡನ ಮನೆಗೆ ಹೋಗುವಾಗ
ಬಿಕ್ಕಿಬಿಕ್ಕಿ ಅತ್ತು
ಕಣ್ಣಿನಲ್ಲಿ ಮೋಡ ಮಲಗಿಸಿಕೊಂಡು
ನನ್ನ ಕೆನ್ನೆಗೊಂದು
ಬೆಚ್ಚಗಿನ ಬಹುಮಾನ ಕೊಡುವ
ನನ್ನೆಲ್ಲಾ ಉಪದ್ರವ ಕವಿತೆ
ಅನುಮಾನದಿಂದ ಓದಿ
ʻಕವಿ ಬಡ್ಡಿಮಗನೆʼ ಎಂದು ಕಿವಿ ಹಿಂಡುವ
ನಕ್ಷತ್ರ ಬಳ್ಳಿ ನನ್ನಕ್ಕ

ದೀಪಾವಳಿಗೋ ಸಂಕ್ರಮಣಕ್ಕೋ
ತಿಳಿ ನೀಲಿ ಕ್ಯಾನ್ವಾಸಿನಲ್ಲಿ
ಕುಂಚ ಹಿಡಿದು ಕುಣಿಯುವ
ಎಳನೀರಿನ ಗಂಜಿ ನನ್ನಕ್ಕ
ಅಮ್ಮನ ಬಳಿ ಇಲ್ಲಸಲ್ಲದ ಚಾಡಿ ಹೇಳಿ
ಲವ್‌ ಬ್ರೇಕಪ್ಪು ಮಾಡಿಸಿದ ಗಯ್ಯಾಳಿ
ನನ್ನಕ್ಕ