ನಾನು ಅಗರಿನ ಕಡೆಗೆ ತಿರುಗಿದ್ದೆ. ಇನ್ನೇನು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಎದುರಿಗೆ ಚಲಿಸುವ ಮುಳ್ಳು ಪೊದೆ. ಹೆದರಿ ನಾನು ಹಿಂದೆ ಹೆಜ್ಜೆ ಇಡುವ ತುರಾತುರಿಯಲ್ಲಿ ಒಣ ಕಟ್ಟಿಗೆ ತುಂಡೊಂದು ಕಾಲಿಗೆ ಸಿಕ್ಕಿ ಲಟ್ಟೆಂದು ಮುರಿಯಿತು. ಸದ್ದು ಕೇಳಿದೊಡನೆ ಆ ಮುಳ್ಳು ಪೊದೆಯತ್ತ ಓಡುತ್ತಾ ಕಾಡಿನೊಳಗೆ ಅಂತರ್ಧಾನವಾಯಿತು. ಸುಮಾರು ಹೊತ್ತು ಹಾಗೆಯೇ ಕಲ್ಲಾಗಿ ನಿಂತೆ. ಮುಂದೆ ಹೋಗಲೂ ಹೆದರಿಕೆ, ಹಿಂದೆ ತಿರುಗಿ ಮನೆ ದಾರಿ ಹಿಡಿಯಬೇಕೆಂದರೆ ಇನ್ನು ಹತ್ತೇ ಹೆಜ್ಜೆಗೆ ಅಂಗಜನ ಹಿತ್ತಿಲು. ಸುಮಾರು ಹೊತ್ತು ನಿಂತಲ್ಲೇ ನಿಂತು ಕೊನೆಗೂ ಧೈರ್ಯ ಮಾಡಿ ಅಂಗಜನ ಮನೆಯ ಕಡೆಗೆ ಹೆದರುತ್ತಲೇ ತಲುಪಿದೆ.
ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥನ

 

ನಾನು ಹುಟ್ಟುವ ಮೊದಲೇ ಜಿರಾಫೆಯ ಕತ್ತಿನಂತೆ ನಮ್ಮ ರಸ್ತೆಯ ಎಡಬದಿಗೆ ಮನೆಯ ಮಾಡಿಗೂ ಮೀರಿ ಆ ‘ಶಾಂತಿಮರ’ ಪ್ರತಿಷ್ಟಾಪನೆಗೊಂಡಾಗಿತ್ತು. ‘ಶಾಂತಿ ಮರ ಮನೆಯ ಮಾಡಿಗೂ ಮೀರಿ ಬೆಳೆಯಬಾರದು’ ಎಂದು ಯಾರು ಹೇಳಿದ್ದೋ; ಎಲ್ಲರ ಬಾಯಲ್ಲೂ ಇದೇ ಮಾತಿತ್ತು. ನನ್ನೋರಗೆಯ ಮಕ್ಕಳು ಇನ್ನೊಮ್ಮೆ ಹೀಗೆ ಹೆದರಿಸಿದ್ದುಂಟು. “ನಿಮ್ಮ ಮನೆಯ ಮಾಡಿನ ಎತ್ತರಕ್ಕೂ ಮೀರಿ ಆ ಮರ ಹೋಗಿದೆ ಅಲ್ವಾ, ಅದರಲ್ಲಿ ಖಂಡಿತಾ ಬ್ರಹ್ಮ ರಾಕ್ಷಸ ಒಕ್ಕಲು ಕೂತಿದೆ” ಅಂತ. ಆ ಬಳಿಕ ಸೂರ್ಯ ಬಾಡಿದ ಬಳಿಕ ನಾನು ಮನೆಗೆ ಬರಬೇಕಾದರೆ ಆ ಶಾಂತಿಯ ಮರದ ಕಡೆಗೆ ಕಣ್ಣೇ ಇಟ್ಟವನಲ್ಲ.

ಆ ಮರದ ಬದಿಯ ಟಾರು ರಸ್ತೆಯಲ್ಲಿ ದೊಡ್ಡ ತಿರುವೊಂದಿತ್ತು. ಆಗಾಗ ಅಲ್ಲಿ ಸಣ್ಣಪುಟ್ಟ ವಾಹನ ಅಪಘಾತಗಳು ಸಂಭವಿಸುತ್ತಿದ್ದವು. ಬಹುಶಃ ಆ ಮರದಲ್ಲಿ ವಾಸಿಸುತ್ತಿರುವ ಬ್ರಹ್ಮ ರಾಕ್ಷಸನಿಗೆ ರಕ್ತ ಕುಡಿಯುವ ಹಪಾಹಪಿಯೆಂದು ನಾವು ಬಲವಾಗಿ ನಂಬಿ ಬಿಟ್ಟಿದ್ದೆವು. ರಾತ್ರಿ ಸಮಯದಲ್ಲಿ ಮನೆಗೆ ಬರುವಾಗ ಹಲವು ಬಾರಿ ಗಾಳಿ ಬೀಸಿದಂತೆ ಮರ ಅಲುಗುತ್ತಿತ್ತು. ಆಗೆಲ್ಲಾ ಭೂತಗಳೇ ಸ್ವತಃ ಮರದಲ್ಲಿ ಕುಳಿತು ಉಯ್ಯಾಲೆ ಆಡುತ್ತಿದೆ ಎಂದೇ ನಂಬಿ ನಾನು ಪೇರಿ ಕೀಳುತ್ತಿದ್ದೆ. ಬೆಳಕು ಮೂಡಿದ ಬಳಿಕ ಮರ ಶಾಂತವಾಗಿ ನಿಂತ ಮೌನಿಬಿಕ್ಕುವಿನಂತೆಯೇ ಕಾಣುತ್ತಿತ್ತು. ಶಾಂತಿಮರ ಕಾಯಿ ಬಿಡುವ ದಿನಗಳಲ್ಲಂತೂ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಆ ಕಾಯಿ ಒಣಗಿ ಕೆಳಗೆ ಬಿದ್ದರೆ ಅದನ್ನು ಜಜ್ಜಿ ಒಳಗಿನ ಕಡಲೆ ಕಾಳಿನಂತಹ ತಿರುಳನ್ನು ಸ್ವಾಹಾ ಮಾಡುತ್ತಿದ್ದೆವು. ಇದರ ಕುರುಹೆಂಬಂತೆ ಡಾಂಬಾರು ರಸ್ತೆ ತುಂಬಾ ಬೀಜ ಜಜ್ಜಿದ ಕುರುಹುಗಳು ಸೆಗಣಿ ಬಳಿದಂತೆ ತುಂಬಿ ಹೋಗಿತ್ತು. ಕೆಲವು ಹುಡುಗರು ಶಾಲಾ ಲಲನೆಯರಿಗೂ ಕಾಯಿಗಳನ್ನು ಸಂಗ್ರಹಿಸಿ ಜಜ್ಜಿಕೊಟ್ಟು ತಮ್ಮ ಪ್ರೇಮ ನಿವೇದನೆಯನ್ನು ನಡೆಸುತ್ತಿದ್ದರು. ಕೆಲವು ಪೋಕ್ರಿ ಹುಡುಗರು ಹೆಸರು ಬರೆಯುವ ಹುಡುಗಿಗೆ ಲಂಚವಾಗಿ ಕೊಟ್ಟು ತಮ್ಮ ಹೆಸರನ್ನು ತಪ್ಪಿಸಿಕೊಳ್ಳುತ್ತಿದ್ದರು.

ಆದರೆ ಕಾಯಿ ತಿರುಳು ಹೆಚ್ಚು ತಿಂದರೆ ತಲೆಸುತ್ತು ಬರುತ್ತಿತ್ತು, ಒಮ್ಮೊಮ್ಮೆ ವಿಪರೀತ ವಾಂತಿ. ಇದಕ್ಕೂ ಆ ಒಕ್ಕಲಿನ ರಾಕ್ಷಸನನ್ನು ಅಪರಾಧಿ ಮಾಡಿ ಬಿಟ್ಟಾಗಿತ್ತು.

ಒಂದು ಅಮವಾಸ್ಯೆ ರಾತ್ರಿ, ಹಗಲು ಚೆನ್ನಾಗಿ ನಿದ್ರೆ ಹತ್ತಿದ್ದರಿಂದ ರಾತ್ರಿ ನಿದ್ರೆ ಸುಳಿಯಲೇ ಇಲ್ಲ. ಹೊರಗೆ ಜೀರುಂಡೆಗಳ ತಾಳಮದ್ದಳೆ. ಆಗೊಮ್ಮೆ ಈಗೊಮ್ಮೆ ಡ್ರಮ್ಮು ಬಾರಿಸುವಂತೆ ಗೋಂಕುರು ಕಪ್ಪೆಗಳ ವರಾತ. ಇನ್ನು ಆ ನೀರವ ರಾತ್ರಿಯಲ್ಲಿ ಹೊಸತೇನಿರಲಿಲ್ಲ. ಅಷ್ಟಾಗಲೇ ಶಾಂತಿ ಮರದ ಕಡೆಯಿಂದ ನಾಯಿಗಳ ರಾಪ್ ಹಾಡುಗಳು ಪ್ರಾರಂಭವಾಯಿತು. ‘ತಡ ರಾತ್ರಿಯಲ್ಲಿ ನಾಯಿಗಳೇಕೆ ಬೊಗಳುತ್ತಿವೆ?’ ಎಂಬುವುದು ಖಾತ್ರಿ ಇರಲಿಲ್ಲ. ಬಹುಶಃ ಈ ರಾತ್ರಿಯಲ್ಲಿ ಶಾಂತಿ ಮರದ ರಾಕ್ಷಸನನ್ನು ನೋಡಿರಬೇಕೆಂದು ವ್ಯಾಖ್ಯಾನ ಮಾಡಿಕೊಂಡೆ. ಹೊರಗೆ ಬಂದು ಬ್ರಹ್ಮ ರಾಕ್ಷಸನನ್ನು ಮುಖತಃ ಭೇಟಿಯಾಗುವ ಧೈರ್ಯ ಯಾರಿಗೆ ತಾನೇ ಬಂದೀತು. ಬೊಗಳುವಿಕೆ ತಾರಕಕ್ಕೇರಿ, ‘ಅಯ್ಯೋ ಅಮವಾಸ್ಯೆ ಆದದ್ದು ಒಳ್ಳೆಯದಾಯಿತು. ಇಲ್ಲಾಂದ್ರೆ ನಕ್ಷತ್ರವೆಲ್ಲಾ ಭೂಮಿಗೆ ಬೀಳ್ತಿತ್ತೋ’ ಅನ್ನುವಷ್ಟು ರೇಜಿಗೆ ಹುಟ್ಟಿತು. ದಮ್ಮು ರೋಗಿ ಕೆಮ್ಮಿದಂತೆ ಅದರ ಬೊಗಳುವಿಕೆಯ ಧ್ವನಿಯೂ ಆಗಾಗ್ಗೆ ಬದಲಾಗುತ್ತಿತ್ತು. ಎರಡೂ ಕಿವಿ ಮುಚ್ಚಿಕೊಂಡು ಹತ್ತಾರು ಬಾರಿ ಮಗ್ಗುಲು ಬದಲಿಸಿ ಹೇಗೋ ನಿದ್ದೆ ಬರಿಸಿಕೊಂಡೆ.

ಮನೆಯ ಸುತ್ತಮುತ್ತ ಕಾಡುಬಳ್ಳಿ ಬೆಳೆದು ಹೋಗಿದ್ದರಿಂದ ಮಾರನೇ ದಿನ ಅಂಗಜನನ್ನು ಕೆಲಸಕ್ಕೆ ಕರೆತರಲು ಉಮ್ಮ ನನ್ನನ್ನು ಹೇಳಿ ಕಳಿಸಿದ್ದರು. ನಾನು ಶಾಂತಿಮರ ದಾಟಿ ಹೋಗಬೇಕಾದರೆ ಆ ಮರದಡಿಯಲ್ಲಿ ಯಾರೋ ಹಸಿ ಮಣ್ಣು ಕೆರೆದಂತಿತ್ತು. ಅದು ಕಂಡಾಗಲೇ ರಾತ್ರಿ ಇಲ್ಲೇನೋ ಉಗ್ರಕಾಳಗ ನಡೆದಿರುವುದಾಗಿ ನಾನು ಖಾತ್ರಿ ಮಾಡಿಕೊಂಡೆ. ಅಲ್ಲೆಲ್ಲಾ ಬಿದ್ದಿದ್ದ ಶಾಂತಿ ಕಾಯಿಗಳು ಚೆಲ್ಲಾ ಪಿಲ್ಲಿಯಾಗಿರುವುದನ್ನು ನೋಡಿದರೆ ಯಾವುದೋ ಪ್ರಾಣಿ ಕಾಯಿ ತಿನ್ನಲು ಬಂದಿರಬೇಕೆಂದು, ಅದನ್ನು ಅಡ್ಡಗಟ್ಟಿದ ಪುಂಡ ನಾಯಿಗಳು ಗಲಾಟೆಯೆಬ್ಬಿಸಿದ್ದವೆಂದು ಅಂದಾಜಿಸಿದೆ.

ತಡ ರಾತ್ರಿಯಲ್ಲಿ ನಾಯಿಗಳೇಕೆ ಬೊಗಳುತ್ತಿವೆ?’ ಎಂಬುವುದು ಖಾತ್ರಿ ಇರಲಿಲ್ಲ. ಬಹುಶಃ ಈ ರಾತ್ರಿಯಲ್ಲಿ ಶಾಂತಿ ಮರದ ರಾಕ್ಷಸನನ್ನು ನೋಡಿರಬೇಕೆಂದು ವ್ಯಾಖ್ಯಾನ ಮಾಡಿಕೊಂಡೆ. ಹೊರಗೆ ಬಂದು ಬ್ರಹ್ಮ ರಾಕ್ಷಸನನ್ನು ಮುಖತಃ ಭೇಟಿಯಾಗುವ ಧೈರ್ಯ ಯಾರಿಗೆ ತಾನೇ ಬಂದೀತು. ಬೊಗಳುವಿಕೆ ತಾರಕಕ್ಕೇರಿ, ‘ಅಯ್ಯೋ ಅಮವಾಸ್ಯೆ ಆದದ್ದು ಒಳ್ಳೆಯದಾಯಿತು. ಇಲ್ಲಾಂದ್ರೆ ನಕ್ಷತ್ರವೆಲ್ಲಾ ಭೂಮಿಗೆ ಬೀಳ್ತಿತ್ತೋ’ ಅನ್ನುವಷ್ಟು ರೇಜಿಗೆ ಹುಟ್ಟಿತು.

ನಮ್ಮ ಮನೆಯಿಂದ ಅಂಗಜನ ಮನೆಗೆ ಸರಿಸುಮಾರು ಒಂದು ಕಿ.ಮೀನಷ್ಟು ಕಾಡು ದಾರಿ. ದಾರಿಮಧ್ಯೆ ಒಂದು ಮರದ ಸೇತುವೆ(ಪಾಲ) ದಾಟಿ ಅದೇ ದಾರಿಯಲ್ಲಿನ ಅಗರಿನ ಬದಿಗೆ ತಿರುಗಿ ನೇರ ಮುಂದೆ ನಡೆದರೆ ಅಂಗಜನ ಹಿತ್ತಿಲು. ನಾನು ಅಗರಿನ ಕಡೆಗೆ ತಿರುಗಿದ್ದೆ. ಇನ್ನೇನು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಎದುರಿಗೆ ಚಲಿಸುವ ಮುಳ್ಳು ಪೊದೆ. ಹೆದರಿ ನಾನು ಹಿಂದೆ ಹೆಜ್ಜೆ ಇಡುವ ತುರಾತುರಿಯಲ್ಲಿ ಒಣ ಕಟ್ಟಿಗೆ ತುಂಡೊಂದು ಕಾಲಿಗೆ ಸಿಕ್ಕಿ ಲಟ್ಟೆಂದು ಮುರಿಯಿತು. ಸದ್ದು ಕೇಳಿದೊಡನೆ ಆ ಮುಳ್ಳು ಪೊದೆಯತ್ತ ಓಡುತ್ತಾ ಕಾಡಿನೊಳಗೆ ಅಂತರ್ಧಾನವಾಯಿತು. ಸುಮಾರು ಹೊತ್ತು ಹಾಗೆಯೇ ಕಲ್ಲಾಗಿ ನಿಂತೆ. ಮುಂದೆ ಹೋಗಲೂ ಹೆದರಿಕೆ, ಹಿಂದೆ ತಿರುಗಿ ಮನೆ ದಾರಿ ಹಿಡಿಯಬೇಕೆಂದರೆ ಇನ್ನು ಹತ್ತೇ ಹೆಜ್ಜೆಗೆ ಅಂಗಜನ ಹಿತ್ತಿಲು. ಸುಮಾರು ಹೊತ್ತು ನಿಂತಲ್ಲೇ ನಿಂತು ಕೊನೆಗೂ ಧೈರ್ಯ ಮಾಡಿ ಅಂಗಜನ ಮನೆಯ ಕಡೆಗೆ ಹೆದರುತ್ತಲೇ ತಲುಪಿದೆ.

ದಾರಿಯಲ್ಲಿ ನಡೆದದ್ದೆಲ್ಲಾ ವಿವರಿಸಿದೆ. ಅದು ‘ಎಯ್ಕೊಳಿ’ ಎಂದು ಅವನು ಪರಿಚಯಿಸಿದ. ಅಂಗಜನ ತಾಯಿ ‘ಉಕ್ರಜ್ಜಿ’ ನನ್ನ ಕಂಡ ಕೂಡಲೇ ಕುಳಿತುಕೊಳ್ಳಲು ಹೇಳಿ ಒಂದು ಗಡಿಗೆಯಲ್ಲಿ ಅವಲಕ್ಕಿ ತಂದು ಕೊಟ್ಟಿದ್ದರು. ನಾನು ಇನ್ನು ಮನೆಗೆ ಹೋಗುವುದಿದ್ದರೆ ಅಂಗಜನ ಜೊತೆಗೆ ಹೋಗುವುದು ಎಂದು ರಚ್ಚೆ ಹಿಡಿದಂತೆ ಕುಳಿತು ಬಿಟ್ಟೆ. ಗಡಿಗೆಯಲ್ಲಿದ್ದ ಅವಲಕ್ಕಿಯೂ ಕರಗಿತು. ಅಷ್ಟರಲ್ಲೇ ಅಂಗಜನೂ ಕೆಲಸಕ್ಕೆ ತಯ್ಯಾರಾಗಿ ಬಂದ. ಅವನ ಹಿಂದೆಯೇ ನಾನು ನೆರಳಿನಂತೆ ಹಿಂಬಾಲಿಸಿದೆ.

‘ಎಯ್ಕೊಳಿ’ ಎಂದರೆ ಮುಳ್ಳು ಹಂದಿಯ ಗ್ರಾಮೀಣ ಹೆಸರು. ಮೈಯೆಲ್ಲಾ ಮುಳ್ಳುಗಳಿರುವ ಹಂದಿಯಂತೆ ನಡೆದಾಡುವ ಇವುಗಳಿಗೆ ಕಾಡಿನ ಹಣ್ಣು ಹಂಪಲುಗಳು ಆಹಾರ. ದಟ್ಟ ಪೊದೆಗಳು, ಅಥವಾ ಬಿಲಗಳಲ್ಲಿ ವಾಸ ಹೂಡುವ ಇವುಗಳು ರಾತ್ರಿಯಲ್ಲಿ ಚುರುಕಾಗಿರುತ್ತದೆ. ಅಬ್ಬ ಕೊಂಡಿದ್ದ ಕುರುಚಲು ಕಾಡಿನಲ್ಲೂ ಸುಮಾರು ಬಾರಿ ಅವುಗಳ ಮುಳ್ಳು ಸಿಕ್ಕಿದ್ದಿದೆ. ಚೂಪಾದ ಸೂಜಿಯಂತಹ ಮೊನಚು ಮೊನೆಗಳಿಂದ ಅವುಗಳ ಮೈ ತುಂಬಿರುತ್ತದೆ. ಆತ್ಮ ರಕ್ಷಣೆಗೆ ಮೈಕೊಡವಿಕೊಂಡರೆ ಅವುಗಳ ಮುಳ್ಳಿನ ಮೊನೆಗಳು ಚುಚ್ಚಿಕೊಳ್ಳುವುದುಂಟು. ಒಮ್ಮೊಮ್ಮೆ ಇವುಗಳನ್ನು ಹಿಡಿಯಲು ಹೋದ ಚಿರತೆಗಳೂ ಮುಳ್ಳಿನ ದಾಳಿಗೆ ಈಡಾಗುವುದಿದೆ.

ಮೊನ್ನೆ ಮೊನ್ನೆ ಮನೆಯಲ್ಲಿ ಕುಳಿತು ಅಬ್ಬನ ಬೇಟೆಯ ನೆನಪುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಆ ದಿನಗಳಲ್ಲಿ ಬೇಟೆ ನ್ಯಾಯ ಸಮ್ಮತ. ಸುಬ್ರಹ್ಮಣ್ಯ ರಸ್ತೆಗೆ ಟಾರು ಹಾಕುವ ಕೆಲಸ ವಹಿಸಿಕೊಂಡದ್ದರಿಂದ ಅಬ್ಬನ ಗುಂಪಿನವರಿಗೆ ಕುಮಾರ ಪರ್ವತದ ಬಳಿಯೇ ಬಿಡಾರವಂತೆ. ಆ ದಿನಗಳಲ್ಲಿ ಅವರಿಗೆ ಬಿಡುವಿದ್ದ ರಾತ್ರಿಗಳಲ್ಲಿ ಒಂದು ಜೀಪು ಹತ್ತಿ ಹೊರಡುವುದು. ಒಂದಿಷ್ಟು ಜನ, ಒಬ್ಬ ಈಡುಗಾರ, ಒಬ್ಬ ಚಾಲಕ, ಮಗದೊಬ್ಬ ಚೂರಿ ಹಾಕುವವನು ಹೀಗೆ ಒಬ್ಬೊಬ್ಬರಿಗೂ ಒಂದೊಂದು ಕೆಲಸ. ಆ ರಾತ್ರಿ ಜೀಪಿನ ಲೈಟಿನಲ್ಲಿ ಕಾಡು ತುಂಬಾ ಓಡಾಡಿದ್ದರು. ಸುಮಾರು ಅರ್ಧರಾತ್ರಿ ಕಳೆದರೂ ಯಾವ ಮೃಗವೂ ಸಿಕ್ಕಿರಲಿಲ್ಲ. ಹಿಂತಿರುಗುವ ದಾರಿಯಲ್ಲಿ ರಸ್ತೆಯ ಮೇಲೆ ಮುಳ್ಳು ಹಂದಿಯೊಂದು ಹಾದು ಹೋಗುತ್ತಿತ್ತಂತೆ. ಇನ್ನೇನು ರಸ್ತೆ ದಾಟುತ್ತಿರಬೇಕಾದರೆ ರಾಮಣ್ಣನ ಈಡು ಬಿತ್ತು. ಮುಗ್ಗರಿಸಿದ ಮುಳ್ಳು ಹಂದಿ ಕಾಡಿನೊಳಗೆ ತಪ್ಪಿಸಿಕೊಂಡಿತು. ಬೇಟೆಯ ನೆನಪುಗಳನ್ನು ಹೇಳಿಕೊಳ್ಳುವಾಗ ಅಬ್ಬನ ಸುಪ್ತ ಪ್ರಜ್ಞೆ, ಎಚ್ಚರಿಕೆಗಳು ಅವರಿಗರಿವಿಲ್ಲದೆ ದಾಖಲಾಗುತ್ತಿರುತ್ತವೆ.

‘ಮುಳ್ಳು ಹಂದಿ ಹೊಡೆಯಬೇಕಾದರೆ ತಲೆಯ ಭಾಗಕ್ಕೆ ಪೆಟ್ಟು ಬೀಳಬೇಕು, ಮುಳ್ಳಿರುವ ಭಾಗಕ್ಕೆ ಹೊಡೆದರೆ ಯಾವ ಮಿಶಿನ್ನು ಗನ್ನಿನ ಬುಲ್ಲೆಟ್ಟೂ ಉಪಕಾರಕ್ಕಿಲ್ಲ’ ಅಬ್ಬ ಬೇಟೆಯ ಪರಿಯನ್ನು ವರ್ಣಿಸುತ್ತಿದ್ದರು. ತಪ್ಪಿಸಿಕೊಂಡ ಮುಳ್ಳುಹಂದಿಯನ್ನು ಹುಡುಕುತ್ತ ಹೊರಟಾಗ ಅಲ್ಲಲ್ಲಿ ರಕ್ತದ ಕಲೆಗಳು, ರಕ್ತದ ಕಲೆಗಳ ಜಾಡಿನಲ್ಲಿ ಹೊರಟವರಿಗೆ ಪ್ರಾಣೋತ್ಕರಣದಲ್ಲಿದ್ದ ಮುಳ್ಳು ಹಂದಿ ಕಂಡಿದೆ. ಪ್ರಾಣ ಹೋಗುವ ಮೊದಲೇ ಚೂರಿ ಹಾಕಿ, ಅಜಕ್ಕಳ ಮಾಡಿದರಂತೆ. ಸುಮಾರು ೮ ಕೇಜಿ ಗೂ ಜಾಸ್ತಿ ಮಾಂಸ ಸಿಕ್ಕಿತ್ತೆಂದು ಅಬ್ಬನ ಅಂಬೋಣ. ಅಷ್ಟೊತ್ತಿಗೆ ವಿಶೇಷವೆಂಬಂತೆ ಅಬ್ಬನ ಬಾಯಿಯಿಂದ ಇನ್ನೊಂದು ಮಾಹಿತಿಯೂ ಸಿಕ್ಕಿತು. ಮುಳ್ಳು ಹಂದಿಗಳು ಹೆಚ್ಚಾಗಿ ಶಾಂತಿ ಕಾಯಿಗಳು ತಿನ್ನುತ್ತವೆಯೆಂದೂ, ಹಾಗೇ ತಿಂದ ಮುಳ್ಳು ಹಂದಿಗಳ ಮಾಂಸ ಅಮಲೆಂದೂ ಹೇಳಿದರು.

ಆ ರಾತ್ರಿ ಶಾಂತಿ ಮರದಡಿಯಲ್ಲಿ ನಾಯಿಗಳು ವಿಪರೀತ ಬೊಗಳತೊಡಗಿದ್ದವು. ಮನೆಗೆ ಬಂದ ಬೀದಿನಾಯಿಗೆ ಉಮ್ಮ ಬೇಸರದಲ್ಲಿ ಹಾಕಿದ್ದ ಕೂಳಿನ ಕೃತಜ್ಞತೆ ಸಲ್ಲಿಸುತ್ತಿತ್ತು. ಕೇವಲ ಒಪ್ಪೊತ್ತಿನ ಊಟ ಹಾಕಿದ್ದ ಕಾರಣಕ್ಕೆ ನಮ್ಮ ನಿದ್ದೆಯೂ ಹಾಳು ಮಾಡುವುದೆಷ್ಟು ಸರಿ. ಆ ಮುಳ್ಳು ಹಂದಿಗಳು ನಾಲ್ಕು ಶಾಂತಿ ಕಾಯಿ ತಿಂದರೆ ಯಾರಪ್ಪನ ಗಂಟು ಹೋಗುತ್ತೆ. ಕಿಟಕಿಯಿಂದಲೇ ಶಾರ್ಪು ಟಾರ್ಚು ಹಾಕಿ ಶಾಂತಿ ಮರದ ಬಳಿ ಬೆಳಕು ಬಿಟ್ಟೆ. ನಾಯಿಗಳು ಇನ್ನಷ್ಟು ಹುಮ್ಮಸ್ಸಿನಿಂದ ಬೊಗಳತೊಡಗಿದವು. ಅಷ್ಟರಲ್ಲೇ ಕಿಟಕಿಯೊಳಗೆ ತಣ್ಣನೆಯ ಗಾಳಿ ಬೀಸಿ ಬಂತು, ದೂರದಲ್ಲಿ ಶಾಂತಿ ಮರದೆಲೆಗಳು ಅಲುಗಿದಂತೆ ಕಂಡಿತು. ಕೂಳು ಹಾಕಿದ್ದಕ್ಕೇ ಮನೆಯ ಅತಿಥಿಯಾಗಿ ಬಿಟ್ಟಿದ್ದ ನಾಯಿಯ ಉಪದ್ರವವನ್ನು ಸಹಿಸಲಾಗುವುದಿಲ್ಲ, ಇನ್ನು ಬ್ರಹ್ಮ ರಾಕ್ಷಸನು ಬಂದು ಕುಳಿತರೆ ಇದಕ್ಕಿಂತ ದೊಡ್ಡ ಗಂಡಾಂತರಗಳು ಸಹಿಸಲಸಾಧ್ಯವೆಂದು ಕಿಟಕಿಯ ಪರದೆ ಎಳೆದು ಬಂದು ಅಂಗಾತ ಚಾಪೆಯ ಮೇಲೆ ಪವಡಿಸಿದೆ.